ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಭಯಪಟ್ಟು ಸಂತೋಷದಿಂದಿರ್ರಿ!

ಯೆಹೋವನಿಗೆ ಭಯಪಟ್ಟು ಸಂತೋಷದಿಂದಿರ್ರಿ!

ಯೆಹೋವನಿಗೆ ಭಯಪಟ್ಟು ಸಂತೋಷದಿಂದಿರ್ರಿ!

‘ಯೆಹೋವನಿಗೆ ಭಯಪಡುವ ಮನುಷ್ಯನು ಧನ್ಯನು [ಅಥವಾ ಸಂತೋಷಿತನು].’​—⁠ಕೀರ್ತನೆ 112:⁠1, NIBV.

ಸಂತೋಷವನ್ನು ಗಳಿಸುವುದು ಅಷ್ಟೇನೂ ಸುಲಭವಲ್ಲ. ನಿಜ ಸಂತೋಷವು, ಸರಿಯಾದ ಆಯ್ಕೆಯನ್ನು ಮಾಡುವುದು, ಯಾವುದು ಸರಿಯೊ ಅದನ್ನು ಮಾಡುವುದು ಮತ್ತು ಯಾವುದು ತಪ್ಪೊ ಅದಕ್ಕೆ ಬೆನ್ನುಹಾಕುವುದರ ಮೇಲೆ ಹೊಂದಿಕೊಂಡಿದೆ. ನಮ್ಮ ನಿರ್ಮಾಣಿಕನಾದ ಯೆಹೋವನು, ನಾವು ಅತ್ಯುತ್ತಮ ಜೀವನರೀತಿಯನ್ನು ಹೇಗೆ ಅನುಭವಿಸಬಹುದೆಂಬುದನ್ನು ನಮಗೆ ಕಲಿಸಲು ತನ್ನ ವಾಕ್ಯವಾದ ಬೈಬಲನ್ನು ಒದಗಿಸಿದ್ದಾನೆ. ಯೆಹೋವನ ನಿರ್ದೇಶನವನ್ನು ಹುಡುಕಿ, ಅದನ್ನು ಅನುಸರಿಸುವ ಮೂಲಕ ದೇವಭಯವನ್ನು ತೋರಿಸುವಲ್ಲಿ ನಾವು ನಿಜವಾಗಿಯು ಸಂತುಷ್ಟರೂ ಸಂತೋಷಿತರೂ ಆಗಬಲ್ಲೆವು.​—⁠ಕೀರ್ತನೆ 23:1; ಜ್ಞಾನೋಕ್ತಿ 14:26.

2 ಈ ಲೇಖನದಲ್ಲಿ, ಯಥಾರ್ಥವಾದ ದೇವಭಯವು ಒಬ್ಬನಿಗೆ ತಪ್ಪುಮಾಡವುದಕ್ಕೆ ಬರುವ ಒತ್ತಡವನ್ನು ನಿಗ್ರಹಿಸಲು ಬಲವನ್ನು ಮತ್ತು ಸರಿಯಾದುದನ್ನು ಮಾಡುವುದಕ್ಕೆ ಧೈರ್ಯವನ್ನು ಹೇಗೆ ಒದಗಿಸುತ್ತದೆಂದು ತೋರಿಸುವಂತಹ ಬೈಬಲಿನ ಮತ್ತು ಆಧುನಿಕ ದಿನಗಳ ಉದಾಹರಣೆಗಳನ್ನು ಪರಿಗಣಿಸುವೆವು. ದೈವಿಕ ಭಯವು, ರಾಜ ದಾವೀದನು ಮಾಡಬೇಕಾಗಿದ್ದಂತೆ, ತಪ್ಪು ಮಾರ್ಗವನ್ನು ಸರಿಪಡಿಸಲು ನಮ್ಮನ್ನು ಪ್ರಚೋದಿಸುವ ಮೂಲಕ ನಮಗೆ ಸಂತೋಷವನ್ನು ತರಬಲ್ಲದೆಂದು ನಾವು ನೋಡುವೆವು. ಅಲ್ಲದೆ, ಯೆಹೋವನ ಭಯವು ನಿಜವಾಗಿಯೂ ಹೆತ್ತವರು ತಮ್ಮ ಮಕ್ಕಳಿಗೆ ವಹಿಸಿಕೊಡಬಲ್ಲ ಒಂದು ಅಮೂಲ್ಯ ಪಿತ್ರಾರ್ಜಿತ ಸ್ವತ್ತು ಎಂಬುದನ್ನೂ ನಾವು ನೋಡುವೆವು. ಹೌದು, ‘ಯೆಹೋವನಿಗೆ ಭಯಪಡುವ ಮನುಷ್ಯನು ಧನ್ಯನು [ಅಥವಾ ಸಂತೋಷಿತನು]’ ಎಂಬುದು ನಿಶ್ಚಯ.​—⁠ಕೀರ್ತನೆ 112:​1, NW.

ಕಳಕೊಂಡ ಸಂತೋಷವನ್ನು ಪುನಃ ಪಡೆಯುವುದು

3 ಹಿಂದಿನ ಲೇಖನದಲ್ಲಿ ನೋಡಿದಂತೆ, ದಾವೀದನು ಮೂರು ಗಮನಾರ್ಹ ಸಂದರ್ಭಗಳಲ್ಲಿ ಯೋಗ್ಯವಾದ ದೈವಿಕ ಭಯವನ್ನು ತೋರಿಸಲು ತಪ್ಪಿಹೋಗಿ ಪಾಪಮಾಡಿದನು. ಆದರೂ, ಯೆಹೋವನು ಕೊಟ್ಟ ಶಿಸ್ತಿಗೆ ಅವನು ತೋರಿಸಿದ ಪ್ರತಿವರ್ತನೆಯು ಅವನು ಪಾಪಿಯಾಗಿದ್ದರೂ ದೇವಭಯವುಳ್ಳ ವ್ಯಕ್ತಿಯಾಗಿದ್ದನೆಂದು ತೋರಿಸಿತು. ಅವನಿಗೆ ಯೆಹೋವನ ಕಡೆಗಿದ್ದ ಪೂಜ್ಯಭಾವ ಮತ್ತು ಗೌರವವು ಅವನು ತನ್ನ ತಪ್ಪನ್ನು ಒಪ್ಪಿಕೊಂಡು, ತನ್ನ ಮಾರ್ಗವನ್ನು ಸರಿಪಡಿಸಿ, ಪುನಃ ಆತನೊಂದಿಗೆ ಸುಸಂಬಂಧವನ್ನಿಟ್ಟುಕೊಳ್ಳುವಂತೆ ಪ್ರಚೋದಿಸಿತು. ಅವನ ತಪ್ಪುಗಳು ಅವನಿಗೂ ಇತರರಿಗೂ ಕಷ್ಟಗಳನ್ನು ತಂದೊಡ್ಡಿದರೂ, ಅವನ ನಿಜ ಪಶ್ಚಾತ್ತಾಪವು ಯೆಹೋವನ ಮುಂದುವರಿದ ಬೆಂಬಲ ಮತ್ತು ಆಶೀರ್ವಾದವನ್ನು ಸಂಪಾದಿಸಿತು. ಇಂದು, ಗಂಭೀರ ಪಾಪಗಳಿಗೆ ತುತ್ತಾಗಿರಬಹುದಾದ ಕ್ರೈಸ್ತರಿಗೆ ದಾವೀದನ ಮಾದರಿಯು ನಿಶ್ಚಯವಾಗಿಯೂ ಧೈರ್ಯವನ್ನು ನೀಡಬಲ್ಲದು.

4 ಸೋನ್ಯಾಳ ಅನುಭವವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. * ಪೂರ್ಣ ಸಮಯದ ಸೌವಾರ್ತಿಕಳಾಗಿದ್ದರೂ ಸೋನ್ಯಾ ದುಸ್ಸಹವಾಸಕ್ಕಿಳಿದು ಅಕ್ರೈಸ್ತ ನಡತೆಗೆ ಬಲಿಬಿದ್ದಳು ಮತ್ತು ಆಕೆಯನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಬೇಕಾಯಿತು. ಆದರೆ ತನ್ನ ತಪ್ಪಿನ ಅರಿವಾದಾಗ, ಸೋನ್ಯಾ ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಸರಿಪಡಿಸಲು ಸಾಧ್ಯವಿರುವುದನ್ನೆಲ್ಲ ಮಾಡಿದಳು. ಸಕಾಲದಲ್ಲಿ ಆಕೆಯನ್ನು ಸಭೆಗೆ ಪುನಃಸ್ಥಾಪಿಸಲಾಯಿತು. ಈ ಸಮಯದಲ್ಲೆಲ್ಲ, ಸೋನ್ಯಾ ಯೆಹೋವನನ್ನು ಸೇವಿಸುವ ತನ್ನ ಬಯಕೆಯನ್ನು ಬಿಟ್ಟುಬಿಡಲಿಲ್ಲ. ಕ್ರಮೇಣ, ಆಕೆ ಪುನಃ ಪೂರ್ಣ ಸಮಯದ ಪಯನೀಯರ್‌ ಸೇವೆಗಿಳಿದಳು. ತರುವಾಯ, ಆಕೆ ಒಬ್ಬ ಆದರ್ಶಪ್ರಾಯ ಕ್ರೈಸ್ತ ಹಿರಿಯನನ್ನು ವಿವಾಹವಾಗಿ, ಈಗ ಆಕೆ ಅವನೊಂದಿಗೆ ಸಭೆಯಲ್ಲಿ ಸಂತೋಷದಿಂದ ಸೇವೆಮಾಡುತ್ತಿದ್ದಾಳೆ. ಕ್ರೈಸ್ತ ಪಥದಿಂದ ತಾತ್ಕಾಲಿಕವಾಗಿ ದಾರಿತಪ್ಪಿದ್ದಕ್ಕೆ ಸೋನ್ಯಾ ವಿಷಾದಿಸುತ್ತಾಳಾದರೂ, ಆಕೆಯ ದೇವಭಯವು ಹಿಂದಿರುಗಿ ಬರುವಂತೆ ಸಹಾಯಮಾಡಿದ್ದಕ್ಕಾಗಿ ಆಕೆ ಸಂತೋಷಪಡುತ್ತಾಳೆ.

ಪಾಪದಲ್ಲಿ ಬೀಳುವುದಕ್ಕಿಂತ ಕಷ್ಟಾನುಭವಿಸುವುದೇ ಲೇಸು

5 ದೇವಭಯವು ಗಂಭೀರವಾದ ತಪ್ಪನ್ನು ಮಾಡದಿರುವಂತೆ ಒಬ್ಬನಿಗೆ ಸಹಾಯಮಾಡುವಾಗ ಅದೇ ಹೆಚ್ಚು ಹಿತಕರವೆಂಬುದು ನಿಶ್ಚಯ. ದಾವೀದನ ವಿಷಯದಲ್ಲಿ ಇದು ನಿಜವಾಗಿ ಪರಿಣಮಿಸಿತು. ಒಮ್ಮೆ, ಸೌಲನು ಮೂರು ಸಾವಿರ ಮಂದಿ ಸೈನಿಕರೊಂದಿಗೆ ದಾವೀದನನ್ನು ಹಿಡಿಯಲು ಪ್ರಯತ್ನಿಸಿದಾಗ, ದಾವೀದನೂ ಅವನ ಜನರೂ ಎಲ್ಲಿ ಅಡಗಿಕೊಂಡಿದ್ದರೊ ಅದೇ ಗುಹೆಯನ್ನು ಅವನು ಕೂಡ ಪ್ರವೇಶಿಸಿದನು. ಆಗ ದಾವೀದನ ಜನರಾದರೊ ಸೌಲನನ್ನು ಕೊಲ್ಲುವಂತೆ ಪ್ರೋತ್ಸಾಹಿಸಿದರು. ಇದು ದಾವೀದನ ಪ್ರಾಣಾಂತಕ ವೈರಿಯನ್ನು ಯೆಹೋವನೇ ಅವನ ಕೈಗೆ ಒಪ್ಪಿಸಿದಂತಿರಲಿಲ್ಲವೋ? ಅವನು ಈಗ ಏನು ಮಾಡಲಿದ್ದನು? ದಾವೀದನು ಸದ್ದುಮಾಡದೆ ಸೌಲನ ಬಳಿ ತೆವಳುತ್ತ ಹೋಗಿ, ಅವನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದನು. ದಾವೀದನು ದೇವರಿಗೆ ಭಯಪಟ್ಟ ಕಾರಣ, ಈ ಹಾನಿಕರವಲ್ಲದ ಕೃತ್ಯವೂ ನಂತರ ಅವನ ಮನಸ್ಸಾಕ್ಷಿಯನ್ನು ಚುಚ್ಚಿತು. ಮತ್ತು ಕೆರಳಿದ್ದ ತನ್ನ ಜನರಿಗೆ, “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿಮಾಡಲಿ” ಎಂದು ಹೇಳಿ ಕಳುಹಿಸಿಬಿಟ್ಟನು. *​—⁠1 ಸಮುವೇಲ 24:​1-7.

6 ಮುಂದಿನ ಇನ್ನೊಂದು ಸಂದರ್ಭದಲ್ಲಿ ಸೌಲನು ರಾತ್ರಿ ಶಿಬಿರಹೂಡಿದ್ದನು. ಆಗ ಅವನಿಗೂ ಅವನ ಎಲ್ಲಾ ಸೈನಿಕರಿಗೂ ‘ಯೆಹೋವನು ಗಾಢನಿದ್ರೆಯನ್ನು ಬರಮಾಡಿದನು.’ ದಾವೀದನು ಮತ್ತು ಅವನ ಧೀರ ಸೋದರಸಂಬಂಧಿ ಅಬೀಷೈ ಪಾಳೆಯದ ಮಧ್ಯದ ತನಕ ಹೋಗಿ ನಿದ್ರಿಸುತ್ತಿದ್ದ ಸೌಲನ ಮುಂದೆ ನಿಂತರು. ಅಬೀಷೈ ಸೌಲನನ್ನು ಒಂದೇ ಪೆಟ್ಟಿಗೆ ಹತಿಸಬಯಸಿದರೂ ದಾವೀದನು ಅವನನ್ನು ತಡೆದು, “ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನಾದರೂ ನಿರಪರಾಧಿಯೆಂದು ಎಣಿಸಲ್ಪಡುವನೋ” ಎಂದು ಕೇಳಿದನು.​—⁠1 ಸಮುವೇಲ 26:​9, 12.

7 ದಾವೀದನು ತನಗೆ ಎರಡು ಬಾರಿ ಸಂದರ್ಭ ಸಿಕ್ಕಿದಾಗಲೂ ಸೌಲನನ್ನು ಏಕೆ ಹತಿಸಲಿಲ್ಲ? ಏಕೆಂದರೆ ಅವನು ಸೌಲನಿಗೆ ಭಯಪಡುವುದಕ್ಕಿಂತಲೂ ಹೆಚ್ಚಾಗಿ ಯೆಹೋವನಿಗೆ ಭಯಪಟ್ಟದ್ದರಿಂದಲೇ. ದಾವೀದನಿಗೆ ದೇವರ ಮೇಲೆ ಯೋಗ್ಯ ರೀತಿಯ ಭಯವಿದದ್ದರಿಂದ ಅವನು ಪಾಪಮಾಡುವ ಬದಲಿಗೆ ಅಗತ್ಯವಿದ್ದಲ್ಲಿ ಕಷ್ಟವನ್ನನುಭವಿಸಲೂ ಸಿದ್ಧನಾಗಿದ್ದನು. (ಇಬ್ರಿಯ 11:25) ಅವನಿಗೆ, ಯೆಹೋವನು ತನ್ನ ಜನರನ್ನು ಮತ್ತು ವೈಯಕ್ತಿಕವಾಗಿ ತನ್ನನ್ನು ಪರಾಮರಿಸುವನೆಂಬುದರ ಬಗ್ಗೆ ಪೂರ್ತಿ ಭರವಸೆಯಿತ್ತು. ದೇವರಿಗೆ ವಿಧೇಯನಾಗಿ ಆತನ ಮೇಲೆ ಭರವಸೆಯಿಡುವುದು ಸಂತೋಷವನ್ನೂ ಅನೇಕಾಶೀರ್ವಾದಗಳನ್ನೂ ತರುತ್ತದೆಂದು, ಆದರೆ ದೇವರನ್ನು ಅಲಕ್ಷ್ಯಮಾಡುವುದು ಆತನ ಅಸಮ್ಮತಿಯನ್ನು ತರುತ್ತದೆಂದು ದಾವೀದನು ತಿಳಿದಿದ್ದನು. (ಕೀರ್ತನೆ 65:⁠4) ದಾವೀದನನ್ನು ಅರಸನಾಗಿ ಮಾಡುವ ವಾಗ್ದಾನವನ್ನು ದೇವರು ನೆರವೇರಿಸುವನೆಂದು ಹಾಗೂ ತನ್ನ ತಕ್ಕ ಸಮಯ ಮತ್ತು ರೀತಿಯಲ್ಲಿ ಸೌಲನನ್ನು ತೊಲಗಿಸುವನೆಂದು ದಾವೀದನಿಗೆ ತಿಳಿದಿತ್ತು.​—⁠1 ಸಮುವೇಲ 26:10.

ದೇವಭಯ ಸಂತೋಷವನ್ನು ತರುತ್ತದೆ

8 ನಾವು ಕ್ರೈಸ್ತರಾಗಿರುವುದರಿಂದ ಕುಚೋದ್ಯ, ಹಿಂಸೆ ಮತ್ತು ಬೇರೆ ಪರೀಕ್ಷೆಗಳನ್ನು ನಿರೀಕ್ಷಿಸಸಾಧ್ಯವಿದೆ. (ಮತ್ತಾಯ 24:9; 2 ಪೇತ್ರ 3:⁠3) ಆಗಾಗ್ಗೆ, ಜೊತೆ ಆರಾಧಕರಿಂದಲೂ ನಾವು ತೊಂದರೆಗಳನ್ನು ಅನುಭವಿಸಬಹುದು. ಆದರೂ, ಯೆಹೋವನು ಸಕಲವನ್ನೂ ನೋಡುತ್ತಾನೆ, ನಮ್ಮ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಮತ್ತು ತಕ್ಕ ಕಾಲದಲ್ಲಿ ತನ್ನ ಚಿತ್ತಾನುಸಾರ ಸಂಗತಿಗಳನ್ನು ಸರಿಪಡಿಸುತ್ತಾನೆಂಬುದು ನಮಗೆ ಗೊತ್ತಿದೆ. (ರೋಮಾಪುರ 12:​17-21; ಇಬ್ರಿಯ 4:16) ಆದಕಾರಣ, ನಾವು ನಮ್ಮ ವಿರೋಧಿಗಳಿಗೆ ಭಯಪಡುವ ಬದಲು ದೇವರಿಗೆ ಭಯಪಟ್ಟು ರಕ್ಷಣೆಗಾಗಿ ಆತನ ಕಡೆಗೆ ನೋಡುತ್ತೇವೆ. ದಾವೀದನಂತೆ ನಾವು ಸಹ ಸೇಡಿಗೆ ಸೇಡು ತೀರಿಸುವುದೂ ಇಲ್ಲ, ಕಷ್ಟಗಳಿಂದ ತಪ್ಪಿಸಿಕೊಳ್ಳಲು ನೀತಿಯ ಮೂಲತತ್ತ್ವಗಳ ವಿಷಯದಲ್ಲಿ ಸಂಧಾನ ಮಾಡಿಕೊಳ್ಳುವುದೂ ಇಲ್ಲ. ಇದು ಕಟ್ಟಕಡೆಗೆ ಸಂತೋಷವನ್ನು ತರುತ್ತದೆ. ಆದರೆ ಹೇಗೆ?

9 ಆಫ್ರಿಕದಲ್ಲಿ ದೀರ್ಘಕಾಲ ಮಿಷನೆರಿಯಾಗಿದ್ದ ಒಬ್ಬರು ಹೇಳುವುದು: “ಕ್ರೈಸ್ತ ತಾಟಸ್ಥ್ಯದ ಕಾರಣ ರಾಜಕೀಯ ಪಕ್ಷದ ಕಾರ್ಡುಗಳನ್ನು ಪಡೆದುಕೊಳ್ಳಲು ನಿರಾಕರಿಸಿದ ಒಬ್ಬ ತಾಯಿ ಮತ್ತು ಹದಿಹರೆಯದ ಮಗಳ ಯೋಚನೆ ನನಗೆ ಬರುತ್ತದೆ. ಅವರ ಮೇಲೆ ಗಂಡಸರ ಒಂದು ಗುಂಪು ನಿರ್ದಯದಿಂದ ಹಲ್ಲೆಮಾಡಿ, ಅವರು ಮನೆಗೆ ಹಿಂದೆಹೋಗಲು ಹೇಳಿದರು. ಅವರು ನಡೆದು ಹೋಗುತ್ತಿದ್ದಾಗ, ಹೀಗೇಕಾಯಿತು ಎಂದು ತಿಳಿಯಲು ಯತ್ನಿಸಿ ಅಳುತ್ತಿದ್ದ ಮಗಳಿಗೆ ಸಮಾಧಾನ ಹೇಳಲು ತಾಯಿ ಪ್ರಯತ್ನಿಸಿದಳು. ಅವರು ಆಗ ಹರ್ಷಿಸದಿದ್ದರೂ, ಅವರ ಮನಸ್ಸಾಕ್ಷಿ ನಿರ್ಮಲವಾಗಿತ್ತು. ತರುವಾಯ, ತಾವು ದೇವರಿಗೆ ವಿಧೇಯರಾದುದಕ್ಕೆ ಅವರು ಅತಿ ಸಂತೋಷಪಟ್ಟರು. ಅವರು ಒಂದುವೇಳೆ ಆ ಪಕ್ಷದ ಕಾರ್ಡುಗಳನ್ನು ಖರೀದಿಸುತ್ತಿದ್ದಲ್ಲಿ, ಆ ಗುಂಪು ಅತಿಯಾಗಿ ಹರ್ಷಪಡುತ್ತಿತ್ತು. ಆ ಜನರು ಅವರಿಬ್ಬರಿಗೆ ತಂಪು ಪಾನೀಯಗಳನ್ನು ಕೊಟ್ಟು, ಅವರ ಸುತ್ತಲೂ ಕುಣಿಯುತ್ತ ಮನೆಯ ವರೆಗೂ ಕರಕೊಂಡು ಬಂದು ಬಿಡುತ್ತಿದ್ದರು. ಆದರೆ ಆ ಹುಡುಗಿ ಮತ್ತು ಆಕೆಯ ತಾಯಿ, ತಾವು ಸಂಧಾನಮಾಡಿಕೊಂಡದ್ದಕ್ಕಾಗಿ ಈ ಜಗತ್ತಿನಲ್ಲೇ ಅತಿ ದುಃಖಿತ ಜನರಾಗುತ್ತಿದ್ದರು.” ಆದರೆ ಅವರಿಗಿದ್ದ ದೇವಭಯವು ಅವರನ್ನು ಅವೆಲ್ಲದರಿಂದ ತಪ್ಪಿಸಿ ಕಾಪಾಡಿತು.

10 ಜೀವದ ಪಾವಿತ್ರ್ಯಕ್ಕೆ ಗೌರವ ತೋರಿಸುವ ವಿಷಯದಲ್ಲಿ ಪರೀಕ್ಷೆಗಳನ್ನು ಎದುರಿಸುವಾಗಲೂ ದೈವಿಕ ಭಯವನ್ನು ತೋರಿಸುವುದು ಸಂತೋಷವನ್ನು ಫಲಿಸುತ್ತದೆ. ಮೇರಿ ಎಂಬುವವಳು ಮೂರನೆಯ ಬಾರಿ ತಾಯಿಯಾಗಲಿದ್ದಾಗ, ಗರ್ಭಪಾತ ಮಾಡಿಸಿಕೊಳ್ಳುವಂತೆ ವೈದ್ಯರು ಉತ್ತೇಜಿಸಿದರು. ಅವರು ಹೇಳಿದ್ದು: “ನೀನು ಅಪಾಯದ ಸ್ಥಿತಿಯಲ್ಲಿದ್ದೀ. ಯಾವ ಕ್ಷಣದಲ್ಲಿಯೂ ತೊಡಕು ಉಂಟಾಗಿ 24 ತಾಸುಗಳೊಳಗೆ ನೀನು ಸಾಯಬಹುದು. ಬಳಿಕ ನಿನ್ನ ಮಗು ಕೂಡ ಸಾಯಬಹುದು. ಹೇಗಿದ್ದರೂ, ಆ ಮಗು ಆರೋಗ್ಯವಾಗಿರುತ್ತದೆ ಎಂಬುದರ ಬಗ್ಗೆ ಯಾವುದೇ ಖಾತರಿ ಇಲ್ಲ.” ಆ ಸಮಯದಲ್ಲಿ ಮೇರಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದಳು, ಆದರೆ ಆಕೆಗೆ ಇನ್ನೂ ದೀಕ್ಷಾಸ್ನಾನವಾಗಿರಲಿಲ್ಲ. ಮೇರಿ ಹೇಳುವುದು: “ಆದರೂ, ನಾನು ಯೆಹೋವನನ್ನು ಸೇವಿಸಲು ನಿರ್ಧರಿಸಿದ್ದೆ. ಮತ್ತು ಪರಿಣಾಮ ಏನೇ ಆಗಲಿ, ನಾನು ಆತನಿಗೆ ವಿಧೇಯಳಾಗಿರಲು ದೃಢನಿಶ್ಚಿತಳಾಗಿದ್ದೆ.”​—⁠ವಿಮೋಚನಕಾಂಡ 21:​22, 23.

11 ಗರ್ಭಧಾರಣೆಯ ಸಮಯದಲ್ಲಿ ಮೇರಿ ಬೈಬಲ್‌ ಅಧ್ಯಯನ ಮಾಡುವುದರಲ್ಲಿ ಮತ್ತು ತನ್ನ ಕುಟುಂಬವನ್ನು ಪರಾಮರಿಸುವುದರಲ್ಲಿ ಮಗ್ನಳಾಗಿದ್ದಳು. ಕೊನೆಗೆ ಮಗು ಹುಟ್ಟಿತು. “ಈ ಹೆರಿಗೆ ಮೊದಲ ಇಬ್ಬರು ಮಕ್ಕಳ ಹೆರಿಗೆಗಿಂತ ಸ್ವಲ್ಪ ಹೆಚ್ಚು ಕಷ್ಟಕರವಾಗಿತ್ತಾದರೂ ದೊಡ್ಡ ತೊಡಕೇನೂ ಉಂಟಾಗಲಿಲ್ಲ” ಎಂದು ಮೇರಿ ಹೇಳಿದಳು. ದೇವಭಯವು ಮೇರಿಗೆ ಒಳ್ಳೆಯ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಲು ಸಹಾಯಮಾಡಿತು. ಸ್ವಲ್ಪದರಲ್ಲೇ ಆಕೆಗೆ ದೀಕ್ಷಾಸ್ನಾನವಾಯಿತು. ಆ ಗಂಡುಮಗು ಬೆಳೆಯುತ್ತಾ ಹೋದಂತೆ ಅವನೂ ಯೆಹೋವನಿಗೆ ಭಯಪಡಲು ಕಲಿತುಕೊಂಡನು ಮತ್ತು ಈಗ ಅವನು ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುತ್ತಿದ್ದಾನೆ.

‘ಯೆಹೋವನಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳಿ’

12 ದಾವೀದನಲ್ಲಿದ್ದ ದೇವಭಯವು ತಪ್ಪುಮಾಡುವುದರಿಂದ ಅವನನ್ನು ತಡೆದು ನಿಲ್ಲಿಸುವುದಕ್ಕಿಂತಲೂ ಹೆಚ್ಚಿನದನ್ನು ಮಾಡಿತು. ಕಷ್ಟಕರ ಸನ್ನಿವೇಶಗಳಲ್ಲಿ ಅವನು ನಿರ್ಣಾಯಕವಾಗಿ ಕ್ರಿಯೆಗೈಯುವಂತೆ ಮತ್ತು ವಿವೇಕದಿಂದ ವರ್ತಿಸುವಂತೆ ಅದು ಅವನನ್ನು ಬಲಪಡಿಸಿತು. ದಾವೀದನೂ ಅವನ ಜನರೂ ಸೌಲನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಒಂದು ವರ್ಷ ನಾಲ್ಕು ತಿಂಗಳು ಫಿಲಿಷ್ಟಿಯ ಊರಾದ ಚಿಕ್ಲಗ್‌ನಲ್ಲಿ ಆಶ್ರಯಪಡೆದರು. (1 ಸಮುವೇಲ 27:​5-7) ಒಮ್ಮೆ ಪುರುಷರು ಊರಲ್ಲಿ ಇಲ್ಲದಿದ್ದಾಗ, ಅಮಾಲೇಕ್ಯರು ಬಂದು ಸೂರೆಮಾಡಿ, ಆ ಪಟ್ಟಣವನ್ನು ಸುಟ್ಟು ಆ ಪುರುಷರ ಹೆಂಡತಿಯರು, ಮಕ್ಕಳು ಮತ್ತು ಪಶುಗಳನ್ನು ತಮ್ಮೊಂದಿಗೆ ಕೊಂಡೊಯ್ದರು. ದಾವೀದನೂ ಅವನ ಜನರೂ ಹಿಂದಿರುಗಿದಾಗ ಸಂಭವಿಸಿದ್ದನ್ನು ಕಂಡು ಅತ್ತರು. ದಾವೀದನೊಂದಿಗಿದ್ದ ಪುರುಷರ ಶೋಕವು ಕೋಪವಾಗಿ ಪರಿಣಮಿಸಲಾಗಿ ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ದಾವೀದನು ಇದರಿಂದ ವ್ಯಥೆಗೊಂಡರೂ ಎದೆಗುಂದಲಿಲ್ಲ. (ಜ್ಞಾನೋಕ್ತಿ 24:10) ಅವನಲ್ಲಿದ್ದ ದೇವಭಯವು ಅವನು ಯೆಹೋವನ ಕಡೆಗೆ ತಿರುಗುವಂತೆ ಪ್ರಚೋದಿಸಿತು ಮತ್ತು ಅವನು ‘ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು.’ ಆತನ ಸಹಾಯದಿಂದಾಗಿ ದಾವೀದನು ಮತ್ತು ಅವನ ಜನರು ಅಮಾಲೇಕ್ಯರನ್ನು ಸೋಲಿಸಿ ಕಳೆದುಕೊಂಡಿದ್ದ ಸಕಲವನ್ನೂ ಪುನಃ ಕೈವಶಮಾಡಿಕೊಂಡರು.​—⁠1 ಸಮುವೇಲ 30:​1-20.

13 ದೇವರ ಸೇವಕರು ಇಂದು ಸಹ ಯೆಹೋವನಲ್ಲಿ ಭರವಸೆಯನ್ನು ಮತ್ತು ನಿರ್ಣಾಯಕವಾಗಿ ಕ್ರಿಯೆಗೈಯಲು ಧೈರ್ಯವನ್ನು ಅಗತ್ಯಪಡಿಸುವಂತಹ ಸನ್ನಿವೇಶಗಳನ್ನು ಎದುರಿಸುತ್ತಾರೆ. ಇದಕ್ಕೆ ಒಂದು ಉದಾಹರಣೆಯಾಗಿ ಕ್ರಿಸ್ಟಿನ ಎಂಬವಳನ್ನು ತೆಗೆದುಕೊಳ್ಳಿ. ಕ್ರಿಸ್ಟಿನ ಯುವಪ್ರಾಯದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದಳು. ಆದರೆ ಆಕೆಗೆ ವಾದ್ಯಮೇಳದಲ್ಲಿ ಪಿಯಾನೊವಾದಕಿಯಾಗಬೇಕೆಂಬ ಬಯಕೆಯಿತ್ತು, ಮತ್ತು ಆಕೆ ಇದರಲ್ಲಿ ತುಂಬ ಪ್ರಗತಿಯನ್ನು ಸಹ ಮಾಡಿದಳು. ಅಲ್ಲದೆ, ಸಾರುವ ಕೆಲಸದಲ್ಲಿ ಭಾಗವಹಿಸಬೇಕೆಂಬ ಪ್ರಜ್ಞೆ ಆಕೆಗಿದುದರಿಂದ, ದೀಕ್ಷಾಸ್ನಾನದೊಂದಿಗೆ ಬರುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಕೆ ಭಯಪಟ್ಟಳು. ಆದರೆ ಕ್ರಿಸ್ಟಿನ ದೇವರ ವಾಕ್ಯದ ಅಧ್ಯಯನ ಮಾಡುತ್ತಾ ಹೋದಂತೆ ಅದಕ್ಕಿರುವ ಶಕ್ತಿಯನ್ನು ಅರಿತುಕೊಳ್ಳತೊಡಗಿದಳು. ಆಕೆ ಯೆಹೋವನ ಭಯವನ್ನು ಕಲಿತುಕೊಳ್ಳುತ್ತಿದ್ದಳು, ಮತ್ತು ತನ್ನ ಸೇವಕರು ತಮ್ಮ ಪೂರ್ಣ ಹೃದಯ, ಮನಸ್ಸು, ಪ್ರಾಣ ಮತ್ತು ಶಕ್ತಿಯಿಂದ ತನ್ನನ್ನು ಸೇವಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆಂದು ಆಕೆ ಗ್ರಹಿಸತೊಡಗಿದಳು. (ಮಾರ್ಕ 12:30) ಇದು ಆಕೆ ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದಕ್ಕೆ ನಡೆಸಿತು.

14 ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಕ್ರಿಸ್ಟಿನ ಯೆಹೋವನ ಬಳಿ ಸಹಾಯಕ್ಕಾಗಿ ಕೇಳಿಕೊಂಡಳು. ಕ್ರಿಸ್ಟಿನ ಹೇಳುವುದು: “ವಾದ್ಯಮೇಳದ ಪಿಯಾನೊವಾದಕಿಯ ಜೀವನದಲ್ಲಿ, ಸದಾ ಪ್ರಯಾಣ ಮಾಡುವುದು ಮತ್ತು ವರ್ಷಕ್ಕೆ 400ರಷ್ಟೂ ವಾದ್ಯಮೇಳಗಳಲ್ಲಿ ನುಡಿಸಲು ಕರಾರು ಮಾಡುವುದು ಸೇರಿದೆ ಎಂಬುದು ನನಗೆ ತಿಳಿದಿತ್ತು. ಆದಕಾರಣ, ನಾನು ಜೀವನೋಪಾಯಕ್ಕಾಗಿ ಒಬ್ಬ ಶಿಕ್ಷಕಿಯಾಗಿ ಕೆಲಸಮಾಡುತ್ತಾ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆಮಾಡಲು ನಿರ್ಧರಿಸಿದೆ.” ಆ ಹಂತದಲ್ಲಿ, ತನ್ನ ದೇಶದ ಅತಿ ಪ್ರಸಿದ್ಧ ಸಭಾಂಗಣದಲ್ಲಿ ಕ್ರಿಸ್ಟಿನ ತನ್ನ ಪ್ರಥಮ ಗಾಯನ ಕಚೇರಿಯಲ್ಲಿ ಭಾಗವಹಿಸಲಿದ್ದಳು. ಆಕೆ ಹೇಳುವುದು: “ನನ್ನ ಮೊದಲ ಗಾಯನ ಕಚೇರಿಯೇ ನನ್ನ ಕೊನೆಯ ಕಚೇರಿಯಾಯಿತು.” ಬಳಿಕ ಕ್ರಿಸ್ಟಿನ ಒಬ್ಬ ಕ್ರೈಸ್ತ ಹಿರಿಯನನ್ನು ಮದುವೆಯಾದಳು. ಅವರಿಬ್ಬರೂ ಈಗ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲೊಂದರಲ್ಲಿ ಸೇವೆಮಾಡುತ್ತಾ ಇದ್ದಾರೆ. ಸರಿಯಾದ ನಿರ್ಣಯಗಳನ್ನು ಮಾಡಲು ಯೆಹೋವನು ತನಗೆ ಬಲವನ್ನು ದಯಪಾಲಿಸಿದಕ್ಕಾಗಿ ಮತ್ತು ಈಗ ಆತನ ಸೇವೆಯಲ್ಲಿ ತಾನು ತನ್ನ ಸಮಯ ಹಾಗೂ ಶಕ್ತಿಯನ್ನು ವ್ಯಯಿಸುತ್ತಿರುವುದಕ್ಕಾಗಿ ಆಕೆ ಹರ್ಷಿತಳಾಗಿದ್ದಾಳೆ.

ಒಂದು ಅಮೂಲ್ಯ ಸ್ವಾಸ್ತ್ಯ

15 “ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು” ಎಂದು ದಾವೀದನು ಬರೆದನು. (ಕೀರ್ತನೆ 34:11) ದಾವೀದನು ಒಬ್ಬ ತಂದೆಯಾಗಿ ತನ್ನ ಮಕ್ಕಳಿಗೆ ಅತ್ಯಮೂಲ್ಯ ಸ್ವಾಸ್ತ್ಯವನ್ನು ಅಂದರೆ, ಯಥಾರ್ಥವಾದ, ಸಮತೋಲನವಾದ ಮತ್ತು ಹಿತಕರವಾದ ಯೆಹೋವನ ಭಯವನ್ನು ಸಾಗಿಸಲು ತೀವ್ರಾಭಿಲಾಷೆ ಉಳ್ಳವನಾಗಿದ್ದನು. ಯೆಹೋವನು ಎಂಥಾ ದೇವರಾಗಿದ್ದಾನೆ ಎಂಬುದನ್ನು ದಾವೀದನು ತನ್ನ ನಡೆನುಡಿಗಳ ಮೂಲಕ ಚಿತ್ರಿಸಿದನು. ಯೆಹೋವನು ನಿರ್ಬಂಧಿಸುವ, ಭಯಭೀತಿಯನ್ನುಂಟುಮಾಡುವ ಇಲ್ಲವೆ ಯಾರಾದರೂ ತನ್ನ ನಿಯಮಗಳನ್ನು ಮುರಿಯುತ್ತಾರೋ ಎಂದು ಅವರನ್ನು ಹಿಡಿಯಲು ಕಾಯುತ್ತಿರುವ ದೇವರಲ್ಲ ಬದಲಿಗೆ ತನ್ನ ಭೂಮಕ್ಕಳಿಗೆ ಆತನು ಪ್ರೀತಿಪೂರ್ಣನೂ, ಪರಾಮರಿಸುವಾತನೂ, ಕ್ಷಮಿಸುವಾತನೂ ಆದ ದೇವರಾಗಿದ್ದಾನೆಂದು ದಾವೀದನು ತನ್ನ ನಡೆನುಡಿಗಳ ಮೂಲಕ ಚಿತ್ರಿಸಿದನು. “ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾವನು?” ಎಂದು ಅವನು ಕೇಳಿದನು. ತದನಂತರ, ಯೆಹೋವನು ನಮ್ಮಲ್ಲಿ ಸದಾ ತಪ್ಪುಗಳನ್ನು ಹುಡುಕುತ್ತಿಲ್ಲ ಎಂದು ತನಗಿದ್ದ ಭರವಸೆಗೆ ಸೂಚಿಸುತ್ತಾ ಅವನು ಕೂಡಿಸಿದ್ದು: “ಮರೆಯಾದವುಗಳಿಂದ ನನ್ನನ್ನು ನಿರ್ಮಲಮಾಡು.” ತನ್ನಿಂದ ಸಾಧ್ಯವಾದಷ್ಟು ಹೆಚ್ಚು ಪ್ರಯತ್ನಮಾಡುವಲ್ಲಿ, ತನ್ನ ಮಾತುಗಳು ಮತ್ತು ಆಲೋಚನೆಗಳನ್ನು ಯೆಹೋವನಿಗೆ ಸ್ವೀಕರಣೀಯವಾಗಿ ಮಾಡಸಾಧ್ಯವಿದೆ ಎಂಬುದರಲ್ಲಿ ದಾವೀದನಿಗೆ ದೃಢನಿಶ್ಚಯವಿತ್ತು.​—⁠ಕೀರ್ತನೆ 19:​12, 14.

16 ದಾವೀದನು ಇಂದಿನ ಹೆತ್ತವರಿಗೆ ಒಂದು ಮಾದರಿಯಾಗಿದ್ದಾನೆ. ತಮ್ಮ ಹೆತ್ತವರ ಕುರಿತು ತಿಳಿಸುತ್ತಾ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ ಒಂದರಲ್ಲಿ ತನ್ನ ತಮ್ಮನ ಜೊತೆಗೆ ಸೇವೆಮಾಡುತ್ತಿರುವ ರಾಲ್ಫ್‌ ಎಂಬವನು ಹೇಳುವುದು: “ನಮ್ಮ ಹೆತ್ತವರು, ಸತ್ಯದಲ್ಲಿರುವುದು ಆನಂದದಾಯಕವಾಗಿದೆ ಎಂದು ನಾವು ಮನಗಾಣುವಂಥ ರೀತಿಯಲ್ಲಿ ನಮ್ಮನ್ನು ಬೆಳೆಸಿದರು. ನಾವು ಚಿಕ್ಕವರಾಗಿದ್ದಾಗ, ಸಭಾ ಚಟುವಟಿಕೆಗಳ ಕುರಿತು ಮಾತಾಡುವ ಸಮಯಗಳಲ್ಲಿ ಅವರು ನಮ್ಮನ್ನೂ ಒಳಗೂಡಿಸುತ್ತಿದ್ದರು. ಹೀಗೆ ಮಾಡಿದರಿಂದ ಸತ್ಯದಲ್ಲಿ ನಮ್ಮ ಹೆತ್ತವರಿಗಿದ್ದಷ್ಟೇ ಉತ್ಸಾಹವು ನಮ್ಮಲ್ಲೂ ಬಂತು. ಯೆಹೋವನ ಸೇವೆಯಲ್ಲಿ ನಾವು ಪ್ರಯೋಜನದಾಯಕ ಕಾರ್ಯಗಳನ್ನು ಮಾಡಸಾಧ್ಯವಿದೆ ಎಂದು ನಾವು ನಂಬುವಂತೆ ಅವರು ನಮ್ಮನ್ನು ಬೆಳೆಸಿದರು. ವಾಸ್ತವವೇನಂದರೆ, ಹೆಚ್ಚು ರಾಜ್ಯ ಪ್ರಚಾರಕರು ಅಗತ್ಯವಿದ್ದ ಒಂದು ದೇಶದಲ್ಲಿ ಹಲವು ವರ್ಷಕಾಲ ನಮ್ಮ ಕುಟುಂಬ ನೆಲೆಸಿ, ಹೊಸ ಸಭೆಗಳನ್ನು ಸ್ಥಾಪಿಸಲು ಸಹಾಯ ನೀಡಿತು.”

17 “ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಿದ್ದು ಕಟ್ಟುನಿಟ್ಟಾದ ಕಟ್ಟಳೆಗಳ ಕಟ್ಟೊಂದಲ್ಲ ಬದಲಿಗೆ, ನಮ್ಮ ಹೆತ್ತವರಿಗೆ ಯೆಹೋವನು ನೈಜ್ಯನಾಗಿದ್ದನು ಮತ್ತು ತುಂಬ ತುಂಬ ದಯಾಪರನೂ ಒಳ್ಳೆಯವನೂ ಆಗಿದದ್ದೇ. ಅವರು ಯೆಹೋವನ ಒಳ್ಳೆಯ ಪರಿಚಯ ಮಾಡಿಕೊಳ್ಳಲು ಮತ್ತು ಆತನನ್ನು ಮೆಚ್ಚಿಸಲು ಬಯಸಿದರು. ಅವರ ಯಥಾರ್ಥ ದೇವಭಯ ಮತ್ತು ಅವರಿಗೆ ದೇವರ ಮೇಲಿದ್ದ ಪ್ರೀತಿಯಿಂದ ನಾವು ಪಾಠ ಕಲಿತೆವು. ನಾವು ಏನಾದರೂ ತಪ್ಪನ್ನು ಮಾಡಿದಾಗ ಸಹ, ಯೆಹೋವನು ನಮ್ಮನ್ನು ಇನ್ನು ಮುಂದೆ ಪ್ರೀತಿಸುವುದಿಲ್ಲ ಎಂದು ನಮಗನಿಸುವಂತೆ ನಮ್ಮ ಹೆತ್ತವರು ಮಾಡಲಿಲ್ಲ ಅಥವಾ ನಮ್ಮ ಮೇಲೆ ಸಿಟ್ಟಿನಿಂದ ಅನಾವಶ್ಯಕ ನಿರ್ಬಂಧಗಳನ್ನು ಹಾಕಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ನಮ್ಮನ್ನು ಕೂರಿಸಿ ಮಾತಾಡಿ ನಮ್ಮ ಹೃದಯಗಳನ್ನು ತಲಪಲು ಪ್ರಯತ್ನಿಸುತ್ತಿದ್ದರು. ಕೆಲವು ಬಾರಿ ತಾಯಿಯವರು ಮಾತಾಡುತ್ತಿದ್ದಾಗ ಕಣ್ಣೀರು ಸುರಿಸುತ್ತಿದ್ದರು. ಮತ್ತು ಇದು ಕಾರ್ಯಾಸಾಧಕವಾಗಿತ್ತು. ನಮ್ಮ ತಂದೆತಾಯಿಗಳ ನಡೆನುಡಿಗಳ ಮೂಲಕ ಯೆಹೋವನ ಭಯವು ಸೊಗಸಾದ ವಿಚಾರವಾಗಿದೆ ಮತ್ತು ಆತನ ಸಾಕ್ಷಿಗಳಲ್ಲಿ ಒಬ್ಬರಾಗಿರುವುದು ಹೊರೆಯಲ್ಲ ಹರ್ಷೋಲ್ಲಾಸಕರ ಎಂದು ನಾವು ಕಲಿತುಕೊಂಡೆವು.”​—⁠1 ಯೋಹಾನ 5:⁠3.

18 ‘ದಾವೀದನ ಕಡೇ ಮಾತುಗಳಲ್ಲಿ’ ನಾವು ಇದನ್ನು ಓದುತ್ತೇವೆ: ‘ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.’ (2 ಸಮುವೇಲ 23:​1, 3, 4) ದಾವೀದನ ಪುತ್ರನೂ ಉತ್ತರಾಧಿಕಾರಿಯೂ ಆದ ಸೊಲೊಮೋನನಿಗೆ ಇದು ಸುವ್ಯಕ್ತವಾಗಿದ್ದಿರಬೇಕು, ಏಕೆಂದರೆ ಅವನು ‘ಒಳ್ಳೆಯದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ತಿಳುವಳಿಕೆಯುಳ್ಳ ಹೃದಯವನ್ನು ಕೊಡಬೇಕೆಂದು’ ಯೆಹೋವನನ್ನು ಕೇಳಿಕೊಂಡನು. (1 ಅರಸುಗಳು 3:⁠9, NIBV) ಯೆಹೋವನ ಭಯವು ವಿವೇಕ ಮತ್ತು ಸಂತೋಷದ ಮಾರ್ಗವೆಂದು ಸೊಲೊಮೋನನು ಒಪ್ಪಿಕೊಂಡನು. ಸಮಯಾನಂತರ, ಅವನು ಪ್ರಸಂಗಿ ಪುಸ್ತಕವನ್ನು ಸಾರಾಂಶವಾಗಿ ಹೀಗೆ ನುಡಿದನು: “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು.” (ಪ್ರಸಂಗಿ 12:​13, 14) ನಾವು ಈ ಸಲಹೆಗೆ ಕಿವಿಗೊಡುವಲ್ಲಿ, “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ” ಎಂದು ನಿಶ್ಚಯವಾಗಿಯೂ ಕಂಡುಕೊಳ್ಳುವೆವು.​—⁠ಜ್ಞಾನೋಕ್ತಿ 22:⁠4.

19 ಬೈಬಲಿನ ಉದಾಹರಣೆಗಳಿಂದ ಮತ್ತು ಆಧುನಿಕ ಅನುಭವಗಳಿಂದ, ಯೋಗ್ಯ ರೀತಿಯ ದೇವಭಯವು ಯೆಹೋವನ ನಿಜ ಸೇವಕರ ಜೀವನಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆಂದು ನಾವು ನೋಡುತ್ತೇವೆ. ಅಂಥ ಭಯವು ನಮ್ಮ ಸ್ವರ್ಗೀಯ ತಂದೆಗೆ ಮೆಚ್ಚಿಕೆಯಾಗಿರದ್ದನ್ನು ಮಾಡದಿರುವಂತೆ ತಡೆಯುತ್ತದೆ ಮಾತ್ರವಲ್ಲ, ನಮ್ಮ ವಿರೋಧಿಗಳನ್ನು ಎದುರಿಸಲು ಧೈರ್ಯವನ್ನೂ, ನಮ್ಮ ದಾರಿಯಲ್ಲಿ ಬರುವ ಕಷ್ಟಪರೀಕ್ಷೆಗಳನ್ನು ತಾಳಿಕೊಳ್ಳಲು ಬೇಕಾದ ಬಲವನ್ನೂ ಒದಗಿಸಬಲ್ಲದು. ಆದಕಾರಣ, ಎಳೆಯರೂ ಹಿರಿಯರೂ ಆದ ನಾವೆಲ್ಲರೂ, ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವುದರಲ್ಲಿ, ಕಲಿತದ್ದನ್ನು ಧ್ಯಾನ ಮಾಡುವುದರಲ್ಲಿ ಮತ್ತು ಕ್ರಮವಾದ ಹೃತ್ಪೂರ್ವಕ ಪ್ರಾರ್ಥನೆಗಳಲ್ಲಿ ನಿರತರಾಗಿರೋಣ. ಹೀಗೆ ಮಾಡುವ ಮೂಲಕ ನಾವು “ದೈವಜ್ಞಾನವನ್ನು” ಪಡೆಯುವೆವು ಅಷ್ಟೇ ಅಲ್ಲ, “ಯೆಹೋವನ ಭಯವನ್ನು” ಸಹ ತಿಳಿದುಕೊಳ್ಳುವೆವು.​—⁠ಜ್ಞಾನೋಕ್ತಿ 2:1-5. (w06 8/1)

[ಪಾದಟಿಪ್ಪಣಿಗಳು]

^ ಪ್ಯಾರ. 7 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 9 ದಾವೀದನು 57ನೇ ಮತ್ತು 142ನೇ ಕೀರ್ತನೆಗಳನ್ನು ರಚಿಸುವಂತೆ ಪ್ರೇರಿಸಿದ ಅನುಭವಗಳಲ್ಲಿ ಇದೂ ಒಂದಾಗಿದ್ದಿರಬಹುದು.

ವಿವರಿಸಬಲ್ಲಿರಾ?

ದೇವಭಯವು ಹೇಗೆ

• ಘೋರ ಪಾಪದಿಂದ ಚೇತರಿಸಿಕೊಳ್ಳುವಂತೆ ಸಹಾಯಮಾಡಬಲ್ಲದು?

• ಪರೀಕ್ಷೆಗಳು ಮತ್ತು ಹಿಂಸೆಯ ಮಧ್ಯೆ ಸಂತೋಷವನ್ನು ತರಬಲ್ಲದು?

• ದೇವರ ಚಿತ್ತವನ್ನು ಮಾಡುವಂತೆ ಬಲಪಡಿಸಬಲ್ಲದು?

• ನಮ್ಮ ಮಕ್ಕಳಿಗೆ ಅಮೂಲ್ಯ ಸ್ವಾಸ್ತ್ಯವಾಗಿರಬಲ್ಲದು?

[ಅಧ್ಯಯನ ಪ್ರಶ್ನೆಗಳು]

1, 2. ಯೆಹೋವನ ಭಯ ನಮಗೆ ಏನನ್ನು ತರಬಲ್ಲದು?

3. ತನ್ನ ಪಾಪಗಳಿಂದ ಚೇತರಿಸಿಕೊಳ್ಳುವಂತೆ ದಾವೀದನಿಗೆ ಯಾವುದು ಸಹಾಯಮಾಡಿತು?

4. ದೇವಭಯವು ಒಬ್ಬ ವ್ಯಕ್ತಿಯು ಸಂತೋಷವನ್ನು ಪುನಃ ಪಡೆಯುವಂತೆ ಹೇಗೆ ಸಹಾಯಮಾಡಬಲ್ಲದು?

5, 6. ದಾವೀದನು ಸೌಲನ ಜೀವವನ್ನು ಎರಡು ಬಾರಿ ಉಳಿಸಿದ್ದು ಹೇಗೆ ಮತ್ತು ಏಕೆಂದು ವಿವರಿಸಿ.

7. ಪಾಪಮಾಡದಂತೆ ದಾವೀದನನ್ನು ಯಾವುದು ತಡೆಯಿತು?

8. ಒತ್ತಡದ ಕೆಳಗಿದ್ದಾಗ ದಾವೀದನು ನಡಕೊಂಡ ರೀತಿಯು ನಮಗೆ ಹೇಗೆ ಒಂದು ಮಾದರಿಯಾಗಿದೆ?

9. ದೇವರಿಗೆ ಭಯಪಡುವುದು ಹಿಂಸೆಯ ನಡುವೆಯೂ ಹೇಗೆ ಸಂತೋಷವನ್ನು ಫಲಿಸುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿರಿ.

10, 11. ಒಬ್ಬ ಸ್ತ್ರೀಗಿದ್ದ ದೇವಭಯಕ್ಕೆ ಯಾವ ಉತ್ತಮ ಫಲಿತಾಂಶಗಳು ಸಿಕ್ಕಿದವು?

12. ದೇವಭಯವು ದಾವೀದನನ್ನು ಹೇಗೆ ಬಲಪಡಿಸಿತು?

13, 14. ಒಬ್ಬ ಕ್ರೈಸ್ತಳಿಗೆ ಉತ್ತಮ ನಿರ್ಣಯಗಳನ್ನು ಮಾಡುವಂತೆ ದೇವಭಯವು ಹೇಗೆ ಸಹಾಯಮಾಡಿತು?

15. ದಾವೀದನು ತನ್ನ ಮಕ್ಕಳಿಗೆ ಏನನ್ನು ಸಾಗಿಸಲು ಬಯಸಿದನು, ಮತ್ತು ಅವನದನ್ನು ಹೇಗೆ ಮಾಡಿದನು?

16, 17. ಯೆಹೋವನ ಭಯವನ್ನು ಹೆತ್ತವರು ಮಕ್ಕಳಿಗೆ ಹೇಗೆ ಕಲಿಸಬಲ್ಲರು?

18. ಸತ್ಯದೇವರಿಗೆ ಭಯಪಡುವಲ್ಲಿ ನಾವು ಏನನ್ನು ಗಳಿಸುವೆವು?

19. “ಯೆಹೋವನ ಭಯವನ್ನು” ತಿಳಿದುಕೊಳ್ಳಲು ನಮಗೆ ಯಾವುದು ಶಕ್ತರನ್ನಾಗಿ ಮಾಡುವುದು?

[ಪುಟ 29ರಲ್ಲಿರುವ ಚಿತ್ರಗಳು]

ಯೆಹೋವನ ಭಯವು ಹೆತ್ತವರು ಮಕ್ಕಳಿಗೆ ಸಾಗಿಸಬಲ್ಲ ಅಮೂಲ್ಯ ಸ್ವಾಸ್ತ್ಯವಾಗಿದೆ