ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಂಘಟನೆಯ ಒಳ್ಳೇ ಸಂಗತಿಗಳ ಮೇಲೆ ಗಮನ ಕೇಂದ್ರೀಕರಿಸಿ

ಯೆಹೋವನ ಸಂಘಟನೆಯ ಒಳ್ಳೇ ಸಂಗತಿಗಳ ಮೇಲೆ ಗಮನ ಕೇಂದ್ರೀಕರಿಸಿ

ಯೆಹೋವನ ಸಂಘಟನೆಯ ಒಳ್ಳೇ ಸಂಗತಿಗಳ ಮೇಲೆ ಗಮನ ಕೇಂದ್ರೀಕರಿಸಿ

“ನಿನ್ನ ಆಲಯದ ಒಳ್ಳೆಯ ಸಂಗತಿಗಳಿಂದ ನಾವು ತೃಪ್ತರಾಗುವೆವು.”​—⁠ಕೀರ್ತನೆ 65:⁠4, NIBV.

ಪುರಾತನಕಾಲದ ಇಸ್ರಾಯೇಲ್‌ ಜನಾಂಗದವನಾಗಿದ್ದ ದಾವೀದನು, ಹೀಬ್ರು ಶಾಸ್ತ್ರಗಳಲ್ಲಿ ಚರ್ಚಿಸಲ್ಪಟ್ಟಿರುವ ಅತಿ ಗಮನಾರ್ಹ ವ್ಯಕ್ತಿಗಳಲ್ಲಿ ಒಬ್ಬನು. ಒಬ್ಬ ಕುರುಬನು, ಸಂಗೀತಕಾರನು, ಪ್ರವಾದಿ ಮತ್ತು ರಾಜನಾಗಿದ್ದ ಇವನು ಯೆಹೋವ ದೇವರಲ್ಲಿ ಸಂಪೂರ್ಣ ಭರವಸೆಯನ್ನಿಟ್ಟಿದ್ದನು. ಯೆಹೋವನೊಂದಿಗೆ ಅವನಿಗಿದ್ದ ಗಾಢವಾದ ಆಪ್ತ ಸಂಬಂಧವು, ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂಬ ಆಸೆಯನ್ನು ಅವನಲ್ಲಿ ಚಿಗುರಿಸಿತು. ಆ ಆಲಯವು ಇಸ್ರಾಯೇಲಿನಲ್ಲಿ ಸತ್ಯಾರಾಧನೆಯ ಕೇಂದ್ರವಾಗಿರಲಿತ್ತು. ಆ ಆಲಯ ಮತ್ತು ಅಲ್ಲಿ ನಡೆಯುವ ಕೆಲಸವು ದೇವಜನರಿಗೆ ಆನಂದವನ್ನೂ ಆಶೀರ್ವಾದಗಳನ್ನೂ ತರಲಿದ್ದವೆಂದು ದಾವೀದನಿಗೆ ತಿಳಿದಿತ್ತು. ಆದುದರಿಂದಲೇ ಅವನು ಹಾಡಿದ್ದು: “ನೀನು ಆಯ್ದುಕೊಂಡು ನಿನ್ನ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು; ಏಕೆಂದರೆ ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು; ನಿನ್ನ ಪರಿಶುದ್ಧ ಮಂದಿರವಾದ ನಿನ್ನ ಆಲಯದ ಒಳ್ಳೆಯ ಸಂಗತಿಗಳಿಂದ ನಾವು ತೃಪ್ತರಾಗುವೆವು.”​—⁠ಕೀರ್ತನೆ 65:⁠4, NIBV.

2 ಆದರೆ ದಾವೀದನಿಗೆ, ಯೆಹೋವನ ಆಲಯದ ನಿರ್ಮಾಣ ಕೆಲಸದ ಉಸ್ತುವಾರಿ ವಹಿಸುವ ಅನುಮತಿ ಸಿಗಲಿಲ್ಲ. ಅದರ ಬದಲು ಆ ವಿಶೇಷ ನೇಮಕವನ್ನು ಅವನ ಪುತ್ರನಾದ ಸೊಲೊಮೋನನಿಗಾಗಿ ಕಾದಿರಿಸಲಾಯಿತು. ದಾವೀದನು ಅಷ್ಟೊಂದು ಮನಃಪೂರ್ವಕವಾಗಿ ಆಶಿಸಿದಂಥ ಈ ವಿಶೇಷ ನೇಮಕವು ಬೇರೆಯವರಿಗೆ ಕೊಡಲ್ಪಟ್ಟಾಗ ಅವನು ಗುಣುಗುಟ್ಟಲಿಲ್ಲ. ಅವನ ಮುಖ್ಯ ಚಿಂತೆ, ಆಲಯದ ನಿರ್ಮಾಣವಾಗಬೇಕೆಂದೇ ಆಗಿತ್ತು. ಆದುದರಿಂದ, ಅವನು ಯೆಹೋವನಿಂದ ಪಡೆದಿದ್ದ ವಾಸ್ತುಶಿಲ್ಪ ಯೋಜನೆಗಳನ್ನು ಸೊಲೊಮೋನನಿಗೆ ಕೊಡುವ ಮೂಲಕ ಆ ಕಾರ್ಯಯೋಜನೆಯನ್ನು ಪೂರ್ಣಹೃದಯದಿಂದ ಬೆಂಬಲಿಸಿದನು. ಅಷ್ಟುಮಾತ್ರವಲ್ಲದೆ, ದಾವೀದನು ಸಾವಿರಾರು ಮಂದಿ ಲೇವ್ಯರನ್ನು ವಿಭಿನ್ನ ಸೇವೆಗಳಿಗಾಗಿ ವಿಂಗಡಿಸಿದನು ಮತ್ತು ಆಲಯದ ನಿರ್ಮಾಣಕ್ಕಾಗಿ ಬಹುದೊಡ್ಡ ಮೊತ್ತದಲ್ಲಿ ಚಿನ್ನಬೆಳ್ಳಿಯನ್ನು ದಾನಮಾಡಿದನು.​—⁠1 ಪೂರ್ವಕಾಲವೃತ್ತಾಂತ 17:1, 4, 11, 12; 23:3-6; 28:11, 12; 29:1-5.

3 ನಂಬಿಗಸ್ತ ಇಸ್ರಾಯೇಲ್ಯರು ದೇವರ ಆಲಯದಲ್ಲಿ ಸತ್ಯಾರಾಧನೆಗಾಗಿ ಮಾಡಲ್ಪಟ್ಟ ಏರ್ಪಾಡುಗಳನ್ನು ಬೆಂಬಲಿಸಿದರು. ಯೆಹೋವನ ಆಧುನಿಕ ದಿನದ ಸೇವಕರಾಗಿ ನಾವು ಸಹ ಆತನ ಸಂಘಟನೆಯ ಭೂಭಾಗದೊಳಗೆ ಆರಾಧನೆಗಾಗಿ ಮಾಡಲ್ಪಟ್ಟಿರುವ ಏರ್ಪಾಡುಗಳನ್ನು ಅದೇ ರೀತಿಯಲ್ಲಿ ಬೆಂಬಲಿಸುತ್ತೇವೆ. ಹೀಗೆ, ನಮಗೂ ದಾವೀದನಂಥದ್ದೇ ಮನೋಭಾವ ಇದೆಯೆಂದು ತೋರಿಸುತ್ತೇವೆ. ನಮಗೆ ದೂರುವ ಮನೋಭಾವವಿಲ್ಲ, ಬದಲಿಗೆ ನಾವು ದೇವರ ಸಂಘಟನೆಯ ಒಳ್ಳೇ ಸಂಗತಿಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆ. ನಾವು ನಿಜವಾಗಿಯೂ ಆಭಾರಿಗಳಾಗಿರಬಲ್ಲ ಅನೇಕ ಒಳ್ಳೇ ಸಂಗತಿಗಳ ಬಗ್ಗೆ ಯೋಚಿಸಿದ್ದೀರೊ? ಅವುಗಳಲ್ಲಿ ಕೆಲವೊಂದನ್ನು ನಾವು ಪರಿಗಣಿಸೋಣ.

ಮುಂದಾಳುತ್ವ ವಹಿಸುವವರಿಗಾಗಿ ಕೃತಜ್ಞರು

4 ಯೇಸು ಕ್ರಿಸ್ತನು ಭೂಮಿಯ ಮೇಲಿರುವ ಅವನ ಆಸ್ತಿಯ ಮೇಲೆ ನೇಮಿಸಿರುವ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ಕೃತಜ್ಞರಾಗಿರಲು ನಮಗೆ ಬಲವಾದ ಕಾರಣಗಳಿವೆ. ಆತ್ಮಾಭಿಷಿಕ್ತ ಕ್ರೈಸ್ತರಿಂದ ರಚಿತವಾಗಿರುವ ಈ ಆಳು ವರ್ಗವು, ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ನೇತೃತ್ವವನ್ನು ವಹಿಸುತ್ತದೆ, ಆರಾಧನೆಗಾಗಿ ಕೂಟಗಳನ್ನು ಏರ್ಪಡಿಸುತ್ತದೆ, ಮತ್ತು 400ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಬೈಬಲಾಧಾರಿತ ಸಾಹಿತ್ಯವನ್ನು ಪ್ರಕಾಶಿಸುತ್ತದೆ. ಲೋಕವ್ಯಾಪಕವಾಗಿ ಮಿಲಿಯಗಟ್ಟಲೆ ಜನರು, ‘ಹೊತ್ತು ಹೊತ್ತಿಗೆ ಕೊಡಲಾಗುವ ಈ ಆಹಾರವನ್ನು’ ಕೃತಜ್ಞತಾಭಾವದಿಂದ ಸೇವಿಸುತ್ತಾರೆ. (ಮತ್ತಾಯ 24:45-47) ಅದರ ಬಗ್ಗೆ ಗುಣುಗುಟ್ಟಲಿಕ್ಕಾಗಿ ನಿಶ್ಚಯವಾಗಿಯೂ ಯಾವುದೇ ಕಾರಣವಿಲ್ಲ!

5 ಯೆಹೋವನ ಒಬ್ಬ ವೃದ್ಧ ಸಾಕ್ಷಿಯಾಗಿರುವ ಎಲ್ಫೀ ಎಂಬವರಿಗೆ ಅನೇಕ ವರ್ಷಗಳಿಂದ ಆಳು ವರ್ಗದ ಪ್ರಕಾಶನಗಳಲ್ಲಿನ ಶಾಸ್ತ್ರಾಧಾರಿತ ಸಲಹೆಯನ್ನು ಅನ್ವಯಿಸಿಕೊಳ್ಳುವುದರಿಂದ ಸಾಂತ್ವನ ಹಾಗೂ ಆಸರೆ ಸಿಕ್ಕಿದೆ. ಗಾಢವಾದ ಗಣ್ಯಭಾವದಿಂದಾಗಿ ಎಲ್ಫೀ ಹೀಗೆ ಬರೆಯಲು ಪ್ರಚೋದಿಸಲ್ಪಟ್ಟರು: “ಯೆಹೋವನ ಸಂಘಟನೆ ಇಲ್ಲದಿರುವಲ್ಲಿ ನಾನೇನು ಮಾಡುವೆ?” ಪೀಟ ಮತ್ತು ಅರ್ಮ್‌ಗಾರ್ಟ್‌ ದಂಪತಿಯು, ಅನೇಕ ದಶಕಗಳಿಂದ ದೇವರ ಸೇವಕರಾಗಿದ್ದಾರೆ. “ಯೆಹೋವನ ಪ್ರೀತಿಪರ ಹಾಗೂ ಕಾಳಜಿವಹಿಸುವ ಸಂಘಟನೆಯು” ತಯಾರಿಸಿರುವ ಎಲ್ಲ ಪ್ರಕಾಶನಗಳಿಗಾಗಿ ಅರ್ಮ್‌ಗಾರ್ಟ್‌ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾಳೆ. ಈ ಪ್ರಕಾಶನಗಳು ವಿಶೇಷ ಅಗತ್ಯಗಳಿರುವ ಜನರಿಗಾಗಿ ಉದಾಹರಣೆಗೆ, ದೃಷ್ಟಿಮಾಂದ್ಯತೆ ಇಲ್ಲವೆ ಕಿವಿಕೇಳದಿರುವ ಸಮಸ್ಯೆಯಿರುವವರಿಗಾಗಿ ಸಹ ವಿನ್ಯಾಸಿಸಲ್ಪಟ್ಟಿವೆ.

6 ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು ‘ನಂಬಿಗಸ್ತ ಆಳನ್ನು’ ಪ್ರತಿನಿಧಿಸುತ್ತದೆ. ಈ ಮಂಡಳಿಯು, ನ್ಯೂ ಯಾರ್ಕ್‌ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಸಲ್ಲಿಸುತ್ತಿರುವ ಆತ್ಮಾಭಿಷಿಕ್ತ ಪುರುಷರ ಒಂದು ಚಿಕ್ಕ ಗುಂಪಾಗಿದೆ. ಈ ಆಡಳಿತ ಮಂಡಲಿಯು, ಲೋಕವ್ಯಾಪಕವಾಗಿ 98,000ಕ್ಕಿಂತಲೂ ಹೆಚ್ಚು ಸಭೆಗಳಲ್ಲಿನ ಚಟುವಟಿಕೆಗಳನ್ನು ನೋಡಿಕೊಳ್ಳುವ ಬ್ರಾಂಚ್‌ ಆಫೀಸುಗಳಲ್ಲಿ ಸೇವೆಸಲ್ಲಿಸಲು ಯೆಹೋವನ ಅನುಭವೀ ಸೇವಕರನ್ನು ನೇಮಿಸುತ್ತದೆ. ಯಾರು ಬೈಬಲಿನ ಅರ್ಹತೆಯ ಮಟ್ಟಗಳನ್ನು ತಲಪುತ್ತಾರೊ ಅವರನ್ನು ಸಭೆಗಳಲ್ಲಿ ಹಿರಿಯರಾಗಿ ಮತ್ತು ಶುಶ್ರೂಷಾ ಸೇವಕರಾಗಿ ಸೇವೆಸಲ್ಲಿಸುವಂತೆ ನೇಮಿಸಲಾಗುತ್ತದೆ. (1 ತಿಮೊಥೆಯ 3:1-9, 12, 13) ಹಿರಿಯರು, ಮುಂದಾಳುತ್ವವನ್ನು ವಹಿಸಿ ತಮ್ಮ ಜೋಕೆಗೆ ವಹಿಸಲ್ಪಟ್ಟಿರುವ ದೇವರ ಮಂದೆಯನ್ನು ಪ್ರೀತಿಯಿಂದ ಪಾಲಿಸುತ್ತಾರೆ. ಆ ಮಂದೆಯ ಭಾಗವಾಗಿರುವುದು ಮತ್ತು ನಮ್ಮ ‘ಸಹೋದರರ’ ಇಡೀ ಬಳಗದಲ್ಲಿರುವ ಪ್ರೀತಿಐಕ್ಯವನ್ನು ಅನುಭವಿಸುವುದು ಎಂಥ ಒಂದು ಆಶೀರ್ವಾದವಾಗಿದೆ!​—⁠1 ಪೇತ್ರ 2:​17; 5:2, 3.

7 ಕೆಲವರು, ತಮಗೆ ಹಿರಿಯರಿಂದ ಸಿಗುವ ಪ್ರೀತಿಪರ ಆಧ್ಯಾತ್ಮಿಕ ಮಾರ್ಗದರ್ಶನದ ಬಗ್ಗೆ ದೂರು ಹೇಳುವ ಬದಲು ಹೆಚ್ಚಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಉದಾಹರಣೆಗಾಗಿ, 30ರ ಪ್ರಾಯದಲ್ಲಿರುವ ಒಬ್ಬ ಕ್ರೈಸ್ತ ಪತ್ನಿಯಾದ ಬಿರ್ಜಿಟ್‌ಳನ್ನು ತೆಗೆದುಕೊಳ್ಳಿ. ಅವಳು ಹದಿವಯಸ್ಕಳಾಗಿದ್ದಾಗ ಕೆಟ್ಟ ಸಹವಾಸಕ್ಕೆ ಬಿದ್ದು ಇನ್ನೇನು ತಪ್ಪು ಕೆಲಸವನ್ನು ಮಾಡಲಿಕ್ಕಿದ್ದಳು. ಆದರೆ ಹಿರಿಯರು ಬೈಬಲಿನಿಂದ ಕೊಟ್ಟ ಸಲಹೆ ಮತ್ತು ಜೊತೆ ವಿಶ್ವಾಸಿಗಳ ಬೆಂಬಲವು, ಹಾನಿಕರವಾಗಿರಸಾಧ್ಯವಿದ್ದ ಸನ್ನಿವೇಶದಿಂದ ಅವಳು ಪಾರಾಗುವಂತೆ ಸಹಾಯಮಾಡಿತು. ಈಗ ಬಿರ್ಜಿಟ್‌ಳಿಗೆ ಹೇಗನಿಸುತ್ತದೆ? ಅವಳನ್ನುವುದು: “ನಾನೀಗಲೂ ಯೆಹೋವನ ಅದ್ಭುತವಾದ ಸಂಘಟನೆಯಲ್ಲಿದ್ದೇನೆ ಎಂಬುದಕ್ಕಾಗಿ ಮನದಾಳದಿಂದ ಕೃತಜ್ಞಳಾಗಿದ್ದೇನೆ.” 17 ವರ್ಷ ಪ್ರಾಯದ ಆ್ಯಂಡ್ರೀಯಾಸ್‌ ಎಂಬವನು ತಿಳಿಸುವುದು: “ಇದು ನಿಜವಾಗಿಯೂ ಯೆಹೋವನ ಸಂಘಟನೆಯಾಗಿದೆ. ಇದು ಜಗತ್ತಿನಲ್ಲೇ ಅತ್ಯುತ್ತಮವಾದ ಸಂಘಟನೆಯಾಗಿದೆ.” ಯೆಹೋವನ ಸಂಘಟನೆಯ ಭೂಭಾಗದ ಒಳ್ಳೇ ಸಂಗತಿಗಳಿಗಾಗಿ ನಾವು ಕೃತಜ್ಞರಾಗಿರಬೇಕಲ್ಲವೊ?

ಮುಂದಾಳುತ್ವ ವಹಿಸುವವರು ಅಪರಿಪೂರ್ಣರು

8 ಸತ್ಯಾರಾಧನೆಯಲ್ಲಿ ಮುಂದಾಳುತ್ವ ವಹಿಸುವಂತೆ ನೇಮಿಸಲ್ಪಟ್ಟಿರುವವರು ಅಪರಿಪೂರ್ಣರು ನಿಶ್ಚಯ. ಅವರೆಲ್ಲರೂ ತಪ್ಪುಗಳನ್ನು ಮಾಡುತ್ತಾರೆ, ಮತ್ತು ಕೆಲವರಿಗಂತೂ ಅವರು ನಿಯಂತ್ರಿಸಲು ಬಹಳಷ್ಟು ಪ್ರಯಾಸಪಡುತ್ತಿರುವ ಪಟ್ಟುಬಿಡದ ಬಲಹೀನತೆಗಳಿವೆ. ಇದರಿಂದ ನಾವು ಕಳವಳಗೊಳ್ಳಬೇಕೊ? ಇಲ್ಲ. ಪ್ರಾಚೀನ ಇಸ್ರಾಯೇಲಿನಲ್ಲಿ ಸಹ, ಬಹಳಷ್ಟು ಜವಾಬ್ದಾರಿ ವಹಿಸಲ್ಪಟ್ಟಿದ್ದ ವ್ಯಕ್ತಿಗಳು ಗಂಭೀರ ತಪ್ಪುಗಳನ್ನು ಮಾಡಿದ್ದರು. ಉದಾಹರಣೆಗೆ ದಾವೀದನು ಒಬ್ಬ ಯುವಕನಾಗಿದ್ದಾಗ, ಮನಶ್ಶಾಂತಿಯನ್ನು ಕಳೆದುಕೊಂಡಿದ್ದ ರಾಜ ಸೌಲನನ್ನು ಶಾಂತಗೊಳಿಸಲಿಕ್ಕಾಗಿ ಸಂಗೀತ ನುಡಿಸುವಂತೆ ಅವನನ್ನು ಕರೆಯಲಾಗಿತ್ತು. ಆದರೆ ತದನಂತರ ಈ ಸೌಲನೇ ದಾವೀದನನ್ನು ಕೊಲ್ಲಲು ಪ್ರಯತ್ನಿಸಿದನು ಮತ್ತು ಕೊನೆಗೆ ದಾವೀದನು ತನ್ನ ಜೀವಕ್ಕಾಗಿ ಓಡಿಹೋಗಬೇಕಾಯಿತು.​—⁠1 ಸಮುವೇಲ 16:14-23; 18:10-12; 19:18; 20:32, 33; 22:1-5.

9 ಇತರ ಇಸ್ರಾಯೇಲ್ಯರು ದ್ರೋಹದಿಂದ ನಡೆದುಕೊಂಡರು. ದೃಷ್ಟಾಂತಕ್ಕಾಗಿ, ದಾವೀದನ ಮಿಲಿಟರಿ ಸೇನಾಪತಿ ಯೋವಾಬನು, ಸೌಲನ ಸಂಬಂಧಿಕನಾದ ಅಬ್ನೇರನ ಕೊಲೆಮಾಡಿದನು. ಅಬ್ಷಲೋಮನು ರಾಜಪದವಿಗಾಗಿ ತನ್ನ ತಂದೆಯಾದ ದಾವೀದನ ವಿರುದ್ಧ ಒಳಸಂಚುಮಾಡಿದನು ಮತ್ತು ದಾವೀದನ ಭರವಸಾರ್ಹ ಸಲಹೆಗಾರನಾದ ಅಹೀತೊಫೇಲನು ಅವನಿಗೆ ದ್ರೋಹಬಗೆದನು. (2 ಸಮುವೇಲ 3:22-30; 15:1-17, 31; 16:15, 21) ಇದೆಲ್ಲ ನಡೆದರೂ, ದಾವೀದನು ತುಂಬ ಕಹಿಭಾವದಿಂದ ದೂರುವವನಾಗಲಿಲ್ಲ ಮತ್ತು ಸತ್ಯಾರಾಧನೆಗೆ ಬೆನ್ನುಹಾಕಲೂ ಇಲ್ಲ. ವಾಸ್ತವದಲ್ಲಿ ಇದಕ್ಕೆ ವಿರುದ್ಧವಾದದ್ದು ಆಯಿತು. ತನಗೆ ಬಂದಂಥ ಕಷ್ಟಗಳಿಂದಾಗಿ ದಾವೀದನು ಯೆಹೋವನಿಗೆ ಇನ್ನೂ ಹೆಚ್ಚಾಗಿ ಅಂಟಿಕೊಂಡನು ಮತ್ತು ಸೌಲನಿಂದಾಗಿ ಓಡಿಹೋಗಬೇಕಾದ ಸಮಯದಲ್ಲಿ ಅವನಿಗಿದ್ದ ಉತ್ತಮ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ಇದು ಅವನನ್ನು ಪ್ರಚೋದಿಸಿತು. ಆ ಸಮಯದಲ್ಲಿ ದಾವೀದನು ಹೀಗೆ ಹಾಡಿದ್ದನು: “ದೇವರೇ, ಕರುಣಿಸು; ನನ್ನನ್ನು ಕರುಣಿಸು. ನೀನೇ ನನ್ನ ಆಶ್ರಯಸ್ಥಾನವಲ್ಲವೇ! ಆಪತ್ತುಗಳು ಕಳೆದುಹೋಗುವ ತನಕ ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.”​—⁠ಕೀರ್ತನೆ 57:1.

10 ಇಂದು ದೇವರ ಸಂಘಟನೆಯೊಳಗೆ ದ್ರೋಹದ ವಿಷಯದಲ್ಲಿ ದೂರಲು ನಮಗೆ ಯಾವುದೇ ಕಾರಣವಿಲ್ಲ. ಯೆಹೋವನಾಗಲಿ, ಆತನ ದೂತರಾಗಲಿ, ಆಧ್ಯಾತ್ಮಿಕ ಕುರುಬರಾಗಲಿ ಕ್ರೈಸ್ತ ಸಭೆಯೊಳಗೆ ದ್ರೋಹಿಗಳಾದ ದುಷ್ಟರ ಉಪಸ್ಥಿತಿಯನ್ನು ಸಹಿಸುವುದಿಲ್ಲ. ಹಾಗಿದ್ದರೂ, ನಮಗೆಲ್ಲರಿಗೂ ಮಾನವ ಅಪರಿಪೂರ್ಣತೆಯನ್ನು ಎದುರಿಸಬೇಕಾಗುತ್ತದೆ. ಅದು ನಮ್ಮ ಸ್ವಂತದಾಗಿರಬಹುದು ಮತ್ತು ದೇವರ ಇತರ ಸೇವಕರದ್ದೂ ಆಗಿರಬಹುದು.

11 ಬಹುಸಮಯದಿಂದ ಯೆಹೋವನ ಆರಾಧಕಳಾಗಿದ್ದ ಗರ್ಟ್ರುಟ್‌ ಎಂಬಾಕೆಯು ಯೌವನಸ್ಥೆಯಾಗಿದ್ದಾಗ, ಅವಳೊಬ್ಬ ನಯವಂಚಕಿ ಮತ್ತು ಪೂರ್ಣ ಸಮಯದ ರಾಜ್ಯ ಘೋಷಕಿಯಲ್ಲ ಎಂಬ ಸುಳ್ಳಾರೋಪವನ್ನು ಹೊರಿಸಲಾಗಿತ್ತು. ಅವಳು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದಳು? ತನಗಾದ ಈ ರೀತಿಯ ದುರುಪಚಾರದ ಬಗ್ಗೆ ಆಕೆ ಗುಣುಗುಟ್ಟಿದಳೊ? ಇಲ್ಲ. 2003ರಲ್ಲಿ ಆಕೆ 91 ವರ್ಷದವಳಾಗಿದ್ದಾಗ ಸಾಯುವ ಮುಂಚೆ, ತನ್ನ ಜೀವನದ ಮೇಲೆ ಹಿನ್ನೋಟ ಬೀರುತ್ತ ವಿವರಿಸಿದ್ದು: “ಇದು ಮತ್ತು ತದನಂತರದ ಅನುಭವಗಳು ನನಗೆ ಕಲಿಸಿರುವ ಸಂಗತಿಯೇನೆಂದರೆ ವ್ಯಕ್ತಿಗಳು ತಪ್ಪುಗಳನ್ನು ಮಾಡಿದರೂ, ಯೆಹೋವನು ನಮ್ಮಂಥ ಅಪರಿಪೂರ್ಣ ಮಾನವರನ್ನು ಉಪಯೋಗಿಸಿ ತನ್ನ ಮಹಾ ಕೆಲಸವನ್ನು ನಿರ್ದೇಶಿಸುತ್ತಾನೆ.” ದೇವರ ಇತರ ಸೇವಕರ ಅಪರಿಪೂರ್ಣತೆಗಳು ಎದುರಾದಾಗ ಗರ್ಟ್ರುಟ್‌ ಮನಃಪೂರ್ವಕವಾಗಿ ಯೆಹೋವನಿಗೆ ಪ್ರಾರ್ಥನೆಮಾಡಿದಳು.

12 ತುಂಬ ನಿಷ್ಠೆಯುಳ್ಳ ಮತ್ತು ಭಕ್ತಿಯುಳ್ಳ ಕ್ರೈಸ್ತರು ಸಹ ಅಪರಿಪೂರ್ಣರಾಗಿರುವುದರಿಂದ, ಒಬ್ಬ ನೇಮಿತ ಸೇವಕನು ತಪ್ಪು ಮಾಡುವಾಗಲೂ ನಾವು ಗುಣುಗುಟ್ಟದೆ’ ನಮ್ಮ ಕೆಲಸವನ್ನು ಮುಂದುವರಿಸೋಣ. (ಫಿಲಿಪ್ಪಿ 2:⁠14) ಒಂದುವೇಳೆ ನಾವು ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಕೆಲವರ ಕೆಟ್ಟ ಮಾದರಿಯನ್ನು ಅನುಸರಿಸಿದರೆ ಅದೆಷ್ಟು ದುಃಖದ ಸಂಗತಿಯಾಗಿರುವುದು! ಶಿಷ್ಯನಾದ ಯೂದನು ಹೇಳಿದಂತೆ, ಅವನ ಸಮಯದಲ್ಲಿನ ಸುಳ್ಳು ಬೋಧಕರು ‘ಪ್ರಭುತ್ವವನ್ನು ಅಸಡ್ಡೆಮಾಡುತ್ತಿದ್ದರು ಮತ್ತು ಮಹಾ ಪದವಿಯವರನ್ನು ದೂಷಿಸುತ್ತಿದ್ದರು.’ ಅಷ್ಟುಮಾತ್ರವಲ್ಲದೆ ಆ ತಪ್ಪಿತಸ್ಥರು, “ಗುಣುಗುಟ್ಟುವವರೂ ತಮ್ಮ ಗತಿಯನ್ನು ನಿಂದಿಸುವವರೂ” ಆಗಿದ್ದರು. (ಯೂದ 8, 16) ಆ ಗುಣುಗುಟ್ಟುತ್ತಿದ್ದ ದೂರುಗಾರರು ಅನುಸರಿಸಿದ ಮಾರ್ಗವನ್ನು ತೊರೆದು, ‘ನಂಬಿಗಸ್ತ ಆಳಿನ’ ಮೂಲಕ ಬರುವಂಥ ಒಳ್ಳೇ ವಿಷಯಗಳ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸೋಣ. ಯೆಹೋವನ ಸಂಘಟನೆಯ ಒಳ್ಳೇತನವನ್ನು ನಾವು ಬಹುಮೂಲ್ಯವೆಂದೆಣಿಸಿ, ‘ಗುಣುಗುಟ್ಟದೆ ಎಲ್ಲವನ್ನು ಮಾಡೋಣ.’

“ಇದು ಕಠಿಣವಾದ ಮಾತು”

13 ಪ್ರಥಮ ಶತಮಾನದಲ್ಲಿ ಕೆಲವರು ನೇಮಿತ ಸೇವಕರ ವಿರುದ್ಧ ಗುಣುಗುಟ್ಟುತ್ತಿದ್ದರೆ, ಇನ್ನಿತರರು ಯೇಸುವಿನ ಬೋಧನೆಗಳ ಬಗ್ಗೆ ಗುಣುಗುಟ್ಟುತ್ತಿದ್ದರು. ಯೋಹಾನ 6:​48-69ರಲ್ಲಿ ದಾಖಲಿಸಲ್ಪಟ್ಟಂತೆ, ಯೇಸು ಹೇಳಿದ್ದು: “ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ.” ಈ ಮಾತುಗಳನ್ನು ಕೇಳಿದಾಗ, “ಆತನ ಶಿಷ್ಯರಲ್ಲಿ ಅನೇಕರು . . . ಇದು ಕಠಿಣವಾದ ಮಾತು, ಇದನ್ನು ಯಾರು ಕೇಳಾರು? ಅಂದುಕೊಂಡರು.” ಯೇಸುವಿಗೆ “ತನ್ನ ಶಿಷ್ಯರು ಇದಕ್ಕೆ ಗುಣುಗುಟ್ಟುತ್ತಾರೆಂದು” ತಿಳಿದಿತ್ತು. ಅಷ್ಟುಮಾತ್ರವಲ್ಲದೆ, ಈ ಕಾರಣದಿಂದಾಗಿ “ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು.” ಆದರೆ ಶಿಷ್ಯರಲ್ಲಿ ಪ್ರತಿಯೊಬ್ಬನೂ ಗುಣುಗುಟ್ಟಲಿಲ್ಲ. ಯೇಸು ತನ್ನ 12 ಮಂದಿ ಅಪೊಸ್ತಲರಿಗೆ “ನೀವು ಸಹ ಹೋಗಬೇಕೆಂದಿದ್ದೀರಾ?” ಎಂದು ಕೇಳಿದಾಗ ಏನಾಯಿತೆಂಬುದನ್ನು ಗಮನಿಸಿರಿ. ಅಪೊಸ್ತಲ ಪೇತ್ರನು ಉತ್ತರಿಸಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.”

14 ಆಧುನಿಕ ಸಮಯಗಳಲ್ಲಿ ದೇವಜನರೊಳಗೆ ಕೇವಲ ಕೆಲವರು, ಕ್ರೈಸ್ತ ಬೋಧನೆಯ ಯಾವುದೊ ಒಂದು ಅಂಶದ ಬಗ್ಗೆ ಅತೃಪ್ತರಾಗಿ, ಯೆಹೋವನ ಸಂಘಟನೆಯ ಭೂಭಾಗದ ವಿರುದ್ಧ ಗುಣುಗುಟ್ಟಿದ್ದಾರೆ. ಹೀಗೆ ಆಗುವುದೇಕೆ? ಅನೇಕವೇಳೆ ಇದು, ದೇವರು ತನ್ನ ಕಾರ್ಯಗಳನ್ನು ಮಾಡುವ ರೀತಿಯ ಕುರಿತಾದ ತಿಳುವಳಿಕೆಯ ಕೊರತೆಯಿಂದಾಗಿ ಆಗುತ್ತದೆ. ಸೃಷ್ಟಿಕರ್ತನು ತನ್ನ ಜನರಿಗೆ ಸತ್ಯವನ್ನು ಪ್ರಗತಿಪರವಾಗಿ ಪ್ರಕಟಪಡಿಸುತ್ತಾ ಇರುವುದರಿಂದ ಶಾಸ್ತ್ರಗಳ ಕುರಿತಾದ ನಮ್ಮ ತಿಳುವಳಿಕೆಯು ಆಗಾಗ್ಗೆ ಪರಿಷ್ಕರಿಸಲ್ಪಡುತ್ತದೆ. ಯೆಹೋವನ ಜನರಲ್ಲಿ ಅಧಿಕಾಂಶ ಮಂದಿ ಇಂಥ ಪರಿಷ್ಕರಿಸಲ್ಪಟ್ಟ ತಿಳುವಳಿಕೆಯ ಬಗ್ಗೆ ಹರ್ಷಿಸುತ್ತಾರೆ. ಆದರೆ ಕೆಲವರು ‘ಅತಿ ನೀತಿವಂತರಾಗಿ,’ ಅಂಥ ಬದಲಾವಣೆಗಳ ಬಗ್ಗೆ ಅಸಮಾಧಾನಪಡುತ್ತಾರೆ. (ಪ್ರಸಂಗಿ 7:​16, NW) ಅಹಂಕಾರದಿಂದಾಗಿ ಕೆಲವರಿಗೆ ಹೀಗಾಗುವುದಾದರೆ, ಇನ್ನೂ ಕೆಲವರು ಸ್ವತಂತ್ರ ಆಲೋಚನೆಯೆಂಬ ಬೋನಿಗೆ ಸಿಕ್ಕಿಬೀಳುವುದರಿಂದ ಹೀಗಾಗಬಹುದು. ಆದರೆ ಕಾರಣವು ಏನೇ ಆಗಿರಲಿ, ಅಂಥ ಗುಣುಗುಟ್ಟುವಿಕೆಯು ಅಪಾಯಕಾರಿಯಾಗಿದೆ ಏಕೆಂದರೆ ಅದು ನಮ್ಮನ್ನು ಲೋಕಕ್ಕೆ ಮತ್ತು ಅದರ ಮಾರ್ಗಗಳಿಗೆ ಹಿಂದೆಳೆಯಬಲ್ಲದು.

15 ಉದಾಹರಣೆಗಾಗಿ, ಒಬ್ಬ ಸಾಕ್ಷಿಯಾಗಿದ್ದ ಇಮಾನ್ವೆಲ್‌ ಎಂಬವನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಪ್ರಕಾಶನಗಳಲ್ಲಿ ಓದಿದಂಥ ಕೆಲವೊಂದು ವಿಷಯಗಳ ಬಗ್ಗೆ ತಪ್ಪು ಕಂಡುಹಿಡಿಯಲಾರಂಭಿಸಿದನು. (ಮತ್ತಾಯ 24:45) ಇದರಿಂದಾಗಿ ಅವನು ನಮ್ಮ ಕ್ರೈಸ್ತ ಸಾಹಿತ್ಯವನ್ನು ಓದುವುದನ್ನು ನಿಲ್ಲಿಸಿಬಿಟ್ಟನು ಮತ್ತು ಕೊನೆಗೆ ಸ್ಥಳಿಕ ಸಭೆಯ ಹಿರಿಯರಿಗೆ, ತಾನು ಇನ್ನು ಮುಂದೆ ಯೆಹೋವನ ಸಾಕ್ಷಿಯಾಗಿರಲು ಇಷ್ಟಪಡುವುದಿಲ್ಲವೆಂದು ಹೇಳಿದನು. ಆದರೆ ಸ್ವಲ್ಪ ಸಮಯದಲ್ಲೇ, ಯೆಹೋವನ ಸಂಘಟನೆಯ ಬೋಧನೆಗಳು ನಿಜವಾಗಿಯೂ ಸರಿಯಾಗಿವೆಯೆಂದು ಇಮಾನ್ವೆಲ್‌ಗೆ ತಿಳಿದುಬಂತು. ಅವನು ಸಾಕ್ಷಿಗಳನ್ನು ಸಂಪರ್ಕಿಸಿ, ತನ್ನ ತಪ್ಪೊಪ್ಪಿಕೊಂಡು, ಯೆಹೋವನ ಸಾಕ್ಷಿಯಾಗಿ ಪುನಸ್ಸ್ಥಾಪಿಸಲ್ಪಟ್ಟನು. ಇದರ ಫಲಿತಾಂಶವಾಗಿ ಅವನು ಪುನಃ ಸಂತೋಷದಿಂದಿದ್ದನು.

16 ಯೆಹೋವನ ಜನರ ನಿರ್ದಿಷ್ಟ ಬೋಧನೆಗಳ ಬಗ್ಗೆ ನಮಗಿರಬಹುದಾದ ಸಂದೇಹಗಳಿಂದಾಗಿ ಗುಣುಗುಟ್ಟಲು ಮನಸ್ಸಾದರೆ ಆಗೇನು? ತಾಳ್ಮೆ ಕಳೆದುಕೊಳ್ಳದಿರೋಣ. ಕಟ್ಟಕಡೆಗೆ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳೇ’ ನಮ್ಮ ಪ್ರಶ್ನೆಗಳನ್ನು ಉತ್ತರಿಸಿ ನಮ್ಮ ಸಂದೇಹಗಳನ್ನು ನಿವಾರಿಸುವ ಮಾಹಿತಿಯನ್ನು ಪ್ರಕಾಶಿಸಬಹುದು. ಅಲ್ಲದೆ, ಕ್ರೈಸ್ತ ಹಿರಿಯರ ಸಹಾಯವನ್ನು ಕೋರುವುದು ವಿವೇಕಯುತ. (ಯೂದ 22, 23) ಪ್ರಾರ್ಥನೆ, ವೈಯಕ್ತಿಕ ಅಧ್ಯಯನ ಮತ್ತು ಆಧ್ಯಾತ್ಮಿಕ-ಮನಸ್ಸಿನ ಜೊತೆವಿಶ್ವಾಸಿಗಳೊಂದಿಗಿನ ಸಹವಾಸ ಸಹ ನಮ್ಮ ಸಂದೇಹಗಳನ್ನು ತೆಗೆದುಹಾಕಲು ಹಾಗೂ ಯೆಹೋವನ ಸಂಪರ್ಕ ಮಾಧ್ಯಮದ ಮೂಲಕ ನಾವು ಕಲಿತಿರುವ ನಂಬಿಕೆ-ವರ್ಧಕ ಬೈಬಲ್‌ ಸತ್ಯಗಳಿಗಾಗಿ ಕೃತಜ್ಞತೆಯನ್ನು ಗಾಢಗೊಳಿಸಲು ಸಹಾಯಮಾಡಬಲ್ಲದು.

ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿರಿ

17 ಅಪರಿಪೂರ್ಣ ಮಾನವರಲ್ಲಿ ಪಾಪಮಾಡುವ ಅಂತರ್ಗತ ಪ್ರವೃತ್ತಿಯಿದೆಯೆಂಬುದು ಒಪ್ಪತಕ್ಕ ಮಾತು, ಮತ್ತು ಕೆಲವರಿಗಂತೂ ಅನಗತ್ಯವಾದ ದೂರುಗಳನ್ನು ಹೇಳುವ ಬಲವಾದ ಪ್ರವೃತ್ತಿಯಿರಬಹುದು. (ಆದಿಕಾಂಡ 8:21; ರೋಮಾಪುರ 5:⁠12) ಆದರೆ ಗುಣುಗುಟ್ಟುವುದು ನಮ್ಮ ರೂಢಿಯಾಗಿಬಿಡುವಲ್ಲಿ, ಯೆಹೋವ ದೇವರೊಂದಿಗಿನ ನಮ್ಮ ಸಂಬಂಧವನ್ನು ನಾವು ಅಪಾಯಕ್ಕೆ ಒಡ್ಡುತ್ತಿದ್ದೇವೆ. ಆದುದರಿಂದ ಗುಣುಗುಟ್ಟುವ ಯಾವುದೇ ಪ್ರವೃತ್ತಿಯನ್ನು ನಾವು ನಿಯಂತ್ರಿಸುವ ಅಗತ್ಯವಿದೆ.

18 ಸಭೆಯಲ್ಲಿನ ವಿಷಯಗಳ ಬಗ್ಗೆ ಗುಣುಗುಟ್ಟುವುದರ ಬದಲಿಗೆ ಸಕಾರಾತ್ಮಕ ಮನೋಭಾವವನ್ನಿಟ್ಟು, ನಮ್ಮನ್ನು ಕಾರ್ಯಮಗ್ನರೂ, ಆನಂದಿತರೂ, ದೇವಭಕ್ತಿಯುಳ್ಳವರೂ, ಸಮತೂಕವುಳ್ಳವರೂ, ನಂಬಿಕೆಯಲ್ಲಿ ಸ್ವಸ್ಥರೂ ಆಗಿರಿಸುವಂಥ ಒಂದು ನಿತ್ಯಕ್ರಮವನ್ನು ಪಾಲಿಸೋಣ. (1 ಕೊರಿಂಥ 15:58; ತೀತ 2:1-5) ಯೆಹೋವನಿಗೆ ತನ್ನ ಸಂಘಟನೆಯೊಳಗೆ ನಡೆಯುವಂಥ ಎಲ್ಲ ವಿಷಯಗಳ ಮೇಲೆ ನಿಯಂತ್ರಣವಿದೆ, ಮತ್ತು ಯೇಸುವಿಗೆ ಪ್ರತಿಯೊಂದು ಸಭೆಯಲ್ಲಿ ಏನೇನು ನಡೆಯುತ್ತಿದೆಯೊ ಅದರ ಬಗ್ಗೆ ಹೇಗೆ ಪ್ರಥಮ ಶತಮಾನದಲ್ಲಿ ತಿಳಿದಿತ್ತೊ ಹಾಗೆಯೇ ಈಗಲೂ ತಿಳಿದಿದೆ. (ಪ್ರಕಟನೆ 1:10, 11) ದೇವರು ಹಾಗೂ ಸಭೆಯ ಶಿರಸ್ಸಾದ ಯೇಸು ಕ್ರಮಗೈಯುವಂತೆ ತಾಳ್ಮೆಯಿಂದ ಕಾಯಿರಿ. ವಿಷಯಗಳನ್ನು ಸರಿಪಡಿಸುವ ಅಗತ್ಯವಿರುವಲ್ಲಿ ಅದನ್ನು ಮಾಡಲು ಜವಾಬ್ದಾರಿಯುತ ಕುರುಬರನ್ನು ಉಪಯೋಗಿಸಲಾಗಬಹುದು.​—⁠ಕೀರ್ತನೆ 43:5; ಕೊಲೊಸ್ಸೆ 1:18; ತೀತ 1:⁠5.

19 ಬೇಗನೆ ಈ ದುಷ್ಟ ವಿಷಯಗಳ ವ್ಯವಸ್ಥೆಯು ಅಂತ್ಯಗೊಂಡು, ಮೆಸ್ಸೀಯ ರಾಜ್ಯವು ಮಾನವಕುಲದ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಿದೆ. ಅಲ್ಲಿವರೆಗೂ, ನಮ್ಮಲ್ಲಿ ಪ್ರತಿಯೊಬ್ಬರೂ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯ! ಇದು, ನಮ್ಮ ಜೊತೆವಿಶ್ವಾಸಿಗಳ ದೋಷಗಳ ಮೇಲೆ ಕೇಂದ್ರೀಕರಿಸದೆ ಅವರಿಗಿರುವ ಸದ್ಗುಣಗಳನ್ನು ಗುರುತಿಸುವಂತೆ ನಮಗೆ ಸಹಾಯಮಾಡುವುದು. ಅವರ ವ್ಯಕ್ತಿತ್ವದ ಒಳ್ಳೇ ಅಂಶಗಳ ಮೇಲೆ ಕೇಂದ್ರೀಕರಿಸುವುದು ನಮಗೆ ಸಂತೋಷ ತರುವುದು. ಗುಣುಗುಟ್ಟುವುದರಿಂದ ಭಾವನಾತ್ಮಕವಾಗಿ ದಣಿದುಹೋಗುವ ಬದಲು ಸಕಾರಾತ್ಮಕ ಮನೋಭಾವದ ಕಾರಣ ಆಧ್ಯಾತ್ಮಿಕವಾಗಿ ಉತ್ತೇಜನಹೊಂದಿ, ಕಟ್ಟಲ್ಪಡುವೆವು.

20 ನಮಗೆ ಸಕಾರಾತ್ಮಕ ಮನೋಭಾವವಿದ್ದರೆ, ಯೆಹೋವನ ಸಂಘಟನೆಯ ಭೂಭಾಗದೊಂದಿಗೆ ಸಹವಸಿಸುವುದರಿಂದ ನಾವು ಆನಂದಿಸುವ ಅನೇಕ ಆಶೀರ್ವಾದಗಳನ್ನೂ ನೆನಪಿನಲ್ಲಿಡುವಂತೆ ಅದು ಶಕ್ತಗೊಳಿಸುವುದು. ಇಡೀ ಲೋಕದಲ್ಲಿ, ಈ ಸಂಘಟನೆಯೊಂದೇ ವಿಶ್ವದ ಪರಮಾಧಿಕಾರಿಗೆ ನಿಷ್ಠೆಯನ್ನು ತೋರಿಸುತ್ತಿದೆ. ಈ ವಾಸ್ತವಾಂಶದ ಬಗ್ಗೆ, ಮತ್ತು ಒಬ್ಬನೇ ಸತ್ಯ ದೇವರಾದ ಯೆಹೋವನ ಆರಾಧನೆಯಲ್ಲಿ ಪಾಲ್ಗೊಳ್ಳುವ ವಿಶೇಷ ಗೌರವದ ಬಗ್ಗೆ ನಿಮಗೆ ಹೇಗನಿಸುತ್ತದೆ? ನಿಮ್ಮ ಮನೋಭಾವವು ದಾವೀದನಂತೆಯೇ ಇರಲಿ. ಅವನು ಹಾಡಿದ್ದು: “ಪ್ರಾರ್ಥನೆಯನ್ನು ಕೇಳುವಾತನೇ, ನಿನ್ನ ಬಳಿಗೆ ಎಲ್ಲಾ ಜನರು ಬರುವರು. ನೀನು ಆಯ್ದುಕೊಂಡು ನಿನ್ನ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು; ಏಕೆಂದರೆ ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು; ನಿನ್ನ ಪರಿಶುದ್ಧ ಮಂದಿರವಾದ ನಿನ್ನ ಆಲಯದ ಒಳ್ಳೆಯ ಸಂಗತಿಗಳಿಂದ ನಾವು ತೃಪ್ತರಾಗುವೆವು.”​—⁠ಕೀರ್ತನೆ 65:2, 4, NIBV. (w06 7/15)

ನಿಮಗೆ ಜ್ಞಾಪಕವಿದೆಯೊ?

• ಸಭೆಯಲ್ಲಿ ಮುಂದಾಳುತ್ವ ವಹಿಸುವವರಿಗಾಗಿ ನಾವೇಕೆ ಆಭಾರಿಗಳಾಗಿರಬೇಕು?

• ಜವಾಬ್ದಾರಿಯುತ ಸಹೋದರರು ತಪ್ಪುಗಳನ್ನು ಮಾಡುವಾಗ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು?

• ಶಾಸ್ತ್ರಗಳ ಕುರಿತಾದ ತಿಳುವಳಿಕೆಯಲ್ಲಿನ ಪರಿಷ್ಕರಣಗಳನ್ನು ನಾವು ಹೇಗೆ ವೀಕ್ಷಿಸಬೇಕು?

• ಕ್ರೈಸ್ತನೊಬ್ಬನಿಗೆ ಸಂದೇಹಗಳನ್ನು ತೆಗೆದುಹಾಕಲು ಯಾವುದು ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಆಲಯ ಮತ್ತು ಅದರಲ್ಲಿನ ಕೆಲಸವು ದೇವಜನರ ಮೇಲೆ ಯಾವ ಪರಿಣಾಮಬೀರಲಿತ್ತು? (ಬಿ) ಆಲಯದ ನಿರ್ಮಾಣಕ್ಕಾಗಿ ದಾವೀದನು ಯಾವ ಏರ್ಪಾಡುಗಳನ್ನು ಮಾಡಿದನು?

3. ಸತ್ಯಾರಾಧನೆಗಾಗಿರುವ ಏರ್ಪಾಡುಗಳ ಕಡೆಗೆ ದೇವರ ಸೇವಕರಿಗೆ ಯಾವ ಮನೋಭಾವವಿದೆ?

4, 5. (ಎ) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ಅದರ ನೇಮಕವನ್ನು ಹೇಗೆ ಪೂರೈಸುತ್ತಿದೆ? (ಬಿ) ಕೆಲವು ಸಾಕ್ಷಿಗಳಿಗೆ ಅವರು ಪಡೆಯುತ್ತಿರುವ ಆಧ್ಯಾತ್ಮಿಕ ಆಹಾರದ ಬಗ್ಗೆ ಹೇಗನಿಸಿದೆ?

6, 7. (ಎ) ಲೋಕದಲ್ಲೆಲ್ಲಾ ಇರುವ ಸಭೆಗಳ ಚಟುವಟಿಕೆಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ? (ಬಿ) ಯೆಹೋವನ ಸಂಘಟನೆಯ ಭೂಭಾಗದ ಬಗ್ಗೆ ಏನನ್ನು ಹೇಳಲಾಗಿದೆ?

8, 9. ದಾವೀದನ ಸಮಕಾಲೀನರಲ್ಲಿ ಕೆಲವರು ಹೇಗೆ ನಡೆದುಕೊಂಡರು, ಮತ್ತು ಅಂಥ ನಡವಳಿಕೆಗೆ ದಾವೀದನು ಹೇಗೆ ಪ್ರತಿಕ್ರಿಯಿಸಿದನು?

10, 11. ಗರ್ಟ್ರುಟ್‌ ಎಂಬ ಕ್ರೈಸ್ತಳಿಗೆ ತನ್ನ ಯುವ ಪ್ರಾಯದಲ್ಲಿ ಯಾವ ಅನುಭವವಾಯಿತು, ಮತ್ತು ಜೊತೆ ವಿಶ್ವಾಸಿಗಳ ಅಪರಿಪೂರ್ಣತೆಗಳ ಬಗ್ಗೆ ಅವಳೇನು ಹೇಳಿದಳು?

12. (ಎ) ಪ್ರಥಮ ಶತಮಾನದ ಕೆಲವು ಕ್ರೈಸ್ತರು ಯಾವ ಕೆಟ್ಟ ಮಾದರಿಯನ್ನಿಟ್ಟರು? (ಬಿ) ನಾವು ಯಾವುದರ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು?

13. ಯೇಸು ಕ್ರಿಸ್ತನ ಕೆಲವೊಂದು ಬೋಧನೆಗಳಿಗೆ ಕೆಲವರು ಹೇಗೆ ಪ್ರತಿಕ್ರಿಯಿಸಿದರು?

14, 15. (ಎ) ಕ್ರೈಸ್ತ ಬೋಧನೆಗಳ ಯಾವುದೊ ಅಂಶದ ಬಗ್ಗೆ ಕೆಲವರು ಅತೃಪ್ತರಾಗುವುದೇಕೆ? (ಬಿ) ಇಮಾನ್ವೆಲ್‌ ಎಂಬವನ ವಿದ್ಯಮಾನದಿಂದ ನಾವೇನು ಕಲಿಯಬಲ್ಲೆವು?

16. ನಿರ್ದಿಷ್ಟ ಕ್ರೈಸ್ತ ಬೋಧನೆಗಳ ಬಗ್ಗೆ ನಮಗಿರಬಹುದಾದ ಸಂದೇಹಗಳನ್ನು ತೆಗೆದುಹಾಕಲು ಏನು ಸಹಾಯಮಾಡಬಲ್ಲದು?

17, 18. ಗುಣುಗುಟ್ಟುವುದರ ಬದಲು ನಮಗೆ ಯಾವ ಮನೋಭಾವವಿರಬೇಕು, ಮತ್ತು ಏಕೆ?

19. ಮೆಸ್ಸೀಯ ರಾಜ್ಯವು ಮಾನವಕುಲದ ವ್ಯವಹಾರಗಳನ್ನು ಪೂರ್ಣವಾಗಿ ನಿಯಂತ್ರಿಸುವ ಸಮಯದ ವರೆಗೆ ನಾವು ಯಾವುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು?

20. ಸಕಾರಾತ್ಮಕ ಮನೋಭಾವವು ನಮಗೆ ಯಾವ ಆಶೀರ್ವಾದಗಳನ್ನು ಆನಂದಿಸುವಂತೆ ಶಕ್ತಗೊಳಿಸುವುದು?

[ಪುಟ 13ರಲ್ಲಿರುವ ಚಿತ್ರ]

ದಾವೀದನು ಆಲಯದ ಯೋಜನೆಗಳನ್ನು ಸೊಲೊಮೋನನಿಗೆ ಕೊಟ್ಟನು ಮತ್ತು ಸತ್ಯಾರಾಧನೆಯನ್ನು ಪೂರ್ಣಹೃದಯದಿಂದ ಬೆಂಬಲಿಸಿದನು

[ಪುಟ 16ರಲ್ಲಿರುವ ಚಿತ್ರ]

ಕ್ರೈಸ್ತ ಹಿರಿಯರು ಸಂತೋಷದಿಂದ ಆಧ್ಯಾತ್ಮಿಕ ನೆರವನ್ನು ಕೊಡುತ್ತಾರೆ