ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಜ್ಞಾನೋಕ್ತಿ 8:22-31ರಲ್ಲಿರುವ ವಿವೇಕದ ವರ್ಣನೆಯು ಯೇಸುಕ್ರಿಸ್ತನಿಗೆ, ಅವನು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿದ್ದಾಗ ಅನ್ವಯಿಸುತ್ತದೆಂದು ನಮಗೆ ಹೇಗೆ ತಿಳಿಯುತ್ತದೆ?
ಜ್ಞಾನೋಕ್ತಿ ಪುಸ್ತಕದಲ್ಲಿರುವ ವಿವೇಕದ ಪ್ರೇರಿತ ವರ್ಣನೆಯು ಹೀಗೆ ಹೇಳುತ್ತದೆ: “ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ . . . ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ ಬೈಲನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು . . . ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು . . . ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ . . . ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.”
ಈ ವಚನಭಾಗವು ಕೇವಲ ದೈವಿಕ ವಿವೇಕದ ಬಗ್ಗೆಯೊ ಅಥವಾ ವಿವೇಕವೆಂಬ ಗುಣದ ಬಗ್ಗೆಯೊ ಮಾತಾಡುತ್ತಿಲ್ಲ. ಹಾಗೇಕೆ ಹೇಳಬಹುದು? ಏಕೆಂದರೆ ಇಲ್ಲಿ ವಿವರಿಸಲ್ಪಟ್ಟಿರುವ ವಿವೇಕವು ಯೆಹೋವನ ಸೃಷ್ಟಿಕ್ರಮದಲ್ಲಿ ಮೊದಲು ‘ನಿರ್ಮಿಸಲ್ಪಟ್ಟಿತು.’ ಯೆಹೋವ ದೇವರು ಯುಗಯುಗಾಂತರಗಳಿಂದಲೂ ಅಸ್ತಿತ್ವದಲ್ಲಿರುವವನು ಮತ್ತು ವಿವೇಕಿಯು ಆಗಿದ್ದಾನೆ. (ಕೀರ್ತನೆ 90:1, 2) ಆತನ ವಿವೇಕಕ್ಕೆ ಆರಂಭವಿರಲಿಲ್ಲ. ಅದು ನಿರ್ಮಿಸಲ್ಪಡಲಿಲ್ಲ. ಈ ವಿವೇಕವು ‘ಹುಟ್ಟಿದ್ದೂ’ ಇಲ್ಲ. ಅಷ್ಟುಮಾತ್ರವಲ್ಲ, ಆ ವಚನಭಾಗದಲ್ಲಿ ತಿಳಿಸಲ್ಪಟ್ಟಿರುವ ವಿವೇಕವನ್ನು ಮಾತಾಡುತ್ತಿರುವ ಹಾಗೆ ಮತ್ತು ಕ್ರಿಯೆಗೈಯುತ್ತಿರುವ ಹಾಗೆ ಬಣ್ಣಿಸುವ ಮೂಲಕ ಒಬ್ಬ ವ್ಯಕ್ತಿಯಂತೆ ಪ್ರತಿನಿಧಿಸಲಾಗಿದೆ.—ಜ್ಞಾನೋಕ್ತಿ 8:1.
ಬಹಳ ಹಿಂದೆ ಈ ವಿವೇಕವು “ಶಿಲ್ಪಿಯಾಗಿದ್ದುಕೊಂಡು” ಸೃಷ್ಟಿಕರ್ತನಾದ ಯೆಹೋವನ ಬಳಿಯಲ್ಲಿತ್ತೆಂದು ಜ್ಞಾನೋಕ್ತಿ ಪುಸ್ತಕ ಹೇಳುತ್ತದೆ. ಇದು ಖಂಡಿತವಾಗಿಯೂ ಯೇಸುವಿಗೆ ಅನ್ವಯವಾಗುತ್ತದೆ. ಭೂಮಿಗೆ ಬರುವುದಕ್ಕೆ ಬಹುಕಾಲ ಮುಂಚೆಯೇ ಯೇಸು ಯೆಹೋವನೊಂದಿಗೆ ಎಷ್ಟೊಂದು ನಿಕಟವಾಗಿ ಕೆಲಸಮಾಡಿದನೆಂದರೆ ಸ್ವತಃ ದೇವರವಾಕ್ಯವೇ ಹೀಗೆ ಹೇಳುತ್ತದೆ: “ಆತನು ಎಲ್ಲಕ್ಕೂ ಮೊದಲು ಇದ್ದವನು; ಆತನು ಸಮಸ್ತಕ್ಕೂ ಆಧಾರಭೂತನು.”—ಕೊಲೊಸ್ಸೆ 1:17; ಪ್ರಕಟನೆ 3:14.
ಯೆಹೋವನ ವಿವೇಕಭರಿತ ಉದ್ದೇಶಗಳನ್ನು ಮತ್ತು ಆಜ್ಞಾವಿಧಿಗಳನ್ನು ಪ್ರಕಟಪಡಿಸಿದವನು ದೇವಕುಮಾರನೇ ಆದಕಾರಣ ಅವನನ್ನು ವಿವೇಕವೆಂದು ವರ್ಣಿಸುವುದು ಸೂಕ್ತವಾಗಿದೆ. ಯೇಸು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ದೇವರ ವಾಕ್ಯವಾಗಿದ್ದನು ಅಥವಾ ವಕ್ತಾರ ಅಂದರೆ ದೇವರ ಪರವಾಗಿ ಮಾತಾಡುವವನಾಗಿದ್ದನು. (ಯೋಹಾನ 1:1) ಅವನು “ದೇವರ ಶಕ್ತಿಯೂ ದೇವರ [ವಿವೇಕವೂ]” ಆಗಿದ್ದಾನೆ ಎಂದು ವರ್ಣಿಸಲಾಗಿದೆ. (1 ಕೊರಿಂಥ 1:24, 30) ಮಾನವರೆಡೆಗೆ ತನಗಿದ್ದ ಒಲುಮೆಯಿಂದ ಪ್ರೇರಿತನಾಗಿ ಅವರಿಗೋಸ್ಕರ ತನ್ನ ಜೀವವನ್ನೇ ವಿಮೋಚನಾಯಜ್ಞವಾಗಿ ಅರ್ಪಿಸಿದ ದೇವಕುಮಾರನ ಎಂತಹ ಸುಂದರ ವರ್ಣನೆಯು ಇದಾಗಿದೆ!—ಯೋಹಾನ 3:16. (w06 8/1)