ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೀರ್ತನೆಗಳ ಪಂಚಮ ಭಾಗದ ಮುಖ್ಯಾಂಶಗಳು

ಕೀರ್ತನೆಗಳ ಪಂಚಮ ಭಾಗದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಕೀರ್ತನೆಗಳ ಪಂಚಮ ಭಾಗದ ಮುಖ್ಯಾಂಶಗಳು

ಶ್ರೀಮಂತರು ಹೀಗನ್ನಬಹುದು: “ಯೌವನಸ್ಥರಾದ ನಮ್ಮ ಗಂಡುಮಕ್ಕಳು ಹೊರವಾಗಿ ಬೆಳೆದಿರುವ ಸಸಿಗಳಂತಿರುವರು; ಹೆಣ್ಣುಮಕ್ಕಳು ಅರಮನೆಯಲ್ಲಿರುವ ವಿಚಿತ್ರವಾಗಿ ಕೆತ್ತಿದ ಮೂಲೆಗಂಬದಂತಿರುವರು. ನಮ್ಮ ಕಣಜಗಳು ಸಕಲವಿಧವಾದ ಧಾನ್ಯಗಳಿಂದ ತುಂಬಿರುವವು . . . ಕುರಿಗಳು ಸಾವಿರಾರು ಮರಿಗಳನ್ನು ಈಯುವವು.” ಇನ್ನೂ ಹೆಚ್ಚಾಗಿ ಐಶ್ವರ್ಯವಂತರು ಹೀಗೆ ಉದ್ಗರಿಸುವರು: “ಇಂಥ ಸುಸ್ಥಿತಿಯಲ್ಲಿರುವ ಜನರು ಧನ್ಯರು.” ಆದರೆ ಇದಕ್ಕೆ ತದ್ವಿರುದ್ಧವಾಗಿ ಕೀರ್ತನೆಗಾರನು ಹೇಳುವುದು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು [“ಧನ್ಯರು,” NIBV].” (ಕೀರ್ತನೆ 144:12-15) ಯಾರ ದೇವರು ಯೆಹೋವನಾಗಿದ್ದಾನೊ ಅಂಥವರು ಅಸಂತೋಷದಿಂದಿರುವುದಾದರೂ ಹೇಗೆ? ಯೆಹೋವನು ‘ಸಂತೋಷದ ದೇವರಾಗಿದ್ದಾನೆ’ ಮತ್ತು ಆತನನ್ನು ಆರಾಧಿಸುವವರು ಸಂತೋಷವನ್ನು ತಮ್ಮ ಪಾಲಾಗಿ ಪಡೆಯುತ್ತಾರೆ. (1 ತಿಮೊಥೆಯ 1:​11, NW) ಈ ಸತ್ಯವನ್ನು 107ರಿಂದ 150ನೇ ಕೀರ್ತನೆಗಳನ್ನು ಒಳಗೊಂಡ ದೇವಪ್ರೇರಿತ ಸಂಗೀತಗಳ ಕೊನೆಯ ಸಂಗ್ರಹದಲ್ಲಿ ವ್ಯಕ್ತಪಡಿಸಲಾಗಿದೆ.

ಕೀರ್ತನೆಗಳ ಪಂಚಮ ಭಾಗವು ಯೆಹೋವನ ಪ್ರೀತಿಪೂರ್ವಕ ದಯೆ, ಸತ್ಯತೆ ಮತ್ತು ಒಳ್ಳೇತನದ ಸಮೇತ ಆತನ ಇತರ ಶ್ರೇಷ್ಠ ಗುಣಗಳನ್ನು ಸಹ ಎತ್ತಿತೋರಿಸುತ್ತದೆ. ನಾವು ದೇವರ ವ್ಯಕ್ತಿತ್ವದ ಕುರಿತು ಎಷ್ಟು ಹೆಚ್ಚು ಒಳನೋಟವನ್ನು ಪಡೆಯುತ್ತೇವೊ ಅಷ್ಟೇ ಹೆಚ್ಚಾಗಿ ಆತನನ್ನು ಪ್ರೀತಿಸಲು ಮತ್ತು ಆತನಿಗೆ ಭಯಪಡಲು ನಮ್ಮ ಮನ ಓಲುತ್ತದೆ. ಮತ್ತು ಇದು ನಮಗೆ ಸಂತೋಷವನ್ನು ತರುತ್ತದೆ. ಕೀರ್ತನೆಗಳ ಪಂಚಮ ಭಾಗದಲ್ಲಿ ನಮಗೆಷ್ಟು ಅಮೂಲ್ಯವಾದ ಸಂದೇಶವಿದೆ!​—⁠ಇಬ್ರಿಯ 4:12.

ಯೆಹೋವನ ಪ್ರೀತಿಪೂರ್ವಕ ದಯೆಯ ಕಾರಣದಿಂದ ಸಂತೋಷಿತರು

(ಕೀರ್ತನೆ 107:1-119:176)

“ಅವರು ಯೆಹೋವನ ಕೃಪೆಗೋಸ್ಕರವೂ [“ಪ್ರೀತಿಪೂರ್ವಕ ದಯೆಗೋಸ್ಕರವೂ,” NW] ಆತನು ಮಾನವರಿಗಾಗಿ ನಡಿಸಿದ ಅದ್ಭುತಗಳಿಗೋಸ್ಕರವೂ ಆತನನ್ನು ಕೊಂಡಾಡಲಿ,” ಎಂದು ಬಾಬೆಲಿನ ಬಂಧನದಿಂದ ಹಿಂದಿರುಗುತ್ತಿರುವ ದೇಶಭ್ರಷ್ಟ ಯೆಹೂದ್ಯರು ಹಾಡುತ್ತಾರೆ. (ಕೀರ್ತನೆ 107:8, 15, 21, 31) ದೇವರನ್ನು ಸ್ತುತಿಸುತ್ತಾ ದಾವೀದನು ಹಾಡುವುದು: “ನಿನ್ನ ಸತ್ಯತೆಯು ಮುಗಿಲನ್ನು ನಿಲುಕುತ್ತದೆ.” (ಕೀರ್ತನೆ 108:4) ತದನಂತರದ ಕೀರ್ತನೆಯಲ್ಲಿ ಅವನು ಮೊರೆಯಿಡುವುದು: “ಯೆಹೋವನೇ, ನನ್ನ ದೇವರೇ, ಸಹಾಯಮಾಡು; ನಿನ್ನ ಕೃಪೆಗೆ [“ಪ್ರೀತಿಪೂರ್ವಕ ದಯೆಗೆ,” NW] ತಕ್ಕಂತೆ ರಕ್ಷಿಸು.” (ಕೀರ್ತನೆ 109:18, 19, 26) 110ನೆಯ ಕೀರ್ತನೆಯು ಮೆಸ್ಸೀಯನ ಆಳ್ವಿಕೆಯ ಕುರಿತಾದ ಒಂದು ಪ್ರವಾದನಾರೂಪವಾಗಿದೆ. “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು” ಎಂದು ಕೀರ್ತನೆ 111:10 ಹೇಳುತ್ತದೆ. ತದನಂತರದ ಕೀರ್ತನೆಗನುಸಾರ, ‘ಯೆಹೋವನಲ್ಲಿ ಭಯಭಕ್ತಿಯುಳ್ಳವನು ಧನ್ಯನು.’​—⁠ಕೀರ್ತನೆ 112:⁠1.

“ಯಾಹುವಿಗೆ ಸ್ತೋತ್ರ!” ಅಥವಾ “ಹಲ್ಲೆಲೂಯಾ” ಎಂಬ ಅಭಿವ್ಯಕ್ತಿಯನ್ನು 113ರಿಂದ 118ರ ವರೆಗಿನ ಕೀರ್ತನೆಗಳಲ್ಲಿ ಪದೇ ಪದೇ ಬಳಸಲಾಗಿರುವುದರಿಂದ ಅವುಗಳನ್ನು ‘ಹಾಲೆಲ್‌ ಕೀರ್ತನೆಗಳು’ ಎಂದು ಕರೆಯಲಾಗಿದೆ. ಹಿಂದಿನ ಮೌಖಿಕ ಸಂಪ್ರದಾಯವನ್ನು ಬರವಣಿಗೆಯಲ್ಲಿ ಹಾಕಿರುವ ಮಿಷ್ನಾ ಎಂಬ ಮೂರನೆಯ ಶತಮಾನದ ಕೃತಿಗನುಸಾರ ಈ ಹಾಲೆಲ್‌ ಕೀರ್ತನೆಗಳನ್ನು ಪಸ್ಕದ ಸಮಯದಲ್ಲಿ ಮತ್ತು ಯೆಹೂದ್ಯರ ಮೂರು ವಾರ್ಷಿಕ ಹಬ್ಬಗಳ ಸಮಯದಲ್ಲಿ ಹಾಡಲಾಗುತ್ತಿತ್ತು. ಬೈಬಲಿನಲ್ಲಿರುವ ಎಲ್ಲಾ ಕೀರ್ತನೆಗಳಲ್ಲಿ ಮತ್ತು ಅಧ್ಯಾಯಗಳಲ್ಲಿ, 119ನೇ ಕೀರ್ತನೆಯು ಅತಿ ಉದ್ದವಾದದ್ದು. ಈ ಕೀರ್ತನೆಯು ಯೆಹೋವನು ಪ್ರಕಟಪಡಿಸಿದ ವಾಕ್ಯ ಇಲ್ಲವೆ ಆತನ ಸಂದೇಶಕ್ಕೆ ಹೆಚ್ಚಿನ ಮಹತ್ವಕೊಡುತ್ತದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

109:23​—⁠“ಸಂಜೆಯ ನೆರಳಿನಂತೆ ಗತಿಸಿಹೋಗುತ್ತಿದ್ದೇನೆ” ಎಂದು ದಾವೀದನು ಹೇಳಿದ್ದರ ಅರ್ಥವೇನು? ದಾವೀದನು ತನ್ನ ಮರಣವು ಹತ್ತಿರವಿದೆ ಎಂಬ ತನ್ನ ಅನಿಸಿಕೆಯನ್ನು ಕಾವ್ಯಾತ್ಮಕ ಭಾಷೆಯಲ್ಲಿ ಹೇಳುತ್ತಿದ್ದಾನೆ.​—⁠ಕೀರ್ತನೆ 102:11.

110:1, 2​—⁠ದಾವೀದನ ‘ಒಡೆಯನಾದ’ ಯೇಸು ಕ್ರಿಸ್ತನು ದೇವರ ಬಲಗಡೆಯಲ್ಲಿ ಕೂತುಕೊಂಡಿರುವಾಗ ಏನು ಮಾಡಿದನು? ಪುನರುತ್ಥಾನದ ಬಳಿಕ ಯೇಸುವು ಪರಲೋಕಕ್ಕೆ ಏರಿಹೋದನು ಮತ್ತು ಅಲ್ಲಿ ದೇವರ ಬಲಗಡೆಯಲ್ಲಿದ್ದು, ರಾಜನಾಗಿ ಆಳಲಾರಂಭಿಸಲಿಕ್ಕಾಗಿ 1914ರ ವರೆಗೆ ಕಾದುಕೊಂಡನು. ಅವನು ಕಾಯುತ್ತಿದ್ದ ಆ ಸಮಯದಲ್ಲಿ ತನ್ನ ಅಭಿಷಿಕ್ತ ಹಿಂಬಾಲಕರನ್ನು, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಮಾರ್ಗದರ್ಶಿಸಿ ತನ್ನೊಂದಿಗೆ ತನ್ನ ರಾಜ್ಯದಲ್ಲಿ ಆಳಲು ಸಿದ್ಧಗೊಳಿಸುವ ಮೂಲಕ ಅವರ ಮೇಲೆ ಆಳ್ವಿಕೆ ನಡೆಸಿದನು.​—⁠ಮತ್ತಾಯ 24:14; 28:18-20; ಲೂಕ 22:28-30.

110:​4​—⁠ಯೆಹೋವನು ಯಾವುದಕ್ಕೆ ‘ಆಣೆಯಿಟ್ಟು ಪಶ್ಚಾತ್ತಾಪಪಡುವುದಿಲ್ಲ’? ಈ ಆಣೆಯು ಯೇಸು ಕ್ರಿಸ್ತನು ರಾಜನಾಗಿ ಮತ್ತು ಮಹಾಯಾಜಕನಾಗಿ ಸೇವೆಸಲ್ಲಿಸಲು ಯೆಹೋವನು ಅವನೊಂದಿಗೆ ಮಾಡಿದ ಒಡಂಬಡಿಕೆ ಆಗಿದೆ.​—⁠ಲೂಕ 22:29.

113:3​—⁠‘ಯೆಹೋವನ ನಾಮವು ಮೂಡಣಿಂದ ಪಡುವಣ ವರೆಗೂ ಸ್ತುತಿಹೊಂದುವುದು’ ಯಾವ ಅರ್ಥದಲ್ಲಿ? ಇದರಲ್ಲಿ ವ್ಯಕ್ತಿಗಳ ಗುಂಪೊಂದು ಪ್ರತೀ ದಿನ ಯೆಹೋವನನ್ನು ಆರಾಧಿಸುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ. ಮೂಡಣದಿಂದ ಪಡುವಣದವರೆಗೂ ಸೂರ್ಯನ ಕಿರಣಗಳು ಇಡೀ ಭೂಗೋಳವನ್ನೇ ಬೆಳಗಿಸುತ್ತವೆ. ಅದೇ ರೀತಿಯಲ್ಲಿ ಯೆಹೋವನನ್ನು ಸಹ ಭೂಮ್ಯಾದ್ಯಂತ ಸ್ತುತಿಸತಕ್ಕದ್ದು ಮತ್ತು ಸಂಘಟಿತವಾದ ಪ್ರಯತ್ನವಿಲ್ಲದೆ ಇದನ್ನು ಸಾಧಿಸಲಾಗದು. ಯೆಹೋವನ ಸಾಕ್ಷಿಗಳಾಗಿ ದೇವರನ್ನು ಸ್ತುತಿಸುವ ಮತ್ತು ರಾಜ್ಯವನ್ನು ಘೋಷಿಸುವಂಥ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವ ಅಪೂರ್ವ ಗೌರವ ನಮಗಿದೆ.

116:​15​—⁠ಯಾವ ವಿಧದಲ್ಲಿ “ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವದಿಲ್ಲ”? ಯೆಹೋವನು ತನ್ನ ಆರಾಧಕರನ್ನು ಅಲ್ಪವೆಂದು ಎಣಿಸುವದಿಲ್ಲ ಏಕೆಂದರೆ ಅವರು ಇಡೀ ಸಮೂಹವಾಗಿ ಮರಣಕ್ಕೀಡಾಗುವುದು ಆತನಿಗೆ ಭಾರೀ ಬೆಲೆಯನ್ನು ತೆರಬೇಕಾದ ಸಂಗತಿಯಾಗಿರುವುದು. ಆತನು ತನ್ನ ಆರಾಧಕರ ಇಡೀ ಸಮೂಹವು ಮರಣಕ್ಕೀಡಾಗುವಂತೆ ಅನುಮತಿಸುವಲ್ಲಿ, ಆತನ ವಿರೋಧಿಗಳು ಆತನಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆಂದು ತೋರಿಬರುವುದು. ಅಷ್ಟುಮಾತ್ರವಲ್ಲದೆ, ಹೊಸ ಲೋಕದ ಅಸ್ತಿವಾರಕ್ಕಾಗಿ ಭೂಮಿಯ ಮೇಲೆ ಯಾರೂ ಉಳಿದಿರಲಿಕ್ಕಿಲ್ಲ.

119:​71​—⁠ಕಷ್ಟವನ್ನು ಅನುಭವಿಸುವುದರಲ್ಲಿ ಹಿತಕರವಾದದ್ದೇನಿದೆ? ಕಷ್ಟಗಳು ನಾವು ಯೆಹೋವನ ಮೇಲೆ ಹೆಚ್ಚು ಪೂರ್ಣವಾಗಿ ಆತುಕೊಳ್ಳಲು, ಆತನಿಗೆ ಹೆಚ್ಚು ತೀವ್ರತೆಯಿಂದ ಪ್ರಾರ್ಥಿಸಲು ಮತ್ತು ಬೈಬಲಿನ ಹೆಚ್ಚು ಶ್ರದ್ಧಾಪೂರ್ವಕ ಅಧ್ಯಯನ ಹಾಗೂ ಅನ್ವಯ ಮಾಡುವಂತೆ ಕಲಿಸಬಲ್ಲದು. ಅದಲ್ಲದೆ, ಕಷ್ಟಗಳು ಬಂದಾಗ ನಾವು ತೋರಿಸುವ ಪ್ರತಿಕ್ರಿಯೆಯು ನಮ್ಮ ವ್ಯಕ್ತಿತ್ವ ದೋಷಗಳನ್ನು ಬಯಲುಗೊಳಿಸುತ್ತವೆ ಮತ್ತು ಅವುಗಳನ್ನು ನಾವು ತಿದ್ದಸಾಧ್ಯವಿದೆ. ಕಷ್ಟಾನುಭವವು ನಮ್ಮನ್ನು ಪರಿಷ್ಕರಿಸುವಂತೆ ನಾವು ಅನುಮತಿಸುವಲ್ಲಿ ಅದು ನಮ್ಮಲ್ಲಿ ಕಹಿಭಾವವನ್ನು ತುಂಬಿಸುವುದಿಲ್ಲ.

119:​96​—⁠‘ಎಲ್ಲಾ ಸಂಪೂರ್ಣತೆಗೂ ಮೇರೆಯಿರುವುದರ’ ಅರ್ಥವೇನು? ಕೀರ್ತನೆಗಾರನು ಮಾನವ ದೃಷ್ಟಿಕೋನದಲ್ಲಿ ಸಂಪೂರ್ಣತೆ ಅಥವಾ ಪರಿಪೂರ್ಣತೆಯ ಕುರಿತು ಮಾತಾಡುತ್ತಿದ್ದಾನೆ. ಪರಿಪೂರ್ಣತೆಯ ಕುರಿತಾದ ಮಾನವನ ಕಲ್ಪನೆಗೆ ಮೇರೆಯಿದೆ ಎಂಬುದು ಪ್ರಾಯಶಃ ಅವನ ಮನಸ್ಸಿನಲ್ಲಿದ್ದಿರಬೇಕು. ಆದರೆ ಇದಕ್ಕೆ ತದ್ವಿರುದ್ಧವಾಗಿ ದೇವರ ಆಜ್ಞಾಶಾಸನಕ್ಕೆ ಅಂಥ ಯಾವುದೇ ಮೇರೆಯಿಲ್ಲ. ಅದರ ಮಾರ್ಗದರ್ಶನವು ಜೀವನದ ಎಲ್ಲಾ ಅಂಶಗಳಿಗೆ ಅನ್ವಯಿಸುತ್ತದೆ. “ಸರ್ವಸಂಪೂರ್ಣತೆಗೆ ಮಿತಿಯನ್ನು ನೋಡಿದ್ದೇನೆ; ಆದರೆ ನಿನ್ನ ಆಜ್ಞೆಗಳು ಮಿತಿಯಿಲ್ಲದವುಗಳಾಗಿವೆ” ಎಂದು ನ್ಯೂ ಇಂಡಿಯಾ ಬೈಬಲ್‌ ವರ್ಷನ್‌ ಹೇಳುತ್ತದೆ.

119:​164​—⁠“ದಿನಕ್ಕೆ ಏಳು ಸಾರಿ” ದೇವರನ್ನು ಕೊಂಡಾಡುವುದರ ಮಹತ್ವಾರ್ಥವೇನು? ಸಂಖ್ಯೆ ಏಳು ಹೆಚ್ಚಾಗಿ ಸಂಪೂರ್ಣತೆಯನ್ನು ಸೂಚಿಸುತ್ತದೆ. ಹಾಗಾಗಿ ಯೆಹೋವನು ಸಂಪೂರ್ಣ ಕೊಂಡಾಡುವಿಕೆ ಅಥವಾ ಸ್ತುತಿಗೆ ಅರ್ಹನೆಂದು ಕೀರ್ತನೆಗಾರನು ಹೇಳುತ್ತಿದ್ದಾನೆ.

ನಮಗಾಗಿರುವ ಪಾಠಗಳು:

107:​27-31. ಅರ್ಮಗೆದೋನ್‌ ಬಂದೆರಗುವಾಗ, ಲೋಕದ ವಿವೇಕವು ‘ದಿಕ್ಕುತೋರಿಸದು.’ (ಪ್ರಕಟನೆ 16:14, 16) ಅದು ಯಾರನ್ನೂ ನಾಶನದಿಂದ ರಕ್ಷಿಸಲಾರದು. ಯಾರು ರಕ್ಷಣೆಗಾಗಿ ಯೆಹೋವನೆಡೆಗೆ ನೋಡುತ್ತಾರೊ ಅಂಥವರು ಮಾತ್ರ ‘ಆತನ ಕೃಪೆಗೋಸ್ಕರ ಆತನನ್ನು ಕೊಂಡಾಡಲು’ ಬದುಕಿ ಉಳಿಯುವರು.

109:​30, 31; 110:⁠5. ಸೈನಿಕನು ಗುರಾಣಿಯನ್ನು ಎಡಗೈಯಲ್ಲಿ ಹಿಡಿದಿರುವುದರಿಂದ ಕತ್ತಿಯನ್ನು ಹಿಡಿದಿರುವ ತನ್ನ ಬಲಗೈಗೆ ಸಾಮಾನ್ಯವಾಗಿ ಸಂರಕ್ಷಣೆ ಇರುವುದಿಲ್ಲ. ರೂಪಕಾರ್ಥದಲ್ಲಿ, ಯೆಹೋವನು ತನ್ನ ಸೇವಕರಿಗೋಸ್ಕರ ಹೋರಾಡಲು ಅವರ “ಬಲಗಡೆಯಲ್ಲಿ” ಇದ್ದಾನೆ. ಹೀಗೆ ಆತನು ಅವರಿಗೆ ಸಂರಕ್ಷಣೆ ಮತ್ತು ಸಹಾಯವನ್ನು ಕೊಡುತ್ತಾನೆ. ಇದು ಆತನನ್ನು ‘ಬಹಳವಾಗಿ ಕೊಂಡಾಡಲು’ ನಮಗೆಂಥ ಉತ್ತಮ ಕಾರಣ!

113:​4-9. ಯೆಹೋವನೆಷ್ಟು ಮಹೋನ್ನತನಾಗಿದ್ದಾನೆ ಅಂದರೆ, ‘ಆಕಾಶವನ್ನು ನೋಡಲಿಕ್ಕೂ’ ಅವನು ಬಾಗಬೇಕು. ಹಾಗಿದ್ದರೂ ದೀನರಿಗೆ, ಬಡವರಿಗೆ ಮತ್ತು ಬಂಜೆಯರಿಗೆ ಆತನು ಕನಿಕರ ತೋರಿಸುತ್ತಾನೆ. ಸೇನಾಧೀಶ್ವರನಾದ ಯೆಹೋವನು ದೀನಭಾವದವನಾಗಿದ್ದಾನೆ ಮತ್ತು ತನ್ನ ಭಕ್ತರು ಸಹ ಹಾಗೆಯೇ ಇರಬೇಕೆಂದು ಬಯಸುತ್ತಾನೆ.​—⁠ಯಾಕೋಬ 4:⁠6.

114:​3-7. ಕೆಂಪು ಸಮುದ್ರದಲ್ಲಿ, ಯೊರ್ದನ್‌ ನದಿಯಲ್ಲಿ ಮತ್ತು ಸೀನಾಯಿ ಪರ್ವತದಲ್ಲಿ ಯೆಹೋವನು ತನ್ನ ಜನರಿಗೋಸ್ಕರ ನಡೆಸಿದ ಅದ್ಭುತಕೃತ್ಯಗಳ ಬಗ್ಗೆ ಕಲಿಯುವುದು ನಮ್ಮನ್ನು ಗಾಢವಾಗಿ ಪ್ರಭಾವಿಸಬೇಕು. ಮನುಜಕುಲವನ್ನು ಪ್ರತಿನಿಧಿಸುವ ‘ಭೂಲೋಕವು’ ಕರ್ತನ ಪ್ರತ್ಯಕ್ಷತೆಯಿಂದಾಗಿ ಸಾಂಕೇತಿಕವಾಗಿ ‘ಕಂಪಿಸಬೇಕು’ ಅಂದರೆ ಭಯಭಕ್ತಿಯಿಂದಿರಬೇಕು.

119:​97-101. ದೇವರ ವಾಕ್ಯದಿಂದ ವಿವೇಕ, ಒಳನೋಟ ಮತ್ತು ತಿಳಿವಳಿಕೆಯನ್ನು ಗಳಿಸುವುದು ನಮ್ಮನ್ನು ಆಧ್ಯಾತ್ಮಿಕ ಹಾನಿಯಿಂದ ಸಂರಕ್ಷಿಸುತ್ತದೆ.

119:105. ದೇವರ ವಾಕ್ಯವು ನಮ್ಮ ಕಾಲಿಗೆ ದೀಪವಾಗಿದೆ ಅಂದರೆ, ನಮ್ಮ ಸದ್ಯದ ಸಮಸ್ಯೆಗಳನ್ನು ನಿಭಾಯಿಸುವಂತೆ ನಮಗದು ಸಹಾಯಮಾಡುತ್ತದೆ. ಅದು ಸಾಂಕೇತಿಕವಾಗಿ ನಮ್ಮ ದಾರಿಯನ್ನೂ ಬೆಳಗಿಸುತ್ತದೆ ಏಕೆಂದರೆ ಭವಿಷ್ಯಕ್ಕಾಗಿ ದೇವರ ಉದ್ದೇಶವನ್ನು ಅದು ಮುಂತಿಳಿಸುತ್ತದೆ.

ಕಷ್ಟಗಳ ಮಧ್ಯೆಯೂ ಸಂತೋಷಿತರು

(ಕೀರ್ತನೆ 120:1-145:21)

ನಾವು ಪರೀಕ್ಷಾತ್ಮಕ ಸನ್ನಿವೇಶಗಳನ್ನು ಎದುರಿಸಿ ಕಷ್ಟಗಳಿಂದ ಪಾರಾಗುವುದು ಹೇಗೆ? ಈ ಪ್ರಶ್ನೆಗೆ 120ರಿಂದ 134ನೆಯ ಕೀರ್ತನೆಗಳು ಸ್ಪಷ್ಟವಾದ ಉತ್ತರವನ್ನು ಕೊಡುತ್ತವೆ. ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುವುದರಿಂದ ನಾವು ಕಷ್ಟಗಳನ್ನು ಪಾರಾಗಿ ನಮ್ಮ ಆನಂದವನ್ನು ಕಾಪಾಡಿಕೊಳ್ಳಬಲ್ಲೆವು. “ಯಾತ್ರಾಗೀತ” ಎಂದು ಕರೆಯಲಾದ ಈ ಕೀರ್ತನೆಗಳನ್ನು ಇಸ್ರಾಯೇಲ್ಯರು ಪ್ರಾಯಶಃ ವಾರ್ಷಿಕ ಹಬ್ಬಗಳನ್ನು ಆಚರಿಸಲು ಯೆರೂಸಲೇಮಿಗೆ ಯಾತ್ರೆಮಾಡುತ್ತಿದ್ದಾಗ ಹಾಡುತ್ತಿದ್ದರು.

ನಿಸ್ಸಹಾಯಕ ವಿಗ್ರಹಗಳಿಗೆ ತದ್ವಿರುದ್ಧವಾಗಿ ಯೆಹೋವನು ತಾನೇನನ್ನು ಮಾಡಲು ಇಚ್ಛಿಸುತ್ತಾನೊ ಅದನ್ನು ಮಾಡಲು ಶಕ್ತನಾಗಿದ್ದಾನೆಂಬ ಚಿತ್ರಣವನ್ನು 135 ಮತ್ತು 136ನೇ ಕೀರ್ತನೆಗಳು ಕೊಡುತ್ತವೆ. 136ನೇ ಕೀರ್ತನೆಯನ್ನು ಪ್ರತ್ಯುತ್ತರ ಗೀತೆಯಾಗಿ ರಚಿಸಲಾಗಿದೆ ಅಂದರೆ, ಪ್ರತಿ ಚರಣದ ಕೊನೆಯ ಭಾಗವನ್ನು ಮೊದಲ ಭಾಗಕ್ಕೆ ಪ್ರತ್ಯುತ್ತರವಾಗಿ ಹಾಡಲಾಗುತ್ತದೆ. 137ನೆಯ ಕೀರ್ತನೆಯು ಯೆಹೋವನನ್ನು ಚೀಯೋನಿನಲ್ಲಿ ಆರಾಧಿಸಲಿಕ್ಕಾಗಿ ಬಯಸುತ್ತಿದ್ದ, ಬಾಬೆಲಿನಲ್ಲಿರುವ ಯೆಹೂದ್ಯರ ಮಹಾ ದುಃಖದ ಸ್ಥಿತಿಯನ್ನು ವಿವರಿಸುತ್ತದೆ. 138ರಿಂದ 145ನೇ ಕೀರ್ತನೆಗಳನ್ನು ದಾವೀದನು ರಚಿಸಿದನು. ದೇವರನ್ನು ತನ್ನ ‘ಪೂರ್ಣಮನಸ್ಸಿನಿಂದ ಕೊಂಡಾಡುವುದು’ ಅವನ ಬಯಕೆಯಾಗಿದೆ. ಏಕೆ? ಏಕೆಂದರೆ, “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ” ಎಂದು ಅವನು ಹೇಳುತ್ತಾನೆ. (ಕೀರ್ತನೆ 138:1; 139:14) ತದನಂತರದ ಐದು ಕೀರ್ತನೆಗಳಲ್ಲಿ ದಾವೀದನು ದುಷ್ಟಜನರಿಂದ ಸಂರಕ್ಷಣೆಗಾಗಿ, ನೀತಿಯ ತಿದ್ದುಪಾಟಿಗಾಗಿ, ಹಿಂಸಕರಿಂದ ವಿಮೋಚನೆಗಾಗಿ ಮತ್ತು ನಡತೆಯ ವಿಷಯದಲ್ಲಿ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತಿದ್ದಾನೆ. ಅವನು ಯೆಹೋವನ ಜನರ ಸಂತೋಷವನ್ನು ಎತ್ತಿತೋರಿಸುತ್ತಾನೆ. (ಕೀರ್ತನೆ 144:15) ದೇವರ ಮಹೋನ್ನತೆ ಮತ್ತು ಒಳ್ಳೇತನವನ್ನು ಪುನರಾವಲೋಕಿಸಿದ ಬಳಿಕ ದಾವೀದನು ಘೋಷಿಸುವುದು: “ನನ್ನ ಬಾಯಿ ಯೆಹೋವನನ್ನು ಕೀರ್ತಿಸುವದು; ಎಲ್ಲಾ ಜೀವಿಗಳು ಆತನ ಪರಿಶುದ್ಧನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ.”​—⁠ಕೀರ್ತನೆ 145:21.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

122:3​—⁠ಯೆರೂಸಲೇಮ್‌ “ಸರಿಯಾದ ಹೊಂದಿಕೆಯಲ್ಲಿ ಕಟ್ಟಲ್ಪಟ್ಟ” ನಗರವಾಗಿದದ್ದು ಯಾವ ಅರ್ಥದಲ್ಲಿ? “ಸರಿಯಾದ ಹೊಂದಿಕೆಯಲ್ಲಿ ಕಟ್ಟಲ್ಪಟ್ಟ” ಎಂಬ ವಾಕ್ಸರಣಿಯನ್ನು “ಒಂದಾಗಿ ಜೋಡಿಸಲ್ಪಟ್ಟದ್ದು” (NW) ಎಂದು ಸಹ ಭಾಷಾಂತರಿಸಲಾಗಿದೆ. ಸಾಮಾನ್ಯವಾಗಿ ಗತಕಾಲದ ನಗರಗಳಲ್ಲಿರುತ್ತಿದ್ದಂತೆ ಯೆರೂಸಲೇಮಿನಲ್ಲಿ ಮನೆಗಳನ್ನು ತೀರ ಹತ್ತಿರಹತ್ತಿರವಾಗಿ ಕಟ್ಟಲಾಗುತ್ತಿತ್ತು. ನಗರವು ಒತ್ತಾಗಿ ಜೋಡಿಸಲ್ಪಟ್ಟಿತ್ತು ಮತ್ತು ಈ ಕಾರಣದಿಂದ ಅದರ ರಕ್ಷಣೆಮಾಡುವುದು ಸುಲಭವಾಗಿರುತ್ತಿತ್ತು. ಅಷ್ಟುಮಾತ್ರವಲ್ಲದೆ ಮನೆಗಳು ಹತ್ತಿರಹತ್ತಿರವಾಗಿರುವುದು ನಗರವಾಸಿಗಳು ಒಬ್ಬರು ಇನ್ನೊಬ್ಬರನ್ನು ನೆರವು ಮತ್ತು ರಕ್ಷಣೆಗಾಗಿ ಅವಲಂಬಿಸುವುದನ್ನು ಸಾಧ್ಯಗೊಳಿಸಿತು. ಯೆರೂಸಲೇಮ್‌ “ಸರಿಯಾದ ಹೊಂದಿಕೆಯಲ್ಲಿ ಕಟ್ಟಲ್ಪಟ್ಟ” ನಗರವಾಗಿತ್ತೆಂಬ ಸಂಗತಿಯು, ಇಸ್ರಾಯೇಲಿನ 12 ಕುಲಗಳು ಆರಾಧನೆಗಾಗಿ ಒಟ್ಟುಸೇರಿದಾಗ ಅವರ ನಡುವೆ ಇದ್ದ ಆಧ್ಯಾತ್ಮಿಕ ಐಕ್ಯತೆಯನ್ನು ಸೂಚಿಸುತ್ತದೆ.

123:​2​—⁠ದಾಸನ ಕಣ್ಣುಗಳ ಕುರಿತಾದ ದೃಷ್ಟಾಂತದತಿರುಳೇನು? ದಾಸರು ಮತ್ತು ದಾಸಿಯರು ಯಜಮಾನ ಯಜಮಾನಿಯರ ಕೈಯನ್ನು ನೋಡುವುದು ಎರಡು ಕಾರಣಗಳಿಗಾಗಿ: ಯಜಮಾನ ಯಜಮಾನಿಯ ಇಚ್ಛೆಗಳೇನೆಂಬುದನ್ನು ಅರಿತುಕೊಳ್ಳುವುದಕ್ಕಾಗಿ ಮತ್ತು ಸಂರಕ್ಷಣೆಯನ್ನು ಹಾಗೂ ಬದುಕಿಗಾಗಿ ಅಗತ್ಯವಾದದ್ದನ್ನು ಪಡೆದುಕೊಳ್ಳಲಿಕ್ಕಾಗಿ. ತದ್ರೀತಿಯಲ್ಲಿ ನಾವು ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸಲು ಮತ್ತು ಆತನ ಮೆಚ್ಚುಗೆಯನ್ನು ಪಡೆಯಲು ಆತನೆಡೆಗೆ ನೋಡುತ್ತೇವೆ.

131:​1-3​—⁠ದಾವೀದನು ತನ್ನ ‘ತಾಯಿಯ ಬಳಿಯಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ ನೆಮ್ಮದಿಯಿಂದ’ ಮತ್ತು ‘ಸಮಾಧಾನದಿಂದ’ ಇದದ್ದು ಹೇಗೆ? ಮೊಲೆಬಿಡಿಸಿದ ಕೂಸು ತನ್ನ ತಾಯಿಯ ತೋಳುಗಳಲ್ಲಿ ನೆಮ್ಮದಿ ಮತ್ತು ತೃಪ್ತಿಯನ್ನು ಪಡೆಯಲು ಕಲಿಯುವಂತೆಯೇ, ದಾವೀದನು “ತಾಯಿಯ ಬಳಿಯಲ್ಲಿರುವ ಮೊಲೆಬಿಡಿಸಿದ ಕೂಸಿನಂತೆ” ನೆಮ್ಮದಿ ಮತ್ತು ಸಮಾಧಾನವನ್ನು ಪಡೆಯಲು ಕಲಿತುಕೊಂಡನು. ಹೇಗೆ? ಎದೆಯಲ್ಲಿ ಹಮ್ಮಿಲ್ಲದೆ ಸೊಕ್ಕಿನ ಕಣ್ಣಿಲ್ಲದವನಾಗಿರುವ ಮೂಲಕ ಮತ್ತು ಪ್ರಸಿದ್ಧಿಗಾಗಿ ಹಾತೊರೆಯದಿರುವ ಮೂಲಕ. ಪ್ರಖ್ಯಾತಿಯನ್ನು ಬೆನ್ನಟ್ಟುವ ಬದಲಿಗೆ ದಾವೀದನು ಸಾಮಾನ್ಯವಾಗಿ ತನ್ನ ಇತಿಮಿತಿಗಳನ್ನು ಅಂಗೀಕರಿಸಿದನು ಮತ್ತು ದೀನಮನಸ್ಸನ್ನು ತೋರಿಸಿದನು. ನಾವು ಅವನ ಮನೋಭಾವವನ್ನು ಅನುಕರಿಸುವುದು ವಿವೇಕಯುತ. ಮುಖ್ಯವಾಗಿ ಸಭೆಯಲ್ಲಿನ ಸೇವಾ ಅವಕಾಶಗಳನ್ನು ಎಟಕಿಸಿಕೊಳ್ಳಲು ಪ್ರಯತ್ನಿಸುವಾಗ ಇದು ಅಗತ್ಯ.

ನಮಗಾಗಿರುವ ಪಾಠಗಳು:

120:​1, 2, 6, 7. ಚಾಡಿಮಾತು ಮತ್ತು ಕೊಂಕುನುಡಿ ಇತರರಿಗೆ ಸಹಿಸಲಾಗದ ಸಂಕಟವನ್ನು ತರಬಲ್ಲದು. ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಡುವುದು ನಾವು ‘ಸಮಾಧಾನಪ್ರಿಯರೆಂದು’ ತೋರಿಸಿಕೊಳ್ಳುವ ಒಂದು ವಿಧವಾಗಿದೆ.

120:​3, 4. ‘ವಂಚಿಸುವ ನಾಲಿಗೆಯ’ ವ್ಯಕ್ತಿಯನ್ನು ನಾವು ಸಹಿಸಬೇಕಾಗಿರುವಲ್ಲಿ, ಯೆಹೋವನು ತನ್ನ ಸೂಕ್ತ ಸಮಯದಲ್ಲಿ ವಿಷಯಗಳನ್ನು ಸರಿಪಡಿಸುವನೆಂಬ ವಿಚಾರವು ನಮಗೆ ಸಾಂತ್ವನ ಕೊಡಬಲ್ಲದು. ಚಾಡಿಹೇಳುವವರು “ಶೂರನ” ಕೈಗಳಲ್ಲಿ ವಿಪತ್ತನ್ನು ಅನುಭವಿಸುವರು. ಅವರು, ‘ಜಾಲಿಯ ಕೆಂಡಗಳಿಂದ’ ಸೂಚಿಸಲ್ಪಟ್ಟಿರುವ ಯೆಹೋವನ ಅಗ್ನಿಮಯ ನ್ಯಾಯತೀರ್ಪಿಗೆ ಖಂಡಿತವಾಗಿ ಒಳಗಾಗುವರು.

127:​1, 2. ನಮ್ಮೆಲ್ಲ ಕಾರ್ಯಗಳಲ್ಲಿ ನಾವು ಮಾರ್ಗದರ್ಶನಕ್ಕಾಗಿ ಯೆಹೋವನೆಡೆಗೆ ನೋಡಬೇಕು.

133:​1-3. ಯೆಹೋವನ ಜನರ ನಡುವಿನ ಐಕ್ಯತೆಯು ನೆಮ್ಮದಿದಾಯಕವಾಗಿದೆ, ಹಿತಕರವಾದದ್ದಾಗಿದೆ ಮತ್ತು ಚೈತನ್ಯದಾಯಕವಾಗಿದೆ. ತಪ್ಪು ಹುಡುಕುವ, ಜಗಳವಾಡುವ ಅಥವಾ ದೂರುವ ಮೂಲಕ ನಾವು ಈ ಐಕ್ಯವನ್ನು ಭಂಗಗೊಳಿಸಬಾರದು.

137:​1, 5, 6. ಸೆರೆಯಲ್ಲಿದ್ದ ಯೆಹೋವನ ಆರಾಧಕರಿಗೆ ಆ ಸಮಯದಲ್ಲಿ ದೇವರ ಸಂಘಟನೆಯ ಭೂಭಾಗವಾಗಿದ್ದ ಚೀಯೋನಿನೊಂದಿಗೆ ಆಪ್ತ ನಂಟು ಇತ್ತು. ನಮ್ಮ ಕುರಿತೇನು? ಯೆಹೋವನು ಇಂದು ಉಪಯೋಗಿಸುತ್ತಿರುವ ಸಂಘಟನೆಯೊಂದಿಗೆ ನಾವು ನಿಷ್ಠೆಯ ನಂಟನ್ನು ಬೆಸೆದಿದ್ದೇವೊ?

138:⁠2. ಯೆಹೋವನು ತನ್ನ ‘ವಾಗ್ದಾನವನ್ನು ವಿಶೇಷರೀತಿಯಿಂದ ನೆರೆವೇರಿಸಿ ತನ್ನ ನಾಮಮಹತ್ತನ್ನು ಹೆಚ್ಚಿಸುವುದು’ ಹೇಗೆಂದರೆ, ಆತನು ತನ್ನ ಹೆಸರಿನಲ್ಲಿ ವಾಗ್ದಾನಿಸಿದ್ದೆಲ್ಲವನ್ನು ನಾವು ನಿರೀಕ್ಷಿಸಿರುವುದಕ್ಕಿಂತ ಎಷ್ಟೋ ಮಿಗಿಲಾದ ರೀತಿಯಲ್ಲಿ ನೆರವೇರಿಸುವನು. ನಿಜವಾಗಿಯೂ ಭವ್ಯ ಪ್ರತೀಕ್ಷೆಗಳು ನಮ್ಮ ಮುಂದಿವೆ.

139:​1-6, 15, 16. ಯೆಹೋವನಿಗೆ ನಮ್ಮ ಚಟುವಟಿಕೆಗಳು, ಆಲೋಚನೆಗಳು ಮತ್ತು ನಾವು ಆಡಲಿರುವ ಮಾತುಗಳು ಮುಂಚಿತವಾಗಿಯೇ ತಿಳಿದಿವೆ. ನಮ್ಮ ದೇಹದ ಪ್ರತಿಯೊಂದು ಅಂಗವು ರೂಪಿಸಲ್ಪಡುವ ಮುನ್ನವೇ ಅಂದರೆ ನಾವಿನ್ನೂ ಪಿಂಡವಾಗಿದ್ದ ಸಮಯದಿಂದಲೇ ಆತನಿಗೆ ನಮ್ಮ ಬಗ್ಗೆ ತಿಳಿದಿದೆ. ಒಬ್ಬೊಬ್ಬ ವ್ಯಕ್ತಿಯಾಗಿ ನಮ್ಮ ಬಗ್ಗೆ ದೇವರಿಗಿರುವ ಜ್ಞಾನವು ನಾವು ಅರ್ಥಮಾಡಿಕೊಳ್ಳಲಾಗದಷ್ಟು “ಬಹು ಆಶ್ಚರ್ಯ”ದಾಯಕವಾಗಿದೆ. ಯೆಹೋವನು ನಾವು ಎದುರಿಸುತ್ತಿರಬಹುದಾದ ಪರೀಕ್ಷಾತ್ಮಕ ಸನ್ನಿವೇಶವನ್ನು ನೋಡುತ್ತಾನೆ ಮಾತ್ರವಲ್ಲ ಅದು ನಮ್ಮ ಮೇಲೆ ಬೀರುವ ಪರಿಣಾಮವನ್ನೂ ಅರ್ಥಮಾಡುತ್ತಾನೆಂದು ತಿಳಿದಿರುವುದು ನಮಗೆಷ್ಟು ಸಾಂತ್ವನ ನೀಡುತ್ತದೆ!

139:​7-12. ನಾವು ಎಲ್ಲಿಯೇ ಹೋದರೂ ಅದು ಯೆಹೋವನು ನಮ್ಮನ್ನು ಬಲಪಡಿಸಲಾಗದಷ್ಟು ದೂರದ ಸ್ಥಳವಾಗಿರದು.

139:​17, 18. ಯೆಹೋವನ ಜ್ಞಾನವು ನಮಗೆ ಆನಂದದಾಯಕವಾಗಿದೆಯೋ? (ಜ್ಞಾನೋಕ್ತಿ 2:10) ಹೌದಾದರೆ, ಎಂದೂ ಬತ್ತಿಹೋಗದ ಆನಂದದ ಚಿಲುಮೆಯನ್ನು ನಾವು ಕಂಡುಕೊಂಡಿದ್ದೇವೆ. ಯೆಹೋವನ ಸಂಕಲ್ಪಗಳು “ಮರಳಿಗಿಂತ ಹೆಚ್ಚಾಗಿವೆ.” ಆತನ ಬಗ್ಗೆ ಕಲಿಯಲಿಕ್ಕಾಗಿ ಯಾವಾಗಲೂ ತುಂಬ ವಿಷಯಗಳಿರುವವು.

139:​23, 24. ನಮ್ಮ ಅಂತರಂಗದಲ್ಲಿ, ‘ಕೇಡಿನ ಮಾರ್ಗ’ ಅಂದರೆ ಅಯೋಗ್ಯವಾದ ಆಲೋಚನೆಗಳು, ಇಚ್ಛೆಗಳು ಮತ್ತು ಪ್ರವೃತ್ತಿಗಳಿವೆಯೊ ಎಂಬುದನ್ನು ಯೆಹೋವನು ಪರೀಕ್ಷಿಸಬೇಕೆಂಬುದು ನಮ್ಮ ಬಯಕೆಯಾಗಿರಬೇಕು. ಇವೆಲ್ಲವುಗಳನ್ನು ಬೇರು ಸಮೇತ ಕಿತ್ತೊಗೆಯಲು ಆತನು ಸಹಾಯಮಾಡುವಂತೆಯೂ ನಾವು ಬಯಸಬೇಕು.

143:​4-7. ನಾವು ಕಠಿನವಾದ ತೊಂದರೆಗಳನ್ನು ಸಹ ಹೇಗೆ ತಾಳಿಕೊಳ್ಳಬಲ್ಲೆವು? ಇದಕ್ಕಾಗಿ ಕೀರ್ತನೆಗಾರನು ನಮಗೆ ಕೀಲಿಕೈಯನ್ನು ಕೊಡುತ್ತಾನೆ: ಯೆಹೋವನ ಕಾರ್ಯಗಳ ಕುರಿತು ನಾವು ಧ್ಯಾನಿಸಬೇಕು, ಆತನ ಕೆಲಸಗಳನ್ನು ಸ್ಮರಿಸುತ್ತಿರಬೇಕು ಮತ್ತು ಸಹಾಯಕ್ಕಾಗಿ ಆತನಿಗೆ ಬೇಡಿಕೊಳ್ಳಬೇಕು.

“ಯಾಹುವಿಗೆ ಸ್ತೋತ್ರ!”

ಕೀರ್ತನೆಗಳ ಪ್ರಥಮ ನಾಲ್ಕು ಸಂಗ್ರಹಗಳ ಪ್ರತಿಯೊಂದು ಭಾಗವು ಯೆಹೋವನನ್ನು ಸ್ತುತಿಸುವ ಒಂದು ಅಭಿವ್ಯಕ್ತಿಯೊಂದಿಗೆ ಕೊನೆಗೊಳ್ಳುತ್ತದೆ. (ಕೀರ್ತನೆ 41:13; 72:19, 20; 89:52; 106:48) ಮತ್ತು ಕೊನೆಯ ಸಂಗ್ರಹವು ಸಹ ಹಾಗೆಯೇ ಅಂತ್ಯಗೊಳ್ಳುತ್ತದೆ. ಕೀರ್ತನೆ 150:6 ಹೇಳುವುದು, “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ!” ಇದು ಖಂಡಿತವಾಗಿಯೂ ದೇವರ ಹೊಸ ಲೋಕದಲ್ಲಿ ಒಂದು ವಾಸ್ತವಾಂಶವಾಗಲಿರುವುದು.

ಆ ಹರ್ಷಾನಂದದ ಸಮಯವನ್ನು ನಾವು ಎದುರುನೋಡುತ್ತಿರುವಾಗ, ಸತ್ಯ ದೇವರನ್ನು ಮಹಿಮೆಪಡಿಸಲು ಮತ್ತು ಆತನ ನಾಮವನ್ನು ಸ್ತುತಿಸಲು ನಮಗೆ ಸಾಕಷ್ಟು ಕಾರಣಗಳಿವೆ. ನಾವು ಯೆಹೋವನನ್ನು ಅರಿತಿರುವುದರಿಂದ ಮತ್ತು ಆತನೊಂದಿಗೆ ನಮಗೊಂದು ಉತ್ತಮ ಸಂಬಂಧವಿರುವುದರಿಂದ ಅನುಭವಿಸುವ ಸಂತೋಷದ ಕುರಿತು ನೆನಸುವಾಗ ಕೃತಜ್ಞತೆ ತುಂಬಿದ ಹೃದಯದಿಂದ ಆತನನ್ನು ಸ್ತುತಿಸಲು ನಾವು ಪ್ರೇರಿಸಲ್ಪಡುವುದಿಲ್ಲವೇ? (w06 9/1)

[ಪುಟ 19ರಲ್ಲಿರುವ ಚಿತ್ರ]

ಯೆಹೋವನ ಅದ್ಭುತ ಕಾರ್ಯಗಳು ವಿಸ್ಮಯಕರವಾಗಿವೆ

[ಪುಟ 20ರಲ್ಲಿರುವ ಚಿತ್ರ]

ಯೆಹೋವನ ಸಂಕಲ್ಪಗಳು “ಮರಳಿಗಿಂತ ಹೆಚ್ಚಾಗಿವೆ”