ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿದ್ದೀರಿ’

‘ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿದ್ದೀರಿ’

‘ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿದ್ದೀರಿ’

“ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು [ಯೆಹೋವನು] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ [ಯೆಹೋವನು] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.”​—⁠ಯಾಕೋಬ 5:⁠11.

ಹಾರಾಲ್ಟ್‌ ಆಪ್ಟ್‌ ಎಂಬವರು ಯೆಹೋವನ ಸಾಕ್ಷಿಯಾಗಿ ಒಂದು ವರ್ಷವೂ ಆಗಿರಲಿಲ್ಲ. ಅಷ್ಟರಲ್ಲೇ ಹಿಟ್ಲರನ ಸೈನ್ಯವು, ಉತ್ತರ ಪೋಲೆಂಡ್‌ನಲ್ಲಿರುವ ಡಾಂಟ್ಸಿಗ್‌ (ಈಗ ಡಾನ್ಸ್ಕ್‌) ಎಂಬ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತು. ಆಗ ಅಲ್ಲಿನ ಸತ್ಯ ಕ್ರೈಸ್ತರ ಪರಿಸ್ಥಿತಿಯು ಕಷ್ಟಕರ ಹಾಗೂ ಅಪಾಯಕರವಾಯಿತು. ಹಾರಾಲ್ಟ್‌ ತನ್ನ ಧರ್ಮವನ್ನು ತ್ಯಜಿಸುತ್ತಾನೆಂದು ತಿಳಿಸುವ ಒಂದು ಡಾಕ್ಯುಮೆಂಟ್‌ಗೆ ಸಹಿಹಾಕುವಂತೆ ಗೆಸ್ಟಾಪೊ ಸೈನಿಕರು ಅವನನ್ನು ಒತ್ತಾಯಿಸಿದರೂ ಅವನು ಹಾಗೆ ಮಾಡಲು ನಿರಾಕರಿಸಿದನು. ಇದಕ್ಕೋಸ್ಕರ ಕೆಲವು ವಾರಗಳನ್ನು ಸೆರೆಯಲ್ಲಿ ಕಳೆದ ಬಳಿಕ, ಅವನನ್ನು ಸಾಕ್ಸನ್‌ಹೌಸನ್‌ ಸೆರೆಶಿಬಿರಕ್ಕೆ ಕಳುಹಿಸಲಾಯಿತು. ಅಲ್ಲಿ ಅವನನ್ನು ಆಗಾಗ ಬೆದರಿಸಲಾಯಿತು ಮತ್ತು ಹೊಡೆಯಲಾಯಿತು. ಒಬ್ಬ ಆಫೀಸರನು ಸ್ಮಶಾನಗಾರದ ಹೊಗೆಕೊಳವಿಗೆ ಬೆರಳುತೋರಿಸುತ್ತಾ ಹಾರಾಲ್ಟ್‌ಗೆ ಹೇಳಿದ್ದು: “ನೀನು ನಿನ್ನ ಧರ್ಮವನ್ನು ಬಿಡದಿದ್ದರೆ, 14 ದಿನಗಳೊಳಗೆ ಅಲ್ಲಿಂದ ಮೇಲೇರಿ ನಿನ್ನ ಯೆಹೋವನ ಬಳಿ ಸೇರುವಿ.”

2 ಹಾರಾಲ್ಟ್‌ ಅನ್ನು ದಸ್ತಗಿರಿಮಾಡಲಾದ ಸಮಯದಲ್ಲಿ, ಅವನ ಹೆಂಡತಿ ಎಲ್ಸಾ ಅವರ ಹತ್ತು ತಿಂಗಳ ಹೆಣ್ಣುಮಗುವಿಗೆ ಇನ್ನೂ ಎದೆಹಾಲುಣಿಸುತ್ತಿದ್ದಳು. ಆದರೂ ಗೆಸ್ಟಾಪೊ ಸೈನಿಕರು ಎಲ್ಸಾಳಿಗೆ ವಿನಾಯಿತಿ ಕೊಡಲಿಲ್ಲ. ಸ್ವಲ್ಪದರಲ್ಲೇ ಮಗುವನ್ನು ಅವಳಿಂದ ಕಸಿದುಕೊಳ್ಳಲಾಯಿತು ಮತ್ತು ಅವಳನ್ನು ಔಷ್‌ವಿಟ್ಸ್‌ನ ಸಂಹಾರ ಶಿಬಿರಕ್ಕೆ ಕಳುಹಿಸಲಾಯಿತು. ಆದರೂ ಅವಳು ಮತ್ತು ಹಾರಾಲ್ಟ್‌ ಹಲವಾರು ವರ್ಷಗಳ ವರೆಗೆ ಸೆರೆಶಿಬಿರಗಳಲ್ಲಿ ಬದುಕಿ ಉಳಿಯಲು ಶಕ್ತರಾದರು. ಅವರು ಹೇಗೆ ತಾಳಿಕೊಂಡರೆಂಬುದರ ಬಗ್ಗೆ ನೀವು ಹೆಚ್ಚನ್ನು, 1980 ಎಪ್ರಿಲ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿ ಓದಬಲ್ಲಿರಿ. ಹಾರಾಲ್ಟ್‌ ಬರೆದುದು: “ದೇವರಲ್ಲಿನ ನನ್ನ ನಂಬಿಕೆಗೋಸ್ಕರ ನನ್ನ ಜೀವನದ ಒಟ್ಟು 14 ವರ್ಷಗಳನ್ನು ಸೆರೆಶಿಬಿರಗಳಲ್ಲಿ ಮತ್ತು ಸೆರೆಮನೆಗಳಲ್ಲಿ ಕಳೆದಿದ್ದೇನೆ. ‘ಇದೆಲ್ಲವನ್ನು ತಾಳಿಕೊಳ್ಳುವುದರಲ್ಲಿ ನಿಮ್ಮ ಹೆಂಡತಿ ಸಹಾಯಮಾಡಿದ್ದಾರೊ?’ ಎಂದು ನನ್ನನ್ನು ಎಷ್ಟೋ ಮಂದಿ ಕೇಳಿದ್ದಾರೆ. ಖಂಡಿತವಾಗಿಯೂ! ಅವಳು ಎಂದಿಗೂ ತನ್ನ ನಂಬಿಕೆಯನ್ನು ರಾಜಿಮಾಡಿಕೊಳ್ಳುವುದಿಲ್ಲ ಎಂದು ನನಗೆ ಆರಂಭದಿಂದಲೇ ಗೊತ್ತಿತ್ತು, ಮತ್ತು ಈ ಅರಿವು ನನಗೆ ಪುಷ್ಟಿಕೊಟ್ಟಿತು. ನಾನು ರಾಜಿಮಾಡಿ ಬಿಡುಗಡೆಹೊಂದಿದ್ದೇನೆಂದು ತಿಳಿದುಕೊಳ್ಳುವುದಕ್ಕಿಂತಲೂ ನಾನು ನಂಬಿಗಸ್ತನಾಗಿ ಸಾವನ್ನಪ್ಪುವುದನ್ನು ನೋಡಲು ಇಷ್ಟಪಡುವಳೆಂದು ನನಗೆ ಗೊತ್ತಿತ್ತು. . . . ಎಲ್ಸಾ ಕೂಡ ಜರ್ಮನಿಯ ಸೆರೆಶಿಬಿರಗಳಲ್ಲಿ ಕಳೆದಂಥ ವರ್ಷಗಳಲ್ಲಿ ಅನೇಕ ಕಷ್ಟಗಳನ್ನು ತಾಳಿಕೊಂಡಳು.”

3 ಹಲವಾರು ಮಂದಿ ಸಾಕ್ಷಿಗಳು, ಬಾಧೆಯನ್ನು ಸಹಿಸಿಕೊಳ್ಳುವುದು ನಿಶ್ಚಯವಾಗಿಯೂ ಸುಲಭವಲ್ಲವೆಂಬ ಮಾತಿಗೆ ಸಾಕ್ಷ್ಯಕೊಡಬಲ್ಲರು. ಈ ಕಾರಣಕ್ಕಾಗಿಯೇ ಬೈಬಲ್‌ ಎಲ್ಲ ಕ್ರೈಸ್ತರಿಗೆ ಸಲಹೆಕೊಡುವುದು: “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ [ಯೆಹೋವನ] ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿಮಾಡಿಕೊಳ್ಳಿರಿ.” (ಯಾಕೋಬ 5:10) ಇತಿಹಾಸದಾದ್ಯಂತ ದೇವರ ಅನೇಕ ಸೇವಕರನ್ನು ಕಾರಣವಿಲ್ಲದೆ ಹಿಂಸಿಸಲಾಗಿದೆ. ಮಹಾ ‘ಮೇಘದೋಪಾದಿಯಲ್ಲಿರುವ ಈ ಸಾಕ್ಷಿಗಳ’ ಮಾದರಿಗಳು, ನಮ್ಮ ಕ್ರೈಸ್ತ ಓಟವನ್ನು ನಾವು ತಾಳ್ಮೆಯಿಂದ ಓಡುತ್ತಾ ಇರುವಂತೆ ಉತ್ತೇಜಿಸಬಲ್ಲವು.​—⁠ಇಬ್ರಿಯ 11:​32-38; 12:⁠1.

4 ಬೈಬಲ್‌ ದಾಖಲೆಯಲ್ಲಿ, ಯೋಬನು ತಾಳ್ಮೆಯ ಮಾದರಿಯಾಗಿ ಎದ್ದುನಿಲ್ಲುತ್ತಾನೆ. ಯಾಕೋಬನು ಬರೆದುದು: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ [ಯೆಹೋವನು] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ [ಯೆಹೋವನು] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ಯೋಬನ ಅನುಭವವು, ಯೆಹೋವನು ಯಾರನ್ನು ಆಶೀರ್ವದಿಸಲಿದ್ದಾನೊ ಆ ನಂಬಿಗಸ್ತರಿಗಾಗಿ ಕಾದಿರುವಂಥ ಬಹುಮಾನದ ನಸುನೋಟವನ್ನು ಕೊಡುತ್ತದೆ. ಹೆಚ್ಚು ಪ್ರಾಮುಖ್ಯವಾಗಿ, ಕಷ್ಟಗಳ ಸಮಯಗಳಲ್ಲಿ ನಮಗೆ ಪ್ರಯೋಜನವಾಗುವಂಥ ಸತ್ಯಗಳನ್ನು ಅದು ಪ್ರಕಟಪಡಿಸುತ್ತದೆ. ಯೋಬನ ಪುಸ್ತಕವು ಈ ಪ್ರಶ್ನೆಗಳಿಗೆ ಉತ್ತರಕೊಡುವಂತೆ ನಮಗೆ ಸಹಾಯಮಾಡುತ್ತದೆ: ಪರೀಕ್ಷೆಗಳನ್ನು ಅನುಭವಿಸುತ್ತಿರುವಾಗ, ಅದರಲ್ಲಿ ಒಳಗೂಡಿರುವ ಅತ್ಯಾವಶ್ಯಕ ವಿವಾದಾಂಶಗಳನ್ನು ನಾವೇಕೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು? ತಾಳಿಕೊಳ್ಳುವಂತೆ ಯಾವ ಗುಣಗಳು ಮತ್ತು ಮನೋಭಾವಗಳು ನಮಗೆ ಸಹಾಯಮಾಡುತ್ತವೆ? ಬಾಧೆಗೊಳಗಾಗಿರುವ ಜೊತೆ ಕ್ರೈಸ್ತರನ್ನು ನಾವು ಹೇಗೆ ಬಲಪಡಿಸಬಲ್ಲೆವು?

ಒಳಗೂಡಿರುವ ವಿವಾದಾಂಶಗಳನ್ನು ಗ್ರಹಿಸುವುದು

5 ಕಷ್ಟಗಳನ್ನು ಎದುರಿಸುತ್ತಿರುವಾಗ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ನಾವು ಒಳಗೂಡಿರುವ ಎಲ್ಲ ವಿವಾದಾಂಶಗಳನ್ನು ಗ್ರಹಿಸಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದಲ್ಲಿ, ವೈಯಕ್ತಿಕ ಸಮಸ್ಯೆಗಳು ನಮ್ಮ ಆಧ್ಯಾತ್ಮಿಕ ದೃಷ್ಟಿಯನ್ನು ಮೊಬ್ಬುಗೊಳಿಸಬಲ್ಲವು. ದೇವರಿಗೆ ನಿಷ್ಠರಾಗಿರುವುದರ ವಿವಾದಾಂಶವು ಅತಿ ಪ್ರಧಾನವಾದದ್ದಾಗಿದೆ. ನಮ್ಮ ಸ್ವರ್ಗೀಯ ತಂದೆಯು ಮಾಡುವಂಥ ಈ ಮನವಿಯನ್ನು ನಾವು ವೈಯಕ್ತಿಕವಾಗಿ ಮನಸ್ಸಿಗೆ ತೆಗೆದುಕೊಳ್ಳಬಲ್ಲೆವು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋಕ್ತಿ 27:11) ಇದೆಂಥ ಅಪೂರ್ವ ಸನ್ಮಾನವಾಗಿದೆ! ನಮಗೆ ದುರ್ಬಲತೆಗಳು ಮತ್ತು ಅಪರಿಪೂರ್ಣತೆಗಳಿದ್ದರೂ ನಮ್ಮ ಸೃಷ್ಟಿಕರ್ತನನ್ನು ನಾವು ಸಂತೋಷಪಡಿಸಸಾಧ್ಯವಿದೆ. ಯೆಹೋವನಿಗಾಗಿರುವ ನಮ್ಮ ಪ್ರೀತಿಯು, ಪರೀಕ್ಷೆಗಳನ್ನು ಮತ್ತು ಪ್ರಲೋಭನೆಗಳನ್ನು ಎದುರಿಸಿನಿಲ್ಲುವಂತೆ ಮಾಡುವಾಗ ನಾವು ಯೆಹೋವನನ್ನು ಸಂತೋಷಪಡಿಸುತ್ತೇವೆ. ನಿಜವಾದ ಕ್ರೈಸ್ತ ಪ್ರೀತಿಯು ಎಲ್ಲವನ್ನು ತಾಳಿಕೊಳ್ಳುತ್ತದೆ. ಅದು ಎಂದಿಗೂ ಬಿದ್ದುಹೋಗುವುದಿಲ್ಲ.​—⁠1 ಕೊರಿಂಥ 13:​7, 8.

6 ಯೆಹೋವನನ್ನು ದೂರುವವನು ಇಲ್ಲವೆ ಮೂದಲಿಸುವವನು ಸೈತಾನನಾಗಿದ್ದಾನೆಂದು ಯೋಬ ಪುಸ್ತಕವು ಸ್ಪಷ್ಟವಾಗಿ ಗುರುತಿಸುತ್ತದೆ. ಅದು, ಈ ಅದೃಶ್ಯ ಶತ್ರುವಿನ ದುಷ್ಟ ಸ್ವಭಾವ ಮತ್ತು ದೇವರೊಂದಿಗಿನ ನಮ್ಮ ಸಂಬಂಧವನ್ನು ಕಡಿದುಹಾಕಲು ಅವನಿಗಿರುವ ದುರಾಸೆಯನ್ನು ಸಹ ಪ್ರಕಟಪಡಿಸುತ್ತದೆ. ಯೋಬನ ಪ್ರಕರಣದಲ್ಲಿ ದೃಷ್ಟಾಂತಿಸಲ್ಪಟ್ಟಂತೆ, ಮೂಲಭೂತವಾಗಿ ಸೈತಾನನು ಯೆಹೋವನ ಎಲ್ಲ ಸೇವಕರಿಗೆ ಸ್ವಾರ್ಥಪರ ಉದ್ದೇಶಗಳಿವೆಯೆಂಬ ಆರೋಪಹೊರಿಸುತ್ತಾನೆ ಮತ್ತು ದೇವರಿಗಾಗಿರುವ ಅವರ ಪ್ರೀತಿಯು ತಣ್ಣಗಾಗಬಲ್ಲದೆಂದು ಸಾಬೀತುಪಡಿಸಲು ಪ್ರಯತ್ನಿಸುತ್ತಾನೆ. ಅವನು ಸಾವಿರಾರು ವರ್ಷಗಳಿಂದ ದೇವರನ್ನು ಮೂದಲಿಸುತ್ತಾ ಇದ್ದಾನೆ. ಸೈತಾನನು ಸ್ವರ್ಗದಿಂದ ಹೊರದೊಬ್ಬಲ್ಪಟ್ಟಾಗ, ಪರಲೋಕದಿಂದ ಬಂದ ಒಂದು ಶಬ್ದವು ಅವನನ್ನು, “ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು” ಎಂದು ವರ್ಣಿಸಿತು. (ಪ್ರಕಟನೆ 12:10) ನಾವು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವಾಗ ಅವನ ಆರೋಪಗಳೆಲ್ಲವೂ ಆಧಾರವಿಲ್ಲದವುಗಳೆಂದು ತೋರಿಸಬಲ್ಲೆವು.

7 ನಮಗೆ ಎದುರಾಗುವ ಯಾವುದೇ ಸಂಕಷ್ಟವನ್ನು ಸೈತಾನನು ಬಳಸುತ್ತಾ, ನಮ್ಮನ್ನು ಯೆಹೋವನಿಂದ ದೂರಮಾಡಲು ಪ್ರಯತ್ನಿಸುವನೆಂಬುದನ್ನು ನಾವು ನೆನಪಿನಲ್ಲಿಡಬೇಕು. ಅವನು ಯೇಸುವನ್ನು ಯಾವಾಗ ಪ್ರಲೋಭಿಸಿದ್ದನು? ಅನೇಕ ದಿನಗಳ ಉಪವಾಸದಿಂದಾಗಿ ಯೇಸು ಹಸಿದಿದ್ದಾಗಲೇ. (ಲೂಕ 4:​1-3) ಆದರೆ ಯೇಸುವಿನ ಆಧ್ಯಾತ್ಮಿಕ ಬಲವು ಅವನು ಪಿಶಾಚನ ಪ್ರಲೋಭನೆಗಳನ್ನು ದೃಢವಾಗಿ ತಿರಸ್ಕರಿಸಲು ಸಾಧ್ಯಗೊಳಿಸಿತು. ರೋಗದಿಂದಾಗಲಿ, ವೃದ್ಧಾಪ್ಯದಿಂದಾಗಲಿ ಉಂಟಾಗಿರುವ ಯಾವುದೇ ಶಾರೀರಿಕ ದೌರ್ಬಲ್ಯವನ್ನು ಆಧ್ಯಾತ್ಮಿಕ ಬಲದಿಂದ ಪ್ರತಿರೋಧಿಸುವುದು ಎಷ್ಟು ಪ್ರಾಮುಖ್ಯ! “ನಮ್ಮ ದೇಹವು ನಾಶವಾಗುತ್ತಾ ಇದ್ದರೂ” ನಾವು ಬಿಟ್ಟುಕೊಡುವುದಿಲ್ಲ ಏಕೆಂದರೆ “ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.”​—⁠2 ಕೊರಿಂಥ 4:⁠16.

8 ಅಷ್ಟುಮಾತ್ರವಲ್ಲದೆ, ನಕಾರಾತ್ಮಕ ಭಾವನೆಗಳು ಒಬ್ಬ ವ್ಯಕ್ತಿಗೆ ಆಧ್ಯಾತ್ಮಿಕ ಹಾನಿಯನ್ನು ಮಾಡಬಲ್ಲವು. ‘ಯೆಹೋವನು ಈ ಸನ್ನಿವೇಶವನ್ನು ಏಕೆ ಅನುಮತಿಸುತ್ತಾನೆ?’ ಎಂದು ಒಬ್ಬನು ಸೋಜಿಗಪಡಬಹುದು. ಅಥವಾ ಒಬ್ಬನು ದಯಾಹೀನ ರೀತಿಯಲ್ಲಿ ಉಪಚರಿಸಲ್ಪಟ್ಟಾಗ, ‘ಒಬ್ಬ ಸಹೋದರನಾಗಿದ್ದು ಅವನು ನನ್ನೊಟ್ಟಿಗೆ ಹೀಗೇಕೆ ನಡೆದುಕೊಂಡನು?’ ಎಂದು ಅವನು ಕೇಳಬಹುದು. ಇಂಥ ಭಾವನೆಗಳು ನಾವು ಪ್ರಮುಖ ವಿವಾದಾಂಶಗಳನ್ನು ಅಲಕ್ಷಿಸಿ, ಕೇವಲ ನಮ್ಮ ವೈಯಕ್ತಿಕ ಪರಿಸ್ಥಿತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಮಾಡಬಹುದು. ಯೋಬನ ಕಾಯಿಲೆಯು ಶಾರೀರಿಕ ಹಾನಿಯನ್ನು ಮಾಡಿದಂತೆಯೇ, ತಪ್ಪು ವಿಚಾರಗಳಿದ್ದ ತನ್ನ ಮೂವರು ಸಂಗಡಿಗರ ವಿಷಯದಲ್ಲಿ ಅವನ ಹತಾಶೆಯು ಭಾವನಾತ್ಮಕ ಹಾನಿಯನ್ನು ಮಾಡಿತೆಂದು ತೋರುತ್ತದೆ. (ಯೋಬ 16:20; 19:⁠2) ಅದೇ ರೀತಿಯಲ್ಲಿ, ಅಪೊಸ್ತಲ ಪೌಲನು ಸೂಚಿಸಿದ್ದೇನೆಂದರೆ ದೀರ್ಘ ಸಮಯದವರೆಗೆ ಮನಸ್ಸಿನಲ್ಲಿ ಕೋಪವನ್ನಿಟ್ಟುಕೊಳ್ಳುವುದು, “ಸೈತಾನನಿಗೆ ಅವಕಾಶಕೊಡ”ಬಲ್ಲದು. (ಎಫೆಸ 4:​26, 27) ಕ್ರೈಸ್ತರು ಬೇರೆಯವರ ಮೇಲೆ ಹತಾಶೆ ಇಲ್ಲವೆ ಕೋಪವನ್ನು ತೋರಿಸುವ ಬದಲಿಗೆ, ಅಥವಾ ತಮಗಾದ ಅನ್ಯಾಯದ ಮೇಲೆ ವಿಪರೀತ ಗಮನಕೇಂದ್ರೀಕರಿಸುವ ಬದಲಿಗೆ ಯೇಸುವನ್ನು ಅನುಕರಿಸುತ್ತಾ, “ನ್ಯಾಯವಾಗಿ ತೀರ್ಪುಮಾಡುವಾತನಿಗೆ” ಅಂದರೆ ಯೆಹೋವ ದೇವರಿಗೆ ತಮ್ಮನ್ನೇ ‘ಒಪ್ಪಿಸಿಕೊಳ್ಳಬೇಕು.’ (1 ಪೇತ್ರ 2:21-23) ಯೇಸುವಿನ ‘ಭಾವವನ್ನು’ ಅಂದರೆ ಮನೋವೃತ್ತಿಯನ್ನು ಹೊಂದಿರುವುದು, ಸೈತಾನನ ದಾಳಿಗಳ ವಿರುದ್ಧ ಒಂದು ದೊಡ್ಡ ತಡೆಯಾಗಿರಬಲ್ಲದು.​—⁠1 ಪೇತ್ರ 4:⁠1.

9 ಎಲ್ಲದ್ದಕ್ಕಿಂತಲೂ ಮಿಗಿಲಾಗಿ, ನಮ್ಮ ಸಮಸ್ಯೆಗಳು ದೇವರ ಕೋಪದ ಪುರಾವೆಯಾಗಿವೆ ಎಂಬ ನೋಟ ನಮಗೆಂದಿಗೂ ಇರಬಾರದು. ಯೋಬನಿಗಿದ್ದ ಈ ತಪ್ಪಭಿಪ್ರಾಯವು, ಅವನ ನಾಮಮಾತ್ರದ ಸಾಂತ್ವನಗಾರರ ಕಠೋರ ಮಾತುಗಳ ದಾಳಿಯ ಸಮಯದಲ್ಲಿ ಅವನಿಗೆ ಬಹಳಷ್ಟು ನೋವನ್ನುಂಟುಮಾಡಿತು. (ಯೋಬ 19:​21, 22) ಬೈಬಲ್‌ ನಮಗೆ ಈ ಆಶ್ವಾಸನೆಕೊಡುತ್ತದೆ: “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ನಮ್ಮ ಮೇಲೆ ಬರುವ ಯಾವುದೇ ಭಾರವನ್ನು ಹೊತ್ತುಕೊಳ್ಳಲು ಸಹಾಯಮಾಡುವ ಮತ್ತು ನಮಗೆದುರಾಗುವ ಯಾವುದೇ ಪ್ರಲೋಭನೆಯನ್ನು ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನೆಂದು ಯೆಹೋವನು ಮಾತುಕೊಡುತ್ತಾನೆ. (ಕೀರ್ತನೆ 55:22; 1 ಕೊರಿಂಥ 10:13) ಸಂಕಷ್ಟದ ಸಮಯಗಳಲ್ಲಿ ದೇವರ ಸಮೀಪಕ್ಕೆ ಬರುವುದರ ಮೂಲಕ ನಾವು ವಿಷಯಗಳನ್ನು ಸರಿಯಾದ ದೃಷ್ಟಿಕೋನದಿಂದ ನೋಡಲು ಮತ್ತು ಪಿಶಾಚನನ್ನು ವಿರೋಧಿಸುವುದರಲ್ಲಿ ಸಫಲರಾಗಲು ಸಾಧ್ಯವಿದೆ.​—⁠ಯಾಕೋಬ 4:​7, 8.

ತಾಳ್ಮೆಗಾಗಿ ಸಹಾಯಕಗಳು

10 ಯೋಬನ ನಾಮಮಾತ್ರದ ಸಾಂತ್ವನಗಾರರ ಮೌಖಿಕ ದೌರ್ಜನ್ಯ ಹಾಗೂ ಅವನ ವಿಪತ್ತಿಗೆ ನಿಜವಾದ ಕಾರಣವೇನೆಂಬುದರ ಬಗ್ಗೆ ಅವನಿಗಿದ್ದ ಸ್ವಂತ ಗೊಂದಲವನ್ನು ಒಳಗೂಡಿಸಿ ಅವನ ಸಂಕಷ್ಟಭರಿತ ಸನ್ನಿವೇಶದಲ್ಲೂ ಅವನು ಸಮಗ್ರತೆಯನ್ನು ಕಾಪಾಡಿಕೊಂಡನು. ಅವನ ತಾಳ್ಮೆಯಿಂದ ನಾವೇನು ಕಲಿಯಬಲ್ಲೆವು? ಯೋಬನ ಯಶಸ್ಸಿಗೆ ಮೂಲಭೂತ ಕಾರಣವು, ಯೆಹೋವನ ಕಡೆಗಿನ ಅವನ ನಂಬಿಗಸ್ತಿಕೆಯಾಗಿತ್ತು ಎಂಬುದು ನಿಸ್ಸಂದೇಹ. ಅವನು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ” ಇದ್ದನು. (ಯೋಬ 1:1) ಅದು ಅವನ ಜೀವನರೀತಿಯಾಗಿತ್ತು. ಸನ್ನಿವೇಶವು ತಟ್ಟನೇ ಏಕೆ ಕೆಟ್ಟುಹೋಯಿತೆಂದು ಯೋಬನಿಗೆ ಅರ್ಥವಾಗದಿದ್ದಾಗಲೂ ಅವನು ಯೆಹೋವನಿಗೆ ಬೆನ್ನುಹಾಕಲಿಲ್ಲ. ಒಳ್ಳೇದಾಗಲಿ, ಕೆಟ್ಟದ್ದಾಗಲಿ ಎಲ್ಲ ಸಮಯದಲ್ಲೂ ದೇವರ ಸೇವೆ ಮಾಡಬೇಕೆಂಬುದು ಯೋಬನ ದೃಢವಾದ ಅಭಿಪ್ರಾಯವಾಗಿತ್ತು.​—⁠ಯೋಬ 1:21; 2:⁠10.

11 ಯೋಬನಿಗಿದ್ದ ಒಳ್ಳೇ ಮನಸ್ಸಾಕ್ಷಿಯಿಂದಾಗಿಯೂ ಅವನಿಗೆ ಸಾಂತ್ವನ ಸಿಕ್ಕಿತು. ಇನ್ನೇನು ಸಾಯಲಿದ್ದೇನೆಂದು ತೋರುತ್ತಿದ್ದ ಸಮಯದಲ್ಲಿ ಅವನಿಗಿದ್ದ ನೆಮ್ಮದಿಯೇನೆಂದರೆ, ಅವನು ಇತರರ ಸಹಾಯಮಾಡಲು ತನ್ನಿಂದಾದುದೆಲ್ಲವನ್ನು ಮಾಡಿದ್ದನು, ಯೆಹೋವನ ನೀತಿಯ ಮಟ್ಟಗಳಿಗೆ ಅಂಟಿಕೊಂಡಿದ್ದನು ಮತ್ತು ಸುಳ್ಳಾರಾಧನೆಯ ಯಾವುದೇ ರೂಪದಿಂದ ದೂರ ಉಳಿದಿದ್ದನು.​—⁠ಯೋಬ 31:​4-11, 26-28.

12 ಯೋಬನಿಗೆ, ಕೆಲವೊಂದು ವಿಧಗಳಲ್ಲಿ ತನ್ನ ದೃಷ್ಟಿಕೋನವನ್ನು ಬದಲಾಯಿಸಲು ಸಹಾಯದ ಅಗತ್ಯವಿತ್ತೆಂಬುದು ನಿಜ. ಆ ಸಹಾಯ ಕೊಡಲ್ಪಟ್ಟಾಗ ಅವನದನ್ನು ನಮ್ರತೆಯಿಂದ ಸ್ವೀಕರಿಸಿದನು. ಇದು ಯಶಸ್ವಿಯಾಗಿ ತಾಳಿಕೊಳ್ಳಲು ಅವನಿಗೆ ಇನ್ನೊಂದು ಕೀಲಿಕೈಯಾಗಿತ್ತು. ಯೋಬನು ಎಲೀಹುವಿನ ವಿವೇಕಯುತ ಸಲಹೆಗೆ ಗೌರವದಿಂದ ಕಿವಿಗೊಟ್ಟನು ಮತ್ತು ಯೆಹೋವನ ತಿದ್ದುಪಾಟಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದನು. ಅವನು ಒಪ್ಪಿಕೊಂಡದ್ದು: “ನನಗೆ ಗೊತ್ತಿಲ್ಲದೆ . . . ಮಾತಾಡಿದ್ದೇನೆ. ಆದಕಾರಣ [ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.” (ಯೋಬ 42:3, 6) ಇನ್ನೂ ರೋಗಪೀಡಿತನಾಗಿದ್ದರೂ, ಅವನ ಯೋಚನಾಧಾಟಿಯಲ್ಲಿ ಮಾಡಲ್ಪಟ್ಟ ಈ ಬದಲಾವಣೆಯು ಅವನನ್ನು ದೇವರ ಹತ್ತಿರಕ್ಕೆ ತಂದಿತ್ತೆಂಬ ವಿಷಯಕ್ಕಾಗಿ ಯೋಬನು ಹರ್ಷಿಸಿದನು. ‘ನೀನು [ಯೆಹೋವನು] ಸಕಲ ಕಾರ್ಯಗಳನ್ನು ನಡಿಸಬಲ್ಲಿಯೆಂದು ತಿಳಿದುಕೊಂಡಿದ್ದೇನೆ’ ಎಂದು ಯೋಬನು ಹೇಳಿದನು. (ಯೋಬ 42:2) ಯೆಹೋವನು ತನ್ನ ಮಹಾ ವೈಭವದ ಕುರಿತಾಗಿ ಕೊಟ್ಟ ವರ್ಣನೆಯಿಂದಾಗಿ, ಸೃಷ್ಟಿಕರ್ತನಿಗೆ ಹೋಲಿಸುವಾಗ ತನ್ನ ಸ್ಥಾನವೇನೆಂಬುದನ್ನು ಯೋಬನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

13 ಕಟ್ಟಕಡೆಗೆ, ಯೋಬನು ಕರುಣೆಯ ಗಮನಾರ್ಹ ಮಾದರಿಯಾಗಿದ್ದಾನೆ. ಅವನ ಸುಳ್ಳು ಸಾಂತ್ವನಗಾರರು ಅವನ ಮನಸ್ಸನ್ನು ಬಹಳಷ್ಟು ನೋಯಿಸಿದ್ದರು. ಆದರೂ ಅವರಿಗೋಸ್ಕರ ಪ್ರಾರ್ಥಿಸುವಂತೆ ಯೆಹೋವನು ಯೋಬನನ್ನು ಕೇಳಿದಾಗ ಅವನು ಹಾಗೆಯೇ ಮಾಡಿದನು. ತದನಂತರ ಯೆಹೋವನು ಯೋಬನ ಆರೋಗ್ಯವನ್ನು ಪುನಃ ಹಿಂದಿನ ಸ್ಥಿತಿಗೆ ತಂದನು. (ಯೋಬ 42:​8, 10) ಹೀಗೆ, ಮನಸ್ಸಿನಲ್ಲಿ ಅಸಮಾಧಾನವನ್ನಿಟ್ಟುಕೊಳ್ಳುವುದು ಅಲ್ಲ ಬದಲಾಗಿ ಪ್ರೀತಿ ಮತ್ತು ಕರುಣೆಯೇ ತಾಳಿಕೊಳ್ಳುವಂತೆ ಸಹಾಯಮಾಡುತ್ತದೆಂದು ಇದರಿಂದ ಸ್ಪಷ್ಟವಾಗುತ್ತದೆ. ಅಸಮಾಧಾನವನ್ನು ಬಿಟ್ಟುಬಿಡುವುದು ನಮ್ಮನ್ನು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸುತ್ತದೆ, ಮತ್ತು ಇದು ಯೆಹೋವನು ಆಶೀರ್ವದಿಸುವಂಥ ಮಾರ್ಗಕ್ರಮವಾಗಿದೆ.​—⁠ಮಾರ್ಕ 11:⁠25.

ನಾವು ತಾಳಿಕೊಳ್ಳುವಂತೆ ಸಹಾಯಮಾಡುವ ವಿವೇಕಿ ಸಲಹೆಗಾರರು

14 ವಿವೇಕಿ ಸಲಹೆಗಾರರು ಎಷ್ಟು ಅಮೂಲ್ಯರಾಗಿದ್ದಾರೆಂಬುದು ಯೋಬನ ವೃತ್ತಾಂತದಿಂದ ನಾವು ಕಲಿಯಬಹುದಾದ ಇನ್ನೊಂದು ಪಾಠವಾಗಿದೆ. ಅಂಥವರು, ‘ಆಪತ್ತಿನ ಸಮಯಕ್ಕಾಗಿ ಹುಟ್ಟಿರುವ’ ಸಹೋದರರಾಗಿರುತ್ತಾರೆ. (ಜ್ಞಾನೋಕ್ತಿ 17:​17, NW) ಆದರೆ ಯೋಬನ ಅನುಭವವು ತೋರಿಸುವಂತೆ ಕೆಲವು ಸಲಹೆಗಾರರು ವಾಸಿಮಾಡುವುದರ ಬದಲು ಘಾಸಿಗೊಳಿಸುತ್ತಾರೆ. ಒಳ್ಳೇ ಸಲಹೆಗಾರನೊಬ್ಬನು ಎಲೀಹುವಿನಂತೆ ಸಹಾನುಭೂತಿ, ಗೌರವ ಮತ್ತು ದಯೆಯನ್ನು ತೋರಿಸಬೇಕು. ಹಿರಿಯರು ಮತ್ತು ಇತರ ಪ್ರೌಢ ಕ್ರೈಸ್ತರು, ಸಮಸ್ಯೆಗಳ ಹೊರೆಯನ್ನು ಹೊತ್ತಿರುವ ಸಹೋದರರ ಯೋಚನಾಧಾಟಿಯನ್ನು ಸರಿಪಡಿಸಬೇಕಾದೀತು, ಮತ್ತು ಇದನ್ನು ಮಾಡುವುದರಲ್ಲಿ ಈ ಸಲಹೆಗಾರರು ಯೋಬನ ಪುಸ್ತಕದಿಂದ ಬಹಳಷ್ಟನ್ನು ಕಲಿಯಬಲ್ಲರು.​—⁠ಗಲಾತ್ಯ 6:1; ಇಬ್ರಿಯ 12:​12, 13.

15 ಎಲೀಹು, ವಿಷಯವನ್ನು ನಿರ್ವಹಿಸಿದ ವಿಧದಿಂದ ನಾವು ಅನೇಕ ಉತ್ತಮ ಪಾಠಗಳನ್ನು ಕಲಿಯಸಾಧ್ಯವಿದೆ. ಯೋಬನ ಮೂವರು ಸಂಗಡಿಗರ ತಪ್ಪು ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಮೊದಲು ಅವನು ದೀರ್ಘಕಾಲದ ವರೆಗೆ ಅವರಿಗೆ ಕಿವಿಗೊಟ್ಟನು. (ಯೋಬ 32:11; ಜ್ಞಾನೋಕ್ತಿ 18:13) ಎಲೀಹು ಯೋಬನ ಹೆಸರನ್ನು ಬಳಸಿ, ಹೀಗೆ ಒಬ್ಬ ಮಿತ್ರನಂತೆ ಅವನನ್ನು ಮಾತಾಡಿಸಿದನು. (ಯೋಬ 33:⁠1) ಆ ಮೂವರು ಸುಳ್ಳು ಸಾಂತ್ವನಗಾರರಂತೆ ಎಲೀಹು, ತಾನು ಯೋಬನಿಗಿಂತ ಶ್ರೇಷ್ಠನಾಗಿದ್ದೇನೆಂದು ಎಣಿಸಲಿಲ್ಲ. ‘ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟಿದ್ದೇನೆ’ ಎಂದವನು ಹೇಳಿದನು. ಯೋಬನ ಕಷ್ಟಗಳನ್ನು ತನ್ನ ವಿಚಾರಹೀನ ಮಾತುಗಳಿಂದ ಇನ್ನಷ್ಟು ಹೆಚ್ಚಿಸಲು ಅವನು ಬಯಸಲಿಲ್ಲ. (ಯೋಬ 33:6, 7; ಜ್ಞಾನೋಕ್ತಿ 12:18) ಎಲೀಹು, ಯೋಬನ ಹಿಂದಿನ ನಡತೆಯನ್ನು ಟೀಕಿಸುವ ಬದಲು ಅವನ ನೀತಿಯನ್ನು ಪ್ರಶಂಸಿಸಿದನು. (ಯೋಬ 33:32) ಇನ್ನೂ ಪ್ರಾಮುಖ್ಯವಾಗಿ, ಎಲೀಹು ವಿಷಯಗಳನ್ನು ದೇವರ ದೃಷ್ಟಿಕೋನದಿಂದ ನೋಡಿದನು, ಮತ್ತು ಯೆಹೋವನು ಎಂದಿಗೂ ಅನ್ಯಾಯದಿಂದ ವರ್ತಿಸನೆಂಬ ವಾಸ್ತವಾಂಶದ ಮೇಲೆ ಯೋಬನು ಗಮನಕೇಂದ್ರೀಕರಿಸುವಂತೆ ಸಹಾಯಮಾಡಿದನು. (ಯೋಬ 34:​10-12) ಯೋಬನು ತನ್ನ ಸ್ವಂತ ನೀತಿಯನ್ನು ತೋರ್ಪಡಿಸಲು ಪ್ರಯತ್ನಿಸದೆ ಯೆಹೋವನಿಗಾಗಿ ಕಾಯುವಂತೆ ಎಲೀಹು ಉತ್ತೇಜಿಸಿದನು. (ಯೋಬ 35:2; 37:​14, 23) ಕ್ರೈಸ್ತ ಹಿರಿಯರು ಮತ್ತು ಇತರರು ಇಂಥ ಪಾಠಗಳಿಂದ ಖಂಡಿತವಾಗಿಯೂ ಪ್ರಯೋಜನ ಪಡೆಯಬಲ್ಲರು.

16 ಎಲೀಫಜ, ಬಿಲ್ದಾದ ಮತ್ತು ಚೋಫರನ ಮನನೋಯಿಸುವ ಮಾತುಗಳು ಎಲೀಹುವಿನ ವಿವೇಕಯುತ ಸಲಹೆಗೆ ತದ್ವಿರುದ್ಧವಾಗಿವೆ. ‘ನನ್ನ ವಿಷಯವಾಗಿ ನೀವು ಯಥಾರ್ಥವನ್ನಾಡಲಿಲ್ಲ’ ಎಂದು ಯೆಹೋವನು ಅವರಿಗಂದನು. (ಯೋಬ 42:7) ತಮ್ಮ ಉದ್ದೇಶಗಳು ಒಳ್ಳೇದಿತ್ತೆಂದು ಅವರು ಹೇಳಿಕೊಂಡಿರಬಹುದಾದರೂ, ನಂಬಿಗಸ್ತರಾದ ಸಂಗಡಿಗರಂತೆ ನಡೆದುಕೊಳ್ಳುವ ಬದಲಿಗೆ ಅವರು ಸೈತಾನನ ಉಪಕರಣಗಳಾಗಿ ಕೆಲಸಮಾಡಿದರು. ಯೋಬನೇ ತನ್ನ ಎಲ್ಲ ವಿಪತ್ತುಗಳಿಗೆ ಜವಾಬ್ದಾರನೆಂದು ಆ ಮೂವರೂ ಆರಂಭದಿಂದಲೇ ಊಹಿಸಿದ್ದರು. (ಯೋಬ 4:7, 8; 8:6; 20:22, 29) ಎಲೀಫಜನಿಗನುಸಾರ, ದೇವರಿಗೆ ತನ್ನ ಸೇವಕರಲ್ಲಿ ಭರವಸೆ ಇಲ್ಲ, ಮತ್ತು ನಾವು ನೀತಿವಂತರಾಗಿರಲಿ ಇಲ್ಲದಿರಲಿ ಆತನಿಗೆ ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲ. (ಯೋಬ 15:15; 22:2, 3) ಯೋಬನು ಮಾಡದೆ ಇದ್ದ ತಪ್ಪುಗಳಿಗಾಗಿ ಎಲೀಫಜನು ಅವನನ್ನು ಸಹ ಆಪಾದಿಸಿದನು. (ಯೋಬ 22:​5, 9) ಇನ್ನೊಂದು ಬದಿಯಲ್ಲಿ, ಎಲೀಹು ಯೋಬನಿಗೆ ಆಧ್ಯಾತ್ಮಿಕ ಸಹಾಯನೀಡಿದನು. ಒಬ್ಬ ಪ್ರೀತಿಪರ ಸಲಹೆಗಾರನ ಗುರಿಯು ಸದಾ ಇದೇ ಆಗಿರಬೇಕು.

17 ಯೋಬನ ಪುಸ್ತಕದಿಂದ ತಾಳ್ಮೆಯ ಕುರಿತು ನಾವು ಕಲಿಯಬಹುದಾದ ಇನ್ನೊಂದು ಪಾಠವಿದೆ. ನಮ್ಮ ಪ್ರೀತಿಯ ದೇವರು ನಮ್ಮ ಸನ್ನಿವೇಶವನ್ನು ಗಮನಿಸುತ್ತಾನೆ ಮತ್ತು ನಮಗೆ ವಿಭಿನ್ನ ರೀತಿಗಳಲ್ಲಿ ಸಹಾಯಮಾಡಲು ಸಿದ್ಧನೂ ಶಕ್ತನೂ ಆಗಿದ್ದಾನೆ. ಈ ಹಿಂದೆ ನಾವು ಎಲ್ಸಾ ಆಪ್ಟ್‌ರವರ ಅನುಭವದ ಕುರಿತು ಓದಿದೆವು. ಅವರು ಕೊನೆಗೆ ಬಂದ ಈ ತೀರ್ಮಾನದ ಬಗ್ಗೆ ಮನನಮಾಡಿರಿ: “ನನ್ನ ದಸ್ತಗಿರಿಯಾಗುವ ಮುಂಚೆ, ನಾನೊಬ್ಬ ಸಹೋದರಿಯ ಪತ್ರವನ್ನು ಓದಿದ್ದೆ. ಅದರಲ್ಲಿ ಅವರು, ಅತಿ ಕಠಿನವಾದ ಪರೀಕ್ಷೆಯ ಸಮಯದಲ್ಲಿ ಯೆಹೋವನ ಆತ್ಮವು ನಿಮ್ಮ ಮೇಲೆ ಒಂದು ರೀತಿಯ ಪ್ರಶಾಂತತೆ ನೆಲೆಸುವಂತೆ ಮಾಡುತ್ತದೆಂದು ಹೇಳಿದ್ದರು. ಈ ಮಾತನ್ನು ಅವರು ಸ್ವಲ್ಪ ಬಣ್ಣಕಟ್ಟಿ ಹೇಳುತ್ತಿದ್ದಾರೆಂದು ನಾನು ನೆನಸಿದೆ. ಆದರೆ ಸ್ವತಃ ನಾನೇ ಪರೀಕ್ಷೆಗಳನ್ನು ಅನುಭವಿಸಿದಾಗ, ಅವರು ಹೇಳಿದ್ದ ಮಾತು ನಿಜವೆಂದು ನನಗೆ ಗೊತ್ತಾಯಿತು. ನಿಜವಾಗಿಯೂ ಅವರು ಹೇಳಿದಂತೆಯೇ ಆಗುತ್ತದೆ. ನಿಮಗೆ ಈ ಅನುಭವ ಆಗಿರದಿದ್ದರೆ, ಅದನ್ನು ಊಹಿಸುವುದು ಕಷ್ಟ. ಆದರೆ ನನಗೆ ಹಾಗೆ ಆಯಿತು, ಯೆಹೋವನು ನಿಶ್ಚಯವಾಗಿಯೂ ಸಹಾಯಮಾಡುತ್ತಾನೆ.” ಸಹಸ್ರಮಾನಗಳ ಹಿಂದೆ ಯೋಬನ ದಿನದಲ್ಲಿ ಯೆಹೋವನು ಏನು ಮಾಡಸಾಧ್ಯವಿತ್ತು ಇಲ್ಲವೆ ಮಾಡಿದನು ಎಂಬುದರ ಬಗ್ಗೆ ಎಲ್ಸಾ ಮಾತಾಡುತ್ತಿರಲಿಲ್ಲ. ಅವರು ನಮ್ಮ ಸಮಯದ ಬಗ್ಗೆ ಮಾತಾಡುತ್ತಿದ್ದರು. ಹೌದು, “ಯೆಹೋವನು ನಿಶ್ಚಯವಾಗಿಯೂ ಸಹಾಯಮಾಡುತ್ತಾನೆ!”

ತಾಳಿಕೊಳ್ಳುವವನು ಧನ್ಯನು

18 ಯೋಬನಿಗಿದ್ದಷ್ಟು ತೀಕ್ಷ್ಣವಾದ ಕಷ್ಟಗಳನ್ನು ನಮ್ಮಲ್ಲಿ ಕೇವಲ ಕೆಲವರಿಗೇ ಎದುರಿಸಬೇಕಾಗಬಹುದು. ಆದರೆ ಈ ವಿಷಯಗಳ ವ್ಯವಸ್ಥೆಯು ನಮ್ಮ ಮೇಲೆ ಯಾವುದೇ ಪರೀಕ್ಷೆಗಳನ್ನು ತರಲಿ, ಯೋಬನಂತೆ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಮಗೆ ಬಲವಾದ ಕಾರಣಗಳಿವೆ. ವಾಸ್ತವದಲ್ಲಿ, ತಾಳ್ಮೆಯು ಯೋಬನ ಬದುಕನ್ನು ಸಂಪನ್ನಗೊಳಿಸಿತು. ಅದು ಅವನನ್ನು ಸಿದ್ಧಿಗೊಳಿಸಿ ಪೂರ್ಣಗೊಳಿಸಿತು. (ಯಾಕೋಬ 1:​2-4) ಅದು ದೇವರೊಂದಿಗಿನ ಅವನ ಸಂಬಂಧವನ್ನು ಬಲಪಡಿಸಿತು. “ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು, ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು” ಎಂದು ಯೋಬನು ದೃಢೀಕರಿಸಿದನು. (ಯೋಬ 42:5) ಯೋಬನ ಸಮಗ್ರತೆಯನ್ನು ಮುರಿಯಲು ಅಶಕ್ತನಾದದ್ದರಿಂದ ಸೈತಾನನು ಒಬ್ಬ ಸುಳ್ಳುಗಾರನೆಂದು ಸಾಬೀತಾಯಿತು. ನೂರಾರು ವರ್ಷಗಳ ಬಳಿಕವೂ, ಯೆಹೋವನು ತನ್ನ ಸೇವಕನಾದ ಯೋಬನನ್ನು ಸದಾಚಾರದ ಇಲ್ಲವೆ ನೀತಿಯ ಉದಾಹರಣೆಯಾಗಿ ಉಲ್ಲೇಖಿಸಿದನು. (ಯೆಹೆಜ್ಕೇಲ 14:14) ಅವನ ಸಮಗ್ರತೆ ಮತ್ತು ತಾಳ್ಮೆಯ ದಾಖಲೆಯು ಇಂದು ಸಹ ದೇವಜನರಿಗೆ ಸ್ಫೂರ್ತಿಕೊಡುತ್ತದೆ.

19 ಯಾಕೋಬನು ಪ್ರಥಮ ಶತಮಾನದ ಕ್ರೈಸ್ತರಿಗೆ ತಾಳ್ಮೆಯ ಕುರಿತು ಬರೆದಾಗ, ಅದು ಕೊಡುವಂಥ ತೃಪ್ತಿಗೆ ಸೂಚಿಸಿದನು. ಮತ್ತು ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಹೇರಳ ಬಹುಮಾನಕೊಡುತ್ತಾನೆಂಬುದನ್ನು ನೆನಪುಹುಟ್ಟಿಸಲು ಅವನು ಯೋಬನ ಮಾದರಿಯನ್ನು ಉಪಯೋಗಿಸಿದನು. (ಯಾಕೋಬ 5:11) ಯೋಬ 42:12ರಲ್ಲಿ ನಾವು ಹೀಗೆ ಓದುತ್ತೇವೆ: “ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು.” ಯೋಬನು ಏನನ್ನು ಕಳೆದುಕೊಂಡನೊ ಅದನ್ನು ದೇವರು ಅವನಿಗೆ ಇಮ್ಮಡಿಯಾಗಿ ಕೊಟ್ಟನು ಮತ್ತು ಅವನು ದೀರ್ಘಕಾಲ ಸಂತೋಷದಿಂದ ಜೀವಿಸಿದನು. (ಯೋಬ 42:​16, 17) ಅದೇ ರೀತಿಯಲ್ಲಿ ಈ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ನಾವು ತಾಳಿಕೊಳ್ಳಬಹುದಾದ ಯಾವುದೇ ನೋವು, ಕಷ್ಟ ಇಲ್ಲವೆ ದುಃಖವನ್ನು ದೇವರ ನೂತನ ಲೋಕದಲ್ಲಿ ಅಳಿಸಿಹಾಕಲಾಗುವುದು ಮತ್ತು ಮರೆಯಲಾಗುವುದು. (ಯೆಶಾಯ 65:17; ಪ್ರಕಟನೆ 21:4) ನಾವು ಯೋಬನ ತಾಳ್ಮೆಯ ಬಗ್ಗೆ ಕೇಳಿದ್ದೇವೆ ಮತ್ತು ಯೆಹೋವನ ಸಹಾಯದಿಂದ ಅವನ ಮಾದರಿಯನ್ನು ಅನುಕರಿಸಲು ದೃಢನಿರ್ಧಾರದಿಂದಿದ್ದೇವೆ. ಬೈಬಲ್‌ ವಾಗ್ದಾನಿಸುವುದು: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಸ್ವಾಮಿಯು [ಯೆಹೋವನು] ತನ್ನನ್ನು ಪ್ರೀತಿಸುವವರಿಗೆ ಇದನ್ನು ವಾಗ್ದಾನಮಾಡಿದ್ದಾನೆ.”​—⁠ಯಾಕೋಬ 1:⁠12. (w06 8/15)

ನೀವೇನು ಉತ್ತರ ಕೊಡುವಿರಿ?

• ಯೆಹೋವನ ಮನಸ್ಸನ್ನು ನಾವು ಹೇಗೆ ಸಂತೋಷಪಡಿಸಬಲ್ಲೆವು?

• ನಮ್ಮ ಸಮಸ್ಯೆಗಳು ದೇವರ ಕೋಪದ ಪುರಾವೆಯಾಗಿದೆ ಎಂದು ನಾವೇಕೆ ತೀರ್ಮಾನಿಸಬಾರದು?

• ಯೋಬನಿಗೆ ತಾಳಿಕೊಳ್ಳುವಂತೆ ಸಹಾಯಮಾಡಿದ ಅಂಶಗಳು ಯಾವುವು?

• ಜೊತೆ ವಿಶ್ವಾಸಿಗಳನ್ನು ಬಲಪಡಿಸುವುದರಲ್ಲಿ ನಾವು ಎಲೀಹುವನ್ನು ಹೇಗೆ ಅನುಕರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. ಪೋಲೆಂಡ್‌ನಲ್ಲಿದ್ದ ಒಂದು ದಂಪತಿಯು ಯಾವ ಪರೀಕ್ಷೆಯನ್ನು ಎದುರಿಸಿತು?

3, 4. (ಎ) ಕ್ರೈಸ್ತರು ತಾಳಿಕೊಳ್ಳುವಂತೆ ಯಾರ ಮಾದರಿಗಳು ಉತ್ತೇಜಿಸಬಲ್ಲವು? (ಬಿ) ಯೋಬನ ಅನುಭವವನ್ನು ಪರಿಶೀಲಿಸುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುವುದು ಏಕೆ?

5. ನಾವು ಪರೀಕ್ಷೆಗಳನ್ನು ಮತ್ತು ಪ್ರಲೋಭನೆಗಳನ್ನು ಎದುರಿಸುವಾಗ ಮನಸ್ಸಿನಲ್ಲಿಡಬೇಕಾದ ಪ್ರಮುಖ ವಿವಾದಾಂಶವು ಯಾವುದು?

6. ಸೈತಾನನು ಯೆಹೋವನನ್ನು ಹೇಗೆ ಮೂದಲಿಸುತ್ತಾನೆ, ಮತ್ತು ಅವನ ಮೂದಲಿಸುವಿಕೆಗಳ ವ್ಯಾಪ್ತಿ ಏನಾಗಿದೆ?

7. ನಾವು ಶಾರೀರಿಕ ದೌರ್ಬಲ್ಯವನ್ನು ಹೇಗೆ ಪ್ರತಿರೋಧಿಸಬಹುದು?

8. (ಎ) ನಕಾರಾತ್ಮಕ ಭಾವನೆಗಳು ಶಿಥಿಲಗೊಳಿಸುವಂಥ ಯಾವ ಪರಿಣಾಮವನ್ನು ಬೀರಬಲ್ಲವು? (ಬಿ) ಯೇಸುವಿಗೆ ಯಾವ ಮನೋವೃತ್ತಿಯಿತ್ತು?

9. ನಾವು ಹೊತ್ತುಕೊಳ್ಳಬೇಕಾದ ಭಾರಗಳು ಇಲ್ಲವೆ ಎದುರಿಸಬೇಕಾದ ಪ್ರಲೋಭನೆಗಳ ಬಗ್ಗೆ ದೇವರು ನಮಗೆ ಯಾವ ಆಶ್ವಾಸನೆ ಕೊಡುತ್ತಾನೆ?

10, 11. (ಎ) ಯೋಬನಿಗೆ ತಾಳಿಕೊಳ್ಳುವಂತೆ ಯಾವುದು ಸಹಾಯಮಾಡಿತು? (ಬಿ) ಯೋಬನಿಗಿದ್ದ ಒಳ್ಳೇ ಮನಸ್ಸಾಕ್ಷಿಯು ಅವನಿಗೆ ಹೇಗೆ ಸಹಾಯಮಾಡಿತು?

12. ಯೋಬನು ಎಲೀಹುವಿನಿಂದ ಪಡೆದ ಸಹಾಯಕ್ಕೆ ಯಾವ ಪ್ರತಿಕ್ರಿಯೆ ತೋರಿಸಿದನು?

13. ಕರುಣೆ ತೋರಿಸುವುದು ಯೋಬನಿಗೆ ಹೇಗೆ ಪ್ರಯೋಜನಕರವಾಯಿತು?

14, 15. (ಎ) ಒಬ್ಬ ಸಲಹೆಗಾರನು ಇತರರನ್ನು ವಾಸಿಮಾಡುವಂತೆ ಯಾವ ಗುಣಗಳು ಸಹಾಯಮಾಡುವವು? (ಬಿ) ಯೋಬನಿಗೆ ಸಹಾಯಮಾಡುವುದರಲ್ಲಿ ಎಲೀಹು ಯಶಸ್ವಿಯಾದದ್ದು ಏಕೆಂದು ವಿವರಿಸಿರಿ.

16. ಯೋಬನ ಮೂವರು ಸುಳ್ಳು ಸಾಂತ್ವನಗಾರರು ಸೈತಾನನ ಉಪಕರಣಗಳಾದದ್ದು ಹೇಗೆ?

17. ಪರೀಕ್ಷೆಯ ಸಮಯದಲ್ಲಿ ನಾವೇನನ್ನು ಮನಸ್ಸಿನಲ್ಲಿಡತಕ್ಕದ್ದು?

18. ತಾಳ್ಮೆಯನ್ನು ತೋರಿಸುವುದರಿಂದ ಯೋಬನು ಯಾವ ಪ್ರಯೋಜನಗಳನ್ನು ಪಡೆದನು?

19. ತಾಳ್ಮೆತೋರಿಸುವುದು ಸಾರ್ಥಕವೆಂದು ನಿಮಗೇಕೆ ಅನಿಸುತ್ತದೆ?

[ಪುಟ 16ರಲ್ಲಿರುವ ಚಿತ್ರ]

ಒಬ್ಬ ಒಳ್ಳೇ ಸಲಹೆಗಾರನು ಸಹಾನುಭೂತಿ, ಗೌರವ ಮತ್ತು ದಯೆಯನ್ನು ತೋರಿಸುತ್ತಾನೆ

[ಪುಟ 17ರಲ್ಲಿರುವ ಚಿತ್ರ]

ಎಲ್ಸಾ ಮತ್ತು ಹಾರಾಲ್ಟ್‌ ಆಪ್ಟ್‌