ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ”

“ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ”

“ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ”

“ಕ್ಯಾಥೊಲಿಕ್‌ ವಿಶ್ವಾಸವು ನಿರ್ದಿಷ್ಟವಾಗಿ ನಾಲ್ಕು ಅಂತಿಮ ಸಂಗತಿಗಳನ್ನು ನಮೂದಿಸುತ್ತದೆ: ಸಾವು, ತೀರ್ಪು, ನರಕ, ಸ್ವರ್ಗ.”​—⁠ಕ್ಯಾಥೊಲಿಸಿಸಮ್‌, ಜಾರ್ಜ್‌ ಬ್ರ್ಯಾಂಟ್ಲ್‌ ಅವರಿಂದ ಸಂಪಾದಿತ.

ಮನುಷ್ಯಕುಲಕ್ಕಾಗಿರುವ ಆ ನಾಲ್ಕು ಅಂತಿಮ ಸಂಗತಿಗಳಲ್ಲಿ ಭೂಮಿಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂಬುದನ್ನು ಗಮನಿಸಿ. ಇದು ಆಶ್ಚರ್ಯದ ವಿಷಯವೇನಲ್ಲ. ಏಕೆಂದರೆ ಭೂಮಿಯು ಒಂದು ದಿನ ನಾಶವಾಗಲಿದೆ ಎಂದು ಇತರ ಅನೇಕ ಧರ್ಮಗಳಂತೆ ಕ್ಯಾಥೊಲಿಕ್‌ ಚರ್ಚು ಕೂಡ ನಂಬುತ್ತದೆ. ಇದನ್ನು ಡೀಕ್ಸ್‌ಯೊನ್‌ರ್‌ ಡ ಟೇಆಲಾಸೀ ಕಾಟಾಲೀಕ್‌ ಎಂಬ ಶಬ್ದಕೋಶವು, “ಜಗತ್ತಿನ ಅಂತ್ಯ” ಎಂಬ ವಿಷಯದ ಕೆಳಗೆ ಸ್ಪಷ್ಟಪಡಿಸುತ್ತಾ ತಿಳಿಸುವುದು: “ಈಗ ಇರುವಂಥ ಜಗತ್ತು ದೇವರು ಅದನ್ನು ಸೃಷ್ಟಿಸಿದಾಗ ಹೇಗಿತ್ತೊ ಮತ್ತು ಈಗ ಹೇಗಿದೆಯೊ, ಹಾಗೆಯೇ ನಿತ್ಯಕ್ಕೂ ಉಳಿಯುವುದಿಲ್ಲವೆಂದು ಕ್ಯಾಥೊಲಿಕ್‌ ಚರ್ಚು ನಂಬುತ್ತದೆ ಮತ್ತು ಕಲಿಸುತ್ತದೆ.” ಇತ್ತೀಚೆಗೆ ಕ್ಯಾಥೊಲಿಕ್‌ ಕ್ಯಾಟಿಕಿಸಮ್‌ನಲ್ಲೂ ಇದೇ ಕಲ್ಪನೆಯನ್ನು ಕಲಿಸಲಾಗುತ್ತಿದೆ: “ನಮ್ಮ ಜಗತ್ತು . . . ಅಳಿದುಹೋಗಲು ವಿಧಿಸಲ್ಪಟ್ಟಿದೆ.” ಆದರೆ ನಮ್ಮ ಗ್ರಹವು ಅಳಿದುಹೋಗುವುದಾದರೆ, ಭೂಮಿಯು ಪರದೈಸ್‌ ಆಗುವುದೆಂಬ ಬೈಬಲ್‌ ವಾಗ್ದಾನಗಳ ಕುರಿತೇನು?

ಭೂಮಿಯು ಭವಿಷ್ಯದಲ್ಲಿ ಪರದೈಸ್‌ ಆಗಲಿದೆಯೆಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಉದಾಹರಣೆಗೆ, ಪ್ರವಾದಿ ಯೆಶಾಯನು ಭೂಮಿ ಹಾಗೂ ಅದರ ನಿವಾಸಿಗಳ ಕುರಿತು ಹೀಗಂದನು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:21, 22) ದೇವರಿಂದ ಈ ವಾಗ್ದಾನಗಳನ್ನು ಪಡೆದ ಯೆಹೂದ್ಯರಿಗೆ, ಅವರ ದೇಶ ಮತ್ತು ಕ್ರಮೇಣ ಇಡೀ ಭೂಮಿಯು ಮಾನವಕುಲದ ಶಾಶ್ವತ ಪ್ರಯೋಜನಕ್ಕಾಗಿ ಒಂದು ದಿನ ಪರದೈಸವಾಗಲಿದೆಯೆಂಬ ನಿಶ್ಚಯವಿತ್ತು.

ಈ ನಿರೀಕ್ಷೆಯನ್ನು 37ನೇ ಕೀರ್ತನೆಯು ದೃಢೀಕರಿಸುತ್ತಾ ಹೀಗನ್ನುತ್ತದೆ: “ದೀನರು ದೇಶವನ್ನು ಅನುಭವಿಸುವರು.” (ಕೀರ್ತನೆ 37:11) ಈ ವಚನವು ಕೇವಲ ಇಸ್ರಾಯೇಲ್‌ ಜನಾಂಗವು ವಾಗ್ದಾತ್ತ ದೇಶದಲ್ಲಿ ತಾತ್ಕಾಲಿಕವಾಗಿ ಪುನಃಸ್ಥಾಪನೆಗೊಳ್ಳುವುದರ ಕುರಿತು ಹೇಳುತ್ತಿಲ್ಲ. ಏಕೆಂದರೆ ಅದೇ ಕೀರ್ತನೆಯು ನಿರ್ದಿಷ್ಟವಾಗಿ ಹೇಳುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) * ಈ ಕೀರ್ತನೆಯು, ಭೂಮಿಯ ಮೇಲಿನ ಶಾಶ್ವತ ಜೀವನವು “ದೀನರಿಗೆ” ಸಿಗಲಿರುವ ಬಹುಮಾನವಾಗಿದೆ ಎಂದು ಹೇಳುತ್ತಿರುವುದನ್ನು ಗಮನಿಸಿ. ಈ ವಚನದ ಬಗ್ಗೆ ಒಂದು ಹೇಳಿಕೆಯ ಪ್ರಕಾರ ‘ದೀನರು’ ಎಂಬ ಪದಕ್ಕೆ “ಸಾಮಾನ್ಯವಾಗಿ ಭಾಷಾಂತರಗಳಲ್ಲಿ ವ್ಯಕ್ತವಾಗುವುದಕ್ಕಿಂತ ಹೆಚ್ಚಿನ ಅರ್ಥವಿದೆ. ಇದರಲ್ಲಿ ನತದೃಷ್ಟರು, ಯಾಹ್ವೆಯ [ಯೆಹೋವನ] ನಿಮಿತ್ತ ಬಾಧಿಸಲ್ಪಟ್ಟವರು ಯಾ ಹಿಂಸಿಸಲ್ಪಟ್ಟವರು, ದೇವರಿಗೆ ಅಧೀನರಾಗಿರುವ ದೀನ ಹೃದಯಿಗಳು ಒಳಗೂಡಿರುತ್ತಾರೆ.”

ಭೂಮಿಯಲ್ಲೊ ಸ್ವರ್ಗದಲ್ಲೊ?

ಮೇಲೆ ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ನಮ್ಮ ನೆನಪಿಗೆ ತರುವ ಒಂದು ವಾಗ್ದಾನವನ್ನು ಯೇಸು ಪರ್ವತ ಪ್ರಸಂಗದಲ್ಲಿ ಮಾಡಿದನು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5) ಪುನಃ ಒಮ್ಮೆ ಭೂಮಿಯು ನಂಬಿಗಸ್ತರಿಗಾಗಿ ಒಂದು ಶಾಶ್ವತ ಬಹುಮಾನವಾಗಲಿರುವುದು. ಆದರೆ ಯೇಸು ಅಪೊಸ್ತಲರಿಗಾಗಿ ಅವನ “ತಂದೆಯ ಮನೆಯಲ್ಲಿ” ಸ್ಥಳವನ್ನು ಸಿದ್ಧಮಾಡುತ್ತಾನೆಂದು ಮತ್ತು ಅವರು ಸ್ವರ್ಗದಲ್ಲಿ ಅವನೊಂದಿಗಿರುವರೆಂದು ಸ್ಪಷ್ಟವಾಗಿ ಹೇಳಿದನು. (ಯೋಹಾನ 14:1, 2; ಲೂಕ 12:32; 1 ಪೇತ್ರ 1:3, 4) ಹಾಗಾದರೆ ಭೂಮಿಯ ಮೇಲೆ ಸಿಗಲಿರುವ ಆಶೀರ್ವಾದಗಳ ಕುರಿತಾದ ವಾಗ್ದಾನಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಅವು ಇಂದಿಗೂ ಅನ್ವಯಿಸುತ್ತವೊ, ಮತ್ತು ಅವು ಯಾರಿಗೆ ಅನ್ವಯಿಸುತ್ತವೆ?

ಯೇಸು ಪರ್ವತ ಪ್ರಸಂಗದಲ್ಲಿ ಹೇಳಿದ “ಭೂಮಿ” ಮತ್ತು 37ನೇ ಕೀರ್ತನೆಯಲ್ಲಿ ತಿಳಿಸಲ್ಪಟ್ಟಿರುವ ‘ದೇಶವು’ ಕೇವಲ ಸಾಂಕೇತಿಕವಾಗಿದೆ ಎಂದು ಅನೇಕ ಬೈಬಲ್‌ ವಿದ್ವಾಂಸರು ಹೇಳುತ್ತಾರೆ. ಎಫ್‌. ವೀಗೂರೂ, ಬೀಬೆಲ್‌ ಡ ಗ್ಲೆರ್‌ ಪುಸ್ತಕದಲ್ಲಿ ಮಾಡಿರುವ ಹೇಳಿಕೆಗನುಸಾರ ಈ ವಚನಗಳು ಅವರಿಗೆ “ಸ್ವರ್ಗ ಮತ್ತು ಚರ್ಚಿನ ಚಿತ್ರಣವನ್ನು” ಕೊಡುತ್ತವೆ. ಫ್ರೆಂಚ್‌ ಬೈಬಲ್‌ ಸಂಶೋಧಕರಾದ ಎಮ್‌. ಲಾಗ್ರಾಂಶ್‌ ಅವರಿಗನುಸಾರ ಈ ಆಶೀರ್ವಾದವು, “ದೀನರು ಈಗ ಜೀವಿಸುತ್ತಿರುವ ಭೂಮಿಯನ್ನು ಸದ್ಯದ ವ್ಯವಸ್ಥೆಯಲ್ಲಾಗಲಿ ಹೆಚ್ಚು ಪರಿಪೂರ್ಣ ವ್ಯವಸ್ಥೆಯಲ್ಲಾಗಲಿ ವಶಮಾಡುವರೆಂಬ ವಾಗ್ದಾನವಾಗಿರುವುದಿಲ್ಲ ಬದಲಿಗೆ ಅದು ಎಲ್ಲಿಯೂ ಇರಬಹುದಾದ ಪರಲೋಕದ ರಾಜ್ಯವಾಗಿದೆ.” ಇನ್ನೊಬ್ಬ ಬೈಬಲ್‌ ಸಂಶೋಧಕನಿಗನುಸಾರ ಇದು, “ಸ್ವರ್ಗವನ್ನು ಸೂಚಿಸಿ ಮಾತಾಡಲಿಕ್ಕಾಗಿ, ಭೂಮಿಗೆ ಸಂಬಂಧಪಟ್ಟ ವರ್ಣನೆಗಳ ಸಾಂಕೇತಿಕ ಬಳಕೆಯಾಗಿದೆ.” ಮತ್ತಿತರರಿಗೆ, “ವಾಗ್ದತ್ತ ದೇಶವಾದ ಕಾನಾನ್‌ ಆಧ್ಯಾತ್ಮಿಕ ಅರ್ಥವನ್ನು ಹೊಂದಿದ್ದು, ಮೇಲಣ ಮನೆ ಇಲ್ಲವೆ ದೀನರು ಖಂಡಿತವಾಗಿ ಬಾಧ್ಯರಾಗಲಿರುವ ದೇವರ ರಾಜ್ಯವನ್ನು ಪ್ರತಿನಿಧಿಸುತ್ತದೆ. ಕೀರ್ತನೆ 37ರಲ್ಲಿ ಮತ್ತು ಬೇರೆ ಕಡೆಗಳಲ್ಲಿರುವ ಚಿತ್ರಣದ ಅರ್ಥವೂ ಇದೇ ಆಗಿದೆ.” ಆದರೆ ದೇವರ ವಾಗ್ದಾನಗಳು ಭೌತಿಕ ಭೂಮಿಗೆ ಸೂಚಿಸುತ್ತಿಲ್ಲ ಎಂದು ನಾವು ಕೂಡಲೇ ತೀರ್ಮಾನಕ್ಕೆ ಬರಬೇಕೊ?

ಭೂಮಿಗಾಗಿ ಒಂದು ಶಾಶ್ವತ ಉದ್ದೇಶ

ಪ್ರಾರಂಭದಲ್ಲಿ, ದೇವರು ಮನುಷ್ಯರಿಗಾಗಿಟ್ಟ ಉದ್ದೇಶಕ್ಕೂ ಭೂಮಿಗೂ ನೇರವಾದ ಸಂಬಂಧವಿತ್ತು. “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 115:16) ಹೀಗಿರುವುದರಿಂದ ಮನುಷ್ಯರಿಗಾಗಿರುವ ದೇವರ ಮೂಲ ಉದ್ದೇಶವು ಸ್ವರ್ಗದೊಂದಿಗಲ್ಲ, ಬದಲಿಗೆ ಭೂಮಿಯೊಂದಿಗೆ ಸಂಬಂಧಿಸಿತ್ತು. ಯೆಹೋವನು ಮೊದಲ ದಂಪತಿಗೆ ಏದೆನ್‌ ತೋಟವನ್ನು ವಿಸ್ತರಿಸಿ ಇಡೀ ಭೂಮಿಯನ್ನು ಅದರಂತೆ ಮಾಡುವ ನಿಯೋಗವನ್ನು ಕೊಟ್ಟನು. (ಆದಿಕಾಂಡ 1:28) ಈ ಉದ್ದೇಶವು ತಾತ್ಕಾಲಿಕವಾಗಿರಲಿಲ್ಲ. ಭೂಮಿಯು ಶಾಶ್ವತವಾಗಿ ಉಳಿಯುತ್ತದೆ ಎಂದು ಯೆಹೋವನು ತನ್ನ ವಾಕ್ಯದಲ್ಲಿ ಸ್ಥಿರೀಕರಿಸುತ್ತಾ ಹೇಳುವುದು: “ಒಂದು ತಲಾಂತರವು ಗತಿಸುವದು, ಇನ್ನೊಂದು ತಲಾಂತರವು ಬರುವದು. ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.”​—⁠ಪ್ರಸಂಗಿ 1:4; 1 ಪೂರ್ವಕಾಲವೃತ್ತಾಂತ 16:30; ಯೆಶಾಯ 45:18.

ದೇವರ ವಾಗ್ದಾನಗಳು ಯಾವಾಗಲೂ ನೆರವೇರುತ್ತವೆ ಏಕೆಂದರೆ ಆತನು ಸರ್ವೋನ್ನತನಾಗಿದ್ದಾನೆ ಮತ್ತು ಅವು ನೆರವೇರುವಂತೆ ನೋಡಿಕೊಳ್ಳುತ್ತಾನೆ. ನೈಸರ್ಗಿಕ ಜಲಚಕ್ರವನ್ನು ದೃಷ್ಟಾಂತವಾಗಿ ಉಪಯೋಗಿಸುತ್ತಾ, ದೇವರ ವಾಗ್ದಾನಗಳು ನೆರವೇರುವುದು ಎಷ್ಟು ಖಂಡಿತವೆಂಬುದನ್ನು ಬೈಬಲ್‌ ಹೀಗೆ ವಿವರಿಸುತ್ತದೆ: ‘ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸಿರುಗೊಳಿಸಿ ಫಲಿಸುವಂತೆ ಮಾಡದೆ ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು [ದೇವರ ಮಾತು] ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.’ (ಯೆಶಾಯ 55:10, 11) ಯೆಹೋವನು ಮನುಷ್ಯರಿಗೆ ವಾಗ್ದಾನಗಳನ್ನು ಮಾಡುತ್ತಾನೆ. ಆ ವಾಗ್ದಾನಗಳು ನೆರವೇರುವ ಮೊದಲು ನಿರ್ದಿಷ್ಟ ಅವಧಿಯು ಕಳೆಯಬಹುದಾದರೂ ಅವು ಖಂಡಿತವಾಗಿಯೂ ಬಿದ್ದುಹೋಗುವುದಿಲ್ಲ. ಆತನು ನುಡಿದಿದ್ದೆಲ್ಲವನ್ನು ಪೂರೈಸಿಯೇ ಅವು ಆತನ ಬಳಿಗೆ ‘ಹಿಂದಿರುಗುತ್ತವೆ.’

ಭೂಮಿಯನ್ನು ಮನುಷ್ಯನಿಗಾಗಿ ಸೃಷ್ಟಿಸುವುದು ಖಂಡಿತವಾಗಿಯೂ ಯೆಹೋವನ ‘ಇಷ್ಟಾರ್ಥವಾಗಿತ್ತು.’ ಸೃಷ್ಟಿಯ ಆರನೆಯ ದಿನದ ಅಂತ್ಯದಲ್ಲಿ ಎಲ್ಲವೂ “ಬಹು ಒಳ್ಳೇದಾಗಿತ್ತು” ಎಂದಾತನು ಉದ್ಘೋಷಿಸಿದನು. (ಆದಿಕಾಂಡ 1:31) ಭೂಮಿಯು ಶಾಶ್ವತವಾಗಿ ಪರದೈಸಾಗಿ ಮಾರ್ಪಡಬೇಕೆಂಬುದು ದೈವಿಕ ಉದ್ದೇಶದ ಭಾಗವಾಗಿದೆ. ಇದು ಈ ವರೆಗೂ ಪೂರೈಸಲ್ಪಟ್ಟಿಲ್ಲ. ಆದರೆ, ದೇವರ ವಾಗ್ದಾನಗಳು ‘ಕೈಗೂಡದ ಹೊರತು ಆತನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.’ ಜನರು ಶಾಂತಿ ಹಾಗೂ ಭದ್ರತೆಯಿಂದ ಶಾಶ್ವತವಾಗಿ ಜೀವಿಸಲಿರುವ ಭೂಮಿಯಲ್ಲಿ, ಪರಿಪೂರ್ಣ ಜೀವನದ ಕುರಿತಾದ ಎಲ್ಲಾ ವಾಗ್ದಾನಗಳು ನೆರವೇರುವವು.​—⁠ಕೀರ್ತನೆ 135:6; ಯೆಶಾಯ 46:10.

ದೇವರ ಉದ್ದೇಶವು ತಪ್ಪದೆ ನೆರವೇರುವುದು

ನಮ್ಮ ಮೊದಲ ಹೆತ್ತವರಾದ ಆದಾಮಹವ್ವರ ಪಾಪವು ಭೂಮಿಯನ್ನು ಪರದೈಸನ್ನಾಗಿ ಮಾಡಬೇಕೆಂಬ ದೇವರ ಮೂಲ ಉದ್ದೇಶವನ್ನು ತಾತ್ಕಾಲಿಕವಾಗಿ ಭಂಗಗೊಳಿಸಿತು. ಅವರು ತೋರಿಸಿದ ಅವಿಧೇಯತೆಯ ಬಳಿಕ ಅವರನ್ನು ಏದೆನ್‌ ತೋಟದಿಂದ ಹೊರಗಟ್ಟಲಾಯಿತು. ಹೀಗೆ ಅವರು, ಪರಿಪೂರ್ಣ ಮಾನವರು ಪರದೈಸ್‌ ಭೂಮಿಯಲ್ಲಿ ಜೀವಿಸುವ ದೈವಿಕ ಉದ್ದೇಶವನ್ನು ನೆರವೇರಿಸುವುದರಲ್ಲಿ ಭಾಗಿಗಳಾಗುವ ಸದವಕಾಶವನ್ನು ಕಳಕೊಂಡರು. ಆದರೂ ತನ್ನ ಉದ್ದೇಶವನ್ನು ಪೂರೈಸಲು ದೇವರು ಏರ್ಪಾಡುಗಳನ್ನು ಮಾಡಿದನು. ಹೇಗೆ?​—⁠ಆದಿಕಾಂಡ 3:17-19, 23.

ಏದೆನಿನಲ್ಲಿನ ಆ ಸನ್ನಿವೇಶವು, ಅತ್ಯುತ್ತಮ ಸೈಟ್‌ವೊಂದರಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸುವ ಒಬ್ಬ ಮನುಷ್ಯನ ಸನ್ನಿವೇಶದಂತಿತ್ತು. ಅವನು ಅಸ್ತಿವಾರವನ್ನು ಹಾಕುತ್ತಿದ್ದಾಗಲೇ ಯಾರೊ ಬಂದು ಅದನ್ನು ಕೆಡವಿಹಾಕುತ್ತಾನೆ. ತನ್ನ ಕಾರ್ಯಯೋಜನೆಯನ್ನು ಕೈಬಿಡುವ ಬದಲು ಆ ಮನುಷ್ಯನು ಮನೆಯ ಕೆಲಸವು ಪೂರ್ಣವಾಗುವುದನ್ನು ನೋಡಿಕೊಳ್ಳಲು ಕ್ರಮಕೈಗೊಳ್ಳುತ್ತಾನೆ. ಈ ಹೆಚ್ಚಿನ ಕೆಲಸಕ್ಕಾಗಿ ಇನ್ನಷ್ಟು ಖರ್ಚನ್ನು ಮಾಡಬೇಕಾದರೂ, ಮೂಲ ಕಾರ್ಯಯೋಜನೆಯು ಪೂರ್ಣಗೊಳ್ಳುವುದೆಂಬುದರ ಬಗ್ಗೆ ಯಾವ ಸಂದೇಹವೂ ಇಲ್ಲ.

ತದ್ರೀತಿಯಲ್ಲಿ, ದೇವರು ತನ್ನ ಉದ್ದೇಶವು ಕೈಗೊಳ್ಳುವುದನ್ನು ಖಚಿತಪಡಿಸಲು ಏರ್ಪಾಡುಗಳನ್ನು ಮಾಡಿದನು. ನಮ್ಮ ಮೊದಲ ಹೆತ್ತವರು ಪಾಪಮಾಡಿದ ಕೂಡಲೇ, ಅವರ ವಂಶಜರಿಗಾಗಿ ಒಂದು ನಿರೀಕ್ಷೆಯನ್ನು ಆತನು ಪ್ರಕಟಪಡಿಸಿದನು. ಇದು, ಆದಂಥ ಹಾನಿಯನ್ನು ರದ್ದುಗೊಳಿಸುವ ಒಂದು ‘ಸಂತತಿಯ’ ಕುರಿತಾಗಿತ್ತು. ಈ ಸಂತತಿಯ ಪ್ರಮುಖ ಭಾಗವು, ದೇವರ ಮಗನಾದ ಯೇಸು ಎಂದು ರುಜುವಾಯಿತು. ಅವನು ಭೂಮಿಗೆ ಬಂದು ಮಾನವಕುಲವನ್ನು ಪುನಃ ಖರೀದಿಸಲಿಕ್ಕಾಗಿ ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಿದನು. (ಗಲಾತ್ಯ 3:16; ಮತ್ತಾಯ 20:28) ಯೇಸು ಪುನರುತ್ಥಾನಗೊಳಿಸಲ್ಪಟ್ಟು ಸ್ವರ್ಗಕ್ಕೆ ಹೋದ ಬಳಿಕ ದೇವರ ರಾಜ್ಯದ ರಾಜನಾಗಲಿದ್ದನು. ಪ್ರಥಮತಃ, ದೀನನಾಗಿರುವ ಯೇಸು ಮತ್ತು ಅವನೊಂದಿಗೆ ಜೊತೆ ರಾಜರುಗಳಾಗಿರುವಂತೆ ಆಯ್ಕೆಯಾಗಿ ಪುನರುತ್ಥಾನವಾಗಲಿರುವ ನಂಬಿಗಸ್ತರು ಭೂಮಿಯನ್ನು ಸ್ವಾಸ್ತ್ಯವಾಗಿ ಪಡೆಯುವರು. (ಕೀರ್ತನೆ 2:6-9) ಕಾಲಾನಂತರ ಈ ಸರಕಾರವು ದೇವರ ಮೂಲ ಉದ್ದೇಶವನ್ನು ಪೂರೈಸಲು ಮತ್ತು ಇಡೀ ಭೂಮಿಯನ್ನು ಪರದೈಸಾಗಿ ಮಾರ್ಪಡಿಸಲು ಭೂಮಿಯ ವ್ಯವಹಾರಗಳ ಮೇಲೆ ಆಳ್ವಿಕೆ ನಡೆಸುವುದು. ಯೇಸು ಕ್ರಿಸ್ತ ಮತ್ತು ಅವನ ಜೊತೆ ರಾಜರಿಂದ ಕೂಡಿರುವ ಈ ರಾಜ್ಯದ ಆಳ್ವಿಕೆಯಿಂದ ಪ್ರಯೋಜನ ಪಡೆಯುವ ಅರ್ಥದಲ್ಲಿ ಅಸಂಖ್ಯಾತ ದೀನ ಜನರು “ಭೂಮಿಗೆ ಬಾಧ್ಯರಾಗುವರು.”​—⁠ಆದಿಕಾಂಡ 3:15; ದಾನಿಯೇಲ 2:44; ಅ. ಕೃತ್ಯಗಳು 2:32, 33; ಪ್ರಕಟನೆ 20:5, 6.

“ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ”

ಈ ರಕ್ಷಣೆಗೆ ಸಂಬಂಧಪಟ್ಟ ಎರಡು ಅಂತ್ಯಫಲಗಳು ಅಂದರೆ ಸ್ವರ್ಗದಲ್ಲಿ ಹಾಗೂ ಭೂಮಿಯ ಮೇಲಿನ ಜೀವನದ ಬಗ್ಗೆ ಅಪೊಸ್ತಲ ಯೋಹಾನನು ನೋಡಿದಂಥ ದರ್ಶನದಲ್ಲಿ ತಿಳಿಸಲಾಗಿವೆ. ಅವನು ಆ ದರ್ಶನದಲ್ಲಿ, ಸ್ವರ್ಗೀಯ ಸಿಂಹಾಸನಗಳಲ್ಲಿರುವ ಅರಸರನ್ನು ನೋಡಿದನು. ಅವರು ಕ್ರಿಸ್ತನ ನಂಬಿಗಸ್ತ ಶಿಷ್ಯರಿಂದ ಆರಿಸಲ್ಪಟ್ಟವರಾಗಿದ್ದರು. “ಅವರು ಭೂಮಿಯ ಮೇಲೆ ಆಳುವರು” ಎಂದು ಯೇಸುವಿನ ಈ ಒಡನಾಡಿಗಳ ಬಗ್ಗೆ ಬೈಬಲ್‌ ನಿರ್ದಿಷ್ಟವಾಗಿ ಹೇಳುತ್ತದೆ. (ಪ್ರಕಟನೆ 5:9, 10) ಯೆಹೋವನ ಉದ್ದೇಶಗಳನ್ನು ಪೂರೈಸುವುದರಲ್ಲಿರುವ ಈ ದ್ವಿಮುಖ ಅಂಶಗಳನ್ನು ಗಮನಿಸಿ​—⁠ಪುನಃಸ್ಥಾಪಿತಗೊಂಡಿರುವ ಭೂಮಿ ಮತ್ತು ಇದನ್ನು ಸಾಧ್ಯಗೊಳಿಸಲು ನಿರ್ದೇಶಿಸುವಂಥ, ಯೇಸು ಹಾಗೂ ಅವನ ಜೊತೆ ಬಾಧ್ಯಸ್ಥರಿಂದ ಕೂಡಿದ ಸ್ವರ್ಗೀಯ ರಾಜ್ಯ. ಈ ಎಲ್ಲಾ ದೈವಿಕ ಏರ್ಪಾಡುಗಳು ದೇವರ ಮೂಲ ಉದ್ದೇಶಕ್ಕನುಸಾರ ಕೊನೆಗೂ ಭೂಮಿಯ ಮೇಲೆ ಪರದೈಸಿನ ಪುನಃಸ್ಥಾಪನೆಯನ್ನು ಸಾಧ್ಯಗೊಳಿಸುವವು.

ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ, ದೇವರ ಚಿತ್ತವು “ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸುವಂತೆ ತನ್ನ ಶಿಷ್ಯರಿಗೆ ಕಲಿಸಿದನು. (ಮತ್ತಾಯ 6:9, 10) ಈ ಭೂಮಿಯು ನಾಶಗೊಳ್ಳುವಲ್ಲಿ ಅಥವಾ ಭೂಮಿ ಎಂಬ ಪದವು ಕೇವಲ ಸ್ವರ್ಗದ ಒಂದು ಸಂಕೇತ ಆಗಿರುತ್ತಿದ್ದಲ್ಲಿ ಯೇಸುವಿನ ಈ ಮೇಲಿನ ಮಾತುಗಳಿಗೆ ಯಾವುದೇ ಅರ್ಥವಿರುತ್ತಿತ್ತೊ? ಅಥವಾ, ಎಲ್ಲಾ ನೀತಿವಂತರು ಸ್ವರ್ಗಕ್ಕೆ ಹೋಗುವಲ್ಲಿ ಆ ಮಾತುಗಳಿಗೆ ಏನಾದರೂ ಅರ್ಥವಿರುತ್ತಿತ್ತೊ? ಭೂಮಿಗಾಗಿರುವ ದೇವರ ಚಿತ್ತವು, ಬೈಬಲಿನಲ್ಲಿರುವ ಸೃಷ್ಟಿಯ ವೃತ್ತಾಂತದಿಂದ ಹಿಡಿದು ಕೊನೆ ಪುಸ್ತಕವಾದ ಪ್ರಕಟನೆಯ ವರೆಗೆ ಸ್ಪಷ್ಟವಾಗಿ ತೋರಿಬರುತ್ತದೆ. ದೇವರು ಉದ್ದೇಶಿಸಿದಂತೆ ಈ ಭೂಮಿ ಪರದೈಸವಾಗಲಿದೆ. ಇದೇ, ದೇವರು ಪೂರೈಸಲು ವಾಗ್ದಾನಿಸಿರುವ ಚಿತ್ತವಾಗಿದೆ. ಈ ಚಿತ್ತದ ನೆರವೇರಿಕೆಗಾಗಿಯೇ ಭೂಮಿಯಲ್ಲಿರುವ ನಂಬಿಗಸ್ತರು ಪ್ರಾರ್ಥಿಸುತ್ತಾರೆ.

ಭೂಮಿಯ ಮೇಲೆ ಸದಾಕಾಲದ ಜೀವನವನ್ನು ಸೃಷ್ಟಿಕರ್ತನು ಮೂಲತಃ ಉದ್ದೇಶಿಸಿದ್ದನು ಮತ್ತು ಆತನು ‘ಮಾರ್ಪಟ್ಟಿರದ’ ದೇವರಾಗಿದ್ದಾನೆ. (ಮಲಾಕಿಯ 3:6; ಯೋಹಾನ 17:3; ಯಾಕೋಬ 1:17) ದೈವಿಕ ಉದ್ದೇಶವು ಪೂರೈಸಲ್ಪಡಲು ಕಾರಣವಾಗಿರುವ ಈ ಎರಡು ಅಂಶಗಳನ್ನು ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ಕಾವಲಿನಬುರುಜು ಎಂಬ ಈ ಪತ್ರಿಕೆಯು ವಿವರಿಸಿದೆ. ಇದು, ಭೂಮಿಯ ಪುನಃಸ್ಥಾಪನೆಯ ಬಗ್ಗೆ ಬೈಬಲಿನಲ್ಲಿ ಕಂಡುಬರುವ ವಾಗ್ದಾನಗಳನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಈ ವಿಷಯದ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು, ಒಬ್ಬ ಯೆಹೋವನ ಸಾಕ್ಷಿಯೊಂದಿಗೆ ಚರ್ಚಿಸಲು ಅಥವಾ ಈ ಪತ್ರಿಕೆಯ ಪ್ರಕಾಶಕರನ್ನು ಸಂಪರ್ಕಿಸಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. (w06 8/15)

[ಪಾದಟಿಪ್ಪಣಿ]

^ ಪ್ಯಾರ. 5 ಅನೇಕ ಬೈಬಲ್‌ ತರ್ಜುಮೆಗಳು ಹೀಬ್ರು ಪದವಾದ ಈರೆಟ್ಸ್‌ ಅನ್ನು “ಭೂಮಿ” ಎಂದು ಭಾಷಾಂತರಿಸುವ ಬದಲಿಗೆ “ದೇಶ” ಎಂದು ಭಾಷಾಂತರಿಸಿವೆಯಾದರೂ, ಕೀರ್ತನೆ 37:​11, 29ರಲ್ಲಿರುವ ಈರೆಟ್ಸ್‌ ಅನ್ನು, ಕೇವಲ ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟಿರುವ ದೇಶಕ್ಕೆ ಮಾತ್ರ ಸೀಮಿತಗೊಳಿಸಲು ಯಾವ ಕಾರಣವೂ ಇಲ್ಲ. ವಿಲ್ಯಮ್‌ ವಿಲ್ಸನ್‌ರವರ ಹಳೇ ಒಡಂಬಡಿಕೆಯ ಪದಗಳ ಅಧ್ಯಯನ (ಇಂಗ್ಲಿಷ್‌) ಎಂಬ ಪುಸ್ತಕವು ಈರೆಟ್ಸ್‌ ಪದವನ್ನು ಹೀಗೆ ಅರ್ಥನಿರೂಪಿಸುತ್ತದೆ: “ಇದು ಅತಿ ವಿಶಾಲಾರ್ಥದಲ್ಲಿ ಭೂಮಿ ಆಗಿದೆ; ಇದರಲ್ಲಿ ಜನವಾಸವಿರುವ ಮತ್ತು ಜನವಾಸವಿಲ್ಲದ ಪ್ರದೇಶಗಳು ಒಳಗೂಡಿವೆ. ಸಂಕುಚಿತ ಅರ್ಥದಲ್ಲಿ ಇದು ಭೂಮಿಯ ಒಂದು ಭಾಗವನ್ನು ಅಂದರೆ ಪ್ರದೇಶ ಯಾ ದೇಶವನ್ನು ಸೂಚಿಸುತ್ತದೆ.” ಹಾಗಾಗಿ ಹೀಬ್ರು ಪದಕ್ಕಿರುವ ಪ್ರಥಮ ಹಾಗೂ ಪ್ರಧಾನ ಅರ್ಥವು ನಮ್ಮ ಗ್ರಹ, ಭೂಗೋಳ ಅಥವಾ ಭೂಮಿಯಾಗಿದೆ.​—⁠1986, ಜನವರಿ 1ರ ಕಾವಲಿನಬುರುಜು, ಪುಟ 31ನ್ನು ನೋಡಿ.

[ಪುಟ 4ರಲ್ಲಿರುವ ಚಿತ್ರ]

ಭವಿಷ್ಯದಲ್ಲಿ ಭೂಮಿ ಮೇಲೆ ಪರದೈಸ್‌ ಸ್ಥಾಪಿಸಲ್ಪಡುವುದೆಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ

[ಪುಟ 7ರಲ್ಲಿರುವ ಚಿತ್ರ]

ಭೂಮಿ ನಾಶವಾಗಲಿರುವುದಾದರೆ, ಯೇಸುವಿನ ಮಾದರಿ ಪ್ರಾರ್ಥನೆಗೆ ಯಾವುದೇ ಅರ್ಥವಿರುವುದೊ?