ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ನಿರೀಕ್ಷಿಸಿಕೊಂಡು ಧೈರ್ಯವಾಗಿರ್ರಿ

ಯೆಹೋವನನ್ನು ನಿರೀಕ್ಷಿಸಿಕೊಂಡು ಧೈರ್ಯವಾಗಿರ್ರಿ

ಯೆಹೋವನನ್ನು ನಿರೀಕ್ಷಿಸಿಕೊಂಡು ಧೈರ್ಯವಾಗಿರ್ರಿ

“ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.”​—⁠ಕೀರ್ತನೆ 27:​14.

ನಿಜವಾದ ನಿರೀಕ್ಷೆ ಉಜ್ವಲವಾದ ಬೆಳಕಿನಂತಿದೆ. ಈ ನಿರೀಕ್ಷೆಯು ನಾವು ಈಗಿನ ಕಷ್ಟಸಂಕಟದಿಂದಾಚೆಗೆ ನೋಡಿ, ಭವಿಷ್ಯತ್ತನ್ನು ಧೈರ್ಯ ಮತ್ತು ಸಂತೋಷದಿಂದ ಎದುರಿಸುವಂತೆ ಸಹಾಯಮಾಡುತ್ತದೆ. ಅಂತಹ ನಿಶ್ಚಿತ ನಿರೀಕ್ಷೆಯನ್ನು, ತನ್ನ ಪ್ರೇರಿತ ವಾಕ್ಯದ ಮುಖೇನ ಯೆಹೋವನು ಮಾತ್ರ ಕೊಡಬಲ್ಲನು. (2 ತಿಮೊಥೆಯ 3:16) ವಾಸ್ತವವಾಗಿ, ಬೈಬಲಿನಲ್ಲಿ “ನಿರೀಕ್ಷೆ” “ನಿರೀಕ್ಷಿಸಿದ್ದು” ಮತ್ತು “ನಿರೀಕ್ಷಿಸುವುದು” ಎಂಬ ಪದಗಳು ಅನೇಕ ಬಾರಿ ಕಂಡುಬರುತ್ತವೆ. ಅದು ಯಾವುದೋ ಒಳ್ಳೆಯದನ್ನು ಉತ್ಸುಕತೆಯಿಂದ ಮತ್ತು ನಿಶ್ಚಯದಿಂದ ಎದುರುನೋಡುವುದಕ್ಕೆ ಹಾಗೂ ಅದರ ಉದ್ದೇಶಕ್ಕೆ ಸೂಚಿಸುತ್ತದೆ. * ಇಂಥ ನಿರೀಕ್ಷೆಯು ಯಾವುದೇ ಆಧಾರವಿಲ್ಲದ ಅಥವಾ ನೆರವೇರುವುದೆಂಬ ಖಾತ್ರಿಯಿಲ್ಲದ ಕೇವಲ ಒಂದು ಹಾರೈಕೆಗಿಂತ ಶ್ರೇಷ್ಠವಾಗಿದೆ.

2 ಯೇಸು ಕಷ್ಟಪರೀಕ್ಷೆಗಳನ್ನು ಎದುರಿಸಿದಾಗ ವರ್ತಮಾನ ಕಾಲದಿಂದಾಚೆಗೆ ನೋಡಿ, ಯೆಹೋವನಲ್ಲಿ ನಿರೀಕ್ಷೆಯನ್ನಿಟ್ಟನು. “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:⁠2) ಯೆಹೋವನ ಪರಮಾಧಿಕಾರವನ್ನು ನಿರ್ದೋಷೀಕರಿಸಿ, ಆತನ ನಾಮವನ್ನು ಪವಿತ್ರೀಕರಿಸುವ ಪ್ರತೀಕ್ಷೆಯ ಮೇಲೆ ಯೇಸು ತನ್ನ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದ್ದರಿಂದ ತನಗೆ ಏನೇ ಸಂಭವಿಸಿದರೂ, ದೇವರಿಗೆ ವಿಧೇಯತೆಯನ್ನು ತೋರಿಸುವ ಮಾರ್ಗದಿಂದ ಅಡ್ಡ ತೊಲಗಲಿಲ್ಲ.

3 ರಾಜ ದಾವೀದನು ನಿರೀಕ್ಷೆ ಮತ್ತು ಧೈರ್ಯದ ನಡುವೆ ಇರುವ ಸಂಬಂಧವನ್ನು ಸೂಚಿಸುತ್ತ ಹೇಳುವುದು: “ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.” (ಕೀರ್ತನೆ 27:​14) ನಮ್ಮ ಹೃದಯವು ಧೈರ್ಯದಿಂದಿದ್ದು ದೃಢವಾಗಿರಬೇಕಾದರೆ, ನಮ್ಮ ನಿರೀಕ್ಷೆಯು ಅಸ್ಪಷ್ಟವಾಗಿರುವಂತೆ ಎಂದಿಗೂ ಬಿಡದೆ, ಅದನ್ನು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿಟ್ಟುಕೊಳ್ಳಬೇಕು ಮತ್ತು ಅದನ್ನು ಅಮೂಲ್ಯವಾಗಿ ಪರಿಗಣಿಸಬೇಕು. ಹಾಗೆ ಮಾಡುವುದು, ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ ಕೆಲಸದಲ್ಲಿ ಪಾಲ್ಗೋಳ್ಳುವಾಗ ಧೈರ್ಯ ಮತ್ತು ಹುರುಪನ್ನು ತೋರಿಸುವುದರಲ್ಲಿ ಅವನನ್ನು ಅನುಕರಿಸುವಂತೆ ನಮಗೆ ಸಹಾಯಮಾಡುವುದು. (ಮತ್ತಾಯ 24:14; 28:​19, 20) ಹೌದು, ಬೈಬಲಿನಲ್ಲಿ ನಿರೀಕ್ಷೆಯನ್ನು ನಂಬಿಕೆ ಮತ್ತು ಪ್ರೀತಿಯೊಂದಿಗೆ ಉಲ್ಲೇಖಿಸಲಾಗಿದೆ ಹಾಗೂ ಇದು ದೇವರ ಸೇವಕರ ಜೀವನವನ್ನು ಗುರುತಿಸುವಂಥ ಮಹತ್ವಪೂರ್ಣವಾದ ಮತ್ತು ಬಾಳಿಕೆ ಬರುವ ಗುಣವಾಗಿದೆ.​—⁠1 ಕೊರಿಂಥ 13:13.

ನೀವು ‘ನಿರೀಕ್ಷೆಯಲ್ಲಿ ಸಮೃದ್ಧರು’ ಆಗಿದ್ದೀರೊ?

4 ದೇವಜನರಿಗೆ ಅದ್ಭುತಕರವಾದ ಭವಿಷ್ಯತ್ತಿದೆ. ಅಭಿಷಿಕ್ತ ಕ್ರೈಸ್ತರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಸೇವೆಸಲ್ಲಿಸಲು ತವಕದಿಂದ ಎದುರುನೋಡುತ್ತಿರುವಾಗ, “ಬೇರೆ ಕುರಿಗಳು” “ನಾಶದ ವಶದಿಂದ ಬಿಡುಗಡೆಯಾಗಿ ದೇವರ [ಭೌಮಿಕ] ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಪಾಲಿಗರಾಗಲು ನಿರೀಕ್ಷಿಸುತ್ತಾರೆ. (ಯೋಹಾನ 10:16; ರೋಮಾಪುರ 8:​19-21; ಫಿಲಿಪ್ಪಿ 3:20) ಆ “ಮಹಿಮೆಯುಳ್ಳ ವಿಮೋಚನೆಯಲ್ಲಿ” ಪಾಪ ಮತ್ತು ಅದರ ಭಯಂಕರ ಪರಿಣಾಮಗಳಿಂದ ಆಗುವ ಬಿಡುಗಡೆಯು ಸೇರಿದೆ. ಹೌದು, ‘ಎಲ್ಲಾ ಒಳ್ಳೇ ದಾನಗಳನ್ನೂ ಕುಂದಿಲ್ಲದ ಎಲ್ಲಾ ವರಗಳನ್ನೂ’ ನೀಡುವ ಯೆಹೋವನು ತನ್ನ ನಿಷ್ಠಾವಂತರಿಗೆ ಅತ್ಯತ್ತಮ ಕೊಡುಗೆಯನ್ನೇ ಕೊಡುತ್ತಾನೆ.​—⁠ಯಾಕೋಬ 1:17; ಯೆಶಾಯ 25:⁠8.

5 ನಮ್ಮ ಜೀವನದಲ್ಲಿ ಕ್ರೈಸ್ತ ನಿರೀಕ್ಷೆ ಎಷ್ಟು ದೊಡ್ಡ ಪಾತ್ರವನ್ನು ವಹಿಸಬೇಕು? ರೋಮಾಪುರ 15:​13, (NIBV)ರಲ್ಲಿ ನಾವು ಓದುವುದು: “ನಿರೀಕ್ಷೆಯ ಮೂಲವಾಗಿರುವ ದೇವರು ನೀವು ಪವಿತ್ರಾತ್ಮನ ಶಕ್ತಿಯ ಮೂಲಕ ನಿರೀಕ್ಷೆಯಿಂದ ಸಮೃದ್ಧಿಯುಳ್ಳವರಾಗಿರುವಂತೆ ನಿಮ್ಮನ್ನು ನಂಬಿಕೆಯಿಂದುಂಟಾಗುವ ಸಕಲ ಸಂತೋಷ ಮತ್ತು ಸಮಾಧಾನಗಳಿಂದ ತುಂಬಲಿ.” ಹೌದು, ನಿರೀಕ್ಷೆಯನ್ನು ಕತ್ತಲೆಯಲ್ಲಿ ಉರಿಯುವ ದೀಪಕ್ಕಲ್ಲ ಬದಲಿಗೆ, ಅರುಣೋದಯದ ಸೂರ್ಯನ ಪ್ರಜ್ವಲಿಸುವ ಕಿರಣಗಳಿಗೆ ಹೋಲಿಸಸಾಧ್ಯವಿದೆ. ಇದು, ಒಬ್ಬನ ಜೀವನವನ್ನು ಶಾಂತಿ, ಸಂತೋಷ, ಉದ್ದೇಶ ಮತ್ತು ಧೈರ್ಯದಿಂದ ತುಂಬಿಸುತ್ತದೆ. ನಾವು ‘ನಿರೀಕ್ಷೆಯಲ್ಲಿ ಸಮೃದ್ಧರಾಗುವುದು,’ ದೇವರ ಲಿಖಿತ ವಾಕ್ಯದಲ್ಲಿ ನಂಬಿಕೆಯನ್ನಿಟ್ಟು ಆತನ ಪವಿತ್ರಾತ್ಮವನ್ನು ಪಡೆಯುವಾಗಲೇ ಎಂಬುದನ್ನು ಗಮನಿಸಿರಿ. ರೋಮಾಪುರ 15:4 ಹೇಳುವುದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” ಆದಕಾರಣ ಹೀಗೆ ಪ್ರಶ್ನಿಸಿಕೊಳ್ಳಿ: ‘ನಾನು ಉತ್ತಮ ಬೈಬಲ್‌ ವಿದ್ಯಾರ್ಥಿಯಾಗಿ, ಬೈಬಲನ್ನು ಪ್ರತಿದಿನ ಓದುವ ಮೂಲಕ ನನ್ನ ನಿರೀಕ್ಷೆಯನ್ನು ಉಜ್ವಲವಾಗಿ ಇಡುತ್ತೇನೊ? ನಾನು ಪದೇಪದೇ ದೇವರ ಆತ್ಮಕ್ಕಾಗಿ ಪ್ರಾರ್ಥಿಸುತ್ತೇನೊ?’​—⁠ಲೂಕ 11:13.

6 ನಮ್ಮ ಆದರ್ಶವಾಗಿರುವ ಯೇಸು ದೇವರ ವಾಕ್ಯದ ಶಕ್ತಿಯಿಂದ ಬಲಹೊಂದಿದನು. ನಾವು ಅವನ ಕುರಿತು ಗಾಢವಾಗಿ ಆಲೋಚಿಸುವ ಮೂಲಕ ‘ಮನಗುಂದುವುದರಿಂದಲೂ ಬೇಸರಗೊಳ್ಳುವುದರಿಂದಲೂ’ ದೂರವಿರುವೆವು. (ಇಬ್ರಿಯ 12:⁠3) ನಮ್ಮ ದೇವದತ್ತ ನಿರೀಕ್ಷೆಯು ನಮ್ಮ ಹೃದಮನಗಳಲ್ಲಿ ಮಂದಗೊಳ್ಳುವುದಾದರೆ ಇಲ್ಲವೆ ನಮ್ಮ ಕೇಂದ್ರೀಕರಣ ಬೇರೆ ದಿಕ್ಕಿಗೆ​—⁠ಪ್ರಾಯಶಃ ಪ್ರಾಪಂಚಿಕತೆಯ ಕಡೆಗೆ ಇಲ್ಲವೆ ಐಹಿಕ ಗುರಿಗಳ ಕಡೆಗೆ​—⁠ತಿರುಗುವುದಾದರೆ, ಆಧ್ಯಾತ್ಮಿಕ ಬಳಲಿಕೆಯು ಬೇಗನೆ ನಮ್ಮ ಬೆನ್ನು ಹಿಡಿದು ಕ್ರಮೇಣ ನೈತಿಕ ಬಲ ಮತ್ತು ಧೈರ್ಯಗಳ ನಷ್ಟಕ್ಕೆ ನಡೆಸುತ್ತದೆಂಬುದು ನ್ಯಾಯಸಮ್ಮತ. ಆ ಮನೋಭಾವದ ಕಾರಣ ನಾವು, ‘ನಂಬಿಕೆಯ ವಿಷಯದಲ್ಲಿ ಹಡಗೊಡೆತವನ್ನು’ ಸಹ ಅನುಭವಿಸಿಯೇವು. (1 ತಿಮೊಥೆಯ 1:​19) ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಿಜ ನಿರೀಕ್ಷೆ ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ.

ನಿರೀಕ್ಷೆ​—⁠ನಂಬಿಕೆಗೆ ಆವಶ್ಯಕ

7 “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ” ಎನ್ನುತ್ತದೆ ಬೈಬಲ್‌. (ಇಬ್ರಿಯ 11:⁠1) ಈ ಕಾರಣದಿಂದ, ನಿರೀಕ್ಷೆಯು ನಂಬಿಕೆಗಿಂತ ಕಡಿಮೆ ಪ್ರಾಮುಖ್ಯವಾದ ಗುಣವೇನೂ ಅಲ್ಲ; ಅದು ನಂಬಿಕೆಯ ಆವಶ್ಯಕ ಅಂಶವಾಗಿದೆ. ಉದಾಹರಣೆಗೆ, ಅಬ್ರಹಾಮನನ್ನು ತೆಗೆದುಕೊಳ್ಳಿ. ಯೆಹೋವನು ಬಾಧ್ಯಸ್ಥನ ಕುರಿತು ವಾಗ್ದಾನಮಾಡಿದಾಗ, ಮಾನವ ದೃಷ್ಟಿಕೋನದಲ್ಲಿ, ಅವನು ಮತ್ತು ಅವನ ಪತ್ನಿ ಸಾರಳು ಮಕ್ಕಳನ್ನು ಹಡೆಯುವ ಪ್ರಾಯವನ್ನು ಮೀರಿದ್ದರು. (ಆದಿಕಾಂಡ 17:​15-17) ಆದರೆ ಅಬ್ರಹಾಮನ ಪ್ರತಿವರ್ತನೆಯೇನಾಗಿತ್ತು? “ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ [ಅವನು] ನಿರೀಕ್ಷಿಸಿ ನಂಬಿದನು.” (ರೋಮಾಪುರ 4:18) ಹೌದು, ಅಬ್ರಹಾಮನ ದೇವದತ್ತ ನಿರೀಕ್ಷೆಯು, ತನಗೆ ಸಂತಾನವಿರುವುದು ಎಂಬ ಅವನ ನಂಬಿಕೆಗೆ ಸ್ಥಿರವಾದ ಅಸ್ತಿವಾರವನ್ನು ಕೊಟ್ಟಿತು. ಮತ್ತು ಇದರ ಪರಿಣಾಮವಾಗಿ ಅವನ ನಂಬಿಕೆಯು ಅವನ ನಿರೀಕ್ಷೆಯನ್ನು ಉಜ್ವಲ ಮಾಡಿ ಬಲಪಡಿಸಿತು. ಅಷ್ಟೇ ಅಲ್ಲ, ಅಬ್ರಹಾಮ ಮತ್ತು ಸಾರಳು ತಮ್ಮ ಮನೆ ಹಾಗೂ ಸಂಬಂಧಿಕರನ್ನು ಬಿಟ್ಟು, ಉಳಿದ ಜೀವನವನ್ನು ವಿದೇಶವೊಂದರಲ್ಲಿ ಡೇರೆಯಲ್ಲಿ ಕಳೆಯುವಂತೆಯೂ ಧೈರ್ಯವನ್ನು ಕೊಟ್ಟಿತು!

8 ಅಬ್ರಹಾಮನು ಯೆಹೋವನಿಗೆ ಸಂಪೂರ್ಣವಾಗಿ ವಿಧೇಯನಾಗುವ ಮೂಲಕ, ಇದು ಅವನಿಗೆ ಕಷ್ಟಕರವಾಗಿದ್ದಾಗಲೂ ಹಾಗೆ ಮಾಡುವ ಮೂಲಕ ತನ್ನ ನಿರೀಕ್ಷೆಯನ್ನು ಸ್ಥಿರವಾಗಿಟ್ಟನು. (ಆದಿಕಾಂಡ 22:​2, 12) ಅದೇ ರೀತಿ, ಯೆಹೋವನ ಸೇವೆಯಲ್ಲಿ ವಿಧೇಯತೆ ಮತ್ತು ತಾಳ್ಮೆಯನ್ನು ತೋರಿಸುವ ಮೂಲಕ ನಾವು ನಮ್ಮ ಪ್ರತಿಫಲದ ವಿಷಯದಲ್ಲಿ ಖಾತ್ರಿಯಿಂದಿರಬಲ್ಲೆವು. ಪೌಲನು ಬರೆದುದು: “ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.” (ರೋಮಾಪುರ 5:​4, 5) ಆ ಕಾರಣದಿಂದಲೇ, ಪೌಲನು ಹೀಗೂ ಬರೆದನು: “ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ.” (ಇಬ್ರಿಯ 6:11) ಯೆಹೋವನೊಂದಿಗಿನ ಆಪ್ತ ಸಂಬಂಧದ ಮೇಲೆ ಆಧಾರಿತವಾದ ಇಂತಹ ಸಕಾರಾತ್ಮಕ ಹೊರನೋಟವು, ನಾವು ಯಾವುದೇ ಕಷ್ಟವನ್ನು ಧೈರ್ಯದಿಂದ, ಮಾತ್ರವಲ್ಲ ಆನಂದದಿಂದಲೂ ಎದುರಿಸುವಂತೆ ಸಹಾಯಮಾಡಬಲ್ಲದು.

‘ನಿರೀಕ್ಷೆಯಲ್ಲಿ ಸಂತೋಷಿಸಿರಿ’

9 ಈ ಜಗತ್ತು ನೀಡಬಲ್ಲ ಯಾವುದೇ ವಿಷಯಕ್ಕಿಂತಲೂ ನಮ್ಮ ದೇವದತ್ತ ನಿರೀಕ್ಷೆ ಎಷ್ಟೋ ಶ್ರೇಷ್ಠವಾಗಿದೆ. ಕೀರ್ತನೆ 37:34 ಹೇಳುವುದು: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು. ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.” ಹೌದು, “ನಿರೀಕ್ಷೆಯಲ್ಲಿ ಸಂತೋಷ”ಪಡಲು ನಮಗೆ ಸಕಲ ಕಾರಣಗಳೂ ಇವೆ. (ರೋಮಾಪುರ 12:​12, NIBV) ಆದರೆ ಹಾಗೆ ಸಂತೋಷಿಸಬೇಕಾದರೆ ನಾವು ನಮ್ಮ ನಿರೀಕ್ಷೆಯನ್ನು ಮನಸ್ಸಿನಲ್ಲಿ ಸದಾ ಹಚ್ಚಹಸುರಾಗಿಡಬೇಕು. ಹಾಗಾದರೆ ನೀವು ನಿಮ್ಮ ದೇವದತ್ತ ನಿರೀಕ್ಷೆಯ ಕುರಿತು ಕ್ರಮವಾಗಿ ಆಲೋಚಿಸುತ್ತೀರಾ? ಪರದೈಸಿನಲ್ಲಿ ಉತ್ತಮ ಆರೋಗ್ಯದಿಂದ ನಳನಳಿಸುತ್ತ, ವ್ಯಾಕುಲರಹಿತರಾಗಿ, ನೀವು ಪ್ರೀತಿಸುವ ಜನರಿಂದ ಆವೃತರಾಗಿ, ನಿಜವಾಗಿಯೂ ತೃಪ್ತಿಗೊಳಿಸುವ ಕೆಲಸದಲ್ಲಿ ನೀವು ಭಾಗಿವಹಿಸುತ್ತಿರುವುದನ್ನು ಚಿತ್ರಿಸಿಕೊಳ್ಳಬಲ್ಲಿರಾ? ನಮ್ಮ ಸಾಹಿತ್ಯಗಳಲ್ಲಿ ಬಂದಿರುವ ಪರದೈಸಿನ ದೃಶ್ಯಗಳ ಕುರಿತು ನೀವು ಮನನಮಾಡುತ್ತೀರಾ? ಇದನ್ನು ಕ್ರಮವಾಗಿ ಆಲೋಚಿಸುವುದನ್ನು, ಶೋಭಾಯಮಾನವಾದ ದೃಶ್ಯವು ತೋರಿಬರುವ ಕಿಟಕಿಯ ಕನ್ನಡಿಯನ್ನು ಒರಸಿ ಶುಚಿಮಾಡುವುದಕ್ಕೆ ಹೋಲಿಸಬಹುದು. ನಾವು ಕನ್ನಡಿಯನ್ನು ಶುಚಿಯಾಗಿಡಲು ಅಸಡ್ಡೆ ಮಾಡುವಲ್ಲಿ ಕೊಳೆ, ಕಲ್ಮಶಗಳು ಆ ದೃಶ್ಯದ ಶುಭ್ರತೆ ಮತ್ತು ಆಕರ್ಷಣೀಯತೆಯನ್ನು ನಮಗೆ ಮರೆಮಾಡುವುವು. ಆಗ ಇನ್ನಿತರ ವಿಷಯಗಳು ನಮ್ಮ ಗಮನವನ್ನು ಸೆಳೆದಾವು. ಆದರೆ ಇದು ನಮಗೆ ಎಂದಿಗೂ ಸಂಭವಿಸದಿರಲಿ!

10 ನಾವು ಯೆಹೋವನನ್ನು ಸೇವಿಸಲು ಮುಖ್ಯ ಕಾರಣವು ನಮಗೆ ಆತನ ಮೇಲೆ ಪ್ರೀತಿಯಿರುವುದರಿಂದಲೇ ಎಂಬುದು ನಿಶ್ಚಯ. (ಮಾರ್ಕ 12:30) ಹೀಗಿದ್ದರೂ, ನಾವು ಪ್ರತಿಫಲಕ್ಕಾಗಿ ಆತುರದಿಂದ ಎದುರುನೋಡಬೇಕು. ವಾಸ್ತವದಲ್ಲಿ, ನಾವು ಹಾಗೆ ಮಾಡಬೇಕೆಂದು ಯೆಹೋವನು ನಿರೀಕ್ಷಿಸುತ್ತಾನೆ! ಇಬ್ರಿಯ 11:6 ಹೇಳುವದು: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” ಯೆಹೋವನನ್ನು ಪ್ರತಿಫಲ ನೀಡುವಾತನೆಂದು ನಾವು ವೀಕ್ಷಿಸಬೇಕೆಂದು ಆತನು ಏಕೆ ಬಯಸುತ್ತಾನೆ? ಏಕೆಂದರೆ ನಾವು ಹಾಗೆ ವೀಕ್ಷಿಸುವಲ್ಲಿ, ನಮ್ಮ ಸ್ವರ್ಗೀಯ ತಂದೆಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆಯೆಂದು ನಾವು ತೋರಿಸಿಕೊಡುತ್ತೇವೆ. ಆತನು ಉದಾರಿಯೂ ತನ್ನ ಮಕ್ಕಳನ್ನು ಪ್ರೀತಿಸುವವನೂ ಆಗಿದ್ದಾನೆ. ‘ಭವಿಷ್ಯತ್ತು ಮತ್ತು ನಿರೀಕ್ಷೆ’ ನಮಗೆ ಇಲ್ಲದಿರುತ್ತಿದ್ದಲ್ಲಿ ನಾವು ಎಷ್ಟು ಅಸಂತೋಷಿಗಳೂ ಸುಲಭವಾಗಿ ನಿರಾಶೆಗೊಳ್ಳವವರೂ ಆಗಿರುತ್ತಿದ್ದೆವೆಂಬುದನ್ನು ಯೋಚಿಸಿರಿ.​—⁠ಯೆರೆಮೀಯ 29:​11, NW.

11 ದೇವದತ್ತ ನಿರೀಕ್ಷೆಯ ಮೇಲೆ ಕೇಂದ್ರೀಕೃತರಾಗಿದ್ದವರಲ್ಲಿ ಮೋಶೆ ಒಂದು ಗಮನಾರ್ಹ ಮಾದರಿಯಾಗಿದ್ದಾನೆ. “ಫರೋಹನ ಕುಮಾರ್ತೆಯ ಮಗ”ನಾಗಿದ್ದ ಮೋಶೆಯ ಕೈಯಲ್ಲಿ ಅಧಿಕಾರ, ಘನತೆ ಮತ್ತು ಐಗುಪ್ತದ ಐಶ್ವರ್ಯವಿತ್ತು. ಆದರೆ ಅವನು ಇವನ್ನೇ ಬೆನ್ನಟ್ಟುವನೊ ಇಲ್ಲವೆ ಯೆಹೋವನ ಸೇವೆಯನ್ನೊ? ಮೋಶೆ ಎರಡನೆಯದನ್ನು ಧೈರ್ಯದಿಂದ ಆರಿಸಿಕೊಂಡನು. ಕಾರಣವೇನು? ಅವನು, “ಪ್ರತಿಫಲದ ಮೇಲೆ [ಶ್ರದ್ಧಾಪೂರ್ವಕವಾಗಿ, NW] ಕಣ್ಣಿಟ್ಟಿದ್ದನು.” (ಇಬ್ರಿಯ 11:​24-26) ಹೌದು, ಯೆಹೋವನು ತನ್ನ ಮುಂದೆ ಇಟ್ಟಿದ್ದ ನಿರೀಕ್ಷೆಯ ವಿಷಯದಲ್ಲಿ ಮೋಶೆ ಖಂಡಿತ ಉದಾಸೀನ ಭಾವದವನಾಗಿರಲಿಲ್ಲ.

12 ಅಪೊಸ್ತಲ ಪೌಲನು ನಿರೀಕ್ಷೆಯನ್ನು ಶಿರಸ್ತ್ರಾಣಕ್ಕೆ ಹೋಲಿಸಿದನು. ನಮ್ಮ ಸಾಂಕೇತಿಕ ಶಿರಸ್ತ್ರಾಣವು ನಮ್ಮ ಮಾನಸಿಕ ಶಕ್ತಿಗಳನ್ನು ಕಾಪಾಡಿ, ನಾವು ವಿವೇಕಯುತ ನಿರ್ಣಯಗಳನ್ನು ಮಾಡುವಂತೆಯೂ ಸ್ವಸ್ಥವಾದ ಆದ್ಯತೆಗಳನ್ನು ಇಡುವಂತೆಯೂ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆಯೂ ಸಾಧ್ಯಮಾಡುತ್ತದೆ. (1 ಥೆಸಲೊನೀಕ 5:⁠8) ಹಾಗಾದರೆ ನಿಮ್ಮ ಸಾಂಕೇತಿಕ ಶಿರಸ್ತ್ರಾಣವನ್ನು ನೀವು ಸದಾ ತೊಟ್ಟುಕೊಂಡಿದ್ದೀರೋ? ಹಾಗಿರುವಲ್ಲಿ, ಮೋಶೆ ಮತ್ತು ಪೌಲನಂತೆ ನೀವು, “ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ” ದೇವರ ಮೇಲೆ ನಿರೀಕ್ಷೆಯನ್ನಿಡುವಿರಿ. ಸ್ವಾರ್ಥ ಬೆನ್ನಟ್ಟುವಿಕೆಗಳನ್ನು ತೊರೆಯುವ ಮೂಲಕ ಜನಪ್ರೀಯ ಪ್ರವೃತ್ತಿಗಳನ್ನು ಸ್ವೀಕರಿಸದಿರಲು ನಮಗೆ ಧೈರ್ಯ ಅಗತ್ಯವೆಂಬುದು ನಿಜ. ಆದರೆ ಇದಕ್ಕಾಗಿ ಮಾಡುವ ಪ್ರಯತ್ನವು ಸಾರ್ಥಕ! ವಾಸ್ತವದಲ್ಲಿ, ಯೆಹೋವನಲ್ಲಿ ನಿರೀಕ್ಷೆ ಮತ್ತು ಪ್ರೀತಿಯನ್ನಿಡುವವರಿಗಾಗಿ ಕಾದಿರಿಸಲ್ಪಟ್ಟಿರುವ “ವಾಸ್ತವವಾದ ಜೀವ”ಕ್ಕಿಂತ ಕಡಮೆಯಾಗಿರುವುದನ್ನು ನಾವೇಕೆ ಸ್ವೀಕರಿಸಬೇಕು?​—⁠1 ತಿಮೊಥೆಯ 6:​17, 19.

“ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ”

13 ಇಂದಿನ ವ್ಯವಸ್ಥೆಯಲ್ಲಿ ನಿರೀಕ್ಷೆಯನ್ನಿಡುವವರು, ಈ ಲೋಕವು ಹೆಚ್ಚುತ್ತಿರುವ “ಪ್ರಸವವೇದನೆ”ಯಿಂದ ಕಷ್ಟಾನುಭವಿಸುತ್ತಿರುವಾಗ, ತಮಗೆ ಮುಖಮಾಡಿ ನಿಂತಿರುವ ಭಯಂಕರ ಸಂಗತಿಗಳ ಕುರಿತು ಗಂಭೀರವಾಗಿ ಯೋಚಿಸತಕ್ಕದ್ದು. (ಮತ್ತಾಯ 24:⁠8) ಆದರೆ ಯೆಹೋವನನ್ನು ನಿರೀಕ್ಷಿಸುವವರಿಗೆ ಅಂಥ ಭಯವಿರುವುದಿಲ್ಲ. ಅವರು ‘ಯಾವ ಕೇಡಿಗೂ ಭಯಪಡದೆ ಸುರಕ್ಷಿತರಾಗಿರುವರು.’ (ಜ್ಞಾನೋಕ್ತಿ 1:33) ಅವರ ನಿರೀಕ್ಷೆಯು ಈಗಿನ ವ್ಯವಸ್ಥೆಯ ಮೇಲೆ ಇಲ್ಲದಿರುವ ಕಾರಣ, ಪೌಲನ ಈ ಸಲಹೆಯನ್ನು ಅವರು ಹರ್ಷದಿಂದ ಅನುಸರಿಸುತ್ತಾರೆ: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.”​—⁠ಇಬ್ರಿಯ 13:⁠5.

14 “ಎಂದಿಗೂ” “ಎಂದಿಗೂ” ಎಂಬ ಈ ಪ್ರಬಲ ಒತ್ತುಗಳುಳ್ಳ ಪದಗಳು ನಿಸ್ಸಂದೇಹವಾಗಿ ದೇವರು ನಮ್ಮನ್ನು ಪರಾಮರಿಸುವನೆಂಬುದನ್ನು ತೋರಿಸುತ್ತವೆ. ದೇವರ ಪ್ರೀತಿಪರ ಕಾಳಜಿಯ ವಿಷಯದಲ್ಲಿ ಭರವಸೆ ನೀಡುತ್ತಾ ಯೇಸು ಕೂಡ ಹೀಗೆ ಹೇಳಿದನು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. ಆದದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.” (ಮತ್ತಾಯ 6:​33, 34) ಯೆಹೋವನ ರಾಜ್ಯಕ್ಕಾಗಿ ಹುರುಪಿನಿಂದಿರುವುದು ಮತ್ತು ಅದೇ ಸಮಯದಲ್ಲಿ, ನಮ್ಮ ಶಾರೀರಿಕ ಆವಶ್ಯಕತೆಗಳನ್ನು ಪೂರೈಸುವ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಕಷ್ಟಕರವೆಂದು ಆತನಿಗೆ ಗೊತ್ತಿದೆ. ಆದಕಾರಣ, ನಮ್ಮ ಆವಶ್ಯಕತೆಗಳನ್ನು ಪೂರೈಸಲು ಆತನಿಗಿರುವ ಇಚ್ಛೆ ಮತ್ತು ಸಾಮರ್ಥ್ಯದ ಮೇಲೆ ನಾವು ಪೂರ್ಣ ಭರವಸೆ ಇಡೋಣ.​—⁠ಮತ್ತಾಯ 6:​25-32; 11:​28-30.

15 ನಮ್ಮ “ಕಣ್ಣು ನೆಟ್ಟಗಿದ್ದರೆ” ಅಂದರೆ ಸರಳವಾಗಿರುವುದಾದರೆ ನಾವು ಯೆಹೋವನ ಮೇಲೆ ಹೊಂದಿಕೊಂಡಿದ್ದೇವೆ ಎಂಬುದನ್ನು ತೋರಿಸಿಕೊಡುತ್ತೇವೆ. (ಮತ್ತಾಯ 6:​22, 23) ಸರಳವಾದ ಕಣ್ಣು ಯಥಾರ್ಥತೆ, ನಿರ್ಮಲ ಪ್ರಚೋದನೆ ಮತ್ತು ಲೋಭ ಹಾಗೂ ಸ್ವಾರ್ಥದ ಹೆಬ್ಬಯಕೆ ಇಲ್ಲದಿರುವುದನ್ನು ತೋರಿಸುತ್ತದೆ. ಕಣ್ಣು ಸರಳವಾಗಿರುವುದೆಂದರೆ, ಕಡು ಬಡತನದಲ್ಲಿರುವುದು ಇಲ್ಲವೆ ನಮ್ಮ ಕ್ರೈಸ್ತ ಜವಾಬ್ದಾರಿಯನ್ನು ನೋಡಿಕೊಳ್ಳುವ ವಿಷಯದಲ್ಲಿ ಅಲಕ್ಷ್ಯವನ್ನು ತೋರಿಸುವುದು ಎಂಬ ಅರ್ಥವನ್ನು ಕೊಡುವುದಿಲ್ಲ. ಬದಲಿಗೆ, ನಾವು ಯೆಹೋವನ ಸೇವೆಯನ್ನು ಪ್ರಥಮವಾಗಿಡುವಾಗ, ‘ಸ್ವಸ್ಥಚಿತ್ತವನ್ನು’ ತೋರಿಸುವುದೆಂದರ್ಥ.​—⁠2 ತಿಮೊಥೆಯ 1:​7, NW.

16 ಸದಾ ಕಣ್ಣನ್ನು ಸರಳವಾಗಿಡಲು ನಂಬಿಕೆ ಮತ್ತು ಧೈರ್ಯ ಅಗತ್ಯ. ಉದಾಹರಣೆಗೆ, ಮಾಲೀಕನೊಬ್ಬನು ನಿಮಗೆ ಕ್ರೈಸ್ತ ಕೂಟಗಳಿರುವಂಥ ಸಮಯದಲ್ಲಿ ಯಾವಾಗಲೂ ಕೆಲಸ ಮಾಡಬೇಕೆಂದು ಪಟ್ಟುಹಿಡಿಯುವಾಗ, ನೀವು ನಿಮ್ಮ ಆಧ್ಯಾತ್ಮಿಕ ಆದ್ಯತೆಗಳಿಗೆ ಧೈರ್ಯದಿಂದ ಅಂಟಿಕೊಳ್ಳುವಿರೋ? ಯೆಹೋವನು ತನ್ನ ಸೇವಕರನ್ನು ಪರಾಮರಿಸುವ ವಾಗ್ದಾನವನ್ನು ಪೂರೈಸುವನೋ ಎಂದು ಒಬ್ಬನು ಸಂಶಯಪಡುತ್ತಿರುವಲ್ಲಿ ಆಗ ಸೈತಾನನು ಕೇವಲ ಒತ್ತಡವನ್ನು ಹೆಚ್ಚಿಸಿದರೆ ಸಾಕು, ಅಂಥ ವ್ಯಕ್ತಿ ಕೂಟಗಳಿಗೆ ಹಾಜರಾಗುವುದನ್ನೇ ಪೂರ್ತಿಯಾಗಿ ಬಿಟ್ಟುಬಿಡಬಹುದು. ಹೌದು, ನಮ್ಮಲ್ಲಿ ಕಂಡುಬರುವ ನಂಬಿಕೆಯ ಕೊರತೆಯು ಸೈತಾನನಿಗೆ ನಮ್ಮ ಮೇಲೆ ಹಿಡಿತವನ್ನು ಕೊಡಬಲ್ಲದು. ಆಗ ಯೆಹೋವನಲ್ಲ, ಸೈತಾನನೇ ನಮ್ಮ ಆದ್ಯತೆಗಳನ್ನು ನಿರ್ಣಯಿಸುವವನಾಗುತ್ತಾನೆ. ಅದು ಎಂಥ ದುರಂತವಾಗಿರುವುದು!​—⁠2 ಕೊರಿಂಥ 13:⁠5.

“ಯೆಹೋವನನ್ನು ನಿರೀಕ್ಷಿಸಿಕೊಂಡಿರು”

17 ಯೆಹೋವನನ್ನು ನಿರೀಕ್ಷಿಸಿ, ಆತನಲ್ಲಿ ಭರವಸೆಯಿಡುವವರು ಎಂದಿಗೂ ವಿಫಲಗೊಳ್ಳುವುದಿಲ್ಲವೆಂದು ಶಾಸ್ತ್ರವು ಪದೇಪದೇ ತೋರಿಸುತ್ತದೆ. (ಜ್ಞಾನೋಕ್ತಿ 3:​5, 6; ಯೆರೆಮೀಯ 17:⁠7) ನಿಜ, ಕೆಲವೊಮ್ಮೆ ಅವರು ತಮ್ಮಲ್ಲಿರುವುದರಲ್ಲೇ ತೃಪ್ತಿಪಡಬೇಕಾಗಬಹುದು, ಆದರೂ ತಮಗೆ ಸಿಗಲಿರುವ ಭಾವೀ ಆಶೀರ್ವಾದಗಳಿಗೆ ಹೋಲಿಸುವಾಗ ಇದೊಂದು ಚಿಕ್ಕ ತ್ಯಾಗವೆಂದು ಅವರು ಯೋಚಿಸುತ್ತಾರೆ. ಹೀಗೆ ತಾವು ‘ಯೆಹೋವನಲ್ಲಿ ನಿರೀಕ್ಷೆಯನ್ನಿಡುತ್ತೇವೆಂದು’ ಅವರು ತೋರಿಸಿಕೊಡುತ್ತಾರೆ ಮತ್ತು ಅಂತಿಮವಾಗಿ, ಆತನು ತನ್ನ ನಿಷ್ಠಾವಂತರ ಹೃದಯದ ಸಕಲ ನೀತಿಯ ಬಯಕೆಗಳನ್ನು ಈಡೇರಿಸುವನೆಂಬ ಭರವಸೆ ಅವರಿಗಿದೆ. (ಕೀರ್ತನೆ 37:​4, 34) ಈ ಕಾರಣದಿಂದ, ಅವರು ಈಗಲೂ ನಿಜ ಸಂತೋಷವನ್ನು ಅನುಭವಿಸುತ್ತಿದ್ದಾರೆ. “ಶಿಷ್ಟನ ನಂಬಿಕೆಗೆ ಆನಂದವು ಫಲ; ದುಷ್ಟನ ನಿರೀಕ್ಷೆ ನಿಷ್ಫಲ.”​—⁠ಜ್ಞಾನೋಕ್ತಿ 10:28.

18 ಚಿಕ್ಕ ಹುಡುಗನೊಬ್ಬನು ತನ್ನ ತಂದೆಯ ಕೈಹಿಡಿದು ನಡೆಯುವಾಗ, ಅವನಿಗೆ ಸುರಕ್ಷೆಯ ಅನುಭವವಾಗುತ್ತದೆ. ನಾವು ನಮ್ಮ ಸ್ವರ್ಗೀಯ ತಂದೆಯೊಂದಿಗೆ ನಡೆಯುವಾಗಲೂ ಇದೇ ಅನುಭವವಾಗುತ್ತದೆ. ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದು: “ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, . . . ಹೌದು, ನಿನಗೆ ಸಹಾಯಕೊಡುತ್ತೇನೆ; . . . ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”​—⁠ಯೆಶಾಯ 41:​10, 13.

19 ಯೆಹೋವನು ಒಬ್ಬನ ಕೈಹಿಡಿಯುವುದು​—⁠ಎಂಥ ಪ್ರೀತಿಯ ಚಿತ್ರಣವಾಗಿದೆ! ದಾವೀದನು ಬರೆದುದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” (ಕೀರ್ತನೆ 16:⁠8) ನಾವು ಯೆಹೋವನನ್ನು ನಮ್ಮ “ಬಲಗಡೆಯಲ್ಲಿ” ಇಟ್ಟುಕೊಳ್ಳುವುದು ಹೇಗೆ? ಕಡಮೆಪಕ್ಷ ಎರಡು ವಿಧಗಳಲ್ಲಿ ನಾವಿದನ್ನು ಮಾಡುತ್ತೇವೆ. ಒಂದು, ಆತನ ವಾಕ್ಯ ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಮಾರ್ಗದರ್ಶಿಸುವಂತೆ ಬಿಡುತ್ತೇವೆ; ಮತ್ತು ಎರಡು, ಯೆಹೋವನು ನಮ್ಮ ಮುಂದೆ ಇಟ್ಟಿರುವ ಮಹಿಮಾಭರಿತ ಉಡುಗೊರೆಯ ಮೇಲೆ ನಾವು ಗಮನವನ್ನು ಕೇಂದ್ರೀಕರಿಸುತ್ತೇವೆ. ಕೀರ್ತನೆಗಾರ ಆಸಾಫನು ಹಾಡಿದ್ದು: “ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.” (ಕೀರ್ತನೆ 73:23, 24) ಇಂಥ ಆಶ್ವಾಸನೆ ನಮಗಿರುವುದರಿಂದ ನಾವು ಭವಿಷ್ಯತ್ತನ್ನು ನಿಜವಾಗಿಯೂ ಭರವಸೆಯಿಂದ ಎದುರಿಸಬಲ್ಲೆವು.

“ನಿಮ್ಮ ಬಿಡುಗಡೆಯು ಸಮೀಪವಾಗಿದೆ”

20 ಪ್ರತಿ ದಿನ ಕಳೆದಂತೆ ನಾವು ಯೆಹೋವನನ್ನು ನಮ್ಮ ಬಲಗಡೆಯಲ್ಲಿ ಇಟ್ಟುಕೊಳ್ಳುವುದು ಹೆಚ್ಚು ತುರ್ತಿನದ್ದಾಗಿದೆ. ಬೇಗನೆ, ಸುಳ್ಳು ಧರ್ಮದ ನಾಶನದಿಂದ ಹಿಡಿದು, ಸೈತಾನನ ಲೋಕವು ಹಿಂದೆಂದೂ ಅನುಭವಿಸದಿರುವ ರೀತಿಯ ಸಂಕಟವನ್ನು ಅನುಭವಿಸುವುದು. (ಮತ್ತಾಯ 24:21) ನಂಬಿಕೆರಹಿತ ಮಾನವಕುಲವನ್ನು ಭಯವು ಆವರಿಸುವುದು. ಆದರೂ, ಆ ಅಸ್ತವ್ಯಸ್ತತೆಯ ಸಮಯದಲ್ಲಿ ಯೆಹೋವನ ಧೀರ ಸೇವಕರು ತಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸುವರು! ಯೇಸು ಹೇಳಿದ್ದು: “ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”​—⁠ಲೂಕ 21:28.

21 ಆದುದರಿಂದ ನಾವು ನಮ್ಮ ದೇವದತ್ತ ನಿರೀಕ್ಷೆಯಲ್ಲಿ ಸಂತೋಷಿಸೋಣ. ಮತ್ತು ಸೈತಾನನ ಜಾಣತನದ ಅಪಕರ್ಷಣೆಗಳಿಂದ ವಂಚಿತರಾಗದೆ ಅಥವಾ ದುಷ್ಪ್ರೇರಣೆಗೊಳಗಾಗದೆ ಇರೋಣ. ಅದೇ ಸಮಯದಲ್ಲಿ ನಂಬಿಕೆ, ಪ್ರೀತಿ, ಮತ್ತು ದೇವಭಯವನ್ನು ಬೆಳೆಸಿಕೊಳ್ಳಲು ಪ್ರಯಾಸಪಡೋಣ. ಹಾಗೆ ಮಾಡುವಲ್ಲಿ, ಎಲ್ಲ ಸನ್ನಿವೇಶಗಳ ಮಧ್ಯೆಯೂ ಯೆಹೋವನಿಗೆ ವಿಧೇಯರಾಗಲು ಮತ್ತು ಪಿಶಾಚನನ್ನು ಎದುರಿಸಲು ಬೇಕಾದ ಧೈರ್ಯವು ನಮ್ಮಲ್ಲಿರುವುದು. (ಯಾಕೋಬ 4:​7, 8) ಹೌದು, “ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.”​—⁠ಕೀರ್ತನೆ 31:24. (w06 10/1)

[ಪಾದಟಿಪ್ಪಣಿ]

^ ಪ್ಯಾರ. 3 ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲಿ “ನಿರೀಕ್ಷೆ” ಎಂಬ ಪದವು ಅನೇಕ ಬಾರಿ ಅಭಿಷಿಕ್ತ ಕ್ರೈಸ್ತರ ಸ್ವರ್ಗೀಯ ಬಹುಮಾನಕ್ಕೆ ಅನ್ವಯಿಸುವುದಾದರೂ, ಈ ಲೇಖನದಲ್ಲಿ ನಿರೀಕ್ಷೆಯನ್ನು ಸಾಮಾನ್ಯ ಅರ್ಥದಲ್ಲಿ ಚರ್ಚಿಸಲಾಗಿದೆ.

ಉತ್ತರಿಸುವಿರಾ?

• ಯೇಸುವಿನ ನಿರೀಕ್ಷೆ ಅವನ ಧೈರ್ಯಕ್ಕೆ ಯಾವ ವಿಧದಲ್ಲಿ ನೆರವಾಯಿತು?

• ನಂಬಿಕೆ ಮತ್ತು ನಿರೀಕ್ಷೆ ಪರಸ್ಪರ ಹೇಗೆ ಸಂಬಂಧಿಸಿವೆ?

• ನಿರೀಕ್ಷೆ ಮತ್ತು ನಂಬಿಕೆಯು ಒಬ್ಬ ಕ್ರೈಸ್ತನು ಜೀವನದಲ್ಲಿ ಸ್ವಸ್ಥ ಆದ್ಯತೆಗಳನ್ನಿಡುವಂತೆ ಹೇಗೆ ಧೈರ್ಯವನ್ನು ಕೊಡಬಲ್ಲದು?

• ‘ಯೆಹೋವನನ್ನು ನಿರೀಕ್ಷಿಸುವವರು’ ಭವಿಷ್ಯತ್ತನ್ನು ಏಕೆ ಭರವಸೆಯಿಂದ ಎದುರುನೋಡಬಲ್ಲರು?

[ಅಧ್ಯಯನ ಪ್ರಶ್ನೆಗಳು]

1. ನಿರೀಕ್ಷೆ ಎಷ್ಟು ಪ್ರಾಮುಖ್ಯ ಮತ್ತು ಶಾಸ್ತ್ರಗಳಲ್ಲಿ ಈ ಪದವನ್ನು ಹೇಗೆ ಬಳಸಲಾಗಿದೆ?

2. ಯೇಸುವಿನ ಜೀವನದಲ್ಲಿ ನಿರೀಕ್ಷೆ ಯಾವ ಪಾತ್ರವಹಿಸಿತು?

3. ನಿರೀಕ್ಷೆಯು ದೇವರ ಸೇವಕರ ಜೀವನದಲ್ಲಿ ಯಾವ ಪಾತ್ರವನ್ನು ವಹಿಸುತ್ತದೆ?

4. ಅಭಿಷಿಕ್ತ ಕ್ರೈಸ್ತರು ಮತ್ತು ‘ಬೇರೆ ಕುರಿಗಳಾದ’ ಅವರ ಸಂಗಾತಿಗಳು ಏನನ್ನು ಮನಃಪೂರ್ವಕವಾಗಿ ಎದುರುನೋಡುತ್ತಿದ್ದಾರೆ?

5. ನಾವು ‘ನಿರೀಕ್ಷೆಯಲ್ಲಿ ಸಮೃದ್ಧರು’ ಆಗುವುದು ಹೇಗೆ?

6. ನಮ್ಮ ನಿರೀಕ್ಷೆಯನ್ನು ಉಜ್ವಲವಾಗಿಡಲು ಯಾವುದರ ಕುರಿತು ಎಚ್ಚರಿಕೆಯಿಂದಿರಬೇಕು?

7. ನಿರೀಕ್ಷೆಯು ನಂಬಿಕೆಗೆ ಯಾವ ವಿಧದಲ್ಲಿ ಆವಶ್ಯಕ?

8. ನಂಬಿಗಸ್ತಿಕೆಯ ತಾಳ್ಮೆಯು ನಿರೀಕ್ಷೆಯನ್ನು ಬಲಪಡಿಸುವುದು ಹೇಗೆ?

9. ಕ್ರಮವಾಗಿ ಯಾವುದನ್ನು ಮಾಡುವುದು ನಾವು ‘ನಿರೀಕ್ಷೆಯಲ್ಲಿ ಸಮೃದ್ಧರಾಗಲು’ ಸಹಾಯಮಾಡಬಲ್ಲದು?

10. ನಾವು ಪ್ರತಿಫಲಕ್ಕಾಗಿ ಎದುರುನೋಡುವುದು, ಯೆಹೋವನ ಸಂಗಡ ನಮಗಿರುವ ಸಂಬಂಧವನ್ನು ಉತ್ತಮವಾಗಿ ಪ್ರತಿಬಿಂಬಿಸುವುದೇಕೆ?

11. ಮೋಶೆಯ ದೇವದತ್ತ ನಿರೀಕ್ಷೆಯು ಅವನು ವಿವೇಕಯುತ ನಿರ್ಣಯಗಳನ್ನು ಮಾಡುವಂತೆ ಹೇಗೆ ಸಹಾಯಮಾಡಿತು?

12. ಕ್ರೈಸ್ತ ನಿರೀಕ್ಷೆ ಶಿರಸ್ತ್ರಾಣದಂತಿರುವುದೇಕೆ?

13. ಯೆಹೋವನು ತನ್ನ ನಿಷ್ಠಾವಂತ ಸೇವಕರಿಗೆ ಯಾವ ಆಶ್ವಾಸನೆಯನ್ನು ನೀಡುತ್ತಾನೆ?

14. ಕ್ರೈಸ್ತರು ತಮ್ಮ ಪ್ರಾಪಂಚಿಕ ಆವಶ್ಯಕತೆಗಳ ಕುರಿತು ಅನಾವಶ್ಯಕವಾಗಿ ಚಿಂತಿಸಬೇಕಾಗಿಲ್ಲವೇಕೆ?

15. ಕ್ರೈಸ್ತರು ‘ಕಣ್ಣನ್ನು ಸರಳವಾಗಿಡುವುದು’ ಹೇಗೆ?

16. ಕಣ್ಣನ್ನು ಸರಳವಾಗಿಡಲು ನಂಬಿಕೆ ಮತ್ತು ಧೈರ್ಯ ಏಕೆ ಆವಶ್ಯಕ?

17. ಯೆಹೋವನಲ್ಲಿ ಭರವಸೆಯಿಡುವವರು ಈಗಲೂ ಹೇಗೆ ಆಶೀರ್ವದಿತರಾಗಿದ್ದಾರೆ?

18, 19. (ಎ) ಯಾವ ಪ್ರೀತಿಪರ ಆಶ್ವಾಸನೆಯನ್ನು ಯೆಹೋವನು ನಮಗೆ ಕೊಡುತ್ತಾನೆ? (ಬಿ) ನಾವು ಯೆಹೋವನನ್ನು ನಮ್ಮ “ಬಲಗಡೆಯಲ್ಲಿ” ಹೇಗೆ ಇಟ್ಟುಕೊಳ್ಳುತ್ತೇವೆ?

20, 21. ಯೆಹೋವನನ್ನು ನಿರೀಕ್ಷಿಸುವವರಿಗೆ ಯಾವ ಭವಿಷ್ಯವು ಕಾದಿದೆ?

[ಪುಟ 29ರಲ್ಲಿರುವ ಚಿತ್ರ]

ಎಳೆಯರೇ, ವೃದ್ಧರೇ, ನೀವು ಪರದೈಸಿನಲ್ಲಿ ನಿಮ್ಮನ್ನು ಚಿತ್ರಿಸಿಕೊಳ್ಳಬಲ್ಲಿರಾ?