ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧನಾದರೂ ಬಂಧಿತನಲ್ಲ

ವೃದ್ಧನಾದರೂ ಬಂಧಿತನಲ್ಲ

ವೃದ್ಧನಾದರೂ ಬಂಧಿತನಲ್ಲ

ಮುಪ್ಪು ಆವರಿಸಿದಾಗ ಹೆಚ್ಚಿನವರು ಶಾರೀರಿಕ ನ್ಯೂನತೆಯುಳ್ಳವರಾಗುತ್ತಾರೆ ಮತ್ತು ಸಮಾಜದಲ್ಲಿನ ಇತರರಿಂದ ಬೇರ್ಪಡಿಸಲ್ಪಡುತ್ತಾರೆ. ಆದರೆ ಇದು 95 ವರ್ಷ ಪ್ರಾಯದಲ್ಲಿ ಸ್ವಿಟ್ಸರ್‌ಲ್ಯಾಂಡ್‌ನ ಜೆನೀವಾದಲ್ಲಿ ನಿಧನರಾದ ಫೆರ್ನೊ ರಿವರಾಲ್‌ ಎಂಬವರ ವಿಷಯದಲ್ಲಿ ಸತ್ಯವಾಗಿರಲಿಲ್ಲ. ಅವರ ಪತ್ನಿಯು ಮರಣವನ್ನಪ್ಪಿದ್ದರಿಂದ ಮತ್ತು ಮಗಳು ಮದುವೆಯಾಗಿ ತನ್ನ ಸ್ವಂತ ಮನೆಯಲ್ಲಿದ್ದದರಿಂದ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಸಾಮಾನ್ಯವಾಗಿ ಮನೆಯಲ್ಲೇ ಇರುತ್ತಿದ್ದರೂ ಅವರನ್ನು ಒಂಟಿತನ ಕಾಡುತ್ತಿರಲಿಲ್ಲ. ಅವರು ಹೆಚ್ಚಾಗಿ ವಾಸದ ಕೊಠಡಿಯಲ್ಲಿದ್ದ ಮೇಜಿನ ಬಳಿ ಕುಳಿತುಕೊಂಡು ಟೆಲಿಫೋನನ್ನು ಬಳಸುತ್ತಾ ಜನರೊಂದಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಂಭಾಷಿಸುತ್ತಿದ್ದರು.

ಫೆರ್ನೊರವರ ಸ್ವಾರಸ್ಯಕರವಾದ ಜೀವನದಲ್ಲೊಮ್ಮೆ ಅವರು ನಿಜವಾಗಿಯೂ ಬಂಧಿತರಾಗಿದ್ದರು. ಏಕೆ? 1939ರಲ್ಲಿ ಫೆರ್ನೊ ಮತ್ತು ಅವರ ಪತ್ನಿ ಯೆಹೋವನ ಕ್ರಿಯಾಶೀಲ ಸಾಕ್ಷಿಗಳಾದ ಸ್ವಲ್ಪದರಲ್ಲೇ, ಯುರೋಪ್‌ನಲ್ಲಿ ಎರಡನೆಯ ಲೋಕ ಯುದ್ಧ ಸ್ಫೋಟಿಸಿತು. ಫೆರ್ನೊ ಯಾರಿಗೂ ಹಾನಿ ಮಾಡಬಾರದೆಂಬ ತಮ್ಮ ಬೈಬಲಾಧಾರಿತ ನಿರ್ಧಾರಕ್ಕೆ ಅಂಟಿಕೊಂಡಿದ್ದರು. ಆ ಕಾರಣದಿಂದ ಅವರು ತಮ್ಮ ಉದ್ಯೋಗವನ್ನು ಕಳೆದುಕೊಂಡರು ಮತ್ತು ಅನೇಕ ಸಲ ಸೆರೆಮನೆಯಲ್ಲಿ ಬಂಧಿಸಲ್ಪಟ್ಟರು. ಒಟ್ಟಿನಲ್ಲಿ ಅವರು ಐದೂವರೆ ವರ್ಷಕಾಲ ಸೆರೆಮನೆಯಲ್ಲಿ ಕಳೆದರು. ಈ ಸಮಯಾವಧಿಯಲ್ಲಿ ಅವರು ತಮ್ಮ ಪತ್ನಿ ಮತ್ತು ಪುಟ್ಟ ಮಗಳಿಂದ ಬೇರ್ಪಟ್ಟಿದ್ದರು.

ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಫೆರ್ನೊ ಹೇಳಿದ್ದು: “ಒಂದು ಭದ್ರವಾದ ಉದ್ಯೋಗವನ್ನು ಕೈಬಿಟ್ಟು ನನ್ನ ಕುಟುಂಬವನ್ನು ಬೀದಿಪಾಲು ಮಾಡಿದ್ದೇನೆಂದು ಅನೇಕ ಜನರಿಗೆ ತೋರಿತು. ಅವರು ನನ್ನನ್ನು ತುಚ್ಛವಾಗಿ, ಒಬ್ಬ ಅಪರಾಧಿಯಂತೆ ಕಂಡರು. ಹಾಗಿದ್ದರೂ ಆ ಕಠಿನ ವರ್ಷಗಳನ್ನು ನೆನಪಿಸಿಕೊಳ್ಳುವಾಗ ಬೇರಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ, ಯೆಹೋವನು ನಮಗೆ ಹೇಗೆ ಬೆಂಬಲಕೊಟ್ಟನು ಮತ್ತು ಸಹಾಯಮಾಡಿದನು ಎಂಬುದರ ನೆನಪೇ ಹಚ್ಚಹಸುರಾಗಿ ಉಳಿದಿದೆ. ಅಂದಿನಿಂದ ಅನೇಕ ವರ್ಷಗಳು ದಾಟಿವೆಯಾದರೂ ಯೆಹೋವನ ಮೇಲಿನ ನನ್ನ ಭರವಸೆಯು ಆವತ್ತಿನಂತೆ ಈವತ್ತೂ ಅಷ್ಟೇ ದೃಢವಾಗಿದೆ.”

ಫೆರ್ನೊರ ಈ ನಂಬಿಕೆಯೇ, ಅವರ ಬೈಬಲಾಧಾರಿತ ನಿರೀಕ್ಷೆಯನ್ನು ಇತರರೊಂದಿಗೆ ಫೋನಿನ ಮೂಲಕ ಹಂಚಿಕೊಳ್ಳುವಂತೆ ಅವರನ್ನು ಪ್ರಚೋದಿಸಿತ್ತು. ಯಾರಾದರೂ ಒಳ್ಳೇ ಪ್ರತಿಕ್ರಿಯೆ ತೋರಿಸಿದಾಗ ಅವರು ಆ ವ್ಯಕ್ತಿಗೆ ಬೈಬಲ್‌ ಸಾಹಿತ್ಯಗಳನ್ನು ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು. ಆ ವ್ಯಕ್ತಿ ಸಾಹಿತ್ಯವನ್ನು ಇಷ್ಟಪಟ್ಟರೊ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಅವರು ಪುನಃ ಫೋನ್‌ ಮಾಡುತ್ತಿದ್ದರು. ಕೆಲವೊಮ್ಮೆ ಜನರು ತಮ್ಮ ಗಣ್ಯತೆಯನ್ನು ಪತ್ರದ ಮೂಲಕ ವ್ಯಕ್ತಪಡಿಸುತ್ತಿದ್ದರು ಮತ್ತು ಇದರಿಂದ ಅವರಿಗೆ ತುಂಬ ಸಂತೋಷವಾಗುತ್ತಿತ್ತು.

ನಿಮ್ಮ ಸ್ಥಳದಲ್ಲಿ ಫೆರ್ನೊರಂತೆ ಯಾರಾದರೂ ನಿಮ್ಮನ್ನು ಸಂಪರ್ಕಿಸಬಹುದು. ಅವರ ನಂಬಿಕೆಗಳ ಕುರಿತು ತಿಳಿಯುವುದಕ್ಕಾಗಿ ಅವರು ಹೇಳುವ ವಿಷಯಕ್ಕೆ ಏಕೆ ಕಿವಿಗೊಡಬಾರದು? ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಯಾವಾಗಲೂ ಹರ್ಷಿಸುತ್ತಾರೆ. (w06 8/15)