ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ

ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ

ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ

“ನನ್ನ ಜೀವನದಲ್ಲಿನ ಹೆಚ್ಚು ಮಹತ್ವಪೂರ್ಣವಾದ ಹಾಗೂ ಹರ್ಷಮಯ ದಿನಗಳಲ್ಲಿ ನನ್ನ ವಿವಾಹದಿನವು ಒಂದಾಗಿದೆ” ಎಂದು ಸುಮಾರು 60 ವರ್ಷ ವೈವಾಹಿಕ ಜೀವನ ನಡೆಸಿರುವ ಗಾರ್ಡ್‌ನ್‌ ಹೇಳಿದರು. ವಿವಾಹದಿನವು ಸತ್ಕ್ರೈಸ್ತರಿಗೆ ಅಷ್ಟೊಂದು ಮಹತ್ವವುಳ್ಳದಾಗಿದೆ ಏಕೆ? ಏಕೆಂದರೆ, ಅವರು ತಮಗೆ ಅತಿ ಪ್ರೀತಿಪಾತ್ರರಾದ ಬಾಳಸಂಗಾತಿಗೂ ಯೆಹೋವ ದೇವರಿಗೂ ಒಂದು ಪವಿತ್ರ ಪ್ರತಿಜ್ಞೆಯನ್ನು ಮಾಡುವ ದಿನ ಅದಾಗಿದೆ. (ಮತ್ತಾಯ 22:37; ಎಫೆಸ 5:22-29) ಹೌದು, ವಿವಾಹವಾಗಲು ಯೋಜಿಸುತ್ತಿರುವ ಗಂಡು-ಹೆಣ್ಣು ತಮ್ಮ ವಿವಾಹದಿನದಲ್ಲಿ ಆನಂದಿಸಲು ಬಯಸುವುದು ಮಾತ್ರವಲ್ಲ, ವಿವಾಹದ ಸ್ಥಾಪಕನಿಗೂ ಗೌರವ ಕೊಡಲು ಬಯಸುತ್ತಾರೆ.​—⁠ಆದಿಕಾಂಡ 2:18-24; ಮತ್ತಾಯ 19:5, 6.

ವರನು ಈ ಸಂತೋಷ ಸಮಾರಂಭದ ಘನತೆಯನ್ನು ಹೇಗೆ ಹೆಚ್ಚಿಸಸಾಧ್ಯವಿದೆ? ತನ್ನ ಪತಿಗೆ ಹಾಗೂ ಯೆಹೋವನಿಗೆ ಗೌರವ ತೋರಿಸಲಿಕ್ಕಾಗಿ ವಧು ಏನು ಮಾಡಬಲ್ಲಳು? ಮದುವೆಗೆ ಹಾಜರಾಗುವ ಇತರರು ಆ ದಿನದ ಸಂಭ್ರಮಕ್ಕೆ ಹೇಗೆ ಮೆರಗು ನೀಡಬಲ್ಲರು? ಬೈಬಲಿನ ಕೆಲವು ಮೂಲತತ್ತ್ವಗಳನ್ನು ಪರಿಗಣಿಸುವುದು ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ನಮಗೆ ಸಹಾಯಮಾಡುತ್ತದೆ. ಅಲ್ಲದೆ, ಆ ಮೂಲತತ್ತ್ವಗಳನ್ನು ಅನ್ವಯಿಸುವುದು ಈ ವಿಶೇಷ ಸಮಾರಂಭದ ಮಹತ್ವಕ್ಕೆ ಕುಂದುತರಬಹುದಾದ ಸಮಸ್ಯೆಗಳನ್ನು ಕಡಿಮೆಗೊಳಿಸುವುದು.

ಯಾರು ಹೊಣೆಗಾರರು?

ಅನೇಕ ದೇಶಗಳಲ್ಲಿ ಒಂದು ವಿವಾಹೋತ್ಸವವನ್ನು ಯೆಹೋವನ ಸಾಕ್ಷಿಗಳ ಶುಶ್ರೂಷಕನೊಬ್ಬನು ಕಾನೂನುಬದ್ಧವಾಗಿ ನಡೆಸಬಹುದು. ಇದನ್ನು ಸರಕಾರಿ ಸಿಬ್ಬಂದಿಯೇ ನಡೆಸಬೇಕೆಂಬ ಕಾನೂನು ಇರುವ ಸ್ಥಳಗಳಲ್ಲಿಯೂ ದಂಪತಿಗಳು ವಿವಾಹದ ಕುರಿತು ಬೈಬಲಾಧಾರಿತ ಭಾಷಣವನ್ನು ಏರ್ಪಡಿಸಲು ಇಷ್ಟಪಡಬಹುದು. ಸಾಮಾನ್ಯವಾಗಿ ಆ ಭಾಷಣದಲ್ಲಿ, ಕುಟುಂಬದ ತಲೆಯಾಗಿ ದೇವರು ನೇಮಿಸಿರುವ ಪಾತ್ರದ ಕುರಿತು ವರನು ಪರ್ಯಾಲೋಚಿಸುವಂತೆ ಸಲಹೆನೀಡಲಾಗುತ್ತದೆ. (1 ಕೊರಿಂಥ 11:3) ಅದಕ್ಕನುಗುಣವಾಗಿ, ವಿವಾಹದಲ್ಲಿ ಏನು ನಡೆಯುತ್ತದೊ ಅದರ ಪ್ರಧಾನ ಹೊಣೆಗಾರಿಕೆ ವರನದ್ದಾಗಿರುತ್ತದೆ. ವಿವಾಹ ಸಮಾರಂಭ ಮತ್ತು ಅದರ ನಂತರವಿರಬಹುದಾದ ಯಾವುದೇ ಗೋಷ್ಠಿಗಳಿಗೆ ಬೇಕಾದ ಏರ್ಪಾಡುಗಳನ್ನು ಬಹಳ ಮುಂಚಿತವಾಗಿಯೇ ಮಾಡಲಾಗುತ್ತದೆ ಎಂಬುದು ನಿಜ. ಆದರೆ, ಈ ಏರ್ಪಾಡುಗಳನ್ನು ಮಾಡುವುದು ವರನಿಗೆ ಏಕೆ ಸವಾಲೊಡ್ಡಬಹುದು?

ಇದಕ್ಕೆ ಒಂದು ಕಾರಣವು ವಧೂವರರ ಸಂಬಂಧಿಕರು ವಿವಾಹ ಯೋಜನೆಗಳಲ್ಲಿ ಮಿತಿಮೀರಿ ತಲೆಹಾಕಲು ಪ್ರಯತ್ನಿಸುವುದೇ ಆಗಿರಬಹುದು. ಅನೇಕ ವಿವಾಹಗಳನ್ನು ನಡೆಸಿರುವ ರೊಡಾಲ್ಫೊ ಗಮನಿಸಿದ್ದು: “ಕೆಲವೊಮ್ಮೆ ವರನು ಸಂಬಂಧಿಗಳಿಂದ, ಅದರಲ್ಲೂ ಅವರು ಮದುವೆಯ ಖರ್ಚಿಗೆ ಸಹಾಯ ನೀಡುವಲ್ಲಿ ಅತ್ಯಂತ ಒತ್ತಡಕ್ಕೆ ಒಳಗಾಗುತ್ತಾನೆ. ಮದುವೆ ಮತ್ತು ರಿಸೆಪ್ಷನ್‌ನಲ್ಲಿ ಯಾವುದು ಹೇಗೆ ನಡೆಯಬೇಕೆಂಬುದರ ಕುರಿತು ಅವರು ಕಡ್ಡಾಯ ಹಾಕಬಹುದು. ಇದು ಆ ಸಂದರ್ಭಕ್ಕೆ ಜವಾಬ್ದಾರನಾಗಿರುವ ವರನ ಶಾಸ್ತ್ರೀಯ ಪಾತ್ರವನ್ನು ಕಡೆಗಣಿಸಬಲ್ಲದು.”

ಸುಮಾರು 35 ವರ್ಷಗಳಿಂದ ವಿವಾಹವನ್ನು ನಡೆಸುತ್ತಿರುವ ಮ್ಯಾಕ್ಸ್‌ ಗಮನಿಸಿದ್ದು: “ಮದುವೆಯಲ್ಲಾಗಲಿ ರಿಸೆಪ್ಷನ್‌ನಲ್ಲಾಗಲಿ ಏನೆಲ್ಲಾ ಇರಬೇಕು ಎಂಬುದನ್ನು ವಧುವೇ ತೀರ್ಮಾನಿಸುತ್ತಾಳೆ. ಈ ವಿಷಯದಲ್ಲಿ ವರನ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಕೊಡದಿರುವುದನ್ನು ನಾನು ಗಮನಿಸಿದ್ದೇನೆ.” ಅನೇಕ ವಿವಾಹಗಳನ್ನು ನಡೆಸಿರುವ ಡೇವಿಡ್‌ ಹೇಳಿದ್ದು: “ಮುಂದಾಳುತ್ವವನ್ನು ವಹಿಸುವ ರೂಢಿ ವರರಿಗೆ ಇರಲಿಕ್ಕಿಲ್ಲ. ಮದುವೆ ಸಿದ್ಧತೆಗಳಲ್ಲಿ ಅವರು ಸಾಕಾಷ್ಟು ಸೇರಿಕೊಳ್ಳದಿರುವುದು ಸಾಮಾನ್ಯ.” ಹೀಗಿರುವಲ್ಲಿ, ಒಬ್ಬ ವರನು ತನ್ನ ಜವಾಬ್ದಾರಿಯನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲನು?

ಸಂವಾದದಿಂದ ಸಂತಸ!

ವರನೊಬ್ಬನು ಮದುವೆಗಾಗಿ ಸಿದ್ಧತೆಗಳನ್ನು ಮಾಡುವಾಗ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಪರಿಣಾಮಕಾರಿಯಾಗಿ ಸಂವಾದಿಸಬೇಕು. “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು” ಎಂದು ಬೈಬಲು ಸ್ಪಷ್ಟವಾಗಿ ಹೇಳುತ್ತದೆ. (ಜ್ಞಾನೋಕ್ತಿ 15:​22) ಆದುದರಿಂದ, ವರನು ಮುಂಚಿತವಾಗಿಯೇ ತನ್ನ ಕೈಹಿಡಿಯುವವಳೊಂದಿಗೆ, ಕುಟುಂಬ ಸದಸ್ಯರೊಂದಿಗೆ ಮತ್ತು ಬೈಬಲಾಧಾರಿತ ಸಲಹೆ ಕೊಡಬಲ್ಲ ಇತರರೊಂದಿಗೆ ಮದುವೆಯ ಸಿದ್ಧತೆಗಳ ಕುರಿತು ಚರ್ಚಿಸುವುದಾದರೆ ಹೆಚ್ಚಿನ ಆಶಾಭಂಗವನ್ನು ತಡೆಯಸಾಧ್ಯವಿದೆ.

ಹೌದು, ವಿವಾಹ ನಿಶ್ಚಯವಾಗಿರುವ ಗಂಡು-ಹೆಣ್ಣು ಮೊದಲು ಮದುವೆ ಯೋಜನೆಗಳು ಮತ್ತು ಅವನ್ನು ಕೈಗೊಳ್ಳಸಾಧ್ಯವಿರುವ ಬಗ್ಗೆ ಕೂಡಿ ಮಾತಾಡುವುದು ಪ್ರಾಮುಖ್ಯ. ಯಾಕೆ? ಐವನ್‌ ಮತ್ತವನ ಪತ್ನಿ ಡೆಲ್ವಿನ್‌ ಇದರ ಬಗ್ಗೆ ಏನು ಹೇಳುತ್ತಾರೆಂದು ಕೇಳಿ. ಅವರು ವಿಭಿನ್ನ ಹಿನ್ನಲೆಗಳಿಂದ ಬಂದವರಾಗಿದ್ದರೂ ಅನೇಕ ವರ್ಷಗಳಿಂದ ತಮ್ಮ ವೈವಾಹಿಕ ಜೀವನದಲ್ಲಿ ಆನಂದಿಸುತ್ತಿದ್ದಾರೆ. ತಮ್ಮ ಮದುವೆ ಯೋಜನೆಗಳನ್ನು ನೆನಸಿಕೊಳ್ಳುತ್ತಾ ಐವನ್‌ ಹೇಳುವುದು: “ನನ್ನ ಮದುವೆ ಹೇಗೆ ನಡೆಯಬೇಕೆಂದು ನಾನು ಮೊದಲೇ ಯೋಜಿಸಿದ್ದೆ. ರಿಸೆಪ್ಷನ್‌ಗೆ ನನ್ನ ಸ್ನೇಹಿತರೆಲ್ಲರನ್ನೂ ಆಮಂತ್ರಿಸಬೇಕು, ವೆಡ್ಡಿಂಗ್‌ ಕೇಕನ್ನು ಕಟ್‌ ಮಾಡಬೇಕು, ಹುಡುಗಿಯು ಬಿಳಿ ಗೌನ್‌ ಧರಿಸಬೇಕು ಎಂದೆಲ್ಲಾ ನಾನು ನೆನಸಿದೆ. ಆದರೆ ಡೆಲ್ವಿನಳಿಗೆ ಇದೆಲ್ಲಾ ಇಷ್ಟವಿರಲಿಲ್ಲ. ಮದುವೆ ಸರಳವಾಗಿರಬೇಕೆಂದು ಅವಳು ಬಯಸಿದಳು. ವೆಡ್ಡಿಂಗ್‌ ಕೇಕನ್ನು ಸಹ ಬೇಡವೆಂದಳು. ಗೌನ್‌ಗಿಂತಲೂ ಸಾಧಾರಣ ರೀತಿಯ ಬಟ್ಟೆ ಧರಿಸುವುದು ಅವಳ ಆಶೆಯಾಗಿತ್ತು.”

ಈ ಜೋಡಿ ತಮ್ಮ ಮಧ್ಯೆ ಇದ್ದ ಭಿನ್ನತೆಗಳನ್ನು ಹೇಗೆ ಪರಿಹರಿಸಿದರು? ಪ್ರೀತಿಯಿಂದ ಮುಚ್ಚುಮರೆಯಿಲ್ಲದೆ ಸಂವಾದಿಸುವ ಮೂಲಕವೇ. (ಜ್ಞಾನೋಕ್ತಿ 12:18) ಐವನ್‌ ಹೇಳುವುದು: “ವಿವಾಹದ ಕುರಿತು ಅನೇಕ ಬೈಬಲಾಧಾರಿತ ಲೇಖನಗಳನ್ನು ನಾವು ಒಟ್ಟಾಗಿ ಅಧ್ಯಯನ ಮಾಡಿದೆವು. ಉದಾಹರಣೆಗೆ ಏಪ್ರಿಲ್‌ 15, 1984ರ ಕಾವಲಿನಬುರುಜುವಿನಲ್ಲಿರುವ ಒಂದು ಲೇಖನವನ್ನು ಪರಿಗಣಿಸಿದೆವು. * ಈ ಲೇಖನಗಳು ಸಮಾರಂಭದ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವಂತೆ ನಮಗೆ ಸಹಾಯಮಾಡಿದವು. ನಮ್ಮ ಹಿನ್ನೆಲೆಗಳು ಬೇರೆ ಬೇರೆಯಾಗಿದ್ದರಿಂದ ಅನೇಕ ವೈಯಕ್ತಿಕ ಇಷ್ಟಗಳನ್ನು ಬಿಟ್ಟುಕೊಡಬೇಕಾಯಿತು. ಹೀಗೆ, ನಾವಿಬ್ಬರೂ ನಮ್ಮ ಮನೋಭಾವಗಳನ್ನು ಹೊಂದಿಸಿಕೊಂಡೆವು.”

ಆರೆಟ್‌ ಮತ್ತು ಪೆನಿ ಕೂಡಾ ಇದನ್ನೇ ಮಾಡಿದರು. ಅವರ ವಿವಾಹದಿನದ ಕುರಿತು ಆರೆಟ್‌ ಹೇಳಿದ್ದು: “ಮದುವೆದಿನದ ಬಗ್ಗೆ ನನಗೆ ಮತ್ತು ಪೆನಿಗೆ ಇದ್ದ ವಿವಿಧ ಆಶೆಗಳನ್ನು ಇಬ್ಬರೂ ಕೂಡಿ ಚರ್ಚಿಸಿ ಒಮ್ಮತದಿಂದ ಒಂದು ತೀರ್ಮಾನಕ್ಕೆ ಬಂದೆವು. ಆ ದಿನದ ಮೇಲೆ ಯೆಹೋವನ ಆಶೀರ್ವಾದಕ್ಕಾಗಿ ನಾವು ಪ್ರಾರ್ಥಿಸಿದೆವು. ಇದಲ್ಲದೆ ನಾನು ನನ್ನ ಹೆತ್ತವರ ಹಾಗೂ ಸಭೆಯ ಕೆಲವು ಪ್ರೌಢ ವಿವಾಹಿತ ದಂಪತಿಗಳ ಸಲಹೆಯನ್ನು ಕೇಳಿದೆ. ಅವರು ಕೊಟ್ಟ ಸಲಹೆಗಳು ತುಂಬಾ ಸಹಾಯಕರವಾಗಿದ್ದವು. ಅದರ ಫಲಿತಾಂಶವಾಗಿ ನಮ್ಮ ವಿವಾಹವು ಸುಂದರವಾಗಿತ್ತು.”

ಉಡುಪು ಮತ್ತು ಕೇಶಾಲಂಕಾರದಿಂದ ಘನತೆಗೆ ಮೆರಗು

ವಧೂವರರಿಬ್ಬರೂ ಅಂದವಾಗಿ ಉಡುಪು ಧರಿಸಲು ಇಷ್ಟಪಡುವುದು ಒಪ್ಪತಕ್ಕ ಮಾತು. (ಕೀರ್ತನೆ 45:8-15) ಅವರು ತಮಗಿಷ್ಟವಾದ ಡ್ರೆಸ್‌ಗಾಗಿ ಸಮಯ, ಪ್ರಯತ್ನ ಮತ್ತು ಹಣವನ್ನು ವ್ಯಯಿಸಬಹುದು. ಘನತೆಯುಳ್ಳ, ಅದೇ ಸಮಯದಲ್ಲಿ ಆಕರ್ಷಕವಾಗಿರುವ ಬಟ್ಟೆಗಳನ್ನು ಆಯ್ಕೆಮಾಡಲು ಯಾವ ಬೈಬಲ್‌ ಮೂಲತತ್ತ್ವಗಳು ಅವರಿಗೆ ಸಹಾಯಮಾಡಸಾಧ್ಯವಿದೆ?

ವಧುವಿನ ಉಡುಪಿನ ಕುರಿತು ನಾವೀಗ ಪರಿಗಣಿಸೋಣ. ಈ ವಿಷಯದಲ್ಲಿ ಅಭಿರುಚಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ, ಇದರ ಕುರಿತು ಬೈಬಲ್‌ ನೀಡುವ ಬುದ್ಧಿವಾದ ಎಲ್ಲೆಡೆಯಲ್ಲೂ ಅನ್ವಯವಾಗುತ್ತದೆ. ‘ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕು.’ ಈ ಬುದ್ಧಿವಾದವು ಕ್ರೈಸ್ತ ಸ್ತ್ರೀಯರಿಗೆ ಎಲ್ಲ ಸಮಯಗಳಲ್ಲೂ ಅನ್ವಯವಾಗುತ್ತದೆ. ಖಂಡಿತವಾಗಿಯೂ ವಿವಾಹದಿನದಲ್ಲಿ ಸಹ! ಆನಂದದ ವಿವಾಹಕ್ಕೆ “ಬೆಲೆಯುಳ್ಳ ವಸ್ತ್ರ” ಅವಶ್ಯವಿಲ್ಲ ಎಂಬುದಂತೂ ನಿಜ. (1 ತಿಮೊಥೆಯ 2:​9, 10; 1 ಪೇತ್ರ 3:3, 4) ಈ ಸಲಹೆಯನ್ನು ಅನ್ವಯಿಸುವುದು ಅದೆಷ್ಟು ಸಂತೋಷವನ್ನು ತರುತ್ತದೆ!

ಈ ಮುಂಚೆ ತಿಳಿಸಲಾದ ಡೇವಿಡ್‌ ಹೇಳುವುದು: “ಹೆಚ್ಚಿನ ದಂಪತಿಗಳು ಬೈಬಲಿನ ಮೂಲತತ್ತ್ವಗಳನ್ನು ಅನುಸರಿಸಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕಾಗಿ ಅವರನ್ನು ಶ್ಲಾಘಿಸಲೇಬೇಕು. ಆದರೆ ಕೆಲವೊಮ್ಮೆ ಮದುವೆಹೆಣ್ಣು, ಅವಳೊಂದಿಗಿರುವ ಗೆಳತಿಯರು ಹಾಕಿಕೊಂಡಿದ್ದ ಬಟ್ಟೆ ಅಸಭ್ಯವಾಗಿತ್ತು. ಅದು ಕತ್ತಿನ ಬಳಿ ಕೆಳಗಿನವರೆಗೂ ತೆರೆದಿರುವ ಅಥವಾ ಮೈತೋರಿಸುವಷ್ಟು ತೆಳುವಾಗಿದದ್ದನ್ನು ಗಮನಿಸಿದ್ದೇನೆ.” ಉಡುಪಿನ ವಿಷಯವನ್ನು ವಧೂವರರು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವಂತೆ ಪ್ರೌಢ ಕ್ರೈಸ್ತ ಹಿರಿಯನೊಬ್ಬನು ಸಹಾಯ ನೀಡುತ್ತಾನೆ. ಹೇಗೆ? ಅವರು ಮದುವೆಗೆ ಧರಿಸಲು ಇಚ್ಛಿಸಿರುವ ಉಡುಪು, ಕ್ರೈಸ್ತ ಕೂಟಗಳಿಗೆ ಧರಿಸುವ ಉಡುಪಿನಂತೆ ಸಭ್ಯವಾಗಿದೆಯೊ ಎಂದು ಅವರನ್ನು ಕೇಳುವ ಮೂಲಕವೇ. ಮದುವೆ ಉಡುಪಿನ ಶೈಲಿಯು ಸಾಮಾನ್ಯವಾಗಿ ಕೂಟಗಳಿಗೆ ಧರಿಸುವ ಉಡುಪಿಗಿಂತಲೂ ಭಿನ್ನವಾಗಿದ್ದು, ಸ್ಥಳಿಕ ಪದ್ಧತಿಗನುಸಾರ ಇರಬಹುದು ಎಂಬುದು ನಿಜ. ಆದರೂ, ಅದರ ಸಭ್ಯತೆಯ ಮಟ್ಟವು ಘನತೆಯುಳ್ಳ ಕ್ರೈಸ್ತ ಮಟ್ಟಗಳಿಗೆ ಹೊಂದಿಕೆಯಲ್ಲಿರಬೇಕು. ಬೈಬಲಿನ ನೈತಿಕ ಮೂಲತತ್ತ್ವಗಳು ತುಂಬ ಕಟ್ಟುನಿಟ್ಟಾಗಿವೆ ಎಂದು ಈ ಲೋಕದ ಜನರಿಗೆ ಅನಿಸಬಹುದು. ಆದರೆ, ನಿಜ ಕ್ರೈಸ್ತರು ಈ ಲೋಕದ ನಡವಳಿಕೆಯನ್ನು ಅನುಸರಿಸುವುದಿಲ್ಲ.​—⁠ರೋಮಾಪುರ 12:2; 1 ಪೇತ್ರ 4:⁠4.

ಪೆನಿ ಹೇಳುವುದು “ಡ್ರೆಸ್‌, ರಿಸೆಪ್ಷನ್‌ ಇವೇ ಪ್ರಾಮುಖ್ಯವೆಂದು ನಾವು ನೆನಸಲಿಲ್ಲ. ನಾನು ಮತ್ತು ಆರೆಟ್‌ ಆ ಸಮಾರಂಭದ ಆಧ್ಯಾತ್ಮಿಕ ಭಾಗಕ್ಕೆ ಗಮನ ಕೊಟ್ಟೇವು. ಅದೇ ಆ ದಿನ ಅತಿ ಪ್ರಾಮುಖ್ಯವಾಗಿತ್ತು. ಆ ದಿನ ನಾನು ಏನು ಧರಿಸಿದೆ, ಏನು ತಿಂದೆ ಎಂಬುದು ನನಗೆ ಅಷ್ಟಾಗಿ ನೆನಪಿಲ್ಲ. ಆದರೆ ನಾನು ಯಾರೊಟ್ಟಿಗೆ ಇದ್ದೆ ಮತ್ತು ನನ್ನ ಮನಮೆಚ್ಚಿದವನನ್ನು ಕೈಹಿಡಿದಾಗ ನನಗಾದ ಸಂತೋಷವೇ ಸವಿನೆನಪಾಗಿ ಉಳಿದಿದೆ.” ವಿವಾಹಕ್ಕಾಗಿ ಯೋಜಿಸುತ್ತಿರುವ ಕ್ರೈಸ್ತ ಜೋಡಿಗಳು ಇಂಥ ವಿಚಾರಗಳನ್ನೇ ಮನಸ್ಸಿನಲ್ಲಿಡುವುದು ಒಳ್ಳೇದು.

ರಾಜ್ಯ ಸಭಾಗೃಹ​—⁠ಘನತೆಯುಳ್ಳ ಒಂದು ಸ್ಥಳ

ಲಭ್ಯವಿರುವಲ್ಲಿ, ರಾಜ್ಯ ಸಭಾಗೃಹದಲ್ಲಿ ತಮ್ಮ ಮದುವೆಯನ್ನು ನಡೆಸಲು ಅನೇಕ ಕ್ರೈಸ್ತ ದಂಪತಿಗಳು ಇಷ್ಟಪಡುತ್ತಾರೆ. ಯಾಕೆ? ಒಂದು ದಂಪತಿ ಇದಕ್ಕಿರುವ ಕಾರಣವನ್ನು ಹೀಗೆ ವಿವರಿಸಿದರು: “ವಿವಾಹವು ಯೆಹೋವನ ಪವಿತ್ರ ಏರ್ಪಾಡಾಗಿದೆ ಎಂಬುದನ್ನು ನಾವು ಮನಗಂಡೆವು. ನಮ್ಮ ಆರಾಧನ ಸ್ಥಳವಾದ ರಾಜ್ಯ ಸಭಾಗೃಹದಲ್ಲಿ ನಾವು ಮದುವೆಯಾದದ್ದು ಯೆಹೋವನು ನಮ್ಮ ವಿವಾಹದ ಒಂದು ಭಾಗವಾಗಿರಬೇಕೆಂಬ ಅಂಶವನ್ನು ಆರಂಭದಿಂದಲೇ ಮನಸ್ಸಿನಲ್ಲಿ ಅಚ್ಚೊತ್ತಿಸಲು ಸಹಾಯಮಾಡಿತು. ಮದುವೆಯನ್ನು ಬೇರೆ ಸ್ಥಳಕ್ಕಿಂತ ರಾಜ್ಯ ಸಭಾಗೃಹದಲ್ಲಿಯೇ ನಡಿಸಿದ್ದರಿಂದ ಇನ್ನೊಂದು ಪ್ರಯೋಜನವಾಯಿತು. ಅದು ಯೆಹೋವನ ಆರಾಧನೆ ನಮಗೆಷ್ಟು ಪ್ರಾಮುಖ್ಯವೆಂಬುದನ್ನು ವಿಶ್ವಾಸಿಗಳಲ್ಲದ ಸಂಬಂಧಿಕರಿಗೆ ತೋರಿಸಿಕೊಟ್ಟಿತು.”

ರಾಜ್ಯ ಸಭಾಗೃಹದಲ್ಲಿ ವಿವಾಹ ನಡೆಸಲು ಜವಾಬ್ದಾರಿತ ಸಭಾ ಹಿರಿಯರು ಅನುಮತಿಸುವುದಾದರೆ ಮದುವೆಯಾಗುತ್ತಿರುವವರು ತಾವು ಯೋಜಿಸುತ್ತಿರುವ ಎಲ್ಲ ಏರ್ಪಾಡುಗಳನ್ನು ಮುಂಚಿತವಾಗಿಯೇ ಅವರಿಗೆ ತಿಳಿಸಬೇಕು. ಮದುವೆಗೆ ಹಾಜರಾಗಿರುವವರಿಗೆ ವಧೂವರರು ಗೌರವ ತೋರಿಸಸಾಧ್ಯವಿರುವ ಒಂದು ವಿಧ ಯಾವುದು? ಅವರಿಬ್ಬರೂ ವಿವಾಹದ ನೇಮಿತ ಸಮಯಕ್ಕೆ ಸರಿಯಾಗಿ ಬರುವ ಮೂಲಕವೇ. ಇದಲ್ಲದೆ, ಪ್ರತಿಯೊಂದು ವಿಷಯವು ಘನಮಾನದಿಂದ ನಡೆಯುವುದನ್ನು ಅವರು ಖಚಿತಪಡಿಸಿಕೊಳ್ಳಲು ಬಯಸುವರು. * (1 ಕೊರಿಂಥ 14:40) ಅವರು ಹೀಗೆ, ಲೋಕದ ಜನರ ವಿವಾಹಗಳಲ್ಲಿ ನಡೆಯುವಂಥ ಯಾವುದೇ ಅಸಭ್ಯತೆಯ ವಿಷಯಗಳನ್ನು ತಪ್ಪಿಸುವರು.​—⁠1 ಯೋಹಾನ 2:15, 16.

ವಿವಾಹದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನ ತಮಗೂ ಇದೆಯೆಂದು ಮದುವೆಗೆ ಹಾಜರಾಗುವವರು ಕೂಡ ತೋರಿಸಸಾಧ್ಯವಿದೆ. ಉದಾಹರಣೆಗೆ, ಅವರು ಇತರ ಕ್ರೈಸ್ತ ವಿವಾಹಗಳನ್ನು ಮೀರಿಸುವಂಥ ರೀತಿಯಲ್ಲಿ ಈ ವಿವಾಹವು ಆಡಂಭರವಾಗಿರಬೇಕೆಂದು ಎದುರುನೋಡಬಾರದು ಇಲ್ಲವೆ ಯಾರ ಮದುವೆ ಅದ್ದೂರಿಯಾಗಿತ್ತು ಎಂಬ ಪೈಪೋಟಿಯನ್ನು ಉಂಟುಮಾಡಬಾರದು. ಮದುವೆಯೂಟ ಅಥವಾ ವಿವಾಹದ ನಂತರ ಇರಬಹುದಾದ ಯಾವುದೇ ಪಾರ್ಟಿಗಿಂತಲೂ ಬೈಬಲಾಧಾರಿತ ಭಾಷಣ ಕೇಳಲು ರಾಜ್ಯ ಸಭಾಗೃಹದಲ್ಲಿ ಹಾಜರಿರುವುದು ಹೆಚ್ಚು ಪ್ರಾಮುಖ್ಯ ಮತ್ತು ಪ್ರಯೋಜನದಾಯಕ ಎಂಬುದನ್ನು ಕೂಡ ಪ್ರೌಢ ಕ್ರೈಸ್ತರು ಮನಗಂಡಿದ್ದಾರೆ. ಒಬ್ಬ ಕ್ರೈಸ್ತನಿಗೆ ರಾಜ್ಯ ಸಭಾಗೃಹ ಇಲ್ಲವೆ ಪಾರ್ಟಿ​—⁠ಇವೆರಡರಲ್ಲಿ ಒಂದನ್ನು ಮಾತ್ರ ಹಾಜರಾಗುವ ಪರಿಸ್ಥಿತಿ ಏಳುವಲ್ಲಿ ರಾಜ್ಯ ಸಭಾಗೃಹಕ್ಕೆ ಹಾಜರಾಗುವುದೇ ಅತಿ ಯೋಗ್ಯ. ವಿಲಿಯಮ್‌ ಎಂಬ ಹಿರಿಯನೊಬ್ಬನು ಹೇಳುವುದು: “ಅತಿಥಿಗಳು ರಾಜ್ಯ ಸಭಾಗೃಹಕ್ಕೆ ಆಗಮಿಸದೆ ರಿಸೆಪ್ಷನ್‌ಗೆ ಮಾತ್ರ ಬರುವಲ್ಲಿ, ಅದು ಆ ಸಮಾರಂಭದ ಪವಿತ್ರತೆಯನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ. ನಾವು ರಿಸೆಪ್ಷನ್‌ಗೆ ಆಮಂತ್ರಿಸಲ್ಪಡದಿದ್ದರೂ ರಾಜ್ಯ ಸಭಾಗೃಹದ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ವಧೂವರರಿಗೆ ನಮ್ಮ ಬೆಂಬಲವನ್ನು ತೋರಿಸಸಾಧ್ಯವಿದೆ. ಇದರಿಂದ ಅವಿಶ್ವಾಸಿ ಸಂಬಂಧಿಕರಿಗೂ ಉತ್ತಮ ಸಾಕ್ಷಿಯನ್ನು ಕೊಡಸಾಧ್ಯವಿದೆ.”

ವಿವಾಹದಿನದ ಅನಂತರವೂ ಉಳಿಯುವ ಸಂತೋಷ

ವಾಣಿಜ್ಯ ಜಗತ್ತು ವಿವಾಹ ಸಮಾರಂಭವನ್ನು ಒಂದು ದೊಡ್ಡ ವ್ಯಾಪಾರ ಉದ್ಯಮವಾಗಿ ಮಾಡಿದೆ. ಇತ್ತೀಚಿನ ಒಂದು ವರದಿಗನುಸಾರ ಅಮೆರಿಕದಲ್ಲಿ ಮದುವೆಗೆ ಸರಾಸರಿ “22,000 ಡಾಲರ್‌ ಅಥವಾ ಒಂದು ಕುಟುಂಬದ ಸರಾಸರಿ ವಾರ್ಷಿಕ ವರಮಾನದ ಅರ್ಧದಷ್ಟು ಖರ್ಚಾಗುತ್ತದೆ.” ವಾಣಿಜ್ಯ ಜಾಹೀರಾತಿನ ಪ್ರಭಾವಕ್ಕೆ ಮರುಳಾಗಿ ಅನೇಕ ನವದಂಪತಿಗಳು ಅಥವಾ ಅವರ ಕುಟುಂಬದವರು ಆ ಒಂದು ದಿನಕ್ಕಾಗಿ ಭಾರಿ ಮೊತ್ತದ ಸಾಲ ಮಾಡುತ್ತಾರೆ. ಅನಂತರ ವರ್ಷಾನುಗಟ್ಟಲೆ ಆ ಸಾಲದ ಭಾರವನ್ನು ಹೊರುತ್ತಾರೆ. ಒಬ್ಬನು ವೈವಾಹಿಕ ಜೀವನವನ್ನು ಹೀಗೆ ಆರಂಭಿಸುವುದು ವಿವೇಕಯುತವೊ? ಬೈಬಲಿನ ಮೂಲತತ್ತ್ವಗಳನ್ನು ಅರಿಯದವರು ಇಲ್ಲವೆ ಅವನ್ನು ಅಲಕ್ಷ್ಯಮಾಡುವವರು ಇಂಥ ದುಂದುವೆಚ್ಚಗಳನ್ನು ಮಾಡಬಯಸಬಹುದು. ಕ್ರೈಸ್ತರಾದರೋ ಎಷ್ಟು ಭಿನ್ನರು!

ಅನೇಕ ಕ್ರೈಸ್ತ ದಂಪತಿಗಳು ತಮ್ಮ ವಿವಾಹಕ್ಕೆ ಹೆಚ್ಚು ಮಂದಿಯನ್ನು ಆಮಂತ್ರಿಸಿ ಆಡಂಭರವಾಗಿ ನಡೆಸದೆ, ಇತಿ-ಮಿತಿಯಾಗಿ ಖರ್ಚುಮಾಡಿ ಸಮಾರಂಭವನ್ನು ಸರಳವಾಗಿಟ್ಟು ಆಧ್ಯಾತ್ಮಿಕ ವಿಷಯಕ್ಕೆ ಹೆಚ್ಚು ಗಮನಕೊಟ್ಟಿದ್ದಾರೆ. ಈ ಮೂಲಕ ಅವರು ತಮ್ಮ ಸಮಯ ಸಂಪತ್ತನ್ನು ದೇವರಿಗೆ ಮಾಡಿಕೊಂಡಿರುವ ತಮ್ಮ ಸಮರ್ಪಣೆಗನುಸಾರವಾಗಿ ಉಪಯೋಗಿಸಲು ಶಕ್ತರಾಗಿದ್ದಾರೆ. (ಮತ್ತಾಯ 6:33) ಲಾಯ್ಡ್‌ ಮತ್ತು ಅಲೆಕ್ಸಾಂಡ್ರರ ಉದಾಹರಣೆಯನ್ನು ಪರಿಗಣಿಸಿರಿ. ಇವರಿಬ್ಬರೂ ತಮ್ಮ ವಿವಾಹದ ಬಳಿಕ 17 ವರ್ಷಗಳಿಂದ ಪೂರ್ಣಸಮಯದ ಶುಶ್ರೂಷೆಯನ್ನು ಮಾಡುತ್ತಾ ಇದ್ದಾರೆ. ಲಾಯ್ಡ್‌ ಹೇಳುವುದು: “ನಮ್ಮ ಮದುವೆಯು ತೀರ ಸರಳವಾಗಿತ್ತೆಂದು ಅನೇಕರು ನೆನಸಿರಬಹುದು. ಆದರೆ ನನಗೆ ಮತ್ತು ಅಲೆಕ್ಸಾಂಡ್ರಗೆ ಅದು ತುಂಬ ಸಂತೋಷ ತಂದಿತು. ನಮ್ಮ ವಿವಾಹದಿನವು ನಮ್ಮ ಹೆಗಲ ಮೇಲೆ ಯಾವುದೇ ಸಾಲದ ಹೊರೆಯನ್ನು ಹೊರಿಸದೇ, ಇಬ್ಬರು ವ್ಯಕ್ತಿಗಳಿಗೆ ಸಂತೋಷವನ್ನು ತರುವ ಯೆಹೋವನ ಏರ್ಪಾಡಿನ ಆಚರಣೆಯಾಗಿರಬೇಕೆಂದು ನಾವು ಬಯಸಿದೆವು.”

ಅಲೆಕ್ಸಾಂಡ್ರ ಕೂಡಿಸುವುದು: “ವಿವಾಹವಾಗುವುದಕ್ಕೆ ಮುಂಚೆ ನಾನು ಪಯನೀಯರಳಾಗಿದ್ದೆ. ಆ ಸೇವಾ ಭಾಗ್ಯವನ್ನು ಕೇವಲ ಒಂದು ಮದುವೆಯ ದುಂದುವೆಚ್ಚಕ್ಕಾಗಿ ಬಿಟ್ಟುಬಿಡಲು ನಾನು ಸಿದ್ಧಳಿರಲಿಲ್ಲ. ನಮ್ಮ ವಿವಾಹದಿನವು ಮರೆಯಲಾಗದ ವಿಶೇಷದಿನವಾಗಿತ್ತು. ಆದರೂ ಅದು ನಮ್ಮ ದಾಂಪತ್ಯ ಬದುಕಿನ ಆರಂಭದ ದಿನವಾಗಿತ್ತಷ್ಟೇ. ನಾವು ವಿವಾಹಸಮಾರಂಭಕ್ಕೆ ಹೆಚ್ಚು ಗಮನ ಕೊಡಬಾರದೆಂಬ ಬುದ್ಧಿವಾದವನ್ನು ಪಾಲಿಸಿದೆವು. ನಮ್ಮ ವೈವಾಹಿಕಜೀವನದ ಕುರಿತು ಯೆಹೋವನ ಮಾರ್ಗದರ್ಶನವನ್ನು ಹುಡುಕಿದೆವು. ಇದು ಖಂಡಿತವಾಗಿಯೂ ನಮಗೆ ಯೆಹೋವನ ಆಶೀರ್ವಾದವನ್ನು ತಂದಿದೆ.” *

ಹೌದು, ನಿಮ್ಮ ವಿವಾಹದಿನವು ಒಂದು ವಿಶೇಷ ಸಂದರ್ಭವಾಗಿದೆ. ಆ ದಿನದಲ್ಲಿನ ನಡತೆ ಮತ್ತು ಕ್ರಿಯೆಗಳು ನಿಮ್ಮ ಮುಂದಿನ ಸುಮಧುರ ದಾಂಪತ್ಯ ಬದುಕಿಗೆ ಒಂದು ಆದರ್ಶವಾಗಿರಬಲ್ಲದು. ಆದುದರಿಂದ ಮಾರ್ಗದರ್ಶನಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಿರಿ. (ಜ್ಞಾನೋಕ್ತಿ 3:5, 6) ಆ ದಿನಕ್ಕಿರುವ ಆಧ್ಯಾತ್ಮಿಕ ಮಹತ್ವವನ್ನು ನಿಮ್ಮ ಮನಸ್ಸಿನಲ್ಲಿ ಪ್ರಥಮವಾಗಿಡಿರಿ. ದೇವರು ನಿಮಗೆ ವಹಿಸಿರುವ ಪಾತ್ರಗಳಲ್ಲಿ ಪರಸ್ಪರ ಬೆಂಬಲಿಸಿರಿ. ಹೀಗೆ, ನಿಮ್ಮ ವಿವಾಹಕ್ಕೆ ಸ್ಥಿರವಾದ ಬುನಾದಿಯನ್ನು ಹಾಕಲು ನಿಮ್ಮಿಂದ ಸಾಧ್ಯವಾಗುತ್ತದೆ ಮತ್ತು ಯೆಹೋವನ ಆಶೀರ್ವಾದದೊಂದಿಗೆ ವಿವಾಹದಿನದ ಅನಂತರವೂ ಬಾಳಲಿರುವ ಆನಂದವು ನಿಮ್ಮದಾಗುವುದು.​—⁠ಜ್ಞಾನೋಕ್ತಿ 18:22. (w06 10/15)

[ಪಾದಟಿಪ್ಪಣಿಗಳು]

^ ಪ್ಯಾರ. 11 ಹೆಚ್ಚಿನ ವಿಷಯವು ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಫೆಬ್ರವರಿ 8, 2002ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿದೆ.

^ ಪ್ಯಾರ. 20 ರಾಜ್ಯ ಸಭಾಗೃಹದಲ್ಲಿ ನಡೆಯುವ ವಿವಾಹ ಸಮಾರಂಭದ ಫೊಟೋಗ್ರಾಫ್‌ ಅಥವಾ ವಿಡಿಯೋ ರೆಕಾರ್ಡ್‌ಗಳನ್ನು ಮಾಡಲು ದಂಪತಿಗಳು ಬಯಸುವಲ್ಲಿ, ಅವು ಸಮಾರಂಭದ ಘನತೆಗೆ ಕುಂದುತರದಂತಹ ರೀತಿಯಲ್ಲಿ ಮುನ್ನೇರ್ಪಾಡುಗಳನ್ನು ಮಾಡತಕ್ಕದ್ದು.

^ ಪ್ಯಾರ. 25 ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾಗಿರುವ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ ಪುಟ 26ನ್ನು ನೋಡಿರಿ.

[ಪುಟ 21ರಲ್ಲಿರುವ ಚಿತ್ರ]

ವಿವಾಹವಾಗುತ್ತಿರುವ ಜೋಡಿಯು ತಮ್ಮ ವಿವಾಹ ಯೋಜನೆಯ ಕುರಿತು ಗೌರವದಿಂದ ಮುಕ್ತವಾಗಿ ಸಂವಾದಿಸಬೇಕು

[ಪುಟ 23ರಲ್ಲಿರುವ ಚಿತ್ರ]

ಮುಖ್ಯವಾಗಿ ವಿವಾಹದಿನದ ಆಧ್ಯಾತ್ಮಿಕ ಮಹತ್ವವು ನಿಮ್ಮ ಮನಸ್ಸಿನಲ್ಲಿರಲಿ