ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ನಿಮಗೂ ಇದೆಯೊ?

ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ನಿಮಗೂ ಇದೆಯೊ?

ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ನಿಮಗೂ ಇದೆಯೊ?

“ಯಾವ ಜಾರನಾಗಲಿ ಏಸಾವನಂಥ ಪ್ರಾಪಂಚಿಕನಾಗಲಿ [“ಪವಿತ್ರ ವಿಷಯಗಳಿಗೆ ಮೌಲ್ಯಕೊಡದವನಾಗಲಿ,” NW] ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ.”​—⁠ಇಬ್ರಿಯ 12:15, 16.

ಪವಿತ್ರ ವಿಷಯಗಳಿಗೆ ಲೋಕವು ಕೊಡುವ ಗಮನ ಕಡಿಮೆ ಕಡಿಮೆಯಾಗುತ್ತಾ ಇದೆ. ಫ್ರೆಂಚ್‌ ಸಮಾಜಶಾಸ್ತ್ರಜ್ಞ ಎಡ್ಗರ್‌ ಮೊರನ್‌ ಹೇಳಿದ್ದು: “ನೈತಿಕ ಮೌಲ್ಯಗಳು ಯಾವ ಅಸ್ತಿವಾರಗಳ ಮೇಲೆ ಕಟ್ಟಲ್ಪಟ್ಟಿವೆಯೊ ಆ ಅಸ್ತಿವಾರಗಳು ಅಂದರೆ ದೇವರು, ಪ್ರಕೃತಿ, ತಾಯಿನಾಡು, ಇತಿಹಾಸ, ತರ್ಕ ಇವೆಲ್ಲವುಗಳನ್ನು ಜನರು ಒಂದುಕಾಲದಲ್ಲಿ ಮರುಸವಾಲಿಲ್ಲದೆ ಒಪ್ಪಿಕೊಳ್ಳುತ್ತಿದ್ದರು. ಆದರೆ ಇಂದು ಈ ಸ್ವಭಾವವು ಕಾಣ್ಮರೆಯಾಗಿದೆ. . . . ಈಗ ಜನರು ತಮಗೆ ಇಷ್ಟವಾಗುವಂಥ ಮೌಲ್ಯಗಳನ್ನು ಮಾತ್ರ ಆರಿಸಿಕೊಳ್ಳುತ್ತಾರೆ.” ಇದು, “ಪ್ರಾಪಂಚಿಕ ಆತ್ಮವನ್ನು” ಇಲ್ಲವೆ ‘ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮವನ್ನು’ ಪ್ರತಿಬಿಂಬಿಸುತ್ತದೆ. (1 ಕೊರಿಂಥ 2:12; ಎಫೆಸ 2:​2, NIBV) ಆದರೆ ಪವಿತ್ರ ವಿಷಯಗಳ ಬಗ್ಗೆ ಈ ಅಗೌರವದ ಆತ್ಮವು ಯೆಹೋವನಿಗೆ ಸಮರ್ಪಿತರಾಗಿರುವ ಮತ್ತು ಆತನ ಹಕ್ಕುಳ್ಳ ಪರಮಾಧಿಕಾರಕ್ಕೆ ಸಿದ್ಧಮನಸ್ಸಿನಿಂದ ಅಧೀನರಾಗುವ ಜನರಲ್ಲಿ ಇರುವುದಿಲ್ಲ. (ರೋಮಾಪುರ 12:​1, 2) ದೇವರ ಈ ಸೇವಕರು ತಾವು ಯೆಹೋವನಿಗೆ ಸಲ್ಲಿಸುವ ಆರಾಧನೆಯಲ್ಲಿ ಪವಿತ್ರತೆಗೆ ಇರುವ ಮಹತ್ವಪೂರ್ಣ ಪಾತ್ರವನ್ನು ಅಂಗೀಕರಿಸುತ್ತಾರೆ. ಹಾಗಾದರೆ ನಮ್ಮ ಜೀವನದಲ್ಲಿ ಯಾವ ವಿಷಯಗಳು ಪವಿತ್ರವಾಗಿರಬೇಕು? ದೇವರ ಎಲ್ಲ ಸೇವಕರಿಗೆ ಪವಿತ್ರ ಇಲ್ಲವೆ ಪರಿಶುದ್ಧವಾಗಿರುವಂಥ ಐದು ವಿಷಯಗಳನ್ನು ಈ ಲೇಖನದಲ್ಲಿ ಪರಿಗಣಿಸಲಾಗುವುದು. ಮುಂದಿನ ಲೇಖನವು ನಮ್ಮ ಕ್ರೈಸ್ತ ಕೂಟಗಳ ಪವಿತ್ರತೆಯ ಮೇಲೆ ಗಮನ ಕೇಂದ್ರೀಕರಿಸುವುದು. ಆದರೆ ಮೊದಲಾಗಿ, “ಪರಿಶುದ್ಧ” ಎಂಬ ಪದದ ನಿಜ ಅರ್ಥವೇನು?

2 ಬೈಬಲ್‌ನಲ್ಲಿ ಬಳಸಲಾಗಿರುವ ಹೀಬ್ರು ಭಾಷೆಯಲ್ಲಿ, “ಪರಿಶುದ್ಧ” ಎಂಬ ಪದವು ಪ್ರತ್ಯೇಕತೆಯನ್ನು ಸೂಚಿಸುತ್ತದೆ. ಆರಾಧನೆಯ ವಿಷಯದಲ್ಲಿ “ಪರಿಶುದ್ಧ” ಎಂಬ ಪದವು, ಸಾಮಾನ್ಯ ಬಳಕೆಯಿಂದ ಪ್ರತ್ಯೇಕವಾಗಿರಿಸಲ್ಪಡುವ ಅಥವಾ ಪವಿತ್ರವೆಂದೆಣಿಸಲ್ಪಡುವ ವಿಷಯಕ್ಕೆ ಅನ್ವಯಿಸುತ್ತದೆ. ಯೆಹೋವನು ಸಂಪೂರ್ಣ ಅರ್ಥದಲ್ಲಿ ಪರಿಶುದ್ಧನಾಗಿದ್ದಾನೆ. ಆತನನ್ನು ‘ಅತಿ ಪರಿಶುದ್ಧನು’ ಎಂದು ಕರೆಯಲಾಗಿದೆ. (ಜ್ಞಾನೋಕ್ತಿ 9:10; 30:⁠3, NW) ಪ್ರಾಚೀನ ಇಸ್ರಾಯೇಲಿನಲ್ಲಿ, ಮಹಾಯಾಜಕನು ಧರಿಸುತ್ತಿದ್ದ ಮುಂಡಾಸಿನ ಮುಂಭಾಗದಲ್ಲಿ ಚೊಕ್ಕಬಂಗಾರದ ಪಟ್ಟದ ಮೇಲೆ, “ಪರಿಶುದ್ಧತೆ ಯೆಹೋವನಿಗೆ ಮೀಸಲು” ಎಂಬ ಮಾತುಗಳನ್ನು ಕೆತ್ತಲಾಗಿತ್ತು. (ವಿಮೋಚನಕಾಂಡ 28:36, 37, NW) ಅಲ್ಲದೆ, ಯೆಹೋವನ ಸಿಂಹಾಸನದ ಸುತ್ತಲೂ ನಿಂತಿರುವ ಕೆರೂಬಿಯರು ಮತ್ತು ಸೇರಾಫಿಯರು “ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು” ಎಂದು ಘೋಷಿಸುತ್ತಿರುವುದನ್ನು ಬೈಬಲ್‌ ಚಿತ್ರಿಸುತ್ತದೆ. (ಯೆಶಾಯ 6:2, 3; ಪ್ರಕಟನೆ 4:​6-8) ಆತ್ಮಜೀವಿಗಳು ಆ ಪದಗಳನ್ನು ಪುನರುಚ್ಚರಿಸುತ್ತಿರುವುದು, ಯೆಹೋವನು ಅತಿ ಉತ್ಕೃಷ್ಟ ಮಟ್ಟದಲ್ಲಿ ಪವಿತ್ರನು, ನಿರ್ಮಲನು ಮತ್ತು ಶುದ್ಧನಾಗಿದ್ದಾನೆ ಎಂಬುದನ್ನು ಒತ್ತಿಹೇಳುತ್ತದೆ. ವಾಸ್ತವದಲ್ಲಿ, ಆತನೇ ಎಲ್ಲ ಪರಿಶುದ್ಧತೆಯ ಉಗಮನು.

3 ಯೆಹೋವನ ಹೆಸರು ಪವಿತ್ರ ಇಲ್ಲವೆ ಪರಿಶುದ್ಧವಾಗಿದೆ. ಕೀರ್ತನೆಗಾರನು ಘೋಷಿಸಿದ್ದು: ‘ಯೆಹೋವನ ನಾಮವು ಪರಿಶುದ್ಧವಾಗಿದೆ.’ (ಕೀರ್ತನೆ 111:9) ಅಲ್ಲದೆ ಯೇಸು, ನಾವು ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:​9, 10) ಭೂಮಿಯ ಮೇಲೆ ಯೇಸುವಿನ ತಾಯಿಯಾಗಿದ್ದ ಮರಿಯಳು ಉದ್ಘೋಷಿಸಿದ್ದು: “ನನ್ನ ಆತ್ಮವು ನನ್ನ ರಕ್ಷಕನಾದ ದೇವರ ವಿಷಯದಲ್ಲಿ ಉಲ್ಲಾಸಗೊಂಡದೆ. . . . ಆತನ ನಾಮವು ಪರಿಶುದ್ಧವಾದದ್ದು.” (ಲೂಕ 1:​46, 49) ಯೆಹೋವನ ಸೇವಕರಾಗಿ ನಾವು ಆತನ ನಾಮವನ್ನು ಪರಿಶುದ್ಧವೆಂದು ಎಣಿಸುತ್ತೇವೆ ಮತ್ತು ಆ ಪರಿಶುದ್ಧ ನಾಮಕ್ಕೆ ಕಳಂಕತರಬಹುದಾದ ಯಾವುದೇ ಕೆಲಸ ಮಾಡುವುದರಿಂದ ದೂರವಿರುತ್ತೇವೆ. ಅಷ್ಟುಮಾತ್ರವಲ್ಲದೆ ಪವಿತ್ರತೆಯ ಬಗ್ಗೆ ಯೆಹೋವನ ನೋಟ ನಮಗಿದೆ, ಅಂದರೆ ಆತನೇನನ್ನು ಪವಿತ್ರವೆಂದು ಎಣಿಸುತ್ತಾನೊ ಅದನ್ನೇ ನಾವು ಸಹ ಪವಿತ್ರವೆಂದು ಎಣಿಸುತ್ತೇವೆ.​—⁠ಆಮೋಸ 5:​14, 15.

ಯೇಸುವಿನ ಬಗ್ಗೆ ನಮಗೇಕೆ ಗಾಢ ಗೌರವವಿರಬೇಕು?

4 ಪರಿಶುದ್ಧ ದೇವರಾದ ಯೆಹೋವನ ‘ಒಬ್ಬನೇ ಮಗನಾಗಿರುವ’ ಯೇಸುವನ್ನು ಪರಿಶುದ್ಧನಾಗಿ ಸೃಷ್ಟಿಸಲಾಯಿತು. (ಯೋಹಾನ 1:14; ಕೊಲೊಸ್ಸೆ 1:15; ಇಬ್ರಿಯ 1:​1-3) ಆದುದರಿಂದ ಅವನನ್ನು “ದೇವರ ಪರಿಶುದ್ಧನು” ಎಂದು ಕರೆಯಲಾಗಿದೆ. (ಯೋಹಾನ 6:​69, NIBV) ಅವನ ಜೀವವು ಸ್ವರ್ಗದಿಂದ ಭೂಮಿಗೆ ಸ್ಥಳಾಂತರಿಸಲ್ಪಟ್ಟಾಗಲೂ ಅವನಲ್ಲಿ ಪವಿತ್ರತೆಯು ಇತ್ತು. ಯಾಕಂದರೆ, ಅವನು ಪವಿತ್ರಾತ್ಮದ ಶಕ್ತಿಯಿಂದ ಮರಿಯಳಿಗೆ ಹುಟ್ಟಿದನು. ಒಬ್ಬ ದೇವದೂತನು ಅವಳಿಗಂದದ್ದು: “ನಿನ್ನ ಮೇಲೆ ಪವಿತ್ರಾತ್ಮ ಬರುವದು; . . . ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.” (ಲೂಕ 1:35) ಕಾಲಾನಂತರ, ಯೆರೂಸಲೇಮಿನಲ್ಲಿದ್ದ ಕ್ರೈಸ್ತರು ಯೆಹೋವನಿಗೆ ಮಾಡಿದ ಪ್ರಾರ್ಥನೆಯಲ್ಲಿ ದೇವರ ಮಗನಿಗೆ ಸೂಚಿಸುವಾಗ ಅವನನ್ನು ಎರಡು ಬಾರಿ “ನಿನ್ನ ಪವಿತ್ರ ಸೇವಕನಾದ ಯೇಸು” ಎಂದು ಕರೆದರು.​—⁠ಅ. ಕೃತ್ಯಗಳು 4:​27-30.

5 ಭೂಮಿಯಲ್ಲಿದ್ದಾಗ ಯೇಸುವಿಗೆ ಪೂರೈಸಲು ಒಂದು ಪವಿತ್ರ ನಿಯೋಗವಿತ್ತು. ಸಾ.ಶ. 29ರಲ್ಲಿ ಅವನ ದೀಕ್ಷಾಸ್ನಾನವಾದಾಗ, ಅವನನ್ನು ಯೆಹೋವನ ಮಹಾ ಆಧ್ಯಾತ್ಮಿಕ ಆಲಯದ ಮಹಾ ಯಾಜಕನಾಗಿ ಅಭಿಷೇಕಿಸಲಾಯಿತು. (ಲೂಕ 3:​21, 22; ಇಬ್ರಿಯ 7:26; 8:​1, 2) ಅಷ್ಟುಮಾತ್ರವಲ್ಲದೆ, ಅವನು ಒಂದು ಯಜ್ಞಾರ್ಪಿತ ಮರಣಕ್ಕೀಡಾಗಲಿದ್ದನು. ಅವನ ಸುರಿಸಲ್ಪಟ್ಟ ರಕ್ತವು, ಪಾಪಿಗಳಾಗಿರುವ ಮಾನವರನ್ನು ರಕ್ಷಿಸಸಾಧ್ಯವಿರುವ ವಿಮೋಚನಾ ಮೌಲ್ಯವನ್ನು ಕೊಡಲಿತ್ತು. (ಮತ್ತಾಯ 20:28; ಇಬ್ರಿಯ 9:14) ಆದುದರಿಂದಲೇ ನಾವು ಯೇಸುವಿನ ರಕ್ತವನ್ನು ಪವಿತ್ರ ಹಾಗೂ “ಅಮೂಲ್ಯ” ಎಂದು ಎಣಿಸುತ್ತೇವೆ.​—⁠1 ಪೇತ್ರ 1:⁠19.

6 ರಾಜ ಹಾಗೂ ಮಹಾಯಾಜಕನಾದ ಯೇಸು ಕ್ರಿಸ್ತನ ಬಗ್ಗೆ ಕ್ರೈಸ್ತರಿಗೆ ಗಾಢ ಗೌರವವಿದೆ ಎಂಬುದನ್ನು ತೋರಿಸುತ್ತಾ ಅಪೊಸ್ತಲ ಪೌಲನು ಬರೆದುದು: “ಈ ಕಾರಣದಿಂದ ದೇವರು ಆತನನ್ನು [ತನ್ನ ಮಗನನ್ನು] ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.” (ಫಿಲಿಪ್ಪಿ 2:9-11) ನಮ್ಮ ನಾಯಕನು, ಆಳುವ ಅರಸನು ಹಾಗೂ ಕ್ರೈಸ್ತ ಸಭೆಯ ಶಿರಸ್ಸಾಗಿರುವ ಯೇಸು ಕ್ರಿಸ್ತನಿಗೆ ನಾವು ಸಂತೋಷದಿಂದ ಅಧೀನರಾಗುವ ಮೂಲಕ, ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ನಮಗೂ ಇದೆಯೆಂಬುದನ್ನು ತೋರಿಸಿಕೊಡುತ್ತೇವೆ.​—⁠ಮತ್ತಾಯ 23:10; ಕೊಲೊಸ್ಸೆ 1:⁠18.

7 ಕ್ರಿಸ್ತನಿಗೆ ಅಧೀನತೆ ತೋರಿಸುವುದರಲ್ಲಿ, ಅವನು ಈಗ ನಿರ್ದೇಶಿಸುತ್ತಿರುವ ಕೆಲಸದಲ್ಲಿ ನೇತೃತ್ವವಹಿಸಲು ಉಪಯೋಗಿಸುತ್ತಿರುವ ಪುರುಷರಿಗೆ ಸಹ ನಾವು ಯೋಗ್ಯ ಗೌರವ ತೋರಿಸುವುದು ಒಳಗೂಡಿದೆ. ಆಡಳಿತ ಮಂಡಲಿಯಲ್ಲಿರುವ ಆತ್ಮಾಭಿಷಿಕ್ತರ ಪಾತ್ರ ಮತ್ತು ಇವರು ಬ್ರಾಂಚ್‌ಗಳಲ್ಲಿ, ಡಿಸ್ಟ್ರಿಕ್ಟ್‌ಗಳಲ್ಲಿ, ಸರ್ಕಿಟ್‌ಗಳಲ್ಲಿ ಹಾಗೂ ಸಭೆಗಳಲ್ಲಿ ನೇಮಿಸುವಂಥ ಮೇಲ್ವಿಚಾರಕರ ಪಾತ್ರವು ಒಂದು ಪವಿತ್ರ ಜವಾಬ್ದಾರಿ ಆಗಿದೆಯೆಂದು ನಾವು ಅಂಗೀಕರಿಸತಕ್ಕದು. ಆದುದರಿಂದ ನಾವು ಈ ಏರ್ಪಾಡಿಗೆ ಗಾಢ ಗೌರವ ಹಾಗೂ ಅಧೀನತೆಯನ್ನು ತೋರಿಸಬೇಕು.​—⁠ಇಬ್ರಿಯ 13:​7, 17.

ಪರಿಶುದ್ಧ ಜನಾಂಗ

8 ಯೆಹೋವನು ಇಸ್ರಾಯೇಲಿನೊಂದಿಗೆ ಒಡಂಬಡಿಕೆಯೊಂದನ್ನು ಮಾಡಿದನು. ಈ ಸಂಬಂಧವು ಆ ಹೊಸ ಜನಾಂಗಕ್ಕೆ ಒಂದು ವಿಶೇಷ ಅಂತಸ್ತನ್ನು ಕೊಟ್ಟಿತು. ಅವರು ಪರಿಶುದ್ಧಗೊಳಿಸಲ್ಪಟ್ಟರು ಇಲ್ಲವೆ ಬೇರೆ ಮಾತಿನಲ್ಲಿ ಹೇಳುವುದಾದರೆ ಪ್ರತ್ಯೇಕವಾಗಿರಿಸಲ್ಪಟ್ಟರು. ಸ್ವತಃ ಯೆಹೋವನೇ ಅವರಿಗಂದದ್ದು: “ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.”​—⁠ಯಾಜಕಕಾಂಡ 19:2; 20:⁠26.

9 ಇಸ್ರಾಯೇಲ್‌ ಜನಾಂಗವನ್ನು ಸ್ಥಾಪಿಸಿದಾಗಲೇ, ಯೆಹೋವನು ಅವರ ಮನಸ್ಸಿನಲ್ಲಿ ಪವಿತ್ರತೆಯ ಮೂಲತತ್ತ್ವವನ್ನು ಅಚ್ಚೊತ್ತಿಸಿದನು. ಎಲ್ಲಿ ದಶಾಜ್ಞೆಗಳನ್ನು ಕೊಡಲಾಗಿತ್ತೊ ಆ ಸೀನಾಯಿ ಬೆಟ್ಟವನ್ನು ಮುಟ್ಟಲೂ ಬಾರದೆಂದು, ಮುಟ್ಟಿದರೆ ಸಾವಿಗೀಡಾಗುವರೆಂದು ಅವರಿಗೆ ಹೇಳಲಾಗಿತ್ತು. ಆ ಸಮಯದಲ್ಲಿ ಸೀನಾಯಿ ಬೆಟ್ಟವನ್ನು ಒಂದರ್ಥದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತಿತ್ತು. (ವಿಮೋಚನಕಾಂಡ 19:​12, 23) ಯಾಜಕತ್ವ, ದೇವಗುಡಾರ ಮತ್ತು ಅದರ ಉಪಕರಣಗಳನ್ನು ಸಹ ಪವಿತ್ರವೆಂದು ಪರಿಗಣಿಸಬೇಕಾಗಿತ್ತು. (ವಿಮೋಚನಕಾಂಡ 30:​26-30) ಈಗ ಕ್ರೈಸ್ತ ಸಭೆಯಲ್ಲಿನ ಸನ್ನಿವೇಶವು ಹೇಗಿದೆ?

10 ಅಭಿಷಿಕ್ತರ ಕ್ರೈಸ್ತ ಸಭೆಯು ಯೆಹೋವನ ನೋಟದಲ್ಲಿ ಪವಿತ್ರವಾಗಿದೆ. (1 ಕೊರಿಂಥ 1:⁠2) ವಾಸ್ತವದಲ್ಲಿ, ಭೂಮಿಯ ಮೇಲೆ ಯಾವುದೇ ನಿರ್ದಿಷ್ಟ ಸಮಯದಲ್ಲಿರುವ ಅಭಿಷಿಕ್ತ ಕ್ರೈಸ್ತರ ಇಡೀ ಗುಂಪನ್ನು ಒಂದು ಪವಿತ್ರ ಆಲಯಕ್ಕೆ ಹೋಲಿಸಲಾಗಿದೆ, ಆದರೆ ಇದು ಯೆಹೋವನ ಮಹಾ ಆಧ್ಯಾತ್ಮಿಕ ಆಲಯವಾಗಿರುವುದಿಲ್ಲ. ಆ ಪವಿತ್ರ ಆಲಯದಲ್ಲಿ, ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಿವಾಸಿಸುತ್ತಾನೆ. ಅಪೊಸ್ತಲ ಪೌಲನು ಬರೆದುದು: “ಆತನಲ್ಲಿ [ಯೇಸು ಕ್ರಿಸ್ತನಲ್ಲಿ] ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ [“ಯೆಹೋವನಲ್ಲಿ,” NW] ಪರಿಶುದ್ಧ ದೇವಾಲಯವಾಗುತ್ತದೆ. ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.”​—⁠ಎಫೆಸ 2:21, 22; 1 ಪೇತ್ರ 2:5, 9.

11 ಪೌಲನು ಮುಂದುವರಿಸುತ್ತಾ ಅಭಿಷಿಕ್ತ ಕ್ರೈಸ್ತರಿಗೆ ಬರೆದುದು: “ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? . . . ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.” (1 ಕೊರಿಂಥ 3:16, 17) ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಅಭಿಷಿಕ್ತರ ನಡುವೆ ‘ವಾಸಿಸುತ್ತಾ ತಿರುಗಾಡುತ್ತಾನೆ.’ (2 ಕೊರಿಂಥ 6:16) ಆತನು ತನ್ನ ನಂಬಿಗಸ್ತ ‘ಆಳನ್ನು’ ನಿರಂತರವಾಗಿ ಮಾರ್ಗದರ್ಶಿಸುತ್ತಾನೆ. (ಮತ್ತಾಯ 24:​45-47) ‘ಬೇರೆ ಕುರಿಗಳು’ ಈ ‘ಆಲಯ’ ವರ್ಗದೊಂದಿಗೆ ಸಹವಾಸಿಸಲು ತಮಗಿರುವ ಗೌರವವನ್ನು ಮಾನ್ಯಮಾಡುತ್ತಾರೆ.​—⁠ಯೋಹಾನ 10:16; ಮತ್ತಾಯ 25:​37-40.

ನಮ್ಮ ಕ್ರೈಸ್ತ ಜೀವನದಲ್ಲಿ ಪವಿತ್ರ ವಿಷಯಗಳು

12 ಕ್ರೈಸ್ತ ಸಭೆಯ ಅಭಿಷಿಕ್ತ ಸದಸ್ಯರು ಮತ್ತವರ ಸಂಗಡಿಗರ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಪವಿತ್ರವಾಗಿರುವುದು ಆಶ್ಚರ್ಯವೇನಲ್ಲ. ಯೆಹೋವನೊಂದಿಗೆ ನಮಗಿರುವ ಸಂಬಂಧವು ಪವಿತ್ರವಾಗಿದೆ. (1 ಪೂರ್ವಕಾಲವೃತ್ತಾಂತ 28:9; ಕೀರ್ತನೆ 36:⁠7) ಅದೆಷ್ಟು ಅಮೂಲ್ಯವಾಗಿದೆಯೆಂದರೆ, ಯಾವುದೇ ಸಂಗತಿಯಾಗಲಿ ಯಾವುದೇ ವ್ಯಕ್ತಿಯಾಗಲಿ ನಮ್ಮ ದೇವರಾದ ಯೆಹೋವನ ಮತ್ತು ನಮ್ಮ ಮಧ್ಯೆ ಅಡ್ಡಬರುವಂತೆ ನಾವು ಅನುಮತಿಸುವುದಿಲ್ಲ. (2 ಪೂರ್ವಕಾಲವೃತ್ತಾಂತ 15:2; ಯಾಕೋಬ 4:​7, 8) ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳುವುದರಲ್ಲಿ ಪ್ರಾರ್ಥನೆಯು ಒಂದು ಮುಖ್ಯ ಪಾತ್ರ ವಹಿಸುತ್ತದೆ. ಪ್ರವಾದಿಯಾದ ದಾನಿಯೇಲನಿಗೆ ಪ್ರಾರ್ಥನೆ ಎಷ್ಟು ಪವಿತ್ರವಾಗಿತ್ತೆಂದರೆ, ತನ್ನ ಜೀವವನ್ನು ಅಪಾಯಕ್ಕೆ ಒಡ್ಡಬೇಕಾಗಿದ್ದರೂ, ಯೆಹೋವನಿಗೆ ಪ್ರಾರ್ಥನೆಮಾಡುವ ತನ್ನ ರೂಢಿಯನ್ನು ಅವನು ನಂಬಿಗಸ್ತಿಕೆಯಿಂದ ಮುಂದುವರಿಸಿದನು. (ದಾನಿಯೇಲ 6:​7-11) ‘ಪವಿತ್ರ ಜನರ’ (NW) ಅಂದರೆ ಅಭಿಷಿಕ್ತ ಕ್ರೈಸ್ತರ “ಪ್ರಾರ್ಥನೆಗಳನ್ನು” ಆಲಯದಲ್ಲಿ ಉಪಯೋಗಿಸಲಾಗುತ್ತಿದ್ದ ಧೂಪಕ್ಕೆ ಹೋಲಿಸಲಾಗಿದೆ. (ಪ್ರಕಟನೆ 5:​8; 8:​3, 4; ಯಾಜಕಕಾಂಡ 16:​12, 13) ಈ ಸಾಂಕೇತಿಕ ಹೋಲಿಕೆಯು, ಪ್ರಾರ್ಥನೆಯ ಪಾವಿತ್ರ್ಯತೆಯನ್ನು ಒತ್ತಿಹೇಳುತ್ತದೆ. ವಿಶ್ವದ ಪರಮಾಧಿಕಾರಿಯೊಂದಿಗೆ ಸಂವಾದಮಾಡಲು ಶಕ್ತರಾಗಿರುವುದು ಎಂಥ ದೊಡ್ಡ ಗೌರವ ಆಗಿದೆ! ಆದುದರಿಂದ ಪ್ರಾರ್ಥನೆಯನ್ನು ನಮ್ಮ ಜೀವನದಲ್ಲಿ ಪವಿತ್ರವಾದದ್ದಾಗಿ ಪರಿಗಣಿಸಬೇಕೆಂಬುದರಲ್ಲಿ ಆಶ್ಚರ್ಯವೇನಿಲ್ಲ!

13 ಅಭಿಷಿಕ್ತ ಕ್ರೈಸ್ತರು ಹಾಗೂ ಅವರ ಸಂಗಡಿಗರು ತಮ್ಮ ಜೀವನಗಳಲ್ಲಿ ನಿಶ್ಚಯವಾಗಿಯೂ ಪವಿತ್ರವೆಂದೆಣಿಸುವ ಶಕ್ತಿಯೊಂದಿದೆ. ಅದು ಪವಿತ್ರಾತ್ಮವೇ ಆಗಿದೆ. ಅದು ಯೆಹೋವನ ಕಾರ್ಯಕಾರಿ ಶಕ್ತಿಯಾಗಿದೆ ಮತ್ತು ಅದು ಯಾವಾಗಲೂ ಪರಿಶುದ್ಧ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತದೆ. ಆದುದರಿಂದ, ಅದನ್ನು ಸೂಕ್ತವಾಗಿಯೇ “ಪವಿತ್ರಾತ್ಮ” ಇಲ್ಲವೆ “ಪವಿತ್ರವಾದ ಆತ್ಮ” ಎಂದು ಕರೆಯಲಾಗಿದೆ. (ಯೋಹಾನ 14:26; ರೋಮಾಪುರ 1:⁠4) ಯೆಹೋವನು ತನ್ನ ಸೇವಕರಿಗೆ ಸುವಾರ್ತೆಯನ್ನು ಸಾರಲು ಪವಿತ್ರಾತ್ಮದ ಮೂಲಕ ಬಲವನ್ನು ಕೊಡುತ್ತಾನೆ. (ಅ. ಕೃತ್ಯಗಳು 1:8; 4:31) ಆತನು ತನ್ನ ಆತ್ಮವನ್ನು ‘ತನಗೆ ವಿಧೇಯರಾಗಿರುವವರಿಗೆ,’ ಮತ್ತು ಶರೀರದಾಶೆಗಳಿಗನುಸಾರವಲ್ಲ ಬದಲಾಗಿ ‘ಪವಿತ್ರಾತ್ಮವನ್ನು ಅನುಸರಿಸಿ ನಡೆದುಕೊಳ್ಳು’ವವರಿಗೆ ಕೊಡುತ್ತಾನೆ. (ಅ. ಕೃತ್ಯಗಳು 5:32; ಗಲಾತ್ಯ 5:16, 25; ರೋಮಾಪುರ 8:5-8) ಈ ಬಲವಾದ ಶಕ್ತಿಯು, ಕ್ರೈಸ್ತರಿಗೆ ಉತ್ತಮ ಗುಣಗಳಾದ ‘ಆತ್ಮದ ಫಲವನ್ನು’ ಉತ್ಪಾದಿಸಲು ಮತ್ತು ‘ಪರಿಶುದ್ಧವಾದ ನಡವಳಿಕೆಯನ್ನೂ ಭಕ್ತಿಯನ್ನೂ’ ಉತ್ಪಾದಿಸುವಂತೆ ಶಕ್ತಗೊಳಿಸುವುದು. (ಗಲಾತ್ಯ 5:22, 23; 2 ಪೇತ್ರ 3:11) ಪವಿತ್ರಾತ್ಮವನ್ನು ನಾವು ಪವಿತ್ರವಾದದ್ದಾಗಿ ಪರಿಗಣಿಸುತ್ತಿರುವಲ್ಲಿ, ಆ ಆತ್ಮವನ್ನು ದುಃಖಪಡಿಸುವ ಇಲ್ಲವೆ ನಮ್ಮ ಜೀವನದಲ್ಲಿ ಅದು ಕಾರ್ಯವೆಸಗುವುದನ್ನು ಅಡ್ಡಿಮಾಡುವ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ.​—⁠ಎಫೆಸ 4:⁠30.

14ಪರಿಶುದ್ಧ ದೇವರಾದ ಯೆಹೋವನ ನಾಮಧಾರಿಗಳಾಗಿರುವ ಮತ್ತು ಆತನ ಸಾಕ್ಷಿಗಳಾಗಿರುವಂಥ ವಿಶೇಷ ಗೌರವವು, ನಾವು ಪವಿತ್ರವೆಂದೆಣಿಸುವ ಇನ್ನೊಂದು ವಿಷಯವಾಗಿದೆ. (ಯೆಶಾಯ 43:​10-12, 15) ಯೆಹೋವನು ಅಭಿಷಿಕ್ತ ಕ್ರೈಸ್ತರನ್ನು “ಹೊಸ ಒಡಂಬಡಿಕೆಗೆ ಸೇವಕ”ರಾಗಿರುವಂತೆ ಅರ್ಹರನ್ನಾಗಿ ಮಾಡಿದ್ದಾನೆ. (2 ಕೊರಿಂಥ 3:​5, 6) ಆದುದರಿಂದ “ಪರಲೋಕ ರಾಜ್ಯದ ಈ ಸುವಾರ್ತೆ”ಯನ್ನು ಸಾರುವ ಮತ್ತು ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ’ ನೇಮಕವನ್ನು ಅವರಿಗೆ ಕೊಡಲಾಗಿದೆ. (ಮತ್ತಾಯ 24:14; 28:​19, 20) ಅವರು ನಂಬಿಗಸ್ತಿಕೆಯಿಂದ ಈ ನೇಮಕವನ್ನು ಪೂರೈಸುತ್ತಿದ್ದಾರೆ ಮತ್ತು ಕೋಟಿಗಟ್ಟಲೆ ಕುರಿಸದೃಶ ಜನರು ಅದಕ್ಕೆ ಪ್ರತಿಕ್ರಿಯಿಸುತ್ತಾ, “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಅಭಿಷಿಕ್ತರಿಗೆ ಸಾಂಕೇತಿಕವಾಗಿ ಅನ್ನುತ್ತಿದ್ದಾರೆ. (ಜೆಕರ್ಯ 8:23) ಈ ಜನರು, ಅಭಿಷಿಕ್ತರಾದ “ದೇವರ ಸೇವಕ”ರಿಗಾಗಿ ಆಧ್ಯಾತ್ಮಿಕಾರ್ಥದಲ್ಲಿ “ಉಳುವವರೂ ತೋಟಗಾರರೂ” ಆಗಿ ಸಂತೋಷದಿಂದ ಸೇವೆಸಲ್ಲಿಸುತ್ತಿದ್ದಾರೆ. ಈ ರೀತಿಯಲ್ಲಿ ಬೇರೆ ಕುರಿಗಳು, ಲೋಕವ್ಯಾಪಕ ಮಟ್ಟದಲ್ಲಿ ಅಭಿಷಿಕ್ತರು ತಮ್ಮ ಶುಶ್ರೂಷೆಯನ್ನು ಪೂರೈಸುವಂತೆ ಮಹತ್ತರ ನೆರವು ನೀಡುತ್ತಿದ್ದಾರೆ.​—⁠ಯೆಶಾಯ 61:​5, 6.

15 ಅಪೊಸ್ತಲ ಪೌಲನು ಪವಿತ್ರವೆಂದೆಣಿಸುತ್ತಿದ್ದ ವಿಷಯಗಳಲ್ಲೊಂದು, ಅವನ ಸಾರ್ವಜನಿಕ ಶುಶ್ರೂಷೆ ಆಗಿತ್ತು. “ದೇವರ ಸುವಾರ್ತೆಯ ಪವಿತ್ರ ಕೆಲಸದಲ್ಲಿ ತೊಡಗಿಕೊಂಡು, ಅನ್ಯಜನಾಂಗಗಳಿಗಾಗಿರುವ ಯೇಸು ಕ್ರಿಸ್ತನ ಸಾರ್ವಜನಿಕ ಸೇವಕನು” ತಾನಾಗಿದ್ದೇನೆಂದು ಅವನು ಹೇಳಿದನು. (ರೋಮಾಪುರ 15:​16, NW) ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಬರೆಯುವಾಗ ಪೌಲನು, ತನ್ನ ಶುಶ್ರೂಷೆಯು ಒಂದು “ನಿಕ್ಷೇಪ”ವಾಗಿದೆಯೆಂದು ಸೂಚಿಸಿದನು. (2 ಕೊರಿಂಥ 4:​1, 7) ನಮ್ಮ ಸಾರ್ವಜನಿಕ ಶುಶ್ರೂಷೆಯ ಮೂಲಕ ನಾವು ‘ದೈವೋಕ್ತಿಗಳನ್ನು’ ಪ್ರಸಿದ್ಧಪಡಿಸುತ್ತೇವೆ. (1 ಪೇತ್ರ 4:11) ಆದುದರಿಂದ ನಾವು ಅಭಿಷಿಕ್ತರಾಗಿರಲಿ ಬೇರೆ ಕುರಿಗಳವರಾಗಿರಲಿ, ಸಾಕ್ಷಿಕೊಡುವ ಕೆಲಸದಲ್ಲಿ ಪಾಲ್ಗೊಳ್ಳುವುದನ್ನು ಪವಿತ್ರವಾದ ಒಂದು ವಿಶೇಷ ಗೌರವವಾಗಿ ಪರಿಗಣಿಸುತ್ತೇವೆ.

‘ಪವಿತ್ರತ್ವವನ್ನು ಸಿದ್ಧಿಗೆ ತರುವದು’

16 ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗೆ “ಆಧ್ಯಾತ್ಮಿಕ ವಿಷಯಗಳಿಗೆ ಮೌಲ್ಯಕೊಡದ” ಜನರಾಗದಂತೆ ಎಚ್ಚರಿಸಿದನು. ಅದರ ಬದಲು, ಅವರು ‘ಪರಿಶುದ್ಧತೆಯನ್ನು ಹೊಂದುವದಕ್ಕೆ ಪ್ರಯತ್ನಮಾಡಿ,’ ‘ಯಾವ ವಿಷವುಳ್ಳ ಬೇರೂ ಅವರಲ್ಲಿ ಚಿಗುರಿ ಕೆಡಿಸದಂತೆ ಜಾಗ್ರತೆಯಿಂದ ನೋಡಿಕೊಳ್ಳುವಂತೆ’ ಅವರಿಗೆ ಸಲಹೆಕೊಟ್ಟನು. (ಇಬ್ರಿಯ 12:14-16) “ವಿಷವುಳ್ಳ ಬೇರು” ಎಂಬ ಅಭಿವ್ಯಕ್ತಿಯು, ಕ್ರೈಸ್ತ ಸಭೆಯಲ್ಲಿ ವಿಷಯಗಳನ್ನು ಹೇಗೆ ನಿರ್ವಹಿಸಲಾಗುತ್ತದೊ ಅದರ ಬಗ್ಗೆ ತಪ್ಪುಹುಡುಕುತ್ತಾ ಇರುವ ಕೆಲವರಿಗೆ ಸೂಚಿಸುತ್ತಿರಬಹುದು. ಉದಾಹರಣೆಗೆ ಇಂಥವರು, ವಿವಾಹದ ಪಾವಿತ್ರ್ಯತೆ ಕುರಿತು ಇಲ್ಲವೆ ನೈತಿಕ ಶುದ್ಧತೆಯ ಅಗತ್ಯದ ಕುರಿತು ಯೆಹೋವನಿಗಿರುವ ದೃಷ್ಟಿಕೋನವನ್ನು ಒಪ್ಪಲಿಕ್ಕಿಲ್ಲ. (1 ಥೆಸಲೊನೀಕ 4:​3-7; ಇಬ್ರಿಯ 13:⁠4) ಇಲ್ಲವೆ ಇವರು, ‘ಸತ್ಯಭ್ರಷ್ಟರು’ ಆಡುವಂಥ ‘ಹರಟೆ ಮಾತುಗಳಲ್ಲಿ,’ ಅಂದರೆ ಪರಿಶುದ್ಧತೆಯನ್ನು ಭಂಗಗೊಳಿಸುವ ಧರ್ಮಭ್ರಷ್ಟ ಮಾತುಕತೆಯಲ್ಲಿ ತೊಡಗಬಹುದು.​—⁠2 ತಿಮೊಥೆಯ 2:​16-18.

17 ಪೌಲನು ತನ್ನ ಅಭಿಷಿಕ್ತ ಸಹೋದರರಿಗೆ ಹೀಗೆ ಬರೆದನು: “ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಈ ಹೇಳಿಕೆಯು, ‘ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯಲ್ಪಟ್ಟವರು’ ಅಂದರೆ ಅಭಿಷಿಕ್ತ ಕ್ರೈಸ್ತರು, ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಪವಿತ್ರತೆಯ ಕುರಿತಾದ ಯೆಹೋವನ ನೋಟವನ್ನು ಪ್ರತಿಬಿಂಬಿಸುತ್ತಿದ್ದಾರೆಂದು ರುಜುಪಡಿಸಲು ಸತತ ಪ್ರಯತ್ನಮಾಡಬೇಕೆಂದು ತೋರಿಸುತ್ತದೆ. (ಇಬ್ರಿಯ 3:⁠1) ತದ್ರೀತಿಯಲ್ಲಿ, ಅಪೊಸ್ತಲ ಪೇತ್ರನು ತನ್ನ ಆತ್ಮಾಭಿಷಿಕ್ತ ಸಹೋದರರಿಗೆ ಹೀಗೆ ಉತ್ತೇಜಿಸಿದನು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯುವವರಾಗಿರದೆ ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ.”​—⁠1 ಪೇತ್ರ 1:14, 15.

18 ‘ಮಹಾ ಸಂಕಟವನ್ನು’ ಪಾರಾಗುವ ‘ಮಹಾಸಮೂಹದವರ’ ಕುರಿತೇನು? ಪವಿತ್ರ ವಿಷಯಗಳ ಬಗ್ಗೆ ಯೆಹೋವನ ನೋಟ ತಮಗೂ ಇದೆಯೆಂಬುದನ್ನು ಅವರು ರುಜುಪಡಿಸಬೇಕು. ಇವರು, ಯೆಹೋವನ ಆಧ್ಯಾತ್ಮಿಕ ಆಲಯದ ಭೂಅಂಗಣದಲ್ಲಿ ಆತನಿಗೆ ‘ಪವಿತ್ರ ಸೇವೆಮಾಡುತ್ತಿರುವುದನ್ನು’ ಪ್ರಕಟನೆ ಪುಸ್ತಕದಲ್ಲಿ ಚಿತ್ರಿಸಲಾಗಿದೆ. ಇವರು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯನ್ನಿಟ್ಟು, ಹೀಗೆ ಸಾಂಕೇತಿಕವಾಗಿ “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” (ಪ್ರಕಟನೆ 7:9, 14, 15) ಇದು ಯೆಹೋವನ ಮುಂದೆ ಅವರಿಗೆ ಒಂದು ಶುದ್ಧ ನಿಲುವನ್ನು ಕೊಡುತ್ತದೆ, ಮತ್ತು “ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ [ತಮ್ಮನ್ನು] ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವ” ಹಂಗಿಗೆ ಅವರನ್ನು ಒಳಪಡಿಸುತ್ತದೆ.

19 ಅಭಿಷಿಕ್ತ ಕ್ರೈಸ್ತರ ಹಾಗೂ ಅವರ ಸಂಗಡಿಗರ ಜೀವನಗಳಲ್ಲಿನ ಒಂದು ಮುಖ್ಯ ವೈಶಿಷ್ಟ್ಯವು, ಯೆಹೋವನನ್ನು ಆರಾಧಿಸಲಿಕ್ಕಾಗಿ ಮತ್ತು ಆತನ ವಾಕ್ಯದ ಅಧ್ಯಯನಕ್ಕಾಗಿ ಕ್ರಮವಾಗಿ ಒಟ್ಟುಗೂಡುವುದೇ ಆಗಿದೆ. ತನ್ನ ಜನರ ಈ ಕೂಟಗಳನ್ನು ಯೆಹೋವನು ಪವಿತ್ರವೆಂದೆಣಿಸುತ್ತಾನೆ. ಈ ಪ್ರಮುಖ ಕ್ಷೇತ್ರದಲ್ಲಿ ಯೆಹೋವನಿಗೆ ಪವಿತ್ರ ವಿಷಯಗಳ ಬಗ್ಗೆ ಇರುವ ನೋಟವು ನಮಗೆ ಹೇಗೆ ಮತ್ತು ಏಕೆ ಇರಬೇಕೆಂಬುದನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು. (w06 11/01)

ಪುನರ್ವಿಮರ್ಶೆ

• ಲೋಕದ ಯಾವ ನೋಟ ಯೆಹೋವನ ಸೇವಕರಿಗಿಲ್ಲ?

• ಯೆಹೋವನು ಎಲ್ಲ ಪವಿತ್ರ ವಿಷಯಗಳ ಉಗಮನಾಗಿರುವುದು ಏಕೆ?

• ಯೇಸುವಿನ ಪಾವಿತ್ರ್ಯತೆಯನ್ನು ನಾವು ಗೌರವಿಸುತ್ತೇವೆಂದು ಹೇಗೆ ತೋರಿಸುತ್ತೇವೆ?

• ನಮ್ಮ ಜೀವನದಲ್ಲಿ ನಾವು ಯಾವ ವಿಷಯಗಳನ್ನು ಪವಿತ್ರವೆಂದೆಣಿಸಬೇಕು?

[ಅಧ್ಯಯನ ಪ್ರಶ್ನೆಗಳು]

1. ಇಂದು ಲೋಕದಲ್ಲಿ ಪ್ರಚಲಿತವಾಗಿರುವ ಯಾವ ಮನೋಭಾವ ಯೆಹೋವನ ಸೇವಕರಿಗಿಲ್ಲ?

2, 3. (ಎ) ಯೆಹೋವನ ಪವಿತ್ರತೆಯನ್ನು ಶಾಸ್ತ್ರವಚನಗಳು ಹೇಗೆ ಎತ್ತಿತೋರಿಸುತ್ತವೆ? (ಬಿ) ಯೆಹೋವನ ನಾಮವನ್ನು ನಾವು ಪರಿಶುದ್ಧವೆಂದು ಎಣಿಸುವುದು ಹೇಗೆ?

4. ಬೈಬಲು ಯೇಸುವನ್ನು ‘ಪರಿಶುದ್ಧನು’ ಎಂದು ವರ್ಣಿಸುವುದೇಕೆ?

5. ಭೂಮಿಯಲ್ಲಿದ್ದಾಗ ಯೇಸು ಯಾವ ಪವಿತ್ರ ನಿಯೋಗವನ್ನು ಪೂರೈಸಿದನು, ಮತ್ತು ಅವನ ರಕ್ತವು ಏಕೆ ಅಮೂಲ್ಯವಾಗಿದೆ?

6. ಯೇಸು ಕ್ರಿಸ್ತನ ಕುರಿತು ನಮಗೆ ಯಾವ ಮನೋಭಾವವಿದೆ, ಮತ್ತು ಏಕೆ?

7. ನಾವು ಕ್ರಿಸ್ತನಿಗೆ ಅಧೀನತೆಯನ್ನು ಹೇಗೆ ತೋರಿಸುತ್ತೇವೆ?

8, 9. (ಎ) ಇಸ್ರಾಯೇಲ್ಯರು ಯಾವ ವಿಧದಲ್ಲಿ ಪರಿಶುದ್ಧ ಜನಾಂಗವಾಗಿದ್ದರು? (ಬಿ) ಯೆಹೋವನು ಇಸ್ರಾಯೇಲ್ಯರ ಮನಸ್ಸಿನಲ್ಲಿ ಪವಿತ್ರತೆಯ ಮೂಲತತ್ತ್ವವನ್ನು ಹೇಗೆ ಅಚ್ಚೊತ್ತಿಸಿದನು?

10, 11. ಅಭಿಷಿಕ್ತರಿಂದ ಕೂಡಿರುವ ಕ್ರೈಸ್ತ ಸಭೆಯು ಪವಿತ್ರವಾಗಿದೆ ಎಂದು ಏಕೆ ಹೇಳಸಾಧ್ಯವಿದೆ, ಮತ್ತು ಇದು ‘ಬೇರೆ ಕುರಿಗಳ’ ಮೇಲೆ ಯಾವ ಪರಿಣಾಮ ಬೀರುತ್ತದೆ?

12. ನಮ್ಮ ಜೀವನದಲ್ಲಿ ಯಾವ ವಿಷಯಗಳು ಪವಿತ್ರವಾಗಿವೆ, ಮತ್ತು ಏಕೆ?

13. ಯಾವ ಶಕ್ತಿಯು ಪವಿತ್ರವಾದದ್ದಾಗಿದೆ, ಮತ್ತು ಅದು ನಮ್ಮ ಜೀವನಗಳಲ್ಲಿ ಕಾರ್ಯನಡೆಸುವಂತೆ ನಾವು ಹೇಗೆ ಬಿಡಬೇಕು?

14. ಅಭಿಷಿಕ್ತರು ಯಾವ ವಿಶೇಷ ಗೌರವವನ್ನು ಪವಿತ್ರವಾದದ್ದಾಗಿ ಎಣಿಸುತ್ತಾರೆ, ಮತ್ತು ಈ ವಿಶೇಷ ಗೌರವದಲ್ಲಿ ಬೇರೆ ಕುರಿಗಳು ಹೇಗೆ ಪಾಲ್ಗೊಳ್ಳುತ್ತಾರೆ?

15. ಅಪೊಸ್ತಲ ಪೌಲನು ಯಾವ ಚಟುವಟಿಕೆಯನ್ನು ಪವಿತ್ರವಾದದ್ದಾಗಿ ಪರಿಗಣಿಸಿದನು, ಮತ್ತು ನಮಗೆ ಅದೇ ದೃಷ್ಟಿಕೋನವಿರುವುದೇಕೆ?

16. ನಾವು “ಆಧ್ಯಾತ್ಮಿಕ ವಿಷಯಗಳಿಗೆ ಮೌಲ್ಯಕೊಡದ” ಜನರಾಗದಂತೆ ಯಾವುದು ಸಹಾಯಮಾಡುವುದು?

17. ಅಭಿಷಿಕ್ತರು ಪವಿತ್ರತೆಯ ಕುರಿತಾದ ಯೆಹೋವನ ನೋಟವನ್ನು ಪ್ರತಿಬಿಂಬಿಸಲು ಸತತ ಪ್ರಯತ್ನಮಾಡುವುದು ಆವಶ್ಯಕ ಏಕೆ?

18, 19. (ಎ) ಯೆಹೋವನಿಗೆ ಪವಿತ್ರ ವಿಷಯಗಳ ಬಗ್ಗೆ ಇರುವ ನೋಟ ತಮಗೂ ಇದೆಯೆಂದು ‘ಮಹಾಸಮೂಹದವರು’ ಹೇಗೆ ತೋರಿಸುತ್ತಾರೆ? (ಬಿ) ಮುಂದಿನ ಲೇಖನದಲ್ಲಿ, ನಮ್ಮ ಕ್ರೈಸ್ತ ಜೀವನದ ಇನ್ನಾವ ಪವಿತ್ರ ವೈಶಿಷ್ಟ್ಯವನ್ನು ಪರಿಗಣಿಸಲಾಗುವುದು?

[ಪುಟ 25ರಲ್ಲಿರುವ ಚಿತ್ರ]

ಪ್ರಾಚೀನಕಾಲದ ಇಸ್ರಾಯೇಲಿನಲ್ಲಿ, ಯಾಜಕತ್ವ, ದೇವಗುಡಾರ ಮತ್ತು ಅದರ ಉಪಕರಣಗಳನ್ನು ಪವಿತ್ರವೆಂದೆಣಿಸಬೇಕಾಗಿತ್ತು

[ಪುಟ 27ರಲ್ಲಿರುವ ಚಿತ್ರ]

ಪ್ರಾರ್ಥನೆ ಮತ್ತು ನಮ್ಮ ಸಾರ್ವಜನಿಕ ಶುಶ್ರೂಷೆಯು ಪವಿತ್ರವಾದ ವಿಶೇಷ ಗೌರವವಾಗಿದೆ