ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಸಂಗಿ ಪುಸ್ತಕದ ಮುಖ್ಯಾಂಶಗಳು

ಪ್ರಸಂಗಿ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಪ್ರಸಂಗಿ ಪುಸ್ತಕದ ಮುಖ್ಯಾಂಶಗಳು

“ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು” ಎಂದು ಪೂರ್ವಜನಾದ ಯೋಬನು ಹೇಳಿದನು. (ಯೋಬ 14:1) ಆದುದರಿಂದ, ನಿಷ್ಪ್ರಯೋಜಕ ಚಿಂತೆಗಳು ಮತ್ತು ಪ್ರಯತ್ನಗಳಲ್ಲಿ ನಮ್ಮ ಈ ಅಲ್ಪಾಯುಷ್ಯ ಜೀವನವನ್ನು ಕಳೆಯದೇ ಇರುವುದು ಎಷ್ಟು ಪ್ರಾಮುಖ್ಯ! ನಾವು ಯಾವುದನ್ನು ಬೆನ್ನಟ್ಟಲಿಕ್ಕಾಗಿ ನಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನು ಉಪಯೋಗಿಸಬೇಕು? ನಾವು ಯಾವುದನ್ನು ಬೆನ್ನಟ್ಟಬಾರದು? ಈ ವಿಷಯದ ಬಗ್ಗೆ ಬೈಬಲಿನ ಪ್ರಸಂಗಿ ಪುಸ್ತಕದಲ್ಲಿ ದಾಖಲಾಗಿರುವ ವಿವೇಕದ ನುಡಿಮುತ್ತುಗಳು ಭರವಸಾರ್ಹ ಮಾರ್ಗದರ್ಶನವನ್ನು ಕೊಡುತ್ತವೆ. ಅವುಗಳಲ್ಲಿರುವ ಸಂದೇಶವು “ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ” ಮತ್ತು ಅರ್ಥಭರಿತ ಜೀವನವನ್ನು ನಡೆಸಲು ನಮಗೆ ಸಹಾಯಮಾಡಬಲ್ಲದು.​—⁠ಇಬ್ರಿಯ 4:12.

ಪ್ರಸಂಗಿ ಪುಸ್ತಕದ ಬರಹಗಾರನು ತನ್ನ ವಿವೇಕಕ್ಕೆ ಪ್ರಸಿದ್ಧನಾದ ಪುರಾತನ ಇಸ್ರಾಯೇಲಿನ ಅರಸ ಸೊಲೊಮೋನನಾಗಿದ್ದಾನೆ. ಜೀವನದಲ್ಲಿ ನಿಜಕ್ಕೂ ಪ್ರಾಮುಖ್ಯ ಮತ್ತು ಅಪ್ರಾಮುಖ್ಯ ವಿಷಯಗಳು ಯಾವುದಾಗಿವೆ ಎಂಬುದರ ಕುರಿತು ವ್ಯಾವಹಾರಿಕ ಬುದ್ಧಿವಾದವು ಈ ಪುಸ್ತಕದಲ್ಲಿದೆ. ಸೊಲೊಮೋನನು ಇದರಲ್ಲಿ ತಾನು ಕೈಗೊಂಡ ಕೆಲವು ಕಟ್ಟಡ ನಿರ್ಮಾಣ ಯೋಜನೆಗಳ ಕುರಿತು ಉಲ್ಲೇಖಿಸಿರುವುದರಿಂದ, ಆ ನಿರ್ಮಾಣಕೆಲಸಗಳು ಪೂರ್ಣವಾದ ಬಳಿಕ ಮತ್ತು ಅವನು ಸತ್ಯಾರಾಧನೆಯ ಮಾರ್ಗವನ್ನು ಬಿಟ್ಟುಹೋಗುವುದಕ್ಕೆ ಮೊದಲು ಅವನು ಈ ಪುಸ್ತಕವನ್ನು ಬರೆದಿರಬೇಕು. (ನೆಹೆಮೀಯ 13:26) ಇದು, ಆ ಪುಸ್ತಕ ಬರೆಯಲ್ಪಟ್ಟ ಸಮಯ ಸಾ.ಶ.ಪೂ. 1000ಕ್ಕೆ ಮೊದಲು, ಅಂದರೆ ಸೊಲೊಮೋನನ 40 ವರ್ಷಗಳ ಆಳ್ವಿಕೆಯ ಕೊನೆಗೆ ಕೈತೋರಿಸುತ್ತದೆ.

ಯಾವುದು ವ್ಯರ್ಥವಲ್ಲ?

(ಪ್ರಸಂಗಿ 1:1-6:⁠12)

“ಸಮಸ್ತವೂ ವ್ಯರ್ಥ!” ಎಂದು ಪ್ರಸಂಗಿಯು ಹೇಳುತ್ತಾನೆ. ಅವನು ಕೇಳುವುದು: “ಮನುಷ್ಯನು ಈ ಲೋಕದಲ್ಲಿ ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಏನು ಲಾಭ?” (ಪ್ರಸಂಗಿ 1:2, 3) “ವ್ಯರ್ಥ” ಮತ್ತು “ಲೋಕ” ಎಂಬ ಪದಗಳು ಪ್ರಸಂಗಿ ಪುಸ್ತಕದಲ್ಲಿ ಪದೇ ಪದೇ ತೋರಿಬರುತ್ತವೆ. “ವ್ಯರ್ಥ” ಎಂಬುದಕ್ಕಾಗಿರುವ ಹೀಬ್ರು ಪದದ ಅಕ್ಷರಶಃ ಅರ್ಥ “ಉಸಿರು” ಅಥವಾ “ಆವಿ” ಎಂದಾಗಿದೆ. ಇದು ಅಪ್ರಾಮುಖ್ಯ, ಕ್ಷಣಿಕ ಅಥವಾ ಬಾಳಿಕೆಯಿಲ್ಲದ್ದನ್ನು ಸೂಚಿಸುತ್ತದೆ. ಹಾಗಿರುವುದರಿಂದ, ಸಮಸ್ತವು​—⁠ಅಂದರೆ ದೇವರ ಚಿತ್ತವನ್ನು ಕಡೆಗಣಿಸುವ ಮಾನವರ ಸಕಲ ಪ್ರಯತ್ನಗಳು​—⁠ವ್ಯರ್ಥವಾಗಿವೆ.

“ದೇವಸ್ಥಾನಕ್ಕೆ [“ದೇವರ ಆಲಯಕ್ಕೆ,” NIBV] ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು . . . ಸಾನ್ನಿಧ್ಯಕ್ಕೆ ಬಂದು ಕಿವಿಗೊಡು” ಎಂದು ಸೊಲೊಮೋನನು ಹೇಳುತ್ತಾನೆ. (ಪ್ರಸಂಗಿ 5:1) ಯೆಹೋವ ದೇವರ ಸತ್ಯಾರಾಧನೆಯಲ್ಲಿ ಭಾಗಿಗಳಾಗುವುದು ಎಂದಿಗೂ ವ್ಯರ್ಥವಲ್ಲ. ವಾಸ್ತವದಲ್ಲಿ, ಆತನೊಂದಿಗಿನ ನಮ್ಮ ಸಂಬಂಧಕ್ಕೆ ಗಮನ ಕೊಡುವುದು ಅರ್ಥಭರಿತ ಜೀವನಕ್ಕೆ ಕೀಲಿಕೈಯಾಗಿದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:​4-10​—⁠ನೈಸರ್ಗಿಕ ಚಕ್ರಗಳ ವಿಷಯದಲ್ಲಿ ‘ಕಣ್ಣು ನೋಡಿ ನೋಡಿ ತೃಪ್ತಿಗೊಳ್ಳದಿರುವುದು ಮತ್ತು ಕಿವಿ ಕೇಳಿ ಕೇಳಿ ದಣಿಯದಿರುವುದು’ ಹೇಗೆ? ಭೂಮಿಯ ಮೇಲೆ ಜೀವಿಸುವುದನ್ನು ಸಾಧ್ಯಮಾಡುವ ಮೂಲಭೂತ ಕಾರ್ಯವಿಧಾನಗಳಲ್ಲಿ ಕೇವಲ ಮೂರನ್ನು ಪ್ರಸಂಗಿಯು ತಿಳಿಸುತ್ತಾನೆ. ಅವು ಸೂರ್ಯ, ಗಾಳಿಯ ಚಲನೆ ಮತ್ತು ಜಲಚಕ್ರವಾಗಿವೆ. ವಾಸ್ತವದಲ್ಲಿ, ಅನೇಕ ನೈಸರ್ಗಿಕ ಚಕ್ರಗಳಿವೆ ಮಾತ್ರವಲ್ಲ ಅವುಗಳು ತುಂಬ ಜಟಿಲವೂ ಆಗಿವೆ. ಒಬ್ಬನು ತನ್ನ ಇಡೀ ಜೀವಮಾನವನ್ನೆಲ್ಲ ಅದರ ಅಧ್ಯಯನಕ್ಕೆ ಉಪಯೋಗಿಸುವುದಾದರೂ ಪೂರ್ಣವಾಗಿ ಅರ್ಥಮಾಡಿಕೊಳ್ಳಲಾರನು. ಇದು ‘ಕಣ್ಣು ನೋಡಿ ನೋಡಿ ತೃಪ್ತಿಗೊಳ್ಳದು, ಕಿವಿಯು ಕೇಳಿ ಕೇಳಿ ದಣಿಯದ’ ವಿಷಯವಾಗಿರಬಲ್ಲದು. ಈ ಚಕ್ರಗಳು ನಿರಂತರವಾಗಿ ಮುಂದುವರಿಯುತ್ತಾ ಹೋಗುವುದಕ್ಕೆ ನಮ್ಮ ಅಲ್ಪಾಯುಷ್ಯವನ್ನು ಹೋಲಿಸುವುದು ಸಹ ಆಶಾಭಂಗವನ್ನು ಉಂಟುಮಾಡುವುದು. ಮಾತ್ರವಲ್ಲದೆ ಹೊಸ ಆವಿಷ್ಕಾರಗಳು, ಸತ್ಯದೇವರು ಈಗಾಗಲೇ ರೂಪಿಸಿ ಸೃಷ್ಟಿಯಲ್ಲಿ ಬಳಸಿರುವ ಮೂಲತತ್ತ್ವಗಳ ಕೇವಲ ಅನುಕರಣೆ ಆಗಿರುವುದರಿಂದ ಅವುಗಳಿಗಾಗಿ ಮಾಡುವ ಪ್ರಯತ್ನಗಳು ತೃಪ್ತಿಯನ್ನು ತರದಿರಬಹುದು.

2:​1, 2​—⁠ನಗೆಯನ್ನು “ಹುಚ್ಚುತನ” ಎಂದು ಏಕೆ ಹೇಳಲಾಗಿದೆ? ನಗು ನಮ್ಮ ಕಷ್ಟಗಳನ್ನು ತಾತ್ಕಾಲಿಕವಾಗಿ ಮರೆಯಲು ಹಾಗೂ ಮೋಜು ನಮ್ಮ ಸಮಸ್ಯೆಗಳನ್ನು ಹಗುರವಾಗಿ ನೋಡಲು ಸಹಾಯಮಾಡಬಹುದು. ಹಾಗಿದ್ದರೂ, ನಗು ನಮ್ಮ ತೊಂದರೆಗಳನ್ನು ತೆಗೆದುಹಾಕುವುದಿಲ್ಲ. ಆದುದರಿಂದಲೇ, ನಗುವಿನ ಮೂಲಕ ಸಂತೋಷವನ್ನು ಬೆನ್ನಟ್ಟುವುದು “ಹುಚ್ಚುತನ” ಎಂದು ಹೇಳಲಾಗಿದೆ.

3:​11​—⁠ದೇವರು ಯಾವುದನ್ನು “ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ?” ಸಮಯಕ್ಕೆ ತಕ್ಕ ಹಾಗೆ ಯೆಹೋವ ದೇವರು ನಿರ್ಮಿಸಿದ “ಅಂದವಾದ” ಅಥವಾ ತಕ್ಕದಾದ, ಪ್ರಯೋಜನಕರ ವಿಷಯಗಳಲ್ಲಿ ಕೆಲವು ಯಾವುವೆಂದರೆ, ಆದಾಮಹವ್ವರ ಸೃಷ್ಟಿ, ಮುಗಿಲುಬಿಲ್ಲಿನ ಒಡಂಬಡಿಕೆ, ಅಬ್ರಹಾಮನ ಒಡಂಬಡಿಕೆ, ದಾವೀದನ ಒಡಂಬಡಿಕೆ, ಮೆಸ್ಸೀಯನ ಬರೋಣ ಮತ್ತು ದೇವರ ರಾಜ್ಯದ ರಾಜನಾಗಿ ಯೇಸು ಕ್ರಿಸ್ತನ ಪಟ್ಟಾಭಿಷೇಕ ಆಗಿವೆ. ಆದರೆ ಹತ್ತಿರದ ಭವಿಷ್ಯದಲ್ಲಿ ಯೆಹೋವನು ಇನ್ನೂ ಏನನ್ನೊ “ಅಂದವಾಗಿ” ಮಾಡಲಿಕ್ಕಿದ್ದಾನೆ. ತಕ್ಕ ಸಮಯದಲ್ಲಿ ನೀತಿಯ ನೂತನ ಲೋಕವು ನೈಜವಾಗುವುದೆಂಬ ಭರವಸೆ ನಮಗಿರಸಾಧ್ಯವಿದೆ.​—⁠2 ಪೇತ್ರ 3:13.

5:​9​—⁠ಯಾವ ರೀತಿಯಲ್ಲಿ “ಭೂಮಿಯಿಂದ ಸರ್ವಕ್ಕೂ ಲಾಭವಿದೆ”? ಭೂನಿವಾಸಿಗಳೆಲ್ಲರೂ ‘ಭೂಮಿಯ ಲಾಭ’ ಅಂದರೆ ಅದರ ಉತ್ಪನ್ನದ ಮೇಲೆ ಹೊಂದಿಕೊಂಡಿದ್ದಾರೆ. ಅರಸನು ಸಹ ಇದರಿಂದ ಹೊರತಾಗಿಲ್ಲ. ಅವನು ಕೂಡ ಬೇಸಾಯಮಾಡುವ ತನ್ನ ಸೇವಕರ ಶ್ರಮಭರಿತ ಕೆಲಸದ ಮೂಲಕ ತನ್ನ ಹೊಲದ ಉತ್ಪನ್ನವನ್ನು ಪಡೆಯುತ್ತಾನೆ.

ನಮಗಾಗಿರುವ ಪಾಠಗಳು:

1:15. ನಾವಿಂದು ಕಾಣುವ ದಬ್ಬಾಳಿಕೆ ಮತ್ತು ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ನಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಿಸುವುದು ನಿಷ್ಪ್ರಯೋಜಕವಾಗಿದೆ. ದುಷ್ಟತ್ವವನ್ನು ತೆಗೆದುಹಾಕಲು ದೇವರ ರಾಜ್ಯದಿಂದ ಮಾತ್ರವೇ ಸಾಧ್ಯ.​—⁠ದಾನಿಯೇಲ 2:44.

2:​4-11. ಕಟ್ಟಡ ವಿನ್ಯಾಸ, ತೋಟಗಾರಿಕೆ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಐಷಾರಾಮದ ಜೀವನ ಇಂಥವೆಲ್ಲ ‘ಗಾಳಿಯನ್ನು ಹಿಂದಟ್ಟಿದಂತಿವೆ.’ ಏಕೆಂದರೆ, ಅವುಗಳು ಒಂದು ಉದ್ದೇಶಭರಿತ ಜೀವನವನ್ನಾಗಲಿ ಅಥವಾ ನಿರಂತರ ಸಂತೋಷವನ್ನಾಗಲಿ ತರಲಾರವು.

2:​12-16. “ವಿವೇಕವು” (NW) ಮೂಢತ್ವಕ್ಕಿಂತ ಶ್ರೇಷ್ಠ, ಏಕೆಂದರೆ ಅದು ಕೆಲವು ಸಮಸ್ಯೆಗಳನ್ನು ಪರಿಹರಿಸಲು ಸಹಾಯಮಾಡಸಾಧ್ಯವಿದೆ. ಆದರೆ ಮರಣದ ವಿಷಯದಲ್ಲಿ ಮಾನವ ವಿವೇಕ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಒಬ್ಬನು ಅಂಥ ವಿವೇಕಕ್ಕಾಗಿ ಪ್ರಸಿದ್ಧನಾಗಿದ್ದರೂ, ಅವನ ನೆನಪು ಬೇಗನೆ ಅಳಿದುಹೋಗುವುದು.

2:24; 3:​12, 13, 22. ನಮ್ಮ ಕೈಕೆಲಸದ ಫಲಗಳನ್ನು ಅನುಭವಿಸಿ ತೃಪ್ತಿಪಡುವುದು ತಪ್ಪಲ್ಲ.

2:26. ಆನಂದ ತರಬಲ್ಲ ದೈವಿಕ ವಿವೇಕವನ್ನು ‘ಯೆಹೋವನು ತಾನು ಮೆಚ್ಚಿದವನಿಗೆ’ ಕೊಡುವನು. ದೇವರೊಂದಿಗೆ ಒಂದು ಸುಸಂಬಂಧವನ್ನು ಹೊಂದದೆ ಇಂಥ ವಿವೇಕವನ್ನು ಪಡೆಯುವುದು ಅಸಾಧ್ಯ.

3:​16, 17. ಪ್ರತಿಯೊಂದು ಸನ್ನಿವೇಶದಲ್ಲೂ ನ್ಯಾಯವನ್ನು ನಿರೀಕ್ಷಿಸುವುದು ವ್ಯಾವಹಾರಿಕವಲ್ಲ. ಇಂದು ಲೋಕದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಚಿಂತೆಮಾಡುವ ಬದಲು ಅವನ್ನು ಯೆಹೋವನು ಸರಿಪಡಿಸುವಂತೆ ನಾವು ಕಾಯಬೇಕು.

4:​4. ಕೌಶಲಭರಿತವಾಗಿ ಮಾಡಲ್ಪಡುವ ಶ್ರಮದ ಕೆಲಸವು ತೃಪ್ತಿಯನ್ನು ತರಸಾಧ್ಯವಿದೆ. ಆದರೆ ಕೇವಲ ಇತರರ ಮುಂದೆ ಮಿಂಚಲು ಪ್ರಯಾಸಪಡುವುದು ಸ್ಪರ್ಧಾತ್ಮಕ ಮನೋಭಾವಕ್ಕೆ ಇಂಬುಕೊಡುತ್ತದೆ ಮತ್ತು ಮತ್ಸರ, ಹೊಟ್ಟೆಕಿಚ್ಚಿಗೂ ಕಾರಣವಾಗಬಹುದು. ಕ್ರೈಸ್ತ ಶುಶ್ರೂಷೆಯಲ್ಲಿನ ನಮ್ಮ ಶ್ರಮವು ಸರಿಯಾದ ಉದ್ದೇಶದಿಂದ ಪ್ರೇರೇಪಿಸಲ್ಪಡಬೇಕು.

4:​7-12. ಯಾವುದೇ ಪ್ರಾಪಂಚಿಕ ಸ್ವತ್ತುಗಳಿಗಿಂತಲೂ ಮಾನವ ಸಂಬಂಧಗಳು ಹೆಚ್ಚು ಪ್ರಾಮುಖ್ಯ. ಅವನ್ನು ಐಶ್ವರ್ಯದ ಬೆನ್ನಟ್ಟುವಿಕೆಗಾಗಿ ಬಲಿಕೊಡಬಾರದು.

4:13. ಸ್ಥಾನಮಾನವಾಗಲಿ ಪ್ರಾಯವಾಗಲಿ ಎಲ್ಲ ಸಂದರ್ಭದಲ್ಲೂ ಗೌರವವನ್ನು ಸಂಪಾದಿಸಲಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿವೇಕದಿಂದ ವರ್ತಿಸಬೇಕು.

4:​15, 16. ‘ಯುವಕನಾದ ಎರಡನೆಯವನ’ ಅಂದರೆ ಅರಸನ ಉತ್ತರಾಧಿಕಾರಿ ಆರಂಭದಲ್ಲಿ “ಎಲ್ಲಾ ಜನರ” ಬೆಂಬಲವನ್ನು ಪಡೆಯಬಹುದಾದರೂ ಸಮಯ ಸಂದಂತೆ ಅವರು ‘ಅವನಲ್ಲಿ ಆನಂದಿಸುವುದಿಲ್ಲ.’ ಹೌದು, ಖ್ಯಾತಿಯು ಸಾಮಾನ್ಯವಾಗಿ ಕ್ಷಣಿಕವಾಗಿದೆ.

5:⁠2. ನಾವು ಪ್ರಾರ್ಥನೆಗಳನ್ನು ಚೆನ್ನಾಗಿ ಯೋಚಿಸಿ, ಪೂಜ್ಯಭಾವದಿಂದ ಮಾಡಬೇಕು. ಅವು ಶಬ್ದಾಡಂಬರವಾಗಿರಬಾರದು.

5:​3-7. ಪ್ರಾಪಂಚಿಕ ವಿಷಯಗಳ ಬೆನ್ನಟ್ಟುವಿಕೆಯು, ಸ್ವಾರ್ಥಪರ ಅಭಿರುಚಿಗಳ ಕುರಿತು ಒಬ್ಬನು ಹಗಲುಕನಸು ಕಾಣುವಂತೆ ಮಾಡಬಹುದು. ಇದು ಒಬ್ಬನು ರಾತ್ರಿಯಲ್ಲಿ ಚಡಪಡಿಸುತ್ತಾ ಕಾಲ್ಪನಿಕ ಲೋಕದಲ್ಲಿರುವಂತೆ ಮಾಡುವುದಲ್ಲದೆ ಅವನ ಸುಖ ನಿದ್ರೆಯನ್ನು ಕಸಿದುಕೊಳ್ಳುವುದು. ಹೆಚ್ಚಾಗಿ ಮಾತಾಡುವುದು ಒಬ್ಬನನ್ನು ಇತರರ ಮುಂದೆ ಮೂಢನನ್ನಾಗಿ ಮಾಡುವುದು ಮಾತ್ರವಲ್ಲ ಅವನು ಮುಂದಾಲೋಚನೆ ಇಲ್ಲದೆ ದೇವರಿಗೆ ಹರಕೆಕಟ್ಟಿಕೊಳ್ಳುವಂತೆ ಮಾಡಬಹುದು. ‘[ಸತ್ಯ] ದೇವರಲ್ಲಿ ಭಯಭಕ್ತಿಯುಳ್ಳವರಾಗಿರುವುದು’ ಇವೆರಡನ್ನೂ ಮಾಡದಂತೆ ನಮ್ಮನ್ನು ಕಾಪಾಡುತ್ತದೆ.

6:​1-9. ಧನಸಂಪತ್ತು, ಘನತೆ, ದೀರ್ಘಾಯುಷ್ಯ ಮತ್ತು ದೊಡ್ಡ ಕುಟುಂಬ ಇವೆಲ್ಲವೂ ಇದ್ದು ಅದನ್ನು ತೃಪ್ತಿಯಿಂದ ಅನುಭವಿಸಲು ಪರಿಸ್ಥಿತಿಯು ನಮ್ಮನ್ನು ಅನುಮತಿಸದಿದ್ದರೆ ಏನು ಪ್ರಯೋಜನ? “ಬಗೆಬಗೆಯಾಗಿ ಆಶಿಸುವದಕ್ಕಿಂತ” ಅಂದರೆ ತೃಪ್ತಿಪಡಿಸಲಾಗದ ಇಚ್ಛೆಗಳನ್ನು ಕೈಗೂಡಿಸಲು ಪ್ರಯತ್ನಿಸುವುದಕ್ಕಿಂತಲೂ “ಕಣ್ಣೆದುರಿಗಿರುವದನ್ನು ಅನುಭವಿಸುವದೇ” ಅಂದರೆ ನಿಜತ್ವವನ್ನು ಎದುರಿಸುವುದೇ “ಲೇಸು.” ಆದುದರಿಂದ, ‘ಅನ್ನವಸ್ತ್ರಗಳಿಂದ’ ತೃಪ್ತರಾಗಿದ್ದು, ಜೀವನದಲ್ಲಿ ಹಿತಕರ ವಿಷಯಗಳನ್ನು ಆನಂದಿಸುತ್ತಾ ಯೆಹೋವನೊಂದಿಗೆ ಆಪ್ತವಾದ ಸಂಬಂಧವನ್ನು ಕಾಪಾಡಿಕೊಳ್ಳುವುದರ ಮೇಲೆ ನಮ್ಮ ಗಮನವನ್ನು ಕೇಂದ್ರಿಕರಿಸುವುದೇ ಅತ್ಯುತ್ತಮ ಜೀವನರೀತಿಯಾಗಿದೆ.​—⁠1 ತಿಮೊಥೆಯ 6:⁠8.

ವಿವೇಕಿಗಳಿಗೆ ಸಲಹೆ

(ಪ್ರಸಂಗಿ 7:1​–12:8)

ನಮ್ಮ ಒಳ್ಳೆಯ ಹೆಸರನ್ನು ಅಂದರೆ ಸತ್ಕೀರ್ತಿಯನ್ನು ನಾವು ಹೇಗೆ ಉಳಿಸಿಕೊಳ್ಳಸಾಧ್ಯವಿದೆ? ಮಾನವ ಅಧಿಪತಿಗಳ ಹಾಗೂ ನಾವು ನೋಡುತ್ತಿರುವ ಅನ್ಯಾಯಗಳ ಕಡೆಗೆ ನಮ್ಮ ಮನೋಭಾವ ಏನಾಗಿರಬೇಕು? ಸತ್ತವರಿಗೆ ಯಾವ ತಿಳುವಳಿಕೆ ಇಲ್ಲದಿರುವುದರಿಂದ ನಮ್ಮ ಜೀವನವನ್ನು ನಾವೀಗ ಹೇಗೆ ಉಪಯೋಗಿಸಬೇಕು? ಯುವಜನರು ತಮ್ಮ ಸಮಯ ಹಾಗೂ ಸಾಮರ್ಥ್ಯವನ್ನು ಯಾವ ವಿಧಗಳಲ್ಲಿ ವಿವೇಕಯುತವಾಗಿ ಉಪಯೋಗಿಸಸಾಧ್ಯವಿದೆ? ಇದರ ಮತ್ತು ಇನ್ನಿತರ ವಿಷಯಗಳ ಕುರಿತಾದ ಪ್ರಸಂಗಿಯ ಬುದ್ಧಿವಾದವು ಪ್ರಸಂಗಿ ಪುಸ್ತಕದ 7ರಿಂದ 12 ರವರೆಗಿನ ಅಧ್ಯಾಯಗಳಲ್ಲಿ ನಮಗೋಸ್ಕರ ದಾಖಲಾಗಿದೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

7:​19​—⁠‘ಹತ್ತು ಮಂದಿ ಅಧಿಕಾರಿಗಳ ಬಲಕ್ಕಿಂತಲೂ’ “ವಿವೇಕದ” (NW) ಬಲ ಹೇಗೆ ಹೆಚ್ಚು? ಸಂಖ್ಯೆ ಹತ್ತು ಬೈಬಲಿನಲ್ಲಿ ಸಾಂಕೇತಿಕವಾಗಿ ಬಳಸಲ್ಪಡುವಾಗ ಸಂಪೂರ್ಣತೆಯನ್ನು ಸೂಚಿಸುತ್ತದೆ. ಪಟ್ಟಣವನ್ನು ಕಾಯುತ್ತಿರುವ ಸಂಪೂರ್ಣ ಸಂಖ್ಯೆಯ ಸೈನಿಕರ ಬಲಕ್ಕಿಂತಲೂ ವಿವೇಕಕ್ಕಿರುವ ಸಂರಕ್ಷಕ ಮೌಲ್ಯವು ಹೆಚ್ಚು ಎಂದು ಸೊಲೊಮೋನನು ಹೇಳುತ್ತಿದ್ದಾನೆ.

10:15​—⁠‘ಮೂಢರು ಪಡುವ ಪ್ರಯಾಸ ಆಯಾಸ’ವನ್ನುಂಟು ಮಾಡುವುದು ಹೇಗೆ? ಒಬ್ಬನಿಗೆ ಸರಿಯಾದ ವಿವೇಚನಾಶಕ್ತಿ ಇಲ್ಲದಿರುವಲ್ಲಿ ಅವನ ಪ್ರಯಾಸವು ಯಾವುದೇ ಪ್ರಯೋಜನ ಕೊಡುವುದಿಲ್ಲ. ಅದರಿಂದ ಯಾವ ತೃಪ್ತಿಯು ಅವನಿಗೆ ಸಿಗದು. ಅಂಥ ಶ್ರಮಭರಿತ ಹೆಣಗಾಟವು ಅವನಿಗೆ ಆಯಾಸವನ್ನು ಉಂಟುಮಾಡುತ್ತದೆ ಅಷ್ಟೇ.

11:​7, 8​—⁠“ಬೆಳಕು ಇಂಪು; ಸೂರ್ಯನನ್ನು ಕಾಣುವದು ಕಣ್ಣಿಗೆ ಹಿತ” ಎಂಬ ಮಾತಿನ ಅರ್ಥವೇನಾಗಿದೆ? ಬೆಳಕು ಮತ್ತು ಸೂರ್ಯ ಇರುವುದು ಜೀವದಿಂದಿರುವವರ ಆನಂದಕ್ಕಾಗಿಯೇ. ಜೀವದಿಂದಿರುವುದು ಉತ್ತಮ ಮತ್ತು ಅಂಧಕಾರದ ದಿನಗಳು ಅಂದರೆ ಮುಪ್ಪು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಕುಂದಿಸುವ ಮೊದಲೇ ನಾವು ಜೀವನವನ್ನು ‘ಆನಂದಿಸಬೇಕು’ ಎಂಬುದಾಗಿ ಸೊಲೊಮೋನನು ಇಲ್ಲಿ ಹೇಳುತ್ತಿದ್ದಾನೆ.

11:​10​—⁠“ಬಾಲ್ಯವೂ ಪ್ರಾಯವೂ” ವ್ಯರ್ಥವಾಗುವುದು ಹೇಗೆ? ಇವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದಲ್ಲಿ ಇವು ವ್ಯರ್ಥವೇ. ಏಕೆಂದರೆ, ಹಬೆಯಂತೆ ಯೌವನದ ಚೈತನ್ಯಭರಿತ ದಿನಗಳು ಬೇಗನೆ ಕಣ್ಮರೆಯಾಗುತ್ತವೆ.

ನಮಗಾಗಿರುವ ಪಾಠಗಳು:

7:⁠6. ಸೂಕ್ತವಾಗಿರದ ಸಮಯದಲ್ಲಿ ನಗುವು ಇನ್ನೊಬ್ಬರನ್ನು ರೇಗಿಸಬಹುದು. ಅದು ಹಂಡೆಯ ಕೆಳಗೆ ಉರಿಯುವ ಮುಳ್ಳಿನ ಚಟಪಟ ಶಬ್ದದಂತೆ ಪ್ರಯೋಜನವಿಲ್ಲದ್ದು. ಇಂಥ ನಗುವನ್ನು ನಾವು ತೊರೆಯಬೇಕು.

7:​21, 22. ಇತರರು ನಮ್ಮ ಬಗ್ಗೆ ಹೇಳುವ ಮಾತುಗಳ ಕುರಿತು ನಾವು ಅತಿಯಾಗಿ ಚಿಂತಿಸಬಾರದು.

8:​2, 3; 10:⁠4. ಧನಿ ಇಲ್ಲವೆ ಸೂಪರ್‌ವೈಸರ್‌ ನಮ್ಮನ್ನು ತೆಗಳುವಾಗ ಅಥವಾ ತಿದ್ದುವಾಗ ನಾವು ಶಾಂತರಾಗಿರುವುದು ವಿವೇಕಯುತ. ಇದು ಅವನ ‘ಸನ್ನಿಧಿಯಿಂದ ತೊಲಗಿಬಿಡಲು ಆತುರಪಡುವುದಕ್ಕೆ’ ಅಂದರೆ ಹಿಂದೆಮುಂದೆ ನೋಡದೆ ರಾಜೀನಾಮೆ ಕೊಡುವುದಕ್ಕಿಂತ ಉತ್ತಮ.

8:8; 9:​5-10, 12. ಮೀನು ಅಥವಾ ಪಕ್ಷಿಗಳು ಬಲೆಗೆ ಅನಿರೀಕ್ಷಿತವಾಗಿ ಸಿಕ್ಕಿಬೀಳುವಂತೆಯೇ ನಮ್ಮ ಜೀವನವು ತಟ್ಟನೆ ಕೊನೆಗೊಳ್ಳಸಾಧ್ಯವಿದೆ. ಅಲ್ಲದೆ ಜೀವ ಹೋಗುವುದನ್ನು ಯಾವನು ತಡೆಯಲಾರನು ಅಥವಾ ಮರಣವು ಮಾನವಕುಲದ ವಿರುದ್ಧ ಹೂಡುವ ಯುದ್ಧದಿಂದ ವಿರಾಮಪಡೆಯಲಾರನು. ಆದುದರಿಂದ, ನಾವು ನಮ್ಮ ಸಮಯವನ್ನು ಸುಮ್ಮನೆ ವ್ಯರ್ಥವಾಗಿ ಕಳೆಯಬಾರದು. ನಮ್ಮ ಜೀವನವನ್ನು ಅಮೂಲ್ಯವೆಂದೆಣಿಸುತ್ತಾ ಒಳ್ಳೆಯ ರೀತಿಯಲ್ಲಿ ಆನಂದಿಸುವಂತೆ ಯೆಹೋವನು ಬಯಸುತ್ತಾನೆ. ಈ ರೀತಿಯಲ್ಲಿ ಆನಂದಿಸಲಿಕ್ಕಾಗಿ, ನಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ನಾವು ಪ್ರಥಮ ಸ್ಥಾನವನ್ನು ಕೊಡಬೇಕು.

8:​16, 17. ದೇವರು ಮಾನವಕುಲಕ್ಕಾಗಿ ಮಾಡಿರುವ ಮತ್ತು ಅನುಮತಿಸಿರುವ ಎಲ್ಲ ವಿಷಯಗಳ ಸಂಪೂರ್ಣ ವ್ಯಾಪ್ತಿಯನ್ನು ನಾವು ನಿದ್ದೆಗೆಟ್ಟು ಬುಡಮಟ್ಟ ಶೋಧಿಸಿದರೂ ಅದನ್ನು ಗ್ರಹಿಸಲಾರೆವು. ಸಂಭವಿಸಿರುವ ಎಲ್ಲ ಅನ್ಯಾಯಗಳ ಕುರಿತು ಚಿಂತಿಸುವುದು ನಮ್ಮ ಸಂತೋಷವನ್ನು ಕಬಳಿಸುವುದಷ್ಟೆ.

9:​16-18. “ವಿವೇಕ”ವನ್ನು (NW) ಹೆಚ್ಚಾಗಿ ತಾತ್ಸಾರ ಮಾಡಲಾಗುವುದಾದರೂ, ಅದನ್ನು ಬೆಲೆಯುಳ್ಳದೆಂದು ಭಾವಿಸಬೇಕು. ಹುಚ್ಚನ ಆರ್ಭಟದ ಕೂಗಿಗಿಂತಲೂ ವಿವೇಕಿಯು ಪ್ರಶಾಂತವಾಗಿ ಆಡುವ ಮಾತುಗಳೇ ಮೇಲು.

10:⁠1. ನಾವು ನಮ್ಮ ನಡೆನುಡಿಗಳಲ್ಲಿ ಜಾಗರೂಕರಾಗಿರಬೇಕು. ಒಂದು ಸಂದರ್ಭದಲ್ಲಿನ ಕೋಪೋದ್ರೇಕ, ಮದ್ಯವನ್ನು ದುರುಪಯೋಗಿಸಿ ಮಾಡುವ ಒಂದು ತಪ್ಪು ಅಥವಾ ಲೈಂಗಿಕತೆಯ ಅಸಭ್ಯ ವರ್ತನೆಯಂಥ ಕೇವಲ ಒಂದು ಅನುಚಿತ ನಡತೆಯು ಒಬ್ಬ ಗೌರವಾನ್ವಿತ ವ್ಯಕ್ತಿಯ ಸತ್ಕೀರ್ತಿಯನ್ನು ಹಾಳುಮಾಡಬಲ್ಲದು.

10:​5-11. ದಕ್ಷತೆಯಿಲ್ಲದ ಒಬ್ಬ ವ್ಯಕ್ತಿಯು ಅಧಿಕಾರದಲ್ಲಿರುವಾಗ ಅದು ಅಸೂಯೆಪಡುವಂಥ ಸಂಗತಿಯಾಗಿರುವುದಿಲ್ಲ. ಒಂದು ಸಣ್ಣ ಕೆಲಸವನ್ನೂ ದಕ್ಷತೆಯಿಂದ ಮಾಡದಿರುವಲ್ಲಿ ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲದು. ಆದುದರಿಂದ, ‘ಕಾರ್ಯಸಿದ್ಧಿಗಾಗಿ ಜ್ಞಾನವನ್ನು’ ಉಪಯೋಗಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಪ್ರಯೋಜನಕರ. ನಾವು ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ದಕ್ಷತೆಯಿಂದ ಮಾಡುವುದು ಎಷ್ಟೊಂದು ಪ್ರಾಮುಖ್ಯವಾಗಿದೆ!

11:​1, 2. ನಾವು ಪೂರ್ಣಹೃದಯದಿಂದ ಉದಾರಭಾವವನ್ನು ಅಭ್ಯಸಿಸಬೇಕು. ಇದಕ್ಕೆ ಪ್ರತಿಯಾಗಿ ನಮ್ಮ ಕಡೆಗೆ ಉದಾರಭಾವವನ್ನು ತೋರಿಸಲಾಗುವುದು.​—⁠ಲೂಕ 6:38.

11:​3-6. ಜೀವನದ ಅನಿಶ್ಚಿತ ಪರಿಸ್ಥಿತಿಗಳು ನಮ್ಮನ್ನು ಚಂಚಲರನ್ನಾಗಿ ಮಾಡಬಾರದು.

11:9; 12:​1-7. ಯುವಜನರು ಯೆಹೋವನಿಗೆ ಲೆಕ್ಕ ಒಪ್ಪಿಸಬೇಕಾಗಿದೆ. ಆದುದರಿಂದ, ಮುಪ್ಪು ತಮ್ಮ ಚೈತನ್ಯವನ್ನು ಹೀರಿಕೊಳ್ಳುವ ಮೊದಲೇ ಅವರು ತಮ್ಮ ಸಮಯ, ಶಕ್ತಿಯನ್ನು ದೇವರ ಸೇವೆಯಲ್ಲಿ ಉಪಯೋಗಿಸಬೇಕು.

ನಮ್ಮ ಮಾರ್ಗದರ್ಶನಕ್ಕಾಗಿ “ಜ್ಞಾನಿಗಳ ಮಾತುಗಳು”

(ಪ್ರಸಂಗಿ 12:​9-14)

ಪ್ರಸಂಗಿಯು ಯಥಾರ್ಥಭಾವದಿಂದ ರಚಿಸಿ ಬರೆದಿರುವ ‘ಒಪ್ಪಿಗೆಯ ಮಾತುಗಳನ್ನು’ ನಾವು ಹೇಗೆ ವೀಕ್ಷಿಸಬೇಕು? ಮಾನವ ವಿವೇಕದಿಂದ ರಚಿತವಾಗಿರುವ “ಬಹಳ ಪುಸ್ತಕ”ಗಳಿಗೆ ವ್ಯತಿರಿಕ್ತವಾಗಿ, “ಜ್ಞಾನಿಗಳ ಮಾತುಗಳು ಸಲಾಕಿಗಳ ಹಾಗೆಯೂ ಮತ್ತು ಸಭೆಗಳ ಯಜಮಾನರು ನೆಟ್ಟ ಮೊಳೆಗಳ ಹಾಗೆಯೂ ಒಬ್ಬ ಕುರುಬನಿಂದ ಕೊಡಲ್ಪಟ್ಟಿವೆ.” (ಪ್ರಸಂಗಿ 12:10-12, NIBV) ‘ಒಬ್ಬ ಕುರುಬನಾದ’ ಯೆಹೋವನಿಂದ ಬರುವ ವಿವೇಕದ ಮಾತುಗಳು ನಮ್ಮ ಜೀವನದ ಮೇಲೆ ಸ್ಥಿರವಾದ ಪ್ರಭಾವವನ್ನು ಬೀರುತ್ತವೆ.

ಪ್ರಸಂಗಿ ಪುಸ್ತಕದಲ್ಲಿರುವ ವಿವೇಕಯುತ ಸಲಹೆಗಳನ್ನು ಅನ್ವಯಿಸುವುದು ಅರ್ಥಭರಿತವಾದ ಸುಖ ಜೀವನವನ್ನು ನಡೆಸಲು ನಮಗೆ ಸಹಾಯಮಾಡುವುದು ಖಂಡಿತ. ಮಾತ್ರವಲ್ಲ, ‘[ಸತ್ಯ] ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವುದು’ ಎಂಬ ಆಶ್ವಾಸನೆ ನಮಗೆ ಇದರಲ್ಲಿ ಕೊಡಲ್ಪಟ್ಟಿದೆ. ಆದುದರಿಂದ, ಸತ್ಯ ‘ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳುವ’ ದೃಢತೀರ್ಮಾನ ನಮ್ಮದಾಗಿರಲಿ.​—⁠ಪ್ರಸಂಗಿ 8:12; 12:13. (w06 11/01)

[ಪುಟ 10ರಲ್ಲಿರುವ ಚಿತ್ರ]

ಆಹಾರ, ನೀರು ಮತ್ತು ನಮ್ಮ ಪ್ರಯಾಸದ ಪ್ರತಿಫಲವನ್ನು ಅನುಭವಿಸುವುದು, ಇವೆಲ್ಲವೂ ದೇವರ ಉಡುಗೊರೆಗಳು

[ಪುಟ 11ರಲ್ಲಿರುವ ಚಿತ್ರ]

ಅತಿ ಅಂದವಾದ ದೇವರ ಕೈಕೆಲಸವೊಂದು ತಕ್ಕ ಸಮಯದಲ್ಲಿ ನೈಜವಾಗುವುದು