ಮಕ್ಕಳನ್ನು ಬೆಳೆಸಲು ಭರವಸಾರ್ಹ ಸಲಹೆ
ಮಕ್ಕಳನ್ನು ಬೆಳೆಸಲು ಭರವಸಾರ್ಹ ಸಲಹೆ
“ನನಗಾಗ 19ರ ಹರೆಯ. ನನ್ನ ಕುಟುಂಬದವರಿಂದ ದೂರದಲ್ಲಿದ್ದ ನಾನು ಯಾವುದಕ್ಕೂ ಸಿದ್ಧಳಾಗಿರಲಿಲ್ಲ” ಎಂದು ಮೊದಲ ಬಾರಿ ಗರ್ಭವತಿಯಾದಾಗ ರೂತ್ ಎಂಬಾಕೆ ಹೇಳಿದಳು. ಹೆತ್ತವರಿಗೆ ಒಬ್ಬಳೇ ಮಗಳಾಗಿದ್ದ ಅವಳು, ತಾಯಿಯಾಗುವ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ. ಭರವಸಾರ್ಹ ಸಲಹೆಯನ್ನು ಅವಳು ಎಲ್ಲಿಂದ ಪಡೆಯಬಹುದಿತ್ತು?
ಇನ್ನೊಂದು ಕಡೆಯಲ್ಲಿ, ಈಗ ಬೆಳೆದು ದೊಡ್ಡವರಾಗಿರುವ ಇಬ್ಬರು ಮಕ್ಕಳ ತಂದೆಯಾದ ಜ್ಯಾನ್ ಜ್ಞಾಪಿಸಿಕೊಳ್ಳುವುದು: “ಮೊದಮೊದಲು ನನಗೆ ತುಂಬ ಧೈರ್ಯವಿತ್ತು. ಆದರೆ ನನ್ನಲ್ಲಿ ಪ್ರಾಯೋಗಿಕ ಜ್ಞಾನದ ಕೊರತೆಯಿದೆ ಎಂದು ತಿಳಿಯಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ.” ಹೆತ್ತವರಿಗೆ ಮಕ್ಕಳನ್ನು ಬೆಳೆಸಲು ಆರಂಭಿಸಿದಾಗಲೇ ದಿಕ್ಕುತೋಚದಂತಾಗಬಹುದು ಇಲ್ಲವೆ ಸಮಯಾನಂತರ ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ ಅವರಲ್ಲಿ ಗೊಂದಲಹುಟ್ಟಬಹುದು. ಹೀಗಿರುವಾಗ ತಮ್ಮ ಮಕ್ಕಳನ್ನು ಬೆಳೆಸಲು ಬೇಕಾದ ಸಹಾಯವನ್ನು ಅವರೆಲ್ಲಿ ಕಂಡುಕೊಳ್ಳಬಲ್ಲರು?
ಇಂದು ಹೆಚ್ಚೆಚ್ಚು ಸಂಖ್ಯೆಯಲ್ಲಿ ಹೆತ್ತವರು ಇಂಟರ್‌ನೆಟ್‌ನಲ್ಲಿ ಸಲಹೆಯನ್ನು ಹುಡುಕುತ್ತಿದ್ದಾರೆ. ಆದರೆ ಅಲ್ಲಿ ದೊರೆಯುವಂಥ ಸಲಹೆಯು ಎಷ್ಟು ಭರವಸಾರ್ಹವೆಂದು ನೀವು ಯೋಚಿಸುತ್ತಿರಬಹುದು. ಎಚ್ಚರವಹಿಸಲು ಸಕಾರಣವಿದೆ. ಏಕೆಂದರೆ, ಇಂಟರ್‌ನೆಟ್ ಮೂಲಕ ಯಾರು ಸಲಹೆಗಳನ್ನು ಕೊಡುತ್ತಿದ್ದಾರೆಂದು ನಿಮಗೆ ನಿಜವಾಗಿಯೂ ಗೊತ್ತೇ? ತಮ್ಮ ಸ್ವಂತ ಮಕ್ಕಳನ್ನು ಬೆಳೆಸುವುದರಲ್ಲಿ ಅವರಿಗೆಷ್ಟು ಯಶಸ್ಸು ಸಿಕ್ಕಿದೆ? ನಿಮ್ಮ ಕುಟುಂಬವನ್ನು ಬಾಧಿಸುವ ವಿಷಯಗಳ ಬಗ್ಗೆ ನೀವು ಖಂಡಿತವಾಗಿಯೂ ಜಾಗರೂಕರಾಗಿರಬೇಕು. ಹಿಂದಿನ ಲೇಖನದಲ್ಲಿ ಗಮನಿಸಿದ್ದಂತೆ, ಕೆಲವೊಮ್ಮೆ ಪರಿಣತರಿಂದ ಬರುವ ಸಲಹೆಯು ಸಹ ನಿರಾಶೆಯನ್ನುಂಟುಮಾಡಬಲ್ಲದು. ಹಾಗಾದರೆ ನೀವು ಸಲಹೆಯನ್ನು ಎಲ್ಲಿಂದ ಪಡೆಯುವಿರಿ?
ಮಕ್ಕಳನ್ನು ಬೆಳೆಸಲು ಅತಿ ಶ್ರೇಷ್ಠ ಸಲಹೆಯ ಮೂಲನು, ಕುಟುಂಬದ ಸ್ಥಾಪಕನಾದ ಯೆಹೋವ ದೇವರಾಗಿದ್ದಾನೆ. (ಎಫೆಸ 3:14, 15) ಆತನೊಬ್ಬನೇ ನಿಜವಾದ ಪರಿಣತನು. ಆತನ ವಾಕ್ಯವಾದ ಬೈಬಲ್‌ನಲ್ಲಿ ನಿಜವಾಗಿಯೂ ಪರಿಣಾಮಕಾರಿಯಾದ ಭರವಸಾರ್ಹ ಹಾಗೂ ಪ್ರಾಯೋಗಿಕ ಸಲಹೆಯನ್ನು ಆತನು ಒದಗಿಸುತ್ತಾನೆ. (ಕೀರ್ತನೆ 32:8; ಯೆಶಾಯ 48:17, 18) ಆದರೆ ಅದನ್ನು ಅನ್ವಯಿಸುವ ಜವಾಬ್ದಾರಿ ನಮ್ಮದು.
ಮಕ್ಕಳನ್ನು ಸಮತೋಲನವುಳ್ಳ ಮತ್ತು ದೇವಭಕ್ತ ವಯಸ್ಕರಾಗುವಂತೆ ಬೆಳೆಸುತ್ತಿರುವಾಗ ಹಲವಾರು ದಂಪತಿಗಳು ತಾವೇನನ್ನು ಕಲಿತುಕೊಂಡರೆಂಬುದನ್ನು ತಿಳಿಸುವಂತೆ ಕೇಳಿಕೊಳ್ಳಲಾಯಿತು. ಮುಖ್ಯವಾಗಿ ಬೈಬಲ್ ತತ್ತ್ವಗಳನ್ನು ಅನ್ವಯಿಸುವುದೇ ತಮ್ಮ ಯಶಸ್ಸಿಗೆ ನಡೆಸಿತೆಂದು ಅವರು ಹೇಳಿದರು. ಬೈಬಲ್ ಸಲಹೆಯು ಬರೆಯಲ್ಪಟ್ಟಾಗ ಎಷ್ಟು ಭರವಸಾರ್ಹವಾಗಿತ್ತೊ ಈಗಲೂ ಅಷ್ಟೇ ಭರವಸಾರ್ಹವಾಗಿದೆ ಎಂದು ಅವರು ಕಂಡುಕೊಂಡರು.
ಅವರೊಂದಿಗೆ ಸಮಯಕಳೆಯಿರಿ
ಕ್ಯಾಥರಿನ್ ಎಂಬ ಇಬ್ಬರು ಮಕ್ಕಳ ತಾಯಿಯನ್ನು, ಅವಳಿಗೆ ಹೆಚ್ಚಾಗಿ ಸಹಾಯಮಾಡಿದ ಸಲಹೆ ಯಾವುದೆಂದು ಕೇಳಿದೊಡನೆ ಅವಳು ಧರ್ಮೋಪದೇಶಕಾಂಡ 6:7ಕ್ಕೆ ಸೂಚಿಸಿದಳು. ಆ ವಚನವು ತಿಳಿಸುವುದು: “ಇವುಗಳನ್ನು [ಬೈಬಲ್ ತತ್ತ್ವಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ಈ ಸಲಹೆಯನ್ನು ಪಾಲಿಸಲು ತನ್ನ ಮಕ್ಕಳೊಂದಿಗೆ ತಾನು ಸಮಯ ಕಳೆಯಬೇಕೆಂಬುದನ್ನು ಕ್ಯಾಥರಿನ್ ಮನಗಂಡಳು.
‘ಹಾಗೆ ಹೇಳುವುದು ಸುಲಭ ಆದರೆ ಮಾಡುವುದು ಕಷ್ಟ’ ಎಂದು ನೀವು ನೆನಸುತ್ತಿರಬಹುದು. ಹೊಟ್ಟೆಪಾಡಿಗಾಗಿ ತಂದೆತಾಯಿ ಇಬ್ಬರೂ ದುಡಿಯಬೇಕಾಗುವ ಕುಟುಂಬಗಳಲ್ಲಿ, ಕಾರ್ಯಮಗ್ನರಾಗಿರುವ ಆ ಹೆತ್ತವರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಹೇಗೆ ಕಳೆಯಬಲ್ಲರು? ಟಾರ್ಲಿಫ್ ಎಂಬವರಿಗೆ, ತನ್ನದೇ ಆದ ಕುಟುಂಬ ಮತ್ತು ಮಕ್ಕಳಿರುವ ಒಬ್ಬ ಮಗನಿದ್ದಾನೆ. ಅವರ ಪ್ರಕಾರ ಮಕ್ಕಳನ್ನು ಬೆಳೆಸುವುದರಲ್ಲಿ ಯಶಸ್ಸಿನ ಕೀಲಿಕೈ, ಧರ್ಮೋಪದೇಶಕಾಂಡದಲ್ಲಿರುವ ಸಲಹೆಯನ್ನು ಅನ್ವಯಿಸುವುದೇ ಆಗಿದೆ. ನೀವು ಹೋಗುವಲೆಲ್ಲಾ ನಿಮ್ಮ ಮಕ್ಕಳನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿ ಮತ್ತು ಆಗ ಅವರೊಂದಿಗೆ ಮಾತಾಡುವ ಅವಕಾಶಗಳು ಸಹಜವಾಗಿ ಒದಗಿಬರುವವು. ಟಾರ್ಲಿಫ್ ಹೇಳುವುದು: “ಮನೆಯ ಕೆಲವು ಕೆಲಸಗಳನ್ನು ನಾನು ನನ್ನ ಮಗನೊಂದಿಗೆ ಸೇರಿ ಮಾಡಿದೆ. ನಾವು ಕುಟುಂಬವಾಗಿ ಪ್ರವಾಸಗಳಿಗೆ ಹೋಗುತ್ತಿದ್ದೆವು ಮತ್ತು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು.” ಇದರಿಂದಾಗಿ, “ನಮ್ಮ ಮಗನಿಗೆ ತನ್ನ ಮನಸ್ಸಿನಲ್ಲೇನಿದೆಯೊ ಅದನ್ನು ಯಾವುದೇ ಸಂದರ್ಭದಲ್ಲಿ ಸಂಕೋಚವಿಲ್ಲದೆ ನಮಗೆ ಹೇಳಬಹುದೆಂದು ಅನಿಸುತ್ತಿತ್ತು” ಎಂದು ಅವರು ಹೇಳುತ್ತಾರೆ.
ಆದರೆ ಮುಕ್ತ ಸಂವಾದವಿಲ್ಲದಿರುವಲ್ಲಿ ಅಥವಾ ಪರಸ್ಪರರೊಂದಿಗೆ ಮಾತಾಡುವುದು ಕಷ್ಟಕರವಾಗಿರುವಲ್ಲಿ ಆಗೇನು? ಇದು, ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಕೆಲವೊಮ್ಮೆ ಸಂಭವಿಸಬಹುದು. ಈ ಸನ್ನಿವೇಶದಲ್ಲಿ ಸಹ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಸಹಾಯಮಾಡಬಲ್ಲದು. ಕ್ಯಾಥರಿನಳ ಗಂಡನಾದ ಕೆನ್, ತಮ್ಮ ಮಗಳು ಹದಿವಯಸ್ಸಿಗೆ ಬಂದಾಗ, ತಾನೆಂದೂ ಅವಳಿಗೆ ಕಿವಿಗೊಡುವುದಿಲ್ಲವೆಂದು ದೂರಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಇದು ಹದಿವಯಸ್ಕರ ಸಾಮಾನ್ಯ ದೂರಾಗಿದೆ. ಅವರೇನು ಮಾಡಬಹುದಿತ್ತು? ಕೆನ್ ನೆನಪಿಸಿಕೊಳ್ಳುವುದು: “ಅವಳ ಆಲೋಚನೆಗಳು, ಭಾವನೆಗಳು ಜ್ಞಾನೋಕ್ತಿ 20:5) ಅವರ ಮನೆಯಲ್ಲಿ ಸಂವಾದಿಸುವುದು ಒಂದು ಹೊಸ ವಿಷಯವಾಗಿರದಿದ್ದ ಕಾರಣ ಈ ವಿಧಾನವು ಕಾರ್ಯಸಾಧಕವಾಗಿತ್ತೆಂಬುದು ಕೆನ್‌ರವರ ಅಭಿಪ್ರಾಯ. ಅವರು ಹೇಳುವುದು: “ನನಗೆ ಮುಂಚಿನಿಂದಲೂ ನನ್ನ ಮಗಳೊಂದಿಗೆ ಒಂದು ಉತ್ತಮ ಸಂಬಂಧವಿದ್ದುದ್ದರಿಂದ ಅವಳು ನನ್ನೊಂದಿಗೆ ಮನಬಿಚ್ಚಿ ಮಾತಾಡಬಹುದೆಂದು ಅವಳಿಗನಿಸಿತು.”
ಮತ್ತು ಹತಾಶೆಗಳ ಕುರಿತು ಚರ್ಚಿಸುತ್ತಾ ನಾನವಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿರ್ಧರಿಸಿದೆ ಮತ್ತು ಇದು ನಿಜವಾಗಿಯೂ ಸಹಾಯಮಾಡಿತು.” (ಆಸಕ್ತಿಯ ವಿಷಯವೇನೆಂದರೆ, ಹೆತ್ತವರು ಮತ್ತು ಮಕ್ಕಳು ಒಟ್ಟಾಗಿ ಸಾಕಷ್ಟು ಸಮಯ ಕಳೆಯುವುದಿಲ್ಲವೆಂದು ಹೆತ್ತವರಿಗಿಂತ ಮೂರುಪಟ್ಟು ಹೆಚ್ಚಾಗಿ ಹದಿವಯಸ್ಕರೇ ಹೇಳುತ್ತಾರೆಂದು ಇತ್ತೀಚಿನ ಒಂದು ಅಧ್ಯಯನವು ವರದಿಸಿತು. ಆದುದರಿಂದ, ಬೈಬಲ್ ಸಲಹೆಯನ್ನು ಏಕೆ ಅನುಸರಿಸಬಾರದು? ವಿರಾಮದ ಸಮಯದಲ್ಲಿ, ಕೆಲಸಮಾಡುವಾಗ, ಮನೆಯಲ್ಲಿ, ಪ್ರಯಾಣಿಸುವಾಗ, ಬೆಳಗ್ಗೆ ಏಳುವಾಗ ಮತ್ತು ರಾತ್ರಿ ಮಲಗುವ ಮುನ್ನ, ಹೀಗೆ ಸಾಧ್ಯವಾದಷ್ಟು ಸಮಯವನ್ನು ನಿಮ್ಮ ಮಕ್ಕಳೊಂದಿಗೆ ಕಳೆಯಿರಿ. ಸಾಧ್ಯವಾಗುವಲ್ಲಿ ನೀವು ಹೋದಲ್ಲೆಲ್ಲಾ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿರಿ. ಧರ್ಮೋಪದೇಶಕಾಂಡ 6:7 ಸೂಚಿಸುವಂತೆ, ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದಕ್ಕೆ ಯಾವುದೇ ಬದಲಿಯಿಲ್ಲ.
ಅವರಿಗೆ ಸರಿಯಾದ ಮೌಲ್ಯಗಳನ್ನು ಕಲಿಸಿರಿ
ಇಬ್ಬರು ಮಕ್ಕಳ ತಂದೆಯಾದ ಮಾರ್ಯೋ ಎಂಬವರು ತದ್ರೀತಿ ಶಿಫಾರಸ್ಸು ಮಾಡುತ್ತಾ ಹೇಳಿದ್ದು: “ಮಕ್ಕಳನ್ನು ಧಾರಾಳವಾಗಿ ಪ್ರೀತಿಸಿರಿ. ಅವರೊಂದಿಗೆ ಓದಿರಿ.” ಆದರೆ ಇದನ್ನು ನಿಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಚುರುಕುಗೊಳಿಸುವ ಒಂದೇ ಕಾರಣಕ್ಕಾಗಿ ಮಾಡಬೇಡಿ. ಸರಿ ಯಾವುದು ತಪ್ಪು ಯಾವುದೆಂದು ವಿವೇಚಿಸಿ ತಿಳಿದುಕೊಳ್ಳುವುದು ಹೇಗೆಂಬುದನ್ನು ಸಹ ನೀವು ಅವರಿಗೆ ಕಲಿಸಿಕೊಡಬೇಕು. ಮಾರ್ಯೋ ಕೂಡಿಸಿ ಹೇಳಿದ್ದು: “ಅವರೊಂದಿಗೆ ಬೈಬಲ್ ಅಧ್ಯಯನ ಮಾಡಿರಿ.”
ಹೆತ್ತವರು ಇದನ್ನೇ ಮಾಡುವಂತೆ ಬುದ್ಧಿವಾದಕೊಡುತ್ತಾ ಬೈಬಲ್ ಹೀಗನ್ನುತ್ತದೆ: “ನಿಮ್ಮ ಮಕ್ಕಳನ್ನು ಕೆರಳಿಸಬೇಡಿರಿ, ಬದಲಾಗಿ ಅವರಿಗೆ ನಿಜವಾದ ಕ್ರೈಸ್ತ ತರಬೇತಿ ಹಾಗೂ ಸಲಹೆಯೊಂದಿಗೆ ಅವರನ್ನು ಕೋಮಲಭಾವದಿಂದ ಬೆಳೆಸಿರಿ.” (ಎಫೆಸ 6:4, ವೆಮತ್) ಇಂದು ಅನೇಕ ಮನೆಗಳಲ್ಲಿ ನೈತಿಕ ತರಬೇತಿಯನ್ನು ಅಲಕ್ಷಿಸಲಾಗಿದೆ. ಮಕ್ಕಳು ದೊಡ್ಡವರಾದಾಗ, ಯಾವ ಮೌಲ್ಯಗಳನ್ನು ಸ್ವೀಕರಿಸಬೇಕೆಂಬುದನ್ನು ಅವರು ತಾವಾಗಿಯೇ ಆಯ್ಕೆ ಮಾಡಲು ಶಕ್ತರಾಗುತ್ತಾರೆ ಎಂಬುದು ಕೆಲವರ ಅಭಿಪ್ರಾಯ. ಇದು ನಿಮಗೆ ಸಮಂಜಸವಾಗಿ ತೋರುತ್ತದೊ? ಎಳೆಯ ಶರೀರವು ಬೆಳೆದು ದಷ್ಟ-ಪುಷ್ಠವಾಗಿರಲು ಹೇಗೆ ಸರಿಯಾದ ಪೋಷಣೆ ಅಗತ್ಯವೊ ಹಾಗೆಯೇ ಎಳೆಯ ಹೃದಮನಗಳಿಗೆ ತರಬೇತಿನ ಅಗತ್ಯವಿದೆ. ನಿಮ್ಮ ಮಕ್ಕಳಿಗೆ ನೀವು ಮನೆಯಲ್ಲಿ ನೈತಿಕ ಮೌಲ್ಯಗಳನ್ನು ಕಲಿಸದಿರುವಲ್ಲಿ, ಅವರು ತಮ್ಮ ಶಾಲಾಸಹಪಾಠಿಗಳ, ಶಿಕ್ಷಕರ ಅಥವಾ ಸಮೂಹ ಮಾಧ್ಯಮದ ದೃಷ್ಟಿಕೋನಗಳನ್ನು ತಮ್ಮದಾಗಿಸಿಕೊಳ್ಳುವುದು ಹೆಚ್ಚು ಸಂಭಾವ್ಯ.
ಹೆತ್ತವರು ತಮ್ಮ ಮಕ್ಕಳಿಗೆ ಸರಿ ಮತ್ತು ತಪ್ಪಿನ ನಡುವಿನ ಬೇಧವನ್ನು ಅರಿತುಕೊಳ್ಳುವುದು ಹೇಗೆಂಬುದನ್ನು ಕಲಿಸಲು ಬೈಬಲ್ ಸಹಾಯಮಾಡಬಲ್ಲದು. (2 ತಿಮೊಥೆಯ 3:16, 17) ಇಬ್ಬರು ಮಕ್ಕಳನ್ನು ಬೆಳೆಸಿರುವ ಜೆಫ್ ಎಂಬ ಅನುಭವೀ ಕ್ರೈಸ್ತ ಹಿರಿಯನು, ಮಕ್ಕಳಿಗೆ ಸರಿಯಾದ ಮೌಲ್ಯಗಳನ್ನು ಕಲಿಸಲು ಬೈಬಲನ್ನು ಉಪಯೋಗಿಸುವಂತೆ ಶಿಫಾರಸ್ಸುಮಾಡುತ್ತಾನೆ. ಅವನು ಹೇಳುವುದು: “ಬೈಬಲನ್ನು ಉಪಯೋಗಿಸುವುದರಿಂದ ಮಕ್ಕಳಿಗೆ, ಒಂದು ನಿರ್ದಿಷ್ಟ ವಿಷಯದ ಕುರಿತು ಅಪ್ಪಅಮ್ಮನಿಗೆ ಮಾತ್ರವಲ್ಲ ಸೃಷ್ಟಿಕರ್ತನಿಗೂ ಹೇಗನಿಸುತ್ತದೆಂದು ಗ್ರಹಿಸುವಂತೆ ಸಹಾಯ ಸಿಗುತ್ತದೆ. ಬೈಬಲ್ ನಮ್ಮ ಮಕ್ಕಳ ಹೃದಮನಗಳ ಮೇಲೆ ಬೀರಿದ ವಿಶಿಷ್ಟ ಪ್ರಭಾವವನ್ನು ನಾವು ಗಮನಿಸಿದೆವು. ಅವರ ಯಾವುದೊ ತಪ್ಪು ನಡತೆ ಇಲ್ಲವೆ ಆಲೋಚನೆಯ ಬಗ್ಗೆ ಅವರೊಂದಿಗೆ ಮಾತಾಡಲಿಕ್ಕಾಗಿ ಒಂದು ಸೂಕ್ತ ವಚನವನ್ನು ಕಂಡುಹಿಡಿಯಲು ನಾವು ಸಮಯ ತೆಗೆದುಕೊಂಡೆವು. ತದನಂತರ ಮಗನು/ಮಗಳು ಖಾಸಗಿಯಾಗಿ ಆ ಭಾಗವನ್ನು ಓದುವಂತೆ ಮಾಡುತ್ತಿದ್ದೆವು. ಹೆಚ್ಚಿನ ಬಾರಿ ವಚನ ಓದಿದ ಬಳಿಕ ಅವರು ಕಣ್ಣೀರಿಡುತ್ತಿದ್ದರು. ನಾವೇನನ್ನು ಹೇಳಲು ಅಥವಾ ಮಾಡಲು ಎಣಿಸಸಾಧ್ಯವಿತ್ತೊ ಅದಕ್ಕಿಂತಲೂ ಹೆಚ್ಚು ಗಾಢವಾದ ಪರಿಣಾಮವನ್ನು ಬೈಬಲ್ ಬೀರುವುದನ್ನು ನೋಡಿ ನಮಗೆ ಆಶ್ಚರ್ಯವಾಗುತ್ತಿತ್ತು.”
ಇಬ್ರಿಯ 4:12 ವಿವರಿಸುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” ಆದುದರಿಂದ ಬೈಬಲಿನ ಸಂದೇಶವು, ದೇವರು ಬರಹಗಾರರಾಗಿ ಉಪಯೋಗಿಸಿದ ಮನುಷ್ಯರ ವೈಯಕ್ತಿಕ ನೋಟಗಳು ಅಥವಾ ಅನುಭವಗಳಾಗಿರುವುದಿಲ್ಲ. ಬದಲಿಗೆ ಅದು, ನೈತಿಕ ವಿಷಯಗಳ ಬಗ್ಗೆ ದೇವರ ಆಲೋಚನೆಗಳನ್ನು ತಿಳಿಸುತ್ತದೆ. ಈ ಸಂಗತಿಯೇ, ಬೈಬಲ್ ಸಂದೇಶವನ್ನು ಉಳಿದೆಲ್ಲಾ ಸಲಹೆಗಳಿಂದ ಭಿನ್ನವಾಗಿರಿಸುತ್ತದೆ. ನಿಮ್ಮ ಮಕ್ಕಳಿಗೆ ಬೋಧಿಸಲು ಬೈಬಲನ್ನು ಉಪಯೋಗಿಸುವ ಮೂಲಕ ಯಾವುದೇ ವಿಷಯದ ಬಗ್ಗೆ ಅವರಿಗೆ ಯೆಹೋವನ ದೃಷ್ಟಿಕೋನವಿರುವಂತೆ ಸಹಾಯಮಾಡುತ್ತೀರಿ. ಆಗ, ನಿಮ್ಮ ತರಬೇತಿಗೆ ಹೆಚ್ಚು ಮಹತ್ವವಿರುತ್ತದೆ ಮತ್ತು ನಿಮ್ಮ ಮಗುವಿನ ಹೃದಯವನ್ನು ಮುಟ್ಟುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಈ ಹಿಂದೆ ಪ್ರಸ್ತಾಪಿಸಲ್ಪಟ್ಟ ಕ್ಯಾಥರಿನ್ ಕೂಡ ಒಪ್ಪಿಕೊಳ್ಳುತ್ತಾ ಹೇಳುವುದು: “ಸನ್ನಿವೇಶವು ಎಷ್ಟು ಕಠಿನವಾಗಿರುತ್ತಿತ್ತೊ ಅಷ್ಟೇ ಹೆಚ್ಚಾಗಿ ನಾವು ದೇವರ ವಾಕ್ಯದ ಮಾರ್ಗದರ್ಶನವನ್ನು ಪಡೆಯಲು ಪ್ರಯತ್ನಿಸಿದೆವು ಮತ್ತು ಅದು ಪರಿಣಾಮಕಾರಿಯಾಗಿರುತ್ತಿತ್ತು!” ಸರಿ ಯಾವುದು ತಪ್ಪು ಯಾವುದೆಂದು ವಿವೇಚಿಸುವುದು ಹೇಗೆಂದು ಮಕ್ಕಳಿಗೆ ಕಲಿಸಲು ನೀವು ಬೈಬಲಿನ ಹೆಚ್ಚಿನ ಉಪಯೋಗವನ್ನು ಮಾಡಸಾಧ್ಯವೊ?
ನ್ಯಾಯಸಮ್ಮತರಾಗಿರಿ
ಮಕ್ಕಳನ್ನು ಬೆಳೆಸುವುದರಲ್ಲಿ ಉಪಯುಕ್ತವಾಗಿರುವ ಇನ್ನೊಂದು ಪ್ರಾಮುಖ್ಯ ತತ್ತ್ವಕ್ಕೆ ಅಪೊಸ್ತಲ ಪೌಲನು ಬೊಟ್ಟುಮಾಡುತ್ತಾನೆ. ಅವನು ಜೊತೆ ಕ್ರೈಸ್ತರಿಗೆ ಉತ್ತೇಜಿಸಿದ್ದು: “ನಿಮ್ಮ ನ್ಯಾಯಸಮ್ಮತತೆ ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.” (ಫಿಲಿಪ್ಪಿ 4:5, NW) ನಾವು ನ್ಯಾಯಸಮ್ಮತರಾಗಿದ್ದೇವೆಂದು ನಮ್ಮ ಮಕ್ಕಳಿಗೂ ಗೊತ್ತಾಗಬೇಕೆಂಬುದು ಖಂಡಿತ. ಅಲ್ಲದೆ, ನ್ಯಾಯಸಮ್ಮತತೆಯು “ಮೇಲಣಿಂದ ಬರುವ ವಿವೇಕವನ್ನು” ಪ್ರತಿಬಿಂಬಿಸುತ್ತದೆ ಎಂಬುದನ್ನು ನೆನಪಿಡಿ.—ಯಾಕೋಬ 3:17, NW.
ಹಾಗಿದ್ದರೂ, ನ್ಯಾಯಸಮ್ಮತತೆಯು ಮಕ್ಕಳನ್ನು ತರಬೇತುಗೊಳಿಸುವುದರಲ್ಲಿ ಯಾವ ಪಾತ್ರ ವಹಿಸುತ್ತದೆ? ನಮ್ಮಿಂದಾದ ಎಲ್ಲಾ ಸಹಾಯವನ್ನು ನಾವು ಮಾಡುವುದಾದರೂ ನಾವು ಅವರ ಪ್ರತಿಯೊಂದು ಕೃತ್ಯವನ್ನು ನಿಯಂತ್ರಿಸುವುದಿಲ್ಲ. ಉದಾಹರಣೆಗೆ ಹಿಂದೆ ಪ್ರಸ್ತಾಪಿಸಲ್ಪಟ್ಟ ಮಾರ್ಯೋ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆ. ಅವನು ನೆನಪಿಸುವುದು: “ಯಾವಾಗಲೂ ನಾವು ನಮ್ಮ ಮಕ್ಕಳಿಗೆ ದೀಕ್ಷಾಸ್ನಾನ, ಪೂರ್ಣಸಮಯದ ಸೇವೆ ಮತ್ತು ಇನ್ನಿತರ ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವಂತೆ ಪ್ರೋತ್ಸಾಹಿಸಿದೆವು. ಆದರೆ ಸಮಯ ಬಂದಾಗ ಅವರೇ ತಮ್ಮ ಆಯ್ಕೆಮಾಡಬೇಕೆಂಬುದನ್ನು ನಾವು ಅವರಿಗೆ ಸ್ಪಷ್ಟಪಡಿಸಿದೆವು.” ಇದರ ಪರಿಣಾಮ ಏನಾಯಿತು? ಅವರ ಇಬ್ಬರೂ ಮಕ್ಕಳು ಈಗ ಪೂರ್ಣಸಮಯದ ಸೌವಾರ್ತಿಕರಾಗಿದ್ದಾರೆ.
“ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ” ಎಂದು ಕೊಲೊಸ್ಸೆ 3:21ರಲ್ಲಿ ಬೈಬಲ್ ಎಚ್ಚರಿಸುತ್ತದೆ. ಕ್ಯಾಥರಿನಳು ಈ ವಚನವನ್ನು ತುಂಬ ಅಮೂಲ್ಯವಾದದ್ದಾಗಿ ಪರಿಗಣಿಸುತ್ತಾಳೆ. ಹೆತ್ತವರೊಬ್ಬರು ತಾಳ್ಮೆಗೆಟ್ಟಾಗ ಸಿಟ್ಟಿಗೇಳುವುದು ಅಥವಾ ಮಕ್ಕಳಿಂದ ತೀರ ಹೆಚ್ಚನ್ನು ನಿರೀಕ್ಷಿಸುವುದು ಸುಲಭ. ಆದರೆ ಅವಳು ಹೇಳುವುದು, “ನಿಮ್ಮಿಂದಾಗುವಂಥ ವಿಷಯಗಳನ್ನು ನಿಮ್ಮ ಮಕ್ಕಳಿಂದ ನಿರೀಕ್ಷಿಸಬೇಡಿರಿ.” ಕ್ಯಾಥರಿನಳು ಸಹ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಾಳೆ ಮತ್ತು ಅವಳು ಕೂಡಿಸುವುದು: “ಯೆಹೋವನ ಸೇವೆಮಾಡುವುದನ್ನು ಒಂದು ಹರ್ಷಕರ ಸಂಗತಿಯನ್ನಾಗಿ ಮಾಡಿರಿ.”
ಹಿಂದೆ ಪ್ರಸ್ತಾಪಿಸಲ್ಪಟ್ಟ ಜೆಫ್ ಈ ಪ್ರಾಯೋಗಿಕ ಹೇಳಿಕೆಯನ್ನು ಮಾಡುತ್ತಾನೆ: “ನಮ್ಮ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ, ನಮ್ಮ ಒಳ್ಳೆಯ ಸ್ನೇಹಿತನೊಬ್ಬನು ಒಮ್ಮೆ ಹೇಳಿದ್ದೇನೆಂದರೆ, ಅವನು ತನ್ನ ಮಕ್ಕಳ ವಿನಂತಿಗಳಿಗೆ ಎಷ್ಟೋ ಬಾರಿ ‘ಇಲ್ಲ’ ಎಂದು ಹೇಳಬೇಕಾಗುತ್ತಿತ್ತು. ಇದರಿಂದಾಗಿ ಮಕ್ಕಳಿಗೆ ಹತಾಶೆಯಾಗುತ್ತಿತ್ತು ಮತ್ತು ಅವರನ್ನು ಅದುಮಿಯಿಡಲಾಗುತ್ತಿದೆ ಎಂದು ಅವರು ಭಾವಿಸುತ್ತಿದ್ದರು. ಆದುದರಿಂದ, ನಮ್ಮ ಮಕ್ಕಳಿಗೆ ಹೀಗಾಗುವುದನ್ನು ತಡೆಯಲು ‘ಆಯಿತು’ ಎಂದು ಹೇಳಲು ಅವಕಾಶಗಳನ್ನು ಹುಡುಕುವಂತೆ ಅವನು ಸಲಹೆನೀಡಿದನು.”
ಜೆಫ್ ಹೇಳುವುದು: “ಇದೊಂದು ಉತ್ತಮ ಸಲಹೆಯಾಗಿದೆ ಎಂದು ನಾವು ಕೊಂಡುಕೊಂಡೆವು. ತದನಂತರ ನಮ್ಮ ಮಕ್ಕಳು ನಾವು ಒಪ್ಪುವ ಸನ್ನಿವೇಶಗಳಲ್ಲಿ ಇತರರೊಂದಿಗೆ ಆನಂದಿಸಬಹುದಾದ ಅವಕಾಶಗಳಿಗಾಗಿ ಹುಡುಕಿದೆವು. ನಾವು ಅವರಿಗೆ, ‘ಇಂಥಿಂಥವರು ಹೀಗೆ ಮಾಡುತ್ತಿದ್ದಾರೆಂದು ನಿಮಗೆ ಗೊತ್ತಾ? ನೀವು ಕೂಡ ಅವರೊಂದಿಗೆ ಏಕೆ ಸೇರಿಕೊಳ್ಳಬಾರದು?’ ಎಂದು ಅವರಿಗೆ ಹೇಳುತ್ತಿದ್ದೆವು. ಅಥವಾ ಮಕ್ಕಳು ನಾವು ಅವರನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಬೇಕೆಂದು ಕೇಳುತ್ತಿದ್ದಾಗ ನಮಗೆ ಸುಸ್ತಾಗಿದ್ದರೂ, ಹೇಗಾದರೂ ಮಾಡಿ ಹೋಗಲು ಪ್ರಯತ್ನಿಸಿದ್ದೆವು. ‘ಇಲ್ಲ’ ಎಂದು ಹೇಳುವುದನ್ನು ತಡೆಯಲಿಕ್ಕಾಗಿ ನಾವು ಇದನ್ನೆಲ್ಲಾ ಮಾಡಿದೆವು.” ನ್ಯಾಯಸಮ್ಮತತೆಯ ಸಾರವೇ ಇದು—ನಿಷ್ಪಕ್ಷಪಾತಿಗಳಾಗಿರುವುದು, ಪರಿಗಣನೆ ತೋರಿಸುವುದು ಮತ್ತು ಮಣಿಯುವವರಾಗಿರುವುದು, ಆದರೆ ಅದೇ ಸಮಯದಲ್ಲಿ ಬೈಬಲ್ ತತ್ತ್ವಗಳನ್ನು ರಾಜಿಮಾಡಿಕೊಳ್ಳದಿರುವುದೇ ಆಗಿದೆ.
ಭರವಸಾರ್ಹ ಸಲಹೆಯಿಂದ ಪ್ರಯೋಜನಪಡೆಯಿರಿ
ಈ ದಂಪತಿಗಳಲ್ಲಿ ಹೆಚ್ಚಿನವರಿಗೆ ಈಗ ಮೊಮ್ಮಕ್ಕಳಿದ್ದಾರೆ. ತಮ್ಮ ಮಕ್ಕಳು ಯಶಸ್ವಿ ಹೆತ್ತವರಾಗಲು ಅದೇ ಬೈಬಲ್ ತತ್ತ್ವಗಳು ಸಹಾಯಮಾಡುತ್ತಿರುವುದನ್ನು ನೋಡಲು ಅವರು ಹರ್ಷಿಸುತ್ತಾರೆ. ಆ ಬೈಬಲ್ ಸಲಹೆಗಳಿಂದ ನೀವು ಪ್ರಯೋಜನವನ್ನು ಪಡೆಯಸಾಧ್ಯವಿದೆಯೇ?
ಆರಂಭದಲ್ಲಿ ಉಲ್ಲೇಖಿಸಿದ ರೂತಳು ತಾಯಿಯಾದಾಗ, ಅವಳಿಗೆ ಮತ್ತು ಅವಳ ಗಂಡನಿಗೆ ಕೆಲವೊಮ್ಮ ನಿಸ್ಸಹಾಯಕತೆಯ ಭಾವನೆಗಳು ಕಾಡುತ್ತಿದ್ದವು. ಆದರೆ ಅವರು ನಿಸ್ಸಹಾಯಕರಾಗಿಯೇ ಉಳಿಯಲಿಲ್ಲ. ಅವರಿಗೆ ದೇವರ ವಾಕ್ಯವಾದ ಬೈಬಲಿನ ಅತಿ ಶ್ರೇಷ್ಠಮಟ್ಟದ ಸಲಹೆಯಿತ್ತು. ಹೆತ್ತವರಿಗೆ ನೆರವುನೀಡಬಲ್ಲ ಅನೇಕ ಅತ್ಯುತ್ತಮ ಬೈಬಲ್ ಅಧ್ಯಯನದ ಸಹಾಯಕಗಳನ್ನು ಯೆಹೋವನ ಸಾಕ್ಷಿಗಳು ಮುದ್ರಿಸಿದ್ದಾರೆ. ಇವುಗಳಲ್ಲಿ, ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್), ಬೈಬಲ್ ಕಥೆಗಳ ನನ್ನ ಪುಸ್ತಕ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಮತ್ತು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕಗಳು ಒಳಗೂಡಿವೆ. ರೂತಳ ಗಂಡನಾದ ಟಾರ್ಲಿಫ್ ಹೇಳುವುದು: “ಇಂದು ಯಥೇಷ್ಟವಾದ ಬೈಬಲಾಧರಿತ ಸಲಹೆಯು ಹೆತ್ತವರಿಗೆ ಸುಲಭವಾಗಿ ಲಭ್ಯವಿದೆ. ಒಂದುವೇಳೆ ಅವರು ಅದರ ಒಳ್ಳೇ ಉಪಯೋಗ ಮಾಡುವಲ್ಲಿ ಮಗು ಬೆಳೆಯುವಾಗ ಅದರ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅದಕ್ಕೆ ತರಬೇತಿ ನೀಡಲು ಹೆತ್ತವರಿಗೆ ಸಹಾಯಸಿಗುವುದು.” (w06 11/01)
[ಪುಟ 5ರಲ್ಲಿರುವ ಚೌಕ/ಚಿತ್ರ]
ಪರಿಣತರ ಹೇಳಿಕೆಗಳು ಮತ್ತು ಬೈಬಲ್‌ನ ಹೇಳಿಕೆಗಳು
ಮಮತೆ ತೋರಿಸುವ ಬಗ್ಗೆ:
ಶಿಶು ಹಾಗೂ ಮಗುವಿನ ಮಾನಸಿಕ ಆರೈಕೆ (1928, ಇಂಗ್ಲಿಷ್) ಪುಸ್ತಕದಲ್ಲಿ ಡಾಕ್ಟರ್ ಜಾನ್ ಬ್ರೋಡಸ್ ವಾಟ್‌ಸನ್‌ರವರು ಹೆತ್ತವರಿಗೆ ಹೀಗೆ ಹೇಳಿದರು: ನಿಮ್ಮ ಮಕ್ಕಳನ್ನು “ಎಂದೂ ಆಲಂಗಿಸಿ ಮುದ್ದಿಡಬೇಡಿ. ಅವರನ್ನು ನಿಮ್ಮ ತೊಡೆ ಮೇಲೆ ಕುಳಿತುಕೊಳ್ಳಲು ಎಂದಿಗೂ ಬಿಡಬೇಡಿರಿ.” ಆದರೆ ಇತ್ತೀಚೆಗೆ, ನಮ್ಮ ಮಕ್ಕಳು ಎಂಬ ಪತ್ರಿಕೆಯಲ್ಲಿ (ಮಾರ್ಚ್ 1999, ಇಂಗ್ಲಿಷ್) ಡಾಕ್ಟರ್ ವಿರಾ ಜೇನ್ ಮತ್ತು ಡಾಕ್ಟರ್ ಡಾರಥೀ ಮೊಲೀನೋ ಎಂಬವರು ಹೇಳಿದ್ದು: “ದೈಹಿಕ ಸ್ಪರ್ಶ ಮತ್ತು ಮಮತೆಯ ವ್ಯಕ್ತಪಡಿಸುವಿಕೆಗಳಿಂದ ವಂಚಿತರಾದ ಮಕ್ಕಳು ಹೆಚ್ಚಾಗಿ ಏಳಿಗೆಹೊಂದುವುದಿಲ್ಲ ಎಂದು ಸಂಶೋಧನೆಯು ತೋರಿಸುತ್ತದೆ.”
ವ್ಯತಿರಿಕ್ತವಾಗಿ, ಯೆಶಾಯ 66:12ರಲ್ಲಿ ಹೆತ್ತವರ ಪ್ರೀತಿಯ ಅಭಿವ್ಯಕ್ತಿಗಳನ್ನು ಬಳಸುತ್ತಾ ದೇವರು ತನ್ನ ಜನರ ಮೇಲೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ಸೂಚಿಸಲಾಗಿದೆ. ಅದೇ ರೀತಿ, ಚಿಕ್ಕ ಮಕ್ಕಳನ್ನು ಯೇಸುವಿನ ಬಳಿ ತರದಂತೆ ಶಿಷ್ಯರು ಜನರನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ, ಅವನು ಶಿಷ್ಯರನ್ನು ತಿದ್ದುತ್ತಾ ಹೇಳಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” ತದನಂತರ “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.”—ಮಾರ್ಕ 10:14, 16.
ಸರಿಯಾದ ಮೌಲ್ಯಗಳನ್ನು ಕಲಿಸುವ ಬಗ್ಗೆ:
ಇಸವಿ 1969ರ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸೀನ್‌ನ ಲೇಖನವೊಂದರಲ್ಲಿ ಡಾಕ್ಟರ್ ಬ್ರೂನೋ ಬೆಟಲ್‌ಹೈಮ್‌ರವರು ಒಂದು ಮಗುವಿಗೆ, “[ಹೆತ್ತವರ] ಅಧಿಕಾರಯುತ [ಬೋಧನೆಯ] ಪ್ರಭಾವಕ್ಕೊಳಗಾಗದೆ ಕೇವಲ ತನ್ನ ಸ್ವಂತ ಜೀವನದ ಅನುಭವಗಳಿಂದ ತನ್ನ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಹಕ್ಕು ಇದೆ” ಎಂಬುದಕ್ಕೆ ಒತ್ತುನೀಡಿದರು. ಆದರೆ ಸುಮಾರು 30 ವರ್ಷಗಳ ನಂತರ, ಮಕ್ಕಳ ನೈತಿಕ ಬುದ್ಧಿಮತೆ (1997, ಇಂಗ್ಲಿಷ್) ಎಂಬ ಪುಸ್ತಕದ ಲೇಖಕರಾದ ಡಾಕ್ಟರ್ ರಾಬರ್ಟ್ ಕೋಲ್ಸ್‌ರವರು ಒಪ್ಪಿಕೊಂಡಿದ್ದು: “ಮಕ್ಕಳಿಗೆ ಜೀವನದಲ್ಲಿ ಉದ್ದೇಶ, ಮಾರ್ಗದರ್ಶನ ಮತ್ತು [ತಮ್ಮ ಹೆತ್ತವರ ಹಾಗೂ ಇತರ ವಯಸ್ಕರ ಒಪ್ಪಿಗೆಯಿರುವ] ಮೌಲ್ಯಗಳ ತೀವ್ರ ಅಗತ್ಯವಿದೆ.”
ಜ್ಞಾನೋಕ್ತಿ 22:6 ಹೆತ್ತವರನ್ನು ಉತ್ತೇಜಿಸುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” “ಶಿಕ್ಷಿಸು” ಎಂದು ಭಾಷಾಂತರಿಸಲ್ಪಟ್ಟ ಹೀಬ್ರು ಪದವು, “ಆರಂಭಿಸು” ಎಂಬುದನ್ನು ಸಹ ಸೂಚಿಸುತ್ತದೆ ಮತ್ತು ಇಲ್ಲಿ ಶಿಶುವಿಗೆ ಮೊದಲ ಉಪದೇಶವನ್ನು ಆರಂಭಿಸುವುದನ್ನು ಇದು ಸೂಚಿಸುತ್ತದೆ. ಹಾಗಾಗಿ ಹೆತ್ತವರು ತಮ್ಮ ಮಕ್ಕಳಿಗೆ ಶೈಶವದಿಂದಲೇ ಸರಿಯಾದ ಮೌಲ್ಯಗಳನ್ನು ಕಲಿಸಲು ಪ್ರಾರಂಭಿಸಬೇಕೆಂದು ಉತ್ತೇಜಿಸಲಾಗಿದೆ. (2 ತಿಮೊಥೆಯ 3:14, 15) ವ್ಯಕ್ತಿತ್ವ ರೂಪುಗೊಳ್ಳುವ ವರ್ಷಗಳಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೊ ಅದು ಅವರೊಂದಿಗೆ ಜೀವನಪರ್ಯಂತ ಉಳಿಯುವುದು ಹೆಚ್ಚು ಸಂಭವನೀಯ.
ಶಿಸ್ತಿನ ಬಗ್ಗೆ:
ಹಠಸಾಧಿಸುವ ಮಗು (1978, ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಡಾಕ್ಟರ್ ಜೇಮ್ಸ್ ಡಾಬ್ಸನ್‌ರವರು ಬರೆದದ್ದು: “ಪ್ರೀತಿಯ ಹೆತ್ತವರಿಂದ ಸಿಗುವ ದೈಹಿಕ ಶಿಕ್ಷೆಯು ಹಾನಿಕಾರಕ ನಡವಳಿಕೆಯನ್ನು ನಿಗ್ರಹಿಸುವ ಬೋಧನಾ ಉಪಕರಣವಾಗಿದೆ.” ಆದರೆ ಇನ್ನೊಂದು ಕಡೆ, ಶಿಶು ಮತ್ತು ಮಗುವಿನ ಆರೈಕೆ (1998) ಎಂಬ ಜನಪ್ರಿಯ ಪುಸ್ತಕದ (ಇಂಗ್ಲಿಷ್) 7ನೇ ಮುದ್ರಣದ ಮೇಲಾಧರಿಸಿದ ಒಂದು ಲೇಖನದಲ್ಲಿ ಡಾಕ್ಟರ್ ಬೆಂಜಮಿನ್ ಸ್ಪಾಕ್ ಹೀಗೆ ಹೇಳಿದರು: “ಮಕ್ಕಳಿಗೆ ಏಟುಕೊಡುವುದರಿಂದ ಅವರು ಕಲಿಯುವ ಸಂಗತಿಯೇನೆಂದರೆ, ದೊಡ್ಡವನೂ ಬಲಿಷ್ಠನೂ ಆಗಿರುವ ವ್ಯಕ್ತಿಯು, ಅವನು ಮಾಡುವುದು ಸರಿಯಾಗಿರಲಿ ಇಲ್ಲದಿರಲಿ ತನಗೆ ಇಷ್ಟಬಂದಂತೆ ಮಾಡಬಹುದು.”
ಶಿಸ್ತಿನ ಕುರಿತಾಗಿ ಬೈಬಲ್ ತಿಳಿಸುವುದು: “ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು.” (ಜ್ಞಾನೋಕ್ತಿ 29:15) ಹಾಗಿರುವುದಾದರೂ, ಎಲ್ಲಾ ಮಕ್ಕಳಿಗೆ ದೈಹಿಕ ಶಿಕ್ಷೆಯ ಅವಶ್ಯಕತೆ ಇರುವುದಿಲ್ಲ. ಜ್ಞಾನೋಕ್ತಿ 17:10 ಹೇಳುವುದು: “ಮಂದನಿಗೆ ನೂರು ಪೆಟ್ಟು ಹೊಡೆಯುವದಕ್ಕಿಂತಲೂ ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ.”
[ಪುಟ 5ರಲ್ಲಿರುವ ಚಿತ್ರ]
ಹೃದಯವನ್ನು ತಲುಪಲು ಬೈಬಲನ್ನು ಉಪಯೋಗಿಸಿರಿ
[ಪುಟ 7ರಲ್ಲಿರುವ ಚಿತ್ರ]
ವಿವೇಕಿ ಹೆತ್ತವರು ತಮ್ಮ ಮಕ್ಕಳಿಗಾಗಿ ಮನೋರಂಜನೆಯನ್ನು ಏರ್ಪಡಿಸುತ್ತಾರೆ