ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ

ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ

ದೇವರ ಪ್ರೀತಿಯಲ್ಲಿ ನೆಲೆಗೊಳ್ಳಿರಿ

“ಪ್ರಿಯರೇ . . . ನಿತ್ಯಜೀವಕ್ಕಾಗಿ . . . ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.”​—⁠ಯೂದ 20, 21.

ಯೆಹೋವನು ಮಾನವಲೋಕವನ್ನು ಎಷ್ಟೊಂದು ಪ್ರೀತಿಸುತ್ತಾನೆಂದರೆ ಅವರಿಗೋಸ್ಕರ ತನ್ನ ಏಕಜಾತ ಪುತ್ರನನ್ನೇ ಕೊಟ್ಟನು; ಆತನನ್ನು ನಂಬುವವರು ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. (ಯೋಹಾನ 3:16) ಇಂತಹ ಪ್ರೀತಿಯನ್ನು ಅನುಭವಿಸುವುದು ಅದೆಷ್ಟು ಚೆನ್ನ! ನೀವು ಯೆಹೋವನ ಸೇವಕರಲ್ಲಿ ಒಬ್ಬರಾಗಿರುವಲ್ಲಿ ಆ ಪ್ರೀತಿಯನ್ನು ನಿತ್ಯಕ್ಕೂ ಅನುಭವಿಸಲು ಇಷ್ಟಪಡುವಿರೆಂಬುದು ನಿಶ್ಚಯ.

2 ದೇವರ ಪ್ರೀತಿಯಲ್ಲಿ ನೀವು ಹೇಗೆ ನೆಲೆಗೊಳ್ಳಸಾಧ್ಯವಿದೆ ಎಂಬುದನ್ನು ಶಿಷ್ಯ ಯೂದನು ತಿಳಿಯಪಡಿಸಿದನು. ಅವನು ಬರೆದುದು: “ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 20, 21) “ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯಲ್ಲಿ” ಅಂದರೆ ಕ್ರೈಸ್ತ ಬೋಧನೆಗಳಲ್ಲಿ ನೀವು ಕಟ್ಟಲ್ಪಡಲು ದೇವರ ವಾಕ್ಯದ ಅಧ್ಯಯನ ಮತ್ತು ಸುವಾರ್ತೆ ಸಾರುವಿಕೆಯು ಸಹಾಯಮಾಡುವದು. ಅಲ್ಲದೆ, ದೇವರ ಪ್ರೀತಿಯಲ್ಲಿ ನೆಲೆಗೊಳ್ಳಲು ನೀವು “ಪವಿತ್ರಾತ್ಮ ಪ್ರೇರಿತರಾಗಿ” ಇಲ್ಲವೆ ಪವಿತ್ರಾತ್ಮಕ್ಕೆ ಅನುಗುಣವಾಗಿ ಪ್ರಾರ್ಥಿಸತಕ್ಕದ್ದು. ನೀವು ನಿತ್ಯಜೀವದ ಆಶೀರ್ವಾದವನ್ನು ಪಡೆಯಬೇಕಾದರೆ ಯೇಸು ಕ್ರಿಸ್ತನ ವಿಮೋಚನಾಮೌಲ್ಯ ಯಜ್ಞದಲ್ಲಿಯೂ ನಂಬಿಕೆಯನ್ನು ಇಡಬೇಕು.​—⁠1 ಯೋಹಾನ 4:10.

3 ಒಂದೊಮ್ಮೆ ನಂಬಿಕೆಯಿದ್ದ ಕೆಲವರು ದೇವರ ಪ್ರೀತಿಯಲ್ಲಿ ನೆಲೆಗೊಂಡಿಲ್ಲ. ಅವರು ಪಾಪಮಾರ್ಗವನ್ನು ಬೆನ್ನಟ್ಟಿದ ಕಾರಣ ಈಗ ಯೆಹೋವನ ಸಾಕ್ಷಿಗಳಾಗಿಲ್ಲ. ಹೀಗಾಗುವುದನ್ನು ನೀವು ಹೇಗೆ ತಪ್ಪಿಸಬಲ್ಲಿರಿ? ಈ ಕೆಳಗಿನ ವಿಷಯಗಳನ್ನು ಧ್ಯಾನಿಸುವುದು ನೀವು ಪಾಪಕೃತ್ಯವನ್ನು ಮಾಡದಂತೆಯೂ ದೇವರ ಪ್ರೀತಿಯಲ್ಲಿ ನಿಮ್ಮನ್ನು ಕಾಪಾಡಿಕೊಳ್ಳುವಂತೆಯೂ ಸಹಾಯಮಾಡುವುದು.

ದೇವರ ಮೇಲೆ ನಿಮಗಿರುವ ಪ್ರೀತಿಯನ್ನು ತೋರಿಸಿರಿ

4 ದೇವರಿಗೆ ವಿಧೇಯರಾಗುವ ಮೂಲಕ ಆತನ ಮೇಲೆ ನಿಮಗಿರುವ ಪ್ರೀತಿಯನ್ನು ತೋರಿಸಿರಿ. (ಮತ್ತಾಯ 22:37) “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 5:⁠3) ನೀವು ದೇವರಿಗೆ ತೋರಿಸುವ ರೂಢಿಗತ ವಿಧೇಯತೆಯು ಪ್ರಲೋಭನೆಗಳನ್ನು ಪ್ರತಿರೋಧಿಸುವಂತೆ ನಿಮ್ಮನ್ನು ಬಲಪಡಿಸಿ ಹರ್ಷಿತರನ್ನಾಗಿ ಮಾಡಬಲ್ಲದು. ಕೀರ್ತನೆಗಾರನು ಹೇಳಿದ್ದು: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ” ಇದ್ದಾನೊ “ಅವನು ಎಷ್ಟೋ ಧನ್ಯನು.”​—⁠ಕೀರ್ತನೆ 1:​1, 2.

5 ಯೆಹೋವನ ಮೇಲೆ ನಿಮಗಿರುವ ಪ್ರೀತಿಯು ಆತನ ನಾಮಕ್ಕೆ ನಿಂದೆ ತರುವ ಯಾವ ಗಂಭೀರ ಪಾಪವನ್ನೂ ಮಾಡದಂತೆ ನಿಮ್ಮನ್ನು ಪ್ರಚೋದಿಸುವುದು. ಆಗೂರನು ಪ್ರಾರ್ಥಿಸಿದ್ದು: “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. ಹಾಗಾಗದೆ ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.” (ಜ್ಞಾನೋಕ್ತಿ 30:​1, 8, 9) ದೇವರಿಗೆ ಅವಮಾನವನ್ನು ತರುವ ಮೂಲಕ ‘ಆತನ ಹೆಸರನ್ನು ಅಯೋಗ್ಯವಾಗಿ ಎತ್ತದಿರಲು’ ದೃಢನಿಶ್ಚಯವುಳ್ಳವರಾಗಿರಿ. ಆತನಿಗೆ ಘನಮಾನವನ್ನು ತರುವಂತಹ ಪ್ರಾಮಾಣಿಕ ಸಂಗತಿಗಳನ್ನು ಮಾಡುತ್ತಿರಲು ಸದಾ ಪ್ರಯತ್ನಿಸಿರಿ.​—⁠ಕೀರ್ತನೆ 86:12.

6 ಪಾಪಮಾಡುವಂಥ ಪ್ರಲೋಭನೆಯನ್ನು ಪ್ರತಿರೋಧಿಸಲು ಬೇಕಾದ ಸಹಾಯಕ್ಕಾಗಿ ನಿಮ್ಮ ಪ್ರೀತಿಯ ಸ್ವರ್ಗೀಯ ತಂದೆಗೆ ಕ್ರಮವಾಗಿ ಪ್ರಾರ್ಥಿಸಿರಿ. (ಮತ್ತಾಯ 6:13; ರೋಮಾಪುರ 12:12) ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಾಗದಂತೆ ದೇವರ ಸಲಹೆಗಳನ್ನು ಪಾಲಿಸುತ್ತ ಇರಿ. (1 ಪೇತ್ರ 3:⁠7) ನೀವು ಉದ್ದೇಶಪೂರ್ವಕವಾಗಿ ಪಾಪಕ್ಕೆ ಧುಮುಕುವಲ್ಲಿ ಪರಿಣಾಮವು ದುರಂತಕರ. ಏಕೆಂದರೆ ಪ್ರತಿಭಟನಕಾರರ ಪ್ರಾರ್ಥನೆಯು ತನಗೆ ತಲಪದಂತೆ ಯೆಹೋವನು ಸಾಂಕೇತಿಕವಾಗಿ ದಟ್ಟವಾದ ಮೋಡದಿಂದಲೋ ಎಂಬಂತೆ ತಡೆಯುತ್ತಾನೆ. (ಪ್ರಲಾಪ 3:​42-44) ಆದಕಾರಣ, ದೈನ್ಯ ಮನೋಭಾವವನ್ನು ಪ್ರದರ್ಶಿಸಿ ಮತ್ತು ಪ್ರಾರ್ಥನೆಯ ಮೂಲಕ ದೇವರ ಬಳಿ ಹೋಗುವುದನ್ನು ತಡೆಯುವ ಯಾವುದನ್ನೂ ನೀವು ಮಾಡದಿರುವಂತೆ ಪ್ರಾರ್ಥಿಸಿರಿ.​—⁠2 ಕೊರಿಂಥ 13:⁠7.

ದೇವಪುತ್ರನಿಗೆ ಪ್ರೀತಿ ತೋರಿಸಿರಿ

7 ಯೇಸು ಕ್ರಿಸ್ತನ ಆಜ್ಞೆಗಳಿಗೆ ವಿಧೇಯರಾಗುವ ಮೂಲಕ ಅವನಿಗೆ ಪ್ರೀತಿಯನ್ನು ತೋರಿಸಿರಿ. ಏಕೆಂದರೆ ಇದು ಪಾಪಮಾರ್ಗವನ್ನು ತ್ಯಜಿಸುವಂತೆ ನಿಮಗೆ ಸಹಾಯಮಾಡುವುದು. ಯೇಸು ಹೇಳಿದ್ದು: “ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.” (ಯೋಹಾನ 15:10) ಯೇಸುವಿನ ಮಾತುಗಳಿಗೆ ಅನುಗುಣವಾಗಿ ಜೀವಿಸುವುದು ನೀವು ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವಂತೆ ಹೇಗೆ ನೆರವು ನೀಡಬಲ್ಲದು?

8 ಯೇಸುವಿನ ಮಾತುಗಳಿಗೆ ಗಮನ ಕೊಡುವುದು ನೈತಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ನಿಮಗೆ ಸಹಾಯಮಾಡಬಲ್ಲದು. ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೇವರ ನಿಯಮವು “ವ್ಯಭಿಚಾರ ಮಾಡಬಾರದು” ಎಂದು ತಿಳಿಸಿತು. (ವಿಮೋಚನಕಾಂಡ 20:14) ಆದರೆ, ಆ ಆಜ್ಞೆಯ ಹಿಂದಿದ್ದ ಮೂಲತತ್ತ್ವವನ್ನು ಯೇಸು ಹೀಗೆ ಹೇಳುತ್ತ ತಿಳಿಯಪಡಿಸಿದನು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:​27, 28) ಪ್ರಥಮ ಶತಮಾನದ ಸಭೆಯಲ್ಲಿ ಕೆಲವರು “ಜಾರತ್ವದಿಂದ ತುಂಬಿದ . . . ಕಣ್ಣುಳ್ಳವರೂ ಚಪಲಚಿತ್ತರನ್ನು ಮರುಳುಗೊಳಿಸುವವರೂ” ಆಗಿದ್ದರೆಂದು ಅಪೊಸ್ತಲ ಪೇತ್ರನು ಹೇಳಿದನು. (2 ಪೇತ್ರ 2:14) ಆದರೆ ನೀವು ಇವರಂತಾಗದೆ ದೇವರನ್ನೂ ಕ್ರಿಸ್ತನನ್ನೂ ಪ್ರೀತಿಸಿ ವಿಧೇಯರಾಗುವಲ್ಲಿ ಹಾಗೂ ನಿಮ್ಮ ಮತ್ತು ಅವರ ಮಧ್ಯೆ ಇರುವ ಸಂಬಂಧವನ್ನು ಕಾಪಾಡಿಕೊಳ್ಳಲು ದೃಢನಿಶ್ಚಯದಿಂದ ಇರುವಲ್ಲಿ ಲೈಂಗಿಕ ಪಾಪಗಳಿಂದ ದೂರವಿರಬಲ್ಲಿರಿ.

ಯೆಹೋವನ ಆತ್ಮ ನಿಮ್ಮನ್ನು ನಡೆಸಲಿ

9 ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿರಿ. ಅದು ನಿಮ್ಮನ್ನು ನಡೆಸುವಂತೆ ಬಿಡಿರಿ. (ಲೂಕ 11:13; ಗಲಾತ್ಯ 5:​19-25) ನೀವು ಪಾಪಮಾಡುತ್ತ ಇರುವಲ್ಲಿ ದೇವರು ತನ್ನ ಆತ್ಮವನ್ನು ನಿಮ್ಮಿಂದ ವಾಪಸು ತಕ್ಕೊಂಡಾನು. ದಾವೀದನು ಬತ್ಷಬೆಯೊಂದಿಗೆ ಪಾಪಮಾಡಿದಾಗ ದೇವರನ್ನು ಬೇಡಿಕೊಂಡದ್ದು: “ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.” (ಕೀರ್ತನೆ 51:11) ಅರಸ ಸೌಲನಾದರೋ ಪಶ್ಚಾತ್ತಾಪಪಡದ ಪಾಪಿಯಾಗಿದ್ದುದರಿಂದ ದೇವರಾತ್ಮವನ್ನು ಕಳೆದುಕೊಂಡನು. ಸೌಲನು ಒಂದು ಸರ್ವಾಂಗಹೋಮವನ್ನು ಅರ್ಪಿಸುವ ಮೂಲಕ ಮತ್ತು ಅಮಾಲೇಕ್ಯರ ಅರಸನನ್ನು ಉಳಿಸಿ, ಅವರ ಕುರಿದನಗಳನ್ನು ಪೂರ್ತಿಯಾಗಿ ನಾಶಮಾಡದಿರುವ ಮೂಲಕ ಪಾಪಮಾಡಿದನು. ಆ ಬಳಿಕ ಯೆಹೋವನು ತನ್ನ ಪವಿತ್ರಾತ್ಮವನ್ನು ಸೌಲನಿಂದ ಹಿಂದೆಗೆದುಕೊಂಡನು.​—⁠1 ಸಮುವೇಲ 13:​1-14; 15:​1-35; 16:​14-23.

10 ಪಾಪಮಾಡುವ ಯೋಚನೆಯನ್ನೇ ತ್ಯಜಿಸಿಬಿಡಿರಿ. ಅಪೊಸ್ತಲ ಪೌಲನು ಬರೆದುದು: “ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ.” (ಇಬ್ರಿಯ 10:​26-31) ನೀವು ಬೇಕುಬೇಕೆಂದು ಪಾಪಮಾಡುವಲ್ಲಿ ಅದೆಷ್ಟು ದುರಂತಮಯ!

ಪರರಿಗೆ ನಿಜ ಪ್ರೀತಿಯನ್ನು ತೋರಿಸಿರಿ

11 ಜೊತೆಮಾನವರ ಮೇಲೆ ನಿಮಗಿರುವ ಪ್ರೀತಿಯು ಲೈಂಗಿಕ ದುರ್ನಡತೆಯಲ್ಲಿ ಒಳಗೂಡದಂತೆ ನಿಮ್ಮನ್ನು ತಡೆಯುವುದು. (ಮತ್ತಾಯ 22:39) ಇಂಥ ಪ್ರೀತಿಯು ನಿಮ್ಮ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿ, ಇನ್ನೊಬ್ಬರ ವಿವಾಹಸಂಗಾತಿಯ ವಾತ್ಸಲ್ಯವನ್ನು ಅಪಹರಿಸದಂತೆ ತಡೆಯುವುದು. ಹಾಗಿಲ್ಲದಿದ್ದಲ್ಲಿ ಅಂಥ ನಡತೆಯು ವ್ಯಭಿಚಾರಕ್ಕೆ ನಡೆಸಬಲ್ಲದು. (ಜ್ಞಾನೋಕ್ತಿ 4:23; ಯೆರೆಮೀಯ 4:14; 17:​9, 10) ಯಥಾರ್ಥವಂತನಾದ ಯೋಬನನ್ನು ಅನುಕರಿಸಿರಿ. ಅವನು ತನ್ನ ಪತ್ನಿಗಲ್ಲದೆ ಇನ್ನಾವ ಸ್ತ್ರೀಗೂ ತಪ್ಪಾದ ಗಮನವನ್ನು ಕೊಡಲಿಲ್ಲ.​—⁠ಯೋಬ 31:⁠1.

12 ವಿವಾಹ ಪಾವಿತ್ರ್ಯವನ್ನು ಗೌರವಿಸುವುದು ಗುರುತರವಾದ ಪಾಪವನ್ನು ಮಾಡದಂತೆ ನಿಮಗೆ ಸಹಾಯಮಾಡಬಲ್ಲದು. ಗೌರವಯುತವಾದ ವಿವಾಹ ಮತ್ತು ಲೈಂಗಿಕ ಸಂಬಂಧಗಳು ಜೀವದ ಪುನರುತ್ಪತ್ತಿಯ ಸಾಧನವಾಗಿರಬೇಕೆಂದು ದೇವರು ಉದ್ದೇಶಿಸಿದನು. (ಆದಿಕಾಂಡ 1:​26-28) ಜನನೇಂದ್ರಿಯಗಳು ಯಾವುದು ಪವಿತ್ರವೊ ಆ ಜೀವದ ಪುನರುತ್ಪತ್ತಿಗಾಗಿ ಇವೆಯೆಂಬುದನ್ನು ಜ್ಞಾಪಿಸಿಕೊಳ್ಳಿ. ಜಾರರು ಮತ್ತು ವ್ಯಭಿಚಾರಿಗಳು ದೇವರಿಗೆ ಅವಿಧೇಯರಾಗಿ ಲೈಂಗಿಕ ಕ್ರಿಯೆಯನ್ನು ಕೆಳದರ್ಜೆಗಿಳಿಸುತ್ತಾರೆ. ಅವರು ವಿವಾಹದ ಪಾವಿತ್ರ್ಯಕ್ಕೆ ಗೌರವವನ್ನು ತೋರಿಸದೆ ತಮ್ಮ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪಮಾಡುತ್ತಾರೆ. (1 ಕೊರಿಂಥ 6:18) ಆದರೆ ದೇವರ ಮತ್ತು ನೆರೆಯವರ ಮೇಲಣ ಪ್ರೀತಿ ಹಾಗೂ ದೇವರಿಗೆ ವಿಧೇಯತೆ ತೋರಿಸುವುದು ವ್ಯಕ್ತಿಯೊಬ್ಬನನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡುವಂತೆ ಮಾಡುವ ನಡತೆಯಲ್ಲಿ ತೊಡಗದಿರುವಂತೆ ತಡೆಯುವುದು.

13 ನಮ್ಮ ಪಾಪಕರ ಆಲೋಚನೆಗಳನ್ನು ತಡೆದುಹಿಡಿಯುವುದು ಅಗತ್ಯ. ಆಗ ನಾವು ನಮ್ಮ ಪ್ರಿಯರಿಗೆ ಹೃದ್ವೇದನೆಯನ್ನು ಕೊಡದಿರುವೆವು. ಜ್ಞಾನೋಕ್ತಿ 29:3 ಹೇಳುವುದು: “ವೇಶ್ಯಾಸಂಗಿಯು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.” ಪಶ್ಚಾತ್ತಾಪ ಪಡದಿರುವ ವ್ಯಭಿಚಾರಿಯು ದೇವರೊಂದಿಗೆ ತನಗಿರುವ ಸಂಬಂಧವನ್ನು ಮುರಿದು ಕುಟುಂಬ ಬಂಧಗಳನ್ನು ಧ್ವಂಸಮಾಡುತ್ತಾನೆ. ಅವನ ಪತ್ನಿಗೆ ವಿಚ್ಛೇದನೆಯ ಕ್ರಮ ಕೈಕೊಳ್ಳಲು ಅದು ಆಧಾರವಾಗುತ್ತದೆ. (ಮತ್ತಾಯ 19:⁠9) ತಪ್ಪು ಮಾಡಿರುವ ವ್ಯಕ್ತಿ ಗಂಡನಾಗಿರಲಿ ಹೆಂಡತಿಯಾಗಿರಲಿ ವಿವಾಹದ ಕುಸಿತವು ನಿರಪರಾಧಿ ಸಂಗಾತಿಗೆ, ಮಕ್ಕಳಿಗೆ ಮತ್ತು ಇತರರಿಗೆ ಮಹಾ ವೇದನೆಯನ್ನು ತಂದೊಡ್ಡುತ್ತದೆ. ಅನೈತಿಕ ನಡತೆಯು ಎಷ್ಟು ವಿನಾಶಕರವಾಗಿದೆ ಎಂಬ ತಿಳಿವಳಿಕೆಯು ಅಂಥ ನಡತೆಯಲ್ಲಿ ತೊಡಗುವ ಪ್ರಲೋಭನೆಯನ್ನು ಪ್ರತಿರೋಧಿಸುವಂತೆ ನಮ್ಮನ್ನು ಪ್ರೇರೇಪಿಸಬೇಕೆಂಬುದನ್ನು ನೀವು ಒಪ್ಪಿಕೊಳ್ಳುವಿರಿ ಅಲ್ಲವೆ?

14 ವ್ಯಭಿಚಾರ ಮಾಡುವಂಥ ವ್ಯಕ್ತಿ ಯಾವುದೇ ರೀತಿಯಲ್ಲಿ ನಷ್ಟಭರ್ತಿಮಾಡಲು ಸಾಧ್ಯವಿಲ್ಲ ಎಂಬ ನಿಜತ್ವವನ್ನು ಒಬ್ಬನು ಮನಸ್ಸಿನಲ್ಲಿಟ್ಟುಕೊಳ್ಳುವುದು ಈ ಮಹಾ ಸ್ವಾರ್ಥಕಾರ್ಯವನ್ನು ಮಾಡದಂತೆ ಅವನನ್ನು ಪ್ರೇರೇಪಿಸುವುದು. ಹಸಿವೆಯನ್ನು ನೀಗಿಸಲು ಕಳವು ಮಾಡುವವನಿಗೆ ಜನರು ಅನುಕಂಪ ತೋರಿಸಬಹುದಾದರೂ ಒಬ್ಬ ವ್ಯಭಿಚಾರಿಯನ್ನು ತುಚ್ಛವಾಗಿ ಕಾಣುವರು. ಏಕೆಂದರೆ ಅವನ ಉದ್ದೇಶವು ಕೆಟ್ಟದಾಗಿದೆ ಎಂದು ಜ್ಞಾನೋಕ್ತಿ 6:​30-35 ತೋರಿಸುತ್ತದೆ. ಅಂಥ ವ್ಯಕ್ತಿಯು “ತನ್ನನ್ನೇ ನಾಶಪಡಿಸಿಕೊಳ್ಳುವನು.” ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅವನನ್ನು ಕೊಲ್ಲಲಾಗುತ್ತಿತ್ತು. (ಯಾಜಕಕಾಂಡ 20:10) ವ್ಯಭಿಚಾರ ಮಾಡುವ ಒಬ್ಬ ವ್ಯಕ್ತಿ ಕೇವಲ ತನ್ನ ಕಾಮವನ್ನು ತೃಪ್ತಿಪಡಿಸಿಕೊಳ್ಳಲು ಇತರರಿಗೆ ನೋವನ್ನುಂಟುಮಾಡುತ್ತಾನೆ. ಪಶ್ಚಾತ್ತಾಪಪಡದ ವ್ಯಭಿಚಾರಿಯೊಬ್ಬನು ದೇವರ ಪ್ರೀತಿಯಲ್ಲಿ ನೆಲೆಗೊಳ್ಳುವುದಿಲ್ಲ. ಅವನನ್ನು ನಿರ್ಮಲವಾದ ಕ್ರೈಸ್ತ ಸಭೆಯೊಳಗಿಂದ ಬಹಿಷ್ಕರಿಸಲಾಗುತ್ತದೆ.

ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಿ

15 ದೇವರ ಪ್ರೀತಿಯಲ್ಲಿ ನೆಲೆಗೊಳ್ಳಬೇಕಾದರೆ ಮನಸ್ಸಾಕ್ಷಿ ಜಡವಾಗುವಂತೆ ನಾವು ಬಿಡಬಾರದು. ಹಾಗಾಗಿ ನಾವು ಈ ಲೋಕದ ತುಚ್ಛ ನೈತಿಕ ಮಟ್ಟಗಳನ್ನು ಅಂಗೀಕರಿಸಲೇಬಾರದೆಂಬುದು ವ್ಯಕ್ತ. ಮಾತ್ರವಲ್ಲದೆ ಒಡನಾಡಿಗಳ ಆಯ್ಕೆ, ವಾಚನ ಸಾಮಗ್ರಿಗಳು ಮತ್ತು ಮನರಂಜನೆಯಂಥ ವಿಷಯಗಳಲ್ಲಿ ನಾವು ಜಾಗರೂಕತೆ ವಹಿಸಬೇಕು. ಪೌಲನು ಎಚ್ಚರಿಸಿದ್ದು: ‘ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರು. ಸುಳ್ಳುಬೋಧಕರು ಬಂದು ಸ್ವಂತ ಮನಸ್ಸಿನಲ್ಲಿ ಅಪರಾಧಿಗಳೆಂಬ ಬರೆಯುಳ್ಳವರಾದರೂ ತಾವು ನೀತಿವಂತರೆಂದು ತೋರ್ಪಡಿಸಿಕೊಳ್ಳುವರು.’ (1 ತಿಮೊಥೆಯ 4:​1, 2) “ಬರೆಯುಳ್ಳ” ಮನಸ್ಸಾಕ್ಷಿಯು ಜಡ್ಡುಗಟ್ಟಿದ ಮಾಂಸವನ್ನು ಆವರಿಸಿರುವ ಮರಗಟ್ಟಿದ ಚರ್ಮದಂತಿದ್ದು, ಅದಕ್ಕೆ ಯಾವ ಸಂವೇದನೆಯೂ ಇರುವುದಿಲ್ಲ. ಅಂತಹ ಮನಸ್ಸಾಕ್ಷಿ ನಾವು ನಂಬಿಕೆಯಿಂದ ಬಿದ್ದುಹೋಗುವಂತೆ ಮಾಡಬಹುದಾದ ಸನ್ನಿವೇಶಗಳಿಂದ ಮತ್ತು ಧರ್ಮಭ್ರಷ್ಟರಿಂದ ದೂರವಿರುವಂತೆ ನಮ್ಮನ್ನು ಎಚ್ಚರಿಸದು.

16 ನಮ್ಮ ರಕ್ಷಣೆಯು ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರುವುದರ ಮೇಲೆ ಅವಲಂಬಿಸಿದೆ. (1 ಪೇತ್ರ 3:21) ಯೇಸು ಸುರಿಸಿದ ರಕ್ತದಲ್ಲಿ ನಮಗಿರುವ ನಂಬಿಕೆಯ ಮೂಲಕ ನಮ್ಮ ಮನಸ್ಸಾಕ್ಷಿಯು ನಿರ್ಜೀವಕರ್ಮಗಳಿಂದ ಶುದ್ಧಿಕರಿಸಲ್ಪಡುತ್ತದೆ. ಇದು “ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ” ನಮ್ಮನ್ನು ನಡೆಸುತ್ತದೆ. (ಇಬ್ರಿಯ 9:​13, 14) ನಾವು ಬೇಕುಬೇಕೆಂದು ಪಾಪಮಾಡುವಲ್ಲಿ ನಮ್ಮ ಮನಸ್ಸಾಕ್ಷಿ ಮಲಿನಗೊಳ್ಳುವುದು. ಇದರಿಂದ, ಶುದ್ಧ ಜನರಾಗಿ ದೇವರ ಸೇವೆ ಮಾಡುವ ಯೋಗ್ಯತೆ ನಮಗಿರದು. (ತೀತ 1:15) ಆದರೆ ಯೆಹೋವನ ಸಹಾಯದಿಂದ ನಾವು ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರಸಾಧ್ಯವಿದೆ.

ದುರ್ನಡತೆಯನ್ನು ತಪ್ಪಿಸಲಿಕ್ಕಾಗಿರುವ ಇತರ ವಿಧಗಳು

17 ಪುರಾತನ ಕಾಲದ ಇಸ್ರಾಯೇಲಿನ ಕಾಲೇಬನಂತೆ, ‘ಯೆಹೋವನನ್ನು [ಪೂರ್ಣವಾಗಿ, NIBV] ಅನುಸರಿಸಿರಿ.’ (ಧರ್ಮೋಪದೇಶಕಾಂಡ 1:​34-36) ನಿಮ್ಮಿಂದ ದೇವರು ಕೇಳಿಕೊಳ್ಳುವುದನ್ನು ಮಾಡಿರಿ. “ದೆವ್ವಗಳ ಪಂಕ್ತಿ”ಯಲ್ಲಿ ಪಾಲುತೆಗೆದುಕೊಳ್ಳುವುದರ ಕುರಿತು ಎಂದಿಗೂ ಯೋಚಿಸದಿರಿ. (1 ಕೊರಿಂಥ 10:21) ಧರ್ಮಭ್ರಷ್ಟತೆಯನ್ನು ತಳ್ಳಿಹಾಕಿರಿ. ಯೆಹೋವನ ಮೇಜಿನಲ್ಲಿ ಮಾತ್ರವೇ ಲಭ್ಯವಾಗುವ ಆಧ್ಯಾತ್ಮಿಕ ಆಹಾರದಲ್ಲಿ ಕೃತಜ್ಞತೆಯಿಂದ ಭಾಗವಹಿಸಿರಿ. ಆಗ ಸುಳ್ಳು ಬೋಧಕರಿಂದಾಗಲಿ ದುಷ್ಟಾತ್ಮಸೈನ್ಯಗಳಿಂದಾಗಲಿ ನೀವು ದಾರಿ ತಪ್ಪಿಸಲ್ಪಡಲಾರಿರಿ. (ಎಫೆಸ 6:12; ಯೂದ 3, 4) ಬೈಬಲ್‌ ಅಧ್ಯಯನ, ಕೂಟಗಳಲ್ಲಿ ಉಪಸ್ಥಿತಿ ಮತ್ತು ಕ್ಷೇತ್ರ ಶುಶ್ರೂಷೆಯಂತಹ ಆಧ್ಯಾತ್ಮಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ. ನೀವು ಯೆಹೋವನನ್ನು ಪೂರ್ಣವಾಗಿ ಅನುಸರಿಸುವಲ್ಲಿ ಮತ್ತು ಕರ್ತನ ಕೆಲಸವನ್ನು ಅತ್ಯಾಸಕ್ತಿಯಿಂದ ಮಾಡುವಲ್ಲಿ ನಿಶ್ಚಯವಾಗಿಯೂ ಸಂತೋಷದಿಂದಿರುವಿರಿ.​—⁠1 ಕೊರಿಂಥ 15:58.

18 ‘ದೇವರಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ’ ಮಾಡಲು ದೃಢನಿಶ್ಚಯದಿಂದಿರಿ. (ಇಬ್ರಿಯ 12:28) ಯೆಹೋವನ ಮೇಲೆ ನಿಮಗಿರುವ ಪೂಜ್ಯಭಾವದ ಭಯವು ತಪ್ಪಾದ ಮಾರ್ಗವನ್ನು ತಿರಸ್ಕರಿಸುವಂತೆ ನಿಮ್ಮನ್ನು ಪ್ರಚೋದಿಸುವುದು. ಅದು, ಪೇತ್ರನು ತನ್ನ ಜೊತೆ ಅಭಿಷಿಕ್ತರಿಗೆ ಕೊಟ್ಟ ಸಲಹೆಗನುಸಾರ ನೀವು ವರ್ತಿಸುವಂತೆ ಸಹಾಯಮಾಡುವುದು: “ಪ್ರತಿಯೊಬ್ಬನ ಕೆಲಸವನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರಲಾಗಿ ಈ ಲೋಕದಲ್ಲಿ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯುಳ್ಳವರಾಗಿ ಕಳೆಯಿರಿ.”​—⁠1 ಪೇತ್ರ 1:17.

19 ನೀವು ದೇವರ ವಾಕ್ಯದಿಂದ ಕಲಿಯುತ್ತಿರುವುದನ್ನು ಸತತವಾಗಿ ಕಾರ್ಯರೂಪಕ್ಕೆ ಹಾಕಿರಿ. ಹೀಗೆ ಮಾಡುವುದರಿಂದ ನೀವು “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ಅರಿತಿರುವವರಲ್ಲಿ ಒಬ್ಬರಾಗಿರುವಿರಿ. ಇದು ನೀವು ಗುರುತರವಾದ ಪಾಪವನ್ನು ಮಾಡದಿರುವಂತೆ ಸಹಾಯಮಾಡುವುದು. (ಇಬ್ರಿಯ 5:14) ನಡೆನುಡಿಗಳಲ್ಲಿ ಬೇಕಾಬಿಟ್ಟಿಯಿಂದಿರುವ ಬದಲಿಗೆ ವಿವೇಕಿಗಳಾಗಿರಲು ಎಚ್ಚರಿಕೆಯಿಂದಿರಿ. ಈ ದುಷ್ಟ ದಿನಗಳಲ್ಲಿ ಸಮಯವನ್ನು “ಬೆಲೆಯುಳ್ಳದೆಂದು ಉಪಯೋಗಿಸಿಕೊಳ್ಳಿರಿ.” ‘[ಯೆಹೋವನ] ಚಿತ್ತವೇನೆಂಬುದನ್ನು ವಿಚಾರಿಸಿ ತಿಳುಕೊಳ್ಳಿರಿ’ ಮತ್ತು ಅದನ್ನು ಮಾಡುತ್ತ ಇರಿ.​—⁠ಎಫೆಸ 5:​15-17; 2 ಪೇತ್ರ 3:17.

20 ಪರರಿಗೆ ಸೇರಿದ್ದನ್ನು ಬಯಸುವ ದುರಾಶೆಗೆ ಅವಕಾಶ ಕೊಡಬೇಡಿರಿ. ದಶಾಜ್ಞೆಗಳಲ್ಲಿ ಒಂದು ಹೇಳುವುದು: “ಮತ್ತೊಬ್ಬನ ಮನೆಯನ್ನು ಆಶಿಸಬಾರದು. ಮತ್ತೊಬ್ಬನ ಹೆಂಡತಿ ಗಂಡಾಳು ಹೆಣ್ಣಾಳು ಎತ್ತು ಕತ್ತೆ ಮುಂತಾದ ಯಾವುದನ್ನೂ ಆಶಿಸಬಾರದು.” (ವಿಮೋಚನಕಾಂಡ 20:17) ಈ ನಿಯಮವು ಒಬ್ಬನ ಮನೆ, ಹೆಂಡತಿ, ಆಳುಗಳು, ಪ್ರಾಣಿಗಳು ಇತ್ಯಾದಿಗಳನ್ನು ಕಾಪಾಡಿತು. ಆದರೆ ಹೆಚ್ಚು ಪ್ರಾಮುಖ್ಯ ವಿಷಯವೇನೆಂದರೆ, ಯೇಸು ಹೇಳಿದಂತೆ ದುರಾಶೆಯು ಒಬ್ಬ ಮನುಷ್ಯನನ್ನೇ ಕೆಡಿಸುತ್ತದೆ.​—⁠ಮಾರ್ಕ 7:​20-23.

21 ಆಶೆಯು ಪಾಪಕ್ಕೆ ನಡೆಸದಂತೆ ಮುಂಜಾಗ್ರತೆ ವಹಿಸಿರಿ. ಶಿಷ್ಯ ಯಾಕೋಬನು ಬರೆದುದು: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.” (ಯಾಕೋಬ 1:​14, 15) ದೃಷ್ಟಾಂತಕ್ಕೆ, ಒಬ್ಬನಿಗೆ ಈ ಹಿಂದೆ ಕುಡಿಯುವ ಸಮಸ್ಯೆವಿದ್ದಲ್ಲಿ ತನ್ನ ಮನೆಯಲ್ಲಿ ಮದ್ಯಪಾನೀಯಗಳು ಲಭ್ಯವಿರದಂತೆ ಅವನು ನೋಡಿಕೊಳ್ಳಬಹುದು. ವಿರುದ್ಧಲಿಂಗದ ವ್ಯಕ್ತಿಯ ಕಡೆಗಿನ ಪ್ರಲೋಭನೆಯನ್ನು ನಿವಾರಿಸಲು ಕ್ರೈಸ್ತನೊಬ್ಬನು ತಾನು ಕೆಲಸ ಮಾಡುತ್ತಿರುವ ಕೋಣೆಯನ್ನು ಇಲ್ಲವೆ ಉದ್ಯೋಗವನ್ನು ಬದಲಾಯಿಸುವ ಅಗತ್ಯ ಬರಬಹುದು.​—⁠ಜ್ಞಾನೋಕ್ತಿ 6:​23-28.

22 ಪಾಪದೆಡೆಗೆ ಮೊದಲ ಹೆಜ್ಜೆಯನ್ನೂ ಇಡಬೇಡಿ. ಪ್ರಣಯಚೇಷ್ಟೆ ಮತ್ತು ಅನೈತಿಕ ವಿಚಾರಗಳಿಗೆ ಎಡೆಗೊಡುವುದು ಹಾದರ ಅಥವಾ ವ್ಯಭಿಚಾರಕ್ಕೆ ನಡೆಸಬಲ್ಲದು. ಚಿಕ್ಕಪುಟ್ಟ ಸುಳ್ಳುಗಳನ್ನಾಡುವುದು ಒಬ್ಬನಿಗೆ ದೊಡ್ಡ ಸುಳ್ಳುಗಳನ್ನಾಡಲೂ ಧೈರ್ಯವನ್ನು ಕೊಡಬಲ್ಲದು. ಇದು ಅವನನ್ನು ರೂಢಿಗತವಾಗಿ ಸುಳ್ಳು ಹೇಳುವಂತೆ ಸಹ ಮಾಡಬಹುದು. ಸಣ್ಣಪುಟ್ಟ ಕಳ್ಳತನವು ಒಬ್ಬನ ಮನಸ್ಸಾಕ್ಷಿಯನ್ನು ಕ್ರಮೇಣ ಜಡ್ಡುಹಿಡಿಸಿ, ಅವನನ್ನು ದೊಡ್ಡ ಪ್ರಮಾಣದಲ್ಲಿ ಕದಿಯುವಂತೆ ಮಾಡಬಹುದು. ಧರ್ಮಭ್ರಷ್ಟ ಆಲೋಚನೆಗಳ ತುಸು ಸಹನೆಯು ಕೂಡ ಒಬ್ಬನನ್ನು ಸಂಪೂರ್ಣ ಧರ್ಮಭ್ರಷ್ಟತೆಗೆ ಕೊಂಡೊಯ್ಯಬಲ್ಲದು.​—⁠ಜ್ಞಾನೋಕ್ತಿ 11:9; ಪ್ರಕಟನೆ 21:8.

ನೀವು ಪಾಪಮಾಡಿರುವಲ್ಲಿ ಆಗೇನು?

23 ಮಾನವರೆಲ್ಲರೂ ಅಪರಿಪೂರ್ಣರಾಗಿದ್ದಾರೆ. (ಪ್ರಸಂಗಿ 7:20) ಆದರೆ ನೀವು ಒಂದುವೇಳೆ ಗಂಭೀರ ಪಾಪವನ್ನು ಮಾಡಿರುವಲ್ಲಿ ಆಗೇನು? ಯೆಹೋವನ ಆಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ರಾಜ ಸೊಲೊಮೋನನು ಮಾಡಿದ ಪ್ರಾರ್ಥನೆಯಿಂದ ನೀವು ಸಾಂತ್ವನ ಪಡೆದುಕೊಳ್ಳಸಾಧ್ಯವಿದೆ. ಅವನು ದೇವರಿಗೆ ಪ್ರಾರ್ಥಿಸಿದ್ದು: “ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು. ನೀನೊಬ್ಬನೇ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು.”​—⁠2 ಪೂರ್ವಕಾಲವೃತ್ತಾಂತ 6:​29, 30.

24 ಹೌದು, ದೇವರು ಹೃದಯವನ್ನು ಚೆನ್ನಾಗಿ ಬಲ್ಲನು. ಆತನು ಕ್ಷಮಿಸುವಾತನೂ ಆಗಿದ್ದಾನೆ. ಜ್ಞಾನೋಕ್ತಿ 28:13 ಹೇಳುವುದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” ಆದುದರಿಂದ, ಒಬ್ಬನು ಪಶ್ಚಾತ್ತಾಪಪಟ್ಟು ಪಾಪನಿವೇದನೆ ಮಾಡಿ, ಅದನ್ನು ಬಿಟ್ಟುಬಿಡುವಲ್ಲಿ ದೇವರ ಕರುಣೆಯನ್ನು ಪಡೆದುಕೊಳ್ಳಬಲ್ಲನು. ಆದರೆ ನೀವು ಆಧ್ಯಾತ್ಮಿಕವಾಗಿ ದುರ್ಬಲವಾಗಿರುವಲ್ಲಿ, ದೇವರ ಪ್ರೀತಿಯಲ್ಲಿ ನೆಲೆಗೊಳ್ಳಲು ಇನ್ನಾವುದು ನಿಮಗೆ ಸಹಾಯ ನೀಡಬಲ್ಲದು? (w06 11/15)

ನೀವು ಹೇಗೆ ಉತ್ತರಿಸುವಿರಿ?

• ನಾವು ದೇವರ ಪ್ರೀತಿಯಲ್ಲಿ ಹೇಗೆ ನೆಲೆಗೊಳ್ಳಸಾಧ್ಯವಿದೆ?

• ದೇವರ ಮತ್ತು ಕ್ರಿಸ್ತನ ಮೇಲಿನ ಪ್ರೀತಿಯು ನಾವು ಪಾಪಮಾರ್ಗವನ್ನು ತ್ಯಜಿಸಲು ಹೇಗೆ ಸಹಾಯ ನೀಡುತ್ತದೆ?

• ಪರರ ಮೇಲಿರುವ ನಿಜ ಪ್ರೀತಿ ಲೈಂಗಿಕ ದುರ್ನಡತೆಯಲ್ಲಿ ತೊಡಗದಂತೆ ನಮ್ಮನ್ನು ಏಕೆ ತಡೆಯುತ್ತದೆ?

• ದುರ್ನಡತೆಯನ್ನು ತಪ್ಪಿಸುವ ಕೆಲವು ವಿಧಗಳಾವುವು?

[ಅಧ್ಯಯನ ಪ್ರಶ್ನೆಗಳು]

1, 2. ದೇವರ ಪ್ರೀತಿಯಲ್ಲಿ ನೀವು ಹೇಗೆ ನೆಲೆಗೊಳ್ಳಬಲ್ಲಿರಿ?

3. ಕೆಲವರು ಏಕೆ ಈಗ ಯೆಹೋವನ ಸಾಕ್ಷಿಗಳಾಗಿರುವುದಿಲ್ಲ?

4. ದೇವರಿಗೆ ವಿಧೇಯತೆ ತೋರಿಸುವುದು ಅದೆಷ್ಟು ಪ್ರಾಮುಖ್ಯ?

5. ಯೆಹೋವನ ಮೇಲಿನ ಪ್ರೀತಿಯು ಯಾವ ವಿಧದಲ್ಲಿ ವರ್ತಿಸುವಂತೆ ನಿಮ್ಮನ್ನು ಪ್ರಚೋದಿಸುವುದು?

6. ನೀವು ಬೇಕುಬೇಕೆಂದು ಪಾಪಕ್ಕೆ ಧುಮುಕುವಲ್ಲಿ ಏನು ಸಂಭವಿಸಬಲ್ಲದು?

7, 8. ಯೇಸುವಿನ ಸಲಹೆಯನ್ನು ಅನುಸರಿಸುವುದು ಒಬ್ಬನು ಪಾಪಮಾರ್ಗವನ್ನು ಧಿಕ್ಕರಿಸುವಂತೆ ಹೇಗೆ ಸಹಾಯ ನೀಡಬಲ್ಲದು?

9. ಒಬ್ಬನು ಪಾಪವನ್ನು ಮಾಡುತ್ತ ಇರುವಲ್ಲಿ ಅವನ ಮೇಲಿರುವ ಪವಿತ್ರಾತ್ಮಕ್ಕೆ ಏನಾಗಬಲ್ಲದು?

10. ನೀವೇಕೆ ಪಾಪಮಾಡುವ ಯೋಚನೆಯನ್ನೇ ತ್ಯಜಿಸಬೇಕು?

11, 12. ಪ್ರೀತಿ ಮತ್ತು ಗೌರವವು ಯಾವ ವಿಧಗಳಲ್ಲಿ ಒಬ್ಬನು ಲೈಂಗಿಕ ದುರ್ನಡತೆಯಲ್ಲಿ ತೊಡಗದಂತೆ ತಡೆಯುವುದು?

13. ಅನೈತಿಕ ನಡತೆಯಲ್ಲಿ ಒಳಗೂಡುವ ವ್ಯಕ್ತಿ ಯಾವ ವಿಧದಲ್ಲಿ “ಆಸ್ತಿಯನ್ನು ಹಾಳುಮಾಡಿಕೊಳ್ಳುವನು”?

14. ತಪ್ಪಿನ ಕುರಿತಾದ ಯಾವ ಪಾಠವನ್ನು ಜ್ಞಾನೋಕ್ತಿ 6:​30-35ರಿಂದ ಕಲಿಯಸಾಧ್ಯವಿದೆ?

15. “ಬರೆಯುಳ್ಳ” ಮನಸ್ಸಾಕ್ಷಿಯ ಪರಿಸ್ಥಿತಿಯೇನು?

16. ಶುದ್ಧ ಮನಸ್ಸಾಕ್ಷಿಯಿರುವುದು ಏಕೆ ತುಂಬ ಪ್ರಾಮುಖ್ಯ?

17. ‘ಯೆಹೋವನನ್ನು ಪೂರ್ಣವಾಗಿ ಅನುಸರಿಸುವುದರಿಂದ’ ಯಾವ ಪ್ರಯೋಜನವಿದೆ?

18. ಯೆಹೋವನ ಭಯವು ಏನನ್ನು ಮಾಡುವಂತೆ ನಿಮ್ಮನ್ನು ಪ್ರಚೋದಿಸುವುದು?

19. ನೀವು ದೇವರ ವಾಕ್ಯದಿಂದ ಕಲಿಯುತ್ತಿರುವ ವಿಷಯಗಳನ್ನು ಏಕೆ ಸತತವಾಗಿ ಕಾರ್ಯರೂಪದಲ್ಲಿ ಹಾಕಬೇಕು?

20. ನಾವೇಕೆ ದುರಾಶೆಯನ್ನು ವರ್ಜಿಸಬೇಕು?

21, 22. ಪಾಪಮಾಡದೇ ಇರಲು ಒಬ್ಬ ಕ್ರೈಸ್ತನು ಯಾವ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು?

23, 24. ನಾವು 2 ಪೂರ್ವಕಾಲವೃತ್ತಾಂತ 6:​29, 30 ಮತ್ತು ಜ್ಞಾನೋಕ್ತಿ 28:13ರಿಂದ ಯಾವ ಸಾಂತ್ವನವನ್ನು ಪಡೆಯಬಲ್ಲೆವು?

[ಪುಟ 7ರಲ್ಲಿರುವ ಚಿತ್ರ]

ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳುವ ವಿಧವನ್ನು ಯೂದನು ತೋರಿಸುತ್ತಾನೆ

[ಪುಟ 9ರಲ್ಲಿರುವ ಚಿತ್ರ]

ವಿವಾಹ ಕುಸಿತವು ನಿರಪರಾಧಿ ಸಂಗಾತಿಗೆ, ಮಕ್ಕಳಿಗೆ ಮಹಾ ವೇದನೆಯನ್ನು ತರಬಲ್ಲದು

[ಪುಟ 10ರಲ್ಲಿರುವ ಚಿತ್ರ]

ನೀವು ಕಾಲೇಬನಂತೆ ‘ಯೆಹೋವನನ್ನು ಪೂರ್ಣವಾಗಿ ಅನುಸರಿಸಲು’ ದೃಢನಿಶ್ಚಯವನ್ನು ಮಾಡಿದ್ದೀರೊ?

[ಪುಟ 11ರಲ್ಲಿರುವ ಚಿತ್ರ]

ಪ್ರಲೋಭನೆಯನ್ನು ಪ್ರತಿರೋಧಿಸಲು ಬೇಕಾದ ಸಹಾಯಕ್ಕಾಗಿ ಕ್ರಮವಾಗಿ ಪ್ರಾರ್ಥಿಸಿರಿ