ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮನ್ನು ಪ್ರೀತಿಸುವ ದೇವರನ್ನು ಪ್ರೀತಿಸಿರಿ

ನಿಮ್ಮನ್ನು ಪ್ರೀತಿಸುವ ದೇವರನ್ನು ಪ್ರೀತಿಸಿರಿ

ನಿಮ್ಮನ್ನು ಪ್ರೀತಿಸುವ ದೇವರನ್ನು ಪ್ರೀತಿಸಿರಿ

“ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು.”​—⁠ಮತ್ತಾಯ 22:⁠37.

ಯೇಸುವಿನ ದಿನಗಳಲ್ಲಿ ಫರಿಸಾಯರ ನಡುವೆ ಒಂದು ಪ್ರಶ್ನೆಯ ಬಗ್ಗೆ ತೀವ್ರ ವಿವಾದವು ನಡೆಯುತ್ತಿತ್ತೆಂದು ವ್ಯಕ್ತವಾಗುತ್ತದೆ. ಅದೇನೆಂದರೆ, ಮೋಶೆಯ ಧರ್ಮಶಾಸ್ತ್ರದಲ್ಲಿದ್ದ 600ಕ್ಕಿಂತಲೂ ಹೆಚ್ಚು ನಿಯಮಗಳಲ್ಲಿ ಯಾವುದು ಅತಿ ಪ್ರಾಮುಖ್ಯವಾದದ್ದು? ಅದು, ಯಜ್ಞಕ್ಕೆ ಸಂಬಂಧಪಟ್ಟ ಯಾವುದಾದರೊಂದು ನಿಯಮವೊ ಅಥವಾ ಸುನ್ನತಿಯ ಕುರಿತಾದ ನಿಯಮವೊ? ಯಾಕೆಂದರೆ, ಯಜ್ಞಗಳನ್ನು ಪಾಪಗಳ ಕ್ಷಮೆಗಾಗಿ ಹಾಗೂ ದೇವರಿಗೆ ಉಪಕಾರಸಲ್ಲಿಸಲಿಕ್ಕಾಗಿ ಅರ್ಪಿಸಲಾಗುತ್ತಿತ್ತು ಮತ್ತು ಸುನ್ನತಿಯು ಯೆಹೋವನು ಅಬ್ರಹಾಮನೊಂದಿಗೆ ಮಾಡಿದ್ದ ಒಡಂಬಡಿಕೆಯ ಸಂಕೇತವಾಗಿತ್ತು. ಹೀಗಿರುವಾಗ ಎಲ್ಲ ಆಜ್ಞೆಗಳಲ್ಲಿ ಅತಿ ಪ್ರಾಮುಖ್ಯವಾದದ್ದು ಯಾವುದು?​—⁠ಆದಿಕಾಂಡ 17:​9-13.

2 ಇನ್ನೊಂದು ಕಡೆಯಲ್ಲಿ, ಯಾವುದೇ ಒಂದು ನಿಯಮವನ್ನು ಬೇರಾವುದೇ ನಿಯಮಕ್ಕಿಂತ ಮೇಲಕ್ಕೆತ್ತುವುದು ತಪ್ಪೆಂದು ಸಂಪ್ರದಾಯವಾದಿಗಳು ತರ್ಕಿಸಿದ್ದಿರಬಹುದು. ಇಂಥವರ ಅಭಿಪ್ರಾಯಕ್ಕನುಸಾರ, ಕೆಲವೊಂದು ನಿಯಮಗಳು ಕಡಿಮೆ ಮಹತ್ವದ್ದಾಗಿ ತೋರುವುದಾದರೂ, ದೇವರು ಕೊಟ್ಟಿರುವ ಪ್ರತಿಯೊಂದು ನಿಯಮವೂ ಪ್ರಾಮುಖ್ಯವಾಗಿತ್ತು. ಆದುದರಿಂದ ಫರಿಸಾಯರು, ಈ ವಿವಾದಾತ್ಮಕ ಪ್ರಶ್ನೆಯನ್ನು ಯೇಸುವಿಗೆ ಕೇಳಲು ನಿರ್ಧರಿಸಿದರು. ಅವನು ಏನೇ ಹೇಳಿದರೂ ಅದು ಅವನಿಗಿದ್ದ ಒಳ್ಳೇ ಹೆಸರಿಗೆ ಮಸಿಬಳಿಯಬಹುದೆಂದು ಅವರ ಎಣಿಕೆಯಾಗಿತ್ತು. ಹೀಗಿರುವುದರಿಂದ ಅವರಲ್ಲಿ ಒಬ್ಬನು ಯೇಸುವಿನ ಬಳಿಬಂದು, “ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು”? ಎಂದು ಕೇಳಿದನು.​—⁠ಮತ್ತಾಯ 22:34-36.

3 ಯೇಸು ಆ ಸಮಯದಲ್ಲಿ ಕೊಟ್ಟ ಉತ್ತರವು ಇಂದು ನಮಗೆ ಬಹಳಷ್ಟು ಮಹತ್ವದ್ದಾಗಿದೆ. ಏಕೆಂದರೆ ಆ ಉತ್ತರದಲ್ಲಿ ಅವನು ಗತಕಾಲದಲ್ಲೂ, ಭವಿಷ್ಯದಲ್ಲೂ ಯಾವುದು ಸತ್ಯಾರಾಧನೆಯ ತಿರುಳಾಗಿರುವುದೊ ಅದನ್ನು ಚುಟುಕಾಗಿ ಹೇಳಿದನು. ಧರ್ಮೋಪದೇಶಕಾಂಡ 6:5ರಿಂದ ಉಲ್ಲೇಖಿಸುತ್ತಾ ಯೇಸು ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು.” ಆ ಫರಿಸಾಯನು ಕೇವಲ ಒಂದು ಆಜ್ಞೆಯನ್ನು ಕೇಳಿದ್ದರೂ ಯೇಸು ಇನ್ನೊಂದು ಆಜ್ಞೆಯನ್ನು ಸಹ ತಿಳಿಸಿದನು. ಯಾಜಕಕಾಂಡ 19:18ರಿಂದ ಉಲ್ಲೇಖಿಸುತ್ತಾ ಅವನು ಹೇಳಿದ್ದು: “ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ​—⁠ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.” ಈ ಎರಡು ಆಜ್ಞೆಗಳು ಶುದ್ಧಾರಾಧನೆಯ ಸಾರವಾಗಿತ್ತೆಂದು ಯೇಸು ಸೂಚಿಸಿದನು. ಬೇರೆಲ್ಲ ನಿಯಮಗಳನ್ನು ಅವುಗಳ ಪ್ರಾಮುಖ್ಯತೆಗನುಸಾರ ಪಟ್ಟಿಮಾಡುವಂತೆ ಅವರು ಕೇಳಿಕೊಳ್ಳುವ ಮುಂಚೆಯೇ ಯೇಸು ಈ ವಿವಾದಾತ್ಮಕ ಚರ್ಚೆಯನ್ನು ಸಮಾಪ್ತಿಗೊಳಿಸುತ್ತಾ ಹೇಳಿದ್ದು: “ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.” (ಮತ್ತಾಯ 22:37-40) ಈ ಲೇಖನದಲ್ಲಿ ನಾವು ಎರಡು ಆಜ್ಞೆಗಳಲ್ಲಿ ಅತಿ ಪ್ರಾಮುಖ್ಯವಾದದ್ದನ್ನು ಚರ್ಚಿಸುವೆವು. ನಾವು ದೇವರನ್ನು ಏಕೆ ಪ್ರೀತಿಸಬೇಕು? ನಾವು ಆತನನ್ನು ಪ್ರೀತಿಸುತ್ತೇವೆಂದು ಹೇಗೆ ತೋರಿಸಬಲ್ಲೆವು? ಮತ್ತು ಆ ಪ್ರೀತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಈ ಪ್ರಶ್ನೆಗಳಿಗೆ ಉತ್ತರವೇನೆಂಬುದನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ, ಏಕೆಂದರೆ ಯೆಹೋವನನ್ನು ಮೆಚ್ಚಿಸಲು ನಾವು ನಮ್ಮ ಪೂರ್ಣ ಹೃದಮನಪ್ರಾಣಗಳಿಂದ ಆತನನ್ನು ಪ್ರೀತಿಸಬೇಕು.

ಪ್ರೀತಿಯ ಮಹತ್ವ

4 ಪ್ರಶ್ನೆಕೇಳಿದ ಆ ಫರಿಸಾಯನಿಗೆ ಯೇಸು ಕೊಟ್ಟ ಉತ್ತರವು ಆಘಾತವನ್ನಾಗಲಿ, ಅಚ್ಚರಿಯನ್ನಾಗಲಿ ಹುಟ್ಟಿಸಲಿಲ್ಲವೆಂದು ತೋರುತ್ತದೆ. ದೇವರ ಮೇಲಣ ಪ್ರೀತಿ ಸತ್ಯಾರಾಧನೆಯ ಒಂದು ಅತ್ಯಾವಶ್ಯಕ ಅಂಶವಾಗಿರುವುದಾದರೂ ಅನೇಕರು ಅದನ್ನು ತೋರಿಸಲು ತಪ್ಪಿಹೋಗಿದ್ದರೆಂದು ಅವನಿಗೆ ತಿಳಿದಿತ್ತು. ಯೆಹೂದಿ ಸಭಾಮಂದಿರಗಳಲ್ಲಿ, ಶೆಮಾ ಇಲ್ಲವೆ ನಂಬಿಕೆಯ ಅರಿಕೆ ಎಂಬ ಹೀಬ್ರು ಪ್ರಾರ್ಥನೆಯನ್ನು ಗಟ್ಟಿಯಾಗಿ ಪಠಿಸುವ ಪದ್ಧತಿಯಿತ್ತು. ಮತ್ತು ಈ ಪ್ರಾರ್ಥನೆಯಲ್ಲಿ, ಧರ್ಮೋಪದೇಶಕಾಂಡ 6:​4-9ರಲ್ಲಿನ ವಚನಭಾಗವು ಸೇರಿರುತ್ತಿತ್ತು. ಯೇಸು ಇಲ್ಲಿಂದಲೇ ಉಲ್ಲೇಖಿಸಿ ಉತ್ತರವನ್ನು ಕೊಟ್ಟಿದ್ದನು. ಮತ್ತಾಯನ ವೃತ್ತಾಂತಕ್ಕೆ ಸದೃಶವಾದ ಮಾರ್ಕನ ವೃತ್ತಾಂತಕ್ಕನುಸಾರ, ಆ ಫರಿಸಾಯನು ಬಳಿಕ ಯೇಸುವಿಗೆ ಹೀಗಂದನು: “ಬೋಧಕನೇ, ಚೆನ್ನಾಗಿ ಹೇಳಿದೆ; ಒಬ್ಬನೇ ಇದ್ದಾನೆ, ಆತನ ಹೊರತು ಮತ್ತೊಬ್ಬ ದೇವರಿಲ್ಲ ಎಂದು ನೀನು ಹೇಳಿದ್ದು ಸತ್ಯ. ಆತನನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸುವದು ಮತ್ತು ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಹೆಚ್ಚಿನವು.”​—⁠ಮಾರ್ಕ 12:32, 33.

5 ಧರ್ಮಶಾಸ್ತ್ರಕ್ಕನುಸಾರ, ಸರ್ವಾಂಗಹೋಮಗಳನ್ನು ಮತ್ತು ಯಜ್ಞಗಳನ್ನು ಕೊಡುವುದು ಅವಶ್ಯವಾಗಿತ್ತಾದರೂ, ದೇವರಿಗೆ ನಿಜವಾಗಿ ಅಮೂಲ್ಯವಾಗಿದ್ದ ಸಂಗತಿಯು, ತನ್ನ ಸೇವಕರ ಪ್ರೀತಿತುಂಬಿರುವ ಹೃದಯಗಳೇ ಆಗಿತ್ತು. ಪ್ರೀತಿಭಕ್ತಿಯಿಂದ ದೇವರಿಗೆ ಅರ್ಪಿಸಲಾದ ಒಂದೇ ಒಂದು ಗುಬ್ಬಿಯು, ತಪ್ಪಾದ ಹೇತುವಿನಿಂದ ಕೊಡಲಾಗುವ ಸಾವಿರಾರು ಟಗರುಗಳಿಗಿಂತಲೂ ಹೆಚ್ಚು ಮಹತ್ವದ್ದಾಗಿತ್ತು. (ಮೀಕ 6:​6-8) ಯೆರೂಸಲೇಮಿನ ಆಲಯದಲ್ಲಿ ಯೇಸು ಗಮನಿಸಿದಂಥ ಬಡ ವಿಧವೆಯ ವೃತ್ತಾಂತವನ್ನು ಜ್ಞಾಪಿಸಿಕೊಳ್ಳಿ. ಅವಳು ಆಲಯದ ಬೊಕ್ಕಸದಲ್ಲಿ ಹಾಕಿದ ಎರಡು ಚಿಕ್ಕ ನಾಣ್ಯಗಳು, ಒಂದು ಗುಬ್ಬಿಯನ್ನು ಸಹ ಖರೀದಿಸಲು ಸಾಲುತ್ತಿರಲಿಲ್ಲ. ಆದರೆ ಅವಳು ತನ್ನ ಕಾಣಿಕೆಯನ್ನು ಯೆಹೋವನ ಮೇಲಿನ ಹೃತ್ಪೂರ್ವಕ ಪ್ರೀತಿಯಿಂದ ಕೊಟ್ಟ ಕಾರಣ, ಅದು ಧನಿಕರು ತಮಗೆ ಸಾಕಾಗಿ ಮಿಕ್ಕಿದ್ದ ಹಣದಿಂದ ಕೊಟ್ಟ ದೊಡ್ಡ ಮೊತ್ತದ ದಾನಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದಾಗಿತ್ತು. (ಮಾರ್ಕ 12:​41-44) ಹಾಗಾದರೆ, ನಮ್ಮ ಸನ್ನಿವೇಶವು ಏನೇ ಆಗಿರಲಿ ನಾವೆಲ್ಲರೂ ಯೆಹೋವನಿಗೆ ನಮ್ಮ ಪ್ರೀತಿಯನ್ನು ಕೊಡಬಲ್ಲೆವು. ಇದನ್ನೇ ಯೆಹೋವನು ಬಹುಮೂಲ್ಯವೆಂದು ಎಣಿಸುತ್ತಾನೆಂಬ ಸಂಗತಿಯು ಎಷ್ಟು ಉತ್ತೇಜನದಾಯಕವಾಗಿದೆ!

6 ಸತ್ಯಾರಾಧನೆಯಲ್ಲಿ ಪ್ರೀತಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಒತ್ತಿಹೇಳುತ್ತಾ, ಅಪೊಸ್ತಲ ಪೌಲನು ಬರೆದುದು: “ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ. ನನಗೆ ಪ್ರವಾದನವರವಿದ್ದರೂ ಎಲ್ಲಾ ರಹಸ್ಯಗಳೂ ಸಕಲ ವಿಧವಾದ ವಿದ್ಯೆಯು ತಿಳಿದರೂ, ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ. ನನಗಿರುವದೆಲ್ಲವನ್ನು ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವದಕ್ಕೆ ಒಪ್ಪಿಸಿದರೂ ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ.” (1 ಕೊರಿಂಥ 13:1-3) ನಮ್ಮ ಆರಾಧನೆಯು ದೇವರಿಗೆ ಮೆಚ್ಚಿಕೆಯಾಗಬೇಕಾದರೆ ಪ್ರೀತಿಯು ಅತ್ಯಾವಶ್ಯಕ ಎಂಬುದು ಸ್ಪಷ್ಟ. ಆದರೆ ನಾವು ಯೆಹೋವನಿಗಾಗಿ ನಮ್ಮ ಪ್ರೀತಿಯನ್ನು ಹೇಗೆ ತೋರಿಸುವೆವು?

ಯೆಹೋವನಿಗಾಗಿ ನಮ್ಮ ಪ್ರೀತಿಯನ್ನು ತೋರಿಸುವ ವಿಧ

7 ಪ್ರೀತಿಯು, ನಮ್ಮ ಹತೋಟಿಯಲ್ಲಿ ಇಲ್ಲದಿರುವ ಭಾವನೆಯಾಗಿದೆ ಎಂಬುದು ಅನೇಕರ ಅಭಿಪ್ರಾಯ; ಉದಾಹರಣೆಗೆ ಪ್ರೇಮದ ಬಲೆಯಲ್ಲಿ ಬೀಳುವ ಬಗ್ಗೆ ಜನರು ಹೇಳುವುದುಂಟು. ಆದರೆ ನಿಜವಾದ ಪ್ರೀತಿಯು, ನಾವು ನಮ್ಮೊಳಗೆ ಅನುಭವಿಸುವ ಭಾವನೆ ಮಾತ್ರವಲ್ಲ. ಅದನ್ನು ಭಾವುಕತೆಯಿಂದಲ್ಲ ಬದಲಿಗೆ ಕ್ರಿಯೆಗಳಿಂದ ಗುರುತಿಸಲಾಗುತ್ತದೆ. ಆದುದರಿಂದ ಬೈಬಲ್‌ ಅದನ್ನು “ಉತ್ಕೃಷ್ಟವಾದ ಮಾರ್ಗ” ಎಂದು ಸೂಚಿಸುತ್ತಾ ಅದನ್ನು ‘ಅನುಸರಿಸುವಂತೆ’ (NIBV) ಹೇಳುತ್ತದೆ. (1 ಕೊರಿಂಥ 12:31; 14:​1) ಕ್ರೈಸ್ತರು “ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು” ಬದಲಾಗಿ “ಕೃತ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿಸುವಂತೆ ಉತ್ತೇಜಿಸಲಾಗಿದೆ.​—⁠1 ಯೋಹಾನ 3:⁠18.

8 ದೇವರ ಮೇಲೆ ನಮಗಿರುವ ಪ್ರೀತಿಯು, ನಾವು ಆತನಿಗೆ ಮೆಚ್ಚಿಗೆಯಾಗುವಂಥ ಕೆಲಸಗಳನ್ನು ಮಾಡುವಂತೆ ಮತ್ತು ನಮ್ಮ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಆತನ ಪರಮಾಧಿಕಾರವನ್ನು ಸಮರ್ಥಿಸಿ, ಅದನ್ನು ಎತ್ತಿಹಿಡಿಯುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಾವು ಲೋಕವನ್ನಾಗಲಿ ಅದರ ಭಕ್ತಿಹೀನ ಮಾರ್ಗಗಳನ್ನಾಗಲಿ ಪ್ರೀತಿಸದಂತೆ ಅದು ನಮ್ಮನ್ನು ಪ್ರೇರಿಸುತ್ತದೆ. (1 ಯೋಹಾನ 2:​15, 16) ದೇವರನ್ನು ಪ್ರೀತಿಸುವವರು, ಕೆಟ್ಟದ್ದನ್ನು ಹಗೆಮಾಡುತ್ತಾರೆ. (ಕೀರ್ತನೆ 97:10) ದೇವರನ್ನು ಪ್ರೀತಿಸುವುದರಲ್ಲಿ, ನೆರೆಯವರನ್ನು ಪ್ರೀತಿಸುವುದು ಸಹ ಒಳಗೂಡಿದೆ ಮತ್ತು ಇದನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸುವೆವು. ಅಲ್ಲದೆ, ದೇವರ ಮೇಲಣ ಪ್ರೀತಿಯು ನಾವು ವಿಧೇಯತೆ ತೋರಿಸುವುದನ್ನು ಅವಶ್ಯಪಡಿಸುತ್ತದೆ. ಬೈಬಲ್‌ ಹೀಗನ್ನುತ್ತದೆ: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.”​—⁠1 ಯೋಹಾನ 5:⁠3.

9 ದೇವರನ್ನು ಪ್ರೀತಿಸುವುದರ ಅರ್ಥವೇನೆಂಬುದನ್ನು ಯೇಸು ಪರಿಪೂರ್ಣ ರೀತಿಯಲ್ಲಿ ತೋರಿಸಿಕೊಟ್ಟನು. ಪ್ರೀತಿಯಿಂದಾಗಿಯೇ ಅವನು ತನ್ನ ಸ್ವರ್ಗೀಯ ಬೀಡನ್ನು ಬಿಟ್ಟು, ಒಬ್ಬ ಮಾನವನಾಗಿ ಭೂಮಿಯಲ್ಲಿ ವಾಸಿಸಿದನು. ಆ ಪ್ರೀತಿಯಿಂದಾಗಿಯೇ, ಅವನು ತನ್ನ ಕೆಲಸಗಳಿಂದಲೂ ಬೋಧನೆಗಳಿಂದಲೂ ತನ್ನ ತಂದೆಯನ್ನು ಮಹಿಮೆಪಡಿಸುವಂತೆ ಪ್ರೇರಿಸಲ್ಪಟ್ಟನು. ಅವನು ‘ಮರಣವನ್ನು ಹೊಂದುವಷ್ಟು ವಿಧೇಯ’ನಾಗುವಂತೆ ಪ್ರೀತಿಯು ಅವನನ್ನು ಪ್ರಚೋದಿಸಿತು. (ಫಿಲಿಪ್ಪಿ 2:8) ಯೇಸು ಪ್ರೀತಿಯಿಂದ ತೋರಿಸಿದ ಈ ವಿಧೇಯತೆಯು, ನಂಬಿಗಸ್ತ ಜನರು ದೇವರ ಮುಂದೆ ಒಂದು ನೀತಿಯುತ ನಿಲುವನ್ನು ಹೊಂದುವಂತೆ ದಾರಿಯನ್ನು ತೆರೆಯಿತು. ಪೌಲನು ಬರೆದುದು: “ಒಬ್ಬನ [ಆದಾಮನ] ಅವಿಧೇಯತ್ವದಿಂದ ಎಲ್ಲರೂ ಹೇಗೆ ಪಾಪಿಗಳಾದರೋ ಹಾಗೆಯೇ ಒಬ್ಬನ [ಯೇಸು ಕ್ರಿಸ್ತನ] ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು.”​—⁠ರೋಮಾಪುರ 5:⁠19.

10 ಯೇಸುವಿನಂತೆ, ನಮಗೆ ದೇವರ ಮೇಲಿರುವ ಪ್ರೀತಿಯನ್ನು ನಾವು ಆತನಿಗೆ ವಿಧೇಯರಾಗುವ ಮೂಲಕ ತೋರಿಸುತ್ತೇವೆ. ಯೇಸುವಿನ ಪ್ರಿಯ ಅಪೊಸ್ತಲನಾದ ಯೋಹಾನನು ಬರೆದುದು: “ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಪ್ರೀತಿ.” (2 ಯೋಹಾನ 6) ಯೆಹೋವನನ್ನು ನಿಜವಾಗಿಯೂ ಪ್ರೀತಿಸುವವರು, ಆತನ ಮಾರ್ಗದರ್ಶನಕ್ಕಾಗಿ ಹಾತೊರೆಯುತ್ತಾರೆ. ತಮ್ಮ ಸ್ವಂತ ಹೆಜ್ಜೆಗಳನ್ನು ನಿರ್ದೇಶಿಸುವುದರಲ್ಲಿ ತಾವು ಸಫಲರಾಗಲು ಸಾಧ್ಯವಿಲ್ಲ ಎಂಬುದನ್ನು ಅವರು ಒಪ್ಪಿಕೊಂಡು, ದೇವರ ವಿವೇಕದಲ್ಲಿ ಭರವಸೆಯನ್ನಿಟ್ಟು, ಆತನ ಪ್ರೀತಿಪರ ನಿರ್ದೇಶನಕ್ಕೆ ಅಧೀನರಾಗುತ್ತಾರೆ. (ಯೆರೆಮೀಯ 10:23) ಅವರು, ಪುರಾತನ ಕಾಲದ ಬೆರೋಯ ಪಟ್ಟಣದಲ್ಲಿದ್ದ ಸದ್ಗುಣವುಳ್ಳ ವ್ಯಕ್ತಿಗಳಂತಿದ್ದಾರೆ. ದೇವರ ಚಿತ್ತವನ್ನು ಮಾಡಬೇಕೆಂಬ ತೀವ್ರಾಸಕ್ತಿಯಿದ್ದ ಆ ಜನರು ದೇವರ ಸಂದೇಶವನ್ನು ‘ಸಿದ್ಧಮನಸ್ಸಿನಿಂದ’ ಸ್ವೀಕರಿಸಿದ್ದರು. (ಅ. ಕೃತ್ಯಗಳು 17:11) ದೇವರ ಚಿತ್ತವನ್ನು ಹೆಚ್ಚು ಪೂರ್ಣವಾಗಿ ಅರ್ಥೈಸಿಕೊಳ್ಳುವಂತೆ ಅವರು ಶಾಸ್ತ್ರವಚನಗಳನ್ನು ಜಾಗರೂಕತೆಯಿಂದ ಶೋಧಿಸುತ್ತಿದ್ದರು. ಇದು ಅವರಿಗೆ ಇನ್ನೂ ಹೆಚ್ಚಿನ ವಿಷಯಗಳಲ್ಲಿ ವಿಧೇಯತೆಯನ್ನು ತೋರಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಲಿಕ್ಕಾಗಿ ಸಹಾಯಮಾಡಿತು.

11 ಯೇಸು ಹೇಳಿದಂತೆ ನಾವು ದೇವರನ್ನು ಪೂರ್ಣ ಹೃದಯ, ಪ್ರಾಣ, ಬುದ್ಧಿ ಮತ್ತು ಶಕ್ತಿಯಿಂದ ಪ್ರೀತಿಸಬೇಕು. (ಮಾರ್ಕ 12:30) ಅಂಥ ಪ್ರೀತಿಯು ಹೃದಯದಿಂದ ಅಂದರೆ ನಮ್ಮ ಭಾವನೆಗಳು, ಆಸೆಗಳು ಮತ್ತು ಅಂತರಂಗದ ಯೋಚನೆಗಳಿಂದ ಹೊರಹೊಮ್ಮುತ್ತದೆ ಮತ್ತು ಹೀಗೆ ನಾವು ಯೆಹೋವನನ್ನು ಮೆಚ್ಚಿಸಲು ಬಹಳಷ್ಟು ಇಚ್ಛಿಸುತ್ತೇವೆ. ನಾವು ದೇವರನ್ನು ನಮ್ಮ ಬುದ್ಧಿಯಿಂದಲೂ ಪ್ರೀತಿಸುತ್ತೇವೆ. ಇದರರ್ಥ ನಮಗೆ ಯೆಹೋವನ, ಆತನ ಗುಣಗಳ, ಮಟ್ಟಗಳ ಹಾಗೂ ಉದ್ದೇಶಗಳ ಕುರಿತು ಜ್ಞಾನವಿದೆ ಮತ್ತು ಈ ಕಾರಣದಿಂದ ನಮ್ಮ ಭಕ್ತಿಯು ಅಂಧ ವಿಶ್ವಾಸವಾಗಿರುವುದಿಲ್ಲ. ಆತನನ್ನು ಸೇವಿಸಲು ಹಾಗೂ ಸ್ತುತಿಸಲು ನಾವು ನಮ್ಮ ಪ್ರಾಣವನ್ನು, ಅಂದರೆ ನಮ್ಮ ಜೀವವನ್ನೇ ಬಳಸುತ್ತೇವೆ ಮತ್ತು ನಮ್ಮ ಶಕ್ತಿಯನ್ನೂ ಅದೇ ಉದ್ದೇಶಕ್ಕಾಗಿ ಉಪಯೋಗಿಸುತ್ತೇವೆ.

ನಾವು ಯೆಹೋವನನ್ನು ಏಕೆ ಪ್ರೀತಿಸಬೇಕು?

12 ನಾವು ಯೆಹೋವನನ್ನು ಪ್ರೀತಿಸಬೇಕಾದ ಒಂದು ಕಾರಣ, ನಾವಾತನ ಗುಣಗಳನ್ನು ಪ್ರತಿಬಿಂಬಿಸಬೇಕೆಂದು ಆತನು ಅಪೇಕ್ಷಿಸುವುದೇ ಆಗಿದೆ. ದೇವರು ಪ್ರೀತಿಯ ಉಗಮನೂ ಸರ್ವೋಚ್ಛ ಮಾದರಿಯೂ ಆಗಿದ್ದಾನೆ ಮತ್ತು “ದೇವರು ಪ್ರೀತಿಸ್ವರೂಪಿ” ಎಂದು ಪ್ರೇರಿತ ಅಪೊಸ್ತಲನಾದ ಯೋಹಾನನು ಬರೆದನು. (1 ಯೋಹಾನ 4:8) ಇಂಥ ದೇವರ ಸ್ವರೂಪದಲ್ಲಿ ಮಾನವರನ್ನು ಸೃಷ್ಟಿಸಲಾಗಿತ್ತು. ಇದು, ನಾವು ಪ್ರೀತಿಯನ್ನು ತೋರಿಸುವಂತೆ ವಿನ್ಯಾಸಿಸಲ್ಪಟ್ಟಿದ್ದೇವೆಂದು ತೋರಿಸುತ್ತದೆ. ವಾಸ್ತವದಲ್ಲಿ ಯೆಹೋವನ ಪರಮಾಧಿಕಾರವು ಪ್ರೀತಿಯ ಮೇಲಾಧರಿತವಾಗಿದೆ. ಯಾರು ಯೆಹೋವನ ಸೇವೆಯನ್ನು ಪ್ರೀತಿಯ ನಿಮಿತ್ತವಾಗಿ ಮಾಡುತ್ತಾರೊ ಮತ್ತು ಆತನ ನೀತಿಭರಿತ ಆಡಳಿತ ರೀತಿಯನ್ನು ಇಚ್ಛಿಸುತ್ತಾರೊ ಅಂಥವರನ್ನು ಯೆಹೋವನು ತನ್ನ ಪ್ರಜೆಗಳಾಗಿ ಸ್ವೀಕರಿಸಲು ಇಚ್ಛಿಸುತ್ತಾನೆ. ಹೌದು, ಇಡೀ ಸೃಷ್ಟಿಯಲ್ಲಿ ಸಮಾಧಾನ ಹಾಗೂ ಸಾಮರಸ್ಯಕ್ಕಾಗಿ ಪ್ರೀತಿಯು ಅತ್ಯಾವಶ್ಯಕ.

13 ಯೆಹೋವನನ್ನು ಪ್ರೀತಿಸಲಿಕ್ಕಾಗಿರುವ ಇನ್ನೊಂದು ಕಾರಣವು, ಆತನು ನಮಗಾಗಿ ಏನೆಲ್ಲ ಮಾಡಿದ್ದಾನೊ ಅದಕ್ಕಾಗಿ ನಾವು ಕೃತಜ್ಞರಾಗಿರುವುದೇ ಆಗಿದೆ. ಯೇಸು ಯೆಹೂದ್ಯರಿಗೆ ಹೀಗಂದದ್ದನ್ನು ಜ್ಞಾಪಿಸಿಕೊಳ್ಳಿರಿ: ‘ನಿಮ್ಮ ದೇವರಾಗಿರುವ ಯೆಹೋವನನ್ನು ಪ್ರೀತಿಸಬೇಕು.’ ತನ್ನನ್ನೇ ಮನುಷ್ಯರಿಂದ ದೂರವಿರಿಸಿಕೊಳ್ಳುವ ಮತ್ತು ಅಜ್ಞಾತನಾಗಿರುವ ಒಬ್ಬ ದೇವರನ್ನು ಪ್ರೀತಿಸುವಂತೆ ಅವರಿಂದ ನಿರೀಕ್ಷಿಸಲಾಗಲಿಲ್ಲ. ಅದರ ಬದಲು, ಅವರ ಮೇಲೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿರುವ ದೇವರನ್ನು ಅವರು ಪ್ರೀತಿಸಬೇಕಾಗಿತ್ತು. ಯೆಹೋವನು ಅವರ ದೇವರಾಗಿದ್ದನು. ಆತನೇ ಅವರನ್ನು ಐಗುಪ್ತದಿಂದ ಬಿಡಿಸಿ ವಾಗ್ದತ್ತ ದೇಶಕ್ಕೆ ತಂದಿದ್ದನು ಹಾಗೂ ಅವರನ್ನು ಪ್ರೀತಿಸಿ, ಸಂರಕ್ಷಿಸಿ, ಪೋಷಿಸಿದ್ದನು ಮತ್ತು ಪ್ರೀತಿಯಿಂದ ತಿದ್ದಿದವನಾಗಿದ್ದನು. ಇಂದು, ಯೆಹೋವನು ನಮ್ಮ ದೇವರಾಗಿದ್ದಾನೆ. ನಾವು ನಿತ್ಯಜೀವವನ್ನು ಪಡೆಯಲು ಸಾಧ್ಯವಾಗುವಂತೆ ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟವನು ಆತನೇ. ಹೀಗಿರುವುದರಿಂದ, ನಾವು ಸಹ ಪ್ರತಿಯಾಗಿ ಆತನನ್ನು ಪ್ರೀತಿಸಬೇಕೆಂದು ಆತನು ನಿರೀಕ್ಷಿಸುವುದು ಎಷ್ಟು ಸಮಂಜಸ! ನಮ್ಮ ಪ್ರೀತಿಯು ಪ್ರತಿಕ್ರಿಯಾಶೀಲ ಪ್ರೀತಿ ಆಗಿದೆ; ಅಂದರೆ ನಮ್ಮನ್ನು ಪ್ರೀತಿಸಿದ ದೇವರನ್ನು ನಾವು ಪ್ರೀತಿಸುವಂತೆ ಕೇಳಿಕೊಳ್ಳಲಾಗಿದೆ. “ನಮ್ಮನ್ನು ಮೊದಲು ಪ್ರೀತಿಸಿದ”ವನನ್ನು ನಾವು ಪ್ರೀತಿಸುತ್ತೇವೆ.​—⁠1 ಯೋಹಾನ 4:⁠19.

14 ಯೆಹೋವನಿಗೆ ಮಾನವಕುಲದ ಮೇಲಿರುವ ಪ್ರೀತಿಯು, ಒಬ್ಬ ತಂದೆಗೆ ತನ್ನ ಮಕ್ಕಳ ಮೇಲಿರುವ ಪ್ರೀತಿಯಂತೆ ಇದೆ. ಪ್ರೀತಿಯುಳ್ಳ ಹೆತ್ತವರು ಅಪರಿಪೂರ್ಣರಾಗಿದ್ದರೂ, ತಮ್ಮ ಮಕ್ಕಳಿಗೋಸ್ಕರ ವರ್ಷಗಟ್ಟಲೆ ಶ್ರಮಪಟ್ಟು ದುಡಿಯುತ್ತಾರೆ, ಹಣವನ್ನು ಖರ್ಚುಮಾಡಿರುತ್ತಾರೆ ಮತ್ತು ಇನ್ನಿತರ ತ್ಯಾಗಗಳನ್ನೂ ಮಾಡುತ್ತಾರೆ. ಹೆತ್ತವರು ತಮ್ಮ ಮಕ್ಕಳಿಗೆ ಉಪದೇಶ ನೀಡುತ್ತಾರೆ, ಉತ್ತೇಜಿಸುತ್ತಾರೆ, ಆಸರೆನೀಡುತ್ತಾರೆ ಮತ್ತು ಶಿಕ್ಷೆ ನೀಡುತ್ತಾರೆ, ಏಕೆಂದರೆ ತಮ್ಮ ಮಕ್ಕಳು ಸಂತೋಷವಾಗಿರಬೇಕು ಮತ್ತು ಏಳಿಗೆಹೊಂದಬೇಕೆಂಬುದೇ ಅವರ ಆಸೆ. ಇದಕ್ಕೆ ಪ್ರತಿಯಾಗಿ ಹೆತ್ತವರು ಏನನ್ನು ಬಯಸುತ್ತಾರೆ? ಮಕ್ಕಳು ತಮ್ಮನ್ನು ಪ್ರೀತಿಸಬೇಕು ಮತ್ತು ಅವರ ಒಳಿತಿಗಾಗಿ ಏನನ್ನು ಹೇಳಲಾಗಿದೆಯೊ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಕೆಂದೇ. ಹಾಗೆಯೇ, ಪರಿಪೂರ್ಣನಾಗಿರುವ ನಮ್ಮ ಸ್ವರ್ಗೀಯ ತಂದೆಯು ನಮಗಾಗಿ ಮಾಡಿರುವಂಥ ಎಲ್ಲದ್ದಕ್ಕಾಗಿ ನಾವು ಪ್ರೀತಿಯಿಂದ ಕೃತಜ್ಞತೆಯನ್ನು ತೋರಿಸುವಂತೆ ಆತನು ನಿರೀಕ್ಷಿಸುವುದು ಸಮಂಜಸವಲ್ಲವೇ?

ದೇವರಿಗಾಗಿ ಪ್ರೀತಿಯನ್ನು ಬೆಳೆಸುವುದು

15 ನಾವು ದೇವರನ್ನು ಕಣ್ಣಾರೆ ನೋಡಿದ್ದೂ ಇಲ್ಲ, ಆತನ ಧ್ವನಿಯನ್ನು ಕೇಳಿದ್ದೂ ಇಲ್ಲ. (ಯೋಹಾನ 1:18) ಹಾಗಿದ್ದರೂ, ನಾವಾತನೊಂದಿಗೆ ಒಂದು ಪ್ರೀತಿಪರ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ. (ಯಾಕೋಬ 4:⁠8) ನಾವದನ್ನು ಹೇಗೆ ಮಾಡಬಲ್ಲೆವು? ಒಬ್ಬ ವ್ಯಕ್ತಿಯನ್ನು ಪ್ರೀತಿಸಬೇಕಾದರೆ ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆಯು, ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವುದೇ ಆಗಿದೆ. ಏಕೆಂದರೆ ನಮಗೆ ಪರಿಚಯವಿಲ್ಲದ ಒಬ್ಬ ವ್ಯಕ್ತಿಯನ್ನು ಗಾಢವಾಗಿ ಪ್ರೀತಿಸುವುದು ಕಷ್ಟ. ಅದಕ್ಕೋಸ್ಕರವೇ ಯೆಹೋವನು, ನಾವಾತನ ಬಗ್ಗೆ ತಿಳಿದುಕೊಳ್ಳಲಿಕ್ಕಾಗುವಂತೆ ತನ್ನ ವಾಕ್ಯವಾದ ಬೈಬಲನ್ನು ಕೊಟ್ಟಿದ್ದಾನೆ ಮತ್ತು ಅದನ್ನು ಕ್ರಮವಾಗಿ ಓದುವಂತೆ ತನ್ನ ಸಂಘಟನೆಯ ಮೂಲಕ ನಮ್ಮನ್ನು ಉತ್ತೇಜಿಸುತ್ತಾನೆ. ದೇವರ ಬಗ್ಗೆ, ಆತನ ವ್ಯಕ್ತಿತ್ವದ ಬಗ್ಗೆ, ಮತ್ತು ಸಾವಿರಾರು ವರ್ಷಕಾಲ ಜನರೊಂದಿಗೆ ಆತನು ವ್ಯವಹರಿಸಿರುವ ರೀತಿಯ ಬಗ್ಗೆ ಬೈಬಲ್‌ ಕಲಿಸುತ್ತದೆ. ನಾವು ಆ ವೃತ್ತಾಂತಗಳ ವಿಷಯವಾಗಿ ಧ್ಯಾನಿಸುವಾಗ, ಆತನ ಕುರಿತಾದ ನಮ್ಮ ತಿಳುವಳಿಕೆ ಹಾಗೂ ಆತನ ಮೇಲಣ ನಮ್ಮ ಪ್ರೀತಿಯು ಬೆಳೆಯುವುದು.​—⁠ರೋಮಾಪುರ 15:⁠4.

16 ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನು ಹೆಚ್ಚಿಸುವ ಮತ್ತೊಂದು ಪ್ರಧಾನ ವಿಧವು, ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಕುರಿತಾಗಿ ಪರ್ಯಾಲೋಚಿಸುವುದೇ ಆಗಿದೆ. ಏಕೆಂದರೆ ಯೇಸು ತನ್ನ ತಂದೆಯನ್ನು ತುಂಬ ನಿಕಟವಾಗಿ ಪ್ರತಿಬಿಂಬಿಸಿದನು. ಆದುದರಿಂದಲೇ ಅವನು ಹೀಗನ್ನಸಾಧ್ಯವಿತ್ತು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಯೇಸು, ವಿಧವೆಯೊಬ್ಬಳ ಒಬ್ಬನೇ ಮಗನನ್ನು ಪುನಃ ಜೀವಕ್ಕೆ ತರುವ ಮೂಲಕ ತೋರಿಸಿದ ಕರುಣೆಯು ನಿಮ್ಮ ಮನಸ್ಪರ್ಶಿಸುವುದಿಲ್ಲವೊ? (ಲೂಕ 7:​11-15) ದೇವರ ಕುಮಾರನು ಹಾಗೂ ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷನಾಗಿರುವ ಅವನು, ದೀನಭಾವದಿಂದ ತನ್ನ ಶಿಷ್ಯರ ಪಾದಗಳನ್ನು ತೊಳೆದನೆಂಬ ಸಂಗತಿಯು ನಿಮ್ಮನ್ನು ಅವನೆಡೆಗೆ ಸೆಳೆಯುವುದಿಲ್ಲವೊ? (ಯೋಹಾನ 13:​3-5) ಅವನು ಬೇರಾವುದೇ ಮಾನವನಿಗಿಂತಲೂ ಮಹಾನ್‌ ಹಾಗೂ ಅತಿ ವಿವೇಕಿಯಾಗಿದ್ದರೂ, ಅವನ ಬಳಿ ಎಲ್ಲರೂ, ಮಕ್ಕಳು ಸಹ ಹಿಂಜರಿಕೆಯಿಲ್ಲದೆ ಹೋಗಸಾಧ್ಯವಿತ್ತೆಂಬ ಸಂಗತಿಯು ನಿಮ್ಮ ಮನಮುಟ್ಟುವುದಿಲ್ಲವೊ? (ಮಾರ್ಕ 10:​13, 14) ಈ ಎಲ್ಲ ವಿಷಯಗಳ ಕುರಿತು ನಾವು ಕೃತಜ್ಞತಾಭಾವದಿಂದ ಧ್ಯಾನಿಸುವಾಗ, ಪೇತ್ರನು ಯಾರ ಬಗ್ಗೆ ಬರೆದನೊ ಆ ಕ್ರೈಸ್ತರಂತೆ ನಾವು ಸಹ ಆಗುತ್ತೇವೆ: “ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ.” (1 ಪೇತ್ರ 1:8) ಯೇಸುವಿಗಾಗಿರುವ ನಮ್ಮ ಪ್ರೀತಿಯು ಬೆಳೆಯುತ್ತಾ ಹೋದಂತೆಯೇ, ಯೆಹೋವನಿಗಾಗಿರುವ ನಮ್ಮ ಪ್ರೀತಿ ಸಹ ಹೆಚ್ಚುತ್ತಾ ಹೋಗುವುದು.

17 ದೇವರ ಮೇಲಿನ ನಮ್ಮ ಪ್ರೀತಿಯನ್ನು ಹೆಚ್ಚಿಸುವುದಕ್ಕಾಗಿರುವ ಇನ್ನೊಂದು ವಿಧವು, ಜೀವನವನ್ನು ಆನಂದಿಸಲು ಆತನು ನಮಗಾಗಿ ಮಾಡಿರುವ ಹೇರಳವಾದ ಪ್ರೀತಿಯ ಒದಗಿಸುವಿಕೆಗಳ ಕುರಿತು ಧ್ಯಾನಿಸುವುದೇ ಆಗಿದೆ. ಉದಾಹರಣೆಗಾಗಿ, ಸೃಷ್ಟಿಯಲ್ಲಿನ ಸೌಂದರ್ಯ, ಸ್ವಾದಿಷ್ಟಕರವಾದ ಕೊನೆಯಿಲ್ಲದಷ್ಟು ವೈವಿಧ್ಯಮಯ ಆಹಾರ ಪದಾರ್ಥಗಳು, ಒಳ್ಳೇ ಸ್ನೇಹಿತರ ಬೆಚ್ಚಗಿನ ಸ್ನೇಹ, ಹಾಗೂ ನಮಗೆ ಆನಂದತೃಪ್ತಿಯನ್ನು ಕೊಡುವ ಇನ್ನಿತರ ಅಸಂಖ್ಯಾತ ಹರ್ಷದಾಯಕ ಸಂಗತಿಗಳ ಕುರಿತು ಯೋಚಿಸಿರಿ. (ಅ. ಕೃತ್ಯಗಳು 14:17) ನಮ್ಮ ದೇವರ ಕುರಿತಾಗಿ ನಾವು ಹೆಚ್ಚೆಚ್ಚನ್ನು ಕಲಿತಂತೆ, ಆತನ ಆ ಮಿತಿಯಿಲ್ಲದ ಒಳ್ಳೇತನ ಹಾಗೂ ಉದಾರಭಾವಕ್ಕಾಗಿ ಕೃತಜ್ಞರಾಗಿರಲು ನಮಗೆ ಹೆಚ್ಚೆಚ್ಚು ಕಾರಣಗಳು ಸಿಗುತ್ತವೆ. ಅಲ್ಲದೆ, ಯೆಹೋವನು ವೈಯಕ್ತಿಕವಾಗಿ ನಿಮಗಾಗಿ ಮಾಡಿರುವ ಎಲ್ಲ ಸಂಗತಿಗಳ ಕುರಿತು ಯೋಚಿಸಿರಿ. ಆತನು ನಿಮ್ಮ ಪ್ರೀತಿಗೆ ಪಾತ್ರನಾಗಿದ್ದಾನೆಂದು ನೀವು ಒಪ್ಪುವುದಿಲ್ಲವೊ?

18 ದೇವರು ಕೊಟ್ಟಿರುವ ಅನೇಕಾನೇಕ ಉಡುಗೊರೆಗಳಲ್ಲಿ ಒಂದು, ಪ್ರಾರ್ಥನೆಯ ಮೂಲಕ ಆತನ ಬಳಿ ಹೋಗಲು ನಮಗಿರುವ ಸುಸಂದರ್ಭವೇ ಆಗಿದೆ. ನಾವು ಯಾವುದೇ ಸಮಯದಲ್ಲಿ ಪ್ರಾರ್ಥಿಸಲಿ, ‘ಪ್ರಾರ್ಥನೆಗಳನ್ನು ಕೇಳುವವನಾದ’ ಆತನು ಕಿವಿಗೊಡುತ್ತಾನೆಂದು ನಮಗೆ ತಿಳಿದಿದೆ. (ಕೀರ್ತನೆ 65:⁠2) ಯೆಹೋವನು ತನ್ನ ಪ್ರಿಯ ಮಗನಿಗೆ ಆಳುವ ಮತ್ತು ನ್ಯಾಯತೀರ್ಪು ಮಾಡುವ ಅಧಿಕಾರವನ್ನು ವಹಿಸಿಕೊಟ್ಟಿದ್ದಾನೆ. ಆದರೆ ಆತನು ಯಾರಿಗೂ​—⁠ತನ್ನ ಮಗನಿಗೂ​—⁠ಪ್ರಾರ್ಥನೆಗಳಿಗೆ ಕಿವಿಗೊಡುವ ಅಧಿಕಾರವನ್ನು ಕೊಡುವುದಿಲ್ಲ. ಆತನು ಸ್ವತಃ ನಮ್ಮ ಪ್ರಾರ್ಥನೆಗಳನ್ನು ಆಲಿಸುತ್ತಾನೆ. ಈ ಮೂಲಕ ಯೆಹೋವನು ತೋರಿಸುವ ಪ್ರೀತಿಭರಿತ, ವೈಯಕ್ತಿಕ ಕಾಳಜಿಯು ನಮ್ಮನ್ನು ಆತನೆಡೆಗೆ ಸೆಳೆಯುತ್ತದೆ.

19 ಯೆಹೋವನು ಮಾನವಕುಲಕ್ಕಾಗಿ ಏನನ್ನು ಕಾದಿರಿಸಿದ್ದಾನೊ ಅದನ್ನು ಪರಿಗಣಿಸುವಾಗಲೂ ನಾವು ಆತನ ಕಡೆಗೆ ಸೆಳೆಯಲ್ಪಡುತ್ತೇವೆ. ಕಾಯಿಲೆ, ದುಃಖ ಹಾಗೂ ಮರಣವನ್ನು ಕೊನೆಗಾಣಿಸುವನೆಂದು ಆತನು ಮಾತುಕೊಟ್ಟಿದ್ದಾನೆ. (ಪ್ರಕಟನೆ 21:​3, 4) ಎಲ್ಲ ಮಾನವರು ಪರಿಪೂರ್ಣರಾದ ಬಳಿಕ, ಯಾರೂ ಖಿನ್ನತೆ, ನಿರುತ್ತೇಜನ ಇಲ್ಲವೆ ದುರಂತವನ್ನು ಅನುಭವಿಸುವುದಿಲ್ಲ. ಹಸಿವು, ಬಡತನ ಮತ್ತು ಯುದ್ಧಗಳು ಇಲ್ಲವಾಗುವವು. (ಕೀರ್ತನೆ 46:9; 72:16) ಭೂಮಿಯನ್ನು ಒಂದು ಪರದೈಸಾಗಿ ಪರಿವರ್ತಿಸಲಾಗುವುದು. (ಲೂಕ 23:43) ಈ ಎಲ್ಲ ಆಶೀರ್ವಾದಗಳನ್ನು ತರಬೇಕೆಂಬ ಹಂಗು ಯೆಹೋವನಿಗಿಲ್ಲವಾದರೂ, ಆತನು ನಮ್ಮನ್ನು ಪ್ರೀತಿಸುವ ಕಾರಣ ಅದನ್ನು ಮಾಡುತ್ತಾನೆ.

20 ಹಾಗಾದರೆ, ನಮ್ಮ ದೇವರಾದ ಯೆಹೋವನನ್ನು ಪ್ರೀತಿಸಲಿಕ್ಕಾಗಿ ಮತ್ತು ಆ ಪ್ರೀತಿಯನ್ನು ಬೆಳೆಸುತ್ತಾ ಇರಲು ನಮಗೆ ಬಲವಾದ ಕಾರಣಗಳಿವೆ. ದೇವರಿಗಾಗಿ ನಿಮಗಿರುವ ಪ್ರೀತಿಯನ್ನು ನೀವು ಬಲಪಡಿಸುತ್ತಾ ಇರುವಿರೊ, ಮತ್ತು ಆತನು ನಿಮ್ಮ ಮಾರ್ಗಗಳನ್ನು ನಿರ್ದೇಶಿಸುವಂತೆ ಅನುಮತಿಸುತ್ತಾ ಇರುವಿರೊ? ಆಯ್ಕೆ ನಿಮ್ಮದು. ಯೆಹೋವನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವ ಮತ್ತು ಅದನ್ನು ಕಾಪಾಡಿಕೊಳ್ಳುವುದರ ಪ್ರಯೋಜನಗಳನ್ನು ಮೋಶೆ ಗ್ರಹಿಸಿದನು. ಬಹುಕಾಲದ ಹಿಂದಿದ್ದ ಇಸ್ರಾಯೇಲ್ಯರಿಗೆ ಅವನು ಹೇಳಿದ್ದು: “ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ. . . . ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.”​—⁠ಧರ್ಮೋಪದೇಶಕಾಂಡ 30:19, 20. (w06 12/01)

ನಿಮಗೆ ಜ್ಞಾಪಕವಿದೆಯೊ?

• ನಾವು ಯೆಹೋವನನ್ನು ಪ್ರೀತಿಸುವುದು ಏಕೆ ಅತ್ಯಾವಶ್ಯಕ?

• ದೇವರಿಗಾಗಿ ನಮ್ಮ ಪ್ರೀತಿಯನ್ನು ನಾವು ಹೇಗೆ ತೋರಿಸಬಲ್ಲೆವು?

• ಯೆಹೋವನನ್ನು ಪ್ರೀತಿಸಲು ನಮಗೆ ಯಾವ ಕಾರಣಗಳಿವೆ?

• ನಾವು ದೇವರಿಗಾಗಿ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?

[ಅಧ್ಯಯನ ಪ್ರಶ್ನೆಗಳು]

1, 2. ಯಾವ ಆಜ್ಞೆ ಮುಖ್ಯವಾದದ್ದು ಎಂಬ ಪ್ರಶ್ನೆ ಕೇಳಲು ಕಾರಣ ಏನಾಗಿದ್ದಿರಬಹುದು?

3. ಅತಿ ಪ್ರಾಮುಖ್ಯವಾದ ಆಜ್ಞೆ ಯಾವುದೆಂದು ಯೇಸು ಹೇಳಿದನು?

4, 5. (ಎ) ಯೇಸು ಕೊಟ್ಟ ಉತ್ತರದಿಂದ ಫರಿಸಾಯನು ಏಕೆ ಅಚ್ಚರಿಗೊಳ್ಳಲಿಲ್ಲ? (ಬಿ) ದೇವರಿಗೆ ಯಜ್ಞನೈವೇದ್ಯಗಳಿಗಿಂತಲೂ ಯಾವುದು ಹೆಚ್ಚು ಪ್ರಾಮುಖ್ಯವಾಗಿದೆ?

6. ಪ್ರೀತಿಯ ಮಹತ್ವದ ಬಗ್ಗೆ ಪೌಲನು ಏನು ಬರೆದನು?

7, 8. ಯೆಹೋವನಿಗಾಗಿ ನಮ್ಮ ಪ್ರೀತಿಯನ್ನು ನಾವು ಹೇಗೆ ತೋರಿಸಬಲ್ಲೆವು?

9. ದೇವರ ಮೇಲಿದ್ದ ಪ್ರೀತಿಯನ್ನು ಯೇಸು ಹೇಗೆ ತೋರಿಸಿಕೊಟ್ಟನು?

10. ದೇವರ ಮೇಲಣ ಪ್ರೀತಿಯಲ್ಲಿ ವಿಧೇಯತೆಯು ಏಕೆ ಒಳಗೂಡಿದೆ?

11. ದೇವರನ್ನು ನಮ್ಮ ಪೂರ್ಣ ಹೃದಯ, ಬುದ್ಧಿ, ಪ್ರಾಣ ಹಾಗೂ ಶಕ್ತಿಯಿಂದ ಪ್ರೀತಿಸುವುದರ ಅರ್ಥವೇನು?

12. ನಾವು ದೇವರನ್ನು ಪ್ರೀತಿಸಬೇಕೆಂದು ಆತನು ಅಪೇಕ್ಷಿಸುವುದೇಕೆ?

13. (ಎ) ಇಸ್ರಾಯೇಲ್ಯರಿಗೆ, ‘ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಬೇಕು’ ಎಂದು ಏಕೆ ಹೇಳಲಾಗಿತ್ತು? (ಬಿ) ನಾವು ಆತನನ್ನು ಪ್ರೀತಿಸಬೇಕೆಂದು ಯೆಹೋವನು ನಿರೀಕ್ಷಿಸುವುದು ಏಕೆ ಸಮಂಜಸವಾಗಿದೆ?

14. ಯೆಹೋವನ ಪ್ರೀತಿಯು, ಒಬ್ಬ ಪ್ರೀತಿಯುಳ್ಳ ತಂದೆಯ ಪ್ರೀತಿಯಂತಿದೆ ಹೇಗೆ?

15. ದೇವರಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಪ್ರಥಮ ಹೆಜ್ಜೆ ಯಾವುದಾಗಿದೆ?

16. ಯೇಸುವಿನ ಶುಶ್ರೂಷೆಯ ಕುರಿತಾಗಿ ಪರ್ಯಾಲೋಚಿಸುವುದು, ದೇವರ ಮೇಲಣ ನಮ್ಮ ಪ್ರೀತಿಯನ್ನು ಹೇಗೆ ವರ್ಧಿಸುವುದು?

17, 18. ಯೆಹೋವನ ಯಾವ ಪ್ರೀತಿಪರ ಒದಗಿಸುವಿಕೆಗಳ ಕುರಿತಾಗಿ ಧ್ಯಾನಿಸುವುದರಿಂದ, ಆತನಿಗಾಗಿರುವ ನಮ್ಮ ಪ್ರೀತಿಯು ಹೆಚ್ಚಾಗುವುದು?

19. ಯೆಹೋವನ ಯಾವ ವಾಗ್ದಾನಗಳು ನಮ್ಮನ್ನು ಆತನ ಬಳಿ ಸೆಳೆಯುತ್ತವೆ?

20. ಯೆಹೋವನನ್ನು ಪ್ರೀತಿಸುವುದರ ಪ್ರಯೋಜನಗಳ ಬಗ್ಗೆ ಮೋಶೆ ಏನು ಹೇಳಿದನು?

[ಪುಟ 21ರಲ್ಲಿರುವ ಚಿತ್ರ]

ನಾವೆಲ್ಲರೂ ಯೆಹೋವನಿಗೆ ತೋರಿಸಬಹುದಾದ ಪ್ರೀತಿಯನ್ನು ಆತನು ನಿಜವಾಗಿಯೂ ಬಹುಮೂಲ್ಯವೆಂದೆಣಿಸುತ್ತಾನೆ

[ಪುಟ 23ರಲ್ಲಿರುವ ಚಿತ್ರಗಳು]

“ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.”​—⁠ಯೋಹಾನ 14:⁠9