ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಮ ಗೀತ ಪುಸ್ತಕದ ಮುಖ್ಯಾಂಶಗಳು

ಪರಮ ಗೀತ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಪರಮ ಗೀತ ಪುಸ್ತಕದ ಮುಖ್ಯಾಂಶಗಳು

“ನನ್ನ ಪ್ರಿಯಳು ಮುಳ್ಳುಗಳ ಮಧ್ಯದಲ್ಲಿನ ತಾವರೆಯಂತೆ ಸ್ತ್ರೀಯರಲ್ಲಿ ಶ್ರೇಷ್ಠಳು.” “ಉದ್ಯಾನ ವೃಕ್ಷಗಳಲ್ಲಿ ಸೇಬು ಹೇಗೋ ಪುರುಷರಲ್ಲಿ ನನ್ನ ಕಾಂತನು ಹಾಗೆಯೇ ಇಷ್ಟನು.” “ಅರುಣೋದಯವು ದೃಷ್ಟಿಸುವಂತಿರುವ ಇವಳಾರು? ಚಂದ್ರನಂತೆ ಸೌಮ್ಯಳು, ಸೂರ್ಯನಂತೆ ಶುಭ್ರಳು . . . ಆಗಿರುವ ಇವಳಾರು?” (ಪರಮ ಗೀತ 2:​2, 3; 6:10) ಬೈಬಲಿನ ಪರಮ ಗೀತ ಪುಸ್ತಕದಲ್ಲಿರುವ ಈ ವಚನಗಳು ಎಷ್ಟೊಂದು ರಸವತ್ತಾಗಿವೆ! ಇಡಿ ಪುಸ್ತಕವೇ ಕಾವ್ಯಾತ್ಮಕವಾಗಿದ್ದು ಅರ್ಥಗರ್ಭಿತವಾದ ಸುಂದರ ವರ್ಣನೆಗಳಿಂದ ಕೂಡಿದೆ. ಆದುದರಿಂದಲೇ ಇದನ್ನು “ಪರಮ ಗೀತ” ಎಂದು ಕರೆಯಲಾಗಿದೆ.

ಪರಮ ಗೀತ ಪುಸ್ತಕದ ರಚಕ ಪುರಾತನ ಇಸ್ರಾಯೇಲಿನ ಅರಸ ಸೊಲೊಮೋನನು. ಸಾ.ಶ.ಪೂ. 1020ರ ಸುಮಾರಿಗೆ ಅಂದರೆ ತನ್ನ 40 ವರ್ಷಗಳ ಆಳ್ವಿಕೆಯ ಆರಂಭದಲ್ಲಿ ಅವನಿದನ್ನು ಬರೆದಿರಬಹುದು. ಈ ಗೀತೆಯು ಒಬ್ಬ ಕುರುಬ ಹುಡುಗನ ಮತ್ತು ಶೂಲಮಿನ ಹಳ್ಳಿ ಹುಡುಗಿಯ ಪ್ರೇಮಕಥೆಯಾಗಿದೆ. ಈ ಗೀತೆಯಲ್ಲಿ ತಿಳಿಸಲ್ಪಟ್ಟಿರುವ ಇತರರೆಂದರೆ ಹುಡುಗಿಯ ತಾಯಿ, ಸಹೋದರರು, ‘ಯೆರೂಸಲೇಮಿನ ನಾರಿಯರು [ಅಂತಃಪುರದ ಸ್ತ್ರೀಯರು]’ ಹಾಗೂ ‘ಚೀಯೋನಿನ ನಾರಿಯರು [ಯೆರೂಸಲೇಮಿನ ಹೆಂಗಸರು.]’ (ಪರಮ ಗೀತ 1:5; 3:11) ಬೈಬಲ್‌ ಓದುಗನೊಬ್ಬನಿಗೆ ಪರಮ ಗೀತ ಪುಸ್ತಕದಲ್ಲಿ ಸಂಭಾಷಿಸುತ್ತಿರುವ ಎಲ್ಲ ಪಾತ್ರಧಾರಿಗಳನ್ನು ಗುರುತಿಸುವುದು ಕಷ್ಟಕರ. ಆದರೆ ಅವರಾಡಿದ ಮಾತುಗಳ ಕುರಿತು ಇಲ್ಲವೆ ಅವರೊಂದಿಗೆ ಬೇರೆಯವರು ಆಡಿದ ಮಾತುಗಳ ಕುರಿತು ಯೋಚಿಸುವಾಗ ಅವರ ಗುರುತು ಸಿಗುವುದು.

ದೇವರ ವಾಕ್ಯದ ಭಾಗವಾಗಿರುವ ಪರಮ ಗೀತ ಪುಸ್ತಕದ ಸಂದೇಶವು ಎರಡು ಕಾರಣಗಳಿಗಾಗಿ ಬಹುಮೂಲ್ಯವಾಗಿದೆ. (ಇಬ್ರಿಯ 4:12) ಮೊದಲನೆಯದಾಗಿ, ಅದು ಸ್ತ್ರೀಪುರುಷರಿಬ್ಬರ ನಡುವಿನ ನಿಜ ಪ್ರೀತಿಯೇನೆಂಬುದನ್ನು ನಮಗೆ ಕಲಿಸುತ್ತದೆ. ಎರಡನೆಯದಾಗಿ, ಯೇಸು ಕ್ರಿಸ್ತನ ಮತ್ತು ಅಭಿಷಿಕ್ತ ಕ್ರೈಸ್ತರ ಸಭೆಯ ನಡುವೆಯಿರುವ ಅಗಾಧ ಪ್ರೀತಿಯನ್ನು ಆ ಗೀತವು ದೃಷ್ಟಾಂತಿಸುತ್ತದೆ.​—⁠2 ಕೊರಿಂಥ 11:2; ಎಫೆಸ 5:​25-31.

ನನ್ನಲ್ಲಿ ‘ಪ್ರೀತಿಯನ್ನು ಬೆಳೆಸಲು’ ಪ್ರಯತ್ನಿಸದಿರಿ

(ಪರಮ ಗೀತ 1:​1–3:⁠5)

“ಬಾಯ ಮುದ್ದುಗಳಿಂದ ನನ್ನನ್ನು ಮುದ್ದಿಸಲಿ; ನಿನ್ನ ಲಾಲನೆಯು ದ್ರಾಕ್ಷಾರಸಕ್ಕಿಂತಲೂ ಮೇಲು.” (ಪರಮ ಗೀತ 1:⁠2) ಈ ಮಾತುಗಳಿಂದ ಪರಮ ಗೀತದಲ್ಲಿನ ಸಂಭಾಷಣೆಯು ಆರಂಭವಾಗುತ್ತದೆ. ಸೊಲೊಮೋನನ ವೈಭವದ ಗುಡಾರಕ್ಕೆ ಕರೆತರಲಾದ ನಮ್ರ ಹಳ್ಳಿ ಹುಡುಗಿಯೋರ್ವಳ ಮಾತಿದು. ಅವಳು ಅಲ್ಲಿಗೆ ಹೇಗೆ ಬಂದಳು?

“ನನ್ನ ಸಹೋದರರು ನನ್ನ ಮೇಲೆ ಉರಿಗೊಂಡು ತೋಟಗಳನ್ನು ಕಾಯುವದಕ್ಕೆ ಹಾಕಿದರು” ಎಂದು ಆಕೆಯು ಅನ್ನುತ್ತಾಳೆ. ಆಕೆಯ ಸಹೋದರರು ಅವಳ ಮೇಲೆ ಉರಿಗೊಳ್ಳಲು ಕಾರಣವೇನೆಂದರೆ, ಅವಳು ಪ್ರೇಮಿಸುತ್ತಿದ್ದ ಕುರುಬ ಹುಡುಗನು ವಸಂತ ಕಾಲದ ಸುಂದರವಾದೊಂದು ದಿನದಲ್ಲಿ ತನ್ನೊಂದಿಗೆ ಬರುವಂತೆ ಅವಳನ್ನು ಆಮಂತ್ರಿಸಿದ್ದನು. ಆದುದರಿಂದ, ಅವನೊಂದಿಗೆ ಅವಳು ಹೋಗುವುದನ್ನು ತಡೆಯಲಿಕ್ಕಾಗಿ ಅವರು “ತೋಟಗಳನ್ನು ಹಾಳುಮಾಡುವ ನರಿಗಳನ್ನು” ಕಾಯುವಂತೆ ಆಕೆಗೆ ಹೇಳುತ್ತಾರೆ. ಈ ಕೆಲಸವು ಅವಳನ್ನು ಸೊಲೊಮೋನನ ಗುಡಾರದ ಸಮೀಪಕ್ಕೆ ಬರುವಂತೆ ಮಾಡುತ್ತದೆ. ಅವಳು “ಬಾದಾಮಿಯ ತೋಟಕ್ಕೆ” ಹೋಗುವಾಗ ಅವಳ ಚೆಲುವನ್ನು ಕಂಡು ಸೊಲೊಮೋನನ ಗುಡಾರಕ್ಕೆ ಆಕೆಯನ್ನು ಕರೆತರಲಾಗುತ್ತದೆ.​—⁠ಪರಮ ಗೀತ 1:6; 2:10-15; 6:⁠11.

ಅಲ್ಲಿ ಆ ಯುವತಿ ತನ್ನ ನಲ್ಲನಾದ ಕುರುಬನನ್ನು ನೋಡಲು ತವಕಿಸುತ್ತಾಳೆ. ಅದನ್ನು ಕಂಡ ಅಂತಃಪುರದ ಸ್ತ್ರೀಯರು ಆಕೆಗೆ “ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ” ಅವನನ್ನು ಹುಡುಕುವಂತೆ ಹೇಳುತ್ತಾರೆ. ಆದರೆ ಸೊಲೊಮೋನನು ಆಕೆಯನ್ನು ಹೋಗಲು ಬಿಡುವುದಿಲ್ಲ. ಆಕೆಯ ಸೌಂದರ್ಯಕ್ಕೆ ಮಾರುಹೋದ ಅವನು ಅವಳಿಗಾಗಿ ‘ಬೆಳ್ಳಿಯ ತಿರುಪಿನ ಜಡೆ ಬಂಗಾರಗಳನ್ನು ಮಾಡಿಸಿ’ ಕೊಡುತ್ತೇನೆಂದು ಆಣೆಯಿಡುತ್ತಾನೆ. ಆದರೆ ಆಕೆಯೋ ಇದಕ್ಕೆ ಮರುಳಾಗುವುದಿಲ್ಲ. ಇತ್ತ ಕುರುಬ ಹುಡುಗನು ಆಕೆಯನ್ನು ಹುಡುಕುತ್ತಾ ಸೊಲೊಮೋನನ ಪಾಳೆಯವನ್ನು ಪ್ರವೇಶಿಸುತ್ತಾನೆ. ಅವಳನ್ನು ಕಂಡಕೂಡಲೇ ಆನಂದತುಂದಿಲನಾಗಿ ಅವನು ಉದ್ಗರಿಸಿದ್ದು: “ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ!” ಆ ಯುವತಿ ಅಂತಃಪುರದ ಸ್ತ್ರೀಯರಿಂದ ಒಂದು ಪ್ರಮಾಣಮಾಡಿಸುತ್ತಾಳೆ. ಆಕೆ ಅನ್ನುವುದು; ‘ಉಚಿತಕಾಲಕ್ಕೆ ಮುಂಚೆ [ನನ್ನಲ್ಲಿ] ಪ್ರೀತಿಯನ್ನು ಹುಟ್ಟಿಸಿ ಬೆಳೆಸದಿರಿ.’​—⁠ಪರಮ ಗೀತ 1:8-11, 15; 2:7; 3:⁠5.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:​2, 3​—⁠ಕುರುಬ ಹುಡುಗನ ಲಾಲನೆಗಳ ನೆನಪು ದ್ರಾಕ್ಷಾರಸಕ್ಕಿಂತ ಮೇಲು, ಅವನ ಹೆಸರು ತೈಲದ ಸುಗಂಧದಂತಿದೆ ಏಕೆ? ದ್ರಾಕ್ಷಾರಸವು ಹೇಗೆ ಒಬ್ಬನಿಗೆ ಹೃದಯಾನಂದವನ್ನು ಉಂಟುಮಾಡುತ್ತದೊ ಮತ್ತು ತಲೆಗೆ ತೈಲವೆಷ್ಟು ಹಿತಕರವೊ ಹಾಗೆಯೇ ಕುರುಬ ಹುಡುಗನ ಹೆಸರು, ಅವನ ಪ್ರೀತಿಯ ಸವಿನೆನಪು ತರುಣಿಯನ್ನು ಬಲಪಡಿಸಿ ಸಂತೈಸಿದವು. (ಕೀರ್ತನೆ 23:5; 104:15) ತದ್ರೀತಿಯಲ್ಲಿ, ಸತ್ಯ ಕ್ರೈಸ್ತರು ಅದರಲ್ಲೂ ಅಭಿಷಿಕ್ತ ವರ್ಗದವರು ತಮ್ಮೆಡೆಗೆ ಯೇಸು ಕ್ರಿಸ್ತನು ತೋರಿಸಿದ ಪ್ರೀತಿಯನ್ನು ಜ್ಞಾಪಿಸಿಕೊಳ್ಳುವಾಗ ಬಲಗೊಂಡು ಉತ್ತೇಜನಗೊಳ್ಳುತ್ತಾರೆ.

1:​5​—⁠ಹಳ್ಳಿ ಹುಡುಗಿಯು ತನ್ನ ಕಪ್ಪುಬಣ್ಣವು “ಕೇದಾರಿನ ಗುಡಾರಗಳಂತೆ” ಇದೆಯೆಂದು ವರ್ಣಿಸುವುದೇಕೆ? ಮೇಕೆಕೂದಲಿನ ನೇಯ್ದ ದುಪ್ಪಳದ ಉಪಯೋಗವು ಅನೇಕ. (ಅರಣ್ಯಕಾಂಡ 31:20) ಉದಾಹರಣೆಗೆ, “ಆಡು ಕೂದಲಿನ” ಬಟ್ಟೆಗಳನ್ನು “ಗುಡಾರದ ಮೇಲೆ ಹೊದಿಸುವದಕ್ಕಾಗಿ” ಉಪಯೋಗಿಸಲಾಗುತಿತ್ತು. (ವಿಮೋಚನಕಾಂಡ 26:⁠7) ಬೆಡುಇನ್‌ರ ಗುಡಾರಗಳಲ್ಲಿ ಇಂದಿಗೂ ಇರುವಂತೆ, ಕೇದಾರಿನ ಗುಡಾರಗಳು ಹೆಚ್ಚುಕಡಿಮೆ ಕಪ್ಪುಬಣ್ಣದ ಮೇಕೆಕೂದಲುಗಳಿಂದ ನಿರ್ಮಿಸಲಾಗುತ್ತಿದ್ದವು.

1:​15​—⁠“ನಿನ್ನ ನೇತ್ರಗಳು ಪಾರಿವಾಳಗಳಂತಿವೆ” ಎಂದು ಕುರುಬ ಹುಡುಗನು ಹೇಳುವುದರ ಅರ್ಥವೇನು? ತನ್ನ ಪ್ರಿಯಳ ನೇತ್ರಗಳು ಪಾರಿವಾಳಗಳ ಕಣ್ಣುಗಳಂತೆ ಸೌಮ್ಯವಾಗಿಯೂ ಕೋಮಲವಾಗಿಯೂ ಕಾಣುತ್ತಿವೆಯೆಂದು ಕುರುಬ ಹುಡುಗನು ಹೇಳುತ್ತಿದ್ದಾನೆ.

2:7; 3:​5​—⁠ಅಂತಃಪುರದ ಸ್ತ್ರೀಯರನ್ನು “ಅಡವಿಯ ಹುಲ್ಲೆಗಳ ಮೇಲೆಯೂ ಹರಿಣಿಗಳ ಮೇಲೆಯೂ” ಪ್ರಮಾಣಮಾಡಿಸುವುದು ಯಾಕೆ? ಹುಲ್ಲೆಗಳು ಮತ್ತು ಹರಿಣಿಗಳು ತಮ್ಮ ಮೋಹಕ ಲಾವಣ್ಯಕ್ಕೆ ಹೆಸರುವಾಸಿಯಾಗಿವೆ. ಆದುದರಿಂದ, ಅಂತಃಪುರದ ಸ್ತ್ರೀಯರು ತನ್ನಲ್ಲಿ ಪ್ರೀತಿಯನ್ನು ಹುಟ್ಟಿಸಿ ಬೆಳೆಸಲು ಪ್ರಯತ್ನಿಸುವುದಿಲ್ಲವೆಂದು ಮನಮೋಹಕ ಸೌಂದರ್ಯವುಳ್ಳ ಎಲ್ಲವುಗಳ ಹೆಸರಿನಲ್ಲಿ ಪ್ರಮಾಣಮಾಡುವಂತೆ ಶೂಲಮಿನ ತರುಣಿಯು ಕೇಳಿಕೊಳ್ಳುತ್ತಿದ್ದಾಳೆ.

ನಮಗಾಗಿರುವ ಪಾಠಗಳು:

1:2; 2:⁠6. ಪ್ರೇಮಿಸುತ್ತಿರುವಾಗ ನಿರ್ಮಲವಾದ ಒಲವಿನ ಸಿಹಿಮಾತುಗಳನ್ನಾಡುವುದು ಯೋಗ್ಯವಾಗಿರಬಹುದು. ಆದರೆ ಅದು ಲೈಂಗಿಕ ಅನೈತಿಕತೆಗೆ ದೂಡಬಲ್ಲ ಕಾಮೋದ್ರೇಕದ ಅಶುದ್ಧ ಮಾತಾಗಿರದೆ, ಯಥಾರ್ಥ ಪ್ರೀತಿಯ ಅಭಿವ್ಯಕ್ತಿಯಾಗಿರುವಂತೆ ಜೋಡಿಗಳು ಜಾಗ್ರತೆವಹಿಸಬೇಕು.​—⁠ಗಲಾತ್ಯ 5:19.

1:6; 2:​10-15. ಶೂಲಮಿನ ಹುಡುಗಿಯ ಸಹೋದರರು ತಮ್ಮ ಸಹೋದರಿಯನ್ನು ಅವಳ ನಲ್ಲನೊಂದಿಗೆ ಬೆಟ್ಟದ ಏಕಾಂತ ಸ್ಥಳಕ್ಕೆ ಹೋಗಲು ಅನುಮತಿಸಲಿಲ್ಲ. ಅವರಿಗೆ ಆಕೆಯ ನಡತೆಯ ಬಗ್ಗೆಯಾಗಲಿ ಉದ್ದೇಶದ ಬಗ್ಗೆಯಾಗಲಿ ಯಾವುದೇ ಸಂಶಯ ಇದ್ದದರಿಂದ ಹೀಗೆ ಮಾಡಲಿಲ್ಲ. ಬದಲಿಗೆ, ಪ್ರಲೋಭಿಸಬಲ್ಲ ಸನ್ನಿವೇಶದೊಳಗೆ ಅವಳು ಜಾರಿಬೀಳುವುದನ್ನು ತಡೆಯಲಿಕ್ಕಾಗಿ ಮುಂಜಾಗ್ರತೆವಹಿಸಿದರು. ಇದರಲ್ಲಿ ಪ್ರೇಮಿಸುತ್ತಿರುವ ಜೋಡಿಗಳಿಗೆ ಒಂದು ಪಾಠವಿದೆ. ಅವರಿಬ್ಬರೇ ಏಕಾಂತ ಸ್ಥಳದಲ್ಲಿರುವುದನ್ನು ಅವರು ತಪ್ಪಿಸಬೇಕು.

2:​1-3, 8, 9. ಶೂಲಮಿನವಳು ಸುಂದರಿಯಾಗಿದ್ದರೂ ವಿನಯಶೀಲತೆಯಿಂದ ತನ್ನನ್ನು ‘ಬೈಲಿನ ನೆಲಸಂಪಿಗೆಗೆ’ [ಒಂದು ಸಾಧಾರಣ ಹೂವಿಗೆ] ಹೋಲಿಸುತ್ತಾಳೆ. ಅವಳು ಸುಂದರಿಯೂ ಯೆಹೋವನಿಗೆ ನಂಬಿಗಸ್ತಳೂ ಆಗಿದ್ದರಿಂದ “ಮುಳ್ಳುಗಳ ಮಧ್ಯದಲ್ಲಿನ ತಾವರೆ”ಯಂತಿದ್ದಾಳೆ ಎಂದು ಕುರುಬ ಹುಡುಗನು ನೆನಸಿದನು. ಅವನ ಕುರಿತೇನು? ಸ್ಫುರದ್ರೂಪಿಯಾದ ಅವನು ಆಕೆಯ ಕಣ್ಣಿಗೆ “ಜಿಂಕೆಯಂತೆ” ಕಂಡನು. ಅವನು ಕೂಡ ಯೆಹೋವನಿಗೆ ನಂಬಿಗಸ್ತನೂ ನಿಷ್ಠಾವಂತನೂ ಆಗಿದ್ದಿರಬೇಕು. “ಉದ್ಯಾನ ವೃಕ್ಷಗಳಲ್ಲಿ ಸೇಬು ಹೇಗೋ [ನೆರಳು ಹಾಗೂ ಹಣ್ಣನ್ನು ಕೊಡುವ ಮರದಂತೆ] ಪುರುಷರಲ್ಲಿ ನನ್ನ ಕಾಂತನು ಹಾಗೆಯೇ” ಎಂದು ಆಕೆ ಹೇಳುತ್ತಾಳೆ. ದೇವರಲ್ಲಿ ಭಕ್ತಿ ಮತ್ತು ನಂಬಿಕೆ ಇವು ಬಾಳಸಂಗಾತಿಯಾಗುವ ವ್ಯಕ್ತಿಯಲ್ಲಿ ನೋಡಬೇಕಾದ ಅಪೇಕ್ಷಣಿಯ ಗುಣಗಳಲ್ಲವೊ?

2:7; 3:⁠5. ಹಳ್ಳಿ ಹುಡುಗಿಗೆ ಸೊಲೊಮೋನನ ಮೇಲೆ ಪ್ರಣಯಭಾವ ಬರಲಿಲ್ಲ. ತನ್ನಿನಿಯನಾದ ಕುರುಬ ಹುಡುಗನನ್ನು ಬಿಟ್ಟು ಬೇರೆ ಯಾರ ಮೇಲೂ ತನಗೆ ಪ್ರೀತಿ ಹುಟ್ಟುವಂತೆ ಮಾಡಲು ಪ್ರಯತ್ನಿಸಬಾರದೆಂದು ಸಹ ಆಕೆ ಅಂತಃಪುರದ ಸ್ತ್ರೀಯರಿಂದ ಪ್ರಮಾಣಮಾಡಿಸಿದಳು. ಯಾವನೊ ಒಬ್ಬನ ಮೇಲೆ ಪ್ರಣಯಪ್ರೇಮ ಉಂಟಾಗುವ ಸಾಧ್ಯತೆಯು ಇಲ್ಲ ಅದು ಯೋಗ್ಯವು ಅಲ್ಲ. ಮದುವೆಯಾಗ ಬಯಸುವ ಅವಿವಾಹಿತ ಕ್ರೈಸ್ತರು ಯೆಹೋವನ ನಿಷ್ಠಾವಂತ ಸೇವಕರನ್ನು ಮಾತ್ರ ವಿವಾಹವಾಗಬೇಕು.​—⁠1 ಕೊರಿಂಥ 7:39.

“ಶೂಲಮ್‌ ಊರಿನವಳಾದ ನನ್ನನ್ನು ಏಕೆ ನೋಡಬೇಕು!”

(ಪರಮ ಗೀತ 3:​6–8:⁠4)

“ಧೂಪಿಸಿದ ಧೂಮಸ್ತಂಭಗಳಂತೆ ಅರಣ್ಯದಿಂದ ಬರುವ ಮೆರವಣಿಗೆ ಯಾರದು?” (ಪರಮ ಗೀತ 3:⁠6) ಯೆರೂಸಲೇಮಿನ ಸ್ತ್ರೀಯರು ಹೊರಗೆ ಬಂದು ನೋಡುವಾಗ ಕಾಣುವುದೇನು? ಇಗೋ, ಸೊಲೊಮೋನನು ಮತ್ತವನ ಸೇವಕರು ಪಟ್ಟಣಕ್ಕೆ ಹಿಂದಿರುಗುತ್ತಿದ್ದಾರೆ! ಅರಸನು ತನ್ನೊಂದಿಗೆ ಶೂಲಮಿನ ತರುಣಿಯನ್ನೂ ಕರೆದುಕೊಂಡು ಬಂದಿದ್ದಾನೆ.

ಕುರುಬ ಹುಡುಗನೂ ಆ ತರುಣಿಯನ್ನು ಹಿಂಬಾಲಿಸಿ ಬರುತ್ತಾನೆ. ಆಕೆಯನ್ನು ಭೇಟಿಯಾಗಿ ತನ್ನ ಪ್ರೀತಿಯ ಭರವಸೆಯನ್ನು ಕೊಡುತ್ತಾನೆ. ಆಗ ಪಟ್ಟಣದಿಂದ ಹೊರಟುಹೋಗುವ ತನ್ನಿಚ್ಛೆಯನ್ನು ಅವಳು ಈ ರೀತಿ ವ್ಯಕ್ತಪಡಿಸುತ್ತಾಳೆ: “ನಾನು ರಕ್ತಬೋಳದ ಬೆಟ್ಟಕ್ಕೂ ಧೂಪದ ಗುಡ್ಡಕ್ಕೂ ತೆರಳಿ ಹಗಲು ತಂಪಾಗಿ ನೆರಳು ಇಳಿಯುವ ತನಕ ಚರಿಸುತ್ತಿರುವೆನು.” ಅವಳು ಆ ಕುರುಬನನ್ನು ಆಮಂತ್ರಿಸುತ್ತಾ “ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ” ಎಂದು ಹೇಳುತ್ತಾಳೆ. ಅದಕ್ಕವನು ಉತ್ತರಿಸುವುದು: “ಪ್ರಿಯಳೇ, ವಧುವೇ, ಇಗೋ ನನ್ನ ತೋಟದೊಳಗೆ ಬಂದೆನು.” ಯೆರೂಸಲೇಮಿನ ನಾರಿಯರು ಅವರಿಬ್ಬರಿಗೆ “ಮಿತ್ರರೇ, ಊಟಮಾಡಿರಿ; ಪ್ರಿಯರೇ, ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ” ಎಂದು ಹೇಳುತ್ತಾರೆ.​—⁠ಪರಮ ಗೀತ 4:6, 16; 5:⁠1.

ಶೂಲಮಿನ ತರುಣಿಯು ಅಂತಃಪುರದ ಸ್ತ್ರೀಯರಿಗೆ ತಾನು ಕಂಡ ಕನಸೊಂದನ್ನು ವಿವರಿಸುತ್ತಾಳೆ. ಬಳಿಕ, “ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆ” ಎಂದು ತಿಳಿಸುತ್ತಾಳೆ. ಇದನ್ನು ಕೇಳಿ ಅವರು “[ಇತರರ] ಕಾಂತರಿಗಿಂತ ನಿನ್ನ ಕಾಂತನಲ್ಲಿ ಅತಿಶಯವೇನು?” ಎಂದು ಆಕೆಯನ್ನು ಪ್ರಶ್ನಿಸುತ್ತಾರೆ. ಇದಕ್ಕವಳು, “ನನ್ನ ನಲ್ಲನು ಬಿಳುಪು ಕೆಂಪು ಬಣ್ಣವುಳ್ಳವನು; ಅವನು ಹತ್ತುಸಾವಿರ ಜನರಲ್ಲಿ ಧ್ವಜಪ್ರಾಯನು” ಎಂದು ಮರುತ್ತರಿಸುತ್ತಾಳೆ. (ಪರಮ ಗೀತ 5:2-10) ಅವಳನ್ನು ಸೊಲೊಮೋನನು ಹೊಗಳಿ ಅಟ್ಟಕ್ಕೇರಿಸಲು ಪ್ರಯತ್ನಿಸುತ್ತಾನೆ. ಆದರೂ ಅವಳು ದೀನಳಾಗಿ ಪ್ರತಿಕ್ರಿಯಿಸುವುದು: “ಶೂಲಮ್‌ ಊರಿನವಳಾದ ನನ್ನನ್ನು ಏಕೆ ನೋಡಬೇಕು!” (ಪರಮ ಗೀತ 6:4-13) ಆಕೆಯ ಪ್ರೇಮವನ್ನು ಗೆಲ್ಲಲು ಇದನ್ನೊಂದು ಸುವರ್ಣವಕಾಶವಾಗಿ ಭಾವಿಸಿದ ಅರಸನು ಆಕೆಯ ಮೇಲೆ ಇನ್ನಷ್ಟು ಹೊಗಳಿಕೆಯ ಸುರಿಮಳೆಗೈಯುತ್ತಾನೆ. ಆದರೆ ಆ ತರುಣಿಯೊ ಕುರುಬ ಹುಡುಗನ ಮೇಲಿರುವ ತನ್ನ ಪ್ರೀತಿಯನ್ನು ಬಿಟ್ಟುಕೊಡುವುದೇ ಇಲ್ಲ. ಕೊನೆಗೆ ಸೊಲೊಮೋನನೇ ಆಕೆಯು ಮನೆಗೆ ಹೋಗುವಂತೆ ಬಿಟ್ಟುಕೊಡುತ್ತಾನೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

4:1; 6:​5​—⁠ತರುಣಿಯ ಕೂದಲನ್ನು ಏಕೆ ‘ಆಡುಮಂದೆಗೆ’ ಹೋಲಿಸಲಾಗಿದೆ? ಆಡಿನ ಕಪ್ಪು ಬಣ್ಣದ ಉಣ್ಣೆಯಂತೆ ಆಕೆಯ ಕೂದಲು ಸೊಂಪಾಗಿ ಬೆಳೆದು ಪಳಪಳ ಹೊಳೆಯುತಿತ್ತು ಎಂಬುದನ್ನು ಈ ಹೋಲಿಕೆಯು ಸೂಚಿಸುತ್ತಿದೆ.

4:​11​—⁠ಶೂಲಮಿನವಳ ‘ತುಟಿಗಳು ಜೇನುಗರೆಯುವುದು,’ ‘ಜೇನೂ ಹಾಲೂ ನಾಲಿಗೆಯೊಳಗಿರುವುದರ’ ವಿಶೇಷತೆಯೇನು? ಈ ಹೋಲಿಕೆ ಹಾಗೂ ಹಾಲೂ ಜೇನೂ ತರುಣಿಯ ನಾಲಿಗೆಯೊಳಗಿರುವುದು, ಶೂಲಮಿನವಳಾಡುವ ಮಾತುಗಳು ಸೌಜನ್ಯವಾಗಿಯೂ ಇಂಪಾಗಿಯೂ ಇವೆ ಎಂಬುದಕ್ಕೆ ಒತ್ತು ನೀಡುತ್ತಿದೆ.

5:​12​—⁠‘ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುತ್ತಲೂ ಕ್ಷೀರದಲ್ಲಿ ಸ್ನಾನಮಾಡುತ್ತಲೂ ಇರುವ ಪಾರಿವಾಳಗಳಂತಿವೆ’ ಎಂಬುದರ ಅರ್ಥವೇನು? ತರುಣಿಯು ತನ್ನಿನಿಯನ ಸುಂದರವಾದ ನೇತ್ರಗಳನ್ನು ವರ್ಣಿಸುತ್ತಿದ್ದಾಳೆ. ಬಹುಶಃ ಗಾಢವಾದ ಕಣ್ಪೊರೆಯನ್ನು ಅಚ್ಚ ಬಿಳಿ ಬಣ್ಣವು ಸುತ್ತುವರಿದಿರುವುದು ಹಾಲಿನ ತೊರೆಯಲ್ಲಿ ಮೀಯುತ್ತಿರುವ ಬೂದುಬಣ್ಣದ ಪಾರಿವಾಳದಂತಿದೆ ಎಂದು ಆಕೆಯು ಕಾವ್ಯಾತ್ಮಕವಾಗಿ ಹೇಳುತ್ತಿದ್ದಾಳೆ.

5:​14, 15​—⁠ಕುರುಬನ ಕೈಕಾಲುಗಳ ವರ್ಣನೆ ಯಾಕೆ ಹೀಗಿದೆ? ತರುಣಿಯು ಕುರುಬನ ಬೆರಳುಗಳನ್ನು ಬಂಗಾರದ ದಿಂಡಿಗೂ ಉಗುರುಗಳನ್ನು ಪಚ್ಚೆ ಕಲ್ಲಿಗೂ ಹೋಲಿಸುತ್ತಿದ್ದಾಳೆ. ಅವನ ಕಾಲುಗಳು ಸುದೃಢವಾಗಿಯೂ ಸುಂದರವಾಗಿಯೂ ಇದ್ದದರಿಂದ ಅದನ್ನು ‘ಚಂದ್ರಕಾಂತ ಸ್ತಂಭಗಳಿಗೆ’ ಹೋಲಿಸುತ್ತಾಳೆ.

6:​4​—⁠ತರುಣಿಯನ್ನು “ತಿರ್ಚದಂತೆ ಸುಂದರಿ” ಎಂದು ಏಕೆ ಹೋಲಿಸಲಾಗಿದೆ? ಕಾನಾನ್ಯರ ಈ ತಿರ್ಚ ಪಟ್ಟಣವನ್ನು ಯೆಹೋಶುವನು ಸೆರೆಹಿಡಿದನು. ಈ ಪಟ್ಟಣವು ಸೊಲೊಮೋನನ ಸಮಯಾನಂತರ ಹತ್ತು ಕುಲಗಳ ಉತ್ತರದ ಇಸ್ರಾಯೇಲ್‌ ರಾಜ್ಯದ ಮೊಟ್ಟಮೊದಲ ರಾಜ್ಯಧಾನಿಯಾಯಿತು. (ಯೆಹೋಶುವ 12:7, 24; 1 ಅರಸುಗಳು 16:5, 6, 8, 15) “ಈ ಪಟ್ಟಣವು ಪ್ರಾಯಶಃ ತುಂಬ ಸುಂದರವಾಗಿದ್ದಿರಲೇಬೇಕು, ಅದಕ್ಕಾಗಿಯೇ ಅದನ್ನು ಇಲ್ಲಿ ಉಲ್ಲೇಖಿಸಲಾಗಿದೆ” ಎಂದು ಒಂದು ಪುಸ್ತಕವು ತಿಳಿಸುತ್ತದೆ.

6:​13​—⁠“ಎದುರುಬದರಿನ ನಾಟ್ಯ” ಎಂದರೇನು? ಈ ಹೇಳಿಕೆಯನ್ನು “ಮಹನಯಿಮ್‌ನ ನಾಟ್ಯ” ಎಂದು ಕೂಡ ಹೇಳಸಾಧ್ಯವಿದೆ. ಮಹನಯಿಮ್‌ ಎಂಬ ಹೆಸರಿನ ಪಟ್ಟಣವು ಯೊರ್ದನ್‌ ನದಿಯ ಪೂರ್ವದಿಕ್ಕಿನಲ್ಲಿ ಯಬ್ಬೋಕ್‌ ತೊರೆ ಕಣಿವೆಯ ಸಮೀಪದಲ್ಲಿತ್ತು. (ಆದಿಕಾಂಡ 32:2, 22; 2 ಸಮುವೇಲ 2:29) “ಎದುರುಬದುರಿನ ನಾಟ್ಯ” ಎಂದು ಹೇಳುವಾಗ ಈ ಪಟ್ಟಣದಲ್ಲಿನ ಹಬ್ಬದ ಸಮಯದಲ್ಲಿ ನಡೆಯುತ್ತಿದ್ದ ಒಂದು ನಿರ್ದಿಷ್ಟ ನಾಟ್ಯಕ್ಕೆ ಸೂಚಿಸುತ್ತಿರಬಹುದು.

7:​4​—⁠ಶೂಲಮಿನವಳ ಕಂಠ ಅಥವಾ ಕೊರಳು “ದಂತದ ಗೋಪುರ”ದಂತಿದೆ ಎಂದು ಸೊಲೊಮೋನನು ಏಕೆ ಹೇಳುತ್ತಿದ್ದಾನೆ? “ನಿನ್ನ ಕಂಠವು . . . ದಾವೀದನ ಬುರುಜಿನ ಹಾಗಿದೆ” ಎಂಬ ಮೆಚ್ಚುಗೆಯ ಮಾತುಗಳನ್ನು ಈ ಮುಂಚೆ ಶೂಲಮಿನ ಹುಡುಗಿಗೆ ಹೇಳಲಾಗಿತ್ತು. (ಪರಮ ಗೀತ 4:4) ಒಂದು ಬುರುಜು ಅಥವಾ ಗೋಪುರವು ತೆಳ್ಳಗೆ ಉದ್ದವಾಗಿರುತ್ತದೆ ಮತ್ತು ದಂತವು ನಯವಾಗಿರುತ್ತದೆ. ತೆಳ್ಳಗಿನ ನುಣುಪಾಗಿರುವ ಹುಡುಗಿಯ ಕೊರಳನ್ನು ಕಂಡು ಸೊಲೊಮೋನನು ಮಂತ್ರಮುಗ್ಧನಾದನು.

ನಮಗಾಗಿರುವ ಪಾಠಗಳು:

4:​7. ಸೊಲೊಮೋನನ ಮೋಹಕ್ಕೆ ಒಳಗಾಗದಿರುವ ಮೂಲಕ ಶೂಲಮಿನವಳು ಅಪರಿಪೂರ್ಣಳಾಗಿದ್ದರೂ ತನ್ನ ನೈತಿಕತೆಯನ್ನು ಬಿಟ್ಟುಕೊಡಲಿಲ್ಲ. ಈ ನೈತಿಕ ಬಲವು ಆಕೆಯ ಚೆಲುವಿಗೆ ಇನ್ನಷ್ಟು ಮೆರಗು ನೀಡಿತು. ಕ್ರೈಸ್ತ ಸ್ತ್ರೀಯರು ಸಹ ಹೀಗೆಯೇ ಇರಬೇಕು.

4:12. ಭದ್ರವಾದ ಬೇಲಿ ಅಥವಾ ಗೋಡೆಯಿಂದ ಸುತ್ತವರಿದಿರುವ ರಮಣೀಯವಾದ ಉದ್ಯಾನವೊಂದನ್ನು ಬೀಗ ಹಾಕಿರುವ ಪ್ರವೇಶದ್ವಾರದಿಂದ ಮಾತ್ರವೇ ಪ್ರವೇಶಿಸುವುದು ಸಾಧ್ಯ. ತದ್ರೀತಿಯಲ್ಲಿ, ಶೂಲಮಿನ ತರುಣಿಯು ತನ್ನ ಕೋಮಲ ಪ್ರೀತಿಯನ್ನು ಕೈಹಿಡಿಯುವ ಭಾವಿ ಗಂಡನಿಗೆ ಮಾತ್ರ ದೊರಕುವಂತೆ ಮೀಸಲಾಗಿಟ್ಟಳು. ಅವಿವಾಹಿತ ಕ್ರೈಸ್ತ ಸ್ತ್ರೀಪುರುಷರಿಗೆ ಇದೆಂಥ ಉತ್ತಮ ಪಾಠ!

“ಯೆಹೋವನ ರೋಷಾಗ್ನಿ”

(ಪರಮ ಗೀತ 8:​5-14)

ಶೂಲಮಿನವಳು ಮನೆಗೆ ಹಿಂತಿರುಗುವುದನ್ನು ಕಂಡ ಅವಳ ಸಹೋದರರು “ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು?” ಎಂದು ಕೇಳುತ್ತಾರೆ. ಸ್ವಲ್ಪ ಹಿಂದೆ ಅವರಲ್ಲೊಬ್ಬನು “ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು, ಬಾಗಿಲಾದರೆ ದೇವದಾರು ಹಲಿಗೆಗಳಿಂದ ಭದ್ರಪಡಿಸುವೆವು” ಎಂದು ಹೇಳಿದ್ದನು. ಈಗಲಾದರೋ ಶೂಲಮಿನವಳ ಅಚಲ ಪ್ರೀತಿಯು ಪರೀಕ್ಷಿಸಲ್ಪಟ್ಟಿತು. ಅವಳದು ನಿಷ್ಠಾವಂತ ಪ್ರೀತಿಯೆಂದು ನಿರೂಪಿಸಲ್ಪಟ್ಟಿತು. ಅವಳು ಹೇಳುವುದು: “ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು, ಹೀಗಿದ್ದು ಸೊಲೊಮೋನನ ದೃಷ್ಟಿಯಲ್ಲಿ [ಜಯಶಾಲಿನಿಯಾಗಿ] ಸಮಾಧಾನಹೊಂದಿದೆನು.”​—⁠ಪರಮ ಗೀತ 8:5, 9, 10.

ನಿಜ ಪ್ರೀತಿಯು ‘ಯೆಹೋವನ ರೋಷಾಗ್ನಿಯಾಗಿದೆ.’ ಯಾಕೆ? ಯಾಕೆಂದರೆ ಅಂಥ ಪ್ರೀತಿಯು ಯೆಹೋವನಿಂದ ಬಂದಿದೆ. ನಮ್ಮಲ್ಲಿ ಪ್ರೀತಿಸುವ ಸಾಮರ್ಥ್ಯವನ್ನು ನಾಟಿಸಿದವನು ಆತನೇ. ಇದು ನಂದಿಹೋಗದ ಧಗಧಗಿಸುವ ಜ್ವಾಲೆಯಾಗಿದೆ. ಸ್ತ್ರೀಪುರುಷರ ನಡುವಿನ ಈ ಪ್ರೀತಿಯು “ಮರಣದಷ್ಟು ಬಲವಾಗಿದೆ” ಎಂದು ಪರಮ ಗೀತ ಪುಸ್ತಕವು ಸೊಗಸಾಗಿ ಚಿತ್ರಿಸಿದೆ.​—⁠ಪರಮ ಗೀತ 8:⁠6.

ಸೊಲೊಮೋನನ ಶ್ರೇಷ್ಠ ಗೀತೆಯು ಯೇಸು ಕ್ರಿಸ್ತನು ಮತ್ತು ಅವನ ಸ್ವರ್ಗೀಯ ‘ಮದಲಗಿತ್ತಿಯ’ ಸದಸ್ಯರ ನಡುವಿನ ಆತ್ಮೀಯತೆಯ ಮೇಲೆ ಬೆಳಕನ್ನು ಚೆಲ್ಲುತ್ತದೆ. (ಪ್ರಕಟನೆ 21:2, 9) ಅಭಿಷಿಕ್ತ ಕ್ರೈಸ್ತರ ಮೇಲೆ ಯೇಸುವಿಗಿರುವ ಪ್ರೀತಿಯು ಗಂಡುಹೆಣ್ಣಿನ ನಡುವಿರುವ ಯಾವುದೇ ಪ್ರೀತಿಗಿಂತಲೂ ಮಿಗಿಲಾಗಿದೆ. ಮದಲಗಿತ್ತಿ ವರ್ಗದವರೂ ತಮ್ಮ ಗಾಢ ಪ್ರೀತಿಯಲ್ಲಿ ಅಚಲವಾಗಿದ್ದಾರೆ. ಯೇಸು ಪ್ರೀತಿಯಿಂದ ತನ್ನ ಜೀವವನ್ನು ‘ಬೇರೆ ಕುರಿಗಳಿಗೋಸ್ಕರವೂ’ ಕೊಟ್ಟಿದ್ದಾನೆ. (ಯೋಹಾನ 10:16) ಆದುದರಿಂದ, ಸತ್ಯಾರಾಧಕರೆಲ್ಲರು ಶೂಲಮಿನವಳ ಅಚಲವಾದ ಪ್ರೀತಿ ಮತ್ತು ಭಕ್ತಿಯ ಮಾದರಿಯನ್ನು ಅನುಸರಿಸಸಾಧ್ಯವಿದೆ. (w06 11/15)

[ಪುಟ 4ರಲ್ಲಿರುವ ಚಿತ್ರ]

ವಿವಾಹ ಸಂಗಾತಿಯಲ್ಲಿ ಏನನ್ನು ನೋಡಬೇಕೆಂದು ಪರಮ ಗೀತ ಪುಸ್ತಕವು ನಮಗೆ ಕಲಿಸುತ್ತದೆ?