ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಶಿಸ್ತನ್ನು ಸದಾ ಅಂಗೀಕರಿಸಿರಿ

ಯೆಹೋವನ ಶಿಸ್ತನ್ನು ಸದಾ ಅಂಗೀಕರಿಸಿರಿ

ಯೆಹೋವನ ಶಿಸ್ತನ್ನು ಸದಾ ಅಂಗೀಕರಿಸಿರಿ

“ಯೆಹೋವನ ಶಿಕ್ಷೆಯನ್ನು [“ಶಿಸ್ತನ್ನು,” NW] ತಾತ್ಸಾರಮಾಡಬೇಡ.”​—⁠ಜ್ಞಾನೋಕ್ತಿ 3:11.

ದೇವರು ನೀಡುವ ಶಿಸ್ತನ್ನು ಅಂಗೀಕರಿಸುವಂತೆ ಪುರಾತನ ಇಸ್ರಾಯೇಲಿನ ಅರಸ ಸೊಲೊಮೋನನು ನಮ್ಮಲ್ಲಿ ಪ್ರತಿಯೊಬ್ಬರನ್ನು ಉತ್ತೇಜಿಸುತ್ತಾನೆ. ಅವನು ಹೇಳುವುದು: “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” (ಜ್ಞಾನೋಕ್ತಿ 3:​11, 12) ಹೌದು, ನಿಮ್ಮ ಸ್ವರ್ಗೀಯ ತಂದೆ ನಿಮಗೆ ಶಿಸ್ತನ್ನು ನೀಡುವುದು ನಿಮ್ಮನ್ನು ಪ್ರೀತಿಸುವುದರಿಂದಲೇ.

2 “ಶಿಸ್ತು” ಎಂಬುದು ಶಿಕ್ಷೆ, ತಿದ್ದುಪಾಟು, ಶಿಕ್ಷಣ ಮತ್ತು ಕಲಿಕೆಯನ್ನು ಸೂಚಿಸುತ್ತದೆ. “ಯಾವ ಶಿಕ್ಷೆಯಾದರೂ [“ಶಿಸ್ತು,” NW] ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ [“ಶಿಸ್ತನ್ನು,” NW] ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂದು ಪೌಲನು ಬರೆದನು. (ಇಬ್ರಿಯ 12:11) ದೈವಿಕ ಶಿಸ್ತನ್ನು ಅಂಗೀಕರಿಸಿ ಅನ್ವಯಿಸುವುದು ನೀತಿಮಾರ್ಗವನ್ನು ಬೆನ್ನಟ್ಟುವಂತೆ ನಿಮಗೆ ಸಹಾಯಮಾಡುತ್ತದೆ. ಇದು ಪರಿಶುದ್ಧ ದೇವರಾದ ಯೆಹೋವನಿಗೆ ನೀವು ಹೆಚ್ಚು ಆಪ್ತರಾಗುವಂತೆಯೂ ಮಾಡುವುದು. (ಕೀರ್ತನೆ 99:⁠5) ನಿಮಗೆ ತಿದ್ದುಪಾಟು ಜೊತೆವಿಶ್ವಾಸಿಗಳ ಮೂಲಕವೊ, ಕ್ರೈಸ್ತ ಕೂಟಗಳಲ್ಲಿ ಕಲಿಯುವ ವಿಷಯಗಳ ಮೂಲಕವೊ, ದೇವರ ವಾಕ್ಯ ಮತ್ತು ‘ನಂಬಿಗಸ್ತ ಮನೆವಾರ್ತೆಯವನು’ ನೀಡುವ ಪ್ರಕಾಶನಗಳ ನಿಮ್ಮ ಅಧ್ಯಯನದ ಮೂಲಕವೊ ದೊರೆಯಬಹುದು. (ಲೂಕ 12:​42-44) ನೀವು ಹೊಂದಾಣಿಕೆ ಮಾಡಬೇಕಾಗಿರುವ ಯಾವುದಾದರೂ ವಿಷಯವು ನಿಮ್ಮ ಗಮನಕ್ಕೆ ತರಲ್ಪಡುವಾಗ ಅದಕ್ಕಾಗಿ ನೀವೆಷ್ಟು ಆಭಾರಿಗಳಾಗಿರಬಲ್ಲಿರಿ! ಆದರೆ ಗಂಭೀರ ಪಾಪ ಮಾಡಲ್ಪಟ್ಟಾಗ ಯಾವ ಶಿಸ್ತಿನ ಅಗತ್ಯವಿದ್ದೀತು?

ಕೆಲವರು ಬಹಿಷ್ಕರಿಸಲ್ಪಡುವುದೇಕೆ?

3 ದೇವರ ಸೇವಕರು ಬೈಬಲನ್ನು ಮತ್ತು ಕ್ರೈಸ್ತ ಸಾಹಿತ್ಯಗಳನ್ನು ಅಧ್ಯಯನಮಾಡುತ್ತಾರೆ. ಅವರ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಯೆಹೋವನ ಮಟ್ಟಗಳ ಕುರಿತು ಚರ್ಚಿಸಲಾಗುತ್ತದೆ. ಆದಕಾರಣ, ಯೆಹೋವನು ತಮ್ಮಿಂದ ಏನನ್ನು ಬಯಸುತ್ತಾನೆಂಬುದನ್ನು ಕ್ರೈಸರು ಚೆನ್ನಾಗಿ ಅರಿತವರಾಗಿದ್ದಾರೆ. ಸಭಾಸದಸ್ಯನೊಬ್ಬನು ಪಶ್ಚಾತ್ತಾಪಪಡದೆ ಗುರುತರವಾದ ಪಾಪಮಾಡುವಲ್ಲಿ ಮಾತ್ರ ಅವನನ್ನು ಬಹಿಷ್ಕರಿಸಲಾಗುತ್ತದೆ.

4 ಬಹಿಷ್ಕರಿಸಲ್ಪಟ್ಟ ಒಬ್ಬ ವ್ಯಕ್ತಿಯ ಕುರಿತು ಬೈಬಲಿನಲ್ಲಿರುವ ಉದಾಹರಣೆಯೊಂದನ್ನು ಪರಿಗಣಿಸಿರಿ. ಕೊರಿಂಥದಲ್ಲಿದ್ದ ಸಭೆಯಲ್ಲಿ ‘ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದನು, ಅಂಥ ಜಾರತ್ವವು ಅನ್ಯಜನರಲ್ಲಿಯೂ ಇರಲಿಲ್ಲ.’ ಆ ಸಭೆಯು ಅದನ್ನು ಕಂಡುಕಾಣದಂತಿತ್ತು. “ಅಂತಹ ಮನುಷ್ಯನನ್ನು ಶರೀರದ ನಾಶನಕ್ಕಾಗಿ ಸೈತಾನನಿಗೆ ಒಪ್ಪಿಸಿ ಕೊಡಬೇಕು. ಆಗ ಕರ್ತನ ದಿನದಲ್ಲಿ ಆತ್ಮವು ರಕ್ಷಣೆ ಹೊಂದೀತು” ಎಂದು ಪೌಲನು ಕೊರಿಂಥದವರಿಗೆ ಒತ್ತಿಹೇಳಿದನು. (1 ಕೊರಿಂಥ 5:​1-5) ಆ ಪಾಪಿ ಬಹಿಷ್ಕೃತನಾಗಿ, ಹೀಗೆ ಸೈತಾನನಿಗೆ ಒಪ್ಪಿಸಲ್ಪಟ್ಟಾಗ ಅವನು ಪುನಃ ಪಿಶಾಚನ ಲೋಕದ ಭಾಗವಾದನು. (1 ಯೋಹಾನ 5:19) ಅವನ ಹೊರಹಾಕುವಿಕೆ ಸಭೆಯಿಂದ ಶಾರೀರಿಕವಾದ ದುಷ್ಪ್ರಭಾವವನ್ನು ತೊಲಗಿಸಿತು ಮತ್ತು ಆ ಸಭೆಯ ದೈವಿಕ “ಆತ್ಮ” ಅಥವಾ ಪ್ರಧಾನ ಮನೋಭಾವವನ್ನು ಉಳಿಸಿತು.​—⁠2 ತಿಮೊಥೆಯ 4:22; 1 ಕೊರಿಂಥ 5:​11-13.

5 ಇದಾಗಿ ಸ್ವಲ್ಪ ಸಮಯದ ಬಳಿಕ ಆ ತಪ್ಪಿತಸ್ಥನನ್ನು ಪುನಸ್ಸ್ಥಾಪಿಸುವಂತೆ ಪೌಲನು ಕೊರಿಂಥದ ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ಏಕೆ? ‘ಸೈತಾನನು ಅವರನ್ನು ವಂಚಿಸಿ ನಷ್ಟಪಡಿಸಬಾರದು’ ಎಂಬ ಉದ್ದೇಶದಿಂದಲೇ ಎಂದನು ಪೌಲನು. ಆ ಪಾಪಿಯು ಪಶ್ಚಾತ್ತಾಪಪಟ್ಟು ತನ್ನ ಜೀವನಶೈಲಿಯನ್ನು ಸರಿಪಡಿಸಿಕೊಂಡನು ಎಂಬುದು ವ್ಯಕ್ತ. (2 ಕೊರಿಂಥ 2:​8-11) ಈಗ ಆ ಪಶ್ಚಾತ್ತಾಪಿಯನ್ನು ಪುನಸ್ಸ್ಥಾಪಿಸಲು ಕೊರಿಂಥದವರು ನಿರಾಕರಿಸುವಲ್ಲಿ ಅವರನ್ನು ಸೈತಾನನು ವಂಚಿಸುತ್ತಿದ್ದನು. ಹೇಗಂದರೆ, ಸೈತಾನನು ಬಯಸಿದಂತೆಯೇ ಅವರು ಸಹ ಕಲ್ಲೆದೆಯವರೂ ಕ್ಷಮಿಸದವರೂ ಆಗಿರುತ್ತಿದ್ದರು. ಆದುದರಿಂದ, ಅವರು ಬೇಗನೆ ಪಶ್ಚಾತ್ತಾಪಪಟ್ಟ ಆ ಮನುಷ್ಯನನ್ನು ‘ಮನ್ನಿಸಿ ಸಂತೈಸಿದರು’ ಎಂಬುದು ಸಂಭವನೀಯ.​—⁠2 ಕೊರಿಂಥ 2:​5-7.

6 ಬಹಿಷ್ಕಾರ ಮಾಡುವುದರ ಪ್ರಯೋಜನವೇನು? ಅದು ಯೆಹೋವನ ಪರಿಶುದ್ಧ ನಾಮಕ್ಕೆ ಕಳಂಕಬಾರದಂತೆ ತಡೆಯುತ್ತದೆ. ಆತನ ಜನರ ಸತ್ಕೀರ್ತಿಯನ್ನು ಕಾಪಾಡುತ್ತದೆ. (1 ಪೇತ್ರ 1:​14-16) ಪಶ್ಚಾತ್ತಾಪಪಡದ ತಪ್ಪಿತಸ್ಥನನ್ನು ಹೊರಹಾಕುವುದರಿಂದ ಸಭೆಯು ದೇವರ ಮಟ್ಟಗಳನ್ನು ಎತ್ತಿಹಿಡಿದು, ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಿ ಉಳಿಸುತ್ತದೆ. ಅದು ಪಶ್ಚಾತ್ತಾಪಪಡದ ವ್ಯಕ್ತಿಗೆ ಸ್ವಸ್ಥಬುದ್ಧಿಯನ್ನೂ ಬರಿಸೀತು.

ಪುನಸ್ಸ್ಥಾಪನೆಗೆ ಪಶ್ಚಾತ್ತಾಪ ಅಗತ್ಯ

7 ಗಂಭೀರ ಪಾಪಮಾಡುವ ಹೆಚ್ಚಿನವರು ನಿಜವಾಗಿ ಪಶ್ಚಾತ್ತಾಪಪಡುತ್ತಾರೆ, ಆದಕಾರಣ ಅವರು ಸಭೆಯಿಂದ ಬಹಿಷ್ಕರಿಸಲ್ಪಡುವುದಿಲ್ಲ. ಆದರೆ ನೈಜ ಪಶ್ಚಾತ್ತಾಪವನ್ನು ತೋರಿಸುವುದು ಕೆಲವರಿಗೆ ಸುಲಭವಾಗಿರುವುದಿಲ್ಲ. ಕೀರ್ತನೆ 32ನ್ನು ರಚಿಸಿದ ದಾವೀದ ರಾಜನನ್ನು ಪರಿಗಣಿಸಿರಿ. ದಾವೀದನು ಪ್ರಾಯಶಃ ಬತ್ಷೆಬೆಯೊಂದಿಗೆ ನಡೆಸಿದ ಗುರುತರವಾದ ಪಾಪಗಳನ್ನು ಸ್ವಲ್ಪ ಸಮಯದ ತನಕ ನಿವೇದನೆ ಮಾಡಲಿಲ್ಲವೆಂದು ಆ ಹಾಡು ತಿಳಿಯಪಡಿಸುತ್ತದೆ. ಇದರ ಪರಿಣಾಮವು ಅವನನ್ನು ಕಡುಬೇಗುದಿಯಿಂದ ನರಳುವಂತೆ ಮಾಡಿತು. ಬೇಸಗೆಯ ರಣಬಿಸಿಲು ಮರದ ತೇವಾಂಶವನ್ನು ಬತ್ತಿಸಿಬಿಡುವಂಥ ರೀತಿಯಲ್ಲಿ ಅದು ಅವನ ಶಕ್ತಿಯನ್ನೆಲ್ಲ ಇಂಗಿಸಿಬಿಟ್ಟಿತು. ದಾವೀದನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ನೊಂದುನರಳಿದನು. ಆದರೆ ಅವನು ‘ತನ್ನ ದ್ರೋಹವನ್ನು ಒಪ್ಪಿಕೊಂಡಾಗ [ಯೆಹೋವನು] ಅವನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟನು.’ (ಕೀರ್ತನೆ 32:​3-5) ಬಳಿಕ ದಾವೀದನು ಹಾಡಿದ್ದು: “ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ . . . ಅವನು ಧನ್ಯನು.” (ಕೀರ್ತನೆ 32:​1, 2) ದೇವರ ಕರುಣೆಯನ್ನು ಅನುಭವಿಸಿದ್ದು ದಾವೀದನಿಗೆ ಅದೆಷ್ಟು ಸಂತೋಷವನ್ನುಂಟುಮಾಡಿತು!

8 ಹಾಗಾದರೆ, ಕರುಣೆ ದೊರೆಯಬೇಕಾದರೆ ಪಾಪಿಯು ಪಶ್ಚಾತ್ತಾಪ ಪಡಲೇಬೇಕು. ಆದರೆ ಪಶ್ಚಾತ್ತಾಪವು ನಾಚಿಕೆಗೆ ಗುರಿಯಾಗುತ್ತೇನೆಂದು ನೆನಸುವುದಾಗಲಿ ತನ್ನ ಪಾಪ ಬಯಲಾಗುವುದೆಂಬ ಭಯವಾಗಲಿ ಅಲ್ಲ. ಪಶ್ಚಾತ್ತಾಪಪಡುವುದರ ಅರ್ಥ ಕೆಟ್ಟ ನಡತೆಯ ಕುರಿತು ವಿಷಾದಪಟ್ಟು ಒಬ್ಬನು ಮನಸ್ಸನ್ನು ಬದಲಾಯಿಸಿಕೊಳ್ಳುವುದಾಗಿದೆ. ಪಶ್ಚಾತ್ತಾಪಪಡುವ ವ್ಯಕ್ತಿಗೆ ‘ಜಜ್ಜಿಹೋದ ಮನಸ್ಸಿರುತ್ತದೆ.’ ಸಾಧ್ಯವಿರುವಲ್ಲಿ ಅವನು ‘ತಪ್ಪನ್ನು ಸರಿಪಡಿಸಲು’ ಬಯಸುವನು.​—⁠ಕೀರ್ತನೆ 51:17; 2 ಕೊರಿಂಥ 7:​11, NW.

9 ಕ್ರೈಸ್ತ ಸಭೆಯೊಳಗೆ ಪುನಸ್ಸ್ಥಾಪಿಸಲ್ಪಡಲು ಪಶ್ಚಾತ್ತಾಪವು ಅತಿ ಪಾಮುಖ್ಯ. ಬಹಿಷ್ಕೃತನು ಒಂದು ನಿರ್ದಿಷ್ಟ ಅವಧಿಯ ಬಳಿಕ ತನ್ನಿಂದತಾನೇ ಸಭೆಯೊಳಗೆ ಅಂಗೀಕರಿಸಲ್ಪಡಲಾರನು. ಪುನಸ್ಸ್ಥಾಪಿಸಲ್ಪಡುವ ಮೊದಲೇ ಅವನ ಮನಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗಿರತಕ್ಕದ್ದು. ತನ್ನ ಪಾಪದ ಘೋರತೆಯನ್ನು ಅವನು ಗ್ರಹಿಸಿರಬೇಕು. ಯೆಹೋವನ ಮತ್ತು ಸಭೆಯ ಮೇಲೆ ಅವನು ತಂದಿರುವ ಕಳಂಕವನ್ನು ಮನಗಂಡಿರಬೇಕು. ಆ ಪಾಪಿಯು ಪಶ್ಚಾತ್ತಾಪಪಟ್ಟು ಕ್ಷಮಾಪಣೆಗಾಗಿ ಶ್ರದ್ಧೆಯಿಂದ ಪ್ರಾರ್ಥಿಸಬೇಕು, ದೇವರ ನೀತಿಯ ಆವಶ್ಯಕತೆಗಳಿಗೆ ತನ್ನ ಜೀವನವನ್ನು ಹೊಂದಿಸಿಕೊಳ್ಳಬೇಕು. ಪುನಸ್ಸ್ಥಾಪನೆಗಾಗಿ ಕೇಳಿಕೊಳ್ಳುವಾಗ, ತಾನು ಪಶ್ಚಾತ್ತಾಪಪಟ್ಟಿರುವುದಕ್ಕಾಗಿ ಮತ್ತು “ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು” ಮಾಡುತ್ತಿರುವುದಕ್ಕಾಗಿ ಅವನು ಸಾಕ್ಷ್ಯವನ್ನು ಕೊಡಲು ಶಕ್ತನಾಗಿರಬೇಕು.​—⁠ಅ. ಕೃತ್ಯಗಳು 26:20.

ತಪ್ಪನ್ನು ಏಕೆ ನಿವೇದಿಸಬೇಕು?

10 ಪಾಪಮಾಡಿರುವ ಕೆಲವರು ಹೀಗೆ ಯೋಚಿಸಬಹುದು: ‘ನಾನು ಪಾಪಮಾಡಿರುವ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪೇಚಾಟಗೊಳಪಡಿಸುವ ಪ್ರಶ್ನೆಗಳಿಗೆ ಉತ್ತರಕೊಡಬೇಕಾಗಬಹುದು. ನನ್ನನ್ನು ಬಹಿಷ್ಕಾರ ಮಾಡಲೂಬಹುದು. ನಾನು ಸುಮ್ಮನಿದ್ದುಬಿಟ್ಟರೆ ಆ ಪೇಚಾಟನೇ ಇರಲ್ಲ. ಸಭೆಯಲ್ಲಿರುವ ಯಾರಿಗೂ ಅದು ಯಾವತ್ತು ಗೊತ್ತಾಗಲ್ಲ.’ ಆದರೆ ಈ ರೀತಿ ಯೋಚಿಸುವಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಲು ಅವರು ತಪ್ಪಿಹೋಗುತ್ತಾರೆ. ಅವು ಯಾವುವು?

11 ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು” ಆಗಿದ್ದಾನೆ. ಆದರೂ ಆತನು ತನ್ನ ಜನರನ್ನು ‘ಮಿತಿಯಲ್ಲಿ ಸರಿಪಡಿಸುವನು.’ (ವಿಮೋಚನಕಾಂಡ 34:​6, 7; ಯೆರೆಮೀಯ 30:​11, NIBV) ನೀವು ಗಂಭೀರ ಪಾಪಮಾಡಿ, ಅದನ್ನು ಮುಚ್ಚಿಡಲು ಪ್ರಯತ್ನಿಸುವುದಾದರೆ ದೇವರ ಕರುಣೆಯನ್ನು ಹೇಗೆ ತಾನೇ ಪಡೆದುಕೊಳ್ಳಬಲ್ಲಿರಿ? ಯೆಹೋವನಿಗೆ ಅದು ಗೊತ್ತಿದೆ. ಆತನು ಆ ತಪ್ಪನ್ನು ನಿರ್ಲಕ್ಷಿಸುವುದೇ ಇಲ್ಲ.​—⁠ಜ್ಞಾನೋಕ್ತಿ 15:3; ಹಬಕ್ಕೂಕ 1:13.

12 ನೀವು ಒಂದು ಗಂಭೀರ ಪಾಪವನ್ನು ಮಾಡಿರುವಲ್ಲಿ ಅದನ್ನು ನಿವೇದಿಸುವ ಮೂಲಕ ಒಳ್ಳೆಯ ಮನಸ್ಸಾಕ್ಷಿಯನ್ನು ಪುನಃ ಪಡೆದುಕೊಳ್ಳಬಲ್ಲಿರಿ. (1 ತಿಮೊಥೆಯ 1:​18-20) ಆದರೆ ಅದನ್ನು ನಿವೇದಿಸದಿದ್ದಲ್ಲಿ ನಿಮ್ಮ ಮನಸ್ಸಾಕ್ಷಿ ಮಲಿನಗೊಳ್ಳುವುದು. ಇದು ಹೆಚ್ಚು ಪಾಪಕ್ಕೆ ನಡೆಸಬಲ್ಲದು. ನೀವು ಮಾಡಿದ ಪಾಪ ಕೇವಲ ಇನ್ನೊಬ್ಬ ವ್ಯಕ್ತಿ ಅಥವಾ ಸಭೆಯ ವಿರುದ್ಧ ಮಾತ್ರವಲ್ಲ ಎಂಬುದನ್ನು ಜ್ಞಾಪಕದಲ್ಲಿಡಿರಿ. ಅದು ದೇವರ ವಿರುದ್ಧ ಮಾಡಲಾಗಿರುವ ಪಾಪವೂ ಆಗಿದೆ. ಕೀರ್ತನೆಗಾರನು ಹಾಡಿದ್ದು: “ಯೆಹೋವನು . . . ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ. ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ; ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ. ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ.”​—⁠ಕೀರ್ತನೆ 11:​4, 5.

13 ಗಂಭೀರ ಪಾಪವನ್ನು ಅಡಗಿಸಿಡುತ್ತಾ ನಿರ್ಮಲವಾದ ಕ್ರೈಸ್ತ ಸಭೆಯಲ್ಲಿರಲು ಪ್ರಯತ್ನಿಸುವ ಯಾರನ್ನೂ ಯೆಹೋವನು ಆಶೀರ್ವದಿಸುವುದಿಲ್ಲ. (ಯಾಕೋಬ 4:⁠6) ಆದುದರಿಂದ, ನೀವು ಪಾಪದಲ್ಲಿ ಸಿಕ್ಕಿಬಿದ್ದು ಸರಿಯಾದುದನ್ನು ಮಾಡಬಯಸುವಲ್ಲಿ ಪ್ರಾಮಾಣಿಕವಾಗಿ ಪಾಪನಿವೇದನೆ ಮಾಡಲು ಸಂಕೋಚಪಡಬೇಡಿರಿ. ಇಲ್ಲವಾದರೆ ತಪ್ಪಿತಸ್ಥ ಮನಸ್ಸಾಕ್ಷಿ ನಿಮಗಿರುವುದು. ವಿಶೇಷವಾಗಿ ನೀವು ಅಂತಹ ಗಂಭೀರ ಪಾಪದ ಬಗ್ಗೆ ಓದುವಾಗಲೊ ಅದರ ಕುರಿತು ಸಲಹೆಯನ್ನು ಕೇಳುವಾಗಲೊ ನಿಮ್ಮ ಮನಸಾಕ್ಷಿ ಚುಚ್ಚುತ್ತಲೇ ಇರುವುದು. ಯೆಹೋವನು ರಾಜ ಸೌಲನಿಂದ ತನ್ನ ಆತ್ಮವನ್ನು ತೆಗೆದುಬಿಟ್ಟಂತೆ ನಿಮ್ಮಿಂದಲೂ ತೆಗೆದುಬಿಡುವಲ್ಲಿ ಆಗೇನು? (1 ಸಮುವೇಲ 16:14) ದೇವರಾತ್ಮವು ನಿಮ್ಮಿಂದ ತೆಗೆಯಲ್ಪಟ್ಟರೆ ನೀವು ಇನ್ನೂ ಹೆಚ್ಚು ಗಂಭೀರ ಪಾಪದೊಳಗೆ ಬೀಳುವ ಸಾಧ್ಯತೆಯಿದೆ.

ನಿಮ್ಮ ನಂಬಿಗಸ್ತ ಸಹೋದರರಲ್ಲಿ ಭರವಸೆಯಿಡಿರಿ

14 ಆದಕಾರಣ, ಪಶ್ಚಾತ್ತಾಪಪಟ್ಟಿರುವ ತಪ್ಪಿತಸ್ಥನು ಏನು ಮಾಡಬೇಕು? “ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು [ಯೆಹೋವನ] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; [ಯೆಹೋವನು] ಅವನನ್ನು ಎಬ್ಬಿಸುವನು.” (ಯಾಕೋಬ 5:​14, 15) ಒಬ್ಬ ವ್ಯಕ್ತಿಯು ತನ್ನ ‘ಮನಸ್ಸು ದೇವರ ಕಡೆಗೆ ತಿರುಗಿತ್ತೆಂಬದನ್ನು [“ಪಶ್ಚಾತ್ತಾಪಪಟ್ಟಿರುವುದನ್ನು,” NW] ತಕ್ಕ ಫಲದಿಂದ ತೋರಿಸುವ’ ಒಂದು ವಿಧವು ಹಿರಿಯರನ್ನು ಸಮೀಪಿಸುವುದಾಗಿದೆ. (ಮತ್ತಾಯ 3:⁠8) ನಂಬಿಗಸ್ತರಾದ ಈ ಪ್ರೀತಿಪೂರ್ಣ ಪುರುಷರು ಅವನಿಗೆ ‘ಯೆಹೋವನ ಹೆಸರಿನಿಂದ ಎಣ್ಣೆಹಚ್ಚಿ ಅವನಿಗೋಸ್ಕರ ಪ್ರಾರ್ಥಿಸುವರು.’ ಶಮನಗೊಳಿಸುವ ಎಣ್ಣೆಯಂತೆ ಅವರು ನೀಡುವ ಬೈಬಲ್‌ ಸಲಹೆ, ನಿಜವಾಗಿಯೂ ಪಶ್ಚಾತ್ತಾಪಪಟ್ಟಿರುವ ಯಾವ ವ್ಯಕ್ತಿಗೂ ಸಾಂತ್ವನವನ್ನು ನೀಡುವುದು.​—⁠ಯೆರೆಮೀಯ 8:22.

15 ಯೆಹೂದ್ಯರನ್ನು ಸಾ.ಶ.ಪೂ. 537ರಲ್ಲಿ ಬಾಬೆಲಿನ ಸೆರೆಯಿಂದ ಬಿಡಿಸಿದಾಗಲೂ, ಆಧ್ಯಾತ್ಮಿಕ ಇಸ್ರಾಯೇಲ್ಯರನ್ನು ಸಾ.ಶ. 1919ರಲ್ಲಿ ‘ಮಹಾ ಬಾಬೆಲಿನಿಂದ’ ಬಿಡಿಸಿದಾಗಲೂ ನಮ್ಮ ಕುರುಬನಾದ ಯೆಹೋವನು ಇಟ್ಟ ಮಾದರಿಯು ಅದೆಷ್ಟು ಪ್ರೀತಿಪೂರ್ವಕವಾಗಿದೆ! (ಪ್ರಕಟನೆ 17:​3-5; ಗಲಾತ್ಯ 6:16) ಈ ಮೂಲಕ ಆತನು ತನ್ನ ಈ ವಚನವನ್ನು ನೆರವೇರಿಸಿದನು: “ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; . . . ತಪ್ಪಿಸಿಕೊಂಡದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು.”​—⁠ಯೆಹೆಜ್ಕೇಲ 34:​15, 16.

16 ಯೆಹೋವನು ತನ್ನ ಸಾಂಕೇತಿಕ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡಿದನು, ತಪ್ಪಿಸಿಕೊಂಡದನ್ನು ಹುಡುಕಿದನು. ತದ್ರೀತಿಯಲ್ಲಿ ಕ್ರೈಸ್ತ ಕುರುಬರು, ದೇವರ ಮಂದೆಯು ಆಧ್ಯಾತ್ಮಿಕವಾಗಿ ಚೆನ್ನಾಗಿ ತಿಂದು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಾರೆ. ಅವರು ಸಭೆಯಿಂದ ದೂರಸರಿದಿರುವ ಕುರಿಗಳನ್ನು ಹುಡುಕುತ್ತಾರೆ. ದೇವರು ‘ಮುರಿದ ಅಂಗಕ್ಕೆ ಪಟ್ಟಿ ಕಟ್ಟಿದಂತೆಯೇ,’ ಮೇಲ್ವಿಚಾರಕರು ಬೇರೆಯವರ ಮಾತುಗಳಿಂದ ಅಥವಾ ಸ್ವಂತ ವರ್ತನೆಗಳಿಂದಾಗಿ ಗಾಯಗೊಂಡಿರುವ ಕುರಿಗಳಿಗೆ ‘ಪಟ್ಟಿ ಕಟ್ಟುತ್ತಾರೆ.’ ದೇವರು ‘ದುರ್ಬಲವಾದದ್ದನ್ನು ಬಲಗೊಳಿಸಿದಂತೆಯೇ,’ ಹಿರಿಯರು ಸಹ ಪ್ರಾಯಶಃ ತಮ್ಮ ಸ್ವಂತ ತಪ್ಪುಗಳ ಕಾರಣ ಆಧ್ಯಾತ್ಮಿಕವಾಗಿ ರೋಗಿಗಳಾಗಿರುವ ವ್ಯಕ್ತಿಗಳಿಗೆ ಸಹಾಯ ನೀಡುತ್ತಾರೆ.

ಕುರುಬರು ಸಹಾಯ ನೀಡುವ ವಿಧ

17 “ಭಯಯುಕ್ತರಾಗಿ ಕರುಣಿಸಿರಿ” ಎಂಬ ಸಲಹೆಯನ್ನು ಹಿರಿಯರು ಸಂತೋಷದಿಂದ ಅನುಸರಿಸುತ್ತಾರೆ. (ಯೂದ 23) ಕೆಲವು ಮಂದಿ ಕ್ರೈಸ್ತರು ಲೈಂಗಿಕ ಅನೈತಿಕತೆಗೆ ಬಿದ್ದು ಗುರುತರವಾಗಿ ಪಾಪಮಾಡಿದ್ದಾರೆ. ಆದರೆ ಅವರು ನಿಜವಾಗಿಯೂ ಪಶ್ಚಾತ್ತಾಪಪಡುವಲ್ಲಿ, ಆಧ್ಯಾತ್ಮಿಕವಾಗಿ ಸಹಾಯ ನೀಡಲು ಸದಾ ಸಿದ್ಧರಿರುವ ಹಿರಿಯರಿಂದ ಕರುಣಾಮಯವಾದ ಪ್ರೀತಿಪೂರ್ವಕ ಚಿಕಿತ್ಸೆಯನ್ನು ನಿರೀಕ್ಷಿಸಸಾಧ್ಯವಿದೆ. ಪೌಲನು ತನ್ನನ್ನು ಒಳಗೂಡಿಸಿಕೊಂಡು ಅಂಥ ಪುರುಷರ ಕುರಿತು ಹೇಳಿದ್ದು: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ.” (2 ಕೊರಿಂಥ 1:24) ಆದಕಾರಣ, ಹಿರಿಯರಿಂದ ಆಧ್ಯಾತ್ಮಿಕ ಸಹಾಯವನ್ನು ಪಡೆಯಲು ಎಂದಿಗೂ ಹಿಂಜರಿಯದಿರಿ.

18 ನೀವು ಗಂಭೀರ ಪಾಪಮಾಡಿರುವಲ್ಲಿ ಹಿರಿಯರಲ್ಲಿ ಭರವಸೆಯಿಡಸಾಧ್ಯವಿದೆ ಏಕೆ? ಮುಖ್ಯ ಕಾರಣವೇನೆಂದರೆ, ದೇವರ ಮಂದೆಯ ಕುರುಬರು ಅವರಾಗಿದ್ದಾರೆ. (1 ಪೇತ್ರ 5:​1-4) ಸಾಧು ಕುರಿಮರಿಯೊಂದು ಗಾಯಮಾಡಿಕೊಂಡು ಸಹಾಯಕ್ಕಾಗಿ ಕೂಗುತ್ತಿರುವಾಗ ಅದನ್ನು ಪ್ರೀತಿಯುಳ್ಳ ಯಾವ ಕುರುಬನು ಹೊಡೆಯನು. ಅಂತೆಯೇ, ಹಿರಿಯರು ಸಹ ತಪ್ಪುಮಾಡಿರುವ ಜೊತೆವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಆ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕೆಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸರು. ಬದಲಾಗಿ, ಆಧ್ಯಾತ್ಮಿಕ ಪುನಸ್ಥಾಪನೆಯ ಸಾಧ್ಯತೆಗೆ ಗಮನಕೊಡುವರು. (ಯಾಕೋಬ 5:​13-20) ಹಿರಿಯರು ನೀತಿಯಿಂದ ನ್ಯಾಯತೀರಿಸಿ ‘ಹಿಂಡನ್ನು ಕನಿಕರಿಸಬೇಕು.’ (ಅ. ಕೃತ್ಯಗಳು 20:​29, 30; ಯೆಶಾಯ 32:​1, 2) ಇತರ ಎಲ್ಲ ಕ್ರೈಸ್ತರಂತೆಯೆ ಹಿರಿಯರು ಕೂಡಾ ‘ನ್ಯಾಯವನ್ನು ಆಚರಿಸಿ, ಕರುಣೆಯಲ್ಲಿ ಆಸಕ್ತರಾಗಿದ್ದು ದೇವರಿಗೆ ನಮ್ರವಾಗಿ ನಡೆದುಕೊಳ್ಳಬೇಕು.’ (ಮೀಕ 6:⁠8) ಈ ಗುಣಗಳು, ‘[ಯೆಹೋವನು] ಪಾಲಿಸುವ ಹಿಂಡಿನಲ್ಲಿರುವ’ ಕುರಿಗಳ ಜೀವ ಮತ್ತು ಪವಿತ್ರ ಸೇವೆಯ ವಿಷಯದಲ್ಲಿ ನಿರ್ಣಯಗಳನ್ನು ಮಾಡುವಾಗ ಅತಿ ಮಹತ್ವವಾಗಿವೆ.​—⁠ಕೀರ್ತನೆ 100:⁠3.

19 ಕ್ರೈಸ್ತ ಕುರಿಪಾಲಕರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿರುತ್ತಾರೆ ಮತ್ತು ಅದೇ ಆತ್ಮದ ಮೂಲಕ ನಡೆಸಲ್ಪಡಲು ಪ್ರಯತ್ನಿಸುತ್ತಾರೆ. “ಒಬ್ಬನು ಅರಿಯದೆ ಯಾವುದೋ ತಪ್ಪು ಹೆಜ್ಜೆ ಇಡುವಲ್ಲಿ” ಅಂದರೆ ಅಕಸ್ಮಿಕವಾಗಿ ತಪ್ಪು ಮಾಡುವಲ್ಲಿ ಆಧ್ಯಾತ್ಮಿಕವಾಗಿ ಅರ್ಹತೆಯುಳ್ಳ ಪುರುಷರು “ಅವನನ್ನು ಸೌಮ್ಯಭಾವದಿಂದ ಪೂರ್ವಸ್ಥಿತಿಗೆ” ತರಲು ಪ್ರಯತ್ನಿಸುವರು. (ಗಲಾತ್ಯ 6:​1, NW; ಅ. ಕೃತ್ಯಗಳು 20:28) ಒಬ್ಬ ದಯಾಪರ ಡಾಕ್ಟರ್‌ ರೋಗಿಯ ಮುರಿದಿರುವ ಎಲುಬನ್ನು ಸರಿಯಾಗಿ ಜೋಡಿಸುವಾಗ ಜಾಗರೂಕತೆಯಿಂದಿರುತ್ತಾನೆ. ಏಕೆಂದರೆ ಚಿಕಿತ್ಸೆಯ ಸಮಯದಲ್ಲಿ ಅನಾವಶ್ಯಕ ನೋವನ್ನುಂಟುಮಾಡದಿರಲು ಅವನು ಬಯಸುತ್ತಾನೆ. ತದ್ರೀತಿಯಲ್ಲಿ, ಹಿರಿಯರು ತಪ್ಪುಮಾಡಿದವನ ಯೋಚನೆಯನ್ನು ಸರಿಪಡಿಸಲು ಪ್ರಯತ್ನಿಸುವಾಗ, ಅವರದನ್ನು ಸೌಮ್ಯಭಾವದಿಂದಲೂ ಅದೇ ಸಮಯದಲ್ಲಿ ದೈವಿಕ ಮಟ್ಟಕ್ಕೆ ಅಂಟಿಕೊಳ್ಳುತ್ತಾ ದೃಢತೆಯಿಂದಲೂ ಮಾಡುತ್ತಾರೆ. (ಕೊಲೊಸ್ಸೆ 3:12) ಹಿರಿಯರು ಪ್ರಾರ್ಥನೆ ಮತ್ತು ಬೈಬಲಿನ ಮೇಲೆ ಆತುಕೊಂಡು ಕರುಣೆ ತೋರಿಸಬೇಕೊ ಬಾರದೊ ಎಂಬ ನಿರ್ಣಯ ತೆಗೆದುಕೊಳ್ಳುವುದರಿಂದ, ಅವರ ನಿರ್ಣಯವು ದೇವರ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದು.​—⁠ಮತ್ತಾಯ 18:18.

20 ಒಬ್ಬನು ಪಾಪಮಾಡಿರುವ ವಿಷಯವು ಎಲ್ಲರಿಗೂ ತಿಳಿದಿರುವುದಾದರೆ ಇಲ್ಲವೆ ಖಂಡಿತವಾಗಿ ತಿಳಿಯಬರುವುದು ಎಂದಾದರೆ, ಸಭೆಯ ಸತ್ಕೀರ್ತಿಯನ್ನು ಕಾಪಾಡುವುದಕ್ಕಾಗಿ ಸಭೆಗೆ ಒಂದು ಪ್ರಕಟನೆಯನ್ನು ಮಾಡುವುದು ಯೋಗ್ಯವಾಗಿರುವುದು. ಇದು ಸಭೆಗೆ ತಿಳಿದುಬರಬೇಕಾಗುವ ಅಗತ್ಯವಿದ್ದಲ್ಲಿಯೂ ಒಂದು ಪ್ರಕಟನೆಯನ್ನು ಮಾಡಲಾಗುವುದು. ಒಬ್ಬ ಗಾಯಾಳು ಚೇತರಿಸಿಕೊಳ್ಳುತ್ತಿರುವಾಗ ಅವನಿಗೆ ಅಷ್ಟಾಗಿ ಕೆಲಸಮಾಡಲು ಆಗುವುದಿಲ್ಲ. ಹಾಗೆಯೇ ನ್ಯಾಯನಿರ್ಣಾಯಕವಾಗಿ ಗದರಿಸಲ್ಪಟ್ಟವನು ಆಧ್ಯಾತ್ಮಿಕವಾಗಿ ಗುಣಹೊಂದುತ್ತಿರುವ ಸಮಯದಲ್ಲಿ ಸಭೆಯ ಚಟುವಟಿಕೆಗಳಲ್ಲಿ ತಾತ್ಕಾಲಿಕವಾಗಿ ಪಾಲ್ಗೊಳ್ಳಲು ಆಗುವುದಿಲ್ಲ. ಈ ಪಶ್ಚಾತ್ತಾಪಿಯು ಸ್ವಲ್ಪ ಸಮಯದ ವರೆಗೆ ಕೂಟಗಳಲ್ಲಿ ಹೇಳಿಕೆಗಳನ್ನು ಕೊಡದೆ ಸುಮ್ಮನಿದ್ದು ಆಲಿಸುವುದು ಪ್ರಯೋಜನಕರ. ಅವನೊಂದಿಗೆ ಯಾರಾದರೂ ಬೈಬಲ್‌ ಅಧ್ಯಯನಮಾಡುವಂತೆ ಹಿರಿಯರು ಏರ್ಪಡಿಸಬಹುದು. ಇದು ಅವನು ಬಲಹೀನನಾಗಿರುವ ವಿಷಯದಲ್ಲಿ ಅವನನ್ನು ಬಲಪಡಿಸಲು ಸಹಾಯಮಾಡುವುದು. ಅವನು ಇದರಿಂದ ಪುನಃ ‘ನಂಬಿಕೆಯಲ್ಲಿ ಸ್ವಸ್ಥನಾಗುವನು.’ (ತೀತ 2:⁠2) ಇದೆಲ್ಲವನ್ನು ಪೀತಿಯಿಂದ ಮಾಡಲಾಗುತ್ತದೆಯೇ ಹೊರತು ತಪ್ಪಿತಸ್ಥನನ್ನು ಶಿಕ್ಷಿಸುವ ಉದ್ದೇಶದಿಂದಲ್ಲ.

21 ಹಿರಿಯರು ವಿವಿಧ ವಿಧಗಳಲ್ಲಿ ಆಧ್ಯಾತ್ಮಿಕ ಸಹಾಯವನ್ನು ನೀಡಬಲ್ಲರು. ಉದಾಹರಣೆಗೆ, ಈ ಹಿಂದೆ ಕುಡಿಯುವ ಅಭ್ಯಾಸವಿದ್ದ ಒಬ್ಬ ಸಹೋದರನು ಮನೆಯಲ್ಲಿ ಒಬ್ಬನೇ ಇದ್ದಾಗ ಒಂದೆರಡು ಬಾರಿ ಮಿತಿಮೀರಿ ಕುಡಿದಿದ್ದಾನೆಂದು ಭಾವಿಸೋಣ. ಅಥವಾ ದೀರ್ಘಕಾಲದ ಹಿಂದೆಯೇ ಧೂಮಪಾನವನ್ನು ಬಿಟ್ಟಿದ್ದ ಒಬ್ಬನು ಬಲಹೀನತೆಯ ಸಮಯದಲ್ಲಿ ಯಾರಿಗೂ ಗೊತ್ತಾಗದೆ ಒಂದೋ ಎರಡೋ ಸಲ ಧೂಮಪಾನ ಮಾಡಿದ್ದಾನೆಂದು ಎಣಿಸೋಣ. ಇದರ ಕುರಿತಾಗಿ ಪ್ರಾರ್ಥಿಸಿ ದೇವರು ಕ್ಷಮಿಸಿದ್ದಾನೆಂದು ಅವನು ನಂಬಿದರೂ, ಹಿರಿಯರ ಸಹಾಯವನ್ನು ಅವನು ಕೋರಲೇಬೇಕು. ಇದರಿಂದ ಆ ಪಾಪವು ರೂಢಿಯಾಗದಂತೆ ನೋಡಿಕೊಳ್ಳಸಾಧ್ಯವಿದೆ. ಒಬ್ಬ ಹಿರಿಯನೊ ಅಥವಾ ಇಬ್ಬರೊ ಈ ಸನ್ನಿವೇಶವನ್ನು ನಿರ್ವಹಿಸುವರು. ಆದರೂ ಹಿರಿಯನು/ರು ಈ ವಿಷಯವನ್ನು ಅಧ್ಯಕ್ಷ ಮೇಲ್ವಿಚಾರಕನಿಗೆ ತಿಳಿಸುವರು. ಏಕೆಂದರೆ, ಇದರಲ್ಲಿ ಇನ್ನಿತರ ಸಂಗತಿಗಳು ಒಳಗೊಂಡಿರಬಹುದು.

ದೈವಿಕ ಶಿಸ್ತನ್ನು ಸದಾ ಅಂಗೀಕರಿಸಿರಿ

22 ಯೆಹೋವನ ಮೆಚ್ಚಿಗೆಯನ್ನು ಪಡೆಯಬೇಕಾದರೆ ಪ್ರತಿಯೊಬ್ಬ ಕ್ರೈಸ್ತನು ಆತನ ಶಿಸ್ತಿಗೆ ಗಮನಕೊಡಲೇಬೇಕು. (1 ತಿಮೊಥೆಯ 5:20) ಆದುದರಿಂದ, ನೀವು ಬೈಬಲನ್ನು ಮತ್ತು ಕ್ರೈಸ್ತ ಸಾಹಿತ್ಯಗಳನ್ನು ಅಧ್ಯಯನಮಾಡುವಾಗ ದೊರೆಯುವ ತಿದ್ದುಪಾಟನ್ನು ಅನ್ವಯಿಸಿಕೊಳ್ಳಿರಿ. ಯೆಹೋವನ ಜನರ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಆಲಿಸುವ ಯಾವುದೇ ಬುದ್ಧಿವಾದಗಳನ್ನು ಸಹ ಅನ್ವಯಿಸಿಕೊಳ್ಳಿರಿ. ಯಾವಾಗಲೂ ಜಾಗರೂಕತೆಯಿಂದ ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ ಜೀವಿಸಿರಿ. ಆಗ ದೈವಿಕ ಶಿಸ್ತು ಸದಾ ಆಧ್ಯಾತ್ಮಿಕ ರೀತಿಯಲ್ಲಿ ಪಾಪವನ್ನು ತಡೆಯುವ ಕೊತ್ತಳದಂತೆ ಅಂದರೆ ಬಲವಾದ ಗೋಡೆಯಂತಿರುವುದು.

23 ನೀವು ದೈವಿಕ ಶಿಸ್ತನ್ನು ಅಂಗೀಕರಿಸುವುದಾದರೆ ದೇವರ ಪ್ರೀತಿಯಲ್ಲಿ ನೆಲೆಗೊಳ್ಳಲು ಶಕ್ತರಾಗುವಿರಿ. ಕೆಲವರನ್ನು ಕ್ರೈಸ್ತಸಭೆಯಿಂದ ಹೊರಹಾಕಲಾಗಿದೆ ಎಂಬುದು ನಿಜ. ಆದರೆ ನೀವು “ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿ”ಕೊಳ್ಳುವಲ್ಲಿ ಮತ್ತು ‘ವಿವೇಕಿಗಳಾಗಿ ನಡೆಯುವಲ್ಲಿ’ ಅಂಥ ಪರಿಸ್ಥಿತಿ ನಿಮಗೆ ಬಾರದು. (ಜ್ಞಾನೋಕ್ತಿ 4:23; ಎಫೆಸ 5:​15, NW) ನೀವು ಈಗ ಬಹಿಷ್ಕೃತರಾಗಿರುವುದಾದರೆ, ಪುನಸ್ಸ್ಥಾಪನೆಯ ಕಡೆಗಿನ ಹೆಜ್ಜೆಯನ್ನು ಏಕೆ ತೆಗೆದುಕೊಳ್ಳಬಾರದು? ತನಗೆ ಸಮರ್ಪಿತರಾಗಿರುವ ಸಕಲರೂ ನಂಬಿಗಸ್ತಿಕೆಯಿಂದಲೂ “ಹರ್ಷಾನಂದ”ದಿಂದಲೂ ತನ್ನನ್ನು ಆರಾಧಿಸಬೇಕೆಂಬುದು ದೇವರ ಬಯಕೆ. (ಧರ್ಮೋಪದೇಶಕಾಂಡ 28:47) ನೀವು ಯೆಹೋವನ ಶಿಸ್ತನ್ನು ಸದಾ ಅಂಗೀಕರಿಸುವುದಾದರೆ ಈ ರೀತಿಯಲ್ಲಿ ಆತನನ್ನು ಸದಾಕಾಲಕ್ಕೂ ಆರಾಧಿಸಬಲ್ಲಿರಿ.​—⁠ಕೀರ್ತನೆ 100:⁠2. (w06 11/15)

ನೀವು ಹೇಗೆ ಉತ್ತರ ಕೊಡುವಿರಿ?

• ಕ್ರೈಸ್ತ ಸಭೆಯಿಂದ ಕೆಲವರು ಬಹಿಷ್ಕೃತರಾಗುವುದು ಏಕೆ?

• ನಿಜ ಪಶ್ಚಾತ್ತಾಪದಲ್ಲಿ ಏನು ಒಳಗೊಂಡಿದೆ?

• ಗಂಭೀರ ಪಾಪವನ್ನು ಏಕೆ ನಿವೇದಿಸಬೇಕು?

• ಕ್ರೈಸ್ತ ಹಿರಿಯರು ಪಶ್ಚಾತ್ತಾಪಪಟ್ಟಿರುವ ತಪ್ಪಿತಸ್ಥರಿಗೆ ಯಾವ ವಿಧಗಳಲ್ಲಿ ಸಹಾಯಮಾಡುತ್ತಾರೆ?

[ಅಧ್ಯಯನ ಪ್ರಶ್ನೆಗಳು]

1. ದೈವಿಕ ಶಿಸ್ತನ್ನು ನಾವೇಕೆ ಅಂಗೀಕರಿಸಬೇಕು?

2. “ಶಿಸ್ತು” ಹೇಗೆ ಅರ್ಥ ನಿರೂಪಿಸಲ್ಪಡುತ್ತದೆ ಮತ್ತು ಒಬ್ಬ ವ್ಯಕ್ತಿ ಹೇಗೆ ಶಿಸ್ತನ್ನು ಪಡಕೊಳ್ಳಬಹುದು?

3. ಒಬ್ಬನು ಬಹಿಷ್ಕರಿಸಲ್ಪಡುವುದು ಯಾವಾಗ?

4, 5. ಬಹಿಷ್ಕರಿಸಲ್ಪಟ್ಟವನ ಕುರಿತು ಬೈಬಲಿನಲ್ಲಿರುವ ಯಾವ ಉದಾಹರಣೆಯನ್ನು ಇಲ್ಲಿ ಕೊಡಲಾಗಿದೆ ಮತ್ತು ಆ ಮನುಷ್ಯನನ್ನು ಪುನಸ್ಸ್ಥಾಪಿಸುವಂತೆ ಸಭೆಯನ್ನು ಏಕೆ ಪ್ರೋತ್ಸಾಹಿಸಲಾಯಿತು?

6. ಬಹಿಷ್ಕಾರ ಮಾಡುವುದರಿಂದ ಯಾವ ಪ್ರಯೋಜನವಿದೆ?

7. ಪಾಪನಿವೇದನೆ ಮಾಡದೆ ಇದ್ದದ್ದು ದಾವೀದನನ್ನು ಹೇಗೆ ಬಾಧಿಸಿತು?

8, 9. ಪಶ್ಚಾತ್ತಾಪವು ಹೇಗೆ ತೋರಿಸಲ್ಪಡುತ್ತದೆ ಮತ್ತು ಇದು ಬಹಿಷ್ಕೃತನೊಬ್ಬನು ಪುನಸ್ಸ್ಥಾಪಿಸಲ್ಪಡಲು ಎಷ್ಟು ಪ್ರಾಮುಖ್ಯ?

10, 11. ನಾವು ಪಾಪವನ್ನು ಮುಚ್ಚಿಡಲು ಪ್ರಯತ್ನಿಸಬಾರದೇಕೆ?

12, 13. ತಪ್ಪನ್ನು ಅಡಗಿಸಿಡಲು ಪ್ರಯತ್ನಿಸುವಲ್ಲಿ ಏನಾಗಬಲ್ಲದು?

14. ಯಾಕೋಬ 5:​14, 15ರ ಸಲಹೆಯನ್ನು ತಪ್ಪಿತಸ್ಥನೊಬ್ಬನು ಏಕೆ ಅನುಸರಿಸಬೇಕು?

15, 16. ಯೆಹೆಜ್ಕೇಲ 34:​15, 16ರಲ್ಲಿರುವಂತೆ ಯೆಹೋವನು ಇಟ್ಟಿರುವ ಮಾದರಿಯನ್ನು ಕ್ರೈಸ್ತ ಹಿರಿಯರು ಹೇಗೆ ಅನುಸರಿಸುತ್ತಾರೆ?

17. ಹಿರಿಯರಿಂದ ಆಧ್ಯಾತ್ಮಿಕ ಸಹಾಯವನ್ನು ಪಡೆಯಲು ನಾವು ಹಿಂಜರಿಯಬಾರದೇಕೆ?

18. ತಪ್ಪು ಮಾಡುವ ಜೊತೆವಿಶ್ವಾಸಿಗಳೊಂದಿಗೆ ಹಿರಿಯರು ಹೇಗೆ ವರ್ತಿಸುತ್ತಾರೆ?

19. ಯಾರನ್ನಾದರೂ ಪೂರ್ವಸ್ಥಿತಿಗೆ ತರಲು ಪ್ರಯತ್ನಿಸುವಾಗ ಯಾವ ಮನೋಭಾವ ಕ್ರೈಸ್ತ ಹಿರಿಯರಲ್ಲಿರುತ್ತದೆ?

20. ಒಬ್ಬನು ಗದರಿಸಲ್ಪಟ್ಟಿರುವುದರ ಕುರಿತು ಸಭೆಗೆ ಪ್ರಕಟಿಸುವುದು ಯಾವಾಗ ಸೂಕ್ತವಾಗಿರಬಹುದು?

21. ತಪ್ಪುಗೈಯಲ್ಪಟ್ಟ ಕೆಲವು ಕೇಸುಗಳನ್ನು ಹೇಗೆ ನಿರ್ವಹಿಸಲಾಗುವುದು?

22, 23. ನೀವು ದೈವಿಕ ಶಿಸ್ತನ್ನು ಏಕೆ ಸದಾ ಅಂಗೀಕರಿಸಬೇಕು?

[ಪುಟ 16ರಲ್ಲಿರುವ ಚಿತ್ರ]

ಅಪೊಸ್ತಲ ಪೌಲನು ಕೊರಿಂಥ ಸಭೆಗೆ ಬಹಿಷ್ಕಾರದ ವಿಷಯದಲ್ಲಿ ಸಲಹೆಸೂಚನೆಗಳನ್ನು ಕಳುಹಿಸಿದ್ದೇಕೆ?

[ಪುಟ 19ರಲ್ಲಿರುವ ಚಿತ್ರ]

ಪುರಾತನ ಕುರುಬರಂತೆ ಕ್ರೈಸ್ತ ಹಿರಿಯರು ದೇವರ ಗಾಯಗೊಂಡಿರುವ ಕುರಿಗಳಿಗೆ ‘ಪಟ್ಟಿಕಟ್ಟುತ್ತಾರೆ’