ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೀವು ಬಹಳ ಆನಂದದಿಂದಿರಬೇಕು”

“ನೀವು ಬಹಳ ಆನಂದದಿಂದಿರಬೇಕು”

“ನೀವು ಬಹಳ ಆನಂದದಿಂದಿರಬೇಕು”

“ನೀವು . . . [ಯೆಹೋವನಿಗೆ] ಆ ಜಾತ್ರೆಯನ್ನು ಆಚರಿಸಬೇಕು . . . ನೀವು ಬಹಳ ಆನಂದದಿಂದಿರಬೇಕು.”​—⁠ಧರ್ಮೋಪದೇಶಕಾಂಡ 16:15.

ಆದಾಮಹವ್ವರು ಸೃಷ್ಟಿಕರ್ತನ ವಿರುದ್ಧ ದಂಗೆಯೇಳುವಂತೆ ಸೈತಾನನು ಮಾಡಿದಾಗ ಅತಿ ಪ್ರಾಮುಖ್ಯವಾದ ಎರಡು ವಿವಾದಾಂಶಗಳನ್ನು ಅವನು ಎಬ್ಬಿಸಿದನು. ಒಂದನೆಯದಾಗಿ, ಯೆಹೋವನ ಸತ್ಯತೆ ಮತ್ತು ಆತನು ಆಳುವ ವಿಧವನ್ನು ಅವನು ವಿವಾದಕ್ಕೊಳಪಡಿಸಿದನು. ಎರಡನೆಯದಾಗಿ, ಜನರು ದೇವರನ್ನು ಸ್ವಾರ್ಥದ ಉದ್ದೇಶಕ್ಕಾಗಿ ಮಾತ್ರ ಸೇವಿಸುತ್ತಾರೆಂದು ಸೂಚಿಸಿದನು. ಈ ಎರಡನೆಯ ವಿವಾದಾಂಶ ಯೋಬನ ದಿನಗಳಲ್ಲಿ ಸ್ಪಷ್ಟವಾಗಿ ಕಂಡುಬಂತು. (ಆದಿಕಾಂಡ 3:​1-6; ಯೋಬ 1:​9, 10; 2:​4, 5) ಆದರೆ ಯೆಹೋವನು ಕೂಡಲೇ ಈ ಸ್ಥಿತಿಗತಿಯನ್ನು ಬಗೆಹರಿಸಲು ಕ್ರಮ ಕೈಗೊಂಡನು. ಆದಾಮಹವ್ವರು ಇನ್ನೂ ಏದೆನ್‌ ತೋಟದಲ್ಲಿದ್ದಾಗಲೇ ತಾನು ಈ ವಿವಾದಾಂಶಗಳನ್ನು ಹೇಗೆ ಪರಿಹರಿಸುವೆನೆಂದು ಆತನು ಮುಂತಿಳಿಸಿದನು. ಒಂದು “ಸಂತಾನ” ಬರುವುದೆಂದು ಮತ್ತು ಅದರ ಹಿಮ್ಮಡಿಯು ಕಚ್ಚಲ್ಪಟ್ಟು ಬಳಿಕ ಅದು ಸೈತಾನನ ತಲೆಯನ್ನು ಜಜ್ಜಿ ನಾಶಮಾಡುವುದೆಂದು ಯೆಹೋವನು ಮುಂತಿಳಿಸಿದನು.​—⁠ಆದಿಕಾಂಡ 3:15.

2 ಸಮಯ ದಾಟಿದಂತೆ ಯೆಹೋವನು ಆ ಪ್ರವಾದನೆಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿದನು. ಈ ಮೂಲಕ ಅದು ನಿಶ್ಚಯವಾಗಿಯೂ ಅಂತಿಮ ನೆರವೇರಿಕೆಯನ್ನು ಹೊಂದುವುದೆಂದು ತೋರಿಸಿದನು. ಉದಾಹರಣೆಗೆ, ಆ “ಸಂತಾನ” ಅಬ್ರಹಾಮನ ವಂಶದಲ್ಲಿ ತೋರಿಬರುವನೆಂದು ದೇವರು ಅವನಿಗೆ ಹೇಳಿದನು. (ಆದಿಕಾಂಡ 22:​15-18) ಅಬ್ರಹಾಮನ ಮೊಮ್ಮಗನಾಗಿದ್ದ ಯಾಕೋಬನು ಇಸ್ರಾಯೇಲಿನ 12 ಕುಲಗಳ ಮೂಲಪಿತನಾದನು. ಸಾ.ಶ.ಪೂ. 1513ರಲ್ಲಿ ಆ ಕುಲಗಳು ಒಂದು ಜನಾಂಗವಾದಾಗ ಯೆಹೋವನು ಅವರಿಗೆ ಒಂದು ನಿಯಮಾವಳಿಯನ್ನು ಕೊಟ್ಟನು. ಇದರಲ್ಲಿ ವಿವಿಧ ವಾರ್ಷಿಕ ಉತ್ಸವಗಳ ಆಚರಣೆಯು ಒಳಗೂಡಿತ್ತು. ಆ ಉತ್ಸವಗಳನ್ನು ಅಪೊಸ್ತಲ ಪೌಲನು “ಬರಬೇಕಾಗಿದ್ದ ಕಾರ್ಯಗಳ ಛಾಯೆ” ಎಂದು ಹೇಳಿದನು. (ಕೊಲೊಸ್ಸೆ 2:​16, 17; ಇಬ್ರಿಯ 10:⁠1) ಆ ಉತ್ಸವಗಳಲ್ಲಿ ಆ ಸಂತಾನಕ್ಕಾಗಿರುವ ಯೆಹೋವನ ಉದ್ದೇಶಗಳ ನೆರವೇರಿಕೆಯ ಮುನ್ನೋಟಗಳಿದ್ದವು. ಆ ಉತ್ಸವಗಳ ಆಚರಣೆ ಇಸ್ರಾಯೇಲಿನಲ್ಲಿ ಮಹಾ ಆನಂದವನ್ನು ಉಂಟುಮಾಡಿತು. ಅವುಗಳ ಸಂಕ್ಷಿಪ್ತ ಚರ್ಚೆಯು ಯೆಹೋವನ ವಾಗ್ದಾನಗಳ ಭರವಸಾರ್ಹತೆಯಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುವುದು.

ಆ ಸಂತಾನದ ತೋರಿಬರುವಿಕೆ

3 ಯೆಹೋವನ ಆ ಪ್ರಥಮ ಪ್ರವಾದನೆ ಹೇಳಲ್ಪಟ್ಟು 4,000ಗಳಿಗೂ ಹೆಚ್ಚು ವರುಷಗಳು ಸಂದ ಬಳಿಕ ಆ ವಾಗ್ದತ್ತ ಸಂತಾನ ತೋರಿಬಂದನು. ಯೇಸುವೇ ಅವನು. (ಗಲಾತ್ಯ 3:16) ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಮರಣ ಪರ್ಯಂತ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು. ಹೀಗೆ ಸೈತಾನನ ಅಪವಾದಗಳು ಸುಳ್ಳೆಂದು ರುಜುಪಡಿಸಿದನು. ಇದಲ್ಲದೆ, ಯೇಸು ಪಾಪರಹಿತನಾಗಿದ್ದರಿಂದ ಅವನ ಮರಣವು ಅತಿ ಬೆಲೆಬಾಳುವ ಒಂದು ಯಜ್ಞವಾಗಿತ್ತು. ಈ ಮುಖೇನ, ಯೇಸು ಆದಾಮಹವ್ವರ ನಂಬಿಗಸ್ತ ವಂಶಸ್ಥರಿಗೆ ಪಾಪಮರಣದಿಂದ ಬಿಡುಗಡೆಯನ್ನು ಒದಗಿಸಿದನು. ಯಾತನಾಕಂಬದ ಮೇಲೆ ಯೇಸು ಮರಣವನ್ನಪ್ಪಿದ್ದು ಆ ವಾಗ್ದತ್ತ ಸಂತಾನದ ‘ಹಿಮ್ಮಡಿಯ ಕಚ್ಚುವಿಕೆಯಾಗಿತ್ತು.’​—⁠ಇಬ್ರಿಯ 9:​11-14.

4 ಯೇಸು ಸಾ.ಶ. 33ರ ನೈಸಾನ್‌ 14ರಂದು ಮರಣಹೊಂದಿದನು. * ಇಸ್ರಾಯೇಲಿನಲ್ಲಿ ನೈಸಾನ್‌ 14 ಹರ್ಷೋಲ್ಲಾಸದಿಂದ ಆಚರಿಸಲಾಗುತ್ತಿದ್ದ ಪಸ್ಕ ಹಬ್ಬದ ದಿನವಾಗಿತ್ತು. ಪ್ರತಿ ವರುಷ ಆ ದಿನದಂದು ಕುಟುಂಬಗಳು ನಿಷ್ಕಳಂಕ ಕುರಿಮರಿಯ ಮಾಂಸವನ್ನು ಭೋಜನಮಾಡುತ್ತಿದ್ದರು. ಈ ವಿಧದಲ್ಲಿ, ಅವರು ಸಾ.ಶ.ಪೂ. 1513ರ ನೈಸಾನ್‌ 14ರಂದು ಕುರಿಮರಿಯ ರಕ್ತ ವಹಿಸಿದ ಪಾತ್ರವನ್ನು ಜ್ಞಾಪಿಸಿಕೊಂಡರು. ಅಂದು ಐಗುಪ್ತದವರ ಜ್ಯೇಷ್ಠಪುತ್ರರನ್ನು ಮೃತ್ಯುದೂತನು ಸಂಹರಿಸಿದಾಗ ಇಸ್ರಾಯೇಲ್ಯ ಜ್ಯೇಷ್ಠಪುತ್ರರನ್ನು ಸಂರಕ್ಷಿಸಿದ್ದರಲ್ಲಿ ಕುರಿಮರಿಯ ರಕ್ತವು ಪ್ರಮುಖ ಪಾತ್ರವನ್ನು ವಹಿಸಿತು. (ವಿಮೋಚನಕಾಂಡ 12:​1-14) ಆ ಪಸ್ಕದ ಕುರಿಮರಿ ಯೇಸುವಿನ ಮುನ್‌ಛಾಯೆಯಾಗಿತ್ತು. ಅವನ ಕುರಿತು ಅಪೊಸ್ತಲ ಪೌಲನು ಹೇಳಿದ್ದು: “ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ; ಅದಾವದಂದರೆ ಕ್ರಿಸ್ತನೇ.” (1 ಕೊರಿಂಥ 5:⁠7) ಆ ಪಸ್ಕದ ಕುರಿಮರಿಯ ರಕ್ತದಂತೆ ಯೇಸು ಸುರಿಸಿದ ರಕ್ತವು ಅನೇಕರಿಗೆ ರಕ್ಷಣೆಯನ್ನು ಒದಗಿಸುತ್ತದೆ.​—⁠ಯೋಹಾನ 3:​16, 36.

‘ಸತ್ತವರೊಳಗಿಂದ ಪ್ರಥಮಫಲ’

5 ಮೂರನೆಯ ದಿನದಲ್ಲಿ, ಯೇಸು ತನ್ನ ಯಜ್ಞದ ಮೌಲ್ಯವನ್ನು ತನ್ನ ತಂದೆಗೆ ಅರ್ಪಿಸುವುದಕ್ಕಾಗಿ ಜೀವಿತನಾಗಿ ಎಬ್ಬಿಸಲ್ಪಟ್ಟನು. (ಇಬ್ರಿಯ 9:24) ಅವನ ಪುನರುತ್ಥಾನವು ಇನ್ನೊಂದು ಹಬ್ಬದ ಮೂಲಕ ಮುನ್ಸೂಚಿಸಲ್ಪಟ್ಟಿತ್ತು. ನೈಸಾನ್‌ 14ರ ಮರುದಿನವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆಯ ಆರಂಭವಾಗಿತ್ತು. ಮಾರನೆಯ ದಿನವಾದ ನೈಸಾನ್‌ 16ರಂದು, ಇಸ್ರಾಯೇಲಿನ ಅತಿ ಮೊದಲಿನ ಕೊಯ್ಲಾದ ಜವೆಗೋದಿಯ ಪ್ರಥಮಫಲದ ಸಿವುಡನ್ನು ಇಸ್ರಾಯೇಲ್ಯರು ಯಾಜಕನಿಗೆ ತಂದೊಪ್ಪಿಸುತ್ತಿದ್ದರು. ಅವನು ಅದನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸುತ್ತಿದ್ದನು. (ಯಾಜಕಕಾಂಡ 23:​6-14) ತನ್ನ ‘ನಂಬತಕ್ಕ ಸತ್ಯಸಾಕ್ಷಿಯನ್ನು’ ಕೊಲ್ಲಲು ಸೈತಾನನು ಮಾಡಿದ ಉಗ್ರ ಪ್ರಯತ್ನಗಳನ್ನು ಸಾ.ಶ. 33ರ ನೈಸಾನ್‌ 16ರಂದೇ ಯೆಹೋವನು ಭಂಗಪಡಿಸಿದ್ದು ಎಷ್ಟು ಸಮಂಜಸ! ಅದೇ ದಿನದಂದು ಯೆಹೋವನು ಯೇಸುವನ್ನು ಸತ್ತವರೊಳಗಿಂದ ಅಮರವಾದ ಆತ್ಮಜೀವಕ್ಕೆ ಪುನರುತ್ಥಾನಗೊಳಿಸಿದನು.​—⁠ಪ್ರಕಟನೆ 3:14; 1 ಪೇತ್ರ 3:18.

6 ಯೇಸು ಮರಣದಲ್ಲಿ “ನಿದ್ರೆಹೋದವರಲ್ಲಿ ಪ್ರಥಮಫಲವಾದನು.” (1 ಕೊರಿಂಥ 15:​20) ಈ ಹಿಂದೆ ಪುನರುತ್ಥಾನಗೊಂಡು ಪುನಃ ಮರಣಪಟ್ಟವರಂತೆ ಯೇಸು ಮತ್ತೆ ಸಾಯಲಿಲ್ಲ. ಬದಲಿಗೆ, ಅವನು ಸ್ವರ್ಗಕ್ಕೆ ಏರಿಹೋದನು. ಅಲ್ಲಿ ಅವನು ಯೆಹೋವನ ಬಲಗಡೆಯಲ್ಲಿ ಕುಳಿತು ಯೆಹೋವನ ಸ್ವರ್ಗೀಯ ರಾಜ್ಯದ ಅರಸನಾಗಿ ನೇಮಿಸಲ್ಪಡುವ ತನಕ ಕಾದನು. (ಕೀರ್ತನೆ 110:1; ಅ. ಕೃತ್ಯಗಳು 2:​32, 33; ಇಬ್ರಿಯ 10:​12, 13) ಈಗ ಯೇಸು ಅರಸನಾಗಿ ಪ್ರತಿಷ್ಠಾಪಿಸಲ್ಪಟ್ಟಿರುವುದರಿಂದ, ಮಹಾ ಶತ್ರುವಾದ ಸೈತಾನನ ತಲೆಯನ್ನು ಕಾಯಂ ಆಗಿ ಜಜ್ಜುವ ಮತ್ತು ಅವನ ಸಂತಾನವನ್ನು ನಾಶಗೊಳಿಸುವ ಸ್ಥಾನದಲ್ಲಿದ್ದಾನೆ.​—⁠ಪ್ರಕಟನೆ 11:​15, 18; 20:​1-3, 10.

ಅಬ್ರಹಾಮನ ಸಂತಾನದಲ್ಲಿ ಇತರರು

7 ಏದೆನಿನಲ್ಲಿ ವಾಗ್ದಾನಿಸಲ್ಪಟ್ಟವನೂ “ಸೈತಾನನ ಕೆಲಸಗಳನ್ನು ಲಯ” ಮಾಡುವುದಕ್ಕೆ ಯೆಹೋವನು ಉಪಯೋಗಿಸುವವನೂ ಆದ ಸಂತಾನವು ಯೇಸುವಾಗಿದ್ದನು. (1 ಯೋಹಾನ 3:⁠8) ಆದರೆ, ಯೆಹೋವನು ಅಬ್ರಹಾಮನೊಂದಿಗೆ ಮಾತಾಡಿದಾಗ ಅವನ “ಸಂತತಿ” ಕೇವಲ ಒಬ್ಬ ವ್ಯಕ್ತಿಗಿಂತ ಹೆಚ್ಚು ಜನರಾಗಿರುವರೆಂದು ಸೂಚಿಸಿದನು. ಅದು ‘ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ’ ಹೆಚ್ಚಾಗಲಿಕ್ಕಿತ್ತು. (ಆದಿಕಾಂಡ 22:17) ‘ಸಂತತಿಯ’ ಬೇರೆ ಸದಸ್ಯರ ತೋರಿಬರುವಿಕೆಯು ಇನ್ನೊಂದು ಹರ್ಷಕರ ಉತ್ಸವದ ಮೂಲಕ ಮುನ್ಸೂಚಿಸಲ್ಪಟ್ಟಿತ್ತು. ನೈಸಾನ್‌ 16ರ ಬಳಿಕ ಐವತ್ತು ದಿನಗಳಾನಂತರ ಇಸ್ರಾಯೇಲ್ಯರು ವಾರಗಳ ಹಬ್ಬವನ್ನು ಆಚರಿಸಿದರು. ಇದರ ಸಂಬಂಧದಲ್ಲಿ ಧರ್ಮಶಾಸ್ತ್ರವು ಹೇಳುವದು: “ಏಳನೆಯ ಸಬ್ಬತ್‌ದಿನದ ಮರುದಿನದಲ್ಲಿ ಯೆಹೋವನಿಗೆ ಹೊಸಬೆಳೆಯ ನೈವೇದ್ಯದ್ರವ್ಯವನ್ನು ಸಮರ್ಪಿಸಬೇಕು. ನಿಮ್ಮ ನಿವಾಸಗಳಿಂದ [ತಂದ ಹಿಟ್ಟಿನಲ್ಲಿ] ಆರು ಸೇರು ಹಿಟ್ಟಿನಿಂದ ಎರಡು ನೈವೇದ್ಯದ ರೊಟ್ಟಿಗಳನ್ನು ಮಾಡಬೇಕು. ಇವುಗಳನ್ನು ಹುಳಿಹಾಕಿದ ಗೋದಿಯ ಹಿಟ್ಟಿನಿಂದ ಮಾಡಿ ಪ್ರಥಮಫಲವಾಗಿ ಯೆಹೋವನಿಗೆ ಸಮರ್ಪಿಸಬೇಕು.” *​—⁠ಯಾಜಕಕಾಂಡ 23:​16, 17, 20.

8 ಯೇಸು ಭೂಮಿಯ ಮೇಲಿದ್ದಾಗ ಆ ವಾರಗಳ ಹಬ್ಬ ಪಂಚಾಶತ್ತಮ (“ಐವತ್ತನೆಯ” ಎಂಬ ಅರ್ಥವುಳ್ಳ ಗ್ರೀಕ್‌ ಪದದಿಂದ ಬಂದಿದೆ) ಎಂದು ಜ್ಞಾತವಾಗಿತ್ತು. ಸಾ.ಶ. 33ರ ಪಂಚಾಶತ್ತಮದಲ್ಲಿ ಶ್ರೇಷ್ಠ ಮಹಾಯಾಜಕನಾದ ಪುನರುತ್ಥಿತ ಯೇಸು ಕ್ರಿಸ್ತನು ಯೆರೂಸಲೇಮಲ್ಲಿ ಸೇರಿಬಂದಿದ್ದ 120 ಮಂದಿ ಶಿಷ್ಯರ ಸಣ್ಣ ಗುಂಪಿನ ಮೇಲೆ ಪವಿತ್ರಾತ್ಮವನ್ನು ಸುರಿದನು. ಹೀಗೆ ಆ ಶಿಷ್ಯರು ದೇವರ ಅಭಿಷಿಕ್ತ ಪುತ್ರರೂ ಯೇಸು ಕ್ರಿಸ್ತನ ಸಹೋದರರೂ ಆದರು. (ರೋಮಾಪುರ 8:​15-17) ಅವರು “ದೇವರ ಇಸ್ರಾಯೇಲ್ಯರು” ಎಂಬ ಒಂದು ಹೊಸಜನಾಂಗವಾದರು. (ಗಲಾತ್ಯ 6:16) ಆ ಸಣ್ಣ ರೀತಿಯ ಆರಂಭದಿಂದ ಆ ಜನಾಂಗವು ಕೊನೆಗೆ 1,44,000 ಸಂಖ್ಯೆಯಾಗಲಿತ್ತು.​—⁠ಪ್ರಕಟನೆ 7:​1-4.

9 ಪ್ರತಿಯೊಂದು ಪಂಚಾಶತ್ತಮದಲ್ಲಿ ಯೆಹೋವನ ಮುಂದೆ ನಿವಾಳಿಸಲ್ಪಟ್ಟ ಹುಳಿ ಬೆರೆಸಿದ ಎರಡು ನೈವೇದ್ಯ ರೊಟ್ಟಿಗಳು ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಮುನ್ಸೂಚಿಸಿದವು. ಆ ಹುಳಿ ಬೆರೆಸಿದ ರೊಟ್ಟಿಗಳು, ಅಭಿಷಿಕ್ತ ಕ್ರೈಸ್ತರಲ್ಲಿ ಬಾಧ್ಯತೆಯಾಗಿ ಬಂದ ಪಾಪದ ಹುಳಿ ಇನ್ನೂ ಇತ್ತೆಂಬುದನ್ನು ತೋರಿಸಿತು. ಆದರೂ, ಅವರು ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಆಧಾರದ ಮೇರೆಗೆ ಯೆಹೋವನನ್ನು ಸಮೀಪಿಸಸಾಧ್ಯವಿತ್ತು. (ರೋಮಾಪುರ 5:​1, 2) ಆದರೆ ಎರಡು ರೊಟ್ಟಿಗಳೇಕೆ? ದೇವರ ಅಭಿಷಿಕ್ತ ಪುತ್ರರು ಕ್ರಮೇಣ ಎರಡು ಗುಂಪುಗಳಿಂದ ಅಂದರೆ ಪ್ರಥಮವಾಗಿ ಪ್ರಾಕೃತಿಕ ಯೆಹೂದ್ಯರಿಂದ ತರುವಾಯ ಅನ್ಯರಿಂದ ಸೇರಿಸಲ್ಪಡುವರು ಎಂಬ ನಿಜತ್ವವನ್ನು ಅದು ತೋರಿಸುತ್ತಿದ್ದಿರಬಹುದು.​—⁠ಗಲಾತ್ಯ 3:​26-29; ಎಫೆಸ 2:​13-18.

10 ಪಂಚಾಶತ್ತಮದಲ್ಲಿ ಅರ್ಪಿಸಲ್ಪಟ್ಟ ಆ ಎರಡು ರೊಟ್ಟಿಗಳನ್ನು ಗೋದಿಯ ಕೊಯ್ಲಿನ ಪ್ರಥಮಫಲಗಳಿಂದ ಮಾಡಲಾಗುತ್ತಿದ್ದವು. ಅದಕ್ಕೆ ಹೊಂದಿಕೆಯಾಗಿ, ಆ ಆತ್ಮಾಭಿಷಿಕ್ತ ಕ್ರೈಸ್ತರನ್ನು “ಆತನ ಸೃಷ್ಟಿಜೀವಿಗಳಲ್ಲಿ ಕೆಲವು ಪ್ರಥಮಫಲಗಳು” ಎಂದು ಕರೆಯಲಾಗುತ್ತದೆ. (ಯಾಕೋಬ 1:18, NW) ಯೇಸು ಸುರಿಸಿದ ರಕ್ತದ ಆಧಾರದ ಮೇರೆಗೆ ಪಾಪಗಳ ಕ್ಷಮಾಪಣೆ ಹೊಂದುವುದರಲ್ಲಿ ಇವರು ಮೊದಲಿಗರು. ಇದರಿಂದಾಗಿ ಅವರಿಗೆ ಸ್ವರ್ಗದಲ್ಲಿ ಅಮರವಾದ ಜೀವವು ದೊರೆಯುವ ಸಾಧ್ಯತೆ ಇರುವುದರಿಂದ ಅವರು ಯೇಸುವಿನ ರಾಜ್ಯದಲ್ಲಿ ಅವನೊಂದಿಗೆ ಆಳುವರು. (1 ಕೊರಿಂಥ 15:53; ಫಿಲಿಪ್ಪಿ 3:​20, 21; ಪ್ರಕಟನೆ 20:⁠6) ಅವರು ಬೇಗನೆ ಒಂದು ದಿನ ಆ ಸ್ಥಾನದಲ್ಲಿದ್ದುಕೊಂಡು “ಕಬ್ಬಿಣದ ಕೋಲಿನಿಂದ [ಜನಾಂಗಗಳನ್ನು]” ಆಳುವರು. ‘ಸೈತಾನನು ಅವರ ಕಾಲುಗಳ ಕೆಳಗೆ ಹಾಕಿ ತುಳಿಯಲ್ಪಡುವನು.’ (ಪ್ರಕಟನೆ 2:​26, 27; ರೋಮಾಪುರ 16:20) ಅಪೊಸ್ತಲ ಯೋಹಾನನು ಹೇಳಿದ್ದು: “ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು.”​—⁠ಪ್ರಕಟನೆ 14:⁠4.

ಬಿಡುಗಡೆಗೆ ಪ್ರಾಧಾನ್ಯ ಕೊಡುವ ಒಂದು ದಿನ

11 ಎಥನಿಮ್‌ (ತರುವಾಯ ಟಿಶ್ರೀ ಎಂಬ ಹೆಸರಿನ) * ತಿಂಗಳ ಹತ್ತನೆಯ ದಿನದಲ್ಲಿ ಇಸ್ರಾಯೇಲ್ಯರು ಆಚರಿಸುತ್ತಿದ್ದ ಹಬ್ಬವು ಯೇಸುವಿನ ವಿಮೋಚನಾಮೌಲ್ಯ ಯಜ್ಞದಿಂದ ಮಾನವಕುಲವು ಹೇಗೆ ಪ್ರಯೋಜನಗಳನ್ನು ಪಡೆದುಕೊಳ್ಳುವುದು ಎಂಬುದನ್ನು ಮುನ್ಸೂಚಿಸಿತ್ತು. ಅಂದು ಇಡೀ ಜನಾಂಗವು ದೋಷಪರಿಹಾರಕ ದಿನಕ್ಕಾಗಿ ಸೇರಿಬಂದು ತಮ್ಮ ಪಾಪಗಳ ನಿವಾರಣೆಗೋಸ್ಕರ ಯಜ್ಞಗಳನ್ನು ಅರ್ಪಿಸುತ್ತಿದ್ದರು.​—⁠ಯಾಜಕಕಾಂಡ 16:​29, 30.

12 ದೋಷಪರಿಹಾರಕ ದಿವಸದಂದು ಮಹಾಯಾಜಕನು ಒಂದು ಎಳೆಯ ಹೋರಿಯನ್ನು ವಧಿಸಿ, ಅದರ ರಕ್ತದಲ್ಲಿ ಸ್ವಲ್ಪವನ್ನು ಅತಿ ಪರಿಶುದ್ಧ ಸ್ಥಳದಲ್ಲಿರುವ ಮಂಜೂಷದ ಹೊದಿಕೆಯ ಮೇಲೆ ಏಳು ಬಾರಿ ಚಿಮುಕಿಸುತ್ತಿದ್ದನು. ಹೀಗೆ ಸಾಂಕೇತಿಕವಾಗಿ ಯೆಹೋವನ ಸನ್ನಿಧಿಯಲ್ಲಿ ರಕ್ತವನ್ನು ಅರ್ಪಿಸಿದನು. ಆ ಅರ್ಪಣೆಯು ಮಹಾಯಾಜಕನಿಗೆ ಹಾಗೂ ಅವನ “ಮನೆತನದವರಿಗೆ” ಅಂದರೆ ಉಪಯಾಜಕರು ಮತ್ತು ಲೇವಿಯರ ಪಾಪಗಳ ಕ್ಷಮಾಪಣೆಗಾಗಿತ್ತು. ಬಳಿಕ, ಮಹಾಯಾಜಕನು ಎರಡು ಹೋತಗಳನ್ನು ತೆಗೆದುಕೊಂಡು ಒಂದನ್ನು ‘ಜನಸಮೂಹದ’ ದೋಷಪರಿಹಾರಕ್ಕಾಗಿ ಅರ್ಪಿಸಿದನು. ಅದರ ರಕ್ತವೂ ಅತಿ ಪರಿಶುದ್ಧ ಸ್ಥಳದ ಮಂಜೂಷದ ಹೊದಿಕೆಯ ಮೇಲೆ ಚಿಮುಕಿಸಲ್ಪಟ್ಟಿತು. ಬಳಿಕ, ಮಹಾಯಾಜಕನು ಎರಡನೆಯ ಹೋತದ ತಲೆಯ ಮೇಲೆ ತನ್ನ ಕೈಗಳನ್ನಿಟ್ಟು ಇಸ್ರಾಯೇಲ್‌ ಜನರ ದೋಷಗಳನ್ನು ಅರಿಕೆ ಮಾಡಿದನು. ಬಳಿಕ ಜನಾಂಗದ ಪಾಪಗಳು ಸಾಂಕೇತಿಕ ರೂಪದಲ್ಲಿ ಕೊಂಡೊಯ್ಯಲ್ಪಟ್ಟಿತೊ ಎಂಬಂತೆ ಆ ಹೋತವನ್ನು ಅರಣ್ಯಕ್ಕೆ ಕಳುಹಿಸಿ ಬಿಡಲಾಯಿತು.​—⁠ಯಾಜಕಕಾಂಡ 16:​3-16, 21, 22.

13 ಆ ಕ್ರಿಯೆಗಳು ಮುನ್ಸೂಚಿಸಿದಂತೆ, ಶ್ರೇಷ್ಠ ಮಹಾಯಾಜಕನಾದ ಯೇಸು ಪಾಪಗಳ ಕ್ಷಮಾಪಣೆಗಾಗಿ ತನ್ನ ಸ್ವಂತ ಜೀವರಕ್ತದ ಮೌಲ್ಯವನ್ನು ಉಪಯೋಗಿಸುತ್ತಾನೆ. ಮೊದಲನೆಯದಾಗಿ, ಅವನ ರಕ್ತದ ಮೌಲ್ಯವು ‘ಆತ್ಮಸಂಬಂಧವಾದ ಮಂದಿರವಾಗಿರುವ’ 1,44,000 ಮಂದಿ ಅಭಿಷಿಕ್ತ ಕ್ರೈಸ್ತರಿಗೆ ಪ್ರಯೋಜನವನ್ನು ತರುತ್ತದೆ. ಇದು ಅವರು ನೀತಿವಂತರೆಂದು ಘೋಷಿತರಾಗಿ, ದೇವರ ಮುಂದೆ ಶುದ್ಧವಾದ ನಿಲುವನ್ನು ಪಡೆಯಲು ಸಮರ್ಥರನ್ನಾಗಿ ಮಾಡುತ್ತದೆ. (1 ಪೇತ್ರ 2:5; 1 ಕೊರಿಂಥ 6:11) ಇದು ಹೋರಿಯ ಯಜ್ಞದಿಂದ ಮುನ್ಸೂಚಿಸಲ್ಪಟ್ಟಿದೆ. ಹೀಗೆ ಸ್ವರ್ಗೀಯ ಬಾಧ್ಯತೆಯನ್ನು ಪಡೆಯುವಂತೆ ಅವರಿಗೆ ದಾರಿಯು ತೆರೆಯಲ್ಪಟ್ಟಿತು. ಎರಡನೆಯದಾಗಿ, ಯೇಸುಕ್ರಿಸ್ತನ ರಕ್ತದ ಮೌಲ್ಯವು ಅವನಲ್ಲಿ ನಂಬಿಕೆಯನ್ನು ಇಡುವ ಲಕ್ಷಾಂತರ ಮಂದಿಗೆ ಪ್ರಯೋಜನವನ್ನು ತರುತ್ತದೆ. ಇದು ಹೋತದ ಯಜ್ಞದಿಂದ ಮುನ್ಸೂಚಿಸಲ್ಪಟ್ಟಿತು. ಇವರು ಆದಾಮಹವ್ವರು ಕಳೆದುಕೊಂಡ ಬಾಧ್ಯತೆಯಾದ ನಿತ್ಯಜೀವದ ಆಶೀರ್ವಾದಗಳನ್ನು ಇದೇ ಭೂಮಿಯ ಮೇಲೆ ಪಡೆಯುವರು. (ಕೀರ್ತನೆ 37:​10, 11) ತಾನು ಸುರಿಸಿದ ರಕ್ತದ ಆಧಾರದ ಮೇರೆಗೆ ಕ್ರಿಸ್ತನು, ಆ ಜೀವಂತ ಹೋತವು ಇಸ್ರಾಯೇಲಿನ ಪಾಪಗಳನ್ನು ಪ್ರತಿನಿಧೀಕರಿಸುವ ರೀತಿಯಲ್ಲಿ ಅರಣ್ಯಕ್ಕೆ ಒಯ್ದ ಹಾಗೆಯೇ ಮಾನವಕುಲದ ಪಾಪಗಳನ್ನು ಕೊಂಡೊಯ್ಯುತ್ತಾನೆ.​—⁠ಯೆಶಾಯ 53:​4, 5.

ಯೆಹೋವನ ಮುಂದೆ ಸಂಭ್ರಮ

14 ದೋಷಪರಿಹಾರಕ ದಿನದ ನಂತರ ಇಸ್ರಾಯೇಲ್ಯರು ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಇದು ಯೆಹೂದಿ ವರ್ಷದಲ್ಲೇ ಅತಿ ಹರ್ಷಕರವಾದ ಹಬ್ಬವಾಗಿತ್ತು. (ಯಾಜಕಕಾಂಡ 23:​34-43) ಎಥನಿಮ್‌ ತಿಂಗಳ 15ರಿಂದ 21ರ ತನಕ ಈ ಹಬ್ಬ ಜರುಗಿ, ಆ ತಿಂಗಳ 22ರಂದು ಒಂದು ವಿಧಿವಿಹಿತ ಸಮ್ಮೇಳನದೊಂದಿಗೆ ಅಂತ್ಯಗೊಂಡಿತು. ಅದು ಕೊಯ್ಲಿನ ಧಾನ್ಯ ಸಂಗ್ರಹದ ಅಂತ್ಯವನ್ನು ಗುರುತಿಸಿದ್ದರಿಂದ ದೇವರ ಹೇರಳವಾದ ಒಳ್ಳೇತನಕ್ಕಾಗಿ ಉಪಕಾರಸ್ಮರಣೆಯ ಸಮಯವಾಗಿತ್ತು. ಆ ಕಾರಣದಿಂದ ಯೆಹೋವನು ಆಚರಣೆಕಾರರಿಗೆ ಆಜ್ಞಾಪಿಸಿದ್ದು: “ನಿಮ್ಮ ವ್ಯವಸಾಯವನ್ನೂ ಬೇರೆ ಎಲ್ಲಾ ಕೆಲಸಗಳನ್ನೂ ಆತನು ಸಫಲವಾಗಿ ಮಾಡಿದ್ದರಿಂದ ನೀವು ಬಹಳ ಆನಂದದಿಂದಿರಬೇಕು.” (ಧರ್ಮೋಪದೇಶಕಾಂಡ 16:15) ಅದೆಷ್ಟು ಸಂತೋಷಸಂಭ್ರಮದ ಸಮಯವಾಗಿದ್ದಿರಬೇಕು!

15 ಆ ಹಬ್ಬದ ಸಮಯದಲ್ಲಿ ಇಸ್ರಾಯೇಲ್ಯರು ಏಳು ದಿನ ಪರ್ಣಶಾಲೆಗಳಲ್ಲಿ ವಾಸಿಸಿದರು. ಹೀಗೆ ತಾವೊಮ್ಮೆ ಅರಣ್ಯದಲ್ಲಿ ಪರ್ಣಶಾಲೆಗಳಲ್ಲಿ ಜೀವಿಸುತ್ತಿದ್ದೆವೆಂಬ ಜ್ಞಾಪನ ಅವರಿಗಾಯಿತು. ಈ ಹಬ್ಬವು ಅವರಿಗೆ ಯೆಹೋವನ ಪಿತೃಸಮಾನವಾದ ಪರಾಮರಿಕೆಯನ್ನು ನೆನಪಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ಕೊಟ್ಟಿತು. (ಧರ್ಮೋಪದೇಶಕಾಂಡ 8:​15, 16) ಧನಿಕರೂ ಬಡವರೂ ಒಂದೇ ತರದ ಪರ್ಣಶಾಲೆಗಳಲ್ಲಿ ವಾಸಿಸಿದ್ದರಿಂದ ಆ ಹಬ್ಬದ ಸಂಬಂಧದಲ್ಲಿ ಅವರೆಲ್ಲರೂ ಸಮಾನರು ಎಂಬ ಮರುಜ್ಞಾಪನ ಅವರಿಗೆ ಕೊಡಲ್ಪಟ್ಟಿತು.​—⁠ನೆಹೆಮೀಯ 8:​14-16.

16 ಪರ್ಣಶಾಲೆಗಳ ಹಬ್ಬವು ಸುಗ್ಗಿಯ ಹಬ್ಬವಾಗಿದ್ದು ಬೆಳೆಯನ್ನು ಸಂಗ್ರಹಿಸುವ ಹರ್ಷಕರ ಆಚರಣೆಯಾಗಿತ್ತು. ಇದು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರ ಹರ್ಷಕರ ಒಟ್ಟುಗೂಡಿಸುವಿಕೆಯನ್ನು ಮುನ್ಸೂಚಿಸಿತು. ಆ ಒಟ್ಟುಗೂಡಿಸುವಿಕೆ ಸಾ.ಶ. 33ರ ಪಂಚಾಶತ್ತಮದಲ್ಲಿ ಯೇಸುವಿನ 120 ಮಂದಿ ಶಿಷ್ಯರು “ಪವಿತ್ರ ಯಾಜಕವರ್ಗದ” ಭಾಗವಾಗಲು ಅಭಿಷಿಕ್ತರಾದಾಗ ಆರಂಭಗೊಂಡಿತು. ಇಸ್ರಾಯೇಲ್ಯರು ಕೆಲವು ದಿನಕಾಲ ಪರ್ಣಶಾಲೆಗಳಲ್ಲಿ ಜೀವಿಸಿದಂತೆಯೇ, ಅಭಿಷಿಕ್ತರಿಗೆ ತಾವು ಈ ದುಷ್ಟ ಭೂಮಿಯ ಮೇಲೆ ಕೇವಲ “ಪ್ರವಾಸಿಗಳು” [“ತಾತ್ಕಾಲಿಕ ನಿವಾಸಿಗಳು,” NW] ಆಗಿದ್ದೇವೆಂಬ ಅರಿವಿದೆ. ಅವರದು ಸ್ವರ್ಗೀಯ ನಿರೀಕ್ಷೆಯಾಗಿದೆ. (1 ಪೇತ್ರ 2:​5, 11) ಅಭಿಷಿಕ್ತ ಕ್ರೈಸ್ತರ ಆ ಒಟ್ಟುಗೂಡಿಸುವಿಕೆಯು ಈ “ಕಡೇ ದಿವಸಗಳಲ್ಲಿ” 1,44,000 ಮಂದಿಯಲ್ಲಿ ಕೊನೆಯವರು ಕೂಡಿಸಲ್ಪಡುವಾಗ ಪರಾಕಾಷ್ಠೆಗೇರುವುದು.​—⁠2 ತಿಮೊಥೆಯ 3:⁠1.

17 ಪೂರ್ವಕಾಲದ ಈ ಹಬ್ಬದಲ್ಲಿ 70 ಹೋರಿಗಳನ್ನು ಅರ್ಪಿಸಲಾದದ್ದು ಗಮನಾರ್ಹ. (ಅರಣ್ಯಕಾಂಡ 29:​12-34) ಆ 70 ಎಂಬ ಸಂಖ್ಯೆ 7ನ್ನು 10ರಿಂದ ಗುಣಿಸುವಾಗ ದೊರೆಯುತ್ತದೆ. ಈ ಸಂಖ್ಯೆಗಳು ಬೈಬಲ್‌ನಲ್ಲಿ ಸ್ವರ್ಗೀಯ ಹಾಗೂ ಭೌಮಿಕ ಪರಿಪೂರ್ಣತೆಯನ್ನು ಪ್ರತಿನಿಧೀಕರಿಸುತ್ತವೆ. ಆದಕಾರಣ, ಯೇಸುವಿನ ಯಜ್ಞವು ನೋಹನಿಂದ ಬಂದಿರುವ ಮಾನವಕುಲದ ಎಲ್ಲ 70 ಕುಟುಂಬದ ನಂಬಿಗಸ್ತ ಜನರಿಗೆ ಪ್ರಯೋಜನವನ್ನು ತರುವುದು. (ಆದಿಕಾಂಡ 10:​1-29) ಅದಕ್ಕೆ ಹೊಂದಿಕೆಯಾಗಿ, ಈ ಒಟ್ಟುಗೂಡಿಸುವಿಕೆಯು ನಮ್ಮ ದಿನಗಳಲ್ಲಿ ಯೇಸುವಿನ ಮೇಲೆ ನಂಬಿಕೆಯನ್ನಿಡುತ್ತ ಭೂಪರದೈಸಿನಲ್ಲಿ ಜೀವಿಸಲು ನಿರೀಕ್ಷಿಸುವ ಸಕಲ ಜನಾಂಗಗಳ ವ್ಯಕ್ತಿಗಳನ್ನು ಒಳಗೊಳ್ಳುವಷ್ಟು ವ್ಯಾಪಕವಾಗಿರುತ್ತದೆ.

18 ಅಪೊಸ್ತಲ ಯೋಹಾನನು ಈ ಆಧುನಿಕ ದಿನದ ಒಟ್ಟುಗೂಡಿಸುವಿಕೆಯನ್ನು ಒಂದು ದರ್ಶನದಲ್ಲಿ ಕಂಡನು. ಪ್ರಥಮವಾಗಿ 1,44,000 ಮಂದಿಯಲ್ಲಿ ಕೊನೆಯವರ ಮೇಲೆ ಮುದ್ರೆ ಒತ್ತುವಿಕೆಯ ಪ್ರಕಟನೆಯನ್ನು ಕೇಳಿಸಿಕೊಂಡನು. ಆ ಬಳಿಕ, “ಯಾರಿಂದಲೂ ಎಣಿಸಲಾಗದಂಥ ಮಹಾಸಮೂಹವು” ಯೆಹೋವನ ಮತ್ತು ಯೇಸುವಿನ ಮುಂದೆ “ಖರ್ಜೂರದ ಗರಿಗಳನ್ನು” ಹಿಡಿದುಕೊಂಡು ನಿಂತಿರುವುದನ್ನು ಅವನು ಕಂಡನು. ಇವರು ‘ಮಹಾಸಂಕಟದಿಂದ ಹೊರಬಂದು’ ನೂತನ ಲೋಕವನ್ನು ಪ್ರವೇಶಿಸಿದವರು. ಇವರು ಸಹ ಈಗ ಈ ಹಳೆಯ ವಿಷಯಗಳ ವ್ಯವಸ್ಥೆಯಲ್ಲಿ ತಾತ್ಕಾಲಿಕ ನಿವಾಸಿಗಳಾಗಿದ್ದಾರೆ. “ಕುರಿಮರಿಯಾದಾತನು ಇವರನ್ನು ಮೇಯಿಸಿ, ಜೀವಜಲದ ಒರತೆಗಳ ಬಳಿ” ನಡೆಸುವ ಸಮಯಕ್ಕಾಗಿ ಇವರು ಭರವಸೆಯಿಂದ ಮುನ್ನೋಡುತ್ತಾರೆ. ಆ ಸಮಯದಲ್ಲಿ, “ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 7:​1-10, 14-17, NIBV) ಕ್ರಿಸ್ತನ ಸಹಸ್ರ ವರುಷಗಳ ಆಳ್ವಿಕೆಯ ಅಂತ್ಯದ ಬಳಿಕ ಆ ಮಹಾಸಮೂಹದವರು ಪುನರುತ್ಥಾನ ಹೊಂದಿದ ನಂಬಿಗಸ್ತರೊಂದಿಗೆ ನಿತ್ಯಜೀವವನ್ನು ಪಡೆದುಕೊಳ್ಳುವಾಗ ಆ ಪಡಿಮಾದರಿಯ ಪರ್ಣಶಾಲೆಗಳ ಹಬ್ಬವು ಪರಮಾವಧಿಗೇರುವುದು.​—⁠ಪ್ರಕಟನೆ 20:⁠5.

19 ಪುರಾತನ ಯೆಹೂದಿ ಹಬ್ಬಗಳ ಅರ್ಥವನ್ನು ಧ್ಯಾನಿಸುವಾಗ ನಾವೂ ‘ಬಹಳ ಆನಂದದಿಂದ’ ಇರಬಲ್ಲೆವು. ಯೆಹೋವನು ಏದೆನಿನಲ್ಲಿ ನುಡಿದ ಪ್ರವಾದನೆಯು ಹೇಗೆ ನೆರವೇರುವುದೆಂಬ ವಿಷಯದಲ್ಲಿ ಆತನು ಕೊಟ್ಟಿರುವ ಮುನ್ನೋಟಗಳನ್ನು ಪರಿಗಣಿಸುವುದು ರೋಮಾಂಚಕವಾಗಿದೆ. ಅದರ ನಿಜ ನೆರವೇರಿಕೆಯು ಹಂತಹಂತವಾಗಿ ನೆರವೇರುತ್ತಿರುವುದನ್ನು ನೋಡುವುದು ಪುಳಕಿತವೂ ಆಗಿದೆ. ಸಂತಾನವಾದಾತನು ತೋರಿಬಂದಿರುವುದೂ ಅವನ ಹಿಮ್ಮಡಿ ಕಚ್ಚಲ್ಪಟ್ಟಿರುವುದೂ ನಮಗಿಂದು ಗೊತ್ತಿದೆ. ಈಗ ಅವನು ಸ್ವರ್ಗೀಯ ಅರಸನಾಗಿದ್ದಾನೆ. ಅಲ್ಲದೆ, ಆ 1,44,000 ಮಂದಿಯಲ್ಲಿ ಹೆಚ್ಚಿನವರು ಈಗಾಗಲೇ ಮರಣದ ಪರ್ಯಂತ ತಮ್ಮ ನಂಬಿಗಸ್ತಿಕೆಯನ್ನು ರುಜುಮಾಡಿರುತ್ತಾರೆ. ಇನ್ನೇನನ್ನು ಮಾಡಲಿಕ್ಕಿದೆ? ಆ ಪ್ರವಾದನೆಯು ಎಷ್ಟು ಬೇಗನೆ ಪೂರ್ತಿಯಾಗಿ ನೆರವೇರುವುದು? ಇದನ್ನು ಮುಂದಿನ ಲೇಖನವು ಚರ್ಚಿಸುವುದು. (w07 1/1)

[ಪಾದಟಿಪ್ಪಣಿಗಳು]

^ ಪ್ಯಾರ. 7 ನೈಸಾನ್‌ ತಿಂಗಳು ನಮ್ಮ ಇಂದಿನ ಕ್ಯಾಲೆಂಡರ್‌ನಲ್ಲಿ ಮಾರ್ಚ್‌/ಏಪ್ರಿಲ್‌ ತಿಂಗಳುಗಳಿಗೆ ಸರಿಹೋಲುತ್ತದೆ.

^ ಪ್ಯಾರ. 12 ಈ ಹುಳಿಹಾಕಿದ ರೊಟ್ಟಿಗಳನ್ನು ನಿವಾಳಿಸುವಾಗ ಯಾಜಕನು ಅವುಗಳನ್ನು ತನ್ನ ಅಂಗೈಗಳಲ್ಲಿ ಹಿಡಿದು ಕೈಗಳನ್ನೆತ್ತಿ ರೊಟ್ಟಿಗಳನ್ನು ಪಕ್ಕದಿಂದ ಪಕ್ಕಕ್ಕೆ ಓಲಾಡಿಸುತ್ತಿದ್ದನು. ಈ ಸನ್ನೆಯು ಯಜ್ಞಾರ್ಪಿತವಾದುದನ್ನು ಯೆಹೋವನಿಗೆ ಅರ್ಪಿಸುವುದನ್ನು ಸೂಚಿಸಿತು.​—⁠ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌ ಸಂಪುಟ 2, ಪುಟ 528ನ್ನು ನೋಡಿ.

^ ಪ್ಯಾರ. 17 ಎಥನಿಮ್‌ ಅಥವಾ ಟಿಶ್ರೀ ನಮ್ಮ ಇಂದಿನ ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್‌/ಅಕ್ಟೋಬರ್‌ಗಳಿಗೆ ಸರಿಹೋಲುತ್ತದೆ.

ವಿವರಿಸಬಲ್ಲಿರಾ?

• ಪಸ್ಕದ ಕುರಿಮರಿ ಏನನ್ನು ಮುನ್ಸೂಚಿಸಿತು?

• ಪಂಚಾಶತ್ತಮ ಹಬ್ಬವು ಯಾವ ಒಟ್ಟುಗೂಡಿಸುವಿಕೆಯನ್ನು ಮುನ್ಸೂಚಿಸಿತು?

• ದೋಷಪರಿಹಾರಕ ದಿನದ ಯಾವ ವೈಶಿಷ್ಟ್ಯಗಳು ಯೇಸುವಿನ ವಿಮೋಚನಾಮೌಲ್ಯ ಯಜ್ಞದಿಂದ ಪ್ರಯೋಜನಹೊಂದುವ ವಿಧವನ್ನು ಸೂಚಿಸಿದವು?

• ಪರ್ಣಶಾಲೆಗಳ ಹಬ್ಬವು ಕ್ರೈಸ್ತರ ಒಟ್ಟುಗೂಡಿಸುವಿಕೆಯನ್ನು ಯಾವ ವಿಧದಲ್ಲಿ ಮುನ್ಸೂಚಿಸಿತು?

[ಅಧ್ಯಯನ ಪ್ರಶ್ನೆಗಳು]

1. (ಎ) ಸೈತಾನನು ಯಾವ ವಿವಾದಾಂಶಗಳನ್ನು ಎಬ್ಬಿಸಿದನು? (ಬಿ) ಆದಾಮಹವ್ವರ ದಂಗೆಯ ಬಳಿಕ ಯೆಹೋವನು ಏನನ್ನು ಮುಂತಿಳಿಸಿದನು?

2. ಆದಿಕಾಂಡ 3:15ರ ಪ್ರವಾದನೆಯನ್ನು ತಾನು ನೆರವೇರಿಸುವ ವಿಧದ ಮೇಲೆ ಯೆಹೋವನು ಯಾವ ಬೆಳಕನ್ನು ಬೀರಿದನು?

3. ಆ ವಾಗ್ದತ್ತ ಸಂತಾನ ಯಾರು ಮತ್ತು ಅವನ ಹಿಮ್ಮಡಿ ಕಚ್ಚಲ್ಪಟ್ಟದ್ದು ಹೇಗೆ?

4. ಯೇಸುವಿನ ಯಜ್ಞವು ಹೇಗೆ ಮುನ್‌ಸೂಚಿಸಲ್ಪಟ್ಟಿತ್ತು?

5, 6. (ಎ) ಯೇಸುವಿಗೆ ಯಾವಾಗ ಪುನರುತ್ಥಾನವಾಯಿತು ಮತ್ತು ಆ ಘಟನೆ ಧರ್ಮಶಾಸ್ತ್ರದಲ್ಲಿ ಹೇಗೆ ಮುನ್ಸೂಚಿಸಲ್ಪಟ್ಟಿತ್ತು? (ಬಿ) ಯೇಸುವಿನ ಪುನರುತ್ಥಾನವು ಆದಿಕಾಂಡ 3:15ರ ನೆರವೇರಿಕೆಯನ್ನು ಸಾಧ್ಯಗೊಳಿಸಿದ್ದು ಹೇಗೆ?

7. ವಾರಗಳ ಹಬ್ಬವೆಂದರೇನು?

8. ಸಾ.ಶ. 33ರ ಪಂಚಾಶತ್ತಮದಲ್ಲಿ ಯಾವ ಗಮನಾರ್ಹವಾದ ಘಟನೆ ನಡೆಯಿತು?

9, 10. ಅಭಿಷಿಕ್ತ ಕ್ರೈಸ್ತರ ಸಭೆಯು ಪಂಚಾಶತ್ತಮದಲ್ಲಿ ಹೇಗೆ ಮುನ್ಸೂಚಿಸಲ್ಪಟ್ಟಿತು?

11, 12. (ಎ) ದೋಷಪರಿಹಾರಕ ದಿನದಲ್ಲಿ ಏನು ನಡೆಯಿತು? (ಬಿ) ಹೋರಿ ಮತ್ತು ಹೋತದ ಯಜ್ಞಗಳಿಂದ ಇಸ್ರಾಯೇಲ್ಯರು ಯಾವ ಪ್ರಯೋಜನಗಳನ್ನು ಪಡೆದುಕೊಂಡರು?

13. ದೋಷಪರಿಹಾರಕ ದಿನದ ಘಟನೆಗಳು ಯೇಸು ವಹಿಸುವ ಪಾತ್ರವನ್ನು ಹೇಗೆ ಮುನ್ಸೂಚಿಸಿದವು?

14, 15. ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಏನು ನಡೆಯಿತು ಮತ್ತು ಇದು ಇಸ್ರಾಯೇಲ್ಯರಿಗೆ ಯಾವುದನ್ನು ಜ್ಞಾಪಕ ಹುಟ್ಟಿಸಿತು?

16. ಪರ್ಣಶಾಲೆಗಳ ಹಬ್ಬವು ಏನನ್ನು ಮುನ್ಸೂಚಿಸಿತು?

17, 18. (ಎ) ಅಭಿಷಿಕ್ತರಲ್ಲದ ಇತರರು ಕ್ರಿಸ್ತನ ಯಜ್ಞದಿಂದ ಪ್ರಯೋಜನಹೊಂದುವರು ಎಂಬುದನ್ನು ಯಾವುದು ಸೂಚಿಸುತ್ತದೆ? (ಬಿ) ಪಡಿಮಾದರಿಯ ಪರ್ಣಶಾಲೆಗಳ ಹಬ್ಬದಿಂದ ಇಂದು ಯಾರು ಪ್ರಯೋಜನಹೊಂದುತ್ತಿದ್ದಾರೆ ಮತ್ತು ಆ ಹರ್ಷಭರಿತ ಹಬ್ಬವು ಯಾವಾಗ ಪರಮಾವಧಿಗೇರುವುದು?

19. ಇಸ್ರಾಯೇಲಿನಲ್ಲಿ ಆಚರಿಸಲ್ಪಡುತ್ತಿದ್ದ ಹಬ್ಬಗಳ ಚರ್ಚೆಯಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

[ಪುಟ 24, 25ರಲ್ಲಿರುವ ಚಾರ್ಟು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಂಭವ: ಮುನ್ಸೂಚಿಸಿದ್ದು:

ಪಸ್ಕ ಹಬ್ಬ ನೈಸಾನ್‌ 14 ಪಸ್ಕದಲ್ಲಿ ಕೊಯ್ದ ಕುರಿಮರಿ ಯೇಸುವಿನ ಯಜ್ಞಾರ್ಪಣೆ

ಹುಳಿಯಿಲ್ಲದ ನೈಸಾನ್‌ 15 ಸಬ್ಬತ್‌

ರೊಟ್ಟಿಗಳ ಜಾತ್ರೆ

(ನೈಸಾನ್‌ 15-21) ನೈಸಾನ್‌ 16 ಜವೆಗೋದಿಯ ಅರ್ಪಣೆ ಯೇಸುವಿನ ಪುನರುತ್ಥಾನ

50 ದಿನಗಳು

ವಾರಗಳ ಹಬ್ಬ ಸಿವಾನ್‌ 6 ಎರಡು ರೊಟ್ಟಿಗಳ ಯೇಸು ತನ್ನ ಅಭಿಷಿಕ್ತ

(ಪಂಚಾಶತ್ತಮ) ಅರ್ಪಣೆ ಸಹೋದರರನ್ನು ಯೆಹೋವನಿಗೆ

ಅರ್ಪಿಸಿದನು

ದೋಷಪರಿಹಾರಕ ಟಿಶ್ರೀ 10 ಒಂದು ಹೋರಿ ಮತ್ತು ಯೇಸು ಇಡೀ ಮಾನವಕುಲಕ್ಕಾಗಿ

ದಿನ ಎರಡು ಹೋತಗಳ ಅರ್ಪಣೆ ತನ್ನ ರಕ್ತದ ಮೌಲ್ಯವನ್ನು

ಅರ್ಪಿಸಿದನು

ಪರ್ಣಶಾಲೆಗಳ ಟಿಶ್ರೀ 15-21 ಇಸ್ರಾಯೇಲ್ಯರು ಆನಂದದಿಂದ ಅಭಿಷಿಕ್ತರ ಮತ್ತು

ಹಬ್ಬ ಪರ್ಣಶಾಲೆಗಳಲ್ಲಿ ವಾಸಿಸಿದರು, ‘ಮಹಾಸಮೂಹದ’

(ಶೇಖರಣೆ) ಸುಗ್ಗಿಯಲ್ಲಿ ಸಂತೋಷಿಸಿದರು, ಒಟ್ಟುಗೂಡಿಸುವಿಕೆ

70 ಹೋರಿಗಳನ್ನು ಅರ್ಪಿಸಿದರು

[ಪುಟ 23ರಲ್ಲಿರುವ ಚಿತ್ರಗಳು]

ಪಸ್ಕದ ಕುರಿಮರಿಯ ರಕ್ತದ ಹಾಗೆಯೇ ಯೇಸು ಸುರಿಸಿದ ರಕ್ತವು ಅನೇಕರಿಗೆ ರಕ್ಷಣೆಯನ್ನು ಒದಗಿಸುತ್ತದೆ

[ಪುಟ 24ರಲ್ಲಿರುವ ಚಿತ್ರಗಳು]

ನೈಸಾನ್‌ 16ರಂದು ಅರ್ಪಿಸಲಾದ ಜವೆಗೋದಿಯ ಕೊಯ್ಲಿನ ಪ್ರಥಮಫಲಗಳು ಯೇಸುವಿನ ಪುನರುತ್ಥಾನವನ್ನು ಮುನ್ಸೂಚಿಸಿದವು

[ಪುಟ 25ರಲ್ಲಿರುವ ಚಿತ್ರಗಳು]

ಪಂಚಾಶತ್ತಮದಲ್ಲಿ ಅರ್ಪಿಸಲಾದ ಎರಡು ರೊಟ್ಟಿಗಳು ಅಭಿಷಿಕ್ತ ಕ್ರೈಸ್ತರ ಸಭೆಯನ್ನು ಮುನ್ಸೂಚಿಸಿತು

[ಪುಟ 26ರಲ್ಲಿರುವ ಚಿತ್ರಗಳು]

ಪರ್ಣಶಾಲೆಗಳ ಹಬ್ಬವು ಅಭಿಷಿಕ್ತ ಕ್ರೈಸ್ತರ ಮತ್ತು ಎಲ್ಲ ಜನಾಂಗಗಳಿಂದ ಬರುವ ‘ಮಹಾಸಮೂಹದ’ ಹರ್ಷಕರ ಒಟ್ಟುಗೂಡಿಸುವಿಕೆಯನ್ನು ಮುನ್ಸೂಚಿಸಿತು