ಬಿರುಗಾಳಿಯಿಂದಲೂ ಪಾರಾಗಬಲ್ಲಿರಿ
ಬಿರುಗಾಳಿಯಿಂದಲೂ ಪಾರಾಗಬಲ್ಲಿರಿ
ಈ ಕಠಿನಕಾಲಗಳಲ್ಲಿ, ಅನೇಕರು ಬಿರುಗಾಳಿಯಂತಿರುವ ಆಪತ್ತುಗಳನ್ನು ಎದುರಿಸುತ್ತಿದ್ದಾರೆ. ಆದರೆ ಕ್ರೈಸ್ತರಿಗೆ, ದೇವರ ಮೇಲಿರುವ ಪ್ರೀತಿಯಿಂದಾಗಿ ಮತ್ತು ಆತನ ತತ್ತ್ವಗಳಿಗೆ ಅವರು ತೋರಿಸುವ ನಿಷ್ಠೆಯಿಂದಾಗಿ ಕಷ್ಟಗಳನ್ನು ನಿಭಾಯಿಸಲು ಸಹಾಯಸಿಗುತ್ತದೆ. ಅದು ಹೇಗೆ? ಇದಕ್ಕೆ ಉತ್ತರವನ್ನು, ಯೇಸು ಹೇಳಿದ ಒಂದು ಸಾಮ್ಯದಲ್ಲಿ ಕಂಡುಕೊಳ್ಳಬಹುದು. ಯೇಸು ತನ್ನ ವಿಧೇಯ ಶಿಷ್ಯರನ್ನು, ‘ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನಿಗೆ’ ಹೋಲಿಸಿದನು. ಅವನು ಹೇಳಿದ್ದು: “ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಂದ ಅದು ಬೀಳಲಿಲ್ಲ.”—ಮತ್ತಾಯ 7:24, 25.
ಸಾಮ್ಯದಲ್ಲಿ ತಿಳಿಸಲ್ಪಟ್ಟ ಮನುಷ್ಯನು ಬುದ್ಧಿವಂತನಾಗಿದ್ದರೂ, ಮಳೆ, ಪ್ರವಾಹ ಮತ್ತು ಚಂಡಮಾರುತದಂತಿರುವ ಕಷ್ಟಗಳನ್ನು ಅವನು ಅನುಭವಿಸಿದನು. ಹೀಗೆ, ತನ್ನ ಶಿಷ್ಯರು ಯಾವುದೇ ಕಷ್ಟಗಳಿಗೆ ತುತ್ತಾಗದೆ ನೆಮ್ಮದಿಯ ಜೀವನವನ್ನು ನಡೆಸುವರೆಂದು ಯೇಸು ಹೇಳಲಿಲ್ಲ. (ಕೀರ್ತನೆ 34:19; ಯಾಕೋಬ 4:13-15) ಆದರೆ ದೇವರ ನಂಬಿಗಸ್ತ ಸೇವಕರು ತೀವ್ರವಾದ ಕಷ್ಟಸಂಕಟಗಳು ಮತ್ತು ಬಿಕ್ಕಟ್ಟುಗಳಿಗಾಗಿ ಪೂರ್ವ ಸಿದ್ಧರಾಗಿದ್ದುಕೊಂಡು ಅವುಗಳನ್ನು ಯಶಸ್ವಿಕರವಾಗಿ ನಿಭಾಯಿಸಶಕ್ತರು ಎಂದು ಯೇಸು ಹೇಳಿದನು.
ಸಾಮ್ಯದ ಆರಂಭದಲ್ಲಿ ಯೇಸು ಹೇಳಿದ್ದು: “ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು.” ಇಲ್ಲಿ ಯೇಸು ಅಕ್ಷರಶಃವಾಗಿ ಮನೆಕಟ್ಟುವುದರ ಬಗ್ಗೆ ಅಲ್ಲ, ಬದಲಾಗಿ ಕ್ರಿಸ್ತೀಯ ಜೀವನವನ್ನು ಕಟ್ಟುವುದರ ಬಗ್ಗೆ ಮಾತಾಡುತ್ತಿದ್ದನು. ಯೇಸುವಿನ ಮಾತುಗಳನ್ನು ಪಾಲಿಸುವವರು ವಿವೇಚನಾಶಕ್ತಿ ಮತ್ತು ಉತ್ತಮವಾದ ತೀರ್ಮಾನಶಕ್ತಿಯನ್ನು ಬಳಸುತ್ತಾರೆ. ತಮಗೆ ಕಲಿಸಲಾಗಿರುವ ಸಂಗತಿಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಅವರು ಕ್ರಿಸ್ತನ ಬೋಧನೆಗಳು ಎಂಬ ಬಲವಾದ ಬಂಡೆಯ ಮೇಲೆ ತಮ್ಮ ಆಲೋಚನೆಗಳು ಮತ್ತು ಕಾರ್ಯಗಳನ್ನು ಕಟ್ಟುತ್ತಾರೆ. ಆಸಕ್ತಿಕರವಾಗಿ, ಈ ಸಾಂಕೇತಿಕ ಬಂಡೆಯು ಸುಲಭವಾಗಿ ಗೋಚರವಾಗುವುದಿಲ್ಲ. ದೃಷ್ಟಾಂತದಲ್ಲಿ ತಿಳಿಸಲ್ಪಟ್ಟ ಮನುಷ್ಯನು ಅದನ್ನು ಕಂಡುಕೊಳ್ಳಲು “ಆಳವಾಗಿ ಅಗಿದು” ಶ್ರಮಪಡಬೇಕಾಗಿತ್ತು. (ಲೂಕ 6:48) ತದ್ರೀತಿಯಲ್ಲಿ ಯೇಸುವಿನ ಶಿಷ್ಯರು, ತಮ್ಮನ್ನು ದೇವರ ಸಮೀಪಕ್ಕೆ ತರುವಂತಹ ಬಾಳುವ ಗುಣಗಳನ್ನು ಬೆಳೆಸಿಕೊಳ್ಳಲಿಕ್ಕಾಗಿ ಶ್ರಮಿಸುತ್ತಾ ಇರುತ್ತಾರೆ.—ಮತ್ತಾಯ 5:5-7; 6:33.
ಯೇಸುವಿನ ಹಿಂಬಾಲಕರ ಕ್ರಿಸ್ತೀಯ ಅಸ್ತಿವಾರವು ಎಷ್ಟು ದೃಢವಾಗಿದೆ ಎಂಬುದನ್ನು ಬಿರುಗಾಳಿಯಂತಹ ಕಷ್ಟಗಳು ಪರೀಕ್ಷಿಸುವಾಗ ಆಗೇನು? ಅವರು ಸಿದ್ಧಮನಸ್ಸಿನಿಂದ ಕ್ರಿಸ್ತನ ಬೋಧನೆಗಳಿಗೆ ತೋರಿಸುವ ವಿಧೇಯತೆ ಮತ್ತು ಅವರ ಕ್ರಿಸ್ತೀಯ ಗುಣಗಳು, ಅಂಥ ಕಷ್ಟಗಳನ್ನು ಅದರಲ್ಲೂ ಮುಖ್ಯವಾಗಿ, ಬರಲಿರುವ ಬಿರುಗಾಳಿಯಂಥ ಅರ್ಮಗೆದ್ದೋನಿನಲ್ಲಿ ಪಾರಾಗಲು ಬಲವನ್ನು ಕೊಡುತ್ತವೆ. (ಮತ್ತಾಯ 5:10-12; ಪ್ರಕಟನೆ 16:15, 16) ಹೌದು, ಕ್ರಿಸ್ತನ ಬೋಧನೆಗಳನ್ನು ಅನುಸರಿಸುವುದರ ಮೂಲಕ ಅನೇಕರು ಬಿರುಗಾಳಿಯಂಥ ಕಷ್ಟಗಳಿಂದ ಯಶಸ್ವಿಯಾಗಿ ಪಾರಾಗುತ್ತಿದ್ದಾರೆ. ನೀವು ಸಹ ಹಾಗೆ ಮಾಡಬಲ್ಲಿರಿ.—1 ಪೇತ್ರ 2:21-23. (w07 1/1)