ಯಶಸ್ಸು ನಿಮ್ಮ ಎಣಿಕೆಯಲ್ಲಿ ಅದೇನು?
ಯಶಸ್ಸು ನಿಮ್ಮ ಎಣಿಕೆಯಲ್ಲಿ ಅದೇನು?
ಜೆಸ್ಸಿ ಲಿವರ್‌ಮೋರ್ ಎಂಬುವವನು, ಅಮೆರಿಕದ ವಾಲ್ ಸ್ಟ್ರೀಟ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಅತಿ ಯಶಸ್ವಿ ಸ್ಟಾಕ್ ಬ್ರೋಕರ್ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಅವನು ವ್ಯಾಪಾರದ ವಿಷಯದಲ್ಲಿ ಜಾಣ್ಮೆಯ ನಿರ್ಣಯಗಳನ್ನು ಮಾಡುವುದಕ್ಕಾಗಿ ಹೆಸರುವಾಸಿಯಾಗಿದ್ದನು. ಈ ಮೂಲಕ, ಅವನು ಅಪಾರ ಸಂಪತ್ತನ್ನು ಶೇಖರಿಸಿದ್ದನು. ಅವನು, ತನಗೋಸ್ಕರವೆಂದೇ ವಿಶೇಷವಾಗಿ ಹೊಲಿಸಲಾಗುತ್ತಿದ್ದ ಅತ್ಯುತ್ತಮ ಗುಣಮಟ್ಟದ ಸೂಟುಗಳನ್ನು ಧರಿಸುತ್ತಿದ್ದನು, 29 ಕೋಣೆಗಳಿರುವ ಒಂದು ಭವ್ಯ ಮಹಲಿನಲ್ಲಿ ವಾಸಿಸುತ್ತಿದ್ದನು ಮತ್ತು ಒಬ್ಬ ಚಾಲಕನಿಂದ ಓಡಿಸಲ್ಪಡುತ್ತಿದ್ದ ಕಪ್ಪು ಬಣ್ಣದ ಅತಿ ದುಬಾರಿಯಾದ ರಾಲ್ಸ್ ರಾಯ್ಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದನು.
ಡೇವಿಡ್ * ಎಂಬವನಿಗೂ ಅದೇ ರೀತಿಯ ಯಶಸ್ಸನ್ನು ಪಡೆಯಬೇಕೆಂಬ ಹೆಬ್ಬಯಕೆಯಿತ್ತು. ಅವನೊಂದು ದೊಡ್ಡ ಗ್ರಾಫಿಕ್ಸ್ ಕಂಪೆನಿಯ ಉಪಾಧ್ಯಕ್ಷ ಹಾಗೂ ಜೆನರಲ್ ಮ್ಯಾನೇಜರ್ ಆಗಿದ್ದನು ಮತ್ತು ಮುಂದಕ್ಕೆ ಆ ಕಂಪೆನಿಯ ವಿಭಾಗೀಯ ಅಧ್ಯಕ್ಷನಾಗಲಿದ್ದನು. ಹಣ ಹಾಗೂ ಅಂತಸ್ತು ಅವನನ್ನು ಕೈಬೀಸಿ ಕರೆಯುತ್ತಿದ್ದಂತೆ ತೋರುತ್ತಿತ್ತು. ಆದರೆ ಡೇವಿಡ್ ಆ ಕೆಲಸಕ್ಕೆ ರಾಜೀನಾಮೆ ಕೊಡುವ ವೈಯಕ್ತಿಕ ನಿರ್ಣಯ ಮಾಡಿದನು. “ಕಾರ್ಯನಿರ್ವಾಹಕನಾಗಿ ಬಹಳಷ್ಟು ಹಣವನ್ನು ಸಂಪಾದಿಸಬಹುದಾದ ಇಂಥ ಜೀವನೋದ್ಯೋಗ ಇನ್ನೆಂದೂ ಸಿಗುವುದಿಲ್ಲವೆಂದು ನನಗೆ ಗೊತ್ತಿದೆ” ಎಂದು ಡೇವಿಡ್ ಹೇಳಿದನು. ಹೀಗಿರುವುದರಿಂದ, ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಡೇವಿಡ್ ಒಂದು ದೊಡ್ಡ ತಪ್ಪು ಮಾಡಿಬಿಟ್ಟನೆಂದು ನಿಮಗನಿಸುತ್ತದೊ?
ಯಶಸ್ಸು ಅಂದರೆ, ಹಣ ಮತ್ತು ಪ್ರಖ್ಯಾತಿಯನ್ನು ಗಳಿಸುವುದೇ ಆಗಿದೆ ಎಂದು ಅನೇಕರು ನಂಬುತ್ತಾರೆ. ಆದರೆ ವಾಸ್ತವದಲ್ಲಿ, ಭೌತಿಕ ಸಮೃದ್ಧಿಯುಳ್ಳವರ ಬಳಿ ಬಹಳಷ್ಟು ಹಣ ಹಾಗೂ ಪ್ರಖ್ಯಾತಿ ಇರಬಹುದಾದರೂ ಅವರು ತಮ್ಮೊಳಗೇ ಒಂದು ರೀತಿಯ ಶೂನ್ಯಭಾವವನ್ನು ಅನುಭವಿಸುತ್ತಾರೆ. ತಮ್ಮ ಜೀವನಕ್ಕೆ ಅರ್ಥ ಹಾಗೂ ಉದ್ದೇಶವಿಲ್ಲವೆಂದು ಅವರಿಗೆ ಭಾಸವಾಗುತ್ತದೆ. ಲಿವರ್‌ಮೋರನ ಸನ್ನಿವೇಶವು ಸಹ ಹೀಗೆಯೇ ಇತ್ತೆಂದು ವ್ಯಕ್ತವಾಗುತ್ತದೆ. ಅವನಿಗೆ ಅಷ್ಟೊಂದು ಐಶ್ವರ್ಯವಿದ್ದರೂ, ಅವನ ಜೀವನವು ಹೃದ್ವೇದನೆ, ದುರಂತ ಮತ್ತು ದುಃಖದಿಂದ ತುಂಬಿಹೋಗಿತ್ತು. ಅವನು ಖಿನ್ನತೆಯನ್ನು ಅನುಭವಿಸಿದನು, ಅನೇಕಸಲ ಮದುವೆ ಮಾಡಿಕೊಂಡರೂ ಅವು ಪ್ರತಿ ಸಲ ಮುರಿದುಬಿದ್ದವು ಹಾಗೂ
ಅವನ ಪುತ್ರರೊಂದಿಗೆ ಅವನಿಗಿದ್ದ ಸಂಬಂಧವು ಭಾವಶೂನ್ಯವಾಗಿತ್ತು. ಕೊನೆಗೆ, ಅವನು ತನ್ನ ಸಂಪತ್ತಿನಲ್ಲಿ ಬಹಳಷ್ಟನ್ನು ಕಳೆದುಕೊಂಡನು. ಇದಾದ ಬಳಿಕ ಅವನು ಒಂದು ದಿನ ತನಗಾಗಿರುವ ನಷ್ಟಗಳ ಬಗ್ಗೆ ದುಃಖಿಸುತ್ತಾ ಐಷಾರಾಮದ ಹೋಟೇಲೊಂದರ ಬಾರ್‌ನಲ್ಲಿ ಕುಳಿತುಕೊಂಡು ತನಗೊಂದು ಮದ್ಯಪಾನೀಯವನ್ನು ಆರ್ಡರ್ ಮಾಡಿದನು. ನಂತರ ತನ್ನ ಡೈರಿಯನ್ನು ಹೊರತೆಗೆದು ಪತ್ನಿಗೆ ವಿದಾಯಹೇಳುವ ಪತ್ರವನ್ನು ಬರೆದನು. ಅವನು ಆರ್ಡರ್ ಮಾಡಿದ್ದ ಮದ್ಯಪಾನೀಯವನ್ನು ಕುಡಿದು, ಮಂದವಾದ ಬೆಳಕಿರುವ ಉಡುಪು ಕೋಣೆಯೊಳಗೆ ಹೋಗಿ ತನಗೇ ಗುಂಡಿಕ್ಕಿ ಪ್ರಾಣತೆಗೆದುಕೊಂಡನು.ಅವನು ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ಇನ್ನಿತರ ಕಾರಣಗಳಿದ್ದರೂ ಅವನ ಅನುಭವವು ಬೈಬಲಿನ ಈ ಹೇಳಿಕೆಯ ಸತ್ಯತೆಗೆ ಸಾಕ್ಷ್ಯವನ್ನು ಕೊಡುತ್ತದೆ: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”—1 ತಿಮೊಥೆಯ 6:9, 10.
ಹಾಗಾದರೆ ಹಣ, ಸ್ಥಾನಮಾನ ಇಲ್ಲವೆ ಪ್ರಖ್ಯಾತಿ ಇದ್ದರೆ ಮಾತ್ರ ಒಬ್ಬನು ಯಶಸ್ವಿಯಾಗಿದ್ದಾನೆಂದು ಹೇಳುವವರು, ಯಶಸ್ಸನ್ನು ಅಳೆಯಲಿಕ್ಕಾಗಿ ತಪ್ಪಾದ ಮಾನದಂಡವನ್ನು ಉಪಯೋಗಿಸುತ್ತಿದ್ದಾರೋ? ನೀವು ಜೀವನದಲ್ಲಿ ಯಶಸ್ವಿಗಳಾಗಿದ್ದೀರೆಂದು ನೆನಸುತ್ತೀರೊ? ಏಕೆ? ಹೀಗೆ ಎಣಿಸಲು ನೀವು ಯಾವ ಮಾನದಂಡವನ್ನು ಬಳಸುತ್ತಿದ್ದೀರಿ? ಯಶಸ್ಸಿನ ಬಗ್ಗೆ ನಿಮಗಿರುವ ಅಭಿಪ್ರಾಯವು ಹೇಗೆ ರೂಪುಗೊಂಡಿದೆ? ಮಿಲ್ಯಾಂತರ ಜನರು ಯಶಸ್ಸನ್ನು ಗಳಿಸುವಂತೆ ಸಾಧ್ಯಗೊಳಿಸಿರುವ ಭರವಸಾರ್ಹ ಸಲಹೆಯನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗಿದೆ. ನೀವು ಸಹ ಹೇಗೆ ಯಶಸ್ವಿಗಳಾಗಬಲ್ಲಿರೆಂದು ನೋಡೋಣ. (w07 1/1)
[ಪಾದಟಿಪ್ಪಣಿ]
^ ಪ್ಯಾರ. 3 ಹೆಸರನ್ನು ಬದಲಾಯಿಸಲಾಗಿದೆ.