ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ‘ನ್ಯಾಯವನ್ನು ತೀರಿಸುವನು’

ಯೆಹೋವನು ‘ನ್ಯಾಯವನ್ನು ತೀರಿಸುವನು’

ಯೆಹೋವನು ‘ನ್ಯಾಯವನ್ನು ತೀರಿಸುವನು’

“ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು . . . ಅವರ ನ್ಯಾಯವನ್ನು ತೀರಿಸದೆ ಇರುವನೇ?”​—⁠ಲೂಕ 18:⁠7.

ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು, ಅನೇಕ ವರ್ಷಕಾಲ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿರುವವರ ಒಡನಾಟದಲ್ಲಿ ಆನಂದಿಸುತ್ತಾರೆ. ಈ ಪ್ರಿಯರಲ್ಲಿ ಕೆಲವರನ್ನು ವೈಯಕ್ತಿಕವಾಗಿ ನೀವು ಬಲ್ಲಿರಾ? ಅನೇಕ ವರುಷಗಳ ಹಿಂದೆ ದೀಕ್ಷಾಸ್ನಾನ ಪಡೆದು ಈಗಲೂ ಕೂಟಗಳಿಗೆ ಬಹುಮಟ್ಟಿಗೆ ಕ್ರಮವಾಗಿ ಹಾಜರಾಗುತ್ತಿರುವ ವೃದ್ಧ ಸಹೋದರಿಯೊಬ್ಬಳು ತಟ್ಟನೆ ನಿಮ್ಮ ಮನಸ್ಸಿಗೆ ಬರಬಹುದು. ಅಥವಾ ದಶಕಗಳಿಂದ ಸಭೆಯೊಡನೆ ಕ್ಷೇತ್ರಸೇವೆಯನ್ನು ವಾರವಾರವೂ ಬಿಡದೆ ನಿಷ್ಠೆಯಿಂದ ಬೆಂಬಲಿಸುವ ವೃದ್ಧ ಸಹೋದರನೊಬ್ಬನನ್ನು ನೀವು ನೆನಪಿಸಿಕೊಳ್ಳಬಹುದು. ಈ ನಂಬಿಗಸ್ತರಲ್ಲಿ ಅನೇಕರು ಹರ್ಮಗೆದೋನ್‌ ಇಷ್ಟರಲ್ಲೇ ಬಂದುಹೋಗಿರುತ್ತಿತ್ತೆಂದು ಭಾವಿಸಿದ್ದು ನಿಶ್ಚಯ. ಆದರೂ, ಅನ್ಯಾಯವೇ ತಾಂಡವವಾಡುತ್ತಿರುವ ಈ ಜಗತ್ತು ಇನ್ನೂ ಅಸ್ತಿತ್ವದಲ್ಲಿದೆ. ಇದು ಯೆಹೋವನ ವಾಗ್ದಾನಗಳಲ್ಲಿನ ಅವರ ಭರವಸೆಯನ್ನು ಶಿಥಿಲಗೊಳಿಸಿಲ್ಲ. “ಕಡೇವರೆಗೂ ತಾಳುವ” ಅವರ ದೃಢತೆಯನ್ನು ಸಹ ಕ್ಷೀಣಗೊಳಿಸಿಲ್ಲ. (ಮತ್ತಾಯ 24:13) ನಿಜವಾಗಿಯೂ ಯೆಹೋವನ ಇಂತಹ ನಿಷ್ಠಾವಂತ ಸೇವಕರ ಗಾಢ ನಂಬಿಕೆ ಇಡೀ ಸಭೆಗೆ ಪ್ರೋತ್ಸಾಹನೆಯ ಮೂಲವಾಗಿದೆ.​—⁠ಕೀರ್ತನೆ 147:11.

2 ಆದರೆ ಕೆಲವೊಮ್ಮೆ ಇದಕ್ಕೆ ಪ್ರತಿಕೂಲವಾಗಿರುವುದನ್ನು ನಾವು ನೋಡಬಹುದು. ಎಷ್ಟೋ ವರ್ಷಕಾಲ ಶುಶ್ರೂಷೆಯಲ್ಲಿ ಭಾಗಿಗಳಾಗಿದ್ದ ಕೆಲವು ಮಂದಿ ಸಾಕ್ಷಿಗಳು ಯೆಹೋವನ ಮೇಲಿದ್ದ ತಮ್ಮ ನಂಬಿಕೆ ಕ್ರಮೇಣ ಕ್ಷೀಣಿಸಿದ ಕಾರಣ ಈಗ ಕ್ರೈಸ್ತಸಭೆಯೊಂದಿಗೆ ಸಹವಾಸಿಸುವುದನ್ನು ನಿಲ್ಲಿಸಿದ್ದಾರೆ. ನಮ್ಮ ಹಿಂದಿನ ಮಿತ್ರರು ಯೆಹೋವನನ್ನು ತ್ಯಜಿಸಿರುವುದು ನಮಗೆ ದುಃಖವನ್ನುಂಟುಮಾಡಿದೆ. ಈ ‘ತಪ್ಪಿಹೋದ ಕುರಿಗಳಲ್ಲಿ’ ಪ್ರತಿಯೊಂದಕ್ಕೆ ಸದಾ ಸಹಾಯ ನೀಡಿ ಮಂದೆಗೆ ಹಿಂದಿರುಗುವಂತೆ ಮಾಡುವುದೇ ನಮ್ಮ ಹಾರ್ದಿಕ ಬಯಕೆ. (ಕೀರ್ತನೆ 119:176; ರೋಮಾಪುರ 15:⁠1) ಹೀಗಿದ್ದರೂ, ಈ ಪ್ರತಿಕೂಲ ಪರಿಣಾಮಗಳು ಅಂದರೆ ಕೆಲವರು ನಂಬಿಗಸ್ತರಾಗಿರುವಾಗ ಇತರರು ನಂಬಿಕೆಯನ್ನು ಕಳಕೊಳ್ಳುವುದು ಪ್ರಶ್ನೆಗಳನ್ನೆಬ್ಬಿಸುತ್ತವೆ. ಕೆಲವರು ಯೆಹೋವನ ವಾಗ್ದಾನಗಳಲ್ಲಿನ ನಂಬಿಕೆಯನ್ನು ಕಳೆದುಕೊಳ್ಳುವಾಗ ಅನೇಕಾನೇಕ ಮಂದಿ ಸಾಕ್ಷಿಗಳು ನಂಬಿಗಸ್ತರಾಗಿರಲು ಯಾವುದು ಸಹಾಯಮಾಡುತ್ತದೆ? “ಯೆಹೋವನ ಮಹಾದಿನವು” ಸಮೀಪಿಸುತ್ತಿದೆಯೆಂದು ನಾವು ದೃಢವಾಗಿ ಮನವರಿಕೆಯುಳ್ಳವರಾಗಿರಲು ವೈಯಕ್ತಿಕವಾಗಿ ಏನು ಮಾಡಬಲ್ಲೆವು? (ಚೆಫನ್ಯ 1:14) ಇದಕ್ಕಾಗಿ, ಲೂಕನ ಸುವಾರ್ತೆಯಲ್ಲಿರುವ ಒಂದು ದೃಷ್ಟಾಂತವನ್ನು ನಾವೀಗ ಪರಿಗಣಿಸೋಣ.

‘ಮನುಷ್ಯಕುಮಾರನು ಬರುವಾಗ’ ಜೀವಿಸುತ್ತಿರುವವರಿಗೆ ಒಂದು ಎಚ್ಚರಿಕೆ

3 ಲೂಕ 18ನೆಯ ಅಧ್ಯಾಯದಲ್ಲಿ ಒಬ್ಬ ವಿಧವೆ ಮತ್ತು ಒಬ್ಬ ನ್ಯಾಯಾಧಿಪತಿಯ ಕುರಿತು ಯೇಸು ಕೊಟ್ಟ ದೃಷ್ಟಾಂತವನ್ನು ನಾವು ನೋಡುತ್ತೇವೆ. ಪಟ್ಟುಹಿಡಿದು ಕೇಳುತ್ತಿದ್ದ ಆತಿಥೇಯನ ಕುರಿತು ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದ ದೃಷ್ಟಾಂತಕ್ಕೆ ಇದು ಸಮರೂಪದ್ದಾಗಿದೆ. (ಲೂಕ 11:​5-13) ಆದರೂ, ಈ ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತವು ವಿಶೇಷವಾಗಿ ‘ಮನುಷ್ಯಕುಮಾರನು’ ರಾಜ್ಯಾಧಿಕಾರದಲ್ಲಿ ಬರುವ ಸಮಯದಲ್ಲಿ ಜೀವಿಸುತ್ತಿರುವವರಿಗೆ ಅನ್ವಯಿಸುತ್ತದೆಂದು ಆ ದೃಷ್ಟಾಂತವಿರುವ ಬೈಬಲ್‌ ಭಾಗದ ಪೂರ್ವಾಪರವು ತೋರಿಸುತ್ತದೆ. ಆ ಸಮಯಾವಧಿಯು 1914ರಲ್ಲಿ ಆರಂಭಗೊಂಡಿತು.​—⁠ಲೂಕ 18:8. *

4 ಯೇಸು ಆ ದೃಷ್ಟಾಂತವನ್ನು ಕೊಡುವ ಮೊದಲು, ರಾಜ್ಯಾಧಿಕಾರದೊಂದಿಗಿನ ತನ್ನ ಸಾನ್ನಿಧ್ಯದ ಸಾಕ್ಷ್ಯವು “ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೂ ಹೇಗೆ ಹೊಳೆಯುವದೋ” ಹಾಗೆಯೇ ಅತಿ ವ್ಯಾಪಕವಾಗಿ ತೋರಿಬರುವುದೆಂದು ಹೇಳಿದನು. (ಲೂಕ 17:24; 21:​10, 29-33) ಹಾಗಿದ್ದರೂ, “ಅಂತ್ಯಕಾಲದಲ್ಲಿ” ಜೀವಿಸುವ ಹೆಚ್ಚಿನ ಜನರು ಈ ಸುಸ್ಪಷ್ಟ ರುಜುವಾತಿಗೆ ಗಮನ ಕೊಡದಿರುವರು. (ದಾನಿಯೇಲ 12:⁠4) ಏಕೆ ಗಮನ ಕೊಡದಿರುವರು? ಏಕೆಂದರೆ ನೋಹ ಮತ್ತು ಲೋಟನ ದಿನಗಳಲ್ಲಿ ಜನರು ಯೆಹೋವನ ಎಚ್ಚರಿಕೆಗಳನ್ನು ಅಲಕ್ಷಿಸಿದ್ದ ಅದೇ ಕಾರಣಕ್ಕಾಗಿಯೇ. ಆ ಕಾಲಗಳಲ್ಲಿ ಜನರು ‘ನಾಶ ಬರುವ ದಿನದ ತನಕ ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು.’ (ಲೂಕ 17:​26-29) ಅವರು ಆ ಸಾಮಾನ್ಯ ಚಟುವಟಿಕೆಗಳಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ ದೇವರ ಚಿತ್ತಕ್ಕೆ ಲಕ್ಷ್ಯಕೊಡಲು ತಪ್ಪಿಹೋದರು. ಇದಕ್ಕಾಗಿ ಅವರು ತಮ್ಮ ಜೀವವನ್ನೇ ಕಳೆದುಕೊಂಡರು. (ಮತ್ತಾಯ 24:39) ಹಾಗೆಯೇ ಇಂದು ಸಹ ಜನರು ತಮ್ಮ ದೈನಂದಿನ ವಿಚಾರಗಳಲ್ಲಿ ಎಷ್ಟು ಮುಳುಗಿದ್ದಾರೆಂದರೆ ಈ ದುಷ್ಟ ಲೋಕದ ಅಂತ್ಯ ಸಮೀಪಿಸಿದೆ ಎಂಬ ಸಾಕ್ಷ್ಯಕ್ಕೆ ಗಮನ ಕೊಡದೆ ಇದ್ದಾರೆ.​—⁠ಲೂಕ 17:30.

5 ತನ್ನ ಹಿಂಬಾಲಕರು ಸಹ ಸೈತಾನನ ಲೋಕದಿಂದ ಅಪಕರ್ಷಿಸಲ್ಪಡಸಾಧ್ಯವಿದೆಯೆಂದು ಯೇಸು ಚಿಂತಿತನಾಗಿದ್ದನು. ಅವರು ತಾವು ಬಿಟ್ಟುಬಂದ ವಿಷಯಗಳಿಗೆ “ತಿರಿಗಿ ಹಿಂದಕ್ಕೆ” ಹೋಗುವಷ್ಟರ ಮಟ್ಟಿಗೂ ಅಪಕರ್ಷಿಸಲ್ಪಡಬಹುದೇನೋ ಎಂಬ ಚಿಂತೆ ಅವನಿಗಿತ್ತು. (ಲೂಕ 17:22, 31) ಹಾಗೆ ಕೆಲವು ಮಂದಿ ಕ್ರೈಸ್ತರು ಅಪಕರ್ಷಿಸಲ್ಪಟ್ಟರು ಎಂಬುದು ನಿಶ್ಚಯ. ಇಂಥವರು ಯೆಹೋವನು ದುಷ್ಟಲೋಕಕ್ಕೆ ಅಂತ್ಯವನ್ನು ತರುವ ದಿನಕ್ಕಾಗಿ ಅನೇಕ ವರ್ಷಕಾಲ ಹಾತೊರೆಯುತ್ತಿದ್ದರು. ಆದರೆ, ಅವರು ನಿರೀಕ್ಷಿಸಿದ ಸಮಯದಲ್ಲಿ ಹರ್ಮಗೆದೋನ್‌ ಸಂಭವಿಸದ ಕಾರಣ ಅವರು ನಿರಾಶರಾದರು. ಯೆಹೋವನ ನ್ಯಾಯತೀರ್ಪಿನ ದಿನ ಸಮೀಪಿಸುತ್ತಿದೆಯೆಂಬ ಅವರ ಭರವಸೆ ಮಾಸಿಹೋಯಿತು. ಅವರು ತಮ್ಮ ಶುಶ್ರೂಷೆಯಲ್ಲಿ ಹಿಂದೆಬಿದ್ದು ಕ್ರಮೇಣ ಜೀವನದ ಸಾಮಾನ್ಯ ವಿಚಾರಗಳಲ್ಲಿ ಎಷ್ಟು ಮುಳುಗಿಹೋದರೆಂದರೆ ಆಧ್ಯಾತ್ಮಿಕ ವಿಷಯಗಳಿಗಾಗಿ ಅವರಿಗೆ ಸಮಯವೇ ಇಲ್ಲದಾಯಿತು. (ಲೂಕ 8:​11, 13, 14) ಸಮಯಾನಂತರ ಅವರು “ತಿರಿಗಿ ಹಿಂದಕ್ಕೆ” ಹೋದರು. ಇದೆಷ್ಟು ವಿಷಾದಕರ!

“ಯಾವಾಗಲೂ ಪ್ರಾರ್ಥನೆ” ಮಾಡುವ ಅಗತ್ಯ

6 ಯೆಹೋವನ ವಾಗ್ದಾನಗಳ ನೆರವೇರಿಕೆಯಲ್ಲಿ ನಮಗಿರುವ ದೃಢ ಭರವಸೆ ಕ್ಷೀಣಿಸದಂತೆ ನೋಡಿಕೊಳ್ಳಲು ನಾವೇನು ಮಾಡಬಲ್ಲೆವು? (ಇಬ್ರಿಯ 3:14) ತನ್ನ ಹಿಂಬಾಲಕರು ಸೈತಾನನ ದುಷ್ಟಲೋಕಕ್ಕೆ ಹಿಂದಿರುಗಬಾರದೆಂದು ಹೇಳಿದ ಕೂಡಲೇ ಯೇಸು ಈ ಪ್ರಶ್ನೆಗೆ ಉತ್ತರಿಸಿದನು.

7 “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು” ಎಂದು ಲೂಕನು ವರದಿಮಾಡುತ್ತಾನೆ. ಯೇಸು ಹೇಳಿದ್ದು: “ಒಂದಾನೊಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು; ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು. ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು​—⁠ನ್ಯಾಯವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು ಎಂದು ಹೇಳಿಕೊಳ್ಳುತ್ತಿದ್ದಳು. ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು​—⁠ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ; ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುವದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು; ಇಲ್ಲವಾದರೆ ಈಕೆಯು ಬಂದು ಬಂದು ಕಡೆಗೆ ನನ್ನನ್ನು ದಣಿಸಾಳು ಎಂದು ತನ್ನೊಳಗೆ ಅಂದುಕೊಂಡನು.”

8 ಯೇಸು ಈ ಸಾಮ್ಯವನ್ನು ಹೇಳಿದ ಮೇಲೆ ಅದನ್ನು ಹೀಗೆ ಅನ್ವಯಿಸಿದನು: “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ. ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?”​—⁠ಲೂಕ 18:​1-8.

‘ನನಗೆ ನ್ಯಾಯತೀರಿಸು’

9 ಈ ಸವಿವರ ದೃಷ್ಟಾಂತದ ಪ್ರಧಾನ ವಿಷಯ ತೀರಾ ಸ್ಪಷ್ಟವಾಗಿ ಎದ್ದುಕಾಣುತ್ತದೆ. ಇದನ್ನು ಆ ದೃಷ್ಟಾಂತದ ಇಬ್ಬರು ಪಾತ್ರಧಾರಿಗಳೂ ಯೇಸುವೂ ತಿಳಿಸಿ ಕೊಡುತ್ತಾರೆ. ಆ ವಿಧವೆ, “ನ್ಯಾಯವಿಚಾರಣೆಮಾಡಿ . . . ನನ್ನನ್ನು ಬಿಡಿಸು” ಎಂದು ಬೇಡಿಕೊಳ್ಳುತ್ತಿದ್ದಳು. ಆಗ ನ್ಯಾಯಾಧಿಪತಿ ಹೇಳಿದ್ದು: “ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು.” ಯೇಸು ಕೇಳಿದ್ದು: “[ದೇವರು] ಅವರ ನ್ಯಾಯವನ್ನು ತೀರಿಸದೆ ಇರುವನೇ?” ಮತ್ತು ಯೆಹೋವನ ಕುರಿತು ಯೇಸು ಹೇಳಿದ್ದು: ‘ಆತನು ಅವರಿಗೆ ಬೇಗ ನ್ಯಾಯತೀರಿಸುವನು.’ (ಲೂಕ 18:​3, 5, 7, 8) ಹಾಗಾದರೆ, ವಿಶೇಷವಾಗಿ ಯಾವಾಗ ದೇವರು ‘ನ್ಯಾಯತೀರಿಸುವನು?’

10 ಒಂದನೆಯ ಶತಮಾನದಲ್ಲಿ “ದಂಡನೆಯ ದಿವಸ” ಅಂದರೆ ‘ನ್ಯಾಯತೀರಿಸಲಾದ’ ದಿನವು ಸಾ. ಶ. 70ರಲ್ಲಿ ಯೆರೂಸಲೇಮ್‌ ಮತ್ತು ಅದರ ದೇವಾಲಯ ನಾಶಗೊಂಡಾಗ ಬಂತು. (ಲೂಕ 21:22) ಆದರೆ ಇಂದಿನ ದೇವಜನರಿಗೆ ನ್ಯಾಯ ದೊರೆಯುವುದು ‘ಯೆಹೋವನ ಮಹಾದಿನದಲ್ಲಿ.’ (ಚೆಫನ್ಯ 1:14; ಮತ್ತಾಯ 24:21) ಆ ಸಮಯದಲ್ಲಿ “ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು” ಸಲ್ಲಿಸುವಾಗ ಯೆಹೋವನು ತನ್ನ ಜನರನ್ನು “ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ” ಕೊಡುವನು.​—⁠2 ಥೆಸಲೊನೀಕ 1:​6-8; ರೋಮಾಪುರ 12:19.

11 ಆದರೆ, ಯೆಹೋವನು “ಬೇಗ” ನ್ಯಾಯತೀರಿಸುವನೆಂಬ ಯೇಸುವಿನ ಆಶ್ವಾಸನೆಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಯೆಹೋವನು ‘ದೀರ್ಘಶಾಂತಿಯುಳ್ಳವನಾದರೂ’ ತಕ್ಕ ಕಾಲದಲ್ಲಿ ಬೇಗನೆ ನ್ಯಾಯತೀರಿಸುವನು ಎಂದು ದೇವರ ವಾಕ್ಯವು ತಿಳಿಸುತ್ತದೆ. (ಲೂಕ 18:​7, 8; 2 ಪೇತ್ರ 3:​9, 10) ನೋಹನ ದಿನಗಳಲ್ಲಿ ಜಲಪ್ರಳಯ ಬಂದಾಗ ದುಷ್ಟರು ಕೂಡಲೇ ನಾಶವಾದರು. ತದ್ರೀತಿ ಲೋಟನ ದಿನಗಳಲ್ಲಿ ಆಕಾಶದಿಂದ ಬೆಂಕಿ ಸುರಿದಾಗ ದುಷ್ಟರು ಹತರಾದರು. “ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು” ಎಂದು ಯೇಸು ಹೇಳಿದನು. (ಲೂಕ 17:​27-30) ಇನ್ನೊಮ್ಮೆ ದುಷ್ಟರ ಮೇಲೆ ನಾಶನವು “ಫಕ್ಕನೆ” ಬರುವುದು. (1 ಥೆಸಲೊನೀಕ 5:​2, 3, NIBV) ಸೈತಾನನ ಲೋಕವನ್ನು ನ್ಯಾಯವು ಅವಶ್ಯಪಡಿಸುವುದಕ್ಕಿಂತ ಒಂದು ದಿನ ಸಹ ಹೆಚ್ಚಾಗಿ ಅಸ್ತಿತ್ವದಲ್ಲಿರುವಂತೆ ಯೆಹೋವನು ಬಿಡುವುದಿಲ್ಲ ಎಂಬ ಪೂರ್ಣ ಭರವಸೆ ನಮಗಿರಬಲ್ಲದು.

‘ಆತನು ನ್ಯಾಯತೀರಿಸುವನು’

12 ಯೇಸು ತಿಳಿಸಿದ ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತವು ಇನ್ನಿತರ ಪ್ರಮುಖ ಸತ್ಯಗಳನ್ನೂ ಎತ್ತಿ ತೋರಿಸುತ್ತದೆ. ಈ ದೃಷ್ಟಾಂತವನ್ನು ಅನ್ವಯಿಸುತ್ತ ಯೇಸು ಹೇಳಿದ್ದು: “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ. ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು . . . ಅವರ ನ್ಯಾಯವನ್ನು ತೀರಿಸದೆ ಇರುವನೇ?” ಇಲ್ಲಿ ಯೇಸು ಯೆಹೋವನನ್ನು ಆ ನ್ಯಾಯಾಧಿಪತಿಗೆ ಹೋಲಿಸಿ ಆತನು ತನ್ನ ಆರಾಧಕರನ್ನು ಆ ನ್ಯಾಯಾಧಿಪತಿಯಂತೆ ಉಪಚರಿಸುತ್ತಾನೆಂದು ಹೇಳುತ್ತಿಲ್ಲ. ಬದಲಿಗೆ ಅವನು ಆ ನ್ಯಾಯಾಧಿಪತಿ ಮತ್ತು ಯೆಹೋವನ ಮಧ್ಯೆ ಇರುವ ತಾರತಮ್ಯವನ್ನು ಎತ್ತಿ ಹೇಳುವ ಮೂಲಕ ತನ್ನ ಹಿಂಬಾಲಕರಿಗೆ ಯೆಹೋವನ ಕುರಿತು ಒಂದು ಪಾಠವನ್ನು ಕಲಿಸಿದನು. ಹಾಗಾದರೆ, ಅವರಿಬ್ಬರು ಯಾವ ವಿಧಗಳಲ್ಲಿ ಭಿನ್ನರಾಗಿದ್ದಾರೆ?

13 ಯೇಸುವಿನ ದೃಷ್ಟಾಂತದಲ್ಲಿರುವ ನ್ಯಾಯಾಧಿಪತಿ ‘ಅನ್ಯಾಯಗಾರನು.’ ಆದರೆ “ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು.” (ಕೀರ್ತನೆ 7:11; 33:⁠5) ಆ ನ್ಯಾಯಾಧಿಪತಿಗೆ ಆ ವಿಧವೆಯ ಬಗ್ಗೆ ವ್ಯಕ್ತಿಗತವಾಗಿ ಯಾವುದೇ ಆಸಕ್ತಿ ಇರಲಿಲ್ಲ. ಯೆಹೋವನಾದರೊ ಒಬ್ಬೊಬ್ಬ ವ್ಯಕ್ತಿಯಲ್ಲೂ ಆಸಕ್ತನಾಗಿದ್ದಾನೆ. (2 ಪೂರ್ವಕಾಲವೃತ್ತಾಂತ 6:​29, 30) ವಿಧವೆಗೆ ಸಹಾಯಮಾಡಲು ಆ ನ್ಯಾಯಾಧಿಪತಿಗೆ ಮನಸ್ಸಿರಲಿಲ್ಲ. ಆದರೆ ಯೆಹೋವನು ನಮಗೆ ಸಹಾಯಮಾಡಲು ಮನಸ್ಸುಳ್ಳವನಾಗಿದ್ದಾನೆ. ಹೌದು ತನ್ನನ್ನು ಸೇವಿಸುವವರಿಗೆ ನೆರವು ನೀಡಲು ಆತನು ಹಂಬಲಿಸುತ್ತಾನೆ. (ಯೆಶಾಯ 30:​18, 19) ಹಾಗಾದರೆ ಇದರಲ್ಲಿರುವ ಪಾಠವೇನು? ಆ ಅನೀತಿವಂತನಾಗಿದ್ದ ನ್ಯಾಯಾಧಿಪತಿಯೇ ಆ ವಿಧವೆಯ ಬೇಡಿಕೆಗಳಿಗೆ ಕಿವಿಗೊಟ್ಟು ನ್ಯಾಯವನ್ನು ನೀಡುವಲ್ಲಿ, ಅದಕ್ಕಿಂತಲೂ ಮಿಗಿಲಾಗಿ ಯೆಹೋವನು ತನ್ನ ಜನರ ಪ್ರಾರ್ಥನೆಗಳನ್ನು ಕೇಳಿ ಅವರಿಗೆ ನ್ಯಾಯವನ್ನು ನೀಡುವನೆಂಬುದೇ!​—⁠ಜ್ಞಾನೋಕ್ತಿ 15:29.

14 ಆದಕಾರಣ, ದೇವರ ನ್ಯಾಯತೀರ್ಪಿನ ದಿನದ ಬರೋಣದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವವರು ಒಂದು ಗಂಭೀರ ತಪ್ಪನ್ನು ಮಾಡುತ್ತಾರೆ. ಏಕೆ? ಏಕೆಂದರೆ, “ಯೆಹೋವನ ಮಹಾದಿನವು” ನಿಕಟವಾಗಿದೆ ಎಂಬ ದೃಢ ವಿಶ್ವಾಸವನ್ನು ಅವರು ತ್ಯಜಿಸುವಾಗ, ಯೆಹೋವನು ತನ್ನ ವಾಗ್ದಾನಗಳನ್ನು ನಂಬಿಗಸ್ತಿಕೆಯಿಂದ ನೆರವೇರಿಸುವನೊ ಎಂದು ಅವರು ಸಂಶಯಿಸುತ್ತಾರೆ. ಆದರೆ ದೇವರ ನಂಬಿಗಸ್ತಿಕೆಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. (ಯೋಬ 9:12) ವೈಯಕ್ತಿಕವಾಗಿ ನಾವು ನಂಬಿಗಸ್ತರಾಗಿ ಉಳಿಯುವೆವೊ ಎಂಬುದೇ ಪ್ರಾಮುಖ್ಯ ಪ್ರಶ್ನೆಯಾಗಿದೆ. ಆ ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತದ ಅಂತ್ಯದಲ್ಲಿ ಯೇಸು ಎತ್ತಿಹೇಳಿದ ವಿಷಯವು ಅದೇ ಆಗಿರುತ್ತದೆ.

‘ಅವನು ಭೂಮಿಯ ಮೇಲೆನಂಬಿಕೆಯನ್ನು ಕಂಡುಕೊಳ್ಳುವನೊ?’

15 ಯೇಸು ಈ ಆಸಕ್ತಿಕರ ಪ್ರಶ್ನೆಯನ್ನು ಕೇಳಿದನು: “ಮನುಷ್ಯಕುಮಾರನು ಬರುವಾಗ, ಅವನು ಭೂಮಿಯ ಮೇಲೆ ನಿಜವಾಗಿಯೂ ಈ ನಂಬಿಕೆಯನ್ನು ಕಂಡುಕೊಳ್ಳುವನೊ?” (ಲೂಕ 18:​8, NW, ಪಾದಟಿಪ್ಪಣಿ) “ಈ ನಂಬಿಕೆ” ಎಂಬ ಹೇಳಿಕೆಯು ಯೇಸು ಸಾಮಾನ್ಯಾರ್ಥದ ನಂಬಿಕೆಯನ್ನಲ್ಲ ಒಂದು ವಿಶೇಷ ರೀತಿಯ ನಂಬಿಕೆಯನ್ನು ಸೂಚಿಸಿ ಹೇಳಿದನೆಂದು ತೋರಿಸುತ್ತದೆ. ಅದು ಆ ವಿಧವೆಗಿದ್ದಂಥ ರೀತಿಯ ನಂಬಿಕೆಯಾಗಿದೆ. ಯೇಸು ತನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ. ತನ್ನ ಶಿಷ್ಯರು ತಮ್ಮ ನಂಬಿಕೆಯ ಗುಣಮಟ್ಟದ ಬಗ್ಗೆ ಯೋಚಿಸಲಿಕ್ಕಾಗಿ ಅವನು ಆ ಪ್ರಶ್ನೆಯನ್ನು ಕೇಳಿದನು. ತಾವು ಬಿಟ್ಟುಬಂದಿದ್ದ ಸಂಗತಿಗಳಿಗೇ ಹಿಂದಿರುಗಿ ಹೋಗುವಷ್ಟರ ಮಟ್ಟಿಗೆ ಅವರ ನಂಬಿಕೆಯು ಸ್ವಲ್ಪಸ್ವಲ್ಪವಾಗಿ ಕ್ಷೀಣಿಸುತ್ತಿತ್ತೋ? ಇಲ್ಲವೆ, ಆ ವಿಧವೆ ತೋರಿಸಿದಂಥ ನಂಬಿಕೆ ಅವರಲ್ಲಿತ್ತೋ? ಇಂದು ನಾವು ಸಹ ತದ್ರೀತಿಯಲ್ಲಿ ಹೀಗೆ ಕೇಳಿಕೊಳ್ಳಬೇಕು: ‘“ಮನುಷ್ಯಕುಮಾರನು” ಯಾವ ವಿಧದ ನಂಬಿಕೆಯನ್ನು ನನ್ನ ಹೃದಯದಲ್ಲಿ ಕಂಡುಕೊಳ್ಳುತ್ತಾನೆ?’

16 ಯೆಹೋವನಿಂದ ನ್ಯಾಯವನ್ನು ಪಡೆಯುವವರೊಡನೆ ನಾವಿರಬೇಕಾದರೆ ಆ ವಿಧವೆಯ ಮಾದರಿಯನ್ನು ನಾವು ಅನುಸರಿಸಬೇಕು. ಆಕೆಗೆ ಯಾವ ವಿಧದ ನಂಬಿಕೆಯಿತ್ತು? ಆಕೆ ಪಟ್ಟುಹಿಡಿಯುತ್ತ ನ್ಯಾಯಾಧಿಪತಿಯ ಬಳಿಗೆ ಹೋಗಿ “ನ್ಯಾಯವಿಚಾರಣೆ ಮಾಡಿ . . . ನನ್ನನ್ನು ಬಿಡಿಸು” ಎಂದು ಕೇಳುತ್ತಾ ಇರುವ ಮೂಲಕ ತನ್ನ ನಂಬಿಕೆಯನ್ನು ತೋರಿಸಿದಳು. ಅನೀತಿವಂತನಾದ ಮನುಷ್ಯನಿಂದ ನ್ಯಾಯಪಡೆಯಲು ಆ ವಿಧವೆ ಪಟ್ಟುಹಿಡಿದಳು. ಅದೇ ರೀತಿ ಇಂದಿನ ದೇವರ ಸೇವಕರು ಯೆಹೋವನಿಂದ ನ್ಯಾಯವನ್ನು ಪಡೆಯುವೆವು ಎಂಬ ಭರವಸೆಯೊಂದಿಗಿರಬಲ್ಲರು. ಅದು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಾದರೂ ಸರಿಯೇ. ಅಲ್ಲದೆ, ಅವರು ಪಟ್ಟುಹಿಡಿದು ಪ್ರಾರ್ಥನೆ ಮಾಡುವ ಮೂಲಕ, ಹೌದು “ಆತನಿಗೆ ಹಗಲು ರಾತ್ರಿ ಮೊರೆಯಿಡುವ” ಮೂಲಕ ದೇವರ ವಾಗ್ದಾನಗಳಲ್ಲಿ ತಮಗಿರುವ ಭರವಸೆಯನ್ನು ತೋರಿಸುತ್ತಾರೆ. (ಲೂಕ 18:⁠7) ಆದರೆ, ಕ್ರೈಸ್ತನೊಬ್ಬನು ನ್ಯಾಯಕ್ಕಾಗಿ ಮಾಡುವ ಪ್ರಾರ್ಥನೆಯನ್ನು ನಿಲ್ಲಿಸುವಲ್ಲಿ ಯೆಹೋವನು ತನ್ನ ಸೇವಕರ ಪರವಾಗಿ ಕಾರ್ಯನಡೆಸುವನೆಂಬ ಭರವಸೆಯನ್ನು ತಾನು ಕಳೆದುಕೊಂಡಿದ್ದೇನೆಂದು ತೋರಿಸುವನು.

17 ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಲು ನಮಗೆ ಹೆಚ್ಚಿನ ಕಾರಣಗಳಿವೆ ಎಂದು ಆ ವಿಧವೆಯಿದ್ದ ಪರಿಸ್ಥಿತಿಗಳು ತೋರಿಸುತ್ತವೆ. ಆಕೆಯ ಮತ್ತು ನಮ್ಮ ಪರಿಸ್ಥಿತಿಗಳಲ್ಲಿರುವ ಕೆಲವು ವ್ಯತ್ಯಾಸಗಳನ್ನು ಪರಿಗಣಿಸಿರಿ. ಆ ವಿಧವೆಗೆ ಯಾರೂ ಪ್ರೋತ್ಸಾಹನೆ ಕೊಡದಿದ್ದರು ಆಕೆ ಆ ನ್ಯಾಯಾಧಿಪತಿಯ ಬಳಿ ಪದೇಪದೇ ಹೋಗಿ ಬೇಡಿಕೊಳ್ಳುತ್ತಿದ್ದಳು. ನಮಗಾದರೊ ‘ಬೇಸರಗೊಳ್ಳದೆ ಪ್ರಾರ್ಥನೆ ಮಾಡುವಂತೆ’ ದೇವರ ವಾಕ್ಯವು ಹೆಚ್ಚು ಪ್ರೋತ್ಸಾಹನೆಯನ್ನು ಕೊಡುತ್ತದೆ. (ರೋಮಾಪುರ 12:12) ತನ್ನ ಬೇಡಿಕೆಗಳು ಅನುಗ್ರಹಿಸಲ್ಪಡುವವು ಎಂಬುದಕ್ಕೆ ಯಾವುದೇ ಆಶ್ವಾಸನೆ ಆ ವಿಧವೆಗಿರಲಿಲ್ಲ. ಆದರೆ ನಮಗೆ ಖಂಡಿತ ನ್ಯಾಯ ದೊರೆಯುವುದು ಎಂಬ ಆಶ್ವಾಸನೆಯನ್ನು ಯೆಹೋವನು ಕೊಟ್ಟಿದ್ದಾನೆ. “ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು” ಎಂದು ತನ್ನ ಪ್ರವಾದಿಯ ಮೂಲಕ ಯೆಹೋವನು ತಿಳಿಸಿದನು. (ಹಬಕ್ಕೂಕ 2:3; ಕೀರ್ತನೆ 97:10) ಆ ವಿಧವೆಯ ಪರವಾಗಿ ಬೇಡಿಕೊಳ್ಳಲು ಆಕೆಗಾದರೋ ಯಾವ ಸಹಾಯಕನೂ ಇರಲಿಲ್ಲ. ಆದರೆ ನಮ್ಮ ಪರವಾಗಿ “ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವ” ಬಲಾಢ್ಯ ಸಹಾಯಕನಾಗಿ ಯೇಸುವಿದ್ದಾನೆ. (ರೋಮಾಪುರ 8:34; ಇಬ್ರಿಯ 7:25) ಕಷ್ಟಕರ ಪರಿಸ್ಥಿತಿಯಲ್ಲಿರುವಾಗಲೂ ಆ ವಿಧವೆ ನ್ಯಾಯ ದೊರೆಯುವುದೆಂಬ ನಿರೀಕ್ಷೆಯಿಂದ ಆ ನ್ಯಾಯಾಧಿಪತಿಯನ್ನು ಬೇಡಿಕೊಳ್ಳುತ್ತಿದ್ದಳು. ಹಾಗಾದರೆ, ಯೆಹೋವನ ನ್ಯಾಯತೀರ್ಪಿನ ದಿನ ಖಂಡಿತ ಬರುವುದೆಂದು ನಾವು ಇನ್ನೆಷ್ಟು ಹೆಚ್ಚಾಗಿ ನಂಬಿಕೆಯನ್ನಿಡತಕ್ಕದ್ದು!

18 ಆ ವಿಧವೆಯ ದೃಷ್ಟಾಂತವು ಪ್ರಾರ್ಥನೆ ಮತ್ತು ನಂಬಿಕೆಯ ಮಧ್ಯೆ ಒಂದು ನಿಕಟ ಸಂಬಂಧವಿದೆಯೆಂದು ಕಲಿಸುತ್ತದೆ. ಮಾತ್ರವಲ್ಲ, ಎಡೆಬಿಡದೆ ಮಾಡುವ ಪ್ರಾರ್ಥನೆಗಳು ನಮ್ಮ ನಂಬಿಕೆಯನ್ನು ಕ್ಷೀಣಿಸಬಹುದಾದ ಪ್ರಭಾವಗಳನ್ನು ಪ್ರತಿರೋಧಿಸಬಲ್ಲದೆಂದೂ ನಾವು ಕಲಿಯುತ್ತೇವೆ. ನಿಜ, ಪ್ರಾರ್ಥಿಸುತ್ತೇವೆಂಬ ಬರಿಯ ಹೊರಗಣ ತೋರಿಕೆಯು ನಂಬಿಕೆಯ ನಷ್ಟವನ್ನು ಹೋಗಲಾಡಿಸುವುದಿಲ್ಲ. (ಮತ್ತಾಯ 6:​7, 8) ಆದರೆ ನಾವು ದೇವರ ಮೇಲೆ ಪೂರ್ತಿಯಾಗಿ ಹೊಂದಿಕೊಂಡಿರುವುದನ್ನು ಗ್ರಹಿಸಿ ಪ್ರಾರ್ಥಿಸಲು ಪ್ರೇರಿಸಲ್ಪಡುವಾಗ ಅಂಥ ಪ್ರಾರ್ಥನೆಯು ನಮ್ಮನ್ನು ದೇವರ ಹತ್ತಿರಕ್ಕೆ ಸೆಳೆದು ನಂಬಿಕೆಯನ್ನು ಬಲಪಡಿಸುತ್ತದೆ. ರಕ್ಷಣೆಗೆ ನಂಬಿಕೆಯು ಅಗತ್ಯವಾಗಿರುವುದರಿಂದ ಯೇಸು ತನ್ನ ಶಿಷ್ಯರನ್ನು “ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ” ಮಾಡಬೇಕೆಂದು ಪ್ರೋತ್ಸಾಹಿಸಿದ್ದು ಆಶ್ಚರ್ಯವಲ್ಲ. (ಲೂಕ 18:​1; 2 ಥೆಸಲೊನೀಕ 3:13) “ಯೆಹೋವನ ಮಹಾದಿನದ” ಬರೋಣವು ನಮ್ಮ ಪ್ರಾರ್ಥನೆಗಳ ಮೇಲೆ ಹೊಂದಿಕೊಂಡಿಲ್ಲವೆಂಬುದು ಒಪ್ಪಿಕೊಳ್ಳತಕ್ಕ ವಿಷಯ. ನಾವು ಅದಕ್ಕಾಗಿ ಪ್ರಾರ್ಥಿಸಲಿ ಪ್ರಾರ್ಥಿಸದಿರಲಿ ಅದು ಬಂದೇ ಬರುವುದು. ಆದರೆ ನಮಗೆ ವೈಯಕ್ತಿಕವಾಗಿ ನ್ಯಾಯವು ದೊರೆತು, ದೇವರ ಯುದ್ಧವನ್ನು ಪಾರಾಗುವುದು ಪಾರಾಗದಿರುವುದು ನಮಗಿರುವ ನಂಬಿಕೆ ಮತ್ತು ನಾವು ಬೆನ್ನಟ್ಟುವ ಪ್ರಾರ್ಥನಾಪೂರ್ವಕ ಮಾರ್ಗಕ್ರಮದ ಮೇಲೆ ನಿಶ್ಚಯವಾಗಿಯೂ ಹೊಂದಿಕೊಂಡಿದೆ.

19 “ಮನುಷ್ಯಕುಮಾರನು ಬರುವಾಗ, ಅವನು ಭೂಮಿಯ ಮೇಲೆ ನಿಜವಾಗಿಯೂ ಈ ನಂಬಿಕೆಯನ್ನು ಕಂಡುಕೊಳ್ಳುವನೊ?” ಎಂದು ಯೇಸು ಕೇಳಿದ್ದನ್ನು ಜ್ಞಾಪಿಸಿಕೊಳ್ಳೋಣ. ಅವನ ಈ ಆಸಕ್ತಿ ಕೆರಳಿಸುವ ಪ್ರಶ್ನೆಗೆ ಉತ್ತರವೇನು? ಭೂವ್ಯಾಪಕವಾಗಿ ಯೆಹೋವನ ಲಕ್ಷಾಂತರ ಮಂದಿ ನಂಬಿಗಸ್ತ ಸೇವಕರು ತಮ್ಮ ಪ್ರಾರ್ಥನೆ, ತಾಳ್ಮೆ ಮತ್ತು ಪಟ್ಟುಹಿಡಿಯುವ ಮನೋಭಾವದ ಮೂಲಕ ತಮಗೆ ನಂಬಿಕೆ ಇದೆ ಎಂದು ತೋರಿಸಿಕೊಟ್ಟಿರುವುದಕ್ಕೆ ನಾವೆಷ್ಟು ಹರ್ಷಿತರು! ಹೀಗೆ ಅವರು ಯೇಸುವಿನ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸಿದ್ದಾರೆ. ಹೌದು, ಈಗ ಸೈತಾನನ ಲೋಕದಲ್ಲಿ ನಾವೆಷ್ಟೇ ಅನ್ಯಾಯಗಳನ್ನು ಅನುಭವಿಸಲಿ ದೇವರು ‘ತಾನಾದುಕೊಂಡವರಿಗೆ ನ್ಯಾಯ ತೀರಿಸುವನು’ ಎಂದು ನಾವು ದೃಢವಾಗಿ ನಂಬುತ್ತೇವೆ. (w06 12/15)

[ಪಾದಟಿಪ್ಪಣಿ]

^ ಪ್ಯಾರ. 6 ಈ ದೃಷ್ಟಾಂತದ ಮಹತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಲೂಕ 17:​22-33ನ್ನು ಓದಿ. ಲೂಕ 17:​22, 24, 30ರಲ್ಲಿರುವ “ಮನುಷ್ಯಕುಮಾರನು” ಎಂಬ ಉಲ್ಲೇಖಗಳು ಲೂಕ 18:8ರಲ್ಲಿ ಕೇಳಲ್ಪಟ್ಟಿರುವ ಪ್ರಶ್ನೆಗೆ ಉತ್ತರ ಪಡೆಯಲು ಹೇಗೆ ಸಹಾಯಮಾಡುತ್ತದೆಂಬುದನ್ನು ಗಮನಿಸಿ.

ನೆನಪಿದೆಯೆ?

• ಕೆಲವು ಮಂದಿ ಕ್ರೈಸ್ತರು ನಂಬಿಕೆಯನ್ನು ಕಳೆದುಕೊಳ್ಳುವಂತೆ ಯಾವುದು ಮಾಡಿದೆ?

• ಯೆಹೋವನ ತೀರ್ಪಿನ ದಿನದ ಬರೋಣದಲ್ಲಿ ನಮಗೇಕೆ ದೃಢ ನಂಬಿಕೆ ಇರಬಲ್ಲದು?

• ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಲು ನಮಗೆ ಯಾವ ಸಕಾರಣಗಳಿವೆ?

• ನಾವು ನಂಬಿಕೆಯನ್ನು ಕಳೆದುಕೊಳ್ಳದಿರಲು ಎಡೆಬಿಡದೆ ಮಾಡಲಾಗುವ ಪ್ರಾರ್ಥನೆ ಹೇಗೆ ಸಹಾಯಮಾಡುವುದು?

[ಅಧ್ಯಯನ ಪ್ರಶ್ನೆಗಳು]

1. ನಿಮಗೆ ಪ್ರೋತ್ಸಾಹನೆಯ ಮೂಲವಾಗಿರುವವರು ಯಾರು ಮತ್ತು ಏಕೆ?

2. ಯಾವ ವಿಷಯವು ನಮಗೆ ದುಃಖವನ್ನುಂಟುಮಾಡುತ್ತದೆ?

3. ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತದಿಂದ ವಿಶೇಷವಾಗಿ ಯಾರು ಪ್ರಯೋಜನಹೊಂದಬಲ್ಲರು ಮತ್ತು ಏಕೆ?

4. ಲೂಕ 18ನೆಯ ಅಧ್ಯಾಯದಲ್ಲಿರುವ ದೃಷ್ಟಾಂತವನ್ನು ತಿಳಿಸುವುದಕ್ಕೆ ಮೊದಲು ಯೇಸು ಏನನ್ನು ಚರ್ಚಿಸಿದನು?

5. (ಎ) ಯೇಸು ಯಾರಿಗೆ ಮತ್ತು ಏಕೆ ಎಚ್ಚರಿಕೆಯನ್ನು ಕೊಟ್ಟನು? (ಬಿ) ಕೆಲವರು ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವೇನು?

6-8. (ಎ) ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತವನ್ನು ತಿಳಿಸಿರಿ. (ಬಿ) ಯೇಸು ಈ ದೃಷ್ಟಾಂತವನ್ನು ಹೇಗೆ ಅನ್ವಯಿಸಿದನು?

9. ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತದಲ್ಲಿ ಯಾವ ಮುಖ್ಯ ವಿಷಯ ಎದ್ದುಕಾಣುತ್ತದೆ?

10. (ಎ) ಒಂದನೆಯ ಶತಮಾನದಲ್ಲಿ ನ್ಯಾಯವು ಯಾವಾಗ ತೀರಿಸಲ್ಪಟ್ಟಿತು? (ಬಿ) ಇಂದು ದೇವರ ಸೇವಕರಿಗೆ ಯಾವಾಗ ಮತ್ತು ಹೇಗೆ ನ್ಯಾಯ ದೊರೆಯುವುದು?

11. ಯಾವ ವಿಧದಲ್ಲಿ ನ್ಯಾಯವು “ಬೇಗ” ಬರುವುದು?

12, 13. (ಎ) ವಿಧವೆ ಮತ್ತು ನ್ಯಾಯಾಧಿಪತಿಯ ಕುರಿತು ಯೇಸು ಹೇಳಿದ ದೃಷ್ಟಾಂತವು ಯಾವ ರೀತಿಯಲ್ಲಿ ಪಾಠವನ್ನು ಕಲಿಸುತ್ತದೆ? (ಬಿ) ಯೆಹೋವನು ನಮ್ಮ ಪ್ರಾರ್ಥನೆಯನ್ನು ಕೇಳಿ ನ್ಯಾಯವನ್ನು ದಯಪಾಲಿಸುವನೆಂಬ ಖಾತರಿ ನಮಗೇಕೆ ಇರಬಲ್ಲದು?

14. ದೇವರ ನ್ಯಾಯತೀರ್ಪಿನ ದಿನದ ಬರೋಣದಲ್ಲಿ ನಾವು ಏಕೆ ನಂಬಿಕೆಯನ್ನು ಕಳೆದುಕೊಳ್ಳಬಾರದು?

15. (ಎ) ಯೇಸು ಯಾವ ಪ್ರಶ್ನೆಯನ್ನು ಕೇಳಿದನು ಮತ್ತು ಏಕೆ? (ಬಿ) ನಾವು ನಮ್ಮನ್ನು ಏನು ಕೇಳಿಕೊಳ್ಳಬೇಕು?

16. ಆ ವಿಧವೆಯಲ್ಲಿ ಯಾವ ರೀತಿಯ ನಂಬಿಕೆಯಿತ್ತು?

17. ಎಡೆಬಿಡದೆ ಪ್ರಾರ್ಥಿಸಲು ಮತ್ತು ಯೆಹೋವನ ನ್ಯಾಯತೀರ್ಪಿನ ದಿನ ಖಂಡಿತ ಬರುವುದೆಂದು ನಂಬಿಕೆಯಿಡಲು ನಮಗೆ ಯಾವ ಕಾರಣಗಳಿವೆ?

18. ಪ್ರಾರ್ಥನೆಯು ಹೇಗೆ ನಮ್ಮ ನಂಬಿಕೆಯನ್ನು ಬಲಪಡಿಸಿ ನ್ಯಾಯ ದೊರೆಯುವಂತೆ ಸಹಾಯಮಾಡುವುದು?

19. ದೇವರು ನಮಗೆ ‘ನ್ಯಾಯ ತೀರಿಸುವನು’ ಎಂದು ನಾವು ದೃಢವಾಗಿ ನಂಬುತ್ತೇವೆ ಎಂಬುದನ್ನು ಹೇಗೆ ತೋರಿಸಿಕೊಡುತ್ತೇವೆ?

[ಪುಟ 18ರಲ್ಲಿರುವ ಚಿತ್ರ]

ವಿಧವೆ ಮತ್ತು ನ್ಯಾಯಾಧಿಪತಿಯ ದೃಷ್ಟಾಂತದಲ್ಲಿ ಯಾವುದನ್ನು ಎತ್ತಿ ತೋರಿಸಲಾಗಿದೆ?

[ಪುಟ 21ರಲ್ಲಿರುವ ಚಿತ್ರ]

ದೇವರು ‘ನ್ಯಾಯ ತೀರಿಸುವನೆಂದು’ ಇಂದು ಲಕ್ಷಾಂತರ ಜನರು ದೃಢವಾಗಿ ನಂಬುತ್ತಾರೆ