“ಯೆಹೋವನ ಮಹಾದಿನವು ಹತ್ತಿರವಾಯಿತು”
“ಯೆಹೋವನ ಮಹಾದಿನವು ಹತ್ತಿರವಾಯಿತು”
“ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ.”—ಚೆಫನ್ಯ 1:14.
ಸಂತೋಷದಿಂದ ಕಳೆತುಂಬಿರುವ ಯುವತಿಯೊಬ್ಬಳು ತನ್ನ ಮದುವೆ ದಿನಕ್ಕಾಗಿ ಕಾತರದಿಂದ ಕಾಯುವಳು. ಒಬ್ಬ ಗರ್ಭವತಿ ಮಹಿಳೆಯು ತನ್ನ ಮಗುವಿನ ಜನನಕ್ಕಾಗಿ ಪ್ರೀತಿಯಿಂದ ಎದುರುನೋಡುವಳು. ಕೆಲಸಮಾಡಿ ಸುಸ್ತಾಗಿಹೋಗಿರುವ ಒಬ್ಬ ಕಾರ್ಮಿಕನು, ತಾನು ಬಹಳ ಸಮಯದಿಂದ ಕಾಯುತ್ತಿದ್ದ ರಜೆಗಾಗಿ ತೀವ್ರವಾಗಿ ಆಸೆಪಡುವನು. ಇವರೆಲ್ಲರಲ್ಲಿ ಸಾಮಾನ್ಯವಾದ ಅಂಶವೇನು? ಅವರು ಒಂದು ವಿಶೇಷ ದಿನಕ್ಕಾಗಿ ಕಾಯುತ್ತಿದ್ದಾರೆ. ಆ ದಿನವು ಅವರ ಜೀವನಗಳ ಮೇಲೆ ಪರಿಣಾಮವನ್ನು ಬೀರುವಂಥ ದಿನವಾಗಿರುವುದು. ಅದರ ಬಗ್ಗೆ ಅವರಿಗೆ ಗಾಢವಾದ ಭಾವನೆಗಳಿವೆ, ಆದರೆ ಅದೇ ಸಮಯದಲ್ಲಿ ಅವರ ಭಾವನೆಗಳು ಭಿನ್ನಭಿನ್ನವಾಗಿವೆ. ಅವರು ಕಾಯುತ್ತಿರುವ ಆ ದಿನ ಕೊನೆಗೆ ಬಂದೇ ಬರುವುದು ಮತ್ತು ತಾವು ಆಗ ಸಿದ್ಧರಾಗಿರುವೆವು ಎಂದು ಅವರು ನಿರೀಕ್ಷಿಸುತ್ತಾರೆ.
2 ಇಂದು ನಿಜ ಕ್ರೈಸ್ತರು ಅದೇ ರೀತಿಯಲ್ಲಿ, ಒಂದು ವಿಶೇಷ ದಿನದ ಆಗಮನಕ್ಕಾಗಿ ಕಾತರದಿಂದ ಕಾಯುತ್ತಾ ಇದ್ದಾರೆ. ಆ ದಿನ ಯಾವುದು? ‘ಯೆಹೋವನ [ಮಹಾ] ದಿನವೇ.’ (ಯೆಶಾಯ 13:9; ಯೋವೇಲ 2:1; 2 ಪೇತ್ರ 3:12) ಬರಲಿರುವ ಈ ‘ಯೆಹೋವನ ದಿನ’ ಏನಾಗಿದೆ, ಮತ್ತು ಅದರ ಆಗಮನವು ಮಾನವಕುಲವನ್ನು ಹೇಗೆ ಬಾಧಿಸಲಿದೆ? ಅಷ್ಟುಮಾತ್ರವಲ್ಲ, ಆ ದಿನಕ್ಕಾಗಿ ನಾವು ಸಿದ್ಧರಾಗಿದ್ದೇವೆಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು? ಈ ಪ್ರಶ್ನೆಗಳಿಗೆ ನಾವೀಗ ಉತ್ತರಗಳನ್ನು ಕಂಡುಕೊಳ್ಳುವುದು ಅತ್ಯಗತ್ಯ. ಏಕೆಂದರೆ, “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ” ಎಂಬ ಬೈಬಲಿನ ಮಾತುಗಳು ಸತ್ಯವಾಗುತ್ತಿರುವುದನ್ನು ಸಾಕ್ಷ್ಯಗಳು ತೋರಿಸುತ್ತಿವೆ.—ಚೆಫನ್ಯ 1:14.
“ಯೆಹೋವನ ಮಹಾದಿನ”
3 “ಯೆಹೋವನ ಮಹಾದಿನ” ಏನಾಗಿದೆ? ಬೈಬಲಿನಾದ್ಯಂತ ‘ಯೆಹೋವನ ದಿನ’ ಎಂಬ ಅಭಿವ್ಯಕ್ತಿಯು, ಯೆಹೋವನು ತನ್ನ ಶತ್ರುಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಿ ತನ್ನ ಮಹಾ ನಾಮವನ್ನು ಮಹಿಮೆಪಡಿಸಿದ ವಿಶೇಷ ಸಮಯಗಳಿಗೆ ಸೂಚಿಸುತ್ತದೆ. ಹಿಂದಿನ ಕಾಲಗಳಲ್ಲಿ ಯೆಹೂದ ಮತ್ತು ಯೆರೂಸಲೇಮಿನ ಅಪನಂಬಿಗಸ್ತ ಜನರ ಹಾಗೂ ದಬ್ಬಾಳಿಕೆಮಾಡುತ್ತಿದ್ದ ಬಾಬೆಲ್ ಮತ್ತು ಐಗುಪ್ತದ ನಿವಾಸಿಗಳೆಲ್ಲರ ಮೇಲೆ ಯೆಹೋವನ ನ್ಯಾಯತೀರ್ಪುಗಳು ಜಾರಿಗೊಳಿಸಲ್ಪಟ್ಟಾಗ ಅವರೆಲ್ಲರೂ ‘ಯೆಹೋವನ ದಿನಗಳನ್ನು’ ಎದುರಿಸಿದರು. (ಯೆಶಾಯ 2:1, 10-12; 13:1-6; ಯೆರೆಮೀಯ 46:7-10) ಆದರೆ, “ಯೆಹೋವನ ಮಹಾದಿನವು” ಇನ್ನೂ ಭವಿಷ್ಯದಲ್ಲಿ ಬರಲಿದೆ. ಆ “ದಿನ”ದಂದು, ಯೆಹೋವನ ನಾಮವನ್ನು ದೂಷಿಸಿರುವವರ ಮೇಲೆ ಆತನ ನ್ಯಾಯತೀರ್ಪು ಜಾರಿಗೊಳಿಸಲ್ಪಡುವುದು. ಈ ದಿನವು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನ’ ನಾಶನದೊಂದಿಗೆ ಆರಂಭವಾಗಿ, ಅರ್ಮಗೆದ್ದೋನ್ ಯುದ್ಧದಲ್ಲಿ ದುಷ್ಟ ವ್ಯವಸ್ಥೆಯ ಉಳಿದ ಭಾಗದ ನಾಶನದೊಂದಿಗೆ ಕೊನೆಗೊಳ್ಳುವುದು.—ಪ್ರಕಟನೆ 16:14, 16; 17:5, 15-17; 19:11-21.
4 ಮಾನವಕುಲದಲ್ಲಿ ಹೆಚ್ಚಿನವರಿಗೆ ವೇಗದಿಂದ ಸಮೀಪಿಸುತ್ತಿರುವ ಈ ದಿನದ ಬಗ್ಗೆ ಅರಿವಿರಲಿ ಇಲ್ಲದಿರಲಿ, ಅದಕ್ಕೆ ಹೆಚ್ಚಿನವರು ಭಯಪಡಬೇಕು. ಏಕೆ? ಪ್ರವಾದಿಯಾದ ಚೆಫನ್ಯನ ಮೂಲಕ ಯೆಹೋವನು ಉತ್ತರಿಸುವುದು: “ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ.” ಇದು ನಿಜವಾಗಿ ಭಯಾನಕವಾಗಿಲ್ಲವೇ? ಯೆಹೋವನ ಮಾತನ್ನು ಮುಂದುವರಿಸುತ್ತಾ ಪ್ರವಾದಿಯು ಹೇಳುವುದು: “ಯೆಹೋವನಾದ ನನಗೆ ಜನರು ಪಾಪಮಾಡಿದ ಕಾರಣ . . . ಅವರನ್ನು ಸಂಕಟಪಡಿಸುವೆನು.”—ಚೆಫನ್ಯ 1:15, 17.
5 ಇನ್ನೊಂದು ಬದಿಯಲ್ಲಿ, ಯೆಹೋವನ ದಿನದ ಆಗಮನಕ್ಕಾಗಿ ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಏಕೆ? ಏಕೆಂದರೆ ಅದು ನೀತಿವಂತರ ರಕ್ಷಣೆ ಮತ್ತು ಬಿಡುಗಡೆಯ ಸಮಯವಾಗಿದೆ ಹಾಗೂ ಆ ದಿನದಂದು ಯೆಹೋವನು ಉನ್ನತೋನ್ನಕ್ಕೆ ಏರಿಸಲ್ಪಡುವನು ಮತ್ತು ಆತನ ಮಹಿಮಾಭರಿತ ಹೆಸರು ಪವಿತ್ರೀಕರಿಸಲ್ಪಡುವುದೆಂದು ಅವರಿಗೆ ತಿಳಿದಿದೆ. (ಯೋವೇಲ 3:16, 17; ಚೆಫನ್ಯ 3:12-17) ಆ ದಿನಕ್ಕೆ ಭಯಪಡಬೇಕೊ ಇಲ್ಲವೆ ಅದನ್ನು ಕಾತರದಿಂದ ಎದುರುನೋಡಬೇಕೊ ಎಂಬುದು, ಜನರು ಈಗ ತಮ್ಮ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಬಹಳಷ್ಟು ಮಟ್ಟಿಗೆ ಹೊಂದಿಕೊಂಡಿದೆ. ಸಮೀಪಿಸುತ್ತಿರುವ ಆ ದಿನದ ಬಗ್ಗೆ ನಿಮ್ಮ ನೋಟವೇನು? ನೀವು ಅದಕ್ಕಾಗಿ ಸಿದ್ಧರಾಗಿದ್ದೀರೊ? ಯೆಹೋವನ ದಿನವು ಹೊಸ್ತಿಲಲ್ಲೇ ಇದೆ ಎಂಬ ಸತ್ಯಾಂಶವು ನಿಮ್ಮ ದೈನಂದಿನ ಜೀವನವನ್ನು ಈಗಲೇ ಪ್ರಭಾವಿಸುತ್ತಿದೆಯೊ?
‘ಕುಚೋದ್ಯಗಾರರು ಕುಚೋದ್ಯ ಮಾಡುತ್ತಾ ಬರುವರು’
6 ಸನ್ನಿವೇಶವು ತುರ್ತಿನದ್ದಾಗಿದ್ದರೂ, ಭೂನಿವಾಸಿಗಳಲ್ಲಿ ಹೆಚ್ಚಿನವರಿಗೆ ಸಮೀಪಿಸುತ್ತಿರುವ ‘ಯೆಹೋವನ ದಿನದ’ ಬಗ್ಗೆ ಯಾವುದೇ ಚಿಂತೆ ಇಲ್ಲ. ಅದರ ಆಗಮನ ಸನ್ನಿಹಿತವಾಗಿದೆ ಎಂದು ತಮಗೆ ಎಚ್ಚರಿಸುವವರನ್ನು ಅವರು ಅಪಹಾಸ್ಯಮಾಡುತ್ತಾರೆ ಮತ್ತು ಕುಚೋದ್ಯಮಾಡುತ್ತಾರೆ. ಆದರೆ ಇದರಿಂದ ಸತ್ಕ್ರೈಸ್ತರಿಗೆ ಆಶ್ಚರ್ಯವಾಗುವುದಿಲ್ಲ, ಏಕೆಂದರೆ ಅವರು ಅಪೊಸ್ತಲ ಪೇತ್ರನು ದಾಖಲಿಸಿದ ಈ ಎಚ್ಚರಿಕೆಯನ್ನು ನೆನಪಿನಲ್ಲಿಡುತ್ತಾರೆ: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.”—2 ಪೇತ್ರ 3:3, 4.
7 ಅಂಥ ನಕಾರಾತ್ಮಕ ಯೋಚನಾಧಾಟಿಯನ್ನು ಪ್ರತಿರೋಧಿಸಿ, ತುರ್ತು ಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಯಾವುದು ಸಹಾಯಮಾಡುವುದು? ಪೇತ್ರನು ನಮಗನ್ನುವುದು: “ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕಮಾಡಿಕೊಳ್ಳಬೇಕೆಂದು . . . ನಿಮ್ಮ ಸರಳ ಮನಸ್ಸನ್ನು ಪ್ರೇರಿಸಿದ್ದೇನೆ.” (2 ಪೇತ್ರ 3:1, 2) ಪ್ರವಾದನಾತ್ಮಕ ಎಚ್ಚರಿಕೆಗಳಿಗೆ ನಾವು ಗಮನಕೊಡುವುದು ನಮ್ಮ ‘ಮನಸ್ಸನ್ನು ಪ್ರೇರಿಸಲು’ ಸಹಾಯಮಾಡುವುದು. ಈ ಮರುಜ್ಞಾಪನಗಳನ್ನು ನಾವು ಬಹುಶಃ ಹಿಂದೆ ಎಷ್ಟೋ ಸಲ ಕೇಳಿದ್ದಿರಬಹುದು. ಆದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಾವು ಈ ಎಚ್ಚರಿಕೆಗಳಿಗೆ ಗಮನಕೊಡುತ್ತಾ ಇರುವುದು ಅತ್ಯಾವಶ್ಯಕವಾಗಿದೆ.—ಯೆಶಾಯ 34:1-4; ಲೂಕ 21:34-36.
8 ಈ ಮರುಜ್ಞಾಪನಗಳನ್ನು ಕೆಲವರು ಅಲಕ್ಷಿಸುವುದೇಕೆ? ಪೇತ್ರನು ಮುಂದುವರಿಸುವುದು: “ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತುಬಿಡುತ್ತಾರೆ; ಅದೇನಂದರೆ—ಪೂರ್ವಕಾಲದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನಿಂದ ಉಂಟಾಗಿ ನೀರಿನಿಂದ ಆಧಾರಗೊಂಡಿರುವಲ್ಲಿ ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು.” (2 ಪೇತ್ರ 3:5, 6) ಹೌದು, ಯೆಹೋವನ ದಿನವು ಬರಬಾರದೆಂದು ಹಾರೈಸುವವರೂ ಇದ್ದಾರೆ. ಏಕೆಂದರೆ ತಮ್ಮ ಯಥಾಪ್ರಕಾರದ ಜೀವನಕ್ರಮವು ಯಾವುದೇ ರೀತಿಯಲ್ಲಿ ಭಂಗಗೊಳ್ಳುವಂತೆ ಅವರು ಬಯಸುವುದಿಲ್ಲ. ಪೇತ್ರನು ಹೇಳುವಂತೆ ಅವರು ‘ತಮ್ಮ ದುರಾಶೆಗಳ ಪ್ರಕಾರ ನಡೆಯುತ್ತಾರೆ.’ ಆದುದರಿಂದ ತಮ್ಮ ಸ್ವಾರ್ಥಪರ ಜೀವನಶೈಲಿಗಾಗಿ ಯೆಹೋವನು ಅವರಿಂದ ಲೆಕ್ಕಕೇಳುವುದನ್ನು ಅವರು ಬಯಸುವುದಿಲ್ಲ!
9 ಈ ಕುಚೋದ್ಯಗಾರರು, ಯೆಹೋವನು ಗತಕಾಲದಲ್ಲಿ ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡಿದ್ದಾನೆ ಎಂಬುದನ್ನು “ಬೇಕೆಂದೇ” ಅಲಕ್ಷಿಸುತ್ತಾರೆ. ಯೇಸು ಕ್ರಿಸ್ತನು ಮತ್ತು ಅಪೊಸ್ತಲ ಪೇತ್ರನು ಇಂಥ ಎರಡು ಘಟನೆಗಳಿಗೆ, ಅಂದರೆ ‘ನೋಹನ ದಿನಗಳಿಗೆ’ ಮತ್ತು ‘ಲೋಟನ ದಿನಗಳಿಗೆ’ ಸೂಚಿಸುತ್ತಾರೆ. (ಲೂಕ 17:26-30; 2 ಪೇತ್ರ 2:5-9) ಜಲಪ್ರಳಯದ ಮುಂಚೆ ನೋಹನು ಕೊಟ್ಟ ಎಚ್ಚರಿಕೆಗೆ ಜನರು ಗಮನವನ್ನೇ ಕೊಡಲಿಲ್ಲ. ಅದೇ ರೀತಿ, ಸೊದೋಮ್ ಗೊಮೋರಗಳ ನಾಶನಕ್ಕೆ ಮುಂಚೆ, ಲೋಟನ ಅಳಿಯಂದಿರಿಗೆ ಅವನು “ಗೇಲಿಮಾಡುವವನಾಗಿ ಕಾಣಿಸಿದನು.”—ಆದಿಕಾಂಡ 19:14.
10 ಇಂದಿನ ಸನ್ನಿವೇಶವೂ ಅದೇ ರೀತಿಯದ್ದಾಗಿದೆ. ಹಾಗಿದ್ದರೂ, ಯಾರು ಗಮನಕೊಡುವುದಿಲ್ಲವೊ ಅವರ ಬಗ್ಗೆ ಯೆಹೋವನ ಪ್ರತಿಕ್ರಿಯೆ ಏನೆಂಬುದನ್ನು ಗಮನಿಸಿರಿ: “ಯೆಹೋವನು ಮೇಲನ್ನಾಗಲಿ ಕೇಡನ್ನಾಗಲಿ ಮಾಡನು ಎಂದು ಮನಸ್ಸಿನೊಳಗೆ ಅಂದುಕೊಳ್ಳುವವರಾಗಿ ಮಡ್ಡಿಯ ಮೇಲೆ ಮಂದವಾಗಿರುವ ದ್ರಾಕ್ಷಾರಸಕ್ಕೆ ಸಮಾನರಾದ ಜನರನ್ನು ದಂಡಿಸುವೆನು. ಅವರ ಆಸ್ತಿಯು ಸೂರೆಯಾಗುವದು, ಅವರ ಮನೆಗಳು ಹಾಳಾಗುವವು; ಅವರು ಚೆಫನ್ಯ 1:12, 13) ಜನರು ತಮ್ಮ “ಸಾಧಾರಣ” ದೈನಂದಿನ ಚಟುವಟಿಕೆಗಳಲ್ಲೇ ಮಗ್ನರಾಗಿರುವುದನ್ನು ಮುಂದುವರಿಸಬಹುದು. ಆದರೆ ಅವರ ಈ ಎಲ್ಲ ಕಠಿನ ಶ್ರಮದಿಂದ ಅವರಿಗೆ ಯಾವುದೇ ರೀತಿಯ ಶಾಶ್ವತ ಪ್ರಯೋಜನ ಸಿಗದು. ಏಕೆ? ಏಕೆಂದರೆ ಯೆಹೋವನ ದಿನವು ತಟ್ಟನೆ ಬರಲಿದೆ ಮತ್ತು ಅವರು ಕೂಡಿಹಾಕಿರುವ ಎಲ್ಲ ಭೌತಿಕ ಐಶ್ವರ್ಯಗಳು ಅವರನ್ನು ರಕ್ಷಿಸಲಾರದು.—ಚೆಫನ್ಯ 1:18.
ಮನೆಗಳನ್ನು ಕಟ್ಟಿಕೊಂಡರೂ ಅವುಗಳಲ್ಲಿ ವಾಸಿಸರು, ತೋಟಗಳನ್ನು ಮಾಡಿಕೊಂಡರೂ ಅವುಗಳ ದ್ರಾಕ್ಷಾರಸವನ್ನು ಕುಡಿಯರು.” (“ಅದಕ್ಕೆ ಕಾದಿರು”
11 ನಾವು ನಮ್ಮ ಸುತ್ತಲಿನ ದುಷ್ಟ ಲೋಕದಂತೆ ಇರಬಾರದು. ಅದರ ಬದಲು, ಪ್ರವಾದಿ ಹಬಕ್ಕೂಕನು ದಾಖಲಿಸಿಟ್ಟ ಈ ಬುದ್ಧಿವಾದವನ್ನು ನಾವು ಮನಸ್ಸಿನಲ್ಲಿಡತಕ್ಕದು: “ಅದು [ದರ್ಶನವು] ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ನಮ್ಮ ಅಪರಿಪೂರ್ಣ ದೃಷ್ಟಿಕೋನದಿಂದಾಗಿ ಆ ದಿನವು ತಡವಾಗಿ ಬರುತ್ತಿದೆಯೆಂದು ನಮಗನಿಸುವುದಾದರೂ, ಯೆಹೋವನು ತಡಮಾಡುವುದಿಲ್ಲ ಎಂಬ ಮಾತನ್ನು ನಾವು ನೆನಪಿನಲ್ಲಿಡತಕ್ಕದು. ಆತನ ದಿನವು ಸಮಯಕ್ಕೆ ಸರಿಯಾಗಿ, ಆದರೆ ಮಾನವರು ನಿರೀಕ್ಷಿಸದಿರುವ ಗಳಿಗೆಯಲ್ಲಿ ಬರುವುದು.—ಮಾರ್ಕ 13:33; 2 ಪೇತ್ರ 3:9, 10.
12 ಯೆಹೋವನ ದಿನಕ್ಕಾಗಿ ಕಾದುಕೊಂಡಿರುವುದರ ಮಹತ್ವವನ್ನು ಒತ್ತಿಹೇಳುತ್ತಾ, ಯೇಸು ತನ್ನ ಹಿಂಬಾಲಕರಲ್ಲೂ ಕೆಲವರು ತಮ್ಮ ತುರ್ತು ಪ್ರಜ್ಞೆಯನ್ನು ಕಳೆದುಕೊಳ್ಳುವರೆಂದು ಎಚ್ಚರಿಸಿದನು. ಇಂಥವರ ಬಗ್ಗೆ ಅವನು ಮುಂತಿಳಿಸಿದ್ದು: “ಆ ಕೆಟ್ಟ ಆಳು—ನನ್ನ ಯಜಮಾನನು ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ತನ್ನ ಜೊತೆ ಆಳುಗಳನ್ನು ಹೊಡೆಯುವದಕ್ಕೆ ತೊಡಗಿ ಕುಡಿಕರ ಸಂಗಡ ತಿನ್ನುತ್ತಾ ಕುಡಿಯುತ್ತಾ ಇರುವದಾದರೆ, ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ಹೊಡಿಸಿ ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.” (ಮತ್ತಾಯ 24:48-51) ಇದಕ್ಕೆ ವ್ಯತಿರಿಕ್ತವಾಗಿ, ನಂಬಿಗಸ್ತನೂ ವಿವೇಕಿಯೂ ಅದ ಆಳು ವರ್ಗವು ನಿಷ್ಠೆಯಿಂದ ತುರ್ತು ಪ್ರಜ್ಞೆಯನ್ನು ಕಾಪಾಡಿಕೊಳ್ಳುತ್ತದೆ. ಈ ಆಳು ವರ್ಗವು ಸದಾ ಎಚ್ಚರವಾಗಿದ್ದು, ಸಿದ್ಧವಾಗಿದೆಯೆಂಬುದನ್ನು ತೋರಿಸಿಕೊಟ್ಟಿದೆ. ಆದುದರಿಂದಲೇ ಯೇಸು ಈ ಆಳನ್ನು, ಭೂಮಿಯಲ್ಲಿ “ತನ್ನ ಎಲ್ಲಾ ಆಸ್ತಿಯ ಮೇಲೆ” ನೇಮಿಸಿದ್ದಾನೆ.—ಮತ್ತಾಯ 24:42-47.
ತುರ್ತು ಪ್ರಜ್ಞೆಯ ಅಗತ್ಯ
13 ಪ್ರಥಮ ಶತಮಾನದ ಕ್ರೈಸ್ತರು ತಮ್ಮ ತುರ್ತು ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿತ್ತು. “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು” ನೋಡಿದ ಕೂಡಲೇ ಅವರು ಕ್ರಿಯೆಗೈಯಬೇಕಾಗಿತ್ತು. (ಲೂಕ 21:20, 21) ಆ ಘಟನೆ ಸಾ.ಶ. 66ರಲ್ಲಿ ಸಂಭವಿಸಿತು. ಆ ಸಮಯದಲ್ಲಿದ್ದ ಕ್ರೈಸ್ತರಿಗೆ ಇರಬೇಕಾಗಿದ್ದ ತುರ್ತು ಪ್ರಜ್ಞೆಯ ಮಹತ್ವವನ್ನು ಯೇಸು ಹೇಗೆ ಎತ್ತಿತೋರಿಸಿದನೆಂಬುದನ್ನು ಗಮನಿಸಿ. ಅವನು ಹೇಳಿದ್ದು: “ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವದನ್ನು ತೆಗೆದುಕೊಳ್ಳುವದಕ್ಕೆ ಇಳಿಯದೆ, ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರುಗಿ ಬಾರದೆ ಓಡಿಹೋಗಲಿ.” (ಮತ್ತಾಯ 24:17, 18) ಆದರೆ ಇತಿಹಾಸವು ತೋರಿಸುವಂತೆ, ಇನ್ನೂ ನಾಲ್ಕು ವರ್ಷಗಳವರೆಗೆ ಯೆರೂಸಲೇಮಿಗೆ ಏನೂ ಆಗಲಿಲ್ಲ. ಹೀಗಿರುವುದರಿಂದ, ಕ್ರೈಸ್ತರು ಸಾ.ಶ. 66ರಲ್ಲಿ ಯೇಸುವಿನ ಮಾತುಗಳನ್ನು ಅಷ್ಟು ತುರ್ತಾಗಿ ಪಾಲಿಸುವ ಅಗತ್ಯವೇನಿತ್ತು?
14 ರೋಮನ್ ಸೈನ್ಯವು ಯೆರೂಸಲೇಮ್ ಪಟ್ಟಣವನ್ನು ನಾಶಮಾಡಿದ್ದು ನಾಲ್ಕು ವರ್ಷಗಳ ಬಳಿಕವೇ, ಅಂದರೆ ಸಾ.ಶ. 70ರಲ್ಲಿ ಎಂಬುದು ಸತ್ಯ. ಆದರೆ ಆ ನಾಲ್ಕು ವರ್ಷಗಳ ಸಮಯವು ಕಲಹಮುಕ್ತವಾಗಿರಲಿಲ್ಲ ಬದಲಿಗೆ ಸನ್ನಿವೇಶವು ಇದಕ್ಕೆ ತದ್ವಿರುದ್ಧವಾಗಿತ್ತು! ಆ ವರ್ಷಗಳು ಹಿಂಸಾಚಾರ ಮತ್ತು ರಕ್ತಪಾತದಿಂದ ತುಂಬಿದ್ದವು. ಆ ಸಮಯದಲ್ಲಿ ಯೆರೂಸಲೇಮಿನಲ್ಲಿದ್ದ ಸನ್ನಿವೇಶವನ್ನು ಒಬ್ಬ ಇತಿಹಾಸಗಾರನು ವರ್ಣಿಸುತ್ತಾ ಹೇಳಿದ್ದೇನೆಂದರೆ, ಅದು “ಭಯಂಕರವಾಗಿ ರಕ್ತಸಿಕ್ತವಾದ ಅಂತರ್‌ಯುದ್ಧದ ಸಮಯವಾಗಿತ್ತು ಮತ್ತು ಅದರೊಂದಿಗೆ ಭೀಕರ ಕ್ರೌರ್ಯದಿಂದ ಕೂಡಿದ ಕೃತ್ಯಗಳು ನಡೆದವು.” ಕೋಟೆಗಳನ್ನು ಬಲಪಡಿಸಲಿಕ್ಕಾಗಿ, ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲಿಕ್ಕೆ ಮತ್ತು ಮಿಲಿಟರಿಗೆ ಸೇರುವಂತೆ ಯುವ ಪುರುಷರನ್ನು ಸೈನ್ಯದಲ್ಲಿ ದಾಖಲುಮಾಡಲಾಗುತ್ತಿತ್ತು. ಅವರಿಗೆ ದಿನಾಲೂ ಮಿಲಿಟರಿ ಕವಾಯತು ಇರುತ್ತಿತ್ತು. ತೆಗೆದುಕೊಳ್ಳಲಾದ ಉಗ್ರ ಕ್ರಮಗಳನ್ನು ಯಾರು ಬೆಂಬಲಿಸುತ್ತಿರಲಿಲ್ಲವೊ ಅವರನ್ನು ದ್ರೋಹಿಗಳೆಂದು ಪರಿಗಣಿಸಲಾಗುತ್ತಿತ್ತು. ಒಂದುವೇಳೆ ಕ್ರೈಸ್ತರು ಪಟ್ಟಣದಲ್ಲೇ ಇನ್ನೂ ಕೊಂಚ ಸಮಯ ಉಳಿದಿರುತ್ತಿದ್ದರೆ, ಅವರು ತುಂಬ ಅಪಾಯಕಾರಿ ಸನ್ನಿವೇಶದಲ್ಲಿ ಸಿಕ್ಕಿಬೀಳುತ್ತಿದ್ದರು.—15 ಯೇಸು ಕೇವಲ ಯೆರೂಸಲೇಮ್‌ನಲ್ಲಿದ್ದವರಿಗೆ ಮಾತ್ರವಲ್ಲ ಬದಲಿಗೆ “ಯೂದಾಯದಲ್ಲಿರುವವರು” ಸಹ ಓಡಿಹೋಗಲು ಆರಂಭಿಸುವಂತೆ ಹೇಳಿದನೆಂಬುದನ್ನು ಗಮನಿಸಿರಿ. ಇದು ಪ್ರಾಮುಖ್ಯವಾಗಿತ್ತು ಯಾಕಂದರೆ ರೋಮನ್ ಸೇನಾಪಡೆಗಳು ಯೆರೂಸಲೇಮ್‌ನಿಂದ ಹೊರಟುಬಂದ ಕೆಲವೇ ತಿಂಗಳುಗಳೊಳಗೆ ತಮ್ಮ ಯುದ್ಧ ಕಾರ್ಯಾಚರಣೆಯನ್ನು ಪುನಃ ಆರಂಭಿಸಿದವು. ಮೊದಲಾಗಿ ಗಲಿಲಾಯವನ್ನು ಸಾ.ಶ. 67ರಲ್ಲಿ ವಶಪಡಿಸಲಾಯಿತು ಮತ್ತು ಮುಂದಿನ ವರ್ಷ ಯೂದಾಯವನ್ನು ವ್ಯವಸ್ಥಿತ ರೀತಿಯಲ್ಲಿ ಜಯಿಸಲಾಯಿತು. ಇದರಿಂದಾಗಿ, ಗ್ರಾಮಾಂತರ ಪ್ರದೇಶದಲ್ಲೆಲ್ಲ ಬಹಳಷ್ಟು ದುರವಸ್ಥೆಯು ಉಂಟಾಯಿತು. ಯೆರೂಸಲೇಮಿನಿಂದ ಸಹ ಯೆಹೂದಿಗಳಿಗೆ ತಪ್ಪಿಸಿಕೊಂಡು ಹೋಗುವುದು ಹೆಚ್ಚೆಚ್ಚು ಕಷ್ಟವಾಗತೊಡಗಿತು. ಪಟ್ಟಣದ ದ್ವಾರಗಳ ಬಳಿ ಪಹರೆಯನ್ನಿಡಲಾಯಿತು ಮತ್ತು ಯಾರಾದರೂ ತಪ್ಪಿಸಲು ಪ್ರಯತ್ನಿಸುವಲ್ಲಿ ಅವರು ರೋಮನರ ಪಕ್ಷಕ್ಕೆ ಸೇರುತ್ತಿದ್ದಾರೆಂದು ಎಣಿಸಲಾಗುತ್ತಿತ್ತು.
16 ಈ ಎಲ್ಲ ಅಂಶಗಳನ್ನು ಮನಸ್ಸಿನಲ್ಲಿಟ್ಟವರಾಗಿ, ಯೇಸು ಸನ್ನಿವೇಶದ ತುರ್ತನ್ನು ಏಕೆ ಒತ್ತಿಹೇಳಿದನೆಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಕ್ರೈಸ್ತರು ತಮ್ಮ ಭೌತಿಕ ಸ್ವತ್ತುಗಳಿಂದಾಗಿ ಅಪಕರ್ಷಿತರಾಗದೆ, ತ್ಯಾಗಗಳನ್ನು ಮಾಡಲು ಸಿದ್ಧರಾಗಿರಬೇಕಿತ್ತು. ಯೇಸುವಿನ ಎಚ್ಚರಿಕೆಗೆ ವಿಧೇಯರಾಗಲು ಅವರು ‘ತಮಗಿರುವದನ್ನೆಲ್ಲಾ ಬಿಟ್ಟುಬಿಡಲು’ ಸಿದ್ಧರಾಗಿರಬೇಕಿತ್ತು. (ಲೂಕ 14:33) ತಡಮಾಡದೆ ವಿಧೇಯತೆ ತೋರಿಸಿ ಯೊರ್ದನಿನ ಆಚೆ ಪಕ್ಕಕ್ಕೆ ಓಡಿಹೋದವರು ರಕ್ಷಿಸಲ್ಪಟ್ಟರು.
ನಮ್ಮ ತುರ್ತು ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು
17 ನಾವು ಅಂತ್ಯಕಾಲದ ಕೊನೆ ಭಾಗದಲ್ಲಿ ಜೀವಿಸುತ್ತಿದ್ದೇವೆಂದು ಬೈಬಲ್ ಪ್ರವಾದನೆಗಳು ಸ್ಪಷ್ಟಪಡಿಸುತ್ತವೆ. ಹಿಂದೆಂದಿಗಿಂತಲೂ ಈಗ ನಾವು ನಮ್ಮ ತುರ್ತು ಪ್ರಜ್ಞೆಯನ್ನು ಬಲಪಡಿಸುವ ಅಗತ್ಯವಿದೆ. ಶಾಂತಿ ಸಮಯದಲ್ಲಿ ಒಬ್ಬ ಸೈನಿಕನಿಗೆ ಕದನದ ಬಗ್ಗೆ ಯಾವುದೇ ಉದ್ವೇಗ ಅಥವಾ ಅಪಾಯದ ಅನಿಸಿಕೆ ಇರುವುದಿಲ್ಲ. ಆದರೆ ಈ ಕಾರಣಕ್ಕಾಗಿ ಅವನು ಎಚ್ಚರದಿಂದಿರುವುದು ತುರ್ತಿನದ್ದಲ್ಲವೆಂದು ನೆನಸಿದರೆ ಮತ್ತು ಒಂದುವೇಳೆ ತಟ್ಟನೆ ಯುದ್ಧಕ್ಕೆ ಬರಲು ಕರೆಬಂದರೆ ಅವನು ಅಣಿಯಾಗಿರಲಿಕ್ಕಿಲ್ಲ ಮತ್ತು ಇದರ ಪರಿಣಾಮ ಮಾರಕವಾಗಿರಬಲ್ಲದು. ಆಧ್ಯಾತ್ಮಿಕ ವಿಷಯದಲ್ಲೂ ಇದು ಸತ್ಯವಾಗಿದೆ. ನಮ್ಮ ತುರ್ತು ಪ್ರಜ್ಞೆಯು ಕ್ಷೀಣಿಸುತ್ತಾ ಹೋಗುವಂತೆ ನಾವು ಬಿಟ್ಟರೆ, ನಮ್ಮ ಮೇಲೆ ಆಗಬಹುದಾದ ದಾಳಿಗಳನ್ನು ಪ್ರತಿರೋಧಿಸಲು ನಾವು ಸಿದ್ಧರಾಗಿರಲಿಕ್ಕಿಲ್ಲ ಮತ್ತು ಕೊನೆಗೆ ಯೆಹೋವನ ದಿನ ಹಠಾತ್ತಾಗಿ ಬಂದುಬಿಡಬಹುದು. (ಲೂಕ 21:36; 1 ಥೆಸಲೊನೀಕ 5:4) ಯಾರಾದರೂ ‘ಯೆಹೋವನ ಮಾರ್ಗಬಿಟ್ಟಿ’ರುವಲ್ಲಿ, ಆತನನ್ನು ಪುನಃ ಹುಡುಕುವ ಸಮಯವು ಇದೇ ಆಗಿದೆ.—ಚೆಫನ್ಯ 1:3-6; 2 ಥೆಸಲೊನೀಕ 1:8, 9.
18 ಆದುದರಿಂದಲೇ ನಾವು “ಯೆಹೋವನ ದಿನದ ಪ್ರತ್ಯಕ್ಷತೆ”ಗಾಗಿ ಹಾರೈಸುತ್ತಾ ಇರುವಂತೆ ಅಪೊಸ್ತಲ ಪೇತ್ರನು ಉತ್ತೇಜಿಸಿದನು. ನಾವಿದನ್ನು ಹೇಗೆ ಮಾಡಬಲ್ಲೆವು? ಒಂದು ವಿಧವು, “ನಡವಳಿಕೆಯ ಪವಿತ್ರ ಕೃತ್ಯಗಳು ಹಾಗೂ ದೇವಭಕ್ತಿಯ ಕ್ರಿಯೆ”ಗಳಲ್ಲಿ ಮಗ್ನರಾಗಿರುವ ಮೂಲಕವೇ. (2 ಪೇತ್ರ 3:11, 12, NW) ಇಂಥ ಚಟುವಟಿಕೆಗಳಲ್ಲಿ ನಿರತರಾಗಿರುವುದು, ನಾವು ‘ಯೆಹೋವನ ದಿನದ’ ಆಗಮನಕ್ಕಾಗಿ ಕಾತರದಿಂದ ಕಾಯುತ್ತಾ ಇರಲು ಸಹಾಯಮಾಡುವುದು. ‘ಹಾರೈಸುತ್ತಾ ಇರು’ ಎಂಬುದಕ್ಕಾಗಿರುವ ಗ್ರೀಕ್ ಪದಕ್ಕೆ, ‘ತ್ವರೆಪಡಿಸು’ ಎಂಬ ಅಕ್ಷರಾರ್ಥವಿದೆ. ಯೆಹೋವನ ದಿನದ ಆಗಮನಕ್ಕಾಗಿ ಉಳಿದಿರುವ ಸಮಯವನ್ನು ನಾವು ನಿಜವಾಗಿ ತ್ವರೆಗೊಳಿಸಲು ಸಾಧ್ಯವಿಲ್ಲ. ಆದರೆ ನಾವು ಆ ದಿನಕ್ಕಾಗಿ ಕಾಯುತ್ತಾ, ಅದೇ ಸಮಯದಲ್ಲಿ ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದಾದರೆ ನಮಗೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ.—1 ಕೊರಿಂಥ 15:58.
19 ತದ್ರೀತಿಯಲ್ಲಿ ದೇವರ ವಾಕ್ಯದ ಕುರಿತಾಗಿ ಧ್ಯಾನಿಸುವುದು ಮತ್ತು ಅದರಲ್ಲಿರುವ ಮರುಜ್ಞಾಪನಗಳ ಬಗ್ಗೆ ಪರ್ಯಾಲೋಚಿಸುವುದು, ನಾವು ಆ ದಿನದ “ಬರೋಣಕ್ಕಾಗಿ ತೀವ್ರವಾಗಿ ಹಾತೊರೆಯಲು (ನಿರೀಕ್ಷಿಸಲು ಮತ್ತು ತ್ವರೆಗೊಳಿಸಲು),” ಹೌದು ಅದನ್ನು “ಸತತವಾಗಿ ನಿರೀಕ್ಷಿಸುತ್ತಾ ಇರಲು” ನಮಗೆ ಸಹಾಯಮಾಡುವುದು. (2 ಪೇತ್ರ 3:12, ದಿ ಆ್ಯಂಪ್ಲಿಫೈಯ್ಡ್ ಬೈಬಲ್; ವಿಲ್ಯಮ್ ಬಾರ್ಕ್ಲೆಯವರ ದ ನ್ಯೂ ಟೆಸ್ಟಮೆಂಟ್) ಆ ಮರುಜ್ಞಾಪನಗಳಲ್ಲಿ, ಯೆಹೋವನ ದಿನದ ಆಗಮನದ ಬಗ್ಗೆಯೂ ‘ಯೆಹೋವನಿಗಾಗಿ ಕಾದುಕೊಂಡಿರು’ವವರಿಗೆ ಸಿಗುವ ಹೇರಳ ಆಶೀರ್ವಾದಗಳ ಬಗ್ಗೆಯೂ ಮುಂತಿಳಿಸುವ ಅನೇಕಾನೇಕ ಪ್ರವಾದನೆಗಳು ಸೇರಿವೆ.—ಚೆಫನ್ಯ 3:8.
20 “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ” ಎಂದು ಪ್ರವಾದಿಯಾದ ಚೆಫನ್ಯನ ಮೂಲಕ ಕೊಡಲ್ಪಟ್ಟಿರುವ ಬುದ್ಧಿವಾದವನ್ನು ನಾವೆಲ್ಲರೂ ಪಾಲಿಸುವ ಸಮಯ ನಿಜವಾಗಿಯೂ ಇದೇ ಆಗಿದೆ.—ಚೆಫನ್ಯ 2:2, 3.
21 ಆದುದರಿಂದ 2007ನೇ ಇಸವಿಗಾಗಿ, “ಯೆಹೋವನ ಮಹಾದಿನವು ಹತ್ತಿರವಾಯಿತು” ಎಂಬ ವಚನವನ್ನು ವಾರ್ಷಿಕವಚನವಾಗಿ ಆರಿಸಲಾಗಿರುವುದು ಎಷ್ಟು ಸೂಕ್ತವಾಗಿದೆ! ಆ ದಿನವು “ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ” ಎಂದು ದೇವಜನರಿಗೆ ಮನವರಿಕೆಯಾಗಿದೆ. (ಚೆಫನ್ಯ 1:14) ಅದು “ತಾಮಸವಾಗದು.” (ಹಬಕ್ಕೂಕ 2:3) ಆದುದರಿಂದ ನಾವು ಆ ದಿನಕ್ಕಾಗಿ ಕಾಯುತ್ತಾ ಇರುವಾಗ, ಈ ಪ್ರವಾದನೆಗಳ ಕೊನೆ ನೆರವೇರಿಕೆಯು ಹತ್ತಿರದಲ್ಲಿದೆ ಎಂಬುದನ್ನು ಗ್ರಹಿಸಿ, ನಾವೀಗ ಜೀವಿಸುತ್ತಿರುವ ಸಮಯಗಳ ಬಗ್ಗೆ ಸದಾ ಎಚ್ಚರದಿಂದಿರೋಣ! (w06 12/15)
ನೀವು ಉತ್ತರಿಸಬಲ್ಲಿರೊ?
• ‘ಯೆಹೋವನ ಮಹಾದಿನವು’ ಏನಾಗಿದೆ?
• ಇಂದಿನ ಸಮಯಗಳು ತುರ್ತಿನದ್ದಾಗಿವೆ ಎಂಬುದನ್ನು ಅನೇಕರು ಏಕೆ ಅಲಕ್ಷಿಸುತ್ತಾರೆ?
• ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರು ಏಕೆ ತುರ್ತು ಪ್ರಜ್ಞೆಯಿಂದ ಕ್ರಿಯೆಗೈಯಬೇಕಿತ್ತು?
• ನಮ್ಮ ತುರ್ತು ಪ್ರಜ್ಞೆಯನ್ನು ನಾವು ಹೇಗೆ ಹೆಚ್ಚಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಕ್ರೈಸ್ತರು ಯಾವ ವಿಶೇಷ ದಿನಕ್ಕಾಗಿ ಕಾಯುತ್ತಿದ್ದಾರೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು, ಮತ್ತು ಏಕೆ?
3. “ಯೆಹೋವನ ಮಹಾದಿನ” ಏನಾಗಿದೆ?
4. ವೇಗದಿಂದ ಸಮೀಪಿಸುತ್ತಿರುವ ಯೆಹೋವನ ದಿನದ ಬಗ್ಗೆ ಹೆಚ್ಚಿನ ಮಾನವರು ಏಕೆ ಭಯಪಡಬೇಕು?
5. ಯೆಹೋವನ ದಿನದ ಬಗ್ಗೆ ಮಿಲ್ಯಾಂತರ ಜನರಿಗೆ ಯಾವ ಸಕಾರಾತ್ಮಕ ದೃಷ್ಟಿಕೋನವಿದೆ, ಮತ್ತು ಏಕೆ?
6. ಹೆಚ್ಚಿನ ಜನರಿಗೆ ‘ಯೆಹೋವನ ದಿನದ’ ಬಗ್ಗೆ ಯಾವ ನೋಟವಿದೆ, ಆದರೆ ಇದರಿಂದ ಸತ್ಕ್ರೈಸ್ತರಿಗೆ ಏಕೆ ಆಶ್ಚರ್ಯವಾಗುವುದಿಲ್ಲ?
7. ತುರ್ತು ಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಯಾವುದು ಸಹಾಯಮಾಡುವುದು?
8. ಅನೇಕರು ಬೈಬಲಿನ ಮರುಜ್ಞಾಪನಗಳನ್ನು ಅಲಕ್ಷಿಸುವುದೇಕೆ?
9. ನೋಹನ ಮತ್ತು ಲೋಟನ ದಿನಗಳಲ್ಲಿ ಜನರು ಯಾವ ಮನೋಭಾವವನ್ನು ಪ್ರದರ್ಶಿಸಿದರು?
10. ಗಮನಕೊಡದೆ ಇರುವವರ ಬಗ್ಗೆ ಯೆಹೋವನ ಪ್ರತಿಕ್ರಿಯೆಯೇನು?
11. ನಾವು ಯಾವ ಬುದ್ಧಿವಾದವನ್ನು ಮನಸ್ಸಿನಲ್ಲಿಡಬೇಕು?
12. ಯೇಸು ಯಾವುದರ ಬಗ್ಗೆ ಎಚ್ಚರಿಕೆ ಕೊಟ್ಟನು, ಮತ್ತು ಇದು ಯೇಸುವಿನ ನಂಬಿಗಸ್ತ ಹಿಂಬಾಲಕರ ಕಾರ್ಯಗಳಿಗೆ ಹೇಗೆ ವ್ಯತಿರಿಕ್ತವಾಗಿದೆ?
13. ತುರ್ತು ಪ್ರಜ್ಞೆಯ ಅಗತ್ಯವನ್ನು ಯೇಸು ಹೇಗೆ ಎತ್ತಿತೋರಿಸಿದನು?
14, 15. ಯೆರೂಸಲೇಮ್ ಪಟ್ಟಣದ ಸುತ್ತಲೂ ದಂಡುಗಳು ಮುತ್ತಿಗೆಹಾಕಿರುವುದನ್ನು ನೋಡುವಾಗ ಪ್ರಥಮ ಶತಮಾನದ ಕ್ರೈಸ್ತರು ತಡಮಾಡದೆ ಕ್ರಿಯೆಗೈಯುವುದು ಏಕೆ ಅತ್ಯಗತ್ಯವಾಗಿತ್ತು?
16. ಆ ಸಂಕಟದ ಸಮಯದಿಂದ ಪಾರಾಗಲಿಕ್ಕಾಗಿ ಪ್ರಥಮ ಶತಮಾನದ ಕ್ರೈಸ್ತರಿಗೆ ಯಾವ ಮನೋಭಾವದ ಅಗತ್ಯವಿತ್ತು?
17. ನಮ್ಮ ತುರ್ತು ಪ್ರಜ್ಞೆಯನ್ನು ನಾವು ಏಕೆ ಬಲಪಡಿಸಬೇಕು?
18, 19. ನಾವು ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು’ ಹಾರೈಸುತ್ತಾ ಇರುವಂತೆ ಯಾವುದು ಸಹಾಯಮಾಡುವುದು?
20. ನಾವು ಯಾವ ಬುದ್ಧಿವಾದವನ್ನು ಪಾಲಿಸಬೇಕು?
21. ಇಸವಿ 2007ರಲ್ಲಿ ದೇವಜನರ ದೃಢಸಂಕಲ್ಪವು ಏನಾಗಿರುವುದು?
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಸವಿ 2007ಕ್ಕಾಗಿ ವಾರ್ಷಿಕವಚನ: “ಯೆಹೋವನ ಮಹಾದಿನವು ಹತ್ತಿರವಾಯಿತು.”—ಚೆಫನ್ಯ 1:14.
[ಪುಟ 9ರಲ್ಲಿರುವ ಚಿತ್ರ]
ನೋಹನ ದಿನಗಳಲ್ಲಿ ಇದ್ದಂತೆ, ಯೆಹೋವನು ಕ್ರಮಕೈಗೊಳ್ಳುವಾಗ ಕುಚೋದ್ಯಗಾರರಿಗೆ ಆಶ್ಚರ್ಯವಾಗುವುದು
[ಪುಟ 10ರಲ್ಲಿರುವ ಚಿತ್ರ]
“ದಂಡುಗಳು ಯೆರೂಸಲೇಮ್ ಪಟ್ಟಣವನ್ನು ಸುತ್ತುವರಿದಿರುವುದನ್ನು” ಕ್ರೈಸ್ತರು ನೋಡಿದಾಗ, ಅವರು ತಡಮಾಡದೆ ಕ್ರಿಯೆಗೈಯಬೇಕಿತ್ತು