ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರೆಯವರು ಮಾತ್ರ ಸತ್ಯವಂತರಾಗಿರಬೇಕೊ?

ಬೇರೆಯವರು ಮಾತ್ರ ಸತ್ಯವಂತರಾಗಿರಬೇಕೊ?

ಬೇರೆಯವರು ಮಾತ್ರ ಸತ್ಯವಂತರಾಗಿರಬೇಕೊ?

“ನನಗೆ ಸುಳ್ಳುಗಳೆಂದರೆ ಸ್ವಲ್ಪವೂ ಇಷ್ಟವಿಲ್ಲ, ಮತ್ತು ನನಗೆ ಯಾರಾದರೂ ಸುಳ್ಳು ಹೇಳಿದರೆ ಅದು ಸಹ ಹಿಡಿಸುವುದಿಲ್ಲ!” ಇದು 16 ವರ್ಷ ಪ್ರಾಯದ ಹುಡುಗಿಯೊಬ್ಬಳ ಮಾತು. ನಮ್ಮಲ್ಲಿ ಹೆಚ್ಚಿನವರಿಗೆ ಹೀಗೆಯೇ ಅನಿಸುತ್ತದೆ. ಬೇರೆಯವರು ನಮಗೆ ಹೇಳುವ ಮಾತಾಗಲಿ, ನಾವು ಓದುವಂಥ ವಿಷಯವಾಗಲಿ ಸತ್ಯವಾಗಿರಬೇಕೆಂದು ಬಯಸುತ್ತೇವೆ. ಆದರೆ ಇತರರಿಗೆ ಮಾಹಿತಿಯನ್ನು ದಾಟಿಸುವಾಗ ನಾವು ನಿಜವನ್ನೇ ಹೇಳುತ್ತೇವೊ?

ಜರ್ಮನಿಯಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಗೆ ಹೆಚ್ಚಿನವರು ಹೀಗೆ ಪ್ರತಿಕ್ರಿಯಿಸಿದರು: “ನಮಗೆ ಅಥವಾ ಇತರರಿಗೆ ಹಾನಿಯಾಗುವುದರಿಂದ ತಪ್ಪಿಸಲಿಕ್ಕಾಗಿ ಚಿಕ್ಕಪುಟ್ಟ ವಿಷಯಗಳ ಬಗ್ಗೆ ಸುಳ್ಳು ಹೇಳಬಹುದು; ಪರಸ್ಪರರೊಂದಿಗೆ ಹೊಂದಿಕೊಂಡು ಹೋಗಲಿಕ್ಕಂತೂ ಅದು ತುಂಬ ಆವಶ್ಯಕ.” ಒಬ್ಬ ಪತ್ರಕರ್ತೆ ಬರೆದುದು: “ಯಾವಾಗಲೂ ಸತ್ಯವನ್ನೇ ಆಡಬೇಕೆಂಬುದು ಒಳ್ಳೇ ವಿಚಾರವೇನೊ ನಿಜ, ಆದರೆ ಆಗ ಬದುಕು ಬಹಳ ನೀರಸವಾಗಿರುವುದು.”

ಬೇರೆಯವರು ಮಾತ್ರ ಸತ್ಯವನ್ನಾಡಬೇಕು ಎಂಬುದು ನಮ್ಮ ಬಯಕೆಯಾಗಿದ್ದು, ನಾವು ಸುಳ್ಳು ಹೇಳುವಾಗ ಯಾವುದಾದರೂ ಕಾರಣಗಳನ್ನು ಕೊಡುತ್ತಿರಬಹುದೊ? ನಾವು ಯಾವಾಗಲೂ ಸತ್ಯವನ್ನಾಡುವುದು ಅಷ್ಟೊಂದು ಪ್ರಾಮುಖ್ಯವೊ? ಅಸತ್ಯವನ್ನಾಡುವುದರ ಪರಿಣಾಮಗಳೇನು?

ಸತ್ಯ ಹೇಳದಿರುವುದರಿಂದ ಆಗುವ ಹಾನಿ

ಸತ್ಯ ಹೇಳದಿರುವುದರಿಂದ ಯಾವ ಹಾನಿ ಆಗಬಲ್ಲದು ಎಂಬುದನ್ನು ಪರಿಗಣಿಸಿರಿ. ಸುಳ್ಳುಹೇಳುವುದು, ವಿವಾಹ ಸಂಗಾತಿಗಳು ಮತ್ತು ಕುಟುಂಬ ಸದಸ್ಯರ ಮಧ್ಯೆ ಅಪನಂಬಿಕೆಯನ್ನು ಹುಟ್ಟಿಸುತ್ತದೆ. ಆಧಾರವಿಲ್ಲದ ಹರಟೆಮಾತು ಒಬ್ಬ ವ್ಯಕ್ತಿಯ ಹೆಸರಿಗೆ ಮಸಿ ಬಳಿಯಬಹುದು. ಉದ್ಯೋಗಿಗಳು ಅಪ್ರಾಮಾಣಿಕರಾಗಿರುವಾಗ, ವ್ಯಾಪಾರವನ್ನು ನಡೆಸಲಿಕ್ಕಾಗುವ ಖರ್ಚುಗಳು ಹೆಚ್ಚಾಗುತ್ತವೆ ಮತ್ತು ಹೀಗೆ ಉತ್ಪನ್ನಗಳು ದುಬಾರಿಯಾಗುತ್ತವೆ. ತೆರಿಗೆದಾರರು ತಮ್ಮ ತೆರಿಗೆಯ ಬಗ್ಗೆ ಕೊಡುವ ಸುಳ್ಳು ಹೇಳಿಕೆಗಳಿಂದಾಗಿ, ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಲಿಕ್ಕಾಗಿ ಬೇಕಾಗಿರುವ ಹಣ ಸರಕಾರಗಳಿಗೆ ಸಿಗುವುದಿಲ್ಲ. ಸಂಶೋಧಕರು ತಪ್ಪು ಮಾಹಿತಿಯನ್ನು ಕೊಡುವಾಗ, ಅವರು ತಮಗಿರುವ ಉತ್ತಮ ಜೀವನೋದ್ಯೋಗವನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ ಮತ್ತು ಪ್ರತಿಷ್ಠಿತ ಸಂಸ್ಥೆಗಳ ಹೆಸರನ್ನು ಕೆಡಿಸುತ್ತಾರೆ. ದಿಢೀರ್‌ ಹಣಮಾಡುವ ಮೋಸಭರಿತ ಯೋಜನೆಗಳಿಗೆ ಸುಲಭವಾಗಿ ಮಾರುಹೋಗುವ ಬಂಡವಾಳಗಾರರು, ತಮ್ಮ ಇಡೀ ಜೀವಮಾನದ ಉಳಿತಾಯಗಳನ್ನು ಕಳೆದುಕೊಳ್ಳುತ್ತಾರೆ. ಆದುದರಿಂದಲೇ, ಯೆಹೋವ ದೇವರು “ಸುಳ್ಳಿನ ನಾಲಿಗೆ” ಮತ್ತು “ಅಸತ್ಯವಾಡುವ ಸುಳ್ಳುಸಾಕ್ಷಿ”ಯನ್ನು ದ್ವೇಷಿಸುತ್ತಾನೆಂದು ಬೈಬಲ್‌ ಹೇಳುವುದು ಅಚ್ಚರಿಯನ್ನು ಹುಟ್ಟಿಸುವುದಿಲ್ಲ.​—⁠ಜ್ಞಾನೋಕ್ತಿ 6:​16-19.

ಸುಳ್ಳುಹೇಳುವುದು ಹಾನಿಯನ್ನು ಉಂಟುಮಾಡುತ್ತದೆ, ಮತ್ತು ಅದು ವ್ಯಾಪಕವಾಗಿರುವಾಗಲಂತೂ ಅದರಿಂದಾಗಿ ಒಬ್ಬೊಬ್ಬರಿಗೂ ಇಡೀ ಸಮಾಜಕ್ಕೂ ಹಾನಿಯಾಗಬಲ್ಲದು. ಈ ವಾಸ್ತವಾಂಶವನ್ನು ಯಾರೂ ಅಲ್ಲಗಳೆಯಲಿಕ್ಕಿಲ್ಲ. ಆದರೂ, ಕೆಲವರು ತಿಳಿದೂತಿಳಿದು ಸುಳ್ಳನ್ನಾಡುವುದು ಏಕೆ? ಪ್ರತಿಯೊಂದು ಅಸತ್ಯ ಮಾತು ಒಂದು ಸುಳ್ಳಾಗಿದೆಯೊ? ಈ ಪ್ರಶ್ನೆಗಳಿಗೆ ಹಾಗೂ ಇನ್ನಿತರ ಪ್ರಶ್ನೆಗಳಿಗೆ ನಾವು ಮುಂದಿನ ಲೇಖನದಲ್ಲಿ ಉತ್ತರಗಳನ್ನು ಪರಿಗಣಿಸುವೆವು. (w07 2/1)

[ಪುಟ 3ರಲ್ಲಿರುವ ಚಿತ್ರ]

ಸುಳ್ಳುಹೇಳುವುದು ವಿವಾಹಸಂಗಾತಿಗಳ ಮಧ್ಯೆ ಅಪನಂಬಿಕೆಯನ್ನು ಹುಟ್ಟಿಸುತ್ತದೆ