ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೊ ಅದನ್ನೇ ಕಲಿಸಿರಿ

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೊ ಅದನ್ನೇ ಕಲಿಸಿರಿ

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೊ ಅದನ್ನೇ ಕಲಿಸಿರಿ

“ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ . . . ಅವರಿಗೆ ಬೋಧಿಸಿರಿ.” ​—⁠ಮತ್ತಾಯ 28:​19, 20, NIBV.

ಯೆಹೋವನ ವಾಕ್ಯವಾದ ಪವಿತ್ರ ಬೈಬಲ್‌ ಜಗತ್ತಿನಲ್ಲೇ ಅತಿ ಹಳೆಯ ಗ್ರಂಥ. ಅದು ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಗ್ರಂಥವೂ ಆಗಿದೆ. ಕಡಿಮೆಪಕ್ಷ ಬೈಬಲಿನ ಭಾಗಗಳು 2,300ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ. ಭೂಮಿಯಲ್ಲಿರುವ 90ಕ್ಕೂ ಹೆಚ್ಚು ಪ್ರತಿಶತ ಜನರ ಬಳಿ ಅವರ ಸ್ವಂತ ಭಾಷೆಯಲ್ಲಿ ಬೈಬಲ್‌ ಇದೆ.

2 ಬೈಬಲಿನ ಭಾಗವನ್ನು ಲಕ್ಷಾಂತರ ಜನರು ಪ್ರತಿದಿನ ಓದುತ್ತಾರೆ. ಕೆಲವರು ಇಡೀ ಬೈಬಲನ್ನು ಅನೇಕಾವರ್ತಿ ಓದಿರುತ್ತಾರೆ. ಸಾವಿರಾರು ಧಾರ್ಮಿಕ ಗುಂಪುಗಳು ತಮ್ಮ ಬೋಧನೆಗಳು ಬೈಬಲಿನ ಮೇಲೆ ಆಧಾರಿತವಾಗಿವೆಯೆಂದು ವಾದಿಸುತ್ತವೆ. ಆದರೆ, ಬೈಬಲ್‌ ಏನನ್ನು ಬೋಧಿಸುತ್ತದೊ ಅದನ್ನು ಅವರೆಲ್ಲರು ಒಪ್ಪುವುದಿಲ್ಲ. ಇದರಿಂದಾಗಿ, ಒಂದೇ ಧರ್ಮದವರ ಮಧ್ಯೆ ಸಹ ಅಸಮ್ಮತಿಯಿದೆ. ಕೆಲವರಿಗೆ ಬೈಬಲ್‌ನ ಕುರಿತು, ಅದರ ಮೂಲ ಮತ್ತು ಮೌಲ್ಯದ ಕುರಿತು ಸಂದೇಹಗಳಿವೆ. ಅನೇಕರು ಶಪಥಮಾಡುವುದಕ್ಕಾಗಿ ಅಥವಾ ‘ಸತ್ಯವನ್ನೇ ಹೇಳುತ್ತೇನೆ’ ಎಂದು ಕೋರ್ಟಿನಲ್ಲಿ ಪ್ರತಿಜ್ಞೆ ಮಾಡುವುದಕ್ಕಾಗಿ ಮಾತ್ರವೇ ಬೈಬಲನ್ನು ಪವಿತ್ರ ಪುಸ್ತಕವೆಂದು ವೀಕ್ಷಿಸುತ್ತಾರೆ.

3 ವಾಸ್ತವದಲ್ಲಿ, ಮಾನವಕುಲಕ್ಕಾಗಿ ದೇವರ ಪ್ರಬಲವಾದ ವಾಕ್ಯ ಅಥವಾ ಸಂದೇಶವು ಬೈಬಲಿನಲ್ಲಿ ಅಡಕವಾಗಿದೆ. (ಇಬ್ರಿಯ 4:12) ಆದಕಾರಣ, ಬೈಬಲ್‌ ಏನನ್ನು ಬೋಧಿಸುತ್ತದೆಂದು ಜನರು ತಿಳಿದುಕೊಳ್ಳಬೇಕೆಂಬುದೇ ಯೆಹೋವನ ಸಾಕ್ಷಿಗಳಾದ ನಮ್ಮ ಬಯಕೆ. “ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ . . . ಅವರಿಗೆ ಬೋಧಿಸಿರಿ” ಎಂದು ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕೊಟ್ಟ ಆಜ್ಞೆಯನ್ನು ಪಾಲಿಸಲು ನಾವು ಹರ್ಷಿಸುತ್ತೇವೆ. (ಮತ್ತಾಯ 28:​19, 20) ಹೀಗೆ, ನಾವು ಸಾರ್ವಜನಿಕ ಶುಶ್ರೂಷೆಯನ್ನು ಮಾಡುವಾಗ ಪ್ರಾಮಾಣಿಕ ಹೃದಯದ ಜನರನ್ನು ಭೇಟಿಯಾಗುತ್ತೇವೆ. ಅವರು ಲೋಕದ ಎಲ್ಲೆಡೆಯೂ ಹಬ್ಬಿರುವ ಧಾರ್ಮಿಕ ಗಲಿಬಿಲಿಯಿಂದ ಕಂಗೆಟ್ಟಿದ್ದಾರೆ. ಅವರು ನಮ್ಮ ಸೃಷ್ಟಿಕರ್ತನ ಬಗ್ಗೆ ಸತ್ಯವನ್ನು ತಿಳಿಯಲು ಮತ್ತು ಬದುಕಿನ ಅರ್ಥದ ಕುರಿತು ಬೈಬಲ್‌ ಏನು ಹೇಳುತ್ತದೆಂದು ಕಲಿಯಲು ಬಯಸುತ್ತಾರೆ. ಆದುದರಿಂದ, ಅನೇಕ ಜನರನ್ನು ಚಿಂತೆಗೊಳಪಡಿಸಿರುವ ಮೂರು ಪ್ರಶ್ನೆಗಳನ್ನು ನಾವು ಪರಿಗಣಿಸೋಣ. ಪ್ರತಿಯೊಂದು ಪ್ರಶ್ನೆಯನ್ನು ಪರಿಗಣಿಸುವಾಗ ಧಾರ್ಮಿಕ ಮುಖಂಡರು ತಪ್ಪಾಗಿ ಏನು ಹೇಳುತ್ತಾರೆಂಬುದನ್ನು ಮೊದಲು ಗಮನಿಸೋಣ. ಬಳಿಕ ಅದರ ಕುರಿತು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂಬುದನ್ನು ಪುನರ್ವಿಮರ್ಶಿಸೋಣ. ಆ ಪ್ರಶ್ನೆಗಳು ಯಾವುವೆಂದರೆ: (1) ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯೇ? (2) ನಮ್ಮ ಬದುಕಿಗಿರುವ ಉದ್ದೇಶವೇನು? (3) ನಾವು ಸತ್ತಾಗ ಏನು ಸಂಭವಿಸುತ್ತದೆ?

ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯೇ?

4 ಮೊದಲಿಗೆ ನಾವು ಈ ಪ್ರಶ್ನೆಯನ್ನು ನೋಡೋಣ; ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯೇ? ‘ಇಲ್ಲ’ ಎಂದು ಅನೇಕರು ಯೋಚಿಸುವುದು ವಿಷಾದಕರ. ಅವರು ಹಾಗೇಕೆ ಯೋಚಿಸುತ್ತಾರೆ? ಒಂದು ಕಾರಣವೇನೆಂದರೆ ನಾವು ಜೀವಿಸುತ್ತಿರುವ ಈ ಲೋಕದಲ್ಲಿ ಎಲ್ಲಿ ನೋಡಿದರೂ ದ್ವೇಷ, ಯುದ್ಧ, ಕಷ್ಟಸಂಕಟಗಳೇ ತುಂಬಿವೆ. ಆದುದರಿಂದ, ‘ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕಾಳಜಿಯಿರುವಲ್ಲಿ ಇಂತಹ ದುರಂತಗಳನ್ನು ಖಂಡಿತವಾಗಿಯೂ ತಡೆಯುತ್ತಿದ್ದನಲ್ಲವೇ’ ಎಂದು ಅವರು ತರ್ಕಿಸುತ್ತಾರೆ.

5 ದೇವರಿಗೆ ನಮ್ಮ ಬಗ್ಗೆ ಕಾಳಜಿನೇ ಇಲ್ಲ ಎಂದು ಜನರು ಯೋಚಿಸಲು ಇನ್ನೊಂದು ಕಾರಣವೇನೆಂದರೆ, ಜನರು ಹಾಗೆ ಎಣಿಸುವಂತೆ ಧಾರ್ಮಿಕ ಮುಖಂಡರು ಮಾಡಿಬಿಟ್ಟಿದ್ದಾರೆ. ದುರಂತದ ಆಘಾತ ಬಂದು ಬಡಿಯುವಾಗ ಧರ್ಮಗುರುಗಳು ಹೆಚ್ಚಾಗಿ ಏನನ್ನುತ್ತಾರೆ? ಒಬ್ಬ ಸ್ತ್ರೀಯ ಇಬ್ಬರು ಚಿಕ್ಕ ಮಕ್ಕಳು ವಾಹನ ಅಪಘಾತದಲ್ಲಿ ಮಡಿದಾಗ ಆಕೆಯ ಪಾದ್ರಿ ಹೇಳಿದ್ದು: “ಇದೆಲ್ಲ ದೈವೀಚ್ಛೆ. ದೇವರಿಗೆ ಇನ್ನಿಬ್ಬರು ದೇವದೂತರು ಬೇಕಾಗಿದ್ದರು.” ಪಾದ್ರಿಗಳು ಹೀಗನ್ನುವಾಗ, ಸಂಭವಿಸುವ ದುರಂತಗಳಿಗೆ ದೇವರೇ ಕಾರಣನೆಂದು ಆತನ ಮೇಲೆ ದೂರು ಹೊರಿಸುತ್ತಾರೆ. ಆದರೆ ಶಿಷ್ಯ ಯಾಕೋಬನು ಬರೆದುದು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ​—⁠ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ಆದುದರಿಂದ ಯಾವುದೇ ಕೆಟ್ಟ ವಿಷಯಕ್ಕೆ ಯೆಹೋವ ದೇವರು ಎಂದಿಗೂ ಕಾರಣನಲ್ಲ. ಹೌದು, “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ . . . ದೂರವಾಗಿರಲಿ!”​—⁠ಯೋಬ 34:10.

6 ಹಾಗಾದರೆ, ಇಷ್ಟೊಂದು ದುಷ್ಟತನ ಮತ್ತು ಕಷ್ಟಸಂಕಟ ಏಕಿದೆ? ಇದಕ್ಕಿರುವ ಒಂದು ಕಾರಣವು ದೇವರ ಆಳ್ವಿಕೆಯನ್ನು ಜನರು ತಿರಸ್ಕರಿಸಿ, ಆತನ ನೀತಿಯ ನಿಯಮಗಳಿಗೂ ಮೂಲತತ್ತ್ವಗಳಿಗೂ ಅಧೀನರಾಗಲು ಬಯಸದಿರುವುದೇ. ಮಾನವರು ತಮಗರಿವಿಲ್ಲದೆಯೇ ದೇವರ ವಿರೋಧಿಯಾದ ಸೈತಾನನಿಗೆ ಅಧೀನರಾಗಿದ್ದಾರೆ. ಏಕೆಂದರೆ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಈ ನಿಜತ್ವದ ಅರಿವಿನಿಂದ ಇಷ್ಟೊಂದು ಕೆಟ್ಟ ಪರಿಸ್ಥಿತಿಗಳು ಏಕಿವೆ ಎಂಬುದನ್ನು ತಿಳಿದುಕೊಳ್ಳುವುದು ಹೆಚ್ಚು ಸುಲಭ. ಸೈತಾನನು ಕೆಡುಕ, ದ್ವೇಷಗಾರ, ವಂಚಕ, ಕ್ರೂರಿ ಆಗಿದ್ದಾನೆ. ಹೀಗಿರುವಾಗ ಈ ಲೋಕವು ಸಹ ಅದನ್ನು ಆಳುವಾತನ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸುವುದನ್ನು ನಾವು ನಿರೀಕ್ಷಿಸಬೇಕು. ಆದುದರಿಂದ ಇಷ್ಟೊಂದು ದುಷ್ಟತ್ವ ತುಂಬಿತುಳುಕಿರುವುದು ಆಶ್ಚರ್ಯವೇನಲ್ಲ!

7 ನಾವು ಅನುಭವಿಸುವ ಕಷ್ಟಸಂಕಟಗಳಿಗೆ ಇನ್ನೊಂದು ಕಾರಣವು ಮಾನವ ಅಪರಿಪೂರ್ಣತೆಯೇ. ಪಾಪಪೂರ್ಣ ಮಾನವರು ಅಧಿಕಾರ ದಾಹದಿಂದ ಇತರರ ಮೇಲೆ ದಬ್ಬಾಳಿಕೆ ನಡೆಸಲು ತುದಿಗಾಲಲ್ಲಿ ನಿಲ್ಲುತ್ತಾರೆ. ಇದರಿಂದ ಯುದ್ಧ, ದಬ್ಬಾಳಿಕೆ ಮತ್ತು ಕಷ್ಟಸಂಕಟಗಳು ಫಲಿಸಿವೆ. ಸೂಕ್ತವಾಗಿಯೇ ಪ್ರಸಂಗಿ 8:9 ಹೇಳುವುದು: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರ ನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ ಕಷ್ಟಸಂಕಟಕ್ಕಿರುವ ಇನ್ನೊಂದು ಕಾರಣವು “ಕಾಲವೂ ಪ್ರಾಪ್ತಿಯು [“ಮುಂಗಾಣದ ಘಟನೆ,” NW]” ಆಗಿದೆ. (ಪ್ರಸಂಗಿ 9:11) ಅನೇಕ ಬಾರಿ ಅಪಾಯಕರವಾದ ಸ್ಥಳದಲ್ಲಿ ಜನರು ಅನಿರೀಕ್ಷಿತವಾಗಿ ಸಿಕ್ಕಿಕೊಳ್ಳುವ ಕಾರಣ ಕಷ್ಟಸಂಕಟಗಳಿಗೆ ಈಡಾಗುತ್ತಾರೆ.

8 ಕಷ್ಟಸಂಕಟಗಳಿಗೆ ಯೆಹೋವ ದೇವರು ಕಾರಣನಲ್ಲವೆಂದು ತಿಳಿಯುವುದು ಸಾಂತ್ವನದಾಯಕ. ಹಾಗಾದರೆ, ನಮ್ಮ ಜೀವನದ ಆಗುಹೋಗುಗಳ ಕುರಿತು ದೇವರಿಗೆ ನಿಜವಾಗಿಯೂ ಕಾಳಜಿ ಇದೆಯೇ? ಹೌದು ಎಂಬ ಉತ್ತರವು ಮನಸ್ಸಿಗೆ ಎಷ್ಟೋ ತೃಪ್ತಿಯನ್ನು ಕೊಡುತ್ತದೆ! ಯೆಹೋವನಿಗೆ ನಮ್ಮ ಬಗ್ಗೆ ಖಂಡಿತ ಕಾಳಜಿ ಇರುವುದರಿಂದಲೇ ಮನುಷ್ಯರು ಕೆಟ್ಟ ಮಾರ್ಗವನ್ನು ಬೆನ್ನಟ್ಟಲು ಆತನು ಏಕೆ ಅನುಮತಿಸಿದ್ದಾನೆಂದು ತನ್ನ ಪ್ರೇರಿತ ವಾಕ್ಯದಲ್ಲಿ ತಿಳಿಸಿದ್ದಾನೆ. ಇದಕ್ಕೆ ದೇವರಿಗಿರುವ ಕಾರಣಗಳು ಎರಡು ವಿವಾದಾಂಶಗಳನ್ನು ಒಳಗೊಂಡಿದೆ. ಅವು ಆತನ ಪರಮಾಧಿಕಾರ ಮತ್ತು ಮಾನವರ ಸಮಗ್ರತೆ. ಆತನು ಸರ್ವಶಕ್ತನಾದ ಸೃಷ್ಟಿಕರ್ತನಾಗಿರುವುದರಿಂದ ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆಂದು ಹೇಳುವ ಹಂಗು ಆತನಿಗಿಲ್ಲ. ಆದರೂ, ನಮ್ಮ ಬಗ್ಗೆ ಕಾಳಜಿ ಇರುವುದರಿಂದ ಅದನ್ನು ತಿಳಿಯಪಡಿಸಿದ್ದಾನೆ.

9 ದೇವರಿಗೆ ನಮ್ಮ ವಿಷಯದಲ್ಲಿ ಕಾಳಜಿಯಿದೆ ಎಂಬುದಕ್ಕಿರುವ ಇನ್ನೂ ಹೆಚ್ಚಿನ ಸಾಕ್ಷ್ಯಗಳನ್ನು ಪರಿಗಣಿಸಿರಿ. ನೋಹನ ದಿನಗಳಲ್ಲಿ ಈ ಭೂಮಿಯು ಕೆಟ್ಟತನದಿಂದ ತುಂಬಿದಾಗ ದೇವರು “ಹೃದಯದಲ್ಲಿ ನೊಂದುಕೊಂಡನು.” (ಆದಿಕಾಂಡ 6:​5, 6) ಇಂದಿನ ಪರಿಸ್ಥಿತಿಗಳನ್ನು ಸಹ ನೋಡಿ ದೇವರು ನೊಂದುಕೊಳ್ಳುತ್ತಾನೋ? ಖಂಡಿತವಾಗಿ ಹೌದು, ಏಕೆಂದರೆ ಆತನು ಮಾರ್ಪಡುವಾತನಲ್ಲ. (ಮಲಾಕಿಯ 3:⁠6) ಆತನು ಅನ್ಯಾಯವನ್ನು ದ್ವೇಷಿಸುತ್ತಾನೆ. ಜನರು ಕಷ್ಟಪಡುವುದನ್ನು ನೋಡಲು ಇಷ್ಟಪಡುವುದಿಲ್ಲ. ಮಾನವಾಳ್ವಿಕೆ ಮತ್ತು ಪಿಶಾಚನ ಪ್ರಭಾವದಿಂದ ಉದ್ಭವಿಸಿರುವ ಸಕಲ ಹಾನಿಯನ್ನು ದೇವರು ಬೇಗನೆ ತೊಡೆದುಹಾಕುವನೆಂದು ಬೈಬಲ್‌ ಬೋಧಿಸುತ್ತದೆ. ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯೆಂಬುದಕ್ಕೆ ಇದು ಮನಗಾಣಿಸುವ ರುಜುವಾತಲ್ಲವೆ?

10 ನಮ್ಮ ಮೇಲೆ ಬಂದೆರಗುವ ದುರಂತಗಳು ದೈವೀಚ್ಛೆ ಎಂದು ಧಾರ್ಮಿಕ ಮುಖಂಡರು ಹೇಳುವಾಗ ಅವುಗಳಿಗೆ ದೇವರೇ ಕಾರಣನು ಎಂದು ತಪ್ಪಾಗಿ ಬೋಧಿಸುತ್ತಾರೆ. ಆದರೆ ಇದಕ್ಕೆ ಪ್ರತಿಕೂಲವಾಗಿ, ಮಾನವ ಸಂಕಷ್ಟಗಳಿಗೆ ಅಂತ್ಯ ತರಲು ಯೆಹೋವನು ಕಾತರದಿಂದ ಇದ್ದಾನೆ. “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತದೆ 1 ಪೇತ್ರ 5:⁠7. ಇದನ್ನೇ ಬೈಬಲ್‌ ನಿಜವಾಗಿಯೂ ಬೋಧಿಸುತ್ತದೆ!

ನಮ್ಮ ಬದುಕಿಗಿರುವ ಉದ್ದೇಶವೇನು?

11 ಅನೇಕರು ಕುತೂಹಲಪಡುವ ಎರಡನೆಯ ಪ್ರಶ್ನೆಯನ್ನು ನಾವೀಗ ಪರಿಗಣಿಸೋಣ; ನಮ್ಮ ಬದುಕಿಗಿರುವ ಉದ್ದೇಶವೇನು? ಈ ಪ್ರಶ್ನೆಗೆ ಅನೇಕವೇಳೆ ಲೋಕದ ಧರ್ಮಗಳು, ಭೂಮಿ ಮೇಲಿನ ಮನುಷ್ಯನ ಜೀವನ ತಾತ್ಕಾಲಿಕವಷ್ಟೇ ಎಂದು ಉತ್ತರಿಸುತ್ತಾರೆ. ಮತ್ತೆಲ್ಲಿಯೋ ಜೀವಿಸಲಿಕ್ಕಾಗಿ ಮಾಡುವ ನಮ್ಮ ಬಾಳಪಯಣದಲ್ಲಿ ಭೂಗೋಳವು ಬರಿಯ ದಾಟುಕಲ್ಲು ಅಥವಾ ತಂಗುದಾಣವೆಂಬುದು ಅವರ ವೀಕ್ಷಣೆ. ದೇವರು ಈ ಭೂಗ್ರಹವನ್ನು ಎಂದಾದರೂ ಒಂದು ದಿನ ನಾಶಮಾಡುವನೆಂದು ಕೆಲವು ಪಾದ್ರಿಗಳು ತಪ್ಪಾಗಿ ಬೋಧಿಸುತ್ತಾರೆ. ಇಂತಹ ಬೋಧನೆಗಳ ಫಲವಾಗಿ ಅನೇಕರು, ‘ನಾವು ಹೇಗೋ ಒಂದು ದಿನ ಸಾಯುತ್ತೇವಲ್ಲಾ, ಇಂದೇ ಜೀವನವನ್ನು ಪೂರ್ತಿಯಾಗಿ ಮಜಾಮಾಡೋಣ’ ಎಂದು ಅಂದುಕೊಳ್ಳುತ್ತಾರೆ. ಆದರೆ, ನಮ್ಮ ಬದುಕಿಗಿರುವ ಉದ್ದೇಶದ ಬಗ್ಗೆ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

12 ಈ ಭೂಮಿ ಮತ್ತು ಮಾನವಕುಲದ ಬಗ್ಗೆ ದೇವರಿಗಿರುವ ಉದ್ದೇಶವು ಆಶ್ಚರ್ಯಕರವಾಗಿದೆ. ದೇವರು “[ಭೂಮಿಯನ್ನು] ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಅಲ್ಲದೆ ಯೆಹೋವನು, ‘ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದಾನೆ.’ (ಕೀರ್ತನೆ 104:25) ಭೂಮಿ ಮತ್ತು ಮಾನವರ ಕಡೆಗೆ ದೇವರಿಗಿರುವ ಈ ಉದ್ದೇಶಗಳನ್ನು ಕಲಿಯುವುದು ನಮ್ಮ ಬದುಕಿಗಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.

13ಆದಿಕಾಂಡ 1 ಮತ್ತು 2ನೆಯ ಅಧ್ಯಾಯಗಳು, ಭೂಮಿಯನ್ನು ಮಾನವ ನಿವಾಸಕ್ಕಾಗಿ ಯೆಹೋವನು ಜಾಗರೂಕತೆಯಿಂದ ಅಣಿಗೊಳಿಸಿದನೆಂದು ತೋರಿಸುತ್ತವೆ. ನಮ್ಮ ಭೂಗೋಳವನ್ನು ಸೃಷ್ಟಿಸಿದ ಸಮಾಯಾವಧಿಯ ಅಂತ್ಯದಲ್ಲಿ ಎಲ್ಲವೂ ‘ಬಹು ಒಳ್ಳೇದಾಗಿದ್ದವು.’ (ಆದಿಕಾಂಡ 1:31) ದೇವರು ಪ್ರಥಮ ಸ್ತ್ರೀಪುರುಷರಾದ ಆದಾಮಹವ್ವರನ್ನು ಸೊಗಸಾದ ಏದೆನ್‌ ತೋಟದಲ್ಲಿಟ್ಟು ಅವರಿಗೆ ಯಥೇಚ್ಛವಾಗಿ ಆಹಾರವನ್ನು ಒದಗಿಸಿದನು. ಮಾತ್ರವಲ್ಲ, ಆ ಮಾನವ ದಂಪತಿಗೆ “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಹೇಳಿದನು. ಹೀಗೆ, ಅವರ ಬೀಡಾಗಿದ್ದ ಆ ಉದ್ಯಾನವನದ ಮೇರೆಯನ್ನು ಭೂಮಿಯೆಲ್ಲಡೆ ವಿಸ್ತರಿಸಲು ಮತ್ತು ಪ್ರಾಣಿಗಳ ಮೇಲೆ ಪ್ರೀತಿಯ ಆಧಿಪತ್ಯವನ್ನು ವಹಿಸಿಕೊಳ್ಳಲು ಅವರಿಗೆ ಪರಿಪೂರ್ಣ ಮಕ್ಕಳು ಹುಟ್ಟಬೇಕಾಗಿತ್ತು.​—⁠ಆದಿಕಾಂಡ 1:​26-28.

14 ಒಂದು ಪರಿಪೂರ್ಣ ಮಾನವ ಕುಟುಂಬವು ಭೂಮಿಯ ಮೇಲೆ ಶಾಶ್ವತವಾಗಿ ವಾಸಿಸಬೇಕೆಂಬುದೇ ಯೆಹೋವನ ಉದ್ದೇಶ. ಆತನ ವಾಕ್ಯ ಹೇಳುವುದು: “ನೀತಿವಂತರೋ ದೇಶವನ್ನು [ಭೂಮಿಯನ್ನು] ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ಹೌದು, ಭೂಮಿಯ ಮೇಲೆ ಪರದೈಸಿನಲ್ಲಿ ಮಾನವರು ನಿತ್ಯಜೀವವನ್ನು ಆನಂದಿಸಲಿಕ್ಕಾಗಿಯೇ ಅವರನ್ನು ಸೃಷ್ಟಿಸಲಾಯಿತು. ಇದೇ ದೇವರ ಉದ್ದೇಶ. ಇದನ್ನೇ ಬೈಬಲ್‌ ನಿಜವಾಗಿಯೂ ಬೋಧಿಸುತ್ತದೆ!

ನಾವು ಸತ್ತಾಗ ಏನು ಸಂಭವಿಸುತ್ತದೆ?

15 ಅನೇಕರನ್ನು ಚಿಂತೆಗೀಡುಮಾಡುವ ಮೂರನೆಯ ಪ್ರಶ್ನೆಯನ್ನು ನಾವೀಗ ಚರ್ಚಿಸೋಣ: ನಾವು ಸತ್ತಾಗ ಏನು ಸಂಭವಿಸುತ್ತದೆ? ಒಬ್ಬ ವ್ಯಕ್ತಿಯ ದೇಹವು ಸತ್ತಾಗ ಆ ವ್ಯಕ್ತಿಯ ಒಳಗಿರುವ ಯಾವುದೋ ಬದುಕುಳಿದು ಜೀವಿಸುತ್ತ ಹೋಗುತ್ತದೆ ಎಂದು ಲೋಕದಲ್ಲಿರುವ ಹೆಚ್ಚಿನ ಧರ್ಮಗಳು ಬೋಧಿಸುತ್ತವೆ. ಕೆಲವು ಧಾರ್ಮಿಕ ಗುಂಪುಗಳು ದೇವರು ದುಷ್ಟರನ್ನು ಬೆಂಕಿಯ ನರಕವೊಂದರಲ್ಲಿ ನಿತ್ಯ ಯಾತನೆಗೆ ಗುರಿಮಾಡುತ್ತಾನೆಂದು ನಂಬುತ್ತವೆ. ಆದರೆ ಇದು ಸತ್ಯವೋ? ಮರಣದ ಕುರಿತು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

16 ದೇವರ ವಾಕ್ಯ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲ [“ಸಂಬಳ,” NW] ವೇನೂ ಇಲ್ಲ.” ‘ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲವಾದುದರಿಂದ’ ಅವರು ಕೇಳಿಸಿಕೊಳ್ಳಲಾರರು, ನೋಡಲಾರರು, ಮಾತಾಡಲಾರರು, ಸ್ಪರ್ಶಿಸಲಾರರು ಇಲ್ಲವೆ ಯೋಚಿಸಲಾರರು. ಅವರು ಇನ್ನು ಮುಂದೆ ಸಂಬಳವನ್ನು ಪಡೆದುಕೊಳ್ಳಲಾರರು. ಯಾಕೆ ಪಡೆದುಕೊಳ್ಳಲಾರರು? ಅವರಿಗೆ ಕೆಲಸ ಮಾಡುವ ಸಾಮರ್ಥ್ಯವೇ ಇಲ್ಲವಲ್ಲ! ಅಷ್ಟಲ್ಲದೆ, ‘ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋಗುತ್ತವೆ.’ ಆದಕಾರಣ ಅವರು ತಮ್ಮ ಯಾವುದೇ ಭಾವಾವೇಶವನ್ನು ವ್ಯಕ್ತಪಡಿಸಲಾರರು.​—⁠ಪ್ರಸಂಗಿ 9:​5, 6, 10.

17 ಬೈಬಲ್‌ ಈ ಸಂಗತಿಗಳ ಕುರಿತು ಏನು ಹೇಳುತ್ತದೊ ಅದು ಸರಳವೂ ಸ್ಪಷ್ಟವೂ ಆಗಿದೆ. ಅದೇನಂದರೆ, ಮೃತರು ಮತ್ತೆಲ್ಲಿಯೋ ಜೀವಿಸುತ್ತ ಹೋಗುವುದಿಲ್ಲ. ಪುನರ್ಜನ್ಮವನ್ನು ನಂಬುವವರು ಹೇಳುವಂತೆ, ನಾವು ಸಾಯುವಾಗ ನಮ್ಮ ಒಳಗಿರುವ ಯಾವುದೋ ನಮ್ಮ ಶರೀರವನ್ನು ಬಿಟ್ಟುಹೋಗಿ, ಇನ್ನೊಂದು ದೇಹವನ್ನು ತಾಳುತ್ತಾ ಮತ್ತೆ ಹುಟ್ಟಿಬರುವುದಿಲ್ಲ. ನಾವು ಇದನ್ನು ಹೀಗೆ ಚಿತ್ರೀಕರಿಸಬಹುದು: ನಮ್ಮಲ್ಲಿರುವ ಜೀವವು ಒಂದು ಮೇಣದ ಬತ್ತಿಯ ಜ್ವಾಲೆಯಂತಿದೆ. ಆ ಜ್ವಾಲೆ ಆರಿಹೋಗುವಾಗ ಅದು ಎಲ್ಲಿಯೂ ಹೋಗುವುದಿಲ್ಲ. ಅದು ಇಲ್ಲದೆ ಹೋಗುತ್ತದಷ್ಟೇ.

18 ಸರಳವಾದರೂ ಪ್ರಬಲವಾಗಿರುವ ಈ ಒಂದೇ ಒಂದು ಸತ್ಯಾಂಶ ಉಂಟುಮಾಡುವ ಫಲಿತಾಂಶದ ಕುರಿತು ಯೋಚಿಸಿರಿ. ಸತ್ತವನಿಗೆ ಯಾವ ತಿಳುವಳಿಕೆಯು ಇಲ್ಲ ಎಂಬುದನ್ನು ಬೈಬಲ್‌ ವಿದ್ಯಾರ್ಥಿಯೊಬ್ಬನು ಕಲಿಯುವಾಗ ಅವನು ಸುಲಭವಾಗಿ ಈ ತೀರ್ಮಾನಕ್ಕೆ ಬರುತ್ತಾನೆ. ಅದೇನಂದರೆ, ತನ್ನ ಮೃತರಾದ ಪೂರ್ವಿಕರು ಜೀವಿಸುತ್ತಿದ್ದಾಗ ಎಷ್ಟೇ ಸೇಡನ್ನು ಇಟ್ಟುಕೊಂಡಿರಲಿ, ಈಗ ಅವರು ತನಗೆ ಯಾವ ಕಿರುಕುಳವನ್ನೂ ಕೊಡಲಾರರು ಎಂಬುದೇ. ಮಾತ್ರವಲ್ಲ, ಮೃತರಾದ ತನ್ನ ಪ್ರಿಯರು ಸಹ ಇನ್ನು ಮುಂದೆ ಕೇಳಿಸಿಕೊಳ್ಳಲು, ನೋಡಲು, ಮಾತನಾಡಲು, ಸ್ಪರ್ಶಿಸಲು ಇಲ್ಲವೆ ಯೋಚಿಸಲು ಅಸಮರ್ಥರೆಂಬುದನ್ನೂ ಅವನು ಕೂಡಲೆ ಗ್ರಹಿಸಿಕೊಳ್ಳುತ್ತಾನೆ. ಈ ಕಾರಣದಿಂದ, ಮೃತರು ಪರ್ಗೆಟರಿಯಲ್ಲಿ ಅಸಹನೀಯವಾದ ಒಂಟಿಗ ಭಾವವನ್ನಾಗಲಿ ಅಥವಾ ಧಗಧಗನೆ ಉರಿಯುವ ಬೆಂಕಿಯಲ್ಲಿ ಯಾತನೆಯನ್ನಾಗಲಿ ಅನುಭವಿಸುವುದು ಅಸಾಧ್ಯ. ಆದರೆ, ದೇವರ ಸ್ಮರಣೆಯಲ್ಲಿರುವ ಮೃತರು ಪುನರುತ್ಥಾನ ಹೊಂದುವರೆಂದು ಬೈಬಲ್‌ ಬೋಧಿಸುತ್ತದೆ. ಎಂತಹ ಅದ್ಭುತಕರವಾದ ನಿರೀಕ್ಷೆ!​—⁠ಯೋಹಾನ 5:​28, 29.

ನಮ್ಮ ಉಪಯೋಗಕ್ಕಾಗಿ ಒಂದು ಹೊಸ ಪುಸ್ತಕ

19 ಅನೇಕರು ತಿಳಿಯಬಯಸುವ ಕೇವಲ ಮೂರು ಪ್ರಶ್ನೆಗಳನ್ನು ನಾವೀಗ ಪರಿಗಣಿಸಿದ್ದೇವೆ. ಪ್ರತಿಯೊಂದು ಪ್ರಶ್ನೆಯ ವಿಷಯದಲ್ಲಿ ಬೈಬಲ್‌ ಏನನ್ನು ಬೋಧಿಸುತ್ತದೊ ಅದು ಸ್ಪಷ್ಟವೂ ಮುಚ್ಚುಮರೆಯಿಲ್ಲದ್ದೂ ಆಗಿದೆ. ಬೈಬಲ್‌ ಏನನ್ನು ಬೋಧಿಸುತ್ತದೆಂದು ತಿಳಿಯಬಯಸುವವರಿಗೆ ಇಂತಹ ಸತ್ಯಗಳನ್ನು ತಿಳಿಸುವುದು ಎಷ್ಟೊಂದು ಹರ್ಷಕರ! ಆದರೆ, ಇನ್ನೂ ಅನೇಕ ಪ್ರಮುಖ ಪ್ರಶ್ನೆಗಳಿಗೆ ಪ್ರಾಮಾಣಿಕ ಹೃದಯಿಗಳು ತೃಪ್ತಿಕರವಾದ ಉತ್ತರಗಳನ್ನು ತಿಳಿಯಬಯಸುತ್ತಾರೆ. ಇಂತಹ ಪ್ರಶ್ನೆಗಳಿಗೆ ಅವರು ಉತ್ತರವನ್ನು ಕಂಡುಕೊಳ್ಳುವಂತೆ ಸಹಾಯಮಾಡುವ ಜವಾಬ್ದಾರಿ ಕ್ರೈಸ್ತರಾಗಿರುವ ನಮಗಿದೆ.

20 ಬೈಬಲ್‌ ಸತ್ಯವನ್ನು ಸ್ಪಷ್ಟವಾಗಿ ಮನಮುಟ್ಟುವಂಥ ರೀತಿಯಲ್ಲಿ ಕಲಿಸುವುದು ಅಷ್ಟೊಂದು ಸುಲಭವಲ್ಲ. ಇದಕ್ಕಾಗಿಯೇ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಪುಸ್ತಕವೊಂದನ್ನು ಸಿದ್ಧಪಡಿಸಿದೆ. ಇದನ್ನು ವಿಶೇಷವಾಗಿ ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ಬಳಸಲಿಕ್ಕಾಗಿ ರಚಿಸಲಾಗಿದೆ. (ಮತ್ತಾಯ 24:​45-47) 224 ಪುಟಗಳಿರುವ ಈ ಪುಸ್ತಕದ ಹೆಸರು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂದಾಗಿದೆ.

21 ಯೆಹೋವನ ಸಾಕ್ಷಿಗಳ 2005ರ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ಅನೇಕ ಗಮನಾರ್ಹ ವೈಶಿಷ್ಟ್ಯಗಳಿವೆ. ಉದಾಹರಣೆಗೆ ಐದು ಪುಟಗಳ ಮುನ್ನುಡಿ ಅದರಲ್ಲಿದೆ. ಇದು ಮನೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಅತಿ ಸಹಾಯಕರ. ಈ ಮುನ್ನುಡಿಯಲ್ಲಿರುವ ಚಿತ್ರಗಳನ್ನೂ ಶಾಸ್ತ್ರವಚನಗಳನ್ನೂ ಚರ್ಚಿಸುವುದು ನಿಮಗೆ ಸುಲಭವಾಗಿರುವುದು. ವಿದ್ಯಾರ್ಥಿಗಳು ಬೈಬಲ್‌ ಅಧ್ಯಾಯ ಮತ್ತು ವಚನಗಳನ್ನು ಹೇಗೆ ಕಂಡುಹಿಡಿಯಬಲ್ಲರೆಂದು ತೋರಿಸಲು ಸಹ ಈ ವಿಭಾಗದಲ್ಲಿರುವ ವಿಷಯವನ್ನು ಉಪಯೋಗಿಸಬಹುದು.

22 ಈ ಪುಸ್ತಕದ ಬರಹಶೈಲಿಯು ಸರಳವೂ ಸ್ಪಷ್ಟವೂ ಆಗಿದೆ. ಸಾಧ್ಯವಿರುವಲ್ಲೆಲ್ಲ ವಿದ್ಯಾರ್ಥಿಯನ್ನು ಒಳಗೂಡಿಸಿಕೊಂಡು ಅವನ ಹೃದಯವನ್ನು ತಲಪಲು ಪ್ರಯತ್ನವನ್ನು ಮಾಡಲಾಗಿದೆ. ಪ್ರತಿಯೊಂದು ಅಧ್ಯಾಯದಲ್ಲಿ ಪೀಠಿಕಾರೂಪದ ಕೆಲವು ಪ್ರಶ್ನೆಗಳಿವೆ. ಅಧ್ಯಾಯದ ಕೊನೆಯಲ್ಲಿ “ಬೈಬಲು ಹೀಗೆ ಬೋಧಿಸುತ್ತದೆ” ಎಂಬ ಚೌಕವಿದೆ. ಈ ಚೌಕದಲ್ಲಿ ಪೀಠಿಕಾರೂಪದ ಪ್ರಶ್ನೆಗಳಿಗೆ ಶಾಸ್ತ್ರೀಯ ಉತ್ತರಗಳಿವೆ. ಈ ಪ್ರಕಾಶನದಲ್ಲಿರುವ ಅತ್ಯುತ್ತಮ ಚಿತ್ರಗಳು, ಶೀರ್ಷಿಕೆಗಳು ಹಾಗೂ ದೃಷ್ಟಾಂತಗಳು ವಿದ್ಯಾರ್ಥಿಯು ಹೊಸ ವಿಚಾರಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದು. ಈ ಪುಸ್ತಕದ ಅಧ್ಯಾಯಭಾಗವು ಅತಿ ಸರಳವಾಗಿರುವುದಾದರೂ, ಅದರಲ್ಲಿರುವ ಪರಿಶಿಷ್ಟ ಭಾಗವು 14 ಪ್ರಮುಖ ವಿಷಯಗಳನ್ನು ಹೆಚ್ಚು ಆಳವಾಗಿ ಚರ್ಚಿಸುತ್ತದೆ. ವಿದ್ಯಾರ್ಥಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ ನೀವಿದನ್ನು ಪರಿಗಣಿಸಬಹುದು.

23ಬೈಬಲ್‌ ಬೋಧಿಸುತ್ತದೆ ಪುಸ್ತಕವು ವಿವಿಧ ವಿದ್ಯಾಹಂತಗಳ ಮತ್ತು ವಿವಿಧ ಧಾರ್ಮಿಕ ಹಿನ್ನೆಲೆಗಳ ಜನರಿಗೆ ಬೋಧಿಸಲು ನಮಗೆ ಸಹಾಯಮಾಡುವಂಥ ರೀತಿಯಲ್ಲಿ ರಚಿಸಲ್ಪಟ್ಟಿದೆ. ಒಬ್ಬ ವಿದ್ಯಾರ್ಥಿಗೆ ಬೈಬಲಿನ ಬಗ್ಗೆ ಯಾವುದೇ ಜ್ಞಾನವಿಲ್ಲದಿರುವಲ್ಲಿ, ಒಂದು ಅಧ್ಯಾಯವನ್ನು ಆವರಿಸಲು ಒಂದು ಅಧ್ಯಯನ ಅವಧಿಗಿಂತ ಹೆಚ್ಚು ಸಮಯ ಬೇಕಾದೀತು. ಅಧ್ಯಾಯವನ್ನು ಬೇಗಬೇಗನೆ ಮುಗಿಸಲು ಪ್ರಯತ್ನಿಸಬೇಡಿ. ವಿದ್ಯಾರ್ಥಿಯ ಹೃದಯವನ್ನು ತಲಪಲು ಪ್ರಯಾಸಪಡಿರಿ. ಪುಸ್ತಕದಲ್ಲಿರುವ ಒಂದು ದೃಷ್ಟಾಂತವನ್ನು ಅರ್ಥಮಾಡಿಕೊಳ್ಳಲು ಅವನಿಗೆ ಕಷ್ಟವಾಗುವುದಾದರೆ ಅದನ್ನು ವಿವರಿಸಿ ಹೇಳಿರಿ ಇಲ್ಲವೆ ಒಂದು ಬದಲಿ ದೃಷ್ಟಾಂತವನ್ನು ಉಪಯೋಗಿಸಿರಿ. ಅಧ್ಯಯನಕ್ಕಾಗಿ ಚೆನ್ನಾಗಿ ತಯಾರಿಸಿರಿ. ಪುಸ್ತಕವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ನಿಮ್ಮ ಕೈಯಲ್ಲಾಗುವುದನ್ನೆಲ್ಲ ಮಾಡಿ. “ಸತ್ಯವಾಕ್ಯವನ್ನು ಸರಿಯಾಗಿ” ಉಪಯೋಗಿಸಲು ಸಾಧ್ಯವಾಗುವಂತೆ ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ.​—⁠2 ತಿಮೊಥೆಯ 2:15.

ನಿಮ್ಮ ಅಮೂಲ್ಯ ಸುಯೋಗಗಳಿಗಾಗಿ ಕೃತಜ್ಞರಾಗಿರಿ

24 ಯೆಹೋವನು ತನ್ನ ಜನರಿಗೆ ಅಮೂಲ್ಯ ಸುಯೋಗಗಳನ್ನು ಕೊಟ್ಟಿದ್ದಾನೆ. ತನ್ನ ಕುರಿತು ಸತ್ಯವನ್ನು ನಾವು ತಿಳಿದುಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡಿದ್ದಾನೆ. ನಾವು ಈ ಸುಯೋಗವನ್ನು ಮಾಮೂಲಿಯದ್ದೆಂದು ಎಂದಿಗೂ ಎಣಿಸದಿರೋಣ. ಏಕೆಂದರೆ, ದೇವರು ತನ್ನ ಉದ್ದೇಶಗಳನ್ನು ಅಹಂಕಾರಿಗಳಿಂದ ಅಡಗಿಸಿ ದೀನರಿಗೆ ತಿಳಿಯಪಡಿಸಿದ್ದಾನೆ. ಈ ಸಂಬಂಧದಲ್ಲಿ ಯೇಸು ಹೇಳಿದ್ದು: “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ.” (ಮತ್ತಾಯ 11:25) ವಿಶ್ವದ ಪರಮಾಧಿಕಾರಿಯಾದ ಯೆಹೋವನನ್ನು ಆರಾಧಿಸುವ ದೀನಜನರಲ್ಲಿ ಒಬ್ಬರಾಗಿರುವುದು ಅನುಪಮವಾದ ಗೌರವವೇ ಸರಿ.

25 ತನ್ನ ವಿಷಯವಾಗಿ ಇತರರಿಗೆ ಬೋಧಿಸುವ ಸುಯೋಗವನ್ನು ಸಹ ದೇವರು ನಮಗೆ ಕೊಟ್ಟಿದ್ದಾನೆ. ಆತನ ವಿಷಯವಾಗಿ ಸುಳ್ಳುಗಳನ್ನು ಕಲಿಸಿರುವವರು ಆತನನ್ನು ತಪ್ಪಾಗಿ ಪ್ರತಿನಿಧೀಕರಿಸಿದ್ದಾರೆಂಬುದನ್ನು ಜ್ಞಾಪಿಸಿಕೊಳ್ಳಿ. ಈ ಕಾರಣದಿಂದ ಅನೇಕರಿಗೆ ಯೆಹೋವನು ನಮ್ಮ ಬಗ್ಗೆ ಚಿಂತಿಸದವನು, ಕಲ್ಲೆದೆಯವನು ಎಂಬ ತೀರ ತಪ್ಪು ಅಭಿಪ್ರಾಯವಿದೆ. ಹಾಗಿರುವಾಗ, ಈ ತಪ್ಪಭಿಪ್ರಾಯವನ್ನು ತಿದ್ದಲು ನಿಮಗೆ ಇಷ್ಟವಿದೆಯೋ? ಅದಕ್ಕಾಗಿ ಹಂಬಲಿಸುತ್ತೀರೋ? ಎಲ್ಲೆಲ್ಲಿಯೂ ಇರುವ ಪ್ರಾಮಾಣಿಕ ಹೃದಯಿಗಳು ದೇವರ ಬಗ್ಗೆ ಸತ್ಯವನ್ನು ತಿಳಿಯಬೇಕೆಂಬ ಅಪೇಕ್ಷೆ ನಿಮಗಿದೆಯೋ? ಹಾಗಿರುವಲ್ಲಿ, ಬೈಬಲ್‌ ಪ್ರಾಮುಖ್ಯ ವಿಷಯಗಳ ಬಗ್ಗೆ ಏನನ್ನುತ್ತದೆ ಎಂಬುದನ್ನು ಹುರುಪಿನಿಂದ ಇತರರಿಗೆ ಸಾರಿರಿ ಮತ್ತು ಕಲಿಸಿರಿ. ಈ ಮೂಲಕ ನಿಮ್ಮ ದೈವಿಕ ವಿಧೇಯತೆಯನ್ನು ತೋರಿಸಿರಿ. ಸತ್ಯಾನ್ವೇಷಕರು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆಂದು ತಿಳಿದುಕೊಳ್ಳುವುದು ಅತಿ ಆವಶ್ಯಕ. (w07 1/15)

ನಿಮ್ಮ ಉತ್ತರಗಳೇನು?

• ದೇವರಿಗೆ ನಮ್ಮ ವಿಷಯದಲ್ಲಿ ಕಾಳಜಿ ಇದೆಯೆಂದು ನಮಗೆ ಹೇಗೆ ಗೊತ್ತು?

• ನಮ್ಮ ಬದುಕಿಗಿರುವ ಉದ್ದೇಶವೇನು?

• ನಾವು ಸತ್ತಾಗ ಏನು ಸಂಭವಿಸುತ್ತದೆ?

• ಬೈಬಲ್‌ ಬೋಧಿಸುತ್ತದೆ ಪುಸ್ತಕದ ಯಾವ ವೈಶಿಷ್ಟ್ಯಗಳನ್ನು ನೀವು ವಿಶೇಷವಾಗಿ ಮಾನ್ಯಮಾಡುತ್ತೀರಿ?

[ಅಧ್ಯಯನ ಪ್ರಶ್ನೆಗಳು]

1. ಬೈಬಲಿನ ಲಭ್ಯತೆಯ ಬಗ್ಗೆ ಏನು ಹೇಳಬಹುದು?

2, 3. (ಎ) ಬೈಬಲ್‌ ಬೋಧನೆಗಳ ಬಗ್ಗೆ ಗಲಿಬಿಲಿ ಏಕಿದೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

4, 5. ದೇವರಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲವೆಂದು ಜನರು ಯೋಚಿಸುವುದೇಕೆ?

6. ಈ ಲೋಕದ ದುಷ್ಟತನ ಮತ್ತು ಕಷ್ಟಸಂಕಟದ ಹಿಂದೆ ಯಾರಿದ್ದಾನೆ?

7. ನಾವು ಪಡುವ ಕಷ್ಟಸಂಕಟಗಳಿಗೆ ಕೆಲವು ಕಾರಣಗಳಾವುವು?

8, 9. ಯೆಹೋವನಿಗೆ ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೆಂದು ನಮಗೆ ಹೇಗೆ ಗೊತ್ತಾಗುತ್ತದೆ?

10. ಮಾನವ ಕಷ್ಟಸಂಕಟಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ?

11. ಈ ಲೋಕದ ಧರ್ಮಗಳು ಭೂಮಿ ಮೇಲಿನ ಮಾನವ ಜೀವನದ ಕುರಿತು ಅನೇಕವೇಳೆ ಏನು ಹೇಳುತ್ತವೆ?

12-14. ಭೂಮಿ ಮತ್ತು ಮಾನವಕುಲದ ಬಗ್ಗೆ ದೇವರಿಗಿರುವ ಉದ್ದೇಶದ ಕುರಿತು ಬೈಬಲ್‌ ಏನನ್ನು ಬೋಧಿಸುತ್ತದೆ?

15. ನಾವು ಸತ್ತಾಗ ಏನು ಸಂಭವಿಸುತ್ತದೆಂದು ಲೋಕದಲ್ಲಿರುವ ಹೆಚ್ಚಿನ ಧರ್ಮಗಳು ಬೋಧಿಸುತ್ತವೆ?

16, 17. ಬೈಬಲಿಗನುಸಾರ ಮೃತರ ಸ್ಥಿತಿಯೇನು?

18. ಸತ್ತವರಿಗೆ ಯಾವ ತಿಳುವಳಿಕೆಯಿಲ್ಲ ಎಂದು ಬೈಬಲ್‌ ವಿದ್ಯಾರ್ಥಿಯೊಬ್ಬನು ಕಲಿಯುವಾಗ ಯಾವ ತೀರ್ಮಾನಕ್ಕೆ ಬರಬಲ್ಲನು?

19, 20. ಕ್ರೈಸ್ತರಾಗಿರುವ ನಮಗೆ ಯಾವ ಜವಾಬ್ದಾರಿ ಇದೆ ಮತ್ತು ವಿಶೇಷವಾಗಿ ನಮ್ಮ ಶುಶ್ರೂಷೆಯಲ್ಲಿ ಬಳಸಲಿಕ್ಕಾಗಿ ಯಾವ ಬೈಬಲ್‌ ಅಧ್ಯಯನ ಸಹಾಯಕವನ್ನು ರಚಿಸಲಾಗಿದೆ?

21, 22. ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಕೆಲವು ಗಮನಾರ್ಹ ವೈಶಿಷ್ಟ್ಯಗಳಾವುವು?

23. ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಬೈಬಲ್‌ ಅಧ್ಯಯನಗಳಲ್ಲಿ ಉಪಯೋಗಿಸುವ ಬಗ್ಗೆ ಯಾವ ಸೂಚನೆಗಳನ್ನು ಕೊಡಲಾಗಿದೆ?

24, 25. ಯೆಹೋವನು ತನ್ನ ಜನರಿಗೆ ಯಾವ ಅಮೂಲ್ಯ ಸುಯೋಗಗಳನ್ನು ಕೊಟ್ಟಿದ್ದಾನೆ?

[ಪುಟ 13ರಲ್ಲಿರುವ ಚಿತ್ರ]

ನೀತಿವಂತರು ಪರದೈಸಿನಲ್ಲಿ ನಿತ್ಯ ಜೀವಿಸುವರು