ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಬೋಧನೆಗೆ ವಿಧೇಯರಾಗುವಂತೆ ಇತರರಿಗೆ ಸಹಾಯ ನೀಡಿರಿ

ಬೈಬಲ್‌ ಬೋಧನೆಗೆ ವಿಧೇಯರಾಗುವಂತೆ ಇತರರಿಗೆ ಸಹಾಯ ನೀಡಿರಿ

ಬೈಬಲ್‌ ಬೋಧನೆಗೆ ವಿಧೇಯರಾಗುವಂತೆ ಇತರರಿಗೆ ಸಹಾಯ ನೀಡಿರಿ

“ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ಒಳ್ಳೆಯ ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ; ಇವರೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವವರು.”​—⁠ಲೂಕ 8:15.

“ಇದೊಂದು ಅಮೋಘವಾದ ಪುಸ್ತಕ! ನನ್ನ ವಿದ್ಯಾರ್ಥಿಗಳಿಗೆ ಇದು ಅಚ್ಚುಮೆಚ್ಚು. ನನಗಂತೂ ಇದು ತುಂಬ ಇಷ್ಟ. ಮನೆಬಾಗಿಲಲ್ಲಿಯೇ ಜನರೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸುವಂತೆ ಈ ಪುಸ್ತಕವು ಸಹಾಯಮಾಡುತ್ತದೆ.” ಇದು, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕದ ಕುರಿತು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕಿಯೊಬ್ಬಳು ಹೇಳಿದ ಮಾತು. ಇದೇ ಪ್ರಕಾಶನದ ಕುರಿತು ವೃದ್ಧ ರಾಜ್ಯ ಘೋಷಕರೊಬ್ಬರು ಹೇಳಿದ್ದು: “ಕಳೆದ 50 ವರುಷಗಳಲ್ಲಿ ನಾನು ಶುಶ್ರೂಷೆಯಲ್ಲಿ ಕ್ರಿಯಾಶೀಲನಾಗಿದ್ದು ಅನೇಕ ಜನರು ಯೆಹೋವನನ್ನು ತಿಳಿಯುವಂತೆ ಸಹಾಯ ನೀಡುವ ಸುಯೋಗ ನನಗಿತ್ತು. ಆದರೆ, ಈ ಅಧ್ಯಯನ ಪುಸ್ತಕವಂತೂ ಅತಿ ವಿಶಿಷ್ಟವಾದದ್ದು ಎಂದು ನಾನು ಹೇಳಲೇ ಬೇಕಾಗುತ್ತೆ. ಹುರಿದುಂಬಿಸುವ ನುಡಿಚಿತ್ರಗಳು ಬಲು ಸೊಗಸಾಗಿವೆ. ಚಿತ್ರಗಳು ಸಹ ನೋಟಕ್ಕೆ ರಮ್ಯವಾಗಿವೆ.” ಬೈಬಲ್‌ ಬೋಧಿಸುತ್ತದೆ ಪುಸ್ತಕದ ಬಗೆ ನಿಮಗೂ ಹಾಗನಿಸುತ್ತದೆಯೇ? ಯೇಸು ಕೊಟ್ಟ ಆಜ್ಞೆಯನ್ನು ನೆರವೇರಿಸಲು ನಿಮಗೆ ನೆರವಾಗುವಂತೆ ಈ ಬೈಬಲ್‌ ಅಧ್ಯಯನ ಸಹಾಯಕವನ್ನು ರಚಿಸಲಾಗಿದೆ. ಯೇಸು ಆಜ್ಞಾಪಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”​—⁠ಮತ್ತಾಯ 28:​19, 20.

2 ಶಿಷ್ಯರನ್ನಾಗಿ ಮಾಡುವಂತೆ ಯೇಸು ಕೊಟ್ಟ ನಿರ್ದೇಶನಕ್ಕೆ ಸುಮಾರು 66 ಲಕ್ಷ ಯೆಹೋವನ ಸಾಕ್ಷಿಗಳು ಇಷ್ಟಪೂರ್ವಕವಾಗಿ ವಿಧೇಯರಾಗುವುದನ್ನು ಕಾಣುವಾಗ ಯೆಹೋವನಿಗೆ ಹೃದಯೋಲ್ಲಾಸವಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. (ಜ್ಞಾನೋಕ್ತಿ 27:11) ಯೆಹೋವನು ಅವರ ಪ್ರಯತ್ನಗಳನ್ನು ಆಶೀರ್ವದಿಸುತ್ತಿದ್ದಾನೆಂಬುದು ವ್ಯಕ್ತ. ಉದಾಹರಣೆಗೆ, 2005ರಲ್ಲಿ 235 ದೇಶಗಳಲ್ಲಿ ಸುವಾರ್ತೆಯನ್ನು ಸಾರಲಾಯಿತು. ಸರಾಸರಿ 60,61,500ಕ್ಕೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಲಾಯಿತು. ಇದರ ಫಲವಾಗಿ ಅನೇಕರು ‘ದೇವರ ವಾಕ್ಯವನ್ನು ಕೇಳಿ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದುಕೊಂಡರು.’ (1 ಥೆಸಲೊನೀಕ 2:13) ಕಳೆದ ಎರಡು ವರುಷಗಳಲ್ಲಿ, 5 ಲಕ್ಷಗಳಿಗೂ ಹೆಚ್ಚು ಮಂದಿ ಹೊಸ ಶಿಷ್ಯರು ತಮ್ಮ ಜೀವನಗಳನ್ನು ಯೆಹೋವನ ಮಟ್ಟಗಳಿಗೆ ಹೊಂದಿಸಿಕೊಂಡು ಆತನಿಗೆ ತಮ್ಮನ್ನು ಸಮರ್ಪಿಸಿಕೊಂಡರು.

3 ನೀವು ಇತ್ತೀಚೆಗೆ ಯಾರೊಂದಿಗಾದರೂ ಬೈಬಲ್‌ ಅಧ್ಯಯನವನ್ನು ನಡೆಸುವುದರಲ್ಲಿ ಸಂತೋಷವನ್ನು ಪಡೆದುಕೊಂಡಿದ್ದೀರೊ? ಲೋಕವ್ಯಾಪಕವಾಗಿ “ಸುಗುಣವುಳ್ಳ ಒಳ್ಳೆಯ ಹೃದಯದ” ವ್ಯಕ್ತಿಗಳು ಇನ್ನೂ ಇದ್ದಾರೆ. ಇವರು ದೇವರ ವಾಕ್ಯವನ್ನು ಕೇಳಿಸಿಕೊಂಡ ಬಳಿಕ, ಅದನ್ನು ‘ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುವವರಾಗಿದ್ದಾರೆ.’ (ಲೂಕ 8:​11-15) ಶಿಷ್ಯರನ್ನಾಗಿ ಮಾಡುವ ಈ ಕೆಲಸದಲ್ಲಿ ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀವು ಹೇಗೆ ಉಪಯೋಗಿಸಬಲ್ಲಿರಿ ಎಂಬುದನ್ನು ನಾವೀಗ ಚರ್ಚಿಸೋಣ. ನಮ್ಮ ಚರ್ಚೆಯಲ್ಲಿ ಈ ಮೂರು ಪ್ರಶ್ನೆಗಳನ್ನು ಪರಿಶೀಲಿಸಲಾಗುತ್ತದೆ: (1) ನೀವು ಒಂದು ಬೈಬಲ್‌ ಅಧ್ಯಯನವನ್ನು ಹೇಗೆ ಪ್ರಾರಂಭಿಸಬಲ್ಲಿರಿ? (2) ಯಾವ ಬೋಧನಾ ವಿಧಾನಗಳು ಅತಿ ಕಾರ್ಯಸಾಧಕವಾಗಿವೆ? (3) ಒಬ್ಬ ವ್ಯಕ್ತಿ ಬರೀ ದೇವರ ಲಿಖಿತ ವಾಕ್ಯದ ವಿದ್ಯಾರ್ಥಿಯಾಗುವುದು ಮಾತ್ರವಲ್ಲ ಬೋಧಕನೂ ಆಗುವಂತೆ ನೀವು ಅವನಿಗೆ ಹೇಗೆ ಸಹಾಯಮಾಡಬಲ್ಲಿರಿ?

ನೀವು ಒಂದು ಬೈಬಲ್‌ ಅಧ್ಯಯನವನ್ನು ಹೇಗೆ ಪ್ರಾರಂಭಿಸಬಲ್ಲಿರಿ?

4 ಒಂದು ಅಗಲವಾದ ತೋಡನ್ನು ಒಂದೇ ನೆಗೆತದಲ್ಲಿ ದಾಟಬೇಕೆಂದು ಯಾರಾದರು ನಿಮಗೆ ಹೇಳುವಲ್ಲಿ ನೀವದಕ್ಕೆ ಒಪ್ಪಲಿಕ್ಕಿಲ್ಲ. ಆದರೆ ಅದನ್ನು ದಾಟಲಿಕ್ಕಾಗಿ ಅಲ್ಲಲ್ಲಿ ಮೆಟ್ಟುಗಲ್ಲುಗಳನ್ನು ಇಟ್ಟಿರುವಲ್ಲಿ ಆಗ ನೀವು ಮನಸ್ಸು ಮಾಡಬಹುದು. ತದ್ರೀತಿ, ಯಾವಾಗಲು ಕಾರ್ಯಮಗ್ನನಾಗಿರುವ ವ್ಯಕ್ತಿಯೊಬ್ಬನು ಬೈಬಲ್‌ ಅಧ್ಯಯನ ಮಾಡಲು ಮೊದಲಿಗೆ ಹಿಂಜರಿಯಬಹುದು. ಏಕೆಂದರೆ, ಬೈಬಲನ್ನು ಅಧ್ಯಯನ ಮಾಡಲು ತುಂಬ ಸಮಯ ಮತ್ತು ಪ್ರಯತ್ನ ಬೇಕಾದೀತೆಂದು ಅವನು ಯೋಚಿಸಬಹುದು. ಈ ಯೋಚನೆಯಿಂದ ಹೊರಬಂದು ಅಧ್ಯಯನವನ್ನು ಆರಂಭಿಸಲು ಮನಸ್ಸುಮಾಡುವಂತೆ ನೀವು ಅವನಿಗೆ ಹೇಗೆ ಸಹಾಯಮಾಡಬಲ್ಲಿರಿ? ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುತ್ತಾ ಒಂದರ ನಂತರ ಒಂದರಂತೆ ಸಂಕ್ಷಿಪ್ತವೂ ಬೋಧಪ್ರದವೂ ಆದ ಚರ್ಚಾಸರಣಿಯನ್ನು ನಡೆಸುವ ಮೂಲಕವೇ. ಇದರಿಂದ ಆ ವ್ಯಕ್ತಿಯು ಕ್ರಮಬದ್ಧವಾಗಿ ದೇವರ ವಾಕ್ಯವನ್ನು ಅಧ್ಯಯನ ಮಾಡುವಂತೆ ನಡೆಸಬಲ್ಲಿರಿ. ನೀವು ಉತ್ತಮವಾಗಿ ತಯಾರಿಸಿ ಹೋಗುವಲ್ಲಿ ನೀವು ಮಾಡುವ ಒಂದೊಂದು ಪುನಃರ್ಭೇಟಿಯು ಆ ವ್ಯಕ್ತಿ ಯೆಹೋವನೊಂದಿಗೆ ಆಪ್ತ ಸ್ನೇಹವನ್ನು ಬೆಳೆಸಿಕೊಳ್ಳಲಿಕ್ಕಾಗಿ ಹೆಜ್ಜೆಯನ್ನಿಡಲು ಮೆಟ್ಟುಗಲ್ಲುಗಳಾಗಿರುವುದು.

5 ಆದರೆ, ಬೈಬಲ್‌ ಬೋಧಿಸುತ್ತದೆ ಪುಸ್ತಕದಿಂದ ಇನ್ನೊಬ್ಬರು ಪ್ರಯೋಜನಹೊಂದುವಂತೆ ಸಹಾಯಮಾಡುವುದಕ್ಕೆ ಮೊದಲು ನೀವದನ್ನು ಪೂರ್ತಿಯಾಗಿ ಪರಿಚಯಮಾಡಿಕೊಳ್ಳುವುದು ಅಗತ್ಯ. ನೀವು ಆ ಪುಸ್ತಕವನ್ನು ಆರಂಭದಿಂದ ಕೊನೆಯವರೆಗೆ ಓದಿದ್ದೀರಾ? ಒಂದು ದಂಪತಿ ತಮ್ಮ ರಜಾಸಮಯದಲ್ಲಿ ಆ ಪುಸ್ತಕವನ್ನು ತೆಗೆದುಕೊಂಡು ಹೋಗಿ, ಸಮುದ್ರತೀರದಲ್ಲಿ ವಿಶ್ರಮಿಸುತ್ತಿದ್ದಾಗ ಓದತೊಡಗಿದರು. ಪ್ರವಾಸಿಗಳಿಗೆ ವಸ್ತುಗಳನ್ನು ಮಾರುತ್ತಿದ್ದ ಒಬ್ಬ ಹೆಂಗಸು ಅವರ ಬಳಿಗೆ ಬಂದಾಗ, ಆಕೆ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಶೀರ್ಷಿಕೆಯನ್ನು ಗಮನಿಸಿದಳು. ಆಕೆ ತಾನು ಕೆಲವೇ ತಾಸುಗಳ ಮುಂಚೆ ಅದೇ ಪ್ರಶ್ನೆಯ ಬಗ್ಗೆ ದೇವರಿಗೆ ಪ್ರಾರ್ಥಿಸಿ ಉತ್ತರವನ್ನು ಒದಗಿಸುವಂತೆ ಕೇಳಿಕೊಂಡೆನೆಂದು ಆ ದಂಪತಿಗೆ ಹೇಳಿದಳು. ಇದನ್ನು ಕೇಳಿ ಸಂತೋಷಗೊಂಡ ಅವರು ಅವಳಿಗೆ ಆ ಪುಸ್ತಕದ ಪ್ರತಿಯೊಂದನ್ನು ಕೊಟ್ಟರು. ತದ್ರೀತಿ ನೀವು ಯಾರನ್ನಾದರೂ ಭೇಟಿಮಾಡಲು ಕಾಯುತ್ತಿರುವಾಗಲೋ, ಕೆಲಸದ ಅಥವಾ ಶಾಲೆಯ ಬಿಡುವಿನಲ್ಲೋ, ಸಿಗುವ ‘ಸಮಯವನ್ನು ಬೆಲೆಯುಳ್ಳದ್ದೆಂದು’ ಉಪಯೋಗಿಸಿ ಎರಡನೆಯ ಬಾರಿಯಾಗಿರುವುದಾದರೂ ಸರಿ ಆ ಪುಸ್ತಕವನ್ನು ಓದುತ್ತೀರೋ? (ಎಫೆಸ 5:​15, 16) ಹಾಗೆ ಮಾಡುವಲ್ಲಿ ನೀವು ಈ ಬೈಬಲ್‌ ಅಧ್ಯಯನ ಸಹಾಯಕದೊಂದಿಗೆ ಸುಪರಿಚಿತರಾಗುವಿರಿ. ಮಾತ್ರವಲ್ಲ, ಇದು ಪುಸ್ತಕದಲ್ಲಿರುವ ವಿಷಯದ ಕುರಿತು ಇತರರೊಡನೆ ಮಾತಾಡಲು ಸಹ ಸಂದರ್ಭಗಳನ್ನು ತೆರೆಯಬಹುದು.

6 ನೀವು ಸಾರ್ವಜನಿಕ ಸೇವೆಯಲ್ಲಿ ಈ ಪುಸ್ತಕವನ್ನು ನೀಡುವಾಗ ಅದರಲ್ಲಿರುವ ಚಿತ್ರಗಳು, ಶಾಸ್ತ್ರವಚನಗಳು ಮತ್ತು 4, 5 ಹಾಗೂ 6ನೇ ಪುಟಗಳಲ್ಲಿರುವ ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ. ಉದಾಹರಣೆಗೆ, ನೀವು ಸಂಭಾಷಣೆಯನ್ನು ಹೀಗೆ ಆರಂಭಿಸಬಹುದು: “ಮಾನವಕುಲವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಒಂದು ಭರವಸಾರ್ಹ ಮಾರ್ಗದರ್ಶನ ಎಲ್ಲಿ ಸಿಗುತ್ತದೆಂದು ನೀವು ನೆನಸುತ್ತೀರಿ?” ಆ ವ್ಯಕ್ತಿಯ ಪ್ರತ್ಯುತ್ತರವನ್ನು ಜಾಗರೂಕತೆಯಿಂದ ಆಲಿಸಿರಿ. ಬಳಿಕ 2 ತಿಮೊಥೆಯ 3:​16, 17ನ್ನು ಓದಿ. ಮಾನವಕುಲದ ಸಮಸ್ಯೆಗಳಿಗೆ ಬೈಬಲ್‌ ನಿಜ ಪರಿಹಾರವನ್ನು ನೀಡುತ್ತದೆ ಎಂದು ವಿವರಿಸಿರಿ. ತದನಂತರ 4 ಮತ್ತು 5ನೇ ಪುಟಗಳನ್ನು ತೋರಿಸಿ ಹೀಗೆ ಕೇಳಿರಿ: “ಇದರಲ್ಲಿ ಯಾವ ಚಿತ್ರವನ್ನು ನೋಡುವಾಗ ನಿಮ್ಮ ಮನಸ್ಸಿಗೆ ಕಷ್ಟವಾಗುತ್ತದೆ?” ಮನೆಯವನು ಯಾವುದಾದರೂ ಒಂದು ಚಿತ್ರಕ್ಕೆ ಬೆರಳು ತೋರಿಸುವಾಗ ನೀವು ಆ ಪುಸ್ತಕವನ್ನು ಅವನ ಕೈಗೆ ಕೊಟ್ಟು ಆ ಚಿತ್ರದ ಜೊತೆಗಿರುವ ವಚನವನ್ನು ನಿಮ್ಮ ಬೈಬಲಿನಿಂದ ಓದಿರಿ. ಆಮೇಲೆ 6ನೆಯ ಪುಟದಲ್ಲಿರುವ ವಿಷಯಗಳನ್ನು ಓದಿ. ಆ ಪುಟದ ಕೊನೆಯಲ್ಲಿರುವ ಆರು ಪ್ರಶ್ನೆಗಳನ್ನು ಅವನಿಗೆ ತೋರಿಸುತ್ತಾ “ನೀವು ಇದರಲ್ಲಿ ಯಾವುದಕ್ಕೆ ಉತ್ತರವನ್ನು ತಿಳಿದುಕೊಳ್ಳಲು ಬಯಸುತ್ತೀರಿ?” ಎಂದು ಕೇಳಿರಿ. ಆ ವ್ಯಕ್ತಿ ಒಂದು ಪ್ರಶ್ನೆಯನ್ನು ಆರಿಸಿಕೊಂಡಾಗ ಆ ಪ್ರಶ್ನೆಗೆ ಉತ್ತರ ಕೊಡುವ ಅಧ್ಯಾಯವನ್ನು ತೋರಿಸಿ. ಪುಸ್ತಕವನ್ನು ಅವನಿಗೆ ನೀಡಿ, ಆ ಪ್ರಶ್ನೆಯ ಕುರಿತು ಚರ್ಚಿಸಲಿಕ್ಕಾಗಿ ಪುನಃರ್ಭೇಟಿಮಾಡಲು ನಿಶ್ಚಿತ ಏರ್ಪಾಡುಗಳನ್ನು ಮಾಡಿರಿ.

7 ಈ ನಿರೂಪಣೆಗೆ ಸುಮಾರು ಐದು ನಿಮಿಷ ಸಾಕು. ಆದರೆ ಈ ಕೆಲವೇ ನಿಮಿಷಗಳಲ್ಲಿ ನೀವು ಮನೆಯವನ ಚಿಂತೆಯನ್ನು ಅರಿತು ಎರಡು ಶಾಸ್ತ್ರವಚನಗಳನ್ನು ಓದಿ ಅನ್ವಯಿಸಿರುವಿರಿ. ಮಾತ್ರವಲ್ಲ, ಪುನರ್ಭೇಟಿಗಾಗಿ ಏರ್ಪಾಡನ್ನೂ ಮಾಡಿರುವಿರಿ. ನಿಮ್ಮ ಈ ಸಂಕ್ಷಿಪ್ತ ಸಂಭಾಷಣೆಯು ಬಹುಶಃ ಬಹಳ ಸಮಯದಿಂದೀಚೆಗೆ ಅವನಿಗೆ ಸಿಕ್ಕಿದ ಅತಿ ಪ್ರೋತ್ಸಾಹಕರವೂ ಸಾಂತ್ವನದಾಯಕವೂ ಆದ ಅನುಭವವಾಗಿರಬಹುದು. ಇದರ ಫಲವಾಗಿ, ಕಾರ್ಯಮಗ್ನನಾಗಿರುವ ಒಬ್ಬ ವ್ಯಕ್ತಿ ಸಹ ಇನ್ನೂ ಕೆಲವು ನಿಮಿಷಗಳನ್ನು ನಿಮ್ಮೊಂದಿಗೆ ಕಳೆಯಲು ಬಯಸಬಹುದು. ‘ಜೀವಕ್ಕೆ ನಡೆಸುವ ದಾರಿಯಲ್ಲಿ’ ಮುಂದಿನ ಹೆಜ್ಜೆಯನ್ನಿಡಲು ನೀವು ಅವನಿಗೆ ಸಹಾಯ ಮಾಡುವಾಗ ನಿಮ್ಮೊಂದಿಗೆ ಸಮಯವನ್ನು ಕಳೆಯಲು ಅವನು ಮುನ್ನೋಡಬಹುದು. (ಮತ್ತಾಯ 7:14) ಸಕಾಲದಲ್ಲಿ, ಆ ಮನೆಯವನ ಆಸಕ್ತಿ ಬೆಳೆಯುತ್ತಿರುವಾಗ ಅಧ್ಯಯನದ ವೇಳೆಯನ್ನು ಹೆಚ್ಚಿಸಿರಿ. ‘ಒಂದು ನಿಶ್ಚಿತ ಸಮಯದ ತನಕ ಕುಳಿತು ಚರ್ಚಿಸೋಣವೇ’ ಎಂದು ಕೇಳುವ ಮೂಲಕ ಇದನ್ನು ಮಾಡಸಾಧ್ಯವಿದೆ.

ಕಾರ್ಯಸಾಧಕವಾದ ಬೋಧನಾ ವಿಧಾನಗಳು

8 ಬೈಬಲ್‌ ಬೋಧನೆಗಳಿಗೆ ಒಬ್ಬನು ವಿಧೇಯನಾಗಲು ತೊಡಗುವಾಗ ಅವನ ಪ್ರಗತಿಯನ್ನು ತಡೆಯಬಹುದಾದ ಅಡೆತಡೆಗಳನ್ನು ಅವನು ಎದುರಿಸಬಹುದು. ಅಪೊಸ್ತಲ ಪೌಲನು ಹೇಳಿದ್ದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಪೌಲನು ಈ ಪರೀಕ್ಷೆಗಳನ್ನು ಬೆಂಕಿಗೆ ಹೋಲಿಸಿದನು. ಬೆಂಕಿಯು ಕಟ್ಟಡದಲ್ಲಿರುವ ಕೆಳದರ್ಜೆಯ ವಸ್ತುಗಳನ್ನು ದಹಿಸಿದರೂ ಚಿನ್ನ, ಬೆಳ್ಳಿ ರತ್ನಗಳನ್ನು ದಹಿಸುವುದಿಲ್ಲ. (1 ಕೊರಿಂಥ 3:​10-13; 1 ಪೇತ್ರ 1:​6, 7) ಅದೇ ರೀತಿಯಲ್ಲಿ, ತನಗೆ ಬರುವ ಬೆಂಕಿಯಂಥ ಪರೀಕ್ಷೆಗಳನ್ನು ಎದುರಿಸಿ ನಿಲ್ಲಲು ಬೇಕಾಗಿರುವ ಗುಣಗಳನ್ನು ಬೆಳೆಸಿಕೊಳ್ಳುವಂತೆ ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ನೀವು ಸಹಾಯಮಾಡಬೇಕು. ಇದಕ್ಕಾಗಿ ಅಗ್ನಿನಿರೋಧಕ ವಸ್ತುಗಳಿಂದ ಕಟ್ಟುವ ಮೂಲಕ ನೀವು ಅವನಿಗೆ ನೆರವು ನೀಡಬೇಕಾಗಿದೆ.

9 ಕೀರ್ತನೆಗಾರನು ‘ಯೆಹೋವನ ಮಾತುಗಳನ್ನು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಗೆ’ ಹೋಲಿಸುತ್ತಾನೆ. (ಕೀರ್ತನೆ 12:⁠6) ಹೌದು, ಬಲವಾದ ನಂಬಿಕೆಯನ್ನು ಕಟ್ಟಲು ಉಪಯೋಗಿಸಬಹುದಾದ ಎಲ್ಲ ಅಮೂಲ್ಯ ವಸ್ತುಗಳು ಬೈಬಲಿನಲ್ಲಿವೆ. (ಕೀರ್ತನೆ 19:​7-11; ಜ್ಞಾನೋಕ್ತಿ 2:​1-6) ಬೈಬಲ್‌ ವಚನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ವಿಧವನ್ನು ಬೈಬಲ್‌ ಬೋಧಿಸುತ್ತದೆ ಪುಸ್ತಕ ನಿಮಗೆ ತೋರಿಸುತ್ತದೆ.

10 ಅಧ್ಯಯನ ಮಾಡುತ್ತಿರುವಾಗ ಕೊಡಲ್ಪಟ್ಟಿರುವ ಶಾಸ್ತ್ರವಚನಗಳಿಗೆ ವಿದ್ಯಾರ್ಥಿಯ ಗಮನವನ್ನು ಸೆಳೆಯಿರಿ. ಮುಖ್ಯ ಬೈಬಲ್‌ ವಚನಗಳನ್ನು ವಿದ್ಯಾರ್ಥಿಯು ಅರ್ಥಮಾಡಿಕೊಳ್ಳಲು ಮತ್ತು ತನಗೆ ಅನ್ವಯಿಸಿಕೊಳ್ಳಲು ಸಹಾಯಮಾಡಲಿಕ್ಕಾಗಿ ಪ್ರಶ್ನೆಗಳನ್ನು ಕೇಳಿರಿ. ಅವನು ಏನು ಮಾಡತಕ್ಕದ್ದೆಂದು ನೀವೇ ಹೇಳಬೇಡಿರಿ. ಬದಲಿಗೆ ಯೇಸುವಿನ ಮಾದರಿಯನ್ನು ಅನುಕರಿಸಿರಿ. ಒಮ್ಮೆ ಧರ್ಮಶಾಸ್ತ್ರದಲ್ಲಿ ನುರಿತವನಾದ ಒಬ್ಬನು ಯೇಸುವನ್ನು ಪ್ರಶ್ನಿಸಿದಾಗ ಅವನು, “ಶಾಸ್ತ್ರದಲ್ಲಿ ಏನು ಬರೆದದೆ? ಹೇಗೆ ಓದಿದ್ದೀ?” ಎಂದು ಕೇಳಿದನು. ಆಗ ಆ ಮನುಷ್ಯನು ಶಾಸ್ತ್ರದಿಂದಲೇ ಉತ್ತರಕೊಟ್ಟನು. ಆ ಮೂಲತತ್ತ್ವವನ್ನು ಅವನೇ ಅನ್ವಯಿಸಿಕೊಳ್ಳುವಂತೆ ಯೇಸು ಸಹಾಯ ಮಾಡಿದನು. ಯೇಸು ಒಂದು ದೃಷ್ಟಾಂತವನ್ನು ಕೊಡುವ ಮೂಲಕ ತನ್ನ ಬೋಧನೆಯಿಂದ ಅವನು ಯಾವ ಹೆಜ್ಜೆ ತೆಗೆದುಕೊಳ್ಳಬೇಕೆಂಬುದನ್ನು ಸಹ ತೋರಿಸಿಕೊಟ್ಟನು. (ಲೂಕ 10:​25-37) ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ ಅನೇಕ ಸರಳ ದೃಷ್ಟಾಂತಗಳಿವೆ. ವಿದ್ಯಾರ್ಥಿಯು ಬೈಬಲ್‌ ಮೂಲತತ್ತ್ವಗಳನ್ನು ತನಗೆ ಅನ್ವಯಿಸಿಕೊಳ್ಳುವಂತೆ ಸಹಾಯಮಾಡಲು ನೀವು ಅವುಗಳನ್ನು ಉಪಯೋಗಿಸಸಾಧ್ಯವಿದೆ.

11 ಯೇಸು ಜಟಿಲ ವಿಚಾರಗಳನ್ನು ಸರಳ ರೀತಿಯಲ್ಲಿ ಹೇಳಿದನು. ಅದೇ ರೀತಿಯಲ್ಲಿ, ದೇವರ ವಾಕ್ಯವನ್ನು ವಿವರಿಸಲು ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ ಉಪಯೋಗಿಸಲಾಗಿರುವ ಭಾಷಾಶೈಲಿಯು ಸುಲಭವಾಗಿಯೂ ನೇರವಾಗಿಯೂ ಇದೆ. (ಮತ್ತಾಯ 7:​28, 29) ನೀವು ಸಹ ಯೇಸುವಿನ ಮಾದರಿಯನ್ನು ಅನುಸರಿಸಿರಿ. ಮಾಹಿತಿಯನ್ನು ಸರಳವಾಗಿ, ಸ್ಪಷ್ಟವಾಗಿ ಮತ್ತು ನಿಷ್ಕೃಷ್ಟವಾಗಿ ತಿಳಿಯಪಡಿಸಿರಿ. ಅಧ್ಯಯನ ಭಾಗವನ್ನು ಅವಸರ ಅವಸರವಾಗಿ ಆವರಿಸಬೇಡಿ. ವಿದ್ಯಾರ್ಥಿಯ ಪರಿಸ್ಥಿತಿ ಮತ್ತು ಸಾಮಾರ್ಥ್ಯಕ್ಕನುಸಾರ, ಪ್ರತಿಯೊಂದು ಅಧ್ಯಯನದಲ್ಲೂ ಎಷ್ಟು ಪ್ಯಾರಗಳನ್ನು ಆವರಿಸಬೇಕೆಂಬುದನ್ನು ನಿರ್ಧರಿಸಿರಿ. ಯೇಸು ತನ್ನ ಶಿಷ್ಯರ ಇತಿಮಿತಿಗಳನ್ನು ಬಲ್ಲವನಾಗಿದ್ದುದರಿಂದ, ಒಂದೇ ಸಲಕ್ಕೆ ಎಲ್ಲಾ ವಿಷಯಗಳನ್ನು ಹೇಳಿ ಅವರ ಮೇಲೆ ಹೆಚ್ಚಿನ ಭಾರವನ್ನು ಹೊರಿಸಲಿಲ್ಲ.​—⁠ಯೋಹಾನ 16:12.

12ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ 14 ಮುಖ್ಯವಿಷಯಗಳಿರುವ ಒಂದು ಪರಿಶಿಷ್ಟವಿದೆ. ಬೋಧಕರಾಗಿರುವ ನೀವು ಈ ವಿಷಯವನ್ನು ಅತ್ಯುತ್ತಮವಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ವಿದ್ಯಾರ್ಥಿಯ ಅಗತ್ಯಾನುಸಾರ ನಿರ್ಧರಿಸಿರಿ. ಉದಾಹರಣೆಗೆ, ಒಂದು ವಿಷಯಭಾಗವನ್ನು ಅರ್ಥಮಾಡಿಕೊಳ್ಳುವುದು ವಿದ್ಯಾರ್ಥಿಗೆ ಕಷ್ಟವಾಗಿರಬಹುದು. ಇಲ್ಲವೆ, ಈ ಹಿಂದೆ ನಂಬುತ್ತಿದ್ದ ವಿಷಯಗಳ ಕಾರಣ ಕೆಲವು ನಿರ್ದಿಷ್ಟ ಸಂಗತಿಗಳ ಮೇಲೆ ಅವನಿಗೆ ಪ್ರಶ್ನೆಗಳೇಳಬಹುದು. ಆಗ ಪರಿಶಿಷ್ಟದಲ್ಲಿರುವ ಸೂಕ್ತ ವಿಭಾಗಕ್ಕೆ ಅವನ ಗಮನವನ್ನು ತಿರುಗಿಸಿ. ಅವನೇ ಆ ವಿಷಯವನ್ನು ಓದಿ ತಿಳಿಯಲಿ. ಆದರೆ ಕೆಲವೊಮ್ಮೆ ಅವನಿಗದು ಕಷ್ಟವಾಗುವುದು ಎಂದು ತೋರಿಬರುವಲ್ಲಿ ನೀವು ಅವನೊಂದಿಗೆ ಕೂಡಿ ಚರ್ಚಿಸಿರಿ. ಈ ಪರಿಶಿಷ್ಟದಲ್ಲಿ, “ಮಾನವರಲ್ಲಿ ಅದೃಶ್ಯವಾದ ಅಮರ ಭಾಗವೊಂದು ನಿಜವಾಗಿಯೂ ಇದೆಯೊ?” ಮತ್ತು “‘ಮಹಾ ಬಾಬೆಲ್‌’ ಯಾರೆಂಬುದನ್ನು ಗುರುತಿಸುವುದು” ಎಂಬಂಥ ಅತಿ ಪ್ರಾಮುಖ್ಯ ಶಾಸ್ತ್ರೀಯ ವಿಷಯಗಳಿವೆ. ನೀವು ಇಂಥ ವಿಷಯಗಳನ್ನು ನಿಮ್ಮ ವಿದ್ಯಾರ್ಥಿಯೊಂದಿಗೆ ಚರ್ಚಿಸಲು ಬಯಸಬಹುದು. ಈ ಪರಿಶಿಷ್ಟದ ವಿಷಯಗಳಿಗೆ ಪ್ರಶ್ನೆಗಳನ್ನು ಒದಗಿಸಲಾಗಿಲ್ಲ. ಆದುದರಿಂದ, ನೀವು ಅರ್ಥಪೂರ್ಣ ಪ್ರಶ್ನೆಗಳನ್ನು ರಚಿಸಲು ಈ ಮಾಹಿತಿಯನ್ನು ಚೆನ್ನಾಗಿ ತಿಳಿದಿರುವುದು ಅಗತ್ಯ.

13 “ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ” ಎನ್ನುತ್ತದೆ ಕೀರ್ತನೆ 127:⁠1. ಆದುದರಿಂದ, ನೀವು ಬೈಬಲ್‌ ಅಧ್ಯಯನ ನಡೆಸಲು ತಯಾರಿಸುವಾಗ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿರಿ. ಪ್ರತಿ ಅಧ್ಯಯನದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ನೀವು ಮಾಡುವ ಪ್ರಾರ್ಥನೆಗಳು ಯೆಹೋವನೊಂದಿಗೆ ನಿಮಗಿರುವ ಆಪ್ತ ಸಂಬಂಧವನ್ನು ಪ್ರತಿಬಿಂಬಿಸಲಿ. ಯೆಹೋವನ ವಾಕ್ಯವನ್ನು ಅರ್ಥಮಾಡಿಕೊಳ್ಳಲು ವಿವೇಕಕ್ಕಾಗಿಯೂ ಅದರ ಸಲಹೆಯನ್ನು ಅನ್ವಯಿಸಿಕೊಳ್ಳಲು ಬಲಕ್ಕಾಗಿಯೂ ಪ್ರಾರ್ಥಿಸುವಂತೆ ಆ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿರಿ. (ಯಾಕೋಬ 1:⁠5) ಅವನು ಹಾಗೆ ಪ್ರಾರ್ಥಿಸುವಲ್ಲಿ ಪರೀಕ್ಷೆಗಳನ್ನು ತಾಳಿಕೊಳ್ಳಲು ಬಲವನ್ನು ಪಡೆದುಕೊಳ್ಳುವನು. ಅವನು ನಂಬಿಕೆಯಲ್ಲಿಯೂ ದೃಢವಾಗಿ ಬೆಳೆಯುತ್ತಾ ಇರುವನು.

ಬೋಧಕರಾಗುವಂತೆ ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ನೀಡಿರಿ

14 ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ ‘ಎಲ್ಲ ವಿಷಯಗಳಿಗೆ’ ನಮ್ಮ ಬೈಬಲ್‌ ವಿದ್ಯಾರ್ಥಿಗಳು ವಿಧೇಯರಾಗಬೇಕಾದರೆ, ಅವರು ಕೇವಲ ದೇವರ ವಾಕ್ಯದ ವಿದ್ಯಾರ್ಥಿಗಳಾಗಿರದೆ ಬೋಧಕರಾಗುವಂತೆ ಪ್ರಗತಿ ಹೊಂದುವುದು ಅಗತ್ಯ. (ಮತ್ತಾಯ 28:​19, 20; ಅ. ಕೃತ್ಯಗಳು 1:​6-8) ಒಬ್ಬ ವಿದ್ಯಾರ್ಥಿಯು ಬೋಧಕನಾಗುವಷ್ಟರ ಮಟ್ಟಿಗೆ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ನೀವು ಹೇಗೆ ಸಹಾಯಮಾಡಬಲ್ಲಿರಿ?

15 ಪ್ರಥಮ ಅಧ್ಯಯನದಿಂದಲೇ ನಿಮ್ಮೊಂದಿಗೆ ಸಭಾಕೂಟಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಯನ್ನು ಆಮಂತ್ರಿಸಿರಿ. ಈ ಕೂಟಗಳೇ ದೇವರ ವಾಕ್ಯದ ಬೋಧಕರಾಗುವ ತರಬೇತನ್ನು ನಿಮಗೆ ಒದಗಿಸುತ್ತದೆಂಬುದನ್ನು ವಿವರಿಸಿರಿ. ಹಲವಾರು ವಾರಗಳ ವರೆಗೆ ಪ್ರತಿ ಬೈಬಲ್‌ ಅಧ್ಯಯನದ ಅಂತ್ಯದಲ್ಲಿ ಕೆಲವು ನಿಮಿಷಗಳನ್ನು ತೆಗೆದುಕೊಂಡು ವಿವಿಧ ಕೂಟಗಳಲ್ಲೂ ಸಮ್ಮೇಳನಗಳಲ್ಲೂ ನೀವು ಪಡೆಯುವ ಆಧ್ಯಾತ್ಮಿಕ ಸಲಹೆಯ ಕಾರ್ಯಕ್ರಮವನ್ನು ವಿವರಿಸಿರಿ. ಈ ಸಂದರ್ಭಗಳಲ್ಲಿ ನೀವು ಪಡೆದುಕೊಂಡ ಪ್ರಯೋಜನಗಳ ಬಗ್ಗೆ ಉತ್ಸಾಹದಿಂದ ಮಾತಾಡಿರಿ. (ಇಬ್ರಿಯ 10:​24, 25) ಆ ವಿದ್ಯಾರ್ಥಿಯು ಯಾವಾಗ ಕ್ರಮವಾಗಿ ಕೂಟಗಳಿಗೆ ಹಾಜರಾಗಲು ಆರಂಭಿಸುತ್ತಾನೊ ಆಗ ಅವನು ದೇವರ ವಾಕ್ಯದ ಬೋಧಕನಾಗುವುದು ಸಂಭಾವ್ಯ.

16 ಆ ವಿದ್ಯಾರ್ಥಿಯು ತಲಪಸಾಧ್ಯವಿರುವ ಕೆಲವು ಗುರಿಗಳನ್ನು ಇಟ್ಟುಕೊಳ್ಳುವಂತೆ ಸಹಾಯಮಾಡಿರಿ. ಉದಾಹರಣೆಗೆ, ಅವನು ಕಲಿಯುವಂತಹ ವಿಷಯಗಳನ್ನು ಒಬ್ಬ ಸ್ನೇಹಿತನೊಂದಿಗೊ ಸಂಬಂಧಿಕನೊಂದಿಗೊ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿರಿ. ಅಲ್ಲದೆ, ಅವನು ಇಡೀ ಬೈಬಲನ್ನು ಓದಿ ಮುಗಿಸುವ ಗುರಿಯನ್ನು ಇಡುವಂತೆ ಸಲಹೆಕೊಡಿರಿ. ಕ್ರಮವಾಗಿ ಬೈಬಲನ್ನು ಓದುವ ರೂಢಿಯನ್ನಿಟ್ಟುಕೊಂಡು, ಅದನ್ನು ಕಾಪಾಡಿಕೊಳ್ಳಲು ನೀವು ಸಹಾಯಮಾಡುವಲ್ಲಿ ಈ ಅಭ್ಯಾಸವು ಅವನು ದೀಕ್ಷಾಸ್ನಾನ ಹೊಂದಿದ ಮೇಲೆಯೂ ದೀರ್ಘಕಾಲ ಅವನಿಗೆ ಪ್ರಯೋಜನ ತರುವುದು. ಇದಕ್ಕೆ ಕೂಡಿಸಿ, ಆ ವಿದ್ಯಾರ್ಥಿಯು ಬೈಬಲ್‌ ಬೋಧಿಸುತ್ತದೆ ಪುಸ್ತಕದ ಪ್ರತಿಯೊಂದು ಅಧ್ಯಾಯದಿಂದ ಒಂದು ಮುಖ್ಯ ಪ್ರಶ್ನೆಗೆ ಉತ್ತರ ನೀಡುವಂಥ ಕಡಮೆಪಕ್ಷ ಒಂದು ಬೈಬಲ್‌ ವಚನವನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವ ಗುರಿಯನ್ನಿಡಲು ಏಕೆ ಸೂಚಿಸಬಾರದು? ಹೀಗೆ ಮಾಡುವಲ್ಲಿ ಅವನು “ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ” ಆಗುವನು.​—⁠2 ತಿಮೊಥೆಯ 2:15.

17 ಒಬ್ಬ ವಿದ್ಯಾರ್ಥಿಗೆ ಒಂದು ಶಾಸ್ತ್ರವಚನವನ್ನು ಕೇವಲ ಬಾಯಿಪಾಠ ಮಾಡಿ ಹೇಳುವಂತೆ ಅಥವಾ ಅದರ ಸಾರಾಂಶವನ್ನು ಹೇಳುವಂತೆ ಕಲಿಸುವುದಲ್ಲ. ಬದಲಿಗೆ, ತನ್ನ ನಂಬಿಕೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಕೊಡುವಾಗ ಅವನು ನಿರ್ದಿಷ್ಟ ಬೈಬಲ್‌ ವಚನಗಳನ್ನು ಹೇಗೆ ಅನ್ವಯಿಸುತ್ತಾನೆಂಬುದನ್ನು ವಿವರಿಸುವಂತೆ ಪ್ರೋತ್ಸಾಹಿಸಿರಿ. ಸಂಕ್ಷಿಪ್ತ ಪ್ರಾಕ್ಟಿಸ್‌ ಸೆಷನ್‌ಗಳನ್ನು ನಡೆಸುವುದು ಸಹ ಪ್ರಯೋಜನಕರವಾಗಿರಬಹುದು. ಆಗ ನೀವು ಅವನ ಸಂಬಂಧಿ ಅಥವಾ ಸಹೋದ್ಯೋಗಿಯಾಗಿ ನಟಿಸಿ ಅವನು ತನ್ನ ನಂಬಿಕೆಗಳನ್ನು ವಿವರಿಸಿ ಹೇಳುವಂತೆ ಪ್ರಶ್ನೆಗಳನ್ನು ಕೇಳಬಹುದು. ಆ ವಿದ್ಯಾರ್ಥಿಗೆ “ಸೌಮ್ಯ ಸ್ವಭಾವದಿಂದಲೂ ಆಳವಾದ ಗೌರವದಿಂದಲೂ” ಉತ್ತರ ಕೊಡುವುದು ಹೇಗೆಂಬದನ್ನು ಸಹ ತೋರಿಸಿರಿ.​—⁠1 ಪೇತ್ರ 3:​15, NW.

18 ಸಕಾಲದಲ್ಲಿ ಆ ವಿದ್ಯಾರ್ಥಿ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಲು ಅರ್ಹನಾಗಬಹುದು. ಈ ಕೆಲಸದಲ್ಲಿ ಭಾಗವಹಿಸಲು ಸಿಗುವ ಸದಾವಕಾಶವು ಒಂದು ಸುಯೋಗವಾಗಿದೆ ಎಂಬುದನ್ನು ಒತ್ತಿಹೇಳಿರಿ. (2 ಕೊರಿಂಥ 4:​1, 7) ಆ ವಿದ್ಯಾರ್ಥಿಯು ಅಸ್ನಾತ ಪ್ರಚಾರಕನಾಗಲು ಅರ್ಹನೆಂದು ಹಿರಿಯರು ನಿರ್ಧರಿಸಿದ ಬಳಿಕ ಒಂದು ಸರಳವಾದ ನಿರೂಪಣೆಯನ್ನು ತಯಾರಿಸಲು ಅವನಿಗೆ ಸಹಾಯಮಾಡಿ. ಅನಂತರ ಕ್ಷೇತ್ರ ಸೇವೆಗೆ ಅವನೊಂದಿಗೆ ನೀವು ಹೋಗಿರಿ. ಸಾರ್ವಜನಿಕ ಶುಶ್ರೂಷೆಯ ವಿವಿಧ ವೈಶಿಷ್ಟ್ಯಗಳಲ್ಲಿ ಅವನೊಂದಿಗೆ ಕ್ರಮವಾಗಿ ಭಾಗವಹಿಸಿರಿ. ಪುನಃರ್ಭೇಟಿಗಳಿಗಾಗಿ ಹೇಗೆ ತಯಾರಿಸುವುದೆಂದು ಮತ್ತು ಅವನ್ನು ಹೇಗೆ ಪರಿಣಾಮಕಾರಿಯಾಗಿ ಮಾಡುವುದೆಂದು ಅವನಿಗೆ ಕಲಿಸಿರಿ. ಈ ವಿಷಯಗಳಲ್ಲಿ ನೀವಿಡುವ ಉತ್ತಮ ಮಾದರಿಯು ಅವನ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುವುದು.​—⁠ಲೂಕ 6:40.

“ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸು”

19 ಒಬ್ಬ ವ್ಯಕ್ತಿಯು ‘ಸತ್ಯದ [“ನಿಷ್ಕೃಷ್ಟ,” NW] ಜ್ಞಾನವನ್ನು’ ಪಡೆಯುವಂತೆ ಸಹಾಯಮಾಡುವುದು ಕಠಿನ ಕೆಲಸ ಎಂಬುದರಲ್ಲಿ ಸಂದೇಹವಿಲ್ಲ. (1 ತಿಮೊಥೆಯ 2:⁠4) ಆದರೂ, ಬೈಬಲಿನ ಬೋಧನೆಗೆ ಒಬ್ಬನು ವಿಧೇಯನಾಗುವಂತೆ ಸಹಾಯಮಾಡುವದರಿಂದ ಸಿಗುವ ಸಂತೋಷಕ್ಕಿಂತ ಮಿಗಿಲಾದದ್ದು ಬೇರೊಂದಿಲ್ಲ. (1 ಥೆಸಲೊನೀಕ 2:​19, 20) ಹೌದು, ಲೋಕವ್ಯಾಪಕವಾಗಿ ಬೋಧಿಸುವ ಈ ಕೆಲಸದಲ್ಲಿ “ದೇವರ ಜೊತೆಕೆಲಸದವರು” ಆಗಿರುವುದು ಅದೆಂತಹ ಸುಯೋಗ!​—⁠1 ಕೊರಿಂಥ 3:⁠9.

20 ಯೇಸು ಕ್ರಿಸ್ತನ ಮತ್ತು ಅವನ ಬಲಾಢ್ಯ ದೇವದೂತರ ಮೂಲಕ ಯೆಹೋವನು ಬೇಗನೇ “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.” (2 ಥೆಸಲೊನೀಕ 1:​6-8) ಜೀವಗಳು ಅಪಾಯಕ್ಕೊಳಗಾಗಿವೆ. ಆದುದರಿಂದ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಿಂದ ಕಡಮೆಪಕ್ಷ ಒಂದು ಮನೆ ಬೈಬಲ್‌ ಅಧ್ಯಯನವನ್ನಾದರೂ ನಡೆಸುವುದನ್ನು ನಿಮ್ಮ ಗುರಿಯಾಗಿ ಇಡಬಲ್ಲಿರೊ? ನೀವು ಈ ಕೆಲಸದಲ್ಲಿ ಪಾಲ್ಗೊಳ್ಳುವಾಗ, ‘ನಿಮ್ಮನ್ನೂ ನಿಮ್ಮ ಉಪದೇಶ ಕೇಳುವವರನ್ನೂ ರಕ್ಷಿಸುವ’ ಅವಕಾಶ ನಿಮಗಿರುತ್ತದೆ. (1 ತಿಮೊಥೆಯ 4:16) ಬೈಬಲಿನ ಬೋಧನೆಗೆ ಇತರರು ವಿಧೇಯರಾಗುವಂತೆ ಸಹಾಯಮಾಡುವುದು ವಿಶೇಷವಾಗಿ ಇಂದು ಹೆಚ್ಚು ತುರ್ತಿನದ್ದಾಗಿದೆ. (w07 1/15)

[ಪಾದಟಿಪ್ಪಣಿಗಳು]

^ ಪ್ಯಾರ. 3 ಯೆಹೋವನ ಸಾಕ್ಷಿಗಳ ಪ್ರಕಾಶನ.

ನೀವೇನು ಕಲಿತಿರಿ?

• ಬೈಬಲ್‌ ಬೋಧಿಸುತ್ತದೆ ಪುಸ್ತಕವು ಯಾವ ಉದ್ದೇಶದಿಂದ ರಚಿಸಲಾಗಿದೆ?

• ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಬಳಸಿ ನೀವು ಒಂದು ಬೈಬಲ್‌ ಅಧ್ಯಯನವನ್ನು ಹೇಗೆ ಪ್ರಾರಂಭಿಸಬಲ್ಲಿರಿ?

• ಯಾವ ಬೋಧನಾ ವಿಧಾನಗಳು ಪರಿಣಾಮಕಾರಿಯಾಗಿವೆ?

• ವಿದ್ಯಾರ್ಥಿಯೊಬ್ಬನು ದೇವರ ವಾಕ್ಯದ ಬೋಧಕನಾಗಲು ನೀವು ಹೇಗೆ ಸಹಾಯಮಾಡಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ಯಾವ ಉದ್ದೇಶದಿಂದ ರಚಿಸಲಾಗಿದೆ? (ಬಿ) ಶಿಷ್ಯರನ್ನಾಗಿ ಮಾಡಲು ತನ್ನ ಜನರು ಮಾಡುವ ಪ್ರಯತ್ನಗಳನ್ನು ಯೆಹೋವನು ಇತ್ತೀಚೆಗಿನ ವರುಷಗಳಲ್ಲಿ ಹೇಗೆ ಆಶೀರ್ವದಿಸಿದ್ದಾನೆ?

3. ಬೈಬಲ್‌ ಬೋಧಿಸುತ್ತದೆ ಪುಸ್ತಕದ ಉಪಯೋಗದ ಕುರಿತು ಯಾವ ಪ್ರಶ್ನೆಗಳನ್ನು ಈ ಲೇಖನದಲ್ಲಿ ಪರೀಕ್ಷಿಸಲಾಗುವುದು?

4. ಕೆಲವರು ಬೈಬಲ್‌ ಅಧ್ಯಯನ ಮಾಡಲು ಏಕೆ ಹಿಂಜರಿಯಬಹುದು ಮತ್ತು ಅವರು ಬೈಬಲ್‌ ಅಧ್ಯಯನಕ್ಕಾಗಿ ಮನಸ್ಸುಮಾಡುವಂತೆ ನೀವು ಹೇಗೆ ಸಹಾಯಮಾಡಬಹುದು?

5. ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀವು ಓದುವುದು ಅಗತ್ಯವೇಕೆ?

6, 7. ಬೈಬಲ್‌ ಅಧ್ಯಯನಗಳನ್ನು ಪ್ರಾರಂಭಿಸಲು ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ನೀವು ಹೇಗೆ ಉಪಯೋಗಿಸಬಲ್ಲಿರಿ?

8, 9. (ಎ) ತನಗೆ ಬರಬಹುದಾದ ಅಡೆತಡೆಗಳನ್ನು ಮತ್ತು ಪರೀಕ್ಷೆಗಳನ್ನು ಎದುರಿಸಿ ನಿಲ್ಲುವಂತೆ ನೀವು ನಿಮ್ಮ ಬೈಬಲ್‌ ವಿದ್ಯಾರ್ಥಿಯನ್ನು ಹೇಗೆ ಸಿದ್ಧಪಡಿಸಬಲ್ಲಿರಿ? (ಬಿ) ಬಲವಾದ ನಂಬಿಕೆಯನ್ನು ಕಟ್ಟಲು ಬೇಕಾಗುವ ಅಗ್ನಿನಿರೋಧಕ ವಸ್ತುಗಳು ಎಲ್ಲಿ ದೊರೆಯುತ್ತವೆ?

10. ವಿದ್ಯಾರ್ಥಿಯ ಗಮನವನ್ನು ಬೈಬಲಿನ ಮೇಲೆ ನೀವು ಹೇಗೆ ಕೇಂದ್ರೀಕರಿಸಬಲ್ಲಿರಿ?

11. ಪ್ರತಿಯೊಂದು ಅಧ್ಯಯನದಲ್ಲಿ ನೀವು ಎಷ್ಟು ಭಾಗವನ್ನು ಆವರಿಸಬೇಕು?

12. ಪರಿಶಿಷ್ಟವನ್ನು ಹೇಗೆ ಉಪಯೋಗಿಸಬೇಕು?

13. ನಂಬಿಕೆಯನ್ನು ಬಲಗೊಳಿಸುವುದರಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?

14. ಬೈಬಲ್‌ ವಿದ್ಯಾರ್ಥಿಗಳು ಯಾವ ಪ್ರಗತಿಯನ್ನು ಮಾಡುವುದು ಅಗತ್ಯ?

15. ನಿಮ್ಮ ಬೈಬಲ್‌ ವಿದ್ಯಾರ್ಥಿಯು ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ನೀವೇಕೆ ಪ್ರೋತ್ಸಾಹಿಸಬೇಕು?

16, 17. ಬೈಬಲ್‌ ವಿದ್ಯಾರ್ಥಿಯು ಇಟ್ಟುಸಾಧಿಸಬಲ್ಲ ಕೆಲವು ಗುರಿಗಳು ಯಾವುವು?

18. ಬೈಬಲ್‌ ವಿದ್ಯಾರ್ಥಿಯು ಅಸ್ನಾತ ಪ್ರಚಾರಕನಾಗಲು ಅರ್ಹನಾದಾಗ ನೀವು ಅವನಿಗೆ ಇನ್ನಾವ ಸಹಾಯವನ್ನು ಕೊಡಬಲ್ಲಿರಿ?

19, 20. ನಮಗೆ ಯಾವ ಗುರಿ ಇರಬೇಕು ಮತ್ತು ಏಕೆ?

[ಪುಟ 17ರಲ್ಲಿರುವ ಚಿತ್ರ]

ನೀವು ಈ ಪುಸ್ತಕವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸುತ್ತಿದ್ದೀರೋ?

[ಪುಟ 18ರಲ್ಲಿರುವ ಚಿತ್ರ]

ಸಂಕ್ಷಿಪ್ತ ಸಂಭಾಷಣೆಯು ಬೈಬಲ್‌ ಜ್ಞಾನವನ್ನು ಪಡೆದುಕೊಳ್ಳುವಂತೆ ಒಬ್ಬ ವ್ಯಕ್ತಿಯನ್ನು ಪ್ರಚೋದಿಸಬಲ್ಲದು

[ಪುಟ 20ರಲ್ಲಿರುವ ಚಿತ್ರ]

ವಿದ್ಯಾರ್ಥಿಯ ಗಮನವನ್ನು ಬೈಬಲಿಗೆ ಸೆಳೆಯಲು ನೀವೇನು ಮಾಡಬಲ್ಲಿರಿ?

[ಪುಟ 21ರಲ್ಲಿರುವ ಚಿತ್ರ]

ಬೈಬಲ್‌ ವಿದ್ಯಾರ್ಥಿಯು ಪ್ರಗತಿ ಹೊಂದುವಂತೆ ಸಹಾಯಮಾಡಿರಿ