ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಶಾಯ ಪುಸ್ತಕದ ಮುಖ್ಯಾಂಶಗಳು—II

ಯೆಶಾಯ ಪುಸ್ತಕದ ಮುಖ್ಯಾಂಶಗಳು—II

ಯೆಹೋವನ ವಾಕ್ಯವು ಸಜೀವವಾದದ್ದು

ಯೆಶಾಯ ಪುಸ್ತಕದ ಮುಖ್ಯಾಂಶಗಳು​—⁠II

ಯೆಶಾಯನು ಒಬ್ಬ ಪ್ರವಾದಿಯಾಗಿ ತನ್ನ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸುತ್ತಿದ್ದಾನೆ. ಇಸ್ರಾಯೇಲ್‌ನ ಹತ್ತು ಕುಲಗಳ ವಿರುದ್ಧ ಅವನು ಘೋಷಿಸಿದ ವಿಷಯವು ಈಗಾಗಲೇ ನೆರವೇರಿದೆ. ಈಗ ಯೆರೂಸಲೇಮಿನ ಭವಿಷ್ಯದ ಕುರಿತು ಇನ್ನೂ ಕೆಲವು ವಿಷಯಗಳನ್ನು ಅವನು ಹೇಳಲಿದ್ದಾನೆ.

ಯೆರೂಸಲೇಮ್‌ ಪಟ್ಟಣವು ನಾಶವಾಗಲಿದೆ. ಅದರ ನಿವಾಸಿಗಳು ಸೆರೆಯಾಳುಗಳಾಗಿ ಒಯ್ಯಲ್ಪಡಲಿದ್ದಾರೆ. ಆದರೆ ಅದರ ನಿರ್ಜನಾವಸ್ಥೆಯು ತಾತ್ಕಾಲಿಕವಾಗಿರುವುದಷ್ಟೆ. ಸ್ವಲ್ಪ ಸಮಯ ಕಳೆದ ಬಳಿಕ ಸತ್ಯರಾಧನೆಯು ಪುನಃಸ್ಥಾಪಿಸಲ್ಪಡುವುದು. ಯೆಶಾಯ 36:1–66:24​ರಲ್ಲಿರುವ ಪ್ರಧಾನ ವಿಷಯಗಳು ಇವೇ ಆಗಿವೆ. * ಈ ಅಧ್ಯಾಯಗಳಲ್ಲಿರುವ ವಿಷಯಗಳನ್ನು ಪರಿಗಣಿಸುವುದರಿಂದ ನಾವು ಪ್ರಯೋಜನಹೊಂದುವೆವು. ಏಕೆಂದರೆ, ಈ ಭಾಗದಲ್ಲಿರುವ ಅನೇಕ ಪ್ರವಾದನೆಗಳು ನಮ್ಮ ದಿನಗಳಲ್ಲಿ ಪ್ರಮುಖ ಅಥವಾ ಕೊನೆಯ ನೆರವೇರಿಕೆಯನ್ನು ಹೊಂದುತ್ತಲಿವೆ. ಇಲ್ಲವೆ ಅವು ಹತ್ತಿರದ ಭವಿಷ್ಯತ್ತಿನಲ್ಲಿ ನೆರವೇರಲಿವೆ. ಇಷ್ಟಲ್ಲದೆ, ಯೆಶಾಯ ಪುಸ್ತಕದ ಈ ಭಾಗದಲ್ಲಿ ಮೆಸ್ಸೀಯನ ಕುರಿತಾದ ಮೈನವಿರೇಳಿಸುವ ಪ್ರವಾದನೆಗಳೂ ಇವೆ.

“ದಿನ ಬರುವದು”

(ಯೆಶಾಯ 36:1-39:8)

ಅರಸ ಹಿಜ್ಕೀಯನ ಆಳ್ವಿಕೆಯ 14ನೇ ವರ್ಷದಲ್ಲಿ (ಸಾ.ಶ.ಪೂ. 732) ಅಶ್ಶೂರ್ಯರು ಯೆಹೂದಕ್ಕೆ ಮುತ್ತಿಗೆ ಹಾಕುತ್ತಾರೆ. ಆದರೆ, ಯೆಹೋವನು ತಾನು ಯೆರೂಸಲೇಮನ್ನು ಕಾಪಾಡುವೆನೆಂದು ವಾಗ್ದಾನಿಸುತ್ತಾನೆ. ಯೆಹೋವನ ದೇವದೂತನೊಬ್ಬನೇ ಅಶ್ಶೂರ್ಯದ 1,85,000 ಸೈನಿಕರನ್ನು ಹತಿಸಿದಾಗ ಆಕ್ರಮಣದ ಬೆದರಿಕೆಗೆ ತೆರೆಬೀಳುತ್ತದೆ.

ಹಿಜ್ಕೀಯನು ಅಸ್ವಸ್ಥನಾಗುತ್ತಾನೆ. ಆಗ ಅವನು ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರಿಸುತ್ತಾನೆ. ಆತನು ಹಿಜ್ಕೀಯನನ್ನು ಗುಣಪಡಿಸಿದಲ್ಲದೆ, ಅವನ ಆಯುಷ್ಯಕ್ಕೆ ಇನ್ನೂ 15 ವರ್ಷಗಳನ್ನು ಕೂಡಿಸುತ್ತಾನೆ. ಇದನ್ನು ಕೇಳಿದ ಬಾಬೆಲಿನ ಅರಸನು ತನ್ನ ದೂತರನ್ನು ಅವನ ಬಳಿಗೆ ಕಳುಹಿಸಿ ಶುಭ ಹಾರೈಸುತ್ತಾನೆ. ಆ ದೂತರಿಗೆ ಹಿಜ್ಕೀಯನು ಬುದ್ಧಿಹೀನನಾಗಿ ತನ್ನ ಭಂಡಾರದಲ್ಲಿದ್ದ ಐಶ್ವರ್ಯವೆಲ್ಲವನ್ನು ತೋರಿಸುತ್ತಾನೆ. ಈಗ ಯೆಶಾಯನು ಯೆಹೋವನ ಸಂದೇಶವನ್ನು ಹಿಜ್ಕೀಯನಿಗೆ ತಿಳಿಸುತ್ತಾನೆ. ಅವನು ಹೇಳುವುದು: “ನಿನ್ನ ಪೂರ್ವಿಕರ ಕಾಲದಿಂದ ಇಂದಿನ ವರೆಗೆ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬೆಲಿಗೆ ಒಯ್ಯಲ್ಪಡುವ ದಿನ ಬರುವದು.” (ಯೆಶಾಯ 39:5, 6) 100 ವರ್ಷಗಳು ಕಳೆದು ಸ್ವಲ್ಪದರಲ್ಲೇ ಆ ಪ್ರವಾದನೆಯು ಸತ್ಯವಾಯಿತು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

38:8—ಮುಂದೆ ಹೋಗಿದ್ದ ನೆರಳು ಹಿಂದಕ್ಕೆ ಬಂದಂಥ ‘ಮೆಟ್ಲುಗಳು’ ಯಾವುವು? ಸಾ.ಶ.ಪೂ. ಎಂಟನೆಯ ಶತಮಾನದಷ್ಟಕ್ಕೆ ಐಗುಪ್ತ ಮತ್ತು ಬಾಬೆಲ್‌ಗಳಲ್ಲಿ ನೆರಳುಗಡಿಯಾರಗಳನ್ನು ಉಪಯೋಗಿಸಲಾಗುತ್ತಿತ್ತು. ಆದುದರಿಂದ ಈ ಮೆಟ್ಟಲುಗಳು ಹಿಜ್ಕೀಯನ ತಂದೆಯಾದ ಆಹಾಜನು ಪಡೆದುಕೊಂಡಿರಬಹುದಾದ ನೆರಳುಗಡಿಯಾರದಲ್ಲಿನ ಸಮಯಸೂಚಕ ರೇಖೆಗಳನ್ನು ಸೂಚಿಸಿರಸಾಧ್ಯವಿದೆ. ಇಲ್ಲವೆ, ಅರಮನೆಯೊಳಗೆ ಇದ್ದಿರಬಹುದಾದ ಸೋಪಾನಪಂಕ್ತಿಯ ಮೆಟ್ಟಲುಗಳನ್ನು ಸೂಚಿಸಿರಸಾಧ್ಯವಿದೆ. ಬಹುಶಃ ಆ ಮೆಟ್ಟಲುಗಳ ಪಕ್ಕದಲ್ಲಿದ್ದ ಸ್ತಂಭದ ನೆರಳು ಮೆಟ್ಟಲುಗಳ ಮೇಲೆ ಬೀಳುತ್ತಿದ್ದಿರಬಹುದು. ಇದರಿಂದ ಅವರು ಸಮಯವನ್ನು ಅಳೆದಿದ್ದಿರಸಾಧ್ಯವಿದೆ.

ನಮಗಾಗಿರುವ ಪಾಠಗಳು:

36:2, 3, 22. ಅರಮನೆಯ ಮೇಲ್ವಿಚಾರಕನ ಕೆಲಸದಿಂದ ಶೆಬ್ನನನ್ನು ತೆಗೆದುಹಾಕಿದರೂ ಹೊಸ ಮೇಲ್ವಿಚಾರಕನ ಲೇಖಕನಾಗಿ ಅವನನ್ನು ಅರಸನ ಸೇವೆಯಲ್ಲಿ ಮುಂದುವರಿಯುವಂತೆ ಅನುಮತಿಸಲಾಯಿತು. (ಯೆಶಾಯ 22:15, 19) ಯೆಹೋವನ ಸಂಸ್ಥೆಯಲ್ಲಿನ ಜವಾಬ್ದಾರಿಯುತ ಸ್ಥಾನದಿಂದ ಯಾವುದೇ ಕಾರಣಕ್ಕಾಗಿ ನಾವು ತೆಗೆದುಹಾಕಲ್ಪಟ್ಟಾಗ, ದೇವರು ಅನುಮತಿಸುವ ಯಾವುದೇ ಸ್ಥಾನದಲ್ಲಿ ಆತನಿಗೆ ಸೇವೆಮಾಡುವುದನ್ನು ನಾವು ಮುಂದುವರಿಸಬಾರದೋ?

37:1, 14, 15; 38:1, 2. ಸಂಕಷ್ಟದ ಸಮಯಗಳಲ್ಲಿ ಯೆಹೋವನಿಗೆ ಪ್ರಾರ್ಥಿಸಿ ಆತನಲ್ಲಿ ಸಂಪೂರ್ಣ ಭರವಸೆಯಿಡುವುದು ನಮಗೆ ವಿವೇಕಪ್ರದ.

37:15-20; 38:2, 3.ಅಶ್ಶೂರ್ಯದವರು ಯೆರೂಸಲೇಮಿನ ಮೇಲೆ ಆಕ್ರಮಣದ ಬೆದರಿಕೆ ಒಡ್ಡಿದಾಗ, ಯೆರೂಸಲೇಮಿನ ಸೋಲು ಯೆಹೋವನ ನಾಮಕ್ಕೆ ಕಳಂಕ ತರುವುದೆಂಬುದೇ ಹಿಜ್ಕೀಯನಿಗಿದ್ದ ಮುಖ್ಯ ಚಿಂತೆಯಾಗಿತ್ತು. ತನಗೆ ಮಾರಕ ಅಸ್ವಸ್ಥತೆಯಿದೆ ಎಂಬುದನ್ನು ತಿಳಿದಾಗಲೂ ಅವನ ಚಿಂತೆಯು ತನ್ನ ಸ್ವಂತ ವಿಷಯಗಳಿಗಿಂತ ಹೆಚ್ಚಾಗಿತ್ತು. ಅವನ ಮನಸ್ಸನ್ನು ಇನ್ನಷ್ಟು ಕುಗ್ಗಿಸಿದ ವಿಷಯವೇನೆಂದರೆ, ತಾನೊಂದು ವಂಶದ ಕುಡಿಯಿಲ್ಲದೆ ಸತ್ತರೆ ದಾವೀದನ ರಾಜವಂಶವು ಹೇಗೆ ಮುಂದುವರಿದೀತು ಎಂಬುದೇ. ಅಶ್ಶೂರ್ಯದವರ ವಿರುದ್ಧ ಯುದ್ಧಮಾಡಲು ಯಾರು ಮುಂದಾಳತ್ವ ವಹಿಸುವರು ಎಂಬ ಚಿಂತೆಯೂ ಅವನಿಗಿತ್ತು. ಹಿಜ್ಕೀಯನಂತೆ ನಾವು ಕೂಡ ನಮ್ಮ ಸ್ವಂತ ರಕ್ಷಣೆಗಿಂತಲೂ ಯೆಹೋವನ ನಾಮದ ಪವಿತ್ರೀಕರಣ ಮತ್ತು ಆತನ ಉದ್ದೇಶದ ನೆರವೇರಿಕೆಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತೇವೆ.

38:9-20. ನಮ್ಮ ಜೀವನದಲ್ಲಿ ಯೆಹೋವನನ್ನು ಸ್ತುತಿಸಲು ಶಕ್ತರಾಗಿರುವುದಕ್ಕಿಂತಲೂ ಮಿಗಿಲಾದ ವಿಷಯವೇ ಇಲ್ಲ ಎಂಬುದನ್ನು ಹಿಜ್ಕೀಯನ ಈ ಸ್ತುತಿಗೀತೆಯು ನಮಗೆ ಕಲಿಸುತ್ತದೆ.

“ಯೆರೂಸಲೇಮು ಕಟ್ಟಲ್ಪಡಲಿ”

(ಯೆಶಾಯ 40:1-59:21)

ಯೆರೂಸಲೇಮಿನ ನಾಶನ ಹಾಗೂ ಬಾಬೆಲಿನ ಬಂದಿವಾಸದ ಕುರಿತು ಮುಂತಿಳಿಸಿದ ಕೂಡಲೆ ಯೆಶಾಯನು ಪುನಃಸ್ಥಾಪನೆಯ ಕುರಿತು ಪ್ರವಾದಿಸುತ್ತಾನೆ. (ಯೆಶಾಯ 40:1, 2) ‘ಯೆರೂಸಲೇಮು ಕಟ್ಟಲ್ಪಡುವುದು’ ಎಂದು ಯೆಶಾಯ 44:28 ತಿಳಿಸುತ್ತದೆ. ಬಾಬೆಲಿನವರ ದೇವರುಗಳ ಬೊಂಬೆಗಳನ್ನು ಗಂಟುಮೂಟೆಗಳ ‘ಹೊರೆಗಳಂತೆ’ ಒಯ್ಯಲಾಗುವದು. (ಯೆಶಾಯ 46:1) ಬಾಬೆಲ್‌ ನಾಶವಾಗಲಿದೆ. ಯೆಶಾಯನು ಪ್ರವಾದಿಸಿ ಎರಡು ಶತಮಾನಗಳ ಬಳಿಕ ಇವೆಲ್ಲವು ಚಾಚೂತಪ್ಪದೇ ನೆರವೇರುತ್ತವೆ.

ಯೆಹೋವನು ತನ್ನ ಸೇವಕನನ್ನು ‘ಅನ್ಯಜನಾಂಗಗಳಿಗೆ ಬೆಳಕನ್ನಾಗಿ’ ನೀಡುವನು. (ಯೆಶಾಯ 49:6) ಬಾಬೆಲಿನ “ಆಕಾಶಮಂಡಲ” ಅಂದರೆ ಅದರ ಆಳುವ ವರ್ಗವು “ಹೊಗೆಯಂತೆ ಚದರಿಹೋಗುವದು.” ಅದರ ಪ್ರಜೆಗಳು “ಸೊಳ್ಳೆಗಳೋಪಾದಿಯಲ್ಲಿ ಸಾಯುವರು.” ಆದರೆ, ‘ಸೆರೆಬಿದ್ದ ಚೀಯೋನ್‌ ಕನ್ಯೆಯು ಆಕೆಯ ಕತ್ತಿನ ಪಾಶವನ್ನು ಬಿಚ್ಚಿಬಿಡುವಳು.’ (ಯೆಶಾಯ 51:6; 52:2) ಯೆಹೋವನ ಬಳಿ ಬಂದು ಆಲಿಸುವವರಿಗೆ ಆತನು ಹೇಳುವುದು: “ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.” (ಯೆಶಾಯ 55:3) ದೇವರ ನೀತಿಯ ಆವಶ್ಯಕತೆಗಳಿಗನುಸಾರ ಜೀವಿಸುವುದು ‘ಯೆಹೋವನಲ್ಲಿ ಉಲ್ಲಾಸಪಡುವಂತೆ’ ನಡೆಸುವುದು. (ಯೆಶಾಯ 58:14) ಆದರೆ ಜನರ ಅಪರಾಧಗಳೋ ‘ದೇವರಿಂದ ಅವರನ್ನು ಅಗಲಿಸುತ್ತವೆ.’—ಯೆಶಾಯ 59:2.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

40:27, 28—“ನನ್ನ ಮಾರ್ಗವು ಯೆಹೋವನಿಗೆ ಮರೆಯಾಗಿದೆ, ನನಗೆ ಸಿಕ್ಕಬೇಕಾದ ನ್ಯಾಯವು ನನ್ನ ದೇವರ ಲಕ್ಷ್ಯಕ್ಕೆ ಬಿದ್ದಿಲ್ಲವಲ್ಲಾ” ಎಂದು ಇಸ್ರಾಯೇಲ್‌ ಅಂದುಕೊಂಡದ್ದೇಕೆ? ತಾವು ಅನುಭವಿಸುತ್ತಿದ್ದ ಅನ್ಯಾಯವು ಯೆಹೋವನಿಗೆ ಕಾಣಿಸುವುದಿಲ್ಲ, ಮರೆಯಾಗಿದೆಯೆಂದು ಬಾಬೆಲಿನಲ್ಲಿದ್ದ ಕೆಲವು ಯೆಹೂದ್ಯರು ಭಾವಿಸಿದ್ದಿರಬಹುದು. ಆದರೆ, ಎಂದಿಗೂ ದಣಿದು ಬಳಲದ ಭೂನಿರ್ಮಾಣಿಕನಿಗೆ ಬಾಬೆಲ್‌ ನಿಲುಕದ ಸ್ಥಳವೇನಲ್ಲ ಎಂಬುದನ್ನು ಅವರಿಗೆ ಮರುಜ್ಞಾಪಿಸಲಾಯಿತು.

43:18-21—“ಹಳೇ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ” ಎಂದು ಯೆರೂಸಲೇಮಿಗೆ ಹಿಂದಿರುಗುತ್ತಿದ್ದ ಬಂದಿವಾಸಿಗಳಿಗೆ ಏಕೆ ಹೇಳಲಾಯಿತು? ಯೆಹೋವನು ಈ ಹಿಂದೆ ನಡೆಸಿದ ಬಿಡುಗಡೆಯ ಕೃತ್ಯಗಳನ್ನೆಲ್ಲ ಅವರು ಮರೆತುಬಿಡಬೇಕು ಎಂಬರ್ಥದಲ್ಲಿ ಇದನ್ನು ಹೇಳಲಿಲ್ಲ. ಬದಲಾಗಿ, ಸ್ವತಃ ಅನುಭವಿಸಲಿರುವ ‘ಹೊಸ ಕಾರ್ಯದ’ ಆಧಾರದ ಮೇಲೆ ಅವರು ಯೆಹೋವನನ್ನು ಸ್ತುತಿಸಬೇಕೆಂಬುದು ಆತನ ಬಯಕೆಯಾಗಿತ್ತು. ಅದು ಬಹುಶಃ ಅವರು ನೇರವಾದ ಅಡವಿಮಾರ್ಗದ ಮೂಲಕ ಯೆರೂಸಲೇಮಿಗೆ ಕೈಗೊಳ್ಳಲಿದ್ದ ಸುರಕ್ಷಿತ ಪ್ರಯಾಣದಂಥ ವಿಷಯವಾಗಿತ್ತು. ‘ಮಹಾ ಸಂಕಟವನ್ನು’ ಪಾರಾಗಿ ಬರುವ ‘ಮಹಾ ಸಮೂಹಕ್ಕೆ’ ಕೂಡ ಯೆಹೋವನನ್ನು ಮಹಿಮೆಪಡಿಸಲಿಕ್ಕಾಗಿ ಹೊಸದಾದ ಮತ್ತು ವೈಯಕ್ತಿಕ ಕಾರಣಗಳಿರುವುವು.—ಪ್ರಕಟನೆ 7:9, 14.

49:6—ಮೆಸ್ಸೀಯನ ಭೂಶುಶ್ರೂಷೆಯು ಇಸ್ರಾಯೇಲ್‌ ಪುತ್ರರಿಗೆ ಸೀಮಿತವಾಗಿದ್ದರೂ ಆತನು ‘ಅನ್ಯಜನಾಂಗಗಳಿಗೂ ಬೆಳಕಾಗಿರುವುದು’ ಹೇಗೆ? ಇದು ಹೇಗೆಂದು ಯೇಸುವಿನ ಮರಣದ ನಂತರದ ಸಂಭವಗಳು ತೋರಿಸುತ್ತವೆ. ಬೈಬಲ್‌ ಯೆಶಾಯ 49:6ನ್ನು ಯೇಸುವಿನ ಶಿಷ್ಯರಿಗೆ ಅನ್ವಯಿಸುತ್ತದೆ. (ಅ. ಕೃತ್ಯಗಳು 13:46, 47) ಇಂದು ಅಭಿಷಿಕ್ತ ಕ್ರೈಸ್ತರು ಮಹಾ ಸಮೂಹದ ನೆರವಿನೊಂದಿಗೆ ‘ಅನ್ಯಜನಾಂಗಗಳಿಗೆ ಬೆಳಕಾಗಿ’ “ಲೋಕದ ಕಟ್ಟಕಡೆಯ ವರೆಗೆ” ಜನರಿಗೆ ಜ್ಞಾನೋದಯವನ್ನು ಉಂಟುಮಾಡುತ್ತಿದ್ದಾರೆ.​—⁠ಮತ್ತಾಯ 24:14; 28:19, 20.

53:10—ತನ್ನ ಮಗನನ್ನು ಜಜ್ಜುವುದು ಯೆಹೋವನ ಸಂಕಲ್ಪವಾಗಿದ್ದದ್ದು [‘ಆನಂದವಾಗಿದ್ದದ್ದು,’ NW] ಯಾವಾರ್ಥದಲ್ಲಿ? ಕನಿಕರವೂ ಪರಾನುಭೂತಿಯೂ ಉಳ್ಳ ಯೆಹೋವ ದೇವರಿಗೆ ತನ್ನ ಮಗನು ಕಷ್ಟಾನುಭವಿಸುವುದನ್ನು ನೋಡುವುದು ಖಂಡಿತವಾಗಿ ನೋವನ್ನುಂಟುಮಾಡಿತು. ಹಾಗಿದ್ದರೂ, ಯೇಸುವಿನ ಮನಃಪೂರ್ವಕ ವಿಧೇಯತೆಯಲ್ಲಿ ಮತ್ತು ಅವನ ಕಷ್ಟಾನುಭವ ಹಾಗೂ ಮರಣವು ಏನನ್ನು ಸಾಧಿಸಲಿಕ್ಕಿತ್ತೋ ಅದರಲ್ಲಿ ಆತನು ಆನಂದಿಸಿದನು.—ಜ್ಞಾನೋಕ್ತಿ 27:11; ಯೆಶಾಯ 63:9.

53:11—ಯಾವ ಜ್ಞಾನದ ಮೂಲಕ ಮೆಸ್ಸೀಯನು “ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು”? ಈ ಜ್ಞಾನವು ಯೇಸು ಮನುಷ್ಯನಾಗಿ ಭೂಮಿಗೆ ಬಂದು ಅನ್ಯಾಯವಾಗಿ ಮರಣಪರ್ಯಂತ ಕಷ್ಟಾನುಭವಿಸಿದ್ದರ ಮೂಲಕ ಪಡೆದುಕೊಂಡದ್ದಾಗಿದೆ. (ಇಬ್ರಿಯ 4:15) ಹೀಗೆ, ಅವನು ವಿಮೋಚನಾ ಮೌಲ್ಯ ಯಜ್ಞವನ್ನು ಒದಗಿಸಿದನು. ಈ ಯಜ್ಞವು ಅಭಿಷಿಕ್ತ ಕ್ರೈಸ್ತರು ಮತ್ತು ಮಹಾ ಸಮೂಹದವರು ದೇವರ ಮುಂದೆ ನೀತಿಯ ನಿಲುವನ್ನು ಪಡೆದುಕೊಳ್ಳಲು ಅಗತ್ಯವಾಗಿತ್ತು.​—⁠ರೋಮಾಪುರ 5:19; ಯಾಕೋಬ 2:23, 25.

56:6—‘ಅನ್ಯದೇಶಿಯರು’ ಯಾರು ಮತ್ತು ಯಾವ ವಿಧದಲ್ಲಿ ಅವರು ‘[ಯೆಹೋವನ] ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ’? ಈ ‘ಅನ್ಯದೇಶಿಯರು’ ಯೇಸುವಿನ ‘ಬೇರೆ ಕುರಿಗಳಾಗಿದ್ದಾರೆ.’ (ಯೋಹಾನ 10:16) ಅವರು ಹೊಸ ಒಡಂಬಡಿಕೆಗೆ ಸಂಬಂಧಿಸಿದ ನಿಯಮಗಳಿಗೆ ವಿಧೇಯರಾಗಿ, ಅದರ ಮೂಲಕ ಮಾಡುವ ಎಲ್ಲ ಏರ್ಪಾಡುಗಳಿಗೆ ಸಂಪೂರ್ಣವಾಗಿ ಸಹಕರಿಸುವ ಅರ್ಥದಲ್ಲಿ ಆ ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ. ಅಲ್ಲದೆ, ಅಭಿಷಿಕ್ತ ಕ್ರೈಸ್ತರಿಗೆ ಸಿಗುವ ಅದೇ ಆಧ್ಯಾತ್ಮಿಕ ಆಹಾರವನ್ನು ಸೇವಿಸಿ, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಅವರಿಗೆ ಸಹಾಯಮಾಡುವ ಮೂಲಕವೂ ಆ ಒಡಂಬಡಿಕೆಯನ್ನು ಹಿಡಿದುಕೊಂಡಿದ್ದಾರೆ.

ನಮಗಾಗಿರುವ ಪಾಠಗಳು:

40:10-14, 26, 28. ಯೆಹೋವನು ಬಲಿಷ್ಠನೂ ಕೋಮಲನೂ ಆಗಿದ್ದಾನೆ. ಆತನು ಸರ್ವಶಕ್ತನೂ ಸರ್ವಜ್ಞಾನಿಯೂ ಆಗಿದ್ದಾನೆ. ಆತನ ತಿಳುವಳಿಕೆಯು ನಮ್ಮ ತಿಳಿವಳಿಕೆಗಿಂತಲೂ ಉನ್ನತ್ತೋನ್ನತವಾಗಿದೆ.

40:17, 23; 41:29; 44:9; 59:⁠4. ರಾಜಕೀಯ ಮೈತ್ರಿಗಳಾಗಲಿ ವಿಗ್ರಹಗಳಾಗಲಿ “ಶೂನ್ಯ” ಅಂದರೆ ನಿಷ್ಪ್ರಯೋಜಕವಾಗಿವೆ. ಅವುಗಳಲ್ಲಿ ಭರವಸೆಯಿಡುವುದು ವ್ಯರ್ಥವೇ ಸರಿ.

42:​18, 19; 43:⁠8. ದೇವರ ಲಿಖಿತ ವಾಕ್ಯವನ್ನು ನಾವು ಕಡೆಗಣಿಸುವುದು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದ ಮುಖಾಂತರ ದೇವರು ಕೊಡುವ ಮಾರ್ಗದರ್ಶನಕ್ಕೆ ನಾವು ಕಿವಿಗೊಡದಿರುವುದು ಆಧ್ಯಾತ್ಮಿಕವಾಗಿ ಕುರುಡರು ಮತ್ತು ಕಿವುಡರಾಗಿರುವುದಕ್ಕೆ ಸಮಾನವಾಗಿದೆ.​—⁠ಮತ್ತಾಯ 24:45.

43:25. ಯೆಹೋವನು ತನಗೋಸ್ಕರ ನಮ್ಮ ಪಾಪಗಳನ್ನು ಅಳಿಸಿಬಿಡುತ್ತಾನೆ. ಆದುದರಿಂದ, ಯೆಹೋವನ ನಾಮದ ಪವಿತ್ರೀಕರಣವೇ ಪ್ರಧಾನವಾಗಿದ್ದು, ನಾವು ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆ ಹೊಂದಿ ಜೀವವನ್ನು ಗಳಿಸುವುದು ಎರಡನೆಯ ಸ್ಥಾನದಲ್ಲಿದೆ.

44:8. ಬಂಡೆಯಂತೆ ದೃಢವಾಗಿಯೂ ಸ್ಥಿರವಾಗಿಯೂ ಇರುವ ಯೆಹೋವನ ಬೆಂಬಲ ನಮಗಿದೆ. ಆತನ ದೇವತ್ವದ ಬಗ್ಗೆ ಸಾಕ್ಷಿನೀಡಲು ನಾವೆಂದಿಗೂ ಭಯಪಡಬಾರದು!​—⁠2 ಸಮುವೇಲ 22:31, 32.

44:18-20. ವಿಗ್ರಹಾರಾಧನೆಯು ಭ್ರಷ್ಟ ಹೃದಯದ ಸೂಚನೆಯಾಗಿದೆ. ನಮ್ಮ ಹೃದಯದಲ್ಲಿ ಯೆಹೋವನಿಗಿರುವ ಸ್ಥಾನವನ್ನು ಬೇರೆ ಯಾವುದೂ ಆಕ್ರಮಿಸಬಾರದು.

46:10, 11. ‘ತನ್ನ ಸಂಕಲ್ಪವು ನಿಲ್ಲುವಂತೆ’ ಮಾಡುವ ಯೆಹೋವನ ಸಾಮರ್ಥ್ಯವು ಅಂದರೆ ತನ್ನ ಉದ್ದೇಶವನ್ನು ಕೈಗೂಡುವಂತೆ ಮಾಡುವುದು ಆತನ ದೇವತ್ವಕ್ಕಿರುವ ಮಹತ್ವದ ರುಜುವಾತಾಗಿದೆ.

48:17, 18; 57:19-21. ನಾವು ರಕ್ಷಣೆಗಾಗಿ ಯೆಹೋವನೆಡೆಗೆ ನೋಡಿ ಆತನನ್ನು ಸಮೀಪಿಸುವುದಾದರೆ ಮತ್ತು ಆತನ ಆಜ್ಞೆಗಳನ್ನೆಲ್ಲಾ ಪಾಲಿಸುವುದಾದರೆ ನಮ್ಮ ಶಾಂತಿಯು ತುಂಬಿ ಹರಿಯುವ ನದಿಯ ನೀರಿನಂತೆ ಸಮೃದ್ಧವಾಗಿರುವುದು. ನಮ್ಮ ನೀತಿಯ ಕೃತ್ಯಗಳು ಸಮುದ್ರದ ಅಲೆಗಳಷ್ಟು ಅಸಂಖ್ಯಾತವಾಗಿರುವವು. ಆದರೆ, ದೇವರ ವಾಕ್ಯಕ್ಕೆ ಕಿವಿಗೊಡದಿರುವವರು ‘ಅಲ್ಲೋಲಕಲ್ಲೋಲವಾದ ಸಮುದ್ರದಂತಿರುವರು.’ ಅವರಿಗೆ ಕಿಂಚಿತ್ತೂ ಶಾಂತಿಯಿರುವುದಿಲ್ಲ.

52:5, 6. ಸತ್ಯದೇವರು ಬಲಹೀನನು ಎಂದು ಬಾಬೆಲಿನವರು ತಪ್ಪಾಗಿ ನಿರ್ಣಯಿಸಿದರು. ತನ್ನ ಜನರ ಮೇಲೆ ಯೆಹೋವನಿಗಿದ್ದ ಅಸಮಾಧಾನವೇ ಇಸ್ರಾಯೇಲ್ಯರ ದಾಸತ್ವಕ್ಕೆ ಕಾರಣವೆಂಬುದನ್ನು ಅವರು ಗುರುತಿಸಲಿಲ್ಲ. ಇತರರಿಗೆ ಸಂಕಷ್ಟಗಳು ಬಂದಾಗ ಅದಕ್ಕಿರುವ ಕಾರಣದ ಬಗ್ಗೆ ನಾವು ದುಡುಕಿ ತೀರ್ಮಾನ ಮಾಡದಿರುವುದೇ ವಿವೇಕಯುತ.

52:7-9; 55:12, 13. ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆನಂದಿಸಲು ನಮಗೆ ಕಡಿಮೆಪಕ್ಷ ಮೂರು ಕಾರಣಗಳಿವೆ. ಆಧ್ಯಾತ್ಮಿಕವಾಗಿ ಹಸಿದಿರುವ ದೀನರಿಗೆ ನಮ್ಮ ಪಾದಗಳು ಅಂದವಾಗಿರುತ್ತವೆ. ನಾವು ಯೆಹೋವನನ್ನು “ಪ್ರತ್ಯಕ್ಷವಾಗಿ” ನೋಡುತ್ತೇವೆ ಅಂದರೆ ಆತನೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುತ್ತೇವೆ. ಆಧ್ಯಾತ್ಮಿಕ ಸಮೃದ್ಧಿಯನ್ನು ಸಹ ನಾವು ಅನುಭವಿಸುತ್ತೇವೆ.

52:11, 12. “ಯೆಹೋವನ ಆರಾಧನೆಯ ಉಪಕರಣಗಳನ್ನು” ಹೊರಲು ಅಂದರೆ ಪವಿತ್ರ ಸೇವೆಗಾಗಿ ಆತನು ಮಾಡುವ ಏರ್ಪಾಡುಗಳಲ್ಲಿ ಭಾಗವಹಿಸಲು ಅರ್ಹರಾಗಿರಬೇಕಾದರೆ ನಾವು ಆಧ್ಯಾತ್ಮಿಕವಾಗಿಯೂ ನೈತಿಕವಾಗಿಯೂ ಶುದ್ಧರಾಗಿರಲೇಬೇಕು.

58:1-14. ಕಪಟಭಕ್ತಿ ಮತ್ತು ನೀತಿಯ ಹೊರತೋರಿಕೆಯು ಪ್ರಯೋಜನವಿಲ್ಲದ್ದು. ಸತ್ಯಾರಾಧಕರು ಯಾವಾಗಲೂ ಪ್ರಾಮಾಣಿಕವಾದ ದೈವಿಕ ಭಕ್ತಿಯ ಮಾತುಗಳನ್ನೇ ಆಡುತ್ತಿರಬೇಕು. ಅಲ್ಲದೆ, ಸಹೋದರ ಪ್ರೀತಿಯನ್ನು ವ್ಯಕ್ತಪಡಿಸುವಂಥ ಕ್ರಿಯೆಗಳನ್ನೂ ಮಾಡುತ್ತಿರಬೇಕು.—ಯೋಹಾನ 13:35; 2 ಪೇತ್ರ 3:11.

59:16-19. ಯೆಹೋವನು ಮಾನವರ ವ್ಯವಹಾರಗಳನ್ನು ಅವಲೋಕಿಸುತ್ತಿದ್ದಾನೆ. ತನ್ನ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುವನು.

‘ಸುಂದರಕಿರೀಟವಾಗಿರುವಿ’

(ಯೆಶಾಯ 60:1–66:24)

ಪುರಾತನ ಸಮಯದಲ್ಲಿ ಮತ್ತು ನಮ್ಮ ಸಮಯದಲ್ಲಿನ ಸತ್ಯಾರಾಧನೆಯ ಪುನಃಸ್ಥಾಪನೆಗೆ ನಿರ್ದೇಶಿಸುತ್ತಾ ಯೆಶಾಯ 60:1 ಹೇಳುವುದು: “ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.” ಚೀಯೋನ್‌ ‘ಯೆಹೋವನ ಕೈಯಲ್ಲಿ ಸುಂದರಕಿರೀಟವಾಗಿರುವುದು.’​—⁠ಯೆಶಾಯ 62:3.

ಬಾಬೆಲಿನಲ್ಲಿ ಬಂದಿವಾಸಿಗಳಾಗಿರುವಾಗ ಪಶ್ಚಾತ್ತಾಪಪಡುವ ತನ್ನ ದೇಶದ ಜನರಿಗಾಗಿ ಯೆಶಾಯನು ಯೆಹೋವನಿಗೆ ಪ್ರಾರ್ಥಿಸುತ್ತಾನೆ. (ಯೆಶಾಯ 63:15-64:12) ಅವನು ದೇವರ ನಿಜ ಸೇವಕರ ಮತ್ತು ಸುಳ್ಳು ಸೇವಕರ ಮಧ್ಯೆಯಿರುವ ವ್ಯತ್ಯಾಸವನ್ನು ಹೇಳುತ್ತಾನೆ. ನಂತರ, ಯೆಹೋವನು ತನ್ನನ್ನು ಸೇವಿಸುವವರನ್ನು ಹೇಗೆ ಆಶೀರ್ವದಿಸುವನೆಂದು ಆ ಪ್ರವಾದಿಯು ತಿಳಿಸುತ್ತಾನೆ.​—⁠ಯೆಶಾಯ 65:1-66:24.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

61:8, 9—“ನಿತ್ಯವಾದ ಒಡಂಬಡಿಕೆ” ಏನಾಗಿದೆ ಮತ್ತು “ಸಂತತಿ” ಯಾರಾಗಿದ್ದಾರೆ? ಇದು ಅಭಿಷಿಕ್ತ ಕ್ರೈಸ್ತರೊಂದಿಗೆ ಯೆಹೋವನು ಮಾಡಿಕೊಂಡಿರುವ ಹೊಸ ಒಡಂಬಡಿಕೆಯಾಗಿದೆ. ‘ಸಂತತಿಯು’ ಅಭಿಷಿಕ್ತ ಕ್ರೈಸ್ತರ ಸಂದೇಶಕ್ಕೆ ಪ್ರತಿಕ್ರಿಯಿಸುವ ಲಕ್ಷಾಂತರ ಮಂದಿಯಾದ “ಬೇರೆ ಕುರಿಗಳು” ಆಗಿದ್ದಾರೆ.​—⁠ಯೋಹಾನ 10:16.

63:5—ದೇವರ ರೌದ್ರವು ಆತನಿಗೆ ಆಧಾರವಾಗುವುದು ಹೇಗೆ? ದೇವರ ರೌದ್ರವು ಆತನ ನಿಯಂತ್ರಣದಲ್ಲಿದೆ. ಅದು ನ್ಯಾಯವಾದ ಕೋಪವಾಗಿದೆ. ನೀತಿಯುತ ನ್ಯಾಯತೀರ್ಪನ್ನು ತರುವಂತೆ ಆತನ ರೌದ್ರವು ಆತನನ್ನು ಬೆಂಬಲಿಸುತ್ತದೆ ಮತ್ತು ಪ್ರಚೋದಿಸುತ್ತದೆ.

ನಮಗಾಗಿರುವ ಪಾಠಗಳು:

64:6. ಅಪರಿಪೂರ್ಣ ಮಾನವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾರರು. ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಕೊಡುವ ಸಂಬಂಧದಲ್ಲಿ ಅವರ ಸತ್ಕಾರ್ಯಗಳು ಹೊಲೆಯಾದ ಬಟ್ಟೆಗೆ ಸಮಾನವಾಗಿವೆ.—ರೋಮಾಪುರ 3:23, 24.

65:13, 14. ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಆಶೀರ್ವದಿಸುವನು. ಆತನು ಅವರ ಆಧ್ಯಾತ್ಮಿಕ ಆವಶ್ಯಕತೆಯನ್ನು ಹೇರಳವಾಗಿ ತೃಪ್ತಿಪಡಿಸುವನು.

66:3-5. ಕಪಟಾಚಾರವನ್ನು ಯೆಹೋವನು ದ್ವೇಷಿಸುತ್ತಾನೆ.

“ಉಲ್ಲಾಸಿಸಿರಿ”

ಬಂದಿವಾಸಿಗಳಾಗಿ ಬಾಬೆಲಿನಲ್ಲಿ ಜೀವಿಸುತ್ತಿದ್ದ ನಂಬಿಗಸ್ತ ಯೆಹೂದ್ಯರಿಗೆ ಪುನಃಸ್ಥಾಪನೆಯ ಕುರಿತಾದ ಪ್ರವಾದನೆಗಳು ಎಷ್ಟೊಂದು ಸಾಂತ್ವನವನ್ನು ನೀಡಿದವು! “ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು” ಎಂದು ಯೆಹೋವನು ಹೇಳುತ್ತಾನೆ.​—⁠ಯೆಶಾಯ 65:18.

ಕತ್ತಲು ಭೂಮಿಯನ್ನು ಆವರಿಸಿರುವ ಮತ್ತು ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿರುವ ಸಮಯದಲ್ಲಿ ನಾವು ಕೂಡ ಜೀವಿಸುತ್ತಿದ್ದೇವೆ. (ಯೆಶಾಯ 60:2) ಇವು ‘ಕಠಿಣಕಾಲಗಳಾಗಿವೆ.’ (2 ತಿಮೊಥೆಯ 3:1) ಆದುದರಿಂದ ಬೈಬಲಿನ ಯೆಶಾಯ ಪುಸ್ತಕದಲ್ಲಿ ಕೊಡಲಾಗಿರುವ ಯೆಹೋವನ ರಕ್ಷಣೆಯ ಸಂದೇಶವು ನಮಗೆ ಬಹಳ ಉತ್ತೇಜನ ಕೊಡುತ್ತದೆ.—ಇಬ್ರಿಯ 4:12. (w07 1/15)

[ಪಾದಟಿಪ್ಪಣಿ]

^ ಪ್ಯಾರ. 4 ಯೆಶಾಯ 1:1–35:10​ರ ವರೆಗಿನ ಚರ್ಚೆಗಾಗಿ ಡಿಸೆಂಬರ್‌ 1, 2006ರ ಕಾವಲಿನಬುರುಜುವಿನಲ್ಲಿರುವ “ಯೆಹೋವನ ವಾಕ್ಯವು ಸಜೀವವಾದದ್ದು​—⁠ಯೆಶಾಯ ಪುಸ್ತಕದ ಮುಖ್ಯಾಂಶಗಳು​—⁠I” ಎಂಬ ಲೇಖನವನ್ನು ನೋಡಿರಿ.

[ಪುಟ 8ರಲ್ಲಿರುವ ಚಿತ್ರ]

ಅಶ್ಶೂರ್ಯದವರಿಂದ ರಕ್ಷಿಸುವಂತೆ ಹಿಜ್ಕೀಯನು ಪ್ರಾರ್ಥಿಸಿದಕ್ಕೆ ಪ್ರಧಾನ ಕಾರಣ ಏನೆಂಬುದು ನಿಮಗೆ ಗೊತ್ತೋ?

[ಪುಟ 11ರಲ್ಲಿರುವ ಚಿತ್ರ]

“ಶುಭಸಮಾಚಾರವನ್ನು ತಂದು ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ!”