ಯೆಹೋವನು ಕೃತಜ್ಞತೆಯ ದೇವರು
ಯೆಹೋವನು ಕೃತಜ್ಞತೆಯ ದೇವರು
‘ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನು ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.’—ಇಬ್ರಿಯ 6:10.
ಯೆಹೋವನು ತನ್ನ ಚಿತ್ತವನ್ನು ಯಥಾರ್ಥವಾಗಿ ಮಾಡಬಯಸುವವರನ್ನು ತುಂಬಾ ಮಾನ್ಯಮಾಡುತ್ತಾನೆ. ಅವರಿಗೆ ಹೇರಳವಾದ ಪ್ರತಿಫಲವನ್ನೂ ಕೊಡುತ್ತಾನೆ. (ಇಬ್ರಿಯ 11:6) ನಂಬಿಗಸ್ತನಾಗಿದ್ದ ಬೋವಜನಿಗೆ ದೇವರ ಈ ಸೊಗಸಾದ ಗುಣದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ, ವಿಧವೆಯಾಗಿದ್ದ ತನ್ನ ಅತ್ತೆಯನ್ನು ಪ್ರೀತಿಯಿಂದ ಪರಾಮರಿಸಿದ ಮೋವಾಬ್ಯಳಾದ ರೂತಳಿಗೆ ಅವನಂದದ್ದು: “ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ; . . . ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ.” (ರೂತ 2:12) ಹಾಗಾದರೆ, ರೂತಳನ್ನು ದೇವರು ಆಶೀರ್ವದಿಸಿದನೊ? ನಿಶ್ಚಯವಾಗಿಯೂ ಆಶೀರ್ವದಿಸಿದನು! ಆಕೆಯ ವೃತ್ತಾಂತ ಬೈಬಲ್‌ನಲ್ಲಿಯೇ ದಾಖಲೆಯಾಗಿದೆಯಲ್ಲಾ! ಇದಲ್ಲದೆ, ಆಕೆ ಬೋವಜನನ್ನು ಮದುವೆಯಾಗಿ ಅರಸ ದಾವೀದ ಮತ್ತು ಯೇಸು ಕ್ರಿಸ್ತನಿಗೆ ಪೂರ್ವಜಳಾದಳು. (ರೂತಳು 4:13, 17; ಮತ್ತಾಯ 1:5, 6, 16) ಯೆಹೋವನು ತನ್ನ ಸೇವಕರಿಗೆ ಕೃತಜ್ಞತೆ ತೋರಿಸುವಾತನು ಎಂಬುದಕ್ಕೆ ಬೈಬಲಿನಲ್ಲಿರುವ ಅನೇಕ ದೃಷ್ಟಾಂತಗಳಲ್ಲಿ ಇದು ಒಂದಾಗಿದೆ ಅಷ್ಟೆ.
2 ತಾನು ಕೃತಜ್ಞತೆಯನ್ನು ತೋರಿಸದಿದ್ದರೆ ಅದು ಅನ್ಯಾಯವಾಗಿರುವುದೆಂದು ಯೆಹೋವನು ಎಣಿಸುತ್ತಾನೆ. ಇಬ್ರಿಯ 6:10 ಹೇಳುವುದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” ಈ ಹೇಳಿಕೆಯಲ್ಲಿ ಗಮನಾರ್ಹವಾಗಿರುವುದೇನು? ತನ್ನ ಸಮರ್ಪಿತ ಜನರು ಪಾಪಿಗಳಾಗಿದ್ದು ತನ್ನ ಮಹಿಮೆಯನ್ನು ಹೊಂದದೆ ಹೋಗಿದ್ದರೂ ದೇವರು ಅವರಿಗೆ ಕೃತಜ್ಞತೆಯನ್ನು ತೋರಿಸುತ್ತಾನೆ ಎಂಬುದೇ.—ರೋಮಾಪುರ 3:23.
3 ನಾವು ಅಪರಿಪೂರ್ಣರಾಗಿ ಇರುವುದರಿಂದ, ನಮ್ಮ ದೈವಿಕ ಭಕ್ತಿಯ ಕಾರ್ಯಗಳು ಯಾವ ಮೂಲೆಗೆ, ಅವು ದೇವಾಶೀರ್ವಾದಕ್ಕೆ ಅರ್ಹವೇ ಅಲ್ಲ ಎಂಬ ಭಾವನೆ ನಮಗೆ ಬರಬಹುದು. ಆದರೆ ಯೆಹೋವನಿಗೆ ನಮ್ಮ ಉದ್ದೇಶಗಳು ಮತ್ತು ಸ್ಥಿತಿಗತಿಗಳು ಚೆನ್ನಾಗಿ ತಿಳಿದಿವೆ. ನಮ್ಮ ಪೂರ್ಣಪ್ರಾಣದ ಸೇವೆಯನ್ನು ಆತನು ನಿಜವಾಗಿಯೂ ಮಾನ್ಯಮಾಡುತ್ತಾನೆ. (ಮತ್ತಾಯ 22:37) ಉದಾಹರಣೆಗಾಗಿ ಒಬ್ಬ ತಾಯಿಯನ್ನು ತೆಗೆದುಕೊಳ್ಳಿ. ತನ್ನ ಮೇಜಿನ ಮೇಲೆ ಅಷ್ಟೇನು ದುಬಾರಿಯಲ್ಲದ ಒಂದು ಸರ ಇರುವುದನ್ನು ಅವಳು ನೋಡುತ್ತಾಳೆ. ‘ಇದೊಂದು ಸಾಧಾರಣ ಸರ’ ಎಂದು ಹೇಳಿ ಆಕೆ ಅದನ್ನು ಬದಿಗೆ ತಳ್ಳಬಹುದಿತ್ತು. ಆದರೆ ಅವಳು ಹಾಗೆ ಮಾಡುವುದಿಲ್ಲ. ಏಕೆಂದರೆ ಅದರೊಂದಿಗಿರುವ ಕಾರ್ಡ್‌ನಿಂದ ಆ ಉಡುಗೊರೆ ಆಕೆಯ ಪುಟಾಣಿ ಮಗಳ ಉಡುಗೊರೆಯೆಂದೂ ಅವಳದನ್ನು ತನ್ನೆಲ್ಲಾ ಕೂಡಿಟ್ಟ ಹಣದಿಂದ ಖರೀದಿಸಿದ್ದಾಳೆಂದೂ ಗೊತ್ತಾಗುತ್ತದೆ. ಈಗ ಆ ತಾಯಿಯ ದೃಷ್ಟಿಯಲ್ಲಿ ಆ ಉಡುಗೊರೆ ತುಂಬ ಅಮೂಲ್ಯವಾಗಿರುತ್ತದೆ. ಆಕೆ ತನ್ನ ಮುದ್ದು ಮಗಳನ್ನು ಅಪ್ಪಿಕೊಂಡು ತುಂಬು ಹೃದಯದಿಂದ ಕೃತಜ್ಞತೆಯನ್ನು ಹೇಳುವಳು. ಆಕೆಯ ಕಣ್ಣುಗಳು ತುಂಬಿ ಬರಬಹುದು.
4 ಯೆಹೋವನು ನಮ್ಮ ಉದ್ದೇಶಗಳನ್ನು ಮತ್ತು ಇತಿಮಿತಿಗಳನ್ನು ಪೂರ್ಣವಾಗಿ ಅರಿತಿರುವುದರಿಂದ, ಸ್ವಲ್ಪವಾಗಲಿ ಹೆಚ್ಚಾಗಲಿ ನಮ್ಮಿಂದಾದಷ್ಟು ಅತ್ಯುತ್ತಮವಾದುದನ್ನು ನಾವು ಕೊಡುವಾಗ ಆತನದನ್ನು ಮಾನ್ಯಮಾಡುತ್ತಾನೆ. ಈ ಸಂಬಂಧದಲ್ಲಿ, ಯೇಸು ತನ್ನ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು. ಲೂಕ 21:1-4.
ಎರಡು ಕಾಸು ಹಾಕಿದ ವಿಧವೆಯ ಕುರಿತು ಬೈಬಲಿನಲ್ಲಿರುವ ವೃತ್ತಾಂತವನ್ನು ನೆನಪಿಸಿಕೊಳ್ಳಿರಿ. “ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಕಂಡನು. ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕಲು ಆತನು ಅದನ್ನು ನೋಡಿ—ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು ಅಂದನು.”—5 ಹೌದು, ವಿಧವೆಯೂ ಬಡವಳೂ ಆಗಿದ್ದ ಆ ಸ್ತ್ರೀಯ ಸ್ಥಿತಿಗತಿಗಳನ್ನು ಯೇಸು ಬಲ್ಲವನಾಗಿದ್ದನು. ಆದುದರಿಂದ, ಯೇಸು ಆಕೆಯ ಕಾಣಿಕೆಯ ನಿಜ ಮೌಲ್ಯವನ್ನು ಅರಿತು ಬಹಳವಾಗಿ ಗಣ್ಯಮಾಡಿದನು. ಯೆಹೋವನು ಕೂಡ ಹೀಗೆಯೇ ಗಣ್ಯಮಾಡುತ್ತಾನೆಂದು ನಾವು ಹೇಳಸಾಧ್ಯವಿದೆ. (ಯೋಹಾನ 14:9) ಹೀಗಿರುವಾಗ, ನಿಮ್ಮ ಸ್ಥಿತಿಗತಿಗಳು ಹೇಗೆಯೇ ಇರಲಿ, ನಮ್ಮ ಕೃತಜ್ಞತಾಭಾವದ ದೇವರ ಮತ್ತು ಆತನ ಪುತ್ರನ ಅನುಗ್ರಹವನ್ನು ನೀವು ಪಡೆಯಬಲ್ಲಿರಿ ಎಂಬುದು ಪ್ರೋತ್ಸಾಹನೀಯವಲ್ಲವೆ?
ದೇವಭಯವಿದ್ದ ಕಂಚುಕಿಗೆ ಯೆಹೋವನು ಕೊಟ್ಟ ಪ್ರತಿಫಲ
6 ಯೆಹೋವನು ತನ್ನ ಚಿತ್ತವನ್ನು ಮಾಡುವವರಿಗೆ ಪ್ರತಿಫಲ ಕೊಡುತ್ತಾನೆಂಬುದನ್ನು ಶಾಸ್ತ್ರವಚನಗಳು ಪದೇಪದೇ ತೋರಿಸುತ್ತವೆ. ದೇವಭಯವಿದ್ದ ಎಬೆದ್ಮೆಲೆಕನಿಗೆ ಯೆಹೋವನು ಹೇಗೆ ಪ್ರತಿಫಲವನ್ನು ಕೊಟ್ಟನೆಂಬುದನ್ನು ಪರಿಗಣಿಸಿರಿ. ಎಬೆದ್ಮೆಲೆಕನು ಯೆಹೂದದ ಅಪನಂಬಿಗಸ್ತ ರಾಜ ಚಿದ್ಕೀಯನ ಅರಮನೆಯ ಸೇವಕನೂ ಯೆರೆಮೀಯನ ಸಮಕಾಲೀನನೂ ಆಗಿದ್ದನು. ಪ್ರವಾದಿ ಯೆರೆಮೀಯನನ್ನು ಯೆಹೂದದ ಪ್ರಭುಗಳು ರಾಜದ್ರೋಹಿ ಎಂದು ಸುಳ್ಳು ಆರೋಪಹೊರಿಸಿ, ಹೊಟ್ಟೆಗಿಲ್ಲದೆ ಸಾಯುವಂತೆ ಬಾವಿಯೊಳಗೆ ದೊಬ್ಬಿದ್ದಾರೆಂದು ಎಬೆದ್ಮೆಲೆಕನಿಗೆ ತಿಳಿದುಬಂತು. (ಯೆರೆಮೀಯ 38:1-7) ಯೆರೆಮೀಯನು ಸಾರಿದ ಸಂದೇಶಕ್ಕಾಗಿಯೇ ಅವನನ್ನು ಕಟುವಾಗಿ ದ್ವೇಷಿಸಲಾಗಿದೆ ಎಂದು ತಿಳಿದಿದ್ದ ಎಬೆದ್ಮೆಲೆಕನು ತನ್ನ ಸ್ವಂತ ಜೀವವನ್ನು ಅಪಾಯಕ್ಕೊಡ್ಡುತ್ತ ರಾಜನ ಸನ್ನಿಧಿಗೆ ಹೋಗಿ ಬೇಡಿಕೊಂಡನು. ಅವನು ಧೈರ್ಯದಿಂದ ಮಾತಾಡುತ್ತ ಅರಸನಿಗೆ ಹೇಳಿದ್ದು: “ಎನ್ನೊಡೆಯನೇ, ಅರಸನೇ, ಇವರು ಪ್ರವಾದಿಯಾದ ಯೆರೆಮೀಯನಿಗೆ ಮಾಡಿದ್ದೆಲ್ಲಾ ದುಷ್ಟಕಾರ್ಯವೇ ಸರಿ, ಅವನನ್ನು ಬಾವಿಯಲ್ಲಿ ಹಾಕಿದ್ದಾರೆ; ಅವನು ಆಹಾರವಿಲ್ಲದೆ ಬಿದ್ದಲ್ಲೇ ಸಾಯುವದು ಖಂಡಿತ.” ಬಳಿಕ ರಾಜಾಜ್ಞೆಯಂತೆ ಎಬೆದ್ಮೆಲೆಕನು 30 ಮಂದಿಯನ್ನು ಕರೆದುಕೊಂಡು ಹೋಗಿ ದೇವರ ಪ್ರವಾದಿಯನ್ನು ಕಾಪಾಡಿದನು.—ಯೆರೆಮೀಯ 38:8-13.
7 ಎಬೆದ್ಮೆಲೆಕನು ನಂಬಿಕೆಯಿಂದ ವರ್ತಿಸಿದ್ದನ್ನು ಯೆಹೋವನು ನೋಡಿದನು. ಈ ನಂಬಿಕೆಯೇ ತನಗಿದ್ದ ಯಾವುದೇ ಭಯವನ್ನು ಜಯಿಸುವಂತೆ ಅವನಿಗೆ ಸಹಾಯಮಾಡಿತು. ಯೆಹೋವನು ತನ್ನ ಕೃತಜ್ಞತೆಯನ್ನು ತೋರಿಸುತ್ತ ಯೆರೆಮೀಯನ ಮೂಲಕ ಎಬೆದ್ಮೆಲೆಕನಿಗೆ ಹೇಳಿದ್ದು: “ಆಹಾ, ನಾನು ನುಡಿದ ಮೇಲನ್ನಲ್ಲ, ನುಡಿದ ಕೇಡನ್ನೇ ಈ ಪಟ್ಟಣದ ಮೇಲೆ ಬರಮಾಡುವೆನು; . . . ಆ ದಿನದಲ್ಲಿ ನಾನು ನಿನ್ನನ್ನು ಉದ್ಧರಿಸುವೆನು; ನೀನು ಹೆದರುವ ಮನುಷ್ಯರ ಕೈಗೆ ಸಿಕ್ಕುವದಿಲ್ಲ . . . ನೀನು ನನ್ನಲ್ಲಿ ಭರವಸವಿಟ್ಟಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು; ನೀನು . . . ನಿನ್ನ ಪ್ರಾಣವನ್ನು ಸೆಳಕೊಂಡು ಹೋಗುವಿ.” (ಯೆರೆಮೀಯ 39:16-18) ಹೌದು, ಯೆಹೋವನು ಎಬೆದ್ಮೆಲೆಕನನ್ನೂ ಯೆರೆಮೀಯನನ್ನೂ ಯೆಹೂದದ ದುಷ್ಟ ಪ್ರಭುಗಳ ಕೈಯಿಂದ ಮತ್ತು ತರುವಾಯ ಯೆರೂಸಲೇಮನ್ನು ನೆಲಸಮಮಾಡಿದ ಬಾಬೆಲಿನವರಿಂದ ತಪ್ಪಿಸಿದನು. “[ಯೆಹೋವನು] ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು” ಎಂದು ಕೀರ್ತನೆ 97:10 ಹೇಳುತ್ತದೆ.
“ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು”
8 ನಮ್ಮ ದೇವಭಕ್ತಿಯ ಅಭಿವ್ಯಕ್ತಿಗಳನ್ನು ಯೆಹೋವನು ಗಣ್ಯಮಾಡಿ ಬಹು ಅಮೂಲ್ಯವೆಂದೆಣಿಸುತ್ತಾನೆ ಎಂಬುದಕ್ಕೆ ಇನ್ನೊಂದು ರುಜುವಾತನ್ನು ಪ್ರಾರ್ಥನೆಯ ಕುರಿತು ಬೈಬಲು ಏನನ್ನುತ್ತದೊ ಅದರಿಂದ ನೋಡಸಾಧ್ಯವಿದೆ. “ಶಿಷ್ಟರ ಬಿನ್ನಪ [ದೇವರಿಗೆ] ಒಪ್ಪಿತ” ಎಂದನು ಒಬ್ಬ ವಿವೇಕಿ. (ಜ್ಞಾನೋಕ್ತಿ 15:8) ಯೇಸುವಿನ ದಿನಗಳಲ್ಲಿ ಅನೇಕ ಧಾರ್ಮಿಕ ನಾಯಕರು ಬಹಿರಂಗವಾಗಿ ಪ್ರಾರ್ಥಿಸುತ್ತಿದ್ದರು. ಆದರೆ ನಿಜ ಧರ್ಮಶ್ರದ್ಧೆಯಿಂದಲ್ಲ ಬದಲಿಗೆ ಜನರನ್ನು ಮೆಚ್ಚಿಸುವ ಕಾರಣದಿಂದಲೇ. ಯೇಸು ಹೇಳಿದ್ದು: “ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಕ್ಕೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.”—ಮತ್ತಾಯ 6:5, 6.
9 ಯೇಸು ಬಹಿರಂಗ ಪ್ರಾರ್ಥನೆಯನ್ನು ಖಂಡಿಸಿದನೆಂದು ಇದರ ಅರ್ಥವಲ್ಲ. ಏಕೆಂದರೆ, ಕೆಲವು ಸಂದರ್ಭಗಳಲ್ಲಿ ಅವನೇ ಬಹಿರಂಗವಾಗಿ ಪ್ರಾರ್ಥಿಸಿದನು. (ಲೂಕ 9:16) ಇತರರನ್ನು ಪ್ರಭಾವಿಸಿ ಮೆಚ್ಚಿಸುವ ಉದ್ದೇಶವಿಲ್ಲದೆ ಯಥಾರ್ಥ ಹೃದಯದಿಂದ ನಾವು ಪ್ರಾರ್ಥಿಸುವಲ್ಲಿ ಯೆಹೋವನು ಅದನ್ನು ಆಳವಾಗಿ ಮಾನ್ಯಮಾಡುತ್ತಾನೆ. ಆದರೆ, ದೇವರನ್ನು ನಾವು ಎಷ್ಟು ಆಳವಾಗಿ ಪ್ರೀತಿಸುತ್ತೇವೆ ಮತ್ತು ಆತನಲ್ಲಿ ಎಷ್ಟು ಭರವಸೆಯನ್ನಿಟ್ಟಿದ್ದೇವೆ ಎಂಬುದನ್ನು ತೋರಿಸಿಕೊಡುವುದು ನಮ್ಮ ಖಾಸಗಿ ಪ್ರಾರ್ಥನೆಗಳೇ. ಆದುದರಿಂದ, ಯೇಸು ಅನೇಕವೇಳೆ ಪ್ರಾರ್ಥನೆ ಮಾಡಲಿಕ್ಕಾಗಿ ಏಕಾಂತವಾದ ಸ್ಥಳಗಳಿಗಾಗಿ ಹುಡುಕಿದ್ದು ಆಶ್ಚರ್ಯವಲ್ಲ. ಒಮ್ಮೆ ಅವನು “ಮುಂಜಾನೆ ಇನ್ನೂ ಮೊಬ್ಬಿರುವಾಗ” ಪ್ರಾರ್ಥಿಸಿದನು. ಇನ್ನೊಮ್ಮೆ ಅವನು “ಪ್ರಾರ್ಥನೆಮಾಡುವದಕ್ಕೆ ಏಕಾಂತವಾಗಿ ಬೆಟ್ಟವನ್ನು ಹತ್ತಿದನು.” ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಆರಿಸಿಕೊಳ್ಳುವ ಮೊದಲು ಅವನೊಬ್ಬನೆ ರಾತ್ರಿಯಿಡೀ ಪ್ರಾರ್ಥಿಸಿದನು.—ಮಾರ್ಕ 1:35; ಮತ್ತಾಯ 14:23; ಲೂಕ 6:12, 13.
10 ತನ್ನ ಕುಮಾರನು ಮನದಾಳದಿಂದ ಪ್ರಾರ್ಥನೆ ಮಾಡಿದಾಗ ಯೆಹೋವನು ಎಷ್ಟು ಲಕ್ಷ್ಯಕೊಟ್ಟು ಕೇಳಿರಬೇಕೆಂದು ಯೋಚಿಸಿ ನೋಡಿರಿ! ಹೌದು, ಕೆಲವು ಬಾರಿ ಯೇಸು “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ” ಪ್ರಾರ್ಥನೆ ಮಾಡಿದಾಗ “ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” (ಇಬ್ರಿಯ 5:7; ಲೂಕ 22:41-44) ಅದೇ ರೀತಿಯಲ್ಲಿ ನಾವು ಸಹ ನಮ್ಮ ಭಾವನೆಗಳನ್ನು ಮನದಾಳದಿಂದ ತೋಡಿಕೊಳ್ಳುತ್ತಾ ಯಥಾರ್ಥವಾಗಿ ಪ್ರಾರ್ಥಿಸುವಾಗ ಸ್ವರ್ಗದಲ್ಲಿರುವ ನಮ್ಮ ತಂದೆಯು ಅವುಗಳನ್ನು ಲಕ್ಷ್ಯಕೊಟ್ಟು ಕೇಳುವನು ಎಂದು ನಿಶ್ಚಯದಿಂದಿರಸಾಧ್ಯವಿದೆ. ಮಾತ್ರವಲ್ಲ, ಅವುಗಳನ್ನು ಬಹಳವಾಗಿ ಮಾನ್ಯಮಾಡುವನೆಂಬ ಪೂರ್ಣ ಭರವಸೆ ನಮಗಿರಬಲ್ಲದು. ಹೌದು, “ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.”—ಕೀರ್ತನೆ 145:18.
11 ನಾವು ಅಂತರಂಗದಲ್ಲಿ ಪ್ರಾರ್ಥಿಸುವಾಗ ಅದನ್ನು ಯೆಹೋವನು ಮಾನ್ಯಮಾಡುವಲ್ಲಿ ನಾವು ಅಂತರಂಗದಲ್ಲಿ ಆತನಿಗೆ ವಿಧೇಯರಾಗುವಾಗ ಆತನು ಇನ್ನೆಷ್ಟು ಮಾನ್ಯಮಾಡುವನು! ನಾವು ಏಕಾಂತದಲ್ಲಿ ಏನು ಮಾಡುತ್ತೇವೆಂಬುದು ಯೆಹೋವನಿಗೆ ಖಂಡಿತವಾಗಿಯು ತಿಳಿದದೆ. (1 ಪೇತ್ರ 3:12) ವಾಸ್ತವದಲ್ಲಿ, ನಾವು ಏಕಾಂತದಲ್ಲಿರುವಾಗ ನಂಬಿಗಸ್ತರೂ ವಿಧೇಯರೂ ಆಗಿರುವುದು ನಾವು ‘ಸಂಪೂರ್ಣಹೃದಯದಿಂದ’ ಯೆಹೋವನನ್ನು ಆರಾಧಿಸುತ್ತಿದ್ದೇವೆ ಎಂಬುದಕ್ಕೆ ಗುರುತಾಗಿದೆ. ಅಂದರೆ, ನಮ್ಮ ಉದ್ದೇಶವು ನಿರ್ಮಲವಾಗಿದೆ ಮತ್ತು ಸರಿಯಾದದ್ದನ್ನು ಮಾಡಲು ನಾವು ದೃಢನಿಶ್ಚಯದಿಂದ ಇದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ. (1 ಪೂರ್ವಕಾಲ 28:9) ಅಂತಹ ನಡತೆಯು ಯೆಹೋವನ ಹೃದಯವನ್ನು ಎಷ್ಟೊಂದು ಹರ್ಷಿಸುವಂತೆ ಮಾಡುತ್ತದೆ!—ಜ್ಞಾನೋಕ್ತಿ 27:11; 1 ಯೋಹಾನ 3:22.
12 ಈ ಕಾರಣದಿಂದ ನಂಬಿಗಸ್ತ ಕ್ರೈಸ್ತರು ಹೃದಮನಗಳನ್ನು ಇಬ್ರಿಯ 4:13; ಲೂಕ 8:17) ಯೆಹೋವನಿಗೆ ನೋವನ್ನುಂಟುಮಾಡುವ ಯಾವುದನ್ನೂ ಮಾಡದಿರಲು ಶ್ರಮಿಸುವುದರ ಮೂಲಕ ನಮ್ಮ ಮನಸ್ಸಾಕ್ಷಿ ಶುದ್ಧವಾಗಿರುತ್ತದೆ. ಮಾತ್ರವಲ್ಲ, ದೇವರ ಅನುಗ್ರಹ ನಮ್ಮ ಮೇಲಿದೆ ಎಂಬ ಅರಿವು ನಮಗೆ ಸಂತೋಷವನ್ನು ಕೊಡುತ್ತದೆ. ಹೌದು, “ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ” ಆಗಿರುವ ವ್ಯಕ್ತಿಯನ್ನು ಯೆಹೋವನು ನಿಜವಾಗಿಯೂ ಮಾನ್ಯಮಾಡುತ್ತಾನೆಂಬ ವಿಷಯದಲ್ಲಿ ಯಾವ ಸಂಶಯವೂ ಇಲ್ಲ.—ಕೀರ್ತನೆ 15:1, 2.
ಕಲುಷಿತಗೊಳಿಸುವಂಥ ಗುಪ್ತಪಾಪಗಳನ್ನು ಮಾಡದಂತೆ ಅಂದರೆ ಅಶ್ಲೀಲತೆ ಮತ್ತು ಹಿಂಸಾಚಾರಗಳನ್ನು ವೀಕ್ಷಿಸುವಂಥ ಪಾಪಗಳನ್ನು ಮಾಡದಂತೆ ಎಚ್ಚರಿಕೆವಹಿಸುತ್ತಾರೆ. ಮನುಷ್ಯರ ಕಣ್ಣಿಗೆ ಬೀಳದಂತೆ ಕೆಲವು ಪಾಪಗಳನ್ನು ಮರೆಮಾಚಬಹುದಾದರೂ, “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ” ಎಂಬುದು ನಮಗೆ ತಿಳಿದಿದೆ. (13 ಆದರೆ ಕೆಟ್ಟತನದಿಂದ ತುಂಬಿತುಳುಕುತ್ತಿರುವ ಲೋಕದಲ್ಲಿ ನಮ್ಮ ಹೃದಮನಗಳನ್ನು ಕಾಪಾಡುವುದಾದರೂ ಹೇಗೆ? (ಜ್ಞಾನೋಕ್ತಿ 4:23; ಎಫೆಸ 2:2) ಇದಕ್ಕಾಗಿ ಆಧ್ಯಾತ್ಮಿಕ ಏರ್ಪಾಡುಗಳ ಪೂರ್ಣ ಲಾಭವನ್ನು ನಾವು ಪಡೆದುಕೊಳ್ಳಬೇಕು. ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಮಾಡಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲವನ್ನೂ ಮಾಡಬೇಕು. ಅಷ್ಟೇ ಅಲ್ಲ, ದುರಾಶೆಗಳು ಬಸುರಾಗಿ ಪಾಪವನ್ನು ಹೆರದಂತೆ ತಕ್ಷಣವೇ ಕ್ರಮ ಕೈಕೊಳ್ಳಲು ಸರ್ವಪ್ರಯತ್ನವನ್ನೂ ಮಾಡಬೇಕು. (ಯಾಕೋಬ 1:14, 15) ಯೇಸು ನತಾನಯೇಲನಿಗೆ, “ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು. ಇದೇ ಮಾತನ್ನು ಯೇಸು ನಿಮಗೆ ಹೇಳುವಲ್ಲಿ ನಿಮಗೆಷ್ಟು ಸಂತೋಷವಾಗಬಹುದು ಎಂಬುದನ್ನು ಸ್ವಲ್ಪ ಯೋಚಿಸಿ ನೋಡಿ. (ಯೋಹಾನ 1:47) ಬಾರ್ತೊಲೊಮಾಯ ಎಂಬ ಹೆಸರೂ ಇದ್ದ ನತಾನಯೇಲನಿಗೆ ತರುವಾಯ ಯೇಸುವಿನ 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗುವ ಸದವಕಾಶ ದೊರೆಯಿತು.—ಮಾರ್ಕ 3:16-19.
“ಕರುಣೆಯೂ ನಂಬಿಕೆಯೂ ಉಳ್ಳ ಮಹಾಯಾಜಕ”
14 ಯೇಸು “ಅದೃಶ್ಯನಾದ [ಯೆಹೋವ] ದೇವರ ಪ್ರತಿರೂಪ”ವಾಗಿದ್ದಾನೆ. ಆದುದರಿಂದ, ಅವನು ದೇವರನ್ನು ಶುದ್ಧ ಹೃದಯದಿಂದ ಸೇವಿಸುವವರಿಗೆ ಕೃತಜ್ಞತೆಯನ್ನು ತೋರಿಸುವುದರಲ್ಲಿ ಯಾವಾಗಲೂ ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಕರಿಸುತ್ತಾನೆ. (ಕೊಲೊಸ್ಸೆ 1:15) ಉದಾಹರಣೆಗೆ, ತನ್ನ ಜೀವವನ್ನು ಒಪ್ಪಿಸಿ ಕೊಡುವುದಕ್ಕೆ ಐದು ದಿವಸಗಳಿರುವಾಗ ಯೇಸು ತನ್ನ ಕೆಲವು ಮಂದಿ ಶಿಷ್ಯರೊಂದಿಗೆ ಬೇಥಾನ್ಯದ ಸೀಮೋನನ ಮನೆಯಲ್ಲಿ ಅತಿಥಿಯಾಗಿದ್ದನು. ಆ ಸಾಯಂಕಾಲ, ಲಾಜರ ಮತ್ತು ಮಾರ್ಥಳ ಸಹೋದರಿಯಾಗಿದ್ದ ಮರಿಯಳು “ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು” (ಒಂದು ವರ್ಷದ ವೇತನಕ್ಕೆ ಸಮಾನವಾದ ಬೆಲೆಯುಳ್ಳದ್ದು) ತಂದು ಯೇಸುವಿನ ತಲೆ ಮತ್ತು ಪಾದಗಳ ಮೇಲೆ ಹೊಯ್ದಳು. (ಯೋಹಾನ 12:3) “ಈ ನಷ್ಟ ಯಾತಕ್ಕೆ?” ಎಂದರು ಕೆಲವರು. ಆದರೆ ಯೇಸು ಮರಿಯಳ ವರ್ತನೆಯನ್ನು ಅತಿ ಭಿನ್ನವಾಗಿ ನೋಡಿದನು. ತನಗೆ ಸನ್ನಿಹಿತವಾಗಿದ್ದ ಮರಣ ಮತ್ತು ಹೂಳುವಿಕೆಯ ವೀಕ್ಷಣದಲ್ಲಿ ಅವನು ಇದೊಂದು ಮಹಾ ಉದಾರಭಾವದ ಕೃತ್ಯವಾಗಿದೆ, ಆಳವಾದ ಸೂಚಿತಾರ್ಥವನ್ನು ಹೊಂದಿದೆ ಎಂದೆಣಿಸಿದನು. ಆದಕಾರಣ ಯೇಸು ಮರಿಯಳನ್ನು ಟೀಕಿಸುವ ಬದಲಾಗಿ ಹೀಗೆ ಹೇಳುತ್ತ ಗೌರವಿಸಿದನು: “ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 26:6-13.
15 ಇಷ್ಟೊಂದು ಗಣ್ಯಭಾವದ ವ್ಯಕ್ತಿಯಾಗಿರುವ ಯೇಸು ನಮ್ಮ ನಾಯಕನಾಗಿರುವುದು ನಮಗೆಂತಹ ಸುಯೋಗ! ವಾಸ್ತವದಲ್ಲಿ, ಯೇಸುವಿನ ಮಾನವಜೀವನವು ಯೆಹೋವನು ಅವನ ಮುಂದಿಟ್ಟಿದ್ದ ಕಾರ್ಯಕ್ಕಾಗಿ ಅವನನ್ನು ಸಿದ್ಧಪಡಿಸಿತು. ಅದು ಪ್ರಥಮವಾಗಿ ಅಭಿಷಿಕ್ತರ ಸಭೆಯ ಮತ್ತು ಅನಂತರ ಲೋಕದ ಮಹಾಯಾಜಕನೂ ಅರಸನೂ ಆಗಿ ಕಾರ್ಯನಿರ್ವಹಿಸುವುದಾಗಿತ್ತು.—ಕೊಲೊಸ್ಸೆ 1:13; ಇಬ್ರಿಯ 7:26; ಪ್ರಕಟನೆ 11:15.
16 ಈ ಭೂಮಿಗೆ ಬರುವುದಕ್ಕೆ ಮೊದಲೇ ಯೇಸುವಿಗೆ ಮಾನವರಲ್ಲಿ ಗಾಢವಾದ ಆಸಕ್ತಿಯಿತ್ತು. ಮಾತ್ರವಲ್ಲ ವಿಶೇಷವಾದ ಮಮತೆಯೂ ಇತ್ತು. (ಜ್ಞಾನೋಕ್ತಿ 8:31) ಅವನು ಮನುಷ್ಯನಾಗಿ ಜೀವಿಸುವ ಮೂಲಕ, ದೇವರಿಗೆ ನಾವು ಸೇವೆಸಲ್ಲಿಸುವಾಗ ಎದುರಿಸುವ ಪರೀಕ್ಷೆಗಳನ್ನು ಹೆಚ್ಚು ಪೂರ್ಣವಾಗಿ ಗ್ರಹಿಸಿಕೊಂಡನು. ಅಪೊಸ್ತಲ ಪೌಲನು ಬರೆದುದು: “ಆದದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು. ಹೀಗೆ ಆತನು . . . ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು. ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.” ಯೇಸು “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪ” ತೋರಿಸಬಲ್ಲನು. ಏಕೆಂದರೆ “ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ.”—ಇಬ್ರಿಯ 2:17, 18; 4:15, 16.
17 ತನ್ನ ಹಿಂಬಾಲಕರಿಗೆ ಬರುವ ಪರೀಕ್ಷೆಗಳ ಕುರಿತು ಯೇಸು ಪ್ರಕಟನೆ 2:8-10.
ಚೆನ್ನಾಗಿ ಅರಿತಿದ್ದಾನೆ ಎಂಬುದು ಅವನ ಪುನರುತ್ಥಾನದ ಬಳಿಕ ವ್ಯಕ್ತವಾಯಿತು. ಏಷಿಯಾ ಮೈನರ್‌ನ ಏಳು ಸಭೆಗಳಿಗೆ ಅಪೊಸ್ತಲ ಯೋಹಾನನ ಮೂಲಕ ಬರೆಯಲ್ಪಟ್ಟ ಯೇಸುವಿನ ಪತ್ರಗಳನ್ನು ಪರಿಗಣಿಸಿರಿ. ಸ್ಮುರ್ನದಲ್ಲಿದ್ದ ಸಭೆಗೆ ಯೇಸು ಹೇಳಿದ್ದು: “ನಾನು ನಿನ್ನ ಸಂಕಟವನ್ನೂ ನಿನ್ನ ಬಡತನವನ್ನೂ ಬಲ್ಲೆನು.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಯೇಸು ಹೀಗನ್ನುತ್ತಿದ್ದನು: ‘ನಿನ್ನ ಸಮಸ್ಯೆಗಳೇನೆಂದು ನನಗೆ ಪೂರ್ತಿಯಾಗಿ ಅರ್ಥವಾಗುತ್ತದೆ. ನೀನು ಪಡುತ್ತಿರುವ ಕಷ್ಟ ನನಗೆ ನಿಜವಾಗಲೂ ಗೊತ್ತಿದೆ.’ ಬಳಿಕ, ಯೇಸು ಸ್ವತಃ ಮರಣದವರೆಗೆ ತಾಳಿಕೊಂಡು ಕಷ್ಟಾನುಭವಿಸಿದ್ದ ಕಾರಣ ಅನುಕಂಪದಿಂದಲೂ ಅಧಿಕಾರದಿಂದಲೂ ಹೀಗೆ ಕೂಡಿಸಿ ಹೇಳಿದನು: “ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.”—18 ಆ ಏಳು ಸಭೆಗಳಿಗೆ ಬರೆದ ಪತ್ರಗಳು, ತನ್ನ ಶಿಷ್ಯರ ಎದುರಿಗಿದ್ದ ಸಮಸ್ಯೆಗಳ ವಿಷಯದಲ್ಲಿ ಯೇಸುವಿಗಿದ್ದ ಪೂರ್ಣ ಅರಿವು ಮತ್ತು ಅವರ ಸಮಗ್ರತೆಯ ಜೀವನಕ್ಕಾಗಿ ಅವನಿಗಿದ್ದ ಯಥಾರ್ಥ ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತವೆ. (ಪ್ರಕಟನೆ 2:1–3:22) ಯೇಸು ಯಾರಿಗೆ ಸಂಬೋಧಿಸಿ ಹೇಳಿದನೊ ಅವರು ಸ್ವರ್ಗದಲ್ಲಿ ಅವನೊಂದಿಗೆ ಆಳುವ ನಿರೀಕ್ಷೆಯಿದ್ದ ಅಭಿಷಿಕ್ತ ಕ್ರೈಸ್ತರೆಂಬುದನ್ನು ಮನಸ್ಸಿನಲ್ಲಿಡಿರಿ. ದುಸ್ಥಿತಿಯಲ್ಲಿರುವ ಮಾನವಕುಲಕ್ಕೆ ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಪ್ರಯೋಜನಗಳನ್ನು ಅತಿ ಹೆಚ್ಚಾದ ಕನಿಕರದೊಂದಿಗೆ ಅನ್ವಯಿಸಲು ತಮ್ಮ ಉನ್ನತ ಸ್ಥಾನಕ್ಕಾಗಿ ಅವರನ್ನು ತಮ್ಮ ಕರ್ತನಾದ ಯೇಸುವಿನಂತೆ ಸಿದ್ಧಪಡಿಸಲಾಗುತ್ತಿತ್ತು.—ಪ್ರಕಟನೆ 5:9, 10; 22:1-5.
19 ಯೇಸುವಿಗೆ ತನ್ನ ಅಭಿಷಿಕ್ತ ಹಿಂಬಾಲಕರ ಮೇಲೆ ಪ್ರೀತಿಯಿರುವಂತೆಯೇ ತನ್ನ ನಿಷ್ಠಾವಂತ ‘ಬೇರೆ ಕುರಿಗಳ’ ಮೇಲೆಯೂ ಪ್ರೀತಿ ಇದೆ. ಈ ಲಕ್ಷಾಂತರ ಮಂದಿ ‘ಸಕಲ ಜನಾಂಗಗಳಿಂದ’ ಬಂದಿರುವ ‘ಮಹಾ ಸಮೂಹವಾಗಿದ್ದಾರೆ.’ ಇವರು ಬರಲಿರುವ ‘ಮಹಾ ಸಂಕಟವನ್ನು’ ಪಾರಾಗಿ ಉಳಿಯುವರು. (ಯೋಹಾನ 10:16; ಪ್ರಕಟನೆ 7:9, 14) ಇವರು ಯೇಸುವಿನ ಪಕ್ಷಕ್ಕೆ ಹಿಂಡಾಗಿ ಕೂಡಿಬರುತ್ತಿದ್ದಾರೆ. ಏಕೆಂದರೆ, ಅವನ ವಿಮೋಚನಾ ಮೌಲ್ಯ ಯಜ್ಞಕ್ಕಾಗಿಯೂ ತಮ್ಮ ನಿತ್ಯಜೀವದ ನಿರೀಕ್ಷೆಗಾಗಿಯೂ ಕೃತಜ್ಞರಾಗಿರುವುದರಿಂದಲೇ. ಅವರು ತಮ್ಮ ಕೃತಜ್ಞತೆಯನ್ನು ಹೇಗೆ ತೋರಿಸುತ್ತಾರೆ? “ಹಗಲಿರುಳು [ದೇವರ] ಸೇವೆ” ಮಾಡುವ ಮೂಲಕವೇ.—ಪ್ರಕಟನೆ 7:15-17.
20 ಇಸವಿ 2006ನೇ ಸೇವಾವರ್ಷದ ಲೋಕವ್ಯಾಪಕ ವರದಿಯು ಯೆಹೋವನ ನಂಬಿಗಸ್ತ ಶುಶ್ರೂಷಕರು ನಿಜವಾಗಿ “ಹಗಲಿರುಳು” ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆಂಬುದಕ್ಕೆ ಸ್ಪಷ್ಟವಾದ ಸಾಕ್ಷಿಯನ್ನು ನೀಡುತ್ತದೆ. ವಾಸ್ತವವೇನಂದರೆ, ಆ ಒಂದು ವರುಷದಲ್ಲಿ ಅವರು ಉಳಿದಿರುವ ಕೆಲವೇ ಅಭಿಷಿಕ್ತ ಕ್ರೈಸ್ತರೊಂದಿಗೆ ಸಾರ್ವಜನಿಕ ಶುಶ್ರೂಷೆಗೆ ಒಟ್ಟು 133,39,66,199 ತಾಸುಗಳನ್ನು ಅರ್ಪಿಸಿದರು. ಇದು 1,50,000ಗಿಂತಲೂ ಹೆಚ್ಚಿನ ವರ್ಷಗಳಿಗೆ ಸಮ!
ಸದಾ ಕೃತಜ್ಞತೆಯನ್ನು ತೋರಿಸಿರಿ!
21 ಅಪರಿಪೂರ್ಣ ಮಾನವರೊಂದಿಗೆ ವ್ಯವಹರಿಸುವಾಗ ಯೆಹೋವನೂ ಆತನ ಪುತ್ರನೂ ಗಾಢವಾದ ಕೃತಜ್ಞತೆಯನ್ನು ತೋರಿಸಿದ್ದಾರೆ. ಇದು ನಿಜಕ್ಕೂ ಅಗಾಧವೇ ಸರಿ. ಆದರೆ ವಿಷಾದಕರ ಸಂಗತಿಯೇನೆಂದರೆ, ಹೆಚ್ಚಿನ ಮಾನವರು ದೇವರ ಕುರಿತು ಸ್ವಲ್ಪವೂ ಯೋಚಿಸದೆ ತಮ್ಮ ಸ್ವಂತ ಚಿಂತೆಗಳಲ್ಲೇ ಮುಳುಗಿಹೋಗಿದ್ದಾರೆ. “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವ ಜನರನ್ನು ವರ್ಣಿಸುತ್ತ ಪೌಲನು ಬರೆದುದು: “ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವವರೂ ಹಣದಾಶೆಯುಳ್ಳವರೂ . . . ಕೃತಜ್ಞತೆಯಿಲ್ಲದವರೂ” ಆಗಿರುವರು. (2 ತಿಮೊಥೆಯ 3:1-5, NIBV) ನಿಜ ಕ್ರೈಸ್ತರು ಇವರಿಗಿಂತ ಎಷ್ಟು ಭಿನ್ನರು! ನಿಜಕ್ರೈಸ್ತರು ಹೃತ್ಪೂರ್ವಕವಾದ ಪ್ರಾರ್ಥನೆ, ಇಷ್ಟಪೂರ್ವಕವಾದ ವಿಧೇಯತೆ ಮತ್ತು ಪೂರ್ಣಪ್ರಾಣದ ಸೇವೆಯ ಮೂಲಕ ದೇವರು ತಮಗೆ ಮಾಡಿರುವ ಸಕಲ ವಿಷಯಗಳಿಗಾಗಿ ಕೃತಜ್ಞತೆಯನ್ನು ತೋರಿಸುತ್ತಾರೆ.—ಕೀರ್ತನೆ 62:8; ಮಾರ್ಕ 12:30; 1 ಯೋಹಾನ 5:3.
22 ಯೆಹೋವನು ನಮಗೆ ಪ್ರೀತಿಪೂರ್ವಕವಾಗಿ ಒದಗಿಸಿರುವ ಆಧ್ಯಾತ್ಮಿಕ ಏರ್ಪಾಡುಗಳಲ್ಲಿ ಕೆಲವನ್ನು ಮುಂದಿನ ಲೇಖನದಲ್ಲಿ ಪುನರ್ವಿಮರ್ಶಿಸೋಣ. ಈ ‘ಒಳ್ಳೇ ದಾನಗಳ’ ಕುರಿತು ಚಿಂತಿಸುವಾಗ ನಮ್ಮ ಕೃತಜ್ಞತೆ ಇನ್ನೂ ಹೆಚ್ಚು ಗಾಢವಾಗುವಂತಾಗಲಿ.—ಯಾಕೋಬ 1:17. (w07 2/1)
ನೀವು ಹೇಗೆ ಉತ್ತರಿಸುವಿರಿ?
• ತಾನು ಕೃತಜ್ಞನಾಗಿರುವ ದೇವರೆಂದು ಯೆಹೋವನು ಹೇಗೆ ತೋರಿಸಿದ್ದಾನೆ?
• ಏಕಾಂತದಲ್ಲಿರುವಾಗ ನಾವು ಹೇಗೆ ಯೆಹೋವನ ಹೃದಯವನ್ನು ಸಂತೋಷಪಡಿಸಬಲ್ಲೆವು?
• ಯೇಸು ಯಾವ ವಿಧಗಳಲ್ಲಿ ಕೃತಜ್ಞತೆಯನ್ನು ತೋರಿಸಿದನು?
• ಯೇಸು ಮಾನವನಾಗಿ ಜೀವಿಸಿದ್ದು ಅವನೊಬ್ಬ ಕನಿಕರವೂ ಕೃತಜ್ಞನೂ ಆದ ಪ್ರಭುವಾಗುವಂತೆ ಸಹಾಯಮಾಡಿದ್ದು ಹೇಗೆ?
[ಅಧ್ಯಯನ ಪ್ರಶ್ನೆಗಳು]
1. ಯೆಹೋವನು ಮೋವಾಬ್ಯಳಾದ ರೂತಳಿಗೆ ತನ್ನ ಕೃತಜ್ಞತೆಯನ್ನು ಹೇಗೆ ತೋರಿಸಿದನು?
2, 3. (ಎ) ಯೆಹೋವನ ಕೃತಜ್ಞತಾ ಅಭಿವ್ಯಕ್ತಿಗಳನ್ನು ಯಾವುದು ಗಮನಾರ್ಹವಾಗಿಸುತ್ತದೆ? (ಬಿ) ಯೆಹೋವನು ನಿಜ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇಕೆ? ಉದಾಹರಣೆ ಕೊಡಿ.
4, 5. ಯೇಸು ಕೃತಜ್ಞತೆಯನ್ನು ತೋರಿಸುವುದರಲ್ಲಿ ಯೆಹೋವನನ್ನು ಹೇಗೆ ಅನುಕರಿಸಿದನು?
6, 7. ಯೆಹೋವನು ಎಬೆದ್ಮೆಲೆಕನಿಗೆ ಏಕೆ ಮತ್ತು ಹೇಗೆ ತನ್ನ ಕೃತಜ್ಞತೆಯನ್ನು ತೋರಿಸಿದನು?
8, 9. ಯೇಸು ತೋರಿಸಿಕೊಟ್ಟಂತೆ ಯೆಹೋವನು ಯಾವ ವಿಧದ ಪ್ರಾರ್ಥನೆಗಳನ್ನು ಮಾನ್ಯಮಾಡುತ್ತಾನೆ?
10. ನಮ್ಮ ಭಾವನೆಗಳನ್ನು ಮನದಾಳದಿಂದ ತೋಡಿಕೊಳ್ಳುತ್ತಾ ಯಥಾರ್ಥವಾಗಿ ಪ್ರಾರ್ಥಿಸುವಾಗ ನಾವು ಯಾವ ಭರವಸೆಯಿಂದಿರಬಲ್ಲೆವು?
11. ನಾವು ಏಕಾಂತದಲ್ಲಿ ಮಾಡುವ ವಿಷಯಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ?
12, 13. ನಾವು ಹೇಗೆ ನಮ್ಮ ಹೃದಮನಗಳನ್ನು ಕಾಪಾಡಿಕೊಂಡು ನಂಬಿಗಸ್ತ ಶಿಷ್ಯ ನತಾನಯೇಲನಂತೆ ಇರಬಲ್ಲೆವು?
14. ಮರಿಯಳ ವರ್ತನೆಗೆ ಯೇಸು ತೋರಿಸಿದ ಪ್ರತಿಕ್ರಿಯೆಯು ಇತರರದ್ದಕ್ಕೆ ಹೇಗೆ ಅಸದೃಶವಾಗಿತ್ತು?
15, 16. ಯೇಸು ಮನುಷ್ಯನಾಗಿ ಜೀವಿಸಿ ದೇವರನ್ನು ಸೇವಿಸಿದ್ದರಿಂದ ನಮಗೆ ಹೇಗೆ ಪ್ರಯೋಜನ ದೊರೆಯುತ್ತದೆ?
17, 18. (ಎ) ಏಷಿಯಾ ಮೈನರ್‌ನ ಏಳು ಸಭೆಗಳಿಗೆ ಕಳುಹಿಸಲಾದ ಪತ್ರಗಳು ಯೇಸುವಿಗಿದ್ದ ಕೃತಜ್ಞತೆಯ ಆಳದ ಕುರಿತು ಏನನ್ನು ತೋರಿಸುತ್ತವೆ? (ಬಿ) ಅಭಿಷಿಕ್ತ ಕ್ರೈಸ್ತರನ್ನು ಯಾವುದಕ್ಕಾಗಿ ಸಿದ್ಧಪಡಿಸಲಾಗುತ್ತಿತ್ತು?
19, 20. ‘ಮಹಾ ಸಮೂಹದವರು’ ಯೆಹೋವನಿಗೂ ಆತನ ಪುತ್ರನಿಗೂ ಕೃತಜ್ಞತೆಯನ್ನು ಹೇಗೆ ತೋರಿಸುತ್ತಾರೆ?
21, 22. (ಎ) ಕೃತಜ್ಞತೆಯನ್ನು ತೋರಿಸುವ ವಿಷಯದಲ್ಲಿ ಕ್ರೈಸ್ತರು ವಿಶೇಷವಾಗಿ ಇಂದು ಏಕೆ ಜಾಗ್ರತೆಯಿಂದಿರಬೇಕು? (ಬಿ) ಮುಂದಿನ ಲೇಖನದಲ್ಲಿ ಯಾವುದನ್ನು ಚರ್ಚಿಸಲಾಗುವುದು?
[ಪುಟ 22ರಲ್ಲಿರುವ ಚಿತ್ರ]
ತಾಯಿಯು ತನ್ನ ಮುದ್ದು ಮಗಳ ಸಣ್ಣ ಉಡುಗೊರೆಯನ್ನು ಪ್ರೀತಿಸುವಂತೆಯೇ, ನಮ್ಮಿಂದಾದದ್ದೆಲ್ಲವನ್ನು ಮಾಡುವಾಗ ಯೆಹೋವನು ಅದನ್ನು ಗಣ್ಯಮಾಡುತ್ತಾನೆ