ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯವನ್ನೇ ಹೇಳಬೇಕು ಏಕೆ?

ಸತ್ಯವನ್ನೇ ಹೇಳಬೇಕು ಏಕೆ?

ಸತ್ಯವನ್ನೇ ಹೇಳಬೇಕು ಏಕೆ?

ಮ್ಯಾನ್‌ಫ್ರೆಡ್‌ ಎಂಬವನು 18 ವರ್ಷದವನಾಗಿದ್ದಾಗ, ಒಂದು ಆಫೀಸಿನಲ್ಲಿ ತರಬೇತಿ ಪಡೆಯುತ್ತಿದ್ದ. * ಆ ಕಂಪೆನಿಯು ಅವನಿಗಾಗಿ ಮತ್ತು ತರಬೇತಿ ಪಡೆಯುತ್ತಿದ್ದ ಇನ್ನೂ ಹಲವಾರು ಮಂದಿಗಾಗಿ, ವಾರದಲ್ಲಿ ಎರಡು ದಿನ ವೃತ್ತಿಪರ ಕಾಲೇಜಿಗೆ ಹಾಜರಾಗುವ ಏರ್ಪಾಡನ್ನು ಮಾಡಿತು. ಒಂದು ದಿನ, ಕ್ಲಾಸ್‌ನಿಂದ ಅವರನ್ನು ಎಂದಿಗಿಂತ ಬೇಗನೆ ಬಿಟ್ಟುಬಿಡಲಾಯಿತು. ಕಂಪೆನಿಯ ನಿಯಮದ ಪ್ರಕಾರ, ಅವರೆಲ್ಲರೂ ಆಗ ಕೆಲಸಮಾಡಲು ಆಫೀಸಿಗೆ ಹಿಂದಿರುಗಿ ಹೋಗಬೇಕಿತ್ತು. ಅದರ ಬದಲು, ಅವರೆಲ್ಲರೂ ಮಜಾಮಾಡಿ ಕಾಲಕಳೆಯಲಿಕ್ಕಾಗಿ ಹೊರಟರು. ಆದರೆ ಮ್ಯಾನ್‌ಫ್ರೆಡ್‌ ಮಾತ್ರ ಕೆಲಸದ ಸ್ಥಳಕ್ಕೆ ಹಿಂದಿರುಗಿದನು. ಆಗ, ತರಬೇತಿ ಹೊಂದುತ್ತಿದ್ದವರ ಮೇಲ್ವಿಚಾರಣೆ ಮಾಡುತ್ತಿದ್ದ ಕಂಪೆನಿಯ ಕಾರ್ಯನಿರ್ವಾಹಕನು ಆಕಸ್ಮಿಕವಾಗಿ ಅಲ್ಲಿಂದ ಹಾದುಹೋಗುತ್ತಿದ್ದನು. ಮ್ಯಾನ್‌ಫ್ರೆಡ್‌ನನ್ನು ನೋಡಿ, “ನೀನಿವತ್ತು ಕ್ಲಾಸ್‌ಗೆ ಏಕೆ ಹೋಗಲಿಲ್ಲ? ಬೇರೆಯವರು ಎಲ್ಲಿದ್ದಾರೆ?” ಎಂದು ಕೇಳಿದರು. ಈಗ, ಮ್ಯಾನ್‌ಫ್ರೆಡ್‌ ಹೇಗೆ ಉತ್ತರಿಸಬೇಕೆಂದು ಎಣಿಸುತ್ತೀರಿ?

ನಮ್ಮಲ್ಲಿ ಹೆಚ್ಚಿನವರು ಸಿಕ್ಕಿಬೀಳುವ ಅಡ್ಡಕತ್ತರಿಯಂಥ ಪರಿಸ್ಥಿತಿಯಲ್ಲಿ ಮ್ಯಾನ್‌ಫ್ರೆಡ್‌ ಈಗ ಸಿಕ್ಕಿಬಿದ್ದಿದನು. ಅವನು ಸತ್ಯವನ್ನು ಹೇಳಿಬಿಡಬೇಕೊ, ಅಥವಾ ತನ್ನ ಸಹಪಾಠಿಗಳನ್ನು ರಕ್ಷಿಸಲಿಕ್ಕಾಗಿ ಒಂದು ಸುಳ್ಳನ್ನು ಹೇಳಬೇಕೊ? ನಿಜ ಹೇಳಿದರೆ ಸಹಪಾಠಿಗಳು ಸಿಕ್ಕಿಬೀಳುವುದು ಖಂಡಿತ ಮತ್ತು ಇದರಿಂದಾಗಿ ಯಾರೂ ಅವನನ್ನು ಇಷ್ಟಪಡಲಿಕ್ಕಿಲ್ಲ. ಆದುದರಿಂದ ಈ ರೀತಿಯ ಸನ್ನಿವೇಶಗಳಲ್ಲಿ ಸುಳ್ಳು ಹೇಳುವುದು ಸರಿಯೊ? ಒಂದುವೇಳೆ ನೀವು ಅವನ ಸ್ಥಾನದಲ್ಲಿದ್ದಿದ್ದರೆ ಏನು ಮಾಡಿರುತ್ತಿದ್ದೀರಿ? ಮ್ಯಾನ್‌ಫ್ರೆಡ್‌ ಬಗ್ಗೆ ನಾವು ತದನಂತರ ಚರ್ಚಿಸೋಣ. ಆದರೆ ಈಗ, ನಾವು ಸತ್ಯವನ್ನಾಡಬೇಕೊ ಇಲ್ಲವೊ ಎಂಬ ನಿರ್ಣಯ ಮಾಡಬೇಕಾದ ಸಂದರ್ಭ ಬಂದಾಗ ಏನೆಲ್ಲ ಒಳಗೂಡಿರುತ್ತದೆಂಬುದನ್ನು ಮೊದಲಾಗಿ ಪರಿಗಣಿಸೋಣ.

ಸತ್ಯ ಹಾಗೂ ಅಸತ್ಯ​—⁠ಬಹುಹಿಂದೆ ಆರಂಭವಾದ ಪ್ರತಿಸ್ಪರ್ಧೆ

ಮಾನವಕುಲದ ಚರಿತ್ರೆಯ ಆರಂಭದಲ್ಲಿ ಎಲ್ಲವೂ ಸತ್ಯದ ಮೇಲಾಧರಿತವಾಗಿತ್ತು. ವಾಸ್ತವಾಂಶಗಳನ್ನು ಯಾರೂ ತಿರುಚಿ ಹೇಳುತ್ತಿರಲಿಲ್ಲ, ಇಲ್ಲವೆ ಸತ್ಯವನ್ನು ಕುತಂತ್ರದಿಂದ ದುರುಪಯೋಗಿಸುತ್ತಿರಲಿಲ್ಲ ಅಥವಾ ಅದನ್ನು ತಪ್ಪಾಗಿ ನಿರೂಪಿಸುತ್ತಿರಲಿಲ್ಲ. ಸೃಷ್ಟಿಕರ್ತನಾದ ಯೆಹೋವನು ‘ಸತ್ಯದ ದೇವರು’ ಆಗಿದ್ದಾನೆ. ಆತನ ವಾಕ್ಯವು ಸತ್ಯವಾಗಿದೆ, ಆತನು ಸುಳ್ಳಾಡಲಾರನು ಮತ್ತು ಆತನು ಸುಳ್ಳು ಹೇಳುವುದನ್ನೂ ಸುಳ್ಳುಗಾರರನ್ನೂ ಖಂಡಿಸುತ್ತಾನೆ.​—⁠ಕೀರ್ತನೆ 31:​5, NIBV; ಯೋಹಾನ 17:17; ತೀತ 1:⁠2.

ಹೀಗಿರುವುದಾದರೆ ಅಸತ್ಯ ಹೇಗೆ ಹುಟ್ಟಿಕೊಂಡಿತು? ಯೇಸು ಕ್ರಿಸ್ತನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ಧಾರ್ಮಿಕ ವಿರೋಧಿಗಳಿಗೆ ಅವನು ಹೇಳಿದ ಮಾತುಗಳಲ್ಲಿ ಇದಕ್ಕೆ ಅಧಿಕಾರಯುತವಾದ ಉತ್ತರವು ದೊರೆಯುತ್ತದೆ: “ನೀವು ನಿಮ್ಮ ತಂದೆಯಾದ ಪಿಶಾಚನಿಗೆ ಸೇರಿದವರಾಗಿದ್ದೀರಿ. ನಿಮ್ಮ ತಂದೆಯ ಆಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಾನುಸಾರವಾಗಿ ಆಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿನ ತಂದೆಯೂ ಆಗಿದ್ದಾನೆ.” (ಯೋಹಾನ 8:​44, NIBV) ಯೇಸು, ಏದೆನ್‌ ತೋಟದಲ್ಲಿ ನಡೆದ ಘಟನೆಗೆ ಸೂಚಿಸುತ್ತಿದ್ದನು. ಅಲ್ಲಿ ಸೈತಾನನು ಮೊದಲ ಮಾನವ ದಂಪತಿಯು ದೇವರಿಗೆ ಅವಿಧೇಯರಾಗುವಂತೆ ಪ್ರೇರಿಸಿದನು ಮತ್ತು ಹೀಗೆ ಅವರು ಪಾಪಮಾಡಿ, ಮರಣಕ್ಕೆ ತುತ್ತಾದರು.​—⁠ಆದಿಕಾಂಡ 3:​1-5; ರೋಮಾಪುರ 5:⁠12.

ಸೈತಾನನು “ಸುಳ್ಳಿನ ತಂದೆ” ಅಂದರೆ ಸುಳ್ಳು ಹಾಗೂ ಅಸತ್ಯದ ಮೂಲಕರ್ತನೆಂದು ಯೇಸುವಿನ ಮಾತುಗಳು ಸ್ಪಷ್ಟವಾಗಿ ಗುರುತಿಸುತ್ತವೆ. ಸೈತಾನನು ಈಗಲೂ ಅಸತ್ಯದ ಪ್ರತಿಪಾದಕನಾಗಿದ್ದಾನೆ ಮತ್ತು ವಾಸ್ತವದಲ್ಲಿ ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿದ್ದಾನೆ.’ ಇಂದು ವ್ಯಾಪಕವಾಗಿ ಸುಳ್ಳುಗಳನ್ನು ಹೇಳಲಾಗುತ್ತಿರುವುದರಿಂದ ಮಾನವರಿಗಾಗಿರುವ ಹಾನಿಗಾಗಿ ಬಹುಮಟ್ಟಿಗೆ ಅವನೇ ಜವಾಬ್ದಾರನು.​—⁠ಪ್ರಕಟನೆ 12:⁠9.

ಸೈತಾನನು ಬಹುಹಿಂದೆ ಆರಂಭಿಸಿದ ಸತ್ಯ ಅಸತ್ಯದ ನಡುವಿನ ಪ್ರತಿಸ್ಪರ್ಧೆಯು ಈಗಲೂ ಬಿರುಸಿನಿಂದ ಮುಂದುವರಿಯುತ್ತಿದೆ. ಇದು ಮಾನವ ಸಮಾಜದ ಎಲ್ಲ ಸ್ತರಗಳಲ್ಲೂ ಇದೆ ಮತ್ತು ಅದು ಪ್ರತಿಯೊಬ್ಬ ವ್ಯಕ್ತಿಯನ್ನೂ ಬಾಧಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಹೇಗೆ ನಡೆಸುತ್ತಾನೊ ಅದು ಅವನು ಸತ್ಯದ ಪಕ್ಷದಲ್ಲಿದ್ದಾನೊ ಇಲ್ಲವೆ ಅಸತ್ಯದ ಪಕ್ಷದಲ್ಲಿದ್ದಾನೊ ಎಂಬುದನ್ನು ತೋರಿಸುತ್ತದೆ. ದೇವರ ಪಕ್ಷದಲ್ಲಿರುವವರು ತಮ್ಮ ಜೀವನಕ್ರಮವನ್ನು ದೇವರ ವಾಕ್ಯದಲ್ಲಿರುವ ಸತ್ಯದ ಮೇಲೆ ಆಧರಿಸುತ್ತಾರೆ. ಸತ್ಯದ ಮಾರ್ಗವನ್ನು ಅನುಸರಿಸದವರು ತಿಳಿದೊ ತಿಳಿಯದೆಯೊ, ಯಾರ ‘ವಶದಲ್ಲಿ ಲೋಕವೆಲ್ಲವು’ ಇದೆಯೊ ಆ ‘ಕೆಡುಕನಾದ’ ಸೈತಾನನ ಕೈಗೆ ಬೀಳುತ್ತಾರೆ.​—⁠1 ಯೋಹಾನ 5:19; ಮತ್ತಾಯ 7:13, 14.

ಸುಳ್ಳುಹೇಳುವ ಪ್ರವೃತ್ತಿ ಏಕಿದೆ?

“ಲೋಕವೆಲ್ಲವೂ” ಸೈತಾನನ ವಶದಲ್ಲಿರುವುದು, ಇಷ್ಟೊಂದು ಜನರು ಸುಳ್ಳು ಹೇಳುವುದೇಕೆಂಬುದಕ್ಕೆ ಕಾರಣವನ್ನು ಕೊಡುತ್ತದೆ. ಆದರೆ, ‘“ಸುಳ್ಳಿನ ತಂದೆ”ಯಾದ ಸೈತಾನನು ಯಾಕೆ ಸುಳ್ಳು ಹೇಳಿದನು?’ ಎಂದು ನಾವು ಕೇಳಬಹುದು. ಯೆಹೋವನು, ಪ್ರಥಮ ಮಾನವ ದಂಪತಿಯ ಸಮೇತ ಸೃಷ್ಟಿಸಿದಂಥ ಎಲ್ಲದ್ದರ ಮೇಲೆ ಹಕ್ಕುಳ್ಳ ಪರಮಾಧಿಕಾರಿ ಆಗಿದ್ದಾನೆಂದು ಸೈತಾನನಿಗೆ ತಿಳಿದಿತ್ತು. ಈ ಉನ್ನತ ಹಾಗೂ ಅಪೂರ್ವ ಸ್ಥಾನವನ್ನು ಪಡೆಯುವ ಯಾವುದೇ ಹಕ್ಕು ಸೈತಾನನಿಗೆ ಇರಲಿಲ್ಲವಾದರೂ, ಅದನ್ನು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಅವನಲ್ಲಿ ಹುಟ್ಟಿಕೊಂಡಿತು. ದುರಾಸೆ ಮತ್ತು ಸ್ವಾರ್ಥಪರ ಹೆಬ್ಬಯಕೆಯಿಂದಾಗಿ ಯೆಹೋವನ ಸ್ಥಾನವನ್ನು ಕಬಳಿಸಿಕೊಳ್ಳಲು ಅವನು ಸಂಚುಹೂಡಿದನು. ಇದಕ್ಕಾಗಿ ಸೈತಾನನು ಸುಳ್ಳು ಹಾಗೂ ವಂಚನೆಯ ಮೊರೆಹೊಕ್ಕನು.​—⁠1 ತಿಮೊಥೆಯ 3:⁠6.

ನಮ್ಮ ದಿನಗಳ ಕುರಿತಾಗಿ ಏನು ಹೇಳಬಹುದು? ದುರಾಸೆ ಮತ್ತು ಸ್ವಾರ್ಥಪರ ಹೆಬ್ಬಯಕೆಯೇ, ಅನೇಕರನ್ನು ಸುಳ್ಳಾಡುವಂತೆ ಪ್ರಚೋದಿಸುತ್ತದೆ ಎಂಬ ಮಾತನ್ನು ನೀವು ಒಪ್ಪುವುದಿಲ್ಲವೊ? ದುರಾಸೆಭರಿತ ವಾಣಿಜ್ಯ, ಭ್ರಷ್ಟ ರಾಜಕೀಯ ಮತ್ತು ಸುಳ್ಳು ಧರ್ಮ​—⁠ಇವೆಲ್ಲವೂ ಮೋಸ, ಸುಳ್ಳು, ಕುತಂತ್ರ ಹಾಗೂ ವಂಚನೆಯಿಂದ ತುಂಬಿವೆ. ಏಕೆ? ಜನರು ದುರಾಸೆ ಹಾಗೂ ಹೆಬ್ಬಯಕೆಯಿಂದ ಪ್ರೇರಿಸಲ್ಪಟ್ಟು, ‘ಬೇರೆಯವರಿಗಿಂತ ನಾನು ಮುಂದೆ ಹೋಗಬೇಕು’ ಎಂಬ ಆಸೆ ಇಲ್ಲವೆ ತಮಗೆ ಹಕ್ಕಿಲ್ಲದಿರುವ ಹಣ, ಅಧಿಕಾರ ಅಥವಾ ಅಂತಸ್ತನ್ನು ಪಡೆಯುವುದರ ಹಿಂದೆ ಬಿದ್ದಿರುವುದರಿಂದಲೇ ಅಲ್ಲವೊ? ಪ್ರಾಚೀನಕಾಲದ ಇಸ್ರಾಯೇಲಿನ ರಾಜ ಸೊಲೊಮೋನನು ಎಚ್ಚರಿಸಿದ್ದು: “ಧನವಂತನಾಗಲು ಆತುರಪಡುವವನು ನಿರ್ದೋಷಿಯಾಗಿರುವುದಿಲ್ಲ.” (ಜ್ಞಾನೋಕ್ತಿ 28:​20, NIBV) ಮತ್ತು ಅಪೊಸ್ತಲ ಪೌಲನು ಬರೆದದ್ದು: “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.” (1 ತಿಮೊಥೆಯ 6:10) ಇದು, ಅಧಿಕಾರ ಇಲ್ಲವೆ ಹುದ್ದೆಗಾಗಿರುವ ಅತಿಯಾದ ಆಸೆಯ ವಿಷಯದಲ್ಲೂ ನಿಜವಾಗಿದೆ.

ಭಯ​—⁠ಇದು ಸುಳ್ಳುಹೇಳುವುದರ ಹಿಂದಿರುವ ಇನ್ನೊಂದು ಕಾರಣವಾಗಿದೆ. ಸತ್ಯ ಹೇಳಿದರೆ ಪರಿಣಾಮಗಳು ಏನಾಗಿರುವವೊ ಅಥವಾ ಬೇರೆಯವರು ಏನು ನೆನಸುವರೊ ಎಂಬ ಭಯ ಇದಾಗಿದೆ. ಬೇರೆಯವರು ನಮ್ಮನ್ನು ಇಷ್ಟಪಡಬೇಕು ಇಲ್ಲವೆ ಸ್ವೀಕರಿಸಬೇಕು ಎಂಬ ಆಸೆಯು ಎಲ್ಲರಲ್ಲಿರುವುದು ಸಹಜ. ಆದರೆ ಈ ಆಸೆಯೇ, ಜನರು ಕುಂದುಕೊರತೆಗಳನ್ನು ಮರೆಮಾಡಲು, ಆಕರ್ಷಕವಲ್ಲದ ವಿವರಗಳನ್ನು ಮುಚ್ಚಿಬಿಡಲು, ಇಲ್ಲವೆ ಕೇವಲ ಒಳ್ಳೇ ಅಭಿಪ್ರಾಯವನ್ನು ಮೂಡಿಸಲು ಸತ್ಯವನ್ನು​—⁠ಚಿಕ್ಕ ರೀತಿಯಲ್ಲಾದರೂ ಸರಿ​—⁠ತಿರುಚುವಂತೆ ಪ್ರಚೋದಿಸಬಲ್ಲದು. ಸೂಕ್ತವಾಗಿಯೇ, ಸೊಲೊಮೋನನು ಬರೆದುದು: “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.”​—⁠ಜ್ಞಾನೋಕ್ತಿ 29:⁠25.

ಸತ್ಯದ ದೇವರಿಗೆ ನಿಷ್ಠೆ

ಕಂಪೆನಿಯ ಕಾರ್ಯನಿರ್ವಾಹಕನು ಮ್ಯಾನ್‌ಫ್ರೆಡ್‌ಗೆ ಆ ಪ್ರಶ್ನೆ ಕೇಳಿದಾಗ ಅವನೇನು ಹೇಳಿದನು? ಸತ್ಯವನ್ನೇ ನುಡಿಯುತ್ತಾ ಹೀಗಂದನು: “ಇವತ್ತು ಶಿಕ್ಷಕರು ನಮ್ಮನ್ನು ಬೇಗ ಬಿಟ್ಟರು, ಆದುದರಿಂದ ನಾನು ಕೆಲಸಕ್ಕೆ ಬಂದೆ. ಬೇರೆಯವರ ಬಗ್ಗೆಯಂತೂ ನಾನು ಹೇಳಲಾರೆ. ಬಹುಶಃ ನೀವು ಅವರನ್ನೇ ಕೇಳಿದರೆ ಒಳ್ಳೇದು.”

ಮ್ಯಾನ್‌ಫ್ರೆಡ್‌ ತುಂಬ ಜಾಣತನದಿಂದ, ತಪ್ಪು ಮಾಹಿತಿಯನ್ನು ಕೊಡುತ್ತಾ ಉತ್ತರಿಸಬಹುದಿತ್ತು, ಮತ್ತು ಹೀಗೆ ತನ್ನ ಜೊತೆಗೆ ತರಬೇತಿ ಹೊಂದುತ್ತಿದ್ದವರ ಮೆಚ್ಚುಗೆಯನ್ನು ಗಳಿಸಬಹುದಿತ್ತು. ಆದರೆ ಸತ್ಯಕ್ಕೆ ನಿಷ್ಠೆಯಿಂದ ಅಂಟಿಕೊಳ್ಳಲು ಅವನ ಬಳಿ ಸಕಾರಣಗಳಿದ್ದವು. ಅವನೊಬ್ಬ ಯೆಹೋವನ ಸಾಕ್ಷಿಯಾಗಿದ್ದನು. ಅವನು ಪ್ರಾಮಾಣಿಕನಾಗಿದ್ದ ಕಾರಣ, ತನ್ನ ಶುದ್ಧ ಮನಸ್ಸಾಕ್ಷಿ ಕಳಂಕಿತವಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಇದರಿಂದಾಗಿ ಅವನು ತನ್ನ ಧಣಿಯ ವಿಶ್ವಾಸವನ್ನೂ ಸಂಪಾದಿಸಿದನು ಮತ್ತು ಅವನ ತರಬೇತಿಯ ಭಾಗವಾಗಿ ಅವನನ್ನು ಆಭರಣಗಳ ವಿಭಾಗಕ್ಕೆ ನೇಮಿಸಲಾಯಿತು. ಸಾಮಾನ್ಯವಾಗಿ ಈ ವಿಭಾಗದಲ್ಲಿ ಕೆಲಸಮಾಡಲು ತರಬೇತಿ ಪಡೆಯುತ್ತಿರುವವರಿಗೆ ಅನುಮತಿಸಲಾಗುತ್ತಿರಲಿಲ್ಲ. ಸುಮಾರು 15 ವರ್ಷಗಳ ಬಳಿಕ ಅವನಿಗೆ ಆ ಕಂಪೆನಿಯಲ್ಲಿ ಒಂದು ಜವಾಬ್ದಾರಿಯುತ ಹುದ್ದೆಗೆ ಬಡತಿಸಿಕ್ಕಿದಾಗ, ಅದೇ ಕಾರ್ಯನಿರ್ವಾಹಕನು ಫೋನ್‌ ಮಾಡಿ ಮ್ಯಾನ್‌ಫ್ರೆಡ್‌ನನ್ನು ಅಭಿನಂದಿಸಿದನು ಮತ್ತು ಅವನು ಸತ್ಯವಂತನಾಗಿದ್ದ ಹಿಂದಿನ ಘಟನೆಯನ್ನು ಜ್ಞಾಪಿಸಿಕೊಂಡನು.

ಯೆಹೋವನು ಸತ್ಯದ ದೇವರಾಗಿರುವುದರಿಂದ, ಆತನೊಂದಿಗೆ ಯಾರಾದರೂ ಆಪ್ತ ಸಂಬಂಧವನ್ನಿಡಲು ಬಯಸುವಲ್ಲಿ, ಅವರು “ಸುಳ್ಳಾಡುವುದನ್ನು ಬಿಟ್ಟುಬಿಟ್ಟು” ‘ಸತ್ಯವನ್ನೇ ಆಡಬೇಕು.’ ದೇವರ ಸೇವಕನಾಗಿರುವವನು ಸತ್ಯವನ್ನು ಪ್ರೀತಿಸಬೇಕು. “ಸತ್ಯಸಾಕ್ಷಿಯು ಸುಳ್ಳಾಡನು” ಎಂದು ವಿವೇಕಿ ಪುರುಷನು ಬರೆದನು. ಆದರೆ, ಸುಳ್ಳು ಅಂದರೇನು?​—⁠ಎಫೆಸ 4:25; ಜ್ಞಾನೋಕ್ತಿ 14:⁠5.

ಸುಳ್ಳು ಅಂದರೇನು?

ಸುಳ್ಳು ಅಂದರೆ ಅಸತ್ಯವಾದ ಒಂದು ಸಂಗತಿಯಾಗಿದೆ. ಆದರೆ ಪ್ರತಿಯೊಂದು ಅಸತ್ಯ ಸಂಗತಿ ಒಂದು ಸುಳ್ಳು ಆಗಿರುವುದಿಲ್ಲ. ಹೀಗೇಕೆ? “ನಿಜವಲ್ಲವೆಂದು ತನಗೆ ತಿಳಿದಿರುವ ಇಲ್ಲವೆ ತಾನು ನಂಬುವ ಒಂದು ವಿಷಯವನ್ನು, ಮೋಸಮಾಡುವ ಉದ್ದೇಶದಿಂದ ಹೇಳುವುದೇ” ಒಂದು ಸುಳ್ಳಾಗಿದೆಯೆಂದು ಒಂದು ಶಬ್ದಕೋಶ ಅರ್ಥನಿರೂಪಿಸುತ್ತದೆ. ಹೌದು, ಸುಳ್ಳುಹೇಳುವುದರಲ್ಲಿ ಯಾರಿಗಾದರೂ ಮೋಸಮಾಡುವ ಉದ್ದೇಶವಿರುತ್ತದೆ. ಆದರೆ ಒಬ್ಬ ವ್ಯಕ್ತಿ ತನಗರಿವಿಲ್ಲದೆ ಅಸತ್ಯವಾದ ಒಂದು ಸಂಗತಿಯನ್ನು ಹೇಳುವುದಾದರೆ, ಉದಾಹರಣೆಗೆ ತಿಳಿಯದೆ ವಾಸ್ತವಾಂಶಗಳ ಇಲ್ಲವೆ ಸಂಖ್ಯೆಗಳ ಬಗ್ಗೆ ಸರಿಯಲ್ಲದ ಮಾಹಿತಿಯನ್ನು ಕೊಡುವಲ್ಲಿ ಅದೊಂದು ಸುಳ್ಳಾಗಿರುವುದಿಲ್ಲ.

ಅಷ್ಟುಮಾತ್ರವಲ್ಲದೆ ನಾವು ಈ ವಿಷಯವನ್ನೂ ಪರಿಗಣಿಸಬೇಕು: ಒಂದು ವಿಷಯದ ಕುರಿತು ನಮ್ಮ ಬಳಿ ಕೇಳುತ್ತಿರುವವರಿಗೆ ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕಿದೆಯೊ? ದೃಷ್ಟಾಂತಕ್ಕಾಗಿ, ಬೇರೊಂದು ಕಂಪೆನಿಯ ಕಾರ್ಯನಿರ್ವಾಹಕನು ಮ್ಯಾನ್‌ಫ್ರೆಡ್‌ಗೆ ಅದೇ ಪ್ರಶ್ನೆಗಳನ್ನು ಕೇಳಿದ್ದರೆ, ಅವನಿಗೆ ಎಲ್ಲ ವಿಷಯವನ್ನು ಹೇಳುವ ಹಂಗಿರುತ್ತಿತ್ತೊ? ಇಲ್ಲ. ಏಕೆಂದರೆ ಆ ಕಾರ್ಯನಿರ್ವಾಹಕನಿಗೆ ಅಂಥ ಮಾಹಿತಿಯನ್ನು ಪಡೆದುಕೊಳ್ಳುವ ಹಕ್ಕಿಲ್ಲ. ಆದರೆ ಆ ಸಂದರ್ಭದಲ್ಲೂ, ಮ್ಯಾನ್‌ಫ್ರೆಡ್‌ ಸುಳ್ಳು ಹೇಳುವುದು ತಪ್ಪಾಗಿರುತ್ತಿತ್ತು.

ಈ ವಿಷಯದಲ್ಲಿ ಯೇಸು ಕ್ರಿಸ್ತನು ಯಾವ ಮಾದರಿಯನ್ನಿಟ್ಟನು? ಒಮ್ಮೆ ಯೇಸು, ತನ್ನ ಶಿಷ್ಯರಲ್ಲದ ಕೆಲವು ಮಂದಿಯೊಂದಿಗೆ ಮಾತಾಡುತ್ತಾ ಇದ್ದನು. ಅವರು ಅವನ ಪ್ರಯಾಣದ ಯೋಜನೆಗಳ ಬಗ್ಗೆ ಆಸಕ್ತಿತೋರಿಸಿದರು. “ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು” ಎಂದು ಅವರು ಅವನಿಗೆ ಸಲಹೆಕೊಟ್ಟರು. ಯೇಸುವಿನ ಉತ್ತರವೇನಾಗಿತ್ತು? “ನೀವೇ [ಯೆರೂಸಲೇಮಿನಲ್ಲಿ] ಜಾತ್ರೆಗೆ ಹೋಗಿರಿ; ನನ್ನ ಸಮಯವು ಇನ್ನೂ ಒದಗದೆ ಇರುವದರಿಂದ ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲ.” ಆದರೆ ಸ್ವಲ್ಪ ಸಮಯದ ಬಳಿಕ, ಯೇಸು ಜಾತ್ರೆಗಾಗಿ ಯೆರೂಸಲೇಮಿಗೆ ಹೋದನು. ಹಾಗಾದರೆ ಅವನು ಆ ರೀತಿ ಉತ್ತರಕೊಟ್ಟದ್ದೇಕೆ? ಏಕೆಂದರೆ ಅವನು ಯಾವಾಗ ಎಲ್ಲಿ ಹೋಗುತ್ತಾನೆಂಬುದರ ಬಗ್ಗೆ ಅವರು ಎಲ್ಲ ವಿವರಗಳನ್ನು ತಿಳಿದುಕೊಳ್ಳುವ ಆವಶ್ಯಕತೆಯಿರಲಿಲ್ಲ. ಹೀಗಿದ್ದರೂ ಯೇಸು ಅಸತ್ಯವನ್ನಾಡಲಿಲ್ಲ, ಬದಲಾಗಿ ತನಗೂ ತನ್ನ ಹಿಂಬಾಲಕರಿಗೂ ಅವರು ಮಾಡಬಹುದಾದ ಹಾನಿಯನ್ನು ತಡೆಯಲಿಕ್ಕಾಗಿ ಅಪೂರ್ಣವಾದ ಉತ್ತರ ಕೊಟ್ಟನು. ಇದೊಂದು ಸುಳ್ಳಾಗಿರಲಿಲ್ಲ. ಆದುದರಿಂದಲೇ ಅಪೊಸ್ತಲ ಪೇತ್ರನು ಕ್ರಿಸ್ತನ ಕುರಿತಾಗಿ ಹೀಗನ್ನಲು ಶಕ್ತನಾಗಿದ್ದನು: “ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.”​—⁠ಯೋಹಾನ 7:1-13; 1 ಪೇತ್ರ 2:⁠22.

ಸ್ವತಃ ಪೇತ್ರನ ಬಗ್ಗೆ ಏನು ಹೇಳಬಹುದು? ಯೇಸುವನ್ನು ಬಂಧಿಸಲಾದ ರಾತ್ರಿಯಂದು, ಪೇತ್ರನು ತನಗೆ ಯೇಸುವಿನ ಪರಿಚಯವೇ ಇಲ್ಲವೆಂದು ಹೇಳುತ್ತಾ ಮೂರು ಸಲ ಸುಳ್ಳು ಹೇಳಿದನಲ್ಲವೊ? ಪೇತ್ರನು ಮನುಷ್ಯನ ಭಯಕ್ಕೆ ಮಣಿದು ಸುಳ್ಳು ಹೇಳಿದ್ದು ನಿಜ. ಆದರೆ ಆ ಕೂಡಲೇ ಅವನು “ಬಹು ವ್ಯಥೆಪಟ್ಟು ಅತ್ತನು” ಮತ್ತು ಪಶ್ಚಾತ್ತಾಪಪಟ್ಟನು. ಅವನ ಪಾಪವನ್ನು ಕ್ಷಮಿಸಲಾಯಿತು. ಅಲ್ಲದೆ, ಅವನ ಈ ತಪ್ಪಿನಿಂದ ಅವನು ಪಾಠವನ್ನೂ ಕಲಿತನು. ಕೆಲವು ದಿನಗಳ ಬಳಿಕ ಅವನು ಬಹಿರಂಗವಾಗಿ ಎಲ್ಲರ ಮುಂದೆ ಯೇಸುವಿನ ಬಗ್ಗೆ ಮಾತಾಡಿದನು ಮತ್ತು ಯೆರೂಸಲೇಮಿನಲ್ಲಿದ್ದ ಯೆಹೂದಿ ಅಧಿಕಾರಿಗಳು ಬೆದರಿಕೆಯನ್ನೊಡ್ಡಿದಾಗ ತನ್ನ ಕೆಲಸವನ್ನು ನಿಲ್ಲಿಸಲು ದೃಢವಾಗಿ ನಿರಾಕರಿಸಿದನು. ಪೇತ್ರನು ಕ್ಷಣಿಕವಾಗಿ ತಪ್ಪಿಬಿದ್ದು ಕೂಡಲೇ ಚೇತರಿಸಿಕೊಂಡ ಈ ಪ್ರಸಂಗವು, ಒಂದೇ ಒಂದು ಕ್ಷಣದ ಬಲಹೀನತೆಯಿಂದ ಪರವಶರಾಗಿ ಮಾತಿನಲ್ಲೊ ಕ್ರಿಯೆಯಲ್ಲೊ ಎಡವಿಬೀಳಬಹುದಾದ ನಮಗೆಲ್ಲರಿಗೂ ಉತ್ತೇಜನದಾಯಕವಾಗಿರಬೇಕು.​—⁠ಮತ್ತಾಯ 26:​69-75; ಅ. ಕೃತ್ಯಗಳು 4:​18-20; 5:​27-32; ಯಾಕೋಬ 3:⁠2.

ಸತ್ಯವು ಶಾಶ್ವತವಾಗಿ ಸ್ಥಾಪಿಸಲ್ಪಡುವುದು

“ಸತ್ಯದ ತುಟಿ ಶಾಶ್ವತ; ಸುಳ್ಳಿನ ನಾಲಿಗೆ ಕ್ಷಣಿಕ” ಎಂದು ಜ್ಞಾನೋಕ್ತಿ 12:19 ವಿವರಿಸುತ್ತದೆ. ಹೌದು, ಸತ್ಯದ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ. ಜನರು ಸತ್ಯವನ್ನಾಡಲು ಬದ್ಧರಾಗಿರುವಾಗ ಮತ್ತು ಅದಕ್ಕೆ ಹೊಂದಿಕೆಯಲ್ಲಿ ಜೀವಿಸುವಾಗ, ಮಾನವ ಸಂಬಂಧಗಳು ಹೆಚ್ಚು ಸ್ಥಿರವೂ ತೃಪ್ತಿದಾಯಕವೂ ಆಗಿರುತ್ತವೆ. ಸತ್ಯವಂತರಾಗಿರುವುದರಿಂದ ತತ್‌ಕ್ಷಣದ ಪ್ರತಿಫಲಗಳೂ ಸಿಗುತ್ತವೆ. ಅವುಗಳಲ್ಲಿ ಶುದ್ಧ ಮನಸ್ಸಾಕ್ಷಿ, ಒಳ್ಳೇ ಹೆಸರು ಮತ್ತು ವಿವಾಹ, ಕುಟುಂಬ, ಸ್ನೇಹಿತರ ಮಧ್ಯೆ ಹಾಗೂ ವ್ಯಾಪಾರದಲ್ಲಿಯೂ ಬಲವಾದ ಸಂಬಂಧಗಳು ಒಳಗೂಡಿವೆ.

ಇನ್ನೊಂದು ಬದಿಯಲ್ಲಿ ಸುಳ್ಳುಗಳು ಕಾಲಾನಂತರ ಬಯಲಾಗುತ್ತವೆ. ಸುಳ್ಳನ್ನು ಹೇಳುವ ನಾಲಗೆಯು ಕೆಲಕಾಲ ವಂಚಿಸಬಹುದು, ಆದರೆ ಅಸತ್ಯಕ್ಕೆ ಬಹುಕಾಲ ಉಳಿವಿಲ್ಲ. ಅದಲ್ಲದೆ, ಸತ್ಯದ ದೇವರಾಗಿರುವ ಯೆಹೋವನು ಅಸತ್ಯವನ್ನು ಮತ್ತು ಸುಳ್ಳುಗಳನ್ನು ಪ್ರವರ್ಧಿಸುವವರನ್ನು ಸಹಿಸುವ ಸಮಯ ಮುಗಿಯಲಿದೆ. ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿರುವ ಸುಳ್ಳಿನ ತಂದೆಯಾಗಿರುವ ಪಿಶಾಚನಾದ ಸೈತಾನನ ಪ್ರಭಾವವನ್ನು ಯೆಹೋವನು ಅಳಿಸಿಹಾಕುವನೆಂದು ಬೈಬಲ್‌ ಮಾತುಕೊಡುತ್ತದೆ. ಆತನು ಖಂಡಿತವಾಗಿಯೂ ಎಲ್ಲ ಸುಳ್ಳುಗಳಿಗೂ ಸುಳ್ಳುಗಾರರಿಗೂ ಬೇಗನೆ ಅಂತ್ಯತರುವನು.​—⁠ಪ್ರಕಟನೆ 21:⁠8.

“ಸತ್ಯದ ತುಟಿಯು” ಶಾಶ್ವತಕ್ಕೂ ಸ್ಥಾಪಿಸಲ್ಪಡುವಾಗ ಎಷ್ಟು ನೆಮ್ಮದಿ ಇರುವುದು! (w07 2/1)

[ಪಾದಟಿಪ್ಪಣಿ]

^ ಪ್ಯಾರ. 2 ಅವನ ನಿಜ ಹೆಸರಲ್ಲ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ದುರಾಸೆ ಮತ್ತು ಸ್ವಾರ್ಥಪರ ಹೆಬ್ಬಯಕೆಯು, ಅನೇಕರನ್ನು ಸುಳ್ಳಾಡುವಂತೆ ಪ್ರಚೋದಿಸುತ್ತದೆ

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸುಳ್ಳು ಅಂದರೆ ಅಸತ್ಯವಾದ ಒಂದು ಸಂಗತಿ, ಆದರೆ ಪ್ರತಿಯೊಂದು ಅಸತ್ಯ ಸಂಗತಿ ಒಂದು ಸುಳ್ಳು ಆಗಿರುವುದಿಲ್ಲ

[ಪುಟ 6ರಲ್ಲಿರುವ ಚಿತ್ರ]

ಪೇತ್ರನು ಕ್ರಿಸ್ತನನ್ನು ಅಲ್ಲಗಳೆದಂಥ ಸಂಗತಿಯಿಂದ ನಾವೇನನ್ನು ಕಲಿಯುತ್ತೇವೆ?

[ಪುಟ 7ರಲ್ಲಿರುವ ಚಿತ್ರ]

ಸತ್ಯವನ್ನಾಡುವುದು, ಸ್ಥಿರ ಹಾಗೂ ತೃಪ್ತಿಕರ ಸಂಬಂಧಗಳಲ್ಲಿ ಫಲಿಸುತ್ತದೆ