ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಸುಂದರ ಭೂಮಿಯನ್ನು ಆನಂದಿಸಿರಿ

ನಮ್ಮ ಸುಂದರ ಭೂಮಿಯನ್ನು ಆನಂದಿಸಿರಿ

ನಮ್ಮ ಸುಂದರ ಭೂಮಿಯನ್ನು ಆನಂದಿಸಿರಿ

ಎಲ್ಲೆಯಿಲ್ಲದ ವಿಶ್ವದ ಅಳೆಯಲಾಗದ ವ್ಯಾಪ್ತಿಯಲ್ಲಿ ಮಾನವಕುಲದ ಬೀಡು ಗಣನೆಗೆ ಬಾರದಂತಹ ಸಣ್ಣ ಕಣದಂತಿದೆ ಎಂಬುದನ್ನು ಖಗೋಳಶಾಸ್ತ್ರಜ್ಞರು ನೋಡಿದ್ದಾರೆ. ಆದರೂ, ಇಲ್ಲಿ ಅಸ್ತಿತ್ವದಲ್ಲಿರುವ ಜೀವವು ಭೌತ ವಿಶ್ವದ ಬೇರಾವ ಸ್ಥಳದಲ್ಲೂ ಕಂಡುಬಂದಿಲ್ಲ. ಕೇವಲ ಈ ಭೂಗ್ರಹದಲ್ಲಿ ಮಾತ್ರ ಜೀವಪೋಷಣೆಗಾಗಿ ಬೇಕಾಗಿರುವ ಸರಿಯಾದ ಪರಿಸ್ಥಿತಿಗಳು ಇವೆ.

ಅದಕ್ಕೆ ಕೂಡಿಸಿ, ಈ ಸುಂದರವಾದ ಭೂಮಂಡಲದಲ್ಲಿ ನಾವು ಜೀವನವನ್ನು ಆನಂದಿಸಲೂ ಸಾಧ್ಯವಿದೆ. ಉದಾಹರಣೆಗೆ, ಚಳಿಯಿಂದ ಕೂಡಿದ ಒಂದು ದಿನದಂದು ಸೂರ್ಯನ ಶಾಖದಿಂದ ಬೆಚ್ಚಗಾಗುವ ಅನುಭವವು ಎಷ್ಟೊಂದು ಹಿತಕರವಾಗಿರುತ್ತದೆ! ನಯನ ಮನೋಹರವಾದ ಒಂದು ಸೂರ್ಯೋದಯ ಅಥವಾ ಸೂರ್ಯಾಸ್ತಮಾನವನ್ನು ನೋಡುವುದು ನಮ್ಮಲ್ಲಿ ಯಾರಿಗೆ ಮುದನೀಡುವುದಿಲ್ಲ? ಆದರೆ ಸೂರ್ಯ ಕೇವಲ ನಮ್ಮ ಇಂದ್ರಿಯಗಳಿಗೆ ಮಹದಾನಂದವನ್ನು ತರುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ. ಅದು ನಮ್ಮ ಅಸ್ತಿತ್ವಕ್ಕೆ ಆಧಾರಸ್ತಂಭವಾಗಿದೆ.

ಎಣಿಸಲಾಗದಷ್ಟು ಕೋಟ್ಯಾಂತರ ವರುಷಗಳಿಂದಲೂ ಸೂರ್ಯ ಅದರ ಗುರುತ್ವಾಕರ್ಷಣೆಯ ಬಲದ ಮೂಲಕ ಭೂಮಿ ಮತ್ತು ಇತರ ಗ್ರಹಗಳನ್ನು ಅವುಗಳ ಕಕ್ಷೆಯಲ್ಲಿ ಸ್ಥಿರವಾಗಿರಿಸಿದೆ. ಅಲ್ಲದೆ, ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಲಿಯುವಂತೆ ನಮ್ಮ ಕ್ಷೀರಪಥ ಗ್ಯಾಲಕ್ಸಿಯ ಕೇಂದ್ರದ ಸುತ್ತ ಇಡೀ ಸೌರವ್ಯೂಹ ಸಹ ತನ್ನದೇ ಆದ ಕಕ್ಷೆಯಲ್ಲಿ ಸುತ್ತುತ್ತದೆ. ಆದರೆ ನಮ್ಮ ಸೌರವ್ಯೂಹದ ಈ ಸೂರ್ಯ, ಕ್ಷೀರಪಥ ಗ್ಯಾಲಕ್ಸಿಯ ಕೇಂದ್ರದ ಸುತ್ತ ತಿರುಗುತ್ತಿರುವ 10,000 ಕೋಟಿ ನಕ್ಷತ್ರಗಳಲ್ಲಿ ಕೇವಲ ಒಂದಾಗಿದೆ.

ಕ್ಷೀರಪಥ ಗ್ಯಾಲಕ್ಸಿಯು ಸುಮಾರು 35 ಗ್ಯಾಲಕ್ಸಿಗಳಿರುವ ಒಂದು ಗುಚ್ಛದಲ್ಲಿ ಗುರುತ್ವಾಕರ್ಷಣ ಬಲದಿಂದ ಹಿಡಿದಿಡಲ್ಪಟ್ಟಿದೆ. ಇದಕ್ಕಿಂತ ದೊಡ್ಡ ಗುಚ್ಛಗಳಲ್ಲಿ ಸಾವಿರಾರು ಗ್ಯಾಲಕ್ಸಿಗಳಿರುತ್ತವೆ. ನಮ್ಮ ಸೌರವ್ಯೂಹವು ಈಗಿರುವುದಕ್ಕಿಂತ ದೊಡ್ಡದಾದ ಮತ್ತು ಕಿಕ್ಕಿರಿದ ಗ್ಯಾಲಕ್ಸಿಗಳ ಗುಚ್ಛದಲ್ಲಿ ಇರುತ್ತಿದ್ದಲ್ಲಿ ಅದು ಇಷ್ಟು ಸ್ಥಿರವಾಗಿರುತ್ತಿರಲಿಲ್ಲ. ಆದರೆ, ಅದು ಈಗ ಎಲ್ಲಿದೆಯೋ ಆ ಪ್ರದೇಶವು “ನಮ್ಮಂತಹ ಜಟಿಲವಾದ ಜೀವಕ್ಕೆ ಯೋಗ್ಯ”ವಾಗಿರುವಂತೆ ಮತ್ತೊಂದು ಪ್ರದೇಶ ಈ ವಿಶ್ವದಲ್ಲಿಲ್ಲ ಎಂದು ಗಿಲ್ಯರ್ಮೋ ಗನ್‌ಸಾಲಸ್‌ ಮತ್ತು ಜೇ ಡಬ್ಲ್ಯೂ. ರಿಚರ್ಡ್ಸ್‌ರವರು ಅತಿ ಅಪೂರ್ವ ಗ್ರಹ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ.

“ಮಹಾ ಸ್ಫೋಟ”ವೆಂಬ ಒಂದು ಆಕಸ್ಮಿಕ ಘಟನೆಯ ಕಾರಣದಿಂದ ಈ ಗ್ರಹದಲ್ಲಿ ಜೀವ ಅಸ್ತಿತ್ವಕ್ಕೆ ಬಂತೊ? ಅಥವಾ ಈ ಸುಂದರವಾದ ಭೂಗ್ರಹದಲ್ಲಿರುವ ಜೀವಕ್ಕೆ ಹೆಚ್ಚು ಮಹತ್ವಭರಿತವಾದ ಉದ್ದೇಶವಿದೆಯೋ?

ನಮ್ಮ ಭೂಗ್ರಹವು ಜೀವವನ್ನು ಪೋಷಿಸಲು ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿತ್ತು ಎಂಬ ನಿರ್ಧಾರಕ್ಕೆ ಅನೇಕರು ಬಂದಿದ್ದಾರೆ. * ಶತಮಾನಗಳ ಹಿಂದೆ, ಒಬ್ಬ ಹೀಬ್ರು ಕವಿಯು ಭೂಮಿ ಮತ್ತು ಆಕಾಶದ ಕಡೆಗೆ ಗಮನಸೆಳೆಯುತ್ತಾ ಬರೆದದು: ‘ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ ಮನುಷ್ಯನು ಎಷ್ಟು ಮಾತ್ರದವನು?’ (ಕೀರ್ತನೆ 8:3, 4) ಒಬ್ಬ ಸೃಷ್ಟಿಕರ್ತನು ಖಂಡಿತವಾಗಿಯೂ ಇದ್ದಾನೆ ಎಂದು ಈ ಕವಿಯು ನಂಬಿದನು. ಆದರೆ ನಮ್ಮ ಈ ವೈಜ್ಞಾನಿಕ ಯುಗದಲ್ಲಿ ಅದೊಂದು ತರ್ಕಸಮ್ಮತ ತೀರ್ಮಾನವಾಗಿದೆಯೋ? (w07 2/15)

[ಪಾದಟಿಪ್ಪಣಿ]

^ ಪ್ಯಾರ. 7 ಕೀರ್ತನೆಗಳ ಪುಸ್ತಕ, ಅದರಲ್ಲೂ 8ನೇ ಕೀರ್ತನೆಯನ್ನು ನೋಡಿರಿ.

[ಪುಟ 3ರಲ್ಲಿರುವ ಚೌಕ/ಚಿತ್ರ]

“ಅಂತರಿಕ್ಷದ ಅಂಧಕಾರದಲ್ಲಿ ದೂರದಿಂದ ನೋಡುವಾಗ ಭೂಮಿಯು ಒಂದು ನೀಲ ರತ್ನಮಣಿಯಂತೆ ಹೊಳೆಯುತ್ತದೆ.”​—⁠ಸಚಿತ್ರ ವಿಜ್ಞಾನ ವಿಶ್ವಕೋಶ - ವಿಸ್ಮಯಕರ ಭೂಗ್ರಹ (ಇಂಗ್ಲಿಷ್‌).

[ಕೃಪೆ]

ಭೂಗೋಳ: U.S. Fish & Wildlife Service, Washington, D.C./NASA