ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ

ನಾವು ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ

ನಾವು ಒಟ್ಟಾಗಿ ಯೆಹೋವನ ಹೆಸರನ್ನು ಘನಪಡಿಸೋಣ

“ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.”​—⁠ಕೀರ್ತನೆ 34:⁠3.

ಯೇಸು ಮತ್ತು ಅವನ ಅಪೊಸ್ತಲರು ಸಾ.ಶ. 33 ನೈಸಾನ್‌ 14ರ ರಾತ್ರಿಯಂದು ಯೆರೂಸಲೇಮಿನಲ್ಲಿ ಮೇಲಂತಸ್ತಿನ ಒಂದು ಕೋಣೆಯಲ್ಲಿ ಜೊತೆಗೂಡಿ ಯೆಹೋವನಿಗೆ ಕೀರ್ತನೆಗಳನ್ನು ಅಥವಾ ಸ್ತುತಿಗಳನ್ನು ಹಾಡಿದರು. (ಮತ್ತಾಯ 26:30) ಇದು, ಯೇಸು ತನ್ನ ಮಾನವ ಜೀವನದಲ್ಲಿ ಕೊನೆ ಬಾರಿ ತನ್ನ ಅಪೊಸ್ತಲರೊಂದಿಗೆ ಕೂಡಿ ಹಾಡಿದ ಸ್ತುತಿಗಳಾಗಿದ್ದವು. ಅವನು ಈ ರೀತಿಯಲ್ಲಿ ಅವರೊಂದಿಗಿನ ತನ್ನ ಕೂಟವನ್ನು ಮುಕ್ತಾಯಗೊಳಿಸಿದ್ದು ಸೂಕ್ತವಾಗಿತ್ತು. ಏಕೆಂದರೆ ತನ್ನ ಭೂಶುಶ್ರೂಷೆಯ ಆರಂಭದಿಂದ ಹಿಡಿದು ಕೊನೆಯ ವರೆಗೂ ಅವನು ತನ್ನ ತಂದೆಯನ್ನು ಸ್ತುತಿಸಿದ್ದನು ಮತ್ತು ಹುರುಪಿನಿಂದ ಆತನ ಹೆಸರನ್ನು ಎಲ್ಲರಿಗೂ ತಿಳಿಯಪಡಿಸಿದ್ದನು. (ಮತ್ತಾಯ 4:10; 6:9; 22:​37, 38; ಯೋಹಾನ 12:28; 17:⁠6) ಹೀಗೆ ಅವನು ಕಾರ್ಯತಃ ಕೀರ್ತನೆಗಾರನ ಈ ಹಾರ್ದಿಕ ಆಮಂತ್ರಣವನ್ನು ಪುನರಾವರ್ತಿಸಿದನು: “ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.” (ಕೀರ್ತನೆ 34:3) ಅನುಸರಿಸಲಿಕ್ಕಾಗಿ ನಮಗೆಷ್ಟು ಉತ್ತಮ ಮಾದರಿ ಇದಾಗಿದೆ!

2 ಯೇಸುವಿನೊಂದಿಗೆ ಸ್ತುತಿಗಳನ್ನು ಹಾಡುತ್ತಾ ಕೆಲ ತಾಸುಗಳನ್ನು ಕಳೆದ ಬಳಿಕ, ಅಪೊಸ್ತಲ ಯೋಹಾನನು ಇದಕ್ಕಿಂತ ತೀರ ಭಿನ್ನವಾದ ಘಟನೆಯೊಂದನ್ನು ಕಣ್ಣಾರೆ ನೋಡಿದನು. ತನ್ನ ಧಣಿಯಾದ ಯೇಸು ಹಾಗೂ ಇಬ್ಬರು ಅಪರಾಧಿಗಳು ಯಾತನಾ ಕಂಭಗಳ ಮೇಲೆ ಸಾಯಿಸಲ್ಪಡುವುದನ್ನು ಅವನು ನೋಡಿದನು. ಆ ಅಪರಾಧಿಗಳು ಬೇಗ ಸಾಯುವಂತೆ ಮಾಡಲು ರೋಮನ್‌ ಸೈನಿಕರು ಅವರ ಕಾಲು ಮುರಿದರು, ಆದರೆ ಯೇಸುವಿನ ಕಾಲುಗಳನ್ನು ಮುರಿಯಲಿಲ್ಲವೆಂದು ಯೋಹಾನನು ವರದಿಸುತ್ತಾನೆ. ಏಕೆಂದರೆ ಆ ಸೈನಿಕರು ಯೇಸುವಿನ ಬಳಿ ಬರುವಷ್ಟರಲ್ಲಿ ಅವನು ಸತ್ತುಹೋಗಿದ್ದನು. ಇದು, ‘ಅವನ ಎಲುಬುಗಳಲ್ಲಿ ಒಂದಾದರೂ ಮುರಿದುಹೋಗುವದಿಲ್ಲ’ ಎಂಬ 34ನೇ ಕೀರ್ತನೆಯ ಇನ್ನೊಂದು ಭಾಗದ ನೆರವೇರಿಕೆ ಆಗಿತ್ತೆಂದು ಯೋಹಾನನು ತದನಂತರ ಬರೆದ ಸುವಾರ್ತಾ ಪುಸ್ತಕದಲ್ಲಿ ವಿವರಿಸಿದನು.​—⁠ಯೋಹಾನ 19:32-36; ಕೀರ್ತನೆ 34:​20.

3 ಕ್ರೈಸ್ತರಿಗೆ ಆಸಕ್ತಿಕರವಾಗಿರುವ ಇನ್ನೂ ಅನೇಕ ವಿಷಯಗಳು ಈ 34ನೇ ಕೀರ್ತನೆಯಲ್ಲಿವೆ. ಆದುದರಿಂದ ಈ ಲೇಖನ ಹಾಗೂ ಮುಂದಿನ ಲೇಖನದಲ್ಲಿ ನಾವು, ದಾವೀದನು ಯಾವ ಪರಿಸ್ಥಿತಿಗಳಲ್ಲಿದ್ದಾಗ ಈ ಕೀರ್ತನೆ ಬರೆದನು ಎಂಬದನ್ನು ಮತ್ತು ಈ ಕೀರ್ತನೆಯಲ್ಲಿನ ಉತ್ತೇಜನದಾಯಕ ವಿಷಯಗಳನ್ನು ಪರಿಗಣಿಸಲಿದ್ದೇವೆ.

ಸೌಲನಿಂದ ತಪ್ಪಿಸಿಕೊಳ್ಳಲು ದಾವೀದನ ಪಲಾಯನ

4 ದಾವೀದನು ಒಬ್ಬ ಯುವಕನಾಗಿದ್ದಾಗ ಸೌಲನು ಇಸ್ರಾಯೇಲಿನ ರಾಜನಾಗಿದ್ದನು. ಆದರೆ ಸೌಲನು ಅವಿಧೇಯನಾದುದರಿಂದ ಯೆಹೋವನ ಅನುಗ್ರಹವನ್ನು ಕಳೆದುಕೊಂಡನು. ಈ ಕಾರಣಕ್ಕಾಗಿ ಪ್ರವಾದಿ ಸಮುವೇಲನು ಅವನಿಗೆ ಹೀಗಂದನು: “ಯೆಹೋವನು ಈ ಹೊತ್ತು ಇಸ್ರಾಯೇಲ್‌ರಾಜ್ಯವನ್ನು ನಿನ್ನಿಂದ ಕಿತ್ತು ನಿನಗಿಂತ ಉತ್ತಮವಾದ ಇನ್ನೊಬ್ಬನಿಗೆ ಕೊಟ್ಟಿದ್ದಾನೆ.” (1 ಸಮುವೇಲ 15:28) ತದನಂತರ ಯೆಹೋವನು ಸಮುವೇಲನಿಗೆ, ಇಷಯನ ಪುತ್ರರಲ್ಲಿ ಕಿರಿಯವನಾಗಿದ್ದ ದಾವೀದನನ್ನು ಇಸ್ರಾಯೇಲಿನ ಮುಂದಿನ ರಾಜನಾಗಿ ಅಭಿಷೇಕಿಸುವಂತೆ ನಿರ್ದೇಶಿಸಿದನು. ಈ ಮಧ್ಯೆ, ದೇವರ ಆತ್ಮವನ್ನು ಕಳೆದುಕೊಂಡಿದ್ದ ರಾಜ ಸೌಲನ ಮನಃಸ್ಥಿತಿಯು ಆಗಾಗ್ಗೆ ಕೆಡುತ್ತಿತ್ತು. ಆದುದರಿಂದ ಕುಶಲ ಸಂಗೀತಗಾರನಾಗಿದ್ದ ದಾವೀದನನ್ನು ರಾಜನ ಸೇವೆಗಾಗಿ ಗಿಬೆಯಕ್ಕೆ ಕರೆತರಲಾಯಿತು. ದಾವೀದನು ನುಡಿಸುತ್ತಿದ್ದ ಸಂಗೀತವು ಸೌಲನಿಗೆ ಬಹಳಷ್ಟು ಉಪಶಮನವನ್ನು ನೀಡುತ್ತಿತ್ತು. ಇದರಿಂದಾಗಿ ಅವನು ದಾವೀದನನ್ನು ‘ಬಹಳವಾಗಿ ಪ್ರೀತಿ’ಸಲಾರಂಭಿಸಿದನು.​—⁠1 ಸಮುವೇಲ 16:​11, 13, 21, 23.

5 ಸಮಯ ದಾಟಿದಂತೆ, ಯೆಹೋವನು ದಾವೀದನೊಂದಿಗೆ ಇದ್ದಾನೆಂಬುದು ಸ್ಪಷ್ಟವಾಗಿ ತೋರಿಬಂತು. ಫಿಲಿಷ್ಟಿಯದ ದೈತ್ಯ ಗೊಲ್ಯಾತನನ್ನು ಸದೆಬಡಿಯಲು ಆತನು ದಾವೀದನಿಗೆ ಸಹಾಯಮಾಡಿದನು. ಅಲ್ಲದೆ, ದಾವೀದನ ಮಿಲಿಟರಿ ಪರಾಕ್ರಮಗಳಿಗಾಗಿ ಅವನಿಗೆ ಇಸ್ರಾಯೇಲಿನಲ್ಲಿ ಸನ್ಮಾನ ಸಿಗಲಾರಂಭಿಸುತ್ತಾ ಹೋದಂತೆಯೂ ಯೆಹೋವನು ಅವನನ್ನು ಬೆಂಬಲಿಸಿದನು. ಆದರೆ ದಾವೀದನಿಗೆ ಯೆಹೋವನ ಆಶೀರ್ವಾದ ಸಿಗುವುದನ್ನು ನೋಡಿ ಸೌಲನು ಹೊಟ್ಟೆಕಿಚ್ಚುಪಟ್ಟು, ಅವನನ್ನು ದ್ವೇಷಿಸಲಾರಂಭಿಸಿದನು. ಆದುದರಿಂದ ದಾವೀದನು ಅವನ ಮುಂದೆ ಕಿನ್ನರಿಯನ್ನು ಬಾರಿಸುತ್ತಿದ್ದ ಎರಡು ಸಂದರ್ಭಗಳಲ್ಲಿ ಸೌಲನು ಅವನೆಡೆಗೆ ಈಟಿಯನ್ನು ಎಸೆದನು. ಆದರೆ ಈ ಎರಡೂ ಸಲ ದಾವೀದನು ಫಕ್ಕನೆ ಸರಿದುಕೊಂಡು ಅದರಿಂದ ತಪ್ಪಿಸಿಕೊಂಡನು. ಮೂರನೇ ಬಾರಿ ಸೌಲನು ಅವನನ್ನು ಕೊಲ್ಲಲು ಯತ್ನಿಸಿದಾಗ, ಇಸ್ರಾಯೇಲಿನ ಈ ಭಾವೀ ರಾಜನು ತನ್ನ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿಹೋಗಲೇಬೇಕು ಎಂಬುದನ್ನು ಮನಗಂಡನು. ಸೌಲನು ಅವನನ್ನು ಸೆರೆಹಿಡಿದು ಕೊಲ್ಲಲಿಕ್ಕೆ ಅವನ ಬೆನ್ನಹಿಂದೆ ಬಿದ್ದದ್ದರಿಂದ, ಕಟ್ಟಕಡೆಗೆ ದಾವೀದನು ಇಸ್ರಾಯೇಲಿನ ಪ್ರದೇಶದಾಚೆಗೆ ಆಶ್ರಯ ಪಡೆಯಲು ನಿರ್ಧರಿಸಿದನು.​—⁠1 ಸಮುವೇಲ 18:11; 19:​9, 10.

6 ದಾವೀದನು ಇಸ್ರಾಯೇಲಿನ ಗಡಿಯತ್ತ ಪ್ರಯಾಣಿಸುತ್ತಿದ್ದಾಗ ದಾರಿಯಲ್ಲಿ, ದೇವಗುಡಾರವು ಇದ್ದ ನೋಬ್‌ ಎಂಬ ಊರಲ್ಲಿ ತಂಗಿದನು. ತನ್ನ ಈ ಪಲಾಯನದಲ್ಲಿ ಅವನೊಂದಿಗೆ ಯುವ ಪುರುಷರಿದ್ದರೆಂದು ವ್ಯಕ್ತವಾಗುತ್ತದೆ. ಆದುದರಿಂದ ಅವರಿಗಾಗಿ ಹಾಗೂ ತನಗಾಗಿ ಅವನು ಅಲ್ಲಿ ಅನ್ನಪಾನಗಳನ್ನು ಕೋರಿದನು. ಮಹಾ ಯಾಜಕನು ಅವರಿಗೆ ಸ್ವಲ್ಪ ಆಹಾರವನ್ನು ಕೊಟ್ಟನು ಮತ್ತು ಅದರೊಂದಿಗೆ, ಗೊಲ್ಯಾತನನ್ನು ಹತಿಸಿ ದಾವೀದನು ತೆಗೆದುಕೊಂಡು ಬಂದಿದ್ದ ಕತ್ತಿಯನ್ನು ಸಹ ಅವರಿಗೆ ಕೊಟ್ಟನು. ಇದರ ಬಗ್ಗೆ ಸೌಲನಿಗೆ ತಿಳಿದುಬಂತು ಮತ್ತು ಈ ಸಿಟ್ಟಿನಿಂದ ಅವನು 85 ಯಾಜಕರ ಸಮೇತ ಆ ಪಟ್ಟಣದ ಎಲ್ಲ ನಿವಾಸಿಗಳನ್ನು ಸಂಹಾರಮಾಡಿದನು.​—⁠1 ಸಮುವೇಲ 21:​1, 2; 22:​12, 13, 18, 19; ಮತ್ತಾಯ 12:​3, 4.

ಇನ್ನೊಂದು ಬಾರಿ ಮೃತ್ಯುವಿನಿಂದ ತಪ್ಪಿಸಿಕೊಂಡದ್ದು

7 ದಾವೀದನು ನೋಬ್‌ ಊರಿನಿಂದ ಪಶ್ಚಿಮ ದಿಕ್ಕಿನಲ್ಲಿ 40 ಕಿಲೊಮೀಟರ್‌ ದೂರದಲ್ಲಿದ್ದ ಫಿಲಿಷ್ಟಿಯರ ಪ್ರದೇಶಕ್ಕೆ ಪಲಾಯನಮಾಡುತ್ತಾ, ಗೊಲ್ಯಾತನ ಸ್ವಂತ ಪಟ್ಟಣವಾಗಿದ್ದ ಗತ್‌ ಊರಿನಲ್ಲಿ ರಾಜ ಆಕೀಷನಿಂದ ಆಶ್ರಯವನ್ನು ಕೋರಿದನು. ತಾನು ಗತ್‌ ಊರಿನಲ್ಲಿರುವುದನ್ನು ಸೌಲನು ಊಹಿಸಲಿಕ್ಕೂ ಇಲ್ಲವೆಂದು ದಾವೀದನು ಯೋಚಿಸಿರಬಹುದು. ಆದರೆ, ಸ್ವಲ್ಪ ಸಮಯದಲ್ಲೇ ಗತ್‌ ಊರಿನ ರಾಜನ ಸೇವಕರು ದಾವೀದನ ಗುರುತುಹಿಡಿದರು. ಅವರಿಗೆ ತಾನು ಯಾರೆಂದು ತಿಳಿದುಬಂದಿದೆ ಎಂಬುದನ್ನು ಕೇಳಿಸಿಕೊಂಡಾಗ ದಾವೀದನು “ಗತ್‌ ಊರಿನ ಅರಸನಾದ ಆಕೀಷನಿಗೆ ಬಹಳವಾಗಿ ಹೆದರಿ”ದನು.​—⁠1 ಸಮುವೇಲ 21:10-12.

8 ಆಗ ಫಿಲಿಷ್ಟಿಯರು ದಾವೀದನನ್ನು ಸೆರೆಹಿಡಿದರು. ಈ ಸಮಯದಲ್ಲೇ ದಾವೀದನು, “ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ತುಂಬಿಸಿಟ್ಟುಕೋ” ಎಂದು ಯೆಹೋವನಿಗೆ ಅಂಗಲಾಚಿಕೊಂಡಿರುವ ಹೃತ್ಪೂರ್ವಕ ಕೀರ್ತನೆಯನ್ನು ರಚಿಸಿದ್ದಿರಬಹುದು. (ಕೀರ್ತನೆ 56:​8, NW ಮತ್ತು ಮೇಲ್ಬರಹ) ಆ ರೀತಿಯಲ್ಲಿ ದಾವೀದನು, ತನಗಿರುವ ದುಃಖವನ್ನು ಯೆಹೋವನು ಮರೆಯದೇ ಪ್ರೀತಿಯಿಂದ ತನ್ನ ಆರೈಕೆಮಾಡುವನು ಮತ್ತು ಸಂರಕ್ಷಿಸುವನು ಎಂಬ ಭರವಸೆಯನ್ನು ವ್ಯಕ್ತಪಡಿಸಿದನು. ಫಿಲಿಷ್ಟಿಯರ ಆ ರಾಜನನ್ನು ಮೋಸಗೊಳಿಸಲಿಕ್ಕಾಗಿ ದಾವೀದನು ಒಂದು ಉಪಾಯವನ್ನೂ ಯೋಚಿಸಿದನು. ಅವನು ಒಬ್ಬ ಹುಚ್ಚನಂತೆ ನಟಿಸಿದನು. ಇದನ್ನು ನೋಡಿ ರಾಜ ಆಕೀಷನು ಇಂಥ “ಹುಚ್ಚ”ನನ್ನು ತನ್ನ ಮುಂದೆ ತಂದದ್ದಕ್ಕಾಗಿ ತನ್ನ ಸೇವಕರನ್ನು ಗದರಿಸಿದನು. ಯೆಹೋವನು ದಾವೀದನ ಉಪಾಯವನ್ನು ಹರಸಿದನೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ದಾವೀದನನ್ನು ಆ ಊರಿನಿಂದ ಓಡಿಸಲಾಯಿತು. ಹೀಗೆ ಅವನು ಕೂದಲೆಳೆಯಷ್ಟರಲ್ಲಿ ಮರಣದಿಂದ ಇನ್ನೊಂದು ಬಾರಿ ತಪ್ಪಿಸಿಕೊಂಡನು.​—⁠1 ಸಮುವೇಲ 21:​13-15.

9 ದಾವೀದನ ಬೆಂಬಲಿಗರು ಅವನೊಂದಿಗೆ ಗತ್‌ ಊರಿಗೆ ಓಡಿಹೋಗಿದ್ದರೊ ಅಥವಾ ಅವನ ರಕ್ಷಣೆಗಾಗಿ ಇಸ್ರಾಯೇಲಿನ ಹತ್ತಿರದ ಹಳ್ಳಿಗಳಲ್ಲಿದ್ದು ಕಾವಲಾಗಿ ನಿಂತಿದ್ದರೊ ಎಂಬುದನ್ನು ಬೈಬಲ್‌ ಹೇಳುವುದಿಲ್ಲ. ಏನಿದ್ದರೂ, ದಾವೀದನು ಹಿಂದಿರುಗಿ ಬಂದು, ಯೆಹೋವನು ತನ್ನನ್ನು ಹೇಗೆ ಇನ್ನೊಮ್ಮೆ ರಕ್ಷಿಸಿದ್ದನೆಂದು ಅವರಿಗೆ ವರದಿಸಿದಾಗ ಅವರ ಆ ಪುನರ್ಮಿಲನವು ಎಷ್ಟು ಹರ್ಷಭರಿತವಾಗಿದ್ದಿರಬೇಕು! ಈ ಘಟನೆಯೇ 34ನೇ ಕೀರ್ತನೆಗೆ ಆಧಾರವಾಗಿತ್ತು. ಇದನ್ನು ಅದರ ಮೇಲ್ಬರಹದಲ್ಲಿ ನೋಡಸಾಧ್ಯವಿದೆ. ಆ ಕೀರ್ತನೆಯ ಮೊದಲ ಏಳು ವಚನಗಳಲ್ಲಿ ದಾವೀದನು, ದೇವರು ತನ್ನನ್ನು ರಕ್ಷಿಸಿದ್ದಕ್ಕಾಗಿ ಆತನನ್ನು ಕೊಂಡಾಡುತ್ತಾನೆ. ಅಲ್ಲದೆ, ಯೆಹೋವನು ತನ್ನ ಜನರ ಮಹಾ ರಕ್ಷಕನೆಂದು ಘನಪಡಿಸುವುದರಲ್ಲಿ ಜೊತೆಗೂಡುವಂತೆ ದಾವೀದನು ತನ್ನ ಬೆಂಬಲಿಗರನ್ನೂ ಆಮಂತ್ರಿಸುತ್ತಾನೆ.​—⁠ಕೀರ್ತನೆ 34:​3, 4, 7.

10 ದಾವೀದನು ಮತ್ತವನ ಪುರುಷರು, ಗತ್‌ ಊರಿನಿಂದ ಸುಮಾರು 15 ಕಿಲೊಮೀಟರ್‌ ದೂರದಲ್ಲಿದ್ದ, ಇಸ್ರಾಯೇಲಿನ ಒಂದು ಪರ್ವತಮಯ ಪ್ರದೇಶದಲ್ಲಿ ಅದುಲ್ಲಾಮೆಂಬ ಗವಿಯಲ್ಲಿ ಆಶ್ರಯ ಪಡೆದರು. ಅವರು ಅಲ್ಲಿದ್ದಾಗ, ರಾಜ ಸೌಲನ ಆಳ್ವಿಕೆಯಿಂದಾಗಿ ಉಂಟಾಗಿದ್ದ ಪರಿಸ್ಥಿತಿಗಳಿಂದ ಅಸಂತುಷ್ಟರಾಗಿದ್ದ ಇಸ್ರಾಯೇಲ್ಯರು ಬಂದು ಅವರೊಂದಿಗೆ ಜೊತೆಗೂಡಲಾರಂಭಿಸಿದರು. (1 ಸಮುವೇಲ 22:​1, 2) ದಾವೀದನು ಕೀರ್ತನೆ 34:​8-22ರ ಮಾತುಗಳನ್ನು ರಚಿಸಿದಾಗ, ಅವನ ಮನಸ್ಸಿನಲ್ಲಿ ಇಂಥವರೇ ಇದ್ದಿರಬಹುದು. ಈ ವಚನಗಳಲ್ಲಿರುವ ಮರುಜ್ಞಾಪನಗಳು ಇಂದು ಜೀವಿಸುತ್ತಿರುವ ನಮಗೂ ಮಹತ್ವಪೂರ್ಣವಾಗಿವೆ. ಈ ಸುಂದರವಾದ ಕೀರ್ತನೆಯ ಸವಿವರವಾದ ಚರ್ಚೆಯಿಂದ ನಾವು ಖಂಡಿತವಾಗಿ ಪ್ರಯೋಜನಪಡೆಯುವೆವು.

ದಾವೀದನಿಗಿದ್ದಂಥ ಪ್ರಧಾನ ಚಿಂತೆ ನಿಮಗಿದೆಯೆ?

11“ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು.” (ಕೀರ್ತನೆ 34:1) ಸಮಾಜದಿಂದ ಬಹಿಷ್ಕೃತನಾದವನಂತೆ ಜೀವಿಸುತ್ತಿದ್ದ ದಾವೀದನಿಗೆ ತನ್ನ ಶಾರೀರಿಕ ಪೋಷಣೆಯ ಬಗ್ಗೆ ಅನೇಕ ಚಿಂತೆಗಳು ಇದ್ದಿರಬಹುದು. ಆದರೆ ಇವು, ಯೆಹೋವನನ್ನು ಸ್ತುತಿಸಬೇಕೆಂಬ ಅವನ ದೃಢನಿರ್ಧಾರವನ್ನು ಕಬಳಿಸಿಬಿಡುವಂತೆ ಅವನು ಅನುಮತಿಸಲಿಲ್ಲವೆಂದು ಅವನ ಈ ಮಾತುಗಳು ತೋರಿಸುತ್ತವೆ. ಕಷ್ಟತೊಂದರೆಗಳನ್ನು ನಾವು ಎದುರಿಸುತ್ತಿರುವಾಗ ಅನುಸರಿಸಲಿಕ್ಕಾಗಿ ಒಂದು ಉತ್ತಮ ಮಾದರಿ ಇದಾಗಿದೆ! ನಾವು ಶಾಲೆಯಲ್ಲಿರಲಿ, ಕೆಲಸದಲ್ಲಿರಲಿ, ಜೊತೆ ಕ್ರೈಸ್ತರೊಂದಿಗಿರಲಿ ಇಲ್ಲವೆ ಸಾರ್ವಜನಿಕ ಶುಶ್ರೂಷೆಯಲ್ಲಿರಲಿ ನಮ್ಮ ಅತಿ ಪ್ರಧಾನ ಚಿಂತೆಯು ಯೆಹೋವನನ್ನು ಸ್ತುತಿಸುವುದೇ ಆಗಿರಬೇಕು. ಇದನ್ನು ಮಾಡಲು ನಮಗಿರುವ ಅಸಂಖ್ಯಾತ ಕಾರಣಗಳ ಕುರಿತು ಸ್ವಲ್ಪ ಯೋಚಿಸಿ! ಉದಾಹರಣೆಗೆ, ಯೆಹೋವನ ಅದ್ಭುತ ಸೃಷ್ಟಿಕಾರ್ಯಗಳಲ್ಲಿ ನಾವು ಕಂಡುಕೊಳ್ಳಬಲ್ಲ ಮತ್ತು ಆನಂದಿಸಬಲ್ಲ ವಿಷಯಗಳಿಗೆ ಮಿತಿ ಉಂಟೇ? ಅಷ್ಟುಮಾತ್ರವಲ್ಲದೆ, ಆತನು ತನ್ನ ಸಂಘಟನೆಯ ಭೂಭಾಗದ ಮುಖಾಂತರ ಏನೆಲ್ಲ ಸಾಧಿಸಿದ್ದಾನೆ ಎಂಬುದನ್ನು ಪರಿಗಣಿಸಿರಿ! ನಂಬಿಗಸ್ತ ಮಾನವರು ಅಪರಿಪೂರ್ಣರಾಗಿರುವುದಾದರೂ, ಯೆಹೋವನು ಅವರನ್ನು ಆಧುನಿಕ ಸಮಯಗಳಲ್ಲಿ ಬಲಾಢ್ಯ ರೀತಿಗಳಲ್ಲಿ ಉಪಯೋಗಿಸಿದ್ದಾನೆ. ಲೋಕವು ಆರಾಧಿಸುವಂಥ ಮಾನವರ ಸಾಧನೆಗಳಿಗೆ ಹೋಲಿಸುವಾಗ ದೇವರ ಕೆಲಸಗಳು ಎಂಥದ್ದಾಗಿವೆ? “ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ” ಎಂದು ಬರೆದ ದಾವೀದನ ಮಾತುಗಳೊಂದಿಗೆ ನೀವು ಸಮ್ಮತಿಸುವುದಿಲ್ಲವೆ?​—⁠ಕೀರ್ತನೆ 86:⁠8.

12 ಯೆಹೋವನ ಸರಿಸಾಟಿಯಿಲ್ಲದ ಕೆಲಸಗಳಿಗೋಸ್ಕರ ಆತನನ್ನು ಸತತವಾಗಿ ಸ್ತುತಿಸುವಂತೆ ನಾವು ದಾವೀದನಂತೆ ಪ್ರಚೋದಿತರಾಗುತ್ತೇವೆ. ಅಲ್ಲದೆ, ನಮ್ಮನ್ನು ಪುಳಕಿತರನ್ನಾಗಿ ಮಾಡುವ ಇನ್ನೊಂದು ವಿಷಯವೇನೆಂದರೆ, ದೇವರ ರಾಜ್ಯವು ಈಗ ದಾವೀದನ ಅನಂತಕಾಲದ ವಾರಸುದಾರನಾಗಿರುವ ಯೇಸು ಕ್ರಿಸ್ತನ ಕೈಗಳಲ್ಲಿದೆ. (ಪ್ರಕಟನೆ 11:15) ಇದು, ಈ ವಿಷಯಗಳ ವ್ಯವಸ್ಥೆಯ ಅಂತ್ಯವು ನಿಕಟವಿದೆ ಎಂಬುದನ್ನು ಮುನ್ಸೂಚಿಸುತ್ತದೆ. 600 ಕೋಟಿಗಿಂತಲೂ ಹೆಚ್ಚು ಮಾನವರ ನಿತ್ಯ ಭವಿಷ್ಯವು ಗಂಡಾಂತರದಲ್ಲಿದೆ. ದೇವರ ರಾಜ್ಯದ ಬಗ್ಗೆ ಮತ್ತು ಅದು ಮಾನವಕುಲಕ್ಕಾಗಿ ಬಲುಬೇಗನೆ ಏನು ಮಾಡಲಿದೆ ಎಂಬುದರ ಬಗ್ಗೆ ಇತರರಿಗೆ ತಿಳಿಸುವ ಮತ್ತು ಅವರು ನಮ್ಮೊಂದಿಗೆ ಜೊತೆಗೂಡಿ ಯೆಹೋವನನ್ನು ಸ್ತುತಿಸುವಂತೆ ಸಹಾಯಮಾಡುವ ಅಗತ್ಯವು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಆದುದರಿಂದ, ಈ ‘ಸುವಾರ್ತೆಯನ್ನು’ ಸ್ವೀಕರಿಸುವಂತೆ ಇತರರನ್ನು ಉತ್ತೇಜಿಸಲು ಪ್ರತಿಯೊಂದು ಅವಕಾಶವನ್ನು, ಕಾಲಮಿಂಚಿ ಹೋಗುವ ಮುಂಚೆಯೇ ಬಳಸುವುದು ನಮ್ಮ ಜೀವನದ ಆದ್ಯತೆ ಆಗಿರಬೇಕು.​—⁠ಮತ್ತಾಯ 24:⁠14.

13“ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು; ಇದನ್ನು ದೀನರು ಕೇಳಿ ಸಂತೋಷಿಸುವರು.” (ಕೀರ್ತನೆ 34:2) ದಾವೀದನು ಇಲ್ಲಿ ತನ್ನ ಸ್ವಂತ ಸಾಧನೆಗಳ ಬಗ್ಗೆ ಹಿಗ್ಗುತ್ತಿಲ್ಲ ಇಲ್ಲವೆ ಜಂಬಕೊಚ್ಚಿಕೊಳ್ಳುತ್ತಿರಲಿಲ್ಲ. ಉದಾಹರಣೆಗೆ, ಗತ್‌ ಊರಿನ ರಾಜನನ್ನು ತಾನು ಮೋಸಗೊಳಿಸಿದೆ ಎಂದವನು ಕೊಚ್ಚಿಕೊಳ್ಳಲಿಲ್ಲ. ತನ್ನನ್ನು ಸಂರಕ್ಷಿಸಿದವನು ಯೆಹೋವನು ಮತ್ತು ಆತನ ಸಹಾಯದಿಂದಲೇ ತಾನು ಅಲ್ಲಿಂದ ತಪ್ಪಿಸಿಕೊಂಡೆ ಎಂಬುದನ್ನು ಅವನು ಗ್ರಹಿಸಿದನು. (ಜ್ಞಾನೋಕ್ತಿ 21:⁠1) ಆದುದರಿಂದ ದಾವೀದನು ತನ್ನಲ್ಲಿ ಅಲ್ಲ ಬದಲಾಗಿ ಯೆಹೋವನಲ್ಲಿ ಹಿಗ್ಗಿದನು. ಅವನು ಹೀಗೆ ಮಾಡಿದ್ದರಿಂದ ದೀನ ಜನರು ಯೆಹೋವನ ಕಡೆಗೆ ಸೆಳೆಯಲ್ಪಟ್ಟರು. ಯೇಸು ಸಹ ಅದೇ ರೀತಿಯಲ್ಲಿ ಯೆಹೋವನ ನಾಮವನ್ನು ಮಹಿಮೆಪಡಿಸಿದನು. ಇದರಿಂದಾಗಿ ದೀನರಾದ ಮತ್ತು ಕಲಿಯುವ ಪ್ರವೃತ್ತಿಯುಳ್ಳ ಜನರು ಯೆಹೋವನೆಡೆಗೆ ಸೆಳೆಯಲ್ಪಟ್ಟರು. ಇಂದು ಎಲ್ಲ ಜನಾಂಗಗಳ ದೀನ ಜನರು, ಯೇಸುವಿನ ಶಿರಸ್ಸುತನದ ಕೆಳಗಿರುವ ಅಭಿಷಿಕ್ತ ಕ್ರೈಸ್ತರ ಅಂತರಾಷ್ಟ್ರೀಯ ಸಭೆಯತ್ತ ಸೆಳೆಯಲ್ಪಡುತ್ತಿದ್ದಾರೆ. (ಕೊಲೊಸ್ಸೆ 1:18) ದೇವರ ನಮ್ರ ಸೇವಕರು ಆತನ ನಾಮವನ್ನು ಮಹಿಮೆಪಡಿಸುವುದನ್ನು ಅಂಥ ದೀನ ಜನರು ಕೇಳುವಾಗ ಮತ್ತು ಬೈಬಲಿನ ಸಂದೇಶವನ್ನು ಕೇಳಿಸಿಕೊಳ್ಳುವಾಗ ಇದು ಅವರ ಮನಸ್ಸನ್ನು ಮುಟ್ಟುತ್ತದೆ. ಈ ಸಂದೇಶವನ್ನು ಅರ್ಥಮಾಡಿಕೊಳ್ಳುವಂತೆ ದೇವರ ಪವಿತ್ರಾತ್ಮವು ಆ ದೀನ ಜನರಿಗೆ ಸಹಾಯಮಾಡುತ್ತದೆ.​—⁠ಯೋಹಾನ 6:44; ಅ. ಕೃತ್ಯಗಳು 16:⁠14.

ಕೂಟಗಳು ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ

14“ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.” (ಕೀರ್ತನೆ 34:3) ಯೆಹೋವನನ್ನು ಕೇವಲ ಖಾಸಗಿಯಾಗಿ ಸ್ತುತಿಸುವುದರಲ್ಲಿ ದಾವೀದನು ಸಂತೃಪ್ತನಾಗಿರಲಿಲ್ಲ. ದೇವರ ಹೆಸರನ್ನು ಘನಪಡಿಸುವುದರಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಅವನು ತನ್ನ ಸಂಗಡಿಗರನ್ನು ಹಾರ್ದಿಕವಾಗಿ ಆಮಂತ್ರಿಸಿದನು. ಅದೇ ರೀತಿಯಲ್ಲಿ ಮಹಾ ದಾವೀದನಾದ ಯೇಸು ಕ್ರಿಸ್ತನು ಯೆಹೋವನನ್ನು ಬಹಿರಂಗವಾಗಿ ಸ್ತುತಿಸಲು ಹರ್ಷಿಸುತ್ತಿದ್ದನು. ಇದನ್ನು ಅವನು ಸ್ಥಳಿಕ ಸಭಾಮಂದಿರದಲ್ಲಿ, ಯೆರೂಸಲೇಮಿನ ದೇವಾಲಯದಲ್ಲಿನ ಹಬ್ಬಗಳ ಸಮಯದಲ್ಲಿ ಮತ್ತು ತನ್ನ ಹಿಂಬಾಲಕರ ಒಡನಾಟದಲ್ಲಿ ಮಾಡಿದನು. (ಲೂಕ 2:49; 4:​16-19; 10:21; ಯೋಹಾನ 18:20) ಸಾಧ್ಯವಿರುವ ಪ್ರತಿಯೊಂದು ಸಂದರ್ಭದಲ್ಲಿ ಜೊತೆ ವಿಶ್ವಾಸಿಗಳೊಂದಿಗೆ ಯೆಹೋವನನ್ನು ಸ್ತುತಿಸುವ ಮೂಲಕ ಯೇಸುವಿನ ಮಾದರಿಯನ್ನು ಅನುಕರಿಸುವುದು ಎಂಥ ಒಂದು ಆನಂದಭರಿತ ಸದವಕಾಶವಾಗಿದೆ! ಯೆಹೋವನ ‘ದಿನವು ಸಮೀಪಿಸುತ್ತಾ ಬರುತ್ತದೆಂದು ನಾವು ನೋಡುವದರಿಂದ’ ಇದು ವಿಶೇಷವಾಗಿ ಸತ್ಯವಾಗಿದೆ.​—⁠ಇಬ್ರಿಯ 10:24, 25.

15“ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.” (ಕೀರ್ತನೆ 34:4) ಈ ಅನುಭವವು ದಾವೀದನಿಗೆ ಮಹತ್ವಪೂರ್ಣವಾಗಿತ್ತು. ಆದುದರಿಂದ ಅವನು ಹೀಗನ್ನುತ್ತಾ ಮುಂದುವರಿಸಿದನು: “ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.” (ಕೀರ್ತನೆ 34:6) ಕಷ್ಟಕರ ಪರಿಸ್ಥಿತಿಗಳನ್ನು ತಾಳಿಕೊಳ್ಳುವಂತೆ ಯೆಹೋವನು ನಮಗೆ ಸಹಾಯಮಾಡಿರುವಂಥ ಬಲವರ್ಧಕ ಅನುಭವಗಳು ನಮಗಿರುತ್ತವೆ. ಜೊತೆ ವಿಶ್ವಾಸಿಗಳೊಂದಿಗೆ ಸಹವಸಿಸುತ್ತಿರುವಾಗ ಇವುಗಳನ್ನು ತಿಳಿಸಲು ನಮಗೆ ಅನೇಕ ಅವಕಾಶಗಳು ಸಿಗುತ್ತವೆ. ದಾವೀದನ ಅಭಿವ್ಯಕ್ತಿಗಳು ಅವನ ಬೆಂಬಲಿಗರ ನಂಬಿಕೆಯನ್ನು ಬಲಪಡಿಸಿದಂತೆಯೇ, ನಮ್ಮ ಈ ಅನುಭವಗಳು ನಮ್ಮ ಜೊತೆ ವಿಶ್ವಾಸಿಗಳ ನಂಬಿಕೆಯನ್ನು ಬಲಪಡಿಸುತ್ತವೆ. ದಾವೀದನ ವಿಷಯದಲ್ಲಿ ನೋಡುವುದಾದರೆ ಅವನ ಸಂಗಡಿಗರು, ‘ಆತನನ್ನೇ [ಯೆಹೋವನನ್ನು] ದೃಷ್ಟಿಸಿ ಪ್ರಕಾಶವನ್ನು ಹೊಂದಿದರು; ಅವರ ಮುಖವು ಲಜ್ಜೆಯಿಂದ ಕೆಡಲೇ ಇಲ್ಲ.’ (ಕೀರ್ತನೆ 34:5) ಅವರು ರಾಜ ಸೌಲನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದರೂ ಅವರು ಲಜ್ಜಿತರಾಗಿರಲಿಲ್ಲ. ದಾವೀದನಿಗೆ ದೇವರ ಬೆಂಬಲವಿದೆಯೆಂದು ಅವರಿಗೆ ದೃಢಭರವಸೆಯಿತ್ತು. ಆದುದರಿಂದ ಅವರ ಮುಖಗಳು ಪ್ರಕಾಶಮಾನವಾಗಿದ್ದವು. ಅದೇ ರೀತಿಯಲ್ಲಿ, ಹೊಸದಾಗಿ ಆಸಕ್ತರಾಗಿರುವ ಜನರು ಹಾಗೂ ದೀರ್ಘ ಸಮಯದಿಂದ ನಿಜ ಕ್ರೈಸ್ತರಾಗಿರುವವರು ಬೆಂಬಲಕ್ಕಾಗಿ ಯೆಹೋವನ ಕಡೆಗೆ ನೋಡುತ್ತಾರೆ. ಅವರು ವೈಯಕ್ತಿಕವಾಗಿ ಆತನ ಸಹಾಯವನ್ನು ಅನುಭವಿಸಿರುವುದರಿಂದ ನಂಬಿಗಸ್ತರಾಗಿ ಉಳಿಯಬೇಕೆಂಬ ತಮ್ಮ ದೃಢಸಂಕಲ್ಪವನ್ನು ಅವರ ಪ್ರಕಾಶಮಾನ ಮುಖಗಳು ಬಿಂಬಿಸುತ್ತವೆ.

ದೇವದೂತರ ಸಹಾಯಕ್ಕಾಗಿ ಕೃತಜ್ಞರಾಗಿರಿ

16“ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.” (ಕೀರ್ತನೆ 34:7) ದಾವೀದನು ಯೆಹೋವನಿಂದ ಅಭಿಷಿಕ್ತನಾದ ಇಸ್ರಾಯೇಲಿನ ಭಾವೀ ರಾಜನಾಗಿದ್ದನು ನಿಜ. ಆದರೆ ಯೆಹೋವನು ತನ್ನನ್ನು ಮಾತ್ರ ರಕ್ಷಿಸುತ್ತಾನೆಂದು ಅವನು ಎಣಿಸುತ್ತಿರಲಿಲ್ಲ. ಯೆಹೋವನು ತನ್ನ ಎಲ್ಲ ನಂಬಿಗಸ್ತ ಆರಾಧಕರ ಮೇಲೆ, ಅವರು ಪ್ರಮುಖರಾಗಿರಲಿ ಇಲ್ಲದಿರಲಿ ಅವರ ಮೇಲೆ ಕಾವಲಿಡಲು ತನ್ನ ದೇವದೂತರನ್ನು ಉಪಯೋಗಿಸುತ್ತಾನೆಂದು ಅವನಿಗೆ ತಿಳಿದಿತ್ತು. ನಮ್ಮ ಈ ಆಧುನಿಕ ದಿನಗಳಲ್ಲಿ ನಿಜ ಆರಾಧಕರು ಯೆಹೋವನ ಸಂರಕ್ಷಣೆಯನ್ನು ಸಹ ಅನುಭವಿಸಿದ್ದಾರೆ. ನಾಜಿ ಜರ್ಮನಿ, ಆ್ಯಂಗೊಲ, ಮಲಾವಿ, ಮೊಸಾಂಬೀಕ್‌ ಹಾಗೂ ಇನ್ನಿತರ ಅನೇಕ ದೇಶಗಳಲ್ಲಿ ಅಧಿಕಾರಿಗಳು ಯೆಹೋವನ ಸಾಕ್ಷಿಗಳನ್ನು ಅಳಿಸಿಹಾಕಲು ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಆದರೆ ಅವರ ಈ ಎಲ್ಲ ಪ್ರಯತ್ನಗಳು ನೆಲಕಚ್ಚಿವೆ. ಆ ದೇಶಗಳಲ್ಲಿ ಯೆಹೋವನ ಜನರು ಅಳಿದುಹೋಗುವ ಬದಲು ದೇವರ ಹೆಸರನ್ನು ಒಟ್ಟಾಗಿ ಘನಪಡಿಸುತ್ತಾ ಹೆಚ್ಚು ಅಭಿವೃದ್ಧಿಹೊಂದುತ್ತಾ ಇದ್ದಾರೆ. ಏಕೆ? ಏಕೆಂದರೆ ಯೆಹೋವನು ತನ್ನ ಜನರನ್ನು ಸಂರಕ್ಷಿಸಲು ಹಾಗೂ ಮಾರ್ಗದರ್ಶಿಸಲು ತನ್ನ ಪವಿತ್ರ ದೂತರನ್ನು ಬಳಸುತ್ತಾನೆ.​—⁠ಇಬ್ರಿಯ 1:⁠14.

17 ಅಷ್ಟುಮಾತ್ರವಲ್ಲದೆ, ಇತರರು ಎಡವುವಂತೆ ಮಾಡುವವರನ್ನು ಯೆಹೋವನ ಜನರ ಮಧ್ಯದಿಂದ ತೆಗೆದುಹಾಕುವಂಥ ರೀತಿಯಲ್ಲಿ ಯೆಹೋವನ ದೂತರು ಪರಿಸ್ಥಿತಿಗಳನ್ನು ನಿಯಂತ್ರಿಸಶಕ್ತರು. (ಮತ್ತಾಯ 13:41; 18:​6, 10) ನಾವು ದೇವರಿಗೆ ಸಲ್ಲಿಸುವ ಸೇವೆಗೆ ಅಡ್ಡಬರಬಹುದಾದ ತಡೆಗಳನ್ನು, ನಮಗೆ ಆ ಹೊತ್ತಿನಲ್ಲಿ ಅರಿವಿಗೆ ಬಾರದಂಥ ರೀತಿಯಲ್ಲಿ ದೇವದೂತರು ತೆಗೆದುಹಾಕಬಹುದು. ಯೆಹೋವನೊಂದಿಗಿನ ನಮ್ಮ ಸಂಬಂಧಕ್ಕೆ ಅಪಾಯ ತರಬಲ್ಲ ವಿಷಯಗಳಿಂದಲೂ ಅವರು ನಮ್ಮನ್ನು ಸಂರಕ್ಷಿಸುತ್ತಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಇಡೀ ಮಾನವಕುಲಕ್ಕೆ ‘ನಿತ್ಯವಾದ ಸುವಾರ್ತೆಯನ್ನು’ ಸಾರುವ ಕೆಲಸದಲ್ಲಿ ಅವರು ನಮ್ಮನ್ನು ಮಾರ್ಗದರ್ಶಿಸುತ್ತಾರೆ. ಇದು, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಸಾರುವ ಕೆಲಸವು ನಡೆಯುತ್ತಿರುವಂಥ ಸ್ಥಳಗಳನ್ನು ಒಳಗೂಡುತ್ತದೆ. (ಪ್ರಕಟನೆ 14:⁠6) ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ಸಾಹಿತ್ಯದಲ್ಲಿ ದೇವದೂತರ ಸಹಾಯದ ಬಗ್ಗೆ ಬಹಳಷ್ಟು ಪುರಾವೆ ಕೊಡಲ್ಪಟ್ಟಿರುತ್ತದೆ. * ಇಂಥ ಸಹಾಯದ ಕುರಿತಾದ ಅನುಭವಗಳು ಎಷ್ಟೊಂದು ಇವೆಯೆಂದರೆ ಅವು ಕೇವಲ ಅಕಸ್ಮಿಕ ಘಟನೆಗಳೆಂದು ತಳ್ಳಿಹಾಕಲು ಸಾಧ್ಯವಾಗುವುದಿಲ್ಲ.

18 ನಮಗೆ ದೇವದೂತರ ಮಾರ್ಗದರ್ಶನ ಮತ್ತು ಸಂರಕ್ಷಣೆಯು ಸಿಗುತ್ತಾ ಇರಬೇಕಾದರೆ ವಿರೋಧದ ಎದುರಲ್ಲೂ ನಾವು ಯೆಹೋವನ ಹೆಸರನ್ನು ಘನಪಡಿಸುತ್ತಾ ಇರಬೇಕು. ನೆನಪಿಡಿರಿ, ದೇವರ ದೂತನು ‘ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು’ ಮಾತ್ರ ದಂಡಿಳಿಯುತ್ತಾನೆ. ಇದೇನನ್ನು ಸೂಚಿಸುತ್ತದೆ? ದೇವರ ಭಯ ಅಂದರೇನು, ಮತ್ತು ನಾವದನ್ನು ಹೇಗೆ ಬೆಳೆಸಿಕೊಳ್ಳಬಹುದು? ಪ್ರೀತಿಪರನಾಗಿರುವ ದೇವರು ನಾವು ಆತನಿಗೆ ಭಯಪಡಬೇಕೆಂದು ಬಯಸುವುದೇಕೆ? ಈ  ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. (w07 3/1)

[ಪಾದಟಿಪ್ಪಣಿ]

^ ಪ್ಯಾರ. 24 ಯೆಹೋವನ ಸಾಕ್ಷಿಗಳು​—⁠ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌), ಪುಟ 550; ಯೆಹೋವನ ಸಾಕ್ಷಿಗಳ 2005ರ ವರ್ಷಪುಸ್ತಕ (ಇಂಗ್ಲಿಷ್‌), ಪುಟ 53-4; ಕಾವಲಿನಬುರುಜು ಮಾರ್ಚ್‌ 1, 2000, ಪುಟ 5-6; ಜನವರಿ 1, 1991, ಪುಟ 27 ಮತ್ತು ಫೆಬ್ರವರಿ 15, 1991, ಪುಟ 26ನ್ನು (ಇಂಗ್ಲಿಷ್‌) ನೋಡಿ.

ನಿಮ್ಮ ಉತ್ತರವೇನು?

• ಯುವ ಪ್ರಾಯದಲ್ಲಿ ದಾವೀದನು ಯಾವ ಸಂಕಷ್ಟಗಳನ್ನು ತಾಳಿಕೊಂಡನು?

• ದಾವೀದನಂತೆ ನಮ್ಮ ಪ್ರಧಾನ ಚಿಂತೆ ಏನಾಗಿದೆ?

• ಕ್ರೈಸ್ತ ಕೂಟಗಳ ಬಗ್ಗೆ ನಮ್ಮ ನೋಟವೇನು?

• ನಮಗೆ ಸಹಾಯಮಾಡಲು ಯೆಹೋವನು ತನ್ನ ದೂತರನ್ನು ಹೇಗೆ ಉಪಯೋಗಿಸುತ್ತಾನೆ?

[ಅಧ್ಯಯನ ಪ್ರಶ್ನೆಗಳು]

1. ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯಾವ ಉತ್ತಮ ಮಾದರಿಯನ್ನಿಟ್ಟನು?

2, 3. (ಎ) 34ನೇ ಕೀರ್ತನೆಗೆ ಪ್ರವಾದನಾತ್ಮಕ ಮಹತ್ವಾರ್ಥ ಇದೆಯೆಂದು ನಮಗೆ ಹೇಗೆ ತಿಳಿದಿದೆ? (ಬಿ) ಈ ಲೇಖನದಲ್ಲಿ ಹಾಗೂ ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

4. (ಎ) ದಾವೀದನನ್ನು ಇಸ್ರಾಯೇಲಿನ ಭಾವೀ ರಾಜನಾಗಿ ಏಕೆ ಅಭಿಷೇಕಿಸಲಾಯಿತು? (ಬಿ) ಸೌಲನು ದಾವೀದನನ್ನು ‘ಬಹಳವಾಗಿ ಪ್ರೀತಿ’ಸಲಾರಂಭಿಸಿದ್ದು ಏಕೆ?

5. ಸೌಲನಿಗೆ ದಾವೀದನೆಡೆಗೆ ಇದ್ದ ಮನೋಭಾವವು ಏಕೆ ಬದಲಾಯಿತು, ಮತ್ತು ದಾವೀದನು ಏನು ಮಾಡಲೇಬೇಕಾಯಿತು?

6. ನೋಬ್‌ ಊರಿನ ಎಲ್ಲ ನಿವಾಸಿಗಳ ಸಂಹಾರಕ್ಕೆ ಸೌಲನು ಅಪ್ಪಣೆಕೊಟ್ಟದ್ದೇಕೆ?

7. ಗತ್‌ ಊರು ದಾವೀದನಿಗೆ ಸುರಕ್ಷಿತವಾದ ಅಡಗುತಾಣವಾಗಿರಲಿಲ್ಲ ಏಕೆ?

8. (ಎ) ಗತ್‌ ಊರಿನಲ್ಲಿ ದಾವೀದನಿಗಾದ ಅನುಭವದ ಕುರಿತಾಗಿ 56ನೇ ಕೀರ್ತನೆ ಏನು ತಿಳಿಸುತ್ತದೆ? (ಬಿ) ದಾವೀದನು ಕೂದಲೆಳೆಯಷ್ಟರಲ್ಲಿ ಮರಣದಿಂದ ತಪ್ಪಿಸಿಕೊಂಡದ್ದು ಹೇಗೆ?

9, 10. ದಾವೀದನು 34ನೇ ಕೀರ್ತನೆಯನ್ನು ಯಾವ ಕಾರಣಕ್ಕಾಗಿ ಬರೆದನು, ಮತ್ತು ಆ ಕೀರ್ತನೆಯನ್ನು ರಚಿಸುವಾಗ ಅವನ ಮನಸ್ಸಿನಲ್ಲಿ ಯಾರು ಇದ್ದಿರಬಹುದು?

11, 12. ಯೆಹೋವನನ್ನು ಸತತವಾಗಿ ಸ್ತುತಿಸಲು ನಮಗೆ ಯಾವ ಕಾರಣಗಳಿವೆ?

13. (ಎ) ದಾವೀದನು ಯಾರಲ್ಲಿ ಹಿಗ್ಗಿದನು, ಮತ್ತು ಯಾವ ರೀತಿಯ ಜನರು ಪ್ರತಿಕ್ರಿಯೆ ತೋರಿಸಿದರು? (ಬಿ) ಇಂದು ದೀನ ವ್ಯಕ್ತಿಗಳು ಕ್ರೈಸ್ತ ಸಭೆಯತ್ತ ಹೇಗೆ ಸೆಳೆಯಲ್ಪಡುತ್ತಾರೆ?

14. (ಎ) ಯೆಹೋವನನ್ನು ಕೇವಲ ಖಾಸಗಿಯಾಗಿ ಸ್ತುತಿಸಲು ದಾವೀದನು ಸಂತೃಪ್ತನಾಗಿದ್ದನೊ? (ಬಿ) ಆರಾಧನೆಗಾಗಿರುವ ಕೂಟಗಳ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?

15. (ಎ) ದಾವೀದನ ಅನುಭವವು ಅವನ ಪುರುಷರ ಮೇಲೆ ಯಾವ ಪರಿಣಾಮ ಬೀರಿತು? (ಬಿ) ನಮ್ಮ ಕೂಟಗಳಿಗೆ ಹಾಜರಾಗುವುದರಿಂದ ನಮಗೆ ಹೇಗೆ ಪ್ರಯೋಜನವಾಗುತ್ತದೆ?

16. ನಮ್ಮನ್ನು ರಕ್ಷಿಸಲಿಕ್ಕಾಗಿ ಯೆಹೋವನು ತನ್ನ ದೂತರನ್ನು ಹೇಗೆ ಬಳಸಿದ್ದಾನೆ?

17. ದೇವದೂತರು ನಮಗೆ ಯಾವ ವಿಧಗಳಲ್ಲಿ ಸಹಾಯಮಾಡುತ್ತಾರೆ?

18. (ಎ) ದೇವದೂತರ ಸಹಾಯ ಸಿಗಲಿಕ್ಕಾಗಿ ನಮ್ಮಿಂದ ಏನು ಅಪೇಕ್ಷಿಸಲಾಗುತ್ತದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

[ಪುಟ 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ರಾಮಾ

ಗತ್‌

ಚಿಕ್ಲಗ್‌

ಗಿಬೆಯ

ನೋಬ್‌

ಯೆರೂಸಲೇಮ್‌

ಬೇತ್ಲೆಹೇಮ್‌

ಅದುಲ್ಲಾಮ್‌

ಕೆಯೀಲ

ಹೆಬ್ರೋನ್‌

ಜೀಫ್‌

ಹೋರೆಷ

ಕರ್ಮೆಲ್‌

ಮಾವೋನ್‌

ಏಂಗೆದಿ

ಲವಣ ಸಮುದ್ರ

[ಕೃಪೆ]

ಭೂಪಟ: Based on maps copyrighted by Pictorial Archive (Near Eastern History) Est. and Survey of Israel

[ಪುಟ 25ರಲ್ಲಿರುವ ಚಿತ್ರ]

ದಾವೀದನು ಸೌಲನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಅವಧಿಯಲ್ಲೂ ಯೆಹೋವನ ನಾಮವನ್ನು ಘನಪಡಿಸಿದನು