ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ’

‘ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ’

‘ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ’

“ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಇದು ನ್ಯಾಯ.”​—⁠ಎಫೆಸ 6:⁠1, NIBV.

ವಿಧೇಯತೆಯ ಕಾರಣದಿಂದಲೇ ನಾವೀಗ ಜೀವದಿಂದಿರಬಹುದು. ಅವಿಧೇಯತೆಯ ಕಾರಣದಿಂದ ಇತರರು ಜೀವವನ್ನು ಕಳಕೊಂಡಿರಬಹುದು. ಯಾವುದಕ್ಕೆ ವಿಧೇಯತೆ? ಎಚ್ಚರಿಕೆಗಳಿಗೆ! ಉದಾಹರಣೆಗೆ, ‘ಅದ್ಭುತಕರವಾಗಿ ರಚಿಸಲ್ಪಟ್ಟಿರುವ’ ನಮ್ಮ ಶರೀರಗಳಿಂದ ಬರುವ ಎಚ್ಚರಿಕೆಗಳಿಗೆ. (ಕೀರ್ತನೆ 139:14) ನಮ್ಮ ಕಣ್ಣುಗಳು ಕಾರ್ಮೋಡಗಳನ್ನು ನೋಡುತ್ತವೆ. ಕಿವಿಗಳು ಸಿಡಿಲಿನ ಗುಡುಗುಡು ಶಬ್ದವನ್ನು ಕೇಳುತ್ತವೆ. ಭರ್ರನೇ ಬಿರುಗಾಳಿ ಬೀಸಲು ಆರಂಭಿಸುತ್ತದೆ. ಸಂಭಾವ್ಯ ಅಪಾಯದ ಬಗ್ಗೆ ತಿಳಿದಿರುವವರಿಗೆ ಇವೆಲ್ಲವೂ ಎಚ್ಚರಿಕೆಯ ಸೂಚನೆಯಾಗಿದೆ. ಆಗ ಅವರು ಜೀವವನ್ನು ಗಂಡಾಂತರಕ್ಕೆ ಒಳಪಡಿಸಬಹುದಾದ ಮಿಂಚು, ಆಲಿಕಲ್ಲು ಮಳೆ ಮತ್ತು ಚಂಡಮಾರುತದಿಂದ ಓಡಿ ಸುರಕ್ಷಿತ ಸ್ಥಳವನ್ನು ಹುಡುಕುವರು.

2 ಮಕ್ಕಳೇ ಬರಲಿರುವ ಅಪಾಯಗಳ ಕುರಿತು ನಿಮಗೆ ಎಚ್ಚರಿಕೆಗಳು ಅಗತ್ಯ. ಅವನ್ನು ಒದಗಿಸುವ ಜವಾಬ್ದಾರಿ ನಿಮ್ಮ ತಂದೆತಾಯಿಗಳಿಗಿದೆ. “ಸ್ಟೋವ್‌ ಬಿಸಿ ಇದೆ ಮುಟ್ಟಬೇಡ,” “ತುಂಬಿದ ಕೆರೆಗೆ ಇಳಿಯಬೇಡ, ಅದು ಅಪಾಯ,” “ಎರಡೂ ಕಡೆ ನೋಡಿ ರಸ್ತೆ ದಾಟು” ಎಂಬ ಎಚ್ಚರಿಕೆಗಳು ನಿಮಗೆ ಜ್ಞಾಪಕವಿರಬಹುದು. ವಿಷಾದದ ವಿಷಯವೇನೆಂದರೆ, ವಿಧೇಯರಾಗಲು ತಪ್ಪಿದ ಅನೇಕ ಮಕ್ಕಳು ಗಾಯಗೊಂಡಿದ್ದಾರೆ. ಅಷ್ಟೇಕೆ ಸತ್ತದ್ದೂ ಉಂಟು. ಆದುದರಿಂದಲೇ ನಿಮ್ಮ ತಂದೆತಾಯಿಗಳಿಗೆ ವಿಧೇಯತೆ ತೋರಿಸುವುದು “ನ್ಯಾಯ” ಅಂದರೆ ಸರಿ ಮತ್ತು ಸೂಕ್ತ. ವಿವೇಕಯುತವೂ ಆಗಿದೆ. (ಜ್ಞಾನೋಕ್ತಿ 8:33) ಇದು, ನಮ್ಮ ಕರ್ತನಾದ ಯೇಸು ಕ್ರಿಸ್ತನ ದೃಷ್ಟಿಯಲ್ಲಿ “ಮೆಚ್ಚಿಕೆಯಾಗಿದೆ” ಎಂದು ಇನ್ನೊಂದು ಬೈಬಲ್‌ ವಚನವು ಹೇಳುತ್ತದೆ. ಹೌದು, ನಿಮ್ಮ ಹೆತ್ತವರಿಗೆ ವಿಧೇಯರಾಗಬೇಕೆಂದು ದೇವರು ಆಜ್ಞಾಪಿಸುತ್ತಾನೆ ನಿಶ್ಚಯ.​—⁠ಕೊಲೊಸ್ಸೆ 3:20; 1 ಕೊರಿಂಥ 8:⁠6.

ವಿಧೇಯತೆಗೆ ದೊರಕುವ ಬಾಳುವ ಬಹುಮಾನಗಳು

3 ನಿಮ್ಮ ಹೆತ್ತವರಿಗೆ ನೀವು ತೋರಿಸುವ ವಿಧೇಯತೆ ನಿಮ್ಮ ಜೀವವನ್ನು “ಈಗ” ಕಾಪಾಡಬಲ್ಲದು ಮತ್ತು “ಮುಂದೆ” ಬರುವ “ವಾಸ್ತವವಾದ ಜೀವ”ವನ್ನೂ ಆನಂದಿಸುವಂತೆ ಮಾಡಬಲ್ಲದು. (1 ತಿಮೊಥೆಯ 4:​8, NIBV; 6:19) ನಮ್ಮಲ್ಲಿ ಹೆಚ್ಚಿನವರಿಗೆ ವಾಸ್ತವವಾದ ಜೀವವೆಂದರೆ ದೇವರ ಹೊಸಲೋಕದಲ್ಲಿ ಅನಂತಕಾಲದ ಜೀವನವಾಗಿದೆ. ತನ್ನ ಆಜ್ಞೆಗಳನ್ನು ನಂಬಿಗಸ್ತಿಕೆಯಿಂದ ಪಾಲಿಸುವವರಿಗೆ ದೇವರು ವಾಗ್ದಾನ ಮಾಡಿರುವ ಜೀವನವು ಅದಾಗಿದೆ. ಈ ಆಜ್ಞೆಗಳಲ್ಲಿ ಒಂದು ಮುಖ್ಯ ಆಜ್ಞೆಯು ಹೀಗನ್ನುತ್ತದೆ: “ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ​—⁠ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ಆದುದರಿಂದ, ನೀವು ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗುವಲ್ಲಿ ಸಂತೋಷಿತರಾಗಿರುವಿರಿ. ನಿಮ್ಮ ಭವಿಷ್ಯವು ಭದ್ರವಾಗಿರುವುದು. ಪರದೈಸ್‌ ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವವರಲ್ಲಿ ನೀವು ಒಬ್ಬರಾಗಿರುವಿರಿ!​—⁠ಎಫೆಸ 6:​2, 3.

4 ನೀವು ಹೆತ್ತವರಿಗೆ ವಿಧೇಯರಾಗುವ ಮೂಲಕ ಅವರನ್ನು ಸನ್ಮಾನಿಸುವಾಗ ದೇವರನ್ನೂ ಸನ್ಮಾನಿಸುತ್ತೀರಿ. ಏಕೆಂದರೆ ನೀವು ಹಾಗೆ ವಿಧೇಯರಾಗಬೇಕೆಂದು ಆಜ್ಞಾಪಿಸುವಾತನು ಆತನೇ. ಅದೇ ಸಮಯದಲ್ಲಿ ನಿಮಗೆ ಪ್ರಯೋಜನವೂ ದೊರೆಯುತ್ತದೆ. “ಯೆಹೋವನೆಂಬ ನಾನು ನಿನ್ನ ದೇವರು; ಪ್ರಯೋಜನ ಪಡೆದುಕೊಳ್ಳುವಂತೆ ನಿನಗೆ ಬೋಧಿಸುವಾತನು” ಎನ್ನುತ್ತದೆ ಬೈಬಲ್‌. (ಯೆಶಾಯ 48:​17, NW; 1 ಯೋಹಾನ 5:⁠3) ವಿಧೇಯರಾಗುವುದು ನಿಮಗೆ ಹೇಗೆ ಪ್ರಯೋಜನಕರ? ಅದು ನಿಮ್ಮ ತಂದೆತಾಯಿಗಳನ್ನು ಸಂತೋಷಪಡಿಸುತ್ತದೆ. ಅವರ ಮೆಚ್ಚಿಕೆಯು ನಿಮ್ಮ ಜೀವನವನ್ನು ಇನ್ನಷ್ಟು ಸಂತೋಷಗೊಳಿಸುವುದು. (ಜ್ಞಾನೋಕ್ತಿ 23:​22-25) ಆದರೆ ಅತಿ ಪ್ರಾಮುಖ್ಯವಾಗಿ ನಿಮ್ಮ ವಿಧೇಯತೆ ನಿಮ್ಮ ಸ್ವರ್ಗೀಯ ತಂದೆಯನ್ನು ಸಂತೋಷಪಡಿಸುತ್ತದೆ. ಆತನು ಅದ್ಭುತಕರ ರೀತಿಗಳಲ್ಲಿ ನಿಮಗೆ ಬಹುಮಾನವನ್ನು ಕೊಡುವನು! ‘ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ’ ಎಂದು ತನ್ನ ಕುರಿತು ಹೇಳಿದ ಯೇಸುವನ್ನು ಯೆಹೋವನು ಹೇಗೆ ಆಶೀರ್ವದಿಸಿ ಕಾಪಾಡಿದನೆಂಬದನ್ನು ನಾವು ಈಗ ನೋಡೋಣ.​—⁠ಯೋಹಾನ 8:29.

ಯೇಸು ಉತ್ತಮ ಕೆಲಸಗಾರ

5 ಯೇಸು ತನ್ನ ತಾಯಿಯಾದ ಮರಿಯಳ ಜೇಷ್ಠಪುತ್ರನಾಗಿದ್ದನು. ಅವನ ದತ್ತುತಂದೆಯಾಗಿದ್ದ ಯೋಸೇಫನು ಬಡಗಿಯಾಗಿದ್ದನು. ಯೇಸು ಕೂಡ ಬಡಗಿಯಾದದ್ದು ಯೋಸೇಫನಿಂದ ಈ ಕೆಲಸವನ್ನು ಕಲಿತದ್ದರಿಂದಲೇ ಎಂದು ವ್ಯಕ್ತ. (ಮತ್ತಾಯ 13:55; ಮಾರ್ಕ 6:3; ಲೂಕ 1:​26-31) ಯೇಸು ಯಾವ ರೀತಿಯ ಬಡಗಿಯಾಗಿದ್ದನೆಂದು ನೀವು ನೆನಸುತ್ತೀರಿ? ಕನ್ಯೆಯಾದ ಅವನ ತಾಯಿಯು ಆಶ್ಚರ್ಯಕರ ರೀತಿಯಲ್ಲಿ ಗರ್ಭತಾಳುವುದಕ್ಕೆ ಮೊದಲೇ ಅವನು ಸ್ವರ್ಗದಲ್ಲಿದ್ದನು. ಆಗ ವಿವೇಕವಾಗಿ ವ್ಯಕ್ತೀಕರಿಸಲ್ಪಟ್ಟ ಅವನು ಹೇಳಿದ್ದು: “ನಾನು [ದೇವರ] ಹತ್ತಿರ ಕುಶಲ ಶಿಲ್ಪಿಯಾಗಿದ್ದೆನು ಮತ್ತು ಆತನು ಅನುದಿನವೂ ವಿಶೇಷವಾಗಿ ಒಲುಮೆ ತೋರಿಸಿದ ಒಬ್ಬನು ನಾನಾಗಿದ್ದೆನು.” ಸ್ವರ್ಗದಲ್ಲಿ ಉತ್ತಮ ಕೆಲಸಗಾರನಾಗಿದ್ದ ಯೇಸುವನ್ನು ದೇವರು ಮೆಚ್ಚಿದನು. ಹೀಗಿರಲಾಗಿ, ಅವನು ಭೂಮಿಯಲ್ಲಿ ಚಿಕ್ಕವನಾಗಿದ್ದಾಗಲೂ ಕುಶಲ ಕೆಲಸಗಾರನಾಗಿ, ಉತ್ತಮ ಬಡಗಿಯಾಗಿ ಇರಲು ಪ್ರಯಾಸಪಟ್ಟಿರಬೇಕೆಂದು ನೀವು ನೆನಸುವುದಿಲ್ಲವೇ?​—⁠ಜ್ಞಾನೋಕ್ತಿ 8:​30, NW; ಕೊಲೊಸ್ಸೆ 1:​15, 16.

6 ಹಿಂದಿನಕಾಲಗಳಲ್ಲೂ ಮಕ್ಕಳು ಆಟವಾಡುತ್ತಿದ್ದರು ಎಂದು ಬೈಬಲ್‌ ಹೇಳುತ್ತದೆ. ಹಾಗೆ ಯೇಸು ಕೂಡ ಚಿಕ್ಕ ಪ್ರಾಯದಲ್ಲಿ ಕೆಲವು ಸಲ ಆಟವಾಡಿದ್ದನು ಎಂಬುದಕ್ಕೆ ಸಂದೇಹವಿಲ್ಲ. (ಜೆಕರ್ಯ 8:5; ಮತ್ತಾಯ 11:​16, 17) ಆದರೂ, ಬಡ ಕುಟುಂಬದಲ್ಲಿ ಹಿರಿಮಗನಾಗಿದ್ದ ಯೇಸುವಿಗೆ ಯೋಸೇಫನಿಂದ ಬಡಗಿ ಕೆಲಸದಲ್ಲಿ ತರಬೇತನ್ನು ಪಡೆಯುವುದಲ್ಲದೆ ಬೇರೆ ಕೆಲಸಗಳನ್ನೂ ಮಾಡಲಿಕ್ಕಿತ್ತು ಎಂಬುದು ನಿಶ್ಚಯ. ತರುವಾಯ ಯೇಸು ಸೌವಾರ್ತಿಕನಾಗಿ ಶುಶ್ರೂಷೆಯಲ್ಲಿ ಕಾರ್ಯಮಗ್ನನಾದನು. ಎಷ್ಟೆಂದರೆ, ತನ್ನ ವೈಯಕ್ತಿಕ ಆರಾಮಗಳನ್ನೂ ಅವನು ತ್ಯಾಗಮಾಡಬೇಕಾಯಿತು. (ಲೂಕ 9:58; ಯೋಹಾನ 5:17) ನೀವು ಯೇಸುವನ್ನು ಯಾವ ರೀತಿಯಲ್ಲಿ ಅನುಸರಿಸಬಹುದು ಎಂದು ಯೋಚಿಸಬಲ್ಲಿರಾ? ನಿಮ್ಮ ತಂದೆತಾಯಿಗಳು ನಿಮ್ಮ ಕೋಣೆಯನ್ನು ಶುಚಿಗೊಳಿಸಲು ಇಲ್ಲವೆ ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಹೇಳುತ್ತಾರೋ? ಕ್ರೈಸ್ತ ಕೂಟಗಳಲ್ಲಿ ಹಾಜರಿರುವ ಮೂಲಕ ಮತ್ತು ನಿಮ್ಮ ನಂಬಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ದೇವಾರಾಧನೆಯಲ್ಲಿ ಭಾಗವಹಿಸುವಂತೆ ಅವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆಯೇ? ಇಂಥ ವಿಷಯಗಳನ್ನು ಯೇಸುವಿಗೆ ಹೇಳಿದಾಗ ಅವನು ಹೇಗೆ ಪ್ರತಿವರ್ತಿಸುತ್ತಿದ್ದನೆಂದು ನೀವು ನೆನಸುತ್ತೀರಿ?

ಉತ್ತಮ ಬೈಬಲ್‌ ವಿದ್ಯಾರ್ಥಿ ಮತ್ತು ಬೋಧಕ

7 ಯೆಹೂದ್ಯರ ಮೂರು ಹಬ್ಬಗಳ ಸಮಯದಲ್ಲಿ ಇಸ್ರಾಯೇಲ್ಯ ಕುಟುಂಬದ ಹುಡುಗರೂ ಪುರುಷರೂ ದೇವಾಲಯದಲ್ಲಿ ಯೆಹೋವನನ್ನು ಆರಾಧಿಸಲು ಹೋಗಬೇಕೆಂಬ ಆಜ್ಞೆಯಿತ್ತು. (ಧರ್ಮೋಪದೇಶಕಾಂಡ 16:16) ಯೇಸು 12 ವರ್ಷದವನಾಗಿದ್ದಾಗ ಪ್ರಾಯಶಃ ಅವನ ಇಡೀ ಕುಟುಂಬವು ಪಸ್ಕಕ್ಕಾಗಿ ಯೆರೂಸಲೇಮಿಗೆ ಹೋದರು. ಅವರೊಂದಿಗೆ ಅವನ ಮಲತಮ್ಮಂದಿರೂ ಮಲತಂಗಿಯರೂ ಇದ್ದಿರಬಹುದು. ಬಹುಶಃ ಮರಿಯಳ ತಂಗಿಯಾಗಿದ್ದ ಸಲೋಮಿ, ಆಕೆಯ ಗಂಡ ಜೆಬೆದಾಯ ಮತ್ತು ಅವರ ಪುತ್ರರೂ ಬಳಿಕ ಅಪೊಸ್ತಲರೂ ಆದ ಯಾಕೋಬ, ಯೋಹಾನರು ಅವರೊಂದಿಗೆ ಪ್ರಯಾಣಿಸುತ್ತಿದ್ದರು. * (ಮತ್ತಾಯ 4:​20, 21; 13:​54-56; 27:56; ಮಾರ್ಕ 15:40; ಯೋಹಾನ 19:25) ಅಲ್ಲಿಂದ ಹಿಂದೆ ಬರುತ್ತಿದ್ದಾಗ ಯೇಸು ಅವರೊಂದಿಗೆ ಇರಲಿಲ್ಲ. ಅವನು ತಮ್ಮ ಸಂಬಂಧಿಗಳೊಂದಿಗೆ ಇರಬಹುದೆಂದು ಯೋಸೇಫ ಮತ್ತು ಮರಿಯ ಭಾವಿಸಿದ್ದರಿಂದ ಅದನ್ನು ಅಷ್ಟು ಲಕ್ಷ್ಯಿಸಲಿಲ್ಲ. ಮೂರು ದಿನಗಳ ನಂತರ ಮರಿಯ ಯೋಸೇಫರು ಯೇಸು ದೇವಾಲಯದಲ್ಲಿ ಇರುವುದನ್ನು ಕಂಡುಕೊಳ್ಳುತ್ತಾರೆ. ಅಲ್ಲಿ ಅವನು “ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ ಇದ್ದನು.”​—⁠ಲೂಕ 2:​44-46.

8 ಯೇಸು ಬೋಧಕರಿಗೆ ಯಾವ ರೀತಿಯಲ್ಲಿ “ಪ್ರಶ್ನೆಮಾಡುತ್ತಾ” ಇದ್ದನು? ಅವನು ಕೇಳಿದಂಥ ಪ್ರಶ್ನೆಗಳು ಅವನ ಕೌತುಕವನ್ನು ತಣಿಸಲಿಕ್ಕಾಗಿಯೊ ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿಯೊ ಆಗಿರಲಿಕ್ಕಿಲ್ಲ. ಇಲ್ಲಿ ಪ್ರಯೋಗಿಸಲ್ಪಟ್ಟಿರುವ ಗ್ರೀಕ್‌ ಪದವು ಕೋರ್ಟಿನಲ್ಲಿ ಕೇಳಲ್ಪಡುವ ಪ್ರಶ್ನೆಗಳಿಗೆ ಸೂಚಿಸಸಾಧ್ಯವಿದೆ. ಆದುದರಿಂದ ಇದರಲ್ಲಿ ಸವಾಲಿಗೆ ಪ್ರತಿಸವಾಲು ಸೇರಿರಸಾಧ್ಯವಿದೆ. ಹೌದು, ಚಿಕ್ಕ ಹುಡುಗನಾಗಿದ್ದಾಗಲೇ ಯೇಸು ಬೈಬಲ್‌ ವಿದ್ಯಾರ್ಥಿಯಾಗಿದ್ದನು. ಎಷ್ಟೆಂದರೆ, ಪಂಡಿತರಾಗಿದ್ದ ಧಾರ್ಮಿಕ ಬೋಧಕರನ್ನೇ ಅವನು ಅಚ್ಚರಿಗೊಳಿಸಿದನು! “ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು” ಎನ್ನುತ್ತದೆ ಬೈಬಲ್‌.​—⁠ಲೂಕ 2:47.

9 ಅಷ್ಟು ಚಿಕ್ಕ ಪ್ರಾಯದಲ್ಲಿಯೂ ಯೇಸು ತನ್ನ ಬೈಬಲ್‌ ಜ್ಞಾನದಿಂದ ಅನುಭವಸ್ಥ ಬೋಧಕರನ್ನು ಅಚ್ಚರಿಗೊಳಿಸಲು ಹೇಗೆ ಶಕ್ತನಾದನು? ಹೇಗೆಂದರೆ, ಬಾಲ್ಯದಿಂದಲೇ ದೈವಿಕ ಶಿಕ್ಷಣವನ್ನು ಕೊಟ್ಟ ದೇವಭಯವಿದ್ದ ಹೆತ್ತವರು ಅವನಿಗಿದ್ದದ್ದೇ. (ವಿಮೋಚನಕಾಂಡ 12:​24-27; ಧರ್ಮೋಪದೇಶಕಾಂಡ 6:​6-9; ಮತ್ತಾಯ 1:​18-20) ಬಾಲಕನಾದ ಯೇಸುವನ್ನು ಯೋಸೇಫನು ಶಾಸ್ತ್ರವಚನಗಳ ವಾಚನ ಮತ್ತು ಚರ್ಚೆಯನ್ನು ಕೇಳಲು ಸಭಾಮಂದಿರಕ್ಕೆ ಒಯ್ಯುತ್ತಿದ್ದನೆಂಬುದರಲ್ಲಿ ಸಂದೇಹವಿಲ್ಲ. ನಿಮ್ಮ ಹೆತ್ತವರು ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ನಡೆಸಿ ಕ್ರೈಸ್ತ ಕೂಟಗಳಿಗೆ ನಿಮ್ಮನ್ನು ಕರೆದೊಯ್ಯುತ್ತಾರೋ? ಆ ಅಮೂಲ್ಯ ಆಶೀರ್ವಾದವು ನಿಮಗಿದೆಯೋ? ಯೇಸುವಿನಂತೆಯೇ ನೀವೂ ನಿಮ್ಮ ಹೆತ್ತವರ ಪ್ರಯತ್ನಗಳನ್ನು ಮಾನ್ಯಮಾಡುತ್ತೀರಾ? ಯೇಸುವಿನಂತೆಯೇ ನೀವು ಸಹ ಕಲಿತ ವಿಷಯಗಳನ್ನು ಇತರರಿಗೆ ಹೇಳುತ್ತೀರಾ?

ಯೇಸು ಅಧೀನನಾಗಿದ್ದನು

10 ಮರಿಯ ಮತ್ತು ಯೋಸೇಫನು ಮೂರು ದಿನಗಳ ಬಳಿಕ ಯೇಸುವನ್ನು ದೇವಾಲಯದಲ್ಲಿ ಕಂಡುಹಿಡಿದಾಗ ಅವರಿಗೆ ಹೇಗೆ ಅನಿಸಿದ್ದಿರಬೇಕೆಂದು ನೀವು ನೆನಸುತ್ತೀರಿ? ಅವರ ಮನಸ್ಸಿಗೆ ನೆಮ್ಮದಿಯಾಗಿದ್ದಿರಬೇಕು ಎಂಬುದು ನಿಶ್ಚಯ. ಆದರೆ ಯೇಸು ತಾನು ಎಲ್ಲಿದ್ದೆನೆಂಬುದು ಅವರಿಗೆ ತಿಳಿಯದೇ ಇದ್ದುದಕ್ಕೆ ಆಶ್ಚರ್ಯಪಟ್ಟನು. ಅವರಿಬ್ಬರಿಗೂ ಯೇಸುವಿನ ಅದ್ಭುತಕರ ಜನನದ ಕುರಿತು ತಿಳಿದಿತ್ತು. ಮಾತ್ರವಲ್ಲ, ರಕ್ಷಕನೂ ದೇವರ ರಾಜ್ಯದ ಪ್ರಭುವೂ ಆಗಲಿದ್ದ ಯೇಸುವಿನ ವಿಷಯದಲ್ಲಿ ಎಲ್ಲವೂ ಅಲ್ಲದಿದ್ದರೂ ಸ್ವಲ್ಪವಾದರೂ ಅವರಿಗೆ ತಿಳಿದಿರಬೇಕಿತ್ತು. (ಮತ್ತಾಯ 1:21; ಲೂಕ 1:​32-35; 2:11) ಆದುದರಿಂದ ಯೇಸು ಅವರಿಗೆ ಪ್ರಶ್ನಿಸಿದ್ದು: “ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” ಆದರೂ ಯೇಸು ವಿಧೇಯತೆ ತೋರಿಸುತ್ತ ತನ್ನ ಹೆತ್ತವರೊಂದಿಗೆ ನಜರೇತಿಗೆ ಹಿಂದೆ ಹೋದನು. ಬೈಬಲ್‌ ಹೇಳುವುದು: “ಆತನು . . . ಅವರಿಗೆ ಅಧೀನನಾಗಿದ್ದನು.” ಇದಲ್ಲದೆ, “ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು.”​—⁠ಲೂಕ 2:​48-51.

11 ಯೇಸುವಿನಂತೆ ನಿಮ್ಮ ಹೆತ್ತವರಿಗೆ ಯಾವಾಗಲೂ ವಿಧೇಯರಾಗುವುದು ಸುಲಭವೆಂದು ನೀವು ನೆನಸುತ್ತೀರೊ? ಇಲ್ಲವೆ ‘ಆಧುನಿಕ ಲೋಕದ ಗಂಧವೇ ಅವರಿಗಿಲ್ಲ, ಅವರಿಗಿಂತಲೂ ನಾವೇ ಜಾಣರು’ ಎಂದು ನೀವು ನೆನಸುತ್ತೀರೋ? ನಿಮಗೆ ಹೆಚ್ಚು ಗೊತ್ತಿರಬಹುದು ನಿಜ. ಸೆಲ್‌ ಫೋನ್‌, ಕಂಪ್ಯೂಟರ್‌ ಮತ್ತು ಇತರ ನವನವೀನ ಎಲೆಕ್ಟ್ರಾನಿಕ್ಸ್‌ ಸಾಧನಗಳ ಬಗ್ಗೆ ನಿಮಗೇ ಹೆಚ್ಚು ಗೊತ್ತಿರಬಹುದು. ಆದರೆ ಯೇಸುವಿನ ಕುರಿತು ತುಸು ಯೋಚಿಸಿರಿ. ಅವನು ತನ್ನ ‘ಬುದ್ಧಿಯಿಂದಲೂ ಉತ್ತರಗಳಿಂದಲೂ’ ಅನುಭವಸ್ಥ ಬೋಧಕರನ್ನು ಸಹ ಅಚ್ಚರಿಗೊಳಿಸಿದ. ಅವನಿಗೆ ಹೋಲಿಸುವಾಗ ನಿಮಗೆ ಗೊತ್ತಿರುವುದು ಏನೂ ಇಲ್ಲ ಎಂದು ನೀವು ಒಪ್ಪಿಕೊಳ್ಳುವಿರಿ. ಹಾಗಿದ್ದರೂ ಯೇಸು ತನ್ನ ಹೆತ್ತವರಿಗೆ ಅಧೀನನಾಗಿದ್ದನು. ಅವನು ಯಾವಾಗಲೂ ಅವರ ನಿರ್ಣಯಗಳೊಂದಿಗೆ ಸಹಮತದಿಂದ ಇದ್ದನು ಎಂದು ಇದರ ಅರ್ಥವಲ್ಲ. ಆದರೆ ಅವನು ತನ್ನ ಹದಿಪ್ರಾಯದಲ್ಲೆಲ್ಲ “ಅವರಿಗೆ ಅಧೀನನಾಗಿದ್ದನು.” ಅವನ ಮಾದರಿಯಿಂದ ನೀವು ಯಾವ ಪಾಠವನ್ನು ಕಲಿಯಬಲ್ಲಿರಿ?​—⁠ಧರ್ಮೋಪದೇಶಕಾಂಡ 5:​16, 29.

ವಿಧೇಯರಾಗುವುದು ಒಂದು ಸವಾಲು

12 ವಿಧೇಯತೆ ತೋರಿಸುವುದು ಯಾವಾಗಲೂ ಸುಲಭವಲ್ಲ. ಅದು ಕೆಲವು ವರುಷಗಳ ಹಿಂದಿನ ಈ ಅನುಭವದಲ್ಲಿ ತೋರಿಬಂತು. ಇಬ್ಬರು ಹುಡುಗಿಯರು ರಸ್ತೆದಾಟಲಿಕ್ಕಾಗಿ ಓವರ್‌ ಬ್ರಿಜ್‌ ಹತ್ತಿಹೋಗುವ ಬದಲು ವಾಹನ ಓಡಾಡುವ ಹೆದ್ದಾರಿಯನ್ನೇ ಕ್ರಾಸ್‌ ಮಾಡಲು ನೋಡಿದರು. ಆದರೆ, ಅವರ ಗೆಳೆಯ ಜಾನ್‌ ಓವರ್‌ ಬ್ರಿಜ್‌ನ್ನು ಹತ್ತುತ್ತಿದ್ದನು. ಆಗ ಆ ಹುಡುಗಿಯರು “ಜಾನ್‌, ನೀನು ನಮ್ಮೊಂದಿಗೆ ಬರುವುದಿಲ್ಲವಾ, ಬಾ!” ಎಂದು ಅವನನ್ನು ಕರೆದರು. ಅವನು ತುಸು ಹಿಂಜರಿದಾಗ “ಓ, ನೀನೊಬ್ಬ ಅಂಜುಬುರುಕ!” ಎಂದು ಮೂದಲಿಸಿದರು. ಜಾನ್‌ ಹೋಗದಿದ್ದದ್ದು ಭಯದಿಂದಲ್ಲ. “ಹಾಗೆ ರಸ್ತೆದಾಟಬಾರದೆಂದು ನನ್ನ ಅಮ್ಮ ಹೇಳಿದ್ದಾರೆ. ಅವರ ಮಾತನ್ನು ಕೇಳಲೇಬೇಕು” ಎಂದು ಹೇಳಿ ಅವನು ಓವರ್‌ ಬ್ರಿಜ್‌ ಮೇಲಿಂದ ನಡೆಯತೊಡಗಿದನು. ಕೆಲವೇ ಕ್ಷಣಗಳ ಬಳಿಕ ಟಯರುಗಳ ಕಿರ್ರ್‌ ಎಂಬ ಕಿರಿಚಾಟ ಕೇಳಿಬಂತು. ಕೆಳಗೆ ನೋಡಿದಾಗ ರಭಸದಿಂದ ಬಂದ ಒಂದು ಕಾರು ಆ ಹುಡುಗಿಯರಿಗೆ ಬಡಿದಿತ್ತು. ಒಬ್ಬ ಹುಡುಗಿ ಸತ್ತಳು, ಇನ್ನೊಬ್ಬಳಿಗೆ ಭಾರೀ ಗಾಯವಾಗಿದ್ದ ಕಾರಣ ಆಕೆಯ ಒಂದು ಕಾಲನ್ನು ಕತ್ತರಿಸಿ ತೆಗೆಯಬೇಕಾಯಿತು. ಆ ಹುಡುಗಿಯರಿಗೆ ಓವರ್‌ ಬ್ರಿಜ್‌ನಲ್ಲಿಯೇ ನಡೆಯಬೇಕೆಂದು ಮೊದಲೇ ಹೇಳಿದ್ದ ಅವರ ತಾಯಿ, ಆ ಬಳಿಕ ಜಾನ್‌ನ ತಾಯಿಗೆ ಹೀಗಂದಳು: “ನಿಮ್ಮ ಮಗನ ಹಾಗೆ ಇವರೂ ಮಾತು ಕೇಳಿರುತ್ತಿದ್ರೆ ಹೀಗಾಗುತ್ತಿರಲಿಲ್ಲ.”​—⁠ಎಫೆಸ 6:​1.

13 “ಮಕ್ಕಳೇ, ನೀವು . . . ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು” ಎಂದು ದೇವರು ಹೇಳುವುದೇಕೆ? ಅವರಿಗೆ ವಿಧೇಯತೆ ತೋರಿಸುವ ಮೂಲಕ ನೀವು ದೇವರಿಗೇ ವಿಧೇಯತೆ ತೋರಿಸುತ್ತೀರಿ. ಅಲ್ಲದೆ, ನಿಮ್ಮ ಹೆತ್ತವರಿಗೆ ನಿಮಗಿಂತ ಹೆಚ್ಚು ಅನುಭವವಿದೆ. ದೃಷ್ಟಾಂತಕ್ಕೆ, ಮೇಲೆ ಹೇಳಲಾಗಿರುವ ಅಪಘಾತಕ್ಕೆ ಕೇವಲ ಐದು ವರುಷಗಳ ಹಿಂದೆ ಜಾನ್‌ನ ತಾಯಿಯ ಸ್ನೇಹಿತೆಯ ಮಗನು ಅದೇ ಹೆದ್ದಾರಿಯನ್ನು ದಾಟಪ್ರಯತ್ನಿಸಿದಾಗ ಜೀವ ಕಳೆದುಕೊಂಡಿದ್ದನು! ನಿಮ್ಮ ಹೆತ್ತವರಿಗೆ ಸದಾ ವಿಧೇಯರಾಗುವುದು ಸುಲಭವಲ್ಲ ನಿಜ. ಆದರೆ ನೀವು ವಿಧೇಯರಾಗಲೇಬೇಕೆಂದು ದೇವರು ಹೇಳುತ್ತಾನೆ. ಒಂದುವೇಳೆ ನಿಮ್ಮ ಹೆತ್ತವರಾಗಲಿ ಇತರರಾಗಲಿ ನೀವು ಸುಳ್ಳಾಡಬೇಕು, ಕದಿಯಬೇಕು ಇಲ್ಲವೆ ದೇವರು ಮೆಚ್ಚದಿರುವಂಥ ಇನ್ನಾವುದನ್ನಾದರೂ ಮಾಡಬೇಕೆಂದು ಹೇಳುವಲ್ಲಿ ಆಗೇನು? ಆಗ ನೀವು ‘ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು.’ ಈ ಕಾರಣದಿಂದಲೇ, “ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು” ಎಂದು ಹೇಳುವುದಕ್ಕೆ ಮೊದಲು, “ಕರ್ತನಲ್ಲಿರುವವರಿಗೆ ತಕ್ಕಹಾಗೆ” ಎನ್ನುತ್ತದೆ ಬೈಬಲ್‌. ಅಂದರೆ, ದೇವರ ನಿಯಮಗಳಿಗೆ ಹೊಂದಿಕೆಯಲ್ಲಿರುವ ಸರ್ವ ವಿಷಯಗಳಲ್ಲಿ ನೀವು ನಿಮ್ಮ ಹೆತ್ತವರಿಗೆ ವಿಧೇಯರಾಗುವುದು ಇದರಲ್ಲಿ ಸೇರಿದೆ.​—⁠ಅ. ಕೃತ್ಯಗಳು 5:29.

14 ನೀವು ಪರಿಪೂರ್ಣರಾಗಿದ್ದರೆ ಅಂದರೆ ಯೇಸುವಿನಂತೆ “ನಿರ್ದೋಷಿಯೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ” ಆಗಿದ್ದರೆ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗುವುದು ಸದಾ ಸುಲಭ ಎಂದು ನೆನಸುತ್ತೀರೊ? (ಇಬ್ರಿಯ 7:26) ನೀವು ಪರಿಪೂರ್ಣರಾಗಿದ್ದಲ್ಲಿ, ನಿಮಗೆ ಈಗಿನಂತೆ ಕೆಟ್ಟದ್ದನ್ನು ಮಾಡುವ ಸ್ವಭಾವ ಇರಲಾರದು. (ಆದಿಕಾಂಡ 8:21; ಕೀರ್ತನೆ 51:⁠5) ಆದರೆ ಯೇಸುವಿಗೆ ಕೂಡ ವಿಧೇಯತೆಯ ಬಗ್ಗೆ ಪಾಠ ಕಲಿಯಲಿಕ್ಕಿತ್ತು. ಬೈಬಲ್‌ ಹೇಳುವುದು: “ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.” (ಇಬ್ರಿಯ 5:⁠8) ಹಾಗಾದರೆ, ಯೇಸುವಿಗೆ ಸ್ವರ್ಗದಲ್ಲಿ ಎಂದೂ ಕಲಿಯಲಿಕ್ಕಿರದಿದ್ದ ಒಂದು ಪಾಠವಾದ ವಿಧೇಯತೆಯನ್ನು ಕಲಿಯಲು ಕಷ್ಟಾನುಭವವು ಅವನಿಗೆ ಹೇಗೆ ಸಹಾಯ ಮಾಡಿತು?

15 ಯೇಸು ಮಗುವಾಗಿದ್ದಾಗ, ಯೆಹೋವನ ನಿರ್ದೇಶನದ ಮೇರೆಗೆ ಯೋಸೇಫ ಮತ್ತು ಮರಿಯಳು ಅವನನ್ನು ಹಾನಿಯಿಂದ ಕಾಪಾಡಿದರು. (ಮತ್ತಾಯ 2:​7-23) ಆದರೆ ಅಂತಿಮವಾಗಿ, ದೇವರು ಯೇಸುವಿನ ಮೇಲಿದ್ದ ದೈವಿಕ ಕಾವಲನ್ನು ಹಿಂದೆಗೆದನು. ಯೇಸುವಿನ ಮಾನಸಿಕ ಹಾಗೂ ಶಾರೀರಿಕ ಕಷ್ಟಗಳು ಎಷ್ಟು ಹೆಚ್ಚಾಗಿದ್ದವೆಂದರೆ, ಅವನು “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು” ಮಾಡಿದನು ಎಂದು ಬೈಬಲನ್ನುತ್ತದೆ. (ಇಬ್ರಿಯ 5:⁠7) ಅದು ಯಾವಾಗ ನಡೆಯಿತು?

16 ಇದು ಯೇಸುವಿನ ಭೂಜೀವಿತದ ಕೊನೆಯ ಗಳಿಗೆಯಲ್ಲಿ ಅಂದರೆ, ಸೈತಾನನು ಯೇಸುವಿನ ಸಮಗ್ರತೆಯನ್ನು ಮುರಿಯಲು ತನ್ನ ಸರ್ವಶಕ್ತಿಯನ್ನು ಬಳಸಿದಾಗ ಸಂಭವಿಸಿತು. ದುಷ್ಕರ್ಮಿಯೋಪಾದಿ ತಾನು ಪಡುವ ಮರಣವು ತನ್ನ ತಂದೆಯ ಸತ್ಕೀರ್ತಿಯ ಮೇಲೆ ದುಷ್ಪರಿಣಾಮವನ್ನು ತಂದೀತೆಂಬ ಯೋಚನೆಗಳಿಂದ ಯೇಸು ಬಹಳ ಯಾತನೆ ಪಟ್ಟನು. ಎಷ್ಟೆಂದರೆ, “ಆತನು ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆತನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.” ಕೆಲವೇ ತಾಸುಗಳ ಬಳಿಕ ಅವನು ವಧಾಸ್ತಂಭದ ಮೇಲೆ ಪಟ್ಟ ಮರಣವು ಎಷ್ಟು ವೇದನಾಮಯವಾಗಿತ್ತೆಂದರೆ ಅವನು ‘ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸಿದನು.’ (ಲೂಕ 22:​42-44; ಮಾರ್ಕ 15:34) ಹೀಗೆ ಅವನು ‘ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡು’ ತನ್ನ ತಂದೆಯ ಹೃದಯವನ್ನು ಸಂತೋಷಪಡಿಸಿದನು. ನಾವು ವಿಧೇಯರಾಗಲಿಕ್ಕಾಗಿ ಮಾಡಬೇಕಾದ ಹೋರಾಟದಿಂದ ಬರುವ ವೇದನೆಗಳ ಕುರಿತು ಈಗ ಸ್ವರ್ಗದಲ್ಲಿರುವ ಯೇಸು ತಾನೇ ಅನುತಾಪಪಡುತ್ತಾನೆ.​—⁠ಜ್ಞಾನೋಕ್ತಿ 27:11; ಇಬ್ರಿಯ 2:18; 4:15.

ವಿಧೇಯತೆಯ ಪಾಠವನ್ನು ಕಲಿಯುವುದು

17 ನಿಮ್ಮ ತಂದೆತಾಯಿ ನಿಮ್ಮನ್ನು ಶಿಕ್ಷಿಸುವುದು ನಿಮ್ಮ ಒಳ್ಳೆಯದಕ್ಕಾಗಿಯೇ ಮತ್ತು ನಿಮ್ಮನ್ನು ಪ್ರೀತಿಸುತ್ತಿರುವುದರಿಂದಲೇ. ಬೈಬಲ್‌ ಕೇಳುವುದು: “ತಂದೆಯಿಂದ ಶಿಕ್ಷೆಹೊಂದದ ಮಗನೆಲ್ಲಿ?” ನಿಮ್ಮ ಹೆತ್ತವರು ನಿಮ್ಮನ್ನು ತಿದ್ದಲು ಸಮಯವನ್ನು ತೆಗೆದುಕೊಳ್ಳದಿದ್ದರೆ ನಿಮ್ಮನ್ನು ಪ್ರೀತಿಸುವುದಿಲ್ಲ ಎಂದು ಅರ್ಥವಲ್ಲವೇ? ಅದೇ ರೀತಿ, ಯೆಹೋವನು ನಿಮ್ಮನ್ನು ಪ್ರೀತಿಸುವುದರಿಂದಲೇ ನಿಮ್ಮನ್ನು ತಿದ್ದುತ್ತಾನೆ. “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.”​—⁠ಇಬ್ರಿಯ 12:​7-11.

18 ಯೇಸು ಮಹಾ ವಿವೇಕಕ್ಕಾಗಿ ಹೆಸರಿಸಿದ ಪುರಾತನ ಇಸ್ರಾಯೇಲ್ಯ ಅರಸ ಸೊಲೊಮೋನನು, ತಂದೆತಾಯಿಗಳು ಕೊಡುವ ಪ್ರೀತಿಪೂರ್ವಕ ತಿದ್ದುಪಾಟಿನ ಅಗತ್ಯದ ಕುರಿತು ಮಾತಾಡಿದನು. ಅವನು ಬರೆದುದು: “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.” ಪ್ರೀತಿಪೂರ್ವಕ ತಿದ್ದುಪಡಿಯನ್ನು ಪಡೆಯುವವನು ತನ್ನ ಪ್ರಾಣವನ್ನೇ ಮರಣದಿಂದ ಕಾಪಾಡಿಕೊಂಡಾನು ಎಂದು ಸಹ ಸೊಲೊಮೋನನು ಹೇಳಿದ್ದಾನೆ. (ಜ್ಞಾನೋಕ್ತಿ 13:24; 23:​13, 14, NW; ಮತ್ತಾಯ 12:42) ಒಬ್ಬ ಕ್ರೈಸ್ತ ಸ್ತ್ರೀ ನೆನಪಿಸಿಕೊಳ್ಳುವದೇನೆಂದರೆ, ತಾನು ಮಗುವಾಗಿದ್ದಾಗ ಕ್ರೈಸ್ತ ಕೂಟಗಳಲ್ಲಿ ಅಯೋಗ್ಯವಾಗಿ ವರ್ತಿಸಿದಲ್ಲಿ, ಮನೆಗೆ ಹಿಂದಿರುಗಿದಾಗ ಶಿಕ್ಷೆ ಖಂಡಿತ ಎಂದು ತಂದೆ ಹೇಳುತ್ತಿದ್ದರು. ಈ ರೀತಿ ಪ್ರೀತಿಪೂರ್ವಕ ಶಿಸ್ತನ್ನು ಕೊಟ್ಟು ತನ್ನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿದ್ದಕ್ಕಾಗಿ ಆಕೆ ತನ್ನ ತಂದೆಗೆ ಆಭಾರಿಯಾಗಿದ್ದಾಳೆ.

19 ನಿಮಗೆ ಪ್ರೀತಿಪೂರ್ವಕ ಶಿಸ್ತನ್ನು ನೀಡಲು ಸಮಯವನ್ನು ತೆಗೆದುಕೊಳ್ಳುವ ಮತ್ತು ಅದಕ್ಕಾಗಿ ಪ್ರಯತ್ನಿಸುವ ಪ್ರೀತಿಯುಳ್ಳ ಹೆತ್ತವರು ನಿಮಗಿರುವುದಾದರೆ ಅದಕ್ಕಾಗಿ ಕೃತಜ್ಞರಾಗಿರಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಹೆತ್ತವರಾದ ಯೋಸೇಫ ಮತ್ತು ಮರಿಯಳಿಗೆ ವಿಧೇಯನಾದಂತೆಯೇ ನೀವೂ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ. ಆದರೆ ವಿಶೇಷವಾಗಿ, ನಿಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರು ವಿಧೇಯರಾಗಬೇಕೆಂದು ಹೇಳುವ ಕಾರಣದಿಂದ ವಿಧೇಯರಾಗಿರಿ. ವಿಧೇಯರಾದಲ್ಲಿ ನಿಮಗೆ ನೀವೇ ಪ್ರಯೋಜನವನ್ನು ತಂದುಕೊಳ್ಳುವಿರಿ. ಮಾತ್ರವಲ್ಲ ‘ನಿಮಗೆ ಮೇಲಾಗುವದು, ನೀವು ಭೂಮಿಯ ಮೇಲೆ ಬಹುಕಾಲ ಬದುಕುವಿರಿ.’​—⁠ಎಫೆಸ 6:​2, 3. (w07 2/15)

[ಪಾದಟಿಪ್ಪಣಿಗಳು]

^ ಪ್ಯಾರ. 12 ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌ ಸಂಪುಟ 2, ಪುಟ 841ನ್ನು ನೋಡಿ.

ನೀವು ಹೇಗೆ ಉತ್ತರಿಸುವಿರಿ?

• ಹೆತ್ತವರಿಗೆ ವಿಧೇಯರಾಗುವುದರಿಂದ ಮಕ್ಕಳು ಯಾವ ಪ್ರಯೋಜನಗಳನ್ನು ಪಡೆಯಬಹುದು?

• ಚಿಕ್ಕವನಾಗಿದ್ದಾಗ ಯೇಸು ತನ್ನ ತಂದೆತಾಯಿಗಳಿಗೆ ವಿಧೇಯನಾಗುವುದರಲ್ಲಿ ಹೇಗೆ ಮಾದರಿಯನ್ನಿಟ್ಟನು?

• ಯೇಸು ವಿಧೇಯತೆಯನ್ನು ಕಲಿತದ್ದು ಹೇಗೆ?

[ಅಧ್ಯಯನ ಪ್ರಶ್ನೆಗಳು]

1. ವಿಧೇಯತೆಯು ನಿಮ್ಮನ್ನು ಹೇಗೆ ಕಾಪಾಡಬಲ್ಲದು?

2. ಮಕ್ಕಳಿಗೆ ಎಚ್ಚರಿಕೆಗಳು ಏಕೆ ಬೇಕಾಗಿವೆ ಮತ್ತು ಅವರು ತಮ್ಮ ತಂದೆತಾಯಿಗಳಿಗೆ ಏಕೆ ವಿಧೇಯರಾಗಬೇಕು?

3. ನಮ್ಮಲ್ಲಿ ಹೆಚ್ಚಿನವರಿಗಿರುವ “ವಾಸ್ತವವಾದ ಜೀವ” ಯಾವುದು ಮತ್ತು ಮಕ್ಕಳು ಅದನ್ನು ಹೇಗೆ ಪಡೆಯಬಲ್ಲರು?

4. ಮಕ್ಕಳು ದೇವರನ್ನು ಹೇಗೆ ಸನ್ಮಾನಿಸಬಲ್ಲರು ಮತ್ತು ಹೀಗೆ ಯಾವ ಪ್ರಯೋಜನ ಪಡೆಯುವರು?

5. ಯೇಸು ಉತ್ತಮ ಕೆಲಸಗಾರನಾಗಿದ್ದನೆಂದು ನಂಬಲು ಯಾವ ಕಾರಣಗಳಿವೆ?

6. (ಎ) ಯೇಸು ಚಿಕ್ಕ ಹುಡುಗನಾಗಿದ್ದಾಗ ಮನೆಯಲ್ಲಿ ಕೆಲಸ ಮಾಡುತ್ತಿದ್ದಿರಬಹುದೆಂದು ನೀವೇಕೆ ನೆನಸುತ್ತೀರಿ? (ಬಿ) ಮಕ್ಕಳು ಯೇಸುವನ್ನು ಯಾವ ವಿಧಗಳಲ್ಲಿ ಅನುಸರಿಸಬಲ್ಲರು?

7. (ಎ) ಯೇಸು ಪಸ್ಕಕ್ಕೆ ಹೋದಾಗ ಯಾರೊಂದಿಗೆ ಪ್ರಯಾಣಿಸಿದ್ದಿರಬಹುದು? (ಬಿ) ಅವರು ಮನೆಗೆ ಹಿಂತಿರುಗುತ್ತಿದ್ದಾಗ ಯೇಸು ಎಲ್ಲಿದ್ದನು ಮತ್ತು ಅವನು ಅಲ್ಲಿ ಇದ್ದುದೇಕೆ?

8. ಯೇಸು ದೇವಾಲಯದಲ್ಲಿ ಏನು ಮಾಡಿದನು ಮತ್ತು ಜನರು ಅದಕ್ಕೆ ಅಚ್ಚರಿಪಟ್ಟದ್ದೇಕೆ?

9. ಬೈಬಲನ್ನು ಅಧ್ಯಯನಮಾಡುವುದರಲ್ಲಿ ನೀವು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಬಲ್ಲಿರಿ?

10. (ಎ) ಯೇಸು ಎಲ್ಲಿರಬಹುದೆಂದು ಅವನ ಹೆತ್ತವರಿಗೆ ಏಕೆ ಗೊತ್ತಿರಬೇಕಿತ್ತು? (ಬಿ) ಯೇಸು ಚಿಕ್ಕ ಮಕ್ಕಳಿಗೆ ಯಾವ ಉತ್ತಮ ಮಾದರಿಯನ್ನಿಟ್ಟನು?

11. ವಿಧೇಯತೆಯ ಬಗ್ಗೆ ಯೇಸುವಿನಿಂದ ನೀವು ಯಾವ ಪಾಠವನ್ನು ಕಲಿಯಬಲ್ಲಿರಿ?

12. ವಿಧೇಯತೆ ನಿಮ್ಮ ಜೀವವನ್ನು ಹೇಗೆ ರಕ್ಷಿಸಬಹುದು?

13. (ಎ) ನೀವು ನಿಮ್ಮ ಹೆತ್ತವರಿಗೆ ಏಕೆ ವಿಧೇಯರಾಗಬೇಕು? (ಬಿ) ತಂದೆ ಅಥವಾ ತಾಯಿ ಮಾಡಬೇಕೆಂದು ಹೇಳುವುದನ್ನು ಮಾಡದೆ ಇರುವುದು ಮಗುವಿಗೆ ಯಾವಾಗ ಮಾತ್ರ ಯೋಗ್ಯವಾಗಿದೆ?

14. ಒಬ್ಬ ಪರಿಪೂರ್ಣ ವ್ಯಕ್ತಿಗೆ ವಿಧೇಯತೆ ಏಕೆ ಹೆಚ್ಚು ಸುಲಭವಾಗಿದೆ, ಆದರೂ ಅವನು ಅದರ ಬಗ್ಗೆ ಕಲಿಯುವುದು ಏಕೆ ಅಗತ್ಯ?

15, 16. ಯೇಸು ವಿಧೇಯತೆಯನ್ನು ಕಲಿತುಕೊಂಡದ್ದು ಹೇಗೆ?

17. ನಮಗೆ ಶಿಕ್ಷೆ ಕೊಡಲ್ಪಡುವಾಗ ನಾವು ಅದನ್ನು ಹೇಗೆ ವೀಕ್ಷಿಸಬೇಕು?

18. (ಎ) ಪ್ರೀತಿಪೂರ್ವಕ ಶಿಸ್ತು ಯಾವುದಕ್ಕೆ ರುಜುವಾತಾಗಿದೆ? (ಬಿ) ಇಂಥ ಶಿಸ್ತಿನಿಂದ ಜನರು ಯಾವ ಪ್ರಯೋಜನಕರ ರೀತಿಯಲ್ಲಿ ರೂಪಿಸಲ್ಪಟ್ಟದ್ದನ್ನು ನೀವು ನೋಡಿದ್ದೀರಿ?

19. ನೀವು ನಿಮ್ಮ ತಂದೆತಾಯಿಗಳಿಗೆ ವಿಶೇಷವಾಗಿ ಏಕೆ ವಿಧೇಯರಾಗಬೇಕು?

[ಪುಟ 20ರಲ್ಲಿರುವ ಚಿತ್ರ]

ಹನ್ನೆರಡು ವಯಸ್ಸಿನ ಯೇಸು ಶಾಸ್ತ್ರದಲ್ಲಿ ನುರಿತವನಾಗಿದ್ದನು

[ಪುಟ 22ರಲ್ಲಿರುವ ಚಿತ್ರ]

ಯೇಸು ಬಾಧೆಗಳಿಂದಲೇ ವಿಧೇಯತೆ ಕಲಿತುಕೊಂಡದ್ದು ಹೇಗೆ?