ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಭಯಪಡಿರಿ, ಜೀವನವನ್ನು ಆನಂದಿಸಿರಿ

ಯೆಹೋವನಿಗೆ ಭಯಪಡಿರಿ, ಜೀವನವನ್ನು ಆನಂದಿಸಿರಿ

ಯೆಹೋವನಿಗೆ ಭಯಪಡಿರಿ, ಜೀವನವನ್ನು ಆನಂದಿಸಿರಿ

“ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರ್ರಿ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವದಿಲ್ಲ.”​—⁠ಕೀರ್ತನೆ 34:⁠9.

ಕ್ರೈಸ್ತಪ್ರಪಂಚದ ಪಾದ್ರಿಗಳು ಜನರಲ್ಲಿ ದೇವರ ಭಯವನ್ನು ಮೂಡಿಸಲಿಕ್ಕಾಗಿ, ಆತನು ಪಾಪಿಗಳನ್ನು ನರಕದ ಅಗ್ನಿಯಲ್ಲಿ ನಿರಂತರವಾಗಿ ಶಿಕ್ಷಿಸುತ್ತಾನೆ ಎಂಬ ಶಾಸ್ತ್ರಾಧಾರವಿಲ್ಲದ ಬೋಧನೆಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಬೋಧನೆಯು ಬೈಬಲಿಗೆ ವಿರುದ್ಧವಾಗಿದೆ. ಏಕೆಂದರೆ, ಯೆಹೋವನು ಪ್ರೀತಿ ಹಾಗೂ ನ್ಯಾಯದ ದೇವರಾಗಿದ್ದಾನೆಂದು ಅದು ಕಲಿಸುತ್ತದೆ. (ಆದಿಕಾಂಡ 3:19; ಧರ್ಮೋಪದೇಶಕಾಂಡ 32:4; ರೋಮಾಪುರ 6:23; 1 ಯೋಹಾನ 4:⁠8) ಆದರೆ ಕ್ರೈಸ್ತಪ್ರಪಂಚದ ಇನ್ನಿತರ ಪಾದ್ರಿಗಳು ತದ್ವಿರುದ್ಧವಾದ ವಿಧಾನವನ್ನು ಬಳಸುತ್ತಾರೆ. ದೇವರಿಗೆ ಭಯಪಡುವುದರ ಬಗ್ಗೆ ಅವರು ಮಾತೇ ಎತ್ತುವುದಿಲ್ಲ. ಅದಕ್ಕೆ ಬದಲಿಗೆ ದೇವರು ಕಟ್ಟುನಿಟ್ಟಿನವನಲ್ಲ ಮತ್ತು ಒಬ್ಬ ವ್ಯಕ್ತಿಯ ಜೀವನ ರೀತಿ ಹೇಗೆಯೇ ಇರಲಿ ದೇವರು ಅವನನ್ನು ಸ್ವೀಕರಿಸುತ್ತಾನೆಂದು ಅವರು ಬೋಧಿಸುತ್ತಾರೆ. ಆದರೆ ಇದನ್ನು ಸಹ ಬೈಬಲ್‌ ಕಲಿಸುವುದಿಲ್ಲ.​—⁠ಗಲಾತ್ಯ 5:​19-21.

2 ನಾವು ದೇವರಿಗೆ ಭಯಪಡಬೇಕೆಂದು ಬೈಬಲ್‌ ಉತ್ತೇಜಿಸುತ್ತದೆ. (ಪ್ರಕಟನೆ 14:⁠7) ಈ ಬೈಬಲ್‌ ಬೋಧನೆಯು ಹಲವಾರು ಪ್ರಶ್ನೆಗಳನ್ನೆಬ್ಬಿಸುತ್ತದೆ. ಒಬ್ಬ ಪ್ರೀತಿಯ ದೇವರು ನಾವಾತನಿಗೆ ಭಯಪಡಬೇಕೆಂದು ಬಯಸುವುದೇಕೆ? ದೇವರು ಯಾವ ರೀತಿಯ ಭಯವನ್ನು ಅವಶ್ಯಪಡಿಸುತ್ತಾನೆ? ದೇವರಿಗೆ ಭಯಪಡುವುದರಿಂದ ನಮಗೆ ಹೇಗೆ ಪ್ರಯೋಜನವಾಗಬಲ್ಲದು? 34ನೇ ಕೀರ್ತನೆಯನ್ನು ನಾವು ಚರ್ಚಿಸುತ್ತಾ ಹೋದಂತೆ ಈ ಪ್ರಶ್ನೆಗಳನ್ನು ಪರಿಗಣಿಸುವೆವು.

ದೇವರಿಗೆ ಏಕೆ ಭಯಪಡಬೇಕು?

3 ಯೆಹೋವನು ಈ ವಿಶ್ವದ ಸೃಷ್ಟಿಕರ್ತ ಹಾಗೂ ಪರಮಾಧಿಕಾರಿ ಪ್ರಭು ಆಗಿರುವುದರಿಂದ ಆತನಿಗೆ ಭಯಪಡುವುದು ಸೂಕ್ತವಾಗಿದೆ. (1 ಪೇತ್ರ 2:17) ಆದರೆ ಈ ಭಯವು, ಒಬ್ಬ ಕ್ರೂರ ದೇವರ ಕಡೆಗಿರುವಂಥ ರೀತಿಯ ವಿಪರೀತ ಭೀತಿ ಆಗಿರುವುದಿಲ್ಲ. ಅದು ಯೆಹೋವನ ಸ್ಥಾನದ ಕಾರಣದಿಂದ ಅವನ ಕಡೆಗಿನ ಪೂಜ್ಯ ಭಾವನೆಯಿಂದ ಕೂಡಿರುವ ಭಕ್ತಿ ಆಗಿದೆ. ಆತನನ್ನು ಯಾವುದೇ ರೀತಿಯಲ್ಲಿ ಅಪ್ರಸನ್ನಗೊಳಿಸಬಾರದೆಂಬ ಭಯವೂ ಅದಾಗಿದೆ. ದೇವರ ಭಯವು ಉದಾತ್ತವಾಗಿದೆ ಮತ್ತು ಉದ್ಧಾರಮಾಡುವಂಥದ್ದು ಆಗಿರುತ್ತದೆ. ಅದು ಖಿನ್ನಗೊಳಿಸುವಂಥದ್ದೂ ಭೀತಿಹುಟ್ಟಿಸುವಂಥದ್ದೂ ಆಗಿರುವುದಿಲ್ಲ. ‘ಸಂತೋಷಭರಿತ ದೇವರಾದ’ ಯೆಹೋವನು ತನ್ನ ಸೃಷ್ಟಿಯಾಗಿರುವ ಮಾನವರು ಜೀವನವನ್ನು ಆನಂದಿಸಬೇಕೆಂದು ಬಯಸುತ್ತಾನೆ. (1 ತಿಮೊಥೆಯ 1:​11, NW) ಆದರೆ ಜೀವನವನ್ನು ಆನಂದಿಸಲಿಕ್ಕಾಗಿ ನಾವು ದೇವರ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ ನಡೆಯಬೇಕು. ಇದನ್ನು ಮಾಡಲು ಅನೇಕರು ತಮ್ಮ ಜೀವನಶೈಲಿಯನ್ನು ಬದಲಾಯಿಸಬೇಕಾಗುತ್ತದೆ. ಅವಶ್ಯವಾದ ಈ ಬದಲಾವಣೆಯನ್ನು ಮಾಡುವವರೆಲ್ಲರೂ ಕೀರ್ತನೆಗಾರನಾದ ದಾವೀದನ ಈ ಮಾತುಗಳ ಸತ್ಯತೆಯನ್ನು ಅನುಭವಿಸುತ್ತಾರೆ: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು. ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರ್ರಿ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವದಿಲ್ಲ.” (ಕೀರ್ತನೆ 34:8, 9) ಯೆಹೋವನಿಗೆ ಭಯಪಡುವವರೆಲ್ಲರಿಗೂ ಆತನೊಂದಿಗೆ ಒಳ್ಳೇ ಸಂಬಂಧವಿರುವುದರಿಂದ, ಸದಾ ಬಾಳುವಂಥ ಮೌಲ್ಯವುಳ್ಳ ಯಾವುದೇ ವಿಷಯದ ಕೊರತೆಯೂ ಅವರಿಗೆ ಇರುವುದಿಲ್ಲ.

4 ದಾವೀದನು ತನ್ನ ಪುರುಷರನ್ನು ‘ಯೆಹೋವನ ಜನರು’ ಅಥವಾ ಮೂಲಭಾಷೆಯಲ್ಲಿ ಕೊಡಲ್ಪಟ್ಟಿರುವಂತೆ “ಪವಿತ್ರ ಜನರು” ಎಂದು ಕರೆದನೆಂಬುದನ್ನು ಗಮನಿಸಿ. ಹೀಗೆ ಅವನು ಅವರಿಗೆ ಮಾನವನ್ನು ಸಲ್ಲಿಸಿದನು. ಆ ಅಭಿವ್ಯಕ್ತಿ ಸೂಕ್ತವಾಗಿತ್ತು ಏಕೆಂದರೆ ಅವರು ಆ ಸಮಯದಲ್ಲಿ ದೇವರ ಪವಿತ್ರ ಜನಾಂಗವಾಗಿದ್ದ ಇಸ್ರಾಯೇಲಿನ ಭಾಗವಾಗಿದ್ದರು. ಅವರು ದಾವೀದನ ಜೊತೆಗಿರಲು ತಮ್ಮ ಜೀವಗಳನ್ನೂ ಅಪಾಯಕ್ಕೊಡ್ಡುತ್ತಿದ್ದರು. ದಾವೀದನೊಂದಿಗೆ ಇವರೆಲ್ಲರೂ ರಾಜ ಸೌಲನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದರಾದರೂ ಯೆಹೋವನು ತಮ್ಮ ಮೂಲ ಅಗತ್ಯಗಳನ್ನು ಪೂರೈಸುತ್ತಾ ಇರುವನೆಂಬ ಭರವಸೆ ದಾವೀದನಿಗಿತ್ತು. ಅವನು ಬರೆದುದು: “ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ.” (ಕೀರ್ತನೆ 34:10) ಯೇಸು ತನ್ನ ಹಿಂಬಾಲಕರಿಗೆ ಅದೇ ರೀತಿಯ ಆಶ್ವಾಸನೆಕೊಟ್ಟನು.​—⁠ಮತ್ತಾಯ 6:⁠33.

5 ಯೇಸುವಿಗೆ ಕಿವಿಗೊಟ್ಟವರಲ್ಲಿ ಅನೇಕರು, ಅನನುಕೂಲ ಸ್ಥಿತಿಯಲ್ಲಿದ್ದವರು ಮತ್ತು ಯೆಹೂದ್ಯರಲ್ಲಿ ಕೆಳವರ್ಗಕ್ಕೆ ಸೇರಿದವರಾಗಿದ್ದರು. ಈ ಕಾರಣದಿಂದ ಯೇಸು, “ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಇಂಥ ದೀನಸ್ಥಿತಿಯ ಜನರಿಗೆ ಯೇಸುವನ್ನು ಹಿಂಬಾಲಿಸಲು ಬೇಕಾದ ಧೈರ್ಯವಿದ್ದೀತೊ? ಈ ಧೈರ್ಯವನ್ನು ಪಡೆಯಲಿಕ್ಕಾಗಿ ಅವರು ಮನುಷ್ಯನ ಭಯದ ಬದಲಾಗಿ ಯೆಹೋವನ ಭಯವನ್ನು ಬೆಳೆಸಿಕೊಳ್ಳಬೇಕಾಗಿತ್ತು. ಯೇಸು ಹೇಳಿದ್ದು: “ದೇಹವನ್ನು ಕೊಂದು ಅದಕ್ಕಿಂತ ಹೆಚ್ಚಿನದೇನೂ ಮಾಡಲಾರದವರಿಗೆ ಹೆದರಬೇಡಿರಿ. ನೀವು ಯಾರಿಗೆ ಹೆದರಬೇಕೋ ನಿಮಗೆ ತಿಳಿಸುತ್ತೇನೆ; ಕೊಂದ ಮೇಲೆ ನರಕದೊಳಗೆ [“ಗೆಹನ್ನದೊಳಗೆ,” NW] ಹಾಕುವ ಅಧಿಕಾರವುಳ್ಳವನಿಗೆ ಹೆದರಬೇಕು; ಹೌದು, ಆತನಿಗೇ ಹೆದರಬೇಕೆಂದು ನಿಮಗೆ ಹೇಳುತ್ತೇನೆ. ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.”​—⁠ಲೂಕ 12:4-7.

6 ಯೆಹೋವನಿಗೆ ಭಯಪಡುವವರು ಆತನ ಸೇವೆಮಾಡುವುದನ್ನು ನಿಲ್ಲಿಸುವಂತೆ ಶತ್ರುಗಳು ಅವರ ಮೇಲೆ ಒತ್ತಡಹಾಕುವಾಗ ಯೇಸುವಿನ ಈ ಸಲಹೆಯನ್ನು ಅವರು ಮನಸ್ಸಿಗೆ ತಂದುಕೊಳ್ಳಬಹುದು: “ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ ಮನುಷ್ಯಕುಮಾರನು ಸಹ ಅವನನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನ್ನಲ್ಲವೆಂದು ಹೇಳುವೆನು.” (ಲೂಕ 12:8, 9) ಈ ಮಾತುಗಳು ಕ್ರೈಸ್ತರನ್ನು, ವಿಶೇಷವಾಗಿ ಎಲ್ಲಿ ಸತ್ಯಾರಾಧನೆಯು ನಿಷೇಧಿಸಲ್ಪಟ್ಟಿದೆಯೊ ಆ ದೇಶಗಳಲ್ಲಿರುವ ಕ್ರೈಸ್ತರನ್ನು ಬಲಪಡಿಸಿವೆ. ಇಂಥವರು, ವಿವೇಚನೆಯನ್ನು ಬಳಸುತ್ತಾ ಕ್ರೈಸ್ತ ಕೂಟಗಳಲ್ಲಿ ಮತ್ತು ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಯೆಹೋವನನ್ನು ಸ್ತುತಿಸುವುದನ್ನು ಮುಂದುವರಿಸುತ್ತಾ ಇದ್ದಾರೆ. (ಅ. ಕೃತ್ಯಗಳು 5:29) ‘ದೇವರ ಭಯವನ್ನು’ ತೋರಿಸುವುದರಲ್ಲಿ ಯೇಸು ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾನೆ. (ಇಬ್ರಿಯ 5:⁠7) ಅವನ ಬಗ್ಗೆ ಮಾತಾಡುತ್ತಾ, ಪ್ರವಾದನಾತ್ಮಕ ವಾಕ್ಯವು ಮುಂತಿಳಿಸಿದ್ದು: “[ಅವನ] ಮೇಲೆ . . . ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; ಯೆಹೋವನ ಭಯವು ಅವನಿಗೆ ಪರಿಮಳಿಸುವದು.” (ಯೆಶಾಯ 11:2, 3) ಹೀಗಿರುವುದರಿಂದ, ನಮಗೆ ದೇವಭಯದ ಪ್ರಯೋಜನಗಳ ಬಗ್ಗೆ ಕಲಿಸಲು ಯೇಸುವೇ ಅತ್ಯಂತ ಶ್ರೇಷ್ಠ ರೀತಿಯಲ್ಲಿ ಅರ್ಹನು.

7 ಯೇಸುವಿನ ಮಾದರಿಯನ್ನು ಅನುಸರಿಸಿ ಅವನ ಬೋಧನೆಗಳಿಗೆ ವಿಧೇಯತೆ ತೋರಿಸುವವರೆಲ್ಲರೂ, “ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು” ಎಂದು ದಾವೀದನು ಕೊಟ್ಟಂಥದ್ದೇ ರೀತಿಯ ಆಮಂತ್ರಣಕ್ಕೆ ಕಾರ್ಯತಃ ಪ್ರತಿಕ್ರಿಯೆತೋರಿಸುತ್ತಿದ್ದಾರೆ. (ಕೀರ್ತನೆ 34:11) ದಾವೀದನು ತನ್ನ ಪುರುಷರನ್ನು “ಮಕ್ಕಳಿರಾ” ಎಂದು ಸಂಬೋಧಿಸುವುದು ಸ್ವಾಭಾವಿಕವಾಗಿತ್ತು ಏಕೆಂದರೆ ಅವರು ಅವನನ್ನು ತಮ್ಮ ನಾಯಕನಾಗಿ ಮಾನ್ಯಮಾಡುತ್ತಿದ್ದರು. ದಾವೀದನಾದರೊ ತನ್ನ ಅನುಚರರಿಗೆ ಆಧ್ಯಾತ್ಮಿಕ ನೆರವನ್ನು ನೀಡಿದನು. ಇದರಿಂದ ಅವರು ಐಕ್ಯರಾಗಿ ಇರಸಾಧ್ಯವಿತ್ತು ಮತ್ತು ದೇವರ ಅನುಗ್ರಹಕ್ಕೆ ಪಾತ್ರರಾಗಿ ಉಳಿಯಬಹುದಿತ್ತು. ಇದು ಕ್ರೈಸ್ತ ಹೆತ್ತವರಿಗಾಗಿ ಎಷ್ಟು ಉತ್ತಮ ಮಾದರಿ! ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನಿಗೆ ‘ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನು ಮಾಡುತ್ತಾ ಸಾಕಿಸಲಹುವ’ ಅಧಿಕಾರವನ್ನು ದೇವರು ಅವರಿಗೆ ಕೊಟ್ಟಿದ್ದಾನೆ. (ಎಫೆಸ 6:⁠4) ತಮ್ಮ ಮಕ್ಕಳೊಂದಿಗೆ ಪ್ರತಿದಿನವೂ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆಮಾಡುವ ಮೂಲಕ ಮತ್ತು ಅವರೊಂದಿಗೆ ಕ್ರಮವಾಗಿ ಬೈಬಲ್‌ ಅಧ್ಯಯನ ಮಾಡುವ ಮೂಲಕ, ಯೆಹೋವನಿಗೆ ಭಯಪಡುತ್ತಾ ಜೀವನದಲ್ಲಿ ಆನಂದಿಸುವಂತೆ ಹೆತ್ತವರು ತಮ್ಮ ಎಳೆಯರಿಗೆ ಸಹಾಯಮಾಡುತ್ತಾರೆ.​—⁠ಧರ್ಮೋಪದೇಶಕಾಂಡ 6:​6, 7.

ನಮ್ಮ ಜೀವನದಲ್ಲಿ ದೇವಭಯವನ್ನು ತೋರಿಸುವುದು ಹೇಗೆ?

8 ಈ ಹಿಂದೆ ತಿಳಿಸಲ್ಪಟ್ಟಿರುವಂತೆ, ಯೆಹೋವನಿಗೆ ಭಯಪಡುವುದರಿಂದ ನಾವು ಜೀವನದ ಆನಂದದಿಂದ ವಂಚಿತರಾಗುವುದಿಲ್ಲ. ದಾವೀದನು ಕೇಳಿದ್ದು: “ದೀರ್ಘಾಯುಷ್ಯವು ಬೇಕೋ? ಬಹುದಿವಸ ಬದುಕಿ ಸುಖವನ್ನು ಅನುಭವಿಸಬೇಕೋ?” (ಕೀರ್ತನೆ 34:12) ದೀರ್ಘಾಯುಷ್ಯ ಮತ್ತು ಸುಖವನ್ನು ಅನುಭವಿಸುವುದಕ್ಕೆ ಕೀಲಿಕೈ ಯೆಹೋವನ ಭಯವೇ ಎಂಬುದು ಸ್ಪಷ್ಟ. ಆದರೆ, ‘ನನಗೆ ದೇವರ ಭಯವಿದೆ’ ಎಂದು ಹೇಳುವುದು ಸುಲಭ. ಅದನ್ನು ನಮ್ಮ ನಡತೆಯಲ್ಲಿ ತೋರಿಸಿಕೊಡುವುದು ಅಷ್ಟು ಸುಲಭವಾಗಿರಲಿಕ್ಕಿಲ್ಲ. ಆದುದರಿಂದ, ನಾವು ದೇವಭಯವನ್ನು ಹೇಗೆ ತೋರಿಸಬಹುದೆಂಬುದನ್ನು ದಾವೀದನು ವಿವರಿಸುತ್ತಾ ಮುಂದುವರಿಸುತ್ತಾನೆ.

9“ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೋ; ವಂಚನೆಯ ಮಾತುಗಳಿಗೆ ಬಿಡದೆ ತುಟಿಗಳನ್ನು ಇಟ್ಟುಕೋ.” (ಕೀರ್ತನೆ 34:13) 34ನೇ ಕೀರ್ತನೆಯ ಈ ಭಾಗವನ್ನು ಉದ್ಧರಿಸುವಂತೆ ಪವಿತ್ರಾತ್ಮವು ಅಪೊಸ್ತಲ ಪೇತ್ರನನ್ನು ಪ್ರೇರಿಸಿತು. ಇದನ್ನು ಅವನು, ಕ್ರೈಸ್ತರು ಪರಸ್ಪರರನ್ನು ಸಹೋದರ ಸ್ನೇಹದಿಂದ ಉಪಚರಿಸಬೇಕೆಂದು ಸಲಹೆ ಕೊಟ್ಟನಂತರ ಮಾಡಿದನು. (1 ಪೇತ್ರ 3:​8-12) ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೊಳ್ಳುವುದರ ಅರ್ಥ, ಹಾನಿಕರ ಹರಟೆಮಾತನ್ನು ಹಬ್ಬಿಸುವುದರಿಂದ ದೂರವಿರಬೇಕು ಎಂದಾಗಿದೆ. ಅದಕ್ಕೆ ಬದಲು, ನಾವು ಬೇರೆಯವರೊಂದಿಗೆ ಯಾವಾಗಲೂ ಬಲವರ್ಧಕ ವಿಷಯಗಳನ್ನು ಮಾತಾಡಲು ಪ್ರಯತ್ನಿಸುವೆವು. ಅಷ್ಟುಮಾತ್ರವಲ್ಲದೆ, ನಾವು ಧೀರರಾಗಿದ್ದು ಸತ್ಯವನ್ನಾಡಲು ಪ್ರಯತ್ನಿಸುವೆವು.​—⁠ಎಫೆಸ 4:​25, 29, 31; ಯಾಕೋಬ 5:⁠16.

10“ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಮಾಡು; ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನ ಪಡು.” (ಕೀರ್ತನೆ 34:14) ದೇವರು ಖಂಡಿಸುವಂಥ ವಿಷಯಗಳನ್ನು, ಉದಾಹರಣೆಗೆ ಲೈಂಗಿಕ ಅನೈತಿಕತೆ, ಅಶ್ಲೀಲ ಸಾಹಿತ್ಯ/ಚಿತ್ರಗಳು, ಕಳ್ಳತನ, ಪ್ರೇತಾತ್ಮವಾದ, ಹಿಂಸಾಚಾರ, ಕುಡಿಕತನ, ಅಮಲೌಷಧದ ದುರುಪಯೋಗ ಇತ್ಯಾದಿಗಳಿಂದ ನಾವು ದೂರವಿರುತ್ತೇವೆ. ಇಂಥ ಹೇಯವಾದ ವಿಷಯಗಳನ್ನು ಪ್ರದರ್ಶಿಸುವ ಮನೋರಂಜನೆಯನ್ನು ಸಹ ನಾವು ತಳ್ಳಿಹಾಕುತ್ತೇವೆ. (ಎಫೆಸ 5:​10-12) ಅದಕ್ಕೆ ಬದಲಾಗಿ, ನಾವು ಒಳ್ಳೇದನ್ನು ಮಾಡಲಿಕ್ಕಾಗಿ ನಮ್ಮ ಸಮಯವನ್ನು ಬಳಸಬಹುದು. ನಾವು ಮಾಡಬಹುದಾದ ಅತಿ ಒಳ್ಳೇ ಕಾರ್ಯವು, ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದಾಗಿದೆ. ಇದರ ಮೂಲಕ ನಾವು, ಇತರರು ರಕ್ಷಣೆ ಪಡೆದುಕೊಳ್ಳಲು ಸಹಾಯಮಾಡುತ್ತಿದ್ದೇವೆ. (ಮತ್ತಾಯ 24:14; 28:​19, 20) ಒಳ್ಳೇದನ್ನು ಮಾಡುವುದರಲ್ಲಿ, ಕ್ರೈಸ್ತ ಕೂಟಗಳಿಗಾಗಿ ತಯಾರಿಸುವುದು ಮತ್ತು ಅವುಗಳಿಗೆ ಹಾಜರಾಗುವುದು, ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆ ಕೊಡುವುದು, ನಮ್ಮ ರಾಜ್ಯ ಸಭಾಗೃಹವನ್ನು ನೋಡಿಕೊಳ್ಳುವುದು ಹಾಗೂ ಅನನುಕೂಲ ಸ್ಥಿತಿಯಲ್ಲಿರುವ ಕ್ರೈಸ್ತರ ಅಗತ್ಯಗಳ ಬಗ್ಗೆ ಕಾಳಜಿತೋರಿಸುವುದು ಸೇರಿರುತ್ತದೆ.

11 ಸಮಾಧಾನಕ್ಕಾಗಿ ಪ್ರಯತ್ನಪಡುವುದರಲ್ಲಿ ದಾವೀದನು ಒಳ್ಳೇ ಮಾದರಿಯನ್ನಿಟ್ಟನು. ಸೌಲನನ್ನು ಕೊಲ್ಲಲು ಅವನಿಗೆ ಎರಡು ಅವಕಾಶಗಳಿದ್ದವು. ಆದರೆ ಈ ಎರಡೂ ಸಂದರ್ಭಗಳಲ್ಲಿ ಅವನು ಹಿಂಸಾಚಾರವನ್ನು ಪ್ರಯೋಗಿಸಲಿಲ್ಲ. ಬದಲಾಗಿ, ಸಮಾಧಾನವನ್ನು ಪುನಃ ಸ್ಥಾಪಿಸಲು ನಿರೀಕ್ಷಿಸುತ್ತಾ ತದನಂತರ ರಾಜನೊಂದಿಗೆ ಗೌರವಪೂರ್ವಕವಾಗಿ ಮಾತಾಡಿದನು. (1 ಸಮುವೇಲ 24:​8-11; 26:​17-20) ಇಂದು, ಸಭೆಯ ಶಾಂತಿಯನ್ನು ಭಂಗಪಡಿಸಬಲ್ಲ ಸನ್ನಿವೇಶ ಏಳುವಾಗ ನಾವೇನು ಮಾಡಸಾಧ್ಯವಿದೆ? ನಾವು ‘ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನ ಪಡಬೇಕು.’ ನಮ್ಮ ಮತ್ತು ಜೊತೆ ವಿಶ್ವಾಸಿಯೊಬ್ಬನ ನಡುವಿನ ಸಂಬಂಧವು ಹಾಳಾಗಿದೆ ಎಂದು ನಮಗೆ ಅರಿವಾಗುವಲ್ಲಿ, ನಾವು ಯೇಸುವಿನ ಈ ಸಲಹೆಯನ್ನು ಪಾಲಿಸಬೇಕು: “ಮೊದಲು ನಿನ್ನ ಸಹೋದರನ ಸಂಗಡ ಒಂದಾಗು.” ಆನಂತರವೇ, ನಾವು ಸತ್ಯಾರಾಧನೆಯ ಬೇರೆ ಕಾರ್ಯಗಳೊಂದಿಗೆ ಮುಂದುವರಿಯಬಲ್ಲೆವು.​—⁠ಮತ್ತಾಯ 5:23, 24; ಎಫೆಸ 4:⁠26.

ದೇವರಿಗೆ ಭಯಪಡುವುದರಿಂದ ಸಮೃದ್ಧ ಪ್ರತಿಫಲಗಳು

12“ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” (ಕೀರ್ತನೆ 34:15) ದಾವೀದನೊಂದಿಗಿನ ದೇವರ ವ್ಯವಹಾರಗಳ ಕುರಿತಾದ ದಾಖಲೆಯು, ಆ ಮಾತುಗಳು ಸತ್ಯವೆಂಬುದನ್ನು ರುಜುಪಡಿಸುತ್ತವೆ. ಇಂದು, ಯೆಹೋವನು ನಮ್ಮ ಮೇಲೆ ಕಾವಲಿದ್ದಾನೆಂದು ನಮಗೆ ತಿಳಿದಿರುವುದರಿಂದ ನಮಗೆ ಗಾಢವಾದ ಆನಂದ ಹಾಗೂ ಮನಶ್ಶಾಂತಿಯಿದೆ. ನಮಗೆ ಅಗತ್ಯವಿದದ್ದನ್ನು ಯಾವಾಗಲೂ​—⁠ನಾವು ತುಂಬ ಮಾನಸಿಕ ಒತ್ತಡದ ಕೆಳಗಿರುವಾಗಲೂ​—⁠ಆತನು ಕೊಡುವನೆಂಬ ಭರವಸೆ ನಮಗಿದೆ. ಬಲುಬೇಗನೆ ಎಲ್ಲ ಸತ್ಯಾರಾಧಕರಿಗೆ, ಮುಂತಿಳಿಸಲಾಗಿರುವ ಮಾಗೋಗಿನ ಗೋಗನ ದಾಳಿಯನ್ನು ಮತ್ತು ‘ಯೆಹೋವನ ಅತಿಭಯಂಕರ ದಿನವನ್ನು’ ಎದುರಿಸಲಿಕ್ಕಿದೆಯೆಂದು ನಮಗೆ ತಿಳಿದಿದೆ. (ಯೋವೇಲ 2:11, 31; ಯೆಹೆಜ್ಕೇಲ 38:14-18, 21-23) ನಮಗೆ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲಿಕ್ಕಿರಲಿ, ದಾವೀದನ ಈ ಮಾತುಗಳು ನಮ್ಮ ವಿಷಯದಲ್ಲಿ ಸತ್ಯವಾಗಿರುವವು: “ಯೆಹೋವನು ನೀತಿವಂತರ ಕೂಗನ್ನು ಕೇಳಿ ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ.”​—ಕೀರ್ತನೆ 34:⁠17.

13 ಯೆಹೋವನು ತನ್ನ ಮಹಾ ನಾಮವನ್ನು ಮಹಿಮೆಪಡಿಸುವುದನ್ನು ನೋಡುವಾಗ ನಾವೆಷ್ಟು ಪುಳಕಿತರಾಗುವೆವು! ನಮ್ಮ ಹೃದಯಗಳು ಹಿಂದೆಂದಿಗಿಂತಲೂ ಹೆಚ್ಚಿನ ಭಯವಿಸ್ಮಯ ಹಾಗೂ ಪೂಜ್ಯಭಾವದಿಂದ ತುಂಬಿಕೊಳ್ಳುವುವು. ಆ ಸಮಯದಲ್ಲಿ ಎಲ್ಲ ವಿರೋಧಿಗಳು ಅವಮಾನಕರವಾದ ನಾಶನವನ್ನು ಅನುಭವಿಸುವರು. “ಕೆಡುಕರಿಗೋ ಯೆಹೋವನು ಕೋಪದ ಮುಖವುಳ್ಳವನಾಗಿರುವನು; ಲೋಕದಲ್ಲಿ ಅವರ ನೆನಪೇ ಉಳಿಯದಂತೆ ತೆಗೆದುಹಾಕುವನು.” (ಕೀರ್ತನೆ 34:16) ದೇವರ ನೀತಿಯ ಹೊಸ ಲೋಕದೊಳಗೆ ಪ್ರವೇಶಿಸುತ್ತಾ, ಭವ್ಯವಾದ ಬಿಡುಗಡೆಯನ್ನು ಅನುಭವಿಸುವುದು ಎಂಥ ಒಂದು ಸಮೃದ್ಧ ಪ್ರತಿಫಲವಾಗಿರುವುದು!

ನಾವು ತಾಳಿಕೊಳ್ಳುವಂತೆ ಸಹಾಯಮಾಡುವ ವಾಗ್ದಾನಗಳು

14 ಆ ಹೊಸ ಲೋಕವು ಬರುವ ತನಕ, ಭ್ರಷ್ಟ ಹಾಗೂ ವೈರಭಾವ ತುಂಬಿರುವ ಈ ಜಗತ್ತಿನಲ್ಲಿ ಯೆಹೋವನಿಗೆ ವಿಧೇಯರಾಗಿ ಮುಂದುವರಿಯುವುದಕ್ಕೆ ತಾಳ್ಮೆಯು ಆವಶ್ಯಕ. ನಾವು ವಿಧೇಯಭಾವವನ್ನು ಬೆಳೆಸಿಕೊಳ್ಳುವುದಕ್ಕೆ ದೇವಭಯವು ಅತಿ ದೊಡ್ಡ ಸಹಾಯಕವಾಗಿದೆ. ಇಂದಿನ ಕಠಿನಕಾಲಗಳಲ್ಲಿ ಯೆಹೋವನ ಸೇವಕರಲ್ಲಿ ಕೆಲವರು ವಿಪರೀತ ಕಷ್ಟಗಳನ್ನು ಅನುಭವಿಸುವ ಕಾರಣ ಮನಸ್ಸು ಮುರಿದವರಾಗುತ್ತಾರೆ ಮತ್ತು ಕುಗ್ಗಿಹೋಗುತ್ತಾರೆ. ಆದರೆ ಯೆಹೋವನ ಮೇಲೆ ಅವಲಂಬಿಸಿದರೆ ಆತನು ಅವರಿಗೆ ತಾಳಿಕೊಳ್ಳಲು ಸಹಾಯಮಾಡುವನೆಂದು ಅವರು ಸಂಪೂರ್ಣ ಖಾತ್ರಿಯಿಂದಿರಬಲ್ಲರು. ದಾವೀದನ ಮಾತುಗಳು ನಿಜ ಸಾಂತ್ವನವನ್ನು ಕೊಡುತ್ತವೆ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:18) ದಾವೀದನು ಮುಂದುವರಿಸುತ್ತಾ, “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ” ಎಂದು ಹೇಳಿದ ಮಾತುಗಳು ಉತ್ತೇಜನದಾಯಕವಾಗಿವೆ. (ಕೀರ್ತನೆ 34:19) ನಮ್ಮ ಮೇಲೆ ಎಷ್ಟೇ ಕಷ್ಟಗಳು ಬರಲಿ, ಯೆಹೋವನು ನಮ್ಮನ್ನು ಅವುಗಳಿಂದ ಬಿಡಿಸುವಷ್ಟು ಬಲಶಾಲಿಯಾಗಿದ್ದಾನೆ.

15 ದಾವೀದನು 34ನೇ ಕೀರ್ತನೆಯನ್ನು ರಚಿಸಿದ ಸ್ವಲ್ಪ ಸಮಯದೊಳಗೆ ನೋಬ್‌ ಊರಿನ ನಿವಾಸಿಗಳಿಗಾದ ವಿಪತ್ತಿನ ಸುದ್ದಿ ಅವನಿಗೆ ಸಿಕ್ಕಿತು. ಸೌಲನು ಆ ಊರಿನ ನಿವಾಸಿಗಳ ಮತ್ತು ಹೆಚ್ಚಿನ ಯಾಜಕರ ಮಾರಣಹೋಮ ಮಾಡಿದ್ದನು. ಸೌಲನ ಕ್ರೋಧ ಕೆರಳಲು ತಾನು ನೋಬ್‌ ಊರಿಗೆ ಹೋದದ್ದೇ ಕಾರಣವಾಗಿತ್ತೆಂಬ ಮಾತಿನಿಂದ ದಾವೀದನಿಗೆಷ್ಟು ಸಂಕಟವಾಗಿದ್ದಿರಬೇಕು! (1 ಸಮುವೇಲ 22:13, 18-21) ಸಹಾಯಕ್ಕಾಗಿ ದಾವೀದನು ಯೆಹೋವನ ಕಡೆಗೆ ತಿರುಗಿದನೆಂಬುದು ನಿಸ್ಸಂದೇಹ. ಮತ್ತು ಭವಿಷ್ಯದಲ್ಲಿ ನಡೆಯಲಿದ್ದ ‘ನೀತಿವಂತರ’ ಪುನರುತ್ಥಾನದ ನಿರೀಕ್ಷೆಯಿಂದ ಅವನಿಗೆ ಖಂಡಿತವಾಗಿ ಸಾಂತ್ವನ ಸಿಕ್ಕಿರಬೇಕು.​—⁠ಅ. ಕೃತ್ಯಗಳು 24:⁠15.

16 ಇಂದು ಪುನರುತ್ಥಾನದ ನಿರೀಕ್ಷೆ ನಮ್ಮನ್ನೂ ಬಲಪಡಿಸುತ್ತದೆ. ನಮ್ಮ ಶತ್ರುಗಳು ಏನೇ ಮಾಡಿದರೂ ಅವರು ನಮಗೆ ಶಾಶ್ವತ ಹಾನಿ ಮಾಡಲಾರರೆಂದು ನಮಗೆ ತಿಳಿದಿದೆ. (ಮತ್ತಾಯ 10:28) ಇದೇ ರೀತಿಯ ನಿಶ್ಚಿತಾಭಿಪ್ರಾಯವನ್ನು ದಾವೀದನು ಈ ಮಾತುಗಳಲ್ಲಿ ವ್ಯಕ್ತಪಡಿಸಿದನು: “ಆತನು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿದುಹೋಗುವದಿಲ್ಲ.” (ಕೀರ್ತನೆ 34:20) ಈ ವಚನವು ಯೇಸುವಿನ ವಿಷಯದಲ್ಲಿ ಅಕ್ಷರಾರ್ಥವಾಗಿ ನೆರವೇರಿತು. ಯೇಸುವನ್ನು ಕ್ರೂರ ರೀತಿಯಲ್ಲಿ ಕೊಲ್ಲಲಾಯಿತಾದರೂ, ಅವನ ಎಲುಬುಗಳಲ್ಲಿ ಒಂದೂ ‘ಮುರಿದುಹೋಗಲಿಲ್ಲ.’ (ಯೋಹಾನ 19:36) ಕೀರ್ತನೆ 34:20ನ್ನು ವಿಶಾಲವಾಗಿ ಅನ್ವಯಿಸುವಾಗ ಅದು, ಅಭಿಷಿಕ್ತ ಕ್ರೈಸ್ತರು ಮತ್ತು ಅವರ ‘ಬೇರೆ ಕುರಿಗಳ’ ಸಂಗಡಿಗರು ಯಾವುದೇ ರೀತಿಯ ಪರೀಕ್ಷೆಗಳನ್ನು ಎದುರಿಸಲಿ ಅವರಿಗೆಂದೂ ಶಾಶ್ವತ ಹಾನಿಯಾಗುವುದಿಲ್ಲವೆಂಬ ಆಶ್ವಾಸನೆ ಕೊಡುತ್ತದೆ. ಅವರ ಎಲುಬುಗಳು ಸಾಂಕೇತಿಕಾರ್ಥದಲ್ಲಿ ಎಂದಿಗೂ ಮುರಿಯಲ್ಪಡದಿರುವವು.​—⁠ಯೋಹಾನ 10:⁠16.

17 ದುಷ್ಟರಿಗಾದರೊ ಸನ್ನಿವೇಶವು ಭಿನ್ನವಾಗಿದೆ. ತಾವು ಬಿತ್ತಿರುವಂಥ ಕೆಟ್ಟದ್ದನ್ನೇ ಅವರು ಬೇಗನೆ ಕೊಯ್ಯಲಿರುವರು. “ದುಷ್ಟನ ಕೆಡುಕು ಅವನನ್ನೇ ಕೊಲ್ಲುವದು; ನೀತಿವಂತನನ್ನು ದ್ವೇಷಿಸುವವರು ಅಪರಾಧಿಗಳೆಂದು ಎಣಿಸಲ್ಪಡುವರು.” (ಕೀರ್ತನೆ 34:21) ದೇವಜನರನ್ನು ವಿರೋಧಿಸುವುದನ್ನು ಮುಂದುವರಿಸುವವರೆಲ್ಲರೂ ಅತ್ಯಂತ ವಿಪತ್ಕಾರಕ ಅಂತ್ಯವನ್ನು ಎದುರಿಸಲಿದ್ದಾರೆ. ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ಸಮಯದಲ್ಲಿ ಅವರು “ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.”​—⁠2 ಥೆಸಲೊನೀಕ 1:⁠9.

18 ಭರವಸೆ ತುಂಬಿಸುವ ಈ ಮಾತುಗಳೊಂದಿಗೆ ದಾವೀದನು 34ನೇ ಕೀರ್ತನೆಯನ್ನು ಕೊನೆಗೊಳಿಸುತ್ತಾನೆ: “ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣಿಸಲ್ಪಡುವದಿಲ್ಲ.” (ಕೀರ್ತನೆ 34:22) ರಾಜ ದಾವೀದನು ತನ್ನ 40 ವರ್ಷಗಳ ಆಳ್ವಿಕೆಯ ಕೊನೆಯಲ್ಲಿ ಹೇಳಿದ್ದು: ‘ನನ್ನ ಪ್ರಾಣವನ್ನು [ಯೆಹೋವನು] ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿ ಕಾಪಾಡಿದನು.’ (1 ಅರಸುಗಳು 1:29) ದಾವೀದನಂತೆಯೇ, ಯೆಹೋವನಿಗೆ ಭಯಪಡುವವರು ಗತಸಮಯವನ್ನು ಮರುಕಳಿಸುತ್ತಾ, ಪಾಪದಿಂದಾಗಿ ಹುಟ್ಟಿಕೊಂಡಿದ್ದ ಯಾವುದೇ ದೋಷಿಭಾವನೆಯಿಂದ ಬಿಡಿಸಲ್ಪಟ್ಟದ್ದಕ್ಕಾಗಿ ಮತ್ತು ತಮ್ಮೆಲ್ಲ ಕಷ್ಟಗಳಿಂದ ಕಾಪಾಡಲ್ಪಟ್ಟದ್ದಕ್ಕಾಗಿ ಬಲುಬೇಗನೆ ಹರ್ಷಿಸಲು ಶಕ್ತರಾಗಿರುವರು. ಈಗಾಗಲೇ, ಅಭಿಷಿಕ್ತ ಕ್ರೈಸ್ತರಲ್ಲಿ ಹೆಚ್ಚಿನವರು ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದಿದ್ದಾರೆ. ಎಲ್ಲ ಜನಾಂಗಗಳಿಂದ ಬಂದಿರುವ ‘ಮಹಾ ಸಮೂಹ’ದವರು ದೇವರ ಸೇವೆಮಾಡುವುದರಲ್ಲಿ ಯೇಸುವಿನ ಉಳಿದಿರುವ ಸಹೋದರರೊಂದಿಗೆ ಜೊತೆಗೂಡುತ್ತಿದ್ದಾರೆ ಮತ್ತು ಇದರಿಂದಾಗಿ ಅವರು ಯೆಹೋವನ ಮುಂದೆ ಒಂದು ಶುದ್ಧ ನಿಲುವನ್ನು ಕಾಪಾಡಿಕೊಳ್ಳಸಾಧ್ಯವಿದೆ. ಈ ಶುದ್ಧ ನಿಲುವಿಗೆ ಕಾರಣವೇನೆಂದರೆ ಅವರು ಯೇಸುವಿನ ಸುರಿಸಲ್ಪಟ್ಟ ರಕ್ತದ ವಿಮೋಚಿಸುವ ಶಕ್ತಿಯಲ್ಲಿ ನಂಬಿಕೆಯನ್ನಿಡುತ್ತಾರೆ. ಕ್ರಿಸ್ತನ ಮುಂಬರಲಿರುವ ಸಾವಿರ ವರ್ಷದಾಳಿಕೆಯಲ್ಲಿ ವಿಮೋಚನಾ ಮೌಲ್ಯದ ಯಜ್ಞದ ಪೂರ್ಣ ಪ್ರಯೋಜನಗಳನ್ನು ಅವರಿಗೆ ಅನ್ವಯಿಸಲಾಗುವುದು ಮತ್ತು ಅವರನ್ನು ಮಾನವ ಪರಿಪೂರ್ಣತೆಗೆ ಏರಿಸಲಾಗುವುದು.​—⁠ಪ್ರಕಟನೆ 7:​9, 14, 17; 21:​3-5.

19 ದೇವರ ಆರಾಧಕರ ‘ಮಹಾ ಸಮೂಹಕ್ಕೆ’ ಈ ಎಲ್ಲ ಆಶೀರ್ವಾದಗಳು ಸಿಗುವುದೇಕೆ? ಏಕೆಂದರೆ ಯೆಹೋವನಿಗೆ ಭಯಪಡುತ್ತಾ, ಭಕ್ತಿ ಹಾಗೂ ಪೂಜ್ಯ ಭಾವನೆಯಿಂದ ಕೂಡಿದ ವಿಧೇಯತೆಯೊಂದಿಗೆ ಆತನನ್ನು ಸೇವಿಸುತ್ತಾ ಇರಲು ಅವರು ದೃಢಸಂಕಲ್ಪದಿಂದಿದ್ದಾರೆ. ಹೌದು, ಯೆಹೋವನ ಭಯವು ಈಗಲೇ ಜೀವನವನ್ನು ಆನಂದಮಯವಾಗಿ ಮಾಡುತ್ತದೆ. ಅಷ್ಟುಮಾತ್ರವಲ್ಲದೆ ಅದು, ‘ವಾಸ್ತವವಾದ ಜೀವ’ ಅಂದರೆ ದೇವರ ನೂತನ ಲೋಕದಲ್ಲಿ ನಿತ್ಯ ಜೀವದ ನಿರೀಕ್ಷೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆಯೂ ಸಹಾಯಮಾಡುತ್ತದೆ.​—⁠1 ತಿಮೊಥೆಯ 6:12, 18, 19; ಪ್ರಕಟನೆ 15:3, 4. (w07 3/1)

ನಿಮಗೆ ನೆನಪಿದೆಯೇ?

• ನಾವು ದೇವರಿಗೆ ಏಕೆ ಭಯಪಡಬೇಕು, ಮತ್ತು ಆತನಿಗೆ ಭಯಪಡುವುದರ ಅರ್ಥವೇನು?

• ದೇವಭಯವು ನಮ್ಮ ನಡತೆಯ ಮೇಲೆ ಯಾವ ಪರಿಣಾಮ ಬೀರಬೇಕು?

• ದೇವಭಯವುಳ್ಳವರು ಆಗಿರುವುದರಿಂದ ಯಾವ ಪ್ರತಿಫಲಗಳು ಸಿಗುತ್ತವೆ?

• ತಾಳಿಕೊಳ್ಳುವಂತೆ ನಮಗೆ ಯಾವ ವಾಗ್ದಾನಗಳು ಸಹಾಯಮಾಡುತ್ತವೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಕ್ರೈಸ್ತಪ್ರಪಂಚಕ್ಕೆ ದೇವರ ಭಯದ ಕುರಿತಾಗಿ ಯಾವ ತದ್ವಿರುದ್ಧ ನೋಟಗಳಿವೆ? (ಬಿ) ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

3. (ಎ) ದೇವರಿಗೆ ಭಯಪಡುವ ಆಜ್ಞೆಯ ಬಗ್ಗೆ ನಿಮ್ಮ ನೋಟವೇನು? (ಬಿ) ಯೆಹೋವನಿಗೆ ಭಯಪಡುವವರು ಏಕೆ ಸಂತೋಷವುಳ್ಳವರಾಗಿರುತ್ತಾರೆ?

4. ದಾವೀದನು ಮತ್ತು ಯೇಸು ಯಾವ ಆಶ್ವಾಸನೆಯನ್ನು ಕೊಟ್ಟರು?

5. (ಎ) ಯೇಸುವಿನ ಹಿಂಬಾಲಕರಲ್ಲಿ ಅನೇಕರ ಹಿನ್ನೆಲೆಯೇನಾಗಿತ್ತು? (ಬಿ) ಭಯದ ವಿಷಯದಲ್ಲಿ ಯೇಸು ಯಾವ ಸಲಹೆ ಕೊಟ್ಟನು?

6. (ಎ) ಯೇಸುವಿನ ಯಾವ ಮಾತುಗಳು ಕ್ರೈಸ್ತರನ್ನು ಬಲಪಡಿಸಿವೆ? (ಬಿ) ದೇವಭಯವನ್ನು ತೋರಿಸುವುದರಲ್ಲಿ ಯೇಸುವೇ ಅತ್ಯುತ್ತಮ ಮಾದರಿ ಏಕೆ?

7. (ಎ) ಕ್ರೈಸ್ತರು ದಾವೀದನು ಕೊಟ್ಟಂಥದ್ದೇ ರೀತಿಯ ಆಮಂತ್ರಣಕ್ಕೆ ಕಾರ್ಯತಃ ಪ್ರತಿಕ್ರಿಯೆತೋರಿಸುತ್ತಿರುವುದು ಹೇಗೆ? (ಬಿ) ಹೆತ್ತವರು ದಾವೀದನ ಒಳ್ಳೇ ಮಾದರಿಯನ್ನು ಹೇಗೆ ಅನುಸರಿಸಬಲ್ಲರು?

8, 9. (ಎ) ದೇವಭಯವನ್ನು ತೋರಿಸುವಂಥ ಜೀವನಶೈಲಿಯು ಏಕೆ ಮನಸ್ಸಿಗೆ ಹಿಡಿಸುವಂಥದ್ದಾಗಿದೆ? (ಬಿ) ನಮ್ಮ ನಾಲಿಗೆಯನ್ನು ಕಾದುಕೊಳ್ಳುವುದರಲ್ಲಿ ಏನು ಒಳಗೂಡಿದೆ?

10. (ಎ) ಕೆಟ್ಟದ್ದನ್ನು ಬಿಟ್ಟುಬಿಡುವುದರ ಅರ್ಥವೇನೆಂದು ವಿವರಿಸಿರಿ. (ಬಿ) ಒಳ್ಳೆಯದನ್ನು ಮಾಡುವುದರಲ್ಲಿ ಏನು ಒಳಗೂಡಿದೆ?

11. (ಎ) ಸಮಾಧಾನದ ಕುರಿತಾಗಿ ದಾವೀದನು ಏನನ್ನು ನುಡಿದನೊ ಅದರಂತೆಯೇ ಸ್ವತಃ ನಡೆದದ್ದು ಹೇಗೆ? (ಬಿ) ಸಭೆಯಲ್ಲಿ ‘ಸಮಾಧಾನಕ್ಕಾಗಿ ಪ್ರಯತ್ನ ಪಡಲು’ ನೀವೇನು ಮಾಡಬಲ್ಲಿರಿ?

12, 13. (ಎ) ದೇವರಿಗೆ ಭಯಪಡುವವರು ಈಗ ಯಾವ ಪ್ರಯೋಜನಗಳನ್ನು ಅನುಭವಿಸುತ್ತಾರೆ? (ಬಿ) ನಂಬಿಗಸ್ತ ಆರಾಧಕರು ಯಾವ ಸಮೃದ್ಧ ಪ್ರತಿಫಲವನ್ನು ಶೀಘ್ರದಲ್ಲೇ ಆನಂದಿಸಲಿದ್ದಾರೆ?

14. ಕಷ್ಟಗಳ ಮಧ್ಯೆಯೂ ತಾಳಿಕೊಳ್ಳುವಂತೆ ಯಾವ ಶಾಸ್ತ್ರಾಧಾರಿತ ಆಲೋಚನೆಗಳು ನಮಗೆ ಸಹಾಯಮಾಡುವವು?

15, 16. (ಎ) ದಾವೀದನು 34ನೇ ಕೀರ್ತನೆಯನ್ನು ರಚಿಸಿದ ಸ್ವಲ್ಪ ಸಮಯದೊಳಗೆ ಅವನಿಗೆ ಯಾವ ವಿಪತ್ತಿನ ಸುದ್ದಿ ಸಿಕ್ಕಿತು? (ಬಿ) ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಮಗೆ ಯಾವ ಆಶ್ವಾಸನೆ ಸಹಾಯಮಾಡುವುದು?

17. ಪಶ್ಚಾತ್ತಾಪಪಡದೆ ಯೆಹೋವನ ಜನರನ್ನು ದ್ವೇಷಿಸುವವರಿಗೆ ಯಾವ ವಿಪತ್ತು ಕಾದಿದೆ?

18. ‘ಮಹಾ ಸಮೂಹವನ್ನು’ ಯಾವ ಅರ್ಥದಲ್ಲಿ ಈಗಾಗಲೇ ವಿಮೋಚಿಸಲಾಗಿದೆ, ಮತ್ತು ಅವರು ಭವಿಷ್ಯದಲ್ಲಿ ಏನನ್ನು ಅನುಭವಿಸಲಿದ್ದಾರೆ?

19. ‘ಮಹಾ ಸಮೂಹದ’ ಸದಸ್ಯರು ಏನನ್ನು ಮಾಡಲು ದೃಢಸಂಕಲ್ಪದಿಂದಿದ್ದಾರೆ?

[ಪುಟ 28ರಲ್ಲಿರುವ ಚಿತ್ರ]

ಯೆಹೋವನಿಗೆ ಭಯಪಡುವವರು ನಿಷೇಧದ ಕೆಳಗಿರುವಾಗ ವಿವೇಚನೆ ಬಳಸುತ್ತಾರೆ

[ಪುಟ 30ರಲ್ಲಿರುವ ಚಿತ್ರ]

ನಾವು ಇತರರಿಗಾಗಿ ಮಾಡಬಹುದಾದ ಅತಿ ಒಳ್ಳೇ ಕಾರ್ಯವು, ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ