ಹೆಂಡತಿಯರೇ, ನಿಮ್ಮ ಗಂಡಂದಿರನ್ನು ಆಳವಾಗಿ ಗೌರವಿಸಿರಿ
ಹೆಂಡತಿಯರೇ, ನಿಮ್ಮ ಗಂಡಂದಿರನ್ನು ಆಳವಾಗಿ ಗೌರವಿಸಿರಿ
“ಸ್ತ್ರೀಯರೇ, ನೀವು . . . ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.”—ಎಫೆಸ 5:22.
ಅನೇಕ ದೇಶಗಳಲ್ಲಿ ಗಂಡು-ಹೆಣ್ಣು ವಿವಾಹವಾಗುವಾಗ ವಧು ತನ್ನ ಗಂಡನನ್ನು ಆಳವಾಗಿ ಗೌರವಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾಳೆ. ಆದರೆ, ಈ ಪ್ರತಿಜ್ಞೆಯಂತೆ ನಡೆಯುವುದು ಕಷ್ಟಕರವೊ ಅಲ್ಲವೊ ಎಂಬುದು ಹೆಚ್ಚಿನ ಗಂಡಂದಿರು ತಮ್ಮ ಹೆಂಡತಿಯರನ್ನು ನೋಡಿಕೊಳ್ಳುವ ವಿಧದಿಂದ ತೋರಿಬರುತ್ತದೆ. ಆದರೂ ವಿವಾಹಕ್ಕೆ ಒಂದು ಆಶ್ಚರ್ಯಕರ ಆರಂಭವಿತ್ತು. ದೇವರು ಪ್ರಥಮ ಮನುಷ್ಯನಾದ ಆದಾಮನ ಪಕ್ಕೆಲುಬನ್ನು ತೆಗೆದು ಸ್ತ್ರೀಯನ್ನು ಮಾಡಿದನು. ಆಗ ಆದಾಮನು, “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ” ಎಂದು ಹೇಳಿದನು.—ಆದಿಕಾಂಡ 2:19-23.
2 ವಿವಾಹದ ಆರಂಭವು ಉತ್ತಮವಾಗಿತ್ತಾದರೂ, 1960ನೇ ದಶಕದ ಮೊದಲಲ್ಲಿ ಸ್ತ್ರೀಸ್ವಾತಂತ್ರ್ಯ ಚಳುವಳಿ ಅಮೆರಿಕದಲ್ಲಿ 2 ತಿಮೊಥೆಯ 3:1-5.
ಪ್ರಾರಂಭಗೊಂಡಿತು. ಪುರುಷ ದಬ್ಬಾಳಿಕೆಯಿಂದ ಹೊರಬರುವ ಪ್ರಯತ್ನವೇ ಅದಾಗಿತ್ತು. ಆ ಸಮಯದಲ್ಲಿ 300 ಮಂದಿ ಗಂಡಂದಿರಿಗೆ ಒಬ್ಬ ಹೆಂಡತಿಯ ಪ್ರಮಾಣದಲ್ಲಿ ಕುಟುಂಬವನ್ನು ತೊರೆಯುತ್ತಿದ್ದರು. ಆದರೆ 1960ನೇ ದಶಕದ ಅಂತ್ಯದಲ್ಲಿ ಈ ಪ್ರಮಾಣವು ಸುಮಾರು 100ಕ್ಕೆ 1ರಂತೆ ಬದಲಾಯಿತು. ಆದರೆ ಈಗ ಸ್ತ್ರೀಯರು ಬಯ್ಗುಳ, ಕುಡಿತ, ಧೂಮಪಾನ ಮತ್ತು ಅಶ್ಲೀಲ ವರ್ತನೆಗಳಲ್ಲಿ ಪುರುಷರನ್ನು ಸರಿಗಟ್ಟಿದ್ದಾರೆಂದು ತೋರುತ್ತದೆ. ಇಷ್ಟೆಲ್ಲಾ ಮಾಡಿದರೂ ಸ್ತ್ರೀಯರು ಈಗ ಹೆಚ್ಚು ಸಂತೋಷಿತರೊ? ಇಲ್ಲವೇ ಇಲ್ಲ. ಕೆಲವು ದೇಶಗಳಲ್ಲಿ ವಿವಾಹವಾಗುವವರಲ್ಲಿ ಅರ್ಧದಷ್ಟು ಮಂದಿ ಕ್ರಮೇಣ ವಿಚ್ಛೇದನ ಮಾಡುತ್ತಾರೆ. ಹಾಗಾದರೆ, ತಮ್ಮ ವೈವಾಹಿಕ ಸ್ಥಿತಿಯನ್ನು ಸುಧಾರಿಸಲು ಕೆಲವು ಸ್ತ್ರೀಯರು ಮಾಡಿರುವ ಪ್ರಯತ್ನಗಳ ಫಲಿತಾಂಶ ಒಳ್ಳೇದಾಗಿದೆಯೊ ಕೆಟ್ಟದಾಗಿದೆಯೊ?—3 ಮೂಲ ಸಮಸ್ಯೆ ಏನಾಗಿದೆ? ಸ್ವಲ್ಪಮಟ್ಟಿಗೆ ಈ ಸಮಸ್ಯೆಯು “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ”ನಾದ ದಂಗೆಕೋರ ದೇವದೂತನು ಹವ್ವಳನ್ನು ಪಾಪಕ್ಕೆ ಪ್ರೇರಿಸಿದಂದಿನಿಂದ ಅಸ್ತಿತ್ವದಲ್ಲಿದೆ. (ಪ್ರಕಟನೆ 12:9; 1 ತಿಮೊಥೆಯ 2:13, 14) ದೇವರು ಕಲಿಸುವ ಬೋಧನೆಗಳನ್ನು ಸೈತಾನನು ಕೆಡಿಸಿರುತ್ತಾನೆ. ದೃಷ್ಟಾಂತಕ್ಕೆ, ವಿವಾಹವು ನಿರ್ಬಂಧಕ ಹಾಗೂ ಕಟುವಾದ ಬಂಧವೆಂದು ತೋರಿಬರುವಂತೆ ಪಿಶಾಚನು ಮಾಡಿದ್ದಾನೆ. ಅವನು ಈ ಲೋಕದ ಅಧಿಪತಿಯಾಗಿದ್ದು ಲೌಕಿಕ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿಯನ್ನು ಪ್ರವರ್ಧಿಸುತ್ತಾನೆ. ಅದರ ಉದ್ದೇಶವೇನೆಂದರೆ ದೇವರು ಕೊಟ್ಟಿರುವ ಸಲಹೆಯು ನ್ಯಾಯವಲ್ಲದ್ದೂ ಹಳತಾದದ್ದೂ ಆಗಿ ತೋರಿಸುವುದಕ್ಕಾಗಿ. (2 ಕೊರಿಂಥ 4:3, 4) ಆದರೆ ವಿವಾಹದಲ್ಲಿ ಸ್ತ್ರೀಯ ಪಾತ್ರದ ಕುರಿತು ದೇವರು ಹೇಳುವುದನ್ನು ನಾವು ಬಿಚ್ಚುಮನಸ್ಸಿನಿಂದ ಪರೀಕ್ಷಿಸುವಲ್ಲಿ ದೇವರ ವಾಕ್ಯವು ಎಷ್ಟು ವಿವೇಕಪ್ರದವೂ ಪ್ರಾಯೋಗಿಕವೂ ಆಗಿದೆಯೆಂದು ತಿಳಿದುಕೊಳ್ಳುವೆವು.
ವಿವಾಹವಾಗುವವರಿಗೆ ಎಚ್ಚರಿಕೆ
4 ಬೈಬಲ್ ಒಂದು ಎಚ್ಚರಿಕೆಯನ್ನು ಕೊಡುತ್ತದೆ. ಅದೇನೆಂದರೆ ಸೈತಾನನು ಆಳುತ್ತಿರುವ ಈ ಲೋಕದಲ್ಲಿ ಯಶಸ್ವೀ ವಿವಾಹ ಜೀವನ ನಡೆಸುತ್ತಿರುವವರಿಗೂ “ಕಷ್ಟಸಂಭವಿಸುವದು.” ಹೀಗೆ, ವಿವಾಹವು ದೇವರ ಏರ್ಪಾಡು ಆಗಿರುವುದಾದರೂ ದಾಂಪತ್ಯ ಜೀವನಕ್ಕೆ ಕಾಲಿರಿಸುವವರಿಗೆ ಬೈಬಲ್ ಎಚ್ಚರಿಕೆ ನೀಡುತ್ತದೆ. ಗಂಡ ಸತ್ತಿರುವ ಕಾರಣ ಪುನರ್ವಿವಾಹಕ್ಕೆ ಸ್ವತಂತ್ರಳಾದ ಸ್ತ್ರೀಯೊಬ್ಬಳ ಕುರಿತು ಪ್ರೇರಿತ ಬೈಬಲ್ ಲೇಖಕನೊಬ್ಬನು ಹೇಳಿದ್ದು: “ಇದ್ದ ಹಾಗೆಯೇ ಇರುವದು ಆಕೆಗೆ ಸುಖ.” ಯೇಸು ಕೂಡ, ‘ಅಂಗೀಕರಿಸಬಲ್ಲವನಿಗೆ’ ಅವಿವಾಹಿತ ಸ್ಥಿತಿಯನ್ನು ಶಿಫಾರಸುಮಾಡಿದನು. ಆದರೂ, ವಿವಾಹವಾಗಲು ಬಯಸುವವಳು ‘ಕರ್ತನಲ್ಲಿ’ ಅಂದರೆ ದೇವರ ಸಮರ್ಪಿತ ಮತ್ತು ದೀಕ್ಷಾಸ್ನಾನ ಹೊಂದಿದ ಆರಾಧಕನನ್ನು ಮದುವೆಯಾಗಬೇಕು.—1 ಕೊರಿಂಥ 7:28, 36-40; ಮತ್ತಾಯ 19:10-12.
5 ವಿಶೇಷವಾಗಿ, ಒಬ್ಬ ಸ್ತ್ರೀ ತನ್ನ ಮದುವೆಯ ವಿಷಯದಲ್ಲಿ ಜಾಗ್ರತೆ ವಹಿಸಬೇಕೆಂಬುದಕ್ಕೆ ಕಾರಣವು ಬೈಬಲಿನ ಈ ಎಚ್ಚರಿಕೆಯಾಗಿದೆ: “ಮದುವೆಯಾದ ಹೆಣ್ಣುಮಗಳು ಕಾನೂನಿಗನುಸಾರವಾಗಿ . . . [ಪತಿಗೆ] ಬದ್ಧಳಾಗಿರುವಳು.” ಅವನು ಸತ್ತರೆ ಇಲ್ಲವೆ ವ್ಯಭಿಚಾರದ ಕಾರಣ ದಂಪತಿಯು ವಿಚ್ಛೇದಿತರಾಗುವಲ್ಲಿ ‘ಅವನ ಕಾನೂನಿನಿಂದ’ ಆಕೆ ಸ್ವತಂತ್ರಳಾಗುತ್ತಾಳೆ. (ರೋಮಾಪುರ 7:2, 3, NIBV) ಮೊದಲ ನೋಟದಲ್ಲೇ ಪ್ರೇಮವು ಸುಖಕರವಾದ ಪ್ರಣಯಕ್ಕೆ ಸಾಕಾಗಬಹುದಾದರೂ ಸುಖ ವಿವಾಹ ಜೀವನಕ್ಕೆ ಅದು ಯೋಗ್ಯ ಆಧಾರವಾಗಿರದು. ಆದಕಾರಣ ಅವಿವಾಹಿತಳೊಬ್ಬಳು ಹೀಗೆ ಕೇಳಿಕೊಳ್ಳಬೇಕು: ‘ನಾನು ಈ ವ್ಯಕ್ತಿಯ ಕಾನೂನಿಗೆ ಬದ್ಧಳಾಗುವ ಏರ್ಪಾಡಿನೊಳಗೆ ಅಡಿಯಿಡಲು ಮನಸ್ಸುಳ್ಳವಳಾಗಿದ್ದೇನೊ?’ ಈ ಪ್ರಶ್ನೆಯ ಕುರಿತು ಚಿಂತಿಸಬೇಕಾಗಿರುವುದು ಮದುವೆಗಿಂತ ಮೊದಲೇ ಆಗಿದೆ, ಆ ಬಳಿಕವಲ್ಲ.
6 ಇಂದು ಅನೇಕ ಸ್ಥಳಗಳಲ್ಲಿ ಒಬ್ಬ ಸ್ತ್ರೀಯು ವಿವಾಹ ಪ್ರಸ್ತಾಪವನ್ನು ಅಂಗೀಕರಿಸಬಲ್ಲಳು ಇಲ್ಲವೆ ನಿರಾಕರಿಸಬಲ್ಲಳು. ಆದರೂ ವಿವೇಕವುಳ್ಳ ಆಯ್ಕೆಯನ್ನು ಮಾಡುವುದು ಆಕೆಗೆ ತೀರ ಕಷ್ಟಕರವಾಗಿರಬಹುದು. ಏಕೆಂದರೆ ವಿವಾಹದಲ್ಲಿರುವ ಆಪ್ತ ಸಂಬಂಧ ಮತ್ತು ಪ್ರೀತಿಯ ಬಯಕೆಯು ಅವಳಲ್ಲಿ ಬಹಳ ಬಲವಾಗಿರಬಲ್ಲದು. ಒಬ್ಬ ಲೇಖಕನು ಹೇಳಿದ್ದು: “ಕೆಲವೊಮ್ಮೆ ನಾವು ಒಂದು ವಿಷಯವನ್ನು ಮಾಡಲು ಎಷ್ಟು ಹೆಚ್ಚಾಗಿ ಬಯಸುತ್ತೇವೊ ಅಷ್ಟೇ ಹೆಚ್ಚಾಗಿ ಅದನ್ನು ಪರೀಕ್ಷಿಸದೇ ಕೇವಲ ಊಹಿಸಿ ಮುಂದೆ ಹೆಜ್ಜೆಯನ್ನಿಡಲು ಬಯಸುತ್ತೇವೆ. ಅದು ಮದುವೆ ಮಾಡಿಕೊಳ್ಳುವ ವಿಷಯವಾಗಿರಬಹುದು ಅಥವಾ ಒಂದು ಪರ್ವತವನ್ನು ಹತ್ತುವ ವಿಷಯವಾಗಿರಲೂಬಹುದು. ಆಗ ನಾವು ಕೇಳಿಸಿಕೊಳ್ಳಲು ಬಯಸುವುದಕ್ಕೆ ಮಾತ್ರ ಕಿವಿಗೊಡುತ್ತೇವೆ.” ಆದರೆ ಒಬ್ಬ ಪರ್ವತಾರೋಹಿಗೆ ಬುದ್ಧಿಹೀನ ನಿರ್ಣಯವು ಹೇಗೆ ಪ್ರಾಣಾಪಾಯವನ್ನು ತರಬಹುದೋ ಹಾಗೆಯೇ ಬಾಳಸಂಗಾತಿಯನ್ನು ಅವಿವೇಕದಿಂದ ಆಯ್ಕೆಮಾಡುವುದು ವಿಪತ್ಕಾರಕವಾಗಿರಬಲ್ಲದು.
7 ತನ್ನನ್ನು ಮದುವೆಯಾಗಲು ಕೇಳುವ ಪುರುಷನ ಕಾನೂನಿನೊಳಗೆ ಬರುವುದರಲ್ಲಿ ಏನೆಲ್ಲಾ ಒಳಗೊಂಡಿವೆ ಎಂಬುದನ್ನು ಒಬ್ಬ ಸ್ತ್ರೀ ಗಂಭೀರವಾಗಿ ಯೋಚಿಸಬೇಕು. ಅನೇಕ ವರುಷಗಳ ಹಿಂದೆ ಭಾರತದ ಒಬ್ಬ ಯುವತಿ ವಿನಯದಿಂದ ಹೀಗೆ ಒಪ್ಪಿಕೊಂಡಳು:
“ನಮ್ಮ ಹೆತ್ತವರು ಅನುಭವಸ್ಥರೂ ಹೆಚ್ಚು ವಿವೇಕವುಳ್ಳವರೂ ಆಗಿರುವುದರಿಂದ ನಮ್ಮ ಹಾಗೆ ಸುಲಭವಾಗಿ ವಂಚಿಸಲ್ಪಡುವುದಿಲ್ಲ . . . ನಾನಾದರೊ ಅತಿ ಸುಲಭವಾಗಿ ತಪ್ಪು ಮಾಡಬಲ್ಲೆ.” ಹೆತ್ತವರು ಮತ್ತು ಇತರರು ಒದಗಿಸಬಲ್ಲ ಸಹಾಯವು ಮಹತ್ವದ್ದಾಗಿದೆ. ಯುವಜನರು ತಮ್ಮ ಭಾವೀ ವಿವಾಹಜೊತೆಯ ಹೆತ್ತವರ ಪರಿಚಯ ಮಾಡಿಕೊಳ್ಳಬೇಕೆಂದು ವಿವೇಕಿಯಾದ ಒಬ್ಬ ಸಲಹೆಗಾರನು ಅನೇಕ ವರ್ಷಗಳಿಂದ ಸಲಹೆ ನೀಡಿದನು. ಹೆತ್ತವರೊಂದಿಗೂ ಕುಟುಂಬದ ಇತರ ಸದಸ್ಯರೊಂದಿಗೂ ಅವರಿಗಿರುವ ಸಂಬಂಧವನ್ನು ಸಹ ಜಾಗರೂಕತೆಯಿಂದ ಗಮನಿಸುವಂತೆ ಪ್ರೋತ್ಸಾಹಿಸಿದನು.ಯೇಸು ಅಧೀನತೆಯನ್ನು ತೋರಿಸಿದ ವಿಧ
8 ಅಧೀನತೆ ಅಷ್ಟು ಸುಲಭವಲ್ಲವಾದರೂ, ಯೇಸುವಿನಂತೆಯೇ ಸ್ತ್ರೀಯರು ಅದನ್ನು ಗೌರವಾರ್ಹ ಪಾತ್ರವಾಗಿ ನೋಡಬಲ್ಲರು. ಯೇಸು ದೇವರಿಗೆ ತೋರಿಸಿದ ಅಧೀನತೆಯಲ್ಲಿ ಕಷ್ಟಾನುಭವ ಮತ್ತು ಯಾತನಾ ಕಂಬದ ಮರಣ ಕೂಡಿದ್ದರೂ ಅದರಲ್ಲಿ ಅವನು ಆನಂದವನ್ನು ಕಂಡುಕೊಂಡನು. (ಲೂಕ 22:41-44; ಇಬ್ರಿಯ 5:7, 8; 12:3) ಸ್ತ್ರೀಯರು ಯೇಸುವನ್ನು ಮಾದರಿಯಾಗಿ ಇಡಬಲ್ಲರು. ಏಕೆಂದರೆ, “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಆದರೂ, ಮಹತ್ವದ ವಿಷಯವೇನೆಂದರೆ ಸ್ತ್ರೀಯರು ಪುರುಷರ ತಲೆತನದೊಳಗೆ ಬರುವುದು ವಿವಾಹವಾದಾಗ ಮಾತ್ರವೇ ಅಲ್ಲ.
9 ಸ್ತ್ರೀಯರು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರ ವಹಿಸುವ ಆಧ್ಯಾತ್ಮಿಕವಾಗಿ ಅರ್ಹರಾದ ಪುರುಷರ ತಲೆತನಕ್ಕೆ ಅಧೀನರಾಗಬೇಕೆಂದು ಬೈಬಲ್ ವಿವರಿಸುತ್ತದೆ. (1 ತಿಮೊಥೆಯ 2:12, 13; ಇಬ್ರಿಯ 13:17) ದೇವರ ಈ ನಿರ್ದೇಶನವನ್ನು ಸ್ತ್ರೀಯರು ಅನುಸರಿಸುವಾಗ ಅವರು ದೇವರ ಸಂಘಟನಾ ಏರ್ಪಾಡಿನಲ್ಲಿರುವ ದೇವದೂತರಿಗೆ ಒಂದು ಮಾದರಿಯನ್ನು ಇಡುತ್ತಾರೆ. (1 ಕೊರಿಂಥ 11:8-10) ಇದಕ್ಕೆ ಕೂಡಿಸಿ, ಪ್ರಾಯಸ್ಥೆಯರಾದ ವಿವಾಹಿತ ಸ್ತ್ರೀಯರು ತಮ್ಮ ಉತ್ತಮ ಮಾದರಿ ಮತ್ತು ಸಹಾಯಕರವಾದ ಸಲಹೆಸೂಚನೆಗಳಿಂದ ‘ಗಂಡಂದಿರಿಗೆ ಅಧೀನರಾಗಿರುವಂತೆ’ ಯೌವನಸ್ಥ ಸ್ತ್ರೀಯರಿಗೆ ಬುದ್ಧಿಹೇಳಬೇಕು.—ತೀತ 2:3-5.
10 ಯೋಗ್ಯ ರೀತಿಯ ಅಧೀನತೆಯ ಮಹತ್ವವನ್ನು ಯೇಸು ಮನಗಂಡನು. ಒಂದು ಸಂದರ್ಭದಲ್ಲಿ ಯೇಸು ಪೇತ್ರನಿಗೆ ತಮ್ಮಿಬ್ಬರ ತೆರಿಗೆಯನ್ನು ಅಧಿಕಾರಿಗಳಿಗೆ ಸಲ್ಲಿಸುವಂತೆ ನಿರ್ದೇಶಿಸಿದನು, ಮಾತ್ರವಲ್ಲ ತೆರಿಗೆಯ ಹಣವನ್ನೂ ಒದಗಿಸಿಕೊಟ್ಟನು. ಆಮೇಲೆ ಪೇತ್ರನು ಬರೆದುದು: “ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರೂ ಕರ್ತನ ನಿಮಿತ್ತ ಅಧೀನರಾಗಿರಿ.” (1 ಪೇತ್ರ 2:13; ಮತ್ತಾಯ 17:24-27) ಯೇಸುವಿನ ಅಧೀನತೆಯ ಅತ್ಯುತ್ತಮ ಮಾದರಿಯ ಸಂಬಂಧದಲ್ಲಿ ನಾವು ಓದುವುದು: “ಆತನು . . . ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು . . . ಹೊಂದುವಷ್ಟು ವಿಧೇಯನಾದನು.”—ಫಿಲಿಪ್ಪಿ 2:5-8.
11 ಕ್ರೈಸ್ತರು ಈ ಲೋಕದ ಕಠೋರ, ಭ್ರಷ್ಟ ಅಧಿಕಾರಿಗಳಿಗೂ ಅಧೀನರಾಗಬೇಕೆಂದು ಪ್ರೋತ್ಸಾಹಿಸುವಾಗ ಪೇತ್ರನು ವಿವರಿಸಿದ್ದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಯೇಸು ಎಷ್ಟೊಂದು ಕಷ್ಟವನ್ನು ಅನುಭವಿಸಿದರೂ ಹೇಗೆ ಅಧೀನನಾಗಿ ತಾಳಿಕೊಂಡನು ಎಂಬುದನ್ನು ವರ್ಣಿಸಿದ ಬಳಿಕ ಪೇತ್ರನು ಅವಿಶ್ವಾಸಿ ಗಂಡಂದಿರಿದ್ದ ಹೆಂಡತಿಯರನ್ನು ಪ್ರೋತ್ಸಾಹಿಸುತ್ತ ಹೇಳಿದ್ದು: “ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”—1 ಪೇತ್ರ 3:1-2.
12 ಅಪಹಾಸ್ಯ ಮತ್ತು ದುರ್ಭಾಷೆಯ ಎದುರಿನಲ್ಲಿ ಅಧೀನರಾಗಿ ನಡೆಯುವುದು ಬಲಹೀನತೆಯ ಲಕ್ಷಣವಾಗಿ ವೀಕ್ಷಿಸಲ್ಪಡಬಹುದು. ಆದರೆ ಯೇಸು ಹಾಗೆ ವೀಕ್ಷಿಸಲಿಲ್ಲ. ಪೇತ್ರನು ಬರೆದುದು: ‘ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸಲಿಲ್ಲ.’ (1 ಪೇತ್ರ 2:23) ಯೇಸುವಿನ ಕಷ್ಟಾನುಭವಗಳನ್ನು ನೋಡಿದ ಕೆಲವರು ಸ್ವಲ್ಪಮಟ್ಟಿಗೆ ವಿಶ್ವಾಸಿಗಳಾದರು. ಇವರಲ್ಲಿ, ಯೇಸು ವಧಿಸಲ್ಪಟ್ಟ ಸಮಯದಲ್ಲಿ ಅವನ ಪಕ್ಕದ ಕಂಬದ ಮೇಲಿದ್ದ ಕಳ್ಳ ಮತ್ತು ಅದನ್ನು ನೋಡುತ್ತಿದ್ದ ಸೇನಾಧಿಕಾರಿ ಸೇರಿದ್ದರು. (ಮತ್ತಾಯ 27:38-44, 54; ಮಾರ್ಕ 15:39; ಲೂಕ 23:39-43) ತದ್ರೀತಿ, ಕೆಲವು ಅವಿಶ್ವಾಸಿ ಗಂಡಂದಿರು ದೂಷಿಸುವವರಾದರೂ ತಮ್ಮ ಹೆಂಡತಿಯರ ಅಧೀನ ನಡತೆಯನ್ನು ನೋಡಿ ಕ್ರೈಸ್ತರಾಗುವರು ಎಂದು ಪೇತ್ರನು ಸೂಚಿಸಿದನು. ಹೀಗೆ ಸಂಭವಿಸುವುದರ ಸಾಕ್ಷ್ಯವನ್ನು ನಾವಿಂದು ನೋಡಿರುತ್ತೇವೆ.
ಹೆಂಡತಿಯರು ಮೆಚ್ಚಿಗೆ ಗಳಿಸುವ ವಿಧ
13 ವಿಶ್ವಾಸಿಗಳಾಗಿರುವ ಹೆಂಡತಿಯರು ತಮ್ಮ ಕ್ರಿಸ್ತಸದೃಶ ನಡತೆಯಿಂದ ತಮ್ಮ ಗಂಡಂದಿರನ್ನು ವಿಶ್ವಾಸಿಗಳನ್ನಾಗಿ ಮಾಡಿದ್ದಾರೆ. ಇತ್ತೀಚಿಗೆ ಯೆಹೋವನ ಸಾಕ್ಷಿಗಳ ಒಂದು ಜಿಲ್ಲಾ ಅಧಿವೇಶನದಲ್ಲಿ ಒಬ್ಬ ಪತಿ ತನ್ನ ಪತ್ನಿಯ ಕುರಿತು ಹೇಳಿದ್ದು: “ನಾನು ಅವಳೊಂದಿಗೆ ತುಂಬ ಮೊಂಡನಾಗಿ ವರ್ತಿಸಿದೆ. ಆದ್ರೂ ಅವಳು ನನ್ನನ್ನು ತುಂಬ ಗೌರವದಿಂದ ನೋಡುತ್ತಿದ್ದಳು. ಅವಳು ಒಮ್ಮೆಯೂ ನನ್ನನ್ನು ಕೀಳಾಗಿ ನೋಡಲಿಲ್ಲ. ತನ್ನ ನಂಬಿಕೆಗಳನ್ನು ಒತ್ತಾಯದಿಂದ ನನ್ನ ಮೇಲೆ ಹೊರಿಸಲಿಲ್ಲ. ಪ್ರೀತಿಯಿಂದಲೇ ನೋಡಿಕೊಂಡಳು. ಸಮ್ಮೇಳನಗಳಿಗೆ ಅವಳು ಹೋಗಲಿಕ್ಕಿದ್ದಾಗ ಮುಂಚಿತವಾಗಿಯೇ ಮನೆಗೆಲಸವನ್ನು ಮಾಡಿ ನನಗಾಗಿ ಊಟಗಳನ್ನು ತಯಾರಿಸಿಡುತ್ತಿದ್ದಳು. ಆಕೆಯ ಈ ಸ್ವಭಾವ ಬೈಬಲಿನಲ್ಲಿ ನನ್ನ ಆಸಕ್ತಿಯನ್ನು ಕೆರಳಿಸಿತು. ಈಗ ನೋಡಿ ನಾನೇ ಸಾಕ್ಷಿಯಾಗಿದ್ದೇನೆ!” ಹೌದು, ಇವನು ತನ್ನ ಹೆಂಡತಿಯ ಸುನಡತೆಯಿಂದಾಗಿ “ವಾಕ್ಯೋಪದೇಶವಿಲ್ಲದೆ” ವಿಶ್ವಾಸಿಯಾದನು.
14 ಪೇತ್ರನು ಒತ್ತಿಹೇಳಿದಂತೆ ಸಕಾರಾತ್ಮಕ ಫಲಿತಾಂಶಗಳನ್ನು ತರುವುದು ಹೆಂಡತಿಯ ನುಡಿಯಲ್ಲ ನಡೆಯೇ. ಇದಕ್ಕೆ ಉದಾಹರಣೆ, ಬೈಬಲ್ ಸತ್ಯಗಳನ್ನು ಕಲಿತು ಕ್ರೈಸ್ತ ಕೂಟಗಳಿಗೆ ಹಾಜರಾಗಲು ದೃಢನಿಶ್ಚಯ ಮಾಡಿದ ಒಬ್ಬ ಹೆಂಡತಿಯದ್ದಾಗಿದೆ. “ಆ್ಯಗ್ನೆಸ್, ಆ ಬಾಗಿಲಿಂದ ನೀನು ಹೋದರೆ ನೋಡು, ಮತ್ತೆ ಬರಲೇಬಾರದು” ಎಂದನು ಆಕೆಯ ಗಂಡ ಅಬ್ಬರಿಸುತ್ತ. ಆಕೆ ಆ ಬಾಗಿಲಿನಿಂದ ಹೋಗಲಿಲ್ಲ, ಇನ್ನೊಂದು ಬಾಗಿಲಿನಿಂದ ಹೋದಳು. ಮುಂದಿನ ಕೂಟದ ರಾತ್ರಿ ಅವನು “ನೀನು ಬರುವಾಗ ನಾನಿಲ್ಲಿ ಇರ್ತಿನಾ ನೋಡು” ಎಂದು ಬೆದರಿಸಿದನು. ಆಕೆ ಹಿಂದಿರುಗಿದಾಗ ಅವನು ಹೇಳಿದಂತೆ ಹೊರಟೇಹೋಗಿದ್ದನು. ಮೂರು ದಿನ ಬಿಟ್ಟು ಹಿಂದಿರುಗಿ ಬಂದನು. ಆಗ ಆಕೆ “ನಿಮಗೆ ತಿಂಡಿ ಏನಾದರೂ ಮಾಡಿಕೊಡ್ಲಾ?” ಎಂದು ಕಳಕಳಿಯಿಂದ ಕೇಳಿದಳು. ಆ್ಯಗ್ನೆಸ್ ಯೆಹೋವನ ಭಕ್ತಿಯಿಂದ ಸ್ವಲ್ಪವೂ ಹಿಂದೆ ಸರಿಯಲಿಲ್ಲ. ಕ್ರಮೇಣ ಆಕೆಯ ಗಂಡ ಬೈಬಲ್ ಅಧ್ಯಯನವನ್ನು ಸ್ವೀಕರಿಸಿ ತನ್ನನ್ನು ದೇವರಿಗೆ ಸಮರ್ಪಿಸಿಕೊಂಡನು. ಬಳಿಕ ಅನೇಕ ಜವಾಬ್ದಾರಿಗಳುಳ್ಳ ಮೇಲ್ವಿಚಾರಕನಾದನು.
15 ಮೇಲೆ ತಿಳಿಸಲ್ಪಟ್ಟ ಪತ್ನಿಯರು ತೋರಿಸಿದಂಥ ‘ಅಲಂಕಾರವನ್ನು’ ಅಪೊಸ್ತಲ ಪೇತ್ರನು ಶಿಫಾರಸು ಮಾಡಿದನು. ಅದು “ಜಡೆಹೆಣೆದು”ಕೊಳ್ಳುವುದಾಗಲಿ “ವಸ್ತ್ರಗಳನ್ನು” ಧರಿಸಿಕೊಳ್ಳುವುದಾಗಲಿ ಅಲ್ಲ. ಬದಲಿಗೆ, “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ” ಎಂದನು ಪೇತ್ರನು. ಈ ಮನೋಭಾವವು ಸ್ವರದಲ್ಲಿ ಮತ್ತು ಸೌಮ್ಯ ವರ್ತನೆಯಲ್ಲಿ ತೋರಿಬರಬೇಕು. ಪ್ರತಿಭಟನೆ ಅಥವಾ ತಗಾದೆ ಮಾಡಿಯಲ್ಲ. ಹೀಗೆ ಕ್ರೈಸ್ತ ಪತ್ನಿಯೊಬ್ಬಳು ತನ್ನ ಗಂಡನಿಗೆ ಆಳವಾದ ಗೌರವವನ್ನು ತೋರಿಸುತ್ತಾಳೆ.—1 ಪೇತ್ರ 3:3, 4.
ಮಾದರಿಗಳಿಂದ ಕಲಿಯುವುದು
16 ಪೇತ್ರನು ಬರೆದುದು: ‘ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.’ (1 ಪೇತ್ರ 3:5) ಇಂಥವರು ಯೆಹೋವನ ಸಲಹೆಗೆ ಕಿವಿಗೊಟ್ಟು ಆತನನ್ನು ಮೆಚ್ಚಿಸುವುದು ಕುಟುಂಬ ಸಂತೋಷವನ್ನೂ ನಿತ್ಯಜೀವದ ಬಹುಮಾನವನ್ನೂ ಫಲಿಸುತ್ತದೆಂಬುದನ್ನು ಮನದಟ್ಟು ಮಾಡಿಕೊಂಡರು. ಅಬ್ರಹಾಮನ ಸುಂದರಿಯಾದ ಪತ್ನಿ ಸಾರಳು “ಅಬ್ರಹಾಮನಿಗೆ ವಿಧೇಯಳಾಗಿದ್ದು, ಅವನನ್ನು ಯಜಮಾನ ಎಂದು ಕರೆದಳು” ಎಂದು ಪೇತ್ರನು ಹೇಳುತ್ತಾನೆ. ದೂರದೇಶದಲ್ಲಿ ಸೇವೆಮಾಡಲು ದೇವರು ನೇಮಿಸಿದ ತನ್ನ ದೇವಭಕ್ತ ಗಂಡನನ್ನು ಸಾರಳು ಬೆಂಬಲಿಸಿದಳು. ಆಕೆ ಆರಾಮಕರ ಜೀವನಶೈಲಿಯನ್ನು ಬಿಟ್ಟು ತನ್ನ ಜೀವವನ್ನೂ ಅಪಾಯಕ್ಕೊಡ್ಡಿದಳು. (ಆದಿಕಾಂಡ 12:1, 10-13) ಪೇತ್ರನು ಸಾರಳ ಧೀರ ಮಾದರಿಯನ್ನು ಪ್ರಶಂಸಿಸುತ್ತ ಹೇಳಿದ್ದು: “ನೀವು ಸಾರಳ ಪುತ್ರಿಯರಾಗಿದ್ದೀರಲ್ಲಾ, ನೀವು ಒಳ್ಳೆಯದನ್ನು ಮಾಡುವುದಾದರೆ ಯಾವ ಭೀತಿಗೂ ಗಾಬರಿಪಡುವುದಿಲ್ಲ.”—1 ಪೇತ್ರ 3:6, NIBV.
17 ದೇವರಲ್ಲಿ ನಿರೀಕ್ಷೆಯನ್ನಿಟ್ಟಿದ್ದ ಇನ್ನೊಬ್ಬ ನಿರ್ಭೀತ ಸ್ತ್ರೀ ಅಬೀಗೈಲ್ ಆಗಿದ್ದಳು. ಪೇತ್ರನು ತಿಳಿಸಿದ ಸ್ತ್ರೀಯರಲ್ಲಿ ಆಕೆಯೂ ಒಬ್ಬಳಾಗಿದ್ದಿರಬಹುದು. ಆಕೆ “ಬಹುಬುದ್ಧಿವಂತೆ.” ಆದರೆ ಆಕೆಯ ಗಂಡನು “ನಿಷ್ಠುರನೂ ದುಷ್ಕರ್ಮಿಯೂ” ಆಗಿದ್ದನು. ದಾವೀದನಿಗೂ ಅವನ ಸೇವಕರಿಗೂ ನಾಬಾಲನು ನೆರವಾಗಲು ನಿರಾಕರಿಸಿದಾಗ ಅವರು ನಾಬಾಲನನ್ನೂ ಅವನ ಕುಟುಂಬವನ್ನೂ ಅಳಿಸಿಬಿಡಲು ಸಿದ್ಧರಾದರು. ಆದರೆ ಅಬೀಗೈಲಳು ತನ್ನ ಕುಟುಂಬವನ್ನು ಉಳಿಸಲು ಕ್ರಿಯೆ ಕೈಕೊಂಡಳು. ಆಕೆ ಕತ್ತೆಗಳ ಮೇಲೆ ಆಹಾರದ ಸರಬರಾಜನ್ನು ಹೇರಿ, ದಾವೀದನೂ ಅವನ ಶಸ್ತ್ರಧಾರಿ ಸೇವಕರೂ ಬರುತ್ತಿದ್ದಾಗ ಅವರನ್ನು ಎದುರುಗೊಂಡಳು. ದಾವೀದನನ್ನು ನೋಡಿದ ಕೂಡಲೆ ಆಕೆ ಇಳಿದು ಅವನ ಪಾದಗಳಿಗೆ ಬಿದ್ದು ದುಡುಕಿ ವರ್ತಿಸದಿರುವಂತೆ ಬೇಡಿಕೊಂಡಳು. ಇದರಿಂದ ದಾವೀದನ ಮನಕರಗಿತು. “ಈಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. . . . ನೀನೂ ನಿನ್ನ ಬುದ್ಧಿಯೂ ಸೋತ್ರಾರ್ಹವೇ ಸರಿ” ಎಂದನವನು.—1 ಸಮುವೇಲ 25:2-33.
18 ಪತ್ನಿಯರಿಗೆ ಉತ್ತಮ ಮಾದರಿಯಾಗಿರುವ ಇನ್ನೊಬ್ಬಳು ಶೂಲೇಮ್ಯ ಯುವತಿ. ಅವಳ ಮದುವೆ ಯಾರೊಂದಿಗೆ ನಿಶ್ಚಯವಾಗಿತ್ತೊ ಆ ದೀನ ಕುರುಬನಿಗೆ ಅವಳು ನಿಷ್ಠಳಾಗಿ ಉಳಿದಳು. ಒಬ್ಬ ಶ್ರೀಮಂತ ರಾಜನು ಅವಳಲ್ಲಿ ಪ್ರಣಯಾಸಕ್ತಿ ತೋರಿಸಿದರೂ ಆಕೆಯ ಮೊದಲ ಪ್ರೇಮ ಪ್ರಬಲವಾಗಿತ್ತು. ಆ ಯುವ ಕುರುಬನ ಮೇಲೆ ತನಗಿದ್ದ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಅವಳಂದದ್ದು: “ನಿನ್ನ ಹೃದಯದ ಮೇಲೆ, ನಿನ್ನ ಕೈಯಲ್ಲಿ, ನನ್ನನ್ನು ಮುದ್ರೆಯನ್ನಾಗಿ ಧರಿಸಿಕೋ. ಪ್ರೀತಿಯು ಮರಣದಷ್ಟು ಬಲವಾಗಿದೆ, . . . ಜಲದ ರಾಶಿಗಳೂ ಪ್ರೀತಿಯನ್ನು ನಂದಿಸಲಾರವು. ಪ್ರವಾಹಗಳಿಗೂ ಅದನ್ನು ಮುಣುಗಿಸಲು ಶಕ್ತಿಯಿಲ್ಲ.” (ಪರಮ ಗೀತ 8:6, 7) ಮದುವೆಯ ಪ್ರಸ್ತಾಪವನ್ನು ಅಂಗೀಕರಿಸುವ ಎಲ್ಲ ಸ್ತ್ರೀಯರ ದೃಢನಿರ್ಧಾರವು ತಮ್ಮ ಕೈಹಿಡಿಯುವ ಗಂಡಂದಿರಿಗೆ ನಿಷ್ಠರಾಗಿ ಉಳಿಯುವುದೂ ಅವರನ್ನು ಆಳವಾಗಿ ಗೌರವಿಸುವುದೂ ಆಗಿರಲಿ.
ಹೆಚ್ಚಿನ ದೈವಿಕ ಸಲಹೆ
19 ಕೊನೆಯದಾಗಿ, ನಮ್ಮ ಮುಖ್ಯ ಶಾಸ್ತ್ರವಚನದ ಪೂರ್ವಾಪರವನ್ನು ಪರಿಗಣಿಸಿರಿ: “ಸ್ತ್ರೀಯರೇ, ನೀವು . . . ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.” (ಎಫೆಸ 5:22) ಇಂತಹ ಅಧೀನತೆಯು ಏಕೆ ಆವಶ್ಯಕ? ಏಕೆಂದರೆ, ಮುಂದಿನ ವಚನ ಹೇಳುವಂತೆ “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” ಆದುದರಿಂದ ಹೆಂಡತಿಯರನ್ನು ಹೀಗೆ ಪ್ರೋತ್ಸಾಹಿಸಲಾಗಿದೆ: “ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.”—ಎಫೆಸ 5:23, 24, 33.
20 ಈ ಆಜ್ಞೆಗೆ ವಿಧೇಯರಾಗಬೇಕಾದರೆ, ಹೆಂಡತಿಯರು ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ಮಾದರಿಯನ್ನು ಅಧ್ಯಯನಮಾಡಿ ಅನುಸರಿಸುವುದು ಆವಶ್ಯಕ. ದಯವಿಟ್ಟು 2 ಕೊರಿಂಥ 11:23-28ನ್ನು ಓದಿರಿ. ಆ ಮೂಲಕ, ಸಭೆಯ ಸದಸ್ಯನಾದ ಅಪೊಸ್ತಲ ಪೌಲನು ತನ್ನ ತಲೆಯಾದ ಯೇಸು ಕ್ರಿಸ್ತನಿಗೆ ಹೇಗೆ ನಂಬಿಗಸ್ತನಾಗಿದ್ದು ತಾಳಿಕೊಂಡನು ಎಂಬುದನ್ನು ಕಲಿಯಿರಿ. ಪೌಲನಂತೆಯೇ ಹೆಂಡತಿಯರು ಹಾಗೂ ಸಭೆಯಲ್ಲಿರುವ ಇತರರು ಯೇಸುವಿಗೆ ಅಧೀನರಾಗಿರುವುದರಲ್ಲಿ ನಿಷ್ಠರಾಗಿ ಉಳಿಯುವುದು ಆವಶ್ಯಕ. ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನರಾಗಿರುವ ಮೂಲಕ ಇದನ್ನು ಪ್ರದರ್ಶಿಸುತ್ತಾರೆ.
21 ಇಂದು ಅನೇಕ ಮಂದಿ ಹೆಂಡತಿಯರಿಗೆ ಈ ಅಧೀನತೆಯ ವಿಷಯವು ಕರಕರೆ ಹುಟ್ಟಿಸಬಹುದು. ಆದರೆ ವಿವೇಕಿಯಾದ ಸ್ತ್ರೀಯೊಬ್ಬಳು ಅದರ ಪ್ರಯೋಜನಗಳ ಬಗ್ಗೆ ಯೋಚಿಸುವಳು. ಉದಾಹರಣೆಗೆ, ಅವಿಶ್ವಾಸಿ ಗಂಡನಿರುವಲ್ಲಿ ದೇವರ ನಿಯಮ ಮತ್ತು ಮೂಲತತ್ತ್ವಗಳನ್ನು ಉಲ್ಲಂಘಿಸದ ಎಲ್ಲ ವಿಷಯಗಳಿಗೆ ಅವಳು ಅವನಿಗೆ ಅಧೀನಳಾಗುವ ಮೂಲಕ ‘ಗಂಡನನ್ನು ರಕ್ಷಿಸುವ’ ಅದ್ಭುತಕರ ಪ್ರತಿಫಲವು ಒದಗಿಬರುವುದು ಸಂಭಾವ್ಯ. (1 ಕೊರಿಂಥ 7:13, 16) ಅಲ್ಲದೆ, ಯೆಹೋವ ದೇವರು ತನ್ನ ನಡತೆಯನ್ನು ಮೆಚ್ಚುತ್ತಾನೆಂದು ತಿಳಿಯುವುದರಲ್ಲಿ ಮತ್ತು ಆತನ ಪ್ರಿಯ ಪುತ್ರನ ಮಾದರಿಯನ್ನು ಅನುಸರಿಸಿದ್ದಕ್ಕಾಗಿ ಹೇರಳ ಪ್ರತಿಫಲವನ್ನು ಕೊಡುವನು ಎಂಬುದರಲ್ಲಿ ಆಕೆ ಸಂತೃಪ್ತಿಯನ್ನು ಕಂಡುಕೊಳ್ಳಬಲ್ಲಳು. (w07 2/15)
ನೆನಪಿದೆಯೆ?
• ತನ್ನ ಗಂಡನನ್ನು ಗೌರವಿಸುವುದು ಹೆಂಡತಿಗೆ ಏಕೆ ಒಂದು ಸವಾಲಾಗಿರಬಹುದು?
• ಮದುವೆಯ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುವುದು ಏಕೆ ತುಂಬ ಗಂಭೀರವಾದ ವಿಷಯ?
• ಹೆಂಡತಿಯರಿಗೆ ಹೇಗೆ ಯೇಸು ಮಾದರಿಯಾಗಿದ್ದನು ಮತ್ತು ಅವನ ಮಾದರಿಯನ್ನು ಅನುಸರಿಸುವುದರಿಂದ ಯಾವ ಪ್ರಯೋಜನಗಳಿವೆ?
[ಅಧ್ಯಯನ ಪ್ರಶ್ನೆಗಳು]
1. ಗಂಡನನ್ನು ಗೌರವಿಸುವುದು ಏಕೆ ಅನೇಕವೇಳೆ ಕಷ್ಟಕರ?
2. ಇತ್ತೀಚೆಗೆ ಸ್ತ್ರೀಯರು ಮತ್ತು ವಿವಾಹದ ಸಂಬಂಧದಲ್ಲಿರುವ ಮನೋಭಾವದಲ್ಲಿ ಯಾವ ಬದಲಾವಣೆಯಾಗಿದೆ?
3. ಮದುವೆಯನ್ನು ಬಾಧಿಸುವ ಮೂಲ ಸಮಸ್ಯೆಯೇನು?
4, 5. (ಎ) ವಿವಾಹದ ಕುರಿತು ಯೋಚಿಸುವಾಗ ಮುಂಜಾಗ್ರತೆ ಏಕೆ ಸೂಕ್ತವಾಗಿದೆ? (ಬಿ) ವಿವಾಹಕ್ಕೆ ಒಪ್ಪುವ ಮೊದಲು ಒಬ್ಬ ಸ್ತ್ರೀ ಏನು ಮಾಡಬೇಕು?
6. ಇಂದು ಹೆಚ್ಚಿನ ಸ್ತ್ರೀಯರು ಯಾವ ನಿರ್ಣಯವನ್ನು ಮಾಡಬಲ್ಲರು ಮತ್ತು ಇದೇಕೆ ಪ್ರಾಮುಖ್ಯ?
7. ಒಬ್ಬ ವಿವಾಹಜೊತೆಯನ್ನು ಹುಡುಕುವ ವಿಚಾರದಲ್ಲಿ ಯಾವ ವಿವೇಕಯುತ ಸಲಹೆ ಕೊಡಲಾಗಿದೆ?
8, 9. (ಎ) ಯೇಸುವು ದೇವರಿಗೆ ತನ್ನ ಅಧೀನತೆಯನ್ನು ಹೇಗೆ ವೀಕ್ಷಿಸಿದನು? (ಬಿ) ಈ ಅಧೀನತೆಯಿಂದ ಯಾವ ಪ್ರಯೋಜನ ಸಿದ್ಧಿಸಬಹುದು?
10. ಅಧೀನತೆ ತೋರಿಸುವುದರಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು?
11. ಅವಿಶ್ವಾಸಿ ಗಂಡಂದಿರಿಗೆ ಸಹ ಹೆಂಡತಿಯರು ಅಧೀನರಾಗಬೇಕೆಂದು ಪೇತ್ರನು ಏಕೆ ಪ್ರೋತ್ಸಾಹಿಸಿದನು?
12. ಯೇಸುವಿನ ಅಧೀನ ನಡತೆಯಿಂದ ಯಾವ ಪ್ರಯೋಜನಗಳು ಸಿದ್ಧಿಗೆ ಬಂದವು?
13, 14. ಅವಿಶ್ವಾಸಿ ಗಂಡಂದಿರಿಗೆ ತೋರಿಸಿದ ಅಧೀನತೆಯು ಹೇಗೆ ಪ್ರಯೋಜನಕಾರಿಯಾಗಿದೆ?
15. ಕ್ರೈಸ್ತ ಪತ್ನಿಯರಿಗೆ ಯಾವ “ಅಲಂಕಾರ”ವನ್ನು ಶಿಫಾರಸು ಮಾಡಲಾಗಿದೆ?
16. ಸಾರಳು ಕ್ರೈಸ್ತ ಪತ್ನಿಯರಿಗೆ ಯಾವ ವಿಧಗಳಲ್ಲಿ ಉತ್ತಮ ಮಾದರಿಯಾಗಿದ್ದಾಳೆ?
17. ಅಬೀಗೈಲಳು ಕ್ರೈಸ್ತ ಪತ್ನಿಯರಿಗೆ ಮಾದರಿಯಾಗಿದ್ದಳೆಂದು ಪೇತ್ರನು ನೆನಸಿದ್ದಿರಬಹುದೇಕೆ?
18. ಇನ್ನೊಬ್ಬ ಪುರುಷನ ಪ್ರಣಯಾಸಕ್ತಿಯಿಂದ ಪ್ರಲೋಭಿಸಲ್ಪಡುವಲ್ಲಿ ಹೆಂಡತಿಯರು ಯಾವ ಮಾದರಿಯ ಕುರಿತು ಆಲೋಚಿಸಬೇಕು ಮತ್ತು ಏಕೆ?
19, 20. (ಎ) ಹೆಂಡತಿಯರು ತಮ್ಮ ಗಂಡಂದಿರಿಗೆ ಯಾವ ಕಾರಣಕ್ಕಾಗಿ ಅಧೀನರಾಗಿರಬೇಕು? (ಬಿ) ಹೆಂಡತಿಯರಿಗೆ ಯಾವ ಉತ್ತಮ ಮಾದರಿಯು ಒದಗಿಸಲ್ಪಟ್ಟಿದೆ?
21. ತಮ್ಮ ಗಂಡಂದಿರಿಗೆ ಅಧೀನರಾಗಿರಲು ಹೆಂಡತಿಯರಿಗೆ ಯಾವುದು ಪ್ರೋತ್ಸಾಹಕರವಾದ ವಿಷಯವಾಗಿರಬಲ್ಲದು?
[ಪುಟ 15ರಲ್ಲಿರುವ ಚಿತ್ರ]
ಮದುವೆಯ ಪ್ರಸ್ತಾಪವನ್ನು ಅಂಗೀಕರಿಸಬೇಕೊ ಬೇಡವೊ ಎಂಬುದನ್ನು ನಿರ್ಣಯಿಸುವುದು ಏಕೆ ಗಂಭೀರವಾಗಿದೆ?
[ಪುಟ 17ರಲ್ಲಿರುವ ಚಿತ್ರ]
ಅಬೀಗೈಲಳಂಥ ಮಾದರಿಯಿಂದ ಪತ್ನಿಯರು ಏನು ಕಲಿಯಬಲ್ಲರು?