ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನಿಗೂ ಅವನ ನಂಬಿಗಸ್ತ ಆಳಿಗೂ ನಿಷ್ಠೆಯಿಂದಿರುವುದು

ಕ್ರಿಸ್ತನಿಗೂ ಅವನ ನಂಬಿಗಸ್ತ ಆಳಿಗೂ ನಿಷ್ಠೆಯಿಂದಿರುವುದು

ಕ್ರಿಸ್ತನಿಗೂ ಅವನ ನಂಬಿಗಸ್ತ ಆಳಿಗೂ ನಿಷ್ಠೆಯಿಂದಿರುವುದು

“ಯಜಮಾನನು . . . ಅಂಥವನನ್ನು . . . ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು.”​—⁠ಮತ್ತಾಯ 24:​45-47.

“ನಾಯಕರೆಂದೂ ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ನಾಯಕನು.” (ಮತ್ತಾಯ 23:​10, NIBV) ಈ ಮಾತುಗಳಿಂದ ಯೇಸು ತನ್ನ ಹಿಂಬಾಲಕರಿಗೆ, ಭೂಮಿಯ ಯಾವ ಮನುಷ್ಯನೂ ಅವರ ನಾಯಕನಾಗಿರನು ಎಂಬುದನ್ನು ಸ್ಪಷ್ಟಪಡಿಸಿದನು. ಅವರ ಏಕಮಾತ್ರ ನಾಯಕನು ಸ್ವರ್ಗದಲ್ಲಿರುವ ಯೇಸು ಕ್ರಿಸ್ತನೇ ಆಗಿದ್ದಾನೆ. ಅವನನ್ನು ದೇವರು ಈ ನಾಯಕ ಸ್ಥಾನಕ್ಕೆ ನೇಮಿಸಿದ್ದಾನೆ. ಯೆಹೋವನು, “ಸತ್ತಿದ್ದ ಕ್ರಿಸ್ತನನ್ನು ಬದುಕಿಸಿ . . . ಆತನನ್ನು ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು. ಸಭೆಯು ಆತನ ದೇಹವಾಗಿದೆ.”​—⁠ಎಫೆಸ 1:​20-23.

2 ಕ್ರಿಸ್ತನು ಕ್ರೈಸ್ತ ಸಭೆಗೆ ಸಂಬಂಧಿಸಿದ “ಎಲ್ಲಾದರ ಮೇಲೆ . . . ಶಿರಸ್ಸಾಗಿ” ಇರುವುದರಿಂದ ಅವನು ಸಭೆಯಲ್ಲಿ ನಡೆಯುವ ಎಲ್ಲ ಸಂಗತಿಗಳ ಮೇಲೆ ಅಧಿಕಾರ ಚಲಾಯಿಸುತ್ತಾನೆ. ಸಭೆಯಲ್ಲಿ ನಡೆಯುವ ಯಾವುದೂ ಅವನ ಕಣ್ಣಿಗೆ ಮರೆಯಾಗಿರುವುದಿಲ್ಲ. ಅವನು ಕ್ರೈಸ್ತರ ಪ್ರತಿಯೊಂದು ಗುಂಪು ಇಲ್ಲವೆ ಸಭೆಯ ಆಧ್ಯಾತ್ಮಿಕ ಸ್ಥಿತಿಯನ್ನು ಒತ್ತಾಗಿ ಅವಲೋಕಿಸುತ್ತಾನೆ. ಸಾ.ಶ. ಪ್ರಥಮ ಶತಮಾನದ ಅಂತ್ಯದಲ್ಲಿ ಅಪೊಸ್ತಲ ಯೋಹಾನನಿಗೆ ಕೊಡಲಾದ ಪ್ರಕಟನೆಯಿಂದ ಇದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅಲ್ಲಿ ಯೇಸು ಏಳು ಸಭೆಗಳಿಗೆ, ತಾನು ಅವರ ಕೃತ್ಯಗಳನ್ನು ಅಂದರೆ ಅವರ ಸಕಾರಾತ್ಮಕ ಗುಣಗಳನ್ನೂ ಬಲಹೀನತೆಗಳನ್ನೂ ಬಲ್ಲನೆಂದು ಐದು ಸಲ ತಿಳಿಸಿ, ಅವಕ್ಕನುಸಾರ ಸಲಹೆ ಹಾಗೂ ಪ್ರೋತ್ಸಾಹನೆಗಳನ್ನು ಕೊಟ್ಟನು. (ಪ್ರಕಟನೆ 2:​2, 9, 13, 19; 3:​1, 8, 15) ಏಷ್ಯಾಮೈನರ್‌, ಪ್ಯಾಲೆಸ್ಟೈನ್‌, ಸಿರಿಯ, ಬಾಬಿಲೋನ್ಯ, ಗ್ರೀಸ್‌, ಇಟಲಿಯಲ್ಲಿದ್ದ ಇತರ ಸಭೆಗಳ ಆಧ್ಯಾತ್ಮಿಕ ಸ್ಥಿತಿಗತಿಯ ಕುರಿತೂ ಯೇಸುವಿಗೆ ಅಷ್ಟೇ ಒಳ್ಳೆಯ ಪರಿಚಯವಿತ್ತೆಂದು ನಾವು ನಿಜವಾಗಿಯೂ ನಂಬಬಲ್ಲೆವು. (ಅ. ಕೃತ್ಯಗಳು 1:⁠8) ಹಾಗಾದರೆ ಇಂದಿನ ಕುರಿತೇನು?

ನಂಬಿಗಸ್ತ ಆಳು

3 ಯೇಸು ಪುನರುತ್ಥಾನಗೊಂಡ ಬಳಿಕ ಮತ್ತು ತನ್ನ ಸ್ವರ್ಗೀಯ ತಂದೆಯ ಬಳಿಗೆ ಹೋಗುವ ತುಸು ಮೊದಲು ತನ್ನ ಶಿಷ್ಯರಿಗೆ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂದು ಹೇಳಿದನು. ಮಾತ್ರವಲ್ಲ, “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದೂ ಹೇಳಿದನು. (ಮತ್ತಾಯ 28:​18-20) ಅಂದರೆ ಅವನು ಅವರ ಕ್ರಿಯಾಶೀಲ ಶಿರಸ್ಸಾಗಿ ಮುಂದುವರಿಯಲಿದ್ದನು. ಅಪೊಸ್ತಲ ಪೌಲನು ಎಫೆಸ ಮತ್ತು ಕೊಲೊಸ್ಸೆಯ ಕ್ರೈಸ್ತರಿಗೆ ಬರೆದ ಪತ್ರಗಳಲ್ಲಿ ಕ್ರೈಸ್ತ ಸಭೆಯನ್ನು ಕ್ರಿಸ್ತನು ಶಿರಸ್ಸಾಗಿರುವ ‘ದೇಹಕ್ಕೆ’ ಹೋಲಿಸಿದನು. (ಎಫೆಸ 1:​22, 23; ಕೊಲೊಸ್ಸೆ 1:18) ಈ ರೂಪಕಾಲಂಕಾರವು, “ಶಿರಸ್ಸಿನೊಂದಿಗೆ ದೇಹವು ಐಕ್ಯದಿಂದಿರುವುದು ಆವಶ್ಯಕ ಮಾತ್ರವಲ್ಲ, ಶಿರಸ್ಸು ದೇಹದ ಸದಸ್ಯರನ್ನು ಮಾರ್ಗದರ್ಶಿಸುತ್ತದೆ ಎಂದೂ ಸೂಚಿಸುತ್ತದೆ. ಅವರು ಆತನ ಉಪಕರಣಗಳು ಆಗಿದ್ದಾರೆ” ಎಂದು ದ ಕೇಂಬ್ರಿಜ್‌ ಬೈಬಲ್‌ ಫರ್‌ ಸ್ಕೂಲ್ಸ್‌ ಆ್ಯಂಡ್‌ ಕಾಲೆಜಸ್‌ ಹೇಳುತ್ತದೆ. ಹಾಗಾದರೆ, ಕ್ರಿಸ್ತನಿಗೆ 1914ರಲ್ಲಿ ರಾಜ್ಯಾಧಿಕಾರವು ಕೊಡಲ್ಪಟ್ಟಂದಿನಿಂದ ಅವನು ಯಾರನ್ನು ತನ್ನ ಸಾಮೂಹಿಕ ಉಪಕರಣವಾಗಿ ಉಪಯೋಗಿಸಿದ್ದಾನೆ?​—⁠ದಾನಿಯೇಲ 7:​13, 14.

4 ‘ಕರ್ತನಾದ’ ಯೆಹೋವನು ತನ್ನ ‘ಒಡಂಬಡಿಕೆಯ ದೂತನಾದ’ ಮತ್ತು ಹೊಸದಾಗಿ ರಾಜ್ಯಾಧಿಕಾರ ಪಡೆದ ತನ್ನ ಪುತ್ರನಾದ ಕ್ರಿಸ್ತ ಯೇಸುವಿನೊಂದಿಗೆ ತನ್ನ ‘ಆಲಯಕ್ಕೆ’ ಅಥವಾ ಆಧ್ಯಾತ್ಮಿಕ ಆರಾಧನಾಲಯಕ್ಕೆ ನ್ಯಾಯವಿಚಾರಣೆಗಾಗಿಯೂ ಪರೀಕ್ಷಿಸಲಿಕ್ಕಾಗಿಯೂ ಬರುವನೆಂದು ಮಲಾಕಿಯನ ಪ್ರವಾದನೆಯು ಮುಂತಿಳಿಸಿತು. “ದೇವರ ಮನೆಯ” ‘ನ್ಯಾಯವಿಚಾರಣೆಯ ಸಮಯವು’ 1918ರಲ್ಲಿ ಆರಂಭಗೊಂಡಿತು ಎಂಬುದು ವ್ಯಕ್ತ. * (ಮಲಾಕಿಯ 3:1; 1 ಪೇತ್ರ 4:17) ದೇವರನ್ನೂ, ಭೂಮಿಯ ಮೇಲೆ ಆತನ ಸತ್ಯಾರಾಧನೆಯನ್ನೂ ತಾವು ಪ್ರತಿನಿಧೀಕರಿಸುತ್ತೇವೆಂದು ಹೇಳಿಕೊಳ್ಳುತ್ತಿದ್ದವರು ಸರಿಯಾಗಿ ಪರೀಕ್ಷಿಸಲ್ಪಟ್ಟರು. ಯಾರು ಶತಮಾನಗಳಿಂದಲೂ ದೇವರನ್ನು ಅಗೌರವಿಸುವ ಬೋಧನೆಗಳನ್ನು ಕಲಿಸಿ, ಒಂದನೆಯ ಜಾಗತಿಕ ಯುದ್ಧದ ಕಗ್ಗೊಲೆಯಲ್ಲಿ ಅತಿಯಾಗಿ ಸೇರಿಕೊಂಡಿದ್ದರೊ ಆ ಕ್ರೈಸ್ತ ಪ್ರಪಂಚದ ಚರ್ಚುಗಳು ಆ ಪರೀಕ್ಷೆಯಲ್ಲಿ ತಿರಸ್ಕರಿಸಲ್ಪಟ್ಟರು. ಆದರೆ ಆತ್ಮಾಭಿಷಿಕ್ತ ಕ್ರೈಸ್ತರ ನಂಬಿಗಸ್ತ ಜನಶೇಷವು ಪರೀಕ್ಷಿಸಲ್ಪಟ್ಟು, ಬೆಂಕಿಯಲ್ಲೋ ಎಂಬಂತೆ ಶೋಧಿತವಾಗಿ ಸ್ವೀಕರಿಸಲ್ಪಟ್ಟಿತು. “ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವ” ಜನರಾಗಿ ಪರಿಣಮಿಸಿದರು.​—⁠ಮಲಾಕಿಯ 3:⁠3.

5 ಮಲಾಕಿಯನ ಪ್ರವಾದನೆಗೆ ಹೊಂದಿಕೆಯಾಗಿ, ಯೇಸು ತನ್ನ ಶಿಷ್ಯರಿಗೆ ತನ್ನ ‘ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿ’ಯನ್ನು ಗುರುತಿಸಶಕ್ತರಾಗುವಂತೆ ಕೊಟ್ಟ ಸಮ್ಮಿಶ್ರ ಸೂಚನೆಯಲ್ಲಿ ಒಂದು ಸಾಮೂಹಿಕ ‘ಆಳಿನ’ ಗುರುತೂ ಸೇರಿತ್ತು. ಯೇಸು ಹೇಳಿದ್ದು: “ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.” (ಮತ್ತಾಯ 24:​3, 45-47) ಈ ‘ಆಳನ್ನು’ ಪರೀಕ್ಷೆ ಮಾಡಲು ಕ್ರಿಸ್ತನು 1918ರಲ್ಲಿ ‘ಬಂದಾಗ,’ ಅವನು ಆತ್ಮಾಭಿಷಿಕ್ತ ನಂಬಿಗಸ್ತ ಶಿಷ್ಯರ ಜನಶೇಷವನ್ನು ಕಂಡನು. ಇವರು 1879ರಿಂದ ಈ ಪತ್ರಿಕೆಯನ್ನು ಮತ್ತು ಇತರ ಬೈಬಲ್‌ ಆಧಾರಿತ ಪ್ರಕಾಶನಗಳನ್ನು “ಹೊತ್ತು ಹೊತ್ತಿಗೆ ಆಹಾರ” ಕೊಡಲು ಉಪಯೋಗಿಸುತ್ತಿದ್ದರು. ಅವರನ್ನು ಕ್ರಿಸ್ತನು ತನ್ನ ಸಾಮೂಹಿಕ ಉಪಕರಣವಾಗಿ ಅಥವಾ “ಆಳು” ಆಗಿ ಒಪ್ಪಿಕೊಂಡು, 1919ರಲ್ಲಿ ತನ್ನ ಸಕಲ ಭೌಮಿಕ ಆಸ್ತಿಯ ನಿರ್ವಹಣೆಯನ್ನು ವಹಿಸಿಕೊಟ್ಟನು.

ಕ್ರಿಸ್ತನ ಭೌಮಿಕ ಆಸ್ತಿಯ ನಿರ್ವಹಣೆ

6 ಯೇಸು ತನ್ನ ಸಾನಿಧ್ಯ ಮತ್ತು ತನ್ನ ಭೂಪ್ರತಿನಿಧಿ ಆಳಿನ ಅಸ್ತಿತ್ವದ ಕುರಿತು ಸೂಚನೆಯನ್ನು ಕೊಡುವ ಕೆಲವು ತಿಂಗಳಿಗೆ ಮೊದಲು ಇದೇ ಆಳಿನ ಬಗ್ಗೆ ತುಸು ಬೇರೆ ರೀತಿಯಲ್ಲಿ ತಿಳಿಸಿದನು. ಇದು ಆ ಆಳಿನ ಜವಾಬ್ದಾರಿಕೆಯ ಕುರಿತು ಬೆಳಕನ್ನು ಚೆಲ್ಲಿತು. ಯೇಸು ಹೇಳಿದ್ದು: “ಹೊತ್ತು ಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಅಳೆದು ಕೊಡುವದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು ಯಾರು? ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”​—⁠ಲೂಕ 12:​42, 44.

7 ಇಲ್ಲಿ ಆ ಆಳನ್ನು ಮನೆವಾರ್ತೆಯವನು ಎಂದು ಕರೆಯಲಾಗಿದೆ. ಇದರ ಮೂಲ ಗ್ರೀಕ್‌ ಪದವು “ಕುಟುಂಬದ ಅಥವಾ ಆಸ್ತಿಯ ನಿರ್ವಾಹಕ” ಎಂಬುದನ್ನು ಸೂಚಿಸುತ್ತದೆ. ಈ ಸಾಮೂಹಿಕ ಮನೆವಾರ್ತೆಯವನು ಬೈಬಲ್‌ನಿಂದ ಆಸಕ್ತಿಕರವಾದ ವಿಷಯಗಳನ್ನು ಕೇವಲ ವಿವರಿಸುವ ಮೇಧಾವಿಗಳ ಗುಂಪಾಗಿರುವುದಿಲ್ಲ. “ಹೊತ್ತುಹೊತ್ತಿಗೆ” ಪೌಷ್ಟಿಕವಾದ ಆಧ್ಯಾತ್ಮಿಕ ಆಹಾರವನ್ನು ಒದಗಿಸುವುದಲ್ಲದೆ ಆ ‘ನಂಬಿಗಸ್ತ ಮನೆವಾರ್ತೆಯವನು’ ಕ್ರಿಸ್ತನ ಸಕಲ ಸೇವಕ ಸಮೂಹದ ಮೇಲೆ, ಭೂಮಿಯ ಮೇಲಿರುವ ಕ್ರಿಸ್ತನ ಸರ್ವ ಸಭೆ ಮತ್ತು ಅದರ ಚಟುವಟಿಕೆಗಳ ಮೇಲೆ ನಿರ್ವಹಣೆ ಮಾಡಲಿಕ್ಕಾಗಿ “ಎಲ್ಲಾ ಆಸ್ತಿಯ ಮೇಲೆ” ನೇಮಿಸಲ್ಪಡುವನು. ಈ ಆಸ್ತಿಯಲ್ಲಿ ಏನೆಲ್ಲ ಸೇರಿರುವುದು?

8 ಈ ಆಳಿನ ಜವಾಬ್ದಾರಿಗಳಲ್ಲಿ, ಕ್ರಿಸ್ತನ ಅನುಯಾಯಿಗಳು ತಮ್ಮ ಕ್ರೈಸ್ತ ಚಟುವಟಿಕೆಗಳನ್ನು ನಿರ್ವಹಿಸಲು ಬಳಸುವ ಲೌಕಿಕ ಸೌಕರ್ಯಗಳ ಮೇಲ್ವಿಚಾರಣೆ ಸೇರಿದೆ. ಅಂದರೆ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯ ಕಾರ್ಯಾಲಯ, ಬ್ರಾಂಚ್‌ ಆಫೀಸುಗಳು, ಲೋಕಾದ್ಯಂತವಿರುವ ಅವರ ಆರಾಧನಾ ಸ್ಥಳಗಳಾದ ರಾಜ್ಯ ಸಭಾಗೃಹಗಳು ಮತ್ತು ಸಮ್ಮೇಳನ ಸಭಾಂಗಣಗಳ ಮೇಲ್ವಿಚಾರ ಒಳಗೂಡಿವೆ. ಮುಖ್ಯವಾಗಿ, ಸಾಪ್ತಾಹಿಕ ಕೂಟಗಳಲ್ಲಿ, ನಿಯತಕಾಲಿಕ ಸಮ್ಮೇಳನ ಹಾಗೂ ಅಧಿವೇಶನಗಳಲ್ಲಿ ಆಧ್ಯಾತ್ಮಿಕವಾಗಿ ಭಕ್ತಿವರ್ಧಕ ಬೈಬಲ್‌ ಅಧ್ಯಯನ ಕಾರ್ಯಕ್ರಮಗಳ ಮೇಲ್ವಿಚಾರವನ್ನೂ ಈ ಆಳು ನೋಡಿಕೊಳ್ಳುತ್ತಾನೆ. ಈ ಕೂಟಗಳಲ್ಲಿ, ಬೈಬಲ್‌ ಪ್ರವಾದನೆಗಳ ನೆರವೇರಿಕೆಯ ಮಾಹಿತಿ ಮತ್ತು ಬೈಬಲ್‌ ಮೂಲತತ್ತ್ವಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕೆಂಬುದರ ಬಗ್ಗೆ ಸಮಯೋಚಿತ ನಿರ್ದೇಶನವೂ ಕೊಡಲ್ಪಡುತ್ತದೆ.

9 ಈ ಮನೆವಾರ್ತೆಯವನ ಜವಾಬ್ದಾರಿಗಳಲ್ಲಿ “ರಾಜ್ಯದ ಈ ಸುವಾರ್ತೆ”ಯನ್ನು ಸಾರುವ ಮತ್ತು “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡುವ ಸರ್ವಪ್ರಧಾನ ಕಾರ್ಯದ ಮೇಲ್ವಿಚಾರವೂ ಸೇರಿದೆ. ಸಭಾ ಶಿರಸ್ಸಾದ ಕ್ರಿಸ್ತನು ಈ ಅಂತ್ಯಕಾಲದಲ್ಲಿ ಮಾಡಲ್ಪಡುವಂತೆ ಆಜ್ಞಾಪಿಸಿದ್ದೆಲ್ಲವನ್ನೂ ಪಾಲಿಸುವಂತೆ ಜನರಿಗೆ ಬೋಧಿಸುವುದೂ ಅದರಲ್ಲಿ ಒಳಗೂಡಿದೆ. (ಮತ್ತಾಯ 24:14; 28:​19, 20; ಪ್ರಕಟನೆ 12:17) ಈ ಸಾರುವ ಮತ್ತು ಬೋಧಿಸುವ ಕೆಲಸವು ಅಭಿಷಿಕ್ತ ಉಳಿಕೆಯವರ ನಿಷ್ಠಾವಂತ ಸಂಗಾತಿಗಳ “ಮಹಾ ಸಮೂಹ”ವೊಂದನ್ನು ಉತ್ಪನ್ನ ಮಾಡಿರುತ್ತದೆ. ಈ “ಸಮಸ್ತ ಜನಾಂಗಗಳ ಇಷ್ಟವಸ್ತುಗಳು” ನಂಬಿಗಸ್ತ ಆಳು ನಿರ್ವಹಿಸುತ್ತಿರುವ ಕ್ರಿಸ್ತನ ಅಮೂಲ್ಯ ‘ಆಸ್ತಿಯ’ ಭಾಗವಾಗಿದ್ದಾರೆಂಬುದು ನಿಸ್ಸಂದೇಹ.​—⁠ಪ್ರಕಟನೆ 7:9; ಹಗ್ಗಾಯ 2:⁠7.

ಆಳುವರ್ಗವನ್ನು ಪ್ರತಿನಿಧೀಕರಿಸುವ ಆಡಳಿತ ಮಂಡಲಿ

10 ಈ ನಂಬಿಗಸ್ತ ಆಳಿಗಿರುವ ಗಂಭೀರ ಜವಾಬ್ದಾರಿಗಳಲ್ಲಿ ಅನೇಕ ನಿರ್ಣಯಗಳನ್ನು ಮಾಡಬೇಕಾಗಿರುವುದೂ ಸೇರಿದೆಯೆಂಬುದು ವ್ಯಕ್ತ. ಆದಿ ಕ್ರೈಸ್ತ ಸಭೆಯಲ್ಲಿ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರಿಯರೂ ಆಳುವರ್ಗವನ್ನು ಪ್ರತಿನಿಧಿಸುತ್ತಾ ಇಡೀ ಕ್ರೈಸ್ತ ಸಭೆಯ ಪರವಾಗಿ ನಿರ್ಣಯಗಳನ್ನು ಮಾಡಿದರು. (ಅ. ಕೃತ್ಯಗಳು 15:​1, 2) ಪ್ರಥಮ ಶತಮಾನದ ಈ ಆಡಳಿತ ಮಂಡಲಿಯು ಮಾಡಿದ ನಿರ್ಣಯಗಳನ್ನು ಪತ್ರಗಳ ಮತ್ತು ಸಂಚಾರ ಪ್ರತಿನಿಧಿಗಳ ಮುಖೇನ ಸಭೆಗಳಿಗೆ ರವಾನಿಸಲಾಗುತ್ತಿತ್ತು. ಈ ಸ್ಪಷ್ಟ ನಿರ್ದೇಶನಗಳನ್ನು ಆದಿ ಕ್ರೈಸ್ತರು ಸಂತೋಷದಿಂದ ಅಂಗೀಕರಿಸಿದರು. ಮತ್ತು ಆಡಳಿತ ಮಂಡಲಿಯೊಂದಿಗೆ ಅವರ ಇಷ್ಟಪೂರ್ವಕವಾದ ಸಹಕಾರವು ಶಾಂತಿ ಮತ್ತು ಏಕತೆಯನ್ನು ವರ್ಧಿಸಿತು.​—⁠ಅ. ಕೃತ್ಯಗಳು 15:​22-31; 16:​4, 5; ಫಿಲಿಪ್ಪಿ 2:⁠2.

11 ಆದಿ ಕ್ರೈಸ್ತ ಕಾಲಗಳಲ್ಲಿದ್ದಂತೆಯೇ, ಆತ್ಮಾಭಿಷಿಕ್ತ ಮೇಲ್ವಿಚಾರಕರ ಒಂದು ಚಿಕ್ಕ ಗುಂಪು ಇಂದು ಭೂಮಿಯ ಮೇಲಿರುವ ಕ್ರಿಸ್ತನ ಹಿಂಬಾಲಕರ ಆಡಳಿತ ಮಂಡಲಿಯಾಗಿದೆ. ಸಭೆಯ ಶಿರಸ್ಸಾದ ಕ್ರಿಸ್ತನು, ತನ್ನ ಆನ್ವಯಿಕ ಶಕ್ತಿಯ “ಬಲಗೈಯ” ಮೂಲಕ, ಈ ನಂಬಿಗಸ್ತ ಪುರುಷರು ರಾಜ್ಯ ಕಾರ್ಯದ ಉಸ್ತುವಾರಿಯನ್ನು ವಹಿಸುವಾಗ ಅವರನ್ನು ಮಾರ್ಗದರ್ಶಿಸುತ್ತಾನೆ. (ಪ್ರಕಟನೆ 1:​16, 20) ಉದಾಹರಣೆಗಾಗಿ, ದೀರ್ಘಕಾಲ ಆಡಳಿತ ಮಂಡಲಿಯ ಸದಸ್ಯರಾಗಿದ್ದು, ಇತ್ತೀಚೆಗೆ ತನ್ನ ಭೂಯಾತ್ರೆಯನ್ನು ತೀರಿಸಿದ ಆಲ್ಬರ್ಟ್‌ ಶ್ರೋಡರ್‌ ತನ್ನ ಜೀವನಕಥೆಯಲ್ಲಿ ಹೀಗೆ ಬರೆದರು: “ಆಡಳಿತ ಮಂಡಲಿಯು ಪ್ರತಿ ಬುಧವಾರ ಕೂಡಿಬರುವಾಗ ಪ್ರಾರ್ಥನೆಯಲ್ಲಿ ಯೆಹೋವನ ಆತ್ಮದ ಮಾರ್ಗದರ್ಶನವನ್ನು ಯಾಚಿಸುತ್ತ ಕೂಟವನ್ನು ಆರಂಭಿಸುತ್ತದೆ. ನಿರ್ವಹಿಸಲ್ಪಡುವ ಪ್ರತಿಯೊಂದು ಸಂಗತಿ ಮತ್ತು ಮಾಡಲ್ಪಡುವ ಪ್ರತಿಯೊಂದು ನಿರ್ಣಯವು ದೇವರ ವಾಕ್ಯವಾದ ಬೈಬಲಿನೊಂದಿಗೆ ಸಾಮರಸ್ಯದಲ್ಲಿದೆ ಎಂದು ನೋಡಲು ಯಥಾರ್ಥ ಪ್ರಯತ್ನವನ್ನು ಮಾಡಲಾಗುತ್ತದೆ.” * ಇಂತಹ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಲ್ಲಿ ನಾವು ಭರವಸೆಯಿಡಬಲ್ಲೆವು. ವಿಶೇಷವಾಗಿ ಇವರ ವಿಷಯದಲ್ಲಿ, ನಾವು ಅಪೊಸ್ತಲ ಪೌಲನ ಆಜ್ಞೆಗೆ ಕಿವಿಗೊಡಬೇಕು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮ [“ಪ್ರಾಣ,” NW] ಗಳನ್ನು ಕಾಯುವವರಾಗಿದ್ದಾರೆ.”​—⁠ಇಬ್ರಿಯ 13:17.

ನಂಬಿಗಸ್ತ ಆಳಿಗೆ ಯೋಗ್ಯ ಗೌರವವನ್ನು ತೋರಿಸುವುದು

12 ಈ ನಂಬಿಗಸ್ತ ಆಳುವರ್ಗಕ್ಕೆ ಯೋಗ್ಯ ಗೌರವವನ್ನು ತೋರಿಸಲು ಒಂದು ಮೂಲ ಕಾರಣ ಯಾವುದು? ಹಾಗೆ ಗೌರವ ತೋರಿಸುವುದರಿಂದ ನಾವು ಯಜಮಾನನಾದ ಯೇಸು ಕ್ರಿಸ್ತನಿಗೇ ಗೌರವ ತೋರಿಸುತ್ತೇವೆ. ಪೌಲನು ಅಭಿಷಿಕ್ತರ ಬಗ್ಗೆ ಬರೆದುದು: “ಯಾವನು ಸ್ವತಂತ್ರನಾಗಿದ್ದು ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು. ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು.” (1 ಕೊರಿಂಥ 7:​22, 23; ಎಫೆಸ 6:⁠6) ಆದಕಾರಣ, ನಾವು ಈ ನಂಬಿಗಸ್ತ ಆಳು ಮತ್ತು ಅದರ ಆಡಳಿತ ಮಂಡಲಿಗೆ ನಿಷ್ಠೆಯಿಂದ ಅಧೀನರಾಗುವಲ್ಲಿ ಆ ಆಳಿನ ಯಜಮಾನನಾದ ಕ್ರಿಸ್ತನಿಗೆ ಅಧೀನರಾಗುತ್ತೇವೆ. ಕ್ರಿಸ್ತನು ತನ್ನ ಭೌಮಿಕ ಆಸ್ತಿಯನ್ನು ನಿರ್ವಹಣೆ ಮಾಡಲು ಬಳಸುವ ಉಪಕರಣಕ್ಕೆ ನಾವು ತೋರಿಸುವ ಯೋಗ್ಯ ಗೌರವವು, ನಾವು “ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು” ಸಲ್ಲಿಸುವ ಒಂದು ವಿಧವಾಗಿದೆ.​—⁠ಫಿಲಿಪ್ಪಿ 2:11.

13 ಈ ನಂಬಿಗಸ್ತ ಆಳಿಗೆ ಗೌರವವನ್ನು ತೋರಿಸಲಿಕ್ಕಿರುವ ಇನ್ನೊಂದು ಶಾಸ್ತ್ರೀಯ ಕಾರಣವು, ಭೂಮಿಯ ಮೇಲಿರುವ ಅಭಿಷಿಕ್ತ ಕ್ರೈಸ್ತರು ಸಾಂಕೇತಿಕವಾಗಿ, ಯೆಹೋವನು ತನ್ನ ‘ಆತ್ಮದ ಮೂಲಕ’ ವಾಸಿಸುವ “ಆಲಯ”ವಾಗಿರುವುದೇ. ಹೀಗಿರುವುದರಿಂದ ಅವರು “ಪವಿತ್ರ” ಜನರಾಗಿದ್ದಾರೆ. (1 ಕೊರಿಂಥ 3:​16, 17; ಎಫೆಸ 2:​19-22) ಯೇಸು ತನ್ನ ಭೂಆಸ್ತಿಯನ್ನು ವಹಿಸಿಕೊಟ್ಟಿರುವುದು ಈ ಪವಿತ್ರಾಲಯ ವರ್ಗಕ್ಕೆನೇ. ಇದರರ್ಥ, ಕ್ರೈಸ್ತ ಸಭೆಯೊಳಗಿನ ಕೆಲವು ನಿರ್ದಿಷ್ಟ ಹಕ್ಕುಗಳು ಮತ್ತು ಜವಾಬ್ದಾರಿಗಳು ಈ ಸಾಮೂಹಿಕ ಆಳಿಗೆ ಮಾತ್ರವೇ ಸೇರಿರುತ್ತವೆ. ಆದಕಾರಣ, ಈ ನಂಬಿಗಸ್ತ ಆಳು ಮತ್ತು ಅದರ ಆಡಳಿತ ಮಂಡಲಿಯಿಂದ ಬರುವ ನಿರ್ದೇಶಗಳನ್ನು ಅನುಸರಿಸಿ, ಬೆಂಬಲಿಸುವುದು ತಮ್ಮ ಪವಿತ್ರ ಕರ್ತವ್ಯವಾಗಿದೆ ಎಂಬ ವೀಕ್ಷಣವು ಸಭೆಯಲ್ಲಿರುವ ಸರ್ವರಿಗಿರಬೇಕು. ಯಜಮಾನನ ಆಸ್ತಿಯನ್ನು ನಿರ್ವಹಿಸುವುದರಲ್ಲಿ ಈ ಆಳುವರ್ಗಕ್ಕೆ ನೆರವಾಗುವುದನ್ನು “ಬೇರೆ ಕುರಿಗಳು” ನಿಶ್ಚಯವಾಗಿಯೂ ಒಂದು ವಿಶೇಷ ಗೌರವವಾಗಿ ಪರಿಗಣಿಸುತ್ತವೆ.​—⁠ಯೋಹಾನ 10:16.

ನಿಷ್ಠೆಯ ಬೆಂಬಲ ನೀಡುವುದು

14 ಈ ಬೇರೆ ಕುರಿಗಳು ಆಧ್ಯಾತ್ಮಿಕ ಇಸ್ರಾಯೇಲಿನ ಅಭಿಷಿಕ್ತ ಸದಸ್ಯರಿಗೆ ತೋರಿಸುವ ದೀನ ಅಧೀನತೆಯನ್ನು ಯೆಶಾಯನ ಪ್ರವಾದನೆಯು ಮುಂತಿಳಿಸಿತ್ತು: “ಯೆಹೋವನ ಈ ಮಾತನ್ನು ಕೇಳಿರಿ​—⁠ಐಗುಪ್ತದ ಆದಾಯವೂ [“ವೇತನರಹಿತ ದುಡಿಮೆಗಾರರು,” NW] ಕೂಷಿನ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು [“ನಿಮ್ಮ ಹಿಂದಿನಿಂದ ನಡೆಯುವರು” NW]; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು​—⁠ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.” (ಯೆಶಾಯ 45:14) ಇಂದು ಬೇರೆ ಕುರಿಗಳು ಸಾಂಕೇತಿಕವಾಗಿ ಅಭಿಷಿಕ್ತ ಆಳುವರ್ಗ ಮತ್ತು ಅದರ ಆಡಳಿತ ಮಂಡಲಿಯ ನಿರ್ದೇಶನಗಳನ್ನು ಪಾಲಿಸುವ ಮೂಲಕ ಅವರ ಹಿಂದೆ ನಡೆಯುತ್ತವೆ. ಈ ಬೇರೆ ಕುರಿಗಳು “ವೇತನರಹಿತ ದುಡಿಮೆಗಾರ”ರಂತೆ ತಮ್ಮ ಶಾರೀರಿಕ ಬಲ ಮತ್ತು ತಮ್ಮ ಸಂಪನ್ಮೂಲಗಳನ್ನು ಕ್ರಿಸ್ತನು ಭೂಮಿಯಲ್ಲಿರುವ ತನ್ನ ಅಭಿಷಿಕ್ತ ಅನುಯಾಯಿಗಳಿಗೆ ನೇಮಿಸಿದ ಲೋಕವ್ಯಾಪಕ ಸಾರುವ ಕೆಲಸದ ಬೆಂಬಲಾರ್ಥವಾಗಿ ಸ್ವಇಷ್ಟದಿಂದ ವ್ಯಯಿಸುತ್ತಾರೆ.​—⁠ಅ. ಕೃತ್ಯಗಳು 1:8; ಪ್ರಕಟನೆ 12:17.

15 ಆಳುವರ್ಗ ಮತ್ತು ಅದರ ಆಡಳಿತ ಮಂಡಲಿಯ ಮೇಲ್ವಿಚಾರಣೆಯ ಕೆಳಗೆ ಯೆಹೋವನ ಸೇವೆಮಾಡಲು ಬೇರೆ ಕುರಿಗಳು ಹರ್ಷಿತರೂ ಕೃತಜ್ಞರೂ ಆಗಿದ್ದಾರೆ. ಅವರು ಅಭಿಷಿಕ್ತರನ್ನು ‘ದೇವರ ಇಸ್ರಾಯೇಲ್ಯರ’ ಸದಸ್ಯರು ಎಂದು ಗುರುತಿಸುತ್ತಾರೆ. (ಗಲಾತ್ಯ 6:16) ಈ ಆಧ್ಯಾತ್ಮಿಕ ಇಸ್ರಾಯೇಲ್ಯರ ಜೊತೆಯಲ್ಲಿ ಸಾಂಕೇತಿಕವಾಗಿ ‘ವಿದೇಶೀಯರೂ’ ‘ಅನ್ಯರೂ’ ಆಗಿರುವ ಇವರು, ‘ಯೆಹೋವನ ಯಾಜಕರು’ ಮತ್ತು “ದೇವರ ಸೇವಕರು” ಆಗಿರುವ ಅಭಿಷಿಕ್ತರ ನಿರ್ದೇಶನದ ಕೆಳಗೆ “ಉಳುವವರೂ” “ತೋಟಗಾರರೂ” ಆಗಿ ಸಂತೋಷದಿಂದ ಸೇವೆಮಾಡುತ್ತಾರೆ. (ಯೆಶಾಯ 61:​5, 6) ಅವರು ರಾಜ್ಯದ ಈ ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಎಲ್ಲ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವುದರಲ್ಲಿ ಹುರುಪಿನಿಂದ ಭಾಗವಹಿಸುತ್ತಾರೆ. ಹೊಸದಾಗಿ ಕಂಡುಕೊಳ್ಳುವ ಕುರಿಸದೃಶರ ಕುರಿಪಾಲನೆ ಮತ್ತು ಪೋಷಣೆಯಲ್ಲಿ ಅವರು ಆಳುವರ್ಗಕ್ಕೆ ತಮ್ಮ ಪೂರ್ಣಹೃದಯದ ನೆರವನ್ನು ನೀಡುತ್ತಾರೆ.

16 ನಂಬಿಗಸ್ತ ಆಳು ಕಾಲೋಚಿತವಾದ ಆಧ್ಯಾತ್ಮಿಕ ಆಹಾರವನ್ನು ಒದಗಿಸುವುದರಲ್ಲಿ ಮಾಡಿರುವ ಶ್ರದ್ಧಾಪೂರ್ವಕ ಪ್ರಯತ್ನಗಳು ತಮಗೆ ಮಹಾ ಪ್ರಯೋಜನಗಳನ್ನು ತಂದಿವೆ ಎಂಬುದನ್ನು ಬೇರೆ ಕುರಿಗಳು ಒಪ್ಪಿಕೊಳ್ಳುತ್ತಾರೆ. ನಂಬಿಗಸ್ತನೂ ವಿವೇಕಿಯೂ ಆದ ಆಳು ಇಲ್ಲದಿರುತ್ತಿದ್ದರೆ ತಮಗೆ ಯೆಹೋವನ ಪರಮಾಧಿಕಾರ, ಆತನ ನಾಮದ ಪವಿತ್ರೀಕರಣ, ದೇವರ ರಾಜ್ಯ, ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲ, ಪ್ರಾಣ, ಸತ್ತವರ ಸ್ಥಿತಿ ಹಾಗೂ ಯೆಹೋವನ, ಆತನ ಮಗನ ಮತ್ತು ಪವಿತ್ರಾತ್ಮದ ನಿಜ ಗುರುತುಗಳೇ ಮೊದಲಾದ ಅಮೂಲ್ಯ ಬೈಬಲ್‌ ಸತ್ಯಗಳ ಕುರಿತು ಸ್ವಲ್ಪವೂ ತಿಳಿದಿರುತ್ತಿರಲಿಲ್ಲ ಎಂದು ಅವರು ದೀನತೆಯಿಂದ ಒಪ್ಪಿಕೊಳ್ಳುತ್ತಾರೆ. ಬೇರೆ ಕುರಿಗಳು ಆಳವಾದ ಕೃತಜ್ಞತೆ ಮತ್ತು ನಿಷ್ಠೆಯಿಂದಾಗಿಯೇ ಈ ಅಂತ್ಯಕಾಲದಲ್ಲಿ ಕ್ರಿಸ್ತನ ಅಭಿಷಿಕ್ತ ‘ಸಹೋದರರಿಗೆ’ ಪ್ರೀತಿಪೂರ್ವಕವಾದ ಬೆಂಬಲವನ್ನು ನೀಡುತ್ತವೆ.​—⁠ಮತ್ತಾಯ 25:40.

17 ಅಭಿಷಿಕ್ತರು ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವ ಕಾರಣ, ಕ್ರಿಸ್ತನ ಆಸ್ತಿಯ ನಿರ್ವಹಣೆಯನ್ನು ನೋಡಿಕೊಳ್ಳಲು ಅವರು ಎಲ್ಲ ಸಭೆಗಳಲ್ಲಿ ಇಂದು ಉಪಸ್ಥಿತರಾಗಿರುವುದು ಅಸಾಧ್ಯ. ಆದುದರಿಂದ ಆಡಳಿತ ಮಂಡಲಿಯು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳಲ್ಲಿ, ಡಿಸ್ಟ್ರಿಕ್ಟ್‌ಗಳಲ್ಲಿ, ಸರ್ಕಿಟ್‌ಗಳಲ್ಲಿ ಮತ್ತು ಸಭೆಗಳಲ್ಲಿ ಬೇರೆ ಕುರಿಗಳ ಪುರುಷರನ್ನು ಮೇಲ್ವಿಚಾರಣೆಯ ಸ್ಥಾನಗಳಿಗೆ ನೇಮಿಸುತ್ತದೆ. ಈ ಉಪಕುರಿಪಾಲರ ಕಡೆಗೆ ನಮಗಿರುವ ಮನೋಭಾವವು ಕ್ರಿಸ್ತನಿಗೂ ಅವನ ನಂಬಿಗಸ್ತ ಆಳಿಗೂ ನಮಗಿರುವ ನಿಷ್ಠೆಯ ಮೇಲೆ ಪ್ರಭಾವ ಬೀರುತ್ತದೆಯೆ? ಇದನ್ನು ಮುಂದಿನ ಲೇಖನದಲ್ಲಿ ಪರಿಗಣಿಸುವೆವು. (w07 4/1)

[ಪಾದಟಿಪ್ಪಣಿಗಳು]

^ ಪ್ಯಾರ. 7 ಈ ವಿಷಯದ ಸವಿವರ ಚರ್ಚೆಗಾಗಿ 2004, ಮಾರ್ಚ್‌ 1ರ ಕಾವಲಿನಬುರುಜು ಪುಟ. 13-18ನ್ನು ಮತ್ತು 1993, ಮಾರ್ಚ್‌ 1ರ ಪುಟ 13ನ್ನು ನೋಡಿ.

^ ಪ್ಯಾರ. 16 ಈ ಪತ್ರಿಕೆಯ 1988, ಮಾರ್ಚ್‌ 1ರ (ಇಂಗ್ಲಿಷ್‌) ಸಂಚಿಕೆಯ ಪುಟ. 10-17ನ್ನು ನೋಡಿ.

ಪುನರ್ವಿಮರ್ಶೆಗಾಗಿ

• ನಮ್ಮ ನಾಯಕನು ಯಾರು ಮತ್ತು ಸಭೆಗಳ ಸ್ಥಿತಿಗತಿಗಳ ಅರಿವು ಅವನಿಗಿದೆಯೆಂದು ಯಾವುದು ತೋರಿಸುತ್ತದೆ?

• “ಆಲಯ” ಪರೀಕ್ಷೆಯಲ್ಲಿ, ಯಾರು ನಂಬಿಗಸ್ತ ಆಳಾಗಿ ವರ್ತಿಸುತ್ತಿದ್ದರೆಂದು ಕಂಡುಹಿಡಿಯಲಾಯಿತು ಮತ್ತು ಅವರಿಗೆ ಯಾವ ಆಸ್ತಿಯನ್ನು ವಹಿಸಿಕೊಡಲಾಯಿತು?

• ನಂಬಿಗಸ್ತ ಆಳನ್ನು ನಿಷ್ಠೆಯಿಂದ ಬೆಂಬಲಿಸಲು ಯಾವ ಶಾಸ್ತ್ರಾಧಾರಿತ ಕಾರಣಗಳಿವೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ನಮ್ಮ ನಾಯಕನು ಯಾರು ಎಂದು ಬೈಬಲ್‌ ತಿಳಿಸುತ್ತದೆ? (ಬಿ) ಕ್ರಿಸ್ತನು ಕ್ರೈಸ್ತ ಸಭೆಯನ್ನು ಕ್ರಿಯಾಶೀಲನಾಗಿ ನಡೆಸುತ್ತಿದ್ದಾನೆಂದು ಯಾವುದು ತೋರಿಸುತ್ತದೆ?

3. ಕ್ರಿಸ್ತನನ್ನು ಶಿರಸ್ಸಿಗೂ ಮತ್ತು ಅವನ ಸಭೆಯನ್ನು ದೇಹಕ್ಕೂ ಹೋಲಿಸುವುದು ಸೂಕ್ತವಾಗಿದೆ ಏಕೆ?

4. ಮಲಾಕಿಯನ ಪ್ರವಾದನೆಗೆ ಅನುಸಾರ ಯೆಹೋವನೂ ಕ್ರಿಸ್ತ ಯೇಸುವೂ ಪರೀಕ್ಷೆಗಾಗಿ ಆಧ್ಯಾತ್ಮಿಕ ಆಲಯಕ್ಕೆ ಬಂದಾಗ ಏನನ್ನು ಕಂಡುಕೊಂಡರು?

5. ತನ್ನ ‘ಸಾನಿಧ್ಯದ’ ಕುರಿತ ಯೇಸುವಿನ ಪ್ರವಾದನೆಗೆ ಹೊಂದಿಕೆಯಲ್ಲಿ ನಂಬಿಗಸ್ತ ‘ಆಳು’ ಯಾರೆಂಬುದಾಗಿ ರುಜುವಾದನು?

6, 7. (ಎ) ಯೇಸು ತನ್ನ ನಂಬಿಗಸ್ತ ‘ಆಳಿನ’ ಸಂಬಂಧದಲ್ಲಿ ಇನ್ನಾವ ಪದರೂಪವನ್ನು ಬಳಸಿದನು? (ಬಿ) “ಮನೆವಾರ್ತೆಯವನು” ಎಂಬ ಯೇಸುವಿನ ಪದಬಳಕೆಯ ಅರ್ಥವೇನು?

8, 9. ಈ ಆಳು ಯಾವ “ಆಸ್ತಿ”ಯನ್ನು ನಿರ್ವಹಿಸಲು ನೇಮಿಸಲ್ಪಟ್ಟಿರುತ್ತಾನೆ?

10. ಪ್ರಥಮ ಶತಮಾನದಲ್ಲಿ ನಿರ್ಣಯ ಮಾಡುವ ಯಾವ ಮಂಡಲಿ ಅಸ್ತಿತ್ವದಲ್ಲಿತ್ತು ಮತ್ತು ಸಭೆಗಳ ಮೇಲೆ ಇದು ಯಾವ ಪರಿಣಾಮಬೀರಿತು?

11. ತನ್ನ ಸಭೆಯನ್ನು ಮಾರ್ಗದರ್ಶಿಸಲು ಕ್ರಿಸ್ತನು ಇಂದು ಯಾರನ್ನು ಉಪಯೋಗಿಸುತ್ತಿದ್ದಾನೆ ಮತ್ತು ಈ ಅಭಿಷಿಕ್ತ ಕ್ರೈಸ್ತರ ಗುಂಪನ್ನು ನಾವು ಹೇಗೆ ವೀಕ್ಷಿಸಬೇಕು?

12, 13. ಆಳುವರ್ಗಕ್ಕೆ ಗೌರವ ತೋರಿಸಲು ಯಾವ ಶಾಸ್ತ್ರೀಯ ಕಾರಣಗಳಿವೆ?

14. ಯೆಶಾಯನು ಪ್ರವಾದಿಸಿದಂತೆ, ಬೇರೆ ಕುರಿಗಳು ಅಭಿಷಿಕ್ತ ಆಳು ವರ್ಗದ ಹಿಂದಿನಿಂದ ನಡೆಯುವುದು ಮತ್ತು “ವೇತನರಹಿತ ದುಡಿಮೆಗಾರರು” ಆಗುವುದು ಹೇಗೆ?

15. ಯೆಶಾಯ 61:​5, 6ರ ಪ್ರವಾದನೆಯು ಬೇರೆ ಕುರಿಗಳ ಮತ್ತು ಆಧ್ಯಾತ್ಮಿಕ ಇಸ್ರಾಯೇಲ್ಯರ ನಡುವಣ ಸಂಬಂಧವನ್ನು ಹೇಗೆ ಮುಂತಿಳಿಸುತ್ತದೆ?

16. ನಂಬಿಗಸ್ತನೂ ವಿವೇಕಿಯೂ ಆದ ಆಳಿಗೆ ಪ್ರೀತಿಪೂರ್ವಕ ಬೆಂಬಲವನ್ನು ನೀಡುವಂತೆ ಬೇರೆ ಕುರಿಗಳನ್ನು ಯಾವುದು ಪ್ರಚೋದಿಸುತ್ತದೆ?

17. ಯಾವುದನ್ನು ಮಾಡುವುದು ಆಡಳಿತ ಮಂಡಲಿಗೆ ಆವಶ್ಯಕವೆಂದು ತೋರಿಬಂದಿದೆ ಮತ್ತು ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

[ಪುಟ 23ರಲ್ಲಿರುವ ಚಿತ್ರಗಳು]

“ಮನೆವಾರ್ತೆಯವನು” ಮೇಲ್ವಿಚಾರ ನಡೆಸುವ “ಆಸ್ತಿ”ಯಲ್ಲಿ ಲೌಕಿಕ ಸ್ವತ್ತುಗಳು, ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಸಾರುವ ಚಟುವಟಿಕೆ ಸೇರಿವೆ

[ಪುಟ 25ರಲ್ಲಿರುವ ಚಿತ್ರ]

ಬೇರೆ ಕುರಿ ವರ್ಗದ ಸದಸ್ಯರು ತಮ್ಮ ಹುರುಪಿನ ಸಾರುವಿಕೆಯ ಮೂಲಕ ನಂಬಿಗಸ್ತ ಆಳುವರ್ಗಕ್ಕೆ ಬೆಂಬಲ ನೀಡುತ್ತಾರೆ