ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೆವ್ವಗಳನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು?

ದೆವ್ವಗಳನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು?

ದೆವ್ವಗಳನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು?

“ತಮ್ಮ ದೊರೆತನವನ್ನು ಕಾಪಾಡದೆ ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಿ ಆಗುವ ದಂಡನೆಯ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಇಟ್ಟಿದ್ದಾನೆ.”​—⁠ಯೂದ 6.

“ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” ಎಂದು ಹೇಳುತ್ತಾ ಅಪೊಸ್ತಲ ಪೇತ್ರನು ಸೈತಾನನ ಕುರಿತಾಗಿ ಎಚ್ಚರಿಕೆ ಕೊಟ್ಟನು. (1 ಪೇತ್ರ 5:8) ದೆವ್ವಗಳ ಬಗ್ಗೆ ಅಪೊಸ್ತಲ ಪೌಲನು ಹೇಳಿದ್ದು: “ನೀವು ದೆವ್ವಗಳೊಡನೆ ಭಾಗಿಗಳಾಗಿರಬೇಕೆಂಬದು ನನ್ನ ಇಷ್ಟವಲ್ಲ. ನೀವು ಕರ್ತನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾರಿರಿ; ಕರ್ತನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ.”​—⁠1 ಕೊರಿಂಥ 10:20, 21.

2 ಆದರೆ ಪಿಶಾಚನಾದ ಸೈತಾನನು ಮತ್ತು ದೆವ್ವಗಳು ಯಾರು? ಅವರು ಅಸ್ತಿತ್ವಕ್ಕೆ ಬಂದದ್ದು ಯಾವಾಗ ಮತ್ತು ಹೇಗೆ? ಅವರನ್ನು ದೇವರು ಸೃಷ್ಟಿಸಿದನೊ? ಮಾನವರ ಮೇಲೆ ಅವರು ಬೀರುವ ಪ್ರಭಾವವು ಎಷ್ಟು ಪ್ರಬಲವಾದದ್ದು? ಅವರ ವಿರುದ್ಧ ನಮಗೆ ಏನಾದರೂ ಸಂರಕ್ಷಣೆಯಿದೆಯೋ ಮತ್ತು ಇರುವಲ್ಲಿ ಅದೇನಾಗಿದೆ?

ಸೈತಾನನು ಮತ್ತು ದೆವ್ವಗಳು ಅಸ್ತಿತ್ವಕ್ಕೆ ಬಂದದ್ದು ಹೇಗೆ?

3 ಏದೆನ್‌ ತೋಟದಲ್ಲಿ ಮಾನವ ಇತಿಹಾಸದ ಆರಂಭದಲ್ಲಿ ದೇವರ ದೂತನೊಬ್ಬನು ದಂಗೆಕೋರನಾದನು. ಏಕೆ? ಯೆಹೋವನ ಸ್ವರ್ಗೀಯ ಏರ್ಪಾಡಿನಲ್ಲಿ ತನಗಿದ್ದ ಪಾತ್ರದ ವಿಷಯದಲ್ಲಿ ಅವನು ತೃಪ್ತನಾಗಿರದಿದ್ದ ಕಾರಣವೇ. ಆದುದರಿಂದ ಆದಾಮಹವ್ವರ ಸೃಷ್ಟಿಯಾದಾಗ ಅವನಿಗೆ, ಸತ್ಯ ದೇವರಿಗೆ ಅವರು ತೋರಿಸುತ್ತಿದ್ದ ವಿಧೇಯತೆ ಮತ್ತು ಆರಾಧನೆಯನ್ನು ತನ್ನ ಕಡೆಗೆ ಸೆಳೆಯಲು ಒಂದು ಅವಕಾಶ ಸಿಕ್ಕಿತು. ಹೀಗೆ ದೇವರ ವಿರುದ್ಧ ದಂಗೆಯೆದ್ದು, ಪ್ರಥಮ ಮಾನವ ಜೋಡಿಯು ಪಾಪದ ಮಾರ್ಗಕ್ಕಿಳಿಯುವಂತೆ ಪ್ರೇರಿಸುವ ಮೂಲಕ ಈ ದೇವದೂತನು ತನ್ನನ್ನೇ ಪಿಶಾಚನಾದ ಸೈತಾನನನ್ನಾಗಿ ಮಾಡಿಕೊಂಡನು. ಕಾಲಾನಂತರ, ಬೇರೆ ದೇವದೂತರು ಸಹ ಅವನ ದಂಗೆಯಲ್ಲಿ ಜೊತೆಗೂಡಿದರು. ಹೇಗೆ?​—⁠ಆದಿಕಾಂಡ 3:​1-6; ರೋಮಾಪುರ 5:12; ಪ್ರಕಟನೆ 12:⁠9.

4 ನೋಹನ ದಿನದ ಜಲಪ್ರಳಯಕ್ಕೆ ಮುಂಚೆ ಒಂದು ಸಮಯದಲ್ಲಿ, ಕೆಲವು ದೇವದೂತರು ಭೂಮಿಯ ಮೇಲಿದ್ದ ಸ್ತ್ರೀಯರ ವಿಷಯದಲ್ಲಿ ಸಾಮಾನ್ಯವಲ್ಲದ ಆಸಕ್ತಿಯನ್ನು ತೋರಿಸಲಾರಂಭಿಸಿದರು ಎಂದು ಪ್ರೇರಿತ ಶಾಸ್ತ್ರವಚನಗಳು ತಿಳಿಸುತ್ತವೆ. ಸ್ವರ್ಗದಲ್ಲಿದ್ದ “ದೇವಪುತ್ರರು” ತಪ್ಪಾದ ಉದ್ದೇಶದಿಂದ “ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ”ದರೆಂದು ಬೈಬಲ್‌ ಹೇಳುತ್ತದೆ. ಅನಂತರ ಅವರು “ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.” ದೇವಪುತ್ರರು ಮತ್ತು ಮನುಷ್ಯಪುತ್ರಿಯರ ಈ ಸಂಗಮವು ಅಸ್ವಾಭಾವಿಕವಾಗಿತ್ತು. ಅವರಿಂದ ಹುಟ್ಟಿದ ಮಕ್ಕಳು ನೆಫೀಲಿಯರೆಂದು ಕುಖ್ಯಾತರಾದ ಮಿಶ್ರ ಸಂತಾನವಾಗಿದ್ದರು. (ಆದಿಕಾಂಡ 6:2-4) ಈ ರೀತಿಯಲ್ಲಿ ದೇವರಿಗೆ ಅವಿಧೇಯರಾದ ಆತ್ಮಜೀವಿಗಳು, ಯೆಹೋವನ ವಿರುದ್ಧದ ದಂಗೆಯಲ್ಲಿ ಸೈತಾನನೊಂದಿಗೆ ಜೊತೆಗೂಡಿದರು.

5 ಯೆಹೋವನು ಮಾನವಕುಲದ ಮೇಲೆ ಜಲಪ್ರಳಯ ತಂದಾಗ, ಆ ನೆಫೀಲಿಯರು ಮತ್ತವರ ಮಾನವ ತಾಯಂದಿರು ನಾಶವಾಗಿಹೋದರು. ಆದರೆ ಆ ಪ್ರಳಯದಿಂದ ತಪ್ಪಿಸಿಕೊಳ್ಳಲು ದಂಗೆಕೋರ ದೂತರು ತಮ್ಮ ಮಾನವ ದೇಹಗಳನ್ನು ಕಳಚಿಹಾಕಿ, ಪುನಃ ಆತ್ಮಜೀವಿಗಳ ಕ್ಷೇತ್ರಕ್ಕೆ ಅಂದರೆ ಸ್ವರ್ಗಕ್ಕೆ ಹಿಂದಿರುಗಲೇಬೇಕಾಯಿತು. ಅಲ್ಲಿ ಅವರು ದೇವರೊಂದಿಗೆ ತಮ್ಮ “ತಕ್ಕ” ಅಥವಾ ಮೂಲ “ವಾಸಸ್ಥಾನವನ್ನು” ಪುನಃ ಪಡೆಯಲು ಸಾಧ್ಯವಾಗಲಿಲ್ಲ. ಅದಕ್ಕೆ ಬದಲಾಗಿ ಅವರನ್ನು ಟಾರ್ಟರಸ್‌ ಎಂದು ಕರೆಯಲಾಗುವ ಆಧ್ಯಾತ್ಮಿಕ “ಕತ್ತಲೇ ಗುಂಡಿಗಳಿಗೆ” ಹಾಕಲಾಯಿತು.​—⁠ಯೂದ 6; 2 ಪೇತ್ರ 2:⁠4.

6 ಆ ದುಷ್ಟ ದೂತರು ತಮ್ಮ “ತಕ್ಕ ವಾಸಸ್ಥಾನವನ್ನು” ಕಳೆದುಕೊಂಡಂದಿನಿಂದ ಸೈತಾನನ ದೆವ್ವ-ಸಂಗಡಿಗರಾಗಿದ್ದಾರೆ ಮತ್ತು ಅವನ ಕೇಡುಭರಿತ ಅಭಿರುಚಿಗಳನ್ನು ಪ್ರವರ್ಧಿಸುತ್ತಿದ್ದಾರೆ. ಆ ಸಮಯದಂದಿನಿಂದ ಅವುಗಳಿಗೆ ಮಾನವ ದೇಹಗಳನ್ನು ಧರಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಆದರೆ, ವಿಭಿನ್ನ ರೀತಿಯ ವಿಕೃತ ಕಾಮದಲ್ಲಿ ತೊಡಗುವಂತೆ ಅವು ಸ್ತ್ರೀಪುರುಷರನ್ನು ಪ್ರೇರಿಸಬಲ್ಲವು. ದೆವ್ವಗಳು ಮಾನವರನ್ನು ಪ್ರೇತಾತ್ಮವ್ಯವಹಾರದ ಮೂಲಕವೂ ಸಕ್ರಿಯ ರೀತಿಯಲ್ಲಿ ವಂಚಿಸುತ್ತಿವೆ. ಈ ಪ್ರೇತಾತ್ಮವ್ಯವಹಾರದಲ್ಲಿ, ಮಾಟಮಾಡುವುದು, ಯಂತ್ರಮಂತ್ರ ಸೇರಿರುತ್ತದೆ ಮಾತ್ರವಲ್ಲ ಪ್ರೇತಾತ್ಮ ಮಾಧ್ಯಮಗಳಾಗಿರುವ ವ್ಯಕ್ತಿಗಳು ಸಹ ಒಳಗೂಡಿರುತ್ತಾರೆ. (ಧರ್ಮೋಪದೇಶಕಾಂಡ 18:​10-13; 2 ಪೂರ್ವಕಾಲವೃತ್ತಾಂತ 33:⁠6) ಪಿಶಾಚನಿಗಿರುವಂತೆಯೇ ಈ ದುಷ್ಟ ದೂತರ ಅಂತ್ಯಫಲವು ನಿತ್ಯ ನಾಶನವಾಗಿದೆ. (ಮತ್ತಾಯ 25:41; ಪ್ರಕಟನೆ 20:10) ಆದರೆ ಅವರ ಆ ನಾಶನದ ವರೆಗೆ, ನಾವು ದೃಢರಾಗಿ ನಿಂತು ಅವುಗಳನ್ನು ಪ್ರತಿರೋಧಿಸಬೇಕು. ಸೈತಾನನು ಎಷ್ಟು ಪ್ರಬಲನಾಗಿದ್ದಾನೆ ಮತ್ತು ನಾವು ಅವನನ್ನು ಹಾಗೂ ಅವನ ದೆವ್ವಗಳನ್ನು ಯಶಸ್ವಿಯಾಗಿ ಪ್ರತಿರೋಧಿಸುವುದು ಹೇಗೆಂಬುದನ್ನು ಪರಿಗಣಿಸುವುದು ವಿವೇಕಯುತ ಸಂಗತಿಯಾಗಿದೆ.

ಸೈತಾನನು ಎಷ್ಟು ಶಕ್ತಿಶಾಲಿಯಾಗಿದ್ದಾನೆ?

7 ಸೈತಾನನು ಇತಿಹಾಸದಾದ್ಯಂತ ಯೆಹೋವನ ಮೇಲೆ ಮಿಥ್ಯಾಪವಾದಗಳನ್ನು ಹೊರಿಸಿದ್ದಾನೆ. (ಜ್ಞಾನೋಕ್ತಿ 27:11) ಅವನು ಮಾನವಕುಲದಲ್ಲೂ ಹೆಚ್ಚಿನವರನ್ನು ಪ್ರಭಾವಿಸಿದ್ದಾನೆ. “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು 1 ಯೋಹಾನ 5:19 ಹೇಳುತ್ತದೆ. ಆದುದರಿಂದಲೇ, ಪಿಶಾಚನು ಯೇಸುವನ್ನು ಶೋಧನೆಗೊಳಪಡಿಸಿದಾಗ ಅವನಿಗೆ ಅಧಿಕಾರವನ್ನೂ, “ಲೋಕದ ಎಲ್ಲಾ ರಾಜ್ಯಗಳ” ವೈಭವವನ್ನೂ ನೀಡಲು ಶಕ್ತನಾಗಿದ್ದನು. (ಲೂಕ 4:​5-7) ಸೈತಾನನ ಕುರಿತಾಗಿ ಅಪೊಸ್ತಲ ಪೌಲನು ಹೇಳುವುದು: “ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವದಾದರೆ ನಾಶನಮಾರ್ಗದಲ್ಲಿರುವವರಿಗೇ ಮರೆಯಾಗಿರುವದು. ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.” (2 ಕೊರಿಂಥ 4:3, 4) ಸೈತಾನನು “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ” ಆಗಿದ್ದಾನಾದರೂ ತಾನು “ಪ್ರಕಾಶರೂಪವುಳ್ಳ ದೇವದೂತ”ನಾಗಿರುವ ಚಿತ್ರಣವನ್ನು ಕೊಡುತ್ತಾನೆ. (ಯೋಹಾನ 8:44; 2 ಕೊರಿಂಥ 11:14) ಈ ಲೋಕದ ಧುರೀಣರು ಮತ್ತು ಅವರ ಪ್ರಜೆಗಳ ಮನಸ್ಸುಗಳನ್ನು ಮಂಕುಮಾಡಲು ಬೇಕಾದ ಶಕ್ತಿ ಹಾಗೂ ವಿಧಾನಗಳು ಅವನ ಬಳಿ ಇವೆ. ತಪ್ಪು ಮಾಹಿತಿ ಮತ್ತು ಧಾರ್ಮಿಕ ಮಿಥ್ಯೆಗಳು ಹಾಗೂ ಸುಳ್ಳುಗಳನ್ನು ಬಳಸುತ್ತಾ ಅವನು ಮಾನವಕುಲವನ್ನು ವಂಚಿಸಿದ್ದಾನೆ.

8 ಸೈತಾನನ ಶಕ್ತಿ ಮತ್ತು ಪ್ರಭಾವವು ಪ್ರವಾದಿ ದಾನಿಯೇಲನ ಕಾಲದಲ್ಲಿ ಅಂದರೆ ಸಾಮಾನ್ಯ ಶಕಕ್ಕಿಂತಲೂ ಐದು ಶತಮಾನಗಳ ಹಿಂದೆ ಸ್ಪಷ್ಟವಾಗಿ ವ್ಯಕ್ತವಾಗಿತ್ತು. ಯೆಹೋವನು ದಾನಿಯೇಲನಿಗೆ ಉತ್ತೇಜನದಾಯಕ ಸಂದೇಶವನ್ನು ತಲಪಿಸಲು ಒಬ್ಬ ದೇವದೂತನನ್ನು ಕಳುಹಿಸಿದಾಗ, “ಪರ್ಷಿಯ ರಾಜ್ಯದ [ಆತ್ಮಜೀವಿ] ಪ್ರಭು” ಅವನನ್ನು ತಡೆಗಟ್ಟಿದನು. ಆ ನಂಬಿಗಸ್ತ ದೇವದೂತನು 21 ದಿನಗಳ ವರೆಗೆ ಹೀಗೆ ತಡೆಯಲ್ಪಟ್ಟನು. ಆದರೆ “ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ಮೀಕಾಯೇಲನು” ಅವನಿಗೆ ಸಹಾಯಮಾಡಲು ಬಂದನು. ಅದೇ ವೃತ್ತಾಂತದಲ್ಲಿ “ಗ್ರೀಕಿನ [ದೆವ್ವ] ಪ್ರಭು”ವಿನ ಕುರಿತಾಗಿಯೂ ತಿಳಿಸಲಾಗಿದೆ. (ದಾನಿಯೇಲ 10:​12, 13, 20, NIBV) ಪ್ರಕಟನೆ 13:​1, 2ರಲ್ಲಿ, ರಾಜಕೀಯ ಕಾಡುಮೃಗಕ್ಕೆ “ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ” ಕೊಡುವ “ಘಟಸರ್ಪ”ನಾಗಿ ಸೈತಾನನನ್ನು ಚಿತ್ರಿಸಲಾಗಿದೆ.

9 ಹೀಗಿರುವುದರಿಂದ ಅಪೊಸ್ತಲ ಪೌಲನು ಬರೆದ ಈ ಮಾತುಗಳು ಆಶ್ಚರ್ಯ ಹುಟ್ಟಿಸುವುದಿಲ್ಲ: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” (ಎಫೆಸ 6:12) ಇಂದು ಕೂಡ ಪಿಶಾಚನಾದ ಸೈತಾನನ ನಿಯಂತ್ರಣದ ಕೆಳಗಿರುವ ದೆವ್ವಪಡೆಗಳು ಅದೃಶ್ಯರಾಗಿ, ಮಾನವ ಅಧಿಪತಿಗಳು ಮತ್ತು ಮಾನವಕುಲದಲ್ಲಿ ಹೆಚ್ಚಿನವರನ್ನು ಪ್ರಭಾವಿಸುತ್ತಿವೆ. ಇವರು, ಹೇಳಲಾಗದಷ್ಟು ಘೋರವಾದ ಸಾಮೂಹಿಕ ಹತ್ಯೆಗಳು, ಭಯೋತ್ಪಾದನೆ ಮತ್ತು ಕೊಲೆಗಳನ್ನು ನಡೆಸುವಂತೆ ದೆವ್ವಗಳು ಚಿತಾಯಿಸುತ್ತಿರುತ್ತವೆ. ಈ ಪ್ರಬಲ ಆತ್ಮಜೀವಿ ಪಡೆಗಳನ್ನು ನಾವು ಹೇಗೆ ಯಶಸ್ವಿಯಾಗಿ ಪ್ರತಿರೋಧಿಸಬಲ್ಲೆವು ಎಂಬುದನ್ನು ಈಗ ಪರೀಕ್ಷಿಸೋಣ.

ದೆವ್ವಗಳ ವಿರುದ್ಧ ನಮಗೆ ಯಾವ ರಕ್ಷಣೆಯಿದೆ?

10 ನಾವು ಸೈತಾನನನ್ನಾಗಲಿ ಅವನ ದುಷ್ಟ ದೂತರನ್ನಾಗಲಿ ನಮ್ಮ ಸ್ವಂತ ಶಾರೀರಿಕ ಇಲ್ಲವೆ ಮಾನಸಿಕ ಬಲದಿಂದ ಪ್ರತಿರೋಧಿಸಲಾರೆವು. ಪೌಲನು ನಮಗೆ ಸಲಹೆಕೊಡುವುದು: “ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ.” ಸಂರಕ್ಷಣೆಗಾಗಿ ನಾವು ದೇವರ ಮರೆಹೋಗಬೇಕು. ಪೌಲನು ಕೂಡಿಸಿ ಹೇಳಿದ್ದು: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ಸಂಪೂರ್ಣ ರಕ್ಷಾಕವಚವನ್ನು,” NW] ಧರಿಸಿಕೊಳ್ಳಿರಿ. ಆದದರಿಂದ ಕಠಿನ ಯುದ್ಧವು ನಡೆಯುವ ದಿವಸದಲ್ಲಿ ಆ ವೈರಿಗಳನ್ನು ಎದುರಿಸುವದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ಜಯಶಾಲಿಗಳಾಗಿ ನಿಲ್ಲುವದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು [“ಸಂಪೂರ್ಣ ರಕ್ಷಾಕವಚವನ್ನು,” NW] ತೆಗೆದುಕೊಳ್ಳಿರಿ.”​—⁠ಎಫೆಸ 6:10, 11, 13.

11 ಪೌಲನು ತನ್ನ ಜೊತೆ ಕ್ರೈಸ್ತರಿಗೆ ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳು’ವಂತೆ ಎರಡು ಸಲ ಉತ್ತೇಜಿಸುತ್ತಾನೆ. ‘ಸಂಪೂರ್ಣ’ ಎಂಬ ಪದವು, ನಾವು ದೆವ್ವಗಳ ದಾಳಿಗಳನ್ನು ಅರೆಮನಸ್ಸಿನಿಂದ ಪ್ರತಿರೋಧಿಸುವುದು ಸಾಲದು ಎಂಬುದನ್ನು ಸೂಚಿಸುತ್ತದೆ. ಹಾಗಾದರೆ, ದೆವ್ವಗಳನ್ನು ಪ್ರತಿರೋಧಿಸಲಿಕ್ಕಾಗಿ ಇಂದು ಕ್ರೈಸ್ತರಿಗೆ ತುರ್ತಾಗಿ ಬೇಕಾಗಿರುವ ಆಧ್ಯಾತ್ಮಿಕ ರಕ್ಷಾಕವಚದ ಮುಖ್ಯ ಭಾಗಗಳು ಯಾವುವು?

ದೃಢರಾಗಿ ‘ನಿಲ್ಲುವುದು’ ಹೇಗೆ?

12 ‘ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಧರಿಸಿಕೊಂಡು [ದೃಢವಾಗಿ] ನಿಲ್ಲಿರಿ.’ (ಎಫೆಸ 6:​14, 15) ಇಲ್ಲಿ ಸೂಚಿಸಲ್ಪಟ್ಟಿರುವ ರಕ್ಷಾಕವಚದ ಎರಡು ಭಾಗಗಳು, ನಡುಪಟ್ಟಿ ಮತ್ತು ವಜ್ರಕವಚ ಇಲ್ಲವೆ ಎದೆಕವಚ ಆಗಿದೆ. ಒಬ್ಬ ಸೈನಿಕನು ತನ್ನ ನಡುಪಟ್ಟಿಯನ್ನು ಬಿಗಿಯಾಗಿ ಕಟ್ಟಬೇಕಾಗಿತ್ತು. ಇದರಿಂದಾಗಿ ಅವನು ತನ್ನ ನಡುವನ್ನು (ಸೊಂಟ, ತೊಡೆಸಂದು ಮತ್ತು ಕಿಬ್ಬೊಟ್ಟೆ) ಸಂರಕ್ಷಿಸಲು ಮತ್ತು ತನ್ನ ಕತ್ತಿಯ ಭಾರವನ್ನು ಹೊರಲು ಸಾಧ್ಯವಿತ್ತು. ಅದೇ ರೀತಿಯಲ್ಲಿ, ಬೈಬಲ್‌ ಸತ್ಯಕ್ಕೆ ಹೊಂದಿಕೆಯಲ್ಲಿ ಜೀವಿಸಲಿಕ್ಕಾಗಿ ಸಾಂಕೇತಿಕ ಅರ್ಥದಲ್ಲಿ ನಾವದನ್ನು ನಮ್ಮ ಸುತ್ತಲೂ ಬಿಗಿಯಾಗಿ ಸುತ್ತಿಕೊಳ್ಳಬೇಕು. ಇದಕ್ಕಾಗಿ, ಬೈಬಲನ್ನು ದಿನಾಲೂ ಓದುವ ಶೆಡ್ಯೂಲ್‌ ನಮಗಿದೆಯೋ? ಇಡೀ ಕುಟುಂಬವು ಇದರಲ್ಲಿ ಸೇರುತ್ತದೋ? ದಿನದ ವಚನವನ್ನು ಕುಟುಂಬವಾಗಿ ಪರಿಗಣಿಸುವ ದಿನಚರಿ ನಮಗಿದೆಯೋ? ಅದಕ್ಕೆ ಕೂಡಿಸಿ, ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನಿಂದ’ ನಮ್ಮ ಪ್ರಕಾಶನಗಳಲ್ಲಿ ಒದಗಿಸಲಾಗಿರುವ ಸದ್ಯೋಚಿತ ವಿವರಣೆಗಳು ನಮಗೆ ತಿಳಿದಿವೆಯೋ? (ಮತ್ತಾಯ 24:45) ನಾವು ಹೀಗೆ ಮಾಡುತ್ತಿರುವಲ್ಲಿ, ಪೌಲನ ಸಲಹೆಯನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಶಾಸ್ತ್ರಾಧಾರಿತ ಮಾರ್ಗದರ್ಶನವನ್ನು ಒದಗಿಸಬಲ್ಲ ವಿಡಿಯೊಗಳು ಮತ್ತು ಡಿವಿಡಿಗಳು ಸಹ ನಮ್ಮ ಬಳಿ ಇವೆ. ನಾವು ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳುವುದರಿಂದ ವಿವೇಕಯುತ ನಿರ್ಣಯಗಳನ್ನು ಮಾಡಲು ಶಕ್ತರಾಗುವೆವು ಮತ್ತು ಒಂದು ತಪ್ಪು ಮಾರ್ಗಕ್ರಮವನ್ನು ಅನುಸರಿಸುವುದರಿಂದ ಅದು ನಮ್ಮನ್ನು ಸಂರಕ್ಷಿಸುವುದು.

13 ಅಕ್ಷರಾರ್ಥಕವಾದ ವಜ್ರಕವಚವು ಸೈನಿಕನ ಎದೆ, ಹೃದಯ ಮತ್ತು ಇತರ ಪ್ರಮುಖ ಅಂಗಗಳನ್ನು ರಕ್ಷಿಸುತ್ತಿತ್ತು. ಒಬ್ಬ ಕ್ರೈಸ್ತನು, ಯೆಹೋವನ ನೀತಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳುವ ಮೂಲಕ ಮತ್ತು ಆತನ ನೀತಿಯ ಮಟ್ಟಗಳಿಗೆ ಅಂಟಿಕೊಳ್ಳುವ ಮೂಲಕ ತನ್ನ ಸಾಂಕೇತಿಕ ಹೃದಯ ಅಂದರೆ ತನ್ನ ಆಂತರಿಕ ವ್ಯಕ್ತಿತ್ವವನ್ನು ರಕ್ಷಿಸಬಲ್ಲನು. ನಾವು ದೇವರ ವಾಕ್ಯದ ತೀಕ್ಷ್ಣತೆಯನ್ನು ಕಡಿಮೆಗೊಳಿಸದಂತೆ ಸಾಂಕೇತಿಕ ವಜ್ರಕವಚವು ರಕ್ಷಿಸುತ್ತದೆ. ನಾವು ‘ಕೆಟ್ಟದ್ದನ್ನು ದ್ವೇಷಿಸಿ, ಒಳ್ಳೇದನ್ನು ಪ್ರೀತಿ’ಸಲಾರಂಭಿಸುವಾಗ, ನಮ್ಮ ಕಾಲುಗಳು “ಯಾವ ಕೆಟ್ಟ ದಾರಿಗೂ ಹೋಗದಂತೆ” ಅವುಗಳನ್ನು ತಡೆದುಹಿಡಿಯುತ್ತೇವೆ.​—⁠ಆಮೋಸ 5:15; ಕೀರ್ತನೆ 119:101.

14 ರೋಮನ್‌ ಸಾಮ್ರಾಜ್ಯದಾದ್ಯಂತ ಜಾಲದಂತಿದ್ದ ಹೆದ್ದಾರಿಗಳಲ್ಲಿ ನೂರಾರು ಮೈಲಿ ದೂರದ ವರೆಗಿನ ನಡಿಗೆಗಾಗಿ ರೋಮನ್‌ ಸೈನಿಕರ ಪಾದಗಳು ಚೆನ್ನಾಗಿ ಸಜ್ಜಾಗಿರುತ್ತಿದ್ದವು. ಆದರೆ ಕ್ರೈಸ್ತರು “ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿ”ಕೊಳ್ಳಬೇಕೆಂಬ ವಾಕ್ಸರಣಿಯ ಅರ್ಥವೇನು? (ಎಫೆಸ 6:15) ಇದರರ್ಥ ನಾವು ಕಾರ್ಯವೆಸಗಲು ಸಿದ್ಧರಾಗಿದ್ದೇವೆ. ದೇವರ ರಾಜ್ಯದ ಸುವಾರ್ತೆಯನ್ನು ಪ್ರತಿಯೊಂದು ಸೂಕ್ತ ಸಂದರ್ಭದಲ್ಲಿ ಹಂಚಿಕೊಳ್ಳಲು ನಾವು ಸಿದ್ಧರಾಗಿದ್ದೇವೆ. (ರೋಮಾಪುರ 10:​13-15) ಕ್ರೈಸ್ತ ಶುಶ್ರೂಷೆಯಲ್ಲಿ ನಾವು ಸಕ್ರಿಯರಾಗಿರುವಾಗ, ಸೈತಾನನ ‘ತಂತ್ರೋಪಾಯಗಳ’ ವಿರುದ್ಧ ಇದು ಒಂದು ರಕ್ಷಣೆಯಾಗಿರುತ್ತದೆ.​—⁠ಎಫೆಸ 6:⁠11.

15 ಪೌಲನು ಮುಂದುವರಿಸುತ್ತಾ ಹೇಳಿದ್ದು: “ನಂಬಿಕೆಯೆಂಬ [ದೊಡ್ಡ] ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.” (ಎಫೆಸ 6:16) ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು ಹಿಡುಕೊಳ್ಳಬೇಕೆಂಬ ಬುದ್ಧಿವಾದದ ಆರಂಭದಲ್ಲಿ, ಮೂಲಭಾಷೆಯಲ್ಲಿ “ಎಲ್ಲಕ್ಕಿಂತಲೂ ಮಿಗಿಲಾಗಿ” ಎಂಬ ವಾಕ್ಸರಣಿಯಿದೆ. ಇದು, ಸಂಪೂರ್ಣ ರಕ್ಷಾಕವಚದಲ್ಲಿ ಈ ಗುರಾಣಿಯು ಅತಿ ಮಹತ್ವಪೂರ್ಣವಾಗಿದೆ ಎಂಬುದನ್ನು ಸೂಚಿಸುತ್ತದೆ. ಸ್ವಲ್ಪ ಮಟ್ಟಿಗೂ ನಮಗೆ ನಂಬಿಕೆಯ ಕೊರತೆಯಿರಬಾರದು. ಒಂದು ದೊಡ್ಡ ಸಂರಕ್ಷಣಾತ್ಮಕ ಗುರಾಣಿಯಂತೆ ನಮ್ಮ ನಂಬಿಕೆಯು ನಮ್ಮನ್ನು ಸೈತಾನನ “ಅಗ್ನಿಬಾಣ”ಗಳಿಂದ ಸಂರಕ್ಷಿಸುತ್ತದೆ. ಇಂದು ಈ ಅಗ್ನಿಬಾಣಗಳು ಯಾವುವು? ಇವು, ನಮ್ಮ ನಂಬಿಕೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಶತ್ರುಗಳು ಹಾಗೂ ಧರ್ಮಭ್ರಷ್ಟರು ಹಬ್ಬಿಸುವಂಥ ಮನನೋಯಿಸುವ ಅವಹೇಳನದ ಮಾತುಗಳು, ಸುಳ್ಳುಗಳು ಮತ್ತು ಅರ್ಧಸತ್ಯಗಳು ಆಗಿರಸಾಧ್ಯವಿದೆ. ಈ ‘ಬಾಣಗಳು,’ ನಾವು ಪ್ರಾಪಂಚಿಕಭಾವದವರಾಗುವಂತೆ ಬರುವ ಶೋಧನೆಗಳೂ ಆಗಿರಬಹುದು. ಇದರಿಂದಾಗಿ ನಾವು ಹೆಚ್ಚೆಚ್ಚು ಬಳಕೆ ವಸ್ತುಗಳನ್ನು ಖರೀದಿಸುವುದರಲ್ಲೇ ತಲ್ಲೀನರಾಗಬಹುದು ಮತ್ತು ಆಡಂಬರದ ಜೀವನಶೈಲಿಯಲ್ಲಿ ಬಿದ್ದಿರುವವರೊಂದಿಗೆ ಸ್ಪರ್ಧಿಸುವವರಾಗಬಹುದು. ಇಂಥ ಆಡಂಬರದ ಜೀವನ ನಡೆಸುವವರು ಬಹುಶಃ ದೊಡ್ಡ ದೊಡ್ಡದಾದ ಮತ್ತು ಹೆಚ್ಚು ಉತ್ತಮವಾದ ಮನೆಗಳಿಗಾಗಿಯೂ, ಹೆಚ್ಚು ದೊಡ್ಡದಾದ ಮತ್ತು ನವನವೀನ ವಾಹನಗಳಿಗಾಗಿಯೂ ಹಣಹಾಕಿರಬಹುದು ಇಲ್ಲವೆ ತಮ್ಮ ಬಳಿಯಿರುವ ಬೆಲೆಬಾಳುವ ಆಭರಣಗಳ ಹಾಗೂ ಹೊಸಹೊಸ ಫ್ಯಾಷನಿನ ಬಟ್ಟೆಗಳ ಪ್ರದರ್ಶನಮಾಡುತ್ತಿರಬಹುದು. ಆದರೆ ಇತರರು ಏನೇ ಮಾಡಲಿ, ನಾವು ಇಂಥ ‘ಅಗ್ನಿಬಾಣಗಳನ್ನು’ ಪಕ್ಕಕ್ಕೆ ತಳ್ಳುವಷ್ಟು ಬಲವಾದ ನಂಬಿಕೆಯನ್ನು ಹೊಂದಿರಲೇಬೇಕು. ಇಂಥ ಬಲವಾದ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ಉಳಿಸಿಕೊಳ್ಳಬಹುದು?​—⁠1 ಪೇತ್ರ 3:​3-5; 1 ಯೋಹಾನ 2:​15-17.

16 ಕ್ರಮವಾದ ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಮನಃಪೂರ್ವಕವಾದ ಪ್ರಾರ್ಥನೆಗಳ ಮುಖಾಂತರ ನಾವು ದೇವರ ಸಮೀಪಕ್ಕೆ ಬರಬಲ್ಲೆವು. ಹೆಚ್ಚು ಬಲವಾದ ನಂಬಿಕೆಗಾಗಿ ನಾವು ಯೆಹೋವನ ಬಳಿ ಬಿನ್ನಹಿಸಬಹುದು. ತದನಂತರ ನಮ್ಮ ಈ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿರುವ ಕ್ರಿಯೆಗಳನ್ನು ಮಾಡಬಹುದು. ಉದಾಹರಣೆಗಾಗಿ ನಾವು ವಾರದ ಕಾವಲಿನಬುರುಜು ಅಧ್ಯಯನದ ಕೂಟದಲ್ಲಿ ಭಾಗವಹಿಸುವ ಉದ್ದೇಶದೊಂದಿಗೆ ತಯಾರಿಮಾಡುತ್ತೇವೋ? ನಾವು ಬೈಬಲ್‌ ಮತ್ತು ಬೈಬಲ್‌ ಆಧರಿತ ಪ್ರಕಾಶನಗಳನ್ನು ಅಧ್ಯಯನ ಮಾಡುವುದಾದರೆ ನಮ್ಮ ನಂಬಿಕೆಯು ಬಲವಾಗಿರುವುದು.​—⁠ಇಬ್ರಿಯ 10:​38, 39; 11:⁠6.

17 ಪೌಲನು, ಆಧ್ಯಾತ್ಮಿಕ ರಕ್ಷಾಕವಚದ ಕುರಿತಾದ ತನ್ನ ವರ್ಣನೆಯನ್ನು ಈ ಸಲಹೆಯೊಂದಿಗೆ ಕೊನೆಗೊಳಿಸುತ್ತಾನೆ: “ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ.” (ಎಫೆಸ 6:17) ಶಿರಸ್ತ್ರಾಣವು, ಸೈನಿಕನ ತಲೆ ಮತ್ತು ಮಿದುಳನ್ನು, ಅಂದರೆ ನಿರ್ಣಯಗಳನ್ನು ಮಾಡುವ ಕೇಂದ್ರವನ್ನು ರಕ್ಷಿಸಿತು. ಅದೇ ರೀತಿಯಲ್ಲಿ ಕ್ರೈಸ್ತ ನಿರೀಕ್ಷೆಯು ನಮ್ಮ ಮಾನಸಿಕ ಶಕ್ತಿಗಳನ್ನು ರಕ್ಷಿಸುತ್ತದೆ. (1 ಥೆಸಲೊನೀಕ 5:⁠8) ನಮ್ಮ ಮನಸ್ಸಿನಲ್ಲಿ ಲೌಕಿಕ ಗುರಿಗಳು ಮತ್ತು ಪ್ರಾಪಂಚಿಕ ಕನಸುಗಳನ್ನು ತುಂಬಿಸುವ ಬದಲು, ಯೇಸುವಿನಂತೆ ನಮ್ಮ ಯೋಚನೆಗಳನ್ನು ನಮ್ಮ ದೇವದತ್ತ ನಿರೀಕ್ಷೆಯ ಮೇಲೆ ಕೇಂದ್ರೀಕರಿಸಬೇಕು.​—⁠ಇಬ್ರಿಯ 12:⁠2.

18 ಬೈಬಲಿನಲ್ಲಿ ದಾಖಲಾಗಿರುವ ದೇವರ ವಾಕ್ಯ ಇಲ್ಲವೆ ಸಂದೇಶವು ಸೈತಾನ ಮತ್ತು ಅವನ ದೆವ್ವಗಳ ವಿರುದ್ಧ ನಮಗಿರುವ ಕೊನೆಯ ರಕ್ಷಣೆಯಾಗಿದೆ. ನಾವು ನಮ್ಮ ಕ್ರಮವಾದ ಬೈಬಲ್‌ ಓದುವಿಕೆಯನ್ನು ಅಲಕ್ಷಿಸದಿರುವುದಕ್ಕೆ ಇದು ಮತ್ತೊಂದು ಕಾರಣವಾಗಿದೆ. ದೇವರ ವಾಕ್ಯದ ಸಮಗ್ರ ಜ್ಞಾನವು, ನಮ್ಮನ್ನು ಸೈತಾನನ ಸುಳ್ಳುಗಳು, ದೆವ್ವಗಳ ತಪ್ಪು ಮಾಹಿತಿ ಹಾಗೂ ಧರ್ಮಭ್ರಷ್ಟರ ದ್ವೇಷತುಂಬಿದ ಮಾತುಗಳಿಂದ ಸಂರಕ್ಷಿಸುತ್ತದೆ.

‘ಎಲ್ಲಾ ಸಮಯಗಳಲ್ಲಿ ದೇವರನ್ನು ಪ್ರಾರ್ಥಿಸಿರಿ’

19 ಸೈತಾನನು, ಅವನ ದೆವ್ವಗಳು ಮತ್ತು ದುಷ್ಟ ಲೋಕವು ತೆಗೆದುಹಾಕಲ್ಪಡುವ ಸಮಯವು ಹತ್ತಿರವಿದೆ. “ತನಗಿರುವ ಕಾಲವು ಸ್ವಲ್ಪವೆಂದು” ಸೈತಾನನಿಗೆ ತಿಳಿದಿದೆ. ಅವನು ಕ್ರೋಧಿತನಾಗಿದ್ದಾನೆ ಮತ್ತು “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ ಯುದ್ಧಮಾಡು”ತ್ತಿದ್ದಾನೆ. (ಪ್ರಕಟನೆ 12:12, 17) ಆದುದರಿಂದ ನಾವು ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಪ್ರತಿರೋಧಿಸುವುದು ಅತ್ಯಾವಶ್ಯಕ.

20 ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ನಾವು ಧರಿಸಿಕೊಳ್ಳಬೇಕೆಂದು ಕೊಡಲಾಗಿರುವ ಬುದ್ಧಿವಾದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬಲ್ಲೆವು! ಪೌಲನು ಆಧ್ಯಾತ್ಮಿಕ ರಕ್ಷಾಕವಚದ ಕುರಿತಾದ ತನ್ನ ಚರ್ಚೆಯನ್ನು ಈ ಸಲಹೆಯೊಂದಿಗೆ ಸಮಾಪ್ತಿಗೊಳಿಸುತ್ತಾನೆ: “ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.” (ಎಫೆಸ 6:18) ಪ್ರಾರ್ಥನೆಯು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸಿ, ಎಚ್ಚರವಾಗಿ ಉಳಿಯುವಂತೆ ಸಹಾಯಮಾಡಬಲ್ಲದು. ನಾವು ಪೌಲನ ಮಾತುಗಳನ್ನು ಪಾಲಿಸಿ, ಪ್ರಾರ್ಥನೆಮಾಡುತ್ತಾ ಇರೋಣ. ಇದು, ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಪ್ರತಿರೋಧಿಸುವಂತೆ ನಮಗೆ ಸಹಾಯಮಾಡುವುದು. (w07 3/15)

ನೀವೇನು ಕಲಿತುಕೊಂಡಿರಿ?

• ಸೈತಾನನು ಮತ್ತು ಅವನ ದೆವ್ವಗಳು ಹೇಗೆ ಅಸ್ತಿತ್ವಕ್ಕೆ ಬಂದವು?

• ಪಿಶಾಚನು ಎಷ್ಟು ಶಕ್ತಿಶಾಲಿಯಾಗಿದ್ದಾನೆ?

• ಸೈತಾನ ಮತ್ತು ಅವನ ದೆವ್ವಗಳ ವಿರುದ್ಧ ನಮಗೆ ಯಾವ ರಕ್ಷಣೆ ಇದೆ?

• ದೇವರು ದಯಪಾಲಿಸಿರುವ ಸಂಪೂರ್ಣ ರಕ್ಷಾಕವಚವನ್ನು ನಾವು ಹೇಗೆ ಧರಿಸಿಕೊಳ್ಳಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. ಪಿಶಾಚನಾದ ಸೈತಾನ ಮತ್ತು ದೆವ್ವಗಳ ಕುರಿತಾಗಿ ಯಾವ ಪ್ರಶ್ನೆಗಳೇಳುತ್ತವೆ?

3. ದೇವರ ದೂತನೊಬ್ಬನು ಪಿಶಾಚನಾದ ಸೈತಾನನಾದದ್ದು ಹೇಗೆ?

4. ನೋಹನ ದಿನದ ಜಲಪ್ರಳಯದ ಮುಂಚೆ ಕೆಲವು ದಂಗೆಕೋರ ದೂತರು ಏನು ಮಾಡಿದರು?

5. ಯೆಹೋವನು ಒಂದು ದೊಡ್ಡ ಜಲಪ್ರಳಯದ ಮೂಲಕ ನಾಶನವನ್ನು ತಂದಾಗ ದಂಗೆಕೋರ ದೂತರಿಗೇನಾಯಿತು?

6. ದೆವ್ವಗಳು ಜನರನ್ನು ಹೇಗೆ ವಂಚಿಸುತ್ತವೆ?

7. ಲೋಕದ ಮೇಲೆ ಸೈತಾನನಿಗೆ ಎಷ್ಟು ಶಕ್ತಿಯಿದೆ?

8. ಸೈತಾನನ ಪ್ರಭಾವದ ಕುರಿತಾಗಿ ಬೈಬಲ್‌ ಏನು ಸೂಚಿಸುತ್ತದೆ?

9. ಕ್ರೈಸ್ತರು ಯಾರ ವಿರುದ್ಧ ಹೋರಾಡುತ್ತಿದ್ದಾರೆ?

10, 11. ನಾವು ಸೈತಾನನನ್ನು ಮತ್ತು ಅವನ ದುಷ್ಟ ದೂತರನ್ನು ಹೇಗೆ ಪ್ರತಿರೋಧಿಸಬಲ್ಲೆವು?

12. ಕ್ರೈಸ್ತರು ಸತ್ಯವೆಂಬ ನಡುಕಟ್ಟನ್ನು ಹೇಗೆ ಕಟ್ಟಿಕೊಳ್ಳಬಲ್ಲರು?

13. ನಮ್ಮ ಸಾಂಕೇತಿಕ ಹೃದಯವನ್ನು ನಾವು ಹೇಗೆ ಸಂರಕ್ಷಿಸಬಲ್ಲೆವು?

14. ನಾವು ‘ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿ’ಕೊಳ್ಳಬೇಕು ಎಂಬುದರ ಅರ್ಥವೇನು?

15. (ಎ) ನಂಬಿಕೆಯೆಂಬ ದೊಡ್ಡ ಗುರಾಣಿಯು ತುಂಬ ಪ್ರಾಮುಖ್ಯ ಎಂದು ಯಾವುದು ತೋರಿಸುತ್ತದೆ? (ಬಿ) ಯಾವ ‘ಅಗ್ನಿಬಾಣಗಳು’ ನಮ್ಮ ನಂಬಿಕೆಯ ಮೇಲೆ ಹಾನಿಕರ ಪರಿಣಾಮವನ್ನು ಬೀರಬಲ್ಲವು?

16. ನಾವು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಯಾವುದು ಸಹಾಯಮಾಡಬಲ್ಲದು?

17. ನಾವು ‘ರಕ್ಷಣೆ ಎಂಬ ಶಿರಸ್ತ್ರಾಣವನ್ನು ಇಟ್ಟುಕೊಳ್ಳುವುದು’ ಹೇಗೆ?

18. ನಮ್ಮ ಕ್ರಮವಾದ ಬೈಬಲ್‌ ಓದುವಿಕೆಯನ್ನು ನಾವೇಕೆ ಅಲಕ್ಷಿಸಬಾರದು?

19, 20. (ಎ) ಸೈತಾನನಿಗೂ ಅವನ ದೆವ್ವಗಳಿಗೂ ಏನು ಕಾದಿದೆ? (ಬಿ) ನಮ್ಮನ್ನು ಯಾವುದು ಆಧ್ಯಾತ್ಮಿಕವಾಗಿ ಬಲಪಡಿಸಬಲ್ಲದು?

[ಪುಟ 17ರಲ್ಲಿರುವ ಚಿತ್ರಗಳು]

‘ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಲಾರಂಭಿಸಿದರು’

[ಪುಟ 19ರಲ್ಲಿರುವ ಚಿತ್ರ]

ನಮ್ಮ ಆಧ್ಯಾತ್ಮಿಕ ರಕ್ಷಾಕವಚದ ಆರು ಭಾಗಗಳನ್ನು ಹೆಸರಿಸಿ, ವಿವರಿಸಬಲ್ಲಿರೋ?

[ಪುಟ 20ರಲ್ಲಿರುವ ಚಿತ್ರಗಳು]

ಈ ಚಟುವಟಿಕೆಗಳಲ್ಲಿ ಮಗ್ನರಾಗಿರುವುದು ಸೈತಾನ ಮತ್ತು ಅವನ ದೆವ್ವಗಳ ವಿರುದ್ಧ ಹೇಗೆ ಒಂದು ರಕ್ಷಣೆ ಆಗಿರಬಲ್ಲದು?