ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಯೋಗಿಕ ಉತ್ತರಗಳು!

ಪ್ರಾಯೋಗಿಕ ಉತ್ತರಗಳು!

ಪ್ರಾಯೋಗಿಕ ಉತ್ತರಗಳು!

ಇಂದು ಲಭ್ಯವಿರುವ ಅನೇಕಾನೇಕ ಸ್ವ-ಸಹಾಯಕ ಪುಸ್ತಕಗಳಲ್ಲಿರುವ ಹೆಚ್ಚಿನ ಸಲಹೆಯು, ಯಾರ ಜೀವನವು ಈಗಾಗಲೇ ಇಕ್ಕಟ್ಟಿನಲ್ಲಿದೆಯೋ ಅಂಥವರಿಗೆ ಸಹಾಯಮಾಡುವುದರ ಮೇಲೆ ಗಮನಹರಿಸುತ್ತದೆ. ಆದರೆ ಬೈಬಲ್‌ ಅಂತಹ ಪುಸ್ತಕಗಳಿಗಿಂತ ಭಿನ್ನವಾಗಿದೆ. ಬೈಬಲಿನ ಸಲಹೆಯು ಕೇವಲ ಸಂಕಷ್ಟದಲ್ಲಿರುವವರಿಗೆ ಮಾತ್ರ ಸಹಾಯ ಮಾಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಒಬ್ಬ ವ್ಯಕ್ತಿಯ ಜೀವನವನ್ನು ಅನಗತ್ಯವಾಗಿ ಕಷ್ಟಕರವನ್ನಾಗಿ ಮಾಡಬಲ್ಲ ತಪ್ಪುಗಳನ್ನು ಅವನು ಮಾಡದಿರುವಂತೆ ಅದು ಸಹಾಯಮಾಡುತ್ತದೆ.

ಬೈಬಲ್‌ “ಮೂಢರಿಗೆ ಜಾಣತನವನ್ನೂ ಯೌವನಸ್ಥರಿಗೆ ತಿಳುವಳಿಕೆಯನ್ನೂ ಬುದ್ಧಿಯನ್ನೂ” ನೀಡಬಲ್ಲದು. (ಜ್ಞಾನೋಕ್ತಿ 1:4) ಬೈಬಲಿನ ಸಲಹೆಯನ್ನು ನೀವು ಅನ್ವಯಿಸಿಕೊಳ್ಳುವಲ್ಲಿ, ‘ಬುದ್ಧಿಯು ನಿಮಗೆ ಕಾವಲಾಗಿರುವದು, ವಿವೇಕವು ನಿಮ್ಮನ್ನು ಕಾಪಾಡುವದು; ಇದರಿಂದ ನೀವು ದುರ್ಮಾರ್ಗದಿಂದ ತಪ್ಪಿಸಿಕೊಳ್ಳುವಿರಿ.’ (ಜ್ಞಾನೋಕ್ತಿ 2:11, 12) ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಮ್ಮ ಕುಟುಂಬ ಜೀವನವನ್ನು ಹೆಚ್ಚು ಉತ್ತಮಗೊಳಿಸಲು ಮತ್ತು ನಿಮ್ಮನ್ನು ಒಬ್ಬ ಉತ್ತಮ ಕೆಲಸಗಾರ ಅಥವಾ ಧಣಿಯನ್ನಾಗಿ ಮಾಡಲು ಬೈಬಲಿನ ಸಲಹೆಯು ಹೇಗೆ ಸಹಾಯಮಾಡುವುದು ಎಂಬುದರ ಕುರಿತು ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ಪರಿಗಣಿಸಿರಿ.

ಮದ್ಯಸಾರದ ಮಿತವಾದ ಸೇವನೆ

ಮದ್ಯಸಾರದ ಮಿತವಾದ ಸೇವನೆಯನ್ನು ಬೈಬಲ್‌ ಖಂಡಿಸುವುದಿಲ್ಲ. ದ್ರಾಕ್ಷಾರಸದ ಔಷಧೀಯ ಪ್ರಯೋಜನಗಳೆಡೆಗೆ ಗಮನ ಸೆಳೆಯುತ್ತಾ ಅಪೊಸ್ತಲ ಪೌಲನು ಯುವಕನಾದ ತಿಮೊಥೆಯನಿಗೆ ಬುದ್ಧಿ ಹೇಳಿದ್ದು: “ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೋ.” (1 ತಿಮೊಥೆಯ 5:23) ಬೈಬಲಿನ ಇತರ ವಚನಗಳು ತೋರಿಸುವಂತೆ ದ್ರಾಕ್ಷಾರಸವನ್ನು ಕೇವಲ ಔಷಧೀಯ ಕಾರಣಗಳಿಗೆ ಉಪಯೋಗಿಸಬೇಕೆಂಬುದು ದೇವರ ಉದ್ದೇಶವಾಗಿರಲಿಲ್ಲ. ದ್ರಾಕ್ಷಾರಸವು “ಮನುಷ್ಯ ಹೃದಯವನ್ನು ಸಂತೋಷ”ಪಡಿಸುತ್ತದೆಂದು ವರ್ಣಿಸಲಾಗಿದೆ. (ಕೀರ್ತನೆ 104:​15, NIBV) ಆದರೆ, “ಮದ್ಯಕ್ಕೆ ಗುಲಾಮ”ರಾಗಿರದಂತೆ ಬೈಬಲ್‌ ಎಚ್ಚರಿಸುತ್ತದೆ. (ತೀತ 2:2) ಅದು ಹೇಳುವುದು: “ಕುಡುಕರಲ್ಲಿಯೂ ಅತಿಮಾಂಸಭಕ್ಷಕರಲ್ಲಿಯೂ ಸೇರದಿರು. ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು.” (ಜ್ಞಾನೋಕ್ತಿ 23:20, 21) ಅಂತಹ ಸಮತೂಕದ ಬುದ್ಧಿವಾದವನ್ನು ಅಲಕ್ಷಿಸುವುದು ಯಾವುದಕ್ಕೆ ನಡೆಸುತ್ತದೆ? ಕೇವಲ ಕೆಲವೇ ದೇಶಗಳಿಂದ ಬಂದಿರುವ ವಾಸ್ತವಾಂಶಗಳನ್ನು ಗಮನಿಸಿ.

ಲೋಕಾರೋಗ್ಯ ಸಂಸ್ಥೆಯ ಮದ್ಯಸಾರದ ಮೇಲೆ ಇಸವಿ 2004ರ ಭೌಗೋಲಿಕ ವರದಿ (ಇಂಗ್ಲಿಷ್‌) ಹೇಳುವುದು: “ಮದ್ಯಸಾರ ಸಂಬಂಧಿತ ತೊಂದರೆಗಳಿಂದ ಐರಿಷ್‌ ಸಮಾಜದ ಮೇಲೆ ಪ್ರತಿವರ್ಷ ಸುಮಾರು 300 ಕೋಟಿ ಡಾಲರ್‌ಗಳ ಹೊರೆಬೀಳುತ್ತದೆ.” ಈ ಭಾರೀ ಆರ್ಥಿಕ ಹೊರೆಯಲ್ಲಿ “ಆರೋಗ್ಯಾರೈಕೆಯ ಖರ್ಚು (35 ಕೋಟಿ ಡಾಲರ್‌), ರಸ್ತೆ ಅಪಘಾತಗಳಿಂದಾಗುವ ವೆಚ್ಚ (38 ಕೋಟಿ ಡಾಲರ್‌), ಮದ್ಯಸಾರ-ಸಂಬಂಧಿತ ಅಪರಾಧಗಳಿಂದಾಗುವ ಖರ್ಚು (12.6 ಕೋಟಿ ಡಾಲರ್‌), ಮದ್ಯಸಾರ-ಸಂಬಂಧದಲ್ಲಿ ಕೆಲಸಕ್ಕೆ ಗೈರುಹಾಜರಾದ ಕಾರಣದಿಂದ ಉತ್ಪಾದನೆಯಲ್ಲಿನ ನಷ್ಟ (130 ಕೋಟಿ ಡಾಲರ್‌)” ಒಳಗೂಡಿದೆಯೆಂದು ಆ ವರದಿಯು ತಿಳಿಸುತ್ತದೆ.

ಮದ್ಯಸಾರದ ದುರುಪಯೋಗದಿಂದ ಆಗುವ ಆರ್ಥಿಕ ನಷ್ಟಕ್ಕಿಂತಲೂ ಅದರಿಂದಾಗಿ ಮಾನವರು ಅನುಭವಿಸುವ ನರಳಾಟವು ಹೆಚ್ಚಾಗಿರುತ್ತದೆ. ಉದಾಹರಣೆಗೆ, ಆಸ್ಟ್ರೇಲಿಯದಲ್ಲಿ ಮದ್ಯಸಾರದ ಅನುಚಿತ ಪ್ರಭಾವದ ಅಡಿಯಲ್ಲಿದ್ದವರು ಕೇವಲ 12 ತಿಂಗಳ ಒಂದು ಸಮಯಾವಧಿಯಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚು ಜನರ ಮೇಲೆ ಶಾರೀರಿಕ ದೌರ್ಜನ್ಯವೆಸಗಿದರು. ಫ್ರಾನ್ಸ್‌ನಲ್ಲಿ 30 ಪ್ರತಿಶತ ಗೃಹ ಹಿಂಸಾಚಾರಕ್ಕೆ ಮದ್ಯಸಾರದ ದುರುಪಯೋಗವೇ ಕಾರಣವೆಂದು ದೂರಲಾಗುತ್ತದೆ. ಈ ವಾಸ್ತವಾಂಶಗಳನ್ನು ಮನಸ್ಸಿನಲ್ಲಿಟ್ಟವರಾಗಿ, ಮದ್ಯಸಾರದ ವಿಷಯದಲ್ಲಿ ಬೈಬಲಿನ ಬುದ್ಧಿವಾದವು ನ್ಯಾಯಯುತವಾಗಿದೆ ಎಂದು ನಿಮಗನಿಸುವುದಿಲ್ಲವೋ?

ದೇಹವನ್ನು ಮಲಿನಮಾಡುವ ರೂಢಿಗಳಿಂದ ದೂರವಿರಿ

ಇಸವಿ 1942ರ ಸಮಯಗಳಲ್ಲಿ ಧೂಮಪಾನ ಮಾಡುವುದನ್ನು ಒಂದು ಫ್ಯಾಷನ್‌ ಎಂದು ಎಣಿಸಲಾಗುತ್ತಿತ್ತು. ಆದರೆ ಆ ಸಮಯದಷ್ಟು ಹಿಂದೆಯೇ, ನೀವು ಓದುತ್ತಿರುವ ಈ ಪತ್ರಿಕೆಯು ತಂಬಾಕಿನ ಉಪಯೋಗವು ಬೈಬಲ್‌ ಮೂಲತತ್ತ್ವಗಳ ಉಲ್ಲಂಘನೆಯಾಗಿದೆ ಮತ್ತು ಅದರಿಂದ ದೂರವಿರಬೇಕೆಂದು ಅರ್ಥಮಾಡಿಕೊಳ್ಳಲು ತನ್ನ ಓದುಗರಿಗೆ ಸಹಾಯಮಾಡಿತು. ಆ ವರ್ಷದಲ್ಲಿ ಮುದ್ರಿತವಾದ ಒಂದು ಲೇಖನವು, ದೇವರನ್ನು ಸಂತೋಷಪಡಿಸಲು ಬಯಸುವವರೆಲ್ಲರೂ “ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ [ತಮ್ಮನ್ನು] ಶುಚಿಮಾಡಿ”ಕೊಳ್ಳುವ ಬೈಬಲಿನ ಆಜ್ಞೆಯನ್ನು ಪಾಲಿಸಬೇಕೆಂದು ತರ್ಕಿಸಿತ್ತು. (2 ಕೊರಿಂಥ 7:1) 65 ವರ್ಷಗಳ ನಂತರ ಈಗ, ಆ ಬೈಬಲ್‌-ಆಧಾರಿತ ಸಲಹೆಯು ಒಳ್ಳೆಯ ಬುದ್ಧಿವಾದವಾಗಿತ್ತೆಂದು ನೀವು ಒಪ್ಪುವುದಿಲ್ಲವೇ?

ಇಸವಿ 2006ರಲ್ಲಿ, ಲೋಕಾರೋಗ್ಯ ಸಂಸ್ಥೆಯು ತಂಬಾಕಿನ ಉಪಯೋಗವನ್ನು “ಲೋಕದಲ್ಲಿ ಸಂಭವಿಸುವ ಸಾವುಗಳಿಗೆ ಎರಡನೇ ದೊಡ್ಡ ಕಾರಣ” ಎಂದು ವರ್ಣಿಸಿತು. ಪ್ರತಿವರ್ಷ ಸುಮಾರು 50 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವಿಗೀಡಾಗುತ್ತಾರೆ. ಆದರೆ ಇದಕ್ಕೆ ಹೋಲಿಕೆಯಲ್ಲಿ ಪ್ರತಿವರ್ಷ ಎಚ್‌.ಐ.ವಿ./ಏಡ್ಸ್‌ನಿಂದ ಸಾಯುವ ಜನರ ಸಂಖ್ಯೆ ಸುಮಾರು 30 ಲಕ್ಷ ಮಾತ್ರ. 20ನೆಯ ಶತಮಾನದಲ್ಲಿ ಧೂಮಪಾನವು 10 ಕೋಟಿ ಜನರನ್ನು ಬಲಿತೆಗೆದುಕೊಂಡಿದೆ ಎಂದು ಅಂದಾಜುಮಾಡಲಾಗುತ್ತದೆ. ಇದು ಅದೇ ಶತಮಾನದಲ್ಲಿ ನಡೆದ ಎಲ್ಲಾ ಯುದ್ಧಗಳಿಂದ ಮಡಿದಷ್ಟೇ ಜನರ ಸಂಖ್ಯೆ ಆಗಿರುತ್ತದೆ. ನಿಶ್ಚಯವಾಗಿಯೂ, ತಂಬಾಕಿನಿಂದ ದೂರವಿರುವುದು ಬುದ್ಧಿವಂತಿಕೆಯ ಸಂಗತಿಯೆಂದು ಈಗ ವ್ಯಾಪಕವಾಗಿ ಒಪ್ಪಿಕೊಳ್ಳಲಾಗುತ್ತದೆ.

“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”

ಲೈಂಗಿಕ ವಿಷಯಗಳ ಕುರಿತು ಬೈಬಲ್‌ ಏನು ಹೇಳುತ್ತದೋ ಅದನ್ನು ಒಪ್ಪಿಕೊಳ್ಳಲು ಹೆಚ್ಚಿನ ಜನರಿಗೆ ಮನಸ್ಸಿಲ್ಲ. ಎಲ್ಲಾ ಲೈಂಗಿಕ ಬಯಕೆಗಳು ಪಾಪವಾಗಿವೆ ಎಂದು ಬೈಬಲ್‌ ಅತಿಯಾದ ಶಿಷ್ಟತನದಿಂದ ಖಂಡಿಸುತ್ತದೆಂದು ನಂಬುವಂತೆ ಅನೇಕರು ನಡೆಸಲ್ಪಟ್ಟಿದ್ದಾರೆ. ಅದರೆ ವಿಷಯವು ಹಾಗಿರುವುದಿಲ್ಲ. ಅದಕ್ಕೆ ಬದಲಾಗಿ, ಮಾನವರು ತಮ್ಮ ಲೈಂಗಿಕ ಬಯಕೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದರ ಕುರಿತು ಉತ್ತಮವಾದ ಬುದ್ಧಿವಾದವನ್ನು ಬೈಬಲ್‌ ನೀಡುತ್ತದೆ. ಲೈಂಗಿಕ ಸಂಬಂಧಗಳನ್ನು ಮದುವೆ ಬಂಧದೊಳಗೆ ಮಾತ್ರ ಅನುಮತಿಸಲಾಗಿದೆ ಎಂದು ಅದು ಬೋಧಿಸುತ್ತದೆ. (ಆದಿಕಾಂಡ 2:24; ಮತ್ತಾಯ 19:4-6; ಇಬ್ರಿಯ 13:4) ಲೈಂಗಿಕ ಸಂಬಂಧವು ವಿವಾಹ ಸಂಗಾತಿಗಳು ತಮ್ಮ ಸಂಗಾತಿಗೆ ಪ್ರೀತಿ ಮತ್ತು ಕೋಮಲ ವಾತ್ಸಲ್ಯವನ್ನು ತೋರಿಸುವ ಮತ್ತು ಪಡೆಯುವ ಒಂದು ವಿಧವಾಗಿದೆ. (1 ಕೊರಿಂಥ 7:1-5) ಇಂತಹ ದಂಪತಿಗೆ ಹುಟ್ಟುವ ಮಕ್ಕಳಿಗೆ, ಪರಸ್ಪರರನ್ನು ಪ್ರೀತಿಸುವ ತಂದೆತಾಯಿ ಇರುತ್ತಾರೆ ಮತ್ತು ಹೀಗೆ ಅವರು ಪ್ರಯೋಜನಹೊಂದುತ್ತಾರೆ.​—⁠ಕೊಲೊಸ್ಸೆ 3:18-21.

ಲೈಂಗಿಕ ಸ್ವೇಚ್ಛಾಚಾರ ಕುರಿತು ಬೈಬಲ್‌ ಆಜ್ಞಾಪಿಸುವುದು: “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.” (1 ಕೊರಿಂಥ 6:18) ಇದನ್ನು ಏಕೆ ಮಾಡಬೇಕೆಂಬುದಕ್ಕೆ ಒಂದು ಕಾರಣ ಯಾವುದು? ಅದೇ ವಚನವು ಮುಂದುವರಿಸಿ ಹೇಳುವುದು: “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರಗಾಗಿವೆ, ಆದರೆ ಜಾರತ್ವಮಾಡುವವನು ತನ್ನ ದೇಹಕ್ಕೆ ಹಾನಿಕರವಾದ ಪಾಪವನ್ನು ಮಾಡುತ್ತಾನೆ.” ಲೈಂಗಿಕ ವಿಚಾರದಲ್ಲಿ ಬೈಬಲ್‌ ನೀಡುವ ಸಲಹೆಯನ್ನು ಅಲಕ್ಷಿಸುವಲ್ಲಿ ಏನು ಸಂಭವಿಸುತ್ತದೆ?

ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಏನು ಸಂಭವಿಸುತ್ತಿದೆ ಎಂಬುದನ್ನು ಪರಿಗಣಿಸಿರಿ. ಈ ದೇಶದಲ್ಲಿ ಹದಿವಯಸ್ಕರ ಗರ್ಭಧಾರಣೆಯ ಪ್ರಮಾಣವು ಔದ್ಯೋಗಿಕ ರಾಷ್ಟ್ರಗಳಲ್ಲೇ ಅತಿ ಉಚ್ಚವಾದದ್ದಾಗಿದೆ. ಪ್ರತಿ ವರ್ಷ 8,50,000 ಹದಿವಯಸ್ಕರು ಗರ್ಭಧರಿಸುತ್ತಾರೆ. ಈ ಗರ್ಭಧಾರಣೆಗಳಲ್ಲಿ, ಯಾವ ಶಿಶುಗಳ ಗರ್ಭಪಾತವಾಗುವುದಿಲ್ಲವೋ ಆ ಅನೇಕ ಶಿಶುಗಳು ಅವಿವಾಹಿತ ತಾಯಂದಿರಿಗೆ ಹುಟ್ಟುತ್ತವೆ. ಇಂತಹ ಯುವ ತಾಯಂದಿರಲ್ಲಿ ಅನೇಕರು ತಮ್ಮ ಮಕ್ಕಳನ್ನು ಪ್ರೀತಿ ಮತ್ತು ಶಿಸ್ತಿನಲ್ಲಿ ಬೆಳೆಸಲು ತಮ್ಮಿಂದ ಸಾಧ್ಯವಾದುದೆಲ್ಲವನ್ನೂ ಮಾಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಮತ್ತು ಕೆಲವರು ಯಶಸ್ಸನ್ನು ಪಡೆಯುತ್ತಾರೆ. ಆದರೂ, ಹದಿವಯಸ್ಕ ತಾಯಂದಿರ ಗಂಡುಮಕ್ಕಳು ಬೆಳೆದು ದೊಡ್ಡವರಾಗಿ ಜೈಲನ್ನು ಸೇರುವ ಮತ್ತು ಅವರ ಹೆಣ್ಣುಮಕ್ಕಳು ಸ್ವತಃ ಹದಿವಯಸ್ಕ ತಾಯಂದಿರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂಬುದು ಕಠೋರ ಸತ್ಯವಾಗಿದೆ. ಕಳೆದ ಅನೇಕ ದಶಕಗಳ ಅಂಕಿಅಂಶಗಳನ್ನು ಪುನರ್ವಿಮರ್ಶಿಸಿದ ನಂತರ, ಸಂಶೋಧಕ ರಾಬರ್ಟ್‌ ಲೆರ್‌ಮನ್‌ ಬರೆದುದು: “ಇಬ್ಬರು ಹೆತ್ತವರಿಗಿಂತ ಏಕ ಹೆತ್ತವರಿರುವ ಕುಟುಂಬಗಳು ಹೆಚ್ಚಾಗುತ್ತಿರುವುದು, ಅಧಿಕಗೊಳ್ಳುತ್ತಿರುವ ಇತರ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿರಬಹುದು. ಈ ಸಮಸ್ಯೆಗಳಲ್ಲಿ, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದನ್ನು ಅರ್ಧದಲ್ಲೇ ನಿಲ್ಲಿಸುವುದು, ಮದ್ಯವನ್ನು ಮತ್ತು ಅಮಲೌಷಧವನ್ನು ದುರುಪಯೋಗಿಸುವುದು, ತರುಣಾವಸ್ಥೆಯಲ್ಲೇ ಗರ್ಭಧರಿಸಿ ಮಕ್ಕಳನ್ನು ಹೆರುವುದು ಮತ್ತು ಬಾಲಾಪರಾಧವು ಸೇರಿದೆ.”

ಲೈಂಗಿಕ ಸ್ವೇಚ್ಛಾಚಾರದ ಜೀವನಶೈಲಿಯುಳ್ಳವರು ಶಾರೀರಿಕ ಮತ್ತು ಮಾನಸಿಕ, ಹೀಗೆ ಎರಡೂ ರೀತಿಯ ಅಪಾಯಗಳನ್ನು ಎದುರಿಸುತ್ತಾರೆ. ಉದಾಹರಣೆಗೆ, ಶಿಶುವೈದ್ಯಶಾಸ್ತ್ರ (ಇಂಗ್ಲಿಷ್‌) ಎಂಬ ಪತ್ರಿಕೆ ವರದಿಸುವುದು: “ಲೈಂಗಿಕವಾಗಿ ಸಕ್ರಿಯರಾಗಿರುವ ತರುಣರು ಖಿನ್ನರಾಗುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ದತ್ತಾಂಶಗಳು ಸೂಚಿಸುತ್ತವೆ.” ಇತರ ಆರೋಗ್ಯ ಅಪಾಯಗಳ ಕುರಿತು ‘ಅಮೆರಿಕನ್‌ ಸೋಷಿಯಲ್‌ ಹೆಲ್ತ್‌ ಆಸೋಸಿಯೇಷನ್‌’ ಹೇಳುವುದು: “[ಯುನೈಟೆಡ್‌ ಸ್ಟೇಟ್ಸ್‌ನಲ್ಲಿ] ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಜೀವಮಾನದ ಒಂದಲ್ಲ ಒಂದು ಸಮಯದಲ್ಲಿ ಒಂದಲ್ಲ ಒಂದು ರೀತಿಯ ರತಿರವಾನಿತ ರೋಗಕ್ಕೆ ತುತ್ತಾಗುತ್ತಾರೆ.” ಲೈಂಗಿಕತೆಯ ಕುರಿತು ಬೈಬಲ್‌ ನೀಡುವ ಪ್ರಾಯೋಗಿಕ ಸಲಹೆಯನ್ನು ಅನುಸರಿಸುವಲ್ಲಿ ಎಷ್ಟೊಂದು ಮನೋವ್ಯಥೆ ಮತ್ತು ಕಷ್ಟವನ್ನು ತಪ್ಪಿಸಸಾಧ್ಯವಿದೆ ಎಂಬುದರ ಕುರಿತು ಸ್ವಲ್ಪ ಯೋಚಿಸಿರಿ!

ಬಲವಾದ ಕುಟುಂಬ ಬಂಧಗಳನ್ನು ಕಟ್ಟಿರಿ

ಬೈಬಲ್‌ ಕೇವಲ ಹಾನಿಕಾರಕ ರೂಢಿಗಳ ಕುರಿತು ಎಚ್ಚರಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡುತ್ತದೆ. ಕುಟುಂಬ ಜೀವನದ ಗುಣಮಟ್ಟವನ್ನು ಹೇಗೆ ಉತ್ತಮಗೊಳಿಸುವುದು ಎಂಬುದರ ಕುರಿತಾಗಿಯೂ ಅದು ಪ್ರಾಯೋಗಿಕ ಬುದ್ಧಿವಾದವನ್ನು ನೀಡುತ್ತದೆ. ಅದರ ಕಡೆಗೆ ದಯವಿಟ್ಟು ಗಮನಹರಿಸಿರಿ.

ದೇವರ ವಾಕ್ಯವು ಹೇಳುವುದು: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ.” (ಎಫೆಸ 5:28) ತಮ್ಮ ಹೆಂಡತಿಯರ ಮೌಲ್ಯವನ್ನು ಅಲಕ್ಷಿಸುವ ಬದಲು, “ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ” ಎಂದು ಗಂಡಂದಿರನ್ನು ಉತ್ತೇಜಿಸಲಾಗಿದೆ. (1 ಪೇತ್ರ 3:7) ಏಳಸಾಧ್ಯವಿರುವ ಯಾವುದೇ ವಾಗ್ವಾದಗಳ ಸಂಬಂಧದಲ್ಲಿ ಗಂಡಂದಿರಿಗೆ ಈ ಬುದ್ಧಿವಾದವನ್ನು ನೀಡಲಾಗಿದೆ: “ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ.” (ಕೊಲೊಸ್ಸೆ 3:19) ಈ ಸಲಹೆಯನ್ನು ಅನ್ವಯಿಸಿಕೊಳ್ಳುವ ಯಾವುದೇ ಗಂಡನು ತನ್ನ ಹೆಂಡತಿಯ ಪ್ರೀತಿ ಮತ್ತು ಗೌರವವನ್ನು ಖಂಡಿತ ಗಳಿಸುವನು ಎಂಬುದನ್ನು ನೀವು ಒಪ್ಪುವುದಿಲ್ಲವೇ?

ಹೆಂಡತಿಯರಿಗೆ ಬೈಬಲ್‌ ಈ ನಿರ್ದೇಶನವನ್ನು ನೀಡುತ್ತದೆ: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಏಕೆಂದರೆ ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ . . . ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.” (ಎಫೆಸ 5:22, 23, 33, NIBV) ಒಬ್ಬ ಹೆಂಡತಿಯು ತನ್ನ ಗಂಡನೊಂದಿಗೆ​—⁠ಅಥವಾ ಗಂಡನ ಕುರಿತು​—⁠ಮಾತಾಡುವಾಗ ಆ ಸಲಹೆಯನ್ನು ಪಾಲಿಸುವಲ್ಲಿ, ಅವನು ಆಕೆಯನ್ನು ಗಾಢವಾಗಿ ಪ್ರೀತಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ನಿಮಗನಿಸುವುದಿಲ್ಲವೇ?

ಮಕ್ಕಳ ತರಬೇತಿಯ ವಿಷಯದಲ್ಲಿ ಹೆತ್ತವರಾದ ನಿಮಗೆ ಬೈಬಲ್‌ ಕೊಡುವ ಬುದ್ಧಿವಾದವೇನೆಂದರೆ, ನೀವು “ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ” ನಿಮ್ಮ ಮಕ್ಕಳೊಂದಿಗೆ ಸಂವಾದಿಸಬೇಕು. (ಧರ್ಮೋಪದೇಶಕಾಂಡ 6:7) ತಮ್ಮ ಮಕ್ಕಳಿಗೆ ನೈತಿಕ ಮಾರ್ಗದರ್ಶನ ಮತ್ತು ಪ್ರೀತಿಪೂರ್ವಕ ಶಿಸ್ತನ್ನು ನೀಡುವಂತೆ ವಿಶೇಷವಾಗಿ ತಂದೆಯಂದಿರಿಗೆ ಸೂಚಿಸಲಾಗಿದೆ. “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ” ಎಂದು ದೇವರ ವಾಕ್ಯವು ಹೇಳುತ್ತದೆ. (ಎಫೆಸ 6:4) ಅದಕ್ಕೆ ಪ್ರತಿಯಾಗಿ ಮಕ್ಕಳಿಗೆ, “ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು” ಮತ್ತು ‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು’ ಎಂದು ಹೇಳಲಾಗಿದೆ. *​—⁠ಎಫೆಸ 6:1, 2.

ಈ ಬುದ್ಧಿವಾದವನ್ನು ಅನ್ವಯಿಸುವ ಮೂಲಕ ಕುಟುಂಬಗಳು ಪ್ರಯೋಜನ ಹೊಂದಬಲ್ಲವು ಎಂದು ನಿಮಗನಿಸುತ್ತದೋ? ‘ತತ್ತ್ವ ಚೆನ್ನಾಗಿದೆ, ಆದರೆ ಅದು ನಿಜವಾಗಿಯೂ ಪ್ರಾಯೋಗಿಕವಾಗಿದೆಯೋ?’ ಎಂದು ನೀವು ಕೇಳಬಹುದು. ನಿಮ್ಮ ಊರಿನಲ್ಲೇ ಇರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಭೇಟಿ ನೀಡಲು ನಿಮ್ಮನ್ನು ಆಮಂತ್ರಿಸುತ್ತೇವೆ. ಬೈಬಲಿನಲ್ಲಿರುವ ವಿವೇಕಯುತ ಸಲಹೆಯನ್ನು ಅನ್ವಯಿಸಲು ಪ್ರಯತ್ನಿಸುತ್ತಿರುವ ಕುಟುಂಬಗಳನ್ನು ನೀವು ಅಲ್ಲಿ ಎದುರುಗೊಳ್ಳುವಿರಿ. ಅವರೊಂದಿಗೆ ಮಾತಾಡಿರಿ. ಆ ಕುಟುಂಬದ ಸದಸ್ಯರು ಒಬ್ಬರೊಂದಿಗೊಬ್ಬರು ಹೇಗೆ ಮಾತಾಡುತ್ತಾರೆ ಮತ್ತು ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿರಿ. ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸುವುದು ಖಂಡಿತವಾಗಿಯೂ ಕುಟುಂಬ ಜೀವನವನ್ನು ಸಂತೋಷಕರವನ್ನಾಗಿ ಮಾಡುತ್ತದೆ ಎಂಬುದನ್ನು ನೀವು ಕಣ್ಣಾರೆ ನೋಡುವಿರಿ!

ಶ್ರಮಶೀಲ ಕೆಲಸಗಾರ ಮತ್ತು ನ್ಯಾಯವಂತ ಧಣಿ

ಉದ್ಯೋಗವನ್ನು ಉಳಿಸಿಕೊಳ್ಳುವ ದಿನನಿತ್ಯದ ಹೋರಾಟದ ಕುರಿತು ಬೈಬಲ್‌ ಏನು ಹೇಳುತ್ತದೆ? ತನ್ನ ಕೆಲಸವನ್ನು ಚೆನ್ನಾಗಿ ಕಲಿತುಕೊಳ್ಳುವ ಒಬ್ಬ ಕೆಲಸಗಾರನು ಮೆಚ್ಚಲ್ಪಡುವ ಮತ್ತು ಅವನ ಕೆಲಸಕ್ಕೆ ಉತ್ತಮ ಪ್ರತಿಫಲವನ್ನು ನೀಡಲಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅದು ಹೇಳುತ್ತದೆ. “ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದೆಯಾ? ಅವನು . . . ಅರಸರ ಮುಂದೆಯೇ ಸೇವೆ ಸಲ್ಲಿಸುವನು” ಎಂದು ಜ್ಞಾನಿಯಾದ ಅರಸ ಸೊಲೊಮೋನನು ಹೇಳುತ್ತಾನೆ. (ಜ್ಞಾನೋಕ್ತಿ 22:​29, NIBV) ಇನ್ನೊಂದು ಕಡೆಯಲ್ಲಿ, “ಸೋಮಾರಿಯು” ತನ್ನ ಧಣಿಯ “ಕಣ್ಣುಗಳಿಗೆ ಹೊಗೆ”ಯಂತೆ ಕರೆಕರೆಯನ್ನುಂಟುಮಾಡುತ್ತಾನೆ. (ಜ್ಞಾನೋಕ್ತಿ 10:26) ಕೆಲಸಗಾರರು ಪ್ರಾಮಾಣಿಕರೂ ಶ್ರಮಶೀಲರೂ ಆಗಿರುವಂತೆ ಬೈಬಲ್‌ ಉತ್ತೇಜಿಸುತ್ತದೆ. “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ.” (ಎಫೆಸ 4:28) ನಮ್ಮ ಧಣಿಯು ನಮ್ಮನ್ನು ನೋಡದಿರುವಾಗಲೂ ಈ ಸಲಹೆಯು ಅನ್ವಯಿಸುತ್ತದೆ. “ಈ ಲೋಕದಲ್ಲಿನ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ; ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕರ್ತನಿಗೆ ಭಯಪಡುವವರಾಗಿ ಸರಳಮನಸ್ಸಿನಿಂದ ಕೆಲಸಮಾಡಿರಿ.” (ಕೊಲೊಸ್ಸೆ 3:22) ನೀವೊಬ್ಬ ಧಣಿಯಾಗಿರುವಲ್ಲಿ, ಈ ಮೇಲಿನ ಸಲಹೆಯನ್ನು ಪಾಲಿಸುವ ಉದ್ಯೋಗಿಯು ನಿಮಗೆ ಬಹಳ ಅಮೂಲ್ಯನಾಗಿರುವನಲ್ಲವೇ?

ಧಣಿಗಳಿಗೆ ಬೈಬಲ್‌ ಈ ಮರುಜ್ಞಾಪನವನ್ನು ನೀಡುತ್ತದೆ: “ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ.” (1 ತಿಮೊಥೆಯ 5:18) ತಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಸರಿಯಾದ ಸಮಯಕ್ಕೆ ತಕ್ಕದಾದ ಸಂಬಳವನ್ನು ನೀಡುವಂತೆ ದೇವರ ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗೆ ನಿರ್ದೇಶಿಸಿತು. “ನಿನ್ನ ನೆರೆಯವನನ್ನು ವಂಚಿಸಬಾರದು. ಇಲ್ಲವೆ ಅವನನ್ನು ಸುಲಿದುಕೊಳ್ಳಬಾರದು. ಕೂಲಿಯಾಳಿನ ಕೂಲಿಯು ನಿನ್ನ ಬಳಿಯಲ್ಲಿ ರಾತ್ರಿಯೆಲ್ಲಾ ಮತ್ತು ಮುಂಜಾನೆಯವರೆಗೆ ಇರಬಾರದು” ಎಂದು ಮೋಶೆ ಬರೆದನು. (ಯಾಜಕಕಾಂಡ 19:​13, NIBV) ಬೈಬಲಿನ ಈ ನಿರ್ದೇಶನಕ್ಕೆ ವಿಧೇಯನಾಗಿ ನಿಮ್ಮ ಕೆಲಸಕ್ಕೆ ಸರಿಯಾದ ಸಮಯದಲ್ಲಿ ತಕ್ಕದಾದ ಸಂಬಳವನ್ನು ನೀಡುವ ಧಣಿಗಾಗಿ ಕೆಲಸಮಾಡುವುದನ್ನು ನೀವು ಆನಂದಿಸುವಿರಲ್ಲವೋ?

ವಿವೇಕದ ಉತ್ಕೃಷ್ಟ ಮೂಲ

ಪುರಾತನ ಪುಸ್ತಕವಾದ ಬೈಬಲಿನಲ್ಲಿ ಇಂದಿಗೂ ಪ್ರಾಯೋಗಿಕವಾಗಿರುವ ಸಲಹೆಗಳಿರುವುದು ನಿಮ್ಮನ್ನು ಬೆರಗುಗೊಳಿಸುವುದಿಲ್ಲವೇ? ಇತರ ಅನೇಕ ಪುಸ್ತಕಗಳು ಈಗ ಅಸಂಬದ್ಧವಾಗಿರುವಾಗ ಬೈಬಲ್‌ ನಮ್ಮ ದಿನಗಳವರೆಗೂ ಬಾಳಿರುವುದಕ್ಕೆ ಕಾರಣವೇನೆಂದರೆ, ಅದರಲ್ಲಿ ಮಾನವನ ವಾಕ್ಯಗಳಿರದೆ “ದೇವರ ವಾಕ್ಯ”ವಿದೆ.​—⁠1 ಥೆಸಲೊನೀಕ 2:13.

ದೇವರ ವಾಕ್ಯದೊಂದಿಗೆ ಸುಪರಿಚಿತರಾಗಲು ಸಮಯವನ್ನು ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ನೀವು ಹಾಗೆ ಮಾಡುವಲ್ಲಿ, ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರೆಡೆಗೆ ಒಲುಮೆಯನ್ನು ಬೆಳೆಸಿಕೊಳ್ಳಲು ಆರಂಭಿಸುವಿರಿ. ಬೈಬಲ್‌ ನೀಡುವ ಸಲಹೆಯನ್ನು ಅನ್ವಯಿಸಿಕೊಳ್ಳಿರಿ ಮತ್ತು ಅದು ನಿಮ್ಮನ್ನು ಅಪಾಯದಿಂದ ರಕ್ಷಿಸುವುದನ್ನು ಹಾಗೂ ನಿಮ್ಮ ಜೀವನವನ್ನು ಉತ್ತಮಗೊಳಿಸುವುದನ್ನು ನೋಡುವಿರಿ. ಹಾಗೆ ಮಾಡುವ ಮೂಲಕ ನೀವು “ದೇವರ ಸಮೀಪಕ್ಕೆ” ಬರುವಿರಿ ಮತ್ತು “ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಬೇರಾವ ಪುಸ್ತಕವೂ ನಿಮಗೆ ಈ ರೀತಿಯಲ್ಲಿ ಸಹಾಯಮಾಡಲಾರದು. (w07 4/1)

[ಪಾದಟಿಪ್ಪಣಿ]

^ ಪ್ಯಾರ. 20 ನಿಮ್ಮ ಕುಟುಂಬಕ್ಕೆ ಸಹಾಯಮಾಡಬಲ್ಲ ಬೈಬಲ್‌ ಮೂಲತತ್ತ್ವಗಳ ಕೂಲಂಕಷವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕವನ್ನು ನೋಡಿರಿ.

[ಪುಟ 4ರಲ್ಲಿರುವ ಚಿತ್ರ]

ಮದ್ಯ ಸೇವನೆಯ ಕುರಿತು ಬೈಬಲ್‌ ನೀಡುವ ಸಲಹೆಯು ಪ್ರಾಯೋಗಿಕವಾಗಿದೆ ಎಂದು ನಿಮಗನಿಸುತ್ತದೋ?

[ಪುಟ 5ರಲ್ಲಿರುವ ಚಿತ್ರ]

ತಂಬಾಕಿನಿಂದ ದೂರವಿರಬೇಕೆಂಬ ಬೈಬಲ್‌-ಆಧಾರಿತ ಬುದ್ಧಿವಾದವನ್ನು ನೀವು ಸಮ್ಮತಿಸುತ್ತೀರೋ?

[ಪುಟ 7ರಲ್ಲಿರುವ ಚಿತ್ರಗಳು]

ಬೈಬಲಿನ ಬುದ್ಧಿವಾದವನ್ನು ಅನುಸರಿಸುವುದು ಕುಟುಂಬ ಜೀವನವನ್ನು ಉತ್ತಮಗೊಳಿಸುತ್ತದೆ

[ಪುಟ 5ರಲ್ಲಿರುವ ಚಿತ್ರ ಕೃಪೆ]

ಭೂಗೋಲ: Based on NASA Photo