ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಪರ ಕುರಿಪಾಲರಿಗೆ ದೈನ್ಯದ ಅಧೀನತೆ

ಪ್ರೀತಿಪರ ಕುರಿಪಾಲರಿಗೆ ದೈನ್ಯದ ಅಧೀನತೆ

ಪ್ರೀತಿಪರ ಕುರಿಪಾಲರಿಗೆ ದೈನ್ಯದ ಅಧೀನತೆ

“ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರಿ.”​—⁠ಇಬ್ರಿಯ 13:​17, NIBV.

ಯೆಹೋವ ದೇವರೂ ಆತನ ಪುತ್ರನಾದ ಯೇಸು ಕ್ರಿಸ್ತನೂ ಪ್ರೀತಿಪರ ಕುರಿಪಾಲರು ಆಗಿದ್ದಾರೆ. ಯೆಶಾಯನು ಹೀಗೆ ಪ್ರವಾದಿಸಿದನು: “ಇಗೋ, ಸಾರ್ವಭೌಮನಾದ ಯೆಹೋವನು ಬಲದೊಂದಿಗೆ ಬರುವನು. ಆತನ ತೋಳು ತನಗೋಸ್ಕರ ಆಳುವುದು. . . . ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು, ಎಳೆಮರಿಗಳನ್ನು ಮೆಲ್ಲಗೆ ನಡಿಸುವನು.”​—⁠ಯೆಶಾಯ 40:​10, 11, NIBV.

2 ಆ ಪುನಸ್ಸ್ಥಾಪನೆಯ ಪ್ರವಾದನೆಯು ಸಾ.ಶ.ಪೂ. 537ರಲ್ಲಿ ಯೆಹೂದಿ ಜನಶೇಷವು ಯೆಹೂದಕ್ಕೆ ಹಿಂದಿರುಗಿದಾಗ ಪ್ರಥಮವಾಗಿ ನೆರವೇರಿತು. (2 ಪೂರ್ವಕಾಲವೃತ್ತಾಂತ 36:​22, 23) ಮಹಾ ಕೋರೆಷನಾದ ಯೇಸು ಕ್ರಿಸ್ತನು 1919ರಲ್ಲಿ ಅಭಿಷಿಕ್ತ ಉಳಿಕೆಯವರನ್ನು ವಿಮೋಚಿಸಿದಾಗ ಆ ಪ್ರವಾದನೆಯು ಮತ್ತೊಮ್ಮೆ ನೆರವೇರಿತು. (ಪ್ರಕಟನೆ 18:2; ಯೆಶಾಯ 44:28) ಯೇಸು ಕ್ರಿಸ್ತನು ಯೆಹೋವನ ಆಳುವ “ತೋಳು” ಆಗಿದ್ದು, ಕುರಿಗಳನ್ನು ಒಟ್ಟುಗೂಡಿಸಿ, ಅವನ್ನು ಕೋಮಲ ಪರಾಮರಿಕೆಯಿಂದ ಪಾಲಿಸುತ್ತಾನೆ. ಯೇಸು ತಾನೇ ಹೇಳಿದ್ದು: “ನಾನೇ ಒಳ್ಳೇ ಕುರುಬನು; . . . ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ.”​—⁠ಯೋಹಾನ 10:14.

3ಯೆಶಾಯ 40:​10, 11ರ ಪ್ರವಾದನೆಯು ಯೆಹೋವನು ತನ್ನ ಜನರನ್ನು ಪಾಲಿಸುವ ಕೋಮಲತೆಯನ್ನು ಒತ್ತಿಹೇಳುತ್ತದೆ. (ಕೀರ್ತನೆ 23:​1-6) ಯೇಸು ಕೂಡ ತನ್ನ ಭೂಶುಶ್ರೂಷೆಯ ಸಮಯದಲ್ಲಿ ತನ್ನ ಶಿಷ್ಯರಿಗೂ ಜನಸಾಮಾನ್ಯರಿಗೂ ಕೋಮಲ ಪರಿಗಣನೆಯನ್ನು ತೋರಿಸಿದನು. (ಮತ್ತಾಯ 11:​28-30; ಮಾರ್ಕ 6:34) ಯಾರು ತಮ್ಮ ಮಂದೆಗಳನ್ನು ನಾಚಿಕೆಗೆಟ್ಟ ರೀತಿಯಲ್ಲಿ ಅಸಡ್ಡೆಮಾಡಿ ಶೋಷಣೆಮಾಡುತ್ತಿದ್ದರೊ ಅಂಥ ಇಸ್ರಾಯೇಲಿನ ಕುರುಬರ ಅಥವಾ ನಾಯಕರ ನಿಷ್ಕಾರುಣ್ಯವನ್ನು ಯೆಹೋವನು ಮತ್ತು ಯೇಸು ಇಬ್ಬರೂ ಖಂಡಿಸಿದರು. (ಯೆಹೆಜ್ಕೇಲ 34:​2-10; ಮತ್ತಾಯ 23:​3, 4, 15) ಯೆಹೋವನು ವಚನಕೊಟ್ಟದ್ದು: “ಆದಕಾರಣ ನನ್ನ ಹಿಂಡು ಇನ್ನೆಂದಿಗೂ ಸೂರೆಯಾಗದಂತೆ ನಾನು ಅದನ್ನು ರಕ್ಷಿಸಿ ಟಗರುಹೋತಗಳಿಗೂ ಕುರಿಮೇಕೆಗಳಿಗೂ ನ್ಯಾಯತೀರಿಸುವೆನು. ನನ್ನ ಹಿಂಡನ್ನು ಕಾಯಲಿಕ್ಕೆ ಒಬ್ಬನೇ ಕುರುಬನನ್ನು ಏರ್ಪಡಿಸುವೆನು; ನನ್ನ ಸೇವಕನಾದ ದಾವೀದನೆಂಬ ಆ ಕುರುಬನು ಅದನ್ನು ಮೇಯಿಸುವನು; ಹೌದು, ಅದರ ಕುರುಬನಾಗಿ ಅದನ್ನು ಮೇಯಿಸುತ್ತಾ ಬರುವನು.” (ಯೆಹೆಜ್ಕೇಲ 34:​22, 23) ಈ ಅಂತ್ಯಕಾಲದಲ್ಲಿ, ಯೆಹೋವನು ತನ್ನ ಸರ್ವ ಸೇವಕರ ಅಂದರೆ ಆತ್ಮಾಭಿಷಿಕ್ತ ಕ್ರೈಸ್ತರ ಮತ್ತು “ಬೇರೆ ಕುರಿಗಳ” ಮೇಲೆ ನೇಮಿಸಿರುವ ‘ಒಬ್ಬನೇ ಕುರುಬನು’ ಮಹಾ ದಾವೀದನಾದ ಯೇಸು ಕ್ರಿಸ್ತನಾಗಿದ್ದಾನೆ.​—⁠ಯೋಹಾನ 10:16.

ಸಭೆಗೆ ಕೊಡಲಾದ ಸ್ವರ್ಗೀಯ ಕೊಡುಗೆಗಳು

4 ಭೂಮಿಯ ಮೇಲಿರುವ ತನ್ನ ಸೇವಕರ ಮೇಲೆ “ಒಬ್ಬನೇ ಕುರುಬ”ನಾದ ಯೇಸು ಕ್ರಿಸ್ತನನ್ನು ನೇಮಿಸುವ ಮೂಲಕ ಯೆಹೋವನು ಕ್ರೈಸ್ತ ಸಭೆಗೆ ಒಂದು ಅಮೂಲ್ಯ ಕೊಡುಗೆಯನ್ನು ಕೊಟ್ಟನು. ಈ ಸ್ವರ್ಗೀಯ ನಾಯಕನ ಕೊಡುಗೆಯ ಕುರಿತು ಯೆಶಾಯ 55:4ರಲ್ಲಿ ಪ್ರವಾದಿಸಲಾಗಿತ್ತು: “ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” ಅಭಿಷಿಕ್ತ ಕ್ರೈಸ್ತರನ್ನು ಮತ್ತು ‘ಮಹಾ ಸಮೂಹದ’ ಸದಸ್ಯರನ್ನು ಎಲ್ಲ ಜನಾಂಗ, ಕುಲ, ಜನ ಮತ್ತು ಭಾಷೆಗಳಿಂದ ಕೂಡಿಸಲಾಗುತ್ತದೆ. (ಪ್ರಕಟನೆ 5:​9, 10; 7:⁠9) “ಒಬ್ಬನೇ ಕುರುಬ”ನಾಗಿರುವ ಕ್ರಿಸ್ತ ಯೇಸುವಿನ ನಾಯಕತ್ವದ ಕೆಳಗೆ ಅವರು ಒಂದು ಅಂತಾರಾಷ್ಟ್ರೀಯ ಸಭೆ ಅಂದರೆ “ಒಂದೇ ಹಿಂಡು” ಆಗುತ್ತಾರೆ.

5 ಯೇಸು ಕೂಡ ಭೂಮಿಯ ಮೇಲಿರುವ ತನ್ನ ಸಭೆಗೆ ಒಂದು ಅಮೂಲ್ಯ ದಾನವನ್ನು ಕೊಟ್ಟಿದ್ದಾನೆ. ಹೇಗೆಂದರೆ ಯೆಹೋವನನ್ನೂ ಯೇಸುವನ್ನೂ ಅನುಕರಿಸುತ್ತ, ಸಭೆಯನ್ನು ಕಟ್ಟೊಲುಮೆಯಿಂದ ಪಾಲಿಸುವ ನಂಬಿಗಸ್ತ ಉಪಕುರಿಪಾಲರನ್ನು ಒದಗಿಸಿದ ಮೂಲಕವೇ. ಅಪೊಸ್ತಲ ಪೌಲನು ಈ ಪ್ರೀತಿಯ ಕೊಡುಗೆಯ ವಿಷಯದಲ್ಲಿ ಎಫೆಸದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಹೀಗೆ ಬರೆದನು: “ಆತನು ಉನ್ನತಸ್ಥಾನಕ್ಕೆ ಏರಿದಾಗ ತಾನು ಜಯಿಸಿದ್ದ ಬಹುಜನರನ್ನು ಸೆರೆಹಿಡುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಮಾಡಿದನು. [“ಪುರುಷರಲ್ಲಿ ದಾನಗಳನ್ನು ಕೊಟ್ಟನು,” NW] . . . ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರ [“ಕುರಿಪಾಲರ,” NW] ನ್ನಾಗಿಯೂ ಉಪದೇಶಿಗಳ [“ಬೋಧಕರ,” NW] ನ್ನಾಗಿಯೂ ಅನುಗ್ರಹಿಸಿದನು.” (ಎಫೆಸ 4:​8, 11) “ಇದು ಶುಶ್ರೂಷಾ ಕೆಲಸಕ್ಕಾಗಿ, ಕ್ರಿಸ್ತನ ದೇಹವನ್ನು ಬಲಗೊಳಿಸುವುದಕ್ಕಾಗಿ ಪವಿತ್ರ ಜನರನ್ನು ಪುನಃ ಸರಿಹೊಂದಿಸುವ ಉದ್ದೇಶದಿಂದಾಗಿತ್ತು.”​—⁠ಎಫೆಸ 4:​12, NW.

6 ಯೆಹೋವನು ಮತ್ತು ಆತನ ಪುತ್ರನು ಕುರಿಗಳನ್ನು ಕೋಮಲತೆಯಿಂದ ಪಾಲಿಸಲು ಪವಿತ್ರಾತ್ಮದ ಮೂಲಕ ನೇಮಿಸಿದ ಮೇಲ್ವಿಚಾರಕರು ಅಥವಾ ಹಿರಿಯರೇ ಈ ‘ಪುರುಷದಾನಗಳು’ ಆಗಿದ್ದಾರೆ. (ಅ. ಕೃತ್ಯಗಳು 20:​28, 29) ಆರಂಭದಲ್ಲಿದ್ದ ಈ ಮೇಲ್ವಿಚಾರಕರೆಲ್ಲರೂ ಅಭಿಷಿಕ್ತ ಕ್ರೈಸ್ತ ಪುರುಷರು ಆಗಿದ್ದರು. ಅಭಿಷಿಕ್ತ ಸಭೆಯ ಹಿರಿಯ ಮಂಡಲಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು, ಕ್ರಿಸ್ತನ ಬಲಗೈಯಲ್ಲಿರುವ ಅಂದರೆ ಅವನ ನಿಯಂತ್ರಣದಲ್ಲಿರುವ “ನಕ್ಷತ್ರಗಳು” ಅಥವಾ “ದೂತರು” ಎಂದು ಪ್ರಕಟನೆ 1:​16, 20 ಸೂಚಿಸುತ್ತದೆ. ಆದರೆ, ಈ ಅಂತ್ಯಕಾಲದಲ್ಲಿ ಇನ್ನೂ ಭೂಮಿಯಲ್ಲಿರುವ ಅಭಿಷಿಕ್ತ ಮೇಲ್ವಿಚಾರಕರ ಸಂಖ್ಯೆ ಕಡಿಮೆಯಾಗುತ್ತಾ ಇರುವುದರಿಂದ ಸಭೆಗಳಲ್ಲಿರುವ ಕ್ರೈಸ್ತ ಹಿರಿಯರಲ್ಲಿ ಅಧಿಕಾಂಶ ಮಂದಿ ಬೇರೆ ಕುರಿಗಳಾಗಿದ್ದಾರೆ. ಅವರು ಪವಿತ್ರಾತ್ಮದ ನಿರ್ದೇಶನದಲ್ಲಿ ಆಡಳಿತ ಮಂಡಲಿಯ ಪ್ರತಿನಿಧಿಗಳಿಂದ ನೇಮಿಸಲ್ಪಡುವುದರಿಂದ, ಅವರೂ ಒಳ್ಳೇ ಕುರುಬನಾದ ಯೇಸು ಕ್ರಿಸ್ತನ ಬಲಗೈಯಲ್ಲಿ (ಅಥವಾ ನಿರ್ದೇಶನದ ಕೆಳಗೆ) ಇದ್ದಾರೆಂದು ಹೇಳಸಾಧ್ಯವಿದೆ. (ಯೆಶಾಯ 61:​5, 6) ನಮ್ಮ ಸಭೆಗಳ ಹಿರಿಯರು ಸಭೆಯ ಶಿರಸ್ಸಾದ ಕ್ರಿಸ್ತನಿಗೆ ಅಧೀನತೆ ತೋರಿಸುವುದರಿಂದ ಅವರಿಗೆ ನಾವು ಪೂರ್ಣ ಸಹಕಾರ ನೀಡಬೇಕು.​—⁠ಕೊಲೊಸ್ಸೆ 1:18.

ವಿಧೇಯತೆ ಮತ್ತು ಅಧೀನತೆ

7 ನಮ್ಮ ಸ್ವರ್ಗೀಯ ಕುರಿಪಾಲರಾದ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಸಭೆಗಳಲ್ಲಿ ಜವಾಬ್ದಾರಿಕೆಯ ಸ್ಥಾನಗಳಲ್ಲಿ ಇಟ್ಟಿರುವ ಉಪಕುರಿಪಾಲರಿಗೆ ನಾವು ವಿಧೇಯತೆ ಮತ್ತು ಅಧೀನತೆಯನ್ನು ತೋರಿಸುವಂತೆ ಅಪೇಕ್ಷಿಸುತ್ತಾರೆ. (1 ಪೇತ್ರ 5:⁠5) ಅಪೊಸ್ತಲ ಪೌಲನು ಪ್ರೇರಿತನಾಗಿ ಬರೆದುದು: “ನಿಮಗೆ ದೇವರ ವಾಕ್ಯವನ್ನು ತಿಳಿಸಿ ನಿಮ್ಮನ್ನು ನಡೆಸಿದ ನಿಮ್ಮ ಪಾಲಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಜೀವಿಸಿದ ದಾರಿಯ ಅಂತ್ಯದ ಫಲವನ್ನು ಆಲೋಚಿಸಿ ಅವರ ನಂಬಿಕೆಯನ್ನು ಅನುಸರಿಸಿರಿ. ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರಿ, ಏಕೆಂದರೆ ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು [“ಪ್ರಾಣಗಳನ್ನು,” NW] ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.”​—⁠ಇಬ್ರಿಯ 13:​7, 17, NIBV.

8 ಹಿರಿಯರ ನಂಬಿಗಸ್ತ ನಡತೆಯ ಅಂತ್ಯ ಫಲವನ್ನು ನಾವು “ಆಲೋಚಿಸಿ” ಅಥವಾ ಜಾಗರೂಕತೆಯಿಂದ ಪರಿಗಣಿಸಿ, ಅವರ ನಂಬಿಕೆಯ ಮಾದರಿಗಳನ್ನು ಅನುಸರಿಸಲು ಪೌಲನು ಕರೆಕೊಡುವುದನ್ನು ಗಮನಿಸಿರಿ. ಅಲ್ಲದೆ, ಈ ನೇಮಿತ ಪುರುಷರ ನಿರ್ದೇಶನಗಳಿಗೆ ನಾವು ವಿಧೇಯರೂ ಅಧೀನರೂ ಆಗಬೇಕೆಂದು ಅವನು ಬುದ್ಧಿಹೇಳುತ್ತಾನೆ. ಬೈಬಲ್‌ ವಿದ್ವಾಂಸರಾದ ಆರ್‌. ಟಿ. ಫ್ರಾನ್ಸ್‌ ಎಂಬವರು ವಿವರಿಸುವುದೇನೆಂದರೆ “ವಿಧೇಯರಾಗಿ” ಎಂದು ಭಾಷಾಂತರವಾಗಿರುವ ಮೂಲ ಗ್ರೀಕ್‌ ಪದವು “ಸಾಮಾನ್ಯ ವಿಧೇಯತೆಯನ್ನು ಸೂಚಿಸುವ ಶಬ್ದವಲ್ಲ; ಅಕ್ಷರಾರ್ಥವಾಗಿ ‘ಒಡಂಬಡಿಸುವ’ ಅಂದರೆ ಅವರ ನಾಯಕತ್ವವನ್ನು ಇಷ್ಟಪೂರ್ವಕವಾಗಿ ಅಂಗೀಕರಿಸುವುದನ್ನು ಅದು ಸೂಚಿಸುತ್ತದೆ.” ನಾವು ಹಿರಿಯರಿಗೆ ವಿಧೇಯರಾಗುವುದು ದೇವರ ವಾಕ್ಯ ಹಾಗೆ ತಿಳಿಸುವುದರಿಂದ ಮಾತ್ರವಲ್ಲ ಅವರ ಹೃದಯದಲ್ಲಿ ರಾಜ್ಯಾಭಿರುಚಿಗಳೂ ನಮ್ಮ ಬಗ್ಗೆ ಹಿತಾಸಕ್ತಿಯೂ ಇದೆ ಎಂದು ನಾವು ಮನಗಂಡಿರುವುದರಿಂದಲೇ. ಅವರ ನಾಯಕತ್ವವನ್ನು ನಾವು ಇಷ್ಟಪೂರ್ವಕವಾಗಿ ಅಂಗೀಕರಿಸುವಲ್ಲಿ ನಿಶ್ಚಯವಾಗಿಯೂ ಸಂತೋಷಿಸುವೆವು.

9 ಆದರೆ, ಒಂದು ನಿರ್ದಿಷ್ಟ ಸಂಗತಿಯ ಕುರಿತು ಹಿರಿಯರು ಕೊಡುವ ನಿರ್ದೇಶನ ಅತ್ಯುತ್ತಮವೆಂದು ನಮಗೆ ಖಾತರಿಯಾಗದಿದ್ದರೆ ಆಗೇನು? ಅಧೀನತೆಯು ಬೇಕಾಗಿರುವುದು ಇಲ್ಲಿಯೇ. ಎಲ್ಲವೂ ಸ್ಪಷ್ಟವಾಗಿದ್ದು, ನಮ್ಮಿಷ್ಟದ ಪ್ರಕಾರ ನಡೆಯುವಾಗ ವಿಧೇಯರಾಗುವುದು ಬಲು ಸುಲಭ. ಆದರೆ ನಮಗೆ ಕೊಡಲ್ಪಟ್ಟ ನಿರ್ದೇಶನವು ವೈಯಕ್ತಿಕವಾಗಿ ಸರಿಯಾಗಿ ತಿಳಿಯದೆ ಇರುವಾಗಲೂ ನಾವು ಅದಕ್ಕೆ ಮಣಿಯುವುದು ನಿಜವಾದ ಅಧೀನತೆ ಆಗಿದೆ. ಅಪೊಸ್ತಲನಾಗುವ ಮೊದಲು ಪೇತ್ರನು ತೋರಿಸಿದ್ದು ಈ ರೀತಿಯ ಅಧೀನತೆಯನ್ನೇ.​—⁠ಲೂಕ 5:​4, 5.

ಇಷ್ಟಪೂರ್ವಕವಾಗಿ ಸಹಕರಿಸಲು ನಾಲ್ಕು ಕಾರಣಗಳು

10 ಮೇಲೆ ಉದ್ಧರಿಸಿರುವ ಇಬ್ರಿಯ 13:​7, 17 ರಲ್ಲಿ, ನಾವು ಕ್ರೈಸ್ತ ಮೇಲ್ವಿಚಾರಕರಿಗೆ ಏಕೆ ವಿಧೇಯರೂ ಅಧೀನರೂ ಆಗಬೇಕೆಂಬುದಕ್ಕೆ ನಾಲ್ಕು ಕಾರಣಗಳನ್ನು ಅಪೊಸ್ತಲ ಪೌಲನು ಕೊಡುತ್ತಾನೆ. ಒಂದನೆಯದ್ದು, ಅವರು ನಮಗೆ ‘ದೇವರ ವಾಕ್ಯವನ್ನು ತಿಳಿಸಿದ’ ವ್ಯಕ್ತಿಗಳು ಆಗಿರುವುದರಿಂದಲೇ. ಯೇಸು ಸಭೆಗೆ ಕೊಡುವ ‘ಪುರುಷರಲ್ಲಿ ದಾನಗಳು’ “ಪವಿತ್ರ ಜನರನ್ನು ಪುನಃ ಸರಿಹೊಂದಿಸುವ” ಉದ್ದೇಶಕ್ಕಾಗಿತ್ತೆಂಬುದನ್ನು ನೆನಪಿಸಿಕೊಳ್ಳಿ. (ಎಫೆಸ 4:​11, 12, NW) ಅವನು ಪ್ರಥಮ ಶತಮಾನದ ಕ್ರೈಸ್ತರ ಯೋಚನೆ ಮತ್ತು ವರ್ತನೆಯನ್ನು ನಂಬಿಗಸ್ತ ಉಪಕುರಿಪಾಲರ ಮುಖಾಂತರ ಸರಿಹೊಂದಿಸಿದನು. ಇದಕ್ಕಾಗಿ ಅವರಲ್ಲಿ ಕೆಲವರು ದೈವಪ್ರೇರಿತರಾಗಿ ಸಭೆಗಳಿಗೆ ಪತ್ರಗಳನ್ನೂ ಬರೆದರು. ಆದಿಕ್ರೈಸ್ತರನ್ನು ಮಾರ್ಗದರ್ಶಿಸಲು ಮತ್ತು ಬಲಪಡಿಸಲು ಯೇಸು ಅಂಥ ಆತ್ಮನೇಮಿತ ಮೇಲ್ವಿಚಾರಕರನ್ನು ಉಪಯೋಗಿಸಿದನು.​—⁠1 ಕೊರಿಂಥ 16:​15-18; 2 ತಿಮೊಥೆಯ 2:2; ತೀತ 1:⁠5.

11 ‘ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು’ ಪ್ರತಿನಿಧಿಸುವ ಆಡಳಿತ ಮಂಡಲಿ ಮತ್ತು ನೇಮಿತ ಹಿರಿಯರ ಮುಖಾಂತರ ಯೇಸು ಇಂದು ನಮ್ಮನ್ನು ನಡೆಸುತ್ತಾನೆ. (ಮತ್ತಾಯ 24:45) ಆದುದರಿಂದ “ಪ್ರಧಾನಕುರುಬ”ನಾದ (NIBV) ಯೇಸು ಕ್ರಿಸ್ತನಿಗೆ ಗೌರವ ತೋರಿಸುತ್ತಾ ನಾವು ಪೌಲನ ಈ ಮಾತುಗಳಿಗೆ ಕಿವಿಗೊಡುತ್ತೇವೆ: “ಸಹೋದರರೇ, ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಕ್ಷಿಸಿ.”​—⁠1 ಪೇತ್ರ 5:4; 1 ಥೆಸಲೋನಿಕ 5:​12; 1 ತಿಮೊಥೆಯ 5:17.

12 ಕ್ರೈಸ್ತ ಮೇಲ್ವಿಚಾರಕರೊಂದಿಗೆ ಸಹಕರಿಸುವುದಕ್ಕಿರುವ ಎರಡನೆಯ ಕಾರಣವು, ‘ಅವರು [ನಮ್ಮ] ಪ್ರಾಣಗಳನ್ನು ಕಾಯುವವರಾಗಿ’ ಇರುವುದರಿಂದಲೇ. ನಮ್ಮ ಮನೋಭಾವ ಅಥವಾ ವರ್ತನೆಯಲ್ಲಿ ನಮ್ಮ ಆಧ್ಯಾತ್ಮಿಕತೆಗೆ ಅಪಾಯ ತರಬಹುದಾದ ಏನಾದರೂ ಇದೆಯೆಂದು ಮೇಲ್ವಿಚಾರಕರಿಗೆ ತಿಳಿದಲ್ಲಿ, ನಮ್ಮನ್ನು ಸರಿಹೊಂದಿಸುವ ಉದ್ದೇಶದಿಂದ ಅಗತ್ಯವಿರುವ ಸಲಹೆಯನ್ನು ನೀಡಲು ಸಿದ್ಧರಿರುತ್ತಾರೆ. (ಗಲಾತ್ಯ 6:⁠1) ‘ಕಾಯುವುದು’ ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದದ ಅಕ್ಷರಾರ್ಥವು, “ನಿದ್ರೆಯನ್ನು ತ್ಯಜಿಸುವುದು” ಎಂದಾಗಿದೆ. ಒಬ್ಬ ಬೈಬಲ್‌ ತಜ್ಞರಿಗನುಸಾರ, ಅದು “ಕುರುಬನು ಎಡೆಬಿಡದೆ ಎಚ್ಚರದಿಂದ ಇರುವುದನ್ನು ಸೂಚಿಸುತ್ತದೆ.” ಹೀಗೆ ಹಿರಿಯರು ತಾವೇ ಆಧ್ಯಾತ್ಮಿಕವಾಗಿ ಎಚ್ಚರದಿಂದಿರುವುದು ಮಾತ್ರವಲ್ಲದೆ, ನಮ್ಮ ಆಧ್ಯಾತ್ಮಿಕ ಕ್ಷೇಮಕ್ಕಾಗಿಯೂ ರಾತ್ರಿ ನಿದ್ರೆಗೆಡುತ್ತಾರೆ. ಪ್ರೀತಿ ತೋರಿಸುವ ಇಂಥ ಉಪಕುರಿಪಾಲರೊಂದಿಗೆ ನಾವು ಇಷ್ಟಪೂರ್ವಕವಾಗಿ ಸಹಕರಿಸಬೇಕಲ್ಲಾ. ಯಾಕೆಂದರೆ ಅವರು “ಮಹಾಪಾಲಕನಾಗಿರುವ” ಯೇಸು ಕ್ರಿಸ್ತನು ತೋರಿಸಿದ ಕೋಮಲ ಪರಾಮರಿಕೆಯನ್ನು ಅನುಸರಿಸಲು ತಮ್ಮಿಂದಾದಷ್ಟು ಪ್ರಯತ್ನಿಸುತ್ತಾರೆ.​—⁠ಇಬ್ರಿಯ 13:20.

13 ಮೇಲ್ವಿಚಾರಕರೊಂದಿಗೆ ನಾವು ಇಷ್ಟಪೂರ್ವಕವಾಗಿ ಸಹಕರಿಸಲಿಕ್ಕಿರುವ ಮೂರನೆಯ ಕಾರಣವು, “ಅವರು ಲೆಕ್ಕ ಒಪ್ಪಿಸಬೇಕಾದವರಾಗಿ” ನಮ್ಮನ್ನು ಕಾಯುವುದರಿಂದಲೇ. ತಾವು ಸ್ವರ್ಗೀಯ ಕುರಿಪಾಲರಾದ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕೆಳಗೆ ಸೇವೆಮಾಡುತ್ತಿರುವ ಉಪಕುರಿಪಾಲರೆಂಬುದನ್ನು ಮೇಲ್ವಿಚಾರಕರು ಜ್ಞಾಪಿಸಿಕೊಳ್ಳುತ್ತಾರೆ. (ಯೆಹೆಜ್ಕೇಲ 34:​22-24) ಕುರಿಗಳ ಒಡೆಯನು ಯೆಹೋವನೇ. ಆತನು ಅವರನ್ನು “ತನ್ನ ಸ್ವಂತ ಪುತ್ರನ ರಕ್ತದಿಂದ ಖರೀದಿಸಿ”ರುವುದರಿಂದ ನೇಮಿತ ಮೇಲ್ವಿಚಾರಕರು ಆತನ ಮಂದೆಯನ್ನು “ಕೋಮಲತೆಯಿಂದ” ಪಾಲಿಸುವ ವಿಷಯದಲ್ಲಿ ದೇವರಿಗೆ ‘ಲೆಕ್ಕ ಒಪ್ಪಿಸಬೇಕಾಗಿದೆ.’ (ಅ. ಕೃತ್ಯಗಳು 20:​28, 29, NW) ಹೀಗಿರುವುದರಿಂದ, ನಾವೆಲ್ಲರೂ ಯೆಹೋವನ ನಿರ್ದೇಶನಕ್ಕೆ ಪ್ರತಿವರ್ತಿಸುವ ವಿಧಕ್ಕಾಗಿ ಆತನಿಗೆ ಲೆಕ್ಕ ಒಪ್ಪಿಸಬೇಕು. (ರೋಮಾಪುರ 14:​10-12) ನೇಮಿತ ಹಿರಿಯರಿಗೆ ನಾವು ತೋರಿಸುವ ವಿಧೇಯತೆಯು ಸಭೆಯ ಶಿರಸ್ಸಾದ ಕ್ರಿಸ್ತನಿಗೆ ನಾವು ಅಧೀನರೆಂಬುದಕ್ಕೂ ರುಜುವಾತನ್ನು ಒದಗಿಸುತ್ತದೆ.​—⁠ಕೊಲೊಸ್ಸೆ 2:19.

14 ನಾವು ಕ್ರೈಸ್ತ ಮೇಲ್ವಿಚಾರಕರಿಗೆ ಏಕೆ ದೈನ್ಯದಿಂದ ಅಧೀನರಾಗಬೇಕೆಂಬುದಕ್ಕೆ ನಾಲ್ಕನೆಯ ಕಾರಣವನ್ನು ಪೌಲನು ಕೊಟ್ಟನು. ಅವನು ಬರೆದುದು: “ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿಯ 13:17) ಬೋಧನೆ, ಕುರಿಪಾಲನೆ, ಸಾರುವ ಕಾರ್ಯದಲ್ಲಿ ನಾಯಕತ್ವ, ತಮ್ಮ ಕುಟುಂಬಗಳ ಪರಿಪಾಲನೆ ಮತ್ತು ಸಭಾ ಸಮಸ್ಯೆಗಳನ್ನು ನಿರ್ವಹಿಸುವುದು ಮುಂತಾದ ಮಹತ್ತ್ವದ ಜವಾಬ್ದಾರಿಗಳಿಂದಾಗಿ ಕ್ರೈಸ್ತ ಹಿರಿಯರು ಭಾರವಾದ ಹೊರೆಯನ್ನು ಹೊತ್ತವರಾಗಿದ್ದಾರೆ. (2 ಕೊರಿಂಥ 11:​28, 29) ನಾವು ಅವರೊಂದಿಗೆ ಸಹಕರಿಸದಿದ್ದರೆ ಅವರ ಹೊರೆಗೆ ಇನ್ನೂ ಹೆಚ್ಚನ್ನೇ ಕೂಡಿಸುತ್ತೇವೆ. ಇದರಿಂದಾಗಿ ಅವರು ‘ವ್ಯಸನಪಡುವರು.’ ನಮ್ಮ ಅಸಹಕಾರವು ಯೆಹೋವನನ್ನು ಅಸಮಾಧಾನ ಪಡಿಸುವುದರಿಂದ ಅದು ನಮಗೆ ಹಾನಿಕರವಾಗಿರಬಲ್ಲದು. ಇದಕ್ಕೆ ಬದಲಾಗಿ, ನಾವು ಯೋಗ್ಯ ಗೌರವ ಮತ್ತು ಸಹಕಾರವನ್ನು ತೋರಿಸುವಲ್ಲಿ ಹಿರಿಯರು ತಮ್ಮ ಕರ್ತವ್ಯಗಳನ್ನು ಸಂತೋಷದಿಂದ ನೆರವೇರಿಸುವರು. ಇದು ಐಕ್ಯಕ್ಕೆ ಮತ್ತು ರಾಜ್ಯ ಸಾರುವ ಕೆಲಸದಲ್ಲಿ ಹರ್ಷದಿಂದ ಭಾಗವಹಿಸುವುದಕ್ಕೆ ಸಹಾಯ ಮಾಡುತ್ತದೆ.​—⁠ರೋಮಾಪುರ 15:​5, 6.

ನಮ್ಮ ಅಧೀನತೆಯನ್ನು ತೋರಿಸುವುದು

15 ನಾವು ನೇಮಿತ ಮೇಲ್ವಿಚಾರಕರೊಂದಿಗೆ ಸಹಕರಿಸಬಲ್ಲ ಅನೇಕ ವ್ಯಾವಹಾರಿಕ ವಿಧಗಳಿವೆ. ಕ್ಷೇತ್ರದಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹಿರಿಯರು ಕ್ಷೇತ್ರಸೇವೆಗಾಗಿರುವ ಕೂಟಗಳ ದಿನಗಳನ್ನು ಮತ್ತು ಸಮಯವನ್ನು ಬದಲಾಯಿಸುವುದಾದರೆ ಆ ಏರ್ಪಾಡಿಗೆ ನಮ್ಮ ಶೆಡ್ಯೂಲನ್ನು ನಾವು ಹೊಂದಿಸಿಕೊಳ್ಳುತ್ತೇವೋ? ಅಂಥ ಹೊಸ ಏರ್ಪಾಡುಗಳನ್ನು ಬೆಂಬಲಿಸಲು ನಾವು ಪ್ರಯತ್ನಿಸೋಣ. ಇದರಿಂದಾಗಿ ನಮಗೆ ಅನಿರೀಕ್ಷಿತ ಆಶೀರ್ವಾದಗಳು ದೊರೆಯಬಹುದು. ಸೇವಾ ಮೇಲ್ವಿಚಾರಕನು ನಮ್ಮ ಸಭಾ ಪುಸ್ತಕ ಅಧ್ಯಯನವನ್ನು ಸಂದರ್ಶಿಸಲಿದ್ದಾನೋ? ಹಾಗಾದರೆ ಆ ವಾರದ ಸಾರುವ ಕೆಲಸದಲ್ಲಿ ನಾವು ಆದಷ್ಟು ಪೂರ್ಣವಾಗಿ ಭಾಗವಹಿಸೋಣ. ನಮಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೇಮಕ ದೊರೆತಿದೆಯೆ? ಉಪಸ್ಥಿತರಿದ್ದು ನಮ್ಮ ನೇಮಕವನ್ನು ಪೂರೈಸಲು ಪೂರ್ಣವಾಗಿ ನಾವು ಪ್ರಯತ್ನಿಸಬೇಕು. ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವುದು ನಮ್ಮ ಗುಂಪಿನ ಸರದಿಯೆಂದು ಸಭಾ ಪುಸ್ತಕ ಮೇಲ್ವಿಚಾರಕನು ಪ್ರಕಟಿಸಿದ್ದಾನೆಯೆ? ಆಗ ನಾವು ನಮ್ಮ ಆರೋಗ್ಯ ಮತ್ತು ಶಕ್ತ್ಯನುಸಾರ ಅವನಿಗೆ ಪೂರ್ಣ ಬೆಂಬಲವನ್ನು ನೀಡೋಣ. ಈ ವಿಧಗಳಲ್ಲಿ ಮತ್ತು ಇನ್ನು ಬೇರೆ ಅನೇಕ ವಿಧಗಳಲ್ಲಿ, ಹಿಂಡನ್ನು ಪರಾಮರಿಸಲು ಯೆಹೋವನು ಮತ್ತು ಆತನ ಪುತ್ರನು ನೇಮಿಸಿದ ಪುರುಷರಿಗೆ ನಾವು ನಮ್ಮ ಅಧೀನತೆಯನ್ನು ತೋರಿಸುತ್ತೇವೆ.

16 ಕೆಲವೊಮ್ಮೆ ಒಬ್ಬ ಹಿರಿಯನು ನಂಬಿಗಸ್ತ ಆಳುವರ್ಗ ಮತ್ತು ಅದರ ಆಡಳಿತ ಮಂಡಲಿಯು ನಿರ್ದೇಶಿಸಿರುವಂತೆ ಕಾರ್ಯಗಳನ್ನು ಮಾಡದೆ ಇರಬಹುದು. ಅವನು ಹೀಗೆ ಮಾಡುತ್ತಾ ಹೋಗುವಲ್ಲಿ, ‘[ನಮ್ಮ ಪ್ರಾಣಗಳನ್ನು] ಕಾಯುವ ಕುರುಬನೂ ಅಧ್ಯಕ್ಷನೂ ಆಗಿರುವ’ ಯೆಹೋವನಿಗೆ ಲೆಕ್ಕವನ್ನು ಒಪ್ಪಿಸಬೇಕಾಗುವುದು. (1 ಪೇತ್ರ 2:25) ಆದರೆ ಕೆಲವು ಮಂದಿ ಹಿರಿಯರ ಲೋಪ ದೋಷಗಳು ನಾವು ಅವರಿಗೆ ಅಧೀನತೆ ತೋರಿಸದಿರುವುದನ್ನು ಸಮರ್ಥಿಸದು. ಏಕೆಂದರೆ ಯೆಹೋವನು ಅವಿಧೇಯತೆ ಮತ್ತು ಪ್ರತಿಭಟನೆ ತೋರಿಸುವವರನ್ನು ಬೆಂಬಲಿಸುವುದಿಲ್ಲ.​—⁠ಅರಣ್ಯಕಾಂಡ 12:​1, 2, 9-11.

ಇಷ್ಟಪೂರ್ವಕ ಸಹಕಾರಕ್ಕೆ ಯೆಹೋವನ ಆಶೀರ್ವಾದ

17 ಮೇಲ್ವಿಚಾರಕರ ಸ್ಥಾನಕ್ಕೆ ತಾನು ನೇಮಿಸಿರುವ ಪುರುಷರು ಅಪರಿಪೂರ್ಣರೆಂಬುದು ಯೆಹೋವನಿಗೆ ಗೊತ್ತು. ಆದರೂ ಆತನು ಅವರನ್ನು ಉಪಯೋಗಿಸುತ್ತಾನೆ. ತನ್ನಾತ್ಮದ ಮೂಲಕ ಈ ಭೂಮಿಯ ಮೇಲಿನ ತನ್ನ ಜನರನ್ನು ಆತನು ಪಾಲಿಸುತ್ತಾನೆ. “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲ” ಎಂಬುದು ಹಿರಿಯರ ಮತ್ತು ನಮ್ಮೆಲ್ಲರ ವಿಷಯದಲ್ಲಿ ಸತ್ಯವಾಗಿದೆ. (2 ಕೊರಿಂಥ 4:⁠7) ಆದುದರಿಂದ ಯೆಹೋವನು ನಮ್ಮ ನಂಬಿಗಸ್ತ ಮೇಲ್ವಿಚಾರಕರ ಮೂಲಕ ಪೂರೈಸುತ್ತಿರುವ ವಿಷಯಗಳಿಗಾಗಿ ನಾವು ಆತನಿಗೆ ಕೃತಜ್ಞತೆ ಹೇಳಿ, ಅವರಿಗೆ ಇಷ್ಟಪೂರ್ವಕವಾದ ಸಹಕಾರವನ್ನು ತೋರಿಸಬೇಕು.

18 ಕೊನೆಯ ದಿವಸಗಳಲ್ಲಿ ತನ್ನ ಹಿಂಡಿನ ಮೇಲೆ ನೇಮಿಸಲ್ಪಟ್ಟಿರುವ ಕುರುಬರ ಕುರಿತು ವರ್ಣಿಸುತ್ತಾ ಯೆರೆಮೀಯ 3:15ರಲ್ಲಿ ಯೆಹೋವನು ಅಂದದ್ದು: “ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು; ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು.” ಇದಕ್ಕನುಸಾರವಾಗಿ ಜೀವಿಸುವಂತೆ ಮೇಲ್ವಿಚಾರಕರು ಶ್ರದ್ಧೆಯಿಂದ ಪ್ರಯತ್ನಿಸುತ್ತಾರೆ. ಬೋಧಿಸುವ ಮತ್ತು ಯೆಹೋವನ ಕುರಿಗಳನ್ನು ಕಾಪಾಡುವ ಕೆಲಸವನ್ನು ನಮ್ಮ ಮಧ್ಯೆ ಇರುವ ಹಿರಿಯರು ಪ್ರಶಂಸಾರ್ಹ ರೀತಿಯಲ್ಲಿ ಮಾಡುತ್ತಾರೆಂಬುದು ಖಂಡಿತ. ಅವರು ಕಷ್ಟಪಟ್ಟು ಮಾಡುವ ಕೆಲಸಕ್ಕಾಗಿ ನಾವು ನಮ್ಮ ಇಷ್ಟಪೂರ್ವಕವಾದ ಸಹಕಾರ, ವಿಧೇಯತೆ ಮತ್ತು ನಮ್ಮ ಅಧೀನತೆಯ ಮೂಲಕ ಕೃತಜ್ಞತೆಯನ್ನು ತೋರಿಸುತ್ತ ಹೋಗೋಣ. ಹಾಗೆ ಮಾಡುವ ಮೂಲಕ, ನಾವು ನಮ್ಮ ಸ್ವರ್ಗೀಯ ಕುರಿಪಾಲರಾದ ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ನಮ್ಮ ಗಣ್ಯತೆಯನ್ನು ತೋರಿಸುವೆವು. (w07 4/1)

ಪುನರ್ವಿಮರ್ಶೆಗಾಗಿ

• ಯೆಹೋವನು ಮತ್ತು ಯೇಸು ಕ್ರಿಸ್ತನು ಪ್ರೀತಿಪರ ಕುರಿಪಾಲರೆಂದು ಹೇಗೆ ರುಜುಮಾಡಿರುತ್ತಾರೆ?

• ವಿಧೇಯತೆ ಮಾತ್ರವಲ್ಲದೆ ಅಧೀನತೆಯೂ ಆವಶ್ಯಕ ಏಕೆ?

• ಯಾವ ವ್ಯಾವಹಾರಿಕ ವಿಧಗಳಲ್ಲಿ ನಾವು ನಮ್ಮ ಅಧೀನತೆಯನ್ನು ತೋರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. ಯೆಹೋವನು ಮತ್ತು ಯೇಸು ಪ್ರೀತಿಪರ ಕುರಿಪಾಲರೆಂಬುದನ್ನು ಯಾವ ಶಾಸ್ತ್ರವಚನಗಳು ತೋರಿಸುತ್ತವೆ?

3. ತನ್ನ ಕುರಿಗಳು ಉಪಚರಿಸಲ್ಪಡುವ ವಿಧದ ಕುರಿತು ಯೆಹೋವನು ಹೇಗೆ ಪ್ರೀತಿಯ ಪರಿಗಣನೆಯನ್ನು ತೋರಿಸುತ್ತಾನೆ?

4, 5. (ಎ) ಯಾವ ಅಮೂಲ್ಯ ಕೊಡುಗೆಯನ್ನು ಯೆಹೋವನು ಭೂಮಿಯ ಮೇಲಿನ ತನ್ನ ಜನರಿಗೆ ಕೊಟ್ಟಿದ್ದಾನೆ? (ಬಿ) ಯೇಸು ತನ್ನ ಸಭೆಗೆ ಯಾವ ಕೊಡುಗೆಯನ್ನು ಕೊಟ್ಟಿದ್ದಾನೆ?

6. ಹಿರಿಯರ ಮಂಡಲಿಗಳಲ್ಲಿ ಸೇವೆಸಲ್ಲಿಸುತ್ತಿದ್ದ ಅಭಿಷಿಕ್ತ ಮೇಲ್ವಿಚಾರಕರನ್ನು ಪ್ರಕಟನೆ 1:​16, 20 ಹೇಗೆ ಚಿತ್ರಿಸಿದೆ ಮತ್ತು ಬೇರೆ ಕುರಿಗಳ ವರ್ಗದ ನೇಮಿತ ಹಿರಿಯರ ಕುರಿತು ಏನೆಂದು ಹೇಳಸಾಧ್ಯವಿದೆ?

7. ಕ್ರೈಸ್ತ ಮೇಲ್ವಿಚಾರಕರ ಬಗ್ಗೆ ನಮಗಿರಬೇಕಾದ ಮನೋಭಾವದ ಕುರಿತು ಅಪೊಸ್ತಲ ಪೌಲನು ಕೊಟ್ಟ ಸಲಹೆಯೇನು?

8. ಯಾವುದನ್ನು ‘ಆಲೋಚಿಸುವಂತೆ’ ಪೌಲನು ನಮಗೆ ಕರೆಕೊಡುತ್ತಾನೆ ಮತ್ತು ನಾವು ಹೇಗೆ “ವಿಧೇಯ”ರಾಗಿರಬೇಕು?

9. ವಿಧೇಯರಾಗುವುದು ಮಾತ್ರವಲ್ಲದೆ, ‘ಅಧೀನತೆ’ಯನ್ನೂ ತೋರಿಸುವುದು ಏಕೆ ಆವಶ್ಯಕ?

10, 11. ಪ್ರಥಮ ಶತಮಾನದಲ್ಲಿ ಮತ್ತು ಇಂದು ಮೇಲ್ವಿಚಾರಕರು ತಮ್ಮ ಜೊತೆಕ್ರೈಸ್ತರಿಗೆ “ದೇವರ ವಾಕ್ಯವನ್ನು” ಯಾವ ವಿಧದಲ್ಲಿ ತಿಳಿಸಿರುತ್ತಾರೆ?

12. ಮೇಲ್ವಿಚಾರಕರು ‘[ನಮ್ಮ] ಪ್ರಾಣಗಳನ್ನು ಕಾಯುವುದು’ ಹೇಗೆ?

13. ಮೇಲ್ವಿಚಾರಕರು ಹಾಗೂ ಸಕಲ ಕ್ರೈಸ್ತರು ಯಾರಿಗೆ ಮತ್ತು ಯಾವ ವಿಧಗಳಲ್ಲಿ ಲೆಕ್ಕ ಒಪ್ಪಿಸಬೇಕಾಗಿದೆ?

14. ಕ್ರೈಸ್ತ ಮೇಲ್ವಿಚಾರಕರು “ವ್ಯಸನ” ಪಡುತ್ತ ಸೇವೆಸಲ್ಲಿಸುವುದಕ್ಕೆ ಯಾವುದು ಕಾರಣವಾಗಬಲ್ಲದು ಮತ್ತು ಅದರ ಪರಿಣಾಮಗಳೇನು?

15. ನಾವು ನಮ್ಮ ವಿಧೇಯತೆ ಮತ್ತು ಅಧೀನತೆಯನ್ನು ಹೇಗೆ ತೋರಿಸಬಲ್ಲೆವು?

16. ನಿರ್ದೇಶಿಸಲ್ಪಟ್ಟಂತೆ ಒಬ್ಬ ಹಿರಿಯನು ಕಾರ್ಯಗಳನ್ನು ಮಾಡದಿರುವಲ್ಲಿ, ನಮ್ಮ ಪ್ರತಿಭಟನೆಯನ್ನು ಅದೇಕೆ ಸಮರ್ಥಿಸದು?

17. ನಮ್ಮ ಮೇಲ್ವಿಚಾರಕರ ಕಡೆಗೆ ನಮ್ಮ ಮನೋಭಾವ ಏನಾಗಿರಬೇಕು?

18. ನಮ್ಮ ಮೇಲ್ವಿಚಾರಕರಿಗೆ ಅಧೀನರಾಗುವ ಮೂಲಕ ನಿಜವಾಗಿ ನಾವು ಏನು ಮಾಡುತ್ತಿದ್ದೇವೆ?

[ಪುಟ 28ರಲ್ಲಿರುವ ಚಿತ್ರ]

ಕ್ರೈಸ್ತ ಹಿರಿಯರು ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗುತ್ತಾರೆ

[ಪುಟ 30ರಲ್ಲಿರುವ ಚಿತ್ರಗಳು]

ಯೆಹೋವನ ನೇಮಿತ ಕುರಿಪಾಲರಿಗೆ ನಾವು ಅಧೀನತೆಯನ್ನು ತೋರಿಸುವ ಅನೇಕ ವಿಧಗಳಿವೆ