ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಿಯಾದ ಉತ್ತರಗಳಿಗೆ ಅನ್ವೇಷಣೆ

ಸರಿಯಾದ ಉತ್ತರಗಳಿಗೆ ಅನ್ವೇಷಣೆ

ಸರಿಯಾದ ಉತ್ತರಗಳಿಗೆ ಅನ್ವೇಷಣೆ

ನನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಲ್ಲೆ?

ನನ್ನ ಕುಟುಂಬ ಜೀವನದ ಸಂತೋಷವನ್ನು ಹೆಚ್ಚಿಸಲು ಏನು ಮಾಡಬಲ್ಲೆ?

ನನ್ನ ಉದ್ಯೋಗವನ್ನು ಹೇಗೆ ಉಳಿಸಿಕೊಳ್ಳಬಲ್ಲೆ?

ನೀವೆಂದಾದರೂ ಈ ಪ್ರಶ್ನೆಗಳಲ್ಲಿ ಯಾವುದೇ ಒಂದನ್ನಾದರೂ ಕೇಳಿಕೊಂಡಿದ್ದೀರೋ? ಇವುಗಳಿಗೆ ನಿಜವಾಗಿಯೂ ಪ್ರಾಯೋಗಿಕವಾಗಿರುವ ಉತ್ತರಗಳನ್ನು ಕಂಡುಕೊಂಡಿದ್ದೀರೋ? ಇವುಗಳ ಕುರಿತು ಮತ್ತು ಇನ್ನೂ ಇತರ ಪ್ರಾಮುಖ್ಯ ವಿಷಯಗಳ ಕುರಿತು ಸಲಹೆಯನ್ನು ನೀಡುವ ಸುಮಾರು 2,000 ವಿಭಿನ್ನ ಪುಸ್ತಕಗಳನ್ನು ಪ್ರತಿ ವರುಷ ಮುದ್ರಿಸಲಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸುವುದೆಂಬುದರ ಕುರಿತು ಸಲಹೆಯನ್ನು ನೀಡುವ ಪುಸ್ತಕಗಳಿಗಾಗಿ ಕೇವಲ ಬ್ರಿಟನಿನಲ್ಲೇ ಓದುಗರು ಸರಿಸುಮಾರು 8 ಕೋಟಿ ಪೌಂಡ್‌ಗಳನ್ನು ಖರ್ಚುಮಾಡುತ್ತಾರೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ, ಸ್ವ-ಸಹಾಯ ಪುಸ್ತಕಗಳ ಮಾರಾಟದಿಂದ ಒಂದು ವರ್ಷದಲ್ಲೇ ಸುಮಾರು 60 ಕೋಟಿ ಡಾಲರ್‌ಗಳನ್ನು ಗಳಿಸಲಾಯಿತು. ನಿಮ್ಮಂತೆಯೇ ಅನೇಕರು, ದಿನನಿತ್ಯದ ಜೀವನವನ್ನು ಸುಗಮವಾಗಿ ಸಾಗಿಸುವುದು ಹೇಗೆಂಬ ವಿಷಯದಲ್ಲಿ ಉತ್ತಮ ಸಲಹೆಗಾಗಿ ಹುಡುಕುತ್ತಾರೆ.

ಪ್ರಕಾಶನಗಳ ಈ ಮಹಾಪೂರದಲ್ಲಿ ಕೊಡಲಾಗುವ ಸಲಹೆಯ ಕುರಿತು ಒಬ್ಬ ಗ್ರಂಥಕರ್ತನು ಹೇಳಿದ್ದು: “ಇಂದಿನ ಅನೇಕ ಹೊಸ ಪುಸ್ತಕಗಳು ಈ ಮುಂಚೆ ಮುದ್ರಿಸಲಾಗಿರುವ ವಿಷಯಗಳನ್ನೇ ಕೇವಲ ಪುನರಾವರ್ತಿಸುತ್ತವೆ.” ನಿಶ್ಚಯವಾಗಿಯೂ, ಈ ಪುಸ್ತಕಗಳು ಲೋಕದ ಅತಿ ಪುರಾತನ ಪುಸ್ತಕಗಳಲ್ಲೊಂದರಲ್ಲಿ ದಾಖಲಿಸಲಾಗಿರುವ ವಿವೇಕದ ಮಾತುಗಳನ್ನೇ ಅನುಕರಣಮಾಡುತ್ತವೆ. ಈ ಪುಸ್ತಕವು ಖಂಡಿತವಾಗಿಯೂ ಲೋಕದಲ್ಲಿ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಪ್ರಕಾಶನವಾಗಿದೆ. ಅದನ್ನು ಪೂರ್ತಿಯಾಗಿ ಅಥವಾ ಭಾಗಶಃ ಸುಮಾರು 2,400 ಭಾಷೆಗಳಿಗೆ ತರ್ಜುಮೆಮಾಡಲಾಗಿದೆ! ಮೊತ್ತದಲ್ಲಿ, ಅದರ 460 ಕೋಟಿ ಪ್ರತಿಗಳನ್ನು ಲೋಕವ್ಯಾಪಕವಾಗಿ ಮುದ್ರಿಸಲಾಗಿದೆ. ಈ ಅದ್ವಿತೀಯ ಪುಸ್ತಕವು ಬೈಬಲ್‌ ಆಗಿದೆ.

ಬೈಬಲ್‌ ಸ್ಪಷ್ಟವಾಗಿ ಹೇಳುವುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಬೈಬಲನ್ನು ಒಂದು ಸ್ವ-ಸಹಾಯಕ ಪುಸ್ತಕದಂತೆ ಉಪಯೋಗಿಸಲಿಕ್ಕಾಗಿ ಬರೆಯಲಾಗಲಿಲ್ಲ ಎಂಬುದು ಒಪ್ಪತಕ್ಕ ಮಾತು. ಬದಲಾಗಿ, ಅದರ ಮೂಲಭೂತ ಉದ್ದೇಶವು ಮಾನವಕುಲಕ್ಕಾಗಿ ದೇವರ ಚಿತ್ತವೇನೆಂಬುದನ್ನು ಪ್ರಕಟಿಸುವುದೇ ಆಗಿದೆ. ಆದರೂ, ನಮಗೆಲ್ಲರಿಗೂ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ನಿಭಾಯಿಸುವುದರ ಕುರಿತು ಬೈಬಲು ಬಹಳಷ್ಟನ್ನು ಹೇಳುತ್ತದೆ. ಯಾರು ಅದರ ಮಾರ್ಗದರ್ಶನವನ್ನು ಅನುಸರಿಸುತ್ತಾರೋ ಅವರು ತಮಗೆ ಒಳಿತನ್ನು ಮಾಡಿಕೊಳ್ಳಲು ಕಲಿತುಕೊಳ್ಳುತ್ತಾರೆ ಎಂಬ ಆಶ್ವಾಸನೆಯನ್ನೂ ಅದು ಕೊಡುತ್ತದೆ. (ಯೆಶಾಯ 48:17, 18) ಯಾವುದೇ ಕುಲ, ಸಂಸ್ಕೃತಿ ಅಥವಾ ವಿದ್ಯಾಭ್ಯಾಸದ ಹಿನ್ನೆಲೆಯ ವ್ಯಕ್ತಿಯು ಬೈಬಲಿನ ಪ್ರಾಯೋಗಿಕ ಸಲಹೆಯನ್ನು ಅನ್ವಯಿಸಿಕೊಳ್ಳುವಲ್ಲಿ ಅದು ಯಾವಾಗಲೂ ಒಳ್ಳೇ ಪರಿಣಾಮಗಳನ್ನು ತರುತ್ತದೆ. ಆರೋಗ್ಯ, ಕುಟುಂಬ ಮತ್ತು ಉದ್ಯೋಗದಂತಹ ಇತರ ವಿಚಾರಗಳ ಕುರಿತು ಬೈಬಲ್‌ ಏನನ್ನು ಹೇಳುತ್ತದೋ ಅದು ಪ್ರಾಯೋಗಿಕವಾಗಿದೆಯೋ ಎಂಬುದನ್ನು ಮುಂದಿನ ಲೇಖನವನ್ನು ಓದುವ ಮೂಲಕ ನೀವೇ ಏಕೆ ನಿರ್ಧರಿಸಬಾರದು? (w07 4/1)