ಇಂದಿನ ಕ್ರೂರ ಪ್ರಪಂಚ
ಇಂದಿನ ಕ್ರೂರ ಪ್ರಪಂಚ
ಮರಿಯ ಎಂಬಾಕೆಯು 64 ವರ್ಷ ಪ್ರಾಯದವಳಾಗಿದ್ದು ಒಂಟಿಯಾಗಿ ಜೀವಿಸುತ್ತಿದ್ದಳು. ಆಕೆಯ ಶವವನ್ನು ಬಹಳ ಹೀನಾಯವಾದ ಸ್ಥಿತಿಯಲ್ಲಿ ಕಂಡುಕೊಳ್ಳಲಾಯಿತು. ಆಕೆಯನ್ನು ಬರ್ಬರವಾಗಿ ಹೊಡೆದು, ಲೋಹದ ಹಗ್ಗದಿಂದ ಕತ್ತು ಹಿಸುಕಿ ಹತ್ಯೆಗಯ್ಯಲಾಗಿತ್ತು.
ಅಪ್ರಾಪ್ತ ಬಾಲಕರಿಬ್ಬರನ್ನು ಅಪಹರಣ ಮಾಡಿರುವ ಆರೋಪದ ಮೇಲೆ ಕೋಪೋದ್ರಿಕ್ತವಾದ ಜನರ ಗುಂಪೊಂದು ಮೂವರು ಪೊಲೀಸರನ್ನು ಹಿಗ್ಗಾಮುಗ್ಗ ಹೊಡೆಯಿತು. ತದನಂತರ ಆ ಗುಂಪು ಅವರಲ್ಲಿ ಇಬ್ಬರು ಪೊಲೀಸರ ಮೇಲೆ ಪೆಟ್ರೋಲ್ ಸುರಿದು ಅವರಿಗೆ ಬೆಂಕಿಹಚ್ಚಿತು. ಆ ಬೆಂಕಿಗೆ ಅವರು ಆಹುತಿಯಾದರು. ಆದರೆ ಮೂರನೆಯವನು ತಪ್ಪಿಸಿಕೊಳ್ಳಲು ಶಕ್ತನಾದನು.
ಅನಾಮಧೇಯ ಫೋನ್‌ಕರೆಯೊಂದು ತಲ್ಲಣಗೊಳಿಸುವ ವಿಷಯವೊಂದನ್ನು ಬೆಳಕಿಗೆ ತಂದಿತು. ನಾಲ್ಕು ಜನರ ಶವಗಳನ್ನು ಹೂಣಲಾಗಿರುವ ಸ್ಥಳವನ್ನು ಪತ್ತೆಹಚ್ಚಿ ಅವುಗಳನ್ನು ಹೊರತೆಗೆಯಲಾಯಿತು. ಆ ನಾಲ್ಕು ಜನರು ರಜೆಯ ಪ್ರಯುಕ್ತ ಆ ಸ್ಥಳಕ್ಕೆ ಬಂದಿದ್ದರು. ಅವರ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಲಾಗಿತ್ತು ಮತ್ತು ಅವರ ಕೈಗಳು ಬಿಗಿಯಲ್ಪಟ್ಟಿದ್ದವು. ಶವಪರೀಕ್ಷೆಯ ಮೂಲಕ ತಿಳಿದುಬಂದ ಸಂಗತಿಯೇನೆಂದರೆ ಅವರನ್ನು ನಿರ್ದಯವಾಗಿ ಜೀವಂತವಾಗಿಯೇ ಹೂಣಲಾಗಿತ್ತು.
ಈ ಘೋರ ಕೃತ್ಯಗಳು ಯಾವುದೋ ಕ್ರೂರ ಮತ್ತು ಹಿಂಸಾತ್ಮಕವಾದ ನಡುಕಹುಟ್ಟಿಸುವ ಚಲನಚಿತ್ರಗಳ ದೃಶ್ಯಗಳಾಗಿಲ್ಲ. ಈ ಎಲ್ಲಾ ವರದಿಗಳು ಸತ್ಯಕಥೆಗಳಾಗಿದ್ದು ಇತ್ತೀಚಿಗಷ್ಟೇ ಲ್ಯಾಟಿನ್ ಅಮೆರಿಕದ ಒಂದು ದೇಶದ ವಾರ್ತಾಮಾಧ್ಯಮಗಳಲ್ಲಿ ಮುಖ್ಯಾಂಶಗಳಾಗಿದ್ದವು. ಆದರೆ ಈ ದೇಶವು, ಇಂದಿನ ಲೋಕದಲ್ಲಿ ಅಂತಹ ಘೋರ ಕೃತ್ಯಗಳನ್ನು ಅನುಭವಿಸುತ್ತಿರುವ ಏಕಮಾತ್ರ ರಾಷ್ಟ್ರವಾಗಿರುವುದಿಲ್ಲ.
ಈ ರೀತಿಯ ಕ್ರೂರ ಕೃತ್ಯಗಳು ಇಂದು ಸರ್ವಸಾಮಾನ್ಯ. ಬಾಂಬ್ ದಾಳಿಗಳು, ಭಯೋತ್ಪಾದಕರ ದಾಳಿಗಳು, ಹತ್ಯೆಗಳು, ಹಲ್ಲೆಗಳು, ಗುಂಡುಹಾರಿಸುವಿಕೆಗಳು ಮತ್ತು ಬಲಾತ್ಕಾರಗಳು ಇಂತಹ ಕೆಲವೇ ಕೃತ್ಯಗಳಾಗಿವೆ. ಈ ಅಮಾನುಷ ಕೃತ್ಯಗಳ ಬಗ್ಗೆ ವಾರ್ತಾ ಮಾಧ್ಯಮವು ಕಣ್ಣಿಗೆ ಕಟ್ಟುವಂತಹ ವರದಿಗಳನ್ನು ಮತ್ತು ಚಿತ್ರಣಗಳನ್ನು ಪದೇಪದೇ ಬಿತ್ತರಿಸುತ್ತದೆ. ಆದುದರಿಂದ ಅನೇಕರು ಇಂದು ಅಂತಹ ಕ್ರೂರ ವಿಷಯಗಳನ್ನು ಕೇಳಿಸಿಕೊಳ್ಳುವಾಗ ಅಥವಾ ಅವನ್ನು ನೋಡುವಾಗಲೂ ದಿಗಿಲುಗೊಳ್ಳುವುದಿಲ್ಲ.
‘ಇಂದಿನ ಲೋಕಕ್ಕೆ ಏನು ಸಂಭವಿಸುತ್ತಿದೆ? ಇತರರ ಭಾವನೆಗಳಿಗೆ ತೋರಿಸಲ್ಪಡುವ ಪರಿಗಣನೆ ಮತ್ತು ಜೀವಕ್ಕೆ ತೋರಿಸಲ್ಪಡುತ್ತಿದ್ದ ಗೌರವವು ಮಾಯವಾಗಿಬಿಟ್ಟಿದೆಯೋ?’ ಎಂದು ನೀವು ಖಂಡಿತವಾಗಿಯೂ ಸೋಜಿಗಪಡಬಹುದು. ನಾವಿಂದು ಜೀವಿಸುತ್ತಿರುವ ಈ ಲೋಕವು ಯಾಕೆ ಹೀಗಿದೆ?
ಹ್ಯಾರಿ ಎಂಬ 69 ವರ್ಷ ಪ್ರಾಯದ ವೃದ್ಧ ವ್ಯಕ್ತಿಯನ್ನು ಪರಿಗಣಿಸಿರಿ. ಅವನು ಕ್ಯಾನ್ಸರ್ ಪೀಡಿತನಾಗಿದ್ದನು. ಅವನ ಪತ್ನಿಯು ನರಜಡ್ಡು ಕಾಯಿಲೆಯಿಂದ ನರಳುತ್ತಿದ್ದಾಳೆ. ಆದರೆ ಅವರ ನೆರೆಯವರು ಸಂತೋಷದಿಂದ ಸಹಾಯಮಾಡಲು ಮುಂದೆಬರುತ್ತಾರೆ. “ನಮಗೆ ಸಹಾಯಮಾಡಲು ಇವರೆಲ್ಲರೂ ಇಲ್ಲದಿರುತ್ತಿದ್ದಲ್ಲಿ ನಾವೇನು ಮಾಡುತ್ತಿದ್ದೇವೋ ಎಂದು ನನಗೆ ಯೋಚಿಸಲಿಕ್ಕೂ ಆಗುವುದಿಲ್ಲ” ಎಂದು ಹ್ಯಾರಿ ಹೇಳುತ್ತಾನೆ. ಅವನು ವಾಸಿಸುತ್ತಿರುವ ಕೆನಡ ದೇಶದಲ್ಲಿನ ಒಂದು ಸಮೀಕ್ಷೆಗನುಸಾರ ಆ ದೇಶದಲ್ಲಿ ವೃದ್ಧರಿಗೆ ಸಹಾಯಮಾಡುವ 50 ಪ್ರತಿಶತಕ್ಕಿಂತ ಹೆಚ್ಚಿನ ಜನರು ಆ ವೃದ್ಧರ ಸಂಬಂಧಿಕರಾಗಿರುವುದಿಲ್ಲ. ದಿನನಿತ್ಯದ ಜೀವನದಲ್ಲಿ ದಯಾಭರಿತರಾಗಿರುವ ಮತ್ತು ಸ್ನೇಹಪರರಾಗಿರುವ ಸಾಮಾನ್ಯ ಜನರ ಪರಿಚಯ ನಿಮಗಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ಹೌದು, ಕ್ರೂರಿಗಳಾಗಿರುವ ಬದಲು ಕರುಣಾಮಯಿಗಳಾಗಿರುವ ಮತ್ತು ದಯೆಯನ್ನು ತೋರಿಸುವ ಸಾಮರ್ಥ್ಯವು ಮಾನವರಿಗಿದೆ.
ಹಾಗಾದರೆ, ಈ ಘೋರ ಕೃತ್ಯಗಳಿಗೆ ಕಾರಣವೇನು? ಕ್ರೂರ ರೀತಿಯಲ್ಲಿ ವರ್ತಿಸುವಂತೆ ಜನರನ್ನು ಯಾವುದು ಪ್ರೇರೇಪಿಸುತ್ತದೆ? ಇತರರನ್ನು ಕ್ರೂರವಾಗಿ ಉಪಚರಿಸುವ ಜನರು ಎಂದಾದರೂ ಬದಲಾಗ ಸಾಧ್ಯವಿದೆಯೋ? ಕ್ರೂರತನಕ್ಕೆ ಕೊನೆ ಇದೆಯೋ? ಹೌದಾಗಿರುವಲ್ಲಿ, ಇದು ಯಾವಾಗ ಮತ್ತು ಹೇಗೆ ಆಗುವುದು? (w07 4/15)
[ಪುಟ 3ರಲ್ಲಿರುವ ಚಿತ್ರ ಕೃಪೆ]
ರೈಲು ಬಂಡಿ: CORDON PRESS