ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೂರತನಕ್ಕೆ ಕೊನೆ ಇದೆಯೋ?

ಕ್ರೂರತನಕ್ಕೆ ಕೊನೆ ಇದೆಯೋ?

ಕ್ರೂರತನಕ್ಕೆ ಕೊನೆ ಇದೆಯೋ?

ಇಂದಿನ ಲೋಕದಲ್ಲಿರುವ ಕ್ರೂರತನಕ್ಕೆ ಸ್ವಾರ್ಥವೇ ಮುಖ್ಯ ಕಾರಣವೆಂದು ಹೇಳುವಲ್ಲಿ ಅನೇಕರು ಕೂಡಲೇ ಒಪ್ಪುವರು. ದಶಕಗಳ ಹಿಂದೆ ‘ನಾ-ಮೊದಲು’ ಎಂದು ಕರೆಯಲಾಗುತ್ತಿದ್ದ ಸಂತತಿಯವರು ಬಿತ್ತಿರುವ ಬೀಜಗಳು ಇಂದಿನ ಸ್ವಾರ್ಥ ಸಮಾಜವನ್ನು ಹುಟ್ಟುಹಾಕಿದೆ. ಈ ಸಮಾಜದಲ್ಲಿ ಹೆಚ್ಚಿನವರು ಸ್ವತಃ ತಮ್ಮ ಕುರಿತು ಮಾತ್ರವೇ ಆಸಕ್ತಿವಹಿಸುತ್ತಾರೆ. ತಮಗೆ ಬೇಕಾದದ್ದನ್ನು ಪಡೆಯಲು ಅನೇಕರು ಏನು ಮಾಡಲಿಕ್ಕೂ, ಅಂದರೆ ಕ್ರೂರ ಕೃತ್ಯಗಳನ್ನು ನಡೆಸಲೂ ಸಿದ್ಧರಿದ್ದಾರೆ. ಇದು ಕೇವಲ ಒಬ್ಬೊಬ್ಬ ವ್ಯಕ್ತಿಗಳ ವಿಷಯದಲ್ಲಿ ಮಾತ್ರವಲ್ಲ ಬದಲಿಗೆ ಇಡೀ ರಾಷ್ಟ್ರಗಳ ವಿಷಯದಲ್ಲೂ ಸತ್ಯವಾಗಿದೆ.

ಮಾನವರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕೆಲವರು ಕ್ರೂರತನದಲ್ಲಿ ವಿಕೃತ ಆನಂದವನ್ನು ಸಹ ಕಂಡುಕೊಳ್ಳುತ್ತಾರೆ. ಅವರಿಗೆ ಇದು ಒಂದು ರೀತಿಯ ಮನೋರಂಜನೆಯಾಗಿದೆ. ಇಂಥವರು, ಯಾರು ತಮ್ಮ ಮೋಜಿಗಾಗಿ ಇತರರಿಗೆ ಹಾನಿ ಮಾಡುತ್ತೇವೆಂದು ತಪ್ಪೊಪ್ಪಿಗೆಯ ಸಮಯದಲ್ಲಿ ಹೇಳುತ್ತಾರೋ ಆ ಪಾತಕಿಗಳಂತೆ ಇದ್ದಾರೆ. ಇನ್ನೊಂದು ಬದಿಯಲ್ಲಿ, ಹಿಂಸಾಕೃತ್ಯ ಮತ್ತು ಕ್ರೂರತನವನ್ನು ತೋರಿಸುವ ಚಲನಚಿತ್ರಗಳನ್ನು ನೋಡಿ ಆನಂದಿಸುವ ಲಕ್ಷಾಂತರ ಜನರ ಕುರಿತೇನು? ಈ ರೀತಿಯ ಜನರಿಂದಾಗಿ ಅಂತಹ ವಿಷಯಗಳುಳ್ಳ ಚಲನಚಿತ್ರಗಳನ್ನು ತಯಾರಿಸಿ ದೊಡ್ಡ ಲಾಭ ಪಡೆಯಲು ಚಲನಚಿತ್ರ ಉದ್ಯಮಕ್ಕೆ ಕುಮ್ಮಕ್ಕು ಸಿಗುತ್ತದೆ. ಮನೋರಂಜನೆ ಮತ್ತು ವಾರ್ತಾ ಮಾಧ್ಯಮಗಳು ತೋರಿಸುವ ನಿರ್ದಯ ಕೃತ್ಯಗಳ ದೃಶ್ಯಗಳನ್ನು ಯಾವಾಗಲೂ ನೋಡುವುದರಿಂದಾಗಿ ಅನೇಕರ ಮನಸ್ಸು ಮರಗಟ್ಟಿಹೋಗಿದೆ.

ಹೆಚ್ಚಿನ ಸಂದರ್ಭದಲ್ಲಿ ಕ್ರೂರತನವು ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ ಮತ್ತು ಇದು ವಿಷ ಚಕ್ರವೊಂದನ್ನು ಆರಂಭಿಸುತ್ತದೆ. ಅಂದರೆ ಯಾರು ದೌರ್ಜನ್ಯಕ್ಕೆ ಒಳಗಾಗಿದ್ದಾರೋ ಅವರು ಇತರರ ಮೇಲೆ ದೌರ್ಜನ್ಯವೆಸಗುವ, ಅದರಲ್ಲೂ ತಮ್ಮ ಮೇಲೆ ಯಾವ ರೀತಿಯ ದೌರ್ಜನ್ಯವಾಯಿತೋ ಅದೇ ರೀತಿಯಲ್ಲಿ ಇತರರ ಮೇಲೆ ದೌರ್ಜನ್ಯವೆಸಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕ್ರೂರತನವು ಸೃಷ್ಟಿಸಿರುವ ಹಿಂಸಾಚಾರದ ಕುರಿತು ಮಾತಾಡುತ್ತಾ ನ್ಯಾಷನಲ್‌ ಆಟೊನೊಮಸ್‌ ಯುನಿವರ್ಸಿಟಿ ಆಫ್‌ ಮೆಕ್ಸಿಕೋದಲ್ಲಿ ಶಿಕ್ಷಕಿಯಾಗಿರುವ ನವೋಮಿ ಡೀಯಾಜ್‌ ಮರ್‌ಕ್ವಿನ್‌ ಹೇಳುವುದು: “ಹಿಂಸಾಚಾರವನ್ನು ಕಲಿಯಲಾಗುತ್ತದೆ, ಅದು ನಮ್ಮ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ . . . ನಮ್ಮ ಸುತ್ತುಗಟ್ಟುಗಳು ಹಿಂಸಾತ್ಮಕ ಕೃತ್ಯಗಳನ್ನು ಅನುಮತಿಸುವಾಗ ಮತ್ತು ಉತ್ತೇಜಿಸುವಾಗ ನಾವು ಅದೇ ರೀತಿಯಲ್ಲಿ ವರ್ತಿಸಲು ಕಲಿಯುತ್ತೇವೆ.”

ಇತರ ವಿದ್ಯಮಾನಗಳಲ್ಲಿ, ಮದ್ಯಸಾರ ಅಥವಾ ಮಾದಕ ಪದಾರ್ಥಗಳನ್ನು ದುರುಪಯೋಗಿಸುವವರು ಸಹ ಕ್ರಮೇಣ ಕ್ರೂರಿಗಳಾಗಿ ವರ್ತಿಸಬಹುದು. ಇಲ್ಲಿ ಇನ್ನೊಂದು ವರ್ಗದ ಜನರನ್ನು ಮರೆಯುವಂತಿಲ್ಲ; ಜನತೆಯ ಬೇಡಿಕೆಗಳನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಇವರು ಸರ್ಕಾರದ ಮೇಲೆ ಕಿಡಿಕಾರುವ ವ್ಯಕ್ತಿಗಳಾಗಿದ್ದಾರೆ. ಇವರಲ್ಲಿ ಕೆಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಲುವಾಗಿ ಕ್ರೂರ ಕೃತ್ಯಗಳ ಮತ್ತು ಭಯೋತ್ಪಾದನೆಯ ಮೊರೆಹೊಗುತ್ತಾರೆ. ಕೊನೆಗೆ ಅವರ ಆ ಕೃತ್ಯಗಳಿಂದಾಗಿ ಹಾನಿಯುಂಟಾಗುವುದು ಮುಗ್ಧ ಜನರಿಗೇ!

‘ಕ್ರೂರಿಗಳಾಗುವುದನ್ನು ಮಾನವರು ತಮ್ಮಷ್ಟಕ್ಕೆ ಕಲಿತುಕೊಂಡರೋ? ಈಗಿರುವ ಪರಿಸ್ಥಿತಿಗೆ ಯಾರು ಕಾರಣರು?’ ಎಂದು ನೀವು ಸೋಜಿಗಪಡಬಹುದು.

ಕ್ರೂರತನದ ಹಿಂದೆ ನಿಜವಾಗಿಯೂ ಯಾರಿದ್ದಾರೆ?

ಪಿಶಾಚನಾದ ಸೈತಾನನನ್ನು “ಈ ಪ್ರಪಂಚದ ದೇವರು” ಎಂದು ಕರೆಯುವ ಮೂಲಕ, ಅವನು ಈ ಲೋಕದ ಮೇಲೆ ಬಲವಾದ ಪ್ರಭಾವ ಬೀರುತ್ತಾನೆ ಎಂದು ಬೈಬಲ್‌ ನಮಗೆ ತಿಳಿಸುತ್ತದೆ. (2 ಕೊರಿಂಥ 4:4) ಅವನು ವಿಶ್ವದಲ್ಲೇ ಪರಮ ಸ್ವಾರ್ಥಿ ಮತ್ತು ಅತ್ಯಂತ ಕ್ರೂರಿಯಾದ ವ್ಯಕ್ತಿಯಾಗಿದ್ದಾನೆ. ಅವನನ್ನು “ಕೊಲೆಗಾರ” ಮತ್ತು “ಸುಳ್ಳಿಗೆ ಮೂಲಪುರುಷ” ಎಂದು ಯೇಸು ಕ್ರಿಸ್ತನು ವರ್ಣಿಸಿದ್ದು ತಕ್ಕದ್ದಾಗಿದೆ.​—⁠ಯೋಹಾನ 8:44.

ಮೊದಲ ಮಾನವ ಜೋಡಿಯಾದ ಆದಾಮ ಮತ್ತು ಹವ್ವರು ಅವಿಧೇಯರಾದಂದಿನಿಂದ ಇಡೀ ಮಾನವಕುಲವು, ಸೈತಾನನ ಶಕ್ತಿಶಾಲಿ ಪ್ರಭಾವದ ಕೆಳಗಿದೆ. (ಆದಿಕಾಂಡ 3:1-7, 16-19) ಆ ಮೊದಲ ಮಾನವರು ಯೆಹೋವನಿಗೆ ಬೆನ್ನುಹಾಕಿದ ಸಮಯದಂದಿನಿಂದ 15 ಶತಮಾನಗಳ ನಂತರ, ದಂಗೆಕೋರ ದೇವದೂತರು ಮಾನವ ಶರೀರಧಾರಣೆ ಮಾಡಿ ಸ್ತ್ರೀಯರೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದರು ಮತ್ತು ನೆಫೀಲಿಯರು ಎಂಬ ಮಿಶ್ರ ಸಂತತಿಗೆ ಜನ್ಮ ನೀಡಿದರು. ಈ ನೆಫೀಲಿಯರ ವಿಶಿಷ್ಟ ಗುಣಲಕ್ಷಣವೇನಾಗಿತ್ತು? ಉತ್ತರವು ಅವರ ಹೆಸರಿನ ಅರ್ಥದಲ್ಲೇ ಅಡಗಿದೆ. ಅದರ ಅರ್ಥವು “ಕೆಡಹುವವರು” ಅಥವಾ “ಇತರರನ್ನು ಕೆಡವಿ ಹಾಕುವವರು” ಎಂದಾಗಿದೆ. ಸ್ಪಷ್ಟವಾಗಿಯೇ, ಇವರು ಕ್ರೂರತನ ಮತ್ತು ಅನೈತಿಕತೆಯನ್ನು ಪ್ರವರ್ಧಿಸಿದ ಹಿಂಸಾತ್ಮಕ ವ್ಯಕ್ತಿಗಳಾಗಿದ್ದರು. ಈ ದುಷ್ಟ ಪರಿಸ್ಥಿತಿಯನ್ನು ನಿರ್ನಾಮಗೊಳಿಸಲು ದೇವರೇ ಒಂದು ಪ್ರಳಯವನ್ನು ತರಬೇಕಾಗಿತ್ತು. (ಆದಿಕಾಂಡ 6:4, 5, 17) ಈ ಪ್ರಳಯದಲ್ಲಿ ನೆಫೀಲಿಯರ ಹುಟ್ಟಡಗಿಸಲಾಯಿತಾದರೂ ಅವರ ತಂದೆಯಂದಿರು ತಮ್ಮ ಆತ್ಮೀಕ ಕ್ಷೇತ್ರಕ್ಕೆ ಅದೃಶ್ಯ ದೆವ್ವಗಳೋಪಾದಿ ಹಿಂದಿರುಗಿದರು.​—⁠1 ಪೇತ್ರ 3:19, 20.

ಈ ದಂಗೆಕೋರ ದೇವದೂತರ ಕ್ರೂರ ಸ್ವಭಾವವು ಯೇಸುವಿನ ದಿನಗಳಲ್ಲಿ ಮೂಗದೆವ್ವ ಹಿಡಿದಿದ್ದ ಹುಡುಗನ ಸಂಬಂಧದಲ್ಲಿ ತೋರಿಬರುತ್ತದೆ. ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸುತ್ತಿತ್ತು ಮತ್ತು ಅವನನ್ನು ಕೊಲ್ಲುವ ಪ್ರಯತ್ನದಲ್ಲಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಅವನನ್ನು ಕೆಡವುತ್ತಿತ್ತು. (ಮಾರ್ಕ 9:17-22) ಸ್ಪಷ್ಟವಾಗಿಯೇ, ಅಂತಹ “ದುರಾತ್ಮಗಳ ಸೇನೆ”ಗಳು ತಮ್ಮ ಕ್ರೂರ ಮುಖ್ಯ ಸೇನಾಧಿಪತಿಯಾಗಿರುವ ಪಿಶಾಚನಾದ ಸೈತಾನನ ನಿರ್ದಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ.​—⁠ಎಫೆಸ 6:12.

ಇಂದು ಸಹ ದೆವ್ವಗಳ ಪ್ರಭಾವವು ಮಾನವ ಕ್ರೂರತನವನ್ನು ಪ್ರವರ್ಧಿಸುತ್ತಿದೆ. ಇದನ್ನು ಮುಂತಿಳಿಸುತ್ತಾ ಬೈಬಲ್‌ ಹೇಳಿದ್ದು: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ . . . ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ . . . ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.”​—⁠2 ತಿಮೊಥೆಯ 3:1-5.

ನಮ್ಮೀ ಸಮಯಗಳು ಹಿಂದೆಂದಿಗಿಂತಲೂ ಕಠಿನವಾಗಿರುವವು ಎಂದು ಬೈಬಲ್‌ ಪ್ರವಾದನೆಗಳು ಪ್ರಕಟಿಸುತ್ತವೆ. ಏಕೆಂದರೆ 1914ರಲ್ಲಿ ಯೇಸು ಕ್ರಿಸ್ತನ ಪ್ರಭುತ್ವವುಳ್ಳ ದೇವರ ರಾಜ್ಯವು ಸ್ಥಾಪಿತವಾದಾಗ ಸೈತಾನ ಮತ್ತು ಅವನ ದೆವ್ವಗಳ ಪಡೆಗಳನ್ನು ಪರಲೋಕದಿಂದ ಉಚ್ಚಾಟಿಸಲಾಯಿತು. ಬೈಬಲ್‌ ಘೋಷಿಸುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”​—⁠ಪ್ರಕಟನೆ 12:5-9, 12.

ಇದರರ್ಥವು ಪರಿಸ್ಥಿತಿಯು ಸುಧಾರಿಸಲಸಾಧ್ಯವಾದದ್ದು ಎಂದಾಗಿದೆಯೋ? ಈ ಹಿಂದೆ ಉಲ್ಲೇಖಿಸಲಾದ ಡೀಯಾಜ್‌ ಮರ್‌ಕ್ವಿನ್‌ ಹೇಳುವುದು: ಅನಪೇಕ್ಷಿತ ವರ್ತನೆಯ ಮೇಲೆ “ಕ್ರಮೇಣವಾಗಿ ಮೇಲುಗೈ ಪಡೆಯಲು ಕಲಿಯುವ ಸಾಮರ್ಥ್ಯ ಜನರಿಗಿದೆ.” ಆದರೆ, ಸೈತಾನನ ಪ್ರಭಾವವು ಸಂಪೂರ್ಣವಾಗಿ ವ್ಯಾಪಿಸಿರುವ ಇಂದಿನ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಹಿಂಸಾತ್ಮಕ ವರ್ತನೆಯ ಮೇಲೆ ಮೇಲುಗೈ ಪಡೆಯಲು ಕಲಿಯುವುದು ಸುಲಭಸಾಧ್ಯವೇನಲ್ಲ. ಅವನು ಆ ತನ್ನ ಪ್ರವೃತ್ತಿಯನ್ನು ಜಯಿಸಬೇಕಾದಲ್ಲಿ ಒಂದು ಭಿನ್ನವಾದ ಮತ್ತು ಉತ್ಕೃಷ್ಟವಾದ ಶಕ್ತಿಯು ತನ್ನ ಯೋಚನೆ ಹಾಗೂ ಕ್ರಿಯೆಯನ್ನು ಪ್ರಭಾವಿಸುವಂತೆ ಬಿಡಬೇಕು. ಆ ಶಕ್ತಿ ಯಾವುದು?

ಬದಲಾವಣೆಗಳು ಸಾಧ್ಯ​—⁠ಆದರೆ ಹೇಗೆ?

ಸಂತೋಷಕರವಾಗಿಯೇ, ದೇವರ ಪವಿತ್ರಾತ್ಮವು ಅಸ್ತಿತ್ವದಲ್ಲಿರುವ ಶಕ್ತಿಗಳಲ್ಲೇ ಅತಿ ಬಲಾಢ್ಯ ಶಕ್ತಿಯಾಗಿದೆ ಮತ್ತು ಅದು ಯಾವುದೇ ಪೈಶಾಚಿಕ ಪ್ರಭಾವದ ಮೇಲೆ ಮೇಲುಗೈ ಪಡೆಯಬಲ್ಲದು. ಅದು ಪ್ರೀತಿ ಮತ್ತು ಮಾನವರ ಯೋಗಕ್ಷೇಮವನ್ನು ಪ್ರವರ್ಧಿಸುತ್ತದೆ. ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವ ಯಾವುದೇ ವ್ಯಕ್ತಿ ದೇವರಾತ್ಮಭರಿತನಾಗಬೇಕಾದರೆ ಅವನು ಕ್ರೂರತನವನ್ನು ಮಾತ್ರವಲ್ಲ, ಕ್ರೂರತನವನ್ನು ಹೋಲುವ ಯಾವುದೇ ರೀತಿಯ ನಡತೆಯಿಂದಲೂ ದೂರವಿರಬೇಕು. ದೈವಿಕ ಚಿತ್ತಕ್ಕೆ ವಿಧೇಯನಾಗಲು ಒಬ್ಬನು ತನ್ನ ವ್ಯಕ್ತಿತ್ವವನ್ನು ಮಾರ್ಪಡಿಸುವುದನ್ನು ಇದು ಅಗತ್ಯಪಡಿಸುತ್ತದೆ. ಆ ಚಿತ್ತವು ಏನಾಗಿದೆ? ನಾವು ದೇವರ ಮಾರ್ಗವನ್ನು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಅನುಕರಿಸಲು ಪ್ರಯತ್ನಿಸಬೇಕು. ಇದರಲ್ಲಿ, ದೇವರು ಇತರರನ್ನು ಹೇಗೆ ನೋಡುತ್ತಾನೋ ನಾವು ಸಹ ಅದೇ ರೀತಿಯಲ್ಲಿ ಇತರರನ್ನು ನೋಡುವುದು ಒಳಗೂಡಿದೆ.​—⁠ಎಫೆಸ 5:1, 2; ಕೊಲೊಸ್ಸೆ 3:7-10.

ಯೆಹೋವ ದೇವರು ಹೇಗೆ ವ್ಯವಹರಿಸುತ್ತಾನೆ ಎಂಬುದರ ಅಧ್ಯಯನದಿಂದ ತಿಳಿದುಬರುವ ಸಂಗತಿಯೇನೆಂದರೆ, ಆತನೆಂದೂ ಇತರರಲ್ಲಿ ನಿರಾಸಕ್ತಿಯನ್ನು ತೋರಿಸಿಲ್ಲ. ಯಾವುದೇ ಮಾನವನನ್ನು, ಅಷ್ಟೇಕೆ ಯಾವುದೇ ಪ್ರಾಣಿಯನ್ನು ಸಹ ಆತನೆಂದೂ ಅನ್ಯಾಯವಾದ ರೀತಿಯಲ್ಲಿ ಉಪಚರಿಸಿಲ್ಲ. * (ಧರ್ಮೋಪದೇಶಕಾಂಡ 22:10; ಕೀರ್ತನೆ 36:7; ಜ್ಞಾನೋಕ್ತಿ 12:10) ಕ್ರೂರತನವನ್ನು ಮತ್ತು ಕ್ರೂರತನವನ್ನು ನಡೆಸುವ ಯಾವನನ್ನೂ ಆತನು ಮೆಚ್ಚುವುದಿಲ್ಲ. (ಜ್ಞಾನೋಕ್ತಿ 3:31, 32) ಕ್ರೈಸ್ತರು ಧರಿಸಿಕೊಳ್ಳಬೇಕೆಂದು ಯೆಹೋವನು ಬಯಸುವ ಹೊಸ ವ್ಯಕ್ತಿತ್ವವು, ಇತರರನ್ನು ತಮಗಿಂತ ಶ್ರೇಷ್ಠರೆಂದು ಪರಿಗಣಿಸಲು ಮತ್ತು ಇತರರನ್ನು ಗೌರವಿಸಲು ಅವರಿಗೆ ಸಹಾಯಮಾಡುತ್ತದೆ. (ಫಿಲಿಪ್ಪಿ 2:2-4) ಹೊಸ ಕ್ರೈಸ್ತ ವ್ಯಕ್ತಿತ್ವವು “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ”ಯನ್ನು ಒಳಗೂಡುತ್ತದೆ. ಇಲ್ಲಿ, “ಸಮಸ್ತವನ್ನು ಸಂಪೂರ್ಣಮಾಡುವ ಬಂಧ”ವಾದ ಪ್ರೀತಿಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. (ಕೊಲೊಸ್ಸೆ 3:12-14) ಇಂತಹ ಗುಣಗಳು ತುಂಬಿತುಳುಕುತ್ತಿದ್ದಲ್ಲಿ ಈ ಲೋಕವು ಈಗಿರುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು ಎಂದು ನಿಮಗನಿಸುವುದಿಲ್ಲವೇ?

ಆದರೂ, ಒಬ್ಬನ ವ್ಯಕ್ತಿತ್ವವು ಶಾಶ್ವತವಾಗಿ ಬದಲಾಗಲು ಸಾಧ್ಯವಿದೆಯೋ ಎಂದು ನೀವು ಸೋಜಿಗಪಡಬಹುದು. ಒಳ್ಳೇದು, ಒಂದು ನಿಜ ಜೀವನದ ಉದಾಹರಣೆಯನ್ನು ಪರಿಗಣಿಸಿರಿ. ಮಾರ್ಟಿನ್‌ * ಎಂಬವನು ಮಕ್ಕಳ ಮುಂದೆಯೇ ತನ್ನ ಹೆಂಡತಿಯ ಮೇಲೆ ಕಿರುಚಾಡುತ್ತಿದ್ದನು ಮತ್ತು ಅವಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆಯುತ್ತಿದ್ದನು. ಒಮ್ಮೆ ಸನ್ನಿವೇಶವು ಎಷ್ಟು ಅಪಾಯಕಾರಿಯಾಯಿತೆಂದರೆ, ಮಕ್ಕಳು ನೆರೆಯವರ ಬಳಿ ಓಡಿಹೋಗಿ ಸಹಾಯಕೇಳಬೇಕಾಯಿತು. ಅನೇಕ ವರ್ಷಗಳ ನಂತರ ಈ ಕುಟುಂಬವು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಪ್ರಾರಂಭಿಸಿತು. ತಾನು ಯಾವ ರೀತಿಯ ವ್ಯಕ್ತಿಯಾಗಿರಬೇಕೆಂದು ಮತ್ತು ಇತರರನ್ನು ಹೇಗೆ ಉಪಚರಿಸಬೇಕೆಂದು ಮಾರ್ಟಿನ್‌ ಕಲಿತುಕೊಂಡನು. ಅವನು ಬದಲಾದನೋ? ಅವನ ಪತ್ನಿ ಉತ್ತರಿಸುವುದು: “ಹಿಂದೆ ನನ್ನ ಗಂಡನಿಗೆ ಕೋಪ ಬಂದರೆ ಅವರು ಬೇರೆಯೇ ವ್ಯಕ್ತಿಯಾಗಿಬಿಡುತ್ತಿದ್ದರು. ಈ ಕಾರಣದಿಂದ ಬಹಳ ದೀರ್ಘ ಸಮಯದವರೆಗೆ ನಮ್ಮ ಜೀವನವು ಅಸ್ತವ್ಯಸ್ತಗೊಂಡಿತ್ತು. ಆದರೆ ಅವರು ಬದಲಾಗಲು ಯೆಹೋವನು ಮಾಡಿದ ಸಹಾಯಕ್ಕೆ ಆತನಿಗೆ ಕೃತಜ್ಞತೆ ಹೇಳಲು ನನ್ನ ಬಳಿ ಮಾತುಗಳೇ ಇಲ್ಲ. ಈಗ ಅವರೊಬ್ಬ ಒಳ್ಳೆಯ ತಂದೆ ಮತ್ತು ಉತ್ತಮ ಗಂಡ ಆಗಿದ್ದಾರೆ.”

ಆದರೆ ಇದು ಕೇವಲ ಒಂದು ಉದಾಹರಣೆಯಾಗಿದೆ. ಲೋಕವ್ಯಾಪಕವಾಗಿ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಿರುವ ಲಕ್ಷಾಂತರ ಜನರು ಕ್ರೂರತನವನ್ನು ಬಿಟ್ಟುಬಿಟ್ಟಿದ್ದಾರೆ. ಹೌದು, ಬದಲಾಗಲು ಖಂಡಿತವಾಗಿಯೂ ಸಾಧ್ಯವಿದೆ.

ಎಲ್ಲಾ ಕ್ರೂರತನದ ಅಂತ್ಯವು ಸಮೀಪಿಸುತ್ತಿದೆ

ಭವಿಷ್ಯತ್ತಿನಲ್ಲಿ ಬೇಗನೇ ದೇವರ ರಾಜ್ಯವು ಭೂಮಿಯ ಮೇಲೆ ತನ್ನ ಸಂಪೂರ್ಣ ಅಧಿಕಾರವನ್ನು ಚಲಾಯಿಸುವುದು. ಈ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿರುವ ಒಂದು ಸರ್ಕಾರವಾಗಿದ್ದು ಅದರ ಕರುಣಾಮಯಿ ಪ್ರಭುವು ಯೇಸು ಕ್ರಿಸ್ತನಾಗಿದ್ದಾನೆ. ಅದು ಎಲ್ಲಾ ಕ್ರೂರತನದ ಮೂಲವಾಗಿರುವ ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಹೊರಗೆಹಾಕುವ ಮೂಲಕ ಈಗಾಗಲೇ ಸ್ವರ್ಗವನ್ನು ಶುದ್ಧಗೊಳಿಸಿದೆ. ಶೀಘ್ರದಲ್ಲೇ ದೇವರ ಈ ರಾಜ್ಯವು ಭೂಮಿಯ ಮೇಲೆ ಅದರ ಶಾಂತಿ-ಪ್ರಿಯ ಪ್ರಜೆಗಳ ಅಗತ್ಯಗಳನ್ನು ಪೂರೈಸುವುದು. (ಕೀರ್ತನೆ 37:10, 11; ಯೆಶಾಯ 11:2-5) ಲೋಕದ ಸಮಸ್ಯೆಗಳಿಗೆ ಅದು ಏಕಮಾತ್ರ ನಿಜ ಪರಿಹಾರವಾಗಿದೆ. ಆದರೆ, ಈ ರಾಜ್ಯದ ಬರೋಣಕ್ಕಾಗಿ ಕಾಯುತ್ತಿರುವಾಗ ನೀವು ಯಾವುದಾದರೂ ಕ್ರೂರತನಕ್ಕೆ ಬಲಿಯಾಗುವಲ್ಲಿ ಆಗೇನು?

ಕ್ರೂರತನಕ್ಕೆ ಪ್ರತಿಯಾಗಿ ಕ್ರೂರತನವನ್ನು ತೋರಿಸುವುದು ಯಾವುದೇ ಒಳಿತನ್ನು ಸಾಧಿಸುವುದಿಲ್ಲ. ಅದು ಕ್ರೂರತನವನ್ನು ಇನ್ನಷ್ಟು ಹೆಚ್ಚಿಸುವುದು ಅಷ್ಟೇ. ಅದಕ್ಕೆ ಬದಲಾಗಿ ಯೆಹೋವನ ಮೇಲೆ ಭರವಸೆಯಿಡುವಂತೆ ಬೈಬಲ್‌ ನಮ್ಮನ್ನು ಆಮಂತ್ರಿಸುತ್ತದೆ. ಆತನು ತಕ್ಕ ಸಮಯದಲ್ಲಿ ಪ್ರತಿಯೊಬ್ಬನಿಗೆ “ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ ಪ್ರತಿಫಲ” ಕೊಡುವನು. (ಯೆರೆಮೀಯ 17:​10, NIBV) (ಈ ಲೇಖನದೊಂದಿಗಿರುವ “ಕ್ರೂರತನಕ್ಕೆ ಹೇಗೆ ಪ್ರತಿಕ್ರಿಯಿಸುವುದು?” ಎಂಬ ಚೌಕವನ್ನು ನೋಡಿರಿ.) ನಿಜ, ಒಂದು ಕ್ರೂರವಾದ ಅಪರಾಧದ ಕಾರಣ ನೀವು ಕಷ್ಟ ಮತ್ತು ವೇದನೆಯನ್ನು ಅನುಭವಿಸಬಹುದು. (ಪ್ರಸಂಗಿ 9:11) ಆದರೆ, ದೇವರು ಮರಣವನ್ನೂ ಸೇರಿಸಿ ಎಲ್ಲಾ ಕ್ರೂರತನದ ಪರಿಣಾಮಗಳನ್ನು ಇನ್ನೆಂದಿಗೂ ಇಲ್ಲವಾಗಿಸಬಲ್ಲನು. ಯಾರು ಕ್ರೂರತನದ ಕೃತ್ಯಗಳಿಂದಾಗಿ ಜೀವವನ್ನು ಕಳೆದುಕೊಂಡು ದೇವರ ಜ್ಞಾಪಕದಲ್ಲಿದ್ದಾರೋ ಅವರು ಜೀವಕ್ಕೆ ಹಿಂದಿರುಗುವರು ಎಂದು ಆತನು ಮಾತುಕೊಡುತ್ತಾನೆ.​—⁠ಯೋಹಾನ 5:28, 29.

ಕ್ರೂರತನಕ್ಕೆ ಬಲಿಯಾಗುವ ಸಾಧ್ಯತೆಗಳು ಇನ್ನೂ ಇರುವುದಾದರೂ, ಯೆಹೋವನೊಂದಿಗಿನ ಆಪ್ತ ಸಂಬಂಧ ಮತ್ತು ಆತನ ವಾಗ್ದಾನಗಳಲ್ಲಿ ಬಲವಾದ ನಂಬಿಕೆಯಿಡುವುದರ ಮೂಲಕ ನಾವು ಸಾಂತ್ವನ ಪಡೆದುಕೊಳ್ಳಬಲ್ಲೆವು. ಸಾರ ಎಂಬಾಕೆಯ ಉದಾಹರಣೆಯನ್ನು ಪರಿಗಣಿಸಿರಿ. ಆಕೆ ತನ್ನ ಪತಿಯ ಸಹಾಯವಿಲ್ಲದೆ ತನ್ನೆರಡು ಗಂಡುಮಕ್ಕಳನ್ನು ಬೆಳೆಸಿದಳು ಮತ್ತು ಅವರಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಟ್ಟಳು. ಆದರೆ ವೃದ್ಧಾಪ್ಯದಲ್ಲಿ ಆ ಮಕ್ಕಳು ಆಕೆಯ ಕೈಬಿಟ್ಟುಬಿಟ್ಟರು. ಆಕೆಗೆ ಯಾವುದೇ ರೀತಿಯ ಭೌತಿಕ ಸಹಾಯವನ್ನಾಗಲಿ ಅಥವಾ ವೈದ್ಯಕೀಯ ಆರೈಕೆಯನ್ನಾಗಲಿ ಮಾಡಲಿಲ್ಲ. ಆದರೂ, ಕ್ರೈಸ್ತಳಾದ ಸಾರ ಹೇಳುವುದು: “ನನಗೆ ಕೆಲವೊಮ್ಮೆ ದುಃಖವಾಗುತ್ತದಾದರೂ, ಯೆಹೋವನು ನನ್ನ ಕೈಬಿಟ್ಟಿಲ್ಲ. ಯಾವಾಗಲೂ ನನ್ನ ಆರೈಕೆ ಮಾಡುವ ಆಧ್ಯಾತ್ಮಿಕ ಸಹೋದರ ಸಹೋದರಿಯರ ಮೂಲಕ ನಾನು ಆತನ ಸಹಾಯಹಸ್ತವನ್ನು ಅನುಭವಿಸಿದ್ದೇನೆ. ಬೇಗನೇ ಆತನು ನನ್ನ ಸಮಸ್ಯೆಗಳನ್ನು ಮಾತ್ರವಲ್ಲದೆ, ಆತನ ಶಕ್ತಿಯಲ್ಲಿ ಭರವಸವಿಟ್ಟು ಆತನು ಆಜ್ಞಾಪಿಸುವುದೆಲ್ಲವನ್ನು ಮಾಡುವವರೆಲ್ಲರ ಸಮಸ್ಯೆಗಳನ್ನು ಬಗೆಹರಿಸುವನೆಂಬ ಬಲವಾದ ನಂಬಿಕೆ ನನಗಿದೆ.”

ಸಾರ ಹೇಳಿದ ಈ ಆಧ್ಯಾತ್ಮಿಕ ಸಹೋದರ ಸಹೋದರಿಯರು ಯಾರಾಗಿದ್ದಾರೆ? ಅವರು ಆಕೆಯ ಕ್ರೈಸ್ತ ಒಡನಾಡಿಗಳಾಗಿರುವ ಯೆಹೋವನ ಸಾಕ್ಷಿಗಳಾಗಿದ್ದಾರೆ. ಸಹಾನುಭೂತಿಯುಳ್ಳ ಒಂದು ಲೋಕವ್ಯಾಪಕ ಸಹೋದರತ್ವದ ಭಾಗವಾಗಿರುವ ಇವರು ಅತಿ ಶೀಘ್ರದಲ್ಲೇ ಕ್ರೂರತನ ಅಂತ್ಯಗೊಳ್ಳಲಿದೆ ಎಂದು ಖಾತ್ರಿಯಿಂದಿದ್ದಾರೆ. (1 ಪೇತ್ರ 2:17) ಕ್ರೂರತನಕ್ಕೆ ಮುಖ್ಯ ಕಾರಣನಾಗಿರುವ ಪಿಶಾಚನಾದ ಸೈತಾನನಾಗಲಿ, ಅವನಂತೆ ವರ್ತಿಸುವ ಯಾವನೇ ಆಗಲಿ ಬದುಕುಳಿಯುವುದಿಲ್ಲ. ಒಬ್ಬ ಲೇಖಕನು “ಕ್ರೌರ್ಯ ಯುಗ”ವೆಂದು ಕರೆಯುವ ಈ ಯುಗವು ಗತಕಾಲದ ಸಂಗತಿಯಾಗಿಬಿಡುವುದು. ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಈ ನಿರೀಕ್ಷೆಯ ಕುರಿತು ನೀವು ಹೆಚ್ಚನ್ನು ಏಕೆ ತಿಳಿದುಕೊಳ್ಳಬಾರದು? (w07 4/15)

[ಪಾದಟಿಪ್ಪಣಿಗಳು]

^ ಪ್ಯಾರ. 16 ದೇವರ ಗುಣಗಳ ಮತ್ತು ಆತನ ವ್ಯಕ್ತಿತ್ವದ ಆಳವಾದ ಚರ್ಚೆಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾಗಿರುವ ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕವನ್ನು ನೋಡಿರಿ.

^ ಪ್ಯಾರ. 17 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 6ರಲ್ಲಿರುವ ಚೌಕ]

ಕ್ರೂರತನಕ್ಕೆ ಹೇಗೆ ಪ್ರತಿಕ್ರಿಯಿಸುವುದು?

ಕ್ರೂರತನವನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ದೇವರ ವಾಕ್ಯವು ನಮಗೆ ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತದೆ. ಈ ಮುಂದಿನ ವಿವೇಕದ ನುಡಿಮುತ್ತುಗಳನ್ನು ನೀವು ಹೇಗೆ ಅನ್ವಯಿಸಿಕೊಳ್ಳಬಲ್ಲಿರಿ ಎಂಬುದನ್ನು ಪರಿಗಣಿಸಿರಿ:

“ಕೇಡಿಗೆ ಮುಯ್ಯಿತೀರಿಸುವೆನು ಅನ್ನಬೇಡ; ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನುದ್ಧರಿಸುವನು.”​—⁠ಜ್ಞಾನೋಕ್ತಿ 20:22.

“ಬಡವರ ಹಿಂಸೆಯನ್ನೂ ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷ್ಯಕ್ಕೆ ತರುವನು.”​—⁠ಪ್ರಸಂಗಿ 5:⁠8.

“ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.”​—⁠ಮತ್ತಾಯ 5:⁠5.

“ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”​—⁠ಮತ್ತಾಯ 7:12.

“ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆಂಬದಾಗಿ ಬರೆದದೆ.”​—⁠ರೋಮಾಪುರ 12:17-19.

“ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.”​—⁠1 ಪೇತ್ರ 2:21-23.

[ಪುಟ 7ರಲ್ಲಿರುವ ಚಿತ್ರಗಳು]

ಕ್ರೂರತನವನ್ನು ಬಿಟ್ಟುಬಿಡಲು ಯೆಹೋವನು ಅನೇಕರಿಗೆ ಕಲಿಸಿದ್ದಾನೆ