ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಭೆಯು ಭಕ್ತಿಯಲ್ಲಿ ಬೆಳೆಯಲಿ

ಸಭೆಯು ಭಕ್ತಿಯಲ್ಲಿ ಬೆಳೆಯಲಿ

ಸಭೆಯು ಭಕ್ತಿಯಲ್ಲಿ ಬೆಳೆಯಲಿ

“ಸಭೆಯು ಸಮಾಧಾನಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು . . . ಹೆಚ್ಚುತ್ತಾ ಬಂತು.”​—⁠ಅ. ಕೃತ್ಯಗಳು 9:31.

ಯೆಹೋವನು ಕ್ರಿಸ್ತನ ಶಿಷ್ಯರ ಗುಂಪೊಂದನ್ನು ಸಾ.ಶ. 33ರ ಪಂಚಾಶತ್ತಮದಲ್ಲಿ ‘ದೇವರ ಇಸ್ರಾಯೇಲ್‌’ ಎಂಬ ಹೊಸ ಜನಾಂಗವಾಗಿ ಅಂಗೀಕರಿಸಿದನು. (ಗಲಾತ್ಯ 6:16) ಈ ಆತ್ಮಾಭಿಷಿಕ್ತ ಕ್ರೈಸ್ತರು ಬೈಬಲ್‌ ಹೆಸರಿಸುವ “ದೇವರ ಸಭೆ” ಸಹ ಆದರು. (1 ಕೊರಿಂಥ 11:22) ಆದರೆ ಹಾಗೆ ದೇವರ ಸಭೆಯಾಗುವುದರಲ್ಲಿ ಏನೆಲ್ಲಾ ಒಳಗೂಡಿತ್ತು? “ದೇವರ ಸಭೆ” ಹೇಗೆ ಸಂಘಟಿಸಲ್ಪಡುವುದು? ಅದರ ಸದಸ್ಯರು ಎಲ್ಲಿಯೇ ಜೀವಿಸುತ್ತಿರಲಿ, ಅದು ಭೂಮಿಯಲ್ಲಿ ಹೇಗೆ ಕಾರ್ಯನಡೆಸುವುದು? ನಮ್ಮ ಜೀವಿತಗಳು ಮತ್ತು ಸಂತೋಷವು ಅದರಲ್ಲಿ ಹೇಗೆ ಒಳಗೂಡಿವೆ?

2 ಹಿಂದಿನ ಲೇಖನದಲ್ಲಿ ಹೇಳಲಾಗಿರುವಂತೆ, ಯೇಸು ತನ್ನ ಅಭಿಷಿಕ್ತ ಅನುಯಾಯಿಗಳ ಈ ಸಭೆಯ ಅಸ್ತಿತ್ವದ ಕುರಿತು ಮುಂತಿಳಿಸುತ್ತ ಅಪೊಸ್ತಲ ಪೇತ್ರನಿಗೆ ಹೇಳಿದ್ದು: “ಈ ಭಾರಿಬಂಡೆ [ಯೇಸು ಕ್ರಿಸ್ತ] ಮೇಲೆ ನನ್ನ ಸಭೆಯನ್ನು ಕಟ್ಟುವೆನು; ಹೇಡೀಸ್‌ನ ದ್ವಾರಗಳ ಬಲವು ಅದನ್ನು ಸೋಲಿಸಲಾರದು.” (ಮತ್ತಾಯ 16:​18, NW) ಇದಲ್ಲದೆ, ಯೇಸು ತನ್ನ ಅಪೊಸ್ತಲರೊಡನೆ ಇನ್ನೂ ಇದ್ದಾಗಲೇ, ಬೇಗನೇ ಸ್ಥಾಪಿಸಲ್ಪಡಲಿಕ್ಕಿದ್ದ ಆ ಸಭೆಯ ಕೆಲಸ ಮತ್ತು ಸಂಘಟನೆಯ ಬಗ್ಗೆ ಸೂಚನೆಗಳನ್ನು ಕೊಟ್ಟನು.

3 ಸಭೆಯಲ್ಲಿರುವ ಕೆಲವರು ಮುಂದಾಳತ್ವವನ್ನು ವಹಿಸುವರೆಂದು ಯೇಸು ತನ್ನ ನಡೆನುಡಿಗಳಿಂದ ಕಲಿಸಿದನು. ಅವರು ತಮ್ಮ ಗುಂಪಿನಲ್ಲಿರುವ ಇತರರಿಗೆ ಸೇವೆ ಅಥವಾ ಶುಶ್ರೂಷೆ ಮಾಡುವ ಮೂಲಕ ಮುಂದಾಳತ್ವ ವಹಿಸಲಿಕ್ಕಿದ್ದರು. ಕ್ರಿಸ್ತನು ಹೇಳಿದ್ದು: “ಜನಗಳನ್ನಾಳುವವರೆನಿಸಿಕೊಳ್ಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ಅವರಲ್ಲಿ ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ; ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಿರಬೇಕು.” (ಮಾರ್ಕ 10:​42-44) ಹೀಗೆ “ದೇವರ ಸಭೆ” ಕೇವಲ ಚದರಿ ಹೋಗಿರುವ ಮತ್ತು ಪರಸ್ಪರ ಬೇರ್ಪಟ್ಟಿರುವ ವ್ಯಕ್ತಿಗಳಿಂದ ಕೂಡಿರುವ ಒಂದು ಅವ್ಯವಸ್ಥೆಯ ಸಭೆಯಲ್ಲ ಎಂಬುದು ಸ್ಪಷ್ಟ. ಇದಕ್ಕೆ ಬದಲಾಗಿ, ಅಲ್ಲಿ ಒಂದು ರಚನಾಕ್ರಮ ಇರುವುದು, ವ್ಯಕ್ತಿಗಳು ಪರಸ್ಪರ ಕ್ರಮಬದ್ಧವಾಗಿ ಕಾರ್ಯನಡೆಸುವರು.

4 ಆ “ದೇವರ ಸಭೆಯ” ಶಿರಸ್ಸಾಗಲಿದ್ದ ಯೇಸು, ತನ್ನಿಂದ ಕಲಿತಿದ್ದ ತನ್ನ ಅಪೊಸ್ತಲರಿಗೆ ಮತ್ತು ಇತರರಿಗೆ ಸಭೆಯಲ್ಲಿರುವ ಇತರರ ಕಡೆಗೆ ನಿರ್ದಿಷ್ಟ ಜವಾಬ್ದಾರಿಗಳು ಇರುವುವೆಂದು ಸೂಚಿಸಿದನು. ಏನು ಮಾಡುವ ಜವಾಬ್ದಾರಿ ಅವರಿಗಿತ್ತು? ಸಭೆಯಲ್ಲಿರುವವರಿಗೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವುದು ಒಂದು ಮುಖ್ಯ ನೇಮಕವಾಗಿತ್ತು. ಪುನರುತ್ಥಿತನಾಗಿದ್ದ ಕ್ರಿಸ್ತನು, ಬೇರೆ ಕೆಲವು ಮಂದಿ ಅಪೊಸ್ತಲರ ಮುಂದೆ ಪೇತ್ರನಿಗೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳಿರಿ: “ಯೋಹಾನನ ಮಗನಾದ ಸೀಮೋನನೇ, ನೀನು . . . ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ?” ಎಂದು ಕೇಳಿದಾಗ, ಪೇತ್ರನು ಉತ್ತರ ಕೊಟ್ಟದ್ದು: “ಹೌದು ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲೆ.” ಆಗ ಯೇಸು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು . . . ನನ್ನ ಕುರಿಗಳನ್ನು ಕಾಯಿ . . . ನನ್ನ ಕುರಿಗಳನ್ನು ಮೇಯಿಸು” ಎಂದು ಹೇಳಿದನು. (ಯೋಹಾನ 21:​15-17) ಎಂಥ ಗಂಭೀರ ನೇಮಕ!

5 ಯೇಸುವಿನ ಮಾತುಗಳಿಂದ ನಾವು ನೋಡುವುದೇನಂದರೆ, ಸಭೆಯಲ್ಲಿ ಒಟ್ಟುಸೇರುವವರು ಹಟ್ಟಿಯಲ್ಲಿರುವ ಕುರಿಗಳಿಗೆ ಹೋಲಿಕೆಯಾಗಿದ್ದಾರೆ. ಈ ಕುರಿಗಳನ್ನು ಅಂದರೆ ಕ್ರೈಸ್ತ ಪುರುಷರು, ಸ್ತ್ರೀಯರು ಮತ್ತು ಮಕ್ಕಳನ್ನು ಆಧ್ಯಾತ್ಮಿಕವಾಗಿ ಪೋಷಿಸುವುದು ಹಾಗೂ ಸರಿಯಾಗಿ ಪರಿಪಾಲಿಸುವುದು ಆವಶ್ಯಕ. ಇದಲ್ಲದೆ ತನ್ನ ಶಿಷ್ಯರೆಲ್ಲರೂ ಇತರರಿಗೆ ಕಲಿಸಿ ಶಿಷ್ಯರನ್ನಾಗಿ ಮಾಡಬೇಕೆಂದು ಯೇಸು ಆಜ್ಞಾಪಿಸಿದ್ದರಿಂದ, ಅವನ ಕುರಿಯಾಗಿ ಪರಿಣಮಿಸುವ ಯಾವ ಹೊಸಬರಿಗೂ ಆ ದೈವಿಕ ಆದೇಶವನ್ನು ನೆರವೇರಿಸಲು ತರಬೇತು ಆವಶ್ಯಕವಾಗಿರುವುದು.​—⁠ಮತ್ತಾಯ 28:​19, 20.

6 “ದೇವರ ಸಭೆ” ರಚಿಸಲ್ಪಟ್ಟಾಗ ಅದರ ಸದಸ್ಯರು ಉಪದೇಶಕ್ಕಾಗಿ ಮತ್ತು ಪರಸ್ಪರ ಉತ್ತೇಜನಕ್ಕಾಗಿ ಕ್ರಮವಾಗಿ ಒಟ್ಟುಗೂಡತೊಡಗಿದರು. “ಇವರು ಅಪೊಸ್ತಲರ ಬೋಧನೆಯನ್ನು ಕೇಳುವದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿಮುರಿಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು.” (ಅ. ಕೃತ್ಯಗಳು 2:​42, 46, 47) ಬೈಬಲ್‌ ವೃತ್ತಾಂತದಲ್ಲಿರುವ ಇನ್ನೊಂದು ಗಮನಾರ್ಹ ವಿಷಯವೇನಂದರೆ, ಅರ್ಹರಾಗಿದ್ದ ಕೆಲವು ಪುರುಷರನ್ನು ನಿರ್ದಿಷ್ಟ ವ್ಯಾವಹಾರಿಕ ವಿಷಯಗಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಅವರನ್ನು ಆರಿಸಿಕೊಂಡದ್ದು, ಅವರ ಉನ್ನತ ಶಿಕ್ಷಣ ಅಥವಾ ತಾಂತ್ರಿಕ ಪ್ರತಿಭೆಗಾಗಿ ಆಗಿರಲಿಲ್ಲ. ಆ ಪುರುಷರು “ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ” ಆಗಿದ್ದ ಕಾರಣದಿಂದಲೇ ಆರಿಸಲ್ಪಟ್ಟರು. ಅವರಲ್ಲಿ ಒಬ್ಬನು ಸ್ತೆಫನನಾಗಿದ್ದನು. ‘ಅವನು ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ’ ಆಗಿದ್ದನೆಂದು ವೃತ್ತಾಂತವು ತಿಳಿಸುತ್ತದೆ. ಈ ಸಭಾ ಏರ್ಪಾಡಿನ ಒಂದು ಫಲಿತಾಂಶವೇನಾಗಿತ್ತೆಂದರೆ “ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು.”​—⁠ಅ. ಕೃತ್ಯಗಳು 6:​1-7.

ದೇವರಿಂದ ಉಪಯೋಗಿಸಲ್ಪಟ್ಟ ಪುರುಷರು

7 ಆರಂಭದ ಸಭಾ ಏರ್ಪಾಡಿನಲ್ಲಿ ಅಪೊಸ್ತಲರು ನಾಯಕತ್ವ ವಹಿಸಿಕೊಂಡರೆಂಬುದು ಗ್ರಾಹ್ಯವಾದರೂ, ಹಾಗೆ ಮಾಡಿದವರು ಅವರು ಮಾತ್ರವೇ ಆಗಿರಲಿಲ್ಲ. ಒಂದೊಮ್ಮೆ ಪೌಲನೂ ಅವನ ಸಂಗಾತಿಗಳೂ ಸಿರಿಯದ ಅಂತಿಯೋಕ್ಯಕ್ಕೆ ಹಿಂದಿರುಗಿದಾಗ ಏನಾಯಿತೆಂದು ಪರಿಗಣಿಸಿ. “ಅಲ್ಲಿ [ಅವರು] ಸಭೆಯನ್ನು ಕೂಡಿಸಿ ದೇವರು ತಮ್ಮೊಂದಿಗಿದ್ದು ಮಾಡಿದ್ದೆಲ್ಲವನ್ನೂ ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲನ್ನು ತೆರೆದದ್ದನ್ನೂ ವಿವರವಾಗಿ ಹೇಳಿದರು” ಎಂದು ಅ. ಕೃತ್ಯಗಳು 14:27 ತಿಳಿಸುತ್ತದೆ. ಅವರು ಆ ಸ್ಥಳಿಕ ಸಭೆಯಲ್ಲಿದ್ದಾಗ ಅನ್ಯ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕೊ ಎಂಬ ಪ್ರಶ್ನೆ ಎದ್ದುಬಂತು. ಇದನ್ನು ಇತ್ಯರ್ಥಮಾಡಲು ಪೌಲ ಮತ್ತು ಬಾರ್ನಬನನ್ನು ಆಡಳಿತ ಮಂಡಲಿಯಾಗಿ ಸೇವೆಸಲ್ಲಿಸುತ್ತಿದ್ದ “ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ” ಕಳುಹಿಸಲಾಯಿತು.​—⁠ಅ. ಕೃತ್ಯಗಳು 15:​1-3.

8 “ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವದಕ್ಕೆ” ಕೂಡಿಬಂದಿದ್ದಾಗ ಕ್ರೈಸ್ತ ಹಿರಿಯನೂ ಯೇಸುವಿನ ಮಲತಮ್ಮನೂ ಆಗಿದ್ದ ಆದರೆ ಅಪೊಸ್ತಲನಾಗಿರದಿದ್ದ ಯಾಕೋಬನು ಅಧ್ಯಕ್ಷತೆ ವಹಿಸಿದನು. (ಅ. ಕೃತ್ಯಗಳು 15:⁠6) ಅದನ್ನು ಜಾಗರೂಕತೆಯಿಂದ ಚರ್ಚಿಸಿದ ಬಳಿಕ ಪವಿತ್ರಾತ್ಮದ ಸಹಾಯದಿಂದ ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿ ಅವರು ಒಂದು ತೀರ್ಮಾನಕ್ಕೆ ಬಂದರು. ಅವರದನ್ನು ಪತ್ರದಲ್ಲಿ ಬರೆದು ಸ್ಥಳಿಕ ಸಭೆಗಳಿಗೆ ಕಳುಹಿಸಿದರು. (ಅ. ಕೃತ್ಯಗಳು 15:​22-32) ಈ ಮಾಹಿತಿಯನ್ನು ಪಡೆದವರು ಅದನ್ನು ಅಂಗೀಕರಿಸಿ ಅನ್ವಯಿಸಿಕೊಂಡರು. ಫಲಿತಾಂಶವೇನಾಯಿತು? ಸಹೋದರ ಸಹೋದರಿಯರು ಭಕ್ತಿವೃದ್ಧಿಹೊಂದಿ ಉತ್ತೇಜಿತರಾದರು. ಬೈಬಲ್‌ ಹೇಳುವುದು: “ಸಭೆಗಳು ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.”​—⁠ಅ. ಕೃತ್ಯಗಳು 16:⁠5.

9 ಆದರೆ ಸ್ಥಳಿಕ ಸಭೆಗಳು ಕ್ರಮಬದ್ಧತೆಯಿಂದ ಹೇಗೆ ಕಾರ್ಯನಡಿಸಬೇಕಾಗಿತ್ತು? ದೃಷ್ಟಾಂತಕ್ಕೆ ಕ್ರೇತ ದ್ವೀಪದಲ್ಲಿದ್ದ ಸಭೆಗಳನ್ನು ತಕ್ಕೊಳ್ಳಿ. ಆ ದ್ವೀಪದಲ್ಲಿ ಜೀವಿಸುತ್ತಿದ್ದ ಅನೇಕರಿಗೆ ಕೆಟ್ಟ ಹೆಸರಿತ್ತಾದರೂ ಅವರಲ್ಲಿ ಕೆಲವರು ಪರಿವರ್ತನೆ ಹೊಂದಿ ನಿಜ ಕ್ರೈಸ್ತರಾದರು. (ತೀತ 1:​10-12; 2:​2, 3) ಆ ಕ್ರೇತದಲ್ಲಿದ್ದ ಕ್ರೈಸ್ತರು ವಿವಿಧ ನಗರಗಳಲ್ಲಿ ಜೀವಿಸುತ್ತಿದ್ದರು ಮತ್ತು ಅವರಲ್ಲಿ ಎಲ್ಲರೂ ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಗೆ ಅತಿ ದೂರದಲ್ಲಿದ್ದರು. ಆದರೂ ಇದೊಂದು ದೊಡ್ಡ ಸಮಸ್ಯೆಯಾಗಿರಲಿಲ್ಲ. ಏಕೆಂದರೆ ಕ್ರೇತದ ಪ್ರತಿಯೊಂದು ಸ್ಥಳಿಕ ಸಭೆಗಳಲ್ಲಿ, ಬೇರೆ ಕಡೆಗಳಲ್ಲಿದ್ದಂತೆಯೇ ಆಧ್ಯಾತ್ಮಿಕ “ಹಿರೀಪುರುಷರನ್ನು” (NW) ನೇಮಿಸಲಾಗಿತ್ತು. ಇಂಥ ಪುರುಷರು, ಬೈಬಲ್‌ನಲ್ಲಿ ನಾವು ಕಂಡುಕೊಳ್ಳುವ ಅರ್ಹತೆಗಳನ್ನು ಹೊಂದಿದ್ದರು. ಅವರನ್ನು ಹಿರಿಯರು ಇಲ್ಲವೆ ಮೇಲ್ವಿಚಾರಕರಾಗಿ ನೇಮಿಸಲಾಯಿತು. ಅವರು “ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವದಕ್ಕೂ ಎದುರಿಸುವವರ ಬಾಯಿಕಟ್ಟುವದಕ್ಕೂ” ಶಕ್ತರಾಗಿದ್ದರು. (ತೀತ 1:​5-9; 1 ತಿಮೊಥೆಯ 3:​1-7) ಇತರ ಆಧ್ಯಾತ್ಮಿಕ ಪುರುಷರು ಶುಶ್ರೂಷಾ ಸೇವಕರಾಗಿ ಸಭೆಗಳಿಗೆ ಸಹಾಯ ನೀಡಲು ಅರ್ಹರಾಗಿದ್ದರು.​—⁠1 ತಿಮೊಥೆಯ 3:​8-10, 12, 13.

10 ಇಂಥ ಒಂದು ಏರ್ಪಾಡು ಅಸ್ತಿತ್ವದಲ್ಲಿ ಇರುವುದೆಂದು ಯೇಸು ಸೂಚಿಸಿದ್ದನು. ಮತ್ತಾಯ 18:​15-17ರಲ್ಲಿರುವ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ. ಕೆಲವೊಮ್ಮೆ ದೇವಜನರಲ್ಲಿ ಒಬ್ಬನು ಇನ್ನೊಬ್ಬನ ವಿರುದ್ಧವಾಗಿ ಪಾಪ ಮಾಡುವಾಗ ಅವರ ನಡುವೆ ತೊಂದರೆಗಳು ಎದ್ದುಬರಬಹುದೆಂದು ಯೇಸು ಗಮನಿಸಿದನು. ನೊಂದವನು ತಪ್ಪಿತಸ್ಥನ ‘ತಪ್ಪನ್ನು ತಿಳಿಸಲಿಕ್ಕಾಗಿ’ ಅವರಿಬ್ಬರೇ ಇರುವಾಗ ಖಾಸಗಿಯಾಗಿ ಸಮೀಪಿಸಬೇಕಾಗಿತ್ತು. ಆ ಹೆಜ್ಜೆಯಿಂದ ತೊಂದರೆಯು ಬಗೆಹರಿಯದಿದ್ದಲ್ಲಿ, ಸತ್ಯಸಂಗತಿಯನ್ನು ತಿಳಿದಿರುವ ಒಬ್ಬಿಬ್ಬರನ್ನು ಸಹಾಯಕ್ಕಾಗಿ ಕರೆಯಬಹುದಾಗಿತ್ತು. ಆಗಲೂ ಆ ತೊಂದರೆ ಇತ್ಯರ್ಥವಾಗದಿದ್ದಲ್ಲಿ ಆಗೇನು? ಯೇಸು ಹೇಳಿದ್ದು: “ಅವನು ಅವರ ಮಾತನ್ನು ಕೇಳದೆಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆಹೋದರೆ ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ ಇರಲಿ.” ಯೇಸು ಆ ಮಾತುಗಳನ್ನು ನುಡಿದಾಗ ಯೆಹೂದ್ಯರು ಇನ್ನೂ “ದೇವರ ಸಭೆ” ಆಗಿದ್ದರು. ಆದುದರಿಂದ ಅವನ ಆ ಮಾತುಗಳು ಮೂಲತಃ ಅವರಿಗೆ ಅನ್ವಯಿಸಿತು. * ಆದರೆ, ಕ್ರೈಸ್ತ ಸಭೆ ಸ್ಥಾಪನೆಯಾದೊಡನೆ ಯೇಸುವಿನ ಆ ನಿರ್ದೇಶ ಕ್ರೈಸ್ತ ಸಭೆಗೆ ಅನ್ವಯವಾಗಲಿತ್ತು. ಪ್ರತಿಯೊಬ್ಬ ಕ್ರೈಸ್ತನ ಭಕ್ತಿವರ್ಧನೆ ಮತ್ತು ಮಾರ್ಗದರ್ಶನೆಗಾಗಿ ದೇವಜನರಲ್ಲಿ ಒಂದು ಸಭಾ ಏರ್ಪಾಡು ಇರುವುದೆಂಬುದಕ್ಕೆ ಇದು ಇನ್ನೊಂದು ರುಜುವಾತಾಗಿದೆ.

11 ತಕ್ಕದಾಗಿಯೇ, ಹಿರೀಪುರುಷರು ಅಥವಾ ಮೇಲ್ವಿಚಾರಕರು ಸಮಸ್ಯೆಗಳನ್ನು ನಿರ್ವಹಿಸಲು ಇಲ್ಲವೆ ಬಗೆಹರಿಸಲು, ಪಾಪಕೃತ್ಯಗಳನ್ನು ವಿಚಾರಿಸಲು ಸ್ಥಳಿಕ ಸಭೆಯ ಪರವಾಗಿ ಕಾರ್ಯನಡೆಸುವರು. ಇದು ತೀತ 1:9ರಲ್ಲಿರುವ ಹಿರಿಯರ ಅರ್ಹತೆಗಳಿಗೆ ಹೊಂದಿಕೆಯಲ್ಲಿದೆ. ಸ್ಥಳಿಕ ಹಿರಿಯರು ತೀತನಂತೆಯೇ ಅಪರಿಪೂರ್ಣರೆಂಬುದು ಒಪ್ಪಿಕೊಳ್ಳತಕ್ಕ ಸಂಗತಿ. ಆದರೂ ಪೌಲನು ತೀತನನ್ನು ‘ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸುವಂತೆ’ ಸಭೆಗಳಿಗೆ ಕಳುಹಿಸಿದ್ದನು. (ತೀತ 1:​4, 5) ಇಂದು ಹಿರಿಯರಾಗಿ ನೇಮಿಸಲ್ಪಟ್ಟವರು ಹೆಚ್ಚು ಸಮಯದಿಂದ ತಮ್ಮ ನಂಬಿಕೆ ಮತ್ತು ಭಕ್ತಿಯನ್ನು ರುಜುಪಡಿಸಿದವರು ಆಗಿದ್ದಾರೆ. ಆದುದರಿಂದ, ಸಭೆಯಲ್ಲಿರುವ ಇತರರಿಗೆ ಅವರ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ಭರವಸೆಯಿಡಲು ಸಕಾರಣವಿದೆ.

12 ಎಫೆಸ ಸಭೆಯ ಹಿರಿಯರಿಗೆ ಪೌಲನು ಹೇಳಿದ್ದು: “ದೇವರು ತನ್ನ ಸ್ವಂತ ಮಗನ ರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.” (ಅ. ಕೃತ್ಯಗಳು 20:​28, NW) ಅಂತೆಯೇ, ಇಂದು ‘ದೇವರ ಸಭೆಯನ್ನು ಪರಿಪಾಲಿಸುವದಕ್ಕಾಗಿ’ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ ಎಂಬುದು ಸತ್ಯ. ಅವರದನ್ನು ಪ್ರೀತಿಪೂರ್ವಕವಾಗಿ ಮಾಡಬೇಕೇ ಹೊರತು ಮಂದೆಯ ಮೇಲೆ ದಬ್ಬಾಳಿಕೆ ನಡೆಸುವ ಮೂಲಕವಲ್ಲ. (1 ಪೇತ್ರ 5:​2, 3) ಮೇಲ್ವಿಚಾರಕರು “ಎಲ್ಲಾ ಹಿಂಡಿನ” ಭಕ್ತಿಯನ್ನು ವರ್ಧಿಸಲು ಮತ್ತು ಸಹಾಯ ನೀಡಲು ಶ್ರಮಪಡಬೇಕು.

ಸಭೆಗೆ ಅಂಟಿಕೊಳ್ಳುವುದು

13 ಸಭೆಯಲ್ಲಿರುವ ಹಿರಿಯರೂ ಇತರರೆಲ್ಲರೂ ಅಪರಿಪೂರ್ಣರೇ. ಆದಕಾರಣ ಕೆಲವು ಸಾರಿ ಮನಸ್ತಾಪಗಳು ಅಥವಾ ಸಮಸ್ಯೆಗಳು ಉಂಟಾಗುತ್ತವೆ. ಪ್ರಥಮ ಶತಮಾನದಲ್ಲಿ ಕೆಲವು ಅಪೊಸ್ತಲರು ಜೀವಿಸಿದ್ದಾಗಲೂ ಆ ರೀತಿಯ ಸಮಸ್ಯೆಗಳು ಇದ್ದವು. (ಫಿಲಿಪ್ಪಿ 4:​2, 3) ಉದಾಹರಣೆಗೆ ಒಬ್ಬ ಮೇಲ್ವಿಚಾರಕನು ಅಥವಾ ಇನ್ನೊಬ್ಬನು ಒರಟಾದ, ನಿರ್ದಯೆಯ ಅಥವಾ ಪೂರ್ಣವಾಗಿ ಸತ್ಯವಲ್ಲದ ಮಾತುಗಳನ್ನಾಡಬಹುದು. ಇಲ್ಲವೆ ದೇವರ ವಾಕ್ಯಕ್ಕೆ ವಿರುದ್ಧವಾದ ಏನೊ ಸಂಗತಿ ನಡೆಯುತ್ತಿದೆ ಆದರೆ ಸ್ಥಳಿಕ ಹಿರಿಯರಿಗೆ ಇದು ತಿಳಿದಿರುವುದಾದರೂ ಅವರದನ್ನು ಸರಿಪಡಿಸುತ್ತಿಲ್ಲವೆಂಬಂತೆ ನಮಗನಿಸಬಹುದು. ಆದರೆ ಆ ಸಂಗತಿಯನ್ನು ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿ ಮತ್ತು ನಿಜತ್ವದ ಬೆಳಕಿನಲ್ಲಿ ಹಿರಿಯರು ನಿರ್ವಹಿಸಿದ್ದಿರಬಹುದು ಅಥವಾ ಈಗ ನಿರ್ವಹಿಸುತ್ತಾ ಇರಬಹುದು. ಒಂದುವೇಳೆ ನಮಗೆ ಆ ನಿಜತ್ವಗಳು ತಿಳಿದಿರಲಿಕ್ಕಿಲ್ಲ. ಆದರೆ ನಾವೆಣಿಸಿದ್ದೇ ಸತ್ಯವಾಗಿದ್ದರೂ ಹೀಗೆ ಯೋಚಿಸಿರಿ: ಯೆಹೋವನ ಪರಾಮರಿಕೆಯಲ್ಲಿದ್ದ ಕೊರಿಂಥ ಸಭೆಯಲ್ಲಿ ಸ್ವಲ್ಪ ಕಾಲದ ತನಕ ಗಂಭೀರ ತಪ್ಪೊಂದು ನಡೆಯುತ್ತಿತ್ತು. ಆದರೆ ತಕ್ಕ ಸಮಯದಲ್ಲಿ ಆತನು ಅದನ್ನು ಕಟ್ಟುನಿಟ್ಟಿನಿಂದ ಮತ್ತು ಸರಿಯಾದ ರೀತಿಯಲ್ಲಿ ನಿರ್ವಹಿಸಿದನು. (1 ಕೊರಿಂಥ 5:​1, 5, 9-11) ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ಒಂದುವೇಳೆ ನಾನು ಆವಾಗ ಕೊರಿಂಥದಲ್ಲಿ ಇರುತ್ತಿದ್ದಲ್ಲಿ ಆ ಮಧ್ಯೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆ?’

14 ಸಭೆಯಲ್ಲಿ ನಡೆಯಬಲ್ಲ ಇನ್ನೊಂದು ಸಾಧ್ಯತೆಯ ಕುರಿತು ಪರಿಗಣಿಸಿರಿ. ಒಬ್ಬನಿಗೆ ಒಂದು ಶಾಸ್ತ್ರೀಯ ಬೋಧನೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ ಎಂದು ಭಾವಿಸೋಣ. ಅವನು ಬೈಬಲ್‌ನಲ್ಲೂ ಸಭೆಯಲ್ಲಿ ದೊರೆಯುವ ಪುಸ್ತಕಗಳಲ್ಲೂ ರಿಸರ್ಚ್‌ ಮಾಡಿರಬಹುದು. ಪ್ರೌಢ ಸಹೋದರರಿಂದ ಮತ್ತು ಹಿರಿಯರಿಂದ ಸಹ ಸಹಾಯವನ್ನು ಕೋರಿರಬಹುದು. ಆದರೂ ಅವನಿಗೆ ಆ ವಿಷಯವನ್ನು ಗ್ರಹಿಸಲು ಅಥವಾ ಅಂಗೀಕರಿಸಲು ಕಷ್ಟವಾಗುತ್ತದೆ. ಅವನು ಆಗ ಏನು ಮಾಡಬಹುದು? ಇದೇ ರೀತಿಯ ಸಂಗತಿ ಯೇಸು ಸಾಯುವುದಕ್ಕೆ ಸುಮಾರು ಒಂದು ವರುಷಕ್ಕೆ ಮುನ್ನ ಸಂಭವಿಸಿತು. ಒಮ್ಮೆ ಯೇಸು “ಜೀವಕೊಡುವ ರೊಟ್ಟಿ ನಾನೇ,” ಒಬ್ಬನು ನಿತ್ಯವಾಗಿ ಬದುಕಬೇಕಾದರೆ ‘ಮನುಷ್ಯಕುಮಾರನ ಮಾಂಸವನ್ನು ತಿಂದು ಅವನ ರಕ್ತವನ್ನು ಕುಡಿಯಬೇಕು’ ಎಂದು ಹೇಳಿದನು. ಅದು ಅವನ ಶಿಷ್ಯರಲ್ಲಿ ಕೆಲವರಿಗೆ ಆಘಾತವನ್ನು ಕೊಟ್ಟಿತು. ಎಷ್ಟೆಂದರೆ, ಅದರ ಸರಿಯಾದ ಅರ್ಥವನ್ನು ಕೇಳುವ ಬದಲು ಅಥವಾ ನಂಬಿಕೆಯಿಂದ ಕಾಯುವ ಬದಲು ಅನೇಕ ಮಂದಿ ಶಿಷ್ಯರು ‘ಅಂದಿನಿಂದ ಅವನೊಂದಿಗೆ ನಡೆಯುವುದನ್ನು ನಿಲ್ಲಿಸಿದರು.’ (ಯೋಹಾನ 6:​35, 41-66, NW) ಒಂದುವೇಳೆ ನಾವು ಅಲ್ಲಿರುತ್ತಿದ್ದಲ್ಲಿ ಏನು ಮಾಡುತ್ತಿದ್ದೆವು?

15 ಆಧುನಿಕ ದಿನಗಳಲ್ಲಿ ಕೆಲವರು ತಾವು ಒಬ್ಬರಾಗಿಯೇ ದೇವರನ್ನು ಸೇವಿಸಬಹುದೆಂದು ಭಾವಿಸುತ್ತಾ ಸ್ಥಳಿಕ ಸಭೆಯೊಂದಿಗೆ ಸಹವಹಿಸುವುದನ್ನು ನಿಲ್ಲಿಸಿರುತ್ತಾರೆ. ಇದಕ್ಕೆ ಕಾರಣ, ಸಭೆಯವರು ತಮ್ಮ ಮನಸ್ಸನ್ನು ನೋಯಿಸಿದ್ದಾರೆ ಇಲ್ಲವೆ ಆದ ತಪ್ಪನ್ನು ಸರಿಪಡಿಸುತ್ತಿಲ್ಲ ಅಥವಾ ನಿರ್ದಿಷ್ಟ ಬೋಧನೆಯನ್ನು ಅಂಗೀಕರಿಸುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಅವರು ಹೇಳಾರು. ಅವರು ತೆಗೆದುಕೊಂಡ ಈ ಹೆಜ್ಜೆ ನ್ಯಾಯಸಮ್ಮತವೋ? ಪ್ರತಿಯೊಬ್ಬ ಕ್ರೈಸ್ತನು ದೇವರೊಂದಿಗೆ ವೈಯಕ್ತಿಕ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂಬುದು ನಿಜ. ಆದರೂ, ಅಪೊಸ್ತಲರ ದಿನಗಳಲ್ಲಿ ಇದ್ದಂತೆಯೇ ದೇವರು ಇಂದು ಕೂಡ ಒಂದು ಲೋಕವ್ಯಾಪಕ ಸಭೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದನ್ನು ನಾವು ಅಲ್ಲಗಳೆಯಲಾರೆವು. ಇದಲ್ಲದೆ, ಪ್ರಥಮ ಶತಮಾನದಲ್ಲಿ ಯೆಹೋವನು ಸ್ಥಳಿಕ ಸಭೆಗಳನ್ನು ಬಳಸಿ, ಆಶೀರ್ವದಿಸಿ, ಸಭೆಯ ಪ್ರಯೋಜನಾರ್ಥವಾಗಿ ಅರ್ಹರಾದ ಹಿರಿಯರನ್ನೂ ಶುಶ್ರೂಷಾ ಸೇವಕರನ್ನೂ ನೇಮಿಸಿದನು. ಅದು ಇಂದು ಸಹ ಸತ್ಯವಾಗಿದೆ.

16 ದೇವರೊಂದಿಗೆ ತನಗೆ ಒಳ್ಳೇ ಸಂಬಂಧವಿದ್ದರೆ ಅಷ್ಟೇ ಸಾಕು ಎಂದು ಒಬ್ಬ ಕ್ರೈಸ್ತನಿಗೆ ಅನಿಸಬಹುದು. ಆದರೆ ಹಾಗೆ ಮಾಡುವಲ್ಲಿ ಅವನು ದೇವನೇಮಿತ ಏರ್ಪಾಡನ್ನು ಅಂದರೆ ದೇವಜನರ ಲೋಕವ್ಯಾಪಕ ಸಭೆಯನ್ನೂ ಸ್ಥಳಿಕ ಸಭೆಯನ್ನೂ ತಳ್ಳಿಹಾಕುತ್ತಿದ್ದಾನೆ. ಒಂದುವೇಳೆ ಅವನು ತಾನಾಗಿಯೇ ಸ್ವತಂತ್ರವಾಗಿ ದೇವರನ್ನು ಆರಾಧಿಸಬಹುದು ಇಲ್ಲವೆ ಕೇವಲ ಕೆಲವರೊಂದಿಗೆ ಸಹವಾಸ ಮಾಡಬಹುದು. ಆದರೆ ಕ್ರೈಸ್ತ ಸಭೆಯ ಹೊರಗೆ ಸಭಾ ಹಿರಿಯರ ಮತ್ತು ಶುಶ್ರೂಷಾ ಸೇವಕರ ಏರ್ಪಾಡು ಇರುವುದಿಲ್ಲವಲ್ಲಾ. ಪೌಲನು ಕೊಲೊಸ್ಸೆಯ ಸಭೆಗೆ ಬರೆದು, ಅದನ್ನು ಲವೊದಿಕೀಯ ಸಭೆಯಲ್ಲಿಯೂ ಓದಿಹೇಳಬೇಕೆಂದು ನಿರ್ದೇಶಿಸಿದಾಗ, “[ಕ್ರಿಸ್ತನಲ್ಲಿ] ಬೇರೂರಿಕೊಂಡು ಭಕ್ತಿವೃದ್ಧಿ” ಹೊಂದುವುದರ ಕುರಿತು ಹೇಳಿದ್ದು ಗಮನಾರ್ಹವಾಗಿದೆ. ಇದರಿಂದ ಪ್ರಯೋಜನ ಹೊಂದಿದವರು ಆ ಸಭೆಗಳಲ್ಲಿದ್ದವರು ಮಾತ್ರ, ಅಂಥ ಸಭೆಗಳಿಂದ ಪ್ರತ್ಯೇಕಿಸಿಕೊಂಡವರಲ್ಲ.​—⁠ಕೊಲೊಸ್ಸೆ 2:​6, 7; 4:16.

ಸತ್ಯಕ್ಕೆ ಸ್ತಂಭ ಮತ್ತು ಆಧಾರ

17 ಅಪೊಸ್ತಲ ಪೌಲನು ಕ್ರೈಸ್ತ ಹಿರಿಯನಾಗಿದ್ದ ತಿಮೊಥೆಯನಿಗೆ ಬರೆದ ಒಂದನೆಯ ಪತ್ರದಲ್ಲಿ, ಸ್ಥಳಿಕ ಸಭೆಗಳಲ್ಲಿರುವ ಹಿರಿಯರ ಮತ್ತು ಶುಶ್ರೂಷಾ ಸೇವಕರ ಅರ್ಹತೆಗಳನ್ನು ತಿಳಿಸಿದನು. ಪೌಲನು ಇದನ್ನು ಹೇಳಿದ ಕೂಡಲೆ “ಜೀವಸ್ವರೂಪನಾದ ದೇವರ ಸಭೆಯ” ವಿಷಯ ಮಾತಾಡುತ್ತ ಅದು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿದೆ ಎಂದು ಹೇಳಿದನು. (1 ತಿಮೊಥೆಯ 3:15) ಪ್ರಥಮ ಶತಮಾನದ ಅಭಿಷಿಕ್ತ ಕ್ರೈಸ್ತರ ಆ ಇಡೀ ಸಭೆಯು ಅಂಥ ಸ್ತಂಭವಾಗಿತ್ತು ಎಂಬುದು ನಿಶ್ಚಯ. ಪ್ರತಿಯೊಬ್ಬ ಕ್ರೈಸ್ತನು ಇಂಥ ಸತ್ಯವನ್ನು ಮುಖ್ಯವಾಗಿ ಆ ಸ್ಥಳಿಕ ಸಭಾ ಏರ್ಪಾಡಿನ ಮೂಲಕವಾಗಿಯೇ ಪಡೆಯಬೇಕಿತ್ತು. ಇಲ್ಲಿಯೇ ಅವರು ಬೈಬಲ್‌ ಸತ್ಯವು ಕಲಿಸಲ್ಪಡುವುದನ್ನು ಮತ್ತು ಸಮರ್ಥಿಸಲ್ಪಡುವುದನ್ನು ಕೇಳಿದರು ಹಾಗೂ ಭಕ್ತಿವೃದ್ಧಿ ಹೊಂದಿದರು.

18 ಅದೇರೀತಿ, ಲೋಕವ್ಯಾಪಕ ಕ್ರೈಸ್ತ ಸಭೆಯು “ಸತ್ಯಕ್ಕೆ ಸ್ತಂಭವೂ ಆಧಾರವೂ” ಆದ ದೇವರ ಮನೆವಾರ್ತೆಯಾಗಿದೆ. ನಮ್ಮ ಸ್ಥಳಿಕ ಸಭೆಯ ಕೂಟಗಳಲ್ಲಿ ಕ್ರಮವಾಗಿ ಉಪಸ್ಥಿತರಾಗಿದ್ದು ಭಾಗವಹಿಸುವುದು ನಮ್ಮ ಭಕ್ತಿವೃದ್ಧಿಯ ಮುಖ್ಯ ಕೀಲಿಕೈಯಾಗಿದೆ. ಆಗ ದೇವರೊಂದಿಗಿನ ನಮ್ಮ ಸಂಬಂಧ ಬಲಗೊಂಡು ಆತನ ಚಿತ್ತವನ್ನು ಮಾಡಲು ನಾವು ಸನ್ನದ್ಧರಾಗುತ್ತೇವೆ. ಪೌಲನು ಕೊರಿಂಥ ಸಭೆಗೆ ಬರೆದಾಗ ಅಂಥ ಕೂಟಗಳಲ್ಲಿ ಏನು ಹೇಳಲ್ಪಡುತ್ತದೆ ಎಂಬುದರ ಮೇಲೆ ಗಮನ ಸೆಳೆದನು. ಅವರ ಕೂಟಗಳಲ್ಲಿ ಏನು ಹೇಳಲ್ಪಡುತ್ತದೋ ಅದು ಸ್ಪಷ್ಟವೂ ಗ್ರಾಹ್ಯವೂ ಆಗಿದ್ದು ಆ ಮೂಲಕ ಹಾಜರಾದವರೆಲ್ಲರ “ಭಕ್ತಿವೃದ್ಧಿ” ಆಗುವಂತೆ ಅವನು ಬಯಸಿದ್ದನು. (1 ಕೊರಿಂಥ 14:​12, 17-19) ಸ್ಥಳಿಕ ಸಭೆಗಳ ಏರ್ಪಾಡನ್ನು ನೇಮಿಸಿದವನು ಮತ್ತು ಅದನ್ನು ಬೆಂಬಲಿಸುತ್ತಿರುವವನು ಯೆಹೋವ ದೇವರೇ ಎಂದು ನಾವು ಒಪ್ಪಿಕೊಳ್ಳುವಲ್ಲಿ ನಾವು ಸಹ ಭಕ್ತಿವೃದ್ಧಿಯನ್ನು ಹೊಂದಬಲ್ಲೆವು.

19 ಹೌದು, ಕ್ರೈಸ್ತರಾಗಿ ಭಕ್ತಿವೃದ್ಧಿ ಹೊಂದಲು ಬಯಸುವುದಾದರೆ ನಾವು ಸಭೆಯೊಳಗೇ ಇರಬೇಕಾಗಿದೆ. ಅದು ದೀರ್ಘಕಾಲದಿಂದ ಸುಳ್ಳು ಬೋಧನೆಗಳ ವಿರುದ್ಧ ಸಂರಕ್ಷಣೆಯಾಗಿ ರುಜುವಾಗಿದೆ. ಮೆಸ್ಸೀಯನ ರಾಜ್ಯದ ಸುವಾರ್ತೆಯು ಜಗದ್ವ್ಯಾಪಕವಾಗಿ ಘೋಷಿಸಲ್ಪಡುವಂತೆ ದೇವರು ಉಪಯೋಗಿಸುತ್ತಿರುವ ಸಾಧನವೂ ಅದಾಗಿದೆ. ಹೀಗೆ ದೇವರು ಕ್ರೈಸ್ತ ಸಭೆಯ ಮೂಲಕ ಹೇರಳ ವಿಷಯಗಳನ್ನು ನೆರವೇರಿಸಿರುತ್ತಾನೆ ಎಂಬುದು ನಿಶ್ಚಯ.​—⁠ಎಫೆಸ 3:​9, 10. (w07 4/15)

[ಪಾದಟಿಪ್ಪಣಿ]

^ ಪ್ಯಾರ. 13 “ಸಭೆಗೆ ಹೇಳು” ಎಂಬ ಯೇಸುವಿನ ನಿರ್ದೇಶವು “ಅಂಥ ಪ್ರಸ್ತಾಪಗಳನ್ನು ತನಿಖೆಮಾಡಲು ಅಧಿಕಾರವಿರುವವರು ಅಂದರೆ ಚರ್ಚ್‌ ಪ್ರತಿನಿಧಿಗಳೆಂದು ಅರ್ಥಮಾಡಸಾಧ್ಯವಿದೆ. ಯೆಹೂದಿ ಸಭಾಮಂದಿರಗಳಲ್ಲಿ ಹಿರಿಯರ ನ್ಯಾಯಸ್ಥಾನವೊಂದಿತ್ತು. ಅಲ್ಲಿ ಈ ರೀತಿಯ ವಿಚಾರಣೆಗಳು ನಡೆಯುತ್ತಿದ್ದವು” ಎಂದು ಬೈಬಲ್‌ ವಿದ್ವಾಂಸರಾದ ಆಲ್ಬರ್ಟ್‌ ಬಾನ್ಸ್‌ ಹೇಳುತ್ತಾರೆ.

ಜ್ಞಾಪಿಸಿಕೊಳ್ಳಬಲ್ಲಿರಾ?

• ದೇವರು ಭೂಮಿಯ ಮೇಲೆ ಸಭೆಗಳನ್ನು ಉಪಯೋಗಿಸುತ್ತಿರುವನೆಂದು ನಾವೇಕೆ ನಿರೀಕ್ಷಿಸಬೇಕು?

• ಹಿರಿಯರು ಅಪರಿಪೂರ್ಣರಾದರೂ ಸಭೆಗಾಗಿ ಏನು ಮಾಡುತ್ತಾರೆ?

• ಸ್ಥಳಿಕ ಸಭೆಯಿಂದ ನೀವು ಹೇಗೆ ಭಕ್ತಿವೃದ್ಧಿ ಹೊಂದುತ್ತಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

1. “ದೇವರ ಸಭೆಯ” ಕುರಿತು ಯಾವ ಪ್ರಶ್ನೆಗಳನ್ನು ಕೇಳಸಾಧ್ಯವಿದೆ?

2, 3. ಸಭೆಯಲ್ಲಿ ರಚನಾಕ್ರಮ ಇರುವುದೆಂದು ಯೇಸು ಹೇಗೆ ಸೂಚಿಸಿದನು?

4, 5. ಸಭೆಗೆ ಆಧ್ಯಾತ್ಮಿಕ ಶಿಕ್ಷಣ ಆವಶ್ಯಕವೆಂದು ನಮಗೆ ಹೇಗೆ ಗೊತ್ತು?

6. ಹೊಸದಾಗಿ ರಚಿಸಲ್ಪಟ್ಟ “ದೇವರ ಸಭೆ”ಯಲ್ಲಿ ಯಾವ ಏರ್ಪಾಡುಗಳನ್ನು ಮಾಡಲಾಯಿತು?

7, 8. (ಎ) ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಹಿರಿಯರೂ ಆರಂಭದ ಕ್ರೈಸ್ತರ ಮಧ್ಯೆ ಯಾರಾಗಿ ಸೇವೆಮಾಡಿದರು? (ಬಿ) ಸಭೆಗಳ ಮೂಲಕ ಸಲಹೆ ಒದಗಿಸಲ್ಪಟ್ಟಾಗ ಪರಿಣಾಮ ಏನಾಯಿತು?

9. ಅರ್ಹತೆಯಿರುವ ಕ್ರೈಸ್ತ ಪುರುಷರು ಯಾವ ಪಾತ್ರ ವಹಿಸುವರೆಂದು ಬೈಬಲ್‌ ಸೂಚಿಸುತ್ತದೆ?

10. ಮತ್ತಾಯ 18:​15-17ಕ್ಕನುಸಾರ ಗಂಭೀರ ಸಮಸ್ಯೆಗಳನ್ನು ಹೇಗೆ ನಿವಾರಿಸಬೇಕಾಗಿತ್ತು?

11. ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಹಿರಿಯರ ಪಾತ್ರವೇನು?

12. ಸಭೆಯಲ್ಲಿ ಹಿರಿಯರಿಗೆ ಯಾವ ಜವಾಬ್ದಾರಿಯಿದೆ?

13. ಕೆಲವೊಮ್ಮೆ ಒಂದು ಸಭೆಯಲ್ಲಿ ಏನು ಸಂಭವಿಸಬಹುದು ಮತ್ತು ಏಕೆ?

14, 15. ಯೇಸುವನ್ನು ಹಿಂಬಾಲಿಸುವುದನ್ನು ಕೆಲವರು ನಿಲ್ಲಿಸಿದ್ದೇಕೆ ಮತ್ತು ಇದು ಯಾವ ಪಾಠವನ್ನು ನಮಗೆ ಕಲಿಸುತ್ತದೆ?

16. ಸಭೆಯನ್ನು ಬಿಟ್ಟುಬಿಡುವ ಶೋಧನೆ ಉಂಟಾಗುವಾಗ ಒಬ್ಬನು ಯಾವುದರ ಕುರಿತು ಯೋಚಿಸಬೇಕು?

17. ಸಭೆಯ ಕುರಿತು 1 ತಿಮೊಥೆಯ 3:15 ನಮಗೆ ಏನು ಕಲಿಸುತ್ತದೆ?

18. ಸಭಾಕೂಟಗಳು ಅತ್ಯಾವಶ್ಯಕ ಏಕೆ?

19. ನಿಮ್ಮ ಸಭೆಗೆ ನೀವು ಏಕೆ ಋಣಿಯಾಗಿರಬೇಕು?

[ಪುಟ 14ರಲ್ಲಿರುವ ಚಿತ್ರ]

ಅಪೊಸ್ತಲರೂ ಯೆರೂಸಲೇಮಿನ ಹಿರೀಪುರುಷರೂ ಆಡಳಿತ ಮಂಡಳಿಯಾಗಿ ಕಾರ್ಯ ನಡೆಸಿದರು