ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೇಡಿನ ಮೂಲವನ್ನು ಬಯಲಿಗೆಳೆಯುವುದು!

ಕೇಡಿನ ಮೂಲವನ್ನು ಬಯಲಿಗೆಳೆಯುವುದು!

ಕೇಡಿನ ಮೂಲವನ್ನು ಬಯಲಿಗೆಳೆಯುವುದು!

ಮೊದಲನೆಯ ಶತಮಾನದಲ್ಲಿ ಅನೇಕ ಯೆಹೂದ್ಯರು ವಾಗ್ದಾತ್ತ ಮೆಸ್ಸೀಯನ ಆಗಮನವನ್ನು ಎದುರುನೋಡುತ್ತಿದ್ದರು. (ಯೋಹಾನ 6:14) ಯೇಸು ಆ ಮೆಸ್ಸೀಯನಾಗಿ ಆಗಮಿಸಿದಾಗ ಸಾಂತ್ವನ ಮತ್ತು ದೇವರ ವಾಕ್ಯದ ಹೆಚ್ಚಿನ ಜ್ಞಾನವನ್ನು ನೀಡಿದನು. ಅವನು ರೋಗಿಗಳನ್ನು ಗುಣಪಡಿಸಿದನು, ಹಸಿದವರನ್ನು ಉಣಿಸಿದನು, ಹವಾಮಾನವನ್ನು ನಿಯಂತ್ರಿಸಿದನು ಮತ್ತು ಸತ್ತವರನ್ನೂ ಎಬ್ಬಿಸಿದನು. (ಮತ್ತಾಯ 8:26; 14:14-21; 15:30, 31; ಮಾರ್ಕ 5:38-43) ಅವನು ಯೆಹೋವನ ಮಾತುಗಳನ್ನು ನುಡಿದನು ಮತ್ತು ನಿತ್ಯಜೀವದ ವಾಗ್ದಾನವನ್ನು ಎತ್ತಿಹಿಡಿದನು. (ಯೋಹಾನ 3:34) ಅವನೇನನ್ನು ಮಾಡಿದನೋ ಮತ್ತು ಏನನ್ನು ಕಲಿಸಿದನೋ ಅದರ ಮೂಲಕ, ಮಾನವಕುಲವನ್ನು ಪಾಪ ಮತ್ತು ಅದರ ಕೇಡಿನ ಪರಿಣಾಮಗಳಿಂದ ವಿಮೋಚಿಸುವ ಮೆಸ್ಸೀಯನು ತಾನೇ ಎಂಬುದನ್ನು ಸಂಪೂರ್ಣವಾಗಿ ತೋರಿಸಿಕೊಟ್ಟನು.

ಯೇಸುವಿನ ಕೆಲಸಗಳನ್ನು ನೋಡಿ ಯೆಹೂದಿ ಧಾರ್ಮಿಕ ಮುಖಂಡರು ಅವನನ್ನು ಸ್ವಾಗತಿಸುವುದರಲ್ಲಿ, ಅವನಿಗೆ ಕಿವಿಗೊಡುವುದರಲ್ಲಿ ಮತ್ತು ಅವನ ನಿರ್ದೇಶನವನ್ನು ಸಂತೋಷದಿಂದ ಪಾಲಿಸುವುದರಲ್ಲಿ ಮೊದಲಿಗರಾಗಿರಬೇಕಿತ್ತೆಂಬುದು ತರ್ಕಬದ್ಧ. ಆದರೆ ಅವರು ಹಾಗೆ ಮಾಡಲಿಲ್ಲ. ಅದರ ಬದಲಾಗಿ, ಅವರು ಅವನನ್ನು ದ್ವೇಷಿಸಿದರು, ಹಿಂಸಿಸಿದರು ಮತ್ತು ಅವನನ್ನು ಕೊಲ್ಲಲೂ ಒಳಸಂಚು ನಡೆಸಿದರು!​—⁠ಮಾರ್ಕ 14:1; 15:1-3, 10-15.

ನಿಂದೆಗರ್ಹರಾದ ಆ ಪುರುಷರನ್ನು ಯೇಸು ಖಂಡಿಸಿದ್ದು ಸೂಕ್ತವಾಗಿತ್ತು. (ಮತ್ತಾಯ 23:33-35) ಆದರೂ, ಅವರ ಹೃದಯದಲ್ಲಿದ್ದ ಕೇಡಿನ ಯೋಚನೆಗಳು ಮತ್ತು ಅವರ ಕೃತ್ಯಗಳಿಗೆ ಬೇರೆ ಯಾರೋ ಜವಾಬ್ದಾರರಾಗಿದ್ದಾರೆ ಎಂದು ಯೇಸು ಗುರುತಿಸಿದನು. ಯೇಸು ಅವರಿಗೆ ಹೇಳಿದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.” (ಯೋಹಾನ 8:44) ಇಲ್ಲಿ ಯೇಸು, ಮಾನವರಿಗೆ ದುಷ್ಕೃತ್ಯಗಳನ್ನು ಮಾಡುವ ಸಾಮರ್ಥ್ಯ ಇದೆಯೆಂದು ಒಪ್ಪಿಕೊಂಡನಾದರೂ, ಕೇಡಿನ ಮೂಲನು ಪಿಶಾಚನಾದ ಸೈತಾನನೇ ಎಂದು ಗುರುತಿಸಿದನು.

ಸೈತಾನನು “ಸತ್ಯದಲ್ಲಿ ನಿಲ್ಲಲಿಲ್ಲ” ಎಂದು ಹೇಳುವ ಮೂಲಕ ಈ ಆತ್ಮ ಜೀವಿಯು ಒಂದಾನೊಂದು ಕಾಲದಲ್ಲಿ ದೇವರ ನಂಬಿಗಸ್ತ ಸೇವಕನಾಗಿದ್ದನು ಆದರೆ ತದನಂತರ ಸರಿಮಾರ್ಗದಿಂದ ದಾರಿತಪ್ಪಿ ಹೋದನು ಎಂದು ಯೇಸು ಸ್ಪಷ್ಟಪಡಿಸಿದನು. ಸೈತಾನನು ಯೆಹೋವನ ವಿರುದ್ಧ ದಂಗೆಯೇಳಲು ಕಾರಣವೇನಾಗಿತ್ತು? ಅವನ ಸ್ವ-ಪ್ರತಿಷ್ಠೆಯ ಭಾವನೆಗಳೇ. ಅವುಗಳನ್ನು ಅವನು ಎಲ್ಲಿಯ ವರೆಗೆ ನೀರೆರೆದು ಪೋಷಿಸಿದನೆಂದರೆ, ದೇವರಿಗೆ ಮಾತ್ರ ಸಲ್ಲತಕ್ಕ ಆರಾಧನೆಗಾಗಿ ಅವನು ದುರಾಸೆಪಡುವ ಹಂತವನ್ನು ಅದು ತಲಪಿತು. *​—⁠ಮತ್ತಾಯ 4:8, 9.

ಏದೆನ್‌ ತೋಟದಲ್ಲಿದ್ದ ಹವ್ವಳು ನಿಷೇಧಿತ ಹಣ್ಣನ್ನು ತಿನ್ನುವಂತೆ ಸೈತಾನನು ಮೋಸಗೊಳಿಸಿದಾಗ ಅವನ ದಂಗೆ ಬೆಳಕಿಗೆ ಬಂತು. ಪ್ರಪ್ರಥಮ ಸುಳ್ಳನ್ನು ಹೇಳುವ ಮೂಲಕ ಮತ್ತು ಯೆಹೋವನ ಮೇಲೆ ಮಿಥ್ಯಾಪವಾದವನ್ನು ಹೊರಿಸುವ ಮೂಲಕ ಸೈತಾನನು ತನ್ನನ್ನು “ಸುಳ್ಳಿಗೆ ಮೂಲಪುರುಷ”ನನ್ನಾಗಿ ಮಾಡಿಕೊಂಡನು. ಅಷ್ಟುಮಾತ್ರವಲ್ಲದೆ, ಅವನು ಆದಾಮಹವ್ವರಿಗೆ ಆಮಿಷವೊಡ್ಡಿ ಅವರು ಅವಿಧೇಯರಾಗುವಂತೆ ಮಾಡುವ ಮೂಲಕ ಪಾಪವು ಅವರ ಮೇಲೆ ಅಧಿಕಾರ ನಡೆಸುವಂತೆ ಮಾಡಿದನು. ಇದು ಕಟ್ಟಕಡೆಗೆ ಅವರ ಹಾಗೂ ಅವರ ಎಲ್ಲಾ ಸಂತತಿಯವರ ಮರಣಕ್ಕೆ ನಡೆಸಿತು. ಹೀಗೆ, ಸೈತಾನನು ತನ್ನನ್ನೇ ಒಬ್ಬ “ಕೊಲೆಗಾರ”ನನ್ನಾಗಿಯೂ ಮಾಡಿಕೊಂಡನು! ನಿಶ್ಚಯವಾಗಿ ಅವನು ಇತಿಹಾಸದಲ್ಲೇ ಬಹುದೊಡ್ಡ ಪ್ರಮಾಣದಲ್ಲಿ ಕೊಲೆಗಳನ್ನು ಮಾಡಿದವನಾಗಿದ್ದಾನೆ!​—⁠ಆದಿಕಾಂಡ 3:1-6; ರೋಮಾಪುರ 5:12.

ಸೈತಾನನ ಕೇಡುಭರಿತ ಪ್ರಭಾವವು ಆತ್ಮಜೀವಿಗಳ ಕ್ಷೇತ್ರವನ್ನೂ ತಲಪಿತು. ಅಲ್ಲಿ ಅವನು, ಇತರ ದೇವದೂತರು ತನ್ನ ದಂಗೆಯಲ್ಲಿ ಸೇರುವಂತೆ ಪ್ರೇರಿಸಿದನು. (2 ಪೇತ್ರ 2:4) ಸೈತಾನನಂತೆ ಈ ದುಷ್ಟ ದೂತರು ಮಾನವರಲ್ಲಿ ಅಯೋಗ್ಯ ರೀತಿಯ ಅಸಕ್ತಿಯನ್ನು ತೋರಿಸಿದರು. ಈ ದೂತರು ತೋರಿಸಿದ ಆಸಕ್ತಿಯಾದರೋ ನೀತಿಗೆಟ್ಟ ಲೈಂಗಿಕ ಆಸಕ್ತಿಯಾಗಿತ್ತು ಮತ್ತು ಇದು ಅಘಾತಕಾರೀ ಹಾಗೂ ಕೇಡುಭರಿತ ಪರಿಣಾಮಗಳನ್ನು ತಂದಿತು.

ಕೇಡು ಭೂಮಿಯನ್ನು ತುಂಬಿಕೊಂಡದ್ದು

“ಭೂಮಿಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣು ಮಕ್ಕಳು ಹುಟ್ಟಲು ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು” ಎಂದು ಬೈಬಲ್‌ ನಮಗೆ ಹೇಳುತ್ತದೆ. (ಆದಿಕಾಂಡ 6:1, 2) ಈ “ದೇವಪುತ್ರರು” ಯಾರಾಗಿದ್ದರು? ಅವರು ಮಾನವರಲ್ಲ, ಬದಲಿಗೆ ಆತ್ಮ ಜೀವಿಗಳಾಗಿದ್ದರು. ( ಯೋಬ 38:6) ಇದು ನಮಗೆ ಹೇಗೆ ತಿಳಿದಿದೆ? ಒಂದು ವಿಷಯವೇನೆಂದರೆ, ಮಾನವರಲ್ಲಿ ವಿವಾಹವು ಸುಮಾರು 1,500 ವರ್ಷಗಳಿಂದಲೂ ನಡೆಯುತ್ತಾ ಇತ್ತು ಮತ್ತು ಇದನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸುವಂತಹ ಯಾವುದೇ ಕಾರಣಗಳಿರಲಿಲ್ಲ. ಹಾಗಾದರೆ, ಮಾನವ ಶರೀರಧಾರಣೆ ಮಾಡಿದ “ದೇವಪುತ್ರರ” ಮತ್ತು “ಮನುಷ್ಯಪುತ್ರಿಯರ” ಈ ಲೈಂಗಿಕ ಮಿಲನದ ಕಡೆಗೆ ಗಮನಸೆಳೆಯುವ ಮೂಲಕ, ಇದು ಹಿಂದೆಂದೂ ನಡೆದಿರದಂತಹ ಮತ್ತು ಸಹಜವಲ್ಲದ ವಿಷಯವಾಗಿತ್ತೆಂಬುದರ ಕಡೆಗೆ ಈ ವೃತ್ತಾಂತವು ಸ್ಪಷ್ಟವಾಗಿ ಕೈತೋರಿಸಿತು.

ಈ ಮಿಲನದಿಂದಾಗಿ ಹುಟ್ಟಿದ ಸಂತತಿಯು ಅದು ಸಹಜವಲ್ಲದ ಮಿಲನವಾಗಿತ್ತು ಎಂಬುದನ್ನು ದೃಢೀಕರಿಸಿತು. ಮಿಶ್ರಸಂತಾನದವರಾಗಿದ್ದ ಇವರನ್ನು ನೆಫೀಲಿಯರೆಂದು ಕರೆಯಲಾಯಿತು ಮತ್ತು ಇವರು ಬೆಳೆದು ದೈತ್ಯರಾದರು. ಇವರು ಕ್ರೂರಿ ಹಲ್ಲೆಗಾರರೂ ಆಗಿದ್ದರು. ವಾಸ್ತವಾಂಶವೇನೆಂದರೆ, “ನೆಫೀಲಿಯ” ಎಂಬುದರ ಅರ್ಥವು “ಕೆಡಹುವವರು” ಅಥವಾ “ಇತರರನ್ನು ಕೆಡವಿ ಹಾಕುವವರು” ಎಂದಾಗಿದೆ. ಈ ಹೈವಾನರನ್ನು “ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು” ಎಂದು ವರ್ಣಿಸಲಾಗಿದೆ.​—⁠ಆದಿಕಾಂಡ 6:⁠4, BSI Reference Bible ಪಾದಟಿಪ್ಪಣಿ.

ಈ ನೆಫೀಲಿಯರು ಮತ್ತು ಇವರ ತಂದೆಯಂದಿರು ದುಷ್ಟತನವನ್ನು, ಹಿಂದೆಂದೂ ಇಲ್ಲದಿದ್ದಷ್ಟು ಮಟ್ಟಕ್ಕೆ ಏರಿಸಿದರು. “ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು; ಹಿಂಸೆಯು ಲೋಕವನ್ನು ತುಂಬಿಕೊಂಡಿತ್ತು” ಎಂದು ಆದಿಕಾಂಡ 6:11 (NIBV) ಹೇಳುತ್ತದೆ. ಹೌದು, ತಮ್ಮ ಮಧ್ಯದಲ್ಲಿದ್ದ ಆ ಹೊಸಬರಿಂದ ಮಾನವರು ಹಿಂಸಾತ್ಮಕವಾದ ಮತ್ತು ನೀಚವಾದ ಮಾರ್ಗಗಳನ್ನು ಕಲಿತುಕೊಂಡರು.

ಈ ನೆಫೀಲಿಯರು ಮತ್ತು ಅವರ ತಂದೆಯಂದಿರು ಮಾನವರ ಮೇಲೆ ಅಷ್ಟೊಂದು ಪ್ರಭಾವಶಾಲಿಯಾದ ಕೆಟ್ಟ ಪರಿಣಾಮವನ್ನು ಬೀರಲು ಸಾಧ್ಯವಾದದ್ದು ಹೇಗೆ? ಮಾನವರಲ್ಲಿನ ಪಾಪಪೂರ್ಣ ಒಲವು ಮತ್ತು ಬಯಕೆಗಳಿಗೆ ಹಿಡಿಸುವ ವಿಷಯಗಳನ್ನು ಮಾಡಿತೋರಿಸುವ ಮೂಲಕ. ಅದರ ಪರಿಣಾಮವೇನಾಗಿತ್ತು? ‘ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡರು.’ ಕಡೆಯದಾಗಿ, ಒಂದು ಪ್ರಳಯದ ಮೂಲಕ ಯೆಹೋವನು ಆ ಲೋಕವನ್ನು ನಾಶಮಾಡಿದನು; ಆದರೆ ನೀತಿವಂತನಾಗಿದ್ದ ನೋಹ ಮತ್ತು ಅವನ ಕುಟುಂಬವನ್ನು ಮಾತ್ರ ಉಳಿಸಿದನು. (ಆದಿಕಾಂಡ 6:5, 12-22) ಮಾನವ ಶರೀರಧಾರಣೆ ಮಾಡಿದ್ದ ಆ ದೇವದೂತರಾದರೋ ಕಳಂಕಿತರಾಗಿ ಆಧ್ಯಾತ್ಮಿಕ ಕ್ಷೇತ್ರಕ್ಕೆ ಹಿಂದಿರುಗಿದರು. ಅಲ್ಲಿ ಅವರನ್ನು ತಿರಸ್ಕರಿಸಲಾದ ಬಳಿಕ ಅವರು ದೆವ್ವಗಳಾಗಿ, ದೇವರನ್ನು ಮತ್ತು ನಿಷ್ಠಾವಂತ ದೇವದೂತರನ್ನೊಳಗೊಂಡಿದ್ದ ಆತನ ನೀತಿವಂತ ಕುಟುಂಬವನ್ನು ವಿರೋಧಿಸುವುದನ್ನು ಮುಂದುವರಿಸಿದರು. ಆ ಸಮಯದಂದಿನಿಂದ ಈ ದುಷ್ಟಾತ್ಮಗಳು ಶರೀರಧಾರಣೆ ಮಾಡುವುದನ್ನು ದೇವರು ನಿಷೇಧಿಸಿದನೆಂದು ತೋರುತ್ತದೆ. (ಯೂದ 6) ಆದರೂ, ಮಾನವ ವ್ಯವಹಾರಗಳಲ್ಲಿ ಅವರು ಶಕ್ತಿಶಾಲಿ ಪ್ರಭಾವವನ್ನು ಬೀರುತ್ತಿದ್ದಾರೆ.

ಕೆಡುಕನನ್ನು ಸಂಪೂರ್ಣವಾಗಿ ಬಯಲಿಗೆಳೆಯಲಾಗಿದೆ!

“ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು 1 ಯೋಹಾನ 5:19ರಲ್ಲಿ ತಿಳಿಸಲಾಗಿರುವ ಮಾತುಗಳು, ಸೈತಾನನ ಕೇಡುಭರಿತ ಪ್ರಭಾವವು ಎಷ್ಟು ವ್ಯಾಪಕವಾಗಿದೆ ಎಂಬುದನ್ನು ತೋರಿಸುತ್ತವೆ. ಪಿಶಾಚನು ಮಾನವಕುಲವನ್ನು ಹೆಚ್ಚೆಚ್ಚಾಗುತ್ತಿರುವ ಕಷ್ಟಗಳ ಸುಳಿಯೊಳಗೆ ನಡೆಸಿಕೊಂಡು ಹೋಗುತ್ತಿದ್ದಾನೆ. ವಾಸ್ತವದಲ್ಲಿ, ಅವನು ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಕೇಡುಮಾಡಲು ಪಣತೊಟ್ಟಿದ್ದಾನೆ. ಏಕೆ? ಏಕೆಂದರೆ, 1914ರಲ್ಲಿ ದೇವರ ರಾಜ್ಯವು ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟ ನಂತರ ಅವನನ್ನು ಮತ್ತು ಅವನ ದುಷ್ಟ ದೂತರನ್ನು ಅಲ್ಲಿಂದ ಹೊರದೊಬ್ಬಲಾಯಿತು. ಈ ಉಚ್ಚಾಟನೆಯ ಬಗ್ಗೆ ಬೈಬಲ್‌ ಮುಂತಿಳಿಸಿದ್ದು: ‘ಭೂಮಿಯೇ, ನಿನ್ನ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿನ್ನ ಕಡೆಗೆ ಇಳಿದುಬಂದಿದ್ದಾನೆ.’ (ಪ್ರಕಟನೆ 12:7-12) ಹಾಗಾದರೆ, ಸೈತಾನನು ಮಾನವಕುಲದ ಮೇಲೆ ಇಂದು ಹೇಗೆ ಪ್ರಭಾವಬೀರುತ್ತಿದ್ದಾನೆ?

ಅದನ್ನು ಅವನು ಮಾಡುವ ಮುಖ್ಯ ವಿಧಾನವು, ಜನರು ಯೋಚಿಸುವ ಮತ್ತು ವರ್ತಿಸುವ ರೀತಿಯನ್ನು ಪ್ರಭಾವಿಸುವಂಥ ಒಂದು ಮನೋಭಾವವನ್ನು ಪ್ರವರ್ಧಿಸುವ ಮೂಲಕವೇ. ಅದಕ್ಕನುಸಾರವಾಗಿಯೇ, ಎಫೆಸ 2:2 ಪಿಶಾಚನನ್ನು “ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿ” ಎಂದು ಕರೆಯುತ್ತದೆ. ಈ ವಾಯುಮಂಡಲವು “ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ” ಅಂದರೆ ಪ್ರಬಲವಾದ ಮನೋಭಾವ ಆಗಿದೆ. ದೈವಿಕ ಭಯ ಮತ್ತು ಒಳ್ಳೇತನವನ್ನು ಉತ್ತೇಜಿಸುವ ಬದಲು ಈ ಪೈಶಾಚಿಕ “ವಾಯು” ದೇವರ ಮತ್ತು ಆತನ ಮಟ್ಟಗಳ ವಿರುದ್ಧ ದಂಗೆಯನ್ನು ಹುಟ್ಟಿಸುತ್ತದೆ. ಹೀಗೆ, ಸೈತಾನನು ಮತ್ತು ಅವನ ದುಷ್ಟ ದೂತರು, ಮಾನವರು ಮಾಡುವ ಕೇಡನ್ನು ಉತ್ತೇಜಿಸುತ್ತಾರೆ ಮತ್ತು ಅದನ್ನು ಹೆಚ್ಚಿಸುತ್ತಾರೆ.

“ನಿನ್ನ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೋ”

ಈ “ವಾಯು” ವ್ಯಕ್ತವಾಗುವಂಥ ಒಂದು ವಿಧವು, ಪಿಡುಗಿನಂತಿರುವ ಅಶ್ಲೀಲ ಸಾಹಿತ್ಯದ ಮೂಲಕವೇ ಆಗಿದೆ. ಅಶ್ಲೀಲ ಸಾಹಿತ್ಯವು ಅಯೋಗ್ಯ ಲೈಂಗಿಕ ಬಯಕೆಗಳನ್ನು ಕೆರಳಿಸುತ್ತದೆ ಮತ್ತು ಅಸಹಜವಾದ ನಡವಳಿಕೆಯನ್ನು ಆಕರ್ಷಣೀಯವನ್ನಾಗಿ ಮಾಡುತ್ತದೆ. (1 ಥೆಸಲೊನೀಕ 4:3-5) ಅಶ್ಲೀಲ ಸಾಹಿತ್ಯವು ಬಲಾತ್ಕಾರ, ವಿಕೃತಕಾಮ, ಸಾಮೂಹಿಕ ಅತ್ಯಾಚಾರ, ಪಶುಗಮನ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂಥ ವಿಷಯಗಳನ್ನು ಮನೋರಂಜನೆಯಾಗಿ ಪ್ರಸ್ತುತಪಡಿಸುತ್ತದೆ. ಅಷ್ಟೇನೂ ಹಾನಿಕಾರಕವಲ್ಲವೆಂದು ಪರಿಗಣಿಸಲಾಗುವ ಅಶ್ಲೀಲ ಸಾಹಿತ್ಯ ಸಹ ಹಾನಿಯನ್ನುಂಟುಮಾಡುತ್ತದೆ. ಏಕೆಂದರೆ, ಯಾರು ಅದನ್ನು ನೋಡುತ್ತಾರೋ ಅಥವಾ ಓದುತ್ತಾರೋ ಅಂಥವರಿಗೆ ಅದರ ಚಟಹಿಡಿಯುತ್ತದೆ. ಈ ರೀತಿಯ ಚಟಹಿಡಿದವರು ಇತರರ ನಗ್ನ ದೇಹಗಳನ್ನು ಅಥವಾ ಇತರರು ಲೈಂಗಿಕತೆಯಲ್ಲಿ ಒಳಗೂಡಿರುವ ಕೃತ್ಯಗಳನ್ನು ನೋಡುವುದರಿಂದ, ವಿಶೇಷವಾಗಿ ಗುಪ್ತವಾಗಿ ನೋಡುವುದರಿಂದ ಲೈಂಗಿಕವಾಗಿ ಉದ್ರೇಕಗೊಳ್ಳಲು ಬಯಸುತ್ತಾರೆ. * ಇದು ಇತರ ಮಾನವರೊಂದಿಗೆ ಹಾಗೂ ದೇವರೊಂದಿಗೆ ಒಬ್ಬನಿಗಿರುವ ಸಂಬಂಧವನ್ನು ಹಾಳುಮಾಡುವಂಥ ಕೇಡಾಗಿದೆ. ಅಶ್ಲೀಲ ಸಾಹಿತ್ಯವು ಅದನ್ನು ಪ್ರವರ್ಧಿಸುವವರ, ಅಂದರೆ ನೋಹನ ದಿನದ ಜಲಪ್ರಳಯಕ್ಕೆ ಮುಂಚಿನ ಸಮಯದಷ್ಟು ಹಿಂದೆ ಅಯೋಗ್ಯ ಲೈಂಗಿಕ ಬಯಕೆಗಳಿದ್ದ ದಂಗೆಕೋರ ದೆವ್ವಗಳ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.

ಸಕಾರಣದಿಂದಲೇ ವಿವೇಕಿಯಾದ ಸೊಲೊಮೋನನು ಈ ಮುಂದಿನ ಬುದ್ಧಿವಾದವನ್ನು ಕೊಟ್ಟನು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ಅಶ್ಲೀಲ ಸಾಹಿತ್ಯದ ಪಾಶದಿಂದ ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡುವ ಪ್ರಾಯೋಗಿಕ ವಿಧಾನಗಳಾವುವುವೆಂದರೆ, ಲೈಂಗಿಕವಾಗಿ ಉದ್ರೇಕಿಸುವಂಥ ಚಿತ್ರಣಗಳು ಟಿ.ವಿ. ಇಲ್ಲವೇ ಕಂಪ್ಯೂಟರ್‌ ಪರದೆಯ ಮೇಲೆ ಬಂದಾಗ ಚ್ಯಾನಲ್‌ ಬದಲಾಯಿಸುವುದು ಅಥವಾ ಕಂಪ್ಯೂಟರನ್ನು ಆಫ್‌ ಮಾಡುವುದಾಗಿದೆ. ಈ ಕ್ರಮವನ್ನು ಕೂಡಲೇ ಮತ್ತು ದೃಢಮನಸ್ಸಿನಿಂದ ಕೈಗೊಳ್ಳುವುದು ಪ್ರಾಮುಖ್ಯವಾಗಿದೆ! ನಿಮ್ಮ ಹೃದಯದತ್ತ ಗುರಿಮಾಡಿ ಎಸೆಯಲಾಗಿರುವ ಆಯುಧವೊಂದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಒಬ್ಬ ಸೈನಿಕನಂತೆ ನೀವಿದ್ದೀರೆಂದು ನೆನಸಿರಿ. ಸೈತಾನನು ನಿಮ್ಮ ಸಾಂಕೇತಿಕ ಹೃದಯಕ್ಕೆ, ಅಂದರೆ ನಿಮಗೆ ಪ್ರಚೋದನೆ ನೀಡುವಂಥ ಮತ್ತು ಬಯಕೆಗಳನ್ನು ಹುಟ್ಟಿಸುವಂಥ ಕೇಂದ್ರಕ್ಕೆ ಗುರಿಯಿಟ್ಟು ಅದನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಾನೆ.

ಹಿಂಸಾಚಾರವನ್ನು ಇಷ್ಟಪಡುವುದರಿಂದಲೂ ನೀವು ನಿಮ್ಮ ಹೃದಯವನ್ನು ಕಾಪಾಡಬೇಕು ಏಕೆಂದರೆ, “ಯೆಹೋವನು . . . ಬಲಾತ್ಕಾರ ಪ್ರಿಯನನ್ನೂ” ಇಲ್ಲವೇ ಹಿಂಸಾಚಾರವನ್ನು ಇಷ್ಟಪಡುವವನನ್ನು “ದ್ವೇಷಿಸುತ್ತಾನೆ” ಎಂದು ಪಿಶಾಚನಿಗೆ ತಿಳಿದಿದೆ. (ಕೀರ್ತನೆ 11:⁠5, NIBV) ದೇವರು ನಿಮ್ಮನ್ನು ದ್ವೇಷಿಸುವಂತೆ ಮಾಡಲು, ಸೈತಾನನು ನಿಮ್ಮಿಂದ ಹಿಂಸಾಕೃತ್ಯಗಳನ್ನು ಮಾಡಿಸಬೇಕಾಗಿಲ್ಲ; ನೀವು ಹಿಂಸಾಚಾರವನ್ನು ಇಷ್ಟಪಡುವಂತೆ ಮಾಡಿದರಷ್ಟೇ ಸಾಕು. ಜನಪ್ರಿಯವಾಗಿರುವ ಸಮೂಹ ಮಾಧ್ಯಮಗಳಲ್ಲಿ, ಪ್ರೇತವ್ಯವಹಾರಕ್ಕೆ ಸಂಬಂಧಪಟ್ಟ ಹಿಂಸಾಚಾರದ ವಿಷಯಗಳು ತುಂಬಿತುಳುಕುತ್ತಿರುವುದು ಕೇವಲ ಕಾಕತಾಳೀಯವಲ್ಲ. ನೆಫೀಲಿಯರೇನೋ ಸತ್ತುಹೋದರು ನಿಜ, ಆದರೆ ಅವರ ಗುಣಗಳು ಮತ್ತು ನಡವಳಿಕೆಯು ಇನ್ನೂ ಜೀವಂತವಾಗಿದೆ! ನೀವು ಆಯ್ಕೆಮಾಡುವ ಮನೋರಂಜನೆಯು, ನೀವು ಸೈತಾನನ ಕುಟಿಲ ಸಂಚುಗಳನ್ನು ಪ್ರತಿರೋಧಿಸುತ್ತಿದ್ದೀರೆಂದು ತೋರಿಸುತ್ತದೋ?​—⁠2 ಕೊರಿಂಥ 2:11.

ಸೈತಾನನ ದುಷ್ಟ ಪ್ರಭಾವವನ್ನು ಪ್ರತಿರೋಧಿಸುವುದು ಹೇಗೆ?

ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವುದು ಬಹಳ ಕಷ್ಟಕರವೆಂಬಂತೆ ತೋರಬಹುದು. ದೇವರನ್ನು ಸಂತೋಷಪಡಿಸಲು ಪ್ರಯತ್ನಿಸುವವರು ತಮ್ಮ ಸ್ವಂತ ಅಪರಿಪೂರ್ಣ ಶರೀರದೊಂದಿಗೆ ಹೆಣಗಾಡಬೇಕು ಮಾತ್ರವಲ್ಲದೆ ಅದರ ಜೊತೆಗೆ “ದುರಾತ್ಮಗಳ ಸೇನೆಯ ಮೇಲೆಯೂ” ಹೋರಾಟ ಮಾಡಬೇಕಾಗಿದೆ ಎಂದು ಬೈಬಲ್‌ ಸೂಚಿಸುತ್ತದೆ. ಈ ಹೋರಾಟದಲ್ಲಿ ಜಯಿಸಬೇಕಾದರೆ ಮತ್ತು ದೇವರ ಮೆಚ್ಚಿಗೆಯನ್ನು ಪಡೆಯಬೇಕಾದರೆ, ಆತನು ಮಾಡಿರುವ ಅನೇಕ ಏರ್ಪಾಡುಗಳ ಸದುಪಯೋಗವನ್ನು ನಾವು ಮಾಡಬೇಕು.​—⁠ಎಫೆಸ 6:12; ರೋಮಾಪುರ 7:21-25.

ಈ ಏರ್ಪಾಡುಗಳಲ್ಲೊಂದು, ವಿಶ್ವದಲ್ಲಿಯೇ ಅತಿ ಬಲಾಢ್ಯ ಶಕ್ತಿಯಾಗಿರುವ ದೇವರ ಪವಿತ್ರಾತ್ಮ ಆಗಿದೆ. ಅಪೊಸ್ತಲ ಪೌಲನು ಮೊದಲನೆಯ ಶತಮಾನದ ಕ್ರೈಸ್ತರಿಗೆ ಬರೆದದು: “ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ . . . ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.” (1 ಕೊರಿಂಥ 2:12) ದೇವರ ಆತ್ಮದಿಂದ ನಿರ್ದೇಶಿಸಲ್ಪಡುವವರು, ದೇವರೇನನ್ನು ಪ್ರೀತಿಸುತ್ತಾನೋ ಅದನ್ನು ಪ್ರೀತಿಸಲು ಮತ್ತು ಆತನೇನನ್ನು ದ್ವೇಷಿಸುತ್ತಾನೋ ಅದನ್ನು ದ್ವೇಷಿಸಲು ಕಲಿಯುತ್ತಾರೆ. (ಆಮೋಸ 5:15) ಆದರೆ ಈ ಪವಿತ್ರಾತ್ಮವನ್ನು ಪಡೆಯುವುದು ಹೇಗೆ? ಪ್ರಧಾನವಾಗಿ ಪ್ರಾರ್ಥನೆ, ಪವಿತ್ರಾತ್ಮಪ್ರೇರಣೆಯಿಂದ ಬರೆಯಲ್ಪಟ್ಟಿರುವ ಬೈಬಲಿನ ಅಧ್ಯಯನ ಮತ್ತು ದೇವರ ಮೇಲೆ ನಿಜ ಪ್ರೀತಿಯಿರುವವರ ಹಿತಕರ ಸಹವಾಸದ ಮೂಲಕವೇ.​—⁠ಲೂಕ 11:13; 2 ತಿಮೊಥೆಯ 3:16; ಇಬ್ರಿಯ 10:24, 25.

ಈ ದೈವಿಕ ಏರ್ಪಾಡುಗಳ ಪ್ರಯೋಜನ ಪಡೆಯುವುದರ ಮೂಲಕ, “ದೇವರು ದಯಪಾಲಿಸುವ ಸರ್ವಾಯುಧಗಳನ್ನು” ನೀವು ಧರಿಸಲಾರಂಭಿಸುತ್ತೀರಿ. “ಸೈತಾನನ ತಂತ್ರೋಪಾಯ”ಗಳ ವಿರುದ್ಧ ಈ ಸರ್ವಾಯುಧಗಳು ಮಾತ್ರ ನಿಶ್ಚಿತವಾದ ರಕ್ಷಣೆ ಕೊಡಬಲ್ಲವು. (ಎಫೆಸ 6:11-18) ಈ ಏರ್ಪಾಡುಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳುವುದು ಹಿಂದೆಂದಿಗಿಂತಲೂ ಹೆಚ್ಚು ತುರ್ತಿನದ್ದಾಗಿದೆ. ಅದೇಕೆ?

ಕೇಡಿನ ಅಂತ್ಯ ಹತ್ತಿರದಲ್ಲಿದೆ!

“ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ” ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 92:7) ಹೌದು, ನೋಹನ ದಿನಗಳಲ್ಲಿದ್ದಂತೆಯೇ, ಇಂದು ಕೇಡು ವೇಗವಾಗಿ ಬೆಳೆಯುತ್ತಿರುವುದು ದೇವರ ನ್ಯಾಯತೀರ್ಪಿನ ದಿನ ಹತ್ತಿರವಿದೆ ಎಂಬುದಕ್ಕೆ ಸಾಕ್ಷ್ಯವಾಗಿದೆ. ಆ ನ್ಯಾಯತೀರ್ಪು ಕೇವಲ ದುಷ್ಟ ಮಾನವರ ಮೇಲೆ ಮಾತ್ರವಲ್ಲ, ಸೈತಾನ ಮತ್ತು ಆತನ ದುಷ್ಟ ದೂತರ ಮೇಲೆಯೂ ಬರುವುದು. ಅವರನ್ನು ಮೊದಲು ನಿಷ್ಕ್ರಿಯತೆಯೆಂಬ ಅಧೋಲೋಕಕ್ಕೆ ತಳ್ಳಿಹಾಕಲಾಗುವುದು ಮತ್ತು ಕಟ್ಟಕಡೆಗೆ ನಾಶಗೊಳಿಸಲಾಗುವುದು. (2 ತಿಮೊಥೆಯ 3:1-5; ಪ್ರಕಟನೆ 20:1-3, 7-10) ಆ ನ್ಯಾಯತೀರ್ಪನ್ನು ಯಾರು ಜಾರಿಗೊಳಿಸುವರು? ಯೇಸು ಕ್ರಿಸ್ತನೇ. ಅವನ ಕುರಿತು ನಾವು ಓದುವುದು: “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.”​—⁠1 ಯೋಹಾನ 3:⁠8.

ಕೇಡಿನ ಅಂತ್ಯವಾಗಬೇಕೆಂದು ನೀವು ಹಾತೊರೆಯುತ್ತೀರೋ? ಹೌದಾದರೆ, ಬೈಬಲಿನಲ್ಲಿರುವ ವಾಗ್ದಾನಗಳಿಂದ ನೀವು ಸಾಂತ್ವನ ಪಡೆದುಕೊಳ್ಳಬಲ್ಲಿರಿ. ಬೇರಾವುದೇ ಪುಸ್ತಕವು, ಕೇಡಿಗೆ ಮೂಲ ಕಾರಣನು ಸೈತಾನನೆಂಬುದನ್ನು ಬಯಲಿಗೆಳೆಯುವುದಿಲ್ಲ. ಅಲ್ಲದೆ ಬೇರಾವುದೇ ಪುಸ್ತಕವು, ಸೈತಾನನು ಮತ್ತು ಅವನ ದುಷ್ಟ ದೂತರು ಕಟ್ಟಕಡೆಗೆ ಹೇಗೆ ನಿರ್ಮೂಲಗೊಳಿಸಲ್ಪಡುವರು ಎಂಬ ಮಾಹಿತಿಯನ್ನು ಕೊಡುವುದಿಲ್ಲ. ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಈ ಮೂಲಕ ನೀವು ಸೈತಾನನ ದುಷ್ಟ ಪ್ರಭಾವಗಳಿಂದ ನಿಮ್ಮನ್ನು ಈಗ ರಕ್ಷಿಸಿಕೊಳ್ಳಬಲ್ಲಿರಿ ಮತ್ತು ಕೇಡಿನಿಂದ ಮುಕ್ತವಾದ ಒಂದು ಲೋಕದಲ್ಲಿ ಜೀವಿಸುವ ನಿರೀಕ್ಷೆಯನ್ನು ಪಡೆದುಕೊಳ್ಳಬಲ್ಲಿರಿ.​—⁠ಕೀರ್ತನೆ 37:​9, 10. (w07 6/1)

[ಪಾದಟಿಪ್ಪಣಿಗಳು]

^ ಪ್ಯಾರ. 5 ಸೈತಾನನಾಗಿ ಪರಿಣಮಿಸಿದ ದೇವದೂತನ ಮೂಲ ಹೆಸರು ತಿಳಿದುಬಂದಿಲ್ಲ. “ಸೈತಾನ” ಮತ್ತು “ಪಿಶಾಚ” ಎಂಬೀ ಪದಗಳ ಅರ್ಥವು “ಪ್ರತಿಭಟಕ” ಮತ್ತು “ಮಿಥ್ಯಾಪವಾದಿ” ಎಂದಾಗಿದೆ. ಕೆಲವು ವಿಧಗಳಲ್ಲಿ, ಸೈತಾನನು ಅನುಸರಿಸಿದ ಮಾರ್ಗವು ಪುರಾತನದ ತೂರಿನ ಅರಸನು ಅನುಸರಿಸಿದ ಮಾರ್ಗದಂತಿದೆ. (ಯೆಹೆಜ್ಕೇಲ 28:12-19) ಆರಂಭದಲ್ಲಿ ಇವರಿಬ್ಬರ ನಡತೆಯು ನಿರ್ದೋಷವಾಗಿತ್ತು. ಆದರೆ ಕೊನೆಗೆ ಇವರಿಬ್ಬರೂ ತಮ್ಮ ಅಹಂಕಾರಕ್ಕೆ ಬಲಿಗಳಾದರು.

^ ಪ್ಯಾರ. 17 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ, 2003 ಅಕ್ಟೋಬರ್‌ 8ರ ಎಚ್ಚರ! ಪತ್ರಿಕೆಯಲ್ಲಿ “ಅಶ್ಲೀಲ ಸಾಹಿತ್ಯವು​—⁠ಹಾನಿರಹಿತವೋ ಅಥವಾ ಹಾನಿಕಾರಕವೋ?” ಎಂಬ ಲೇಖನಮಾಲೆಯನ್ನು ನೋಡಿರಿ.

[ಪುಟ 6ರಲ್ಲಿರುವ ಚೌಕ/ಚಿತ್ರ]

ಸತ್ಯದ ತುಣುಕುಗಳಿರುವ ಪುರಾಣ ಕಥೆಗಳು

ದೇವಮಾನವರ, ದೈತ್ಯರ ಮತ್ತು ಮಹಾ ಜಲಪ್ರಳಯದ ಕಥೆಗಳು ಲೋಕವ್ಯಾಪಕವಾಗಿ ಪುರಾಣ ಕಥೆಗಳಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ, ಪ್ರಾಚೀನ ಬ್ಯಾಬಿಲೋನಿನ ಆಕಾಡ್‌ ಭಾಷೆಯ ‘ಗಿಲ್ಗಮೆಷ್‌ ಮಹಾ ಕಾವ್ಯ’ದಲ್ಲಿ ಒಂದು ಜಲಪ್ರಳಯ, ಒಂದು ಹಡಗು ಮತ್ತು ಪಾರಾದವರ ಉಲ್ಲೇಖವಿದೆ. ಅದರಲ್ಲಿ ಗಿಲ್ಗಮೆಷ್‌ನನ್ನು ಒಬ್ಬ ಕಾಮಾತುರ, ಹಿಂಸಾತ್ಮಕ ದೇವಮಾನವ ಅಂದರೆ ಅರ್ಧ-ದೇವ ಅರ್ಧ-ಮಾನವನೆಂದು ವರ್ಣಿಸಲಾಗಿದೆ. ಆಸ್‌ಟೆಕ್‌ ಪುರಾಣ ಕಥೆಯು, ಪುರಾತನ ಸಮಯದ ಲೋಕದಲ್ಲಿ ದೈತ್ಯರು ನೆಲೆಸಿದ್ದ ಕುರಿತು ಮತ್ತು ಮಹಾ ಪ್ರವಾಹದ ಕುರಿತು ತಿಳಿಸುತ್ತದೆ. ನಾರ್ಸ್‌ ಭಾಷೆಯ ಪುರಾಣ ಕಥೆಯು ದೈತ್ಯರ ಜಾತಿಯ ಕುರಿತು ಮತ್ತು ಒಂದು ದೋಣಿಯನ್ನು ನಿರ್ಮಿಸಿ, ತನ್ನನ್ನು ಹಾಗೂ ತನ್ನ ಹೆಂಡತಿಯನ್ನು ಪಾರುಮಾಡಿಕೊಂಡ ಬೆರ್‌ಗಲ್‌ಮೀರ್‌ ಎಂಬ ಬುದ್ಧಿವಂತ ಮಾನವನ ಕುರಿತು ವಿವರಿಸುತ್ತದೆ. ಇಂಥ ಪುರಾಣ ಕಥೆಗಳೆಲ್ಲದ್ದರ ರುಜುವಾತು, ಎಲ್ಲಾ ಮಾನವರು ಪುರಾತನ ಲೋಕವೊಂದನ್ನು ನಾಶಗೊಳಿಸಿದ ಪ್ರಳಯದಿಂದ ಪಾರಾದವರ ಸಂತಾನವಾಗಿದ್ದಾರೆ ಎಂಬ ಬೈಬಲಿನ ಮಾತನ್ನು ದೃಢೀಕರಿಸುತ್ತದೆ.

[ಚಿತ್ರ]

ಗಿಲ್ಗಮೆಷ್‌ನ ಮಹಾಕಾವ್ಯವು ಕೆತ್ತಲ್ಪಟ್ಟಿರುವ ಶಿಲಾಫಲಕ

[ಕೃಪೆ]

The University Museum, University of Pennsylvania(neg. # 22065)

[ಪುಟ 5ರಲ್ಲಿರುವ ಚಿತ್ರ]

ಇಂದು ಜನರಲ್ಲಿ ನೆಫೀಲಿಯರ ಗುಣಗಳು ನೋಡಲು ಸಿಗುತ್ತವೆ

[ಪುಟ 7ರಲ್ಲಿರುವ ಚಿತ್ರ]

ನಿಷ್ಕೃಷ್ಟ ಜ್ಞಾನವು ನಮ್ಮನ್ನು ಕೇಡುಭರಿತ ಪ್ರಭಾವಗಳಿಂದ ಕಾಪಾಡುತ್ತದೆ