ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೇಡು ಅಂಕೆಮೀರಿ ಹೋಗಿದೆಯೋ?

ಕೇಡು ಅಂಕೆಮೀರಿ ಹೋಗಿದೆಯೋ?

ಕೇಡು ಅಂಕೆಮೀರಿ ಹೋಗಿದೆಯೋ?

ಒಬ್ಬ ಪುಟ್ಟ ಹುಡುಗನು ಬಯಲಿನಲ್ಲಿದ್ದ ವಸ್ತುವೊಂದನ್ನು ಕುತೂಹಲದಿಂದ ಕೈಗೆತ್ತಿಕೊಳ್ಳುತ್ತಾನೆ. ಅದೊಂದು ನೆಲಬಾಂಬ್‌ ಆಗಿದೆ. ಅದು ಅವನ ಕೈಯಲ್ಲೇ ಸ್ಫೋಟಿಸಿ, ಅವನು ಜೀವನದುದ್ದಕ್ಕೂ ಅಂಧನೂ ಅಂಗಹೀನನೂ ಆಗುತ್ತಾನೆ. ಸ್ತ್ರೀಯೊಬ್ಬಳು ತನ್ನ ನವಜಾತ ಕಂದನನ್ನು ತೊರೆಯಲಿಕ್ಕಾಗಿ ರಸ್ತೆಬದಿಯಲ್ಲಿರುವ ಕಸದತೊಟ್ಟಿಯಲ್ಲಿ ಅದನ್ನು ಅಡಗಿಸಿಡುತ್ತಾಳೆ. ಕೆಲಸದಿಂದ ವಜಾಮಾಡಲ್ಪಟ್ಟ ಒಬ್ಬ ವ್ಯಕ್ತಿ ತಾನು ಈ ಮೊದಲು ಕೆಲಸಮಾಡುತ್ತಿದ್ದ ಸ್ಥಳಕ್ಕೆ ಹಿಂದಿರುಗಿ ಬಂದು, ಕಣ್ಣಿಗೆ ಬಿದ್ದವರನ್ನೆಲ್ಲ ಗುಂಡಿಕ್ಕಿ ಕೊಲ್ಲುತ್ತಾನೆ ಮತ್ತು ಕೊನೆಗೆ ಸ್ವತಃ ತನಗೇ ಗುಂಡಿಕ್ಕುತ್ತಾನೆ. ಸಮಾಜದ ಗಣ್ಯ ವ್ಯಕ್ತಿಯೊಬ್ಬನು ಅಮಾಯಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾನೆ.

ದುಃಖಕರವಾಗಿ, ಈ ರೀತಿಯ ಕೇಡಿನ ಕೃತ್ಯಗಳ ವರದಿಗಳು ನಮ್ಮ ಸಮಯಗಳಲ್ಲಿ ಎಲ್ಲೆಡೆಯೂ ಕೇಳಲು ಸಿಗುತ್ತವೆ. ಇನ್ನೂ ವಿಷಾದಕರ ಸಂಗತಿಯೇನೆಂದರೆ ಈ ವರದಿಗಳನ್ನು ಕುಲಸಂಬಂಧಿತ ಅಥವಾ ಜನಾಂಗೀಯ ಹತ್ಯಾಕಾಂಡಗಳು ಮತ್ತು ಭಯೋತ್ಪಾದಕ ಕೃತ್ಯಗಳ ಕುರಿತಾದ ವರದಿಗಳೊಂದಿಗೆ ಹೋಲಿಸುವಲ್ಲಿ ಇವು ಏನೇನೂ ಅಲ್ಲ. 1995ರಲ್ಲಿ ಪ್ರಕಾಶಿಸಲ್ಪಟ್ಟ ಸಂಪಾದಕೀಯ ಲೇಖನವು ಹೇಳಿದ್ದು: “20ನೆಯ ಶತಮಾನವನ್ನು ‘ಸೈತಾನನ ಶತಮಾನ’ವೆಂದೇ ಕರೆಯಬಹುದು. ಇತಿಹಾಸದ ಬೇರಾವುದೇ ಸಮಯದಲ್ಲಿ, ಮನುಷ್ಯರು ಇತರ ಜನಾಂಗ, ಧರ್ಮ ಅಥವಾ ವರ್ಗದ ಲಕ್ಷಾಂತರ ಜನರನ್ನು ಕೊಲ್ಲಲು ಈ ರೀತಿಯ ಸಾಮರ್ಥ್ಯ ಮತ್ತು ಹವಣಿಕೆಯನ್ನು ತೋರಿಸಿದ್ದಿಲ್ಲ.”

ಅದೇ ಸಮಯದಲ್ಲಿ, ಮಾನವರು ವಾಯುಮಾಲಿನ್ಯ ಮಾಡುತ್ತಿದ್ದಾರೆ, ಭೂಮಿಯನ್ನು ಕಲುಷಿತಗೊಳಿಸುತ್ತಿದ್ದಾರೆ, ಅದರ ಸಂಪನ್ಮೂಲಗಳನ್ನು ಬರಿದುಗೊಳಿಸುತ್ತಿದ್ದಾರೆ ಮತ್ತು ಅಸಂಖ್ಯಾತ ಜಾತಿಯ ಪ್ರಾಣಿಪಕ್ಷಿಗಳ ಅಳಿವಿಗೆ ಕಾರಣರಾಗುತ್ತಿದ್ದಾರೆ. ಈ ಎಲ್ಲಾ ಕೇಡುಗಳನ್ನು ಜಯಿಸಿ, ನಮ್ಮ ಭೂಮಿಯನ್ನು ಒಂದು ಉತ್ತಮ ಹಾಗೂ ಸುರಕ್ಷಿತ ಸ್ಥಳವನ್ನಾಗಿ ಮಾಡಲು ಮಾನವರ ಕೈಯಲ್ಲಿ ಸಾಧ್ಯವಿದೆಯೋ? ಅಥವಾ ಹಾಗೆ ಮಾಡಲು ಪ್ರಯತ್ನಿಸುವುದು ಕೂಡ, ಸಮುದ್ರದ ದೊಡ್ಡ ಅಲೆಯನ್ನು ಒಂದು ಪೊರಕೆಯಿಂದ ಹಿಂದಕ್ಕೆ ಗುಡಿಸಿದಂತಿರುವುದೋ? ಕೇಡಿನ ಕುರಿತಾಗಿ ಅನೇಕಾನೇಕ ಲೇಖನಗಳನ್ನು ಬರೆದಿರುವ ಒಬ್ಬ ಪ್ರೋಫೆಸರ್‌ ಹೇಳಿದ್ದು: “ಈ ಲೋಕವು ಬದಲಾಗಬೇಕು ಅಥವಾ ಸುಧಾರಿಸಬೇಕೆಂಬ ಬಲವಾದ ಬಯಕೆ ನನ್ನಲ್ಲಿರುವುದಾದರೂ, ಅದು ಸುಧಾರಿಸುತ್ತಿರುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ.” ಬಹುಶಃ ನಿಮಗೂ ಅವರಂತೆಯೇ ಅನಿಸಬಹುದು.

ಈ ಲೋಕವು ಸಾಗುತ್ತಿರುವ ರೀತಿಯನ್ನು ಸಮುದ್ರದಲ್ಲಿ ಸಾಗುತ್ತಿರುವ ಒಂದು ಹಡಗಿಗೆ ಹೋಲಿಸಬಹುದು. ಅದು ಸಾಗುತ್ತಿರುವ ದಿಕ್ಕಿನಲ್ಲಿ ಸಮುದ್ರವು ಪ್ರಕ್ಷುಬ್ಧವಾಗುತ್ತಿದೆ ಮತ್ತು ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಾ ಇದೆ. ಯಾರಿಗೂ ಆ ದಿಕ್ಕಿನಲ್ಲಿ ಸಾಗಲು ಮನಸ್ಸಿಲ್ಲದಿದ್ದರೂ, ಹಡಗಿನ ದಿಕ್ಕನ್ನು ಬದಲಾಯಿಸಲು ಮಾಡಲಾಗುತ್ತಿರುವ ಎಲ್ಲಾ ಪ್ರಯತ್ನಗಳು ಸೋಲನ್ನು ಕಾಣುತ್ತಿವೆ. ಆ ಹಡಗು, ವಿನಾಶಕ ಚಂಡಮಾರುತದ ದಿಕ್ಕಿನಲ್ಲಿ ರಭಸವಾಗಿ ಸಾಗುತ್ತಿದ್ದು, ಅದನ್ನು ನಿಲ್ಲಿಸಲಾಗದು.

ಸದಾ ಹದಗೆಡುತ್ತಾ ಇರುವ ಲೋಕದ ಸ್ಥಿತಿಗೆ ಮಾನವ ಅಪರಿಪೂರ್ಣತೆಯು ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. (ರೋಮಾಪುರ 3:23) ಆದರೆ ಕೇಡಿನ ಪ್ರಮಾಣ, ಅದರ ವ್ಯಾಪಕತೆ ಮತ್ತು ಅದರ ನಿರಂತರತೆಯು ಎಷ್ಟು ವೃದ್ಧಿಯಾಗಿದೆಯೆಂದರೆ, ಇದಕ್ಕೆ ಕೇವಲ ಮಾನವರು ಮಾತ್ರ ಕಾರಣರೆಂದು ಹೇಳಲಾಗುವುದಿಲ್ಲ. ಮಾನವರ ಹಿಂದೆ ಅದೃಶ್ಯವಾದ ಆದರೆ ಶಕ್ತಿಶಾಲಿ ಹಾಗೂ ಕುಟಿಲವಾದ ಶಕ್ತಿಯೊಂದರ ಕೈವಾಡವಿರಬಹುದೋ? ಹೌದಾದರೆ, ಆ ಶಕ್ತಿ ಯಾವುದಾಗಿದೆ ಮತ್ತು ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು? ಈ ಪ್ರಶ್ನೆಗಳನ್ನು ಮುಂದಿನ ಲೇಖನವು ಉತ್ತರಿಸುವುದು. (w07 6/1)

[ಪುಟ 3ರಲ್ಲಿರುವ ಚಿತ್ರ ಕೃಪೆ]

© Heldur Netocny/Panos Pictures