ದೇವರು ಏಕೆ ಎಲ್ಲ ಕಷ್ಟಸಂಕಟವನ್ನು ಬೇಗನೆ ಅಂತ್ಯಗೊಳಿಸುವನು?
ದೇವರು ಏಕೆ ಎಲ್ಲ ಕಷ್ಟಸಂಕಟವನ್ನು ಬೇಗನೆ ಅಂತ್ಯಗೊಳಿಸುವನು?
“ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ.”—ಧರ್ಮೋಪದೇಶಕಾಂಡ 32:4.
ಪರದೈಸಿನಲ್ಲಿ ನೀವು ಆನಂದಿಸಲಿರುವ ಜೀವನದ ಬಗ್ಗೆ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವುದು ನಿಮಗೆ ಸಂತೋಷ ನೀಡುತ್ತದೋ? ನೀವು ಈ ಅದ್ಭುತವಾದ ಭೂಗ್ರಹದಲ್ಲಿ ಸುತ್ತುತ್ತಾ ಅದರಲ್ಲಿನ ವೈವಿಧ್ಯಮಯ ಜೀವರಾಶಿಗಳ ಕುರಿತಾಗಿ ಕಲಿಯುತ್ತಾ ಇರುವುದನ್ನು ಕಲ್ಪಿಸಿಕೊಳ್ಳುತ್ತಿರಬಹುದು. ಇಲ್ಲವೇ, ಇಡೀ ಭೂಮಿಯನ್ನು ಒಂದು ಉದ್ಯಾನವಾಗಿ ಮಾಡಲು ಹಾಗೂ ಅದನ್ನು ಸುಸ್ಥಿತಿಯಲ್ಲಿಡಲು ಇತರರೊಂದಿಗೆ ಕೆಲಸಮಾಡುತ್ತಾ ನಿಮಗೆ ಸಿಗುವ ತೃಪ್ತಿಯ ಬಗ್ಗೆ ನೀವು ಯೋಚಿಸುತ್ತಿರಬಹುದು. ಅಥವಾ, ಇಂದಿನ ತರಾತುರಿಯ ಜೀವನಗತಿಯಲ್ಲಿ ಯಾವುದಕ್ಕೆ ಸಮಯವೇ ಸಿಗುವುದಿಲ್ಲವೋ ಆ ಕಲೆ, ವಾಸ್ತುಶಿಲ್ಪ, ಸಂಗೀತ ಮುಂತಾದ ಕ್ಷೇತ್ರದಲ್ಲಿನ ನಿಮ್ಮ ಪ್ರತಿಭೆಗಳನ್ನು ಬೆಳೆಸಿಕೊಳ್ಳುವುದರ ಕುರಿತಾಗಿ ನೀವು ನೆನಸುತ್ತಿರಬಹುದು. ನೀವು ಯಾವುದರ ಬಗ್ಗೆಯೇ ಕಲ್ಪಿಸಿಕೊಂಡರೂ, ಬೈಬಲ್ ಯಾವುದನ್ನು “ವಾಸ್ತವವಾದ ಜೀವನ” ಎಂದು ಕರೆಯುತ್ತದೋ ಅದು ನಿಮಗೆ ಅಮೂಲ್ಯವಾಗಿದೆ ಎಂಬುದು ನಿಶ್ಚಿತ. ಈ ಜೀವನವು, ಯೆಹೋವನು ನಮಗೆ ಉದ್ದೇಶಿಸಿರುವಂಥ ನಿತ್ಯ ಜೀವವಾಗಿದೆ.—1 ತಿಮೊಥೆಯ 6:19.
2 ಬೈಬಲ್-ಆಧರಿತವಾದ ಈ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಆನಂದದಾಯಕ ಮಾತ್ರವಲ್ಲ ಒಂದು ಅಮೂಲ್ಯ ಸುಯೋಗವೂ ಆಗಿದೆಯಲ್ಲವೇ? ಆದರೆ ಅನೇಕರು ಈ ನಿರೀಕ್ಷೆಯನ್ನು ತಳ್ಳಿಹಾಕುತ್ತಾರೆ. ಅದೊಂದು ಭ್ರಮೆ ಮತ್ತು ಸುಲಭವಾಗಿ ನಂಬಿಬಿಡುವ ಜನರಿಗಾಗಿರುವ ಒಂದು ಕನಸು ಎಂದು ಅವರೆಣಿಸುತ್ತಾರೆ. ಮಾನವರು ಭೂಪರದೈಸಿನಲ್ಲಿ ನಿತ್ಯಜೀವವನ್ನು ಆನಂದಿಸುವರೆಂದು ವಾಗ್ದಾನಿಸುವ ಒಬ್ಬ ದೇವರಿದ್ದಾನೆಂದು ನಂಬುವುದು ಸಹ ಅವರಿಗೆ ಕಷ್ಟವಾಗುತ್ತಿರಬಹುದು. ಏಕೆ? ಲೋಕದಲ್ಲಿರುವ ದುಷ್ಟತನವು ಕೆಲವರು ಹಾಗೆ ನಂಬದಂತೆ ತಡೆಯುತ್ತದೆ. ಇವರ ಅಭಿಪ್ರಾಯವೇನೆಂದರೆ, ಒಂದುವೇಳೆ ಒಬ್ಬ ದೇವರಿರುವಲ್ಲಿ ಮತ್ತು ಆತನು ಸರ್ವಶಕ್ತನು, ಪ್ರೀತಿಪರನು ಆಗಿರುವಲ್ಲಿ ಇಂದು ಲೋಕದಲ್ಲಿ ದುಷ್ಟತನ ಮತ್ತು ಕಷ್ಟಸಂಕಟ ಇರಬಾರದಾಗಿತ್ತು. ಕೆಡುಕನ್ನು ಸಹಿಸುವಂಥ ಒಬ್ಬ ದೇವರು ಇರಲು ಸಾಧ್ಯವೇ ಇಲ್ಲ, ಒಂದುವೇಳೆ ಇದ್ದರೂ ಒಂದೋ ಆತನು ಸರ್ವಶಕ್ತನಲ್ಲ ಅಥವಾ ಆತನಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲವೆಂದು ಅವರು ತರ್ಕಿಸುತ್ತಾರೆ. ಕೆಲವರಿಗೆ ಈ ರೀತಿಯ ತರ್ಕವು ಸರಿಯೆಂದನಿಸುತ್ತದೆ. ಇದು, ಸೈತಾನನು ಮಾನವರ ಮನಸ್ಸುಗಳನ್ನು ಮಂಕುಮಾಡುವುದರಲ್ಲಿ ಎಷ್ಟು ನಿಸ್ಸೀಮನು ಎಂಬುದನ್ನು ರುಜುಪಡಿಸುತ್ತದೆ.—2 ಕೊರಿಂಥ 4:4.
3 ಸೈತಾನನಿಂದ ಮತ್ತು ಈ ಲೋಕದ ವಿವೇಕದಿಂದ ಮೋಸಹೋಗುತ್ತಿರುವ ಜನರಿಗೆ ಸಹಾಯಮಾಡುವ ಅಪೂರ್ವ ಅವಕಾಶವು ಯೆಹೋವನ ಸಾಕ್ಷಿಗಳಾಗಿರುವ ನಮಗಿದೆ. (1 ಕೊರಿಂಥ 1:20; 3:19) ಬೈಬಲಿನ ವಾಗ್ದಾನಗಳನ್ನು ಅನೇಕರು ಏಕೆ ನಂಬುವುದಿಲ್ಲವೆಂಬುದು ನಮಗೆ ಅರ್ಥವಾಗುತ್ತದೆ. ಅವರಿಗೆ ಯೆಹೋವನ ಬಗ್ಗೆ ಏನೂ ತಿಳಿದಿಲ್ಲ. ಅವರಿಗೆ ಆತನ ಹೆಸರು ಅಥವಾ ಆ ಹೆಸರಿನ ಮಹತ್ವದ ಬಗ್ಗೆ ತಿಳಿದಿರಲಿಕ್ಕಿಲ್ಲ. ಮತ್ತು ಆತನ ಗುಣಗಳ ಬಗ್ಗೆ ಹಾಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು ಎಂದು ಆತನಿಗಿರುವ ಕೀರ್ತಿಯ ಕುರಿತಾಗಿ ಅವರಿಗೆ ಅಲ್ಪಸ್ವಲ್ಪ ತಿಳಿದಿರಬಹುದು ಅಥವಾ ಅವರು ಏನೂ ಅರಿಯದವರೂ ಆಗಿರಬಹುದು. ನಾವಾದರೋ ಇಂಥ ಜ್ಞಾನದಿಂದ ಅನುಗ್ರಹಿತರಾಗಿದ್ದೇವೆ. ಆದುದರಿಂದ, ‘ತಿಳಿವಳಿಕೆಯಲ್ಲಿ ಕತ್ತಲು ಕವಿದಿರುವ’ ಜನರಿಗೆ, “ದೇವರು ದುಷ್ಟತನ ಮತ್ತು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆ?” ಎಂಬ ಅತ್ಯಂತ ಕಷ್ಟಕರ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಹೇಗೆ ಸಹಾಯಮಾಡುವುದೆಂದು ನಾವು ಆಗಾಗ್ಗೆ ಪುನರ್ವಿಮರ್ಶಿಸುವುದು ಉತ್ತಮ. (ಎಫೆಸ 4:18) ಇದಕ್ಕೆ ತೃಪ್ತಿಕರವಾದ ಉತ್ತರವನ್ನು ಕೊಡಲಿಕ್ಕಾಗಿ ಯಾವ ತಳಪಾಯವನ್ನು ಹಾಕಬಲ್ಲೆವು ಎಂಬುದನ್ನು ನಾವು ಮೊದಲಾಗಿ ಪರಿಗಣಿಸುವೆವು. ತದನಂತರ, ಯೆಹೋವನು ದುಷ್ಟತನದ ಸಮಸ್ಯೆಯನ್ನು ನಿರ್ವಹಿಸಿರುವ ವಿಧದಲ್ಲಿ ಆತನ ಗುಣಗಳು ಹೇಗೆ ತೋರಿಬರುತ್ತವೆಂಬುದನ್ನು ಚರ್ಚಿಸುವೆವು.
ಉತ್ತರಕೊಡುವ ಸರಿಯಾದ ವಿಧ
4 ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಯಾರಾದರೂ ಕೇಳುವಾಗ ನಮ್ಮ ಪ್ರತಿಕ್ರಿಯೆ ಏನಾಗಿರುತ್ತದೆ? ಆ ಕೂಡಲೇ, ಏದೆನ್ ತೋಟದಲ್ಲಿ ಏನು ಸಂಭವಿಸಿತೆಂಬ ವಿಷಯದೊಂದಿಗೆ ಆರಂಭಿಸುತ್ತಾ ಉದ್ದವಾದ ವಿವರಣೆ ಕೊಡಲು ನಮಗೆ ಮನಸ್ಸಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ಇದು ಸೂಕ್ತವಾಗಿರುವುದು. ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಹೇಳಬೇಕಾಗುತ್ತದೆ. ಮೊದಲು ಸ್ವಲ್ಪ ತಳಪಾಯವನ್ನು ಹಾಕಬೇಕಾದೀತು. ಜ್ಞಾನೋಕ್ತಿ 25:11; ಕೊಲೊಸ್ಸೆ 4:6) ಆ ಪ್ರಶ್ನೆಗೆ ಉತ್ತರವನ್ನು ಕೊಡಲಾರಂಭಿಸುವ ಮೊದಲು ನಾವು ಆ ವ್ಯಕ್ತಿಗೆ ನೆರವು ನೀಡಲು ನಮಗೆ ಸಹಾಯಮಾಡಬಹುದಾದ ಮೂರು ಅಂಶಗಳನ್ನು ಪರಿಗಣಿಸೋಣ.
(5 ಮೊದಲನೆಯದಾಗಿ, ಲೋಕದಲ್ಲಿ ಇಷ್ಟೊಂದು ದುಷ್ಟತನವಿರುವುದು ಆ ವ್ಯಕ್ತಿಯ ಮನಸ್ಸನ್ನು ಕಲಕುತ್ತಿರುವಲ್ಲಿ ಅದರರ್ಥ ಅವನನ್ನು ಇಲ್ಲವೇ ಅವನ ಪ್ರಿಯ ಜನರನ್ನು ಯಾವುದೋ ಕೆಡುಕು ಬಾಧಿಸಿದ್ದಿರಬಹುದು. ಆದುದರಿಂದ, ಮೊದಲು ಮನಃಪೂರ್ವಕವಾಗಿ ಪರಾನುಭೂತಿ ತೋರಿಸುವುದು ವಿವೇಕಯುತ. ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿವಾದ ನೀಡಿದ್ದು: “ಅಳುವವರ ಸಂಗಡ ಅಳಿರಿ.” (ರೋಮಾಪುರ 12:15) ನಾವು ಪರಾನುಭೂತಿ ತೋರಿಸುವಲ್ಲಿ ಅಂದರೆ ‘ಪರರ ದುಃಖದಲ್ಲಿ ಸೇರುವಲ್ಲಿ’ ಅದು ಆ ವ್ಯಕ್ತಿಯ ಮನಸ್ಸನ್ನು ಸ್ಪರ್ಶಿಸುವುದು. (1 ಪೇತ್ರ 3:8) ನಮಗೆ ಅವನ ದುಃಖ ಅರ್ಥವಾಗುತ್ತದೆಂದು ಆ ವ್ಯಕ್ತಿ ಗ್ರಹಿಸುವಾಗ, ನಾವೇನು ಹೇಳಲಿದ್ದೇವೋ ಅದಕ್ಕೆ ಅವನು ಕಿವಿಗೊಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
6 ಎರಡನೆಯದಾಗಿ, ಯಥಾರ್ಥ-ಮನಸ್ಸಿನ ಆ ವ್ಯಕ್ತಿ ಈ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ಅವನನ್ನು ಪ್ರಶಂಸಿಸಿರಿ. ಏಕೆ? ತಮ್ಮಲ್ಲಿ ಈ ರೀತಿಯ ಪ್ರಶ್ನೆಗಳು ಹುಟ್ಟಿರುವುದರಿಂದ ತಮಗೆ ದೇವರಲ್ಲಿ ನಂಬಿಕೆಯಿಲ್ಲ ಇಲ್ಲವೇ ಇದು ದೇವರ ಕಡೆಗೆ ಅಗೌರವವನ್ನು ಸೂಚಿಸುತ್ತದೆಂದು ಕೆಲವು ಜನರು ನೆನಸುತ್ತಾರೆ. ಧಾರ್ಮಿಕ ಮುಖಂಡರು ಸಹ ಅವರಿಗೆ ಹಾಗೆ ಹೇಳಿರಬಹುದು. ಆದರೆ, ಅಂಥ ಪ್ರಶ್ನೆಗಳನ್ನು ಕೇಳುವುದು ಯಾವಾಗಲೂ ನಂಬಿಕೆಯ ಕೊರತೆಯನ್ನು ಸೂಚಿಸುವುದಿಲ್ಲ. ವಾಸ್ತವದಲ್ಲಿ, ಬೈಬಲ್ ಕಾಲಗಳಲ್ಲಿ ನಂಬಿಗಸ್ತ ಜನರು ಸಹ ಅದೇ ರೀತಿಯ ಪ್ರಶ್ನೆಗಳನ್ನು ಕೇಳಿದರು. ಉದಾಹರಣೆಗಾಗಿ ಕೀರ್ತನೆಗಾರನಾದ ದಾವೀದನು ಕೇಳಿದ್ದು: “ಯೆಹೋವನೇ, ನೀನು ಯಾಕೆ ದೂರವಾಗಿ ನಿಂತಿದ್ದೀ; ಕಷ್ಟಕಾಲದಲ್ಲಿ ಯಾಕೆ ಮರೆಯಾಗುತ್ತೀ?” (ಕೀರ್ತನೆ 10:1) ಅದೇ ರೀತಿಯಲ್ಲಿ ಪ್ರವಾದಿ ಹಬಕ್ಕೂಕನು ಕೇಳಿದ್ದು: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ. ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ, ವ್ಯಾಜ್ಯವೇಳುತ್ತಿದೆ.”—ಹಬಕ್ಕೂಕ 1:2, 3.
7 ಹೀಗೆ ಪ್ರಶ್ನೆ ಕೇಳಿದವರು, ದೇವರ ಬಗ್ಗೆ ಅಪಾರ ಗೌರವವಿದ್ದ ನಂಬಿಗಸ್ತ ಪುರುಷರಾಗಿದ್ದರು. ತಳಮಳವನ್ನುಂಟುಮಾಡಿದ್ದ ಇಂಥ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಅವರಿಗೆ ಛೀಮಾರಿಹಾಕಲಾಯಿತೋ? ಇಲ್ಲ. ಅದಕ್ಕೆ ಬದಲಾಗಿ, ಅವರು ಯಥಾರ್ಥಮನಸ್ಸಿನಿಂದ ಕೇಳಿದ ಆ ಪ್ರಶ್ನೆಗಳನ್ನು ಯೆಹೋವನು ತನ್ನ ವಾಕ್ಯದಲ್ಲಿ ದಾಖಲಿಸಿಡಲು ಯೋಗ್ಯವೆಂದು ಪರಿಗಣಿಸಿದನು. ಇಂದು ದುಷ್ಟತನವು ವ್ಯಾಪಕವಾಗಿ ಹರಡಿರುವುದರ ಬಗ್ಗೆ ಚಿಂತಿತನಾಗಿರುವ ವ್ಯಕ್ತಿಯು, ವಾಸ್ತವದಲ್ಲಿ ಆಧ್ಯಾತ್ಮಿಕ ರೀತಿಯಲ್ಲಿ ಹಸಿದಿರಬಹುದು ಅಂದರೆ ಉತ್ತರಗಳಿಗಾಗಿ ಹಾತೊರೆಯುತ್ತಿರಬಹುದು. ಈ ಉತ್ತರಗಳನ್ನು ಕೇವಲ ಬೈಬಲ್ ಮಾತ್ರ ಕೊಡಬಲ್ಲದು. ನೆನಪಿನಲ್ಲಿಡಿ, ಆಧ್ಯಾತ್ಮಿಕವಾಗಿ ಹಸಿದಿರುವವರನ್ನು ಇಲ್ಲವೇ “ಆಧ್ಯಾತ್ಮಿಕ ಅಗತ್ಯದ ಅರಿವುಳ್ಳ”ವರ ಕುರಿತು ಯೇಸು ಒಳ್ಳೇ ಮಾತುಗಳನ್ನಾಡಿದನು. (ಮತ್ತಾಯ 5:3, NW) ಆದುದರಿಂದ, ಯೇಸು ವಾಗ್ದಾನಿಸಿದ ಸಂತೋಷವನ್ನು ಪಡೆದುಕೊಳ್ಳುವಂತೆ ಅಂಥವರಿಗೆ ಸಹಾಯಮಾಡುವುದು ನಮಗೆ ಎಂಥ ಸುಯೋಗವಾಗಿದೆ!
8 ಮೂರನೆಯದಾಗಿ, ಲೋಕದಲ್ಲಿ ಇಂದು ವ್ಯಾಪಕವಾಗಿರುವ ದುಷ್ಟತನಕ್ಕೆ ದೇವರು ಕಾರಣನಲ್ಲವೆಂದು ಆ ವ್ಯಕ್ತಿ ಗ್ರಹಿಸುವಂತೆ ನಾವು ಸಹಾಯಮಾಡಬೇಕಾದೀತು. ಅನೇಕ ಜನರಿಗೆ ಕಲಿಸಲಾಗಿರುವ ಸಂಗತಿಗಳೇನೆಂದರೆ, ನಾವಿಂದು ಜೀವಿಸುತ್ತಿರುವ ಲೋಕವನ್ನು ದೇವರು ಆಳುತ್ತಿದ್ದಾನೆ, ನಮಗೆ ಏನೇನು ಸಂಭವಿಸುತ್ತದೋ ಅದೆಲ್ಲವನ್ನೂ ದೇವರು ಎಷ್ಟೋ ಹಿಂದೆಯೇ ನಿರ್ಧರಿಸಿಟ್ಟಿದ್ದಾನೆ, ಮತ್ತು ಮಾನವಕುಲದ ಮೇಲೆ ಕಷ್ಟಗಳನ್ನು ತರಲು ಆತನಿಗೆ ರಹಸ್ಯವಾದ ಕಾರಣಗಳಿವೆ. ಈ ಬೋಧನೆಗಳು ಸುಳ್ಳಾಗಿವೆ. ಅವು ದೇವರಿಗೆ ಅಗೌರವ ತರುತ್ತವೆ ಮತ್ತು ಲೋಕದಲ್ಲಿರುವ ದುಷ್ಟತನ 2 ತಿಮೊಥೆಯ 3:16) ಈ ಭ್ರಷ್ಟ ವಿಷಯಗಳ ವ್ಯವಸ್ಥೆಯ ಅಧಿಪತಿ ಯೆಹೋವನಲ್ಲ, ಪಿಶಾಚನಾದ ಸೈತಾನನಾಗಿದ್ದಾನೆ. (1 ಯೋಹಾನ 5:19) ಯೆಹೋವನು ಬುದ್ಧಿಶಕ್ತಿಯುಳ್ಳ ತನ್ನ ಜೀವಿಗಳ ಜೀವನದಲ್ಲಿ ಏನೇನು ನಡೆಯಬೇಕೆಂಬುದನ್ನು ಮುಂಚಿತವಾಗಿ ನಿರ್ಧರಿಸಿಡುವುದಿಲ್ಲ; ಒಳ್ಳೇದು ಮತ್ತು ಕೆಟ್ಟದ್ದು, ಸರಿ ತಪ್ಪಿನ ನಡುವೆ ಆಯ್ಕೆಮಾಡಲು ಆತನು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಕೊಡುತ್ತಾನೆ. (ಧರ್ಮೋಪದೇಶಕಾಂಡ 30:19) ಯೆಹೋವನು ಎಂದಿಗೂ ದುಷ್ಟತನಕ್ಕೆ ಕಾರಣನಾಗಿರುವುದಿಲ್ಲ. ಅದಕ್ಕೆ ಬದಲಾಗಿ ಆತನು ದುಷ್ಟತನವನ್ನು ಹಗೆಮಾಡುತ್ತಾನೆ, ಮತ್ತು ಅನ್ಯಾಯಕ್ಕೊಳಗಾದವರ ಬಗ್ಗೆ ಕಾಳಜಿಯುಳ್ಳವನಾಗಿದ್ದಾನೆ.—ಯೋಬ 34:10; ಜ್ಞಾನೋಕ್ತಿ 6:16-19; 1 ಪೇತ್ರ 5:7.
ಹಾಗೂ ಕಷ್ಟಸಂಕಟಕ್ಕೆ ಆತನೇ ಕಾರಣನೆಂಬ ಚಿತ್ರಣವನ್ನು ಕೊಡುತ್ತವೆ. ಆದುದರಿಂದ ಆ ಯೋಚನಾಧಾಟಿಯನ್ನು ತಿದ್ದಲು ನಾವು ದೇವರ ವಾಕ್ಯವನ್ನು ಉಪಯೋಗಿಸಬೇಕಾಗುವುದು. (9 ಇಂಥ ತಳಪಾಯ ಹಾಕಿದ ನಂತರ, ದೇವರು ಕಷ್ಟಸಂಕಟ ಮುಂದುವರಿಯುವಂತೆ ಏಕೆ ಅನುಮತಿಸುತ್ತಾನೆಂಬುದನ್ನು ತಿಳಿಯಲು ನಿಮ್ಮ ಕೇಳುಗನು ಸಿದ್ಧನಾಗಿರುವುದನ್ನು ನೀವು ನೋಡಬಹುದು. ನಿಮಗೆ ಸಹಾಯಮಾಡಲು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹಲವಾರು ಪ್ರಕಾಶನಗಳನ್ನು ಕೊಟ್ಟಿದೆ. (ಮತ್ತಾಯ 24:45-47) ದೃಷ್ಟಾಂತಕ್ಕಾಗಿ, 2005/06ರ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನದಲ್ಲಿ, ಎಲ್ಲ ಕಷ್ಟಸಂಕಟಗಳು ಬೇಗನೆ ಅಂತ್ಯಗೊಳ್ಳುವವು! ಎಂಬ ಟ್ರ್ಯಾಕ್ಟನ್ನು ಬಿಡುಗಡೆಮಾಡಲಾಯಿತು. ಈ ಟ್ರ್ಯಾಕ್ಟ್‌ನಲ್ಲಿರುವ ವಿಷಯಗಳನ್ನು ನೀವೇಕೆ ಚೆನ್ನಾಗಿ ತಿಳಿದುಕೊಳ್ಳಬಾರದು? ಅದೇ ರೀತಿಯಲ್ಲಿ, ಈಗ 157 ಭಾಷೆಗಳಲ್ಲಿ ಲಭ್ಯವಿರುವ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದಲ್ಲಿ, ಆ ಪ್ರಶ್ನೆಗಾಗಿ ಒಂದು ಇಡೀ ಅಧ್ಯಾಯವನ್ನು ಮೀಸಲಾಗಿಡಲಾಗಿದೆ. ಇಂಥ ಪ್ರಕಾಶನಗಳನ್ನು ಪೂರ್ಣವಾಗಿ ಬಳಸಿರಿ. ಇವು, ಏದೆನ್ ತೋಟದಲ್ಲಿ ಎಬ್ಬಿಸಲ್ಪಟ್ಟ ವಿಶ್ವ ಪರಮಾಧಿಕಾರದ ವಿವಾದಾಂಶ ಮತ್ತು ಯೆಹೋವನು ಆ ಸವಾಲನ್ನು ಹೇಗೆ ನಿಭಾಯಿಸಿದ್ದಾನೋ ಅದಕ್ಕೆ ಕಾರಣವನ್ನು ಶಾಸ್ತ್ರಾಧಾರಿತ ಹಿನ್ನಲೆಯೊಂದಿಗೆ ಸ್ಪಷ್ಟವಾಗಿ ವಿವರಿಸುತ್ತವೆ. ನೀವು ಈ ವಿಷಯವನ್ನು ಚರ್ಚಿಸುವಾಗ, ಇರುವುದರಲ್ಲೇ ಅತ್ಯಂತ ಮಹತ್ವಪೂರ್ಣವಾದ ಜ್ಞಾನದ ಕ್ಷೇತ್ರವೊಂದನ್ನು ನಿಮ್ಮ ಕೇಳುಗನ ಮುಂದೆ ತೆರೆದಿಡುತ್ತಿದ್ದೀರೆಂಬುದನ್ನು ಮನಸ್ಸಿನಲ್ಲಿಡಿರಿ. ಈ ಜ್ಞಾನವು ಯೆಹೋವ ಮತ್ತು ಆತನ ಅದ್ಭುತಕರ ಗುಣಗಳ ಕುರಿತಾಗಿ ಇದೆ.
ಯೆಹೋವನ ಗುಣಗಳ ಮೇಲೆ ಗಮನ ಕೇಂದ್ರೀಕರಿಸಿ
10 ಸೈತಾನನ ಪ್ರಭಾವದಡಿ ಮಾನವರು ತಮ್ಮನ್ನೇ ಆಳಿಕೊಳ್ಳುವಂತೆ ಯೆಹೋವನು ಏಕೆ ಅನುಮತಿಸಿದ್ದಾನೆಂಬ ಕಾರಣವನ್ನು ಅರ್ಥೈಸಿಕೊಳ್ಳುವಂತೆ ನೀವು ಜನರಿಗೆ ಸಹಾಯಮಾಡಬೇಕು. ಹೀಗೆ ಮಾಡುತ್ತಿರುವಾಗ, ಆತನ ಅದ್ಭುತ ಗುಣಗಳೆಡೆಗೆ ಅವರ ಗಮನಸೆಳೆಯಲು ಪ್ರಯತ್ನಿಸಿ. ದೇವರು ಶಕ್ತಿಶಾಲಿಯೆಂದು ಅನೇಕರಿಗೆ ತಿಳಿದಿದೆ. ಆತನನ್ನು ‘ಸರ್ವಶಕ್ತ ದೇವರು’ ಎಂದು ಕರೆಯಲಾಗಿರುವುದನ್ನು ಅವರು ಕೇಳಿದ್ದಾರೆ. ಆದರೆ ಆತನು ತನ್ನ ಮಹಾ ಶಕ್ತಿಯನ್ನು ಬಳಸಿ ಅನ್ಯಾಯ ಹಾಗೂ ಕಷ್ಟಸಂಕಟವನ್ನು ಈಗಲೇ ಏಕೆ ಅಂತ್ಯಗೊಳಿಸುವುದಿಲ್ಲ ಎಂಬ ಮಾತನ್ನು ಅರ್ಥಮಾಡಿಕೊಳ್ಳಲು ಅವರಿಗೆ ಕಷ್ಟವಾಗುತ್ತಿರಬಹುದು. ಇದಕ್ಕೆ ಒಂದು ಕಾರಣವೇನೆಂದರೆ, ಅವರಿಗೆ ಯೆಹೋವನ ಇತರ ಗುಣಗಳಾದ ಪವಿತ್ರತೆ, ನ್ಯಾಯ, ವಿವೇಕ ಹಾಗೂ ಪ್ರೀತಿಯ ಕುರಿತಾದ ತಿಳಿವಳಿಕೆಯ ಕೊರತೆ ಇರಬಹುದು. ಆ ಗುಣಗಳನ್ನು ಯೆಹೋವನು ಪರಿಪೂರ್ಣ ಹಾಗೂ ಸಂತುಲಿತ ರೀತಿಯಲ್ಲಿ ಪ್ರದರ್ಶಿಸುತ್ತಾನೆ. ಈ ಕಾರಣದಿಂದಲೇ ಬೈಬಲ್ ಹೇಳುವುದೇನೆಂದರೆ ಆತನ “ಕಾರ್ಯದಲ್ಲಿ ಯಾವ ಕುಂದೂ ಇಲ್ಲ.” (ಧರ್ಮೋಪದೇಶಕಾಂಡ 32:4) ದುಷ್ಟತನವನ್ನು ಅನುಮತಿಸಿರುವುದರ ಕುರಿತಾದ ವಿವಾದಾಂಶದ ಸಂಬಂಧದಲ್ಲಿ ಎಬ್ಬಿಸಲಾಗುವ ಪ್ರಶ್ನೆಗಳನ್ನು ಉತ್ತರಿಸುವಾಗ ಯೆಹೋವನ ಆ ಗುಣಗಳನ್ನು ನೀವು ಹೇಗೆ ಎತ್ತಿತೋರಿಸಬಹುದು? ಕೆಲವೊಂದು ಉದಾಹರಣೆಗಳನ್ನು ಪರಿಗಣಿಸೋಣ.
11ಯೆಹೋವನು ಆದಾಮಹವ್ವರನ್ನು ಕ್ಷಮಿಸಿಬಿಡಬಹುದಿತ್ತಲ್ಲಾ? ಇಲ್ಲಿ ಕ್ಷಮಿಸುವ ಪ್ರಮೇಯವೇ ಇರಲಿಲ್ಲ. ಏಕೆಂದರೆ ಆದಾಮಹವ್ವರು ಪರಿಪೂರ್ಣರಾಗಿದ್ದರು ಮತ್ತು ಉದ್ದೇಶಪೂರ್ವಕವಾಗಿ ಯೆಹೋವನ ಪರಮಾಧಿಕಾರವನ್ನು ತಿರಸ್ಕರಿಸಿ ಸೈತಾನನ ಮಾರ್ಗದರ್ಶನವನ್ನು ಸ್ವೀಕರಿಸುವ ಆಯ್ಕೆಮಾಡಿದ್ದರು. ಆದಕಾರಣವೇ, ಈ ದಂಗೆಕೋರರು ಪಶ್ಚಾತ್ತಾಪದ ಯಾವುದೇ ಸೂಚನೆ ತೋರಿಸಲಿಲ್ಲ ಎಂಬುದರಲ್ಲಿ ಆಶ್ಚರ್ಯವಿಲ್ಲ. ಜನರು ಈ ವಿಷಯದಲ್ಲಿ ಕ್ಷಮಾಪಣೆಯ ಕುರಿತಾಗಿ ಮಾತಾಡುತ್ತಿರುವಾಗ, ವಾಸ್ತವದಲ್ಲಿ ಅವರ ಮನಸ್ಸಿನಲ್ಲಿ ಈ ವಿಷಯವಿರಬಹುದು: ಯೆಹೋವನು ತನ್ನ ಮಟ್ಟವನ್ನು ಸ್ವಲ್ಪ ಕೆಳಕ್ಕಿಳಿಸಿ, ಆ ಪಾಪ ಹಾಗೂ ದಂಗೆಯನ್ನು ಸಹಿಸಬಹುದಿತ್ತಲ್ಲಾ? ಇದಕ್ಕಿರುವ ಉತ್ತರವು, ಯೆಹೋವನ ಸ್ವಭಾವದ ಒಂದು ಪ್ರಮುಖ ಗುಣವಾದ ಪವಿತ್ರತೆಯೊಂದಿಗೆ ಸಂಬಂಧಿಸಿದೆ.—ವಿಮೋಚನಕಾಂಡ 28:36; 39:30.
12 ಯೆಹೋವನ ಪವಿತ್ರತೆಯನ್ನು ಬೈಬಲ್ ನೂರಾರು ಸಲ ಒತ್ತಿಹೇಳುತ್ತದೆ. ಆದರೆ ದುಃಖದ ಸಂಗತಿಯೇನೆಂದರೆ ಇಂದಿನ ಭ್ರಷ್ಟ ಲೋಕದಲ್ಲಿ ಈ ಗುಣದ ಬಗ್ಗೆ ಕೇವಲ ಅರ್ಥಮಾಡಿಕೊಳ್ಳುವವರು ಕೇವಲ ಕೆಲವರೇ. ಯೆಹೋವನು ನಿರ್ಮಲನೂ, ಶುದ್ಧನೂ, ಸಮಸ್ತ ಪಾಪದಿಂದ ಪ್ರತ್ಯೇಕನೂ ಆಗಿದ್ದಾನೆ. (ಯೆಶಾಯ 6:3; 59:2) ಪಾಪದ ವಿಷಯವನ್ನು ಪರಿಗಣಿಸುವುದಾದರೆ, ಅದನ್ನು ಪರಿಹರಿಸಲು ಮತ್ತು ಅಳಿಸಿಹಾಕಲು ಆತನೊಂದು ಮಾರ್ಗವನ್ನು ಏರ್ಪಡಿಸಿದ್ದಾನೆ. ಆದರೆ ಅದರರ್ಥ, ಆತನದನ್ನು ಸದಾಕಾಲಕ್ಕೂ ಸಹಿಸುತ್ತಾನೆಂದಲ್ಲ. ಒಂದುವೇಳೆ ಯೆಹೋವನು ಪಾಪವನ್ನು ನಿತ್ಯಕ್ಕೂ ಸಹಿಸುತ್ತಾ ಇರಲು ಬಯಸುತ್ತಿದ್ದಲ್ಲಿ, ನಮಗೆ ಭವಿಷ್ಯಕ್ಕಾಗಿ ಯಾವುದೇ ನಿರೀಕ್ಷೆ ಇರುತ್ತಿರಲಿಲ್ಲ. (ಜ್ಞಾನೋಕ್ತಿ 14:12) ಆತನು ತನ್ನ ತಕ್ಕ ಸಮಯದಲ್ಲಿ ಎಲ್ಲಾ ಸೃಷ್ಟಿಯನ್ನು ಪವಿತ್ರತೆಯ ಸ್ಥಿತಿಗೆ ಹಿಂದಿರುಗಿಸುವನು. ಇದು ನಿಶ್ಚಯ ಏಕೆಂದರೆ ಇದು ಪವಿತ್ರನಾದ ದೇವರ ಚಿತ್ತವಾಗಿದೆ.
13ಯೆಹೋವನು ಏದೆನಿನಲ್ಲಿನ ದಂಗೆಕೋರರನ್ನು ಆ ಕೂಡಲೇ ನಾಶಮಾಡಿ, ಒಂದು ಹೊಸ ಆರಂಭವನ್ನು ಮಾಡಬಹುದಿತ್ತಲ್ಲಾ? ಹಾಗೆ ಮಾಡುವ ಶಕ್ತಿ ಆತನಿಗಿತ್ತು ಖಂಡಿತ. ಅದೇ ಶಕ್ತಿಯನ್ನು ಬಳಸಿ ಆತನು ಬೇಗನೆ ಎಲ್ಲ ದುಷ್ಟರನ್ನು ನಾಶಮಾಡಲಿದ್ದಾನೆ. ಆದರೆ ‘ವಿಶ್ವದಲ್ಲಿ ಕೇವಲ ಮೂರು ಪಾಪಿಗಳಿದ್ದಾಗಲೇ ಅದನ್ನು ಏಕೆ ಮಾಡಲಿಲ್ಲ? ಆಗ ಮಾಡಿರುತ್ತಿದ್ದರೆ, ಪಾಪವು ಹಬ್ಬುತ್ತಿರಲಿಲ್ಲ ಮತ್ತು ನಾವೀಗ ಜಗತ್ತಿನಲ್ಲಿ ನೋಡುತ್ತಿರುವ ಎಲ್ಲ ವ್ಯಥೆಯನ್ನು ತಡೆಗಟ್ಟಬಹುದಿತ್ತಲ್ಲಾ?’ ಎಂದು ಕೆಲವರು ಯೋಚಿಸುತ್ತಾರೆ. ಯೆಹೋವನು ಏಕೆ ಹಾಗೆ ಮಾಡಲಿಲ್ಲ? ಧರ್ಮೋಪದೇಶಕಾಂಡ 32:4 ಅನ್ನುವುದು: “ದೇವರು . . . ನಡಿಸುವದೆಲ್ಲಾ ನ್ಯಾಯ.” ಯೆಹೋವನಿಗೆ ಅತ್ಯುನ್ನತವಾದ ನ್ಯಾಯ-ಪ್ರಜ್ಞೆಯಿದೆ. ವಾಸ್ತವಾಂಶವೇನೆಂದರೆ, “ಯೆಹೋವನು ನ್ಯಾಯವನ್ನು ಪ್ರೀತಿಸುತ್ತಾನೆ.” (ಕೀರ್ತನೆ 37:28, NIBV) ಯೆಹೋವನು ನ್ಯಾಯವನ್ನು ಪ್ರೀತಿಸುವುದರಿಂದಲೇ ಆತನು ಏದೆನಿನಲ್ಲಿನ ದಂಗೆಕೋರರನ್ನು ನಾಶಮಾಡಲಿಲ್ಲ. ಆದರೆ ಏಕೆ?
14 ಸೈತಾನನ ದಂಗೆಯು, ದೇವರ ಪರಮಾಧಿಕಾರದ ಯುಕ್ತತೆಯ ಬಗ್ಗೆ ಪ್ರಶ್ನೆಯನ್ನೆಬ್ಬಿಸಿತು. ಯೆಹೋವನಿಗಿರುವ ನ್ಯಾಯ-ಪ್ರಜ್ಞೆಯಿಂದಾಗಿ ಅವನು ಸೈತಾನನ ಸವಾಲಿಗೆ ನ್ಯಾಯವಾದ ಉತ್ತರವನ್ನು ಕೊಡಬೇಕಾಗಿತ್ತು. ಆತನು ಆ ಕೂಡಲೇ ಆ ದಂಗೆಕೋರರನ್ನು ಹತಿಸಿರುತ್ತಿದ್ದರೆ ಅದು ಅವರಿಗೆ ತಕ್ಕ ಶಾಸ್ತಿ ಆಗಿರುತ್ತಿದ್ದರೂ, ಎಬ್ಬಿಸಲ್ಪಟ್ಟ ಸವಾಲಿಗೆ ಅದು ನ್ಯಾಯವಾದ ಉತ್ತರ ಆಗಿರುತ್ತಿರಲಿಲ್ಲ. ಅಲ್ಲದೆ, ಅದರಿಂದಾಗಿ ಯೆಹೋವನ ಅಪಾರ ಶಕ್ತಿಯ ಹೆಚ್ಚಿನ ಪುರಾವೆ ಸಿಗುತ್ತಿತ್ತು ಖಂಡಿತ. ಆದರೆ, ಎಬ್ಬಿಸಲಾಗಿದ್ದ ಸವಾಲು ಆತನಿಗೆಷ್ಟು ಶಕ್ತಿಯಿದೆ ಎಂಬುದಾಗಿರಲಿಲ್ಲವಲ್ಲಾ? ಅಷ್ಟುಮಾತ್ರವಲ್ಲದೆ, ಯೆಹೋವನು ಈಗಾಗಲೇ ಆದಾಮಹವ್ವರಿಗಾಗಿರುವ ತನ್ನ ಉದ್ದೇಶವನ್ನು ಪ್ರಕಟಿಸಿದ್ದನು. ಅವರು ಸಂತಾನವನ್ನು ಹುಟ್ಟಿಸಿ, ಭೂಮಿಯನ್ನು ತುಂಬಿ, ವಶಮಾಡಿಕೊಂಡು, ಬೇರೆಲ್ಲ ಭೂಜೀವಿಗಳ ಮೇಲೆ ದೊರೆತನಮಾಡಬೇಕೆಂಬುದು ಆ ಉದ್ದೇಶವಾಗಿತ್ತು. (ಆದಿಕಾಂಡ 1:28) ಒಂದುವೇಳೆ ಯೆಹೋವನು ಆ ಕೂಡಲೇ ಆದಾಮಹವ್ವರನ್ನು ನಾಶಮಾಡುತ್ತಿದ್ದಲ್ಲಿ, ಮಾನವರ ಕುರಿತಾಗಿ ಆತನು ಈಗಾಗಲೇ ತಿಳಿಸಿದ್ದ ಉದ್ದೇಶದ ಮಾತುಗಳು ಪೊಳ್ಳಾಗುತ್ತಿದ್ದವು. ಆದರೆ ಯೆಹೋವನ ನ್ಯಾಯವು ಎಂದಿಗೂ ಹಾಗಾಗುವಂತೆ ಅನುಮತಿಸದು, ಏಕೆಂದರೆ ಆತನ ಉದ್ದೇಶವು ಯಾವಾಗಲೂ ನೆರವೇರುತ್ತದೆ.—ಯೆಶಾಯ 55:10, 11.
ರೋಮಾಪುರ 11:25; 16:25-27, NW.
15ವಿಶ್ವದಲ್ಲಿ ಬೇರೆ ಯಾರಾದರೂ ಯೆಹೋವನಿಗಿಂತಲೂ ಶ್ರೇಷ್ಠವಾದ ವಿವೇಕದೊಂದಿಗೆ ಆ ದಂಗೆಯನ್ನು ನಿರ್ವಹಿಸಸಾಧ್ಯವಿತ್ತೋ? ಕೆಲವು ಜನರು ಏದೆನಿನಲ್ಲಾದ ದಂಗೆಗೆ ತಮ್ಮದೇ ಆದ ‘ಪರಿಹಾರಗಳನ್ನು’ ಸೂಚಿಸಬಹುದು. ಆದರೆ ಹಾಗೆ ಮಾಡುವ ಮೂಲಕ ಅವರು, ಆ ವಿವಾದಾಂಶವನ್ನು ನಿರ್ವಹಿಸಲು ತಮ್ಮ ಬಳಿ ಹೆಚ್ಚು ಉತ್ತಮವಾದ ಉಪಾಯಗಳಿವೆಯೆಂದು ಸೂಚಿಸುತ್ತಿದ್ದಾರಲ್ಲವೇ? ಅವರ ಉದ್ದೇಶ ಕೆಟ್ಟದ್ದಾಗಿರಲಿಕ್ಕಿಲ್ಲ. ಅವರಿಗೆ ಯೆಹೋವನ ಬಗ್ಗೆ ಮತ್ತು ಆತನ ವಿಸ್ಮಯಕಾರಿ ವಿವೇಕದ ಬಗ್ಗೆ ತಿಳಿವಳಿಕೆಯಿಲ್ಲ ಅಷ್ಟೇ. ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು, ದೇವರ ವಿವೇಕದ ಬಗ್ಗೆ ಆಳವಾಗಿ ಪರಿಶೋಧಿಸಿ ಬರೆದನು. ಅದರಲ್ಲಿ, ನಂಬಿಗಸ್ತ ಮಾನವಕುಲದ ವಿಮೋಚನೆ ಹಾಗೂ ತನ್ನ ನಾಮದ ಪವಿತ್ರೀಕರಣಕ್ಕಾಗಿ ಮೆಸ್ಸೀಯ ರಾಜ್ಯವನ್ನು ಉಪಯೋಗಿಸುವ ಯೆಹೋವನ ಉದ್ದೇಶದ ಕುರಿತಾದ ಪವಿತ್ರ ‘ಮರ್ಮದ’ ವಿಷಯವೂ ಒಳಗೂಡಿತ್ತು. ಆ ಉದ್ದೇಶವನ್ನು ಮಾಡಿದ ದೇವರ ವಿವೇಕದ ಬಗ್ಗೆ ಪೌಲನಿಗೆ ಹೇಗನಿಸುತ್ತಿತ್ತು? ಅವನು ತನ್ನ ಪತ್ರದ ಸಮಾಪ್ತಿಯಲ್ಲಿ, ಯೆಹೋವನನ್ನು ಸಂಬೋಧಿಸುತ್ತಾ ಆತನನ್ನು “ಒಬ್ಬನೇ ವಿವೇಕಿ” ಎಂದು ಹೇಳುತ್ತಾನೆ.—16 ‘ಯೆಹೋವನೊಬ್ಬನೇ ವಿವೇಕಿ’ ಎಂದು, ಅಂದರೆ ಇಡೀ ವಿಶ್ವದಲ್ಲೇ ವಿವೇಕದಲ್ಲಿ ಅತ್ಯುನ್ನತನೆಂಬುದನ್ನು ಪೌಲನು ಅರ್ಥಮಾಡಿಕೊಂಡನು. ಮಾನವರ ಯಾವುದೇ ಸಮಸ್ಯೆಗೂ ಅತ್ಯುತ್ತಮ ಪರಿಹಾರವನ್ನು ಕಂಡುಕೊಳ್ಳಲಾರದ ಅಪರಿಪೂರ್ಣ ಮಾನವನು, ದೈವಿಕ ವಿವೇಕದ ವಿಷಯದಲ್ಲಿ ಎಬ್ಬಿಸಲಾಗಿರುವ ಅತ್ಯಂತ ಕ್ಲಿಷ್ಟಕರವಾದ ಸವಾಲಿಗೆ ಹೇಗೆ ತಾನೇ ಉತ್ತಮ ಪರಿಹಾರ ಸೂಚಿಸಬಲ್ಲನು? ಆದುದರಿಂದಲೇ ಅತ್ಯುನ್ನತ “ವಿವೇಕವುಳ್ಳ” ದೇವರ ಬಗ್ಗೆ ನಮಗಿರುವಂಥದ್ದೇ ರೀತಿಯ ಪೂಜ್ಯ ಭಾವನೆಯನ್ನು ಹೊಂದುವಂತೆ ನಾವು ಜನರಿಗೆ ಸಹಾಯಮಾಡಬೇಕು. (ಯೋಬ 9:4) ನಾವು ಯೆಹೋವನ ವಿವೇಕವನ್ನು ಎಷ್ಟು ಹೆಚ್ಚು ಉತ್ತಮವಾಗಿ ಗ್ರಹಿಸುತ್ತೇವೋ, ವಿಷಯಗಳನ್ನು ನಿರ್ವಹಿಸುವ ಆತನ ವಿಧಾನವೇ ಅತ್ಯುತ್ತಮವೆಂದು ನಾವು ಅಷ್ಟೇ ಪೂರ್ಣವಾಗಿ ನಂಬುವೆವು.—ಜ್ಞಾನೋಕ್ತಿ 3:5, 6.
ಯೆಹೋವನ ಅತಿ ಪ್ರಧಾನ ಗುಣವು ವಹಿಸುವ ಪಾತ್ರವನ್ನು ಗ್ರಹಿಸುವುದು
17 “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಈ ಚಿತ್ತಾಕರ್ಷಕ ಮಾತುಗಳಲ್ಲಿ ಬೈಬಲು ಯೆಹೋವನ ಪ್ರಧಾನ ಗುಣವನ್ನು ಗುರುತಿಸುತ್ತದೆ. ಈ ಗುಣವು ಎಲ್ಲಕ್ಕಿಂತಲೂ ಹೆಚ್ಚು ಆಕರ್ಷಕವಾಗಿದೆ ಮತ್ತು ಎಲ್ಲೆಲ್ಲೂ ಇರುವ ದುಷ್ಟತನದಿಂದ ಕಳವಳಗೊಂಡಿರುವವರಿಗೆ ತುಂಬ ಸಾಂತ್ವನ ಕೊಡುತ್ತದೆ. ಪಾಪವು ತನ್ನ ಸೃಷ್ಟಿಯ ಮೇಲೆ ತಂದಿರುವ ಕೇಡನ್ನು ಯೆಹೋವನು ನಿರ್ವಹಿಸಿರುವ ವಿಧಾನದ ಪ್ರತಿಯೊಂದೂ ಅಂಶದಲ್ಲಿ ಪ್ರೀತಿಯನ್ನು ತೋರಿಸಿದ್ದಾನೆ. ಆದಾಮಹವ್ವರ ಪಾಪಪೂರ್ಣ ಸಂತತಿಗೆ ನಿರೀಕ್ಷೆಯನ್ನು ಕೊಡುವಂತೆ ಪ್ರೀತಿಯು ಯೆಹೋವನನ್ನು ಪ್ರೇರಿಸಿತು. (ಆದಿಕಾಂಡ 3:15) ದೇವರು ಅವರಿಗೆ, ಆತನನ್ನು ಪ್ರಾರ್ಥನೆಯ ಮೂಲಕ ಸಮೀಪಿಸಲು ಅನುಮತಿಸಿದನು ಮತ್ತು ಆತನೊಂದಿಗೆ ಅನುಗ್ರಹಭರಿತವಾದ ಸಂಬಂಧವನ್ನು ಸ್ಥಾಪಿಸುವುದನ್ನು ಸಾಧ್ಯಗೊಳಿಸಿದನು. ಪಾಪದ ಸಂಪೂರ್ಣ ಕ್ಷಮಾಪಣೆ ಹಾಗೂ ಪರಿಪೂರ್ಣ, ನಿತ್ಯ ಜೀವಕ್ಕೆ ಪುನಸ್ಸ್ಥಾಪನೆಯ ಮಾರ್ಗವನ್ನು ತೆರೆಯಲಿದ್ದ ವಿಮೋಚನಾ ಮೌಲ್ಯವನ್ನು ಒದಗಿಸುವಂತೆ ಪ್ರೀತಿಯೇ ದೇವರನ್ನು ಪ್ರೇರಿಸಿತು. (ಯೋಹಾನ 3:16) ಅಲ್ಲದೆ, ಇದೇ ಪ್ರೀತಿಯು ಆತನು ಮಾನವಕುಲದೊಂದಿಗೆ ತಾಳ್ಮೆಯಿಂದ ವ್ಯವಹರಿಸುವಂತೆ, ಅಂದರೆ ಸೈತಾನನನ್ನು ತಿರಸ್ಕರಿಸಿ ಯೆಹೋವನನ್ನು ತಮ್ಮ ಪರಮಾಧಿಕಾರಿಯಾಗಿ ಸ್ವೀಕರಿಸುವ ಸಂದರ್ಭವನ್ನು ಸಾಧ್ಯವಾದಷ್ಟು ಹೆಚ್ಚು ಮಂದಿಗೆ ಕೊಡುವಂತೆ ಪ್ರೇರಿಸಿದೆ.—2 ಪೇತ್ರ 3:9.
18 ಒಂದು ಧ್ವಂಸಕಾರಿ ಭಯೋತ್ಪಾದಕ ದಾಳಿಯ ವರ್ಷಾಚರಣೆಗಾಗಿ ಕೂಡಿಬಂದಿದ್ದ ಸಭಿಕರನ್ನು ಸಂಬೋಧಿಸುತ್ತಾ ಪಾದ್ರಿಯೊಬ್ಬನು ಹೇಳಿದ್ದು: “ದುಷ್ಟತನ ಮತ್ತು ಕಷ್ಟಸಂಕಟವು ಮುಂದುವರಿಯುವಂತೆ ದೇವರು ಏಕೆ ಬಿಡುತ್ತಾನೆಂಬ ಕಾರಣ ನಮಗೆ ತಿಳಿದಿಲ್ಲ.” ಎಷ್ಟು ವಿಷಾದನೀಯ! ಆದರೆ ಈ ವಿಷಯದ ಬಗ್ಗೆ ನಮಗೆ ಒಳನೋಟವಿರುವುದಕ್ಕಾಗಿ ನಾವೆಷ್ಟು ಸಂತೋಷಿತರು! (ಧರ್ಮೋಪದೇಶಕಾಂಡ 29:29) ಯೆಹೋವನು ವಿವೇಕಿ, ನ್ಯಾಯವಂತನು ಮತ್ತು ಪ್ರೀತಿಪರನು ಆಗಿರುವುದರಿಂದ ಆತನು ಎಲ್ಲ ಕಷ್ಟಸಂಕಟವನ್ನು ಬೇಗನೆ ಅಂತ್ಯಗೊಳಿಸುವನೆಂದು ನಮಗೆ ತಿಳಿದಿದೆ. ಆತನು ಹಾಗೆ ಮಾಡುವನೆಂದು ಮಾತೂ ಕೊಟ್ಟಿದ್ದಾನೆ. (ಪ್ರಕಟನೆ 21:3, 4) ಆದರೆ ಈ ಎಲ್ಲ ಶತಮಾನಗಳಾದ್ಯಂತ ಮೃತಪಟ್ಟಿರುವವರ ಬಗ್ಗೆ ಏನು? ಏದೆನಿನಲ್ಲಿ ಎಬ್ಬಿಸಲಾದ ಆ ಸವಾಲನ್ನು ಯೆಹೋವನು ನಿರ್ವಹಿಸಿರುವ ವಿಧದಿಂದಾಗಿ ಅವರಿಗೆ ಯಾವುದೇ ನಿರೀಕ್ಷೆ ಇಲ್ಲವೋ? ನಿರೀಕ್ಷೆ ಇದೆ. ಪುನರುತ್ಥಾನದ ಮುಖಾಂತರ ಅವರಿಗಾಗಿಯೂ ಏರ್ಪಾಡು ಮಾಡುವಂತೆ ಪ್ರೀತಿಯು ಯೆಹೋವನನ್ನು ಪ್ರಚೋದಿಸಿದೆ. ಇದು ನಮ್ಮ ಮುಂದಿನ ಲೇಖನದ ವಿಷಯವಾಗಿದೆ. (w07 5/15)
ಏನು ಉತ್ತರಕೊಡುವಿರಿ?
• ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಕೇಳುವ ವ್ಯಕ್ತಿಗೆ ನಾವೇನು ಹೇಳಬಹುದು?
• ಯೆಹೋವನ ಪವಿತ್ರತೆ ಹಾಗೂ ನ್ಯಾಯವು, ಆತನು ಏದೆನಿನಲ್ಲಿನ ದಂಗೆಕೋರರೊಂದಿಗೆ ವ್ಯವಹರಿಸಿದ ರೀತಿಯಿಂದ ಹೇಗೆ ತೋರಿಬರುತ್ತದೆ?
• ಯೆಹೋವನ ಪ್ರೀತಿಯನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ನಾವು ಜನರಿಗೆ ಏಕೆ ಸಹಾಯಮಾಡಬೇಕು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಸದಾ ಜೀವಿಸುವ ನಿರೀಕ್ಷೆ ನಿಮಗೇಕೆ ಅಮೂಲ್ಯವಾದದ್ದಾಗಿದೆ? (ಬಿ) ಭವಿಷ್ಯದ ಬಗ್ಗೆ ಅದ್ಭುತಕರ ವಾಗ್ದಾನಗಳನ್ನು ಮಾಡುವ ಒಬ್ಬ ದೇವರಿದ್ದಾನೆಂದು ನಂಬುವುದು ಕೆಲವರಿಗೆ ಏಕೆ ಕಷ್ಟವಾಗುತ್ತದೆ?
3. ಯಾವ ಕಷ್ಟಕರ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನಾವು ಜನರಿಗೆ ಸಹಾಯಮಾಡಬಲ್ಲೆವು, ಮತ್ತು ಅದನ್ನು ಮಾಡುವ ಅಪೂರ್ವ ಅವಕಾಶ ನಮಗಿದೆ ಏಕೆ?
4, 5. ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಯಾರಾದರೂ ಪ್ರಶ್ನಿಸುವಲ್ಲಿ ನಾವು ಮೊದಲು ಏನು ಮಾಡಬೇಕು? ವಿವರಿಸಿ.
6, 7. ತಳಮಳಗೊಳಿಸುವ ಆಧ್ಯಾತ್ಮಿಕ ಪ್ರಶ್ನೆಯನ್ನು ಕೇಳುವ ಯಥಾರ್ಥ ಮನಸ್ಸಿನ ವ್ಯಕ್ತಿಯನ್ನು ನಾವು ಪ್ರಶಂಸಿಸುವುದು ಸೂಕ್ತವೇಕೆ?
8. ಯಾವ ಗಲಿಬಿಲಿಗೊಳಿಸುವ ಬೋಧನೆಗಳು ದೇವರು ಕಷ್ಟಸಂಕಟಕ್ಕೆ ಕಾರಣನೆಂದು ಜನರು ನಂಬುವಂತೆ ಮಾಡಿವೆ, ಮತ್ತು ನಾವು ಅಂಥ ಜನರಿಗೆ ಹೇಗೆ ಸಹಾಯಮಾಡಬಲ್ಲೆವು?
9. ಯೆಹೋವ ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೊಟ್ಟಿರುವ ಕೆಲವು ಪ್ರಕಾಶನಗಳು ಯಾವುವು?
10. ದೇವರು ಕಷ್ಟಸಂಕಟವನ್ನು ಅನುಮತಿಸಿರುವುದರ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಅನೇಕರಿಗೆ ಕಷ್ಟವಾಗುವುದೇಕೆ, ಮತ್ತು ಯಾವ ಜ್ಞಾನವು ಅವರಿಗೆ ಸಹಾಯಮಾಡುವುದು?
11, 12. (ಎ) ಆದಾಮಹವ್ವರು ಪಾಪಮಾಡಿದಾಗ ಕ್ಷಮಿಸುವ ಪ್ರಮೇಯವೇ ಇರಲಿಲ್ಲವೇಕೆ? (ಬಿ) ಯೆಹೋವನು ಸದಾಕಾಲಕ್ಕೂ ಪಾಪವನ್ನು ಸಹಿಸುತ್ತಾ ಇರುವುದಿಲ್ಲವೇಕೆ?
13, 14. ಏದೆನಿನಲ್ಲಿನ ದಂಗೆಕೋರರನ್ನು ಯೆಹೋವನು ಏಕೆ ನಾಶಮಾಡಲಿಲ್ಲ?
15, 16. ಏದೆನಿನಲ್ಲಿ ಎಬ್ಬಿಸಲ್ಪಟ್ಟ ಸವಾಲಿಗೆ ಜನರು ಬದಲಿ ‘ಪರಿಹಾರಗಳನ್ನು’ ಸೂಚಿಸುವಾಗ ನಾವು ಅವರಿಗೆ ಹೇಗೆ ಸಹಾಯಮಾಡಬಹುದು?
17. ದೇವರು ಕಷ್ಟಸಂಕಟಕ್ಕೆ ಅನುಮತಿಕೊಟ್ಟಿರುವುದರ ಬಗ್ಗೆ ಕಳವಳದಿಂದಿರುವವರಿಗೆ ಸಹಾಯಮಾಡಲು, ಆತನ ಪ್ರೀತಿಯ ಕುರಿತ ಹೆಚ್ಚು ಉತ್ತಮ ತಿಳಿವಳಿಕೆಯು ಹೇಗೆ ಸಹಾಯಮಾಡುವುದು?
18. ನಮಗೆ ಯಾವ ಒಳನೋಟವಿರುವುದಕ್ಕಾಗಿ ಸಂತೋಷಿಸುತ್ತೇವೆ, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುವೆವು?
[ಪುಟ 13ರಲ್ಲಿರುವ ಚಿತ್ರ]
ಲೋಕದಲ್ಲಿನ ಕಷ್ಟಸಂಕಟದಿಂದ ಕಳವಳಗೊಂಡಿರುವವರಿಗೆ ಸಹಾಯಮಾಡಲು ಪ್ರಯತ್ನಿಸಿ
[ಪುಟ 15ರಲ್ಲಿರುವ ಚಿತ್ರಗಳು]
ನಂಬಿಗಸ್ತ ದಾವೀದ ಹಾಗೂ ಹಬಕ್ಕೂಕ, ದೇವರಿಗೆ ಯಥಾರ್ಥ ಪ್ರಶ್ನೆಗಳನ್ನು ಕೇಳಿದರು