ನಾಲಿಗೆಯ ಶಕ್ತಿ
ನಾಲಿಗೆಯ ಶಕ್ತಿ
ಜಿರಾಫೆಯ ನಾಲಿಗೆಯು 18 ಇಂಚುಗಳಷ್ಟು ಉದ್ದವಾಗಿದ್ದು ಮರದ ಕೊಂಬೆಗಳಿಂದ ಎಲೆಗಳನ್ನು ಕೀಳಲು ಸಾಕಷ್ಟು ಶಕ್ತಿಯುತವೂ, ಚುರುಕೂ ಆಗಿದೆ. ನೀಲ ತಿಮಿಂಗಿಲದ ನಾಲಿಗೆಯಾದರೋ ಆನೆಯಷ್ಟು ಭಾರವಾಗಿದೆ. ಅದರ ನಾಲಿಗೆಯನ್ನು ಕೇವಲ ಅಲ್ಲಾಡಿಸಲು ಎಷ್ಟು ಶಕ್ತಿ ಬೇಕಾಗಬಹುದೆಂಬುದನ್ನು ತುಸು ಊಹಿಸಿ!
ಇವುಗಳ ಗಾತ್ರ, ತೂಕ ಮತ್ತು ಶಕ್ತಿಗೆ ಹೋಲಿಸುವಾಗ ಮಾನವ ನಾಲಿಗೆಯು ಏನೂ ಅಲ್ಲ. ಆದರೂ ಇದು ಅವುಗಳಿಗಿಂತಲೂ ಎಷ್ಟೋ ಹೆಚ್ಚು ಶಕ್ತಿಯುತವಾಗಿದೆ. ಮಾನವ ದೇಹದ ಈ ಚಿಕ್ಕ ಅಂಗದ ಕುರಿತು ಬೈಬಲ್ ತಿಳಿಸುವುದು: “ಜೀವನಮರಣಗಳು ನಾಲಿಗೆಯ ವಶ.” (ಜ್ಞಾನೋಕ್ತಿ 18:21) ನಿಜಕ್ಕೂ, ಮಾನವ ನಾಲಿಗೆಗಿರುವ ಮಾರಣಾಂತಿಕ ಶಕ್ತಿಯ ಬಗ್ಗೆ ನಾವು ಎಷ್ಟೊಂದು ಸಲ ಕೇಳಿಲ್ಲ? ಈ ನಾಲಿಗೆಯೇ ಅಮಾಯಕ ಜನರ ಪತನಕ್ಕೂ ಮರಣಕ್ಕೂ ನಡೆಸಿರುವ ಸುಳ್ಳುಗಳು ಮತ್ತು ತಪ್ಪಾದ ಸಾಕ್ಷ್ಯಗಳನ್ನು ಹೆಣೆದಿದೆಯಲ್ಲವೇ?
ತದ್ರೀತಿಯಲ್ಲಿ, ದೀರ್ಘಕಾಲದ ಮಿತ್ರತ್ವಗಳು ಮನನೋಯಿಸುವ ಮಾತುಗಳಿಂದಾಗಿ ಬಿದ್ದುಹೋಗಿವೆ. ನಿರ್ದಯ ಮಾತುಗಳಿಂದ ಭಾವನೆಗಳು ಜಜ್ಜಲ್ಪಟ್ಟಿವೆ. ಯೋಬನ ಸ್ನೇಹಿತರು ಅವನನ್ನು ಬಹಳವಾಗಿ ದೂಷಿಸಿದಾಗ ಅವನು ಅತ್ತದ್ದು: “ಎಷ್ಟರ ವರೆಗೆ ನನ್ನ ಆತ್ಮವನ್ನು ನೋಯಿಸಿ ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?” (ಯೋಬ 19:2) ಕಡಿವಾಣವಿಲ್ಲದ ನಾಲಿಗೆಯ ಮಾರಕ ಶಕ್ತಿಯ ಕುರಿತು ಶಿಷ್ಯನಾದ ಯಾಕೋಬನು ಸ್ಪಷ್ಟ ಚಿತ್ರಣವನ್ನು ಒದಗಿಸಿದನು. ಅವನು ಹೇಳಿದ್ದು: “ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ. ನಾಲಿಗೆಯೂ ಕಿಚ್ಚೇ.”—ಯಾಕೋಬ 3:5, 6.
ಇನ್ನೊಂದು ಕಡೆಯಲ್ಲಿ ನಾಲಿಗೆಯ ಶಕ್ತಿಯು ಜೀವದಾಯಕವೂ ಆಗಿರಬಲ್ಲದು. ಪರಾನುಭೂತಿ ಹಾಗೂ ಸಾಂತ್ವನದ ಮಾತುಗಳು ಕೆಲವರನ್ನು ಖಿನ್ನತೆ ಮತ್ತು ಆತ್ಮಹತ್ಯೆಗಳಿಂದ ಪಾರುಮಾಡಿವೆ. ಕೊಡಲಾಗಿರುವ ವಿಶ್ವಾಸಾರ್ಹ ಬುದ್ಧಿವಾದವನ್ನು ಪಾಲಿಸುವ ಮೂಲಕ, ಅಮಲೌಷಧ ವ್ಯಸನಿಗಳಾಗಿದ್ದ ಮತ್ತು ಕ್ರೂರ ಪಾತಕಿಗಳಾಗಿದ್ದ ಅನೇಕರು ಅಕಾಲಿಕ ಮರಣವನ್ನು ತಪ್ಪಿಸಿಕೊಂಡಿದ್ದಾರೆ. ನಿಜವಾಗಿ ನೀತಿವಂತನ ನಾಲಿಗೆಯು “ಜೀವವೃಕ್ಷ,” ಮತ್ತು “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.”—ಜ್ಞಾನೋಕ್ತಿ 15:4; 25:11.
ಆದಾಗ್ಯೂ, ಯೆಹೋವ ದೇವರನ್ನು ಸ್ತುತಿಸುವ ಮೂಲಕ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಮತ್ತು ಅಮೂಲ್ಯ ಬೈಬಲ್ ಸತ್ಯಗಳನ್ನು ಇತರರಿಗೆ ಕಲಿಸುವ ಮೂಲಕ ನಮ್ಮ ನಾಲಿಗೆಯನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಬಲ್ಲೆವು. ಇದು ಏಕೆ ಅತ್ಯುತ್ತಮ ರೀತಿಯಾಗಿದೆ? ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3; ಮತ್ತಾಯ 24:14; 28:19, 20. (w07 6/1)