ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನವು ನಿಮಗೆ ನೈಜವಾಗಿದೆಯೇ?

ಪುನರುತ್ಥಾನವು ನಿಮಗೆ ನೈಜವಾಗಿದೆಯೇ?

ಪುನರುತ್ಥಾನವು ನಿಮಗೆ ನೈಜವಾಗಿದೆಯೇ?

‘ಪುನರುತ್ಥಾನವಿರುವುದೆಂದು ನನಗೆ ನಿರೀಕ್ಷೆಯಿದೆ.’​—⁠ಅ. ಕೃತ್ಯಗಳು 24:⁠15.

“ಈ ಲೋಕದಲ್ಲಿ ಸಾವು ಮತ್ತು ತೆರಿಗೆಗಳನ್ನು ಬಿಟ್ಟರೆ, ಬೇರಾವುದೂ ಖಚಿತವಲ್ಲ.” ಅಮೆರಿಕದ ರಾಜನೀತಿಜ್ಞರಾದ ಬೆಂಜಮಿನ್‌ ಫ್ರ್ಯಾಂಕ್ಲಿನ್‌ರವರು 1789ರಲ್ಲಿ ಬರೆದ ಈ ಹೇಳಿಕೆಯು, ತುಂಬ ಬುದ್ಧಿವಂತಿಕೆಯ ಮಾತೆಂಬ ಅಭಿಪ್ರಾಯವನ್ನು ಕೆಲವರಲ್ಲಿ ಮೂಡಿಸಿತು. ಆದರೆ ಇಂದು ಎಷ್ಟೋ ಅಪ್ರಾಮಾಣಿಕ ಜನರು ತೆರಿಗೆಗಳನ್ನು ಸರಿಯಾಗಿ ಕಟ್ಟುವುದಿಲ್ಲ. ಹೀಗೆ ತೆರಿಗೆಗಳು ಖಚಿತವಲ್ಲ. ಅದಕ್ಕಿಂತ ಸಾವಂತೂ ತುಂಬ ಖಚಿತವಾಗಿರುವಂತೆ ತೋರುತ್ತದೆ. ಏಕೆಂದರೆ ನಮ್ಮಲ್ಲಿ ಯಾರೊಬ್ಬರೂ ಅದರಿಂದ ಎಂದೂ ತಪ್ಪಿಸಿಕೊಳ್ಳಲಾರೆವು. ಅದು ನಮ್ಮೆಲ್ಲರನ್ನೂ ಬೆನ್ನಟ್ಟಿಕೊಂಡು ಬರುತ್ತದೆ. ತೀರಿಸಲಾಗದಂಥ ಹಸಿವಿನಿಂದಲೋ ಎಂಬಂತೆ ಶಿಯೋಲ್‌, ಅಂದರೆ ಮಾನವಕುಲಕ್ಕೆ ಸರ್ವಸಾಮಾನ್ಯವಾಗಿರುವ ಸಮಾಧಿಯು, ನಮ್ಮ ಪ್ರಿಯ ಜನರನ್ನು ಕಬಳಿಸಿಬಿಡುತ್ತದೆ. (ಜ್ಞಾನೋಕ್ತಿ 27:20) ಆದರೆ ಸಾಂತ್ವನನೀಡುವ ಒಂದು ವಿಚಾರವನ್ನು ಪರಿಗಣಿಸಿರಿ.

2 ಯೆಹೋವನ ವಾಕ್ಯವು ನಮಗೆ, ಪುನಃ ಜೀವಕ್ಕೆ ಎಬ್ಬಿಸಲ್ಪಡುವ ಅಂದರೆ ಪುನರುತ್ಥಾನದ ನಿಶ್ಚಿತ ನಿರೀಕ್ಷೆಯನ್ನು ಕೊಡುತ್ತದೆ. ಅದೊಂದು ಕನಸಲ್ಲ. ವಿಶ್ವದಲ್ಲಿನ ಯಾವುದೇ ಶಕ್ತಿಯೂ ಈ ನಿರೀಕ್ಷೆಯನ್ನು ಕೈಗೂಡಿಸುವುದರಿಂದ ಯೆಹೋವನನ್ನು ತಡೆಯಲಾರದು. ಆದರೆ ಇಂದು ಅನೇಕರಿಗೆ ತಿಳಿದಿರದ ಸಂಗತಿಯೇನೆಂದರೆ ಕೆಲವರಿಗೆ ಸಾವೂ ಖಚಿತವಲ್ಲ. ಏಕೆ? ಏಕೆಂದರೆ ‘ಮಹಾ ಸಮೂಹದ’ ಅಸಂಖ್ಯಾತ ಜನರು ಬೇಗನೆ ಬರಲಿರುವ ‘ಮಹಾ ಸಂಕಟದಿಂದ’ ಜೀವಂತವಾಗಿ ಪಾರಾಗಲಿದ್ದಾರೆ. (ಪ್ರಕಟನೆ 7:​9, 10, 14) ಇವರು ಜೀವಿಸುತ್ತಾ ಇರುವರು ಮತ್ತು ಅವರಿಗೆ ನಿತ್ಯಜೀವದ ಪ್ರತೀಕ್ಷೆಯಿರುವುದು. ಈ ಕಾರಣದಿಂದ, ಮರಣವು ಅವರಿಗೆ ಅಷ್ಟೊಂದು ಖಚಿತವಾದ ಸಂಗತಿ ಆಗಿರುವುದಿಲ್ಲ. ಅಷ್ಟುಮಾತ್ರವಲ್ಲದೆ, ಮರಣವೇ “ಕೊನೆಯದಾಗಿ ನಿರ್ಮೂಲ”ವಾಗಲಿದೆ.​—⁠1 ಕೊರಿಂಥ 15:⁠26.

3 ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು’ ಎಂದು ಹೇಳಿದ ಅಪೊಸ್ತಲ ಪೌಲನಂತೆಯೇ ನಮಗೆ ಪುನರುತ್ಥಾನದ ಬಗ್ಗೆ ನಿಶ್ಚಯವಿರಬೇಕು. (ಅ. ಕೃತ್ಯಗಳು 24:15) ನಾವೀಗ ಪುನರುತ್ಥಾನದ ಬಗ್ಗೆ ಮೂರು ಪ್ರಶ್ನೆಗಳನ್ನು ಪರಿಗಣಿಸೋಣ. ಮೊದಲನೆಯದಾಗಿ, ಈ ನಿರೀಕ್ಷೆಯು ನಿಶ್ಚಿತವಾಗುವುದು ಹೇಗೆ? ಎರಡನೆಯದಾಗಿ, ಈ ಪುನರುತ್ಥಾನದ ನಿರೀಕ್ಷೆಯಿಂದ ನೀವು ವೈಯಕ್ತಿಕವಾಗಿ ಹೇಗೆ ಸಾಂತ್ವನ ಪಡೆಯಬಲ್ಲಿರಿ? ಮೂರನೆಯದಾಗಿ, ಈ ನಿರೀಕ್ಷೆಯು ನೀವೀಗ ಜೀವಿಸುತ್ತಿರುವ ರೀತಿಯನ್ನು ಹೇಗೆ ಪ್ರಭಾವಿಸಬಲ್ಲದು?

ಪುನರುತ್ಥಾನವು ನಿಶ್ಚಿತ

4 ಪುನರುತ್ಥಾನವನ್ನು ನಿಶ್ಚಿತಗೊಳಿಸುವ ಹಲವಾರು ಅಂಶಗಳಿವೆ. ಎಲ್ಲಕ್ಕಿಂತಲೂ ಮಿಗಿಲಾದ ಅಂಶವೇನೆಂದರೆ ಅದು ಯೆಹೋವನ ಉದ್ದೇಶದ ನೆರವೇರಿಕೆಗೆ ಅತ್ಯಾವಶ್ಯಕವಾಗಿದೆ. ಸೈತಾನನು ಮಾನವಕುಲವನ್ನು ಪಾಪಕ್ಕೆ ಮತ್ತು ಅದರ ಅನಿವಾರ್ಯ ಫಲಿತಾಂಶವಾದ ಮರಣಕ್ಕೆ ನಡಿಸಿದನೆಂಬುದನ್ನು ನೆನಪಿಸಿಕೊಳ್ಳಿ. ಈ ಕಾರಣದಿಂದಲೇ ಯೇಸು ಸೈತಾನನ ಬಗ್ಗೆ ಹೇಳಿದ್ದು: ‘ಅವನು ಆದಿಯಿಂದಲೂ ಕೊಲೆಗಾರನಾಗಿದ್ದನು.’ (ಯೋಹಾನ 8:44) ಹೀಗಿದ್ದರೂ ಯೆಹೋವನು ಮಾತುಕೊಟ್ಟದ್ದೇನೆಂದರೆ, ತನ್ನ “ಸ್ತ್ರೀ” ಅಂದರೆ ಸ್ವರ್ಗದಲ್ಲಿನ ಪತ್ನಿಸದೃಶ ಸಂಘಟನೆಯು ಒಂದು ‘ಸಂತತಿ’ಯನ್ನು ಫಲಿಸುವುದು ಮತ್ತು ಇದು ಆ ‘ಪುರಾತನ ಸರ್ಪದ’ ತಲೆಯನ್ನು ಜಜ್ಜುತ್ತಾ ಅದನ್ನು ಸಂಪೂರ್ಣವಾಗಿ ನಿರ್ನಾಮಮಾಡುವುದು. (ಆದಿಕಾಂಡ 3:​1-6, 15; ಪ್ರಕಟನೆ 12:​9, 10; 20:10) ಮೆಸ್ಸೀಯ ಸಂಬಂಧಿತ ಸಂತತಿಯ ಕುರಿತಾದ ತನ್ನ ಉದ್ದೇಶವನ್ನು ಯೆಹೋವನು ಹಂತಹಂತವಾಗಿ ಪ್ರಕಟಪಡಿಸಲಾರಂಭಿಸಿದಾಗ, ಆ ಸಂತತಿಯು ಸೈತಾನನನ್ನು ನಾಶಮಾಡುವುದಲ್ಲದೆ ಹೆಚ್ಚಿನದ್ದನ್ನು ಮಾಡಲಿದೆಯೆಂಬುದು ಸ್ಪಷ್ಟವಾಗತೊಡಗಿತು. ದೇವರ ವಾಕ್ಯವು ಹೇಳುವುದು: “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.” (1 ಯೋಹಾನ 3:8) ಆದಾಮನಿಂದ ನಾವು ವಂಶಾನುಗತವಾಗಿ ಪಡೆದಿರುವ ಪಾಪದಿಂದಾಗಿ ಬರುವ ಮರಣವು ಸೈತಾನನ ಕೆಲಸಗಳಲ್ಲಿ ಪ್ರಧಾನವಾದದ್ದು. ಇದನ್ನು ಯೇಸು ಕ್ರಿಸ್ತನ ಮೂಲಕ ಲಯಮಾಡುವುದು ಇಲ್ಲವೇ ಹಾಳಾಗಿಸುವುದು ಯೆಹೋವನ ಉದ್ದೇಶವಾಗಿದೆ. ಇದಕ್ಕಾಗಿಯೇ ಯೇಸುವಿನ ವಿಮೋಚನಾ ಮೌಲ್ಯದ ಯಜ್ಞ ಹಾಗೂ ಪುನರುತ್ಥಾನವು ಅತಿ ಪ್ರಾಮುಖ್ಯವಾದದ್ದಾಗಿದೆ.​—⁠ಅ. ಕೃತ್ಯಗಳು 2:​22-24; ರೋಮಾಪುರ 6:⁠23.

5ಯೆಹೋವನು ತನ್ನ ಪವಿತ್ರ ನಾಮವನ್ನು ಮಹಿಮೆಪಡಿಸಲು ದೃಢನಿಶ್ಚಯದಿಂದಿದ್ದಾನೆ. ಸೈತಾನನು ದೇವರ ಹೆಸರಿಗೆ ಮಸಿ ಬಳಿದಿದ್ದಾನೆ ಮತ್ತು ಆತನ ಬಗ್ಗೆ ಸುಳ್ಳುಗಳನ್ನು ಹುಟ್ಟಿಸಿಹೇಳಿದ್ದಾನೆ. ದೇವರು ನಿಷೇಧಿಸಿದ ಹಣ್ಣನ್ನು ಆದಾಮಹವ್ವರು ತಿಂದಲ್ಲಿ, ಅವರು “ಹೇಗೂ ಸಾಯುವುದಿಲ್ಲ” ಎಂದು ಸೈತಾನನು ಸುಳ್ಳುಹೇಳಿದನು. (ಆದಿಕಾಂಡ 2:​16, 17; 3:⁠4) ಅಲ್ಲಿಂದಾರಂಭಿಸಿ ಅವನು ಅದಕ್ಕೆ ಹೋಲುವಂಥ ಸುಳ್ಳುಗಳನ್ನು ಹುಟ್ಟಿಸಿಹೇಳಿದ್ದಾನೆ. ಇದಕ್ಕೊಂದು ಉದಾಹರಣೆ, ಸತ್ತನಂತರವೂ ಅಮರವಾದ ಆತ್ಮವು ಬದುಕಿ ಉಳಿಯುತ್ತದೆಂಬ ಸುಳ್ಳು ಬೋಧನೆಯಾಗಿದೆ. ಆದರೆ ಪುನರುತ್ಥಾನದ ಮೂಲಕ, ಯೆಹೋವನು ಅಂಥ ಎಲ್ಲ ಸುಳ್ಳುಗಳನ್ನು ಬಯಲಿಗೆಳೆಯುವನು. ತಾನೊಬ್ಬನೇ ಜೀವದ ಸಂರಕ್ಷಕನು ಮತ್ತು ಪುನಸ್ಸ್ಥಾಪಕನು ಆಗಿದ್ದೇನೆಂದು ಆತನು ಸದಾಕಾಲಕ್ಕೂ ರುಜುಪಡಿಸುವನು.

6ಯೆಹೋವನು ಪುನರುತ್ಥಾನವನ್ನು ನಡೆಸಲು ಹಂಬಲಿಸುತ್ತಾನೆ. ಇದರ ಬಗ್ಗೆ ಯೆಹೋವನ ಭಾವನೆಗಳನ್ನು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ದೃಷ್ಟಾಂತಕ್ಕಾಗಿ, ನಂಬಿಗಸ್ತ ಪುರುಷನಾದ ಯೋಬನ ಈ ಪ್ರೇರಿತ ಮಾತುಗಳನ್ನು ಪರಿಗಣಿಸಿರಿ: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? ಹಾಗಾಗುವದಾದರೆ ನನಗೆ ಬಿಡುಗಡೆಯಾಗುವವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು; ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:14, 15) ಈ ಮಾತುಗಳ ಅರ್ಥವೇನು?

7 ಯೋಬನಿಗೆ, ತಾನು ಸತ್ತಬಳಿಕ ಮರಣದ ನಿದ್ರಾವಸ್ಥೆಯಲ್ಲಿ ಕೆಲಕಾಲ ಕಾಯಬೇಕಾಗುವುದೆಂದು ತಿಳಿದಿತ್ತು. ಆ ಸಮಯವನ್ನು ಆತನು “ವಾಯಿದೆಯ ದಿನ”ಗಳು ಅಂದರೆ ಬಿಡುಗಡೆಗಾಗಿ ಕಾಯುತ್ತ ಇರಬೇಕಾದ ಒಂದು ಸಮಯಾವಧಿಯಾಗಿ ಪರಿಗಣಿಸಿದನು. ಆ ಬಿಡುಗಡೆಯು ನಿಶ್ಚಿತ ಮತ್ತು ಅದು ಖಂಡಿತ ಬರುವುದೆಂದು ಅವನು ಗ್ರಹಿಸಿದ್ದನು. ಏಕೆ? ಏಕೆಂದರೆ ಯೆಹೋವನ ಭಾವನೆಗಳ ಬಗ್ಗೆ ಅವನಿಗೆ ತಿಳಿದಿತ್ತು. ಯೆಹೋವನಿಗೆ, ತನ್ನ ನಂಬಿಗಸ್ತ ಸೇವಕನನ್ನು ಪುನಃ ನೋಡುವ “ಹಂಬಲಿಕೆ” ಇತ್ತು. ಹೌದು, ನೀತಿವಂತರಾಗಿರುವ ಎಲ್ಲ ವ್ಯಕ್ತಿಗಳನ್ನು ಪುನಃ ಜೀವಕ್ಕೆ ಎಬ್ಬಿಸಲು ದೇವರು ಹಾತೊರೆಯುತ್ತಾನೆ. ಭೂಪರದೈಸಿನಲ್ಲಿ ಸದಾಕಾಲ ಜೀವಿಸುವ ಅವಕಾಶವನ್ನು ಯೆಹೋವನು ಇತರರಿಗೂ ಕೊಡುವನು. (ಲೂಕ 23:43; ಯೋಹಾನ 5:​28, 29) ಈ ಉದ್ದೇಶವನ್ನು ನೆರವೇರಿಸುವುದು ದೇವರ ಚಿತ್ತವಾಗಿರುವುದರಿಂದ, ಆತನನ್ನು ಯಾರು ತಡೆಯಶಕ್ತರು?

8ಯೇಸುವಿನ ಪುನರುತ್ಥಾನವು ಭವಿಷ್ಯಕ್ಕಾಗಿರುವ ನಮ್ಮ ನಿರೀಕ್ಷೆಗೆ ಖಾತರಿಯಾಗಿದೆ. ಪೌಲನು ಅಥೇನೆಯಲ್ಲಿ ಒಂದು ಭಾಷಣವನ್ನು ಕೊಡುತ್ತಿದ್ದಾಗ ಘೋಷಿಸಿದ್ದು: “ಆತನು [ದೇವರು] ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ.” (ಅ. ಕೃತ್ಯಗಳು 17:31) ಪೌಲನಿಗೆ ಕಿವಿಗೊಡುತ್ತಿದ್ದವರಲ್ಲಿ ಕೆಲವರು ಪುನರುತ್ಥಾನದ ಬಗ್ಗೆ ಕೇಳಿ ಪರಿಹಾಸ್ಯಮಾಡಿದರು. ಆದರೆ ಕೆಲವು ವ್ಯಕ್ತಿಗಳು ವಿಶ್ವಾಸಿಗಳಾದರು. ಈ ನಿರೀಕ್ಷೆಗೆ ಆಧಾರ ಅಥವಾ ಖಾತರಿಯಿದೆ ಎಂಬ ವಿಚಾರವು ಅವರ ಗಮನ ಸೆಳೆದಿರಬಹುದು. ಯೆಹೋವನು ಯೇಸುವಿನ ಪುನರುತ್ಥಾನಮಾಡಿದಾಗ ಅತ್ಯಂತ ಮಹಾನ್‌ ಅದ್ಭುತವನ್ನು ನಡಿಸಿದ್ದನು. ಆತನು ತನ್ನ ಪುತ್ರನನ್ನು ಒಬ್ಬ ಬಲಿಷ್ಠ ಆತ್ಮಜೀವಿಯಾಗಿ ಎಬ್ಬಿಸಿದನು. (1 ಪೇತ್ರ 3:18) ಪುನರುತ್ಥಾನಹೊಂದಿದ್ದ ಯೇಸು, ತನ್ನ ಮಾನವಪೂರ್ವ ಅಸ್ತಿತ್ವದಲ್ಲಿದ್ದುದ್ದಕ್ಕಿಂತಲೂ ಹೆಚ್ಚು ಶ್ರೇಷ್ಠಜೀವಿಯಾದನು. ಪುನರುತ್ಥಾನದ ಬಳಿಕ ಅವನು ಅಮರತ್ವ ಹೊಂದಿದನು ಮತ್ತು ಯೆಹೋವನ ಬಳಿಕ ಎರಡನೇ ಸ್ಥಾನದಲ್ಲಿರುವವನಾದನು. ಈಗ ಅವನು ತನ್ನ ತಂದೆಯಿಂದ ಅದ್ಭುತವಾದ ನೇಮಕಗಳನ್ನು ಸ್ವೀಕರಿಸುವುದಕ್ಕೆ ಶಕ್ತನಾಗಿದ್ದನು. ಅಂದಿನಿಂದ ಸ್ವರ್ಗದ ಜೀವನಕ್ಕಾಗಲಿ, ಭೂಮಿಯ ಮೇಲಿನ ಜೀವನಕ್ಕಾಗಲಿ ಆಗಲಿದ್ದ ಬೇರೆಲ್ಲ ಪುನರುತ್ಥಾನಗಳನ್ನು ನಡೆಸಲಿಕ್ಕಾಗಿ ಯೆಹೋವನು ಬಳಸುವ ಮಾಧ್ಯಮವು ಯೇಸು ಆಗಿದ್ದಾನೆ. ಯೇಸು ತಾನೇ ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ.” (ಯೋಹಾನ 5:25; 11:25) ತನ್ನ ಪುತ್ರನನ್ನು ಪುನರುತ್ಥಾನಮಾಡುವ ಮೂಲಕ ಯೆಹೋವನು ಎಲ್ಲ ನಂಬಿಗಸ್ತರಿಗಾಗಿ ಅಂಥ ನಿರೀಕ್ಷೆಯ ಖಾತರಿಕೊಡುತ್ತಾನೆ.

9ಪುನರುತ್ಥಾನಗಳನ್ನು ಪ್ರತ್ಯಕ್ಷಸಾಕ್ಷಿಗಳ ಮುಂದೆ ನಡೆಸಲಾಗಿದೆ ಮತ್ತು ದೇವರ ವಾಕ್ಯದಲ್ಲಿ ದಾಖಲಿಸಲಾಗಿದೆ. ಬೈಬಲ್‌ ದಾಖಲೆಯಲ್ಲಿ, ಭೂಮಿಯ ಮೇಲೆ ಮಾನವರಾಗಿಯೇ ಜೀವಕ್ಕೆ ಎಬ್ಬಿಸಲ್ಪಟ್ಟ ಎಂಟು ಮಂದಿಯ ಪುನರುತ್ಥಾನಗಳ ಸವಿವರವಾದ ವರ್ಣನೆಗಳಿವೆ. ಈ ಅದ್ಭುತಗಳನ್ನು ಗುಟ್ಟಾಗಿ ಅಲ್ಲ ಬದಲಾಗಿ ಬಹಿರಂಗವಾಗಿ, ಅನೇಕವೇಳೆ ಪ್ರತ್ಯಕ್ಷಸಾಕ್ಷಿಗಳ ಮುಂದೆ ನಡೆಸಲಾಯಿತು. ಸತ್ತು ನಾಲ್ಕು ದಿನಗಳಾಗಿದ್ದ ಲಾಜರನ ಉದಾಹರಣೆ ತೆಗೆದುಕೊಳ್ಳಿ. ಶೋಕಿಸುವವರ ಒಂದು ಸಮೂಹದ ಮುಂದೆ ಯೇಸು ಅವನ ಪುನರುತ್ಥಾನಮಾಡಿದನು. ಆ ಜನಸಮೂಹದಲ್ಲಿ ಲಾಜರನ ಕುಟುಂಬದವರು, ಸ್ನೇಹಿತರು ಮತ್ತು ನೆರೆಯವರು ಇದ್ದಿರಬಹುದು. ಯೇಸು ದೇವರಿಂದ ಕಳುಹಿಸಲ್ಪಟ್ಟವನೆಂಬುದನ್ನು ತೋರಿಸಿದ ಈ ಪುರಾವೆಯು ಎಷ್ಟು ಪ್ರಬಲವಾಗಿತ್ತೆಂದರೆ ಯೇಸುವಿನ ಧಾರ್ಮಿಕ ಶತ್ರುಗಳು ಸಹ ಅದನ್ನು ಅಲ್ಲಗಳೆಯಲಿಲ್ಲ. ಅದರ ಬದಲಿಗೆ, ಅವರು ಯೇಸುವನ್ನು ಮಾತ್ರವಲ್ಲ ಜೊತೆಯಲ್ಲಿ ಲಾಜರನನ್ನೂ ಕೊಂದುಹಾಕುವ ಸಂಚು ನಡೆಸಿದರು! (ಯೋಹಾನ 11:​17-44, 53; 12:​9-11) ಹೌದು, ಪುನರುತ್ಥಾನವು ನಿಶ್ಚಿತವೆಂಬ ದೃಢಭರವಸೆ ನಮಗಿರಬಲ್ಲದು. ನಾವು ಸಾಂತ್ವನ ಪಡೆದುಕೊಂಡು, ನಮ್ಮ ನಂಬಿಕೆಯನ್ನು ಕಟ್ಟಲಿಕ್ಕೋಸ್ಕರವೇ, ಗತಕಾಲದಲ್ಲಿ ನಡೆದಿರುವ ಪುನರುತ್ಥಾನಗಳ ದಾಖಲೆಯನ್ನು ದೇವರು ನಮಗೆ ಕೊಟ್ಟಿದ್ದಾನೆ.

ಪುನರುತ್ಥಾನದ ನಿರೀಕ್ಷೆಯಿಂದ ಸಾಂತ್ವನ ಪಡೆಯುವುದು

10 ಒಂದು ಮರಣವು ಸಂಭವಿಸಿರುವಾಗ ನೀವು ಸಾಂತ್ವನಕ್ಕಾಗಿ ಹಾತೊರೆಯುತ್ತೀರೋ? ಬೈಬಲಿನ ಪುನರುತ್ಥಾನದ ವೃತ್ತಾಂತಗಳು ಸಾಂತ್ವನದ ನಿಶ್ಚಿತ ಮೂಲಗಳಾಗಿವೆ. ಅಂಥ ವೃತ್ತಾಂತಗಳನ್ನು ಓದುವುದರಿಂದ, ಅವುಗಳ ಬಗ್ಗೆ ಧ್ಯಾನಿಸುವುದರಿಂದ ಮತ್ತು ಆ ಘಟನೆಗಳನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವುದರಿಂದ ಪುನರುತ್ಥಾನದ ನಿರೀಕ್ಷೆಯು ನಿಮಗೆ ಹೆಚ್ಚು ನೈಜವಾಗುವುದು. (ರೋಮಾಪುರ 15:⁠4) ಇವು ಬರೀ ಕಥೆಗಳಲ್ಲ. ಅವು ನಮ್ಮಂತೆಯೇ, ನಿರ್ದಿಷ್ಟ ಸಮಯದಲ್ಲಿ ಮತ್ತು ನಿರ್ದಿಷ್ಟ ಸ್ಥಳದಲ್ಲಿ ವಾಸಿಸಿದಂಥ ನೈಜ ವ್ಯಕ್ತಿಗಳಿಗೆ ಸಂಭವಿಸಿದವು. ನಾವೀಗ ಕೇವಲ ಒಂದು ಉದಾಹರಣೆಯ ಮೇಲೆ ಸ್ವಲ್ಪ ಹೊತ್ತು ಗಮನವನ್ನು ಕೇಂದ್ರೀಕರಿಸೋಣ. ಇದು ಬೈಬಲ್‌ ದಾಖಲೆಯಲ್ಲಿ ಮೊದಲನೆಯ ಪುನರುತ್ಥಾನವಾಗಿದೆ.

11 ಈ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಪ್ರವಾದಿ ಎಲೀಯನು ಕೆಲವು ವಾರಗಳಿಂದ ಚಾರೆಪ್ತದ ವಿಧವೆಯೊಬ್ಬಳ ಮನೆಯಲ್ಲಿ ಅತಿಥಿಯಾಗಿದ್ದಾನೆ. ಅವನು ಅವಳ ಮನೆಯ ಮಹಡಿ ಕೋಣೆಯಲ್ಲಿ ತಂಗಿದ್ದಾನೆ. ಆ ಕಾಲವು ಕರಾಳವಾಗಿದೆ. ಏಕೆಂದರೆ ಆ ಪ್ರದೇಶವು ಕ್ಷಾಮದಿಂದ ಜರ್ಜರಿತವಾಗಿದೆ. ಅನೇಕರು ಸಾಯುತ್ತಿದ್ದಾರೆ. ಹೀಗಿರುವಾಗ, ಆ ವಿಧವೆ ಮತ್ತವಳ ಎಳೆಯ ಮಗನು ಹೊಟ್ಟೆಗಿಲ್ಲದೆ ಇರುವ ಸ್ಥಿತಿಯನ್ನು ತಲಪಿದ್ದರು. ಅವರ ಬಳಿ ಒಂದು ಹೊತ್ತಿಗೆ ಬೇಕಾದಷ್ಟು ಆಹಾರ ಮಾತ್ರ ಉಳಿದಿತ್ತು. ಆಗ, ಅವಳ ಬಳಿಯಿದ್ದ ಗೋಧಿಹಿಟ್ಟು ಮತ್ತು ಎಣ್ಣೆಯ ಸರಬರಾಜು ಮುಂದುವರಿಯುತ್ತಾ ಹೋಗುವಂತೆ ಅದ್ಭುತನಡೆಸುವ ಶಕ್ತಿಯನ್ನು ದೇವರು ಎಲೀಯನಿಗೆ ಕೊಟ್ಟನು. ಹೀಗೆ ಈ ನಮ್ರ ವಿಧವೆಯ ನಂಬಿಕೆಗೆ ಪ್ರತಿಫಲಕೊಡಲಿಕ್ಕಾಗಿ ಯೆಹೋವನು ದೀರ್ಘಾವಧಿಯ ವರೆಗೆ ಮುಂದುವರಿದ ಈ ಅದ್ಭುತವನ್ನು ನಡೆಸಲು ಎಲೀಯನನ್ನು ಬಳಸಿದನು. ಆದರೆ ಸ್ವಲ್ಪದರಲ್ಲೇ ಆ ವಿಧವೆಗೆ ಒಂದು ದುರಂತವೆರಗುತ್ತದೆ. ಅವಳ ಮಗ ಇದ್ದಕ್ಕಿದ್ದ ಹಾಗೆ ಅಸ್ವಸ್ಥನಾಗುತ್ತಾನೆ ಮತ್ತು ಸ್ವಲ್ಪ ಸಮಯದೊಳಗೇ ಅವನ ಶ್ವಾಸ ನಿಂತುಹೋಗುತ್ತದೆ. ಆ ವಿಧವೆಯು ಎಷ್ಟು ಛಿದ್ರಗೊಂಡಿರುತ್ತಾಳೆ! ಗಂಡನ ಬಲ ಹಾಗೂ ಆಸರೆ ಇಲ್ಲದೆ ಜೀವಿಸುವುದೇ ದುಸ್ತರವಾಗಿದ್ದ ಆಕೆಗೆ, ಈಗ ತನ್ನ ಏಕಮಾತ್ರ ಸಂತಾನದ ನಷ್ಟವನ್ನೂ ಅನುಭವಿಸಬೇಕಾಗುತ್ತದೆ. ಈ ದುಃಖದಿಂದ ಅವಳು ಎಲೀಯ ಹಾಗೂ ಅವನ ದೇವರಾದ ಯೆಹೋವನನ್ನು ಸಹ ದೂಷಿಸುತ್ತಾಳೆ! ಈಗ ಪ್ರವಾದಿ ಏನು ಮಾಡುವನು?

12 ಆ ವಿಧವೆ ಮಾಡಿರುವ ಸುಳ್ಳಾರೋಪಕ್ಕಾಗಿ ಅವನು ಅವಳನ್ನು ಗದರಿಸುವುದಿಲ್ಲ. ಬದಲಿಗೆ ಅವನು ಹೇಳುವುದು: “ನಿನ್ನ ಮಗನನ್ನು ನನಗೆ ಕೊಡು.” ಎಲೀಯನು ಆ ಮೃತ ಮಗನನ್ನು ಮಹಡಿ ಮೇಲಿನ ತನ್ನ ಕೋಣೆಗೊಯ್ದು, ಅವನ ಜೀವವು ಪುನಃ ಹಿಂದಿರುಗಿ ಬರುವಂತೆ ಪದೇಪದೇ ಪ್ರಾರ್ಥಿಸುತ್ತಾನೆ. ಕೊನೆಗೆ, ಯೆಹೋವನು ಕಾರ್ಯಪ್ರವೃತ್ತನಾಗುತ್ತಾನೆ! ಆ ಹುಡುಗನು ಉಸಿರಾಡಲಾರಂಭಿಸಿ, ಅವನ ಎದೆ ಉಬ್ಬಿಕೊಳ್ಳುವುದನ್ನು ನೋಡುವಾಗ ಎಲೀಯನ ಮುಖದ ಮೇಲೆ ಹರಡುತ್ತಿರುವ ಆನಂದವನ್ನು ಸ್ವಲ್ಪ ಊಹಿಸಿ! ಮಗುವಿನ ಕಣ್‌ರೆಪ್ಪೆಗಳು ತೆರೆಯುತ್ತವೆ ಮತ್ತವನ ಕಣ್ಣುಗಳಲ್ಲಿ ಜೀವಕಳೆ ಹೊಳೆಯುತ್ತದೆ. ಆ ಹುಡುಗನನ್ನು ಅವನ ತಾಯಿಯ ಬಳಿ ತಂದು “ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ” ಎಂದು ಹೇಳುತ್ತಾನೆ. ಈಗ ಅವಳ ಆನಂದಕ್ಕೆ ಪಾರವೇ ಇಲ್ಲ. “ನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದು ಈಗ ನನಗೆ ಗೊತ್ತಾಯಿತು” ಎಂದು ಅವಳನ್ನುತ್ತಾಳೆ. (1 ಅರಸುಗಳು 17:8-24) ಯೆಹೋವನಲ್ಲಿ ಮತ್ತು ಆತನ ಪ್ರತಿನಿಧಿಯಲ್ಲಿ ಅವಳಿಗಿದ್ದ ನಂಬಿಕೆಯು ಈಗ ಹಿಂದಿಗಿಂತಲೂ ಹೆಚ್ಚು ಬಲವಾಗುತ್ತದೆ.

13 ಅಂಥದ್ದೊಂದು ವೃತ್ತಾಂತದ ಕುರಿತಾಗಿ ಧ್ಯಾನಿಸುವುದು ನಿಶ್ಚಯವಾಗಿ ನಿಮಗೆ ತುಂಬ ಸಾಂತ್ವನ ತರುವುದು. ಯೆಹೋವನು ನಮ್ಮ ಶತ್ರುವಾದ ಮರಣವನ್ನು ಸೋಲಿಸಶಕ್ತನೆಂಬುದು ಎಷ್ಟು ನಿಚ್ಚಳವಾಗಿ ತೋರಿಬರುತ್ತದೆ! ಸ್ವಲ್ಪ ಯೋಚಿಸಿ ನೋಡಿ: ಸತ್ತುಹೋಗಿರುವವರೆಲ್ಲರ ಪುನರುತ್ಥಾನವಾಗುವಾಗ ಸಾವಿರಾರು ಜನರು ಆ ವಿಧವೆಗಾದಂಥದ್ದೇ ಆನಂದವನ್ನು ಅನುಭವಿಸಲಿದ್ದಾರೆ! ಭೌಗೋಲಿಕವಾಗಿ ಪುನರುತ್ಥಾನಗಳನ್ನು ನಡೆಸುವಂತೆ ತನ್ನ ಪುತ್ರನನ್ನು ನಿರ್ದೇಶಿಸಲು ಯೆಹೋವನು ಹರ್ಷಿಸುವುದರಿಂದ ಪರಲೋಕದಲ್ಲೂ ಮಹಾ ಹರ್ಷವು ಇರುವುದು. (ಯೋಹಾನ 5:​28, 29) ಮರಣವು, ನಿಮಗೆ ಪ್ರಿಯರಾಗಿದ್ದ ಒಬ್ಬರನ್ನು ಕಸಿದುಕೊಂಡಿದೆಯೋ? ಹಾಗಿರುವಲ್ಲಿ, ದೇವರು ಸತ್ತವರನ್ನು ಸಹ ಜೀವಕ್ಕೆ ಎಬ್ಬಿಸಶಕ್ತನು ಮತ್ತು ಖಂಡಿತ ಎಬ್ಬಿಸುವನು ಎಂಬುದನ್ನು ತಿಳಿಯುವುದು ಎಷ್ಟು ಅದ್ಭುತವಾದ ಸಂಗತಿ!

ನಿಮ್ಮ ನಿರೀಕ್ಷೆ ಹಾಗೂ ನಿಮ್ಮ ಈಗಿನ ಜೀವನ

14 ಪುನರುತ್ಥಾನದ ನಿರೀಕ್ಷೆಯು ನೀವು ಈಗ ಜೀವಿಸುತ್ತಿರುವ ರೀತಿಯನ್ನು ಹೇಗೆ ಬಾಧಿಸಬಲ್ಲದು? ಕಷ್ಟಗಳು, ಸಮಸ್ಯೆಗಳು, ಹಿಂಸೆ ಇಲ್ಲವೇ ಅಪಾಯವನ್ನು ಎದುರಿಸುವಾಗ ನೀವು ಈ ನಿರೀಕ್ಷೆಯಿಂದ ಸಾಂತ್ವನ ಪಡೆಯಬಲ್ಲಿರಿ. ನೀವು ಮರಣಕ್ಕೆ ಎಷ್ಟು ಹೆದರಬೇಕೆಂದರೆ, ನಿಮ್ಮ ಜೀವ ಉಳಿಸಲಿಕ್ಕೋಸ್ಕರ ನಿಮ್ಮ ಸಮಗ್ರತೆಯನ್ನು ಸಹ ಬಿಟ್ಟುಬಿಡಲು ಸಿದ್ಧರಿರಬೇಕೆಂದು ಸೈತಾನನು ಬಯಸುತ್ತಾನೆ. “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಅವನು ಯೆಹೋವನಿಗೆ ಹೇಳಿದ್ದಾನೆಂಬುದನ್ನು ನೆನಪಿನಲ್ಲಿಡಿರಿ. (ಯೋಬ 2:4) ಅಂಥ ಹೇಳಿಕೆಯನ್ನು ಮಾಡುವ ಮೂಲಕ ಸೈತಾನನು ನಮ್ಮೆಲ್ಲರನ್ನೂ, ನಿಮ್ಮನ್ನು ಸಹ ದೂಷಿಸಿದ್ದಾನೆ. ಅವನಂದಿರುವಂತೆ, ಅಪಾಯ ಬಂದಾಗ ನೀವು ದೇವರನ್ನು ಸೇವಿಸುವುದನ್ನು ನಿಲ್ಲಿಸುವಿರೆಂಬುದು ನಿಜವೋ? ಪುನರುತ್ಥಾನದ ನಿರೀಕ್ಷೆಯ ಕುರಿತಾಗಿ ಗಾಢವಾಗಿ ಯೋಚಿಸುವ ಮೂಲಕ, ನಿಮ್ಮ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡುತ್ತಾ ಇರುವ ನಿಮ್ಮ ದೃಢಸಂಕಲ್ಪವನ್ನು ಸ್ಥಿರಗೊಳಿಸಬಲ್ಲಿರಿ.

15 ಯೇಸು ಹೇಳಿದ್ದು: “ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.” (ಮತ್ತಾಯ 10:28) ನಾವು ಸೈತಾನನಿಗಾಗಲಿ ಅವನ ಮಾನವ ಕಾರ್ಯಕರ್ತರಿಗಾಗಲಿ ಹೆದರಬೇಕಾಗಿಲ್ಲ. ಕೆಲವರಿಗೆ ನಮಗೆ ಹಾನಿಮಾಡುವ, ಬಹುಶಃ ನಮ್ಮನ್ನು ಸಾಯಿಸುವ ಶಕ್ತಿಯೂ ಇರಬಹುದು ನಿಜ. ಆದರೆ ಅವರು ಮಾಡಬಹುದಾದ ಅತಿ ಹೆಚ್ಚಿನ ಕೆಡುಕು ಸಹ ಕೇವಲ ತಾತ್ಕಾಲಿಕವಾದದ್ದು. ಯೆಹೋವನ ನಂಬಿಗಸ್ತ ಸೇವಕರಿಗೆ ಮಾಡಲಾಗುವ ಯಾವುದೇ ಹಾನಿಯನ್ನು ಆತನು ತೊಡೆದುಹಾಕಲು ಶಕ್ತನು ಮಾತ್ರವಲ್ಲ, ಅದನ್ನು ಖಂಡಿತವಾಗಿ ತೊಡೆದುಹಾಕುವನು. ಆತನು ಅವರ ಪುನರುತ್ಥಾನವನ್ನೂ ಮಾಡುವನು. ಯೆಹೋವನೊಬ್ಬನೇ ನಮ್ಮ ಭಯ, ನಮ್ಮ ಗಾಢವಾದ ಪೂಜ್ಯಭಕ್ತಿ ಹಾಗೂ ಗೌರವಕ್ಕೆ ಯೋಗ್ಯನಾಗಿದ್ದಾನೆ. ಆತನೊಬ್ಬನಿಗೆ ಮಾತ್ರ, ಗೆಹೆನ್ನದಲ್ಲಿ ಆತ್ಮವನ್ನೂ ದೇಹವನ್ನೂ ನಾಶಗೊಳಿಸುವ ಅಂದರೆ ನಮ್ಮ ಭಾವೀ ಜೀವನದ ಎಲ್ಲ ಪ್ರತೀಕ್ಷೆಗಳನ್ನು ತೆಗೆದುಹಾಕುವ ಶಕ್ತಿಯಿದೆ. ಆದರೆ ಇದು ನಿಮಗಾಗಬೇಕೆಂದು ಯೆಹೋವನು ಬಯಸುವುದಿಲ್ಲ ಎಂಬುದು ಸಂತೋಷದ ಸಂಗತಿ. (2 ಪೇತ್ರ 3:⁠9) ಪುನರುತ್ಥಾನದ ನಿರೀಕ್ಷೆಯ ಕಾರಣ, ದೇವರ ಸೇವಕರಾಗಿ ನಾವು ಸುರಕ್ಷಿತರಾಗಿರುವೆವು ಎಂಬ ಖಾತ್ರಿ ನಮಗೆ ಸದಾ ಇರಬಲ್ಲದು. ನಾವು ಎಷ್ಟರ ವರೆಗೆ ನಂಬಿಗಸ್ತರಾಗಿ ಉಳಿಯುತ್ತೇವೋ ಅಷ್ಟರ ವರೆಗೆ ನಮ್ಮ ಮುಂದೆ ನಿತ್ಯಜೀವ ಇರುತ್ತದೆ. ಸೈತಾನನಾಗಲಿ ಅವನ ಬಂಟರಾಗಲಿ ಇದಕ್ಕೆ ಯಾವುದೇ ಕುತ್ತು ತರಲಾರರು.​—⁠ಕೀರ್ತನೆ 118:6; ಇಬ್ರಿಯ 13:⁠6.

16 ಪುನರುತ್ಥಾನದ ನಿರೀಕ್ಷೆಯು ನಮಗೆ ನೈಜವಾಗಿರುವುದಾದರೆ, ಜೀವನದ ಕುರಿತಾದ ನಮ್ಮ ಮನೋಭಾವವನ್ನು ಅದು ರೂಪಿಸಬಲ್ಲದು. ‘ಬದುಕಿದರೂ ಸತ್ತರೂ ನಾವು ಯೆಹೋವನವರೇ’ ಎಂಬ ಅರಿವು ನಮಗಿರುತ್ತದೆ. (ರೋಮಾಪುರ 14:7, 8) ಆದುದರಿಂದ ಆದ್ಯತೆಗಳನ್ನಿಡುವಾಗ, ನಾವು ಪೌಲನ ಈ ಸಲಹೆಯನ್ನು ಅನ್ವಯಿಸುತ್ತೇವೆ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ತಮ್ಮ ಪ್ರತಿಯೊಂದೂ ಆಸೆ, ಪ್ರತಿಯೊಂದು ಮಹತ್ತ್ವಾಕಾಂಕ್ಷೆ, ಪ್ರತಿಯೊಂದು ಹಠಾತ್ತ್‌ ಬಯಕೆಯನ್ನು ತೀರಿಸಿಕೊಳ್ಳುವುದರ ಹಿಂದೆ ಅನೇಕ ಜನರು ಹುಚ್ಚುಚ್ಚಾಗಿ ಓಡುತ್ತಿದ್ದಾರೆ. ಜೀವನವು ತುಂಬ ಮೊಟಕು ಎಂದು ಅವರು ನೆನಸುವುದರಿಂದ, ಭೋಗವನ್ನು ಬೆನ್ನಟ್ಟಲಿಕ್ಕಾಗಿ ಅವರು ಬಹುಮಟ್ಟಿಗೆ ಏನನ್ನೂ ಮಾಡಲು ಸಿದ್ಧರಿರುವಂತೆ ತೋರುತ್ತದೆ. ಒಂದುವೇಳೆ ಅವರ ಬಳಿ ಯಾವುದಾದರೂ ಆರಾಧನಾ ವಿಧಾನವಿದ್ದರೂ, ಅದು ಖಂಡಿತವಾಗಿಯೂ ‘ದೇವರ ಚಿತ್ತಕ್ಕೆ’ ಹೊಂದಿಕೆಯಲ್ಲಿಲ್ಲ.

17 ಜೀವನವು ಮೊಟಕಾಗಿದೆಯೆಂಬುದು ನಿಜ. ಬಹುಶಃ 70, 80 ವರ್ಷಗಳಲ್ಲಿ “ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10) ಮಾನವರು ಹಸಿರು ಹುಲ್ಲಿನಂತೆ, ದಾಟಿಹೋಗುತ್ತಿರುವ ನೆರಳಿನಂತೆ, ಉಸಿರಿನಂತೆ ಇಂದು ಇದ್ದು, ನಾಳೆ ಇಲ್ಲದೆ ಹೋಗುತ್ತಾರೆ. (ಕೀರ್ತನೆ 103:15; 144:​3, 4) ಆದರೆ ನಾವು ಕೆಲವು ದಶಕಗಳ ವರೆಗೆ ಬೆಳೆದು, ಸ್ವಲ್ಪ ಬುದ್ಧಿ, ಅನುಭವ ಪಡೆದು, ನಂತರ ಮುಂದಿನ ಕೆಲವು ದಶಕಗಳಲ್ಲಿ ಕ್ಷಯಿಸುತ್ತಾ, ಅಸ್ವಸ್ಥತೆ ಮತ್ತು ಮರಣಾವಸ್ಥೆಯನ್ನು ತಲಪಬೇಕೆಂದು ದೇವರು ಉದ್ದೇಶಿಸಿರಲಿಲ್ಲ. ಯೆಹೋವನು ಮಾನವರನ್ನು ಸೃಷ್ಟಿಮಾಡಿದಾಗ ಅವರಲ್ಲಿ ಸದಾ ಜೀವಿಸುವ ಆಸೆಯನ್ನಿಟ್ಟನು. ಆತನು “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.” (ಪ್ರಸಂಗಿ 3:11) ದೇವರು ನಮಗೆ ಅಂಥ ಆಸೆಯನ್ನು ಕೊಟ್ಟು, ಆ ಆಸೆಯನ್ನು ತೀರಿಸಲಾಗದಂತೆ ಮಾಡುವಷ್ಟು ಕ್ರೂರಿಯೋ? ಇಲ್ಲ, “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:⁠8) ಸತ್ತಿರುವ ಜನರು ನಿತ್ಯಜೀವ ಆನಂದಿಸಲು ಶಕ್ತರಾಗುವಂತೆ ಆತನು ಪುನರುತ್ಥಾನದ ಏರ್ಪಾಡನ್ನು ಬಳಸುವನು.

18 ಪುನರುತ್ಥಾನದ ನಿರೀಕ್ಷೆಯ ಕಾರಣ ನಮಗೊಂದು ಭದ್ರ ಭವಿಷ್ಯವಿರಸಾಧ್ಯವಿದೆ. ಆದುದರಿಂದ ನಾವು ಅವಸರದಿಂದ ಈಗಲೇ ನಮಗಿರುವ ಎಲ್ಲ ಸಾಮರ್ಥ್ಯಗಳನ್ನು ಪೂರ್ಣಮಟ್ಟಿಗೆ ಬೆಳೆಸಿ ಉಪಯೋಗಿಸಬೇಕಾಗಿಲ್ಲ. ಈ ಲೋಕವನ್ನು ನಾವು ‘ಪರಿಪೂರ್ಣವಾಗಿ ಅನುಭೋಗಿಸ’ಬೇಕಾಗಿಲ್ಲ. ಅದು ತನ್ನ ಕೊನೆ ಕ್ಷಣಗಳನ್ನು ಎಣಿಸುತ್ತಿದೆ. (1 ಕೊರಿಂಥ 7:​29-31; 1 ಯೋಹಾನ 2:17) ನೈಜ ನಿರೀಕ್ಷೆಯಿಲ್ಲದವರ ಬಳಿ ಇರದ ಒಂದು ಅದ್ಭುತ ಉಡುಗೊರೆ ನಮ್ಮ ಬಳಿಯಿದೆ: ನಾವು ಯೆಹೋವ ದೇವರಿಗೆ ನಂಬಿಗಸ್ತರಾಗಿ ಉಳಿಯುವಲ್ಲಿ, ಆತನನ್ನು ನಿತ್ಯತೆಗೂ ಸ್ತುತಿಸುತ್ತಾ ಜೀವನವನ್ನು ಆನಂದಿಸುವೆವು. ಆದುದರಿಂದ, ನಾವು ದಿನನಿತ್ಯವೂ ಯೆಹೋವನನ್ನು ಸ್ತುತಿಸೋಣ. ಪುನರುತ್ಥಾನದ ನಿರೀಕ್ಷೆಯನ್ನು ನಿಶ್ಚಯವಾಗಿ ಕೈಗೂಡಿಸುವವನು ಆತನೇ! (w07 5/15)

ನೀವೇನು ಉತ್ತರಕೊಡುವಿರಿ?

• ಪುನರುತ್ಥಾನದ ಕುರಿತಾಗಿ ನಮಗೆ ಹೇಗನಿಸಬೇಕು?

• ಪುನರುತ್ಥಾನದ ನಿರೀಕ್ಷೆಯು ನಿಶ್ಚಿತವೆಂಬುದಕ್ಕೆ ಕಾರಣಗಳೇನು?

• ಪುನರುತ್ಥಾನದ ನಿರೀಕ್ಷೆಯಿಂದ ನೀವು ಹೇಗೆ ಸಾಂತ್ವನ ಪಡೆಯಬಲ್ಲಿರಿ?

• ನೀವು ಜೀವಿಸುವ ರೀತಿಯ ಮೇಲೆ ಪುನರುತ್ಥಾನದ ನಿರೀಕ್ಷೆಯು ಹೇಗೆ ಪ್ರಭಾವಬೀರಬಲ್ಲದು?

[ಅಧ್ಯಯನ ಪ್ರಶ್ನೆಗಳು]

1. ಮರಣವು ಖಚಿತವಾಗಿರುವಂತೆ ತೋರುವುದೇಕೆ?

2, 3. (ಎ) ಮರಣವು ಅನೇಕರು ನೆನಸುವಷ್ಟು ನಿಶ್ಚಿತವಾಗಿಲ್ಲವೇಕೆ? (ಬಿ) ಈ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?

4. ಪುನರುತ್ಥಾನವು ಯೆಹೋವನ ಉದ್ದೇಶದ ನೆರವೇರಿಕೆಗೆ ಅತ್ಯಾವಶ್ಯಕವಾಗಿದೆ ಹೇಗೆ?

5. ಪುನರುತ್ಥಾನವು ಯೆಹೋವನ ನಾಮವನ್ನು ಮಹಿಮೆಪಡಿಸುವುದು ಹೇಗೆ?

6, 7. ಜನರನ್ನು ಪುನರುತ್ಥಾನಮಾಡುವುದರ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ, ಮತ್ತು ಆತನ ಈ ಭಾವನೆಗಳ ಬಗ್ಗೆ ನಮಗೆ ಹೇಗೆ ತಿಳಿದಿದೆ?

8. ಭವಿಷ್ಯಕ್ಕಾಗಿರುವ ನಮ್ಮ ನಿರೀಕ್ಷೆಗೆ ಯೆಹೋವನು ಹೇಗೆ ‘ಆಧಾರವನ್ನು ಕೊಟ್ಟಿದ್ದಾನೆ?’

9. ಬೈಬಲ್‌ ದಾಖಲೆಯು ಪುನರುತ್ಥಾನದ ನೈಜತೆಯನ್ನು ಹೇಗೆ ಸ್ಥಾಪಿಸುತ್ತದೆ?

10. ಬೈಬಲಿನ ಪುನರುತ್ಥಾನ ವೃತ್ತಾಂತಗಳಿಂದ ಸಾಂತ್ವನ ಪಡೆಯುವಂತೆ ನಮಗೆ ಯಾವುದು ಸಹಾಯಮಾಡುವುದು?

11, 12. (ಎ) ಚಾರೆಪ್ತದ ವಿಧವೆಯ ಮೇಲೆ ಯಾವ ದುರಂತವೆರಗಿತು, ಮತ್ತು ಅವಳು ಆರಂಭದಲ್ಲಿ ಹೇಗೆ ಪ್ರತಿಕ್ರಿಯಿಸಿದಳು? (ಬಿ) ತನ್ನ ಪ್ರವಾದಿ ಎಲೀಯನು ಏನನ್ನು ಮಾಡುವಂತೆ ಯೆಹೋವನು ಶಕ್ತಿ ಕೊಟ್ಟನೆಂಬುದನ್ನು ವರ್ಣಿಸಿರಿ.

13. ಎಲೀಯನು ವಿಧವೆಯ ಮಗನನ್ನು ಪುನರುತ್ಥಾನಮಾಡಿರುವ ಕುರಿತಾದ ವೃತ್ತಾಂತವು ಇಂದು ನಮಗೆ ಸಾಂತ್ವನ ತರುತ್ತದೇಕೆ?

14. ಪುನರುತ್ಥಾನದ ನಿರೀಕ್ಷೆಯು ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸಬಲ್ಲದು?

15. ಮತ್ತಾಯ 10:28ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳು ನಮಗೆ ಅಪಾಯದ ಸಮಯದಲ್ಲಿ ಹೇಗೆ ಸಾಂತ್ವನ ತರಬಲ್ಲದು?

16. ಪುನರುತ್ಥಾನದ ಕುರಿತಾದ ನಮ್ಮ ದೃಷ್ಟಿಕೋನವು ನಾವಿಡುವಂಥ ಆದ್ಯತೆಗಳನ್ನು ಹೇಗೆ ಬಾಧಿಸುತ್ತದೆ?

17, 18. (ಎ) ಮಾನವ ಜೀವನವು ಮೊಟಕಾಗಿದೆಯೆಂದು ಯೆಹೋವನ ವಾಕ್ಯವು ಹೇಗೆ ಒಪ್ಪಿಕೊಳ್ಳುತ್ತದೆ, ಆದರೆ ದೇವರು ನಮಗಾಗಿ ಏನನ್ನು ಬಯಸುತ್ತಾನೆ? (ಬಿ) ನಾವು ದಿನಾಲೂ ಯೆಹೋವನನ್ನು ಸ್ತುತಿಸಲು ಪ್ರೇರಿಸಲ್ಪಡುವುದೇಕೆ?