ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಪ್ಪಿನಲ್ಲಿಯೂ ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದುವುದು

ಮುಪ್ಪಿನಲ್ಲಿಯೂ ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದುವುದು

ಮುಪ್ಪಿನಲ್ಲಿಯೂ ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದುವುದು

“ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು . . . ಮುಪ್ಪಿನಲ್ಲಿಯೂ ಫಲಿಸುವರು [ಅಭಿವೃದ್ಧಿ ಹೊಂದುತ್ತ ಹೋಗುವರು, NW].”​—⁠ಕೀರ್ತನೆ 92:​13, 14.

ಮುಪ್ಪು ಎಂದೊಡನೆ ನಿಮ್ಮ ಮನಸ್ಸಿನಲ್ಲಿ ಯಾವ ಭಾವನೆ ಮೂಡುತ್ತದೆ? ಸುಕ್ಕುಗಟ್ಟಿರುವ ಚರ್ಮವೋ? ಮಂದಕಿವಿಗಳೋ? ನಡುಗುವ ಕೈ-ಕಾಲುಗಳೋ? ಅಥವಾ ಪ್ರಸಂಗಿ 12:​1-7ರಲ್ಲಿ ಎದ್ದುಕಾಣುವಂತೆ ಚಿತ್ರಿಸಿರುವ ‘ಕಷ್ಟದ ದಿನಗಳೋ?’ ಹಾಗಿರುವಲ್ಲಿ, ಮುಪ್ಪಿನ ಕುರಿತು ಪ್ರಸಂಗಿ 12ನೆಯ ಅಧ್ಯಾಯದಲ್ಲಿ ಕಂಡುಬರುವ ವಿವರಣೆಯು ಆದಾಮನ ಪಾಪವು ಮಾನವ ಶರೀರದ ಮೇಲೆ ತಂದಿರುವ ಪರಿಣಾಮವನ್ನು ತಿಳಿಸುತ್ತದೆಯೇ ಹೊರತು ನಿರ್ಮಾಣಿಕನಾದ ಯೆಹೋವ ದೇವರು ಆದಿಯಲ್ಲಿ ಉದ್ದೇಶಿಸಿದ್ದನ್ನಲ್ಲ ಎಂದು ಮನಸ್ಸಿನಲ್ಲಿಡುವುದು ಪ್ರಾಮುಖ್ಯ.​—⁠ರೋಮಾಪುರ 5:⁠12.

2 ವಯಸ್ಸಾಗುವಿಕೆ ತಾನೇ ಒಂದು ಶಾಪವಲ್ಲ. ಒಬ್ಬನು ಬದುಕುತ್ತ ಹೋಗಬೇಕಾದರೆ ವರ್ಷಗಳ ದಾಟಿಹೋಗುವಿಕೆಯು ಅಗತ್ಯ. ವಾಸ್ತವದಲ್ಲಿ, ಎಲ್ಲ ಜೀವರಾಶಿಗಳಿಗೆ ಬೆಳವಣಿಗೆ ಮತ್ತು ಪ್ರೌಢತೆ ಅಪೇಕ್ಷಣೀಯ ಲಕ್ಷಣಗಳು. ನಾವಿಂದು ನಮ್ಮ ಸುತ್ತಮುತ್ತಲೂ ಕಾಣುವ ಪಾಪ ಮತ್ತು ಅಪೂರ್ಣತೆಯ ಆರು ಸಾವಿರ ವರುಷಗಳ ಹಾನಿಯು ಬೇಗನೆ ಹೇಳಹೆಸರಿಲ್ಲದೆ ಹೋಗುವುದು. ಆಗ ವಿಧೇಯ ಮಾನವರೆಲ್ಲರೂ ದೇವರು ಉದ್ದೇಶಿಸಿದ ಪ್ರಕಾರವೇ ವೃದ್ಧಾಪ್ಯ ಮತ್ತು ಮರಣದ ವೇದನೆಯೇ ಇಲ್ಲದ ಜೀವನದಲ್ಲಿ ಆನಂದಿಸುವರು. (ಆದಿಕಾಂಡ 1:28; ಪ್ರಕಟನೆ 21:​4, 5) ಆ ಸಮಯದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ವೃದ್ಧರು “ಎಳೆಯತನದ ದಿನ”ಗಳಿಗೆ ಹಿಂದಿರುಗುವರು ಮತ್ತು ಅವರ ದೇಹವು “ಬಾಲ್ಯಕ್ಕಿಂತಲೂ ಕೋಮಲವಾಗುವದು.” (ಯೋಬ 33:25) ಆ ತನಕ ಎಲ್ಲರೂ ಆದಾಮನಿಂದ ಬಾಧ್ಯತೆಯಾಗಿ ಬಂದ ಪಾಪಪೂರ್ಣ ಸ್ಥಿತಿಯೊಂದಿಗೆ ಹೋರಾಡಲೇಬೇಕು. ಆದರೆ ಇಂದು ಪ್ರಾಯ ಸಂದುತ್ತಾ ಬರುವ ಯೆಹೋವನ ಸೇವಕರಿಗಾದರೋ ವಿಶೇಷ ಆಶೀರ್ವಾದಗಳು ದೊರೆಯುತ್ತವೆ.

3 “ಯೆಹೋವನ ಆಲಯದಲ್ಲಿ [ಸಸಿಗಳಂತೆ] ನೆಡಲ್ಪಟ್ಟವರು . . . ಮುಪ್ಪಿನಲ್ಲಿಯೂ ಫಲಿಸುವರು [ಅಭಿವೃದ್ದಿ ಹೊಂದುತ್ತ ಹೋಗುವರು, NW]” ಎಂದು ದೇವರ ವಾಕ್ಯ ಆಶ್ವಾಸನೆ ನೀಡುತ್ತದೆ. (ಕೀರ್ತನೆ 92:​13, 14) ಇಲ್ಲಿ ಕೀರ್ತನೆಗಾರನು ಸಾಂಕೇತಿಕ ಭಾಷೆಯಲ್ಲಿ, ದೇವರ ನಂಬಿಗಸ್ತ ಸೇವಕರು ಶಾರೀರಿಕವಾಗಿ ಕ್ಷೀಣಿಸಿದರೂ ಆಧ್ಯಾತ್ಮಿಕವಾಗಿ ಪ್ರಗತಿ, ಏಳಿಗೆ ಮತ್ತು ಸಮೃದ್ಧಿಯನ್ನು ಹೊಂದುತ್ತ ಹೋಗುತ್ತಾರೆಂಬ ಮೂಲ ಸತ್ಯವನ್ನು ದಾಖಲೆ ಮಾಡಿದನು. ಬೈಬಲಿನ ಮತ್ತು ಆಧುನಿಕ ದಿನಗಳ ಅನೇಕ ಮಾದರಿಗಳು ಇದು ಸತ್ಯವೆಂದು ರುಜುಪಡಿಸುತ್ತವೆ.

ಬಿಟ್ಟುಬಿಡಲಿಲ್ಲ

4 ಒಂದನೆಯ ಶತಮಾನದಲ್ಲಿದ್ದ ಪ್ರವಾದಿನಿ ಅನ್ನಳನ್ನು ಪರಿಗಣಿಸಿರಿ. ಆಕೆ 84 ವಯಸ್ಸಿನಲ್ಲೂ “ದೇವಾಲಯವನ್ನು ಬಿಟ್ಟುಹೋಗದೆ ಉಪವಾಸವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರ ಸೇವೆಯನ್ನು ಮಾಡುತ್ತಿದ್ದಳು.” ‘ಅಸೇರನ ಕುಲಕ್ಕೆ’ ಸೇರಿದ ಅವಳ ತಂದೆ ಲೇವ್ಯನಾಗಿರಲಿಲ್ಲ. ಹಾಗಾಗಿ ಅನ್ನಳು ದೇವಾಲಯದಲ್ಲಿ ವಾಸಿಸಸಾಧ್ಯವಿರಲಿಲ್ಲ. ಆದುದರಿಂದ, ಪ್ರತಿದಿನ ದೇವಾಲಯದಲ್ಲಿ ಬೆಳಗಿನ ಸೇವಾ ಸಮಯದಿಂದ ಸಂಜೆಯ ಸೇವಾ ಸಮಯದ ತನಕ ಇರಲು ಆಕೆ ಎಷ್ಟೊಂದು ಪ್ರಯತ್ನ ಮಾಡಿದ್ದಿರಬೇಕೆಂದು ಭಾವಿಸಿರಿ! ಆದರೆ ಆಕೆಯ ದೈವಭಕ್ತಿಯ ಸಲುವಾಗಿ ಆಕೆಗೆ ಹೇರಳವಾದ ಪ್ರತಿಫಲ ಸಿಕ್ಕಿತು. ಯೋಸೇಫ ಮತ್ತು ಮರಿಯಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರಾನುಸಾರ ದೇವಾಲಯದಲ್ಲಿ ಯೆಹೋವನಿಗೆ ಸಮರ್ಪಿಸಲು ತಂದಾಗ ಅಲ್ಲಿರುವ ಸದವಕಾಶ ಅನ್ನಳಿಗೆ ಸಿಕ್ಕಿತು. ಅವಳು ಯೇಸುವನ್ನು ಕಂಡಾಕ್ಷಣ, “ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತಾಡುವವಳಾದಳು.”​—⁠ಲೂಕ 2:​22-24, 36-38; ಅರಣ್ಯಕಾಂಡ 18:​6, 7.

5 ಇಂದು ನಮ್ಮ ಮಧ್ಯೆಯಿರುವ ಅನೇಕ ಮಂದಿ ವೃದ್ಧರು ಕೂಟಗಳಿಗೆ ಕ್ರಮದ ಹಾಜರಿ, ಸತ್ಯಾರಾಧನೆಯ ಅಭ್ಯುದಯಕ್ಕಾಗಿ ಶ್ರದ್ಧಾಪೂರ್ವಕ ಪ್ರಾರ್ಥನೆ ಮತ್ತು ಸುವಾರ್ತೆ ಸಾರುವ ಉಜ್ವಲ ಅಪೇಕ್ಷೆಯಲ್ಲಿ ಅನ್ನಳಂತಿದ್ದಾರೆ. ತನ್ನ ಹೆಂಡತಿಯೊಂದಿಗೆ ಕೂಟಗಳಿಗೆ ಕ್ರಮವಾಗಿ ಹಾಜರಾಗುವ 80ರ ಪ್ರಾಯದ ಒಬ್ಬ ಸಹೋದರನು ಹೇಳಿದ್ದು: “ನಾವು ಕೂಟಗಳಿಗೆ ಹೋಗುವುದನ್ನು ರೂಢಿಸಿಕೊಂಡಿದ್ದೇವೆ. ಬೇರೆಲ್ಲಿಯೂ ಹೋಗಲು ನಮಗೆ ಮನಸ್ಸಿಲ್ಲ. ದೇವಜನರು ಎಲ್ಲಿದ್ದಾರೊ ಅಲ್ಲಿರುವುದೇ ನಮಗಿಷ್ಟ. ನಮಗೆ ಸುರಕ್ಷೆಯ ಅನಿಸಿಕೆ ಆಗುವುದು ಅಲ್ಲಿಯೇ.” ನಮಗೆಲ್ಲರಿಗೂ ಎಂಥ ಪ್ರೋತ್ಸಾಹದಾಯಕವಾದ ಮಾದರಿ!​—⁠ಇಬ್ರಿಯ 10:​24, 25.

6 “ಸತ್ಯಾರಾಧನೆಗೆ ಸಂಬಂಧಿಸಿದ ಯಾವುದೇ ಕ್ರಿಯೆಯಲ್ಲಿ ಭಾಗವಹಿಸಲು ನಾನು ಯಾವಾಗಲೂ ಸಿದ್ಧ. ಅದನ್ನು ಮಾಡುವುದೇ ನನ್ನ ಅಪೇಕ್ಷೆ.” ಇದು ಜೀನ್‌ ಎಂಬ 80ಕ್ಕೂ ಹೆಚ್ಚು ಪ್ರಾಯದ ಕ್ರೈಸ್ತ ವಿಧವೆಯ ಧ್ಯೇಯ. ಆಕೆ ಮುಂದುವರಿಸುವುದು: “ಕೆಲವೊಮ್ಮೆ ನಾನೂ ದುಃಖಿಸುತ್ತೇನೆ ನಿಶ್ಚಯ. ಆದರೆ ನಾನು ದುಃಖಿತಳಾಗಿರುವಾಗ ನನ್ನ ಸುತ್ತಲಿರುವ ಪ್ರತಿಯೊಬ್ಬರೂ ಏಕೆ ದುಃಖಿತರಾಗಬೇಕು?” ಆಕೆ ಭಕ್ತಿವರ್ಧಕ ಆಧ್ಯಾತ್ಮಿಕ ಸಾಹಚರ್ಯಕ್ಕಾಗಿ ಹೊರ ದೇಶಗಳಿಗೆ ಹೋದ ಸಂತೋಷವನ್ನು ತಿಳಿಸಿದಾಗ ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಇತ್ತೀಚಿಗೆ ಪ್ರವಾಸಕ್ಕೆ ಹೋಗಿದ್ದಾಗ ಆಕೆ ತನ್ನ ಸ್ನೇಹಿತರಿಗೆ ಹೇಳಿದ್ದು: “ನನಗೆ ಇನ್ನು ಕೋಟೆಮನೆಗಳ ದರ್ಶನ ಬೇಡ. ಕ್ಷೇತ್ರಸೇವೆಯೇ ಬೇಕು!” ಅವಳಿಗೆ ಸ್ಥಳಿಕ ಭಾಷೆ ಗೊತ್ತಿರದಿದ್ದರೂ ಬೈಬಲ್‌ ಸಂದೇಶದಲ್ಲಿ ಜನರ ಆಸಕ್ತಿಯನ್ನು ಮೂಡಿಸಲು ಶಕ್ತಳಾದಳು. ಅಷ್ಟೇ ಅಲ್ಲ, ಸಹಾಯ ಬೇಕಾಗಿದ್ದ ಒಂದು ಸಭೆಯೊಂದಿಗೆ ಅವಳು ಅನೇಕ ವರ್ಷಕಾಲ ಸೇವೆಮಾಡಿದಳು. ಇದಕ್ಕಾಗಿ ಹೊಸ ಭಾಷೆಯನ್ನು ಕಲಿಯಬೇಕಾದರೂ ಕೂಟಗಳಿಗೆ ಹೋಗಿ ಬರಲು ಒಂದೊಂದು ತಾಸು ಪ್ರಯಾಣಿಸಬೇಕಾದರೂ ಅವಳು ಹಿಂಜರಿಯಲಿಲ್ಲ.

ಮನಸ್ಸನ್ನು ಕ್ರಿಯಾಶೀಲವಾಗಿ ಇಡುವುದು

7 ಜೀವನಾನುಭವವು ಕಾಲ ದಾಟಿದಂತೆ ಹೆಚ್ಚಾಗುತ್ತದೆ. (ಯೋಬ 12:12) ಆದರೆ ಆಧ್ಯಾತ್ಮಿಕ ಬೆಳವಣಿಗೆಯೋ ವಯಸ್ಸಾದಂತೆ ತನ್ನಷ್ಟಕ್ಕೆ ತಾನೇ ಬರುವುದಿಲ್ಲ. ಆದಕಾರಣ, ದೇವರ ನಿಷ್ಠಾವಂತ ಸೇವಕರು ಹಿಂದೆ ಸಂಪಾದಿಸಿದ ಜ್ಞಾನಭಂಡಾರದ ಮೇಲೆ ಮಾತ್ರ ಹೊಂದಿಕೊಳ್ಳದೆ ವರುಷಗಳು ದಾಟಿದಷ್ಟಕ್ಕೆ ‘ಮತ್ತಷ್ಟು ಕಲಿತುಕೊಳ್ಳಲು’ ಪ್ರಯಾಸಪಡಬೇಕು. (ಜ್ಞಾನೋಕ್ತಿ 9:⁠9, ಪರಿಶುದ್ಧ ಬೈಬಲ್‌ *) ಯೆಹೋವನು ಮೋಶೆಯನ್ನು ಅಧಿಕಾರಕ್ಕೆ ನೇಮಿಸಿದಾಗ ಅವನಿಗೆ 80 ವಯಸ್ಸಾಗಿತ್ತು. (ವಿಮೋಚನಕಾಂಡ 7:⁠7) ಆಗಿನ ಕಾಲದಲ್ಲಿ ಆ ವಯಸ್ಸಿನ ತನಕ ಜೀವಿಸುವುದು ಅಸಾಮಾನ್ಯವಾಗಿತ್ತೆಂದು ತಿಳಿದುಬರುತ್ತದೆ. ಏಕೆಂದರೆ ಅವನು ಬರೆದುದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದರೆ ಎಂಭತ್ತು.” (ಕೀರ್ತನೆ 90:10) ಹಾಗಿದ್ದರೂ, ಮೋಶೆ ತಾನು ಕಲಿಯಲು ತೀರ ಮುದುಕನಾಗಿದ್ದೇನೆಂದು ಎಣಿಸಿರಲಿಲ್ಲ. ಮೋಶೆ ಅನೇಕ ದಶಕಗಳ ವರೆಗೆ ದೇವರನ್ನು ಸೇವಿಸಿದನು, ಅನೇಕ ಸದವಕಾಶಗಳಲ್ಲಿ ಆನಂದಿಸಿದನು, ಮಹತ್ತಾದ ಜವಾಬ್ದಾರಿಗಳನ್ನು ಹೊತ್ತುಕೊಂಡನು, ಆಮೇಲೆಯೂ ಅವನು ಯೆಹೋವನಲ್ಲಿ ಬೇಡಿಕೊಂಡದ್ದು: “ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು.” (ವಿಮೋಚನಕಾಂಡ 33:13) ಮೋಶೆಯು ಯೆಹೋವನೊಂದಿಗಿನ ಸಂಬಂಧದಲ್ಲಿ ಬೆಳೆಯುತ್ತ ಹೋಗಲು ಸದಾ ಅಪೇಕ್ಷಿಸಿದನು.

8 ಪ್ರವಾದಿ ದಾನಿಯೇಲನು ಪ್ರಾಯಶಃ 90ಕ್ಕೂ ಹೆಚ್ಚು ವಯಸ್ಸಿನಲ್ಲಿದ್ದರೂ ಪವಿತ್ರ ಬರಹಗಳ ವ್ಯಾಸಂಗದಲ್ಲಿ ಪೂರ್ತಿ ಮಗ್ನನಾಗಿದ್ದನು. ಬಹುಶಃ ಯಾಜಕಕಾಂಡ, ಯೆಶಾಯ, ಯೆರೆಮೀಯ, ಹೋಶೇಯ ಮತ್ತು ಆಮೋಸ ಎಂಬ “ಶಾಸ್ತ್ರಗಳ” ತನ್ನ ಅಧ್ಯಯನದಲ್ಲಿ ಅವನು ಗ್ರಹಿಸಿಕೊಂಡ ವಿಷಯಗಳು ಯೆಹೋವನಿಗೆ ಕಟ್ಟಾಸಕ್ತಿಯ ಪ್ರಾರ್ಥನೆಯನ್ನು ಮಾಡುವಂತೆ ಅವನನ್ನು ನಡೆಸಿತು. (ದಾನಿಯೇಲ 9:​1, 2) ಆ ಪ್ರಾರ್ಥನೆಗೆ, ಮೆಸ್ಸೀಯನ ಬರೋಣ ಮತ್ತು ಶುದ್ಧಾರಾಧನೆಯ ಭವಿಷ್ಯತ್ತಿನ ಕುರಿತ ಪ್ರೇರಿತ ಮಾಹಿತಿಯಿರುವ ಉತ್ತರ ದೊರೆಯಿತು.​—⁠ದಾನಿಯೇಲ 9:​20-27.

9 ಮೋಶೆ ಮತ್ತು ದಾನಿಯೇಲರಂತೆ ನಾವು ಸಹ ಸಾಧ್ಯವಿರುವಷ್ಟು ಕಾಲ ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತ ನಮ್ಮ ಮನಸ್ಸನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಬಲ್ಲೆವು. ಅನೇಕರು ಇದನ್ನೇ ಮಾಡುತ್ತ ಇದ್ದಾರೆ. 80ರ ಹರೆಯದ ವರ್ತ್‌ ಎಂಬ ಕ್ರೈಸ್ತ ಹಿರಿಯನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೊಡುತ್ತಿರುವ ಆಧ್ಯಾತ್ಮಿಕ ಮಾಹಿತಿಯೊಂದಿಗೆ ಸದ್ಯೋಚಿತನಾಗಿರಲು ಪ್ರಯತ್ನಿಸುತ್ತಾನೆ. (ಮತ್ತಾಯ 24:45) ಅವನು ಹೇಳುವುದು: “ಸತ್ಯವನ್ನು ನಾನು ಬಹಳವಾಗಿ ಪ್ರೀತಿಸುತ್ತೇನೆ. ಸತ್ಯದ ಪ್ರಕಾಶವು ಹೆಚ್ಚುತ್ತಾ ಬರುವುದನ್ನು ನೋಡುವಾಗ ನಾನು ರೋಮಾಂಚನಗೊಳ್ಳುತ್ತೇನೆ.” (ಜ್ಞಾನೋಕ್ತಿ 4:18) ಅಂತೆಯೇ 60ಕ್ಕೂ ಹೆಚ್ಚು ವರ್ಷಗಳನ್ನು ಪೂರ್ಣ ಸಮಯದ ಸೇವೆಯಲ್ಲಿ ಕಳೆದಿರುವ ಫ್ರೆಡ್‌ ಎಂಬವರು ತಮ್ಮ ಜೊತೆ ವಿಶ್ವಾಸಿಗಳೊಂದಿಗೆ ಬೈಬಲ್‌ ವಿಷಯ ಚರ್ಚಿಸುವುದನ್ನು ಆಧ್ಯಾತ್ಮಿಕವಾಗಿ ಉತ್ತೇಜನಕರವೆಂದು ಕಾಣುತ್ತಾರೆ. ಅವರು ಹೇಳುವುದು: “ಬೈಬಲನ್ನು ನನ್ನ ಮನಸ್ಸಿನಲ್ಲಿ ಜೀವಂತವಾಗಿ ಇಟ್ಟುಕೊಳ್ಳಲೇ ಬೇಕು. ಬೈಬಲನ್ನು ಸಜೀವವಾಗಿ ಅಂದರೆ ಅರ್ಥಭರಿತವಾಗಿ ನೀವು ಇಟ್ಟುಕೊಳ್ಳುವಲ್ಲಿ ಮತ್ತು ನೀವು ಕಲಿಯುವ ವಿಷಯಗಳು ‘ಸ್ವಸ್ಥವಾಕ್ಯಗಳ ಮಾದರಿ’ಗನುಸಾರ ಇರುವಲ್ಲಿ ಅವು ಅಲ್ಲೋ ಇಲ್ಲೋ ಇರುವ ಮಾಹಿತಿಯ ತುಣುಕುಗಳಲ್ಲ. ಬದಲಿಗೆ ಪ್ರತಿಯೊಂದು ತನ್ನ ಯೋಗ್ಯ ಸ್ಥಾನದಲ್ಲಿ ಹೊಳೆಯುತ್ತಿರುವುದನ್ನು ನಾವು ಕಾಣುತ್ತೇವೆ.”​—⁠2 ತಿಮೊಥೆಯ 1:13.

10 ಮುದಿ ಪ್ರಾಯದಲ್ಲಿ ಕಷ್ಟಕರವಾದ ಅಥವಾ ಹೊಸ ಹೊಸ ವಿಷಯಗಳನ್ನು ಕಲಿಯುವುದು ಅಸಾಧ್ಯವೆಂದು ನೆನಸುವ ಅಗತ್ಯವಿಲ್ಲ. 60, 70 ಅಷ್ಟೇಕೆ 80 ವಯಸ್ಸನ್ನು ದಾಟಿದವರು ಸಹ ಅನಕ್ಷರತೆಯನ್ನು ಜಯಿಸಿದ್ದಾರೆ ಅಥವಾ ಹೊಸ ಭಾಷೆಗಳನ್ನು ಕಲಿತಿದ್ದಾರೆ. ಯೆಹೋವನ ಸಾಕ್ಷಿಗಳಲ್ಲಿ ಕೆಲವರು ವಿವಿಧ ಜನಾಂಗದವರಿಗೆ ಸುವಾರ್ತೆಯನ್ನು ಹಂಚುವ ಉದ್ದೇಶದಿಂದ ಇದನ್ನು ಮಾಡಿದ್ದಾರೆ. (ಮಾರ್ಕ 13:10) ಪೋರ್ಚುಗೀಸ್‌ ಕ್ಷೇತ್ರದಲ್ಲಿ ಹ್ಯಾರಿ ಮತ್ತು ಅವರ ಪತ್ನಿ ಸಹಾಯ ನೀಡಲು ನಿರ್ಧರಿಸಿದಾಗ ಅವರು 60 ವಯಸ್ಸನ್ನು ದಾಟಿದ್ದರು. ಹ್ಯಾರಿ ಹೇಳುವುದು: “ಪ್ರಾಯ ಸಂದಂತೆ ಯಾವುದೇ ಕೆಲಸವೂ ಹೆಚ್ಚು ಕಷ್ಟಕರವಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.” ಹೀಗಿದ್ದರೂ ಸತತ ಪ್ರಯತ್ನ ಮತ್ತು ಪಟ್ಟುಹಿಡಿದದ್ದರಿಂದ ಅವರು ಪೋರ್ಚುಗೀಸ್‌ ಭಾಷೆಯಲ್ಲಿ ಬೈಬಲ್‌ ಅಧ್ಯಯನ ನಡೆಸಲು ಶಕ್ತರಾದರು. ಈಗ ಅನೇಕ ವರುಷಗಳಿಂದ ಹ್ಯಾರಿ ಈ ಹೊಸ ಭಾಷೆಯಲ್ಲಿ ಜಿಲ್ಲಾ ಅಧಿವೇಶನದ ಭಾಷಣಗಳನ್ನೂ ಕೊಟ್ಟಿರುತ್ತಾರೆ.

11 ಇಂಥ ಪಂಥಾಹ್ವಾನಗಳನ್ನು ಅಂಗೀಕರಿಸಲು ಆರೋಗ್ಯವಾಗಲಿ ಯೋಗ್ಯ ಪರಿಸ್ಥಿತಿಗಳಾಗಲಿ ಎಲ್ಲರಿಗೂ ಇರುವುದಿಲ್ಲವೆಂಬುದು ನಿಶ್ಚಯ. ಹಾಗಿರುವಲ್ಲಿ, ಕೆಲವು ಮಂದಿ ಪ್ರಾಯಸ್ಥರು ಮಾಡಿರುವ ಶ್ರಮದ ಸಾಧನೆಗಳನ್ನು ನಾವೇಕೆ ಪರಿಗಣಿಸಬೇಕು? ಎಲ್ಲರೂ ಅವೇ ಸಾಧನೆಗಳನ್ನು ಮಾಡಬೇಕೆಂಬ ಉದ್ದೇಶದಿಂದಂತೂ ಅಲ್ಲ. ಬದಲಾಗಿ, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ನಂಬಿಗಸ್ತ ಸಭಾ ಹಿರಿಯರ ವಿಷಯದಲ್ಲಿ ಏನು ಬರೆದನೋ ಆ ಮನೋಭಾವದಿಂದಲೇ ನಾವು ಅವನ್ನು ಪರಿಗಣಿಸಬೇಕು. ಪೌಲನು ಬರೆದುದು: “ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” (ಇಬ್ರಿಯ 13:⁠7) ಹುರುಪಿನ ಇಂಥ ಮಾದರಿಗಳ ಕುರಿತು ಆಲೋಚಿಸುವಾಗ, ಈ ವಯೋವೃದ್ಧರನ್ನು ದೇವರ ಸೇವೆಯಲ್ಲಿ ಮುಂದೆ ಸಾಗುವಂತೆ ಪ್ರೇರಿಸುವ ಬಲವಾದ ನಂಬಿಕೆಯನ್ನು ಅನುಸರಿಸುವಂತೆ ನಾವು ಪ್ರೋತ್ಸಾಹಿಸಲ್ಪಡಬಲ್ಲೆವು. ಈಗ 87 ವಯಸ್ಸಿನ ಹ್ಯಾರಿ ತನ್ನನ್ನು ಪ್ರಚೋದಿಸುವ ವಿಷಯವನ್ನು ವಿವರಿಸುತ್ತ ಹೇಳುವುದು: “ನನ್ನ ಉಳಿದಿರುವ ವರುಷಗಳನ್ನು ವಿವೇಕದಿಂದ ಬಳಸಲು ಮತ್ತು ಯೆಹೋವನ ಸೇವೆಯಲ್ಲಿ ಸಾಧ್ಯವಿರುವಷ್ಟು ಉಪಯುಕ್ತನಾಗಿರಲು ನಾನು ಬಯಸುತ್ತೇನೆ.” ಈ ಮೊದಲು ತಿಳಿಸಿದ ಫ್ರೆಡ್‌ ತನ್ನ ಬೆತೆಲ್‌ ಕೆಲಸದಲ್ಲಿ ತುಂಬ ಸಂತೃಪ್ತಿಯನ್ನು ಅನುಭವಿಸುತ್ತಿದ್ದಾರೆ. ಅವರು ಹೇಳುವುದು: “ಯೆಹೋವನನ್ನು ಅತ್ಯುತ್ತಮವಾಗಿ ಸೇವಿಸುವ ವಿಧ ಯಾವುದೆಂದು ಕಂಡುಹಿಡಿದು ಅದರಲ್ಲೇ ಮುಂದೆ ಸಾಗಬೇಕು.”

ಪರಿಸ್ಥಿತಿಗಳು ಬದಲಾದರೂ ಸೇವಾನಿರತರು

12 ಮುಪ್ಪಿನಲ್ಲಾಗುವ ದೈಹಿಕ ಬದಲಾವಣೆಗಳನ್ನು ಒಪ್ಪಿ ಅವನ್ನು ನಿಭಾಯಿಸುವುದು ಕಷ್ಟಕರ. ಆದರೂ, ಅಂತಹ ಬದಲಾವಣೆಗಳ ಹೊರತೂ ದೇವಭಕ್ತಿಯನ್ನು ತೋರಿಸಲು ಸಾಧ್ಯವಿದೆ. ಈ ಸಂಬಂಧದಲ್ಲಿ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬವನು ಉತ್ತಮ ಮಾದರಿಯಾಗಿದ್ದಾನೆ. ಬರ್ಜಿಲ್ಲೈ 80 ವಯಸ್ಸಿನವನಾಗಿದ್ದರೂ, ಅಬ್ಷಾಲೋಮನ ದಂಗೆಯ ಸಮಯದಲ್ಲಿ ದಾವೀದನಿಗೆ ಮತ್ತು ಅವನ ಸೈನ್ಯಕ್ಕೆ ಆಹಾರ ಮತ್ತು ವಸತಿಯನ್ನು ಕೊಟ್ಟು ವಿಶೇಷ ರೀತಿಯಲ್ಲಿ ಅತಿಥಿಸತ್ಕಾರ ತೋರಿಸಿದನು. ದಾವೀದನು ಯೆರೂಸಲೇಮಿಗೆ ಹಿಂದಿರುಗುತ್ತಿದ್ದಾಗ ಬರ್ಜಿಲ್ಲೈ ಅವರನ್ನು ಯೋರ್ದನ್‌ ನದಿಯ ತನಕ ಸಾಗಕಳುಹಿಸಿದನು. ಆಗ ದಾವೀದನು ಬರ್ಜಿಲ್ಲೈಯನ್ನು ತನ್ನ ಅರಮನೆಯ ಆಸ್ಥಾನಕ್ಕೆ ನೇಮಿಸಬಯಸಿದನು. ಅದಕ್ಕೆ ಬರ್ಜಿಲ್ಲೈ ಹೇಗೆ ಪ್ರತಿಕ್ರಿಯಿಸಿದನು? ಅವನು ಹೇಳಿದ್ದು: “ಈಗ ನಾನು ಎಂಭತ್ತು ವರುಷದವನು. . . . ನಿನ್ನ ಸೇವಕನಾದ ನನಗೆ ಅನ್ನಪಾನಗಳ ರುಚಿಯು ಗೊತ್ತಾಗುವದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? . . . ಇಗೋ, ಇಲ್ಲಿ ನಿನ್ನ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯನಾದ ಅರಸನು ಇವನನ್ನು ಕರಕೊಂಡುಹೋಗಿ ತನ್ನ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಲಿ.”​—⁠2 ಸಮುವೇಲ 17:​27-29; 19:​31-40.

13 ಬರ್ಜಿಲ್ಲೈ ಮುಪ್ಪಿನ ಬದಲಾದ ಸ್ಥಿತಿಗತಿಗಳನ್ನು ಅನುಭವಿಸುತ್ತಿದ್ದರೂ, ಯೆಹೋವನ ನೇಮಿತ ರಾಜನನ್ನು ಬೆಂಬಲಿಸಲು ಅವನು ತನ್ನ ಕೈಲಾದದ್ದನ್ನೆಲ್ಲಾ ಮಾಡಿದನು. ತನ್ನ ರುಚಿ ಮತ್ತು ಶ್ರವಣಶಕ್ತಿ ಮುಂಚಿನಂತೆ ಇರಲಿಲ್ಲವೆಂಬುದನ್ನು ಅವನು ಒಪ್ಪಿಕೊಂಡನಾದರೂ, ಅವನು ಆ ವಿಷಯದಲ್ಲಿ ನೊಂದುಕೊಳ್ಳಲಿಲ್ಲ. ಬದಲಿಗೆ ತನಗೆ ನೀಡಲ್ಪಟ್ಟ ಪ್ರಯೋಜನಗಳು ಕಿಮ್ಹಾಮನಿಗೆ ದೊರೆಯುವಂತೆ ನಿಸ್ವಾರ್ಥಭಾವದಿಂದ ಶಿಫಾರಸ್ಸು ಮಾಡಿದನು. ಈ ಮೂಲಕ ತನ್ನ ಹೃದಯದಲ್ಲಿ ತಾನು ಎಂಥವನೆಂಬುದನ್ನು ಬರ್ಜಿಲ್ಲೈ ತೋರಿಸಿಕೊಟ್ಟನು. ಇಂದಿನ ಅನೇಕ ಮಂದಿ ವೃದ್ಧರು ಬರ್ಜಿಲ್ಲೈಯಂತೆ ನಿಸ್ವಾರ್ಥತೆ ಮತ್ತು ಉದಾರಭಾವವನ್ನು ತೋರಿಸುತ್ತಾರೆ. ಸತ್ಯಾರಾಧನೆಯನ್ನು ಬೆಂಬಲಿಸಲು ತಮಗೆ ಸಾಧ್ಯವಿರುವುದನ್ನೆಲ್ಲಾ ಅವರು ಮಾಡುತ್ತಾರೆ. “ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು” ಎಂದು ಅವರಿಗೆ ತಿಳಿದಿದೆ. ಇಂಥ ನಿಷ್ಠಾವಂತರು ನಮ್ಮ ಮಧ್ಯದಲ್ಲಿರುವುದು ಅದೆಷ್ಟು ಆಶೀರ್ವಾದದಾಯಕ!​—⁠ಇಬ್ರಿಯ 13:16.

14 ವರುಷಗಳು ದಾಟಿಹೋದಂತೆ ದಾವೀದನ ಸ್ಥಿತಿಗತಿಗಳಲ್ಲಿ ಅನೇಕ ಬಾರಿ ಬದಲಾವಣೆಗಳಾಗಿದ್ದರೂ, ತನ್ನ ನಿಷ್ಠಾವಂತ ಸೇವಕರನ್ನು ಯೆಹೋವನು ಪರಾಮರಿಸುವ ರೀತಿಯಲ್ಲಿ ಎಂದೂ ಬದಲಾವಣೆಯಾಗದೆಂಬ ದೃಢ ನಂಬಿಕೆ ಅವನಿಗಿತ್ತು. ದಾವೀದನು ತನ್ನ ಜೀವನಾಂತ್ಯದಲ್ಲಿ, ಇಂದು 37ನೆಯ ಕೀರ್ತನೆಯೆಂದು ಕರೆಯಲ್ಪಡುವ ಗೀತೆಯನ್ನು ರಚಿಸಿದನು. ದಾವೀದನು ಹಿಂದಿನ ವಿಷಯಗಳನ್ನು ಜ್ಞಾಪಿಸಿಕೊಳ್ಳುತ್ತ, ತಂತಿವಾದ್ಯದೊಂದಿಗೆ ಈ ಮಾತುಗಳನ್ನು ಹಾಡುತ್ತಿರುವುದನ್ನು ತುಸು ಭಾವಿಸಿಕೊಳ್ಳಿ: “ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ. ಅವನು ಕೆಳಗೆ ಬಿದ್ದರೂ ಏಳದೆ ಹೋಗುವದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು. ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತನೆ 37:​23-25) ಈ ಪ್ರೇರಿತ ಕೀರ್ತನೆಯಲ್ಲಿ ದಾವೀದನ ಮುಪ್ಪನ್ನು ಸೂಚಿಸುವುದು ಯೋಗ್ಯವೆಂದು ಯೆಹೋವನು ಅಭಿಪ್ರಯಿಸಿದನು. ಅದು ಆ ಹೃತ್ಪೂರ್ವಕ ಮಾತುಗಳಿಗೆ ಅದೆಷ್ಟು ಮನಮುಟ್ಟುವ ಅನಿಸಿಕೆಯನ್ನು ಕೂಡಿಸುತ್ತದೆ!

15 ಪರಿಸ್ಥಿತಿಗಳಲ್ಲಿ ಬದಲಾವಣೆ ಮತ್ತು ಮುದಿಪ್ರಾಯದ ಹೊರತೂ ನಂಬಿಗಸ್ತಿಕೆಯನ್ನು ತೋರಿಸಿದ ಇನ್ನೊಂದು ಉತ್ತಮ ಮಾದರಿ ಅಪೊಸ್ತಲ ಯೋಹಾನನದ್ದು. ಸುಮಾರು 70 ವರುಷಗಳಷ್ಟು ಕಾಲ ದೇವರ ಸೇವೆಯನ್ನು ಮಾಡಿದ ಬಳಿಕ “ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ” ಯೋಹಾನನನ್ನು ಪತ್ಮೋಸ್‌ ದ್ವೀಪಕ್ಕೆ ಗಡೀಪಾರು ಮಾಡಲಾಯಿತು. (ಪ್ರಕಟನೆ 1:⁠9) ಆದರೂ ಅವನ ಕೆಲಸ ಇನ್ನೂ ಮುಗಿದಿರಲಿಲ್ಲ. ಬೈಬಲಿನಲ್ಲಿ ಯೋಹಾನನು ಬರೆದಿರುವ ಎಲ್ಲ ಬರಹಗಳು ವಾಸ್ತವದಲ್ಲಿ ಅವನ ಜೀವನಾಂತ್ಯದ ವರುಷಗಳಲ್ಲಿ ಬರೆಯಲ್ಪಟ್ಟವು. ಅವನು ಪತ್ಮೋಸಿನಲ್ಲಿದ್ದಾಗ ಅವನಿಗೊಂದು ಭಯಭಕ್ತಿಪ್ರೇರಕವಾದ ಪ್ರಕಟನೆಯ ದರ್ಶನವು ಕೊಡಲ್ಪಟ್ಟಿತು. ಅವನದನ್ನು ಜಾಗರೂಕತೆಯಿಂದ ಬರೆದಿಟ್ಟನು. (ಪ್ರಕಟನೆ 1:​1, 2) ರೋಮನ್‌ ಚಕ್ರವರ್ತಿ ನರ್ವ ಎಂಬವನ ಆಳಿಕೆಯಲ್ಲಿ ಅವನನ್ನು ದೇಶಭ್ರಷ್ಟತೆಯಿಂದ ಬಿಡಿಸಲಾಯಿತು ಎಂದು ಸಾಮಾನ್ಯವಾಗಿ ನೆನಸಲಾಗುತ್ತದೆ. ತದನಂತರ ಸುಮಾರು ಸಾ.ಶ. 98ರೊಳಗೆ, ತೊಂಬತ್ತು ಇಲ್ಲವೆ ನೂರು ವಯಸ್ಸಿನಲ್ಲಿ ಯೋಹಾನನು ತನ್ನ ಹೆಸರಿನಲ್ಲಿರುವ ಸುವಾರ್ತೆಯನ್ನೂ ಮೂರು ಪತ್ರಿಕೆಗಳನ್ನೂ ಬರೆದನು.

ಸೈರಣೆಯ ಮಾಸಿಹೋಗದ ದಾಖಲೆ

16 ಮುಪ್ಪಿನ ಇತಿಮಿತಿಗಳು ಅನೇಕ ವಿಧಗಳಲ್ಲಿ ಮತ್ತು ವಿವಿಧ ಪ್ರಮಾಣಗಳಲ್ಲಿ ಬರಬಲ್ಲವು. ಉದಾಹರಣೆಗೆ, ಕೆಲವರು ತಮ್ಮ ಮಾತನಾಡುವ ಸಾಮರ್ಥ್ಯದಲ್ಲಿಯೂ ದುರ್ಬಲರಾಗುತ್ತಾರೆ. ಆದರೆ ದೇವರ ಪ್ರೀತಿ ಮತ್ತು ಅಪಾರ ದಯೆಯ ಸಂಬಂಧದಲ್ಲಿ ಮಾತ್ರ ಅವರಿಗೆ ಮುದ್ದಿನ ಸ್ಮರಣೆಗಳಿವೆ. ಬಾಯಿಮಾತಿನ ಇತಿಮಿತಿಗಳು ಅವರಿಗಿದ್ದರೂ ತಮ್ಮ ಹೃದಯದಲ್ಲಿ ಅವರು ಯೆಹೋವನಿಗೆ, “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ” ಎಂದು ಹೇಳುತ್ತಿರುತ್ತಾರೆ. (ಕೀರ್ತನೆ 119:97) ಯೆಹೋವನಿಗಾದರೊ “ತನ್ನ ನಾಮಸ್ಮರಣೆ ಮಾಡುವವರ” ಪರಿಚಯವಿದೆ. ಇಂಥವರು, ತನ್ನ ಮಾರ್ಗಗಳನ್ನು ಪೂರ್ಣವಾಗಿ ಅಲಕ್ಷಿಸುವ ಹೆಚ್ಚಿನ ಸಂಖ್ಯೆಯ ಮಾನವರಿಗಿಂತ ಹೇಗೆ ವಿಭಿನ್ನರಾಗಿದ್ದಾರೆ ಎಂಬುದನ್ನೂ ಆತನು ಗಣ್ಯಮಾಡುತ್ತಾನೆ. (ಮಲಾಕಿಯ 3:16; ಕೀರ್ತನೆ 10:⁠4) ನಮ್ಮ ಹೃದಯದ ಧ್ಯಾನದಲ್ಲಿ ಯೆಹೋವನು ಸಂತೋಷವನ್ನು ಕಂಡುಕೊಳ್ಳುತ್ತಾನೆಂದು ತಿಳಿಯುವುದು ಅದೆಷ್ಟು ಸಾಂತ್ವನದಾಯಕ!​—⁠1 ಪೂರ್ವಕಾಲವೃತ್ತಾಂತ 28:9; ಕೀರ್ತನೆ 19:14.

17 ಅಲಕ್ಷ್ಯ ಮಾಡಬಾರದ ಒಂದು ನಿಜತ್ವವೇನೆಂದರೆ, ಯೆಹೋವನನ್ನು ದಶಕಗಳಲ್ಲೂ ನಂಬಿಗಸ್ತಿಕೆಯಿಂದ ಸೇವಿಸಿರುವವರು ನಿಜವಾಗಿಯೂ ಅದ್ವಿತೀಯವಾಗಿರುವ ಮತ್ತು ಇನ್ನಾವ ವಿಧದಲ್ಲಿಯೂ ಸಾಧಿಸಲಾಗದ ಒಂದು ವಿಷಯವನ್ನು ಸಾಧಿಸಿದ್ದಾರೆ. ಅದು ಯಾವುದೆಂದರೆ ಸೈರಣೆಯ ಮಾಸಿಹೋಗದ ದಾಖಲೆಯೇ. ಯೇಸು ಹೇಳಿದ್ದು: “ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.” (ಲೂಕ 21:19) ನಿತ್ಯಜೀವವನ್ನು ಪಡೆಯಲು ಸೈರಣೆಯು ಅಗತ್ಯ. ನಿಮ್ಮಲ್ಲಿ ಯಾರು ‘ದೇವರ ಚಿತ್ತವನ್ನು ನೆರವೇರಿಸಿರುತ್ತಾರೋ’ ಮತ್ತು ಜೀವನಮಾರ್ಗದಲ್ಲಿ ನಿಷ್ಠೆಯನ್ನು ರುಜುಪಡಿಸಿರುತ್ತಾರೋ ಅವರು “ವಾಗ್ದಾನದ ಫಲವನ್ನು” ಪಡೆಯುವುದನ್ನು ಹಾರೈಸಬಲ್ಲರು.​—⁠ಇಬ್ರಿಯ 10:36.

18 ನೀವು ಯೆಹೋವನ ಸೇವೆಯನ್ನು ಎಷ್ಟೇ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮಾಡುವುದಾದರೂ ಪೂರ್ಣ ಹೃದಯದಿಂದ ಮಾಡುವಲ್ಲಿ ಯೆಹೋವನು ಅದನ್ನು ನಿಧಿಯಂತೆ ವೀಕ್ಷಿಸುತ್ತಾನೆ. ಒಬ್ಬನು ಮುದುಕನಾಗುವಾಗ ಅವನ “ದೇಹ” ಎಷ್ಟೇ ಬಲಹೀನವಾದರೂ “ಆಂತರ್ಯವು ದಿನೇದಿನೇ ಹೊಸದಾಗುತ್ತಾ” ಬರಬಲ್ಲದು. (2 ಕೊರಿಂಥ 4:16) ನೀವು ಗತಕಾಲದಲ್ಲಿ ಮಾಡಿರುವುದನ್ನು ಯೆಹೋವನು ಮಾನ್ಯಮಾಡಿದ್ದಾನೆ ಎಂಬುದರಲ್ಲಿ ಸಂದೇಹಕ್ಕೆ ಎಡೆಯೇ ಇಲ್ಲ. ಅಷ್ಟೇ ಅಲ್ಲ, ನೀವು ಆತನ ಹೆಸರಿಗೋಸ್ಕರ ಈಗ ಮಾಡುತ್ತಿರುವುದನ್ನೂ ಆತನು ಮಾನ್ಯಮಾಡುತ್ತಾನೆ ಎಂಬುದು ಸುಸ್ಪಷ್ಟ. (ಇಬ್ರಿಯ 6:10) ಮುಂದಿನ ಲೇಖನದಲ್ಲಿ, ಅಂಥ ನಂಬಿಗಸ್ತಿಕೆಯ ಬಹುವ್ಯಾಪಕವಾದ ಪರಿಣಾಮಗಳನ್ನು ನಾವು ಚರ್ಚಿಸಲಿರುವೆವು. (w07 6/1)

[ಪಾದಟಿಪ್ಪಣಿ]

^ ಪ್ಯಾರ. 11 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನಿಮ್ಮ ಉತ್ತರವೇನು?

• ಇಂದಿನ ವೃದ್ಧ ಕ್ರೈಸ್ತರಿಗೆ ಅನ್ನಳು ಯಾವ ಉತ್ತಮ ಮಾದರಿಯನ್ನಿಟ್ಟಳು?

• ಒಬ್ಬನು ಸಾಧಿಸುವ ಸಂಗತಿಗಳಿಗೆ ಮುಪ್ಪು ಇತಿಮಿತಿಯನ್ನು ಇಡಬೇಕೆಂದಿರುವುದಿಲ್ಲ ಏಕೆ?

• ಮುದಿಪ್ರಾಯದವರು ದೈವಭಕ್ತಿಯನ್ನು ಹೇಗೆ ತೋರಿಸುತ್ತ ಹೋಗಬಲ್ಲರು?

• ವಯೋವೃದ್ಧರು ಮಾಡುವ ಸೇವೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಮುಪ್ಪನ್ನು ಅನೇಕವೇಳೆ ಹೇಗೆ ವರ್ಣಿಸಲಾಗುತ್ತದೆ? (ಬಿ) ಆದಾಮನ ಪಾಪಫಲಗಳ ಸಂಬಂಧದಲ್ಲಿ ಬೈಬಲ್‌ ಯಾವ ವಾಗ್ದಾನವನ್ನು ಮಾಡುತ್ತದೆ?

3. ಕ್ರೈಸ್ತರು ‘ಮುಪ್ಪಿನಲ್ಲಿಯೂ ಅಭಿವೃದ್ಧಿ ಹೊಂದುತ್ತ ಹೋಗುವುದು’ ಯಾವ ವಿಧಗಳಲ್ಲಿ?

4. ವೃದ್ಧೆಯಾಗಿದ್ದ ಪ್ರವಾದಿನಿ ಅನ್ನಳು ಹೇಗೆ ದೈವಭಕ್ತಿಯನ್ನು ತೋರಿಸಿದಳು ಮತ್ತು ಆಕೆಗೆ ಯಾವ ಪ್ರತಿಫಲ ದೊರೆಯಿತು?

5, 6. ಇಂದು ಅನೇಕ ವಯೋವೃದ್ಧರು ಅನ್ನಳ ಮನೋಭಾವವನ್ನು ಹೇಗೆ ತೋರಿಸುತ್ತಿದ್ದಾರೆ?

7. ಮೋಶೆ ತನ್ನ ಇಳಿವಯಸ್ಸಿನಲ್ಲಿ ದೇವರೊಂದಿಗಿನ ಸಂಬಂಧದಲ್ಲಿ ಬೆಳೆಯುವ ಅಪೇಕ್ಷೆಯನ್ನು ಹೇಗೆ ವ್ಯಕ್ತಪಡಿಸಿದನು?

8. ದಾನಿಯೇಲನು 90ಕ್ಕೂ ಹೆಚ್ಚು ಪ್ರಾಯದಲ್ಲಿ ತನ್ನ ಮನಸ್ಸನ್ನು ಹೇಗೆ ಕ್ರಿಯಾಶೀಲವಾಗಿ ಇರಿಸಿಕೊಂಡನು ಮತ್ತು ಫಲಿತಾಂಶವೇನಾಯಿತು?

9, 10. ತಮ್ಮ ಮನಸ್ಸನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಲು ಕೆಲವರು ಏನು ಮಾಡಿದ್ದಾರೆ?

11. ನಂಬಿಗಸ್ತ ವಯೋವೃದ್ಧರ ಸಾಧನೆಗಳನ್ನು ಏಕೆ ಪರಿಗಣಿಸಬೇಕು?

12, 13. ಬರ್ಜಿಲ್ಲೈ ತನ್ನ ಮುಪ್ಪಿನ ಬದಲಾದ ಸ್ಥಿತಿಗತಿಗಳಲ್ಲೂ ಹೇಗೆ ದೈವಭಕ್ತಿಯನ್ನು ತೋರಿಸಿದನು?

14. ಕೀರ್ತನೆ 37:​23-25ರಲ್ಲಿ ಹೇಳಲ್ಪಟ್ಟಿರುವ ಮಾತುಗಳಿಗೆ ದಾವೀದನ ಮುದಿಪ್ರಾಯ ಇನ್ನಷ್ಟು ಅರ್ಥವನ್ನು ಹೇಗೆ ಕೂಡಿಸುತ್ತದೆ?

15. ಅಪೊಸ್ತಲ ಯೋಹಾನನು ತನ್ನ ಪರಿಸ್ಥಿತಿಯಲ್ಲಿ ಬದಲಾವಣೆ ಮತ್ತು ಮುದಿಪ್ರಾಯದ ಹೊರತೂ ನಂಬಿಗಸ್ತಿಕೆ ತೋರಿಸುವುದರಲ್ಲಿ ಹೇಗೆ ಉತ್ತಮ ಮಾದರಿಯನ್ನಿಟ್ಟನು?

16. ತಮ್ಮ ಮಾತಾಡುವ ಸಾಮರ್ಥ್ಯದಲ್ಲಿ ದುರ್ಬಲರಾಗಿರುವವರು ಯೆಹೋವನಿಗೆ ತಮ್ಮ ಭಕ್ತಿಯನ್ನು ಹೇಗೆ ತೋರಿಸಬಲ್ಲರು?

17. ನಿಜವಾಗಿಯೂ ಅದ್ವಿತೀಯವಾಗಿರುವ ಯಾವುದನ್ನು ಯೆಹೋವನ ದೀರ್ಘಕಾಲದ ಸೇವಕರು ಸಾಧಿಸಿದ್ದಾರೆ?

18. (ಎ) ಯೆಹೋವನು ಮುದಿಪ್ರಾಯದವರ ಬಗ್ಗೆ ಯಾವುದನ್ನು ನೋಡಲು ಸಂತೋಷಿಸುತ್ತಾನೆ? (ಬಿ) ಮುಂದಿನ ಲೇಖನದಲ್ಲಿ ಯಾವುದನ್ನು ಚರ್ಚಿಸಲಿರುವೆವು?

[ಪುಟ 23ರಲ್ಲಿರುವ ಚಿತ್ರ]

ಮುದಿಪ್ರಾಯದಲ್ಲಿ ದಾನಿಯೇಲನು ಯೆಹೂದದ ದೇಶಭ್ರಷ್ಟತೆಯ ಅವಧಿಯನ್ನು ‘ಶಾಸ್ತ್ರಗಳಿಂದ’ ಗ್ರಹಿಸಿಕೊಂಡನು

[ಪುಟ 25ರಲ್ಲಿರುವ ಚಿತ್ರಗಳು]

ಅನೇಕ ಮಂದಿ ವೃದ್ಧರು ತಮ್ಮ ಕೂಟದ ಹಾಜರಿಯಲ್ಲಿ, ಹುರುಪಿನ ಸಾರುವಿಕೆಯಲ್ಲಿ ಮತ್ತು ಕಲಿಯಲು ತೋರಿಸುವ ಅತ್ಯಾಸಕ್ತಿಯಲ್ಲಿ ಮಾದರಿಗಳಾಗಿದ್ದಾರೆ