ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಯೋವೃದ್ಧರು ಎಳೆಯರಿಗೆ ಆಶೀರ್ವಾದ

ವಯೋವೃದ್ಧರು ಎಳೆಯರಿಗೆ ಆಶೀರ್ವಾದ

ವಯೋವೃದ್ಧರು ಎಳೆಯರಿಗೆ ಆಶೀರ್ವಾದ

“ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”​—⁠ಕೀರ್ತನೆ 71:18.

ಪಶ್ಚಿಮ ಆಫ್ರಿಕದ ಕ್ರೈಸ್ತ ಹಿರಿಯನೊಬ್ಬನು ಒಬ್ಬ ವೃದ್ಧ ಅಭಿಷಿಕ್ತ ಸಹೋದರರನ್ನು ಭೇಟಿಮಾಡಿ “ನೀವು ಹೇಗಿದ್ದೀರಿ?” ಎಂದು ಕೇಳಿದನು. ಆಗ ಆ ಸಹೋದರರು “ನಾನು ಓಡಬಲ್ಲೆ, ಜಿಗಿಯಬಲ್ಲೆ, ನೆಗೆಯಬಲ್ಲೆ ಮತ್ತು ಕುಪ್ಪಳಿಸಲೂ ಬಲ್ಲೆ” ಎಂದು ಹೇಳುತ್ತಾ ಹಾಗೆಯೇ ಮಾಡಿತೋರಿಸಲು ಪ್ರಯತ್ನಿಸಿದರು. “ಆದರೆ ಹಕ್ಕಿಯಂತೆ ಹಾರುವುದು ಮಾತ್ರ ಅಸಾಧ್ಯ” ಎಂದರವರು. ಅವರ ಮಾತಿನ ಅರ್ಥವನ್ನು ಆ ಹಿರಿಯನು ಗ್ರಹಿಸಿದನು. ‘ನನ್ನಿಂದ ಆಗುವುದನ್ನು ಮಾಡಲು ನಾನು ಸಂತೋಷಿಸುತ್ತೇನೆ. ಆದರೆ ಆಗದಿರುವುದನ್ನು ಮಾಡುವುದಿಲ್ಲ’ ಎಂಬುದೇ ಅದರ ಅರ್ಥ. ಈ ಭೇಟಿಕೊಟ್ಟ ಹಿರಿಯನು ಈಗ ತನ್ನ ಎಂಬತ್ತರ ಪ್ರಾಯದಲ್ಲಿರುವುದಾದರೂ, ಆ ಸಹೋದರರ ಹಾಸ್ಯಪ್ರವೃತ್ತಿಯನ್ನೂ ನಿಷ್ಠೆಯನ್ನೂ ಮೆಚ್ಚಿನಿಂದ ಜ್ಞಾಪಿಸಿಕೊಳ್ಳುತ್ತಾನೆ.

2 ವಯಸ್ಸಾಗಿರುವ ಒಬ್ಬನು ಪ್ರದರ್ಶಿಸುವ ದೈವಿಕ ಗುಣಗಳು ಇತರರ ಮೇಲೆ ಬಾಳುವ ರೀತಿಯಲ್ಲಿ ಅಚ್ಚೊತ್ತಬಲ್ಲವು. ಹೌದು, ಒಬ್ಬನ ಪ್ರಾಯವು ಅವನಲ್ಲಿ ವಿವೇಕವನ್ನು ಮತ್ತು ಕ್ರಿಸ್ತಸದೃಶ ಗುಣಗಳನ್ನು ತಾನಾಗಿಯೇ ಬರಿಸುವುದಿಲ್ಲ ನಿಶ್ಚಯ. (ಪ್ರಸಂಗಿ 4:13) ಬೈಬಲ್‌ ಹೇಳುವುದು: “ನರೆಗೂದಲೇ ಸುಂದರ ಕಿರೀಟವು; ಅದು ಧರ್ಮಮಾರ್ಗದಲ್ಲಿ ದೊರಕುವದು.” (ಜ್ಞಾನೋಕ್ತಿ 16:31) ನೀವು ವಯೋವೃದ್ಧರಾಗಿರುವಲ್ಲಿ, ನಿಮ್ಮ ಮಾತುಗಳೂ ಕ್ರಿಯೆಗಳೂ ಇತರರನ್ನು ಹೇಗೆ ಪ್ರಯೋಜನಕರವಾಗಿ ಪ್ರಭಾವಿಸಬಲ್ಲವೆಂಬುದನ್ನು ಗ್ರಹಿಸಿದ್ದೀರೊ? ವಯಸ್ಸಾದವರು ಎಳೆಯರಿಗೆ ಎಷ್ಟರ ಮಟ್ಟಿಗೆ ನಿಜ ಪ್ರೋತ್ಸಾಹನೆಯಾಗಿದ್ದರೆಂದು ತೋರಿಸಲು ಕೆಲವು ಬೈಬಲ್‌ ಮಾದರಿಗಳನ್ನು ಪರಿಗಣಿಸಿರಿ.

ಬಹುವ್ಯಾಪಕ ಪರಿಣಾಮಗಳಿರುವ ನಂಬಿಕೆ

3 ನೋಹನು ತೋರಿಸಿದ ನಂಬಿಕೆ ಮತ್ತು ಸ್ಥಿರಚಿತ್ತವು ಈ ದಿನದಲ್ಲೂ ನಾವು ಅನುಭವಿಸಲಾಗುವ ಪ್ರಯೋಜನಗಳನ್ನು ಉತ್ಪಾದಿಸಿದವು. ನೋಹನು ನಾವೆಯನ್ನು ಕಟ್ಟಿದಾಗ, ಪ್ರಾಣಿಗಳನ್ನು ನಾವೆಯೊಳಗೆ ಸೇರಿಸಿದಾಗ ಮತ್ತು ನೆರೆಯವರಿಗೆ ಸಾರತೊಡಗಿದಾಗ 600 ವಯಸ್ಸಿಗೆ ಹತ್ತಿರವಾಗಿದ್ದನು. (ಆದಿಕಾಂಡ 7:6; 2 ಪೇತ್ರ 2:⁠5) ನೋಹನು ತನ್ನ ದೈವಭಯದ ಕಾರಣ ತನ್ನ ಕುಟುಂಬದೊಂದಿಗೆ ಮಹಾ ಜಲಪ್ರಳಯವನ್ನು ಪಾರಾಗಿ, ಇಂದು ಭೂಮಿಯ ಮೇಲೆ ಜೀವಿಸುತ್ತಿರುವ ಸಕಲರ ಪೂರ್ವಜನಾದನು. ಸಾಮಾನ್ಯವಾಗಿ ದೀರ್ಘಾಯುಷ್ಯವಿದ್ದ ಸಮಯದಲ್ಲಿ ನೋಹನು ಜೀವಿಸಿದ್ದನೆಂಬುದು ನಿಜ. ಆದರೂ, ಅವನು ತನ್ನ ಅತಿ ಮುಪ್ಪಿನ ವಯಸ್ಸಿನಲ್ಲಿಯೂ ನಂಬಿಗಸ್ತನಾಗಿ ಉಳಿದನು. ಅದರ ಪರಿಣಾಮವಾಗಿ ಗಮನಾರ್ಹ ಆಶೀರ್ವಾದಗಳು ದೊರೆತವು. ಅದು ಹೇಗೆ?

4 “ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿ” ಎಂಬ ಯೆಹೋವನ ಆಜ್ಞೆಯನ್ನು ನಿಮ್ರೋದನು ಪ್ರತಿಭಟಿಸಿ ಬಾಬೆಲ್‌ ಗೋಪುರವನ್ನು ರಚಿಸತೊಡಗಿದಾಗ ನೋಹನು ಸುಮಾರು 800 ವಯಸ್ಸಿನವನು. (ಆದಿಕಾಂಡ 9:1; 11:​1-9) ಆದರೆ, ನಿಮ್ರೋದನ ದಂಗೆಯಲ್ಲಿ ನೋಹನು ಭಾಗಿಯಾಗಿರಲಿಲ್ಲ. ಆದುದರಿಂದ ಆ ದಂಗೆಕೋರರ ಭಾಷೆಯು ತಾರುಮಾರಾದಾಗ ನೋಹನ ಭಾಷೆಯು ಬದಲಾಗಲಿಲ್ಲ ಎಂಬುದು ಸಂಭವನೀಯ. ನೋಹನ ನಂಬಿಕೆ ಮತ್ತು ಸ್ಥಿರಚಿತ್ತ ಕೇವಲ ಅವನ ವೃದ್ಧಾಪ್ಯದಲ್ಲಿ ಮಾತ್ರವಲ್ಲ ಅವನ ಇಡೀ ಜೀವನಾದ್ಯಂತ ಕಂಡುಬಂದಿದೆ. ಇದು ಎಲ್ಲಾ ವಯಸ್ಸಿನ ದೇವಸೇವಕರಿಗೆ ಅನುಸರಿಸಲು ನಿಜವಾಗಿಯೂ ಯೋಗ್ಯವಾದ ಮಾದರಿಯಾಗಿದೆ.​—⁠ಇಬ್ರಿಯ 11:⁠7.

ಕುಟುಂಬದ ಮೇಲೆ ಅವರ ಪ್ರಭಾವ

5 ವಯಸ್ಸಾದವರು ತಮ್ಮ ಕುಟುಂಬ ಸದಸ್ಯರ ನಂಬಿಕೆಯ ಮೇಲೆ ಹಾಕಸಾಧ್ಯವಿರುವ ಪ್ರಭಾವವನ್ನು ನೋಹನ ಅನಂತರದ ಮೂಲಪಿತೃಗಳ ಜೀವನದಿಂದ ನೋಡಸಾಧ್ಯವಿದೆ. “ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು” ಎಂದು ದೇವರು ಅಬ್ರಹಾಮನಿಗೆ ಹೇಳಿದಾಗ ಅವನು ಸುಮಾರು 75 ವಯಸ್ಸಿನವನಾಗಿದ್ದನು.​—⁠ಆದಿಕಾಂಡ 12:​1, 2.

6 ನಿಮ್ಮ ಮನೆ, ನಿಮ್ಮ ಮಿತ್ರರು, ಹುಟ್ಟಿದ ದೇಶ ಮತ್ತು ಕುಟುಂಬಸ್ಥರ ಬೆಂಬಲ ಇವೆಲ್ಲವನ್ನು ಬಿಟ್ಟು ಅಜ್ಞಾತ ದೇಶವೊಂದಕ್ಕೆ ಹೋಗಲು ನಿಮಗೆ ಹೇಳುವಲ್ಲಿ ಹೇಗನಿಸಬಹುದೆಂದು ಸ್ವಲ್ಪ ಊಹಿಸಿ ನೋಡಿ. ಹಾಗೆಯೇ ಮಾಡುವಂತೆ ಅಬ್ರಹಾಮನಿಗೆ ಹೇಳಲಾಯಿತು. “ಯೆಹೋವನು ಹೇಳಿದ ಮೇರೆಗೆ ಅಬ್ರಹಾಮನು ಹೊರಟುಹೋದನು.” ಅವನು ತನ್ನ ಉಳಿದ ಆಯುಷ್ಕಾಲವನ್ನು ಕಾನಾನ್‌ ದೇಶದಲ್ಲಿ ಪರದೇಶಿಯಾಗಿ ಮತ್ತು ವಲಸೆಗಾರನಾಗಿ ಗುಡಾರಗಳಲ್ಲಿ ಕಳೆದನು. (ಆದಿಕಾಂಡ 12:4; ಇಬ್ರಿಯ 11:​8, 9) ಅಬ್ರಹಾಮನು “ದೊಡ್ಡ ಜನಾಂಗ” ಆಗುವನೆಂದು ಯೆಹೋವನು ಹೇಳಿದ್ದರೂ, ಅವನ ಸಂತತಿಯು ಅಸಂಖ್ಯಾತವಾಗುವುದಕ್ಕೆ ಎಷ್ಟೋ ಮೊದಲೇ ಅವನು ಮೃತನಾದನು. ಅಬ್ರಹಾಮನು ಆ ವಾಗ್ದತ್ತ ದೇಶದಲ್ಲಿ 25 ವರ್ಷಕಾಲ ಪ್ರಯಾಣಿಸಿದ ಮೇಲೆಯೇ ಅವನ ಹೆಂಡತಿ ಸಾರಳು ಅವರ ಒಬ್ಬನೇ ಮಗ ಇಸಾಕನನ್ನು ಹೆತ್ತಳು. (ಆದಿಕಾಂಡ 21:​2, 5) ಹೀಗಿದ್ದರೂ, ಅಬ್ರಹಾಮನು ಬೇಸತ್ತು ತಾನು ಎಲ್ಲಿಂದ ಬಂದಿದ್ದನೊ ಆ ನಗರಕ್ಕೆ ಹಿಂದಿರುಗಲಿಲ್ಲ. ನಂಬಿಕೆ ಮತ್ತು ಸೈರಣೆಯ ಎಂತಹ ಆದರ್ಶ!

7 ಅಬ್ರಹಾಮನು ತೋರಿಸಿದ ಸೈರಣೆ ಅವನ ಮಗನಾದ ಇಸಾಕನ ಮೇಲೆ ಪ್ರಬಲವಾದ ಪ್ರಭಾವವನ್ನು ಬೀರಿತು. ಇಸಾಕನು ಕಾನಾನ್‌ ದೇಶದಲ್ಲಿ ತನ್ನ ಇಡೀ ಜೀವಮಾನವನ್ನು ಅಂದರೆ 180 ವರುಷಗಳನ್ನು ಪರದೇಶಿಯಾಗಿ ಕಳೆದನು. ಇಸಾಕನ ಸೈರಣೆಯು ದೇವರ ವಾಗ್ದಾನದಲ್ಲಿ ಅವನಿಗಿದ್ದ ನಂಬಿಕೆಯ ಮೇಲೆ ಆಧರಿಸಲ್ಪಟ್ಟಿತು. ಆ ನಂಬಿಕೆಯನ್ನು ಅವನ ವೃದ್ಧ ಹೆತ್ತವರು ಅವನಲ್ಲಿ ಬೇರೂರಿಸಿದ್ದರು. ಬಳಿಕ ಯೆಹೋವನು ನುಡಿದ ಸ್ವಂತ ಮಾತುಗಳಿಂದ ಅದು ಸ್ಥಿರಗೊಳಿಸಲ್ಪಟ್ಟಿತು. (ಆದಿಕಾಂಡ 26:​2-5) ಸಕಲ ಮಾನವಕುಲದ ಆಶೀರ್ವಾದಕ್ಕಾಗಿ ಅಬ್ರಹಾಮನ ಕುಟುಂಬದಿಂದ ಒಂದು ‘ಸಂತಾನವು’ ಬರುತ್ತದೆಂಬ ಯೆಹೋವನ ವಾಗ್ದಾನದ ನೆರವೇರಿಕೆಯಲ್ಲಿ ಇಸಾಕನ ಸ್ಥಿರಚಿತ್ತವು ಪ್ರಮುಖ ಪಾತ್ರವನ್ನು ವಹಿಸಿತು. ನೂರಾರು ವರ್ಷಗಳ ಬಳಿಕ ಆ ‘ಸಂತಾನದ’ ಪ್ರಧಾನ ಭಾಗವಾಗಿದ್ದ ಯೇಸು ಕ್ರಿಸ್ತನು ತನ್ನಲ್ಲಿ ನಂಬಿಕೆಯಿಡುವವರೆಲ್ಲರು ದೇವರೊಂದಿಗೆ ರಾಜಿ ಮಾಡಿಕೊಳ್ಳುವ ಮತ್ತು ನಿತ್ಯಜೀವವನ್ನು ಪಡೆಯುವ ದಾರಿಯನ್ನು ತೆರೆದನು.​—⁠ಗಲಾತ್ಯ 3:16; ಯೋಹಾನ 3:16.

8 ಅದೇ ರೀತಿಯಲ್ಲಿ ಇಸಾಕನು ತನ್ನ ಮಗನಾದ ಯಾಕೋಬನು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಸಹಾಯ ಮಾಡಿದನು. ಆ ನಂಬಿಕೆ ಯಾಕೋಬನನ್ನು ಮುದಿಪ್ರಾಯದ ತನಕ ಪೋಷಿಸಿತು. ಯಾಕೋಬನು ಒಂದು ಆಶೀರ್ವಾದಕ್ಕಾಗಿ ದೇವದೂತನೊಂದಿಗೆ ರಾತ್ರಿಯಿಡೀ ಹೋರಾಡಿದಾಗ ಅವನು 97 ವಯಸ್ಸಿನವನಾಗಿದ್ದನು. (ಆದಿಕಾಂಡ 32:​24-28) ಅವನು ತನ್ನ 147ನೆಯ ವಯಸ್ಸಿನಲ್ಲಿ ಸಾಯುವುದಕ್ಕೆ ಮೊದಲು ತನ್ನ 12 ಮಂದಿ ಪುತ್ರರಲ್ಲಿ ಪ್ರತಿಯೊಬ್ಬನನ್ನು ಆಶೀರ್ವದಿಸಲಿಕ್ಕಾಗಿ ಸಾಕಷ್ಟು ಶಕ್ತಿಯನ್ನು ತಂದುಕೊಂಡನು. (ಆದಿಕಾಂಡ 47:28) ಅವನು ನುಡಿದ ಆ ಪ್ರವಾದನಾತ್ಮಕ ಮಾತುಗಳು ಈಗ ಆದಿಕಾಂಡ 49:​1-28ರಲ್ಲಿ ದಾಖಲೆಯಾಗಿವೆ. ಅವು ಸತ್ಯವಾಗಿ ಪರಿಣಮಿಸಿದ್ದು ಮಾತ್ರವಲ್ಲ ಈಗಲೂ ನೆರವೇರುತ್ತ ಇವೆ.

9 ದೇವರಿಗೆ ನಿಷ್ಠಾವಂತರಾಗಿರುವ ವೃದ್ಧ ಸೇವಕರು ತಮ್ಮ ಕುಟುಂಬದ ಸದಸ್ಯರ ಮೇಲೆ ಉತ್ತಮ ಪರಿಣಾಮವನ್ನು ಬೀರಬಲ್ಲರೆಂಬುದು ಸುಸ್ಪಷ್ಟ. ವಿವೇಕಪೂರ್ಣ ಸಲಹೆ ಹಾಗೂ ಸೈರಣೆಯ ಆದರ್ಶದಿಂದ ಕೂಡಿರುವ ಶಾಸ್ತ್ರಾಧಾರಿತ ಶಿಕ್ಷಣವು ಒಬ್ಬ ಯುವವ್ಯಕ್ತಿ ಬಲವಾದ ನಂಬಿಕೆಯುಳ್ಳವನಾಗಿ ಬೆಳೆಯಲು ಅಧಿಕ ಸಹಾಯವನ್ನು ನೀಡಬಲ್ಲದು. (ಜ್ಞಾನೋಕ್ತಿ 22:⁠6) ಆದುದರಿಂದ ತಮ್ಮ ಕುಟುಂಬದ ಮೇಲೆ ತಾವು ಬೀರಬಲ್ಲ ಪ್ರಯೋಜನಕರವಾದ ಪ್ರಭಾವವನ್ನು ವಯಸ್ಸಾದವರು ಕೀಳಂದಾಜು ಮಾಡಲೇಬಾರದು.

ಜೊತೆ ಆರಾಧಕರ ಮೇಲೆ ಪ್ರಭಾವ

10 ವಯಸ್ಸಾದವರು ಜೊತೆವಿಶ್ವಾಸಿಗಳ ಮೇಲೆಯೂ ಉತ್ತಮವಾದ ಪರಿಣಾಮವನ್ನು ಬೀರಬಲ್ಲರು. ಯಾಕೋಬನ ಮಗನಾದ ಯೋಸೇಫನು ತನ್ನ ಮುದಿಪ್ರಾಯದಲ್ಲಿ ನಂಬಿಕೆಯ ಒಂದು ಸರಳ ಕ್ರಿಯೆಯನ್ನು ನಡೆಸಿದನು. ಅದು ಅವನ ಅನಂತರ ಬದುಕಿದ ಲಕ್ಷಾಂತರ ಮಂದಿ ಸತ್ಯಾರಾಧಕರ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. ಅವನು 110 ವಯಸ್ಸಿನವನಾಗಿದ್ದಾಗ “ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆ ಕೊಟ್ಟನು.” ಅಂದರೆ, ಇಸ್ರಾಯೇಲ್ಯರು ಕೊನೆಗೆ ಐಗುಪ್ತವನ್ನು ಬಿಟ್ಟು ಹೋಗುವಾಗ ತನ್ನ ಎಲುಬುಗಳನ್ನು ಅವರ ಸಂಗಡ ತೆಗೆದುಕೊಂಡು ಹೋಗಬೇಕೆಂದು ಆಜ್ಞಾಪಿಸಿದನು. (ಇಬ್ರಿಯ 11:​22, NIBV; ಆದಿಕಾಂಡ 50:25) ಆ ಅಪ್ಪಣೆಯು ಯೋಸೇಫನ ಮರಣಾನಂತರ ಬಂದ ಅನೇಕ ವರುಷಗಳ ಕಠಿನ ದಾಸ್ಯದ ಸಮಯದಲ್ಲಿ ಇಸ್ರಾಯೇಲ್ಯರಿಗೆ ಆಶಾಕಿರಣವಾಗಿತ್ತು. ತಮ್ಮ ಬಿಡುಗಡೆ ಬರಲಿದೆ ಎಂಬುದಕ್ಕೆ ಅದು ಹೆಚ್ಚಿನ ಆಶ್ವಾಸನೆಯನ್ನು ಕೊಟ್ಟಿತು.

11 ಯೋಸೇಫನ ನಂಬಿಕೆಯ ಅಭಿವ್ಯಕ್ತಿಗಳಿಂದ ಬಲಪಡಿಸಲ್ಪಟ್ಟವರಲ್ಲಿ ಮೋಶೆ ಒಬ್ಬನಾಗಿದ್ದನು. ಮೋಶೆ 80 ವಯಸ್ಸಿನವನಾಗಿದ್ದಾಗ, ಐಗುಪ್ತ ದೇಶದಿಂದ ಯೋಸೇಫನ ಎಲುಬುಗಳನ್ನು ತನ್ನ ಸಂಗಡ ಕೊಂಡೊಯ್ಯುವ ಸದವಕಾಶ ಅವನಿಗೆ ದೊರೆಯಿತು. (ವಿಮೋಚನಕಾಂಡ 13:19) ಸುಮಾರು ಈ ಸಮಯದಲ್ಲಿ ಅವನಿಗೆ ತನಗಿಂತ ಹೆಚ್ಚು ಚಿಕ್ಕ ವಯಸ್ಸಿನವನಾಗಿದ್ದ ಯೆಹೋಶುವನ ಪರಿಚಯವಾಯಿತು. ಮುಂದಿನ 40 ವರುಷಗಳಲ್ಲಿ ಯೆಹೋಶುವನು ಮೋಶೆಯ ಸ್ವಂತ ಪರಿಚಾರಕನಾಗಿ ಸೇವೆ ಮಾಡಿದನು. (ಅರಣ್ಯಕಾಂಡ 11:28) ಅವನು ಮೋಶೆಯ ಸಂಗಡ ಸೀನಾಯಿ ಬೆಟ್ಟವನ್ನು ಹತ್ತಿದನು ಮತ್ತು ಮೋಶೆ ಬೆಟ್ಟದಿಂದ ಆಜ್ಞಾಶಾಸನಗಳ ಕಲ್ಲಿನ ಹಲಗೆಗಳನ್ನು ತೆಗೆದುಕೊಂಡು ಇಳಿದುಬಂದಾಗ ಮೋಶೆಯನ್ನು ಸಂಧಿಸಲು ಅಲ್ಲಿದ್ದನು. (ವಿಮೋಚನಕಾಂಡ 24:​12-18; 32:​15-17) ವಯಸ್ಸಾಗಿದ್ದ ಮೋಶೆಯು ಯೆಹೋಶುವನಿಗೆ ಪ್ರೌಢ ಸಲಹೆ ಮತ್ತು ವಿವೇಕದ ಎಷ್ಟು ಸಮೃದ್ಧವಾದ ಬುಗ್ಗೆಯಾಗಿದ್ದಿರಬೇಕು!

12 ಅದೇ ಪ್ರಕಾರ ಯೆಹೋಶುವನು ತಾನು ಜೀವದಿಂದಿರುವ ತನಕ ಇಸ್ರಾಯೇಲ್‌ ಜನಾಂಗಕ್ಕೆ ಪ್ರೋತ್ಸಾಹವನ್ನು ನೀಡಿದನು. ನ್ಯಾಯಸ್ಥಾಪಕರು 2:​7, 8 ನಮಗೆ ಹೀಗೆ ಹೇಳುತ್ತದೆ: “ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು.” ಆದರೆ ಯೆಹೋಶುವ ಮತ್ತು ಇತರ ಹಿರೀಪುರುಷರು ಸತ್ತ ಬಳಿಕ ಸತ್ಯ ಮತ್ತು ಮಿಥ್ಯಾರಾಧನೆಯ ಮಧ್ಯೆ 300 ವರುಷಗಳ ಹೊಯ್ದಾಟದ ಸಮಯಾವಧಿ ಪ್ರಾರಂಭಿಸಿತು. ಅದು ಪ್ರವಾದಿ ಸಮುವೇಲನ ದಿನಗಳ ವರೆಗೆ ಮುಂದುವರಿಯಿತು.

ಸಮುವೇಲನು ‘ನೀತಿಯನ್ನು ನಡಿಸಿದನು’

13 ಸಮುವೇಲನು ಸತ್ತಾಗ ಅವನಿಗೆ ಎಷ್ಟು ವಯಸ್ಸಾಗಿತ್ತೆಂದು ಬೈಬಲ್‌ ತಿಳಿಸುವುದಿಲ್ಲವಾದರೂ ಒಂದನೆಯ ಸಮುವೇಲ ಪುಸ್ತಕದ ಘಟನೆಗಳು ಸುಮಾರು 102 ವರುಷಗಳನ್ನು ಆವರಿಸುತ್ತವೆ. ಇವುಗಳಲ್ಲಿ ಹೆಚ್ಚಿನವುಗಳಿಗೆ ಸಮುವೇಲನು ಪ್ರತ್ಯಕ್ಷ ಸಾಕ್ಷಿಯಾಗಿದ್ದನು. ಇಬ್ರಿಯ 11:​32, 33ರಲ್ಲಿ, ಪ್ರಾಮಾಣಿಕರಾಗಿದ್ದ ನ್ಯಾಯಸ್ಥಾಪಕರು “ನೀತಿಯನ್ನು ನಡಿಸಿದರು” ಎಂದು ನಾವು ಓದುತ್ತೇವೆ. ಹೌದು, ಸಮುವೇಲನು ತನ್ನ ಸಮಕಾಲೀನರಲ್ಲಿ ಕೆಲವರು ತಪ್ಪನ್ನು ಮಾಡದಂತೆ ಇಲ್ಲವೆ ಅದನ್ನು ತ್ಯಜಿಸುವಂತೆ ಪ್ರಭಾವ ಬೀರಿದನು. (1 ಸಮುವೇಲ 7:​2-4) ಹೇಗೆ? ಅವನು ತನ್ನ ಜೀವಮಾನವೆಲ್ಲ ಯೆಹೋವನಿಗೆ ನಿಷ್ಠಾವಂತನಾಗಿದ್ದನು. (1 ಸಮುವೇಲ 12:​2-5) ಅರಸನಿಗೂ ಪ್ರಬಲವಾದ ಸಲಹೆಯನ್ನು ನೀಡಲು ಅವನು ಭಯಪಡಲಿಲ್ಲ. (1 ಸಮುವೇಲ 15:​16-29) ಇದಲ್ಲದೆ, ಸಮುವೇಲನು “ತಲೆನರೆತ ಮುದುಕ”ನಾಗಿದ್ದರೂ ಇತರರ ಪರವಾಗಿ ಪ್ರಾರ್ಥಿಸುವ ವಿಷಯದಲ್ಲಿ ಆದರ್ಶ ಮಾದರಿಯನ್ನಿಟ್ಟನು. ತಾನು ಜೊತೆ ಇಸ್ರಾಯೇಲ್ಯರ ಪರವಾಗಿ ‘ಪ್ರಾರ್ಥಿಸುವುದನ್ನು ಬಿಟ್ಟರೆ ಯೆಹೋವನ ದೃಷ್ಟಿಯಲ್ಲಿ ಪಾಪಿಯಾಗಿರುವೆನು’ ಎಂದು ಅವನು ತಿಳಿಯಪಡಿಸಿದನು.​—⁠1 ಸಮುವೇಲ 12:​2, 23.

14 ಇದೆಲ್ಲವೂ, ಯೆಹೋವನನ್ನು ಆರಾಧಿಸುವ ಜೊತೆಸೇವಕರ ಮೇಲೆ ವಯಸ್ಸಾದವರು ಒಳ್ಳೆಯ ಪ್ರಭಾವವನ್ನು ಬೀರುವ ಒಂದು ಅಗತ್ಯ ಮಾರ್ಗವನ್ನು ಎತ್ತಿತೋರಿಸುತ್ತದೆ. ಆರೋಗ್ಯ ಮತ್ತು ಇತರ ಸ್ಥಿತಿಗತಿಗಳು ಅವರ ಮೇಲೆ ಹೇರಬಲ್ಲ ಇತಿಮಿತಿಗಳ ಹೊರತೂ, ಮುದಿಪ್ರಾಯದವರು ಇತರರ ಪರವಾಗಿ ಪ್ರಾರ್ಥಿಸಬಲ್ಲರು. ಪ್ರಿಯ ವೃದ್ಧಜನರೇ, ನಿಮ್ಮ ಪ್ರಾರ್ಥನೆಗಳು ಸಭೆಗೆ ಎಷ್ಟು ಪ್ರಯೋಜನಕರವಾಗಿವೆ ಎಂಬುದನ್ನು ನೀವು ಗ್ರಹಿಸಿದ್ದೀರೊ? ಕ್ರಿಸ್ತನು ಸುರಿಸಿದ ರಕ್ತದಲ್ಲಿ ನಿಮಗಿರುವ ನಂಬಿಕೆಯ ಕಾರಣ ನೀವು ಯೆಹೋವನ ಮುಂದೆ ನೀತಿಯ ನಿಲುವಿನಲ್ಲಿ ಆನಂದಿಸುತ್ತೀರಿ. ನಿಮ್ಮ ಸೈರಣೆಯ ದಾಖಲೆಯ ಕಾರಣ ನಿಮ್ಮ ನಂಬಿಕೆಯು ‘ಪರಿಶೋಧಿಸಲ್ಪಟ್ಟ’ ಗುಣವಾಗಿ ಪರಿಣಮಿಸಿದೆ. (ಯಾಕೋಬ 1:3; 1 ಪೇತ್ರ 1:⁠7) “ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ” ಎಂಬುದನ್ನು ಎಂದಿಗೂ ಮರೆಯದಿರಿ.​—⁠ಯಾಕೋಬ 5:16.

15 ಯೆಹೋವನ ರಾಜ್ಯಕಾರ್ಯದ ಬೆಂಬಲಾರ್ಥವಾಗಿ ನೀವು ಮಾಡುವ ಪ್ರಾರ್ಥನೆಗಳು ಅತ್ಯಾವಶ್ಯಕವಾಗಿವೆ. ನಮ್ಮ ಸಹೋದರರಲ್ಲಿ ಕೆಲವರು ತಮ್ಮ ಕ್ರೈಸ್ತ ತಾಟಸ್ಥ್ಯದ ಕಾರಣ ಸೆರೆಮನೆಯಲ್ಲಿದ್ದಾರೆ. ಇತರರು ನೈಸರ್ಗಿಕ ವಿಪತ್ತು, ಯುದ್ಧ ಮತ್ತು ಆಂತರಿಕ ಕಲಹಗಳಿಗೆ ಬಲಿಯಾಗಿದ್ದಾರೆ. ನಮ್ಮ ಸ್ವಂತ ಸಭೆಗಳಲ್ಲಿಯೇ ಕೆಲವರು ಪ್ರಲೋಭನೆ ಅಥವಾ ವಿರೋಧಗಳನ್ನು ಎದುರಿಸುತ್ತಿದ್ದಾರಲ್ಲಾ. (ಮತ್ತಾಯ 10:​35, 36) ಸಾರುವ ಕಾರ್ಯದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುವವರಿಗೆ ಮತ್ತು ಸಭಾ ಮೇಲ್ವಿಚಾರಕರಿಗೆ ಸಹ ನಿಮ್ಮ ಕ್ರಮಬದ್ಧವಾದ ಪ್ರಾರ್ಥನೆಗಳು ಅತ್ಯಾವಶ್ಯಕ. (ಎಫೆಸ 6:​18, 19; ಕೊಲೊಸ್ಸೆ 4:​2, 3) ನೀವು ಎಪಫ್ರನು ಮಾಡಿದಂತೆಯೇ, ನಿಮ್ಮ ಪ್ರಾರ್ಥನೆಯಲ್ಲಿ ಜೊತೆವಿಶ್ವಾಸಿಗಳನ್ನು ಹೆಸರಿಸುವುದು ಅದೆಷ್ಟು ಉತ್ತಮ!​—⁠ಕೊಲೊಸ್ಸೆ 4:12.

ಮುಂದಿನ ಪೀಳಿಗೆಗೆ ಕಲಿಸುವುದು

16 ‘ಚಿಕ್ಕ ಹಿಂಡಿನ’ ನಂಬಿಗಸ್ತರೂ ಸ್ವರ್ಗೀಯ ಕರೆಯಿರುವವರೂ ಆಗಿರುವವರ ಸಹವಾಸವು, ಭೂಮಿಯ ಮೇಲೆ ಅನಂತಕಾಲ ಜೀವಿಸುವ ನಿರೀಕ್ಷೆಯಿರುವ “ಬೇರೆ ಕುರಿ” ವರ್ಗದವರಿಗೆ ಆವಶ್ಯಕ ತರಬೇತಿಯನ್ನು ಒದಗಿಸಿದೆ. (ಲೂಕ 12:32; ಯೋಹಾನ 10:16) ಇದು ಕೀರ್ತನೆ 71:18ರಲ್ಲಿ ಮುಂತಿಳಿಸಲ್ಪಟ್ಟಿದೆ. ಅದು ಓದುವುದು: “ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.” ಆತ್ಮಾಭಿಷಿಕ್ತರು ಯೇಸು ಕ್ರಿಸ್ತನೊಂದಿಗೆ ಮಹಿಮಾಭರಿತರಾಗಲು ತಮ್ಮ ಸಂಗಡಿಗರಾದ ಬೇರೆ ಕುರಿಗಳನ್ನು ಅಗಲಿಹೋಗುವುದಕ್ಕೆ ಮುಂಚೆ ಅವರನ್ನು ಹೆಚ್ಚಿನ ಜವಾಬ್ದಾರಿಗಳಿಗಾಗಿ ತರಬೇತುಗೊಳಿಸಲು ಅತ್ಯಾಸಕ್ತಿಯಿಂದಿದ್ದಾರೆ.

17 ತತ್ತ್ವತಃ, ಕೀರ್ತನೆ 71:18ರಲ್ಲಿ “ಮುಂದಿನ ತಲೆಯವರಿಗೆ” ಕಲಿಸುವ ವಿಷಯವನ್ನು, ದೇವರ ಅಭಿಷಿಕ್ತರಿಂದ ಶಿಕ್ಷಣ ಪಡೆದಿರುವ ಬೇರೆ ಕುರಿಗಳಿಗೂ ಅನ್ವಯಿಸಸಾಧ್ಯವಿದೆ. ಈಗ ಸತ್ಯಾರಾಧನೆಯನ್ನು ಸ್ವೀಕರಿಸುತ್ತಿರುವವರಿಗೆ ತನ್ನ ವಿಷಯದಲ್ಲಿ ಸಾಕ್ಷಿ ಹೇಳುವ ಸದವಕಾಶವನ್ನು ಯೆಹೋವನು ವಯಸ್ಸಾದವರಿಗೆ ವಹಿಸಿದ್ದಾನೆ. (ಯೋವೇಲ 1:​2, 3) ಬೇರೆ ಕುರಿಗಳು ತಾವು ಅಭಿಷಿಕ್ತರಿಂದ ಕಲಿತುಕೊಂಡಿರುವ ವಿಷಯಗಳಿಗಾಗಿ ಆಶೀರ್ವದಿತರೆಂದೆಣಿಸುತ್ತಾರೆ. ಮಾತ್ರವಲ್ಲ, ತಮಗೆ ದೊರಕಿರುವ ಶಾಸ್ತ್ರಸಂಬಂಧವಾದ ಜ್ಞಾನವನ್ನು ಯೆಹೋವನನ್ನು ಸೇವಿಸಲು ಅಪೇಕ್ಷಿಸುವ ಇನ್ನಿತರರಿಗೆ ಹಂಚಲು ಪ್ರಚೋದಿತರಾಗಿದ್ದಾರೆ.​—⁠ಪ್ರಕಟನೆ 7:​9, 10.

18 ಯೆಹೋವನ ಪ್ರಾಯಸ್ಥ ಸೇವಕರು, ಅವರು ಅಭಿಷಿಕ್ತರಾಗಿರಲಿ ಬೇರೆ ಕುರಿಗಳವರಾಗಿರಲಿ, ಪ್ರಾಮುಖ್ಯವಾದ ಐತಿಹಾಸಿಕ ಘಟನೆಗಳಿಗೆ ಜೀವಂತ ಕೊಂಡಿಯಾಗಿದ್ದಾರೆ. ಇನ್ನೂ ಜೀವಿಸುತ್ತಿರುವವರಲ್ಲಿ ಕೆಲವರು “ಫೋಟೋಡ್ರಾಮ ಆಫ್‌ ಕ್ರಿಯೇಶನ್‌” ಚಿತ್ರದ ಆದಿ ಪ್ರದರ್ಶನಗಳನ್ನು ನೋಡಿರುತ್ತಾರೆ. ಇವರಲ್ಲಿ ಕೆಲವರಿಗೆ ಆಗ ಮುಂದಾಳುತ್ವವನ್ನು ವಹಿಸುತ್ತಿದ್ದು 1918ರಲ್ಲಿ ಬಂಧಿತರಾದ ಸಹೋದರರ ವೈಯಕ್ತಿಕ ಪರಿಚಯವಿತ್ತು. ಇತರರು ವಾಚ್‌ಟವರ್‌ ರೇಡಿಯೊ ಸ್ಟೇಶನ್‌ WBBR ಇದರ ಪ್ರಸಾರದಲ್ಲಿ ಭಾಗವಹಿಸಿದ್ದರು. ಯೆಹೋವನ ಸಾಕ್ಷಿಗಳ ಧಾರ್ಮಿಕ ಸ್ವಾತಂತ್ರ್ಯ ಸಂಬಂಧವಾದ ಮೊಕದ್ದಮೆಗಳು ಉಚ್ಚ ನ್ಯಾಯಾಲಯಗಳಲ್ಲಿ ವಾದಿಸಲ್ಪಡುತ್ತಿದ್ದ ಸಮಯಗಳ ಕುರಿತು ಅನೇಕರು ಹೇಳಬಲ್ಲರು. ಇನ್ನಿತರರು ಸರ್ವಾಧಿಕಾರದ ಸರಕಾರಗಳಡಿಯಲ್ಲಿ ಜೀವಿಸುತ್ತಿದ್ದರೂ ಸತ್ಯಾರಾಧನೆಯನ್ನು ಸಮರ್ಥಿಸುತ್ತ ಸ್ಥಿರವಾಗಿ ನಿಂತರು. ಹೌದು, ಸತ್ಯದ ತಿಳಿವಳಿಕೆ ಪ್ರಗತಿಪರವಾಗಿ ಹೇಗೆ ಪ್ರಕಟವಾಯಿತೆಂಬುದನ್ನು ಇತರ ವಯೋವೃದ್ಧರು ಹೇಳಬಲ್ಲರು. ಅವರ ಈ ಅನುಭವ ಸಂಪತ್ತಿನಿಂದ ನಾವು ಪ್ರಯೋಜನಪಡೆಯುವಂತೆ ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ.​—⁠ಧರ್ಮೋಪದೇಶಕಾಂಡ 32:⁠7.

19 ವೃದ್ಧ ಕ್ರೈಸ್ತರು ಎಳೆಯರಿಗೆ ಉತ್ತಮ ಮಾದರಿಗಳಾಗಿರುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ. (ತೀತ 2:​2-4) ನಿಮ್ಮ ಸೈರಣೆ, ಪ್ರಾರ್ಥನೆ ಮತ್ತು ಸಲಹೆಗಳು ಇತರರ ಮೇಲೆ ಬೀರುವ ಪರಿಣಾಮವನ್ನು ನೀವು ಪ್ರಾಯಶಃ ಈಗ ನೋಡಲಿಕ್ಕಿಲ್ಲ. ನೋಹ, ಅಬ್ರಹಾಮ, ಯೋಸೇಫ, ಮೋಶೆ ಮತ್ತು ಇತರರಿಗೆ ತಮ್ಮ ನಂಬಿಗಸ್ತಿಕೆಯು ಮುಂದಿನ ತಲೆಮಾರುಗಳ ಮೇಲೆ ಬೀರಿರುವ ಮಹತ್ತರವಾದ ಪರಿಣಾಮವನ್ನು ತಿಳಿಯುವ ಸಾಧ್ಯತೆಯೇ ಇರಲಿಲ್ಲ. ಆದರೂ ಅವರ ನಂಬಿಕೆ ಮತ್ತು ಸಮಗ್ರತೆ ಮಹತ್ತರವಾದ ಪರಿಣಾಮವನ್ನು ಬರಮಾಡಿದೆ. ನಿಮ್ಮ ಮಾದರಿಯು ಸಹ ಇಂದಿರುವ ಎಳೆಯ ಪೀಳಿಗೆಯ ಮೇಲೆ ತದ್ರೀತಿಯ ಪ್ರಭಾವವನ್ನು ಬೀರಬಲ್ಲದು.

20 ನೀವು ‘ಮಹಾಸಂಕಟವನ್ನು’ ಪಾರಾಗಿ ಉಳಿಯುವವರಾಗಿರಲಿ ಪುನರುತ್ಥಾನದಲ್ಲಿ ಎಬ್ಬಿಸಲ್ಪಡುವವರಾಗಿರಲಿ ‘ವಾಸ್ತವವಾದ ಜೀವನವನ್ನು’ ಅನುಭವಿಸುವುದು ಅದೆಷ್ಟು ಹರ್ಷಕರ! (ಮತ್ತಾಯ 24:20; 1 ತಿಮೊಥೆಯ 6:19) ಕ್ರಿಸ್ತನ ಸಾವಿರ ವರುಷಗಳ ಆಳಿಕೆಯಲ್ಲಿ ಯೆಹೋವನು ಮುದಿಪ್ರಾಯದ ಪರಿಣಾಮಗಳನ್ನು ವಿಪರ್ಯಸ್ತಮಾಡುವ ಸಮಯದ ಕುರಿತು ಆಲೋಚಿಸಿ. ಆಗ ನಮ್ಮ ದೇಹಗಳು ಸದಾ ಬಲಹೀನವಾಗುತ್ತಾ ಹೋಗುವುದನ್ನು ನೋಡುವ ಬದಲಿಗೆ ದಿನ ದಿನವೂ ಕಳೆದುಂಬಿದ ದೈಹಿಕ ಸೌಖ್ಯವನ್ನು ಅಂದರೆ ಅಧಿಕ ಶಕ್ತಿಸಾಮರ್ಥ್ಯ, ಸೂಕ್ಷ್ಮ ದೃಷ್ಟಿ, ತೀಕ್ಷ್ಣ ಶ್ರವಣಶಕ್ತಿ, ಸುಂದರ ರೂಪ ಇವುಗಳನ್ನು ನೋಡುವೆವು! (ಯೋಬ 33:25; ಯೆಶಾಯ 35:​5, 6) ದೇವರ ನೂತನ ಲೋಕದಲ್ಲಿ ಜೀವಿಸುವ ಆಶೀರ್ವಾದವನ್ನು ಪಡೆದವರು ಮುಂದೆ ಅನುಭವಿಸಲಿರುವ ಶಾಶ್ವತತೆಯ ದೃಷ್ಟಿಯಲ್ಲಿ ಸದಾ ಎಳೆಯರೇ ಆಗಿರುವರು. (ಯೆಶಾಯ 65:22) ಆದಕಾರಣ, ನಾವೆಲ್ಲರೂ ನಮ್ಮ ನಿರೀಕ್ಷೆಯನ್ನು ಅಂತ್ಯದ ವರೆಗೆ ಸ್ಥಿರವಾಗಿಟ್ಟುಕೊಂಡು ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುತ್ತಿರೋಣ. ಯೆಹೋವನು ತಾನು ವಾಗ್ದಾನಿಸಿದ್ದನ್ನೆಲ್ಲ ಖಂಡಿತ ನೆರವೇರಿಸುತ್ತಾನೆ ಮತ್ತು ಆತನು ಮಾಡುವ ಕಾರ್ಯಗಳು ನಮ್ಮ ನಿರೀಕ್ಷೆಗಳಿಗೂ ಮಿಗಿಲಾಗಿರುವುವು ಎಂಬ ನಿಶ್ಚಯ ನಮಗಿರಬಲ್ಲದು.​—⁠ಕೀರ್ತನೆ 37:4; 145:16. (w07 6/1)

ನಿಮ್ಮ ಉತ್ತರವೇನು?

• ವೃದ್ಧನಾಗಿದ್ದ ನೋಹನ ಸ್ಥಿರಚಿತ್ತವು ಇಡೀ ಮಾನವಕುಲಕ್ಕೆ ಹೇಗೆ ಆಶೀರ್ವಾದವನ್ನು ತಂದಿತು?

• ಮೂಲಪಿತೃಗಳ ನಂಬಿಕೆ ಅವರ ತಲೆಮಾರುಗಳ ಮೇಲೆ ಯಾವ ಪರಿಣಾಮವನ್ನು ಬೀರಿತು?

• ತಮ್ಮ ಮುದಿಪ್ರಾಯದಲ್ಲಿ ಯೋಸೇಫ, ಮೋಶೆ, ಯೆಹೋಶುವ ಮತ್ತು ಸಮುವೇಲರು ತಮ್ಮ ಜೊತೆ ಆರಾಧಕರನ್ನು ಹೇಗೆ ಬಲಪಡಿಸಿದರು?

• ವೃದ್ಧರು ಪರಂಪರೆಯಾಗಿ ಯಾವ ಸ್ವಾಸ್ತ್ಯವನ್ನು ದಾಟಿಸಬಲ್ಲರು?

[ಅಧ್ಯಯನ ಪ್ರಶ್ನೆಗಳು]

1, 2. ದೇವರ ವೃದ್ಧ ಸೇವಕರು ಯಾವುದನ್ನು ಮಾನ್ಯಮಾಡಬೇಕು ಮತ್ತು ನಾವೀಗ ಏನನ್ನು ಪರಿಗಣಿಸುವೆವು?

3. ನೋಹನ ನಂಬಿಗಸ್ತಿಕೆ ಈಗ ಜೀವಿಸುತ್ತಿರುವ ಎಲ್ಲರ ಮೇಲೆ ಹೇಗೆ ಪರಿಣಾಮ ಬೀರಿದೆ?

4. ನೋಹನು ತೋರಿಸಿದ ಸ್ಥಿರಚಿತ್ತವು ದೇವರ ಇಂದಿನ ಸೇವಕರಿಗೆ ಹೇಗೆ ಪ್ರಯೋಜನವನ್ನು ತಂದಿದೆ?

5, 6. (ಎ) ಅಬ್ರಹಾಮನು 75 ವಯಸ್ಸಿನವನಾಗಿದ್ದಾಗ ಏನು ಮಾಡುವಂತೆ ಯೆಹೋವನು ಹೇಳಿದನು? (ಬಿ) ದೇವರ ಆಜ್ಞೆಗೆ ಅಬ್ರಹಾಮನ ಪ್ರತಿವರ್ತನೆ ಏನಾಗಿತ್ತು?

7. ಅಬ್ರಹಾಮನ ಸೈರಣೆ ಅವನ ಮಗನಾದ ಇಸಾಕನ ಮೇಲೆ ಯಾವ ಪ್ರಭಾವವನ್ನು ಬೀರಿತು ಮತ್ತು ಮಾನವಕುಲಕ್ಕೆ ಯಾವ ಪ್ರತಿಫಲವನ್ನು ತಂದಿತು?

8. ಯಾಕೋಬನು ತನ್ನ ಬಲವಾದ ನಂಬಿಕೆಯನ್ನು ಹೇಗೆ ತೋರಿಸಿದನು ಮತ್ತು ಇದರ ಪರಿಣಾಮವೇನು?

9. ಆಧ್ಯಾತ್ಮಿಕವಾಗಿ ಪ್ರೌಢರಾಗಿರುವ ವೃದ್ಧರು ತಮ್ಮ ಕುಟುಂಬಗಳ ಮೇಲೆ ಬೀರಬಹುದಾದ ಪ್ರಭಾವದ ಕುರಿತು ಏನು ಹೇಳಸಾಧ್ಯವಿದೆ?

10. “ತನ್ನ ಎಲುಬುಗಳ ವಿಷಯದಲ್ಲಿ” ಯೋಸೇಫನ “ಅಪ್ಪಣೆ” ಏನಾಗಿತ್ತು ಮತ್ತು ಇದರ ಪರಿಣಾಮವೇನಾಗಿತ್ತು?

11. ಮುದಿಪ್ರಾಯದಲ್ಲಿದ್ದ ಮೋಶೆಯು ಯೆಹೋಶುವನ ಮೇಲೆ ಯಾವ ಪ್ರಭಾವವನ್ನು ಬೀರಿರುವುದು ಸಂಭವನೀಯ?

12. ಯೆಹೋಶುವನು ತಾನು ಜೀವಿಸಿದಷ್ಟು ಕಾಲ ಇಸ್ರಾಯೇಲ್‌ ಜನಾಂಗದ ಮೇಲೆ ಹೇಗೆ ಒಳ್ಳೆಯ ಪ್ರಭಾವವನ್ನು ಬೀರಿದನು?

13. ‘ನೀತಿಯನ್ನು ನಡಿಸಲು’ ಸಮುವೇಲನು ಏನು ಮಾಡಿದನು?

14, 15. ಪ್ರಾರ್ಥನೆಯ ಸಂಬಂಧದಲ್ಲಿ ಇಂದಿನ ವಯೋವೃದ್ಧರು ಸಮುವೇಲನನ್ನು ಹೇಗೆ ಅನುಸರಿಸಬಹುದು?

16, 17. ಕೀರ್ತನೆ 71:18ರಲ್ಲಿ ಏನು ಮುಂತಿಳಿಸಲಾಗಿದೆ ಮತ್ತು ಅದು ಸತ್ಯವಾಗಿರುವುದು ಹೇಗೆ?

18, 19. (ಎ) ಯೆಹೋವನ ಸೇವಕರಲ್ಲಿ ಅನೇಕ ಮಂದಿ ವಯಸ್ಸಾದವರು ಯಾವ ಅಮೂಲ್ಯ ಮಾಹಿತಿಯನ್ನು ಇತರರಿಗೆ ಕೊಡಬಲ್ಲರು? (ಬಿ) ವೃದ್ಧ ಕ್ರೈಸ್ತರಿಗೆ ಯಾವುದರ ಬಗ್ಗೆ ದೃಢವಿಶ್ವಾಸವಿರಬೇಕು?

20. ತಮ್ಮ ನಿರೀಕ್ಷೆಯನ್ನು ಕೊನೆಯ ತನಕ ಸ್ಥಿರವಾಗಿ ಇಟ್ಟುಕೊಳ್ಳುವವರಿಗೆ ಯಾವ ಆಶೀರ್ವಾದಗಳು ಕಾದಿವೆ?

[ಪುಟ 27ರಲ್ಲಿರುವ ಚಿತ್ರ]

ಅಬ್ರಹಾಮನು ತೋರಿಸಿದ ಸೈರಣೆ ಇಸಾಕನನ್ನು ಪ್ರಬಲವಾಗಿ ಪ್ರಭಾವಿಸಿತು

[ಪುಟ 29ರಲ್ಲಿರುವ ಚಿತ್ರ]

ನೀವು ಇತರರ ಪರವಾಗಿ ಮಾಡುವ ಪ್ರಾರ್ಥನೆಗಳು ಹೆಚ್ಚು ಒಳ್ಳೆಯದನ್ನು ಮಾಡಬಲ್ಲವು

[ಪುಟ 30ರಲ್ಲಿರುವ ಚಿತ್ರ]

ನಂಬಿಗಸ್ತ ವಯೋವೃದ್ಧರಿಗೆ ಕಿವಿಗೊಡುವುದರಿಂದ ಯುವಜನರು ಪ್ರಯೋಜನ ಪಡೆಯುತ್ತಾರೆ