ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನಾಂಗೀಯ ಅಸಹನೆಗೆ ಪರಿಹಾರವೇನು?

ಜನಾಂಗೀಯ ಅಸಹನೆಗೆ ಪರಿಹಾರವೇನು?

ಜನಾಂಗೀಯ ಅಸಹನೆಗೆ ಪರಿಹಾರವೇನು?

ಮೆಕ್ಸಿಕೋದಲ್ಲಿ ಫುಟ್‌ಬಾಲ್‌ ಪಂದ್ಯದ ರೆಫರಿಯು ಆಟವನ್ನು ಸ್ವಲ್ಪಹೊತ್ತು ನಿಲ್ಲಿಸಿಬಿಟ್ಟನು. ಯಾಕೆ? ಯಾಕೆಂದರೆ ಹಲವಾರು ಪ್ರೇಕ್ಷಕರು ಕ್ಯಾಮರೂನ್‌ ದೇಶದ ಆಟಗಾರನೊಬ್ಬನನ್ನು ಎಷ್ಟು ಕೆಟ್ಟ ಮಾತುಗಳಿಂದ ಹೀನೈಸಿದರೆಂದರೆ ಅವನು ಆಟದ ಮೈದಾನವನ್ನೇ ಬಿಟ್ಟುಹೋಗುವ ಬೆದರಿಕೆಯೊಡ್ಡಿದನು. ರಷ್ಯದಲ್ಲಿ ವಾಸಿಸುವ ಆಫ್ರಿಕದವರು, ಏಷಿಯನರು ಮತ್ತು ಲ್ಯಾಟಿನ್‌ ಅಮೆರಿಕದವರ ಮೇಲೆ ಹಿಂಸಾತ್ಮಕ ಆಕ್ರಮಣಗಳು ಸರ್ವಸಾಮಾನ್ಯವಾಗಿಬಿಟ್ಟಿವೆ. 2004ರಲ್ಲಿ ಅಲ್ಲಿ ನಡೆದ ಹಿಂಸಾತ್ಮಕ ದಾಳಿಗಳು 55% ಏರುತ್ತಾ, 2005ರಲ್ಲಿ ಈ ಪ್ರಕರಣಗಳ ಸಂಖ್ಯೆಯು 394ನ್ನು ತಲಪಿತು. ಬ್ರಿಟನಿನಲ್ಲಿ ನಡೆಸಲಾದ ಒಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದ ಏಷಿಯನರು ಹಾಗೂ ಕರಿಯರಲ್ಲಿ ಮೂರರಲ್ಲೊಬ್ಬನಿಗೆ, ಜನಾಂಗೀಯ ತಾರತಮ್ಯದಿಂದಾಗಿ ತಮ್ಮನ್ನು ಕೆಲಸದಿಂದ ವಜಾಮಾಡಲಾಗಿತ್ತೆಂದು ಅನಿಸಿತು. ಈ ಉದಾಹರಣೆಗಳು ಇದು ಲೋಕವ್ಯಾಪಕವಾಗಿ ಹಬ್ಬಿರುವ ಒಂದು ಪ್ರವೃತ್ತಿಯಾಗಿದೆ ಎಂಬುದನ್ನು ತೋರಿಸುತ್ತವೆ.

ಜನಾಂಗೀಯ ಅಸಹನೆಯ ತೀವ್ರತೆಯಲ್ಲಿ ವ್ಯತ್ಯಾಸವಿರುತ್ತದೆ. ಅದು ಹೀನೈಸುವಂಥ ಇಲ್ಲವೇ ವಿಚಾರಹೀನ ಮಾತುಗಳಿಂದ ಹಿಡಿದು, ನಿರ್ದಿಷ್ಟ ಜನಾಂಗೀಯ ಗುಂಪನ್ನು ನಿರ್ಮೂಲಮಾಡಲು ರಾಷ್ಟ್ರೀಯ ಕಾರ್ಯನೀತಿಯನ್ನೇ ಜಾರಿಗೆತರುವಷ್ಟರ ಮಟ್ಟಿಗೆ ತೀವ್ರವಾಗಿರಬಲ್ಲದು. * ಜನಾಂಗೀಯ ಅಸಹನೆಯ ಮೂಲಕಾರಣವೇನು? ವೈಯಕ್ತಿಕವಾಗಿ ನಾವು ಅದನ್ನು ಹೇಗೆ ವ್ಯಕ್ತಪಡಿಸದೇ ಇರಬಹುದು? ಎಲ್ಲ ಜನಾಂಗಗಳು ಒಂದು ದಿನ ಶಾಂತಿಯಿಂದ ಕೂಡಿ ಬಾಳುವವು ಎಂದು ನಿರೀಕ್ಷಿಸುವುದು ಸಮಂಜಸವೋ? ಬೈಬಲ್‌ ಈ ವಿಷಯಗಳ ಬಗ್ಗೆ ಆಸಕ್ತಿದಾಯಕ ಒಳನೋಟವನ್ನು ಕೊಡುತ್ತದೆ.

ಹಿಂಸಾಚಾರ ಮತ್ತು ದ್ವೇಷ

“ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 8:21) ಹೀಗಿರುವುದರಿಂದ ಬೇರೆಯವರಿಗೆ ಹಿಂಸೆಕೊಡುವುದರಿಂದ ಕೆಲವರಿಗೆ ವಿಕೃತ ಆನಂದ ಸಿಗುತ್ತದೆ. ಬೈಬಲ್‌ ಮುಂದಕ್ಕೆ ಹೇಳುವುದು: “ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ.”​—⁠ಪ್ರಸಂಗಿ 4:⁠1.

ಜನಾಂಗೀಯ ದ್ವೇಷವು ಒಂದು ಹೊಸ ಸಂಗತಿಯಲ್ಲವೆಂದೂ ಬೈಬಲ್‌ ತೋರಿಸುತ್ತದೆ. ಉದಾಹರಣೆಗಾಗಿ 3,000ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಐಗುಪ್ತದ ಫರೋಹನೊಬ್ಬನು, ಇಬ್ರಿಯನಾಗಿದ್ದ ಯಾಕೋಬ ಮತ್ತವನ ದೊಡ್ಡ ಕುಟುಂಬವನ್ನು ಐಗುಪ್ತಕ್ಕೆ ಬಂದು ನೆಲೆಸುವಂತೆ ಆಮಂತ್ರಿಸಿದನು. ಆದರೆ ಮುಂದೆ ಇನ್ನೊಬ್ಬ ಫರೋಹನಿಗೆ, ಈ ದೊಡ್ಡ ಸಂಖ್ಯೆಯ ವಲಸೆಗಾರರಿಂದಾಗಿ ಐಗುಪ್ತದ ಜನರಿಗೆ ಅಪಾಯವಿದೆಯೆಂದು ಅನಿಸತೊಡಗಿತು. ದಾಖಲೆಯು ಹೇಳುವುದೇನೆಂದರೆ ಇದರಿಂದಾಗಿ ‘ಅವನು ತನ್ನ ಜನರಿಗೆ​—⁠ಇಸ್ರಾಯೇಲ್ಯರು ನಮ್ಮ ಅಧೀನದಲ್ಲಿರದಷ್ಟು ಬಹಳವಾಗಿಯೂ ಬಲವಾಗಿಯೂ ಇದ್ದಾರೆ ನೋಡಿರಿ. . . . ಅವರು ವೃದ್ಧಿಯಾಗದಂತೆ ನಾವು ಉಪಾಯಮಾಡೋಣ ಎಂದು ಹೇಳಿದನು. ಆದಕಾರಣ ಅವನ ಜನರು ಇಸ್ರಾಯೇಲ್ಯರನ್ನು ಬಿಟ್ಟೀಕೆಲಸದಿಂದ ಉಪದ್ರವಪಡಿಸುವದಕ್ಕಾಗಿ ಬಿಟ್ಟೀಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇಟ್ಟರು.’ (ವಿಮೋಚನಕಾಂಡ 1:9-11) ಯಾಕೋಬನ ವಂಶದ ಎಲ್ಲ ನವಜಾತ ಗಂಡುಮಕ್ಕಳನ್ನು ಹತಿಸುವಂತೆಯೂ ಐಗುಪ್ತ್ಯರು ಅಪ್ಪಣೆ ಹೊರಡಿಸಿದರು.​—⁠ವಿಮೋಚನಕಾಂಡ 1:​15, 16.

ಮೂಲ ಕಾರಣವೇನು?

ಜನಾಂಗೀಯ ಅಸಹನೆಯನ್ನು ವಿರೋಧಿಸುವುದರಲ್ಲಿ ಲೋಕದ ಧರ್ಮಗಳು ನೀಡಿರುವ ಸಹಾಯವು ತೀರ ಕೊಂಚ. ಕೆಲವೊಮ್ಮೆ ಅಲ್ಲಲ್ಲಿ ಒಬ್ಬೊಬ್ಬರು ಹಿಂಸೆ ಅಥವಾ ದಬ್ಬಾಳಿಕೆಯನ್ನು ಕೆಚ್ಚೆದೆಯಿಂದ ವಿರೋಧಿಸಿದ್ದಾರಾದರೂ, ಒಟ್ಟಿನಲ್ಲಿ ಧರ್ಮಗಳು ಹೆಚ್ಚಾಗಿ ದಬ್ಬಾಳಿಕೆಗಾರರ ಪಕ್ಷವಹಿಸಿವೆ. ಅಮೆರಿಕದಲ್ಲಿ ಇದೇ ನಡೆಯಿತು. ಅಲ್ಲಿ ಕಾನೂನು ಹಾಗೂ ಗಲ್ಲಿಗೇರಿಸುವಿಕೆಯನ್ನು ಬಳಸಿ, ಕರಿಯ ಜನರನ್ನು ಬಲವಂತಮಾಡಿ ಸ್ವಾಧೀನಕ್ಕೆ ತರಲಾಯಿತು. ಕರಿಯರ ಹಾಗೂ ಬಿಳಿಯರ ನಡುವೆ ಮಿಶ್ರ ವಿವಾಹಗಳನ್ನು ನಿಷೇಧಿಸುವ ನಿಯಮಗಳು 1967ರ ತನಕ ಜಾರಿಯಲ್ಲಿದ್ದವು. ಇದು, ವರ್ಣಭೇದ ನೀತಿ ಇದ್ದಂಥ ದಕ್ಷಿಣ ಆಫ್ರಿಕದಲ್ಲೂ ಸತ್ಯವಾಗಿತ್ತು. ಅಲ್ಲಿದ್ದ ಅಲ್ಪಸಂಖ್ಯಾತರ ಒಂದು ಗುಂಪು ತಮ್ಮ ಪ್ರತಿಷ್ಠಿತ ಸ್ಥಾನವನ್ನು ಕಾಪಾಡಲಿಕ್ಕೋಸ್ಕರ ಕಾನೂನುಗಳನ್ನು ಬಳಸಿತು ಮತ್ತು ಇದರಲ್ಲಿ ಅಂತರ್‌ಜಾತೀಯ ವಿವಾಹದ ಮೇಲಿನ ನಿಷೇಧವು ಒಳಗೂಡಿತ್ತು. ಈ ಎರಡೂ ದೇಶಗಳಲ್ಲಿ, ಅಸಹನೆಯನ್ನು ಪ್ರವರ್ಧಿಸಿದ ಜನಾಂಗೀಯ ಗುಂಪಿನ ಕೆಲವರು ತುಂಬ ಧಾರ್ಮಿಕ ವ್ಯಕ್ತಿಗಳಾಗಿದ್ದರು.

ಆದರೆ ಜನಾಂಗೀಯ ಅಸಹನೆಯ ಹೆಚ್ಚು ಗಾಢವಾದ ಕಾರಣವನ್ನು ಬೈಬಲ್‌ ಪ್ರಕಟಪಡಿಸುತ್ತದೆ. ಕೆಲವು ಜನಾಂಗೀಯ ಗುಂಪುಗಳು ಇತರ ಜನಾಂಗೀಯ ಗುಂಪುಗಳ ಮೇಲೆ ಏಕೆ ದಬ್ಬಾಳಿಕೆ ನಡೆಸುತ್ತವೆಂದು ಅದು ವಿವರಿಸುತ್ತಾ ಹೀಗನ್ನುತ್ತದೆ: “ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು. ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾನ 4:8, 20) ಈ ಹೇಳಿಕೆಯು ಜನಾಂಗೀಯ ಅಸಹನೆಯ ಮೂಲ ಕಾರಣವನ್ನು ಗುರುತಿಸುತ್ತದೆ. ಅದೇನೆಂದರೆ, ಜನರು ತಾವು ಧರ್ಮಶ್ರದ್ಧೆಯುಳ್ಳವರೆಂದು ಹೇಳಿಕೊಳ್ಳಲಿ ಹೇಳಿಕೊಳ್ಳದಿರಲಿ, ಅವರು ದೇವರನ್ನು ತಿಳಿಯದೇ ಇಲ್ಲವೇ ಪ್ರೀತಿಸದೆ ಇರುವಾಗ ಈ ಅಸಹನೆ ತೋರಿಸುತ್ತಾರೆ.

ದೇವರ ಜ್ಞಾನ​—⁠ಜನಾಂಗೀಯ ಸಾಮರಸ್ಯಕ್ಕೆ ಆಧಾರ

ದೇವರನ್ನು ತಿಳಿಯುವುದು ಮತ್ತು ಪ್ರೀತಿಸುವುದು ಜನಾಂಗೀಯ ಸಾಮರಸ್ಯವನ್ನು ಹುಟ್ಟಿಸುವುದು ಹೇಗೆ? ತಮಗಿಂತ ಭಿನ್ನರಾಗಿರುವಂತೆ ತೋರುವವರಿಗೆ ಹಾನಿಮಾಡುವುದರಿಂದ ಜನರನ್ನು ತಡೆಯುವ ಯಾವ ಜ್ಞಾನ ದೇವರ ವಾಕ್ಯದಲ್ಲಿದೆ? ಯೆಹೋವನು ಎಲ್ಲ ಮನುಷ್ಯರ ತಂದೆಯಾಗಿದ್ದಾನೆಂದು ಬೈಬಲ್‌ ಪ್ರಕಟಪಡಿಸುತ್ತದೆ. ಅದನ್ನುವುದು: “ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು.” (1 ಕೊರಿಂಥ 8:6) ಮುಂದಕ್ಕೆ ಅದು ಹೇಳುವುದು: ‘ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿದನು.’ (ಅ. ಕೃತ್ಯಗಳು 17:26) ಈ ಕಾರಣದಿಂದ ಎಲ್ಲ ಮನುಷ್ಯರು ಕಾರ್ಯತಃ ಸಹೋದರರಾಗಿದ್ದಾರೆ.

ಎಲ್ಲ ಜನಾಂಗೀಯ ಗುಂಪುಗಳು ದೇವರಿಂದ ಜೀವವನ್ನು ಪಡೆದಿರುವುದಕ್ಕಾಗಿ ಹೆಮ್ಮೆಪಡಬಲ್ಲವು. ಆದರೆ ಇವರೆಲ್ಲರಿಗೂ ತಮ್ಮ ವಂಶಾವಳಿಯ ಬಗ್ಗೆ ವಿಷಾದಿಸಲು ಒಂದು ಸಂಗತಿಯಿದೆ. ಬೈಬಲ್‌ ಲೇಖಕನಾದ ಪೌಲನು ಹೇಳಿದ್ದು: ‘ಒಬ್ಬ ಮನುಷ್ಯನಿಂದ ಪಾಪವು ಲೋಕದೊಳಗೆ ಸೇರಿತು.’ ಹೀಗೆ, “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.’ (ರೋಮಾಪುರ 3:23; 5:12) ಯೆಹೋವನು ವೈವಿಧ್ಯತೆಯ ದೇವರಾಗಿದ್ದಾನೆ. ಆದುದರಿಂದಲೇ, ಒಂದು ಜೀವಿ ಇನ್ನೊಂದರಂತಿರದೆ ಭಿನ್ನವಾಗಿದೆ. ಹಾಗಿದ್ದರೂ, ಯಾವುದೇ ಜನಾಂಗೀಯ ಗುಂಪು ಇನ್ನೊಂದು ಗುಂಪಿಗಿಂತ ಶ್ರೇಷ್ಠವಾಗಿದೆ ಎಂದೆಣಿಸಲು ಆತನು ಯಾವುದೇ ಆಧಾರ ಕೊಟ್ಟಿಲ್ಲ. ‘ನನ್ನ ಜನಾಂಗವೇ ಶ್ರೇಷ್ಠ’ ಎಂಬ ವ್ಯಾಪಕವಾದ ಭಾವನೆಯು, ಬೈಬಲಿನಲ್ಲಿ ಕೊಡಲ್ಪಟ್ಟಿರುವ ವಾಸ್ತವಾಂಶಗಳಿಗೆ ತದ್ವಿರುದ್ಧವಾಗಿದೆ. ದೇವರಿಂದ ನಾವು ಪಡೆಯುವ ಜ್ಞಾನವು ಜನಾಂಗೀಯ ಸಾಮರಸ್ಯವನ್ನು ಪ್ರವರ್ಧಿಸುತ್ತದೆಂಬುದು ಸುಸ್ಪಷ್ಟ.

ಎಲ್ಲ ಜನಾಂಗಗಳ ಬಗ್ಗೆ ದೇವರ ಕಾಳಜಿ

ಇಸ್ರಾಯೇಲ್ಯರಿಗೆ ಅನುಗ್ರಹ ತೋರಿಸಿ, ಅವರು ಇತರ ಜನಾಂಗಗಳಿಂದ ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳಬೇಕೆಂದು ಕಲಿಸುವ ಮೂಲಕ ದೇವರೇ ಜನಾಂಗೀಯ ಪೂರ್ವಗ್ರಹಕ್ಕೆ ಇಂಬುಕೊಟ್ಟನಲ್ಲವೇ ಎಂದು ಕೆಲವರಿಗೆ ಅನಿಸಬಹುದು. (ವಿಮೋಚನಕಾಂಡ 34:12) ಒಂದು ಕಾಲದಲ್ಲಿ, ದೇವರು ಇಸ್ರಾಯೇಲ್‌ ಜನಾಂಗವನ್ನು ತನ್ನ ವಿಶೇಷ ಸ್ವತ್ತಾಗಿ ಆಯ್ಕೆಮಾಡಿದ್ದು ನಿಜ. ಕಾರಣವೇನೆಂದರೆ, ಇಸ್ರಾಯೇಲಿನ ಪೂರ್ವಜನಾದ ಅಬ್ರಹಾಮನು ಅಸಾಮಾನ್ಯವಾದ ನಂಬಿಕೆಯನ್ನು ತೋರಿಸಿದ್ದನು. ಸ್ವತಃ ದೇವರೇ ಪುರಾತನ ಇಸ್ರಾಯೇಲಿನ ರಾಜರುಗಳನ್ನು ಆಯ್ಕೆಮಾಡುವ ಮತ್ತು ಒಂದು ನಿಯಮಾವಳಿಯನ್ನು ಕೊಡುವ ಮೂಲಕ ಆ ಜನಾಂಗದ ಮೇಲೆ ಆಳ್ವಿಕೆ ನಡೆಸಿದನು. ಇಸ್ರಾಯೇಲ್‌ ಜನಾಂಗವು ಈ ಏರ್ಪಾಡನ್ನು ಅಂಗೀಕರಿಸಿದ್ದ ಸಮಯದಲ್ಲೆಲ್ಲ, ಬೇರೆ ಜನಾಂಗದವರು ದೇವರ ಸರಕಾರದ ಫಲಿತಾಂಶಗಳು ಹಾಗೂ ಇತರೆಡೆಗಳಲ್ಲಿದ್ದ ಮಾನವ ಸರಕಾರಗಳ ಫಲಿತಾಂಶಗಳ ನಡುವಿನ ವ್ಯತ್ಯಾಸವನ್ನು ನೋಡಸಾಧ್ಯವಿತ್ತು. ಯೆಹೋವ ದೇವರೊಂದಿಗೆ ಸುಸಂಬಂಧವನ್ನು ಪುನಃಸ್ಥಾಪಿಸಲು ಯಜ್ಞದ ಅಗತ್ಯದ ಕುರಿತಾಗಿಯೂ ಆತನು ಇಸ್ರಾಯೇಲಿಗೆ ಕಲಿಸಿದನು. ಹೀಗೆ, ಇಸ್ರಾಯೇಲಿನೊಂದಿಗಿನ ಯೆಹೋವನ ವ್ಯವಹಾರವು ಎಲ್ಲ ಜನಾಂಗಗಳಿಗೆ ಪ್ರಯೋಜನ ತಂದಿತು. ಇದು, ಅವನು ಅಬ್ರಹಾಮನಿಗೆ ಹೇಳಿದ ಈ ಮಾತಿನೊಂದಿಗೆ ಹೊಂದಿಕೆಯಲ್ಲಿತ್ತು: “ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.”​—⁠ಆದಿಕಾಂಡ 22:⁠18.

ಇದಕ್ಕೆ ಕೂಡಿಸುತ್ತಾ, ಆ ಯೆಹೂದ್ಯರಿಗೆ ದೈವೋಕ್ತಿಗಳನ್ನು ಪಡೆಯುವ ಹಾಗೂ ಮೆಸ್ಸೀಯನು ಹುಟ್ಟಿದ ಜನಾಂಗವಾಗುವ ಸುಯೋಗ ಸಿಕ್ಕಿತು. ಆದರೆ ಇದು ಸಹ, ಎಲ್ಲ ಜನಾಂಗಗಳವರ ಪ್ರಯೋಜನಾರ್ಥವಾಗಿತ್ತು. ಎಲ್ಲ ಜನಾಂಗದವರು ಮಹಾ ಆಶೀರ್ವಾದಗಳನ್ನು ಪಡೆಯಲಿರುವ ಸಮಯದ ಕುರಿತಾಗಿ ಹೀಬ್ರು ಶಾಸ್ತ್ರಗಳಲ್ಲಿ ಮನಮುಟ್ಟುವ ಈ ವರ್ಣನೆ ಇದೆ: “ಬಹು ದೇಶಗಳವರು​—⁠ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು . . . ಎಂದು ಹೇಳುವರು. . . . ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ. ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”​—⁠ಮೀಕ 4:2-4.

ಸ್ವತಃ ಯೇಸು ಕ್ರಿಸ್ತನು ಕೇವಲ ಯೆಹೂದ್ಯರಿಗೆ ಸಾರಿದರೂ ಅವನು ಇದನ್ನು ಸಹ ಹೇಳಿದನು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಪ್ರತಿಯೊಂದು ಜನಾಂಗ ಇಲ್ಲವೆ ರಾಷ್ಟ್ರಕ್ಕೆ ಸುವಾರ್ತೆಯನ್ನು ಕೇಳಿಸಿಕೊಳ್ಳುವ ಅವಕಾಶ ಖಂಡಿತ ಸಿಗುವುದು. ಹೀಗೆ ಯೆಹೋವನು, ಎಲ್ಲ ಜನಾಂಗೀಯ ಗುಂಪುಗಳೊಂದಿಗೆ ನಿಷ್ಪಕ್ಷಪಾತದಿಂದ ವ್ಯವಹರಿಸುವುದರಲ್ಲಿ ಪರಿಪೂರ್ಣ ಮಾದರಿಯನ್ನಿಟ್ಟನು. “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”​—⁠ಅ. ಕೃತ್ಯಗಳು 10:34, 35.

ದೇವರು ಪುರಾತನ ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ನಿಯಮಗಳು, ಆತನು ಎಲ್ಲ ಜನಾಂಗದವರ ಬಗ್ಗೆ ಕಾಳಜಿವಹಿಸುತ್ತಾನೆಂಬುದನ್ನೂ ತೋರಿಸುತ್ತವೆ. ಆ ದೇಶದಲ್ಲಿ ವಾಸಿಸುತ್ತಿದ್ದ ಇಸ್ರಾಯೇಲ್ಯರಲ್ಲದವರನ್ನು ಬರೀ ಸಹಿಸುವುದು ಅಲ್ಲ, ಬದಲಾಗಿ ಅದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುವಂತೆ ಧರ್ಮಶಾಸ್ತ್ರವು ಅವಶ್ಯಪಡಿಸಿತು. ಹೇಗೆಂಬುದನ್ನು ಗಮನಿಸಿರಿ. ಅದು ಹೇಳಿದ್ದು: “ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ.” (ಯಾಜಕಕಾಂಡ 19:34) ದೇವರು ಕೊಟ್ಟ ಅನೇಕ ನಿಯಮಗಳು, ವಲಸೆಬಂದ ಜನರೊಂದಿಗೆ ಇಸ್ರಾಯೇಲ್ಯರು ದಯಾಪರರಾಗಿರುವಂತೆ ಕಲಿಸಿದವು. ಈ ಕಾರಣದಿಂದಲೇ, ಯೇಸುವಿನ ಪೂರ್ವಜನಾಗಿದ್ದ ಬೋವಜನೆಂಬುವನು, ಒಬ್ಬ ಬಡ ವಿದೇಶೀ ಹೆಂಗಸು ಹಕ್ಕಲಾಯುವುದನ್ನು ನೋಡಿದಾಗ, ಅವಳಿಗೆ ಸಂಗ್ರಹಿಸಲು ಸಾಕಷ್ಟು ಧಾನ್ಯವನ್ನು ತನ್ನ ಕೊಯ್ಲುಗಾರರು ಬಿಟ್ಟಿದ್ದಾರೆಂಬುದನ್ನು ಖಚಿತಪಡಿಸಿಕೊಂಡನು. ಹೀಗೆ ಅವನು, ದೇವರಿಂದ ಏನನ್ನು ಕಲಿತಿದ್ದನೋ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈದನು.​—⁠ರೂತ 2:​1, 10, 16.

ಯೇಸು ದಯೆಯನ್ನು ಕಲಿಸುತ್ತಾನೆ

ಬೇರಾವನಿಗಿಂತಲೂ ಹೆಚ್ಚಾಗಿ ಯೇಸುವೇ ದೇವರ ಜ್ಞಾನವನ್ನು ಪ್ರಕಟಪಡಿಸಿದನು. ಭಿನ್ನವಾದ ಸಂಸ್ಕೃತಿಯ ಜನರೊಂದಿಗೆ ಹೇಗೆ ದಯಾಪರರಾಗಿರಬೇಕು ಎಂಬುದನ್ನು ಅವನ ಹಿಂಬಾಲಕರಿಗೆ ತೋರಿಸಿದನು. ಒಮ್ಮೆ, ಅವನು ಸಮಾರ್ಯದ ಮಹಿಳೆಯೊಂದಿಗೆ ಸಂಭಾಷಣೆ ಮಾಡಲಾರಂಭಿಸಿದನು. ಸಮಾರ್ಯದವರು, ಅನೇಕ ಯೆಹೂದ್ಯರಿಂದ ತುಚ್ಛೀಕರಿಸಲ್ಪಡುತ್ತಿದ್ದ ಒಂದು ಜನಾಂಗೀಯ ಗುಂಪಾಗಿದ್ದರು. ಆದುದರಿಂದ ಯೇಸು ಆ ಮಹಿಳೆಯೊಂದಿಗೆ ಮಾತಾಡಿದಾಗ ಅವಳಿಗೆ ಆಶ್ಚರ್ಯವಾಯಿತು. ಅವಳೊಂದಿಗಿನ ಸಂಭಾಷಣೆಯಲ್ಲಿ ಯೇಸು, ಅವಳು ನಿತ್ಯಜೀವವನ್ನು ಹೇಗೆ ಪಡೆಯಬಹುದೆಂಬುದನ್ನು ಅರ್ಥಮಾಡಿಕೊಳ್ಳಲು ದಯೆಯಿಂದ ಸಹಾಯಮಾಡಿದನು.​—⁠ಯೋಹಾನ 4:​7-14.

ನಮಗಿಂತ ಭಿನ್ನವಾದ ಜನಾಂಗೀಯ ಗುಂಪಿನ ಜನರನ್ನು ಹೇಗೆ ಉಪಚರಿಸಬೇಕೆಂಬುದನ್ನು ಯೇಸು, ಒಬ್ಬ ದಯಾಪರ ಸಮಾರ್ಯದವನ ಕುರಿತಾದ ದೃಷ್ಟಾಂತದ ಮೂಲಕವೂ ಕಲಿಸಿದನು. ಕಳ್ಳರ ಹಲ್ಲೆಗೊಳಗಾಗಿ, ಗಂಭೀರವಾಗಿ ಗಾಯಗೊಂಡು ರಸ್ತೆಬದಿಯಲ್ಲಿ ಬಿದ್ದಿದ್ದ ಒಬ್ಬ ಯೆಹೂದ್ಯನನ್ನು ಈ ಸಮಾರ್ಯದವನು ನೋಡಿದನು. ಅವನು ಆ ಕೂಡಲೆ, ‘ಒಬ್ಬ ಯೆಹೂದ್ಯನಿಗೆ ನಾನೇಕೆ ಸಹಾಯಮಾಡಲಿ? ಯೆಹೂದ್ಯರು ನನ್ನ ಜನಾಂಗದವರನ್ನು ಕೀಳಾಗಿ ನೋಡುತ್ತಾರಲ್ಲಾ’ ಎಂದು ತರ್ಕಿಸಬಹುದಿತ್ತು. ಆದರೆ ಈ ಸಮಾರ್ಯದವನಿಗೆ ಅಗಂತುಕರ ಬಗ್ಗೆ ಭಿನ್ನವಾದ ನೋಟವಿತ್ತೆಂದು ಯೇಸು ತೋರಿಸಿದನು. ಆ ದಾರಿಯಿಂದ ಹೋಗುತ್ತಿದ್ದ ಇತರ ಪ್ರಯಾಣಿಕರು ಗಾಯಗೊಂಡಿದ್ದ ಆ ಪುರುಷನನ್ನು ನಿರ್ಲಕ್ಷಿಸಿ ಹಾದುಹೋಗಿದ್ದರೂ ಈ ಸಮಾರ್ಯದವನು, “ಅವನನ್ನು ಕಂಡು ಕನಿಕರಿಸಿ” ಬಹಳಷ್ಟು ಸಹಾಯ ಮಾಡಿದನು. ದೇವರ ಅನುಗ್ರಹವನ್ನು ಬಯಸುವ ಯಾವ ವ್ಯಕ್ತಿಯೂ ಹಾಗೆಯೇ ಮಾಡಬೇಕೆಂದು ಈ ಸಾಮ್ಯದ ಕೊನೆಯಲ್ಲಿ ಯೇಸು ಹೇಳಿದನು.​—⁠ಲೂಕ 10:​30-37.

ದೇವರನ್ನು ಸಂತೋಷಪಡಿಸಲು ಬಯಸುವವರಿಗೆ ಅಪೊಸ್ತಲ ಪೌಲನು ಕಲಿಸಿದ್ದೇನೆಂದರೆ, ಅವರು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಬೇಕು ಮತ್ತು ದೇವರು ಹೇಗೆ ಜನರನ್ನು ಉಪಚರಿಸುತ್ತಾನೋ ಹಾಗೆಯೇ ಅವರೂ ಉಪಚರಿಸಬೇಕೆಂದೇ. ಪೌಲನು ಬರೆದುದು: “ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ. ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ. ಇದನ್ನು ಧರಿಸಿಕೊಂಡಿರುವದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿಮಾಡಿಸಿಕೊಂಡವರು ಸುನ್ನತಿಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ; ಮ್ಲೇಚ್ಛ ಹೂಣ ಎಂಬ ಹೆಸರುಗಳಿಲ್ಲ; . . . ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”​—⁠ಕೊಲೊಸ್ಸೆ 3:9-14.

ದೇವರ ಜ್ಞಾನವು ಜನರನ್ನು ಬದಲಾಯಿಸುತ್ತದೋ?

ಯೆಹೋವ ದೇವರನ್ನು ತಿಳಿದುಕೊಳ್ಳುವುದರಿಂದ, ಬೇರೆ ಜನಾಂಗೀಯ ಗುಂಪಿನವರೊಂದಿಗೆ ಜನರು ವ್ಯವಹರಿಸುವ ರೀತಿ ನಿಜವಾಗಿಯೂ ಬದಲಾಗುತ್ತದೋ? ಕೆನಡಕ್ಕೆ ವಲಸೆಹೋದ ಏಷ್ಯದವಳೊಬ್ಬಳ ಅನುಭವವನ್ನು ಪರಿಗಣಿಸಿರಿ. ಅವಳು ಅಲ್ಲಿ ಅನುಭವಿಸಿದ ವರ್ಣಬೇಧದಿಂದಾಗಿ ತುಂಬ ಹತಾಶಳಾದಳು. ಅವಳಿಗೆ ಯೆಹೋವನ ಸಾಕ್ಷಿಗಳ ಭೇಟಿಯಾಯಿತು, ಮತ್ತು ಅವರು ಅವಳೊಂದಿಗೆ ಬೈಬಲ್‌ ಅಧ್ಯಯನ ಆರಂಭಿಸಿದರು. ತದನಂತರ ಅವಳು ಬರೆದ ಕೃತಜ್ಞತೆಯ ಪತ್ರದಲ್ಲಿ ಹೀಗಂದಳು: ‘ನೀವು ತುಂಬ ಒಳ್ಳೆಯ ಹಾಗೂ ದಯಾಪರರಾದ ಬಿಳಿ ಜನರಾಗಿದ್ದೀರಿ. ನೀವು ಬೇರೆ ಬಿಳಿ ಜನರಿಂದ ಭಿನ್ನರಾಗಿದ್ದೀರೆಂದು ನನಗೆ ಗೊತ್ತಾದಾಗ, ಕಾರಣವೇನಿರಬಹುದೆಂದು ನಾನು ಸೋಜಿಗಪಟ್ಟೆ. ನಾನು ತುಂಬ ಯೋಚನೆಮಾಡಿದೆ, ಮತ್ತು ನೀವು ದೇವರ ಸಾಕ್ಷಿಗಳಾಗಿರುವುದರಿಂದಲೇ ಹೀಗಿರಬೇಕೆಂಬ ತೀರ್ಮಾನಕ್ಕೆ ಬಂದೆ. ಬೈಬಲಿನಲ್ಲಿ ಏನೋ ಇರಬೇಕು. ನಿಮ್ಮ ಕೂಟಗಳಲ್ಲಿ ಬಿಳಿ, ಕಪ್ಪು, ಕಂದು ಮತ್ತು ಹಳದಿ ವರ್ಣದ ಜನರಿದ್ದರು. ಆದರೆ ಅವರೆಲ್ಲರೂ ಸಹೋದರ ಸಹೋದರಿಯರಾಗಿರುವ ಕಾರಣ ಅವರೆಲ್ಲರ ಹೃದಯದ ಬಣ್ಣ ಒಂದೇ ಆಗಿತ್ತು ಅಂದರೆ ಪಾರದರ್ಶಕವಾಗಿತ್ತು. ನಿಮ್ಮನ್ನು ಇಷ್ಟು ಒಳ್ಳೆಯವರನ್ನಾಗಿ ಮಾಡಿದವರು ಯಾರೆಂದು ನನಗೆ ಈಗ ತಿಳಿದಿದೆ. ಆತನು ನಿಮ್ಮ ದೇವರೇ.”

“ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವ” ಒಂದು ಸಮಯವನ್ನು ದೇವರ ವಾಕ್ಯವು ಮುಂತಿಳಿಸುತ್ತದೆ. (ಯೆಶಾಯ 11:9) ಬೈಬಲ್‌ ಪ್ರವಾದನೆಯ ನೆರವೇರಿಕೆಯಲ್ಲಿ, ‘ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ’ ಆಗಿರುವ ಲಕ್ಷಾಂತರ ಸಂಖ್ಯೆಯ ಒಂದು ಮಹಾ ಸಮೂಹವು ಈಗಲೂ ಸತ್ಯಾರಾಧನೆಯಲ್ಲಿ ಐಕ್ಯವಾಗುತ್ತಿದೆ. (ಪ್ರಕಟನೆ 7:9) ಈ ಮಹಾ ಸಮೂಹದವರು, ದ್ವೇಷಕ್ಕೆ ಬದಲಾಗಿ ಒಂದು ಲೋಕವ್ಯಾಪಕ ಸಮಾಜದಲ್ಲಿ ಪ್ರೀತಿ ತುಂಬಿಕೊಂಡಿರುವ ಸಮಯಕ್ಕೆ ಎದುರುನೋಡುತ್ತಾರೆ. ಆ ಸಮಾಜವು, ಯೆಹೋವನು ಅಬ್ರಹಾಮನ ಮೂಲಕ ವ್ಯಕ್ತಪಡಿಸಿರುವ ಆತನ ಈ ಉದ್ದೇಶವನ್ನು ಬೇಗನೆ ನೆರವೇರಿಸುವುದು: “ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು.”​—⁠ಅ. ಕೃತ್ಯಗಳು 3:⁠25. (w07 7/1)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನದಲ್ಲಿ “ಜನಾಂಗೀಯ” ಎಂಬ ಪದವು ನಿರ್ದಿಷ್ಟ ಜಾತಿ, ರಾಷ್ಟ್ರ, ಧರ್ಮ, ಭಾಷೆ ಇಲ್ಲವೇ ಸಂಸ್ಕೃತಿಯಿಂದಾಗಿ ಬೇರೆಯವರಿಂದ ಭಿನ್ನವಾಗಿರುವ ಜನಸಮುದಾಯವನ್ನು ಸೂಚಿಸುತ್ತದೆ.

[ಪುಟ 4, 5ರಲ್ಲಿರುವ ಚಿತ್ರ]

ದೇವರ ನಿಯಮವು ಇಸ್ರಾಯೇಲ್ಯರಿಗೆ ಪರದೇಶಿಗಳನ್ನು ಪ್ರೀತಿಸುವಂತೆ ಕಲಿಸಿತು

[ಪುಟ 5ರಲ್ಲಿರುವ ಚಿತ್ರ]

ದಯಾಪರನಾದ ಸಮಾರ್ಯದವನ ಸಾಮ್ಯದಿಂದ ನಾವೇನು ಕಲಿಯಬಲ್ಲೆವು?

[ಪುಟ 6ರಲ್ಲಿರುವ ಚಿತ್ರಗಳು]

ಯಾವುದೇ ಜನಾಂಗೀಯ ಗುಂಪು ಇನ್ನೊಂದು ಗುಂಪಿಗಿಂತ ಶ್ರೇಷ್ಠವಾಗಿದೆ ಎಂದೆಣಿಸಲು ದೇವರು ಆಧಾರ ಕೊಟ್ಟಿಲ್ಲ