ನಮ್ಮನ್ನು ‘ಅದ್ಭುತವಾಗಿ ರಚಿಸಲಾಗಿದೆ’
ನಮ್ಮನ್ನು ‘ಅದ್ಭುತವಾಗಿ ರಚಿಸಲಾಗಿದೆ’
‘ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದೀ.’—ಕೀರ್ತನೆ 139:14.
ಪ್ರಕೃತಿಯು ಅದ್ಭುತವಾದ ಸೃಷ್ಟಿಗಳಿಂದ ತುಂಬಿಕೊಂಡಿದೆ. ಇವು ಹೇಗೆ ಅಸ್ತಿತ್ವಕ್ಕೆ ಬಂದವು? ಇವು ಅಸ್ತಿತ್ವಕ್ಕೆ ಬರಲು ಒಬ್ಬ ಬುದ್ಧಿವಂತ ಸೃಷ್ಟಿಕರ್ತನ ಅಗತ್ಯವಿರಲಿಲ್ಲವೆಂದು ಕೆಲವರು ನಂಬುತ್ತಾರೆ. ಇನ್ನೂ ಕೆಲವರಿಗನುಸಾರ, ಸೃಷ್ಟಿಕರ್ತನೇ ಇಲ್ಲವೆಂದು ಹೇಳುವುದು, ಪ್ರಕೃತಿಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಸಂಕುಚಿತಗೊಳಿಸುತ್ತದೆ. ಇವರ ಅಭಿಪ್ರಾಯಕ್ಕನುಸಾರ ಭೂಜೀವಿಗಳು ಅಕಸ್ಮಿಕವಾಗಿ ಬಂದಿರಲು ಸಾಧ್ಯವಿಲ್ಲ ಏಕೆಂದರೆ ಅವು ಅಷ್ಟು ಸಂಕೀರ್ಣವೂ, ವೈವಿಧ್ಯಮಯವೂ ಆಗಿವೆ ಮತ್ತು ನಿಮಗನುಸಾರ ಅವು ಅದ್ಭುತವೂ ಆಗಿವೆ. ಈ ವಿಶ್ವಕ್ಕೆ ಒಬ್ಬ ವಿವೇಕಿ, ಶಕ್ತಿಶಾಲಿ ಹಾಗೂ ದಯಾಪರ ನಿರ್ಮಾಣಿಕನಿದ್ದನು ಎಂಬುದನ್ನು ಕೆಲವು ವಿಜ್ಞಾನಿಗಳ ಸಮೇತ ಅನೇಕ ಜನರಿಗೆ ಪುರಾವೆಯು ಸ್ಪಷ್ಟವಾಗಿ ತೋರಿಸುತ್ತದೆ. *
2 ನಿರ್ಮಾಣಿಕನ ಅದ್ಭುತ ಸೃಷ್ಟಿಕಾರ್ಯಕ್ಕಾಗಿ ಆತನು ಸ್ತುತ್ಯರ್ಹನೆಂದು ಪುರಾತನ ಕಾಲದ ರಾಜ ದಾವೀದನಿಗೆ ಮನದಟ್ಟಾಗಿತ್ತು. ಅವನು ಈ ವೈಜ್ಞಾನಿಕ ಯುಗಕ್ಕಿಂತಲೂ ಎಷ್ಟೋ ಹಿಂದೆ ಜೀವಿಸಿದ್ದನಾದರೂ, ತನ್ನ ಸುತ್ತಲೂ ದೇವರ ಸೃಷ್ಟಿಕಾರ್ಯದ ಮನಮೋಹಕ ಉದಾಹರಣೆಗಳಿರುವುದನ್ನು ಗ್ರಹಿಸಿದನು. ತನ್ನ ಸ್ವಂತ ದೇಹರಚನೆಯನ್ನು ಪರಿಗಣಿಸಿಯೇ ಅವನು ದೇವರ ಸೃಷ್ಟಿಕಾರಕ ಸಾಮರ್ಥ್ಯದ ಬಗ್ಗೆ ಮೂಕವಿಸ್ಮಿತನಾದನು. ಅವನು ಬರೆದುದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.”—ಕೀರ್ತನೆ 139:14.
3 ಈ ಬಲವಾದ ನಿಶ್ಚಿತಾಭಿಪ್ರಾಯವನ್ನು ದಾವೀದನು ಗಂಭೀರವಾಗಿ ಆಲೋಚಿಸುವುದರ ಮೂಲಕ ಹೊಂದಿದನು. ಇಂದು, ಶಾಲಾ ಪಠ್ಯಕ್ರಮಗಳಲ್ಲಿ ಹಾಗೂ ಸಮೂಹಮಾಧ್ಯಮಗಳಲ್ಲಿ, ಮಾನವನ ಮೂಲದ ಕುರಿತ ನಂಬಿಕೆ-ನಾಶಕ ಸಿದ್ಧಾಂತಗಳು ತುಂಬಿಕೊಂಡಿವೆ. ಆದಕಾರಣ, ನಮಗೆ ದಾವೀದನಂಥ ನಂಬಿಕೆ ಇರಬೇಕಾದರೆ, ನಾವು ಸಹ ಅವನಂತೆಯೇ ಗಂಭೀರವಾಗಿ ಆಲೋಚಿಸಬೇಕು. ನಾವೇನು ನಂಬಬೇಕೆಂಬ ವಿಷಯದಲ್ಲಿ, ವಿಶೇಷವಾಗಿ ಸೃಷ್ಟಿಕರ್ತನ ಅಸ್ತಿತ್ವ ಹಾಗೂ ಆತನ ಪಾತ್ರದಂಥ ಮುಖ್ಯ ವಿಷಯಗಳಲ್ಲಿ ಇತರರ ದೃಷ್ಟಿಕೋನಗಳು ನಮ್ಮನ್ನು ಪ್ರಭಾವಿಸುವಂತೆ ಬಿಡುವುದು ಅಪಾಯಕಾರಿಯಾಗಿದೆ.
4 ನಾವು ಯೆಹೋವನ ಕಾರ್ಯಗಳ ಕುರಿತಾಗಿ ಗಾಢವಾಗಿ ಯೋಚಿಸುವುದರಿಂದ ಇನ್ನೊಂದು ಪ್ರಯೋಜನವಿದೆ. ಅದು, ಯೆಹೋವನಿಗಾಗಿ ನಮಗಿರುವ ಪ್ರೀತಿ ಹಾಗೂ ಕೃತಜ್ಞತೆಯನ್ನು ಹೆಚ್ಚಿಸುವುದು ಹಾಗೂ ಭವಿಷ್ಯಕ್ಕಾಗಿ ಆತನು ಕೊಟ್ಟಿರುವ ವಾಗ್ದಾನಗಳ ಮೇಲೆ ನಮಗೆ ಭರವಸೆಯನ್ನು ಹುಟ್ಟಿಸುವುದು. ಇದು, ನಾವು ಯೆಹೋವನನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳುವಂತೆ ಮತ್ತು ಆತನನ್ನು ಸೇವಿಸುವಂತೆ ನಮ್ಮನ್ನು ಪ್ರಚೋದಿಸುವುದು. ಆದುದರಿಂದ ನಾವು ‘ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ’ ಎಂಬ ದಾವೀದನ ತೀರ್ಮಾನವನ್ನು ಆಧುನಿಕ ವಿಜ್ಞಾನವು ಹೇಗೆ ದೃಢೀಕರಿಸಿದೆ ಎಂಬುದನ್ನು ಪರಿಗಣಿಸೋಣ.
ನಮ್ಮ ವಿಸ್ಮಯಕರ ದೈಹಿಕ ಬೆಳವಣಿಗೆ
5“ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ?” (ಕೀರ್ತನೆ 139:13) ನಮ್ಮ ತಾಯಿಯ ದೇಹದಲ್ಲಿ ನಮ್ಮೆಲ್ಲರ ಆರಂಭವು, ಈ ವಾಕ್ಯದ ಕೊನೆಯಲ್ಲಿರುವ ಚುಕ್ಕೆಗಿಂತಲೂ ಚಿಕ್ಕ ಗಾತ್ರದ ಒಂದೇ ಒಂದು ಜೀವಕೋಶದಿಂದ ಆಯಿತು. ಈ ಸೂಕ್ಷ್ಮಾತಿಸೂಕ್ಷ್ಮವಾದ ಜೀವಕೋಶವು ಬಹಳಷ್ಟು ಸಂಕೀರ್ಣವಾಗಿತ್ತು. ಅದೊಂದು ಪುಟ್ಟ ಫ್ಯಾಕ್ಟರಿಯೇ ಆಗಿತ್ತೆಂದು ಹೇಳಬಹುದು! ಆ ಪುಟ್ಟ ಜೀವಕೋಶವು ತ್ವರಿತಗತಿಯಲ್ಲಿ ಬೆಳೆಯಿತು. ತಾಯಿಯ ಗರ್ಭದಲ್ಲಿ ನೀವು ಎರಡನೇ ತಿಂಗಳನ್ನು ಮುಗಿಸುವಷ್ಟರಲ್ಲಿ ನಿಮ್ಮ ಮುಖ್ಯ ಅಂಗಗಳ ರಚನೆಯಾಗಿತ್ತು. ಇವುಗಳಲ್ಲಿ ನಿಮ್ಮ ಅಂತರಿಂದ್ರಿಯ ಅಂದರೆ ನಿಮ್ಮ ಕಿಡ್ನಿಗಳು ಒಳಗೂಡಿದ್ದವು. ನೀವು ಹುಟ್ಟಿದಾಗ ನಿಮ್ಮ ಈ ಕಿಡ್ನಿಗಳು ರಕ್ತವನ್ನು ಸೋಸಲು ಅಂದರೆ, ಅದರಲ್ಲಿರುವ ವಿಷಪದಾರ್ಥಗಳು ಹಾಗೂ ಮಿತಿಮೀರಿದ ನೀರನ್ನು ತೆಗೆದು, ಉಪಯುಕ್ತ ಪದಾರ್ಥಗಳನ್ನು ಇಟ್ಟುಕೊಳ್ಳುವ ಕೆಲಸಕ್ಕಾಗಿ ಸಿದ್ಧವಾಗಿದ್ದವು. ನಿಮ್ಮ ಎರಡೂ ಕಿಡ್ನಿಗಳು ಆರೋಗ್ಯಕರವಾಗಿರುವಲ್ಲಿ, ಅವು ಪ್ರತಿ 45 ನಿಮಿಷಗಳಿಗೊಮ್ಮೆ ರಕ್ತದಲ್ಲಿನ ಸುಮಾರು ಐದು ಲೀಟರ್ ನೀರನ್ನು (ವಯಸ್ಕನಲ್ಲಿ) ಸೋಸುತ್ತವೆ!
6 ನಿಮ್ಮ ಕಿಡ್ನಿಗಳು ರಕ್ತದಲ್ಲಿನ ಖನಿಜಾಂಶಗಳ ಪ್ರಮಾಣ ಹಾಗೂ ಆಮ್ಲಿಯತೆ ಮತ್ತು ರಕ್ತದೊತ್ತಡವನ್ನೂ ನಿಯಂತ್ರಿಸಲು ಸಹಾಯಮಾಡುತ್ತವೆ. ಅವು ಇನ್ನಿತರ ಪ್ರಮುಖ ಕೆಲಸಗಳನ್ನೂ ಮಾಡುತ್ತವೆ. ಉದಾಹರಣೆಗೆ, ಅವು ‘ಡಿ’ ಜೀವಸತ್ತ್ವವನ್ನು ಇನ್ನೊಂದು ರೂಪಕ್ಕೆ ಪರಿವರ್ತಿಸುತ್ತವೆ. ಇದು ಸರಿಯಾದ ಮೂಳೆ ವಿಕಸನಕ್ಕಾಗಿ ಅಗತ್ಯವಾಗಿದೆ. ಕಿಡ್ನಿಗಳು ಇರಿತ್ರೋಪಾಯಿಟಿನ್ ಎಂಬ ಹಾರ್ಮೋನನ್ನು ಉತ್ಪಾದಿಸುತ್ತವೆ. ಈ ಹಾರ್ಮೋನು ನಿಮ್ಮ ಮೂಳೆಗಳಲ್ಲಿ ಕೆಂಪು ರಕ್ತಕಣದ *
ಉತ್ಪನ್ನವನ್ನು ಚುರುಕುಗೊಳಿಸುತ್ತದೆ. ಹೀಗಿರುವುದರಿಂದ, ಕಿಡ್ನಿಗಳನ್ನು “ದೇಹದ ಕುಶಲ ರಸಾಯನಶಾಸ್ತ್ರಜ್ಞರು” ಎಂದು ಕರೆಯಲ್ಪಟ್ಟಿರುವುದರಲ್ಲಿ ಅಚ್ಚರಿಯೇನಿಲ್ಲ!7“ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ.” (ಕೀರ್ತನೆ 139:15) ಮೊತ್ತಮೊದಲ ಜೀವಕೋಶವು ವಿಭಜನೆಗೊಂಡು ಅದರಿಂದಾಗಿ ಹೊಸ ಜೀವಕೋಶಗಳು ರೂಪುಗೊಂಡವು. ಇವುಗಳ ವಿಭಜನೆಯು ಮುಂದುವರಿಯುತ್ತಾ ಹೋಯಿತು. ಈ ಜೀವಕೋಶಗಳು ಸ್ವಲ್ಪ ಸಮಯದಲ್ಲೇ ನರಕೋಶಗಳು, ಸ್ನಾಯು ಕೋಶಗಳು, ಚರ್ಮದ ಕೋಶಗಳು ಇತ್ಯಾದಿಗಳಾಗಿ ಪ್ರತ್ಯೇಕಗೊಂಡವು. ಒಂದೇ ಬಗೆಯ ಜೀವಕೋಶಗಳು ಗುಂಪುಗೂಡಿ ಅಂಗಾಂಶಗಳಾದವು. ಈ ಅಂಗಾಂಶಗಳು ನಂತರ ದೇಹದ ಅಂಗಗಳಾಗಿ ರೂಪುಗೊಂಡವು. ಉದಾಹರಣೆಗಾಗಿ, ಗರ್ಭಧಾರಣೆಯ ಮೂರನೇ ವಾರದಲ್ಲೇ ನಿಮ್ಮ ಅಸ್ಥಿಪಂಜರದ ನಿರ್ಮಾಣವಾಗತೊಡಗಿತು. ನಿಮಗೆ ಕೇವಲ ಏಳು ವಾರಗಳಾಗುವಷ್ಟರಲ್ಲಿ, ಅಂದರೆ ನೀವು ಕೇವಲ ಸುಮಾರು ಒಂದು ಇಂಚಿನಷ್ಟು ಉದ್ದವಾಗಿದ್ದಾಗ, ವಯಸ್ಕರಾಗುವಾಗ ನಿಮ್ಮಲ್ಲಿ ಇರಬೇಕಾದ ಎಲ್ಲ 206 ಮೂಳೆಗಳ ಆದಿ-ರೂಪಗಳು ಯಥಾಸ್ಥಾನದಲ್ಲಿದ್ದವು. ಆದರೆ ಆ ಹಂತದಲ್ಲಿ ಅವು ಇನ್ನೂ ಗಟ್ಟಿಯಾದ ಮೂಳೆಗಳಾಗಿ ಪರಿವರ್ತನೆಗೊಂಡಿರಲಿಲ್ಲ.
8 ಈ ಆಶ್ಚರ್ಯಕರವಾದ ಬೆಳವಣಿಗೆಯ ಪ್ರಕ್ರಿಯೆಯು ಭೂಗರ್ಭದಲ್ಲಿ ನಡೆಯುತ್ತಿದೆಯೋ ಎಂಬಂತೆ ನಿಮ್ಮ ತಾಯಿಯ ಗರ್ಭದೊಳಗೆ ಮಾನವ ದೃಷ್ಟಿಗೆ ಮರೆಯಾಗಿ ನಡೆಯಿತು. ವಾಸ್ತವದಲ್ಲಿ, ಗರ್ಭದೊಳಗೆ ಆಗುವ ಬೆಳೆವಣಿಗೆಯ ವಿಷಯದಲ್ಲಿ ಈಗಲೂ ಮಾನವರ ಬಳಿ ಪೂರ್ಣ ಮಾಹಿತಿ ಇಲ್ಲ. ಉದಾಹರಣೆಗಾಗಿ ನಿರ್ದಿಷ್ಟ ಜೀನ್‌ಗಳು (ವಂಶವಾಹಿಗಳು), ಅಂಗಗಳಿಗಾಗಿ ಕೆಲವೊಂದು ಜೀವಕೋಶಗಳನ್ನು ಪ್ರತ್ಯೇಕಿಸುವಂಥ ಪ್ರಕ್ರಿಯೆಯನ್ನು ಆರಂಭಿಸುವಂತೆ ಮಾಡಿದ್ದು ಯಾವುದು? ಮುಂದೊಂದು ದಿನ ವಿಜ್ಞಾನ ಇದನ್ನು ಕಂಡುಹಿಡಿಯಬಹುದು. ಆದರೆ ದಾವೀದನು ಮುಂದೆ ಹೇಳುವಂತೆ, ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಇದರ ಬಗ್ಗೆ ಆರಂಭದಿಂದಲೇ ಪೂರ್ಣ ತಿಳಿವಳಿಕೆಯಿತ್ತು.
9“ನಿನ್ನ ಕಣ್ಣುಗಳು ನನ್ನ ಭ್ರೂಣವನ್ನೂ ನೋಡಿದವು, ಮತ್ತು ನಿನ್ನ ಪುಸ್ತಕದಲ್ಲಿ ಅದರ ಸಕಲ ಭಾಗಗಳು ಬರೆದಿಡಲ್ಪಟ್ಟವು. ಅವುಗಳಲ್ಲಿ ಒಂದೂ ಇಲ್ಲದಿದ್ದ ಸಮಯದಲ್ಲಿ ಅವು ಯಾವ ದಿನ ರಚಿಸಲ್ಪಡುವವು ಎಂಬುದು ಬರೆಯಲ್ಪಟ್ಟಿತ್ತು.” (ಕೀರ್ತನೆ 139:16, NW) ಆ ಪ್ರಥಮ ಜೀವಕೋಶದಲ್ಲಿ ನಿಮ್ಮ ಇಡೀ ದೇಹದ ಪೂರ್ಣ ಯೋಜನೆಯಿತ್ತು. ಈ ಯೋಜನೆಯು ನೀವು ಹುಟ್ಟುವ ಮುಂಚಿನ ಒಂಬತ್ತು ತಿಂಗಳುಗಳ ಬೆಳವಣಿಗೆ ಹಾಗೂ ತದನಂತರದ ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ಬೆಳವಣಿಗೆಯನ್ನು ನಿರ್ದೇಶಿಸಿದವು. ಈ ಕಾಲಾವಧಿಯಲ್ಲಿ ನಿಮ್ಮ ದೇಹವು ಅನೇಕಾನೇಕ ಹಂತಗಳನ್ನು ದಾಟಿತು. ಇದೆಲ್ಲವೂ ಆ ಮೊತ್ತಮೊದಲ ಜೀವಕೋಶದಲ್ಲಿ ಪ್ರೋಗ್ರಾಮ್ ಮಾಡಲ್ಪಟ್ಟಿದ್ದ ಮಾಹಿತಿಯಿಂದ ನಿರ್ದೇಶಿಸಲ್ಪಟ್ಟಿತ್ತು.
10 ದಾವೀದನಿಗೆ ಜೀವಕೋಶಗಳು ಹಾಗೂ ಜೀನ್‌ಗಳ ಬಗ್ಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಅವನ ಬಳಿ ಸೂಕ್ಷ್ಮದರ್ಶಕವೂ ಇರಲಿಲ್ಲ. ಆದರೆ ತನ್ನ ಸ್ವಂತ ದೇಹದ ರಚನೆಯು, ಮುಂಚಿತವಾಗಿ ಮಾಡಲ್ಪಟ್ಟ ಯೋಜನೆಯ ಪುರಾವೆ ಆಗಿದೆ ಎಂಬುದನ್ನು ಅವನು ಸರಿಯಾಗಿ ಗ್ರಹಿಸಿದನು. ಭ್ರೂಣಗಳು ಹೇಗೆ ಬೆಳೆಯುತ್ತವೆ ಎಂಬುದರ ಬಗ್ಗೆ ದಾವೀದನಿಗೆ ಸ್ವಲ್ಪ ತಿಳುವಳಿಕೆ ಇದ್ದಿರಬಹುದು. ಈ ಕಾರಣದಿಂದಲೇ, ಪ್ರತಿಯೊಂದು ಹಂತವು ಒಂದು ಪೂರ್ವನಿಗದಿತ ವಿನ್ಯಾಸ ಮತ್ತು ಕಾಲಪಟ್ಟಿಗನುಸಾರ ನಡೆಯಬೇಕೆಂದು ಅವನು ತರ್ಕಿಸಿದ್ದಿರಬಹುದು. ಕಾವ್ಯಾತ್ಮಕವಾಗಿ ಅವನು, ಈ ವಿನ್ಯಾಸವು ದೇವರ ‘ಪುಸ್ತಕದಲ್ಲಿ ಬರೆಯಲ್ಪಟ್ಟಿದೆ’ ಎಂದು ವರ್ಣಿಸಿದನು.
11 ನಿಮ್ಮ ಹೆತ್ತವರು ಅಥವಾ ಪೂರ್ವಜರಿಂದ ನೀವು ಯಾವ ರೂಪಲಕ್ಷಣಗಳನ್ನು ಪಡೆಯಬೇಕೆಂದು ನಿಮ್ಮ ಜೀನ್‌ಗಳು ನಿರ್ಧರಿಸಿದವೆಂಬುದು ಇಂದು ಎಲ್ಲರಿಗೆ ತಿಳಿದಿರುವ ಮಾತು. ಈ ರೂಪಲಕ್ಷಣಗಳಲ್ಲಿ ನಿಮ್ಮ ಎತ್ತರ, ಮುಖ ಲಕ್ಷಣಗಳು, ಕೂದಲು ಹಾಗೂ ಮೈಬಣ್ಣ ಮತ್ತು ಸಾವಿರಾರು ಇತರ ಅಂಶಗಳು ಸೇರಿರುತ್ತವೆ. ನಿಮ್ಮಲ್ಲಿರುವ ಪ್ರತಿಯೊಂದೂ ಜೀವಕೋಶದಲ್ಲಿ ಸಾವಿರಾರು ಜೀನ್‌ಗಳಿವೆ. ಮತ್ತು ಪ್ರತಿಯೊಂದು ಜೀನ್, ಡಿ.ಎನ್.ಎ.ಯಿಂದ (ಡಿಆಕ್ಸಿರೈಬೊ ನ್ಯೂಕ್ಲಿಯಕ್ ಆಮ್ಲದಿಂದ) ರಚಿಸಲ್ಪಟ್ಟ ಒಂದು ಉದ್ದವಾದ ಸರಪಳಿಯ ಭಾಗವಾಗಿದೆ. ನಿಮ್ಮ ದೇಹವನ್ನು ಕಟ್ಟಲಿಕ್ಕಾಗಿರುವ ಸೂಚನೆಗಳು, ನಿಮ್ಮ ವೈಯಕ್ತಿಕ ಡಿ.ಎನ್.ಎ.ಯ ರಾಸಾಯನಿಕ ರಚನೆಯಲ್ಲಿ ‘ಬರೆದಿಡಲ್ಪಟ್ಟಿರುತ್ತದೆ.’ ಹೊಸ ಜೀವಕೋಶಗಳನ್ನು ರಚಿಸಲಿಕ್ಕಾಗಿ ಅಥವಾ ಹಳೇ ಜೀವಕೋಶಗಳ ಸ್ಥಾನಭರ್ತಿಮಾಡಲಿಕ್ಕಾಗಿ ನಿಮ್ಮ ಜೀವಕೋಶಗಳು ವಿಭಾಗಗೊಳ್ಳುವಾಗಲೆಲ್ಲ ನಿಮ್ಮ ಡಿ.ಎನ್.ಎ. ಆ ಸೂಚನೆಗಳನ್ನು ದಾಟಿಸುತ್ತದೆ. ಇದು ನೀವು ಜೀವದಿಂದಿರುವಂತೆ ಮತ್ತು ನಿಮ್ಮ ಮೂಲ ತೋರಿಕೆಯನ್ನು ಕಳಕೊಳ್ಳದಂತೆ ಸಾಧ್ಯಗೊಳಿಸುತ್ತದೆ. ಇದು ನಮ್ಮ ಸ್ವರ್ಗೀಯ ನಿರ್ಮಾಣಿಕನ ಶಕ್ತಿ ಹಾಗೂ ವಿವೇಕದ ಎಷ್ಟು ಎದ್ದುಕಾಣುವಂಥ ಉದಾಹರಣೆಯಾಗಿದೆ!
ನಮ್ಮ ಅಪೂರ್ವ ಮನಸ್ಸು
12“ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ; ಅವುಗಳ ಒಟ್ಟು ಅಸಂಖ್ಯವಾಗಿದೆ. ಅವುಗಳನ್ನು ಲೆಕ್ಕಿಸುವದಾದರೆ [ಸಮುದ್ರದ] ಮರಳಿಗಿಂತ ಹೆಚ್ಚಾಗಿವೆ.” (ಕೀರ್ತನೆ 139:17, 18ಎ) ಪ್ರಾಣಿಗಳನ್ನು ಸಹ ಅದ್ಭುತ ರೀತಿಯಲ್ಲಿ ಸೃಷ್ಟಿಸಲಾಗಿದೆ ಮತ್ತು ಅವುಗಳಿಗಿರುವ ಕೆಲವು ಸಂವೇದನಾಶಕ್ತಿಗಳು ಹಾಗೂ ಸಾಮರ್ಥ್ಯಗಳು ಮಾನವರನ್ನೂ ಮೀರಿಸುವಂಥದ್ದಾಗಿವೆ. ಆದರೆ ಮಾನವರಿಗೆ ದೇವರು ಕೊಟ್ಟಿರುವ ಮಾನಸಿಕ ಸಾಮರ್ಥ್ಯವು ಯಾವುದೇ ಪ್ರಾಣಿಯನ್ನು ಬಹಳಷ್ಟು ಮೀರಿಸುವಂಥದ್ದಾಗಿದೆ. ಒಂದು ವಿಜ್ಞಾನ ಪಠ್ಯಪುಸ್ತಕವು ಹೇಳುವುದು: “ಮಾನವರಾಗಿರುವ ನಾವು ಇತರ ಜೀವಿ ಪ್ರಬೇಧಗಳನ್ನು ಹಲವಾರು ವಿಧಗಳಲ್ಲಿ ಹೋಲುತ್ತೇವೆ. ಆದರೂ, ಭಾಷೆ ಮತ್ತು ಯೋಚನಾಶಕ್ತಿಯನ್ನು ಬಳಸುವ ಸಾಮರ್ಥ್ಯದಲ್ಲಿ ನಾವು ಭೂಮಿ ಮೇಲಿರುವ ಇತರ ಎಲ್ಲ ಜೀವರೂಪಗಳಿಗಿಂತ ಅದ್ವಿತೀಯರಾಗಿದ್ದೇವೆ. ನಾವು ಇನ್ನೊಂದು ವಿಷಯದಲ್ಲೂ ಅದ್ವಿತೀಯರಾಗಿದ್ದೇವೆ. ಅದೇನೆಂದರೆ, ನಮ್ಮ ಕುರಿತಾಗಿಯೇ ನಮಗೆ ಈ ಕುತೂಹಲವಿದೆ: ‘ನಮ್ಮ ಶರೀರವನ್ನು ಹೇಗೆ ವಿನ್ಯಾಸಿಸಲಾಗಿತ್ತು? ನಾವು ಹೇಗೆ ರಚಿಸಲ್ಪಟ್ಟೆವು?’” ಇದೇ ಪ್ರಶ್ನೆಗಳ ಬಗ್ಗೆ ದಾವೀದನು ಸಹ ಯೋಚಿಸಿದನು.
13 ಅತ್ಯಂತ ಪ್ರಾಮುಖ್ಯ ಸಂಗತಿಯೇನೆಂದರೆ, ಪ್ರಾಣಿಗಳಿಗೆ ವ್ಯತಿರಿಕ್ತವಾಗಿ ನಮಗೆ ದೇವರ ಸಂಕಲ್ಪಗಳ ಕುರಿತಾಗಿ ಗಾಢವಾಗಿ ಯೋಚಿಸುವ ಅದ್ವಿತೀಯ ಸಾಮರ್ಥ್ಯವಿದೆ. * ಈ ವಿಶೇಷ ವರದಾನವು, ನಾವು ‘ದೇವರ ಸ್ವರೂಪದಲ್ಲಿ’ ಮಾಡಲ್ಪಟ್ಟಿದ್ದೇವೆಂಬುದನ್ನು ತೋರಿಸುವ ಒಂದು ರುಜುವಾತಾಗಿದೆ. (ಆದಿಕಾಂಡ 1:27) ದಾವೀದನು ಈ ವರದಾನವನ್ನು ಉತ್ತಮವಾಗಿ ಬಳಸಿದನು. ದೇವರ ಅಸ್ತಿತ್ವ ಹಾಗೂ ಒಳ್ಳೇ ಗುಣಗಳ ಬಗ್ಗೆ ಸುತ್ತಲಿನ ಲೋಕದಲ್ಲಿರುವ ಪುರಾವೆಯ ಕುರಿತು ಅವನು ಧ್ಯಾನಿಸಿದನು. ದಾವೀದನ ಬಳಿ ಪವಿತ್ರ ಶಾಸ್ತ್ರಗಳ ಆರಂಭದ ಪುಸ್ತಕಗಳೂ ಇದ್ದವು. ಇವುಗಳಲ್ಲಿ ದೇವರು ತನ್ನ ಕುರಿತಾಗಿ ಮತ್ತು ತನ್ನ ಕೆಲಸಗಳ ಕುರಿತಾಗಿ ಮಾಡಿದ್ದ ಪ್ರಕಟನೆಗಳಿದ್ದವು. ಈ ಪ್ರೇರಿತ ಬರಹಗಳು ದಾವೀದನಿಗೆ ದೇವರ ಸಂಕಲ್ಪಗಳು, ವ್ಯಕ್ತಿತ್ವ ಹಾಗೂ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಿದವು. ದಾವೀದನು ಶಾಸ್ತ್ರಗಳ ಕುರಿತು, ಸೃಷ್ಟಿಯ ಕುರಿತು ಮತ್ತು ತನ್ನೊಂದಿಗೆ ದೇವರು ನಡೆದುಕೊಂಡಿರುವ ರೀತಿಯ ಕುರಿತಾಗಿ ಧ್ಯಾನಿಸುವುದರಿಂದ ತನ್ನ ನಿರ್ಮಾಣಿಕನನ್ನು ಸ್ತುತಿಸಲು ಪ್ರಚೋದಿಸಲ್ಪಟ್ಟನು.
ನಂಬಿಕೆಯಲ್ಲಿ ಏನು ಒಳಗೂಡಿದೆ?
14 ದಾವೀದನು ಸೃಷ್ಟಿ ಹಾಗೂ ಶಾಸ್ತ್ರಗಳ ಕುರಿತಾಗಿ ಎಷ್ಟು ಹೆಚ್ಚು ಆಲೋಚಿಸಿದನೋ, ದೇವರ ಜ್ಞಾನ ಹಾಗೂ ಸಾಮರ್ಥ್ಯದ ಪೂರ್ಣ ವ್ಯಾಪ್ತಿ ತನ್ನ ಗ್ರಹಿಕೆಗೆ ಮೀರಿದಂಥದ್ದಾಗಿದೆ ಎಂಬುದು ಅವನಿಗೆ ಅಷ್ಟೇ ಹೆಚ್ಚು ಮನದಟ್ಟಾಯಿತು. (ಕೀರ್ತನೆ 139:6) ನಮ್ಮ ವಿಷಯದಲ್ಲೂ ಇದು ನಿಜವಾಗಿದೆ. ದೇವರ ಎಲ್ಲ ಸೃಷ್ಟಿಕಾರ್ಯಗಳನ್ನು ನಾವೆಂದಿಗೂ ಪೂರ್ಣವಾಗಿ ಅರ್ಥಮಾಡಿಕೊಳ್ಳಲಾರೆವು. (ಪ್ರಸಂಗಿ 3:11; 8:17) ಆದರೆ ದೇವರು, ಶಾಸ್ತ್ರಗಳ ಮೂಲಕ ಮತ್ತು ಪ್ರಕೃತಿಯ ಮೂಲಕ ಸಾಕಷ್ಟು ಜ್ಞಾನವನ್ನು ‘ತಿಳಿಸಿದ್ದಾನೆ.’ ಇದರಿಂದಾಗಿ, ಯಾವುದೇ ಯುಗದಲ್ಲಿ ಜೀವಿಸುತ್ತಿರುವ ಸತ್ಯಾನ್ವೇಷಿಗಳು ಪುರಾವೆಯ ಮೇಲಾಧರಿತವಾದ ನಂಬಿಕೆಯನ್ನು ಹೊಂದುವಂತೆ ಆತನು ಸಾಧ್ಯಮಾಡಿದ್ದಾನೆ.—ರೋಮಾಪುರ 1:19, 20; ಇಬ್ರಿಯ 11:1, 3.
15 ನಂಬಿಕೆ ಇರುವುದೆಂದರೆ, ಜೀವವನ್ನೂ ವಿಶ್ವವನ್ನೂ ಸೃಷ್ಟಿಸಿದ ಬುದ್ಧಿವಂತಿಕೆಯುಳ್ಳ ಸೃಷ್ಟಿಕರ್ತನಿದ್ದಾನೆಂದು ಒಪ್ಪಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಯೆಹೋವ ದೇವರು, ನಾವಾತನನ್ನು ತಿಳಿದುಕೊಳ್ಳಬೇಕು ಮತ್ತು ಆತನೊಂದಿಗೆ ಒಂದು ಸುಸಂಬಂಧ ಕಾಪಾಡಿಕೊಳ್ಳಬೇಕೆಂದು ಬಯಸುವ ಒಬ್ಬ ವ್ಯಕ್ತಿಯಾಗಿದ್ದಾನೆಂದು ಆತನಲ್ಲಿ ಭರವಸೆಯಿಡುವುದು ಅಗತ್ಯ. (ಯಾಕೋಬ 4:8) ಪ್ರೀತಿಭರಿತನಾದ ತಂದೆಯೊಬ್ಬನಲ್ಲಿ ಇಡಲಾಗುವ ನಂಬಿಕೆ ಹಾಗೂ ಭರವಸೆಯ ಕುರಿತಾಗಿ ನಾವು ಯೋಚಿಸಬಹುದು. ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ತಂದೆ ನಿಮಗೆ ನಿಜವಾಗಿ ಸಹಾಯಮಾಡುವರೋ ಎಂದು ಯಾರಾದರೂ ಸಂದೇಹವ್ಯಕ್ತಪಡಿಸುವಲ್ಲಿ, ನಿಮ್ಮ ತಂದೆ ವಾಸ್ತವದಲ್ಲಿ ಭರವಸಾರ್ಹ ವ್ಯಕ್ತಿಯೆಂದು ಅವರಿಗೆ ಮನದಟ್ಟು ಮಾಡಿಸಲು ನಿಮಗೆ ಆ ಹೊತ್ತು ಸಾಧ್ಯವಾಗಲಿಕ್ಕಿಲ್ಲ. ಆದರೆ ನಿಮ್ಮ ತಂದೆ ಒಳ್ಳೆಯವರೆಂದು ನಿಮಗೆ ಅನುಭವದಿಂದ ಪುರಾವೆ ಇರುವಲ್ಲಿ, ಅವರು ಎಂದಿಗೂ ನಿಮ್ಮ ಕೈಬಿಡಲಿಕ್ಕಿಲ್ಲವೆಂಬ ದೃಢಭರವಸೆ ನಿಮಗಿರಬಲ್ಲದು. ಅದೇ ರೀತಿಯಲ್ಲಿ ಬೈಬಲನ್ನು ಅಧ್ಯಯನ ಮಾಡುವ ಹಾಗೂ ಸೃಷ್ಟಿಯ ಕುರಿತು ಗಾಢವಾಗಿ ಯೋಚಿಸುವ ಮೂಲಕ ನಾವು ಆತನನ್ನು ತಿಳಿದುಕೊಳ್ಳುವಾಗ ಮತ್ತು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಆತನ ಸಹಾಯವನ್ನು ಅನುಭವಿಸುವಾಗ ಇವೆಲ್ಲವೂ ನಾವಾತನಲ್ಲಿ ಭರವಸೆಯಿಡುವಂತೆ ಪ್ರಚೋದಿಸುತ್ತದೆ. ಇದು ನಾವಾತನ ಬಗ್ಗೆ ಹೆಚ್ಚೆಚ್ಚನ್ನು ಕಲಿಯುವಂತೆ ಮತ್ತು ನಿಸ್ವಾರ್ಥ ಪ್ರೀತಿ ಹಾಗೂ ಭಕ್ತಿಯಿಂದ ಆತನನ್ನು ಸದಾ ಸ್ತುತಿಸುವಂತೆ ಮಾಡುವುದು. ಇದು ಯಾರೇ ಆಗಲಿ ಮಾಡಬಹುದಾದ ಅತ್ಯಂತ ಘನಭರಿತ ಕೆಲಸವಾಗಿದೆ.—ಎಫೆಸ 5:1, 2.
ನಮ್ಮ ನಿರ್ಮಾಣಿಕನ ಮಾರ್ಗದರ್ಶನವನ್ನು ಕೋರಿ!
16“ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.” (ಕೀರ್ತನೆ 139:23, 24) ತನ್ನ ನಿರ್ಮಾಣಿಕನಾದ ಯೆಹೋವನಿಗೆ ಈಗಾಗಲೇ ತನ್ನ ಬಗ್ಗೆ ಸಮಗ್ರವಾಗಿ ತಿಳಿದಿದೆ, ಅಂದರೆ ತನ್ನ ಯೋಚನೆ, ಮಾತು, ಕೆಲಸ ಇವೆಲ್ಲವೂ ಆತನ ಕಣ್ಣೆದುರಿಗಿದೆ ಎಂಬ ಅರಿವು ದಾವೀದನಿಗಿತ್ತು. (ಕೀರ್ತನೆ 139:1-12; ಇಬ್ರಿಯ 4:13) ದೇವರಿಗೆ ತನ್ನ ಬಗ್ಗೆ ಇಷ್ಟು ಸಂಪೂರ್ಣವಾಗಿ ತಿಳಿದಿರುವುದರಿಂದ ದಾವೀದನಲ್ಲಿ, ‘ತಾನು ಸುರಕ್ಷಿತನಾಗಿದ್ದೇನೆ’ ಎಂಬ ಭಾವನೆ ಹುಟ್ಟುತ್ತದೆ. ಅದು, ಒಬ್ಬ ಪುಟ್ಟ ಮಗು ತನ್ನ ಪ್ರೀತಿಭರಿತ ಹೆತ್ತವರ ತೋಳುಗಳಲ್ಲಿರುವಾಗ ಅನುಭವಿಸುವ ಸುರಕ್ಷತೆಯ ಭಾವನೆಯಂತಿದೆ. ಯೆಹೋವನೊಂದಿಗಿನ ಈ ಆಪ್ತ ಸಂಬಂಧವು ದಾವೀದನಿಗೆ ಬಹುಮೂಲ್ಯವಾಗಿತ್ತು. ಆದುದರಿಂದ ಅದನ್ನು ಕಾಪಾಡಲಿಕ್ಕೋಸ್ಕರ ಅವನು ಯೆಹೋವನ ಕಾರ್ಯಗಳ ಕುರಿತಾಗಿ ಗಾಢವಾಗಿ ಆಲೋಚಿಸಿದನು ಮತ್ತು ಆತನಿಗೆ ಪ್ರಾರ್ಥನೆಮಾಡಿದನು. ವಾಸ್ತವದಲ್ಲಿ, 139ನೇ ಕೀರ್ತನೆಯ ಸಮೇತ ದಾವೀದನ ಅನೇಕ ಕೀರ್ತನೆಗಳು ಮೂಲಭೂತವಾಗಿ ಸಂಗೀತದ ಹಿಮ್ಮೇಳವಿರುವ ಪ್ರಾರ್ಥನೆಗಳಾಗಿವೆ. ಅದೇ ರೀತಿಯಲ್ಲಿ, ಧ್ಯಾನ ಹಾಗೂ ಪ್ರಾರ್ಥನೆಯು ನಮಗೂ ಯೆಹೋವನ ಹತ್ತಿರಕ್ಕೆ ಬರುವಂತೆ ಸಹಾಯಮಾಡುವುದು.
17 ನಾವು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ ನಮಗೆ ಇಚ್ಛಾಸ್ವಾತಂತ್ರ್ಯ ಕೊಡಲ್ಪಟ್ಟಿದೆ. ಒಳ್ಳೇದನ್ನು ಮಾಡುವೆವೊ ಕೆಟ್ಟದ್ದನ್ನು ಮಾಡುವೆವೊ ಎಂಬುದನ್ನು ನಾವು ಆಯ್ಕೆಮಾಡಬಹುದು. ಆದರೆ ಆ ಸ್ವಾತಂತ್ರ್ಯದ ಜೊತೆಗೆ ನೈತಿಕ ಹೊಣೆಗಾರಿಕೆಯೂ ಇದೆ. ದಾವೀದನು ದುಷ್ಟರೊಂದಿಗೆ ವರ್ಗೀಕರಿಸಲ್ಪಡಲು ಇಷ್ಟಪಡಲಿಲ್ಲ. (ಕೀರ್ತನೆ 139:19-22) ಅವನು ವೇದನಾಮಯ ತಪ್ಪುಗಳನ್ನು ಮಾಡದಿರಲು ಬಯಸಿದನು. ಹೀಗಿರುವುದರಿಂದ, ದಾವೀದನು ಯೆಹೋವನ ಅತ್ಯುತ್ಕೃಷ್ಟ ಜ್ಞಾನದ ಕುರಿತಾಗಿ ಗಾಢವಾಗಿ ಯೋಚಿಸಿದ ಬಳಿಕ, ದೇವರು ತನ್ನ ಅಂತರಾಳವನ್ನು ಪರೀಕ್ಷಿಸುವಂತೆ ಮತ್ತು ಜೀವಕ್ಕೆ ಹೋಗುವ ಮಾರ್ಗದಲ್ಲಿ ನಡೆಸುವಂತೆ ದೀನತೆಯಿಂದ ಬೇಡಿಕೊಂಡನು. ದೇವರ ನೀತಿಯ ನೈತಿಕ ಮಟ್ಟಗಳು ಎಲ್ಲರಿಗೂ ಅನ್ವಯವಾಗುತ್ತವೆ; ಆದುದರಿಂದ ನಾವು ಸಹ ಸರಿಯಾದ ಆಯ್ಕೆಗಳನ್ನು ಮಾಡುವುದು ಅಗತ್ಯ. ನಾವು ಆತನಿಗೆ ವಿಧೇಯರಾಗಬೇಕೆಂದು ಯೆಹೋವನು ನಮ್ಮೆಲ್ಲರನ್ನೂ ಉತ್ತೇಜಿಸುತ್ತಾನೆ. ನಾವು ಹಾಗೆ ಮಾಡುವುದರಿಂದ ಆತನ ಅನುಗ್ರಹ ಮತ್ತು ಅನೇಕ ಪ್ರಯೋಜನಗಳು ಸಿಗುತ್ತವೆ. (ಯೋಹಾನ 12:50; 1 ತಿಮೊಥೆಯ 4:8) ದಿನದಿನವೂ ಯೆಹೋವನೊಂದಿಗೆ ನಡೆಯುವುದು, ದುಃಖಕರ ಸಮಸ್ಯೆಗಳ ಎದುರಿನಲ್ಲೂ ಆಂತರಿಕ ಸಮಾಧಾನವನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಮಾಡುತ್ತದೆ.—ಫಿಲಿಪ್ಪಿ 4:6, 7.
ನಮ್ಮ ಅದ್ಭುತ ನಿರ್ಮಾಣಿಕನನ್ನು ಅನುಸರಿಸಿರಿ!
18 ಒಬ್ಬ ಯೌವನಸ್ಥನಾಗಿದ್ದಾಗ, ದಾವೀದನು ಅನೇಕವೇಳೆ ಬಯಲಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದನು. ಕುರಿಗಳು ಹುಲ್ಲು ಮೇಯುತ್ತಿದ್ದಾಗ ಅವನು ಆಕಾಶದ ಕಡೆಗೆ ನೋಡುತ್ತಿದ್ದನು. ರಾತ್ರಿಯ ಕತ್ತಲಿನಲ್ಲಿ, ದಾವೀದನು ಈ ವಿಶ್ವದ ವೈಭವದ ಕುರಿತಾಗಿ ಮತ್ತು ಇದ್ದೆಲ್ಲದ್ದರ ಉದ್ದೇಶವೇನು ಎಂಬುದರ ಕುರಿತಾಗಿ ಪರ್ಯಾಲೋಚಿಸಿದನು. ಅವನು ಬರೆದದ್ದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. ದಿನವು ದಿನಕ್ಕೆ ಪ್ರಕಟಿಸುತ್ತಿರುವದು; ರಾತ್ರಿಯು ರಾತ್ರಿಗೆ ಅರುಹುತ್ತಿರುವದು.” (ಕೀರ್ತನೆ 19:1, 2) ಸಮಸ್ತವನ್ನೂ ಅದ್ಭುತವಾಗಿ ಮಾಡಿದವನನ್ನು ಹುಡುಕಬೇಕು ಮತ್ತು ಆತನನ್ನು ಅನುಸರಿಸಬೇಕೆಂಬುದನ್ನು ದಾವೀದನು ಅರ್ಥಮಾಡಿಕೊಂಡನು. ನಾವು ಸಹ ಅದೇ ರೀತಿ ಮಾಡಬೇಕು.
19 “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು. . . . ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ” ಎಂದು ತನ್ನ ಮಗನಾದ ಸೊಲೊಮೋನನು ಯುವಜನರಿಗೆ ಕೊಟ್ಟ ಬುದ್ಧಿವಾದದ ವಿಷಯದಲ್ಲಿ ಸ್ವತಃ ದಾವೀದನೇ ಮಾದರಿಯನ್ನಿಟ್ಟನು. (ಪ್ರಸಂಗಿ 12:1, 13) ಒಬ್ಬ ಯೌವನಸ್ಥನಾಗಿ ದಾವೀದನು, ತಾನು ‘ಅದ್ಭುತವಾಗಿ ರಚಿಸಲ್ಪಟ್ಟಿದ್ದೇನೆ’ ಎಂಬುದನ್ನು ಆಗಲೇ ಗ್ರಹಿಸಿದ್ದನು. ಈ ಒಳನೋಟಕ್ಕೆ ತಕ್ಕಂತೆ ಜೀವಿಸುವುದು ಅವನಿಗೆ ತನ್ನ ಜೀವನದಾದ್ಯಂತ ಹೇರಳ ಪ್ರಯೋಜನಗಳನ್ನು ತಂದಿತು. ಆಬಾಲವೃದ್ಧರಾದ ನಾವು ನಮ್ಮ ಮಹಾ ಸೃಷ್ಟಿಕರ್ತನನ್ನು ಸ್ತುತಿಸಿ ಸೇವಿಸುವುದಾದರೆ ನಮ್ಮ ಸದ್ಯದ ಹಾಗೂ ಭವಿಷ್ಯತ್ತಿನ ಜೀವನವು ಹರ್ಷಕರವಾಗಿರುವುದು. ಯೆಹೋವನಿಗೆ ನಿಕಟವಾಗಿ ಅಂಟಿಕೊಳ್ಳುವ ಮತ್ತು ಆತನ ನೀತಿಯುತ ಮಾರ್ಗಗಳಿಗನುಸಾರ ಜೀವಿಸುವವರಿಗೆ ಬೈಬಲ್ ಹೀಗೆ ವಾಗ್ದಾನಮಾಡುತ್ತದೆ: “ಮುಪ್ಪಿನಲ್ಲಿಯೂ ಫಲಿಸುವರು; ಪುಷ್ಟಿಯಾಗಿದ್ದು ಶೋಭಿಸುವರು. ಹೀಗೆ ಅವರು ಯೆಹೋವನ ಸತ್ಯಸಂಧತೆಗೆ ದೃಷ್ಟಾಂತರಾಗಿರುವರು.” (ಕೀರ್ತನೆ 92:14, 15) ಅಷ್ಟುಮಾತ್ರವಲ್ಲದೆ, ನಮ್ಮ ನಿರ್ಮಾಣಿಕನ ಅದ್ಭುತ ಕೆಲಸಗಳನ್ನು ಸದಾ ಆನಂದಿಸುವ ನಿರೀಕ್ಷೆ ನಮಗಿರುವುದು. (w07 6/15)
[ಪಾದಟಿಪ್ಪಣಿಗಳು]
^ ಪ್ಯಾರ. 3 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ ಎಚ್ಚರ! (ಇಂಗ್ಲಿಷ್) ಪತ್ರಿಕೆಯ 2004 ಜೂನ್ 22ರ ಸಂಚಿಕೆಯನ್ನು ನೋಡಿ.
^ ಪ್ಯಾರ. 9 “ನಿಮ್ಮ ಮೂತ್ರಪಿಂಡಗಳು—ಜೀವನಕ್ಕಾಗಿ ಒಂದು ಶೋಧಕ” ಎಂಬ ಲೇಖನವನ್ನೂ ಎಚ್ಚರ! ಪತ್ರಿಕೆಯ 1997 ಆಗಸ್ಟ್ 8ರ ಸಂಚಿಕೆಯಲ್ಲಿ ನೋಡಿ.
^ ಪ್ಯಾರ. 17 ಕೀರ್ತನೆ 139:18ಬಿ ಭಾಗದಲ್ಲಿರುವ ದಾವೀದನ ಮಾತುಗಳು, ತಾನು ಯೆಹೋವನ ಸಂಕಲ್ಪಗಳನ್ನು ಲೆಕ್ಕಿಸುತ್ತಾ ರಾತ್ರಿ ನಿದ್ದೆಹೋದರೂ, ಬೆಳಗ್ಗೆ ಎದ್ದಾಗ ತಾನು ಲೆಕ್ಕಿಸುವುದನ್ನು ಮುಂದುವರಿಸುವಷ್ಟು ಸಂಕಲ್ಪಗಳು ಇನ್ನೂ ಇರುವವು ಎಂಬ ಅರ್ಥವನ್ನು ಕೊಡುತ್ತಿರುವಂತೆ ತೋರುತ್ತದೆ.
ನೀವು ವಿವರಿಸಬಲ್ಲಿರೋ?
• ಭ್ರೂಣ ಬೆಳೆಯುವಂಥ ರೀತಿಯು, ನಾವು ‘ಅದ್ಭುತವಾಗಿ ರಚಿಸಲ್ಪಟ್ಟಿದ್ದೇವೆ’ ಎಂಬುದನ್ನು ಹೇಗೆ ತೋರಿಸುತ್ತದೆ?
• ನಾವು ಯೆಹೋವನ ಸಂಕಲ್ಪಗಳ ಕುರಿತಾಗಿ ಏಕೆ ಧ್ಯಾನಿಸಬೇಕು?
• ನಂಬಿಕೆ ಹಾಗೂ ಯೆಹೋವನೊಂದಿಗಿನ ನಮ್ಮ ಸಂಬಂಧವು ಹೇಗೆ ಜೋಡಿಸಲ್ಪಟ್ಟಿದೆ?
[ಅಧ್ಯಯನ ಪ್ರಶ್ನೆಗಳು]
1. ಅನೇಕ ಚಿಂತನಾಶೀಲ ಜನರು, ಈ ಭೂಮಿಯ ಅದ್ಭುತಗಳಿಗಾಗಿ ದೇವರೇ ಕಾರಣನೆಂದು ಹೇಳುವುದೇಕೆ?
2. ದಾವೀದನು ಯೆಹೋವನನ್ನು ಸ್ತುತಿಸುವಂತೆ ಪ್ರಚೋದಿಸಿದ್ದು ಯಾವುದು?
3, 4. ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನ ಕೆಲಸಗಳ ಕುರಿತಾಗಿ ಗಂಭೀರವಾಗಿ ಯೋಚಿಸುವುದು ಏಕೆ ಪ್ರಾಮುಖ್ಯವಾಗಿದೆ?
5, 6. (ಎ) ನಮ್ಮೆಲ್ಲರ ಜೀವ ಹೇಗೆ ಆರಂಭವಾಯಿತು? (ಬಿ) ನಮ್ಮ ಕಿಡ್ನಿಗಳ ಪಾತ್ರವೇನು?
7, 8. (ಎ) ಇನ್ನೂ ಹುಟ್ಟಿರದ ಮಗುವಿನ ಆರಂಭದ ಬೆಳವಣಿಗೆಯನ್ನು ವರ್ಣಿಸಿರಿ. (ಬಿ) ಗರ್ಭದಲ್ಲಿ ಬೆಳೆಯುತ್ತಿರುವ ಒಂದು ಮಗು ‘ಭೂಗರ್ಭದಲ್ಲಿ ರಚಿಸಲ್ಪಡುತ್ತಿರುವುದು’ ಹೇಗೆ?
9, 10. ಒಂದು ಭ್ರೂಣದ ಅಂಗಗಳ ರಚನೆಯು ದೇವರ ‘ಪುಸ್ತಕದಲ್ಲಿ ಬರೆಯಲ್ಪಟ್ಟಿರುವುದು’ ಹೇಗೆ?
11. ನಮ್ಮ ಶಾರೀರಿಕ ಲಕ್ಷಣಗಳನ್ನು ನಾವು ಹೇಗೆ ಪಡೆದುಕೊಳ್ಳುತ್ತೇವೆ?
12. ಮಾನವರನ್ನು ಪ್ರಾಣಿಗಳಿಂದ ವಿಶೇಷವಾಗಿ ಭಿನ್ನವಾಗಿರಿಸುವಂಥ ಸಂಗತಿ ಯಾವುದು?
13. (ಎ) ದಾವೀದನು ದೇವರ ಸಂಕಲ್ಪಗಳ ಕುರಿತಾಗಿ ಹೇಗೆ ಧ್ಯಾನಿಸಶಕ್ತನಾದನು? (ಬಿ) ನಾವು ದಾವೀದನ ಮಾದರಿಯನ್ನು ಹೇಗೆ ಅನುಸರಿಸಬಲ್ಲೆವು?
14. ದೇವರಲ್ಲಿ ನಂಬಿಕೆಯನ್ನಿಡಲಿಕ್ಕಾಗಿ ನಾವು ಆತನ ಕುರಿತಾಗಿ ಎಲ್ಲವನ್ನೂ ತಿಳಿದಿರುವ ಅಗತ್ಯವಿಲ್ಲವೇಕೆ?
15. ನಂಬಿಕೆ ಹಾಗೂ ದೇವರೊಂದಿಗಿನ ನಮ್ಮ ಸಂಬಂಧ ಹೇಗೆ ಪರಸ್ಪರ ಜೋಡಿಸಲ್ಪಟ್ಟಿದೆ ಎಂಬುದನ್ನು ದೃಷ್ಟಾಂತಿಸಿರಿ.
16. ದಾವೀದನಿಗೆ ಯೆಹೋವನೊಟ್ಟಿಗಿದ್ದ ಆಪ್ತ ಸಂಬಂಧದಿಂದ ನಾವೇನು ಕಲಿಯಬಲ್ಲೆವು?
17. (ಎ) ದಾವೀದನು, ತನ್ನ ಹೃದಯವನ್ನು ಯೆಹೋವನು ಪರೀಕ್ಷಿಸಬೇಕೆಂದು ಬಯಸಿದ್ದೇಕೆ? (ಬಿ) ನಾವು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಬಳಸುವ ರೀತಿಯು ನಮ್ಮ ಜೀವನಗಳ ಮೇಲೆ ಹೇಗೆ ಪರಿಣಾಮಬೀರುತ್ತದೆ?
18. ಸೃಷ್ಟಿಯ ಕುರಿತು ಗಾಢವಾಗಿ ಆಲೋಚಿಸುವುದರಿಂದ ದಾವೀದನು ಯಾವ ತೀರ್ಮಾನಕ್ಕೆ ಬಂದನು?
19. ‘ಅದ್ಭುತವಾಗಿ ರಚಿಸಲ್ಪಡುವುದರಿಂದ’ ಆಬಾಲವೃದ್ಧರೆಲ್ಲರೂ ಯಾವ ಪಾಠಗಳನ್ನು ಕಲಿಯಬಲ್ಲರು?
[ಪುಟ 17ರಲ್ಲಿರುವ ಚಿತ್ರಗಳು]
ಗರ್ಭದೊಳಗೆ ಮಗುವಿನ ಬೆಳವಣಿಗೆಯು, ಪೂರ್ವನಿರ್ಧರಿತ ವಿನ್ಯಾಸವನ್ನು ಅನುಸರಿಸುತ್ತದೆ
DNA
[ಕೃಪೆ]
ಇನ್ನೂ ಹುಟ್ಟಿರದ ಮಗು: Lennart Nilsson