ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ವಿಧೇಯತೆ ಯೆಹೋವನಿಗೆ ಬಹುಮೂಲ್ಯ

ನಿಮ್ಮ ವಿಧೇಯತೆ ಯೆಹೋವನಿಗೆ ಬಹುಮೂಲ್ಯ

ನಿಮ್ಮ ವಿಧೇಯತೆ ಯೆಹೋವನಿಗೆ ಬಹುಮೂಲ್ಯ

“ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು.”​—⁠ಜ್ಞಾನೋಕ್ತಿ 27:⁠11.

ಇಂದು ಲೋಕದಲ್ಲೆಲ್ಲ ಸ್ವಾತಂತ್ರ್ಯದ ಹಾಗೂ ಅವಿಧೇಯತೆಯ ಆತ್ಮವು ಪಸರಿಸಿದೆ. ಇದಕ್ಕೆ ಕಾರಣವೇನೆಂಬುದನ್ನು ಅಪೊಸ್ತಲ ಪೌಲನು ಎಫೆಸದ ಕ್ರೈಸ್ತರಿಗೆ ಬರೆದ ತನ್ನ ಪತ್ರದಲ್ಲಿ ವಿವರಿಸಿದ್ದು: “ನೀವು ಪೂರ್ವದಲ್ಲಿ . . . ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿಗೆ, ಅಂದರೆ ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮನಿಗೆ ಅನುಸಾರವಾಗಿ ನಡೆದುಕೊಂಡಿರಿ.” (ಎಫೆಸ 2:1, 2) ಹೌದು, “ವಾಯುಮಂಡಲದಲ್ಲಿ ಅಧಿಕಾರನಡೆಸುವ ಅಧಿಪತಿ”ಯಾದ ಪಿಶಾಚನಾದ ಸೈತಾನನು, ಈ ಇಡೀ ಲೋಕಕ್ಕೆ ಅವಿಧೇಯತೆಯ ಆತ್ಮದ ಸೋಂಕನ್ನು ತಗಲಿಸಿದ್ದಾನೆಂದು ಹೇಳಬಹುದು. ಅವನಿದನ್ನು ಪ್ರಥಮ ಶತಮಾನದಲ್ಲಿ ಮಾಡಿದ್ದನು, ಮತ್ತು Iನೇ ಲೋಕದ ಯುದ್ಧದ ಸಮಯದಷ್ಟಕ್ಕೆ ಪರಲೋಕದಿಂದ ಹೊರದಬ್ಬಲ್ಪಟ್ಟಂದಿನಿಂದ ಇನ್ನೂ ತೀವ್ರವಾಗಿ ಮಾಡುತ್ತಿದ್ದಾನೆ.​—⁠ಪ್ರಕಟನೆ 12:⁠9.

2 ಲೋಕದಲ್ಲಿ ಅವಿಧೇಯತೆಯ ಆತ್ಮವಿದ್ದರೂ ಕ್ರೈಸ್ತರಾದ ನಮಗೆ, ನಮ್ಮ ಹೃತ್ಪೂರ್ವಕ ವಿಧೇಯತೆ ಯೆಹೋವ ದೇವರಿಗೆ ನ್ಯಾಯವಾಗಿ ಸಲ್ಲಬೇಕೆಂಬುದು ತಿಳಿದಿದೆ. ಏಕೆಂದರೆ ಆತನೇ ನಮ್ಮ ಸೃಷ್ಟಿಕರ್ತನು, ಜೀವದ ಪೋಷಕನು, ಪ್ರೀತಿಯ ಪರಮಾಧಿಕಾರಿ ಹಾಗೂ ನಮ್ಮ ವಿಮೋಚಕನು ಆಗಿದ್ದಾನೆ. (ಕೀರ್ತನೆ 148:​5, 6; ಅ. ಕೃತ್ಯಗಳು 4:24; ಕೊಲೊಸ್ಸೆ 1:13; ಪ್ರಕಟನೆ 4:11) ಮೋಶೆಯ ದಿನದಲ್ಲಿನ ಇಸ್ರಾಯೇಲ್ಯರಿಗೆ, ಯೆಹೋವನೇ ತಮ್ಮ ಜೀವದಾತನೂ ರಕ್ಷಕನೂ ಆಗಿದ್ದನೆಂಬುದು ತಿಳಿದಿತ್ತು. ಆದುದರಿಂದಲೇ ಮೋಶೆ ಅವರಿಗಂದದ್ದು: “ನೀವು ಸ್ವಲ್ಪವಾದರೂ ತಪ್ಪದೆ ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆಯೇ ನಡೆದುಕೊಳ್ಳಬೇಕು.” (ಧರ್ಮೋಪದೇಶಕಾಂಡ 5:32) ಹೌದು, ಅವರ ವಿಧೇಯತೆಯು ನ್ಯಾಯವಾಗಿ ಯೆಹೋವನಿಗೆ ಸಲ್ಲಬೇಕಿತ್ತು. ಆದರೂ ಸ್ವಲ್ಪ ಸಮಯದೊಳಗೆಯೇ ಅವರು ತಮ್ಮ ಪರಮಾಧಿಕಾರಿಗೆ ಅವಿಧೇಯರಾಗಿಬಿಟ್ಟರು.

3 ಈ ವಿಶ್ವದ ಸೃಷ್ಟಿಕರ್ತನ ದೃಷ್ಟಿಯಲ್ಲಿ ನಮ್ಮ ವಿಧೇಯತೆಯು ಎಷ್ಟು ಮಹತ್ವದ್ದಾಗಿದೆ? ಒಮ್ಮೆ, ಪ್ರವಾದಿ ಸಮುವೇಲನ ಮುಖಾಂತರ ದೇವರು ರಾಜ ಸೌಲನಿಗೆ ಹೀಗಂದನು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ.” (1 ಸಮುವೇಲ 15:22, 23) ಯಾಕೆ ಹೀಗೆ?

ವಿಧೇಯತೆಯು ‘ಯಜ್ಞಕ್ಕಿಂತ ಉತ್ತಮ’ ಆಗಿರುವುದು ಹೇಗೆ?

4 ಯೆಹೋವನು ಸೃಷ್ಟಿಕರ್ತನಾಗಿರುವುದರಿಂದ ನಮ್ಮ ಬಳಿ ಭೌತಿಕವಾಗಿ ಇರುವಂಥದ್ದೆಲ್ಲವೂ ಆತನದ್ದೇ. ಹೀಗಿರುವುದರಿಂದ, ನಾವು ಆತನಿಗೆ ಕೊಡಲಿಕ್ಕೇನಾದರೂ ಉಳಿದಿದೆಯೋ? ಹೌದು. ತುಂಬ ಅಮೂಲ್ಯವಾದದ್ದೇನನ್ನೋ ಆತನಿಗೆ ಕೊಡಬಲ್ಲೆವು. ಅದೇನು? ಈ ಮುಂದಿನ ಬುದ್ಧಿವಾದದಿಂದ ನಾವು ಇದಕ್ಕೆ ಉತ್ತರವನ್ನು ಪಡೆಯಬಲ್ಲೆವು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋಕ್ತಿ 27:11) ನಾವು ದೇವರಿಗೆ ನಮ್ಮ ವಿಧೇಯತೆಯನ್ನು ಕೊಡಬಲ್ಲೆವು. ನಮ್ಮ ಪರಿಸ್ಥಿತಿಗಳು ಹಾಗೂ ಹಿನ್ನೆಲೆಗಳು ಭಿನ್ನಭಿನ್ನವಾಗಿದ್ದರೂ ನಾವು ವಿಧೇಯರಾಗಿರಬಲ್ಲೆವು. ಇದನ್ನು ಮಾಡುವ ಮೂಲಕ, ಕಷ್ಟಗಳ ಸಮಯದಲ್ಲಿ ಮಾನವರು ದೇವರಿಗೆ ನಿಷ್ಠರಾಗಿ ಉಳಿಯುವುದಿಲ್ಲವೆಂದು ಪಿಶಾಚನಾದ ಸೈತಾನನು ಹೇಳಿದ ದುಷ್ಟ ಮಾತಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಉತ್ತರಕೊಡಬಹುದು. ಇದು ನಮಗೆಂಥ ಸುಯೋಗ!

5 ನಾವು ಮಾಡುವಂಥ ನಿರ್ಣಯಗಳ ಬಗ್ಗೆ ದೇವರಿಗೆ ಆಸಕ್ತಿಯಿದೆ. ನಾವು ಅವಿಧೇಯರಾಗುವಲ್ಲಿ ಅದು ಆತನನ್ನು ಬಾಧಿಸುತ್ತದೆ. ಹೇಗೆ? ಯಾರಾದರೊಬ್ಬರು ವಿವೇಕಹೀನವಾದ ಮಾರ್ಗಕ್ರಮವನ್ನು ಬೆನ್ನಟ್ಟುತ್ತಿರುವುದನ್ನು ನೋಡುವಾಗ ಅವನ ಮನಸ್ಸಿಗೆ ನೋವಾಗುತ್ತದೆ. (ಕೀರ್ತನೆ 78:​40, 41) ಸಕ್ಕರೆಕಾಯಿಲೆ ಇರುವ ವ್ಯಕ್ತಿಯೊಬ್ಬನು, ತನ್ನ ವೈದ್ಯನು ಶಿಫಾರಸ್ಸುಮಾಡಿದ ಆರೋಗ್ಯಕರ ಆಹಾರಪಥ್ಯಕ್ಕೆ ಅಂಟಿಕೊಳ್ಳದೆ, ತನಗೆ ಹಾನಿಮಾಡುವಂಥ ಆಹಾರವನ್ನೇ ಸೇವಿಸುತ್ತಾನೆ ಎಂದಿಟ್ಟುಕೊಳ್ಳಿ. ಅವನ ಕಾಳಜಿವಹಿಸುತ್ತಿರುವ ಆ ವೈದ್ಯನಿಗೆ ಹೇಗನಿಸಬಹುದು? ಹಾಗೆಯೇ ಮನುಷ್ಯರು ಯೆಹೋವನಿಗೆ ಅವಿಧೇಯರಾಗುವಾಗ ಆತನ ಮನಸ್ಸಿಗೆ ನೋವಾಗುತ್ತದೆಂಬದು ಖಂಡಿತ. ಏಕೆಂದರೆ ಜೀವಕ್ಕಾಗಿ ತಾನು ಶಿಫಾರಸ್ಸುಮಾಡಿದ್ದನ್ನು ಅಲಕ್ಷಿಸುವುದರ ಫಲಿತಾಂಶಗಳೇನು ಎಂಬುದು ಆತನಿಗೆ ತಿಳಿದಿದೆ.

6 ನಾವು ವೈಯಕ್ತಿಕವಾಗಿ ವಿಧೇಯರಾಗಿರುವಂತೆ ಯಾವುದು ಸಹಾಯ ಮಾಡುವುದು? ನಮ್ಮಲ್ಲಿ ಪ್ರತಿಯೊಬ್ಬರು ‘ಒಂದು ವಿಧೇಯ ಹೃದಯಕ್ಕಾಗಿ’ ದೇವರಿಗೆ ಬೇಡುವುದು ಸೂಕ್ತ. ಇದನ್ನೇ ರಾಜ ಸೊಲೊಮೋನನು ಮಾಡಿದ್ದನು. ತನ್ನ ಜೊತೆ ಇಸ್ರಾಯೇಲ್ಯರ ತೀರ್ಪುಮಾಡುವಾಗ “ಒಳ್ಳೆಯದನ್ನೂ ಕೆಟ್ಟದ್ದನ್ನೂ ತಿಳಿಯುವು”ದಕ್ಕೋಸ್ಕರ ಅಂಥ ಹೃದಯಕ್ಕಾಗಿ ಬೇಡಿಕೊಂಡನು. (1 ಅರಸುಗಳು 3:​9, NW) ಅವಿಧೇಯತೆಯ ಆತ್ಮವು ಪಸರಿಸಿರುವ ಈ ಲೋಕದಲ್ಲಿ ಒಳ್ಳೇದು ಯಾವುದು, ಕೆಟ್ಟದ್ದು ಯಾವುದೆಂಬುದನ್ನು ವಿವೇಚಿಸಿ ತಿಳಿದುಕೊಳ್ಳಲಿಕ್ಕೋಸ್ಕರ ನಮಗೆ ‘ವಿಧೇಯ ಹೃದಯದ’ ಅಗತ್ಯವಿದೆ. ನಾವು ‘ವಿಧೇಯ ಹೃದಯವನ್ನು’ ಬೆಳೆಸಿಕೊಳ್ಳುವಂತೆ ದೇವರು ನಮಗೆ ತನ್ನ ವಾಕ್ಯ, ಬೈಬಲ್‌ ಅಧ್ಯಯನ ಸಹಾಯಕಗಳು, ಕ್ರೈಸ್ತ ಕೂಟಗಳು ಮತ್ತು ಕಾಳಜಿವಹಿಸುವ ಸಭಾ ಹಿರಿಯರನ್ನು ಕೊಟ್ಟಿದ್ದಾನೆ. ಇಂಥ ಪ್ರೀತಿಪರ ಏರ್ಪಾಡುಗಳನ್ನು ನಾವು ಸದುಪಯೋಗಿಸುತ್ತೇವೋ?

7 ಈ ಸಂಬಂಧದಲ್ಲಿ, ಯೆಹೋವನು ಗತಕಾಲದಲ್ಲಿ ತನ್ನ ಜನರಿಗೆ ಪ್ರಾಣಿಯಜ್ಞಗಳಿಗಿಂತಲೂ ವಿಧೇಯತೆಯೇ ಹೆಚ್ಚು ಪ್ರಾಮುಖ್ಯವೆಂದು ಹೇಳಿದ್ದನ್ನು ಜ್ಞಾಪಕಕ್ಕೆ ತನ್ನಿರಿ. (ಜ್ಞಾನೋಕ್ತಿ 21:​3, 27; ಹೋಶೇಯ 6:6; ಮತ್ತಾಯ 12:⁠7) ಆದರೆ ಅಂಥ ಯಜ್ಞಗಳನ್ನು ಅರ್ಪಿಸುವಂತೆ ಯೆಹೋವನೇ ಹೇಳಿದ್ದನಲ್ಲವೇ? ಅದು ನಿಜ. ಹೀಗಿದ್ದರೂ ಒಬ್ಬ ವ್ಯಕ್ತಿ ಯಜ್ಞವನ್ನು ಅರ್ಪಿಸುವುದರ ಉದ್ದೇಶವೇನಾಗಿದೆ ಎಂಬುದೇ ಪ್ರಾಮುಖ್ಯ ಸಂಗತಿಯಾಗಿತ್ತು. ದೇವರನ್ನು ಮೆಚ್ಚಿಸಲಿಕ್ಕಾಗಿ ಅದನ್ನು ಅರ್ಪಿಸುತ್ತಿದ್ದನೋ, ಬರೀ ಕಾಟಾಚಾರಕ್ಕಾಗಿ ಅರ್ಪಿಸುತ್ತಿದ್ದನೋ? ಒಬ್ಬ ಆರಾಧಕನು ದೇವರನ್ನು ಮೆಚ್ಚಿಸಬೇಕೆಂದು ನಿಜವಾಗಿ ಬಯಸುತ್ತಿರುವಲ್ಲಿ, ಅವನು ದೇವರ ಎಲ್ಲ ಆಜ್ಞೆಗಳನ್ನು ಪಾಲಿಸಲು ಜಾಗ್ರತೆ ವಹಿಸುವನು. ದೇವರಿಗೆ ಯಾವುದೇ ಪ್ರಾಣಿ ಯಜ್ಞಗಳ ಅಗತ್ಯವಿಲ್ಲ. ಆದರೆ ನಾವಾತನಿಗೆ ನೀಡಬಹುದಾದ ಅಮೂಲ್ಯವಾದ ಒಂದು ಸಂಗತಿ ನಮ್ಮ ವಿಧೇಯತೆಯೇ ಆಗಿದೆ.

ಎಚ್ಚರಿಕೆಯ ಮಾದರಿ

8 ರಾಜ ಸೌಲನ ಕುರಿತಾದ ಬೈಬಲ್‌ ದಾಖಲೆಯು ವಿಧೇಯತೆಯು ಎಷ್ಟು ಮಹತ್ವದ್ದೆಂಬುದನ್ನು ಎತ್ತಿತೋರಿಸುತ್ತದೆ. ಸೌಲನು ಆರಂಭದಲ್ಲಿ ಒಬ್ಬ ವಿನಮ್ರ ರಾಜನಾಗಿದ್ದು, ‘ತನ್ನ ದೃಷ್ಟಿಯಲ್ಲೇ ಅಲ್ಪನಾಗಿದ್ದನು.’ ಆದರೆ ಕಾಲಾನಂತರ, ಅವನ ನಿರ್ಣಯಗಳನ್ನು ಅಹಂಕಾರ ಹಾಗೂ ತಪ್ಪಾದ ತರ್ಕವು ನಿಯಂತ್ರಿಸಲಾರಂಭಿಸಿತು. (1 ಸಮುವೇಲ 10:​21, 22; 15:17) ಒಂದು ಸಂದರ್ಭದಲ್ಲಿ, ಸೌಲನು ಫಿಲಿಷ್ಟ್ಯರೊಂದಿಗೆ ಯುದ್ಧಮಾಡಲಿಕ್ಕಿತ್ತು. ಸಮುವೇಲನು, ತಾನು ಬಂದು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಿ ಹೆಚ್ಚಿನ ನಿರ್ದೇಶನವನ್ನು ಕೊಡುವವರೆಗೆ ಕಾಯಬೇಕೆಂದು ಅವನಿಗೆ ಹೇಳಿದ್ದನು. ಆದರೆ ಸಮುವೇಲನು ಹೇಳಿದ ಸಮಯಕ್ಕೆ ಸರಿಯಾಗಿ ತಲಪಲಿಲ್ಲ. ಆದುದರಿಂದ ಜನರು ಚದರಿಹೋಗಲಾರಂಭಿಸಿದರು. ಇದನ್ನು ನೋಡಿ ಸೌಲನು ತಾನಾಗಿಯೇ “ಸರ್ವಾಂಗಹೋಮವನ್ನು ಅರ್ಪಿಸಿದನು.” ಇದರಿಂದಾಗಿ ಯೆಹೋವನು ಸಿಟ್ಟುಗೊಂಡನು. ಕೊನೆಗೆ ಸಮುವೇಲನು ಬಂದು ತಲಪಿದಾಗ, ರಾಜನು ತನ್ನ ಅವಿಧೇಯತೆಗೆ ನೆವವನ್ನು ಕೊಡುತ್ತಾ, ಸಮುವೇಲನು ಬರಲು ತಡವಾದದ್ದರಿಂದ ಯೆಹೋವನಿಗೆ ಶಾಂತ್ಯರ್ಪಣೆ ಸಲ್ಲಿಸಲಿಕ್ಕಾಗಿ ತಾನು ಮುಂದೆ ಹೋಗಲೇಬೇಕಾಯಿತೆಂದು ಹೇಳಿದನು. ರಾಜ ಸೌಲನಿಗೆ, ಸಮುವೇಲನು ಬಂದು ಆ ಯಜ್ಞವನ್ನು ಅರ್ಪಿಸುವಂತೆ ಕಾಯಬೇಕೆಂದು ಕೊಡಲಾದ ನಿರ್ದೇಶನಕ್ಕೆ ವಿಧೇಯನಾಗುವುದಕ್ಕಿಂತಲೂ ಯಜ್ಞ ಅರ್ಪಿಸುವುದೇ ಹೆಚ್ಚು ಪ್ರಾಮುಖ್ಯವಾಗಿತ್ತು. ಆದರೆ ಸಮುವೇಲನು ಅವನಿಗಂದದ್ದು: “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ.” ಅವನು ಯೆಹೋವನಿಗೆ ಅವಿಧೇಯನಾದ್ದರಿಂದ ತನ್ನ ರಾಜತ್ವವನ್ನು ಕಳೆದುಕೊಳ್ಳಬೇಕಾಯಿತು.​—⁠1 ಸಮುವೇಲ 10:8; 13:5-13.

9 ರಾಜನು ತನ್ನ ಈ ಅನುಭವದಿಂದ ಪಾಠ ಕಲಿತನೋ? ಇಲ್ಲ! ಕಾಲಾನಂತರ ಯೆಹೋವನು ಸೌಲನಿಗೆ ಆಮಾಲೇಕ್‌ ಜನಾಂಗವನ್ನು ನಿರ್ನಾಮಮಾಡುವಂತೆ ಆಜ್ಞಾಪಿಸಿದನು. ಏಕೆಂದರೆ ಈ ಜನಾಂಗವು, ಯಾವುದೇ ಕಾರಣವಿಲ್ಲದೆ ಇಸ್ರಾಯೇಲಿನ ಮೇಲೆ ಆಕ್ರಮಣ ಮಾಡಿತ್ತು. ಸೌಲನು ಆ ಜನಾಂಗದವರ ಸಾಕು ಪ್ರಾಣಿಗಳನ್ನು ಸಹ ಉಳಿಸಬಾರದಿತ್ತು. ಅವನು “ಅಮಾಲೇಕ್ಯರನ್ನು ಹವೀಲಾ ಪ್ರಾಂತದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ ಶೂರಿನ ವರೆಗೂ ಹೊಡೆಯುತ್ತಾ” ಹೋಗುವ ಮೂಲಕ ಯೆಹೋವನ ಮಾತಿಗೆ ವಿಧೇಯನಾದನು. ಆದುದರಿಂದ ಸಮುವೇಲನು ಅವನನ್ನು ಭೇಟಿಯಾಗಲು ಬಂದಾಗ ರಾಜನು ತನ್ನ ವಿಜಯದ ಕುರಿತಾಗಿ ಬೀಗುತ್ತಾ ಹೇಳಿದ್ದು: “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಆತನ ಅಪ್ಪಣೆಯನ್ನು ನೆರವೇರಿಸಿದೆನು.” ಆದರೆ ಸೌಲನು ಮತ್ತು ಅವನ ಜನರು ತಮಗೆ ಕೊಡಲಾಗಿದ್ದ ಸ್ಪಷ್ಟ ಸೂಚನೆಗಳಿಗೆ ವಿರುದ್ಧವಾಗಿ, ಆಮಾಲೇಕ್ಯರ ರಾಜನಾದ ಆಗಾಗನನ್ನು ಮತ್ತು “ಮೇಲ್ತರದ ಕುರಿದನಗಳನ್ನೂ ಕುರಿಮರಿಗಳನ್ನೂ ಕೊಬ್ಬಿದ ಪಶುಗಳನ್ನೂ ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ” ಉಳಿಸಿದ್ದರು. ತನ್ನ ಈ ಅವಿಧೇಯ ಕ್ರಮವನ್ನು ಸಮರ್ಥಿಸುತ್ತಾ ರಾಜ ಸೌಲನು ಹೇಳಿದ್ದು: “ಜನರು ನಿನ್ನ ದೇವರಾದ ಯೆಹೋವನಿಗೋಸ್ಕರ ಯಜ್ಞಸಲ್ಲಿಸುವದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಮೇಲ್ತರದವುಗಳನ್ನು ಉಳಿಸಿ ತಂದಿದ್ದಾರೆ.”​—⁠1 ಸಮುವೇಲ 15:​1-15.

10 ಆಗ ಸಮುವೇಲನು ಸೌಲನಿಗಂದದ್ದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.” (1 ಸಮುವೇಲ 15:22) ಆ ಎಲ್ಲ ಪ್ರಾಣಿಗಳನ್ನು ನಾಶಗೊಳಿಸಬೇಕೆಂದು ಯೆಹೋವನು ನಿರ್ಧರಿಸಿದ್ದರಿಂದ, ಅವುಗಳು ಯಜ್ಞಾಪರ್ಣೆಗಾಗಿ ಬಳಸಲು ಯೋಗ್ಯವಾಗಿರಲಿಲ್ಲ.

ಎಲ್ಲದ್ದರಲ್ಲೂ ವಿಧೇಯರಾಗಿರಿ

11 ತನ್ನ ನಿಷ್ಠಾವಂತ ಸೇವಕರು ಹಿಂಸೆಯ ಎದುರಲ್ಲಿ ಸ್ಥಿರಚಿತ್ತರಾಗಿ ಉಳಿಯುವುದು, ಉದಾಸೀನ ಭಾವದ ಜನರ ಮಧ್ಯೆಯೂ ರಾಜ್ಯವನ್ನು ಘೋಷಿಸುತ್ತಿರುವುದು ಮತ್ತು ಹೊಟ್ಟೆಪಾಡಿಗಾಗಿ ದುಡಿಯಬೇಕಾದ ಒತ್ತಡವಿರುವಾಗಲೂ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರುವುದನ್ನು ನೋಡಿ ಯೆಹೋವನಿಗೆಷ್ಟು ಸಂತೋಷವಾಗುತ್ತದೆ! ನಮ್ಮ ಆಧ್ಯಾತ್ಮಿಕ ಜೀವನದ ಈ ಎಲ್ಲ ಪ್ರಮುಖ ಅಂಶಗಳಲ್ಲಿ ನಾವು ತೋರಿಸುವ ವಿಧೇಯತೆ ಆತನ ಮನಸ್ಸನ್ನು ಸಂತೋಷಪಡಿಸುತ್ತದೆ. ಯೆಹೋವನ ಆರಾಧನೆಯಲ್ಲಿ ನಾವು ಮಾಡುವ ಪ್ರಯತ್ನಗಳು ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿರುವಾಗ, ಅವು ಆತನಿಗೆ ಅಮೂಲ್ಯವಾಗಿರುತ್ತವೆ. ನಮ್ಮ ಶ್ರಮವು ಮನುಷ್ಯರ ಕಣ್ಣಿಗೆ ಬೀಳದಿರಬಹುದು, ಆದರೆ ಯೆಹೋವನಿಗೆ ನಾವೇನನ್ನು ಹೃತ್ಪೂರ್ವಕವಾಗಿ ಅರ್ಪಿಸುತ್ತೇವೊ ಅದನ್ನು ಆತನು ಗಮನಿಸುತ್ತಾನೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತಾನೆ.​—⁠ಮತ್ತಾಯ 6:⁠4.

12 ಹಾಗಿದ್ದರೂ, ದೇವರನ್ನು ಸಂಪೂರ್ಣವಾಗಿ ಮೆಚ್ಚಿಸಲು ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಾವು ವಿಧೇಯರಾಗಿರಬೇಕು. ಜೀವನದ ಕೆಲವೊಂದು ಕ್ಷೇತ್ರಗಳಲ್ಲಿ ಯೆಹೋವನಿಗೆ ಆರಾಧನೆ ಸಲ್ಲಿಸುವಾಗ, ಅದೇ ಸಮಯದಲ್ಲಿ ದೇವರ ಇತರ ಆವಶ್ಯಕತೆಗಳ ವಿಷಯದಲ್ಲಿ ಅನುಚಿತವಾಗಿ ನಡೆದುಕೊಳ್ಳಬಹುದೆಂಬ ವಿಚಾರದಿಂದ ನಾವು ನಮ್ಮನ್ನೇ ಎಂದಿಗೂ ಮೋಸಗೊಳಿಸಬಾರದು. ಉದಾಹರಣೆಗೆ, ಒಬ್ಬ ವ್ಯಕ್ತಿ ತಾನು ಆರಾಧನೆಯ ವ್ಯವಸ್ಥಿತ ವಿಧಾನಗಳನ್ನು ಚಾಚೂತಪ್ಪದೇ ಅನುಸರಿಸುತ್ತಿರುವುದರಿಂದ, ತಾನು ಅನೈತಿಕತೆ ನಡೆಸಿದರೆ ಇಲ್ಲವೇ ಬೇರಾವುದೇ ಗಂಭೀರ ತಪ್ಪುಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದೆಂದು ನೆನಸುತ್ತಾ ತನ್ನನ್ನೇ ಮೋಸಗೊಳಿಸಬಹುದು. ಹಾಗೆ ಮಾಡುವುದು ಎಂಥ ದೊಡ್ಡ ತಪ್ಪು!​—⁠ಗಲಾತ್ಯ 6:​7, 8.

13 ಅಂತೆಯೇ, ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ನನ್ನ ದೈನಂದಿನ ಚಟುವಟಿಕೆಗಳಲ್ಲಿ ಮತ್ತು ಖಾಸಗಿ ವಿಷಯಗಳಲ್ಲೂ ನಾನು ಯೆಹೋವನಿಗೆ ವಿಧೇಯತೆ ತೋರಿಸುತ್ತೇನೋ?’ ಯೇಸು ಹೇಳಿದ್ದು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು.” (ಲೂಕ 16:10) ನಮ್ಮ ‘ಮನೆಯೊಳಗೆ’ ನಾವೇನು ಮಾಡುತ್ತೇವೋ ಅದನ್ನು ಬೇರೆಯವರು ನೋಡಲಾರರು. ಆಗಲೂ ನಾವು ‘ಯಥಾರ್ಥಹೃದಯದಿಂದಲೇ’ ನಡೆದುಕೊಳ್ಳುತ್ತೇವೋ? (ಕೀರ್ತನೆ 101:2) ಹೌದು, ನಾವು ಮನೆಯಲ್ಲಿರುವಾಗಲೂ ನಮ್ಮ ಸಮಗ್ರತೆಯ ಪರೀಕ್ಷೆಯಾಗಬಹುದು. ಹೇಗೆ? ಕೆಲವು ವರ್ಷಗಳ ಹಿಂದೆ, ಒಬ್ಬ ವ್ಯಕ್ತಿ ಅಶ್ಲೀಲ ಚಿತ್ರಗಳನ್ನು ನೋಡಬೇಕಾಗಿದ್ದರೆ, ಅನೈತಿಕ ಮನೋರಂಜನೆಯನ್ನು ಪ್ರದರ್ಶಿಸಲಾಗುತ್ತಿದ್ದ ಸ್ಥಳಗಳಿಗೆ ಹೋಗಬೇಕಾಗುತ್ತಿತ್ತು. ಆದರೆ ಇಂದು, ಕಂಪ್ಯೂಟರ್‌ಗಳು ದಿನಬಳಕೆಯ ಸಾಮಾನ್ಯ ವಸ್ತುವಾಗಿಬಿಟ್ಟಿರುವ ಅನೇಕ ದೇಶಗಳಲ್ಲಿ ಇಂಥ ಚಿತ್ರಗಳನ್ನು ಮನೆಯಲ್ಲೇ ಇದ್ದು ಸುಲಭವಾಗಿ ನೋಡಬಹುದು. ಹೀಗಿರುವುದರಿಂದ, “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು” ಎಂಬ ಯೇಸುವಿನ ಮಾತುಗಳನ್ನು ನಾವು ವಿಧೇಯತೆಯಿಂದ ಪಾಲಿಸುವೆವೋ? ಹೌದು, ಅನೈತಿಕ ಚಿತ್ರಗಳನ್ನು ನಾವು ನೋಡಲೂ ನಿರಾಕರಿಸುವೆವೋ? (ಮತ್ತಾಯ 5:28; ಯೋಬ 31:1, 9, 10; ಕೀರ್ತನೆ 119:37; ಜ್ಞಾನೋಕ್ತಿ 6:24, 25; ಎಫೆಸ 5:3-5) ಹಿಂಸಾಚಾರವುಳ್ಳ ಟಿವಿ ಕಾರ್ಯಕ್ರಮಗಳ ಕುರಿತಾಗಿ ಏನು? ನಾವೇನನ್ನು ನೋಡುತ್ತೇವೋ ಅದು, ‘ಬಲಾತ್ಕಾರ ಪ್ರಿಯನನ್ನು ದ್ವೇಷಿಸುವ’ ದೇವರು ಸಮ್ಮತಿಸುವಂಥದ್ದಾಗಿದೆಯೋ? (ಕೀರ್ತನೆ 11:⁠5, NIBV) ಅಥವಾ, ಗುಟ್ಟಾಗಿ ಮದ್ಯವನ್ನು ಮಿತಿಮೀರಿ ಕುಡಿಯುವುದರ ಕುರಿತಾಗಿ ಏನು? ಬೈಬಲ್‌ ಕುಡಿಕತನವನ್ನು ಖಂಡಿಸುತ್ತದೆ ಮಾತ್ರವಲ್ಲ, “ಬಹಳಷ್ಟು ದ್ರಾಕ್ಷಾಮದ್ಯವನ್ನು” ಕುಡಿಯುವ ರೂಢಿಯ ವಿರುದ್ಧವೂ ಕ್ರೈಸ್ತರನ್ನು ಎಚ್ಚರಿಸುತ್ತದೆ.​—⁠ತೀತ 2:3; ಲೂಕ 21:​34, 35; 1 ತಿಮೊಥೆಯ 3:⁠3, NW.

14 ನಾವು ಎಚ್ಚರವಿರಬೇಕಾದ ಇನ್ನೊಂದು ಕ್ಷೇತ್ರವು, ಹಣಕಾಸಿನ ವಿಷಯವಾಗಿದೆ. ಉದಾಹರಣೆಗಾಗಿ, ಮೋಸಮಾಡುವಿಕೆಗೆ ತೀರ ಹತ್ತಿರವಾಗಿರುವ ಆದರೆ ನಮ್ಮನ್ನು ಶೀಘ್ರ-ಶ್ರೀಮಂತರನ್ನಾಗಿ ಮಾಡುವಂಥ ಯೋಜನೆಗೆ ನಾವು ಕೈಹಾಕುತ್ತೇವೋ? ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲಿಕ್ಕೆ ಯಾವುದಾದರೂ ಕಾನೂನುಬಾಹಿರ ವಿಧಾನವನ್ನು ಬಳಸಲು ನಮಗೆ ಮನಸ್ಸಾಗುತ್ತದೋ? ಅಥವಾ ನಾವು ನ್ಯಾಯನಿಷ್ಠೆಯಿಂದ “ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, ಯಾರಿಗೆ ಸುಂಕವೋ ಅವರಿಗೆ ಸುಂಕವನ್ನು” ಸಲ್ಲಿಸಬೇಕೆಂಬ ಆಜ್ಞೆಯನ್ನು ಪಾಲಿಸುತ್ತೇವೋ?​—⁠ರೋಮಾಪುರ 13:⁠7.

ಪ್ರೀತಿಯಿಂದಾಗಿ ಹೊಮ್ಮುವ ವಿಧೇಯತೆ

15 ದೈವಿಕ ಆದೇಶಗಳಿಗೆ ವಿಧೇಯತೆ ತೋರಿಸುವುದು ಆಶೀರ್ವಾದಗಳನ್ನು ತರುತ್ತದೆ. ಉದಾಹರಣೆಗಾಗಿ, ತಂಬಾಕು ಬಳಕೆಯಿಂದ ದೂರವಿರುವ ಮೂಲಕ, ನೈತಿಕ ಜೀವನವನ್ನು ನಡೆಸುವುದರಿಂದ ಮತ್ತು ರಕ್ತದ ಪಾವಿತ್ರ್ಯತೆಯನ್ನು ಗೌರವಿಸುವುದರ ಮೂಲಕ ನಾವು ನಿರ್ದಿಷ್ಟ ರೋಗಗಳಿಗೆ ಬಲಿಬೀಳುವುದರಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೆ, ಜೀವನದ ಇತರ ಕ್ಷೇತ್ರಗಳಲ್ಲಿ ಬೈಬಲ್‌ ಸತ್ಯಕ್ಕೆ ಹೊಂದಿಕೆಯಲ್ಲಿ ಜೀವಿಸುವುದರಿಂದ ನಾವು ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಪ್ರಯೋಜನ ಹೊಂದಬಹುದು. (ಯೆಶಾಯ 48:17) ಈ ರೀತಿಯ ಯಾವುದೇ ಭೌತಿಕ ಪ್ರಯೋಜನಗಳನ್ನು, ದೇವರ ನಿಯಮಗಳ ವ್ಯವಹಾರ್ಯತೆಯನ್ನು ರುಜುಪಡಿಸುವಂಥ ಆಶೀರ್ವಾದಗಳೆಂದು ದೃಷ್ಟಿಸುವುದು ಸೂಕ್ತ. ಆದರೆ ನಾವು ಯೆಹೋವನನ್ನು ಪ್ರೀತಿಸುವುದೇ ನಾವಾತನಿಗೆ ವಿಧೇಯರಾಗಿರಲು ಮುಖ್ಯ ಕಾರಣವಾಗಿದೆ. ನಾವು ದೇವರ ಸೇವೆಯನ್ನು ಸ್ವಾರ್ಥ ಕಾರಣಗಳಿಗಾಗಿ ಮಾಡುವುದಿಲ್ಲ. (ಯೋಬ 1:​9-11; 2:​4, 5) ಯಾರಿಗೆ ಬೇಕೋ ಅವರಿಗೆ ವಿಧೇಯರಾಗಲು ಆಯ್ಕೆಮಾಡುವ ಸ್ವಾತಂತ್ರ್ಯವನ್ನು ದೇವರು ನಮಗೆ ಕೊಟ್ಟಿದ್ದಾನೆ. ನಾವು ಯೆಹೋವನನ್ನು ಸಂತೋಷಪಡಿಸಲು ಬಯಸುವುದರಿಂದ ಮತ್ತು ಸರಿಯಾದದ್ದನ್ನು ಮಾಡಲು ಪ್ರಯತ್ನಿಸುತ್ತಿರುವುದರಿಂದಲೇ ಆತನಿಗೆ ವಿಧೇಯರಾಗಲು ಆಯ್ಕೆಮಾಡಿದ್ದೇವೆ.​—⁠ರೋಮಾಪುರ 6:​16, 17; 1 ಯೋಹಾನ 5:⁠3.

16 ಯೆಹೋವನ ಮೇಲಣ ಹೃತ್ಪೂರ್ವಕ ಪ್ರೀತಿಯಿಂದ ಆತನಿಗೆ ವಿಧೇಯರಾಗುವ ವಿಷಯದಲ್ಲಿ ಯೇಸು ಪರಿಪೂರ್ಣ ಮಾದರಿಯಾಗಿದ್ದಾನೆ. (ಯೋಹಾನ 8:​28, 29) ಯೇಸು ಭೂಮಿ ಮೇಲಿದ್ದಾಗ “ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.” (ಇಬ್ರಿಯ 5:8, 9) ಹೇಗೆ? “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ [“ಯಾತನಾ ಕಂಭದ,” NW] ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:7, 8) ಯೇಸು ಪರಲೋಕದಲ್ಲಿದ್ದಾಗ ವಿಧೇಯನಾಗಿದ್ದರೂ, ಭೂಮಿ ಮೇಲಿದ್ದಾಗ ಅವನ ವಿಧೇಯತೆಯು ಇನ್ನೂ ಹೆಚ್ಚು ಪರೀಕ್ಷೆಗೊಡ್ಡಲ್ಪಟ್ಟಿತ್ತು. ಯೇಸು ತನ್ನ ಆಧ್ಯಾತ್ಮಿಕ ಸಹೋದರರಿಗೆ ಹಾಗೂ ಅವನಲ್ಲಿ ನಂಬುವ ಇತರ ಮಾನವರಿಗೆ ಮಹಾ ಯಾಜಕನಾಗಿ ಸೇವೆಸಲ್ಲಿಸಲು ಎಲ್ಲ ವಿಧದಲ್ಲೂ ಅರ್ಹನಾಗಿದ್ದಾನೆಂದು ನಾವು ನಿಶ್ಚಯದಿಂದಿರಬಲ್ಲೆವು.​—⁠ಇಬ್ರಿಯ 4:15; 1 ಯೋಹಾನ 2:​1, 2.

17 ನಮ್ಮ ಕುರಿತೇನು? ದೇವರ ಚಿತ್ತಕ್ಕೆ ವಿಧೇಯತೆ ತೋರಿಸಲು ಆದ್ಯತೆ ಕೊಡುವ ವಿಷಯದಲ್ಲಿ ನಾವು ಯೇಸುವನ್ನು ಅನುಕರಿಸಬಲ್ಲೆವು. (1 ಪೇತ್ರ 2:21) ಎಲ್ಲ ಸಮಯದಲ್ಲೂ, ಅಂದರೆ ಯೆಹೋವನ ಆಜ್ಞೆಯನ್ನು ಮುರಿಯುವ ಒತ್ತಡದ ಕೆಳಗಿರುವಾಗ ಇಲ್ಲವೇ ಶೋಧಿಸಲ್ಪಟ್ಟಾಗಲೂ ಆತನಿಗೆ ವಿಧೇಯರಾಗುವಂತೆ ದೇವರ ಮೇಲಣ ಪ್ರೀತಿಯು ನಮ್ಮನ್ನು ಪ್ರಚೋದಿಸುವಾಗ ನಮಗೆ ವೈಯಕ್ತಿಕ ತೃಪ್ತಿ ಸಿಗಬಲ್ಲದು. (ರೋಮಾಪುರ 7:​18-20) ದೇವರಿಗೆ ವಿಧೇಯತೆ ತೋರಿಸುವುದರಲ್ಲಿ, ಸತ್ಯಾರಾಧನೆಯಲ್ಲಿ ಮುಂದಾಳತ್ವ ವಹಿಸುವವರು ಅಪರಿಪೂರ್ಣರಾಗಿದ್ದರೂ ಅವರ ನಿರ್ದೇಶನಗಳಿಗೆ ವಿಧೇಯರಾಗಿರಲು ನಾವು ಸಿದ್ಧರಾಗಿರುವುದು ಒಳಗೂಡಿದೆ. (ಇಬ್ರಿಯ 13:17) ನಮ್ಮ ಖಾಸಗಿ ಜೀವನದಲ್ಲಿ ನಾವು ದೈವಿಕ ಆಜ್ಞೆಗಳಿಗೆ ತೋರಿಸುವ ವಿಧೇಯತೆಯು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯವಾಗಿದೆ.

18 ಇಂದು ಯೆಹೋವನಿಗೆ ವಿಧೇಯತೆ ತೋರಿಸುವುದರಲ್ಲಿ, ನಮ್ಮ ಸಮಗ್ರತೆಯನ್ನು ಕಾಪಾಡಲಿಕ್ಕೋಸ್ಕರ ಹಿಂಸೆಯನ್ನು ತಾಳಿಕೊಳ್ಳುವುದು ಸಹ ಒಳಗೂಡಿರಬಹುದು. (ಅ. ಕೃತ್ಯಗಳು 5:29) ಅಷ್ಟುಮಾತ್ರವಲ್ಲದೆ, ಸಾರುವಂತೆ ಮತ್ತು ಕಲಿಸುವಂತೆ ಯೆಹೋವನು ಕೊಟ್ಟಿರುವ ಆಜ್ಞೆಗೆ ನಾವು ವಿಧೇಯರಾಗಲಿಕ್ಕಾಗಿ ಈ ವಿಷಯಗಳ ವ್ಯವಸ್ಥೆಯ ಅಂತ್ಯದ ವರೆಗೆ ನಾವು ತಾಳಿಕೊಳ್ಳುವುದು ಆವಶ್ಯಕ. (ಮತ್ತಾಯ 24:​13, 14; 28:​19, 20) ಲೋಕದ ಒತ್ತಡಗಳ ಭಾರ ನಮ್ಮ ಮೇಲಿರುವುದಾದರೂ ನಮ್ಮ ಸಹೋದರರೊಂದಿಗೆ ಕೂಟಗಳಲ್ಲಿ ಸೇರಿಬರುವುದನ್ನು ಮುಂದುವರಿಸಲು ನಮಗೆ ತಾಳ್ಮೆ ಅಗತ್ಯ. ಇಂಥ ಕ್ಷೇತ್ರಗಳಲ್ಲಿ ವಿಧೇಯರಾಗಿರಲು ನಾವು ಮಾಡುವ ಪ್ರಯತ್ನಗಳ ಬಗ್ಗೆ ನಮ್ಮ ಪ್ರೀತಿಯ ದೇವರಿಗೆ ಪೂರ್ಣವಾಗಿ ತಿಳಿದಿದೆ. ಆದರೆ ಸಂಪೂರ್ಣವಾಗಿ ವಿಧೇಯರಾಗಿರಲಿಕ್ಕೋಸ್ಕರ ನಾವು ನಮ್ಮ ಪಾಪಪೂರ್ಣ ಶರೀರದೊಂದಿಗೆ ಹೋರಾಡಿ, ಕೆಟ್ಟದ್ದರಿಂದ ದೂರಸರಿದು, ಅದೇ ಸಮಯದಲ್ಲಿ ಒಳ್ಳೇದಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು.​—⁠ರೋಮಾಪುರ 12:⁠9.

19 ನಾವು ಯೆಹೋವನನ್ನು ಪ್ರೀತಿಯಿಂದ ಹಾಗೂ ಕೃತಜ್ಞತೆ ತುಂಬಿದ ಹೃದಯದಿಂದ ಸೇವಿಸುವಾಗ ಆತನು, “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡು”ವವನಾಗುತ್ತಾನೆ. (ಇಬ್ರಿಯ 11:6) ಯೋಗ್ಯ ರೀತಿಯ ಯಜ್ಞಗಳು ಆವಶ್ಯಕವೂ ಅಪೇಕ್ಷಣೀಯವೂ ಆಗಿವೆ. ಆದರೆ ಯೆಹೋವನಿಗೆ ಅತ್ಯಂತ ಹೆಚ್ಚು ಸಂತೋಷ ತರುವಂಥ ಸಂಗತಿಯು, ನಾವು ಆತನ ಮೇಲಣ ಪ್ರೀತಿಯಿಂದ ತೋರಿಸುವ ಸಂಪೂರ್ಣ ವಿಧೇಯತೆಯೇ ಆಗಿದೆ.​—⁠ಜ್ಞಾನೋಕ್ತಿ 3:​1, 2. (w07 6/15)

ನೀವು ಏನು ಉತ್ತರಕೊಡುವಿರಿ?

• ಯೆಹೋವನಿಗೆ ನೀಡಲು ನಮ್ಮ ಬಳಿ ಏನೋ ಇದೆಯೆಂದು ಏಕೆ ಹೇಳಬಹುದು?

• ಸೌಲನು ಯಾವ ತಪ್ಪುಗಳನ್ನು ಮಾಡಿದನು?

• ವಿಧೇಯತೆಯು ಯಜ್ಞಕ್ಕಿಂತಲೂ ಉತ್ತಮವಾಗಿದೆ ಎಂದು ನೀವು ನಂಬುತ್ತೀರೆಂದು ಹೇಗೆ ತೋರಿಸಬಲ್ಲಿರಿ?

• ಯೆಹೋವನಿಗೆ ವಿಧೇಯರಾಗುವಂತೆ ನಿಮ್ಮನ್ನು ಯಾವುದು ಪ್ರಚೋದಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

1. ಇಂದಿನ ಸಮಾಜದಲ್ಲಿ ಯಾವ ಆತ್ಮವು ಪಸರಿಸಿದೆ?

2, 3. ಯೆಹೋವನಿಗೆ ವಿಧೇಯರಾಗಲು ನಮಗೆ ಯಾವ ಕಾರಣಗಳಿವೆ?

4. ನಾವು ಯಾವ ಅರ್ಥದಲ್ಲಿ ಯೆಹೋವನಿಗೆ ಏನನ್ನೋ ಕೊಡಬಲ್ಲೆವು?

5. ಅವಿಧೇಯತೆಯು ಸೃಷ್ಟಿಕರ್ತನನ್ನು ಯಾವ ರೀತಿಯಲ್ಲಿ ಬಾಧಿಸುತ್ತದೆ? ದೃಷ್ಟಾಂತಿಸಿರಿ.

6. ನಾವು ದೇವರಿಗೆ ವಿಧೇಯರಾಗಿರುವಂತೆ ಯಾವುದು ಸಹಾಯಮಾಡುವುದು?

7. ಯೆಹೋವನು ಯಜ್ಞಗಳಿಗಿಂತಲೂ ವಿಧೇಯತೆಗೆ ಹೆಚ್ಚು ಮಹತ್ವ ಕೊಡುವುದೇಕೆ?

8. ದೇವರು ಸೌಲನನ್ನು ರಾಜನ ಸ್ಥಾನದಿಂದ ತಳ್ಳಿಹಾಕಿದ್ದು ಏಕೆ?

9. ದೇವರಿಗೆ ಅವಿಧೇಯನಾಗುವುದು ಸೌಲನ ಒಂದು ನಮೂನೆಯಾಗಿಬಿಟ್ಟಿತ್ತೆಂದು ಹೇಗೆ ತೋರಿಬಂತು?

10. ಸೌಲನು ಯಾವ ಪಾಠ ಕಲಿಯಲು ತಪ್ಪಿಹೋದನು?

11, 12. (ಎ) ನಮ್ಮ ಆರಾಧನೆಯಲ್ಲಿ ನಾವು ಯೆಹೋವನನ್ನು ಮೆಚ್ಚಿಸಲು ಮಾಡುವ ಪ್ರಯತ್ನಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ? (ಬಿ) ಒಬ್ಬ ವ್ಯಕ್ತಿ ವಾಸ್ತವದಲ್ಲಿ ಅವಿಧೇಯತೆ ತೋರಿಸುತ್ತಿದ್ದರೂ, ತಾನು ದೇವರ ಚಿತ್ತವನ್ನು ಮಾಡುತ್ತಿದ್ದೇನೆಂದು ನೆನಸುತ್ತಾ ತನ್ನನ್ನೇ ಹೇಗೆ ಮೋಸಗೊಳಿಸಬಹುದು?

13. ಬೇರೆಯವರು ನಮ್ಮನ್ನು ನೋಡದಿರುವ ಸಂದರ್ಭಗಳಲ್ಲೂ ನಾವು ಯೆಹೋವನಿಗೆ ತೋರಿಸಬೇಕಾದ ವಿಧೇಯತೆಯು ಹೇಗೆ ಪರೀಕ್ಷಿಸಲ್ಪಡಬಹುದು?

14. ಹಣಕಾಸಿನ ವಿಷಯದಲ್ಲಿ ನಮ್ಮ ವಿಧೇಯತೆಯು ವ್ಯಕ್ತವಾಗುವ ಕೆಲವು ವಿಧಗಳಾವುವು?

15. ನೀವು ಯೆಹೋವನ ಆಜ್ಞೆಗಳಿಗೆ ಏಕೆ ವಿಧೇಯರಾಗುತ್ತೀರಿ?

16, 17. (ಎ) ಯೇಸು ಹೃತ್ಪೂರ್ವಕ ಪ್ರೀತಿಯಿಂದ ದೇವರಿಗೆ ವಿಧೇಯತೆ ತೋರಿಸಿದ್ದು ಹೇಗೆ? (ಬಿ) ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

18, 19. ನಾವು ದೇವರಿಗೆ ತೋರಿಸುವ ಹೃತ್ಪೂರ್ವಕ ವಿಧೇಯತೆಯು ಏನನ್ನು ಫಲಿಸುತ್ತದೆ?

[ಪುಟ 21ರಲ್ಲಿರುವ ಚಿತ್ರ]

ರಾಜ ಸೌಲನು ಯೆಹೋವನ ಕೋಪಕ್ಕೆ ಗುರಿಯಾದದ್ದೇಕೆ?